ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀರಿಗೆ

ವಿಕಿಸೋರ್ಸ್ದಿಂದ

ಜೀರಿಗೆ ಪ್ರಸಿದ್ಧ ಹಾಗೂ ಜನಪ್ರಿಯ ಸಂಬಾರ ಸಸ್ಯ. ಅಂಬೆಲಿಫೆರೀ ಕುಟುಂಬಕ್ಕೆ ಸೇರಿದೆ. ಕ್ಯೂಮಿನಮ್ ಸೈಮಿನಮ್ ಇದರ ಶಾಸ್ತ್ರೀಯ ಹೆಸರು. ಇದರ ಫಲಗಳನ್ನು (ಬೀಜಗಳನ್ನು) ಸಂಬಾರ ವಸ್ತುವಾಗಿ ಬಳಸುತ್ತಾರೆ. ಇದಕ್ಕೆ ಔಷಧೀಯ ಮಹತ್ವವೂ ಉಂಟು. ಜೊತೆಗೆ ಇವುಗಳಿಂದ ಎಣ್ಣೆಯೊಂದನ್ನು ಬೇರ್ಪಡಿಸುವುದಿದೆ. ಜೀರಿಗೆಯ ತವರು ಈಜಿಪ್ಟ್ ಎಂದು ಹೇಳಲಾಗಿದೆ. ಪ್ರಪಂಚದ ಉಷ್ಣ ಹಾಗೂ ಸಮಶೀತೋಷ್ಣ ವಲಯದ ದೇಶಗಳಲ್ಲೆಲ್ಲ ಇದರ ಬೇಸಾಯ ಉಂಟು. ಭಾರತ, ಪರ್ಷಿಯ, ಈಜಿಪ್ಟ್, ಸಿಸಿಲಿ, ಚೀನ, ಜಾವ ಮುಂತಾದೆಡೆ ಇದರ ಕೃಷಿ ಅಧಿಕವಾಗಿದೆ. ಭಾರತದಲ್ಲಿ ಅಸ್ಸಾಮ್ ಮತ್ತು ಬಂಗಾಳ ರಾಜ್ಯಗಳನ್ನುಳಿದು ಮಿಕ್ಕೆಡೆಯಲ್ಲೆಲ್ಲ ಇದನ್ನು ಬೆಳೆಸಲಾಗುತ್ತದೆ. ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶಗಳು ಜೀರಿಗೆಯ ಬೇಸಾಯಕ್ಕೆ ಹೆಸರುವಾಸಿಯಾಗಿವೆ.

ಜೀರಿಗೆ ಮೃದುವಾದ ಏಕವಾರ್ಷಿಕ ಮೂಲಿಕೆ. ಸುಮಾರು 1 ಎತ್ತರ ಬೆಳೆಯುತ್ತದೆ. ಇದರ ಕಾಂಡ ವಿಪುಲವಾಗಿ ಕವಲೊಡೆದಿರುವುದುಂಟು. ಕಾಂಡದ ಮೇಲೆ ಸೂಕ್ಷ್ಮವಾದ ಗೆರೆಗಳಿವೆ ಎಲೆಗಳು ತೆಳುವಾಗಿ ರೇಖೀಯವಾಗಿವೆ. ಇವುಗಳ ಬಣ್ಣ ನೀಲಿಮಿಶ್ರಿತ ಹಸಿರು. ಹೂಗೊಂಚಲು ಸಂಯುಕ್ತ ಛತ್ರಮಂಜರಿ ಮಾದರಿಯದು. ಹೂಗಳು ಚಿಕ್ಕ ಗಾತ್ರದವು; ಬಿಳಿ ಅಥವಾ ನಸುಗೆಂಪು ಬಣ್ಣದವು. ಫಲ ಎರಡು ಭಾಗಗಳುಳ್ಳ ಸ್ಕೀಜೊಕಾರ್ಪ್ ಮಾದರಿಯದು. ಬಲು ಚಿಕ್ಕ ಗಾತ್ರದ್ದು. ಇದರ ಎರಡು ತುದಿಗಳೂ ಮೊನಚಾಗಿವೆ. ಅಲ್ಲದೆ ಮೈ ಮೇಲೆ ಸೂಕ್ಷ್ಮವಾದ ಕಾಲುವೆಗಳುಂಟು. ಈ ಕಾಲುವೆಗಳಲ್ಲಿ ಚಂಚಲ ತೈಲವೊಂದನ್ನು ಉತ್ಪಾದಿಸುವ ಗ್ರ್ರಂಥಿಗಳಿವೆ. ಜೀರಿಗೆಯ ವಿಶಿಷ್ಟ ವಾಸನೆಗೆ ಈ ತೈಲವೇ ಕಾರಣ. ಜೀರಿಗೆ ಬೇಸಾಯಕ್ಕೆ ತಂಪಾದ ಹವಾಗುಣ ಹಿತಕರವಾದ್ದು. ಇದನ್ನು ಸಮುದ್ರ ಮಟ್ಟದಿಂದ ಹಿಡಿದು 10,000 ಎತ್ತರದವರೆಗಿನ ಪ್ರದೇಶಗಳಲ್ಲಿ ಬೆಳೆಸಬಹುದು. ಜೀರಿಗೆ ಸಸಿ ಬಲು ಸೂಕ್ಷ್ಮ ಪ್ರಕೃತಿಯದ್ದಾಗಿರುವುದರಿಂದ ಇದನ್ನು ಬಹಳ ಎಚ್ಚರಿಕೆಯಿಂದ ಬೇಸಾಯ ಮಾಡಬೇಕು. ಯಾವ ರೀತಿಯ ಹವಾಗುಣದ ವೈಪರೀತ್ಯವನ್ನೂ ಇದು ಸಹಿಸುವುದಿಲ್ಲ. ಬೇಸಾಯಕ್ಕೆ ಫಲವತ್ತಾದ ಹಾಗೂ ಚೆನ್ನಾಗಿ ನೀರು ಬಸಿದು ಹೋಗುವಂಥ ಗೊಡ್ಡುಮಣ್ಣು ಉತ್ತಮವಾದ್ದು. ಜೀರಿಗೆಯ ಬೆಳೆಯನ್ನಿಡಲು ಏಪ್ರಿಲ್ ತಿಂಗಳ ಎರಡನೆಯ ವಾರ ಮತ್ತು ಅಕ್ಟೋಬರ್ ತಿಂಗಳ ಕೊನೆಯ ವಾರ ಸೂಕ್ತ ಕಾಲ. ಜೀರಿಗೆ ಬೆಳೆಯನ್ನಿಡಬೇಕಾದ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ, ಹೆಂಟೆ ಹೊಡೆದು, ಕಸಕಡ್ಡಿ ತೆಗೆದು ಭೂಮಿಯನ್ನು ಮಟ್ಟಸ ಮಾಡಬೇಕು. ಅನಂತರ ಎಕರೆಗೆ ಸುಮಾರು 15-20 ಗಾಡಿ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನೊಡನೆ ಚೆನ್ನಾಗಿ ಮಿಶ್ರಮಾಡಬೇಕು. ಆಮೇಲೆ ಭೂಮಿಯನ್ನು ನೀರಾವರಿಗೆ ಅನುಕೂಲವಾಗುವಂತೆ ಪಾತಿಗಳನ್ನು ಮಾಡಿ, ಬೀಜಗಳನ್ನು ಬಿತ್ತಬೇಕು. ಒಂದು ಎಕರೆಗೆ 12-15 ಕೆಜೆ ಗಳಷ್ಟು ಬಿತ್ತನೆ ಬೇಕಾಗುವುದು. ಬೀಜಗಳನ್ನು ಬಿತ್ತಿದ ಅನಂತರ ಬೀಜಗಳು ತೇಲದಂತೆ ಬಹಳ ಎಚ್ಚರಿಕೆಯಿಂದ ನೀರನ್ನು ಹಾಕಬೇಕು. ಬೀಜಗಳು ಸುಮಾರು 5 ದಿನಗಳಲ್ಲಿ ಮೊಳೆಯುತ್ತವೆ. ಮಡಿಗಳಿಗೆ ಪ್ರತಿದಿನ ತೆಳುವಾಗಿ ನೀರನ್ನು ಹಾಕುತ್ತಿರಬೇಕು. ಆಗಾಗ ಕಳೆ ಕೀಳುತ್ತಿದ್ದು, 3-4 ದಿನಗಳಿಗೊಮ್ಮೆ ನೀರನ್ನು ಹಾಕುತ್ತಿದ್ದರೆ ಸಸಿಗಳು ಉತ್ಕøಷ್ಟವಾಗಿ ಬೆಳೆಯುತ್ತವೆ. ಜೀರಿಗೆ ಹೂಬಿಟ್ಟ ಬಳಿಕ ವಾರಕ್ಕೊಮ್ಮೆ ನೀರನ್ನು ಹಾಯಿಸಿದರೆ ಸಾಕು. ಬೀಜ ಬಿತ್ತಿದ 60-90 ದಿನಗಳ ಮೇಲೆ ಕೊಯ್ಲಿಗೆ ಸಿದ್ಧವಾಗುತ್ತದೆ. ಗಿಡಗಳನ್ನು ಬೇರು ಸಹಿತ ಕಿತ್ತು ಒಣಗಿಸಿ ಸ್ವಚ್ಛವಾದ ನೆಲದ ಮೇಲೆ ಹರಡಿ, ಕೋಲಿನಿಂದ ಬಡಿದು ಅಥವಾ ಕಾಲಿನಿಂದ ಹೊಸಕಿ ಬೀಜಗಳನ್ನು ಬೇರ್ಪಡಿಸಬೇಕು. ಜೀರಿಗೆಯ ಸರಾಸರಿ ಇಳುವರಿ ಎಕರೆಗೆ 100-120 ಕಿ.ಗ್ರಾಂ. ಬೆಳೆ ಹುಲುಸಾಗಿದ್ದರೆ 150 ಕಿಗ್ರಾಂ ಗಳಷ್ಟು ಇಳುವರಿಯನ್ನು ಪಡೆಯಬಹುದು.

ಎಲೆ ತಿನ್ನುವ ಕಂಬಳಿಹುಳು ಮತ್ತು ತಿಗಣೆಗಳನ್ನು ಬಿಟ್ಟರೆ ಅಂಥ ಪ್ರಬಲವಾದ ಕೀಟಗಳಾವುವೂ ಜೀರಿಗೆಗೆ ಅಂಟುವುದಿಲ್ಲ. ಕೀಟಗಳನ್ನು ತಡೆಗಟ್ಟಲು 50% ಡಿ.ಡಿ.ಟಿ. ದ್ರಾವಣವನ್ನು ಸಿಂಪಡಿಸಬೇಕು. ಕೆಲವು ಸಲ ಜೀರಿಗೆಗೆ ಬೂದಿರೋಗ ಬರುವುದು. ರೋಗಪೀಡಿತ ಗಿಡಗಳ ಎಲೆಗಳು ಬೂದಿಯಿಂದ ಆವರಿಸಿದಂತೆ ಕಾಣುತ್ತವೆ. ಇದರಿಂದಾಗಿ ಗಿಡಗಳು ಒಣಗಿಹೋಗುತ್ತವೆ. ಗಂಧಕದ ಪುಡಿಯನ್ನು ಎರಚುವುದರಿಂದ ಈ ರೋಗವನ್ನು ತಡೆಗಟ್ಟಬಹುದು.

ಸಾಂಬಾರ ದಿನಸಾಗಿ ಜೀರಿಗೆಯ ರುಚಿ ಹೆಸರುವಾಸಿಯಾದುದು. ಅರುಚಿ, ಅಗ್ನಿಮಾಂದ್ಯ, ಪಿತ್ತ ವಿಕಾರಗಳನ್ನು ದೂರ ಮಾಡುತ್ತದೆ. ವಾತ, ಪಿತ್ತ, ಕಫಗಳನ್ನು ಸಮಧಾತುವನ್ನಾಗಿ ಮಾಡಲು ಇತರ ಔಷಧಿಗಳೊಂದಿಗೆ ಇದನ್ನೂ ದೊಡ್ಡ ಪರಿಮಾಣದಲ್ಲಿ ಸೇರಿಸಿ ಕಷಾಯ ಮಾಡಿಕೊಡುತ್ತಾರೆ. ಇದರ ಪುಡಿಯನ್ನು ಜೇನುತುಪ್ಪ, ಉಪ್ಪು ಮತ್ತು ಬೆಣ್ಣೆಯೊಂದಿಗೆ ಸೇರಿಸಿ ಚೇಳಿನ ಕಡಿತಕ್ಕೆ ಹಚ್ಚುವುದುಂಟು. (ಎಂ.ಎಚ್.ಎಂ.ಡಿ.ಎಂ)