ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಚಾಮರಾಜೇಂದ್ರ ಚಿತ್ರಶಾಲೆ
ಜಯಚಾಮರಾಜೇಂದ್ರ ಚಿತ್ರಶಾಲೆ - ಮೈಸೂರು ನಗರದಲ್ಲಿರುವ ಪ್ರಸಿದ್ಧ ಚಿತ್ರಶಾಲೆ. ಇದನ್ನು ಮೊದಲಿಗೆ ಜಗನ್ಮೋಹನ ಚಿತ್ರಶಾಲೆ ಎನ್ನುತ್ತಿದ್ದರು. ಇದಿರುವುದು ಮುಮ್ಮಡಿ ಕೃಷ್ಣರಾಜ ಒಡೆಯರು 1861ರಲ್ಲಿ ಕಟ್ಟಿಸಿದ ಜಗನ್ಮೋಹನ ಅರಮನೆಯಲ್ಲಿ, ಮೈಸೂರು ಮಹಾರಾಜರುಗಳ ಸತತ ಪ್ರಯತ್ನದಿಂದ ಈ ಚಿತ್ರಶಾಲೆಯಲ್ಲಿ ಉತ್ತಮ ಚಿತ್ರಗಳ ಮತ್ತು ಶಿಲ್ಪಕೃತಿಗಳೂ ಸಂಗ್ರಹವಾಗಿವೆ.
ಚಿತ್ರಶಾಲೆ ಇರುವ ಕಟ್ಟಡ ಎರಡು ಉಪ್ಪರಿಗೆಗಳಿಂದ ಕೂಡಿದೆ. ಕೆಳಭಾಗದಲ್ಲಿ ನಾಲ್ಕು ವಿಶಾಲವಾದ ಹಜಾರಗಳುಂಟು. ಪ್ರತಿಯೊಂದು ಹಜಾರಕ್ಕೂ ಲಗತ್ತಿಸಿದಂತೆ ಎಡಬಲಗಳಲ್ಲಿ ಎರಡೆರಡು ಕೋಣೆಗಳಿವೆ. ಮೊದಲನೆಯ ಮತ್ತು ಎರಡನೆಯ ಉಪ್ಪರಿಗೆಗಳಲ್ಲಿ ಕ್ರಮವಾಗಿ ಮೂರು ಮತ್ತು ಎರಡು ಹಜಾರಗಳು ಮತ್ತು ಅವಕ್ಕೆ ಸೇರಿದಂತೆ ಕಿರಿಯ ಕೋಣೆಗಳೂ ಇವೆ.
ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿಯೇ ಚಿತ್ರಿಸಲಾದ ಭಿತ್ತಿಚಿತ್ತಗಳನ್ನು ಎರಡನೆಯ ಉಪ್ಪರಿಗೆಯ ಮೂರು ಕೋಣೆಗಳಲ್ಲಿ ಕಾಣಬಹುದು. ಮೊದಲ ಉಪ್ಪರಿಗೆಯ ನೆಲದ ಭಾಗವನ್ನು ಮರದಿಂದ ಅಳವಡಿಸಲಾಗಿದೆ. ಹಿಂದೆ ಇದು ನೃತ್ಯಾಲಯವಾಗಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ ಸವಿನೆನಪಿಗಾಗಿ 1915ರ ಸುಮಾರಿಗೆ ಈ ಚಿತ್ರ ಶಾಲೆಯನ್ನು ವ್ಯವಸ್ಥೆಗೊಳಿಸಲಾಯಿತು. ಇದರಲ್ಲಿ ಅಂದಿಗೆ, ಕಾಲಕಾಲಕ್ಕೆ ಅರಮನೆಯಲ್ಲಿ ಸಂಗ್ರಹವಾಗಿದ್ದ ಕಲಾವಸ್ತುಗಳನ್ನೆಲ್ಲ ಕಲೆಹಾಕಲಾಯಿತು. ಬಾಲರಾಜ ಅರಸ್ ಈ ಸಂಗ್ರಹಾಲಯದ ಮೇಲ್ವಿಚಾರಕರಾಗಿದ್ದವರಲ್ಲಿ ಮೊದಲಿಗರು. ಅನಂತರ ಜನಾಬ್ ಷಾ ಎಂಬುವರು ವಸ್ತುಸಂಗ್ರಹಾಲಯಕ್ಕೆ ನಾಲ್ವಡಿಯವರ ಆದೇಶದಂತೆ ಚಿತ್ರಗಳನ್ನೂ ಸೇರಿಸಿದರು. ಈ ವಸ್ತುಸಂಗ್ರಹಾಲಯವನ್ನು ಅಲ್ಲಿಂದಾಚೆ ಜಗನ್ಮೋಹನ ಚಿತ್ರಶಾಲೆ ಎಂದು ಕರೆಯಲಾಯಿತು. ದೇಶೀಯ ಕಲಾವಿದರ ಕಲಾ ಕೃತಿಗಳ ಜೊತೆಗೆ ವಿವಿಧ ರಾಜ್ಯಗಳ ಕಲಾವಿದರಿಂದ ರಚಿತವಾದ ಕಲಾವಸ್ತುಗಳಿಗೂ ಇಲ್ಲಿ ಅವಕಾಶ ಕಲ್ಪಿಸಿದ್ದರಿಂದ 1924ರ ಹೊತ್ತಿಗೆ ಇದಕ್ಕೆ ಅಖಿಲಭಾರತ ಮಟ್ಟದ ವ್ಯಾಪ್ತಿ ದೊರೆತಿತು.
1932ರಿಂದ 1937ರವರೆಗೆ ಪ್ರತಿವರ್ಷವೂ ಅನೇಕ ಉತ್ತಮ ಚಿತ್ರಗಳನ್ನು ಕೊಳ್ಳಲಾಯಿತು. ಮೆಕ್ ಆಲ್‍ಫೀ ಎಂಬಾತ ಕನ್ನಡ ಕಲಾವಿದ ಕೆ. ವೆಂಕಟಪ್ಪನವರ ಸಹಾಯದಿಂದ ಸಂಗ್ರಹಾಲಯವನ್ನು ಸುವ್ಯವಸ್ಥೆಗೊಳಿಸಿ ಚಿತ್ರಪಟಗಳನ್ನು ಹೊಸತಾಗಿ ಜೋಡಿಸಿ ಪ್ರದರ್ಶಿಸಿದ. ತಿರುವಾಂಕೂರಿನ ಲಲಿತಕಲಾ ಸಂಸ್ಥೆಯ ಮುಖ್ಯಸ್ಥನಾಗಿದ್ದ ಜೇಮ್ಸ್. ಎಚ್. ಕಜಿನ್ಸ್ ಈ ಚಿತ್ರಶಾಲೆಯ ಆಧಿಕಾರಿಗಳಾಗಿದ್ದ ಮದನ ಗೋಪಾಲರಾಜ ಅರಸರೊಂದಿಗೆ ಕೆಲಸ ಮಾಡಿ ಇಲ್ಲಿನ ಕಲಾಕೃತಿಗಳನ್ನು ಮತ್ತೊಮ್ಮೆ ಜೋಡಿಸಿ ಹೊಸ ರೂಪಕೊಟ್ಟರು (1942). ಅವರ ಸಂಪಾದಕತ್ವದಲ್ಲಿ ಚಾರಿತ್ರಿಕ ವ್ಯಕ್ತಿಗಳ ರೂಪಚಿತ್ರಗಳ ಪಟ್ಟಿಯೊಂದು ಪ್ರಕಟವಾಯಿತು.
ಈ ಚಿತ್ರಶಾಲೆಯಲ್ಲಿ ಹೈದರ್, ಟಿಪ್ಪೂ ಮತ್ತು ಇಂಗ್ಲಿಷ್ ಅಧಿಕಾರಿಗಳ ಅನೇಕ ಚಿತ್ರಗಳು ಇದ್ದುವು. ಅವನ್ನೆಲ್ಲ ತೆಗೆದುಕೊಂಡು ಹೋಗಿ (1942) ಕಾವೇರಿ ನದಿಯ ತೀರದಲ್ಲಿದ್ದ ಸ್ಕಾಟ್ ಬಂಗಲೆಯ ಚಿತ್ರಶಾಲೆಯಲ್ಲಿ ಪ್ರದರ್ಶಿಸಲಾಯಿತು. 1950ರಲ್ಲಿ ಸ್ಕಾಟ್ ಬಂಗಲೆಯಲ್ಲಿದ್ದ ಚಿತ್ರಗಳೆಲ್ಲ ಮತ್ತೆ ಜಯಚಾಮರಾಜೇಂದ್ರ ಚಿತ್ರಶಾಲೆಗೇ ಮರಳಿ ಬಂದುವು.
ಮೈಸೂರು ದಸರಾ ಕಲಾಪ್ರದರ್ಶನ ನಡೆಯುತ್ತಿದ್ದಾಗ ಅಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದ ಉತ್ತಮ ಚಿತ್ರಗಳನ್ನೂ ಖರೀದಿಸಿ ಸೇರಿಸಲಾಯಿತು. 1946ರಲ್ಲಿ ಚಿತ್ರಶಾಲೆಯ ಮೇಲ್ವಿಚಾರಕರಾಗಿ ಬಂದ ಚೆನ್ನರಾಜ ಅರಸರು ಪುನಃ ಕಲಾಕೃತಿಗಳನ್ನು ಬೇರೆಬೇರೆಯಾಗಿ ವಿಂಗಡಿಸಿ ಸುಂದರವಾಗಿ ಜೋಡಿಸಲು ಏರ್ಪಾಡು ಮಾಡಿದರು. ಇದರಿಂದಾಗಿ ಭಾರತದ ಚಿತ್ರಕಲಾ ಶೈಲಿಯ ಸಂಪ್ರದಾಯದ ವಿವಿಧ ರೀತಿಯ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಏರ್ಪಟ್ಟಿತು.
ನಾಲ್ವಡಿ ಕೃಷ್ಣರಾಜ ಒಡೆಯರ ವಿವಾಹ ಮಹೋತ್ಸವಕ್ಕಾಗಿ ಬಂಗಲೆಯ ಮುಂಭಾಗವನ್ನು ಸಭಾಂಗಣವಾಗಿ 1900ರಲ್ಲಿ ವಿಸ್ತಾರಗೊಳಿಸಲಾಯಿತು. ಅಲ್ಲಿಂದೀಚೆಗೆ ಅಲ್ಲಿ ಪ್ರಜಾಪ್ರತಿನಿಧಿ ಸಭೆಗಳೂ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭಗಳೂ ಅನೇಕವರ್ಷ ಜರುಗುತ್ತ ಬಂದುವು. ನಾಲ್ವಡಿ ಪ್ರಭುಗಳು ಲಾರ್ಡ್ ಕಜರ್ûನ್ನನೊಂದಿಗೆ ದರ್ಬಾರು ನಡೆಸಿದ್ದೂ ಇದೇ ಸಭಾಂಗಣದಲ್ಲಿಯೇ (1902).
ಚಿತ್ರಶಾಲೆ ಇರುವುದು ಸಭಾಂಗಣದ ಹಿಂಬದಿಯ ಮಹಲಿನಲ್ಲಿ. ಚಿತ್ರಗಳಲ್ಲಿ ಬಹುಪಾಲು ಕನ್ನಡನಾಡಿನ ಅರಸು ಮನೆತನಕ್ಕೆ ಸೇರಿದವಾಗಿವೆ. ಈ ಕಲಾಗಾರಕ್ಕೆ ಹಾಗೂ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ ರಾಜರಲ್ಲಿ ಮುಮ್ಮಡಿ ಮತ್ತು ನಾಲ್ವಡಿ ಕೃಷ್ಣರಾಜರನ್ನು ಹೆಸರಿಸಬೇಕು. ಇವರ ಕಾಲದಲ್ಲೇ ಈ ಚಿತ್ರಶಾಲೆಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ಬೆಂಬಲ ದೊರೆತದ್ದು.
ಮುಮ್ಮಡಿ ಕೃಷ್ಣರಾಜರ ಆಳ್ವಿಕೆಯ ಕಾಲದಲ್ಲಿ ಕನ್ನಡದ ಅನೇಕ ಚಿತ್ರಕಾರರು ರಚಿಸಿದ ಭಿತ್ತಿಚಿತ್ರಗಳನ್ನು ಎರಡನೆಯ ಉಪ್ಪರಿಗೆಯಲ್ಲಿ ಕಾಣಬಹುದು. ಅವರ ಕಾಲದ ಚಿತ್ರಕಾರರಲ್ಲಿ ಶಿಕಾರಿಪುರದ ಚಿತ್ರಗಾರ ಮನೆತನದ ತಿಪ್ಪಯ್ಯ, ಮೈಸೂರಿನ ಕೊಂಡಯ್ಯ, ವೀರಣ್ಣ, ಬಸಣ್ಣ,ಯಲ್ಲಪ್ಪ ಮುಂತಾದವರು ಮುಖ್ಯರು. ಇವರ ಅನೇಕ ಚಿತ್ರಗಳು ಈಗಲೂ ಮಾಸದೆ ಚಿರನೂತನವಾಗಿವೆ.
ಕರ್ನಾಟಕದ ಚಿತ್ರಶೈಲಿಯನ್ನು ಮೆರೆಯುವ ಈ ಭಿತ್ತಿಚಿತ್ರಗಳನ್ನು ಗಮನಿಸುವುದು ಇಲ್ಲಿ ಮುಖ್ಯ. ಎರಡನೆಯ ಉಪ್ಪರಿಗೆಯ ಮೂರು ಕೋಣೆಗಳ ಗೋಡೆಗಳೆಲ್ಲ ವರ್ಣಮಯವಾಗಿವೆ. ಎಲ್ಲಿ ನೋಡಿದರಲ್ಲಿ ಮುಮ್ಮಡಿ ಪ್ರಭುಗಳ ಆಳ್ವಿಕೆಯ ಸಂಕೇತದ ಚಿತ್ರಗಳೇ ಇವೆ. ಮುಮ್ಮಡಿಯವರವರೆಗಿನ ವಂಶಾವಳಿಯನ್ನು ನಿರ್ದೇಶಿಸುವ ಸಂತಾನಾಂಬುಜ, ವಿಜಯದಶಮಿಯಂದು ಆರು ಆನೆಗಳನ್ನು ಕಟ್ಟಿದ ರಥದಲ್ಲಿ ಮುಮ್ಮಡಿಯವರ ಜಂಬೂ ಸವಾರಿಯ ಚಿತ್ರ, ಅಲ್ಲದೆ, ಕಿತ್ತೂರು, ಕೊತ್ತಗಾಲ, ಚಟ್ನಹಳ್ಳಿಗಳಲ್ಲಿ ನಡೆದ ಹುಲಿ ಷಿಕಾರಿ, ಚಾಮರಾಜನಗರದ ಕಾಡಿನಲ್ಲಿ ಪಟ್ಟದಾನೆಯಾದ ಕೆಂಪನಂಜಯ್ಯನನ್ನು ಹಿಡಿದ ದೃಶ್ಯ, ರಾಜರು ಚದುರಂಗದಾಟವನ್ನು ಆಡುತ್ತಿರುವ ದೃಶ್ಯ, ಅನೇಕ ಸುಂದರಿಯರೊಂದಿಗೆ ಮುಮ್ಮಡಿಯವರು ಆಚರಿಸುತ್ತಿರುವ ವಸಂತೋತ್ಸವದ ದೃಶ್ಯ-ಇವೇ ಮುಂತಾದ ಭಿತ್ತಿಚಿತ್ರಗಳಿವೆ. ಮುಮ್ಮಡಿಯವರ ಎಡಬಲ ಭಾಗಗಳಲ್ಲಿ ರಾಜಬಂಧುಗಳ ಮತ್ತು ಅಧಿಕಾರಿಗಳ ಅಲ್ಲದೆ ಪೇಷ್ವೆಗಳ ಹಾಗೂ ರಣಜಿತ್ ಸಿಂಗ್, ನಾನಾಫಡ್ನವೀಸ್, ಕೊಡಗಿನ ವೀರರಾಜ, ತಂಜಾವೂರಿನ ರಾಜರುಗಳ ಇತರ ನವಾಬರನೇಕರ ಸ್ವಾಭಾವಿಕವಾದ ರೂಪಚಿತ್ರಗಳನ್ನು ಬಿಡಿಸಲಾಗಿದೆ.
ಇದಲ್ಲದೇ ಪ್ರಸನ್ನಪಾರ್ವತಿ, ದುರದುಂಡಿ, ಸರ್ವಮಂಗಳ, ಜಗದಾಂಬ, ಪುಟ್ಟ ಚಾಮುಂಡಿ, ವರಚಾಮುಂಡಿ, ಚೆಲುವೆ ಚಾಮುಂಡಿಯರೆಂಬ ಪಟ್ಟದ ಹಸುಗಳನ್ನೂ ವಿಜಯ ಎಂಬ ಪಟ್ಟದ ಕುದುರೆಯನ್ನು ಸರ್ವಚಿತ್ರರಂಜಿನಿ, ಸರ್ವಾಂಗ ಸುಂದರಿ ಎಂಬ ಮೋಹಕ ಕನ್ಯೆಯರನ್ನೂ ಅಲ್ಲಿ ಚಿತ್ರಿಸಲಾಗಿದೆ.
ಶಿಕಾರಿಪುರದ ತಿಪ್ಪಯ್ಯ (ತಿಪ್ಪಾಜಪ್ಪ) ಕಾಗದದ ಮೇಲೆ ಕಪ್ಪುಶಾಯಿಯಲ್ಲಿ ಬಹುಸೂಕ್ಷ್ಮವಾಗಿ ಬಿಡಿಸಿದ (1886) ಭೀಷ್ಮಾರ್ಜುನ ಯುದ್ಧದ ಸುಂದರ ಚಿತ್ರ ಈ ಸಂಗ್ರಹಾಲಯದಲ್ಲೇ ಅಪರೂಪವಾದದ್ದು.
ದೈವಿಕ ಚಿತ್ರಗಳ ಮೇಲೆ ಚಿತ್ರಕಾರ ತನ್ನ ಹೆಸರನ್ನು ಬರೆದಿರುವುದಿಲ್ಲ. ಅವನ ಹೆಸರು ಸಿಕ್ಕಬೇಕಾದರೆ ಏನಿದ್ದರೂ ಲೌಕಿಕ ಚಿತ್ರಗಳ ಅಡಿಯಲ್ಲಿ ಮಾತ್ರ. ಮುಮ್ಮಡಿಯವರ ಚಿತ್ರಪಠದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಪಾದಚಾರಕನದ ಕೊಂಡಯ್ಯ ಬರೆದು ಒಪ್ಪಿಸಿದ್ದು-ಎಂದಿದೆ. ಈ ಚಿತ್ರ ಕೆಳಭಾಗದ ಮೊದಲ ಕೋಣೆಯಲ್ಲಿದೆ. ಇದೇ ಶೈಲಿಯ ಮತ್ತೊಂದು ಹೆಸರಿಸಬಹುದಾದ ಕೃತಿಯೆಂದರೆ ಶಿವ ಎಂಬ ಎರಡು ಕನ್ನಡ ಅಕ್ಷರಗಳನ್ನೂ ರೇಖೆಗಳಾಗಿ ಬಳಸಿಕೊಂಡು ಮುಮ್ಮಡಿ ಭೂಪರು ಸಿಂಹಾಸನಾರೂಢರಾಗಿರುವಂತೆ ಚಿತ್ರಿಸಿರುವುದು ಅತ್ಯಮೊಘವೆನಿಸುತ್ತದೆ. ಇದನ್ನು ವೀಕ್ಷಿಸಲು ಭೂತಕನ್ನಡಿಯೇಬೇಕು.
ಮುಮ್ಮಡಿಯವರ ಅನಂತರ ಬಂದ ಚಾಮರಾಜರ ಕಾಲದ ಪ್ರಮುಖ ಕಲಾವಿದರಲ್ಲಿ ಕೆ.ವೆಂಕಟಪ್ಪನವರ ತಾತಂದಿರಾದ ದುರ್ಗದ ವೆಂಕಟಪ್ಪನವರೂ ಒಬ್ಬರು. ಇವರು ರಚಿಸಿದ ಚಿತ್ರಗಳನ್ನೂ ಇಲ್ಲಿ ಕಾಣಬಹುದು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದೊರೆತ ಕಲಾ ಪ್ರೋತ್ಸಾಹದಿಂದಾಗಿ ಒಳನಾಡು ಹಾಗೂ ಹೊರನಾಡುಗಳಿಂದ ಕಲಾವಿದರು ರಾಜಾಶ್ರಯ ಪಡೆದು ಕಲಾ ಸೇವೆ ಸಲ್ಲಿಸಿದರು. ಇವರ ಕಾಲದಲ್ಲಿ ಪಾಶ್ಚಾತ್ಯ ತಂತ್ರದ ಅನೇಕ ಕೃತಿಗಳು ಬೆಳಕು ಕಂಡಿವೆ. ಅವನ್ನು ಬಹುಪಾಲು ಪಾಶ್ಚಾತ್ಯ ಹಾಗೂ ಭಾರತೀಯ ಕಲಾವಿದರು ರಚಿಸಿದ್ದಾರೆ. ರಾಜಾಶ್ರಯ ಪಡೆದ ಹೊರನಾಡಿನ ಕಲಾವಿದರಾದ ಜರ್ಮನಿಯ ಜೆರಾರ್ಡ್‍ಟನ್, ಇಂಗ್ಲೆಂಡಿನ ಸ್ಟರ್ಲಿನ್, ಶಿಲ್ಪಿ ಕೋಲ್‍ಟನ್, ವೆಕ್ಸ್‍ಲರ್ ಅಲ್ಲದೆ ತಿರುವಾಂಕೂರಿನ ರಾಜಾ ರವಿವರ್ಮ ಮತ್ತು ಅವನ ಸೋದರ ರಾಮವರ್ಮ ಮುಂತಾದವರ ತೈಲವರ್ಣದ ಬೃಹಾದಾಕಾರದ ಚಿತ್ರಗಳನ್ನು ಸಂಗ್ರಹಿಸಿ ಈ ಕಲಾಗಾರದ ಒಂದು ಕೋಣೆಯಲ್ಲಿ ಪ್ರದರ್ಶಿಸಲಾಗಿದೆ. ರಜಪೂತ, ಮೊಗಲಾಯಿ, ಬಂಗಾಳಿ, ಮುಂತಾದ ಶೈಲಿಯ ಅನೇಕ ಉತ್ತಮ ಕೃತಿಗಳನ್ನು ದಸರಾ ಕಲಾ ಪ್ರದರ್ಶನದಿಂದ ಕೊಂಡು ಈ ಕಲಾ ಭಂಡಾರಕ್ಕೆ ಸೇರಿಸಿದುದು ಈ ಕಾಲದಲ್ಲೇ. ಅಜಿûೀಜ್, ಕೆ. ವೆಂಕಟ್ಟಪ್ಪ, ಕೆ. ಕೇಶವಯ್ಯ ಮುಂತಾದ ಕನ್ನಡ ಕಲಾವಿದರೂ ಇವರ ಆಶ್ರಯದಲ್ಲಿದ್ದು ಉತ್ತಮ ಕೃತಿಗಳನ್ನು ನೀಡಿದ್ದಾರೆ.
ಇಲ್ಲಿಯ ಕಲಾಕೃತಿಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು : ತೈಲ ಹಾಗೂ ಜಲವರ್ಣದ ಚಿತ್ರಗಳಲ್ಲಿ ರೂಪಸಾದೃಶ್ಯದ ಕೃತಿಗಳು: ವಸ್ತುನಿಷ್ಠ ಚಿತ್ರಣಗಳು; ಪ್ರಕೃತಿ ದೃಶ್ಯಗಳು; ಹತ್ತಿಯಲ್ಲಿ ಮಾಡಿದ, ಗಂಧದ ಮರದಲ್ಲಿ, ಅಮೃತ ಶಿಲೆಯಲ್ಲಿ ಕೆತ್ತಿದ ಕರಕೌಶಲದ ವಿವಿಧ ಸುಂದರ ವಸ್ತುಗಳು; ಕತ್ತಿ, ಗುರಾಣಿ, ಫಿರಂಗಿ, ಮೊದಲಾದ ಯುದ್ಧ ಸಾಮಗ್ರಿಗಳು; ಕಲಾವಸ್ತುಗಳು, ಹಿಂದಿನ ಕಾಲದ ವಸ್ತ್ರಾಭರಣಗಳು; ವಿವಿಧ ರೂಪದ ನಾನಾ ಸಂಗೀತ ವಾದ್ಯಗಳು.
ಸಂಗ್ರಹಾಲಯದ ಕೆಳಭಾಗದ ಹನ್ನೊಂದು ಕೋಣೆಗಳಲ್ಲೂ ಮೊದಲ ಉಪ್ಪರಿಗೆಯ 8 ಕೋಣೆಗಳಲ್ಲೂ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ. 1961ರಲ್ಲಿ ಜಿ. ವೆಂಕಟಾಚಲಂ ಅವರು ಕಲಾವಿದ ರಾಮನರಸಯ್ಯನವರ ಸಹಾಯದೊಂದಿಗೆ ಕಲಾ ಕೃತಿಗಳನ್ನು ಹೊಸದಾಗಿ ವಿಂಗಡಿಸಿ ಜೋಡಿಸಿದರು.
ಸದಾ ನೆನಪಿನಲ್ಲಿರುವ ಮುಖ್ಯ ಕೃತಿಗಳಲ್ಲಿ ಮುಂಬಯಿಯ ಹಲ್ದಂಕರ್ ಅವರು ರಚಿಸಿದ, ಬೆಳಗುವ ದೀಪ ಹಿಡಿದು ನಿಂತ ಯುವತಿಯ ಚಿತ್ರ ಪ್ರಮುಖವಾದದ್ದು; ಇದು ತುಂಬ ಜನಪ್ರಿಯತೆ ಗಳಿಸಿದೆ. ಅಬನೀಂದ್ರನಾಥ ಠಾಕೂರರ ಶಿಷ್ಯರಾದ ಕೆ. ವೆಂಕಟಪ್ಪನವರ ಭಾರತೀಯ ಶೈಲಿಯ ನಾಲ್ಕು ಚಿತ್ರಗಳಲ್ಲಿ ವೀಣೆ ಹುಚ್ಚು ಮತ್ತು ಮಹಾಶಿವಾರಾತ್ರಿ ಬಹು ಪ್ರಸಿದ್ಧ ಕೃತಿಗಳು. ಇಲ್ಲಿನ ಸೂಕ್ಷ್ಮ ಕುಸುರಿ ಕಲೆಗಾರಿಕೆ ವರ್ಣಸಂಯೋಜನೆ ಅಪ್ರತಿಮವಾದುದು. ಪಾಶ್ಚಾತ್ಯ ಶೈಲಿಯ ಮಹಾಶಿವರಾತ್ರಿ ಚಿತ್ರದಲ್ಲಿ ಕಲಾವಿದ ತನ್ನತನವನ್ನು ವ್ಯಕ್ತಪಡಿಸಿದ್ದಾನೆ.
ಇವುಗಳ ಜೊತೆಗೆ ರಾಜಾರವಿವರ್ಮನ ಬೃಹದಾಕಾರದ ಚಿತ್ರಗಳು ಇಲ್ಲಿವೆ. ಈತ ಪಾಶ್ಚಾತ್ಯ ಸಂಪ್ರದಾಯದಲ್ಲಿ ಹೆಸರಾದ ಭಾರತದ ಕಲಾವಿದ. ಇಲ್ಲಿರುವ ಇವನ ಹದಿನಾರು ಪೌರಣಿಕ ಹಾಗೂ ಚಾರಿತ್ರಿಕ ತೈಲವರ್ಣದ ಚಿತ್ರಗಳು ಎಂಥವರ ಹೃದಯವನ್ನೂ ಸೆಳೆಯದಿರವು. ಎರಡನೆಯ ಉಪ್ಪರಿಗೆಯ ಹಿಂಬದಿಯ ಹಜಾರದಲ್ಲಿರುವ ಇವನ ಚಿತ್ರಗಳಲ್ಲಿ ಬೆಳದಿಂಗಳ ಮೋಹಿನಿ. ಮಲಬಾರ್ ಹೆಣ್ಣು. ಹಾಲು ಕುಡಿಯುವ ಮಗು, ದಾನ ಮಾಡುವ ಸ್ತ್ರೀ, ಶ್ರೀರಾಮನ ಸಾಗರದರ್ಪಹರಣ, ಕೀಚಕನ ಮನೆಯತ್ತ ಸಾಗಿರುವ ದ್ರೌಪದಿ-ಸೈರಂಧ್ರಿ. ಪತ್ರಲೇಖೆ ಶಕುಂತಲ. ಮತ್ಸ್ಯಗಂಧಿ, ಹಂಸ ಸಂದೇಶ, ರಾವಣ ಜಟಾಯು ವಧೆ, ಇಂದ್ರಜೀತು ವಿಜಯ, ಕೃಷ್ಣದೌತ್ಯ, ರಾಮಬಲರಾಮ ಮುಂತಾದವು ಅಮೋಘವಾಗಿವೆ. ಹರಿಶ್ಚಂದ್ರ ತನ್ನ ಮಡದಿ ಮಕ್ಕಳನ್ನು ಮಾರುವ ದೃಶ್ಯದ ಚಿತ್ರವನ್ನು ರಚಿಸಿದವ ರಾಮವರ್ಮ.
ಚಿತ್ರಶಾಲೆಯ ಎಡಭಾಗದ ಮಹಾದ್ವಾರವನ್ನು ಪ್ರವೇಶಿಸಿದಾಗ ಮುಮ್ಮಡಿಯವರ ಹುಟ್ಟು ಹಬ್ಬದ ಮತ್ತು ಚಾಮರಾಜರ ದಸರಾ ಮೆರವಣಿಗೆಯ ಚಿತ್ರಗಳು ಕಾಣುತ್ತವೆ. ನಾಲ್ವಡಿಯವರ ದರ್ಬಾರು ಚಿತ್ರವೂ ಬೆಳ್ಳಿಯ ಮೇಲೆ, ಗಾಜಿನ ಮೇಲೆ ರಚಿತವಾದ ಚಾರಿತ್ರಿಕ ಸನ್ನಿವೇಶಗಳ ಉಬ್ಬಚ್ಚಿನ ಚಿತ್ರಗಳು ಆಕರ್ಷಕವಾಗಿವೆ.
ಸಭಾಂಗಣದ ನಡುವೆ ರೇಷ್ಮೆಯ, ಕಾಗೆಬಂಗಾರದ ಜಪಾನೀ ಕೃತಿಗಳಿವೆ. ಪಕ್ಕದಲ್ಲೇ ಹೈದರ್, ಟಿಪ್ಪುಗಳಿಗೆ ಸೇರಿದ ಲಿತೋ ಹಾಗೂ ಛಾಯಾಚಿತ್ರಗಳೂ ಮೈಸೂರು, ಹೈದರಾಬಾದು, ತಿರುವಾಂಕೂರು ಮುಂತಾದ ಅರಸರ ಛಾಯಾ ಚಿತ್ರಗಳು ಇವೆ.
ಮೊದಲ ಒಳಾಂಗಣಗಳಿಗೆ ಬಂದರೆ ಅಲ್ಲಿ ಮೈಸೂರಿನ ರಾಜರುಗಳ ಬೃಹದಾಕಾರದ ತೈಲವರ್ಣದ ಚಿತ್ರಗಳೂ ಕೆಲವು ಅಮೃತಶಿಲೆಯಲ್ಲಿನ ಅರ್ಧ ದೇಹಾಕೃತಿಗಳೂ ಜೊತೆಜೊತೆಯಾಗಿ ಕನ್ನಡ ಕಲಾವಿದರು ರಚಿಸಿರುವ ರೂಪಚಿತ್ರಗಳೂ ಇವೆ. ಪ್ರಸಿದ್ಧ ಆಂಗ್ಲ ಚಿತ್ರಕಾರ ಸ್ಟರ್ಲಿಂಗ್ 1853ರಲ್ಲಿ ಚಿತ್ರಿಸಿದ ಮುಮ್ಮಡಿಯವರೊಡನೆ ಇಂಗ್ಲಿಷರ ದರ್ಬಾರು ಚಿತ್ರ ಸೊಗಸಾಗಿದೆ. ಚಿತ್ರಕಾರ ತನ್ನನ್ನೂ ಈ ಚಿತ್ರದಲ್ಲಿ ರೂಪಿಸಿಕೊಂಡಿರುವುದು ಒಂದು ವೈಶಿಷ್ಟ್ಯ.
ಮತ್ತೊಂದು ಒಳಾಂಗಣದಲ್ಲಿ ಖ್ಯಾತ ಚಿತ್ರಕಾರರ ವೈಕ್ಸ್ ಸ್ಲರ್ ಮತ್ತು ಜರಾಲ್ಡೀನ್ ರಚಿಸಿದ ನಾಲ್ವಡಿಯವರ ಚಿತ್ರಗಳು ಅಮೋಘವಾಗಿವೆ. ಉಡ್‍ವಿಲ್ ಎಂಬ ಚಿತ್ರಕಾರ ಚಾಮರಾಜ ಒಡೆಯರ ಹುಟ್ಟುಹಬ್ಬದ ಮೆರವಣಿಗೆಯ ಚಿತ್ರವನ್ನು ರಚಿಸಿದ್ದಾನೆ. ಚಾಮರಾಜರ ಪಟ್ಟಾಭಿಷೇಕದ ಚಿತ್ರರಚಿಸಿದವ ಕರ್ನಾಟಕದ ವೆಂಕಟಸುಬ್ಬಯ್ಯ, ಅವನೇ ಅಲ್ಲವೆ ಅಜಿûೀeóï, ಕೇಶವಯ್ಯ, ನಾಗರಾಜು, ರಾಮನರಸಯ್ಯ ಮುಂತಾದವರು ರಾಜರುಗಳ ಚಿತ್ರಗಳನ್ನು ಬರೆದಿದ್ದಾರೆ. 1900ರಲ್ಲಿ ನಡೆದ ನಾಲ್ವಡಿ ಕೃಷ್ಣರಾಜರ ವಿವಾಹ ಮಹೋತ್ಸವದ ಚಿತ್ರವನ್ನು ವೈಕ್ಸ್‍ಸ್ಲರ್ ತುಂಬ ಶ್ರಮದಿಂದ ಸ್ವಾಭಾವಿಕವಾಗಿ ರೂಪಿಸಿದ್ದಾನೆ. ಕೆಳಗಿನ ಮೂರನೆಯ ಒಳಾಂಗಣದಲ್ಲಿ ಪಾಶ್ಚಾತ್ಯ ತಂತ್ರದ ಅನೇಕ ತೈಲವರ್ಣ ಚಿತ್ರಗಳಿವೆ; ಗಾಜಿನ ಕಲಾವಸ್ತುಗಳಿವೆ. ಮಣ್ಣಿನ ಪ್ರತಿಮೆಗಳಿವೆ. ಆನೆಗಳನ್ನು ಹಿಡಿಯುವ ಖೆಡ್ಡಾದ ಮೂರು ಚಿತ್ರಗಳನ್ನು ರಾಮವರ್ಮ ರಚಿಸಿದ್ದಾನೆ. ಸೈನ್ಯಾಧೀಪತಿ ಸ್ಕಾಟ್, ರೆಂಬ್ರಾಂಟ್, ಗ್ಲ್ಯಾಡ್‍ಸ್ಟನ್, ಜೇಮ್ಸ್ ಗೋರ್ಡನ್ ಮತ್ತು ವೆಲ್ಲೆಸ್ಲಿ ಮುಂತಾದವರ ರೂಪಚಿತ್ರಗಳಿವೆ. ವಿಶ್ವವಿಖ್ಯಾತ ಕಲಾವಿದ ಟಿಷನ್ ಹಾಗೂ ರೂಬನ್ಸರ ಚಿತ್ರಗಳೂ ಇಲ್ಲಿವೆ. ರೆಂಬ್ರಾಂಟನ ಚಿತ್ರಗಳನ್ನು ಕಲಾವಿದ ಎನ್.ಜಿ.ಪಾವಂಜೆ ಸ್ವಾಭಾವಿಕವಾಗಿ ನಕಲು ಮಾಡಿದ್ದಾರೆ. ಅವೂ ಅಲ್ಲಿವೆ. ಈ ಒಳಾಂಗಣಕ್ಕೆ ಲಗತ್ತಿಸಿರುವ ಸುಮಾರು ಏಳು ಕೋಣೆಗಳಲ್ಲಿ ರೊರಿಕ್‍ನ ಚಿತ್ರಗಳನ್ನೂ ರಜಪೂತ, ಮೊಗಲಾಯಿ ಶೈಲಿಯ, ಕನ್ನಡ ಶೈಲಿಯ ಚಿತ್ರಗಳನೇಕವನ್ನೂ ಕಾಣುತ್ತೇವೆ. ರೊರಿಕ್ ಚಿತ್ರಗಳ ಕೋಣೆಯಲ್ಲಿ ಹಿಮಾಲಯ, ಲಡಾಕ್ ಪ್ರದೇಶದ ಆರು ಪ್ರಕೃತಿ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ರಜಪೂತ ಮತ್ತು ಮೊಗಲಾಯಿ ತಂತ್ರದ ಮೂವತ್ತೆರಡು ಚಿತ್ರಗಳನ್ನು ಹಿಂಬದಿಯ ಕೋಣೆಯಲ್ಲಿರಿಸಲಾಗಿದೆ.
ಕೆಳಗಡೆಯ ಮೊದಲ ಹಜಾರದ ಬಲಕೋಣೆಗೆ ಬಂದು ಅಲ್ಲಿನ ಹಂತಗಳನ್ನು ಏರಿ ಮೇಲುಪ್ಪರಿಗೆಗೆ ಹೋಗುವಾಗ ಹದಿನೈದು ಜಲವರ್ಣದ ನಿಸರ್ಗ ಚಿತ್ರಗಳನ್ನು ಕಾಣುತ್ತೇವೆ. ಲಖ್‍ನೌ, ಗುಜರಾತ್, ಮದ್ರಾಸು, ಆಂಧ್ರ, ಶಾಂತಿನಿಕೇತನ, ನವದೆಹಲಿ, ಕಲ್ಕತ್ತ, ಕೇರಳ, ಅಜ್ಮೀರ್, ಬೆಂಗಳೂರು ಮತ್ತು ಮೈಸೂರು ಮುಂತಾದ ಕಡೆಯ ಪ್ರಖ್ಯಾತ ಕಲಾವಿದರಿಂದ ರಚಿತವಾದ 110 ಚಿತ್ರಗಳು ಮೊದಲ ಉಪ್ಪರಿಗೆಯಲ್ಲಿವೆ. ಇವುಗಳಲ್ಲಿ ಚಾರಿತ್ರಿಕ ಸಂಯೋಗ ಚಿತ್ರಗಳು ಹೆಚ್ಚಿನವು; ಕೆಲವು ಪ್ರಕೃತಿ ಚಿತ್ರಗಳು.
ವೆಂಕಟಪ್ಪನವರ ಐದು ಚಿತ್ರಗಳಿಗೇ ಒಂದು ಕೋಣೆ ಮೀಸಲಾಗಿದೆ. ಅಲ್ಲಿ ಬಂಗಾಳೀ ಶೈಲಿಯ ಭಾರತೀಯ ಸಂಪ್ರದಾಯದ ಚಿತ್ರಗಳೂ ಕೆಲವಿದೆ. ಶಾಂತಿ ನಿಕೇತನದ ಗಗನೀಂದ್ರನಾಥ ಠಾಕೋರ್, ಅಬನೀಂದ್ರನಾಥ ಠಾಕೋರ್, ಬ್ಯಾನರ್ಜಿ ಮತ್ತು ಕಲ್ಕತ್ತದ ಪ್ರಮೋದಕುಮಾರ ಚಟರ್ಜಿಯವರಿಂದ ರೂಪಿತವಾದ ಚಿತ್ರಗಳಿವು.
ಕರ್ನಾಟಕದ ಕಲಾವಿದರ ಕೃತಿಗಳಿಗೇ ಒಂದು ಪ್ರತ್ಯೇಕ ಕೋಣೆ ಇದೆ. ಮುಂಬಯಿಯ ಎಸ್.ಎಲ್. ಹಲ್ದಂಕರ್ ಪ್ರಸಿದ್ಧ ಕೃತಿಯಾದ ಬೆಳಗುವ ದೀಪ ಹಿಡಿದಿರುವ ಸ್ತ್ರೀ ಬಿಟ್ಟರೆ ಉಳಿದ ಚಿತ್ರಗಳೆಲ್ಲ ಕೇಶವಯ್ಯ, ಸುಬ್ಬಕೃಷ್ಣ, ರಾಮಚಂದ್ರ, ವೀರಪ್ಪ, ಪಿ.ಆರ್.ತಿಪ್ಪೇಸ್ವಾಮಿ, ರಾಮನರಸಯ್ಯ ಮುಂತಾದವರವು.
ಪಾರಸಿ ಸಂಪ್ರದಾಯದ ಚಿತ್ರ ರಚಿಸುವ ಲಖನೌನ ರಹಮಾನ್ ಚುಗ್ತಾಯ್‍ನ ಒಂಬತ್ತು ಚಿತ್ರಗಳು ಬೇರೊಂದು ಕೋಣೆಯಲ್ಲಿವೆ. ಅನಂತರ ರಂಗಮಹಲಿಗೆ ಬರುವಾಗ ಹಂತಗಳ ಕೋಣೆಯ ಗೋಡೆಯಲ್ಲಿ ತೂಗಿರುವ ಹದಿನಾರು ಜಲವರ್ಣದ ಕೃತಿಗಳನ್ನು ಮರೆಯುವಂತಿಲ್ಲ. ಮಹಲಿಗೆ ಕಾಲಿಟ್ಟೊಡನೆ ವಿವಿಧ ಸಂಗೀತ ವಾದ್ಯಗಳನ್ನು ನೋಡುತ್ತೇವೆ. ಅದರ ಪಕ್ಕದ ಸಭಾಂಗಣದ ಭಿತ್ತಿಗಳೆಲ್ಲ ಕರ್ನಾಟಕ ಶೈಲಿಯ ಚಿತ್ರಗಳಿಂದ ತುಂಬಿಹೋಗಿವೆ. ಅಲ್ಲದೆ ಅಲ್ಲಿ ರಾಜರುಗಳು ವಿನೋದಕ್ಕಾಗಿ ಇಸ್ಪೀಟಿನಂತೆ ಆಡಲು ಬಳಸುತ್ತಿದ್ದ ಗಂಜೀಫಿನ ಎಲೆಗಳಿವೆ.
ಉಪ್ಪರಿಗೆಯಿಂದ ಕೆಳಭಾಗದ ಹಿಂಬದಿಯ ನಾಲ್ಕನೆ ಗಾಜಿನ ಪಡಸಾಲೆಯಲ್ಲಿ ಅನೇಕ ಕಲಾತ್ಮಕವಾದ ಕಂಚು, ಹಿತ್ತಾಳೆ, ತಾಮ್ರ, ಗಂಧ, ಮತ್ತು ದಂತದ ವಸ್ತುಗಳಿವೆ. ಕೆಲವು ಅಪರೂಪದ ಕರಕುಶಲ ವಸ್ತುಗಳನ್ನು ಇಲ್ಲಿ ಹೆಸರಿಸಬಹುದು. ತಂಜಾವೂರಿನ ಕಡೆಯ ತಾಮ್ರದ ತಟ್ಟೆಯೊಂದರಲ್ಲಿ ಮಹಾಭಾರತದ ದೃಶ್ಯವನ್ನು ಉಬ್ಬಚ್ಚಿನಲ್ಲಿ ಬಿಡಿಸಿದ್ದಾರೆ. ದ್ರೌಪದಿ ಕಲ್ಯಾಣ, ಪಗಡೆಯಾಟ, ಅಶ್ವಮೇಧಯಾಗ, ಭೀಮ ಧರ್ಯೋದನರ ಕಾಳಗ, ಕರ್ಣಾರ್ಜುನರ ಯುದ್ಧ ಇವನ್ನು ಲೋಹದಲ್ಲಿ ಬಹು ಸೊಗಾಸಾಗಿ ರೂಪಿಸಿದ್ದಾರೆ. ಅನೇಕ ಹಿತ್ತಾಳೆಯ ದೇವಾಲಯ ಮಾದರಿಗಳೂ ಇವೆ.
ದಂತದ ಕೃತಿಗಳಲ್ಲಿ ಆನೆ, ಕುದುರೆ, ಜಿಂಕೆ, ನಾಯಿ, ಕೊಕ್ಕರೆ, ಹಸು, ಎಮ್ಮೆ, ಮುಂತಾದ ಪ್ರಾಣಿಪಕ್ಷಿಗಳನ್ನೂ ಬೀಸಣಿಗೆ, ದುರ್ಬೀನು, ಫಿರಂಗಿ, ಭರಣಿ, ಪಗಡೆ ಆಟದ ವಸ್ತುಗಳು, ಎತ್ತಿನಗಾಡಿ, ವೇಣುಗೋಪಾಲ, ಚಾಮುಂಡೇಶ್ವರಿ, ಶ್ರೀರಾಮ ಮುಂತಾದ ದೇವರ ವಿಗ್ರಹಗಳನ್ನೂ ಪಲ್ಲಕ್ಕಿ, ಕೈಗನ್ನಡಿ, ಬಾಚಣಿಗೆ, ಸೀರಣಿಗೆಗಳನ್ನು ನೋಡಬಹುದು. ಚಿನ್ನದ ಬಣ್ಣದಲ್ಲಿ ತೆಳುವಾದ ದಂತದ ಫಲಕದ ಮೇಲೆ ಮೈಸೂರಿನ ವೈ. ಸುಂದರಯ್ಯ ಮುಮ್ಮಡಿಯವರ ರೂಪಚಿತ್ರಗಳನ್ನು ಬಿಡಿಸಿದ್ದಾನೆ. ಬಾಚಣಿಗೆಗಳ ಎಡಬಲ ಮೈಗಳಲ್ಲಿ ರಾಮರಾವಣರ ಯುದ್ಧ, ರಾವಣನ ಕೈಲಾಸದಲ್ಲಿನ ಸೋಲು, ಗಜೇಂದ್ರ ಮೋಕ್ಷ, ಶೇಷಶಯನ, ಮಾರ್ಕಂಡೇಯ, ಶ್ರೀರಾಮನ ವಾನರಸಭೆ ಮುಂತಾದುವು ಅತ್ಯಂತ ಕುಸುರಿ ಕೆಲಸವಾಗಿದ್ದು ಕನ್ನಡನಾಡಿನ ಶಿಲ್ಪಿಗಳ ಕೀರ್ತಿಯನ್ನು ಬೆಳಗುವಂತಿವೆ. ಒಂದು ಕೈಗನ್ನಡಿಯಲ್ಲಿ ಇಡೀ ಕಾಡುಪ್ರಾಣಿಗಳ ವಿಶ್ವವನ್ನೇ ಸೃಷ್ಟಿಸಲಾಗಿದೆ. ತಾಂಡವನೃತ್ಯ ಶ್ರೀರಾಮ ಪಟ್ಟಾಭೀಷೇಕ-ಮೋಹಕ ಕೃತಿಗಳಾಗಿವೆ.
ಸೀಸೆಯೊಂದರಲ್ಲಿ ಮಂದಹಾಸದಲ್ಲಿ ಕುಳಿತ ರಾಜನ ಪ್ರತಿಮೆ ಇದೆ. ಒಂದೊಂದು ಅಕ್ಕಿಕಾಳಿನ ಮೇಲೆ ಒಂದೊಂದರಂತೆ ಶಿವಾಜಿ, ಗಾಂಧಿ, ಕೃಷ್ಣ, ಈಶ್ವರ, ಲಕ್ಷ್ಮಿ, ಸರಸ್ವತಿ. ತಾಜಮಹಲ್ ಮತ್ತು ನವಿಲುಗಳನ್ನು ವರ್ಣಗಳಲ್ಲಿ ಚಿತ್ರಿಸಲಾಗಿದೆ. ಇವು ಕೃಷ್ಣಗಿರಿಯ ವೈದ್ಯನಾಥನ ಕುಸುರಿ ಕೆಲಸ.
ಗಂಧದಲ್ಲಿ ಸೀತಾಪಂಚವಟಿ, ಕೃಷ್ಣಜಲಕ್ರೀಡೆಗಳನ್ನು ಸೊಗಸಾಗಿ ರಚಿಸಿದವ ಸೊರಬದ ಸಿದ್ದಾಪುರ ತಿಮ್ಮಣ್ಣ. ಅಹಲ್ಯಾ ಶಾಪವಿಮೋಚನೆ, ಭಗವದ್ಗೀತೆ, ಚಾಮುಂಡೇಶ್ವರಿ, ಚತುರ್ಮುಖ ಬ್ರಹ್ಮ ಕೃತಿಗಳನ್ನು ಸೊರಬದ ಗುಡಿಗಾರ ವಾಮನಪ್ಪ, ಎಚ್, ವೆಂಕಟಪ್ಪ ಮುಂತಾದವರು ಸುಂದರವಾಗಿ ರಚಿಸಿದ್ದಾರೆ.
ಇಲ್ಲಿನ ಈಶ್ವರ, ವಿಷ್ಣು, ಬ್ರಹ್ಮ ಮೊದಲಾದ ನೇಪಾಳದ ಕೃತಿಗಳು ನವರತ್ನದಲ್ಲಿ ರಚಿತವಾಗಿದೆ.
ಚಿತ್ರಶಾಲೆಯ ಹಿಂಬದಿಯ ಹಳೆಯ ಕೋಣೆಯಲ್ಲಿ ಅಮೃತಶಿಲೆಯ ಮೈಸೂರು ಅರಮನೆಯ ಮಾದರಿಯೊಂದಿದೆ. ಅನೇಕ ಮರದ ಮೂರ್ತಿಗಳೂ ಇವೆ. ಲಾರ್ಡ್ ಡಾಲ್‍ಹೌಸಿ ಮೈಸೂರು ಅರಸರಿಗೆ ಕಳುಹಿಸಿದ ಟಿಪ್ಪುವಿನ ಮಡದಿಯ ಮರದ ಮೇನೆಯೊಂದನ್ನು ಇಲ್ಲಿರಿಸಲಾಗಿದೆ. ಮೈಸೂರಿನ ರಾಜರು ಉಪಯೋಗಿಸಿ ಮೆರೆದ ನೂರ ಎರಡು ವಿವಿಧಾಕಾರದ ಸುಂದರ ಕಲಾತ್ಮಕ ಕೈಚಿತ್ರಗಳಿವೆ. ಚಾಮುಂಡೇಶ್ವರಿಯ ಮರದ ರಥದ ಮಾದರಿಯೂ ಇಲ್ಲಿದೆ. ರಾಜರು ಉಪಯೋಗಿಸಿದ ಕಾಶ್ಮೀರಿ ಶಾಲುಗಳೂ ಮೊಸಳೆಯ ಚರ್ಮದಲ್ಲಿ ಮಾಡಿದ ಚಾಮುಂಡಿ ಪಾದದ ಕೃತಿಯೂ ಇವೆ. ಚಿತ್ರ ಕೊರತದ ತೆಂಗಿನ ಕರಟದ, ನಾನಾ ಆಕಾರದ ರೂಪದ ಕತ್ತಿಗಳು, ಗುರಾಣಿಗಳು, ಬಂದೂಕುಗಳು, ಇತರ ಆಯುಧಗಳು, ಗಂಟೆಗಳು ಇಲ್ಲಿ ಕಾಣಸಿಗುತ್ತವೆ. ಇದರ ನೆರೆಯ ಕೋಣೆಯಲ್ಲ ಪೂಜಾಮಂದಿರ, ಅದರ ಭಿತ್ತಿಗಳಲ್ಲಿ ಅನೇಕ ಶಾಸ್ತ್ರೀಯ ರೀತಿಯಲ್ಲಿ ದೇವರುಗಳನ್ನು ಚಿತ್ರಿಸಲಾಗಿದೆ.
ಮೈಸೂರು ನಗರದ ಆಕರ್ಷಣೆಗಳಲ್ಲಿ ಜಯಚಾಮರಾಜೇಂದ್ರ ಚಿತ್ರಶಾಲೆ ಬಹು ಮುಖ್ಯವಾದುದು. ಅನೇಕ ವರ್ಷಗಳ ಸತತ ಪ್ರಯತ್ನದಿಂದಾದ ಈ ಕಲಾಗಾರ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳುತ್ತ ಬಂದಿದೆ. (2003-04ರ ಅವಧಿಯಲ್ಲಿ ಚಿತ್ರಶಾಲೆಯ ಒಳಾಂಗಣದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದು ದುರಸ್ತಿ ಹಾಗೂ ಪುನರ್ ವಿಂಗಡನೆಯ ಕಾರ್ಯ ಇನ್ನೂ (2005ರಲ್ಲೂ) ನಡೆಯುತ್ತಿದೆ. (ಪಿ.ಆರ್.ಟಿ.)