ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಿರಾಫೆ

ವಿಕಿಸೋರ್ಸ್ದಿಂದ

ಜಿರಾಫೆ ಆರ್ಟಿಯೊಡ್ಯಾಕ್ಟಿಲ ಗಣದ ಜಿರ್ಯಾಫಿಡೀ ಕುಟುಂಬಕ್ಕೆ ಸೇರಿದ ಸಸ್ತನಿ. ಆಫ್ರಿಕದಲ್ಲಿ ಸಹಾರ ಮರುಭೂಮಿಯ ದಕ್ಷಿಣಕ್ಕೆ ಇರುವ ಕುರುಚಲು ಕಾಡು ಮತ್ತು ಸವಾನ ಹುಲ್ಲುಗಾವಲುಗಳಲ್ಲಿ ಮಾತ್ರ ಕಾಣದೊರೆಯುತ್ತದೆ. ಜಿರಾಫೆ ಈ ಜಾರಿಯ ವೈಜ್ಞಾನಿಕ ಹೆಸರು ಈ ಪದ ಬಹುಶಃ ಅರಬ್ ಪದವಾದ ಜರಾಫದಿಂದ ಬಂದಿರಬೇಕು. ರಮ್ಯ ಜೀವಿ ಅಥವಾ ಚುರುಕು ನಡುಗೆಯ ಪ್ರಾಣಿ ಎಂದು ಈ ಪದದ ಅರ್ಥ. ಪ್ರಾಚೀನ ರೋಮನರು ಇದನ್ನು ಕಮೆಲೊಪಾರ್ಡಾಲಿಸ್ (ಗಂಡು ಚಿರತೆ ಮತ್ತು ಹೆಣ್ಣು ಒಂಟೆಗೆ ಹುಟ್ಟಿದ ಪ್ರಾಣಿ) ಎಂದು ಕರೆಯುತ್ತಿದ್ದರು. ಈಗಲೂ ಇದಕ್ಕೆ ಕಮೆಲೊಪಾರ್ಡ್ ಎಂಬ ಹೆಸರಿದೆ. ಜೂಲಿಯಸ್ ಸೀಸರ್ ಇದನ್ನು ಮೊಟ್ಟಮೊದಲ ಬಾರಿಗೆ ಕ್ರಿ.ಪೂ. 46ರಲ್ಲಿ ಯೂರೋಪಿಗೆ ತೆಗೆದುಕೊಂಡು ಹೋದನಂತೆ. ಪ್ರಾಣಿಗಳಲ್ಲೆಲ್ಲ ಅತ್ಯಂತ ಎತ್ತರವಾದ ಪ್ರಾಣಿ ಇದು, ಸುಮಾರು 18' ಎತ್ತರ ಬೆಳೆಯುತ್ತದೆ. ಭುಜದ ಬಳಿಯ ಎತ್ತರವೇ 12'-14' ಇರುವುದುಂಟು. ಇದರ ಮುಂಗಾಲುಗಳ ನಡುವೆ ಒಬ್ಬ ಮನುಷ್ಯ ಸುಲಭವಾಗಿ ನಿಲ್ಲಬಹುದು, ತೂಕದಲ್ಲೂ ಇದು ಭಾರಿಯಾದುದೇ. ಪೂರ್ಣ ಬೆಳೆದ ಗಂಡು ಜಿರಾಫೆ ಸುಮಾರು 2ಟನ್ ತೂಗುವುದುಂಟು. ಗಂಡಿಗಿಂತ ಹೆಣ್ಣು 2'-3' ಕಡಿಮೆ ಎತ್ತರ; ತೂಕ ಸುಮಾರು 1200 ಎಲ್ ಬಿ. ಜಿರಾಫೆಗೆ ಬಲು ಉದ್ದವಾದ ಕತ್ತು ಇದೆ. ಗಂಡುಗಳಲ್ಲಿ ಕತ್ತಿನ ಏಣಿನ ಮೇಲೆ ಬಿರುಗೂದಲುಗಳ ಕೇಸರ ಉಂಟು. ಕತ್ತು ಇಷ್ಟು ಉದ್ದವಿದ್ದರೂ ಅದರೊಳಗಿನ ಕಶೇರುಗಳ ಸಂಖ್ಯೆ ಮಾತ್ರ ಹಸು, ಕುದುರೆಗಳಲ್ಲಿ ಇರುವಷ್ಟೆ ಇವೆ, ಅಂದರೆ 7. ಕತ್ತು ಉದ್ದವಾಗಿರುವುದು ಕಶೇರುಗಳ ಲಂಬನೆಯಿಂದ ಮಾತ್ರವೆ ಹೊರತು ಅವುಗಳ ಸಂಖ್ಯೆಯ ಹೆಚ್ಚಳದಿಂದಲ್ಲ. ಗಂಡು ಮತ್ತು ಹೆಣ್ಣು ಜಿರಾಫೆಗಳೆರಡರಲ್ಲೂ ನೆತ್ತಿಯ ಮೇಲೆ ಒಂದು ಜೊತೆ ಮೋಟು ಕೊಂಬುಗಳಿವೆ. ಕೆಲವು ಬಗೆಗಳಲ್ಲಿ ಹಣೆಯ ಮೇಲೆ ಒಂದು ಕೊಂಬಿರುವುದೂ ಉಂಟು. ಅಪೂರ್ವವಾಗಿ ವಯಸ್ಸಾದ ಕೆಲವು ಗಂಡುಗಳಲ್ಲಿ ನೆತ್ತಿಯ ಮೇಲಿನ ಕೊಂಬುಗಳ ಹಿಂಭಾಗದಲ್ಲಿ ಇನ್ನೊಂದು ಜೊತೆ ಪುಟ್ಟ ಕೊಂಬುಗಳಿರುವುದು ಕಂಡುಬಂದಿದೆ. ಎಲ್ಲ ಕೊಂಬುಗಳ ಮೇಲೂ ಧರ್ಮ ಮತ್ತು ಕೂದಲುಗಳ ಸಂಪೂರ್ಣ ಹೊದಿಕೆ ಇರುವುದು ಇವುಗಳ ಸೋಜಿಗದ ಲಕ್ಷಣ. ಜಿರಾಫೆಗೆ ದೊಡ್ಡಗಾತ್ರದ ಕಗ್ಗಂದು ಬಣ್ಣದ ಹಾಗೂ ಉದ್ದರೆಪ್ಪೆಯ ಕಣ್ಣುಗಳುಂಟು. ಇದರ ದೃಷ್ಟಿ ಆಫ್ರಿಕದ ವನ್ಯ ಪ್ರಾಣಿಗಳಲ್ಲೆಲ್ಲ ಅತ್ಯಂತ ತೀಕ್ಷ್ಣವಾದ್ದು. ಇಂಥ ದೃಷ್ಟಿಯೊಂದಿಗೆ ಜಿರಾಫೆಯ ಎತ್ತರವೂ ಸೇರಿರುವುದರಿಂದ ಇದು ಬಹುದೂರದ ನೋಟವನ್ನು ಸುಲಭವಾಗಿ ಗ್ರಹಿಸಬಲ್ಲುದು. ಇದರ ತುಟ್ಟಿಗಳು ಉದ್ದವಾದವೂ ಗ್ರಾಹಕ ಶಕ್ತಿಯುಳ್ಳವೂ ಆಗಿವೆ. ಸುಮಾರು 1.5' ಉದ್ದಕ್ಕೆ ಚಾಚಬಲ್ಲ ನಾಲಿಗೆ ಮತ್ತು ಮೂಗಿನ ಹೊಳ್ಳೆಗಳನ್ನು ಬೇಕೆಂದಾಗ ಮುಚ್ಚಿಕೊಳ್ಳುವ ಸಾಮಥ್ಯಗಳು ಜಿರಾಫೆಯ ಮತ್ತೆರಡು ವಿಚಿತ್ರ ಲಕ್ಷಣಗಳು. ಕಾಲುಗಳಲ್ಲಿ 3 ಮತ್ತು 4ನೆಯ ಬೆರಳುಗಳು ಮಾತ್ರ ಇದ್ದು ಗೊರಸುಗಳಾಗಿ ಮಾರ್ಪಟ್ಟಿವೆ. ಇವು ಅಗಲವಾಗಿಯೂ ಭಾರವಾಗಿಯೂ ಇವೆಯಾದರೂ ಗಟ್ಟಿ ನೆಲದ ಮೇಲೆ ಮಾತ್ರ ನಡೆಯಲು ಅನುಕೂಲವಾಗಿವೆ. ಕೆಸರುಮಣ್ಣಿನಲ್ಲಿ, ಜೌಗಿನಲ್ಲಿ ಜಿರಾಫೆ ಸರಾಗವಾಗಿ ನಡೆಯಲಾರದು. ಜಿರಾಫೆ ತುಂಬ ವೇಗವಾಗಿ ನಡೆಯಬಲ್ಲುದು. ಓಡುವಾಗಲಂತೂ ಗಂಟೆಗೆ 48 ಕಿಲೊ. ಮೀ. ಕ್ರಮಿಸಬಲ್ಲುದು. ಓಡುವಾಗ ಹಿಂಗಾಲುಗಳೆರಡನ್ನೂ ಮುಂಗಾಲುಗಳ ಮುಂದೆ ಹಾಯವಂತೆ ಚಾಚುತ್ತದೆ. ಜೊತೆಗೆ ತಲೆ ಮತ್ತು ಕತ್ತುಗಳು 8 ಆಕಾರದಲ್ಲಿ ತೊನೆಯುತ್ತವೆ. ಸಾಧಾರಣ ನಡಿಗೆಯಲ್ಲಿ ದೇಹದ ಒಂದು ಸಲ, ಇನ್ನೊಂದು ಪಾಶ್ರ್ವದ ಕಾಲುಗಳನ್ನು ಇನ್ನೊಂದು ಸಲ, ಪರ್ಯಾಯವಾಗಿ, ಚಾಚುತ್ತ ಸಾಗುತ್ತದೆ. ಜಿರಾಫೆಯ ದೇಹದ ಬಣ್ಣ ಮಾಸಲು ಕಂದು. ಅದರ ಮೇಲೆಲ್ಲ ಗಾಢವರ್ಣದ ಮಚ್ಚೆಗಳಿವೆ. ಮಚ್ಚೆಗಳ ಮಧ್ಯೆ ಇರುವ ಸ್ಥಳ ಒಂದು ರೀತಿಯ ಬಲೆಯಂತೆ ಕಾಣುತ್ತದೆ. ಉದರ ಭಾಗ ತಿಳಿಬಣ್ಣದ್ದು; ಇದರ ಮೇಲೆ ಮಚ್ಚೆಗಳಿಲ್ಲ. ಜಿರಾಫೆಯ ಬಾಲ ಉದ್ದವಾಗಿದೆ; ಇದರ ತುದಿಯಲ್ಲಿ ಕೂದಲಿನ ಗೊಂಡೆಯುಂಟು. ಇದು ಯಾವ ತೆರನ ಸದ್ದನ್ನೂ ಮಾಡದು ಎಂದು ಹೇಳಲಾಗಿದ್ದರೂ ಅಸ್ಪಷ್ಟವಾಗಿ ಗುರುಗುಟ್ಟುವುದನ್ನು, ಮುಲುಕು ಹಾಕುವುದನ್ನು ಕೇಳಿದವರಿದ್ದಾರೆ.

ಜಿರಾಫೆ ಸಂಘಜೀವಿ; 15-20 ಪ್ರಾಣಿಗಳನ್ನೊಳಗೊಂಡ ಗುಂಪುಗಳಲ್ಲಿ ಜೀವಿಸುತ್ತದೆ. ಗುಂಪಿಗೆ ಬಲಿಷ್ಠ ಗಂಡೊಂದು ನಾಯಕ. ಅಪರೂಪವಾಗಿ ಗಂಡುಗಳು ಒಂಟಿಯಾಗಿಯೇ ಜೀವನ ಸಾಗಿಸುವುದುಂಟು. ಇದು ಸಾಮಾನ್ಯವಾಗಿ ಸಾಧುಪ್ರಾಣಿ. ಆದರೆ ಶತ್ರುಗಳಿಂದ ಆವೃತವಾದಾಗ ಉಗ್ರವಾಗಿ ಹೋರಾಡಬಲ್ಲದು.

ಮನುಷ್ಯನನ್ನು ಬಿಟ್ಟರೆ ಸಿಂಹವೊಂದೇ ಇದಕ್ಕೆ ಮುಖ್ಯ ವೈರಿ. ಸಿಂಹಗಳಾದರೂ ಒಂಟೊಂಟಿಯಾಗಿ ಜಿರಾಫೆಯನ್ನು ಕೆಣಕವು. ಏಕೆಂದರೆ ಜಿರಾಫೆ ತನ್ನ ಕಾಲುಗಳಿಂದ ಮರಣಾಂತಿಕ ಹೊಡೆತನ್ನು ಕೊಡಬಲ್ಲದು. ಕೆಲವೊಮ್ಮೆ ಹೆಣ್ಣಿಗಾಗಿ ಗಂಡು ಜಿರಾಫೆಗಳ ನಡುವೆ ಹೋರಾಟ ನಡೆಯುತ್ತದೆ. ಹೀಗೆ ಹೋರಾಡುವಾಗಲೂ ಕಾಲುಗಳ ಬಳಕೆಯೇ ಹೆಚ್ಚು. ಕೊಂಬುಗಳನ್ನು ಉಪಯೋಗಿಸುವುದೇ ಇಲ್ಲ. ಗೊಬ್ಬಳಿ ಮರದ ಎಳೆಚಿಗುರು ಇದರ ಮೆಚ್ಚಿನ ಆಹಾರ, ಹುಲ್ಲನ್ನು ತಿನ್ನುವುದು ಬಹಳ ಕಡಿಮೆ. ದೇಹ ಎತ್ತರವಿದ್ದು ಕತ್ತೂ ಬಹಳ ಉದ್ದವಾಗಿರುವುದರಿಂದ ಬಗ್ಗಿ ಹುಲ್ಲನ್ನು ತಿನ್ನುವುದು ಇದಕ್ಕೆ ಬಹಳ ಕಷ್ಟ. ಹೀಗೆ ನೆಲದಿಂದ ಆಹಾರವನ್ನು ಎತ್ತಿಕೊಳ್ಳುವಾಗ, ನೀರನ್ನು ಕುಡಿಯುವಾಗ ಮುಂಗಾಲುಗಳೆರಡನ್ನೂ ವಿಸ್ತಾರವಾಗಿ ಹರಡಿ ಕತ್ತನ್ನು, ಬಗ್ಗಿಸುತ್ತದೆ. ದನಗಳಂತೆಯೇ ಜಿರಾಫೆಯೂ ಆಹಾರವನ್ನು ಮೆಲುಕು ಹಾಕುತ್ತದೆ. ನೀರನ್ನು ಕುಡಿಯುವುದು ಬಲು ಕಡಿಮೆ. ವಾರಕ್ಕೊಮ್ಮೆ 2 ಗ್ಯಾಲನ್ ನೀರನ್ನು ಕುಡಿದರೆ ಹೆಚ್ಚು. ಹಲವಾರು ವಾರಗಳ ಕಾಲ ನೀರಿಲ್ಲದೆ ಇರಬಲ್ಲುದು. ದಿನವೂ ಬೆಳಗಿನ ಜಾವ ಮತ್ತು ಸಂಜೆ ಆಹಾರವನ್ನರಸುತ್ತ ಸಾಗುತ್ತಿದ್ದು ಮಧ್ಯಾಹ್ನ ಮರಗಳಡಿಯಲ್ಲಿ ನಿಂತು ವಿಶ್ರಮಿಸುತ್ತದೆ. ಸಾಮಾನ್ಯವಾಗಿ ಜಿರಾಫೆ ನಿಂತು ಕೊಂಡೇ ನಿದ್ರಿಸುತ್ತದೆ. ಅಪೂರ್ವವಾಗಿ ಮಲಗುವುದುಂಟು. ಜಿರಾಫೆಗೆ ಈಜಲು ಬಾರದು. ಇದರಿಂದಾಗಿ ನೀರು ಕಂಡರೆ ಇದಕ್ಕೆ ಹೆದರಿಕೆ.

ಗಂಡು ಹೆಣ್ಣುಗಳು ಕೂಡುವ ಶ್ರಾಯ ಜುಲೈ-ಸೆಪ್ಟೆಂಬರ್. ಗರ್ಭಧಾರಣೆಯ ಅವಧಿ 420-450 ದಿವಸಗಳು. ಒಂದು ಸಲಕ್ಕೆ ಒಂದೇ ಒಂದು ಮರಿ ಹುಟ್ಟುತ್ತದೆ. ಹುಟ್ಟುವಾಗಲೇ ಸುಮಾರು 5.5' ಎತ್ತರವಿರುವ ಮರಿ ಹುಟ್ಟಿದ 20 ಮಿನಿಟುಗಳ ತರುವಾಯ ತನ್ನ ಕಾಲುಗಳ ಮೇಲೆಯೇ ಓಡಾಡುವಂತಾಗುತ್ತದೆ. ಸುಮಾರು 9 ತಿಂಗಳ ಕಾಲ ತಾಯ ಹಾಲು ಕುಡಿದೇ ಬದುಕುತ್ತಿದ್ದು ಅನಂತರ ಸ್ವತಂತ್ರ ಜೀವನ ನಡೆಸತೊಡಗುತ್ತದೆ. ಹಲವಾರು ಪ್ರೌಢ ಜಿರಾಫೆಗಳು ಮರಿಗಳನ್ನು (ತಮ್ಮವೇ ಅಲ್ಲವಾದರೂ) ರಕ್ಷಣೆ ಮಾಡುವ ವಿಚಿತ್ರ ಕ್ರಮ ಇವುಗಳಲ್ಲಿ ಕಂಡುಬರುತ್ತದೆ. ಮರಿಗಳಿಗೆ 3-4 ವರ್ಷ ವಯಸ್ಸಾದ ಅನಂತರ ಲೈಂಗಿಕ ಸಾಮಥ್ರ್ಯ ಬರುತ್ತದೆ. ಜಿರಾಫೆಯ ಆಯಸ್ಸು ಸುಮಾರು 20 ವರ್ಷಗಳು.

ಜಿರಾಫೆಯನ್ನು ಅದರ ಧರ್ಮ, ಮಾಂಸಗಳಿಗಾಗಿ ಬೇಟೆಯಾಡುತ್ತಾರೆ. ಇದರ ಮಾಂಸ ಬಹಳ ಗಡುಸಾಗಿದ್ದರೂ ರುಚಿಯೆಂದು ಹೇಳಲಾಗಿದೆ. (ಕೆ.ಎಂ.ಕೆ.)