ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀವವಿಮೆ

ವಿಕಿಸೋರ್ಸ್ದಿಂದ

ಜೀವವಿಮೆ - ಮಾನವ ಜೀವವನ್ನವಲಂಬಿಸಿದ ಒಂದು ಅವಧಿಯಲ್ಲಿ ವಿಮೆದಾರ (ಇನ್ಷೂರ್ಡ್) ವಿಮಾಕರ್ತನಿಗೆ (ಇನ್ಷೂರರ್) ಪಾವತಿ ಮಾಡುವ ಪ್ರೀಮಿಯಮ್‍ಗಳಿಗೆ (ಕಂತು) ಪ್ರತಿಯಾಗಿ, ಮರಣವಾಗಲಿ ಮಾನವಜೀವಾವಲಂಬಿಯಾದ ಯಾವುದೇ ಘಟನೆಯಾಗಲಿ ಸಂಭವಿಸಿದಾಗ, ಪಾವತಿ ಮಾಡುವುದಾಗಿ ವಿಮಾಕರ್ತ ನೀಡುವ ಭರವಸೆ (ಅಷ್ಯೂರೆನ್ಸ್) (ಲೈಫ್ ಇನ್ಷ್ಯೂರೆನ್ಸ್; ಲೈಫ್ ಅಷ್ಯೂರೆನ್ಸ್).

ಜೀವವಿಮೆಗೂ ಇತರ ಬಗೆಯ ವಿಮೆಗಳಿಗೂ ಮೂಲಭೂತವಾದ ಕೆಲವು ವ್ಯತ್ಯಾಸಗಳುಂಟು; 1. ಜೀವವಿಮೆ ಮಾನವಜೀವವನ್ನು ಅವಲಂಬಿಸಿದ ಒಂದು ಕರಾರು. ಇತರ ವಿಮೆಗಳು ಬಹುತೇಕ ಸ್ವತ್ತಿಗೆ ಸಂಬಂಧಿಸಿದಂಥವು. 2. ಜೀವವಿಮಾ ಕರಾರಿನಲ್ಲಿ ನಮೂದಿಸಲಾದ ವ್ಯಕ್ತಿ ಮರಣಹೊಂದಿದಾಗ ಅಥವಾ ಆತ ಒಂದು ನಿಶ್ಚಿತ ವಯಸ್ಸನ್ನು ಮುಟ್ಟಿದಾಗ ವಿಮೆಯ ಮೊಬಲಗನ್ನು ಪಾವತಿ ಮಾಡಲು ವಿಮಾಕರ್ತನ ಹೊಣೆ ಉದ್ಭವಿಸುತ್ತದೆ. ಪಾವತಿ ಮಾಡುವ ಹೊಣೆ ಯಾವ ಘಟನೆ ಸಂಭವಿಸಿದಾಗ ಉದ್ಭವಿಸುವುದೋ ಆ ಘಟನೆ ಸಂಭವಿಸುವುದು ನಿಶ್ಚಿತ; ಆದರೆ ಅದು ಎಂದು ಸಂಭವಿಸುವುದೆಂಬುದು ಅನಿಶ್ಚಿತ. ಇತರ ಬಗೆಯ ವಿಮೆಗಳಲ್ಲಿ ಹೀಗಲ್ಲ. ಯಾವ ಆಪತ್ತಿನ (ಪೆರಿಲ್) ವಿರುದ್ಧ ವಿಮೆ ಇಳಿಸಲಾಗಿದೆಯೋ ಅದು ಸಂಭವಿಸಬಹುದು ಅಥವಾ ಸಂಭವಿಸದಿರಬಹುದು. 3. ಜೀವವಿಮೆಯ ಕರಾರಿನಲ್ಲಿ ಸೂಚಿಸಲಾದ ಮೊಬಲಗನ್ನು ಕರಾರಿನಲ್ಲಿ ನಿಗದಿಸಲಾದ ಘಟನೆ ಸಂಭವಿಸಿದಾಗ ಪೂರ್ತಿಯಾಗಿ ಪಾವತಿ ಮಾಡಬೇಕು. ಇತರ ಬಗೆಯ ವಿಮೆಗಳು ಸಾಮಾನ್ಯವಾಗಿ ನಷ್ಟಪೂರ್ತಿ (ಇನ್ಡೆಮ್ನಿಟಿ) ಕರಾರುಗಳು. ವಿಮೆದಾರ ವಾಸ್ತವವಾಗಿ ಅನುಭವಿಸಿದ ನಷ್ಟವನ್ನು ಮಾತ್ರ ಭರ್ತಿ ಮಾಡಲು ವಿಮಾಕರ್ತ ಬದ್ಧ. 4. ಜೀವವಿಮೆಯ ಕರಾರು ಮಾಡಿಕೊಂಡ ಸಮಯದಲ್ಲಿ ವಿಮಾಯೋಗ್ಯ ಹಿತ (ಇನ್ಷ್ಯೂರಲ್ ಇಂಟರೆಸ್ಟ್) ಇರಬೇಕಾದ್ದು ಅವಶ್ಯ. ಅಗ್ನಿ ಹಾಗೂ ಸಾಗರಿಕ ವಿಮೆಯಲ್ಲಿ ಹೀಗಲ್ಲ. ನಷ್ಟ ಸಂಭವಿಸಿದ ಸಮಯದಲ್ಲಿ ವಿಮಾಯೋಗ್ಯ ಹಿತ ಇದ್ದರೆ ಸಾಕು. ವಿಮಾಯೋಗ್ಯ ಹಿತ ಎಂದರೆ ವಿಮೆಗೆ ಸಂಬಂಧಿಸಿದ ವಿಷಯದಲ್ಲಿ (ಸಬ್ಜೆಕ್ಟ್) ವಿಮೆದಾರನಿಗೆ ಇರಬೇಕಾದ ಹಿತ ಅಥವಾ ಆಸಕ್ತಿ. 5. ಜೀವವಿಮಾ ಕರಾರುಗಳು ದೀರ್ಘ ಅವಧಿಗಳವು. ಅಗ್ನಿ, ಸಾಗರಿಕ ಮುಂತಾದ ವಿಮೆಗಳು ಅಲ್ಪಾವಧಿಯವು (ಸಾಮಾನ್ಯವಾಗಿ ಒಂದು ವರ್ಷ ಅಥವಾ ಒಂದು ಯಾನದ ಅವಧಿ); ಅವಧಿ ತೀರಿದ ಬಳಿಕ ಇವನ್ನು ಪುನರ್ನವಗೊಳಿಸಬೇಕಾಗಬಹುದು. (ಜಿ.ಕೆ.)

ಒಂದು ವಿಮಾಸಂಸ್ಥೆಯ (ವಿಮಾಕರ್ತ) ನಿಬಂಧನೆಗಳಿಗೆ ಅನುಸಾರವಾಗಿ ಯಾರ ಜೀವವನ್ನು ವಿಮೆ ಮಾಡಲಾಗಿದೆಯೋ ಅವನು ವಿಮೆದಾರ (ಇನ್ಷೂರ್ಡ್), ಕರಾರಿನಂತೆ ಹಣ ಪಾವತಿ ಮಾಡುವುದಾಗಿ ವಾಗ್ದಾನ ಮಾಡುವವನು (ಅಥವಾ ಸಂಸ್ಥೆ) ವಿಮಾಕರ್ತ (ಇನ್ಷೂರರ್) ಭಾರತದಲ್ಲಿ ಜೀವವಿಮೆ ರಾಷ್ಟ್ರೀಕೃತ ಉದ್ಯಮ ಜೀವವಿಮಾ ಕಾರ್ಪೊರೇಷನ್ ಈ ವ್ಯವಹಾರ ನಡೆಸುತ್ತಿದೆ. ವಿಮೆದಾರನಿಗೂ ವಿಮಾಕರ್ತನಿಗೂ ನಡುವಣ ವಿಮಾ ಕರಾರಿನ ಷರತ್ತುಗಳನ್ನು ಲಿಖಿಸಲಾದ ಪತ್ರ ವಿಮಾ ಪತ್ರ ಅಥವಾ ವಿಮಾ ಪಾಲಿಸಿ. ವಿಮಾಕರ್ತ ಸಹಿ ಹಾಕಿ ಇದನ್ನು ವಿಮೆದಾರನಿಗೆ ನೀಡುತ್ತಾನೆ. ವಿಮೆ ಇಳಿಸಿದೆಯೆಂಬುದಕ್ಕೆ ಇದು ರುಜುವಾತು. ವಿಮೆದಾರ ವಿಮಾಕರ್ತನಿಗೆ ಪಾವತಿ ಮಾಡಬೇಕಾದ ಪ್ರತಿಫಲವೇ (ಕನ್ಸಿಡರೇಷನ್) ಪ್ರೀಮಿಯಮ್. ಪ್ರೀಮಿಯಮನ್ನು ಹೇಗೆ ಪಾವತಿ ಮಾಡಬೇಕು ಎಂಬುದು ಕರಾರನ್ನು ಅವಲಂಬಿಸುತ್ತದೆ. ಇದನ್ನು ನಿಗದಿಯಾದ, ಜೀವಾವಲಂಬಿಯಾದ ಅವಧಿಯಲ್ಲಿ ತಿಂಗಳಿಗೋ ಮೂರು ತಿಂಗಳುಗಳಿಗೋ ಅರ್ಧ ವರ್ಷಕ್ಕೋ ವರ್ಷಕ್ಕೋ ಒಮ್ಮೆ ಸಮಕಂತುಗಳಲ್ಲಿ ಅಥವಾ ಇಡೀ ಮೊಬಲಗನ್ನು ಒಂದೇ ಸಲಕ್ಕೆ ಪಾವತಿ ಮಾಡಬಹುದು. ನಿಗದಿಯಾದ ದಿನಾಂಕದಿಂದ ಕೆಲವು ಕೃಪಾದಿನಗಳ (ಡೇಸ್ ಆಫ್ ಗ್ರೇಸ್) ಅವಕಾಶವನ್ನು ವಿಮಾಕರ್ತ ನೀಡುವುದುಂಟು. ಕೃಪಾದಿನಗಳ ಒಳಗೂ ಪ್ರೀಮಿಯಮ್ ಪಾವತಿಯಾಗದಿದ್ದರೆ ಪಾಲಿಸಿ ಸಾಮಾನ್ಯವಾಗಿ ವ್ಯಪಗಮಿಸುತ್ತದೆ (ಲ್ಯಾಪ್ಸ್). ವಿಮೆ ಇಳಿಸಿ ಸಾಕಷ್ಟು ಕಾಲ ಸಂದಿದ್ದರೆ, ಪಾಲಿಸಿಗೆ ಅಧ್ಯರ್ಪಣ ಮೌಲ್ಯ (ಸರೆಂಡರ್ ವ್ಯಾಲ್ಯೂ) ಸಂಪಾದನೆಯಾಗಿದ್ದರೆ ಅಂಥ ಪಾಲಿಸಿ ಪ್ರೀಮಿಯಮಿನ ಬೇಪಾವತಿಗಾಗಿ (ನಾನ್‍ಪೇಮಂಟ್) ವ್ಯಪಗತವಾಗುವುದಿಲ್ಲ. ಕೊಡಬೇಕಾದ ಪ್ರೀಮಿಯಂ ಮೊಬಲಗನ್ನು ವಿಮಾಕರ್ತ ನಿರ್ವಹಿಸಬೇಕಾಗಿ ಬರುವ ದಾಯಿತ್ವದ (ರಿಸ್ಕ್) ಜೀವನಾಂಕಿಕ (ಆಕ್ಟುಯರಿಯಲ್) ಲೆಕ್ಕಾಚಾರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ವಿಮಾಕರಾರಿನ ಲಕ್ಷಣಗಳು: ಒಂದು ಕರಾರು ಪೂರೈಸಬೇಕಾದ ಷರತ್ತುಗಳೆಲ್ಲವನ್ನೂ ವಿಮಾಕರಾರು ಕೂಡ ಪೂರೈಸಬೇಕೆಂಬುದು ನಿರ್ವಿವಾದ (ನೋಡಿ- ಕರಾರು). ವಿಮಾಕರಾರಿನ ವಿಶಿಷ್ಟ ಲಕ್ಷಣಗಳು ಇವು; 1 ಅದು ಒಂದು ಪರಮ ಸದ್ಭಾವ (ಯೂಬೆರಿಮ ಫೈಡೀ) ಕರಾರು. ವಿಮೆಯ ವಿಷಯಕ್ಕೆ ಸಂಬಂಧಿಸಿದ ಸಾರವತ್ ತಥ್ಯಗಳನ್ನೆಲ್ಲ (ಮಟೀರಿಯಲ್ ಫ್ಯಾಕ್ಟ್ಸ್) ವಿಮಾಕರ್ತನಿಗೆ ತಿಳಿಯಪಡಿಸುವುದು ವಿಮೆದಾರನ ಕರ್ತವ್ಯ. ಯಾವುದೇ ಸಾರವತ್ ತಥ್ಯವನ್ನು ತಿಳಿಯಪಡಿಸದಿದ್ದರೆ, ಇಲ್ಲವೇ ತಪ್ಪು ನಿರೂಪಣೆ (ಮಿಸ್‍ರೆಪ್ರೆಸೆಂಟೇಷನ್) ಅಥವಾ ವಂಚನೆ (ಫ್ರಾಡ್) ಆಗಿದ್ದರೆ, ವಿಮಾಕರ್ತ ಕರಾರನ್ನು ನಿರಾಕರಿಸಬಹುದು. ಆದರೆ ವಿಮಾಕರಾರು ಮಾಡಿಕೊಂಡ ಎರಡು ವರ್ಷಗಳ ಅನಂತರ, ವಿಮೆದಾರ ನೀಡಿದ ತಪ್ಪು ಹೇಳಿಕೆಗಳಿಂದಾಗಿ, ಆ ಪಾಲಿಸಿಯ ಕ್ರಮಬದ್ಧತೆಯನ್ನು ಪ್ರಶ್ನಿಸುವಂತಿಲ್ಲವೆಂದು ಭಾರತೀಯ ವಿಮಾ ಅಧಿನಿಯಮದಲ್ಲಿ ಹೇಳಲಾಗಿದೆ. ವಂಚನೆಯ ಉದ್ದೇಶದಿಂದ, ತಾನು ತಪ್ಪೆಂದು ತಿಳಿದೂ ಹೇಳಿಕೆ ನೀಡಿದ್ದರೆ, ಅಥವಾ ತಿಳಿಯಪಡಿಸಬೇಕಾಗಿದ್ದ ಸಾರಭೂತ ತಥ್ಯಗಳನ್ನು ಬಚ್ಚಿಟ್ಟಿದ್ದರೆ, ಅಂಥ ಪಾಲಿಸಿಗೆ ಅಧಿನಿಯಮದ ಈ ವಿನಾಯಿತಿ ಅನ್ವಯಿಸುವುದಿಲ್ಲ. 2. ಜೀವವಿಮೆ ಒಂದು ಅವಲಂಬಕ (ಕಂಟಿಂಜೆಂಟ್) ಕರಾರು. ಕರಾರಿನಲ್ಲಿ ಸೂಚಿಸಿದ ಮೊಬಲಗು ಅದರಲ್ಲಿ ಹೇಳಲಾದ ಸಂಭವ (ಮರಣ) ಉಂಟಾದಾಗ ಧ್ಯೇಯವಾಗುತ್ತದೆ (ಪೇಯಬಲ್). ಆದರೆ ಆ ಸಂಭವದ ದಿನ ಅನಿಶ್ಚಯವಾದ್ದು. 3. ವಿಮಕರಾರಿನಲ್ಲಿ ಪಾಲಿಸಿದಾರನಿಗೆ ವಿಮಾಯೋಗ್ಯ ಹಿತ ಇರಬೇಕಾದ್ದು ಆವಶ್ಯಕ. ವಿಮಾಯೋಗ್ಯ ಹಿತವನ್ನು (ಆಸಕ್ತಿಯನ್ನು) ರಕ್ಷಿಸುವುದು ವಿಮೆಯ ಉದ್ದೇಶ. ಗಂಡನಿಗೆ ತನ್ನ ಹೆಂಡತಿಯ ಜೀವದಲ್ಲಿ ಹೆಂಡತಿಗೆ ತನ್ನ ಗಂಡನ ಜೀವದಲ್ಲಿ, ತಂದೆ ಅಥವಾ ತಾಯಿಗೆ ತನ್ನ ಮಗುವಿನ ಜೀವದಲ್ಲಿ (ಅದರ ಬದುಕಿನಿಂದ ಹಣಸಂಬಂಧಿ ಲಾಭ ದೊರಕುವುದಾಗಿದ್ದರೆ), ಧನಿಗೆ (ಕ್ರೆಡಿಟರ್) ಋಣಿಯ ಜೀವದಲ್ಲಿ, ಜಾಮೀನುದಾರನಿಗೆ (ಷೂರಿಟಿ) ಮುಖ್ಯ ಋಣಿಯ (ಪ್ರಿನ್ಸಿಪಲ್ ಡೆಟರ್) ಜೀವದಲ್ಲಿ ಜೀವವಿಮೆಯ ದೃಷ್ಟಿಯಿಂದ ವಿಮಾಯೋಗ್ಯ ಹಿತ ಇರುತ್ತದೆ. (ಇವು ಕೆಲವು ನಿದರ್ಶನಗಳು ಮಾತ್ರ) ಜೀವವಿಮೆ ಮಾಡುವಾಗ ವಿಮಾಯೋಗ್ಯ ಹಿತ ಇರಬೇಕು. ಜೀವವಿಮಾ ಪಾಲಿಸಿಯ ಬಗೆಗಳು: ವಿಮೆದಾರನ ಆವಶ್ಯಕತೆಗಳಿಗೂ ಅನುಕೂಲಗಳಿಗೂ ಅನುಗುಣವಾಗಿ ನಾನಾ ಬಗೆಯ ಜೀವವಿಮಾ ಪಾಲಿಸಿಗಳನ್ನು ವಿಮಾ ಸಂಸ್ಥೆಗಳು ನೀಡುತ್ತವೆ. ಕೆಲವು ಮುಖ್ಯ ಬಗೆಗಳು ಇವು;

1 ಅಜೀವ ಪಾಲಿಸಿ : (ಹೋಲ್ ಲೈಫ್) ಇದು ವಿಮೆದಾರ ಮೃತಪಟ್ಟ ಅನಂತರ ಅವನ ಉತ್ತರಾಧಿಕಾರಿಗಳಿಗೆ ಅಥವಾ ನಾಮಿತರಿಗೆ (ನಾಮಿನೀ) ಹಣ ಪಾವತಿಯಾಗುವ ಪಾಲಿಸಿ.

2 ಎಂಡೋಮೆಂಟ್ ಪಾಲಿಸಿ : ವಿಮೆದಾರ ಒಂದು ನಿಶ್ಚಿತ ವಯಸ್ಸನ್ನು ತಲುಪಿದಾಗ ಅವನಿಗೆ, ಅಥವಾ ಅದಕ್ಕಿಂತ ಮುಂಚೆಯೇ ತೀರಿಕೊಂಡಾಗ ಅವನ ಉತ್ತರಾಧಿಕಾರಿಗಳಿಗೆ, ಅಥವಾ ಅವನ ನಾಮಿತರಿಗೆ ವಿಮೆಯ ಮೊಬಲಗು ಪಾವತಿಯಾಗುವ ಪಾಲಿಸಿ.

3 ಜಂಟಿ ಜೀವ ಪಾಲಿಸಿ : ಒಬ್ಬರಿಗಿಂತ ಹೆಚ್ಚು ಮಂದಿಯ ಜೀವಗಳನ್ನು ಒಟ್ಟಿಗೆ ವಿಮೆಗೆ ಒಳಪಡಿಸಲಾದ ಪಾಲಿಸಿ. ಇವರಲ್ಲಿ ಯಾರೊಬ್ಬರು ಸತ್ತರೆ ಉಳಿದವರಿಗೆ ಪಾಲಿಸಿಯ ಹಣ ಪಾವತಿಯಾಗುತ್ತದೆ. ಗಂಡ-ಹೆಂಡತಿ, ಪಾಲುದಾರಿಕೆ ಸಂಸ್ಥೆಯ ಪಾಲುದಾರರು ಈ ಬಗೆಯ ಪಾಲಿಸಿ ಪಡೆಯಬಹುದು. ಪಾಲುದಾರಿಕೆ ಸಂಸ್ಥೆಯ ಪಾಲುದಾರನೊಬ್ಬ ಮರಣ ಹೊಂದಿದಾಗ ಅವನ ಪಾಲಿನ ಮೊಬಲಗನ್ನು ಅವನ ಉತ್ತರಾಧಿಕಾರಿಗಳಿಗೆ ಪಾಲುದಾರಿಕೆ ಸ್ವತ್ತಿನಿಂದ ಕೊಡಬೇಕಾಗುತ್ತದೆ. ಪಾಲುದಾರಿಕೆ ಸಂಸ್ಥೆ ಈ ಭಾರ ಹೊರಲು ಪಾಲಿಸಿಯ ಹಣದಿಂದ ಸಾಧ್ಯವಾಗುತ್ತದೆ.

4 ಸಾಲಿಯಾನಾ ಪಾಲಿಸಿ; ಇದರ ಪ್ರಕಾರ ವಿಮೆಯ ಮೊಬಲಗನ್ನು ವಿಮೆದಾರನಿಗೆ ಒಂದು ನಿಶ್ಚಿತ ವಯಸ್ಸನ್ನು ತಳೆದ ಮೇಲೆ ಮಾಸಿಕ ಅಥವಾ ವಾರ್ಷಿಕ ಕಂತುಗಳಲ್ಲಿ ಪಾವತಿ ಮಾಡಲಾಗುವುದು. ಮುಪ್ಪಿನಲ್ಲಿ ವಿಮೆದಾರನಿಗೆ ವರಮಾನ ದೊರಕುವಂತೆ ಮಾಡುವುದು ಇದರ ಉದ್ದೇಶ. ವಿಮೆದಾರ ಒಂದು ನಿಶ್ಚಿತ ವಯಸ್ಸಿನವರೆಗೆ ಪ್ರೀಮಿಯಂ ಪಾವತಿ ಮಾಡುತ್ತಾನೆ; ಅಥವಾ ಒಂದೇ ಗಂಟಿನಲ್ಲಿ ಅದನ್ನು ಪಾವತಿ ಮಾಡಬಹುದು.

5 ಪರಿಮಿತ ಪಾವತಿ ಪಾಲಿಸಿ : ಪಾಲಿಸಿದಾರ ಒಂದು ನಿಶ್ಚಿತ ವಯಸ್ಸನ್ನು ತಳೆಯುವವರೆಗೆ ಮಾತ್ರ ಪ್ರಿಮಿಯಮನ್ನು ಪಾವತಿ ಮಾಡಬೇಕಾದ ವಿಮೆಯ ಪಾಲಿಸಿ.

6 ವಿವಿಧೋದ್ದೇಶ ಪಾಲಿಸಿಗಳು: ಮಕ್ಕಳ ವಿದ್ಯಾಭ್ಯಾಸ, ವಿವಾಹ ಮುಂತಾದ ಉದ್ದೇಶಗಳಿಂದ ಪಾಲಿಸಿಗಳನ್ನು ಪಡೆಯಬಹುದು. ಮಕ್ಕಳು ಒಂದು ನಿಶ್ಚಿತ ವಯಸ್ಸನ್ನು ಮುಟ್ಟಿದಾಗ ಪಾಲಿಸಿಯ ಮೊಬಲಗನ್ನು ಪಾವತಿ ಮಾಡಲು ವಿಮಾಕರ್ತ ಒಪ್ಪುತ್ತಾನೆ. ವಿಮಾ ಕರಾರು ಮಾಡಿಕೊಳ್ಳುವ ವ್ಯಕ್ತಿಯು ಪ್ರೀಮಿಯಂ ಮೊಬಲಗನ್ನು ಪಾವತಿ ಮಾಡಬೇಕು. ಪಾಲಿಸಿಯ ಅವಧಿ ಪೂರ್ಣವಾಗುವ ಮುನ್ನ ಅವನು ತೀರಿಕೊಂಡರೆ ಮುಂದಕ್ಕೆ ಪ್ರೀಮಿಯಂ ಪಾವತಿ ಮಾಡಬೇಕಾದ್ದಿಲ್ಲ. ಹೆತ್ತವರು ಅಕಾಲಮರಣಕ್ಕೆ ತುತ್ತಾದರೆ ಅದರಿಂದ ಮಕ್ಕಳ ವಿದ್ಯಾಭ್ಯಾಸ, ವಿವಾಹಾದಿಗಳಿಗೆ ತೊಂದರೆ ಬಾರದಂತೆ ಈ ಪಾಲಿಸಿಗಳು ರಕ್ಷಣೆ ಒದಗಿಸುತ್ತವೆ. ವಿಶಿಷ್ಟ ಪರಿಸ್ಥಿತಿಗೆ ತಕ್ಕಂತೆ ಇನ್ನೂ ನಾನಾ ಬಗೆಯ ಪಾಲಿಸಿಗಳನ್ನು ವಿಮಾಸಂಸ್ಥೆ ನೀಡುತ್ತದೆ. ಉದಾ : ಸಾಮೂಹಿಕ ಪಾಲಿಸಿ (ಒಂದು ಸಂಸ್ಥೆಯ ಎಲ್ಲ ನೌಕರರಿಗೆ ಒಟ್ಟಾಗಿ ವಿಮೆ ಸೌಲಭ್ಯ ಕಲ್ಪಿಸುವುದು), ಜನತಾ ಪಾಲಿಸಿ (ಸಾಮಾನ್ಯ ಜನರಿಗಾಗಿ). ವಿಮೆಯ ವಿಧಾನ; ಜೀವವಿಮಾ ಕರಾರು ಮೊದಲನೆಯ ಪ್ರೀಮಿಯಂ ಪಾವತಿಯಾದ ತಾರೀಖಿನಿಂದ ಜಾರಿಗೆ ಬರುತ್ತದೆ. ವಿಮೆ ಇಳಿಸುವ ಉದ್ದೇಶವುಳ್ಳವನು ವಿಮಾ ಸಂಸ್ಥೆಗೆ ಪ್ರಸ್ತಾವ (ಪ್ರೊಪೋಸಲ್) ಸಲ್ಲಿಸಿ, ಸಂಸ್ಥೆಯಿಂದ ಅಂಗೀಕೃತವಾದ ವೈದ್ಯನಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರಸ್ತಾವ, ವೈದ್ಯ ಪರೀಕ್ಷಾ ವರದಿ (ಭಾರತದಲ್ಲಿ ಕಡಿಮೆ ಮೊಬಲಗಿನ ಪಾಲಿಸಿಗಳಿಗೆ ವೈದ್ಯ ಪರೀಕ್ಷೆ ಅಗತ್ಯವಿಲ್ಲ). ಸಂಸ್ಥೆಯ ಪ್ರತಿನಿಧಿಯಾಗಿ ಪೂರ್ವಭಾವಿ ವ್ಯವಸ್ಥೆ ಮಾಡಿಸುವ ಅಭಿಕರ್ತನ (ಏಜೆಂಟ್) ವರದಿ-ಇವು ವಿಮಾಸಂಸ್ಥೆಯನ್ನು ತಲುಪಿ, ಸಂಸ್ಥೆ ಈ ಪ್ರಸ್ತಾವವನ್ನು ಅಂಗೀಕರಿಸಿದ ಕೂಡಲೇ ಆ ಸಂಸ್ಥೆ ಪ್ರಸ್ತಾವ ಸಲ್ಲಿಸದವನಿಗೆ ಆ ಸಂಗತಿಯನ್ನು ಬರಹದಲ್ಲಿ ಕ್ರಮವಾಗಿ ತಿಳಿವಳಿಕೆ (ನೋಟಿಸ್) ನೀಡುತ್ತದೆ. ವಿಮೆಯ ಪ್ರಸ್ತಾವ ತಿರಸ್ಕøತವಾದರೆ, ವಿಮಾ ಯೋಜನೆಯಲ್ಲಿ ಬದಲಾವಣೆಯೇನಾದರೂ ಇದ್ದರೆ ಆ ವಿಷಯವನ್ನು ಪ್ರಸ್ತಾವದಾರನಿಗೆ ತಿಳಿಸಲಾಗುವುದು. ಅಂಗೀಕಾರಪತ್ರ ತಲುಪಿದ ಅನಂತರ, ನಿಗದಿಯಾದ ಅವಧಿಯೊಳಗಾಗಿ, ಪ್ರಸ್ತಾವದಲ್ಲಿ ಸೂಚಿಸಿದಂತೆ ಪ್ರಸ್ತಾವದಾರ ಪ್ರಥಮ ಪ್ರೀಮಿಯಂ ಪಾವತಿ ಮಾಡಬೇಕು. ಪ್ರಥಮ ಪ್ರೀಮಿಯಂ ಪಾವತಿಯಾದ ಮೇಲೆ ವಿಮಾ ಸಂಸ್ಥೆ ಪಾಲಿಸಿಯನ್ನು ಸಿದ್ಧಗೊಳಿಸಿ ವಿಮೆದಾರನಿಗೆ ಕಳುಹಿಸುತ್ತದೆ. ಪಾಲಿಸಿಯನ್ನು ನೀಡಿದ ದಿನಾಂಕ ಯಾವುದೇ ಇರಲಿ, ಪ್ರಥಮ ಪ್ರೀಮಿಯಂ ಪಾವತಿಯಾದ ತಾರೀಖಿನಿಂದಲೇ ಜೀವವಿಮಾ ಕರಾರು ಜಾರಿಗೆ ಬರುತ್ತದೆ. ಅಧ್ಯರ್ಪಣ ಮೌಲ್ಯ : ಪಾಲಿಸಿಯ ಮೇಲೆ ಒಂದು ನಿಶ್ಚಿತ ಅವಧಿಯ ಪ್ರೀಮಿಯಂ ಪಾವತಿ ಮಾಡಿದ್ದ ಪಕ್ಷದಲ್ಲಿ, ಅದನ್ನು ಮುಂದುವರಿಸದೆ ವಿಮಾ ಸಂಸ್ಥೆಗೆ ಅಧ್ಯರ್ಪಿಸಿದರೆ-ಒಪ್ಪಿಸಿದರೆ-ಸಂಸ್ಥೆ ಪಾವತಿಮಾಡುವ ಹಣವೇ ಅಧ್ಯರ್ಪಣ ಮೌಲ್ಯ (ಸರೆಂಡರ್ ವ್ಯಾಲ್ಯೂ). ಇದು ಪಾಲಿಸಿಯ ನಗದು ಮೌಲ್ಯ. ಪಾವತಿ ಮಾಡಿದ ಒಟ್ಟು ಪ್ರೀಮಿಯಂ ಮೊಬಲಗಿಗೆ ಯಾವ ಅನುಪಾತದಲ್ಲಿದೆಯೋ, ಪಾಲಿಸಿಯ ಮೊಬಲಗಿಗೆ ಅಧ್ಯರ್ಪಣ ಮೌಲ್ಯ. ಅದೇ ಅನುಪಾತದಲ್ಲಿದೆಯೋ, ಪಾಲಿಸಿಯ ಮೇಲೆ ಘೋಷಿಸಲಾದ ಬೋನಸ್ ಮೊಬಲಗಿನ ಅಧ್ಯರ್ಪಣ ಮೌಲ್ಯವನ್ನೂ ಇದಕ್ಕೆ ಸೇರಿಸಬೇಕು. ಭಾರತದಲ್ಲಿ 1938ರ ವಿಮಾ ಅಧಿನಿಯಮ ಜಾರಿಗೆ ಬರುವುದಕ್ಕೆ ಮುಂಚೆ, ಪ್ರೀಮಿಯಂ ಬೇಪಾವತಿಯಾದಾಗ ವಿಮಾ ಕರಾರನ್ನು ರದ್ದು ಮಾಡಿ, ಅದುವರೆಗೆ ಪಾವತಿ ಮಾಡಿದ ಪ್ರೀಮಿಯಂ ಮೊಬಲಗನ್ನು ವಿಮಾ ಸಂಸ್ಥೆ ಮುಟ್ಟುಗೋಲು ಮಾಡಿಕೊಳ್ಳಬಹುದಿತ್ತು. ಆದರೆ 1938ರ ಅಧಿನಿಯಮದಲ್ಲಿ ಈ ನಿಯಮವನ್ನು ಬದಲಾಯಿಸಲಾಗಿದೆ. ಕೆಲವು ಷರತ್ತುಗಳು ಪಾಲಿಸಲ್ಪಟ್ಟಿದ್ದರೆ ಪಾಲಿಸಿ ವ್ಯಪಗಮಿಸುವುದಿಲ್ಲ. ಕನಿಷ್ಠ ಮೂರು ವರ್ಷ ಅನುಕ್ರಮವಾಗಿ ಪ್ರೀಮಿಯಂ ಪಾವತಿಯಾಗಿರಬೇಕು. ನಿಶ್ಚಯವಾಗಿ ಸಂಭವಿಸಿಯೇ ತೀರುವಂಥ ಘಟನೆ ಸಂಭವಿಸಿದಾಗ ಪಾವತಿಯಾಗುವ ಪಾಲಿಸಿಯಾಗಿರಬೆಕು. 100 ರೂ. ಗಳಿಗಿಂತ ಅಧಿಕ ಮೌಲ್ಯದ ಪಾಲಿಸಿಯಾಗಿರಬೇಕು. ಭಾರತದ ಜೀವವಿಮಾ ಕಾರ್ಪೋರೇಷನ್ ಈ ವಿಚಾರದಲ್ಲಿ ಇನ್ನೂ ಉದಾರವಾದ ನಿಬಂಧನೆಗಳನ್ನು ಮಾಡಿದೆ. ಕನಿಷ್ಠ ಎರಡು ವರ್ಷ ಪ್ರೀಮಿಯಂ ಪಾವತಿ ಮಾಡಿದ್ದರೆ ಅಥವಾ ಪಾಲಿಸಿಯಲ್ಲಿ ನಿಗದಿಯಾದ ಒಟ್ಟು ಪ್ರೀಮಿಯಂಗಳಲ್ಲಿ ಕನಿಷ್ಠ 1/10ರಷ್ಟು ಸಂಖ್ಯೆಯ ಪ್ರೀಮಿಯಂ ಪಾವತಿ ಮಾಡಿದ್ದರೆ, ಇದು 1 ವರ್ಷದ ಪ್ರೀಮಿಯಂಗಿಂತ ಅಧಿಕವಾಗಿದ್ದರೆ, ಅಂಥ ಪಾಲಿಸಿ ಅಧ್ಯರ್ಪಣ ಮೌಲ್ಯ ಗಳಿಸಿರುತ್ತದೆ. ಹಕ್ಕು ವರ್ಗಾವಣೆ ಮತ್ತು ನಾಮನ : ಜೀವವಿಮಾ ಪಾಲಿಸಿಗಳು ಮಾರಾಟಸಾಧ್ಯ ಪದಾರ್ಥಗಳೆಂದೂ ವಿಮೆ ಇಳಿಸಲಾದ ಜೀವದಲ್ಲಿ ಹಿತಾಸಕ್ತಿ ಇಲ್ಲದವರಿಗೆ ಪ್ರತಿಫಲಸಹಿತವಾಗಿಯೋ ರಹಿತವಾಗಿಯೋ ನ್ಯಾಯಸಮ್ಮತವಾಗಿ ಅವುಗಳ ಹಕ್ಕನ್ನು ವರ್ಗಾಹಿಸಬಹುದೆಂದೂ ಹಳೆಯ ಇಂಗ್ಲಿಷ್ ಮೊಕದ್ದಮೆಯೊಂದರಲ್ಲಿ ತೀರ್ಪಾಗಿದೆ. ಪಾಲಿಸಿಯ ಹಕ್ಕುವರ್ಗಾವಣೆಯ ತತ್ತ್ವವನ್ನು ಈಗ ಸಾಮಾನ್ಯವಾಗಿ ಒಪ್ಪಲಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಪಾಲಿಸಿಯ ಮೇಲೆ ಅಥವಾ ಬೇರೊಂದು ಸಂಲೇಖದ (ಇನ್‍ಸ್ಟ್ರುಮೆಂಟ್) ಮೇಲೆ ಪಾಲಿಸಿದಾರ ಬೇಜಾ (ಎಂಡಾರ್ಸ್‍ಮೆಂಟ್) ಹಾಕಿ ಸಹಿ ಮಾಡಿ, ಕನಿಷ್ಠ ಒಬ್ಬ ಸಾಕ್ಷಿಯ ರುಜು ಹಾಕಿಸಿ, ವರ್ಗಾವಣೆ ಮಾಡಬಹುದು. ವಿಮಾಕರ್ತನಿಗೆ ಈ ಬಗ್ಗೆ ತಿಳಿವಳಿಕೆ ಮತ್ತು ಬೇಚಾದ ಪ್ರತಿ ನೀಡಿದರೆ ಅದಕ್ಕೆ ಅವನು ಬದ್ಧನಾಗಿರುತ್ತಾನೆ. ಈ ತಿಳಿವಳಿಕೆ ಬಂದ ಅನಂತರ ವಿಮೆದಾರ ವರ್ಗಾವಣೆಯನ್ನು ದಾಖಲೆ ಮಾಡಿಕೊಳ್ಳತ್ತಾನೆ. ಪಾಲಿಸಿಯ ಅಡಿಯಲ್ಲಿಯ ಲಾಭದ ಹಕ್ಕು ವರ್ಗಸ್ವೀಕರ್ತನಿಗೆ ಮಾತ್ರ ಇರುವುದೆಂಬುದನ್ನು ಅವನು ಒಪ್ಪತಕ್ಕದ್ದು.

ತನ್ನ ಸ್ವಂತ ಜೀವದ ಮೇಲೆ ಇಳಿಸಲಾದ ಜೀವವಿಮೆಯ ಪಾಲಿಸಿಯಧಾರಕ (ಹೋಲ್ಡರ್), ಒಂದು ವೇಳೆ ತಾನು ಮರಣಹೊಂದಿದರೆ ಪಾಲಿಸಿಯ ಮೊಬಲಗು ಯಾರಿಗೆ ಪಾವತಿಯಾಗತಕ್ಕದ್ದೆಂಬುದನ್ನು ಸೂಚಿಸಬಹುದು. ಈ ಸೂಚನೆಯನ್ನು ಆತ ಪಾಲಿಸಿಯನ್ನು ಪಡೆಯುವಾಗ ನೀಡಬೇಕೆಂಬುದೇನೂ ಇಲ್ಲ. ಪಾಲಿಸಿಯ ಅವಧಿ ಪೂರೈಸುವ ಮುನ್ನ ಯಾವಾಗಲಾದರೂ ಅವನು ಇದನ್ನು ಸೂಚಿಸಬಹುದು. ಇದು ನಾಮನ (ನಾಮಿನೇಷನ್) ಎನಿಸಿಕೊಳ್ಳುತ್ತದೆ. ಯಾರ ಹೆಸರಿಗೆ ನಾಮನ ಮಾಡಲಾಗಿದೆಯೋ ಅವನು ನಾಮಿತ (ನಾಮಿನೀ). ನಾಮನದ ಬಗ್ಗೆ ಭಾರತದ ವಿಮಾ ಅಧಿನಿಯಮದಲ್ಲಿ ಸೂಕ್ತ ನಿಬಂಧನೆಗಳಿವೆ. ಹಕ್ಕು ವರ್ಗಾವಣೆಗೂ ನಾಮನಕ್ಕೂ ಅನೇಕ ವ್ಯತ್ಯಾಸಗಳುಂಟು. ಪಾಲಿಸಿಯ ಹಕ್ಕು ವರ್ಗಾವಣೆ ಮಾಡಿದಾಗ ಪಾಲಿಸಿದಾರನ ಎಲ್ಲ ಹಕ್ಕುಗಳಿಗೂ ವರ್ಗಸ್ವೀಕರ್ತನಿಗೆ ವರ್ಗವಾಗುತ್ತವೆ. ಪಾಲಿಸಿಯ ಎಲ್ಲ ಲಾಭಗಳಿಗೂ ಸ್ವೀಕರ್ತ ಹಕ್ಕು ಪಡೆಯುತ್ತಾನಲ್ಲದೆ ತನ್ನ ಹೆಸರಿನಲ್ಲಿ ದಾವೆ ಹೂಡಬಹುದು. ಆದರೆ ನಾಮನದಲ್ಲಿ ಪಾಲಿಸಿದಾರನ ಹಕ್ಕುಗಳು ವರ್ಗವಾಗುವುದಿಲ್ಲ. ಪಾಲಿಸಿದಾರ ನಾಮನವನ್ನು ರದ್ದು ಮಾಡಬಹುದು ಅಥವಾ ಬದಲಾಯಿಸಬಹುದು. ಆದರೆ ಹಕ್ಕುವರ್ಗಾವಣೆಯನ್ನು ಬದಲಾಯಿಸುವಂತಿಲ್ಲ. ಹಕ್ಕುವರ್ಗಸ್ವೀಕರ್ತ ಅದನ್ನು ಪಾಲಿಸಿದಾರನಿಗೆ ಮತ್ತೆ ವರ್ಗಾಯಿಸಬಹುದು. ವಿಮಾಕರ್ತ ತನ್ನ ಹೊಣೆಯನ್ನು ಚುಕ್ತಾ ಮಾಡಲು ಅನುವು ಮಾಡಿಕೊಡಲು ನಾಮನ ವಿಧಾನವನ್ನು ಅನುಸರಿಸಲಾಗುತ್ತದೆ, ವಾರಸು ಪ್ರಮಾಣಪತ್ರವಿಲ್ಲದೆ ವಿಮಾಕರ್ತ ನಾಮಿತನಿಗೆ ಪಾಲಿಸಿಯ ಹಣವನ್ನು ಪಾವತಿ ಮಾಡಬಹುದು.

ಆತ್ಮಹತ್ಯೆ : ವಿಮೆದಾರ ಆತ್ಮಹತ್ಯೆ ಮಾಡಕೊಂಡರೆ ಪಾಲಿಸಿಯ ಹಣವನ್ನು ಪಾವತಿ ಮಾಡುವುದಿಲ್ಲವೆಂದು ಪಾಲಿಸಿಯಲ್ಲಿ ಹೇಳಬಹುದು. ಪಾಲಿಸಿಯಲ್ಲಿ ನಿಬಂಧನೆ ಇಲ್ಲದಿದ್ದರೂ, ವಿಮೆದಾರ ಆತ್ಮಹತ್ಯೆ ಮಾಡಿಕೊಂಡರೆ ಪಾಲಿಸಿ ನಷ್ಟಿಸುವುದೆಂದು ಇಂಗ್ಲಿಷ್ ಮೊಕದ್ದಮೆಗಳಲ್ಲಿ ತೀರ್ಪುಗಳಾಗಿವೆ. ವಿಕಲಮತಿಯಲ್ಲದವನ ಆತ್ಮಹತ್ಯೆ ಸ್ವಂತ ಕೊಲೆ ಆಗುವುದರಿಂದ ಹಣ ಕೊಡತಕ್ಕದ್ದಲ್ಲವೆಂದು ಹೇಳಲಾಗಿದೆ. ಆದರೆ ಭಾರತದಲ್ಲಿ ಆತ್ಮಹತ್ಯೆ ಅಪರಾಧವಲ್ಲ. ಆತ್ಮಹತ್ಯೆಯ ಪ್ರಯತ್ನ ಮಾತ್ರ ಅಪರಾಧವಾಗುತ್ತದೆ. ಆದ್ದರಿಂದ, ಪಾಲಿಸಿಯಲ್ಲಿ ಆ ಬಗ್ಗೆ ನಿಬಂಧನೆ ಇದ್ದ ವಿನಾ, ಆತ್ಮಹತ್ಯೆಯ ಕಾರಣದಿಂದ ಪಾಲಿಸಿಯನ್ನು ಶೂನ್ಯಗೊಳಿಸಲಾಗದೆಂದು (ಅವಾಯ್ಡ್) ಮೊಕದ್ದಮೆಯೊಂದರಲ್ಲಿ ತೀರ್ಪು ನೀಡಲಾಗಿದೆ. ಪಾಲಿಸಿ ಕನಿಷ್ಠ ಒಂದು ವರ್ಷಜಾರಿಯಲ್ಲಿದ್ದರೆ, ವಿಮೆದಾರನ ಆತ್ಮಹತ್ಯೆಯಿಂದಾಗಿ ಅದು ಶೂನ್ಯವಾಗುವುದಿಲ್ಲ.

ಇತಿಹಾಸ : ವಿಮೆಯ ತತ್ತ್ವ ಬಲು ಹಳೆಯದು; ಬಹುಶಃ ನಾಗರಿಕತೆಯಷ್ಟೇ ಹಳೆಯದು. ಭವಿಷ್ಯದಲ್ಲಿ ಆಗಬಹುದಾದ ನಷ್ಟವನ್ನು ನಿವಾರಿಸಿಕೊಳ್ಳಲು ಪ್ರಕೃತದಲ್ಲಿ ಸ್ವಲ್ಪ ತ್ಯಾಗಮಾಡುವ ವಿಧಾನ ಬಹಳ ಹಿಂದಿನ ಕಾಲದಿಂದಲೂ ಆಚರಣೆಯಲ್ಲಿದೆ. ಕ್ರಿ.ಶ. 2ನೆಯ ಶತಮಾನದಲ್ಲಿ ರೋಮನ್ ಪುರೋಹಿತ ಸಂಘಗಳು ತಮ್ಮ ಸದಸ್ಯರ ಅಂತ್ಯಕ್ರಿಯೆಗಳಿಗಾಗಿ ನಿಧಿ ರಚಿಸುತ್ತಿದ್ದುವು. ವಿವಿಧ ಸಮುದಾಯಗಳಲ್ಲಿ ಕುಶಲಕರ್ಮಿಗಳ ಸಂಘಗಳು ಅಥವಾ ವೃತ್ತಿ ಸಂಘಗಳಿಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಬಗೆಯ ವಿಮಾವ್ಯವಸ್ಥೆ ಅಂದಿನಿಂದಲೂ ನಡೆದುಕೊಂಡು ಬಂದಿದೆ. ಹಣಸೌಲಭ್ಯ ತರುವ ಅತ್ಯಂತ ಹಳೆಯ ಸಂಘಟಿತ ವಿಮಾವ್ಯವಸ್ಥೆಯೆಂದರೆ ಬಹುಶಃ ಸಾಗರಿಕ ವಿಮೆ. ಜೀವವಿಮೆ ವಿಕಾಸಗೊಂಡದ್ದು ಈಚೆಗೆ. ಇದಕ್ಕೆ ಮೂಲಗಳು ಎರಡು. ಸಾಗರಿಕ ವಿಮೆಯಲ್ಲೇ ಜೀವವಿಮೆಯ ಉದಯವೂ ಆಯಿತು. ಸರಕು ಹೊತ್ತ ಹಡಗಿನ ಭದ್ರತೆಯಷ್ಟೇ ಅದರ ಕಪ್ತಾನನ ಜೀವದ ಭದ್ರತೆಯೂ ಮುಖ್ಯವೆಂಬುದು ಮನವರಿಕೆಯಾಯಿತು. ಆದ್ದರಿಂದ ಹಡಗಿನ ನಷ್ಟಸಂಭವದ ವಿರುದ್ಧ ಮಾತ್ರವಲ್ಲದೆ ಅದರ ಕಪ್ತಾನನ ಜೀವನಷ್ಟಕ್ಕೂ ವಿಮೆ ಇಳಿಸುವ ಪರಿಪಾಟಿ ಬೆಳೆಯಿತು. ಹಳೆಯ ವೃತ್ತಿಸಂಘಗಳಲ್ಲೂ ಜೀವವಿಮೆಯ ಉಗಮವನ್ನು ಕಾಣಬಹುದು. ಸಮಾನವೃತ್ತಿಯ ಅಥವಾ ಸಮಾನರಹಿತಗಳ ಜನರು ರಚಿಸಿಕೊಂಡ ಸ್ನೇಹ ಸಂಘಗಳು ಸದಸ್ಯರ ರೋಗರುಜಿನಾದಿಗಳಲ್ಲೂ ಮುಪ್ಪು ಮರಣಸಮಯಗಳಲ್ಲೂ ನೆರವು ನೀಡುವ ಕ್ರಮ ಕೈಗೊಂಡುವು. ಸದಸ್ಯನೊಬ್ಬ ಮರಣಹೊಂದಿದಾಗ ಅವನ ಕುಟುಂಬದ ರಕ್ಷಣೆಗಾಗಿ ಸೂಕ್ತ ಚಂದಾ ಎತ್ತುವ ಪದ್ಧತಿ ಬೆಳೆಯಿತು. ಧರ್ಮಕಾರ್ಯವಾಗಿ ಆರಂಭವಾದ ಈ ಕ್ರಮ ಕ್ರಮೇಣ ಒಂದು ಹಕ್ಕಾಗಿ ಬೆಳೆಯಿತು. ಪ್ರತಿಸಾರಿ ಸಾವು ಸಂಭವಿಸಿದಾಗ ಒಬ್ಬೊಬ್ಬ ಜೀವಂತ ಸದಸ್ಯನೂ ಎಷ್ಟೆಷ್ಟು ಹಣ ಕೊಡಬೇಕೆಂಬುದನ್ನು ವಿಧಿಸಲಾಗುತ್ತಿತ್ತು. ಶುಲ್ಕ ವಿಧಿಸುವ ರೀತಿಯ ಮೊದಮೊದಲ ಜೀವವಿಮೆ ಹುಟ್ಟಿಕೊಂಡಿದ್ದು ಹೀಗೆ. ವಾಣಿಜ್ಯಾತ್ಮಕವಾದ ವಿಮಾ ವಹಿವಾಟು ಬೆಳೆಸಲು ಸಂಘ ಸ್ಥಾಪನೆಯಾದಾಗ ಇದಕ್ಕೆ ಪ್ರವೇಶ ಬಯಸುವ ಪ್ರತಿಯೊಬ್ಬನೂ ಪೂರ್ವಭಾವಿಯಾಗಿ ಕೊಡಬೇಕಾದ ವಂತಿಗೆಯನ್ನು ನಿಷ್ಕರ್ಷಿಸಲಾಗುತ್ತಿತ್ತು. ವರ್ಷದ ಕೊನೆಯಲ್ಲಿ ಅವನು ಅದನ್ನು ಕೊಡದೆ ಹೋಗಬಹುದೆಂಬ ಕಾರಣದಿಂದ ಮುಂಗಡ ವಸೂಲಿ ಆರಂಭವಾಯಿತು. ವರ್ಷದ ಕೊನೆಯಲ್ಲಿ ಕೊಡಬೇಕಾಗಿ ಬರಬಹುದಾದ ಮೊಬಲಗಿನ ಗಾತ್ರಕ್ಕೆ ಅನುಗುಣವಾಗಿ ಆರಂಭದಲ್ಲೇ ಪ್ರೀಮಿಯಂ ನಿಷ್ಕರ್ಷೆ ಆಗುತ್ತಿತ್ತು.

17-18ನೆಯ ಶತಮಾನಗಳಲ್ಲಿ ವಿಲಿಯಂ ಪೆಟಿ, ಎಡ್ಮಡ್ ಹ್ಯಾಲಿ, ಏಬ್ರಹಾಂ ಡಿ ಮೋಯಿಲ್ರೆ ಮುಂತಾದ ವಿಜ್ಞಾನಿಗಳು ಜನಸಂಖ್ಯೆಯ ಮರಣದರಗಳನ್ನು ಕುರಿತ ವಿಶೇಷ ಅಧ್ಯಯನ ಮಾಡಿದರು. ಯಾವನೊಬ್ಬನ ಮರಣದಿಂದ ಭವಿಷ್ಯ ನುಡಿಯುವುದು ಅಸಾಧ್ಯವಾದರೂ ಯಾವುದೇ ದೊಡ್ಡ ಗುಂಪಿನ ಮರಣದರದ ಬಗ್ಗೆ ಭವಿಷ್ಯ ನುಡಿಯಬಹುದೆಂಬುದನ್ನೂ ಆ ದರ ಸಾಮಾನ್ಯವಾಗಿ ಸ್ಥಿರವಾಗಿರುವುದೆಂಬುದನ್ನೂ ವಯಸ್ಸಾದಂತೆಲ್ಲ ದೈಹಿಕ ಪ್ರತಿರೋಧಶಕ್ತಿ ಕುಗ್ಗುತ್ತದೆ ಎಂಬುದನ್ನೂ ಅವರು ಕಂಡುಕೊಂಡರು. ಆದ್ದರಿಂದ ಆಗಿನ ಪ್ರೀಮಿಯಂ ನಿಷ್ಕರ್ಷೆಯ ವಿಧಾನ ಅಸಮರ್ಪಕವೆಂಬುದು ವ್ಯಕ್ತವಾಯಿತು. ವಯಸ್ಸಿನೊಂದಿಗೆ ಮರಣ ಸಂಭವವೂ ಹೆಚ್ಚುವುದರಿಂದ ಎಲ್ಲ ವಯಸ್ಸಿನವರಿಗೂ ಒಂದೇ ದರದಲ್ಲಿ ಪ್ರೀಮಿಯಂ ವಿಧಿಸುವುದು ನ್ಯಾಯವಲ್ಲವೆಂಬುದು ಮನವರಿಕೆಯಾಯಿತು. 1706ರಲ್ಲಿ ಸನ್ನದ ಪಡೆದು ಅಮಿಕಬಲ್ ಸೊಸೈಟಿ ಎಂಬ ಜೀವವಿಮಾ ಸಂಸ್ಥೆ 45ಕ್ಕೂ ಹೆಚ್ಚಿನ ವಯಸ್ಸಿನವರನ್ನು ವಿಮೆಗೆ ಸೇರಿಸಿಕೊಳ್ಳಲು ನಿರಾಕರಿಸಿತು. ಈ ಸಂಸ್ಥೆಯೇ ಜೀವವಿಮಾ ಪದ್ಧತಿಗೆ ನಾಂದಿಯನ್ನು ಹಾಡಿತು.

18ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಓಲ್ಡ್ ಎಕ್ವಿಟಬಲ್ ಕಂಪನಿ ಪಾಲಿಸಿದಾರರಿಂದ ಅವರ ಪರಸ್ಪರ ಲಾಭಕ್ಕಾಗಿ ಸ್ಥಾಪಿತವಾಯಿತು. ಇಡೀ ಜೀವಮಾನ ಪೂರ್ತಿ ವಯೋಮಟ್ಟದ ಪ್ರೀಮಿಯಂ ಪಾವತಿಮಾಡುವ ಪ್ರಥಮ ಯೋಜನೆ ಜಾರಿಗೆ ಬಂದದ್ದು ಆ ಸಂಸ್ಥೆಯಿಂದ, ಮೂವತ್ತೈದು ವರ್ಷ ವಯಸ್ಸಿನ ಒಬ್ಬಾತ ಇಡೀ ಜೀವಮಾನ ಪೂರ್ತಿ ಒಂದೇ ಮೊಬಲಗನ್ನು ಪ್ರೀಮಿಯಂ ಆಗಿ ಪಾವತಿ ಮಾಡಿದಾಗ ಕೊನೆಕೊನೆಯ ವರ್ಷಗಳಲ್ಲಿ ಮರಣದರ ಅಧಿಕವಾಗುವುದರಿಂದ ಆರಂಭದ ವರ್ಷಗಳಲ್ಲಿ ತತ್‍ಕ್ಷಣದ ವೆಚ್ಚ ತೂಗಿಸಲು ಅಗತ್ಯವಾದ್ದಕ್ಕಿಂತ ಹೆಚ್ಚು ಹಣ ಕೊಡುತ್ತಾನೆಂಬುದು ಸ್ವಯಂವೇದ್ಯ. ಈ ಹೆಚ್ಚುವರಿಯನ್ನು ಬಡ್ಡಿಯೊಂದಿಗೆ, ಮುಂದಿನ ಕಾಲಕ್ಕೆ-ಮರಣ ಸಂಭವಿಸಿದಾಗ ಪಾವತಿ ಮಾಡಲು-ತಳ್ಳಿಕೊಂಡು ಹೋಗಬೇಕು. ವಯೋಮಟ್ಟದ ಪ್ರೀಮಿಯಂ ಎಂಬುದು ಜೀವವಿಮೆಯಲ್ಲಿ ಒಂದು ಮುಖ್ಯ ಪರಿಕಲ್ಪನೆ, ವಾಸ್ತವವಾಗಿ ಸಂಪಾದನೆಯೆಂದು ಪರಿಭಾವಿಸಲಾಗದ-ಕೂಡಿಬರುವ ಹೊಣೆಗಳೆನಿಸಿಕೊಳ್ಳುವ -ನಿಧಿಗಳು ಕಂಪನಿಗಳಲ್ಲಿ ಸಂಗ್ರಹವಾಗಲು ಇದು ಕಾರಣ.

ಆಜೀವ ಸ್ಥಿರ ಪ್ರೀಮಿಯಮನ್ನು ಲೆಕ್ಕಾಚಾರಮಾಡಲು ಎರಡು ಅಂಶಗಳನ್ನು ಬಳಸಿಕೊಳ್ಳುವುದು ಅವಶ್ಯ : 1. ಮರಣದರ ಮತ್ತು 2. ಬಡ್ಡಿದರ. ದೀರ್ಘಕಾಲದಲ್ಲಿ ಇವೆರಡೂ ಬಹಳ ಪ್ರಭಾವ ಬೀರುತ್ತವೆ. ಆಯಾ ಸಂಸ್ಥೆಗಳಿಗೆ ಸಂಬಂಧಿಸಿದ ಇನ್ನೂ ಒಂದು ಅಂಶವುಂಟು. ಅದು ಅವುಗಳ ವ್ಯವಸ್ಥಾಪನ ವೆಚ್ಚ. ಮೊದಮೊದಲು ಲಂಡನ್ ನಗರದ ಮರಣದರಗಳನ್ನು ಆಧರಿಸಿ ಪ್ರೀಮಿಯಂ ಲೆಕ್ಕಾಚಾರ ಮಾಡಲಾಗುತ್ತಿತ್ತು. ಇವು ಬಹು ಹೆಚ್ಚಾಗಿದ್ದುವು. ಆಮೇಲೆ ಇವುಗಳಲ್ಲಿ ಸುಧಾರಣೆಗಳಾದುವು. ನಾರ್ತಾಂಪ್ಟನ್ ಕೋಷ್ಟಕ ಎಂಬ ಕೋಷ್ಟಕ ಬಳಕೆಗೆ ಬಂತು. ಒಳ್ಳೆಯ ಸ್ಥಿತಿಯಲ್ಲಿರುವ ಒಳ್ಳೆಯ ಆರೋಗ್ಯವಂತ ಜನಕ್ಕೆ ಈ ದರಗಳೂ ಅಧಿಕವಾಗಿದ್ದುವು. ಕ್ರಮೇಣ ಇವುಗಳಲ್ಲಿ ಇನ್ನೂ ಸುಧಾರಣೆಗಳಾದುವು. ವೈಜ್ಞಾನಿಕ ಅಧ್ಯಯನ ಸಂಶೋಧನೆಗಳ ಫಲವಾಗಿ ಬಹಳಮಟ್ಟಿಗೆ ಸಮರ್ಪಕವೆನಿಸಿದ ಕೋಷ್ಟಕಗಳು ಬಂದುವು. ಯೂರೋಪಿನ ಇತರ ರಾಷ್ಟ್ರಗಳೂ ಅಮೆರಿಕವೂ ಬ್ರಿಟನಿನ ಅನುಭವದ ಲಾಭ ಪಡೆದುವು. ಆದರೂ ಅಧ್ಯರ್ಪಣ ಮೌಲ್ಯ, ಪಾಲಿಸಿದಾರರಿಗೆ ಪಾಲಿಸಿಯ ಆಧಾರದ ಮೇಲೆ ಸಾಲ ನೀಡಿಕೆ ಮುಂತಾದವು ಬಂದದ್ದು ಅನಂತರ.

ಜೀವವಿಮೆಯ ಮೇಲೆ ಸರ್ಕಾರದ ಹತೋಟಿ ಏರ್ಪಡಿಸುವ ವಿಚಾರ ವಿಶೇಷವಾಗಿ ಚರ್ಚೆಗೆ ಬಂದದ್ದು 19ನೆಯ ಶತಮಾನದ ಉತ್ತರಾರ್ಧದಲ್ಲಿ. ಇದೊಂದು ಅರ್ಧ ಸರ್ಕಾರಿ ನ್ಯಾಸವೆಂಬ ಭಾವನೆ ಬೆಳೆಯಿತು. ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ ವಿಮಾ ಕಮಿಷನರುಗಳ ಮಂಡಳಿ ಸ್ಥಾಪಿತವಾಯಿತು. ಅಮೆರಿಕದ ಇತರ ರಾಜ್ಯಗಳೂ ಮ್ಯಾಸಚೂಸೆಟ್ಸ್‍ನ ಕ್ರಮವನ್ನು ಅನುಸರಿಸಿದವು. ಹತ್ತೊಂಬತ್ತನೆಯ ಶತಮಾನದ ಕೊನೆಯ ಪಾದದಲ್ಲಿ ಅಮೆರಿಕದಲ್ಲಿ ಇನ್ನೊಂದು ಕೆಟ್ಟ ಪ್ರವೃತ್ತಿ ಬೆಳೆಯಿತು. ಅರೆ-ಟಾಂಟೀನ್ ಪಾಲಿಸಿಗಳನ್ನು ನೀಡಲು ಕಂಪನಿಗಳು ಉಪಕ್ರಮಿಸಿದುವು. ಒಂದು ಗೊತ್ತಾದ ಅವಧಿಯ ಅನಂತರವೂ ಬದುಕುವ ಪಾಲಿಸಿದಾರರಿಗೆ ಹೆಚ್ಚು ಲಾಭ ನೀಡುವುದು ಟಾಂಟೀನ್ ಯೋಜನೆಯ ತಿರುಳು. ಲೊರೆನ್ಜೊ ಟಾಂಟಿ ಎಂಬಾತ ಈ ಏರ್ಪಾಡನ್ನು ಜಾರಿಗೆ ತಂದದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ನಿಗದಿಯಾದ ಅವಧಿಯಲ್ಲಿ ಪಾಲಿಸಿದಾರರಿಗೆ ಯಾವ ಲಾಭವೂ ದೊರಕುವುದಿಲ್ಲ. ಈ ಅವಧಿಯಲ್ಲಿ ಪಾಲಿಸಿದಾರ ಸತ್ತರೆ ನಿಶ್ಚಿತವಾದ ಮೊಬಲಗು ಪಾವತಿ ಮಾಡಲಾಗುವುದು ಅಷ್ಟೆ. ಅವಧಿಯನ್ನೂ ಮೀರಿ ಬದುಕಿದವರಿಗೆ ಲಾಭವನ್ನೆಲ್ಲ ಸೇರಿಸಿ ಹೆಚ್ಚು ಹಣವನ್ನು ಹಂಚುವ ಈ ಪಾಲಿಸಿಗಳು ಸಟ್ಟಾ ಸ್ವರೂಪದವಾಗಿದ್ದುವು. ಉಳಿಯುವ ಕೆಲವು ಪಾಲಿಸಿದಾರರ ಲಾಭಕ್ಕಾಗಿ ಇತರರನ್ನು ನಷ್ಟಕ್ಕೆ ಒಳಪಡಿಸುವ ಈ ಪದ್ಧತಿ ಸ್ವಲ್ಪಕಾಲ ಬಹಳ ಆಕರ್ಷಕವಾಗಿತ್ತು. ಇದರೊಂದಿಗೆ ಹಳೆಯ ಮಾದರಿಯ ವಯಸ್ಸು ಏನೇ ಇರಲಿ ಒಂದೇ ದರದ ಪ್ರೀಮಿಯಂ ವಿಧಿಸುವ ಪದ್ಧತಿಯೂ ಮತ್ತೆ ಬಂತು. ವಯೋಮಟ್ಟದ ಪ್ರೀಮಿಯಂ ಪದ್ಧತಿ ಹಳೆಯದೆಂದೂ ತಮ್ಮದೇ ನವೀನವೆಂದೂ ಈ ಸಂಸ್ಥೆಗಳು ವಾದಿಸುತ್ತಿದ್ದುವು. ಆದರೆ ಕಾಲಕ್ರಮದಲ್ಲಿ ಮರಣದರಗಳು ಅತಿಯಾಗಿ ಅವಕ್ಕೆ ಬಿಸಿ ತಟ್ಟಲಾರಂಭಿಸಿತು. ದರಗಳನ್ನು ಏರಿಸುವುದು ಅವಶ್ಯವಾಯಿತು. ಅಧಿಕ ದರಗಳಿಂದಾಗಿ ಅನೇಕರು ವಿಮೆಯನ್ನೇ ತ್ಯಜಿಸಲಾರಂಭಿಸಿದರು. ಮತ್ತೆ ವಯೋಮಟ್ಟದ ದರಗಳು ಹೆಚ್ಚು ಪ್ರಚಲಿತವಾದುವು. ಪಾಲಿಸಿದಾರರ ಪರಸ್ಪರ ಲಾಭದ ತತ್ತ್ವದ ಆಧಾರದ ಮೇಲೆ ವಿಮಾಸಂಸ್ಥೆಗಳು ಬೆಳೆದುವು. ಕಂಪನಿಗಳು ಪಾಲಿಸಿದಾರರ ಪರವಾದ ನ್ಯಾಸಧಾರಿಗಳಲ್ಲಿ ತಮ್ಮ ಆಸ್ತಿಯನ್ನು ನಿಹಿತಗೊಳಿಸುವ ಕ್ರಮವೂ ಬಂತು. ಜೀವವಿಮೆಯ ನಾನಾತತ್ತ್ವಗಳ ಅಧ್ಯಯನ, ಅವುಗಳ ಸಾರ್ವತ್ರೀಕರಣ, ವಿವಿಧ ಜೀವವಿಮಾ ಯೋಜನೆಗಳು ಮುಂತಾದವೆಲ್ಲ ಕ್ರಮವಾಗಿ ಆದ ಬೆಳೆವಣಿಗೆಗಳು. ಹದಿನೆಂಟನೆಯ ಶತಮಾನದಲ್ಲಿ ಉದ್ಯಮಿಗಳು ವಿಮಾ ಕಂಪನಿಗಳಿದ್ದಲ್ಲಿಗೆ ಹೋಗಿ ವಿಮೆ ಇಳಿಸಲು ಅರ್ಜಿ ಸಲ್ಲಿಸುತ್ತಿದ್ದರು. ಜೀವವಿಮಾ ಕಂಪನಿಗಳು ಅಭಿಕರ್ತರನ್ನು(ಏಜೆಂಟರು) ನೇಮಿಸುವ ಪದ್ಧತಿ ಬೆಳೆದದ್ದು 19ನೆಯ ಶತಮಾನದಲ್ಲಿ. ಇವರೇ ಭಾವಿ ಪಾಲಿಸಿದಾರರನ್ನು ಅರಸಿ ಅವರಿಗೆ ವಿಮೆ ಕುರಿತ ತಿಳಿವಳಿಕೆ ನೀಡುತ್ತಾರೆ. ಅಭಿಕರ್ತರ ನಿಯಂತ್ರಣ ಕ್ರಮಗಳು ಅನಂತರ ಜಾರಿಗೆ ಬಂದುವು.

ಭಾರತದಲ್ಲಿ: ಪ್ರಾಚೀನ ಭಾರತೀಯರಿಗೆ ವಿಮೆಯ ತತ್ತ್ವ ಗೊತ್ತಿತ್ತು ಎಂಬುದಕ್ಕೆ ಇತಿಹಾಸದಲ್ಲಿ ಹಲವು ದಾಖಲೆಗಳುಂಟು. ಅಥರ್ವವೇದದಲ್ಲಿ ವಿಮೆಯನ್ನು ಯೋಗಕ್ಷೇಮವೆಂದು ಹೇಳಲಾಗಿದೆ. ಮನುಸ್ಮøತಿ, ಕೌಟಿಲ್ಯನ ಅರ್ಥಶಾಸ್ತ್ರ, ಯಾಜ್ಞವಲ್ಕ್ಯನ ಧರ್ಮಶಾಸ್ತ್ರ ಇವುಗಳಲ್ಲಿ ಪದಾರ್ಥದ ವಿಮೆಗೆ ಸಂಬಂಧಿಸಿದ ವಿವರಗಳಿವೆ. ಜೀವವಿಮಾ ವ್ಯವಸ್ಥೆಯನ್ನೂ ಪ್ರಾಚೀನ ಭಾರತೀಯರು ರೂಪಿಸಿದ್ದರೆ? ಎಂಬುದಕ್ಕೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಗಳಿಲ್ಲ. ಹಿಂದೂಗಳ ಆಗಿನ ಜೀವದೃಷ್ಟಿಗೆ ಜೀವವಿಮೆಯ ತತ್ತ್ವ ಬಹುಶಃ ಹೊಂದಾವಣೆ ಆಗುತ್ತಿರಲಿಲ್ಲ. ಮರಣದ ವಿರುದ್ಧ ವಿಮೆ ಇಳಿಸುವುದೆಂದರೆ ದೈವಸಂಕಲ್ಪದಲ್ಲಿ, ದೈವಾನುಗ್ರಹದಲ್ಲಿ ನಂಬಿಕೆ ಇಲ್ಲವೆಂದು ಹೇಳಿದಂತೆ-ಎಂಬುದು ಆಗಿನ ಭಾವನೆಯಾಗಿತ್ತು. ಆಧುನಿಕ ರೀತಿಯ ಜೀವವಿಮಾಪದ್ಧತಿ ಭಾರತಕ್ಕೆ ಬಂದದ್ದು ಬ್ರಿಟಿಷರ ಆಗಮನದಿಂದ, ಎಂದು ಹೇಳಬಹುದು. 19ನೆಯ ಶತಮಾನದಿಂದ ಇದರ ಬೆಳೆವಣಿಗೆಯನ್ನು ಭಾರತದಲ್ಲಿ ಗುರತಿಸಬಹುದು. ಆ ವೇಳೆಗೆ ಬ್ರಿಟನಿನಲ್ಲೂ ಯೂರೋಪಿನ ಇತರ ದೇಶಗಳಲ್ಲೂ ಅಮೆರಿಕದಲ್ಲೂ ಜೀವವಿಮೆಯ ಪ್ರಾಧಾನ್ಯವೂ ಪ್ರಾಮುಖ್ಯವೂ ಅಧಿಕವಾಗಿದ್ದುವು. ಭಾರತದಲ್ಲಿ ಮೊದಮೊದಲು ಕೇವಲ ಕೆಲವೇ ವಿಮಾಸಂಸ್ಥೆಗಳು ಆರಂಭವಾದುವು. ಅವುಗಳ ವ್ಯವಹಾರವೂ ಹೆಚ್ಚಾಗಿರಲಿಲ್ಲ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ವಿಮಾಸಂಸ್ಥೆಗಳ ಸಂಖ್ಯೆಯೂ ವ್ಯವಹಾರವೂ ಹಲವು ಮಡಿ ಹೆಚ್ಚಿ, ಸ್ವತಂತ್ರ ಭಾರತದಲ್ಲಿ ಜೀವವಿಮೆ ರಾಷ್ಟ್ರೀಕೃತ ಉದ್ಯಮವಾಯಿತು. ಯೋಗಕ್ಷೇಮಂ ವಹಾಮ್ಯಹಂ ಎಂಬುದು ಇದರ ಧ್ಯೇಯವಾಕ್ಯ.

ಆಧುನಿಕ ಭಾರತದ ಜೀವವಿಮೆಯ ಇತಿಹಾಸವನ್ನು ಏಳು ಅವಧಿಗಳಾಗಿ ವಿಂಗಡಿಸಬಹುದು : 1. 19ನೆಯ ಶತಮಾನ (ಜೀವವಿಮೆಯ ಆರಂಭ): 2. 1901-1918 (ಆಸ್ತಿಭಾರ ರಚನೆ); 3. 1919-1928 (ಪರಿಮಿತ ಬೆಳವಣಿಗೆ); 4. 1929-1938 (ಉಚ್ಛ್ರಾಯ) 5. 1939-1945 (ಪ್ರಗತಿಯ ಮುಂದುವರಿಕೆ); 6. 1946-1955 (ದೃಢತೆ) 7. 1956ರ ಅನಂತರ (ರಾಷ್ಟ್ರೀಕರಣಗೊಂಡ ಉದ್ಯಮ).

1 19ನೆಯ ಶತಮಾನ : ಭಾರತದಲ್ಲಿ ಆಧುನಿಕ ವಿಮಾ ಉದ್ಯಮ ಮೊದಲಾದ್ದು ದೊಡ್ಡ ನಗರಗಳಲ್ಲಿ, ಕರಾವಳಿ ಪಟ್ಟಣಗಳಲ್ಲಿ, ವಿದೇಶಿ ವಿಮಾ ಕಂಪನಿಗಳ ಪರವಾಗಿದ್ದ ಅಭಿಕರಣ ಸಂಸ್ಥೆಗಳು ಆ ಕಾಲದಲ್ಲಿ ವಿಮೆ ಮಾಡಿಸುವ ಕಾರ್ಯನಿರ್ವಹಿಸುತ್ತಿದ್ದುವು. ಆಗ ಭಾರತೀಯರಿಗೆ ಸಾಮಾನ್ಯವಾಗಿ ವಿಮೆಯ ಉಪಯುಕ್ತತೆಯ ತಿಳಿವಳಿಕೆ ಇರಲಿಲ್ಲ. ಒಬ್ಬನ ಜೀವದ ವಿಮೆ ಇಳಿಸುವುದೆಂದರೆ ಸಾವಿಗೆ ಆಮಂತ್ರಣ ನೀಡಿದಂತೆ-ಎಂಬುದು ಆಗ ಇದ್ದ ಭಾವನೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರ 'ವಿಮೆ ಯಮನನ್ನೆ ಹೆದರಿಸಿತು ಎಂಬ ಪ್ರಬಂಧದಲ್ಲಿ ವಿಮೆಯ ಬಗ್ಗೆ ಜನ ತಳೆದಿದ್ದ ಧೋರಣೆಯನ್ನು ಕುರಿತ ಹಾಸ್ಯದೃಷ್ಟಿಯ ವಿವೇಚನೆಯಿದೆ. ಪ್ರಪ್ರಥಮ ವಿಮಾ ಕಂಪನಿಗಳಿಗೆ ಭಾರತೀಯರ ಮೃತ್ಯುದರ ಕುರಿತ ನಂಬಲರ್ಹವಾದ ಅಂಕಿಅಂಶಗಳಿರಲಿಲ್ಲ. ಆದ್ದರಿಂದ ಭಾರತೀಯರಿಗೆ ಜೀವವಿಮಾ ಪಾಲಿಸಿಗಳನ್ನು ವಿಕ್ರಯಿಸಲು ಕಂಪನಿಗಳೇ ಅಳುಕುತ್ತಿದ್ದುವು. ಆರಂಭದ ದಿನಗಳಲ್ಲಿ ವಿಮೆ ಮಾಡಿಸುತ್ತಿದ್ದದ್ದು ಮುಖ್ಯವಾಗಿ ಏಷ್ಯೇತರರಿಗೆ. ಆದರೆ ಕ್ರಮೇಣ ಈ ವಿಘ್ನಗಳಿಂದೆಲ್ಲ ಪಾರಾಗಿ, ಇಪ್ಪತ್ತನೆಯ ಶತಮಾನದ ಉದಯದ ವೇಳೆಗೆ ಭಾರತೀಯ ಜೀವವಿಮೆಗೆ ಸುಭದ್ರ ಅಸ್ತಿಭಾರ ಹಾಕುವುದು ಸಾಧ್ಯವಾಯಿತು.

19ನೆಯ ಶತಮಾನದ ಉತ್ತರಾರ್ಧದ ಆದಿಕಾಲದಲ್ಲಿ ಆಧುನಿಕ ಭಾರತದ ಜೀವವಿಮೆಯ ಇತಿಹಾಸ ಆರಂಭವಾಗುವುದೆಂಬುದು ಸಾಮಾನ್ಯವಾದ ನಂಬಿಕೆ. ಆದರೆ ಅದಕ್ಕೂ ಹಿಂದೆಯೇ ಇಲ್ಲಿ ಜೀವವಿಮಾ ಕಂಪನಿಗಳು ಸ್ಥಾಪಿತವಾದುವೆಂಬುದು ಗಮನಿಸಬೇಕಾದ ವಿಚಾರ. ಮದ್ರಾಸ್ ಅಧಿಪತ್ಯದಲ್ಲಿ 1829ರಲ್ಲಿ ಸ್ಥಾಪಿತವಾದ ಮದ್ರಾಸ್ ಎಕ್ವಿಟಬಲ್ ಎಂಬುದೇ ಪ್ರಥಮ ಜೀವವಿಮಾ ಸಂಸ್ಥೆ ಎಂದು ಹೇಳಲಾಗಿದೆ. ಆದರೆ ಅದಕ್ಕೂ ಹಿಂದೆ 1823ರಲ್ಲಿ, ಬೊಂಬಾಯಿ ಆಧಿಪತ್ಯದಲ್ಲಿ ಬಾಂಬೇ ಲೈಫ್ ಅಷ್ಯೂರೆನ್ಸ್ ಕಂಪನಿ ಆರಂಭವಾಯಿತು. ಆದರೆ ಅದು ಅಲ್ಪಾಯುವಾಯಿತು. ಇದಕ್ಕೂ ಮುಂಚೆ, 1818ರಲ್ಲಿ ಕೆಲವು ಐರೋಪ್ಯರು ಸೇರಿ ಓರಿಯೆಂಟಲ್ ಲೈಫ್ ಅಷ್ಯೂರೆನ್ಸ್ ಕಂಪನಿ ಎಂಬ ಸಂಸ್ಥೆಯನ್ನು ಆರಂಭಿಸಿದರು. ಇದು ಯಶಸ್ವಿಯಾಗಲಿಲ್ಲವಾದ್ದರಿಂದ 1834ರಲ್ಲಿ ನ್ಯೂ ಓರಿಯೆಂಟಲ್ ಎಂಬ ಹೆಸರಿನಿಂದ ಇದನ್ನು ಪುನರ್ರಚಿಸಲಾಯಿತು. ಆದರೆ ಇದೂ ಉಳಿಯಲಿಲ್ಲ. 1833ರಲ್ಲಿ ಮದ್ರಾಸ್ ಆಧಿಪತ್ಯದಲ್ಲಿ ಸ್ಥಾಪಿತವಾದ ಸಂಸ್ಥೆ ಮಡ್ರಾಸ್ ವಿಡೋಸ್, 1847ರಲ್ಲಿ ಲಾಹೋರಿನಲ್ಲಿ ಆರಂಭವಾದ ಕ್ರಿಶ್ಚನ್ ಮ್ಯೂಚುಯಲ್, 1848ರಲ್ಲಿ ಸ್ಥಾಪಿತವಾದ ಬಾಂಬೇ ಫ್ಯಾಮಿಲಿ ಪೆನ್ಷನ್ ಫಂಡ್ ಆಫ್ ಗವರ್ನಮೆಂಟ್ ಸರ್ವೆಂಟ್ಸ್, 1849ರಲ್ಲಿ ಆರಂಭವಾದ ತಿನ್ನವೆಲ್ಲಿ ಡಯಸಿಸನ್ ಕೌನ್ಸಿಲ್ ವಿಡೋಸ್ ಫಂಡ್, 1850ರ ಟ್ರಿಟನ್ ಇನ್ಷೂರೆನ್ಸ್ ಕಂಪನಿ-ಇವು 19ನೆಯ ಶತಮಾನದ ಪ್ರಥಮಾರ್ಧದಲ್ಲಿ ಪ್ರಾರಂಭವಾದ ಇತರ ಕೆಲವು ಸಂಸ್ಥೆಗಳು.

ಆದರೂ 19ನೆಯ ಶತಮಾನದ 8ನೆಯ ದಶಕದವರೆಗೂ ಜೀವವಿಮಾ ಉದ್ಯಮ ಭಾರತದಲ್ಲಿ ಹೆಚ್ಚಿನ ಪ್ರಗತಿಯನ್ನೇನೂ ಸಾಧಿಸಲಿಲ್ಲ. ಭಾರತದ ಕೆಲವು ಭಾಗಗಳಲ್ಲಿ ಕೆಲವು ವಿದೇಶಿ ಸಂಸ್ಥೆಗಳು ಮಾತ್ರ ಸ್ವಲ್ಪಮಟ್ಟಿನ ವ್ಯವಹಾರ ನಡೆಸುತ್ತಿದ್ದುವು. ಇಪ್ಪತ್ತನೆಯ ಶತಮಾನದಲ್ಲಿ ಬೃಹತ್ತಾಗಿ ಬೆಳೆದ ಭಾರತೀಯ ವಿಮಾಸಂಸ್ಥೆಗಳ ಸ್ಥಾಪನೆಯಾದ್ದು ಅನಂತರಕಾಲದಲ್ಲಿ. ಬೊಂಬಾಯಿ ಅಧಿಪತ್ಯ ಭಾರತದ ಇತರ ಭಾಗಗಳಿಗಿಂತ ಹೆಚ್ಚು ಮುನ್ನಡೆಯಿತು. 1870ರ ಡಿಸೆಂಬರ್ 3ರಂದು ಬೊಂಬಾಯಿ ಉಚ್ಚ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್ ಆಗಸ್ಟಸ್ ಸಮ್ಮರ್ಸ್ ಮತ್ತು ಇತರ ಆರು ಮಂದಿ ಸೇರಿ ಸ್ಥಾಪಿಸಿದ ಬಾಂಬೆ ಮ್ಯೂಚುಯಲ್ ಜೀವವಿಮಾ ಸೊಸೈಟಿಯೇ ಅಪ್ಪಟ ಭಾರತೀಯವೆನ್ನಬಹುದಾದ ಪ್ರಥಮ ಜೀವವಿಮಾಸಂಸ್ಥೆ. ಬಾಂಬೆ ಮ್ಯೂಚುಯಲ್, ಓರಿಯೆಂಟಲ್ (1874), ಎಂಪೈರ್ ಆಫ್ ಇಂಡಿಯ (1897) ಇವು ಈ ಪ್ರದೇಶದಲ್ಲಿ ಆರಂಭವಾದ ಸಂಸ್ಥೆಗಳಲ್ಲಿ ಮುಖ್ಯವಾದವು. ಮದರಾಸ್ ಆಧಿಪತ್ಯದಲ್ಲೂ ಕೆಲವು ಹೊಸ ಸಂಸ್ಥೆಗಳು ಆರಂಭವಾದವು. ಉತ್ತರ ಭಾರತದ ವಿಮಾಸಂಸ್ಥೆಗಳಲ್ಲಿ ಮುಖ್ಯವಾದವು ಇಂಡಿಯನ್ ಲೈಫ್ ಅಷ್ಯೂರೆನ್ಸ್ ಕಂಪನಿ (1892) ಮತ್ತು ಭಾರತ್ ಇನ್ಷೂರೆನ್ಸ್ ಕಂಪನಿ (1896). ಮೊದಲನೆಯದರ ಪ್ರಧಾನ ಕಚೇರಿ ಕರಾಚಿ. ಎರಡನೆಯದು ಲಾಹೋರಿನಲ್ಲಿ ಆರಂಭವಾಗಿ ಅನಂತರ ದೆಹಲಿಗೆ ವರ್ಗವಾಯಿತು. ಈ ಕಾಲದಲ್ಲಿ ಭಾರತದಲ್ಲಿ ತಮ್ಮ ವ್ಯವಹಾರ ಬೆಳೆಸಿಕೊಂಡ ವಿದೇಶಿ ವಿಮಾಸಂಸ್ಥೆಗಳು ಹಲವಾರು. ಕ್ರಮಕ್ರಮವಾಗಿ ಭಾರತೀಯ ಜೀವವಿಮಾ ಸಂಸ್ಥೆಗಳು ಪ್ರಗತಿ ಸಾಧಿಸಿದುವು. ವಿದೇಶಿ ವಿಮಾಸಂಸ್ಥೆಗಳು ಯೂರೋಪಿಯನರಿಗೆ ವಿಧಿಸುತ್ತಿದ್ದ ಭಾರತೀಯ ಕಂಪನಿಗಳು ಜನಪ್ರಿಯತೆ ಗಳಿಸಿದ್ದು ಆಶ್ಚರ್ಯವಲ್ಲ. ಯೂರೋಪಿಯನ್ ಕಂಪನಿಗಳು ಭಾರತೀಯ ವಿಮೆದಾರರಿಗೆ ಸೇ. 10 ರಷ್ಟು ಪ್ರೀಮಿಯಂ ವಿಧಿಸುತ್ತಿದ್ದುವು.

19ನೆಯ ಶತಮಾನದ ಕೊನೆಯ ದಶಕದಲ್ಲಿ ಸಂಭವಿಸಿದ ಕ್ಷಾಮವೂ ಪ್ಲೇಗ್ ಪಿಡುಗೂ ಅನೇಕ ಜೀವಗಳ ಬಲಿ ತೆಗೆದುಕೊಂಡುವು. ಇದರಿಂದ ಜೀವವಿಮಾ ಕಂಪನಿಗಳಿಗೆ ಆಘಾತ ಆಗುವುದೆಂದು ಹೆದರಲಾಗಿತ್ತು. ಆದರೆ ಭಾವಿಸಿದ್ದಷ್ಟು ನಷ್ಟಕ್ಕೆ ಒಳಗಾಗದೆ ತಮ್ಮ ಸಂಚಿತಿಗಳನ್ನು ಹೆಚ್ಚಿಸಿಕೊಂಡು ಅನೇಕ ಕಂಪನಿಗಳು ಬೆಳೆದುವು. 19ನೆಯ ಶತಮಾನದಲ್ಲಿ ವಿಮಾ ವ್ಯವಹಾರವನ್ನು ನಿಯಂತ್ರಣಕ್ಕೆ ಒಳಪಡಿಸುವ ಯಾವ ಅಧಿನಿಯಮವೂ ಜಾರಿಗೆ ಬರಲಿಲ್ಲ. ಸರ್ಕಾರದ ಒಡೆತನ ಹಾಗೂ ಬಂದಿತ್ತಾದರೂ ಸರ್ಕಾರ ಇದನ್ನು ತಳ್ಳಿಹಾಕಿತು. ಅಂಚೆ ನೌಕರರ ಸೌಲಭ್ಯಕ್ಕಾಗಿ ಅಂಚೆವಿಮೆ 1883ರಷ್ಟು ಹಿಂದೆಯೇ ಆರಂಭವಾದ್ದು ಗಮನಾರ್ಹ.

19ನೆಯ ಶತಮಾನದಲ್ಲಿ ಆರಂಭವಾದ ವಿಮಾಸಂಸ್ಥೆಗಳಲ್ಲಿ ಕೂಡುಬಂಡವಾಳ ಕಂಪನಿಗಳೂ ಪಾರಸ್ಪಾರಿಕ (ಮ್ಯೂಚ್ಯುಯಲ್) ಸಂಸ್ಥೆಗಳೂ ಇದ್ದುವು. ಪಾರಸ್ಪಾರಿಕ ಸಂಸ್ಥೆಗಳಿಗೆ ಲಾಭದೃಷ್ಟಿಗಿಂತ ಪರಸ್ಪರ ಸಹಾಯದೃಷ್ಟಿಯೇ ಮುಖ್ಯವಾಗಿದ್ದರಿಂದ ಇವು ಬೇಗ ವರ್ಧಿಸಿದುವು. ಬಂಡವಾಳ ಸಂಸ್ಥೆಗಳೂ ಪಾಲಿಸಿದಾರರಿಗೆ ಕಂಪನಿಯಲ್ಲಿ ನಿಯಂತ್ರಣಾವಕಾಶ ನೀಡಿದುವು. ಇವುಗಳಲ್ಲಿ ಮುಖ್ಯವಾದ್ದು ಓರಿಯೆಂಟಲ್ ಸಂಸ್ಥೆ.

2 1901-1918 : ಈ ಕಾಲದಲ್ಲಿ ಜೀವವಿಮಾ ಉದ್ಯಮ ಬೆಳೆಯುವುದಕ್ಕೆ ಅನುಕೂಲಕರವಾದ ವಾತಾವರಣವೇ ಇತ್ತು. ಜೀವವಿಮೆಯ ಪ್ರಯೋಜನಗಳು ಜನರಲ್ಲಿ ಹೆಚ್ಚು ಹೆಚ್ಚು ಮನವರಿಕೆಯಾಗತೊಡಗಿದವು. ಜನಾರೋಗ್ಯ, ನೈರ್ಮಲ್ಯ, ವೈದ್ಯಸೌಲಭ್ಯ ಇವೆಲ್ಲ ಹೆಚ್ಚಿದ್ದು ವಿಮೆ ಬೆಳೆದದ್ದಕ್ಕೆ ಒಂದು ಮುಖ್ಯ ಕಾರಣ. ಸ್ವದೇಶಿ ಭಾವನೆಯೂ ಭಾರತೀಯ ವಿಮಾ ಬೆಳವಣಿಗೆಗೆ ಕಾರಣವಾಯಿತು. ಈ ಕಾಲದಲ್ಲಿ ಆರಂಭವಾದ ಆರು ಮುಖ್ಯ ಕಂಪನಿಗಳು ನ್ಯಾಷನಲ್ ಇನ್ಷ್ಯೂರೆನ್ಸ್ (1906) ಹಿಂದೂಸ್ಥಾನ್ ಕೋ-ಆಪರೇಟಿವ್ (1907), ಜನರಲ್ ಅಷ್ಯೂರೆನ್ಸ್ (1907), ಏಷ್ಯನ್ ಅಷ್ಯೂರೆನ್ಸ್ (1911), ವೆಸ್ಟರ್ನ್ ಇಂಡಿಯ (1913) ಮತ್ತು ಇಂಡಸ್ಟ್ರಿಯಲ್ ಮತ್ತು ಪ್ರೂಡೆನ್ಷಿಯಲ್ (1913). ಸ್ವದೇಶಿ ಚಳವಳಿಯಿಂದ ಉತ್ತೇಜನಗೊಂಡು ಅನೇಕ ಕಂಪನಿಗಳು ಸ್ಥಾಪಿತವಾದರೂ ಇವುಗಳಲ್ಲಿ ಹಲವು ಕಂಪನಿಗಳು ಹಣಕಾಸಿನ ಹಾಗೂ ಜೀವನಾಂಕಿಕ ದೃಷ್ಟಿಯಿಂದ ಭದ್ರವಾಗಿರಲಿಲ್ಲ. ಜೀವವಿಮೆಯನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ 1912ರಲ್ಲಿ ಪ್ರಪ್ರಥಮ ಅಧಿನಿಯಮ ಜಾರಿಗೆ ಬಂದಾಗ ಹಲವು ಕಂಪನಿಗಳು ಮುಚ್ಚಿಹೋದವು. ಇದಕ್ಕೆ ಕಾರಣಗಳು ಹಲವು; ಪಾವತಿಯದ ಬಂಡವಾಳದ ಅಭಾವ, ಲಾಭದ ತಪ್ಪು ಲೆಕ್ಕಾಚಾರದ ಫಲವಾಗಿ ಬಂಡವಾಳ ಮತ್ತು ಜೀವನಿಧಿಯಿಂದ (ಲೈಫ್ ಫಂಡ್) ಲಾಭಾಂಶ (ಡಿವಿಡೆಂಡ್) ಪಾವತಿ ಮುಂತಾದವು ಒಂದನೆಯ ಮಹಾಯುದ್ಧ ಕಾಲದಲ್ಲಿ ಜೀವವಿಮಾ ಸಂಸ್ಥೆಗಳು ನೀಡಿದ ಪಾಲಿಸಿಗಳಲ್ಲಿ ಎಂಡೋಮೆಂಟ್ ಪಾಲಿಸಿಗಳೇ ಹೆಚ್ಚು. ನಿಯತ ಅವಧಿಯಲ್ಲಿ ಅಥವಾ ಮರಣದವರೆಗೆ ಪ್ರೀಮಿಯಂ ಪಾವತಿ ಮಾಡಬೇಕಾದ ಆಜೀವ ಪಾಲಿಸಿಗಳು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಎಂಡೋಮೆಂಟ್ ಪಾಲಿಸಿಗಳ ಅಧಿಮಾನ್ಯತೆಯೇ (ಪ್ರೆಫರೆನ್ಸ್) ಇಂದಿಗೂ ಕಂಡುಬಂದಿದೆ. ಒಂದೊಂದು ದೇಶದ ಜನರು ಒಂದೊಂದು ಬಗೆಯ ಪಾಲಿಸಿಯತ್ತ ಒಲವು ತೋರುವ ಪ್ರವೃತ್ತಿ ವಿಶ್ವದಾದ್ಯಂತ ಸಾಮಾನ್ಯವಾಗಿ ಕಂಡುಬಂದಿದೆ. ಆದರೆ ಜೀವನಾಂಕಿಕ ದೃಷ್ಟಿಯಿಂದ ಯಾವುದೇ ಬಗೆಯ ಪಾಲಿಸಿ ಇತರ ಪಾಲಿಸಿಗಳಿಗಿಂತ ಅಗ್ಗವೇನೂ ಅಲ್ಲ. ಲಾಭಸಹಿತ ಎಂಡೋಮೆಂಟ್ ಪಾಲಿಸಿ (ವಿಮಾಸಂಸ್ಥೆಯ ಲಾಭದಲ್ಲಿ ಒಂದು ಅಂಶವನ್ನು ಬೋನಸ್ (ಅಧ್ಯಂಶ) ಆಗಿ ಪಡೆಯುವ ಹಕ್ಕು ಉಳ್ಳ ಪಾಲಿಸಿ) ಜೀವವಿಮೆಯ ಮತ್ತು ವಿನಿಯೋಜನೆಯ (ಇನ್‍ವೆಸ್ಟ್‍ಮೆಂಟ್)-ಎರಡೂ ತತ್ತ್ವಗಳ-ಮಿಶ್ರಣ. ಪಾಲಿಸಿದಾರ ಜೀವಂತವಾಗಿರುವಾಗಲೇ ವಿಮೆಯ ಹಣವನ್ನು ಪಡೆಯುವ ಅವಕಾಶ ಇರುವುದು ಇದರ ಒಂದು ದೊಡ್ಡ ಅನುಕೂಲ. ವಿನಿಯೋಜನೆಯ ಸಾಧನವಾಗಿ ಇದರಲ್ಲಿ ಹಲವು ಅನುಕೂಲಗಳುಂಟು. ಷೇರು ಅಥವಾ ಇಂಥ ಇತರ ಪ್ರತಿಭೂತಿಗಳಂತೆ (ಸೆಕ್ಯೂರಿಟಿ) ಇದರ ಬೆಲೆ ಇಳಿಯುವ ಅಪಾಯವಿಲ್ಲ ಇದು ಸುಭದ್ರ, ಲಾಭಪ್ರದ. ಈ ಕಾರಣಗಳಿಂದಾಗಿ ಭಾರತದಲ್ಲಿ ವಿಮೆ ಇಳಿಸುವವರಿಗೆ ಇದು ಬಹಳ ಪ್ರಿಯವಾಗಿದೆ.

3 1919-1928 : ಪ್ರಥಮ ಮಹಾಯುದ್ಧಾನಂತರದ ಕಾಲದಲ್ಲಿ ಭಾರತದಲ್ಲಿ ಜೀವವಿಮೆ ಗಮನಾರ್ಹವಾಗಿ ಅಲ್ಲದಿದ್ದರೂ ದೃಢವಾಗಿ ಮುಂದುವರಿಯಿತು. ಭಾರತೀಯ ಜೀವಗಳನ್ನು ವಿಮೆಗೆ ಒಳಪಡಿಸುವುದರಿಂದ ಉದ್ಯಮಕ್ಕೆ ಬಾಧಕವಾಗುವುದಿಲ್ಲವೆಂಬುದು ವ್ಯಕ್ತಪಟ್ಟಿತು. ಜೀವವಿಮಾಭ್ಯಾಸ ಜನರಲ್ಲಿ ನಿಧಾನವಾಗಿಯಾದರೂ ಬೆಳೆಯುತ್ತಿತ್ತು. ಭಾರತೀಯ ವಿಮೋದ್ಯಮಕ್ಕೆ ಸಹಾಯಕವಾದ ಒಂದು ಮುಖ್ಯ ಘಟನೆಯೆಂದರೆ ಅಸಹಕಾರ ಚಳವಳಿ. ಈ ಕಾಲದಲ್ಲಿ ಸ್ಥಾಪಿತವಾದ ವಿಮಾ ಸಂಸ್ಥೆಗಳ ಪೈಕಿ ಪ್ರಸಿದ್ಧವಾದವು ನಾಲ್ಕು; ನ್ಯೂ ಇಂಡಿಯ (1919), ಜ್ಯೂಪಿಟರ್ (1919), ಲಕ್ಷ್ಮಿ (1924) ಮತ್ತು ಆಂಧ್ರ (1925). ವಿಮಾ ವ್ಯವಹಾರವೂ ಅಧಿಕವಾಯಿತು. ಎಂಡೋಮೇಂಟ್ ಪಾಲಿಸಿಯ ಜನಪ್ರಿಯತೆ ಮುಂದುವರಿಯಿತು. ಆಜೀವ (ಹೋಲ್ ಲೈಫ್) ವಿಮೆಯಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿನ ಜನಪ್ರಿಯತೆ ಗಳಿಸಿದ ಪ್ರಕಾರವೆಂದರೆ ನಿಯತ ಪಾವತಿಪಾಲಿಸಿಗಳು. ವಿಮಾ ವ್ಯವಹಾರದ ಬೆಳೆವಣಿಗೆಯೊಂದಿಗೆ ಸಂಸ್ಥೆಗಳ ಜೀವನಿಧಿಗಳೂ ಏರಿದುವು. ಇವುಗಳ ವಿನಿಯೋಜನೆಯಾಗುತ್ತಿದ್ದದ್ದು ವಿಶೇಷವಾಗಿ ಸರ್ಕಾರಿ ಪ್ರತಿಭೂತಿಗಳಲ್ಲಿ ವಿಮಾ ಸಂಸ್ಥೆಗಳ ಲಾಭಪ್ರದತೆಯೂ ಈ ಅವಧಿಯಲ್ಲಿ ಹಿಂದಿನದಕ್ಕಿಂತ ಅಧಿಕವಾಯಿತು. 1928ರ ಭಾರತ ಜೀವವಿಮಾ ಕಂಪನಿಗಳ ಶಾಸನದಲ್ಲಿ ಜೀವ ಹಾಗೂ ಜೀವೇತರ ವಿಮೆಯನ್ನು ನಿಯಂತ್ರಿಸುವ ಕೆಲವು ನಿಯಮಗಳು ಜಾರಿಗೆ ಬಂದವು.

4 1929-1938 : ಭಾರತದ ಜೀವವಿಮೆ ಈ ಕಾಲದಲ್ಲಿ ಹೆಚ್ಚಿನ ಉತ್ಕರ್ಷ ಹೊಂದಿತು. 1955ರಲ್ಲಿ ಕಾರ್ಯನಿರತವಾಗಿದ್ದ 210 ಜೀವವಿಮಾ ಕಂಪನಿಗಳ ಪೈಕಿ 78 ಕಂಪನಿಗಳು ಸ್ಥಾಪಿತವಾದ್ದು ಈ ಕಾಲದಲ್ಲಿ. ಇವುಗಳಲ್ಲಿ ಪ್ರಸಿದ್ಧವಾದವು ಮೆಟ್ರೊಪಾಲಿಟಿನ್, ನ್ಯೂ ಏಷ್ಯಾಟಿಕ್, ವಾರ್ಡನ್ ಮತ್ತು ರೂಬಿ ಜನರಲ್, ಭಾರತೀಯ ವಿಮಾ ಉದ್ಯಮದ ಬೆಳೆವಣಿಗೆಯ ಪರಿಣಾಮವಾಗಿ ಭಾರತದಲ್ಲಿ ವಿದೇಶಿ ವಿಮಾ ಸಂಸ್ಥೆಗಳ ವ್ಯವಹಾರದ ಅವಕಾಶಗಳು ಕಿರಿದಾದರೂ ಅವೂ ಭಾರತದಲ್ಲಿ ವ್ಯವಹಾರ ವಿಸ್ತರಿಸುವ ಪ್ರಯತ್ನ ಮುಂದುವರಿಸಿದುವು. ವಿದೇಶಿ ಸಂಸ್ಥೆಗಳ ಹೊಸ ಶಾಖಾ ಕಚೇರಿಗಳು ಭಾರತದಲ್ಲಿ ತೆರೆದುವು. ಅದುವರೆಗೂ ಭಾರತದ ವ್ಯವಹಾರದಲ್ಲಿ ಪ್ರವೇಶಿಸದಿದ್ದ ವಿದೇಶಿ ಕಂಪನಿಗಳು ಇಲ್ಲಿ ವ್ಯವಹಾರ ಆರಂಭಿಸಿದುವು. ಭಾರತೀಯ ಕಂಪನಿಗಳ ಜೀವನಿಧಿ ಬೆಳೆಯಿತು. ಸರ್ಕಾರಿ ಪ್ರತಿಭೂತಗಳಲ್ಲಿ ಅವುಗಳ ನಿಧಿ ವಿನಿಯೋಜನೆ ಎಂದಿನಂತೆ ಅಧಿಕವಾಗುತ್ತಿದ್ದರೂ ಸಾಪೇಕ್ಷವಾಗಿ ಅದರ ಪ್ರಾಮುಖ್ಯ ಸ್ವಲ್ಪ ಕಡಿಮೆಯಾಯಿತು. ಕಂಪನಿಗಳ ಆಸಕ್ತಿ ಮುಂದುವರಿಯಿತು. ವಿನಿಯೋಜನೆಗಳ ವರಮಾನದ ದರ ಇಳಿಮುಖವಾಯಿತು.

1938ರ ವಿಮಾ ಅಧಿನಿಯಮದಲ್ಲಿ ವಿಮಾ ವ್ಯವಹಾರದ ನಿಯಂತಣ ಹಾಗೂ ಮೇಲ್ವಿಚಾರಣೆಗಾಗಿ ಗಮನಾರ್ಹ ನಿಬಂಧನೆಗಳು ಬಂದುವು. ಈ ಅಧಿನಿಯಮ 1939ರ ಜುಲೈ 1 ರಿಂದ ಜಾರಿಗೆ ಬಂತು.

5 1939-1945 : ಜೀವವಿಮೆಯಲ್ಲಿ ಬೆಳೆಯುತ್ತಿದ್ದ ಅನೇಕ ಅನಿಷ್ಟ ಪ್ರವೃತ್ತಿಗಳನ್ನು ನಿವಾರಿಸುವ ಹೊಸ ಅಧಿನಿಯಮದ ಜಾರಿಯೊಂದಿಗೆ ಆರಂಭವಾದ ಈ ಅವಧಿಯಲ್ಲಿ ಎರಡನೆಯ ಮಹಾಯುದ್ಧ ಆರಂಭವಾಗಿ ಪ್ರಗತಿಗೆ ಅಡ್ಡಿ ಉಂಟಾಯಿತು. ಆದರೂ ವಿಮಾ ಉದ್ಯಮವನ್ನು ಆರೋಗ್ಯಕರವಾಗಿ ಮಾಡುವಂಥ ಕ್ರಮಗಳು ಅನುಷ್ಠಾನಕ್ಕೆ ಬಂದುವು. ಯುದ್ಧದ ಆರಂಭಕಾಲದಲ್ಲಿ ಹೊಸ ವ್ಯವಹಾರ ಇಳಿಯುವ ಪ್ರವೃತ್ತಿ ಕಂಡುಬಂತು. 1942ರಿಂದ ಮುಂದಕ್ಕೆ ವ್ಯವಹಾರ ಕ್ರಮಕ್ರಮವಾಗಿ ಏರುತ್ತ ನಡೆಯಿತು. ಜೀವವಿಮಾ ಸಂಸ್ಥೆಗಳ ಸರಾಸರಿ ಗಾತ್ರದಲ್ಲಿ ಏರಿಕೆ, ಜೀವ ನಿಧಿಯ ಹೆಚ್ಚಳ-ಇವು ಇನ್ನೆರಡು ಬೆಳವಣಿಗೆಗಳು. ಜೀವವಿಮಾ ಸಂಸ್ಥೆಗಳ ಸಂಖ್ಯೆ 200ರಿಂದ 198ಕ್ಕೆ ಇಳಿದರೂ ಅವುಗಳ ಸರಾಸರಿ ವ್ಯವಹಾರದ ಗಾತ್ರ ಮುಮ್ಮಡಿಯಾಗಿ ಬೆಳೆಯಿತು. 6 1946-1955 : ಯುದ್ಧಾನಂತರ ಕಾಲದ ಆರಂಭದಲ್ಲಿ ದೇಶದಲ್ಲಿ ಇದ್ದ ಅನಿಶ್ಚಯ ವಾತಾವರಣದಿಂದಾಗಿಯೂ ರಾಜಕೀಯ ಪರಿಸ್ಥಿತಿಯಿಂದಲೂ ಸ್ವಲ್ಪಕಾಲ ವಿಮಾ ವ್ಯವಹಾರದ ವಿಸ್ತರಣೆಯ ಗತಿ ಕುಗ್ಗಿತ್ತು. ಆದರೆ ಅನಂತರ ಇದು ಮಹತ್ತರವಾಗಿ ಪುರೋಭಿವೃದ್ಧಿ ಹೊಂದಲಾರಂಭಿಸಿತು. ದುರ್ಬಲ ಹಾಗೂ ಅನಾರ್ಥಿಕ ಸಂಸ್ಥೆಗಳ ನಿವಾರಣೆ, ಸ್ಫರ್ಧೆಯ ಬೆಳವಣಿಗೆ, ವಿದೇಶಿ ಸಂಸ್ಥೆಗಳ ನಿರ್ಗಮನ, ವಿಮಾಸಂಸ್ಥೆಗಳ ಸರಾಸರಿ ಗಾತ್ರದ ಏರಿಕೆ-ಇವು ಕೆಲವು ಪ್ರವೃತ್ತಿಗಳು. 1953ರಲ್ಲಿ ವಿಮಾ ಅಧಿನಿಯಮಕ್ಕೆ ಆದ ತಿದ್ದುಪಡಿ ಒಂದು ಮಹತ್ತ್ವದ ಘಟನೆ. ಪಾಲಿಸಿದಾರರ ಹಿತ ರಕ್ಷಿಸುವ, ವಿಮಾಸಂಸ್ಥೆಗಳ ನಿಧಿ ದುರ್ವಿನಿಯೋಗವಾಗದಂತೆ ನಿಯಂತ್ರಿಸುವ ಅವುಗಳ ಆಡಳಿತ ದಕ್ಷತೆ ಮತ್ತು ಭದ್ರತೆ ಹೆಚ್ಚಿಸುವ ನಿಬಂಧನೆಗಳು ಜಾರಿಗೆ ಬಂದುವು. ತಪ್ಪುಹಾದಿ ಹಿಡಿದ ಸಂಸ್ಥೆಗಳನ್ನು ನಿಯಂತ್ರಿಸಲು ಸ್ವಾಯತ್ತ ಜೀವವಿಮಾ ಮಂಡಳಿಯ ಸ್ಥಾಪನೆ, ಹಣಕಾಸಿನ ದೃಷ್ಟಿಯಿಂದ ಅಸಮರ್ಪಕವಾದ ಸಂಸ್ಥೆಗಳ ಆಡಳಿತಕ್ಕೆ ಅಧಿಕಾರಿಗಳ ನೇಮಕ, ಬಂಡವಾಳ ಮತ್ತು ಜೀವ ನಿಧಿಗಳ ಸುವ್ಯವಸ್ಥೆ, ಖರ್ಚಿನ ಮಿತಿ, ಅತಿಯಾದ ಸಂಭಾವನೆ ನೀಡದಂತೆ ತಡೆ, ಮುಂತಾದ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಯಿತು. 7 1956ರ ಅನಂತರ: 1596ರ ಜನವರಿ 19ರಂದು ಭಾರತದಲ್ಲಿ ಜೀವವಿಮಾ ವ್ಯವಹಾರವನ್ನು ರಾಷ್ಟ್ರೀಕರಿಸಲಾಯಿತು. ಜೀವವಿಮಾ ಕಾರ್ಪೋರೇಷನ್ ಸ್ಥಾಪಿತವಾದ್ದು ಆ ವರ್ಷದ ಸೆಪ್ಟೆಂಬರ್ 1ರಂದು. ಜೀವವಿಮೆಯನ್ನು ಎಲ್ಲ ಪ್ರದೇಶಗಳಿಗೂ ವಿಸ್ತರಿಸಿ, ಜನಸಾಮಾನ್ಯರಿಗೆ ಭದ್ರತೆ ಒದಗಿಸುವುದಲ್ಲದೆ, ಅವರ ಉಳಿತಾಯ ದೇಶದ ಅಭಿವೃದ್ಧಿ ಕಾರ್ಯಗಳಿಗೆ ದೊರಕುವಂತೆ ಮಾಡುವುದು ರಾಷ್ಟ್ರೀಕರಣದ ಮುಖ್ಯ ಉದ್ದೇಶ. ದೇಶದಲ್ಲಿದ್ದ 245 ಸಣ್ಣ ದೊಡ್ಡ ಜೀವವಿಮಾ ಕಂಪನಿಗಳನ್ನು ಒಂದುಗೂಡಿಸಿ ಸುವ್ಯವಸ್ಥೆಗೆ ಒಳಪಡಿಸುವ ಕಾರ್ಯದಲ್ಲಿ ಕಾರ್ಪೋರೇಷನಿನ ಚಟುವಟಿಕೆಗಳನ್ನು ಉತ್ತರ, ಮಧ್ಯ, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ವಿಂಗಡಿಸಿ ಪ್ರತಿಯೊಂದು ವಲಯದಲ್ಲೂ ಹಲವು ವಿಭಾಗಗಳನ್ನು ಏರ್ಪಡಿಸಿ, ವಿನಾಶಕಾರಿ ಸ್ಪರ್ಧೆಯನ್ನು ಅಂತ್ಯಗೊಳಿಸಿ ಅದಕ್ಕೆ ಹೊಸ ಸೃಷ್ಟ್ಯಾತ್ಮಕ ಪಾತ್ರವನ್ನು ನಿರ್ಮಿಸಿದ್ದು ಒಂದು ದೊಡ್ಡ ಸಾಧನೆ. ಗ್ರಾಮಪ್ರದೇಶಗಳಿಗೂ ದುರ್ಬಲ ವರ್ಗಗಳಿಗೂ ವಿಮೆಯನ್ನು ವಿಸ್ತರಿಸುವ ಪ್ರಯತ್ನದಲ್ಲೂ ತಕ್ಕಮಟ್ಟಿನ ಸಾಫಲ್ಯ ದೊರಕಿದೆ. ನೈರೋಬಿ, ಕೌಲಲುಂಪುರ್, ಪಿನಾಂಗ್, ಮಲಕ್ಕಾ, ಸಿಂಗಪುರ, ಲಂಡನ್, ಫೀಜಿó, ಮಾರಿಷಸ್‍ಗಳಲ್ಲಿ ಸಂಸ್ಥೆಯ ಶಾಖೆಗಳನ್ನು ತೆರೆದು ಅಲ್ಲೂ ವ್ಯವಹಾರ ಮಾಡಲಾಯಿತು.

1957ರಿಂದ ವಿಮಾ ವ್ಯವಹಾರ ಏಕಪ್ರಕಾರವಾಗಿ ಹಾಗೂ ಗಮನಾರ್ಹವಾಗಿ ಬೆಳೆದಿದೆ. ರಾಷ್ಟ್ರೀಕರಣದ ಅನಂತರದ ಮೊದಲ ವರ್ಷದಲ್ಲಿ 1957ರಲ್ಲಿ, ಸಂಸ್ಥೆ ಮಾಡಿದ ಹೊಸ ವ್ಯವಹಾರ ರೂ. 278 ಕೋಟಿ ರೂ. ಇದ್ದದ್ದು 1970-71ರಲ್ಲಿ 1,295 ಕೋಟಿಗೂ 1971-72ರಲ್ಲಿ ರೂ. 2,062 ಕೋಟಿಗೂ 1973-74ರಲ್ಲಿ ರೂ. 2,575 ಕೋಟಿಗೂ ಏರಿತು. 1956ರಲ್ಲಿ ಜಾರಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ 47 ಲಕ್ಷ., 1974ರ ಮಾರ್ಚ್ ವೇಳೆಗೆ ಇದು 179 ಲಕ್ಷವನ್ನೂ ಮೀರಿತು. 1955ರಲ್ಲಿ ಜಾರಿಯಲ್ಲಿದ್ದ ಒಟ್ಟು ವ್ಯವಹಾರ ರೂ. 1,200 ಕೋಟಿ; 1974ರ ಮಾರ್ಚ್ 31ರಲ್ಲಿ ರೂ. 11,480 ಕೋಟಿ.

ಸಮಾಜದ ದುರ್ಬಲ ವರ್ಗಗಳಿಗೂ ವಿಮಾ ಸೌಲಭ್ಯವನ್ನೊದಗಿಸುವ ಉದ್ದೇಶದಿಂದ ಸಂಸ್ಥೆ ಜಾರಿಗೆ ತಂದಿರುವ ವಿಮಾ ಯೋಜನೆಗಳಲ್ಲಿ ಮುಖ್ಯವಾದ್ದು ಗುಂಪು ವಿಮೆ. ವೈಯಕ್ತಿಕವಾಗಿ ವಿಮೆ ಇಳಿಸಿ ನೇರವಾಗಿ ಪ್ರೀಮಿಯಂ ಕಟ್ಟಲಾರದವರ ಅನುಕೂಲಕ್ಕಾಗಿ ರೂಪಿಸಲಾಗಿರುವ ಈ ಯೋಜನೆ ಹೆಚ್ಚು ಹೆಚ್ಚು ಪ್ರಿಯವಾಗುತ್ತಿದೆ. ವಿಮಾ ಕಾರ್ಪೋರೇಷನಿನ ಹಣ ವಿನಿಯೋಜನೆಯ ನೀತಿಯನ್ನು ಪಾಲಿಸಿದಾರರ ಮತ್ತು ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು, ವ್ಯವಹಾರ ತತ್ತ್ವಗಳ ತಳಹದಿಯ ಮೇಲೆ ರೂಪಿಸಲಾಗಿದೆ. ಸಮಾಜ ಕಲ್ಯಾಣ ಕಾರ್ಯಗಳಲ್ಲಿ ವಿನಿಯೋಗವಾಗುವಂತೆ ಸ್ಥಳೀಯ ಸಂಸ್ಥೆಗಳಿಗೆ ಸಾಲ ನೀಡಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಲಪತ್ರಗಳು, ಪೌರಸಭೆ ಮತ್ತು ಬಂದರು ಟ್ರಸ್ಟ್ ಪ್ರತಿಭೂತಿಗಳು, ಕಂಪನಿಗಳ ಷೇರುಗಳು ಮತ್ತು ಡಿಬೆಂಚರುಗಳು, ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗಳ ಸಾಲಪತ್ರಗಳು ಮುಂತಾದವುಗಳಲ್ಲಿ ಇದರ ಹಣ ವಿನಿಯೋಜಿತವಾಗುತ್ತಿದೆ. ವಿದ್ಯುತ್ ಮತ್ತು ನೀರು ಪೂರೈಕೆ, ವಸತಿ ಮುಂತಾದ ಯೋಜನೆಗಳಲ್ಲಿ ವಿಮಾ ಕಾರ್ಪೋರೇಷನ್ ವಿಶೇಷ ಆಸಕ್ತಿ ವಹಿಸಿದೆ. 1964ರಲ್ಲಿ ಪಾಲಿಸಿದಾರರ ಸ್ವಂತ ಮನೆ ಯೋಜನೆಯನ್ನು ಪ್ರಾರಂಭಿಸಿ ಇದಕ್ಕಾಗಿ ಅವರಿಗೆ ಸಾಲ ನೀಡುತ್ತಿದೆ. ದೇಶದ ಯೋಜಿತ ಅಭಿವೃದ್ಧಿ ಕಾರ್ಯದಲ್ಲಿ ಅತ್ಯಂತ ದೊಡ್ಡ ವಿನಿಯೋಜನ ಸಂಸ್ಥೆ ಇದು.