ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀವಿಸಂದಣಿ ಪರಿಸರಶಾಸ್ತ್ರ
ಜೀವಿಸಂದಣಿ ಪರಿಸರಶಾಸ್ತ್ರ - ಗೊತ್ತಾದ ಪರಿಸರದಲ್ಲಿರುವ ಮತ್ತು ಒಂದು ಪ್ರಭೇದಕ್ಕೆ ಸೇರಿಸುವ ಜೀವಿಗಳ ಗುಂಪಿಗೆ ಅಥವಾ ಸ್ವೇಚ್ಛಾ ಸಂಗಮ ಪ್ರವೃತ್ತಿಯುಳ್ಳ ಜೀವಿಗಳ ಸಮುದಾಯಕ್ಕೆ ಜೀವಿಸಂದಣಿ ಎಂದು ಹೆಸರು. ಇದನ್ನು ಮೆಂಡೀಲಿಯನ್ ಸಮುದಾಯವೆಂದೂ ಕರೆಯುವರು. ಒಂದೊಂದು ಜೀವಿಸಂದಣಿಗೂ ಅದರದೇ ಆದ ವಿಶಿಷ್ಟ ಗುಣಗಳುಂಟು. ಇಂಥ ಜೀವಿಸಂದಣಿಯ ಮತ್ತು ಅದರ ಪರಿಸರದ ಅಭ್ಯಾಸವೇ ಜೀವಿಸಂದಣಿ ಪರಿಸರಶಾಸ್ತ್ರ (ಪಾಪ್ಯುಲೇಷನ್ ಈಕಾಲಜಿ). ಜೀವಿಗಳ ಬೆಳೆವಣಿಗೆಗೆ ಬೇಕಾದ ಆಂತರಿಕ ಸಂಬಂಧಗಳ ಹಾಗೂ ಇತಿಮಿತಿಗಳ ಅಭ್ಯಾಸಗಳನ್ನು ಕೂಡ ಈ ಶಾಸ್ತ್ರ ಒಳಗೊಂಡಿದೆ.
ಪರಿಸರಕ್ಕೆ ಹೊಂದಿಕೊಳ್ಳುವ ಗುಣಗಳು ಜೀವಿಸಂದಣಿಗಳಿಗೆ ಅನುವಂಶೀಯವಾಗಿ ಬರುತ್ತವೆ. ಇಂಥ ಗುಣಗಳಲ್ಲಿ ಮುಖ್ಯವಾದವು; ಪರಿಸರಕ್ಕೆ ಹೊಂದಿಕೊಳ್ಳುವಿಕೆ, ಪ್ರಜನನ ಅರ್ಹತೆ ಮತ್ತು ಸಂತತಿಯ ದೃಢತೆ (ಪರ್ಸಿಸ್ಟೆನ್ಸ್ ಆಫ್ ರಿಪ್ರೊಡಕ್ಷನ್) ಜೀವಿಗಳು ಪರಿಸರದಲ್ಲಿ ಜೀವಿಸುತ್ತವೆ. ನಿರ್ಜೀವ ಭೌತ ರಾಸಾಯನಿಕ ಪರಿಸರದ ಮತ್ತು ಜೀವಿಸಮುದಾಯಗಳ ನಡುವೆ ನಿಕಟ ಸಂಬಂಧ ವ್ಯವಸ್ಥೆ ಉಂಟು. ಈ ವ್ಯವಸ್ಥೆಗೆ ಪರಿಸರವ್ಯವಸ್ಥೆ (ಈಕೊಸಿಸ್ಟಮ್) ಎಂದು ಹೆಸರು. ಇದರಲ್ಲಿ ಶಕ್ತಿಯು ಉತ್ಪಾದಕಗಳಿಂದ ಅನುಭೋಗಿಗಳಿಗೆ ಒಂದು ಗೊತ್ತಾದ ಹಾದಿಯಲ್ಲಿ ಹರಿದು ಹೋಗುತ್ತದೆ. ಇದರಿಂದ ಪೌಷ್ಟಿಕ ರಚನೆ ರೂಪಿತವಾಗುವುದು. ಈ ವ್ಯವಸ್ಥೆಯಲ್ಲಿ ಪರಿಸರದಿಂದ ಜೀವಿಗಳಿಗೆ ಮತ್ತು ಜೀವಿಗಳಿಂದ ಪುನಃ ಪರಿಸರಕ್ಕೆ ರಾಸಾಯನಿಕ ಪದಾರ್ಥಗಳು ಚಕ್ರೀಯ ರೀತಿಯಲ್ಲಿ ಸಾಗುವುವು. ಆದ್ದರಿಂದ ಪರಿಸರವ್ಯವಸ್ಥೆಯಲ್ಲಿ ಜೀವಿಗಳು ಮತ್ತು ನಿರ್ಜೀವ ವಸ್ತುಗಳು ತಮ್ಮ ಪ್ರಭಾವವನ್ನು ಪರಸ್ಪರ ಬೀರುವುವು. ಇವೆರಡೂ ಪರಿಸರದ ಎರಡು ಮುಖಗಳು. ಪರಿಸರವ್ಯವಸ್ಥೆಯ ವಿಸ್ತಾರಕ್ಕೆ ಒಂದು ನಿಗದಿಯಿಲ್ಲ. ಅದು ಬಹು ಸಣ್ಣದಾಗಿರಬಹುದು ಅಥವಾ ಬಹು ದೊಡ್ಡದಾಗಿರಬಹುದು. ಯಾವುದೇ ಪರಿಸರದಲ್ಲಿ ಜೀವಿಸುವ ಒಂದು ಜೀವಿ ಅಥವಾ ಒಂದು ಜೊತೆ ಜೀವಿಗಳಿಂದ ಹುಟ್ಟಿದ ಸಂತತಿಯಲ್ಲಿ ಎಲ್ಲ ಜೀವಿಗಳೂ ಬದುಕಿ ಉಳಿದು ಇವು ಪುನಃ ತಮ್ಮ ಸಂತತಿಯನ್ನು ಬೆಳೆಸುತ್ತಹೋದರೆ ಜೀವಿಗಳು ಜ್ಯಾಮಿತೀಯವಾಗಿ ಹೆಚ್ಚಾಗುತ್ತ ಹೋಗುತ್ತವೆ. ನಿಸರ್ಗದಲ್ಲಿ ಈ ರೀತಿ ಆಗುತ್ತಿದೆಯೇ ? ಇಲ್ಲದಿದ್ದರೆ ಕಾರಣಗಳಾವುವು ? ಇವನ್ನು ಉದಾಹರಣೆಗಳಿಂದ ತಿಳಿಯೋಣ. ಆನೆಗಳ ಗರ್ಭಾವಸ್ಥೆಯ ಕಾಲ ಬಲು ಹೆಚ್ಚು. ಅವು ತಮ್ಮ ಜೀವಮಾನದಲ್ಲಿ ಕೇವಲ ಕೆಲವೇ ಮರಿಗಳನ್ನು ಹಾಕುವುವು. ಡಾರ್ವಿನ್ನನ ಲೆಕ್ಕಾಚಾರದ ಪ್ರಕಾರ, ಒಂದು ಜೊತೆ ಆನೆಗಳ ಸಂತತಿಯಲ್ಲಿ ಒಂದು ಪ್ರಾಣಿಯೂ ಅಳಿಯದೆ ಸಂತತಿ ಮುಂದುವರಿದರೆ ಅವುಗಳ ಸಂತತಿಯ ಸಂಖ್ಯೆ 750 ವರ್ಷಗಳಲ್ಲಿ ಸುಮಾರು 19 ದಶಲಕ್ಷವನ್ನು ಮೀರಬಹುದು. ಇದೇ ಲೆಕ್ಕಾಚಾರದ ಪ್ರಕಾರ, ಇಂಗ್ಲಿಷ್ ಗುಬ್ಬಚ್ಚಿಯನ್ನು ಅಮೆರಿಕಕ್ಕೆ ತಂದಾಗ ಒಂದು ಜೊತೆ ಗುಬ್ಬಚ್ಚಿಗಳ ವಂಶ ಒಂದು ದಶಕದಲ್ಲಿ 275,983,698ರಷ್ಟಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಹಾಗೂ 1916-20ರಲ್ಲಿ 100 ಎಕರೆಗೆ ಸುಮರು 575 ಪಕ್ಷಿಗಳಿವೆ ಎಂದು ಊಹಿಸಲಾಗಿತ್ತು. ಆದರೆ 1916-20ರ ಅವಧಿಯಲ್ಲಿ 100 ಎಕರೆಗೆ ಕೇವಲ 18ರಿಂದ 26 ಪಕ್ಷಿಗಳು ಮಾತ್ರ ಇದ್ದುದು ಕಂಡುಬಂದಿತು. ಅಂದರೆ ಈ ಸಂಖ್ಯೆ ಅಂದಾಜಿನ ಶೇಕಡ 5ಕ್ಕಿಂತಲೂ ಕಡಿಮೆ ಇತ್ತು. ಜ್ಯಾಮಿತೀಯವಾಗಿ ಹೆಚ್ಚಾಗಬೇಕಾಗಿದ್ದ ಗುಬ್ಬಚ್ಚಿಯ ಸಂಖ್ಯೆಯನ್ನು ಕುಗ್ಗಿಸಲು ಅನೇಕ ಪ್ರಬಲ ಕಾರಣಗಳಿದ್ದಿರಬೇಕು. ಉದಾಹರಣೆಗೆ : 1 ವ್ಯವಸಾಯ ಪದ್ಧತಿಯ ಬದಲಾವಣೆಯಿಂದ ಅಥವಾ ಬೇರೆ ಕಾರಣದಿಂದ ಗುಬ್ಬಚ್ಚಿಗಳಿಗೆ ಬೇಕಾಗುವ ಆಹಾರದ ಕೊರತೆ ; 2 ಗುಬ್ಬಚ್ಚಿಗಳನ್ನು ತಿನ್ನುವ ಗೂಬೆ ಮತ್ತು ಗಿಡುಗಗಳ ಸಂಖ್ಯೆಯ ಏರಿಕೆ : 3 ಗುಬ್ಬಚ್ಚಿಗಳಲ್ಲೇ ಆಹಾರಕ್ಕಾಗಿ ಮತ್ತು ಗೂಡು ಕಟ್ಟುವ ನಿವೇಶನಗಳಿಗಾಗಿ ಸ್ಪರ್ಧೆ ಇತ್ಯಾದಿ. ಆದ್ದರಿಂದ ಒಂದು ಜೀವಿಸಂದಣಿಯ ಬೆಳೆವಣಿಗೆಗೆ ಎರಡು ವಿರುದ್ಧ ಬಲಗಳಿರಬೇಕೆಂದು ವ್ಯಕ್ತವಾಗುತ್ತದೆ. 1 ಒಂದು ಗೊತ್ತಾದ ದರದಲ್ಲಿ ಸಂತಾನೋತ್ಪತ್ತಿಯನ್ನು ಮಾಡುವ ಚೈತನ್ಯ. ಈ ಕ್ರಿಯೆ ಪ್ರತಿಯೊಂದು ಪ್ರಭೇದ ಸಂದಣಿಯ ಹುಟ್ಟುಗುಣ ಹಾಗೂ ವಿಶೇಷ ಗುಣ. 2 ಇದಕ್ಕೆ ವಿರೋಧವಾದುದು ಹುಟ್ಟಿದ ಜೀವಿ ಸಾಯಲೇಬೇಕಾದ ಗುಣ ಮತ್ತು ವಯೋಮಿತಿ. ಬೆಳೆವಣಿಗೆಗೆ ವಿರೋಧವಾದ ಬಲಗಳು ಜೀವಿ ವಾಸಿಸುವ ಭೌತ ಮತ್ತು ಜೈವಿಕಪರಿಸರಗಳೆರಡರಲ್ಲೂ ಇವೆ. ಇತಿ-ಮಿತಿಗೊಳಿಸುವ ಈ ಬಲಗಳನ್ನು ಆರ್. ಚಾಪ್‍ಮನ್ (1) ಜೈವಿಕ ವಿಭವ ಅಥವಾ ಪ್ರಜನನ ವಿಭವ ಮತ್ತು (2) ಪರಿಸರದ ಪ್ರತಿರೋಧ ಎಂದು ಕರೆಯುತ್ತಾನೆ. ಈ ಎರಡು ಬಲಗಳ ಚಟುವಟಕೆಗಳು ಜೀವಿಸಂದಣಿಯ ಎಲ್ಲ ಗುಣವಿಶೇಷಗಳನ್ನೂ ಒಳಗೊಂಡಿವೆ. ಆದ್ದರಿಂದ ಜೀವಿಸಂದಣಿಯ ಅಧ್ಯಯನದಲ್ಲಿ ಮುಂದೆ ಪಟ್ಟಿಮಾಡಿರುವ ಲಕ್ಷಣಗಳನ್ನು ತಿಳಿಯುವುದು ಅವಶ್ಯಕ.
1 ಜೀವಿಸಂದಣಿಯ ಸಾಂದ್ರತೆ 2 ಬೆಳೆವಣಿಗೆಯ ದರ 3 ಬೆಳೆವಣಿಗೆಯ ರೂಪ 4 ಸಂದಣಿಯ ಏರಿಳಿತಗಳು ಮತ್ತು ಚಕ್ರೀಯ ಆಂದೋಲನಗಳು 5 ಪ್ರಜನನ ವಿಭವ ಅಥವಾ ಜೈವಿಕ ವಿಭವ 6 ಜನನ 7 ಮರಣ 8 ಸಂದಣಿಯಲ್ಲಿ ವಯೋವಿತರಣೆ 9 ಸಂದಣಿಯ ರಚನೆ 10 ಎರಡು ಸಂದಣಿಗಳ ನಡುವಣ ಅಂತರಕ್ರಿಯೆಯ ಬಗೆಗಳು
1 ಜೀವಿಸಂದಣಿಯ ಸಾಂದ್ರತೆ : ಯಾವುದೋ ಒಂದು ನಿರ್ದಿಷ್ಟ ಸ್ಥಳವನ್ನು ಆಕ್ರಮಿಸಿರುವ ಜೀವಿಸಂದಣಿಯ ಗಾತ್ರಕ್ಕೆ ಜೀವಿಸಂದಣಿಯ ಸಾಂದ್ರತೆ ಎಂದು ಹೆಸರು. ಇದನ್ನು ಒಂದು ಸ್ಥಳದಲ್ಲಿರುವ ಜೀವಿಗಳ ಸಂಖ್ಯೆಗಳಲ್ಲಾಗಲಿ ಅವುಗಳ ಒಟ್ಟು ಜೀವರಾಶಿಗಳ ರೂಪದಲ್ಲಾಗಲಿ ವಿವರಿಸಬಹುದು. ಅನೇಕ ಸಂದರ್ಭಗಳಲ್ಲಿ ಸಂದಣಿ ಬದಲಾಯಿಸುತ್ತಿದೆಯೇ ಎಂದು ತಿಳಿಯುವುದು ಆವಶ್ಯಕ. ಆಗ ಸಾಪೇಕ್ಷ ವಿಪುಲತೆ (ರಿಲೆಟಿವ್ ಅಬಂಡೆನ್ಸ್) ಬಹಳ ಉಪಯೋಗವಾಗುವುದು. ಸಂದಣಿಯ ಸಾಂದ್ರತೆ ಬದಲಾಗುವುದಾದರೂ ಈ ಬದಲಾವಣೆ ಏಕ ಪ್ರಕಾರವಲ್ಲ. ಜೀವಿಸಂದಣಿಯ ಸಾಂದ್ರತೆಯನ್ನು ತಿಳಿಯಲು ಅನೇಕ ಮಾರ್ಗಗಳಿವೆ. ಅದನ್ನು ವಿವರಿಸಲು ವಿಶೇಷ ರೀತಿಯ ಅಳತೆಗೋಲುಗಳೂ ಮತ್ತು ಪದಗಳೂ ಉಂಟು. ಇಷ್ಟಾದರೂ ಇವೆಲ್ಲಕ್ಕೂ ಮಿತಿಗಳಿದ್ದೇ ಇವೆ. ಸಾಂದ್ರತೆಯನ್ನು ಗೂತ್ತುಮಾಡುವಾಗ ಇರುವ ಸಮಸ್ಯೆಗಳು ಅನೇಕ. ಇವುಗಳಲ್ಲಿ ಮುಖ್ಯವಾದ್ದು ಜೀವಿಸಂದಣಿಯ ಪ್ರಸಾರ. ಅನೇಕ ಸಂದಣಿಗಳಲ್ಲಿ ಜೀವಿಗಳು ಗುಂಪಾಗಿರದೆ ವಿಯುಕ್ತವಾಗಿರುತ್ತವೆ. ಇಂಥ ಸಂದರ್ಭಗಳಲ್ಲಿ ಸಾಂದ್ರತೆಯನ್ನು ತಿಳಿಯುವುದು ಕಷ್ಟ. ಸಾಂದ್ರತೆಯನ್ನು ಅಭ್ಯಸಿಸುವಾಗ ಯಾವ ಜೀವಿಗಳು ಹೇರಳ, ಸಾಮಾನ್ಯ ಮತ್ತು ಅಪರೂಪ ಎಂದು ತಿಳಿಯುವುದು ಆವಶ್ಯಕ. ಜೀವಿ ಸಂದಣಿಯ ಸಾಂದ್ರತೆಯನ್ನು ಅಭ್ಯಸಿಸಲು ಇರುವ ವಿಧಾನಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಿದೆ.
(i) ಒಂದು ಪ್ರದೇಶದ ಜೀವಿಗಳನ್ನೆಲ್ಲ ಎಣಿಕೆ ಮಾಡಿ ಒಟ್ಟು ಸಂಖ್ಯೆಯನ್ನು ತಿಳಿಯುವುದು. ದೊಡ್ಡಗಾತ್ರದ ಜೀವಿಗಳಲ್ಲಿ ಅಥವಾ ಮಂದೆಗಳಲ್ಲಿ ವಾಸಿಸುವ ಜೀವಿಗಳಲ್ಲಿ ಈ ವಿಧಾನ ಸುಲಭಸಾಧ್ಯವಾದ್ದು.
(ii) ಒಂದು ಪ್ರದೇಶದ ಒಂದು ಭಾಗವನ್ನು ಮಾದರಿಯಾಗಿ ತೆಗೆದುಕೊಂಡು ಅಲ್ಲಿರುವ ಜೀವಿಗಳನ್ನು ಎಣಿಕೆ ಮಾಡುವುದು ಮತ್ತು ತೂಕ ಮಾಡಿ ಒಟ್ಟು ಪ್ರದೇಶದಲ್ಲಿರುವ ಜೀವಿಗಳನ್ನು ಗೊತ್ತುಮಾಡುವುದು.
(iii) ಒಂದು ಜೀವಿಸಂದಣಿಯ ಕೆಲವು ಜೀವಿಗಳಿಗೆ ಯಾವುದಾದರೊಂದು ರೀತಿಯಿಂದ ಗುರುತುಮಾಡಿ ಅವನ್ನು ಬಿಟ್ಟು ಗುರುತು ಮಾಡಿರುವ ಪ್ರಾಣಿಗಳ ಪ್ರಮಾಣವನ್ನು ಬೇರೆಯ ಮಾದರಿ ಸಂದಣಿಯಲ್ಲಿ ಉಪಯೋಗಿಸಿ ಒಟ್ಟು ಜೀವಿಸಂದಣಿಯನ್ನು ಗೊತ್ತುಮಾಡುವುದು.
ಉದಾಹರಣೆ : 100 ಪ್ರಾಣಿಗಳನ್ನು ಗುರುತುಮಾಡಿ ಅವನ್ನು ಬಿಟ್ಟು ಆಮೇಲೆ ಇನ್ನೊಂದು ಮಾದರಿ ಗುಂಪಿನಲ್ಲಿ ಗುರುತು ಮಾಡಿರುವ 10 ಪ್ರಾಣಿಗಳು ಕಂಡುಬಂದರೆ ಆಗ ಸಂದಣಿಯ ಸಂಖ್ಯೆ. =ಅಥವಾ ಸಂದಣಿ=1000 ಎಂದು ತಿಳಿಯುವುದು. ಈ ವಿಧಾನ ಸಣ್ಣ ಸಂಖ್ಯೆಯ ಸಂದಣಿಗೆ ಉತ್ತಮ. ಅತಿವೇಗದಲ್ಲಿ ಬದಲಾಯಿಸುತ್ತಿರುವ ಸಂದಣಿಗೆ ಸರಿಯಲ್ಲ. 2 ಬೆಳೆವಣಿಗೆಯ ದರ : ಜೀವಿಸಂದಣಿ ಬದಲಾವಣೆ ಹೊಂದುವುದು ಸ್ವಾಭಾವಿಕ. ಆದ್ದರಿಂದ ಯಾವುದೇ ಒಂದು ಕಾಲದಲ್ಲಿ ಇರುವ ಅದರ ಗಾತ್ರ. ರಚನೆ ಮತ್ತು ಅದು ಬದಲಾಯಿಸುವ ರೀತಿಗಳನ್ನು ತಿಳಿಯುವುದು ಆವಶ್ಯಕ. ಜೀವಿ ಸಂದಣಿಯ ಅನೇಕ ಗುಣಗಳು ಅದರ ಬೆಳೆವಣಿಗೆಯ ದರಕ್ಕೆ ಸಂಬಂಧಿಸಿದವು. ಗೊತ್ತಾದ ಕಾಲದಲ್ಲಿ ಒಂದು ಸಂದಣಿಗೆ ಸೇರಿದ ಜೀವಿಗಳ ಸಂಖ್ಯೆಯೇ ಬೆಳೆವಣಿಗೆಯ ದರ. ನಿರ್ದಿಷ್ಟ ಕಾಲದಲ್ಲಿ ಹೆಚ್ಚಿದ ಜೀವಿಗಳ ಸಂಖ್ಯೆಯನ್ನು ಸಂದಣಿ ಹೆಚ್ಚಿದ ಕಾಲದ ಅವಧಿಯಿಂದ ಭಾಗಿಸಿದಾಗ ಬರುವ ಫಲಿತಾಂಶವೇ ಬೆಳೆವಣಿಯ ದರ. ಬೆಳೆವಣಿಗೆಯ ದರವನ್ನು ತಿಳಿಯಲು (ಓ/(ಣ ಸೂತ್ರವನ್ನು ಉಪಯೋಗಿಸುವರು. (ಓ — ಜೀವಿಗಳ ಮೊದಲಿನ ಸಂಖ್ಯೆ, ಣ-ಕಾಲ, (ಓ-ಬದಲಾವಣೆಯಾದ ಜೀವಿಗಳ ಸಂಖ್ಯೆ. ಉದಾ : ಒಂದು ಕೊಳದಲ್ಲಿ 100 ಪ್ರೋಟೊಜೋವ ಜೀವಿಗಳು ವಿಭಜನೆಯ ಮೂಲಕ ಒಂದು ಗಂಟೆಯ ಅನಂತರ 300 ಜೀವಿಗಳಾಗುವುವು ಎಂದು ಊಹಿಸಿದರೆ. ಆಗ ಓ (ಮೊದಲಿನ ಸಂಖ್ಯೆ ) 100 (ಓ (ಬದಲಾಣೆಯಾದ ಸಂಖ್ಯೆ ) 200 (ಓ/(ಣ (ಒಂದು ಗೊತ್ತಾದ ಕಾಲದಲ್ಲಿ ಬದಲಾವಣೆಯಾದ ಸರಾಸರಿ ದರ) = 200 (ಒಂದು ಗಂಟೆಯಲ್ಲಿ) ಒಂದು ಗೊತ್ತಾದ ಕಾಲದಲ್ಲಿ ಒಂದು ಜೀವಿ ಬದಲಾವಣೆಯಾದ ಸಾಪೇಕ್ಷ ದರವನ್ನು (ಓ/(ಓ(ಣ) ಎಂಬ ಸೂತ್ರದಿಂದ ತಿಳಿಯಬಹುದು. (ಓ/(ಓ(ಣ) =2 (ಒಂದು ಗಂಟೆಗೆ ಒಂದು ಜೀವಿಗೆ ಅಂದರೆ 200 ರಷ್ಟು ಹೆಚ್ಚು) ಕೆಲವು ಸಂದರ್ಭಗಳಲ್ಲಿ ತಾತ್‍ಕ್ಷಣಿಕ ದರಗಳು ಬೇಕಾಗುವುವು. ಇದನ್ನು ತಿಳಿಯಲು ಜಓ/ಜಣ ಅವಕಲನಾಂಕವನ್ನು ಉಪಯೋಗಿಸಬಹುದು. 3 ಬೆಳೆವಣಿಗೆಯ ರೂಪ : ಯೀಸ್ಟ್ ಜೀವಿಗಳ ಮೇಲೆ ಕಾರ್ಲ್‍ಸನ್ ನಡೆಸಿದ ಪ್ರಯೋಗಗಳ ಫಲಿತಾಂಶಗಳನ್ನು ಉಪಯೋಗಿಸಿ ಆರ್. ಪೆರ್ಲ್ ಎಂಬಾತ ಒಂದು ಸಂದಣಿ ಬೆಳೆಯುವ ರೀತಿಯನ್ನು ವಿವರಿಸುತ್ತಾನೆ. ಯೀಸ್ಟ್ ಸಸ್ಯದ ಬೆಳೆವಣಿಗೆಯ ದರ ಮೊದಲ ಹಂತದಲ್ಲಿ ಬಲು ನಿಧಾನ. ಪ್ರಜನನದ ಫಲವಾಗಿ ಜೀವಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿ ಒಂದು ಮೇಲಿನ ಮಿತಿಯನ್ನು ಮುಟ್ಟುತ್ತದೆ. ಈ ಹಂತದಲ್ಲಿ ಕೆಲವು ಕಾಲ ಇದ್ದು ಸಮತೋಲವನ್ನು ಪಡೆಯುವುದು. ಈ ರೀತಿಯ ಬೆಳೆವಣಿಗೆಯಲ್ಲಿ ಎರಡು ಅಂಶಗಳು ಕಂಡುಬರುತ್ತವೆ. (i) ಮೊದಲ ಮತ್ತು ಲೇಲಿನ ಹಂತಗಳಲ್ಲಿ ಯೀಸ್ಟ್‍ಗಳ ಸಂಖ್ಯೆ : (ii) ಬೆಳೆವಣಿಗೆಗೆ ತೆಗೆದುಕೊಂಡ ಕಾಲ. ಯೀಸ್ಟ್‍ಗಳ ಬೆಳೆವಣಿಗೆಯನ್ನು ಗ್ರಾಫ್ ರೀತಿಯಲ್ಲಿ ಬರೆದರೆ S-ಆಕಾರದ ರೇಖೆ ರೂಪಿತವಾಗುತ್ತದೆ (ಚಿತ್ರ 1). ಇದಕ್ಕೆ ಸಿಗ್ಮಾಯಿಡ್ ರೇಖೆ ಎಂದು ಹೆಸರು. ಇದನ್ನು ಸಂದಣಿಯ ಬೆಳೆವಣಿಗೆಯ ರೇಖೆ ಎಂದೂ ಕರೆಯುವರು. ಬೆಳೆವಣಿಗೆ ಯಾವಾಗ ಮೇಲ್ಮಟ್ಟವನ್ನು ಮುಟ್ಟಿತು. ಹಾಗೂ ಯಾವ ದರದಲ್ಲಿ ಹೆಚ್ಚು ಕಡಿಮೆಯಾಯಿತು ಎಂಬುದನ್ನು ತಿಳಿಯಲು ಬೆಳೆವಣಿಗೆಯ ದರದ ರೇಖೆಯನ್ನು ರಚಿಸಿ ತಿಳಿಯಬಹುದು. ಒಂದು ಪರಿಸರ ಯಾವಾಗಲೂ ಒಂದೇ ಗಾತ್ರದ ಸಂದಣಿಯನ್ನು ಪೋಷಿಸಲಾರದು. ಅಲ್ಲದೆ ಪರಿಸರದಲ್ಲಿನ ಸಂದಣಿ ತನ್ನ ಬೆಳೆವಣಿಗೆಯಲ್ಲಿ ಒಂದು ಗರಿಷ್ಟ ಮಿತಿಯನ್ನು ಪ್ರದರ್ಶಿಸುತ್ತದೆ. ಬೆಳೆವಣಿಗೆಯ ಕಾಲದಲ್ಲಿ ಒಂದು ಸಂದಣಿ ಆಯಾ ಪರಿಸರಕ್ಕೆ ಇರುವ ವಿಭವದ ಗರಿಷ್ಠ ಮಟ್ಟವು ಮುಟ್ಟಿ ಪರಿಸರದ ಪ್ರತಿರೋಧದಿಂದ ಸಮತೋಲವನ್ನು ಪಡೆಯುವುದು ಈ ಗರಿಷ್ಠ ಮಟ್ಟವನ್ನು ಮೀರಿ ಸಂದಣಿ ಬೆಳೆಯಲಾರದು. S ಆಕಾರದ ವಕ್ರರೇಖೆಯ ಮೇಲ್ಮಟ್ಟಕ್ಕೆ ಅನಂತಸ್ವರ್ಶಕ ಮಟ್ಟವೆಂದೂ (ಆಸಿಮ್‍ಟೋಟ್ ಲೆವೆಲ್) ಗರಿಷ್ಠ ಮಟ್ಟದ ಸಂದಣಿಯನ್ನು ತನ್ನ ಹಿಡಿತದಲ್ಲಿಟ್ಟು ಪೋಷಿಸುವ ಪರಿಸರದ ವಿಭವಕ್ಕೆ ಧಾರಣಸಾಮಥ್ರ್ಯ (ಕ್ಯಾರಿಯಿಂಗ್ ಕೆಪ್ಯಾಸಿಟಿ) ಎಂದೂ ಹೆಸರುಂಟು. ಸಂದಣಿಯ ಸಮತೋಲದ ಹಂತದಲ್ಲಿ ಸಂದಣಿಯಲ್ಲಿ ವ್ಯಕ್ತ ಬದಲಾವಣೆಗಳೇನೂ ಆಗುವುದಿಲ್ಲ. ಏಕೆಂದರೆ ಹೊಸ ಪೀಳಿಗೆಯ ಜೀವಿಗಳು ಸಂದಣಿಯನ್ನು ಸೇರುತ್ತಿದ್ದಂತೆ ಕೆಲವು ಜೀವಿಗಳು ಸಾವಿನಿಂದ ಅಳಿಯುತ್ತವೆ. ಆದ್ದರಿಂದ ಜನನ ಮತ್ತು ಮರಣ ದರಗಳು ಸಂದಣಿಯನ್ನು ಸಮತೋಲದಲ್ಲಿರಿಸುತ್ತವೆ.
ಚಿತ್ರ-1
ಜನನ ಹಾಗೂ ಮರಣ ದರಗಳ ಸಮತೋಲ ತಪ್ಪಿದಾಗ ಸಂದಣಿಯಲ್ಲಿ ಬದಲಾವಣೆಗಳಾಗುವುವು. ಜನನ ದರ ಮರಣ ದರವನ್ನು ಮೀರಿದಾಗ ಸಂದಣಿ ಬೆಳೆಯುತ್ತದೆ. ಅಥವಾ ಮರಣ ದರ ಹೆಚ್ಚಿದಾಗ ಸಂದಣಿ ಕುಗ್ಗುತ್ತದೆ.
ಚಿತ್ರ-2
ಆದ್ದರಿಂದ ಜನನ ದರ ಬೆಳೆವಣಿಗೆಯ ರೇಖೆಯನ್ನು ಮೇಲಕ್ಕೂ ಮರಣ ದರ ಕೆಳಕ್ಕೂ ತಳ್ಳುತ್ತವೆ. ಈ ಎರಡು ಪ್ರಾಥಮಿಕ ಹಾಗೂ ವ್ಯತಿರಿಕ್ತ ಬಲಗಳ ವಿಶೇಷತೆಯನ್ನು ತಿಳಿಯಲು ಅನೇಕ ಅಂಶಗಳು ಅಗತ್ಯ. ಸಿಗ್ಮಾಯಿಡ್ ರೇಖೆ ಸಾಮಾನ್ಯವಾಗಿ ಎಲ್ಲ ಜೀವಿ ಸಂದಣಿಗಳ ಬೆಳೆವಣಿಗೆಯಲ್ಲೂ ಕಂಡುಬರುತ್ತದೆ. ಕೆಲವು ಸಂದರ್ಭಗಳಲ್ಲಿ ಒಂದು ಸಂದಣಿ ಅತಿವೇಗ ದರದಲ್ಲಿ ಬೆಳೆದು. ಸಮತೋಲನೆಯ ಹಂತವನ್ನು ಮುಟ್ಟದೆ ಅನೇಕ ಜೀವಿಗಳು ಸಾಯುವುದರಿಂದ ಬೆಳೆವಣಿಗೆ ತನ್ನ ದರದಲ್ಲಿ ತತ್‍ಕ್ಷಣ ಕುಗ್ಗುವುದು (ಚಿತ್ರ 2). ಈ ತೆರೆನ ಬೆಳೆವಣಿಗೆಯನ್ನು ಗ್ರಾಫ್ ರೀತಿ ಚಿತ್ರಸಿದಾಗ ಎ - ಆಕಾರದ ರೇಖೆ ರೂಪಿತವಾಗುತ್ತದೆ. ಇದಕ್ಕೆ ಎ-ಆಕಾರದ ಬೆಳೆವಣಿಗೆಯ ರೇಖೆ ಎಂದು ಹೆಸರು. ಇಂಥ ಬೆಳೆವಣಿಗೆಯನ್ನು ಏಕವಾರ್ಷಿಕ ಸಸ್ಯಗಳಲ್ಲಿ ಮತ್ತು ಕೀಟಗಳಲ್ಲಿ ಕಾಣಬಹುದು. 4 ಸಂದಣಿಯ ಏರಿಳಿತಗಳು ಮತು ಚಕ್ರೀಯ ಆಂದೋಲನಗಳು : ಸಂದಣಿಗಳು ಪೂರ್ಣ ಬೆಳೆದು ಪರಿಸರದ ಧಾರಣಸಾಮಥ್ರ್ಯದ ಗರಿಷ್ಠ ಮಟ್ಟವನ್ನು ಮುಟ್ಟಿದ ಮೇಲೂ ಆ ಮಟ್ಟಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಬಹುದು. ಈ ವ್ಯತ್ಯಾಸಗಳು ಭೌತಪರಿಸರದ ಬದಲಾವಣೆಗಳಿಂದ ಅಥವಾ ಅಂತರ-ಸಂದಣಿ ಕ್ರಿಯೆಗಳಿಂದ ಅಥವಾ ಈ ಎರಡೂ ಅಂಶಗಳ ಕ್ರಿಯೆಗಳಿಂದ ಉಂಟಾಗಬಹುದು. ಸಂದಣಿಯ ಸಂಖ್ಯೆ ಏರಿಳಿತಗಳು ಶ್ರಾಯಕವಗಿರಬಹುದು ಇಲ್ಲವೆ ವಾರ್ಷಿಕವಾಗಿರಬಹುದು. ಶ್ರಾಯಕ ಬದಲಾವಣೆಗಳು ಮುಖ್ಯವಾಗಿ ಪರಿಸರದ ವ್ಯತ್ಯಾಸಗಳಿಂದ ಹಾಗೂ ಜೀವನ ಚರಿತ್ರೆಯ ಹೊಂದಾಣಿಕೆಗಳಿಂದ ಉಂಟಾಗುತ್ತವೆ. ವಾರ್ಷಿಕ ಬದಲಾವಣೆಗಳಾದರೊ ಭೌತಪರಿಸರದಲ್ಲಿ ಆಗುವ ವ್ಯತ್ಯಾಸಗಳಿಂದ ಅಥವಾ ಸಂದಣಿಯ ಹೊರಗೆ ನಡೆಯುವ ಅಂತರಕ್ರಿಯೆಗಳಿಂದ ಮತ್ತು ಅಂತರಸಂದಣಿಯ ಕ್ರಿಯೆಗಳಿಂದ ಆಗುವುವು. ಸಾಮಾನ್ಯವಾಗಿ ಭೌತ ಪರಿಸರದ ವ್ಯತ್ಯಾಸಗಳು ಅನಿರೀಕ್ಷಿತ. ಇವು ಒಂದು ಅಥವಾ ಅನೇಕ ಪರಿಸ್ಥಿತಿಗಳಿಗೆ ಸಂಬಂಧಿಸಿವೆ. ಆದರೆ ಅಂತರಸಂದಣಿಯ ಕ್ರಿಯೆಗಳಿಂದ ಉಂಟಾಗುವ ವ್ಯತ್ಯಾಸಗಳು ಕ್ರಮವಾಗಿ ಆಗುವುವು. ಆದ್ದರಿಂದ ಅವನ್ನು ಚಕ್ರೀಯ ಆಂದೋಲನಗಳೆಂದು ಕರೆಯುವರು. ಕ್ರಮವಾದ ಏರಿಳಿತಗಳನ್ನು ತೋರುವ ಪ್ರಭೇದ ಸಂದಣಿಗಳಿಗೆ ಚಕ್ರೀಯ ಪ್ರಭೇದಗಳೆಂದು ಹೆಸರು. ಸಸ್ತನಿ, ಪಕ್ಷಿ, ಮೀನು ಮತ್ತು ಕೀಟಗಳಲ್ಲಿ ಸಂದಣಿಯ ಸಂಖ್ಯೆಯಲ್ಲಿ ಚಕ್ರೀಯ ಆಂದೋಲನಗಳನ್ನು ಪತ್ತೆ ಮಾಡಲಾಗಿದೆ. ಕೆನಡದ ಹಡ್ಸನ್ ಕೊಲ್ಲಿ ಪ್ರದೇಶದಲ್ಲಿ ಬದಲಾಯಿಸುತ್ತಿರುವ ಮೊಲದ ಸಂಖ್ಯೆ ಒಂದು ಒಳ್ಳೆಯ ನಿದರ್ಶನ. ಇಲ್ಲಿನ ಮೊಲಗಳ ಸಂದಣಿ 9-10 ವರ್ಷಗಳಿಗೊಂದಾವರ್ತಿ ಬೆಳೆವಣಿಗೆಯ ಗರಿಷ್ಠ ಮಟ್ಟವನ್ನು ಮುಟ್ಟುವುದೆಂದು ತಿಳಿದುಬಂದಿದೆ. ಈ ರೀತಿಯ ಚಕ್ರೀಯ ಏರಿಳಿತಗಳನ್ನು ಮಿಕ್ಕಪ್ರಾಣಿಗಳಲ್ಲಿಯೂ ಕಾಣಬಹುದು.
ಸಂದಣಿ ನಿಯಂತ್ರಣ ಮತು ಸಾಂದ್ರತಾವಲಂಬಿ ಮತ್ತು ಸಾಂದ್ರತಾ ನಿರವಲಂಬಿಕ್ರಿಯೆ : ಕಡಿಮೆ ವೈವಿಧ್ಯದ ಒತ್ತರವನ್ನೋ ಅನಿರ್ದಿಷ್ಟ ಬಾಹ್ಯ ಬದಲಾವಣೆಗಳನ್ನೋ ತೋರುವ ಪರಿಸರ ವ್ಯವಸ್ಥೆಗಳಲ್ಲಿ ಸಂದಣಿಗಳು ಭೌತ ಅಂಶಗಳಾದ ಹವೆ, ನೀರಿನ ಪ್ರವಾಹ, ರಾಸಾಯನಿಕಗಳು, ಮಲಿನತೆ ಮುಂತಾದವುಗಳಿಂದ ನಿಯಂತ್ರಿತವಾಗುವುವು. ಸಂದಣಿಗೆ ಅನಾನುಕೂಲವಾಗುವ ಇಲ್ಲವೆ ಅನುಕೂಲವಾಗುವ ಯಾವುದೇ ಅಂಶವಾಗಲಿ ಅದರ ಪ್ರಭಾವ ಅಥವಾ ಕ್ರಿಯೆ ಸಂದಣಿಯ ಗಾತ್ರದ ಮೇಲೆ ಅವಲಂಬಿತವಾಗಿಲ್ಲದಿದ್ದರೆ ಅದನ್ನು ಸಾಂದ್ರತಾ ನಿರವಲಂಬಿ ಅಂಶ ಎಂದೂ ಅದರ ಪ್ರಭಾವ ಸಾಂದ್ರತೆಯನ್ನು ಅವಲಂಬಿಸಿದ್ದರೆ ಅದನ್ನು ಸಾಂರತಾವಲಂಬಿ ಅಂಶವೆಂದೂ ಕರೆಯುವರು. ಸಾಂದ್ರತಾವಲಂಬಿಕ್ರಿಯೆ ಸಾಮಾನ್ಯವಾಗಿ ನೇರವಾಗಿ ಸಾಗುತ್ತಿದ್ದು ಸಾಂದ್ರತೆ ಮೇಲ್ಮಟ್ಟವನ್ನು ಮುಟ್ಟುವಾಗಿ ಹೆಚ್ಚಾಗುತ್ತದೆ. ಆದರೆ ಸಾಂದ್ರೆತೆ ತಲೆಕೆಳಗಾಗಬಹುದು ನೇರವಾದ ಸಾಂದ್ರತಾವಲಂಬಿ ಅಂಶಗಳು ವ್ಯವಸ್ಥಾಬದ್ಧವಾಗಿ ಕೆಲಸ ಮಾಡುತ್ತವೆ. ಸಂದಣಿ ಹೆಚ್ಚಾಗಿ ಬೆಳೆಯುವುದನ್ನು ಇವು ತಡೆಯುವುವು. ಇದರಿಂದಾಗಿ ಸಂದಣಿ ಸಮತೋಲ ಹಂತದಲ್ಲಿರುವಂತಾಗುತ್ತದೆ. ಕೆಲವು ಕಾಲ ವಾಯುಮಂಡಲದ ಅಂಶಗಳು ಸಾಂದ್ರತಾ ನಿರವಲಂಬಿ ರೀತಿಯಲ್ಲಿ ಕೆಲಸ ಮಾಡುವುವು ಆದರೆ ಜೈವಿಕ ಅಂಶಗಳಾದ ಸ್ಪರ್ಧೆ, ಪರಾವಲಂಬನೆ ಮುಂತಾದವು ಕೆಲವು ವೇಳೆ ಸಾಂದ್ರತಾವಲಂಬಿ ಅಂಶಗಳಾಗಿ ವರ್ತಿಸುವುವು. 5 ಪ್ರಜನನ ವಿಭಜನ ಅಥವಾ ಜೈವಿಕ ವಿಭವ : ಸಂದಣಿಯ ಬೆಳೆವಣಿಗೆಗೆ ಮುಖ್ಯವಾದ ಗುಣ ಇದು. ಯಾವುದೇ ಒಂದು ನಿರ್ದಿಷ್ಟ ಕಾಲದಲ್ಲಿ ವಾಸಿಸುವ ಸಂದಣಿಯ ಬೆಳೆವಣಿಗೆ ವಿಭವ ಆ ಸಂದಣಿಯ ಪ್ರತಿಯೊಂದು ಜೀವಿಯ ಪ್ರಜನನ ವಿಭವ (() ಹಾಗೂ ಆ ಕಾಲದಲ್ಲಿರುವ ಜೀವಿಗಳ ಸಂಖ್ಯೆಯ (ಓ) ಮೇಲೆ ಆಧಾರಿತವಾಗಿದೆ. ಪ್ರತಿಯೊಂದು ಪ್ರಜನನದಲ್ಲೂ ಹುಟ್ಟಿದ ಜೀವಿಗಳ ಸಂಖ್ಯೆ, ಒಂದು ನಿರ್ದಿಷ್ಟ ಕಾಲದಲ್ಲಿ ಆದ ಪ್ರಜನನಗಳ ಸಂಖ್ಯೆ, ಗಂಡು ಹೆಣ್ಣುಗಳ ಪರಿಮಾಣ ಮತ್ತು ಪರಿಸರದ ಭೌತಪರಿಸ್ಥಿತಿಗಳಲ್ಲಿ ಅವು ಉಳಿಯುವ ಸಾಮಥ್ರ್ಯ ಈ ಅಂಶಗಳೆಲ್ಲವೂ ಪ್ರಜನನ ವಿಭವದಲ್ಲಿ ಅಡಗಿವೆ. ಪ್ರಜನನ ವಿಭವವನ್ನು ಜಓ/ಜಣ = (ಓ ಎಂಬ ಸೂತ್ರದಿಂದ ವ್ಯಕ್ತಪಡಿಸಬಹುದು. ಅಂದರೆ ಸಂದಣಿಯ ಬದಲಾವಣೆಯ ದರ ಅಲ್ಲಿರುವ ಪ್ರಜನನ ಜೀವಿಗಳ ಸಂಖ್ಯೆಯನ್ನು (ಲಿಂಗರೀತಿಯ ಪ್ರಜನನದಲ್ಲಿ ಹೆಣ್ಣುಗಳ ಸಂಖ್ಯೆ) ಅನುಸರಿಸುವುದು. ಸಾಮಾನ್ಯವಾಗಿ ಅನುಕೂಲತಮ ಪರಿಸ್ಥಿತಿಗಳಲ್ಲಿ ಪ್ರಜನನ ವಿಭವ ಬದಲಾಯಿಸುವುದಿಲ್ಲ. ಆದರೆ ಪರಿಸರದ ಲಕ್ಷಣಗಳು ವ್ಯತ್ಯಾಸವಾದಾಗ ಪ್ರಜನನವಿಭವದಲ್ಲೂ ವ್ಯತ್ಯಾಸಗಳಾಗುತ್ತವೆ. ಅಕ್ಕಿಯ ಸೊಂಡಿಲು ಜೀರುಂಡೆ ಮತ್ತು ನೀರಿನ ಚಿಗಟಗಳ ಮೇಲೆ ನಡೆಸಿದ ಪ್ರಯೋಗಗಳು ಈ ವಾದವನ್ನು ಪುಷ್ಟೀಕರಿಸುತ್ತವೆ.
ಉದಾಹರಣೆಗಳು : (i) ಒಂದು ಹೆಣ್ಣು ಅಕ್ಕಿಯ ಸೊಂಡಿಲು ಜೀರುಂಡ 230 ಅ ಉಷ್ಣತೆಯಲ್ಲಿ ವರ್ಷಕ್ಕೆ 22.4 ಮರಿಗಳನ್ನು 290 ಅ ಉಷ್ಣತೆಯಲ್ಲಿ 30.6 ಮರಿಗಳನ್ನು ಮತ್ತು 33.50 ಅ ಉಷ್ಣತೆಯಲ್ಲಿ 6.2 ಮರಿಗಳನ್ನು ಉತ್ಪತ್ತಿ ಮಾಡುತ್ತವೆ.
(ii) ನೀರಿನ ಚಿಗಟದಲ್ಲೂ ಪ್ರಜನನವಿಭವ ಉಷ್ಣತೆಗೆ ಅನುಗುಣವಾಗಿ ವ್ಯತ್ಯಾಸವಾಗುವುದೆಂದು ತೋರಿಸಲಾಗಿದೆ. ಈ ಜೀವಿಯಲ್ಲಿ ಗರಿಷ್ಠ ಪ್ರಜನನ ವಿಭವ 200 ಅ ಮತ್ತು 340 ಅ ಮಧ್ಯದ ಉಷ್ಣತೆಯಲ್ಲಿ ಆಗುತ್ತದೆ. ಪರಿಸರದ ಅಂಶಗಳು (ಭೌತ. ರಾಸಾಯನಿಕ) ಯಾವಾಗಲೂ ಒಂದೇ ರೀತಿ ಇಲ್ಲದಿರುವುದರಿಂದಲೂ ಹೀಗೆ ಬದಲಾಗುವ ಅಂಶಗಳನ್ನು ಸಹಿಸುವ ಶಕ್ತಿ ಜೀವಿಗಳಲ್ಲಿ ಬೇರೆ ಬೇರೆಯಾಗಿರುವುದರಿಂದಲೂ ವಿವಿಧ ಪ್ರಜನನ ವಿಭವಗಳು ಕಂಡುಬರುವುದು ಸಕಾರಣವಾಗಿದೆ. ಒಂದು ಪ್ರಭೇದಕ್ಕೆ ಪ್ರತಿಯೊಂದು ಕಾಲದ ಭೌತ ಅಂಶಗಳಿಗನುಗುಣವಾಗಿ ವಿವಿಧ ಹಾಗೂ ವಿಶೇಷ ( ಮೌಲ್ಯಗಳಿರುತ್ತವೆ. ಅಲ್ಲದೆ ( ನ ಮೌಲ್ಯ ಜೀವಿಯ ವಯಸ್ಸು, ಪ್ರಜನನ ವಯಸ್ಸು ಮತ್ತು ಆಯು ಪರಿಮಿತಿಗೆ ಅನುಗುಣವಾಗಿ ಬದಲಾಗುತ್ತದೆ. ಸಂದಣಿಯ ಪ್ರಜನನವಿಭವವನ್ನು ಬೆಳೆವಣಿಗೆಯ ಅನುಕೂಲತಮ ಪರಿಸ್ಥಿತಿಗಳಲ್ಲಿ ಅಳೆದಾಗ ಲಭಿಸುವ ವಿಶಿಷ್ಟ ಬೆಳೆವಣಿಗೆಯ ದರವನ್ನು ನೈಸರ್ಗಿಕ ಏರಿಕೆಯ ನೈಜದರ ಎಂದು ಕರೆಯಲಾಗುತ್ತದೆ.
6 ಜನನ (ನಟ್ಯಾಲಿಟಿ) : ಜನನ ಸಂದಣಿಯ ಒಂದು ಸ್ವಾಭಾವಿಕ ಹಾಗೂ ವಿಶಿಷ್ಟ ಗುಣ; ಸಂದಣಿಯ ಬೆಳೆವಣಿಗೆಗೆ ಅಗತ್ಯವಾದ ಗುಣಗಳಲ್ಲೊಂದು. ಜನನಗಳು, ಜನನದರಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಇವು ಸಂದಣಿಯ ಗಾತ್ರ, ರಚನೆ ಹಾಗೂ ಭೌತಪರಿಸರಕ್ಕೆ ಅನುಗುಣವಾಗಿ ವ್ಯತ್ಯಾಸವಾಗಬಹುದು. ಹೊಸದಾಗಿ ಹುಟ್ಟಿದ ಜೀವಿಗಳ ಸಂಖ್ಯೆಯನ್ನು ಅವು ಹುಟ್ಟಿದ ಕಾಲದ ಅವಧಿಯಿಂದ ಭಾಗಿಸಿದರೆ ಜನನದರ ಲಭಿಸುತ್ತದೆ. ಅಥವಾ ಹೊಸದಾಗಿ ಹುಟ್ಟಿದ ಜೀವಿಗಳ ಸಂಖ್ಯೆಯನ್ನು ಅವು ಹುಟ್ಟಿದ ಕಾಲ ಮತ್ತು ಮೊದಲಿನ ಸಂದಣಿಯ ಸಂಖ್ಯೆಯಿಂದ ಭಾಗಿಸಿದರೆ ವಿಶಿಷ್ಟ ಜನನದರ ತಿಳಿಯುತ್ತದೆ.
(ಓಟಿ/(ಣ=ನಿರಪೇಕ್ಷ ಜನನದರ (ಆಬ್ಸೊಲ್ಯೂಟ್ ನಟ್ಯಾಲಿಟಿ) (ಓಟಿ/(ಓ(ಣ)=ವಿಶಿಷ್ಟ ಜನನದರ (ಸ್ಟೆಸಿಫಿಕ್ ನಟ್ಯಾಲಿಟಿ) (ಓಟಿ= ಸಂದಣಿಯಲ್ಲಿ ಹುಟ್ಟಿದ ಹೊಸ ಜೀವಿಗಳು
ಅಥವಾ ಜನನದರ (ನಟ್ಯಾಲಿಟಿ ರೇಟ್) ಅಥವಾ ಒಂದು ಘಟಕ ಸಂದಣಿಯ ಜನನದರ (ಯೂನಿಟ್ ಪಾಪ್ಯುಲೇಷನ್ ನಟ್ಯಾಲಿಟಿ)
7 ಮರಣ (ಮಾಟ್ರ್ಯಾಲಿಟಿ) : ಜೀವಿಯ ಒಂದು ಮುಖ ಜನನವಾದರೆ ಅದರ ಮತ್ತೊಂದು ಮೂಕ ಮರಣ. ಜನನದಷ್ಟೇ ವಿಶಿಷ್ಟವಾದ ಗುಣ ಮರಣ ಕೂಡ ಯಾವುದೊಂದು ಗೊತ್ತಾದ ಕಾಲದಲ್ಲಿ ಸಾಯುವ ಜೀವಿಗಳ ಸಂಖ್ಯೆಗೆ ಮರಣದ (ಮಾಟ್ರ್ಯಾಲಿಟಿ ರೇಟ್) ಎಂದು ಹೆಸರು. ಎಂಥ ಒಳ್ಳೆಯ ಪರಿಸ್ಥಿತಿಯಲ್ಲೂ ಜೀವಿಗಳು ವಯಸ್ಸಾದ ಮೇಲೆ ಸಾಯುವುವು. ಸಾವು ಒಂದು ಜೀವಿಯ ಜೀವನದ ಅಂತಿಮ ಘಟ್ಟ. ಜೀವಿಸಂದಣಿಯ ಅಭ್ಯಾಸದಲ್ಲಿ ಮರಣ ದರಕ್ಕಿಂತ ಉಳಿಕೆಯದರ (ಸರ್ವೈವಲ್ ರೇಟ್) ಮುಖ್ಯ. ಮರಣದರವನ್ನು ಒ ಎಂದು ಸೂಚಿಸಿದರೆ ಉಳಿಕೆಯದರ ಟ-ಒ. ಮರಣದರ ಸಾಮಾನ್ಯವಾಗಿ ಜೀವಿಯ ವಯಸ್ಸನ್ನಾಧರಿಸಿ (ವಯೋಮಿತಿ) ವ್ಯತ್ಯಾಸವಾಗುತ್ತದೆ. ಉನ್ನತ ಜೀವಿಗಳಲ್ಲಿ ಇದು ಹೆಚ್ಚು ನಿಜ. ವಿಶಿಷ್ಟ ಮರಣಗಳು ಬೇರೆ ಬೇರೆ ವಯಸ್ಸಿನ ಗುಂಪು ಹಾಗೂ ಜೀವನಚರಿತ್ರೆಯ ಹಂತಗಳನ್ನು ಅನುಸರಿಸುತ್ತವೆ. ಇವುಗಳಿಂದ ಸಂದಣಿಯಲ್ಲಾಗುವ ಮರಣಗಳಿಗೆ ಕಾರಣವಾದ ಬಲಗಳನ್ನು ತಿಳಿಯಲು ಸಾಧ್ಯವಾಗುವುದು. ಸಂದಣಿಯ ನಿರಪೇಕ್ಷ ಮರಣದರ ಚಿತ್ರವನ್ನು ಕ್ರಮವಾಗಿ ಅಂಕೆಅಂಶಗಳ ಪದ್ಧತಿಯನ್ನನುಸರಿಸಿ ಆಯಸ್ಸುಕೋಷ್ಟಕದ ಮೂಲಕ ನಿರೂಪಿಸಬಹುದು. ಆರ್. ಪೆರ್ಲ್ ಎಂಬಾತ ಮೊದಲ ಬಾರಿಗೆ ಡ್ರೋಸಾಫಿಲನೊಣದ ಮೇಲೆ ಮಾಡಿದ ಪ್ರಯೋಗಗಳ ಫಲಿತಾಂಶಗಳನ್ನು ಉಪಯೋಗಿಸಿ ಈ ಪದ್ಧತಿಯನ್ನು ಆರಂಭಿಸಿದ ಡೀವಿ ಎಂಬ ಇನ್ನೊಬ್ಬ ವಿಜ್ಞಾನಿ ನಿಸರ್ಗದ ಅನೇಕ ಪ್ರಾಣಿಸಂದಣಿಗಳ ವಿಚಾರದಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಿ ಅವುಗಳ ಆಯಸ್ಸುಕೊಷ್ಟಕಗಳನ್ನು ತಯಾರು ಮಾಡಿದ. ಪ್ರಯೋಗಗಳಿಂದಲೂ ಒಂದು ಜೀವಿಯ ಆಯಸ್ಸುಕೋಷ್ಟಕವನ್ನು ತಯಾರಿಸಬಹುದು. ಸಣ್ಣ ವಯಸ್ಸಿನ 1000 ಜೀವಿಗಳನ್ನು ಉಪಯೋಗಿಸಿ ಒಂದು ಪೀಳಿಗೆಯ ಅಂತ್ಯದಲ್ಲಿ ಒಂದು ನಿಖರವಾದ ಕಾಲದ ಅಂತರಗಳಲ್ಲಿ ಬದುಕಿ ಉಳಿದ ಜೀವಿಗಳ ಸಂಖ್ಯೆಯನ್ನು ಗೊತ್ತುಪಡಿಸಿ ಆ ಜೀವಿಯ ಆಯಸ್ಸುಕೋಷ್ಟಕವನ್ನು ತಯಾರು ಮಾಡಬಹುದು. ಇದೇ ರೀತಿ ನಿಸರ್ಗದ ಜೀವಿಗಳ ಆಯಸ್ಸುಕೋಷ್ಟಕಗಳನ್ನು ತಿಳಿಯುವುದುಂಟು. ಉದಾಹರಣೆಗೆ: ಡಾಲ್ ಬೆಟ್ಟದ ಕುರಿಗಳ ವಯಸ್ಸನ್ನು ಅವುಗಳ ಕೋಡುಗಳಿಂದ ತಿಳಿಯಬಹುದು. ಅವು ಯಾವ ರೀತಿ ಸತ್ತರೂ ಕೋಡುಗಳ ಪರೀಕ್ಷೆಯಿಂದ ಅವು ಎಷ್ಟು ವರ್ಷ ಬದುಕಿದ್ದವು ಎಂದು ಗೊತ್ತಾಗುತ್ತದೆ. 608 ಕುರಿಗಳನ್ನು ಪರೀಕ್ಷಿಸಿ ಅವು ಸತ್ತಾಗ ಅವುಗಳ ವಯಸ್ಸೇನೆಂದು ತಿಳಿದು ಡಾಲ್ ಬೆಟ್ಟದ ಕುರಿಯ ಆಯಸ್ಸುಕೊಷ್ಟಕವನ್ನು ತಯಾರಿಸಿದ್ದಾರೆ. ಈ ಪ್ರಾಣಿಯ ಸರಾಸರಿ ಆಯಸ್ಸು 7.09 ವರ್ಷಗಳು. ಜೀವಿಯ ಆಯಸ್ಸಿನಲ್ಲಿ ಪ್ರಜನನ ಮುಖ್ಯವಾದ್ದು. ಪ್ರಜನನಕ್ರಮ ಸಂದಣಿಯ ಬೆಳೆವಣಿಗೆ ಹಾಗೂ ಮಿಕ್ಕ ಗುಣಗಳ ಮೇಲೆ ಪ್ರಭಾವ ಬೀರುವುದು. ನಿಸರ್ಗದ ಆಯ್ಕೆಯ ಪ್ರಭಾವದಿಂದಾಗಿ ಜೀವಿಯ ಜೀವನಚರಿತ್ರೆಯಲ್ಲಿ ವಿವಿಧ ಬದಲಾವಣೆಗಳಾಗಬಹುದು. ಈ ಬದಲಾವಣೆಗಳಿಂದ ಹೊಂದಾಣಿಕೆಯ ಕ್ರಮಗಳು ನಿರ್ಣಯವಾಗುತ್ತವೆ. ಆಯ್ಕೆಯ ಒತ್ತಡ ಪ್ರಜನನ ಕಾಲ ಮತು ಉತ್ಪತ್ತಿಯನ್ನು ಬದಲಾಯಿಸುವ ರೀತಿಯನ್ನೂ ಸಂದಣಿಗೆ ಸಂಬಂಧಪಟ್ಟ ಮಿಕ್ಕ ಅಂಶಗಳನ್ನೂ ಆಯಸ್ಸುಕೊಷ್ಟಕಗಳ ಪರಿಶೀಲನೆಯಿಂದ ತಿಳಿಯಬಹುದು. 8 ಸಂದಣಿಯಲ್ಲಿ ವಯೋವಿತರಣೆ : (ಪಾಪ್ಯುಲೇಷನ್ ಏಚ್ ಡಸ್ಟ್ರಿಬ್ಯೂಷನ್) : ಜನನ ಮತ್ತು ಮರಣದರಗಳ ಮೇಲೆ ಇದು ತನ್ನ ಪ್ರಭಾವವನ್ನು ಬೀರುತ್ತದೆ. ಸಂದಣಿಯಲ್ಲಿ ವಿವಿಧವಯಸ್ಸಿನ ಜೀವಿಗಳಿವೆ. ಇಂಥ ಜೀವಿಗಳ ಪ್ರಮಾಣ ಸಂದಣಿಯ ಪ್ರಕೃತ ಪ್ರಜನನಸ್ಥಿತಿಯನ್ನು ತಿಳಿಸುವುದಲ್ಲದೆ ಮುಂದೆ ಏನಾಗಬಹುದು ಎಂಬುದನ್ನೂ ಸೂಚಿಸುತ್ತದೆ. ಸಾಮಾನ್ಯವಾಗಿ, ಅತಿ ತೀವ್ರಗತಿಯಲ್ಲಿ ಬೆಳೆಯುವ ಸಂದಣಿಯಲ್ಲಿ ಹೆಚ್ಚು ಪ್ರಜನನ ಜೀವಿಗಳೂ ಸ್ಥಿರವಾದ ಸಂದಣಿಯಲ್ಲಿ ಸಾಮಾನ್ಯವಾಗಿ ಸಮಪ್ರಮಾಣದ ಪ್ರಜನನ ಮತ್ತು ವಯಸ್ಸಾದ ಜೀವಿಗಳೂ ಕುಗ್ಗುತ್ತಿರುವ ಸಂದಣಿಯಲ್ಲಿ ಹೆಚ್ಚು ವಯಸ್ಸಾದ ಜೀವಿಗಳೂ ಇರುತ್ತವೆ. ಸಂದಣಿಯಲ್ಲಿ ಸಾಮಾನ್ಯ ರೀತಿಯ ವಯೋರಚನೆ ಇರಬಹುದು. ಸಂದಣಿಯಲ್ಲಿನ ಬದಲಾವಣೆಗಳು ವಯೋರಚನೆಯನ್ನು ಆಧಾರಿಸಿ ಉಂಟಾಗುತ್ತವೆ. ಬದಲಾವಣೆಗಳು ಕಡಿಮೆಯಾಗಿ ಒಂದು ಸ್ಥಿರ ವಯೋವಿತರಣೆ ರೂಪುಗೊಂಡ ಮೇಲೆ ತಾತ್ಕಾಲಿಕವಾಗಿ ಹೆಚ್ಚು ಜನನ ಮರಣಗಳಾದರೂ ಸಂದಣಿ ಪುನಃ ಸಮತೋಲದ ಹಂತವನ್ನು ಮುಟ್ಟುವುದು. ಸಂದಣಿಯ ಜೀವಿಗಳನ್ನು ಮೂರು ವಯಸ್ಸಿನ ಗುಂಪುಗಳನ್ನಾಗಿ ಬೋಡೆನ್ ಹೀಮರ್‍ವಿಂಗಡಿಸಿ, ಇವನ್ನು ಪರಿಸರಾತ್ಮಕ ವಯೋಸ್ಥಾನಗಳೆಂದು (ಈಕಲಾಜಿಕಲ್ ಏಜಸ್) ಕರೆದ. ಇವೇ (i) ಪ್ರಜನನ ಪೂರ್ವ, (ii) ಪ್ರಜನನ ಮತ್ತು (iii) ಪ್ರಜನನದ ಅನಂತರದ ವಯಸ್ಸಿನ ಜೀವಿಗಳು. ಈ ವಯಸ್ಸುಗಳ ಸುಮಾರು ಅವಧಿ ವಿವಿಧ ಜೀವಿಗಳಲ್ಲಿ ಅವುಗಳ ಆಯುವ್ಯಾಪ್ತಿಯನ್ನು (ಲೈಫ್ ಸ್ಪ್ಯಾನ್) ಅನುಸರಿಸುತ್ತದೆ. ಅನೇಕ ಸಸ್ಯ ಮತ್ತು ಪ್ರಾಣಿಗಳಲ್ಲಿ ಪ್ರಜನನಪೂರ್ವದ ಅವಧಿ ದೀರ್ಘ. ಮನುಷ್ಯನಲ್ಲಿ ಈ ಮೂರು ವಯೋ ಅವಧಿಗಳೂ ಹೆಚ್ಚು ಕಡಿಮೆ ಒಂದೇ ಸಮವಾಗಿರುತ್ತವೆ. ಕೆಲವು ಕೀಟಿಗಳಲ್ಲಿ ಪ್ರಜನನಪೂರ್ವಕಾಲ ಅತಿಹೆಚ್ಚು. ಉದಾಹರಣೆಗೆ, ಮೇ ನೊಣದಲ್ಲು (ಎಫಿಮಿರಾಪ್ಟರ) ಈ ಕಾಲ 1-7 ವರ್ಷಗಳಾಗಬಹುದು. ಈ ಅವಧಿಯನ್ನೆಲ್ಲ ನೀರಿನೊಳಗೆ ಡಿಂಭಾವಸ್ಥೆಯಲ್ಲಿ ಕಾಲಕಳೆಯುವ ಇವು ಪೌಢಪ್ರಾಣಿಗಳಾಗಿ ಕೇವಲ ಕೆಲವೇ ದಿವಸಗಳು ಜೀವಿಸುತ್ತವೆ. ಇದೇ ರೀತಿ ಹದಿನೇಳು ವರ್ಷದ ಮಿಡಿತೆಯಲ್ಲಿ ಬೆಳೆವಣಿಗೆಯ ಕಾಲ ಬಲು ದೀರ್ಘವಾದ್ದು. ಇದರ ಪ್ರೌಢ ಪ್ರಾಣಿ ಒಂದು ಶ್ರಾಯ ಮಾತ್ರ ಬದುಕುತ್ತದೆ. ಪ್ರಜನನ ಕಾಲ ವಿವಿಧ ಜೀವಿಗಳಲ್ಲಿ ಬೇರೆ ಬೇರೆಯಾಗಿರುವುದರಿಂದ ಸಂದಣಿಯಲ್ಲಿರುವ ಪ್ರಜನನ ಮತ್ತು ಎಳೆಯ ಹಾಗೂ ವಯಸ್ಸಾದ ಜೀವಿಗಳ ಹಂಚಿಕೆಯ ವಿವರಗಳಿಂದ ಸಂದಣಿಯ ಗುಣಗಳನ್ನು ತಿಳಿಯಬಹುದು. ಸಂದಣಿಯಲ್ಲಿರುವ ವಿವಿಧ ಜೀವಿಗಳ ವಯೋವಿತರಣೆಯನ್ನು ಚಿತ್ರೀಕರಿಸಲು ಪ್ರತಿ ಪ್ರಭೇದ ಜೀವಿಗಳ ಸಂಖ್ಯೆ ಮತ್ತು ವಯಸ್ಸನ್ನು ಅನುಸರಿಸಿ ಒಂದು ಬಹುಭುಜವನ್ನು (ಪಾಲಿಗನ್) ರಚಿಸುವರು. ಈ ಬಹುಭುಜವನ್ನು ವಯೋಪಿರಮಿಡ್ (ಏಜ್ ಪಿರಮಿಡ್) ಎಂದೂ ಕರೆಯುತ್ತಾರೆ. ವಯೋ ಪಿರಮಿಡ್ಡಿನಲ್ಲಿ ಜೀವಿಗಳ ಸಂಖ್ಯೆ ಅಥವಾ ವಿವಿಧ ವಯೋಗುಂಪುಗಳ ದರಗಳನ್ನು ಅನುಸರಿಸಿ ಅದಕ್ಕೆ ಸಂಬಂಧಿಸಿದಂತೆ ಅನುಕ್ರಮವಾಗಿ ಅಡ್ಡರೇಖೆಗಳನ್ನೆಳೆದು ವಯೋಪಿರಮಿಡ್ಡನ್ನು ರಚಿಸುತ್ತಾರೆ. ಮೇಲೆ ವಿವರಿಸಿದ ಮೂರು ವಯೋ ಗುಂಪುಗಳನ್ನು ಅನುಸರಿಸಿ ಮೂರು ವಿಧದ ವಯೋಪಿರಮಿಡ್ಡುಗಳನ್ನು (ಚಿತ್ರ 3) ರಚಿಸಬಹುದು : (i) ಅಗಲ ತಳದ ಪಿರಿಮಿಡ್ (ಂ) : ಇದು ಹೆಚ್ಚು ಸಂಖ್ಯೆಯ ಪ್ರಜನನ ಜೀವಿಗಳಿರುವುದನ್ನು ತಿಳಿಸುತ್ತದೆ. (ii) ಗಂಟೆಯಾಕಾರದ ಅಥವಾ ಬಹುಭುಜದ ಪಿರಿಮಿಡ್ (ಃ): ಇದು ಸಮಪ್ರಮಾಣದ ಪ್ರಜನನ ಹಾಗೂ ವಯಸ್ಸಾದ ಜೀವಿಗಳಿರುವುದನ್ನು ತೋರಿಸುತ್ತದೆ. (iii) ಮಡಕೆ ಆಕಾರದ ಪಿರಮಿಡ್ (ಅ) : ಬಹು ಕಡಿಮೆ ಸಂಖ್ಯೆಯ ಪ್ರಜನನ ಜೀವಿಗಳು ಇರುವುದನ್ನು ತೋರುತ್ತದೆ. ಇದು ಕುಗ್ಗುತ್ತಿರುವ ಸಂದಣಿಯ ರೂಪ.
ಚಿತ್ರ-3
ಸಂದಣಿಯ ಬದಲಾವಣೆಗೆ ಜನನ ಮರಣಗಳ ಜೊತೆಗೆ ಜೀವಿಗಳ ಪ್ರಸಾರವೂ ಒಂದು ಕಾರಣ. ಜೀವಿಗಳ ಅಥವಾ ಅವುಗಳ ಮರಿಗಳು ಬೀಜಗಳು, ಸ್ಪೋರುಗಳು ಸಂದಣಿಗೆ ಬಂದು ಸೇರುವ ಅಥವಾ ಹೊರಗೆ ಹೋಗುವ ಚಲನೆಗೆ ಸಂದಣಿಯ ಪ್ರಸಾರವೆಂದು ಹೆಸರು. ಈ ಚಲನೆ ಮೂರು ರೂಪದಲ್ಲಿರುತ್ತದೆ: (i) ಹೊರವಲಸೆ (ಎಮಿಗ್ರೇಷನ್)-ಜೀವಿಗಳು ಒಂದು ಸಂದಣಿಯಿಂದ ಹೊರಗೆ ಹೋಗುವುದು. ಇದು ಒಂದೇ ಹಾದಿಯ ಹೊರಚಲನೆ : (ii) ಒಳವಲಸೆ (ಇಮಿಗ್ರೇಷನ್)- ಜೀವಿಗಳು ಸಂದಣಿಗೆ ಹೊರಗಿನಿಂದ ಬಂದು ಸೇರುವುದು. ಇದು ಒಂದೇ ಹಾದಿಯ ಒಳಚಲನೆ ; (iii) ವಲಸೆ (ಮೈಗ್ರೇಷನ್)-ಜೀವಿಗಳು ತಾತ್ಕಾಲಿಕವಾಗಿ ಸಂದಣಿಯಂದ ಹೊರಗೆ ಹೋಗಿ ಪುನಃ ಸಂದಣಿಗೆ ವಾಪಸು ಬರುವುದು.
ಜನನ ಮತ್ತು ಮರಣಗಳಿಂದಾದ ಏರುಪೇರುಗಳನ್ನು ಸರಿತೂಗಿಸಿ ಸಂದಣಿಯ ಬೆಳೆವಣಿಗೆಯ ರೂಪಕ್ಕೆ ಮತ್ತು ಸಾಂದ್ರತೆಗೆ ಒಂದು ರೂಪವನ್ನು ಪ್ರಸಾರ ಕೊಡುತ್ತದೆ. ಅನೇಕ ಸಂದರ್ಭಗಳಲ್ಲಿ ಜೀವಿಗಳ ಬೀಜಗಳೂ ಬೀಜಾಣುಗಳೂ ಸಾಮಾನ್ಯವಾಗಿ ಸಂದಣಿಯ ಒಳ ಬರುವುವು ಅಥವಾ ಹೊರ ಹೋಗುವುವು. ಈ ರೀತಿಯ ಪ್ರಸಾರದಿಂದ ಸಂದಣಿಯ ಒಟ್ಟು ಸಾಂದ್ರತೆ ಒಂದೇ ರೀತಿ ಇರುತ್ತದೆ. ಏಕೆಂದರೆ ಹೊರ ಹೋಗುವ ಜೀವಿಗಳಿಗೆ ಬದಲಾಗಿ ಒಳಬರುವ ಜೀವಿಗಳಿರುತ್ತವೆ. ಅಥವಾ ಸಂದಣಿಗೆ ಬಂದು ಸೇರುವ ಅಥವಾ ಅದರಿಂದ ಹೊರಹೋಗುವ ಜೀವಿಗಳ ಜಾಗವನ್ನು ತುಂಬಲು ಜನನಗಳು ಮತ್ತು ಮರಣಗಳಾಗುತ್ತವೆ. ಪ್ರಸಾರದಲ್ಲಿ ಕೇವಲ ಕೆಲವು ಅಥವಾ ಅನೇಕ ಜೀವಿಗಳು ಭಾಗವಹಿಸಬಹುದು. ಸಾಮೂಹಿಕ ಪ್ರಸಾರದ ಕ್ರಿಯೆಗಳು ಬಹುಜಾಗ್ರತೆಯಾಗಿ ಸಂದಣಿಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ. ಪ್ರಸಾರ ಅಡೆತಡೆಗಳನ್ನೂ ಜೀವಿಯ ಚಲನ ಸ್ವಾತಂತ್ರ್ಯವನ್ನೂ (ವ್ಯಾಜಲಿಟಿ) ಆಧರಿಸಿದೆ. ಪ್ರಸಾರದಿಂದ ಹೊಸನೆಲೆಗಳಲ್ಲಿ ಅಥವಾ ಕ್ಷೀಣಸಂದಣಿಯ ಪ್ರದೇಶಗಳಲ್ಲಿ ವಿವಿಧ ಸಂದಣಿಗಳ ಸಮಾಂತರವಾಗುವುದು. ಇದರಿಂದ ಅನುವಂಶೀಯ ಗುಣಗಳಿಗೆ ಕಾರಣವಾದ ಜೀನುಗಳ ವಿನಿಮಯ ಮತ್ತು ಪ್ರಭೇದೀಕರಣ ಕ್ರಿಯೆ ನಡೆಯಲು ಅನುಕೂಲವಾಗುತ್ತದೆ. ಒಳವಲಸೆ ಸಂದಣಿಯ ಬೆಳೆವಣಿಗೆಯನ್ನು ಹೆಚ್ಚು ಮಾಡುತ್ತದೆ. ಅಥವಾ ಸಣ್ಣ ಸಂದಣಿ ಗತಿಸುವುದನ್ನು ತಡೆಯುತ್ತದೆ. ಗುಂಪುಗಳ ಪ್ರಸಾರ ಸಮತೋಲ ಸಂದಣಿಯ ರಚನೆಯನ್ನು ಅನೇಕ ವಿಧಗಳಲ್ಲಿ ಬದಲಾಯಿಸುತ್ತದೆ. ಉದಾಹರಣೆಗೆ ಒಂದು ಕೊಳದಲ್ಲಿ ಒಂದು ಜಾತಿಯ ಮೀನುಗಳ ಸಂದಣಿ ಸಮತೋಲದ ಹಂತವನ್ನು ಮುಟ್ಟಿರುವಾಗ (ಧಾರಣಸಾಮಥ್ರ್ಯ) ಆ ಕೊಳದಲ್ಲಿ ಅದೇ ಜಾತಿಯ ಮರಿಗಳನ್ನು ಬಿಟ್ಟರೆ ಅಲ್ಲಿನ ಜೀವಿಗಳ ಬೆಳೆವಣಿಗೆ ಕುಗ್ಗಿ ಮೀನುಗಳ ಗಾತ್ರ ಕಡಿಮೆಯಾಗುತ್ತದೆ. ಪ್ರಸಾರದಲ್ಲಿ ಜೀವಿಗಳ ಚಲನಸ್ವಾತಂತ್ರ್ಯ ಮುಖ್ಯವಾದ್ದು. ಈ ಗುಣ ವಿವಿಧ ಪ್ರಾಣಿಗಳಲ್ಲಿ ಬೇರೆಯಾಗಿರುವುದು. ಪಕ್ಷಿ ಮತ್ತು ಕೀಟಗಳಿಗೆ ಹೆಚ್ಚಿನ ಚಲನಸ್ವಾತಂತ್ರ್ಯ ಉಂಟು. ಆದ್ದರಿಂದ ಅವುಗಳ ಪ್ರಸಾರ ಹೆಚ್ಚು. ಕೆಲವು ಸಸ್ಯಗಳಲ್ಲಿಯೂ ಸಣ್ಣ ಪ್ರಾಣಿಗಳಲ್ಲಿಯೂ ಹೆಚ್ಚಿನ ಚಲನಸ್ವಾತಂತ್ರ್ಯವನ್ನು ನೋಡಬಹುದು. ಕೆಲವು ಪ್ರಾಣಿಗಳು ವಿಶಿಷ್ಟ ರೀತಿಯ ವಲಸೆಯ ಚಟುವಟಿಕೆಗಳನ್ನು ತೋರಿಸುತ್ತವೆ. ಸಂಧಿಪದಿಗಳೂ ಮೀನುಗಳೂ ಪಕ್ಷಿಗಳೂ ಗುಂಪು ಗುಂಪಾಗಿ ಬಹುದೂರ ವಲಸೆ ಹೋಗುತ್ತವೆ. ಅವು ಪ್ರಯಾಣ ಮಾಡುವ ದಿಕ್ಕು ಮತ್ತು ರೀತಿ ಕುತೂಹಲ ಕೆರಳಿಸುವ ವಿಷಯ. ವಲಸೆ ದೈನಂದಿನವಾಗಿರಬಹುದು. ಇಲ್ಲವೆ ಶ್ರಾಯಕವಾಗಿರಬಹುದು. 9 ಸಂದಣಿಯ ರಚನೆ : ಇದು ಸಂದಣಿಯಲ್ಲಿನ ಜೀವಿಗಳ ಯಾದೃಚ್ಛಿಕ ರೀತಿ, ಏಕರೀತಿ (ಯೂನಿಫಾರಮ್) ಮತ್ತು ಗುಂಪು ರೀತಿ (ಕ್ಲಂಪ್‍ಡ್) ಎಂಬ ಮೂರು ರೂಪಗಳಲ್ಲಿ ಹರಡಿರುವುದುಂಟು. ಯಾದೃಚ್ಛಿಕ ರೀತಿ ನಿಸರ್ಗದಲ್ಲಿ ಅಪರೂಪ. ಇದು ಒಂದೇ ರೀತಿಯ ಪರಿಸರಗಳಲ್ಲಿ ಮತ್ತು ಒಟ್ಟಾಗಿ ಸೇರಲು ಆಗದಿರುವ ಸ್ಥಳಗಳಲ್ಲಿ ಕಂಡುಬರುತ್ತದೆ. ಸ್ಪರ್ಧೆ ಇರುವ ಅಥವಾ ಪ್ರಬಲವಾದ ವಿರೋಧಿಗಳಿರುವ ಪರಿಸರಗಳಲ್ಲಿ ಏಕರೀತಿಯ ಹರಡುವಿಕೆ ಕಂಡುಬರುವುದು. ಈ ಬಗೆಯಲ್ಲಿ ಜೀವಿಗಳು ಆದಷ್ಟು ದೂರವಿರುವುದರಿಂದ ಜೀವಿಗಳ ನಡುವಣ ಅಂತರ ಒಂದೇ ಸಮವಾಗಿರುತ್ತದೆ. ಪರಿಸರದಲ್ಲಿ ಕಂಡುಬರುವ ಸಾಮಾನ್ಯ ರೀತಿಯ ಹಂಚಿಕೆ ಎಂದರೆ ಗುಂಪುರೀತಿಯದು. ಗುಂಪುಗಳಲ್ಲಿ ವಿವಿಧ ಶ್ರೇಣಿಗಳುಂಟು. ಜೀವಿಗಳು ಒಂದು ನಿರ್ದಿಷ್ಟ ಗಾತ್ರದ ಗುಂಪುಗಳಲ್ಲಿ ಅಂದರೆ ಪ್ರಾಣಿಗಳಾದರೆ ಜೊತೆಗಳಲ್ಲಿ ಸಸ್ಯಗಳಾದರೆ ಕೃಂತಕಗಳಲ್ಲಿ (ಕ್ಲೋನ್) ಇರಬಹುದು. ಸಂದಣಿಯ ಸ್ವಭಾವಗಳನ್ನು ಅರಿಯಲು ಮತ್ತು ಸಾಂದ್ರತೆಯನ್ನು ಅಳೆಯಲು ಹಂಚಿಕೆಯ ಬಗೆ, ಗುಂಪುಗಳ ದರ್ಜೆ, ಗಾತ್ರ ಮತು ಗುಂಪುಗಳ ನಿರಂತರತೆ ಮುಂತಾದ ಅಂಶಗಳ ವಿಚಾರ ಅಗತ್ಯ. ಗುಂಪು ರೀತಿಯಲ್ಲಿ ಯಾದೃಚ್ಛಿಕ ಗುಂಪು ಏಕರೀತಿಯ ಗುಂಪು ಮತ್ತು ಒಟ್ಟುಗೂಡಿಸಿದ ಗುಂಪು ಮೂರು ವಿಧಗಳಿವೆ. ಜೀವಿಗಳು ಒಟ್ಟುಗೂಡಲು ಕಾರಣಗಳೇನೆಂದರೆ (i) ಸ್ಥಳೀಯ ಪರಿಸರಾತ್ಮಕ ವ್ಯತ್ಯಾಸಗಳು, (ii) ವಾಯು ಗುಣದಲ್ಲಿ ದೈನಂದಿನ ಮತ್ತು ಶ್ರಾಯಕ ಬದಲಾವಣೆ, (iii) ಪ್ರಜನನ ಕ್ರಿಯೆಗಳು, (iv) ಸಾಮಾಜಿಕ ಆಕರ್ಷಣೆ (ಪರಸ್ಪರ ಆಕರ್ಷಣೆ).
ಒಟ್ಟುಗೂಡಿದ ಗುಂಪುಗಳಲ್ಲಿ ವ್ಯಕ್ತಿಗಳ ನಡುವೆ ಆಹಾರ ಅಥವಾ ಸ್ಥಳಗಳಿಗೆ ಸ್ಪರ್ಧೆಗಳು ಹೆಚ್ಚಾಗಬಹುದು. ವಿಯುಕ್ತತೆ ಮತ್ತು ಪ್ರಾದೇಶಿಕತೆ (ಐಸೊಲೇಷನ್ ಮತ್ತು ಟೆರಿಟೋರಿಯಾಲಿಟಿ) ಇವು ಪ್ರಧಾನವಾಗಿ ಪ್ರಾಣಿಗಳಲ್ಲಿ ಕಂಡುಬರುವ ಗುಣಗಳು. ಒಂದುಸಂದಣಿಯಲ್ಲಿನ ಜೀವಿಗಳ, ಜೋಡಿಗಳ ಹಾಗೂ ಸಣ್ಣಗುಂಪುಗಳ ನಡುವೆ ಅಂತರವನ್ನು ಉಂಟುಮಾಡುವ ಇಲ್ಲವೆ ಅವನ್ನು ಪರಸ್ಪರ ಬೇರ್ಪಡಿಸುವುದಕ್ಕೆ ಕಾರಣ ಅನೇಕ ಬಲಗಳು. ಇವು ಜೀವಿಗಳ ಒಟ್ಟುಗೊಳಿಕೆಗೆ ಕಾರಣವಾದ ಬಲಗಳಷ್ಟು ವಿಸ್ತಾರವಲ್ಲದಿದ್ದರೂ ಸಂದಣಿಯ ನಿಯಂತ್ರಣದಲ್ಲಿ (ಅಂತರಪ್ರಭೇದಾತ್ಮಕ ಹಾಗೂ ಅಂತಃ ಪ್ರಭೇದಾತ್ಮಕ) ಬಹಳ ಮುಖ್ಯವೆನಿಸಿವೆ. ವಿಯುಕ್ತೆ ಸಾಧಾರಣವಾಗಿ ಆಹಾರ ಸರಬರಾಜು ಕಡಿಮೆಯಿರುವ ಕಡೆಗಳಲ್ಲಿ ಆಹಾರಕ್ಕಾಗಿ ವ್ಯಕ್ತಿಗಳ ನಡುವಣ ಸ್ಪರ್ಧೆ ಮತ್ತು ನೇರವಿರೋಧಗಳಿಂದ ಉಂಟಾಗುತ್ತದೆ. ಈ ಎರಡು ಕಾರಣಗಳಿಂದ ಯಾದೃಚ್ಛಿಕ ಅಥವಾ ಏಕರೀತಿಯ ಹಂಚಿಕೆಯಾಗಬಹುದು. ಕಶೇರುಕಗಳಲ್ಲಿ ಒಂಟಿ ಜೀವಿಗಳು, ಜೊತೆಗಳು, ಹಾಗೂ ಕೌಟುಂಬಿಕ ಗುಂಪುಗಳು ಮತ್ತು ಉನ್ನತ ಅಕಶೇರುಕಗಳು ಸಾಮಾನ್ಯವಾಗಿ ತಮ್ಮ ಚಟುವಟಿಕೆಗಳನ್ನು ಒಂದು ಗೊತ್ತಾದ ಪ್ರದೇಶಕ್ಕೆ ಸೀಮಿತಗೊಳಿಸಿಕೊಂಡಿರುತ್ತವೆ. ಈ ಪ್ರದೇಶಕ್ಕೆ ಸ್ವಗೃಹವ್ಯಾಪ್ತಿ (ಹೋಮ್ ರೇಂಜ್) ಎಂದೂ ಇಂಥ ನಿವೇಶನ ಅಥವಾ ಪ್ರದೇಶವನ್ನು ಬಲಪ್ರದರ್ಶನದ ಮೂಲಕ ರಕ್ಷಿಸಿಕೊಂಡರೆ ಅದನ್ನು ಪ್ರಾದೇಶಿಕತೆ ಎಂದೂ ಕರೆಯುವರು. ಈ ಗುಣ ಕಶೇರಕಗಳಲ್ಲೂ ಆಕಸೇರುಕಗಳಾದ ಸಂದಿಪದಿಗಳಲ್ಲೂ ಸಾಮಾನ್ಯವಾಗಿ ಹೆಚ್ಚು. ಸಂಧಪದಿಗಳಲ್ಲಿ ಸಂಕೀರ್ಣ ರೀತಿಯ ಪ್ರಜನನಾವರ್ತಗಳ ವಿವಿಧ ರೂಪಗಳಾದ ಗೂಡುಕಟ್ಟುವಿಕೆ. ಮೊಟ್ಟೆಯಿಡುವಿಕೆ ಮತ್ತು ಮರಿಗಳ ಪಾಲನೆ ಮುಂತಾದ ಕ್ರಿಯೆಗಳು ನಡೆಯಬೇಕಾದುದರಿಂದ ಪ್ರಾದೇಶಿಕತೆಯ ಅಗತ್ಯವುಂಟು. ವಿಯುಕ್ತತೆಯ ಗುಣ ಉನ್ನತ ದರ್ಜೆಯ ಪ್ರಾಣಿಗಳಲ್ಲಿ ಅವುಗಳ ವರ್ತನೆಗೂ ನಿಮ್ನಪ್ರಾಣಿಗಳಲ್ಲಿ ಮತ್ತು ಸಸ್ಯಗಳಲ್ಲಿ ಅದು ರಾಸಾಯನಿಕ ಪದಾರ್ಥಗಳಿಗೂ ಸಂಬಂಧಿಸಿದೆ. ವಿಯುಕ್ತಜೀವಿಗಳ ನಡುವೆ ಸ್ಪರ್ಧೆಯನ್ನು ಕಡಿಮೆಮಾಡುತ್ತದಲ್ಲದೆ ಸಮಯೋಚಿತ ಕಾಲದಲ್ಲಿ ಶಕ್ತಿಯನ್ನು ಸಂಗ್ರಹಿಸಲು ಸಹಾಯಕವಾಘುತ್ತದೆ. ಸಂದಣಿ ಒತ್ತಾಗುವುದನ್ನೂ ಇದು ತಡೆಯುತ್ತದೆ. ಅಲ್ಲದೆ ಪ್ರಾಣಿಗಳಲ್ಲಿ ಆಹಾರ ಸರಬರಾಜು ಮುಗಿಯುವುದನ್ನೂ ಸಸ್ಯಗಳಲ್ಲಿ ಆಹಾರ ನೀರು ಅಥವಾ ಬೆಳಕುಗಳ ಉಪಯೋಗವನ್ನೂ ಕಡಿಮೆ ಮಾಡುತ್ತದೆ. ಜೀವಿಗಳು ಒಟ್ಟುಗೂಡುವುದರಿಂದ ಸ್ಪರ್ಧೆ ಹೆಚ್ಚಾಗುವ ಸಂಭವ ಇದೆಯಾದರೂ ಅನುಕೂಲಗಳಿಲ್ಲ. ಹಾಗೆಯೇ ಸಂದಣಿಯ ಜೀವಿಗಳ ನಡುವೆ ಅಂತರ ಇದ್ದರೆ ಸ್ಪರ್ಧೆ ಕಡಿಮೆಯಾಗಬಹುದು. ಆದರೆ ಜೀವಿಗಳು ಗುಂಪಿನಲ್ಲಿ ಕಂಡುಬರುವ ಅಸಹಕಾರದ ಅನುಕೂಲತೆಗಳನ್ನು ಕಳೆದುಕೊಳ್ಳುವುವು. ಆದ್ದರಿಂದ ವಿಕಾಸದ ದೃಷ್ಟಿಯಿಂದ ಯಾವ ರೂಪ ದೀರ್ಘಾವಧಿಯ ಅನುಕೂಲತೆಯನ್ನು ಉಂಟುಮಾಡುತ್ತದೆ. ಎಂಬುದರ ಮೇಲೆ ಅವಲಂಬಿತವಾಗಿದೆ. ಎರಡು ಪ್ರರೂಪಗಳೂ ನಿಸರ್ಗದಲ್ಲಿ ಬಹು ಸಾಮಾನ್ಯ. ಕೆಲವು ಪ್ರಭೇದ ಸಂದಣಿಗಳು ಒಂದು ಪ್ರರೂಪದಿಂದ ಮತ್ತೊಂದು ಪ್ರರೂಪಕ್ಕೆ ಬದಲಾಯಿಸುತ್ತವೆ. ಉದಾಹರಣೆಗೆ ರಾಬಿನ್ ಹಕ್ಕಿಗಳು ಪ್ರಜನನ ಕಾಲದಲ್ಲಿ ಬೇರೆ ಬೇರೆಯಾಗಿ ತಮ್ಮ ತಮ್ಮ ಪ್ರಾಂತ್ಯಗಳಿಗೆ ಹೋಗುತ್ತವೆ. ಚಳಿಗಾಲದಲ್ಲಿ ಒಟ್ಟುಗೂಡಿ ಗುಂಪುಗಳಲ್ಲಿದ್ದು ಎರಡು ಪ್ರರೂಪಗಳ ಪ್ರಯೋಜನಗಳನ್ನೂ ಪಡೆಯುತ್ತವೆ. ಆದರೆ ಇನ್ನು ಕೆಲವು ಪ್ರಾಣಿಗಳು ವ್ಯತಿರಿಕ್ತವಾದ ಪ್ರರೂಪಗಳನ್ನು ಒಂದೇ ಕಾಲದಲ್ಲಿ ತೋರಿಸುತ್ತವೆ. ಉದಾಹರಣೆಗೆ ಪೌಢಪ್ರಾಣಿಗಳು ವಿಯುಕ್ತವಾಗುವುವು, ಆದರೆ ಸಣ್ಣವಯಸ್ಸಿನವು ಗುಂಪುಗೂಡುವುವು. ಮೀನು, ಪಕ್ಷಿ ಮತ್ತು ಕೋತಿಗಳಲ್ಲಿ ಪ್ರಾದೇಶಿಕತೆಯನ್ನು ಹೆಚ್ಚಾಗಿ ಅಭ್ಯಸಿಸಲಾಗಿದೆ. ಅನೇಕ ಪ್ರಾಣಿಗಳು ಪ್ರಾದೇಶಿಕತೆಯ ಚಟುವಟಿಕೆಯನ್ನು ಋತುಕಾಲಗಳಲ್ಲಿ ಪ್ರದರ್ಶಿಸುತ್ತವೆ. ಉದಾಹರಣೆಗೆ ಬಾಸ್ ಮತ್ತು ಸೂರ್ಯಮೀನುಗಳ ಗಂಡುಗಳು ತಮ್ಮ ಗೂಡುಗಳನ್ನು ರಕ್ಷಿಸಿಕೊಳ್ಳುವುವು. ಬೇರೆ ಮೀನು ತಮ್ಮ ಗೂಡುಗಳ ಕಡೆ ಬಂದಾಗ ತಮ್ಮ ಬಣ್ಣದ ರೆಕ್ಕೆಗಳನ್ನು ಪ್ರದರ್ಶಿಸುತ್ತ ಅತಿಕ್ರಮ ಪ್ರವೇಶಿಯ ಕಡೆ ನುಗ್ಗುತ್ತವೆ. ಈ ಸಂದರ್ಭಗಳಲ್ಲಿ ಹೆಣ್ಣುಮೀನು ಮೊಟ್ಟೆಯಿಡುವುದಕ್ಕೆ ಮುಂಚೆ ಮತ್ತು ಆಮೇಲೆ ಗಂಡುಮೀನು ತನ್ನ ನಿವೇಶನವನ್ನು ಕಾಪಾಡುವುದರಿಂದ, ರಕ್ಷಣೆ ಸ್ಥಳಕ್ಕಾಗಿಯೇ ಎಂದು ತಿಳಿಯಲಾಗಿದೆ.
10 ಎರಡು ಸಂದಣಿಗಳ ನಡುವಣ ಅಂತರಕ್ರಿಯೆಗಳ ಬಗೆಗಳು : ಎರಡು ಸಂದಣಿಗಳ ನಡುವೆ ಒಂಬತ್ತು ರೀತಿಯ ಅಂತರಕ್ರಿಯೆಗಳನ್ನು ಗಮನಿಸಬಹುದಾಗಿದೆ :
(i)ತಟಸ್ಥತೆ (ನ್ಯೂಟ್ರಾಲಿಸಮ್) : ಯಾವ ಸಂದಣಿಯೂ ಇನ್ನೊಂದು ಸಂದಣಿಯ ಮೇಲೆ ಯಾವ ರೀತಿಯ ಪ್ರತಿಕೂಲ ಪರಿಣಾಮವನ್ನುಂಟು ಮಾಡದು.
(ii) ಸ್ಪರ್ಧೆ-ನೇರವಾಗಿ ಅಡ್ಡಬರುವ ಬಗೆ (ಕಾಂಪಿಟಿಷನ್-ಡೈರೆಕ್ಟ್ ಇಂಟರ್‍ಫೆರೆನ್ಸ ಟೈಪ್): ಪ್ರತಿಯೊಂದು ಪ್ರಭೇದವೂ ಮತ್ತೊಂದು ಪ್ರಭೇದವನ್ನು ಪ್ರತಿಕ್ಷೇಪಿಸುತ್ತದೆ (ಇನ್‍ಹಿಬಿಟ್).
(iii) ಸ್ಪರ್ಧೆ-ಮೂಲ ಪದಾರ್ಥಗಳನ್ನು ಉಪಯೋಗಿಸುವ ಬಗೆ: (ರಿಸೋರ್ಸ್ ಯೂಸ್ ಟೈಪ್) : ಮೂಲ ಪದಾರ್ಥಗಳ ಕುಂಠಿತ ಸರಬರಾಜು ಸ್ಥಿತಿಗಳಲ್ಲಿ ಅಪ್ರತ್ಯಕ್ಷ ರೀತಿಯಿಂದ ಪ್ರತಿಕ್ಷೇಪಿಸುವುದು.
(iv) ಅಮೆನ್ಸಾಲಿಸಮ್ : ಒಂದು ಸಂದಣಿ ಪ್ರಭಾವಿತವಾದರೂ ಮತ್ತೊಂದು ಅಪ್ರಭಾವಿತವಾಗಿರುತ್ತದೆ.
(v) ಪರಾವಲಂಬನೆ (ಪ್ಯಾರಸಿಟಿಸಮ್) : ಒಂದು ಜೀವಿ ಪರಾವಲಂಬಿ ಮತ್ತೊಂದು ಆತಿಥೇಯ ಜೀವಿ. ಪರಾವಲಂಬಿ ಆತಿಥೇಯ ಜೀವಿಗಿಂತ ಸಣ್ಣದು.
(vi) ಪರಭಕ್ಷಣೆ (ಪ್ರೆಡೇಷನ್) : ಒಂದು ಜೀವಿ ಪರಭಕ್ಷಿ. ಇದು ಎರೆಗಿಂತ ದೊಡ್ಡದು. ಪರಭಕ್ಷಿ ನೇರವಾಗಿ ಎರೆಯ ಮೇಲೆ ಆಕ್ರಮಣ ನಡೆಸುವುದು. ಆದರೆ ಆ ಜೀವಿಯನ್ನೇ ಆಶ್ರಯಿಸುವುದಿಲ್ಲ.
(vii) ಸಹಭೋಜನ (ಕಮೆನ್ಸಾಲಿಸಮ್) : ಸಹಭೋಜಿತ ಸಂದಣಿ ಉಪಕಾರ ಪಡೆಯುತ್ತದೆ. ಆದರೆ ಇನ್ನೊಂದು ಅಪ್ರಭಾವಿತವಾಗುವುದು.
(viii) ಆದ್ಯ ಸಹಕಾರ (ಪ್ರೋಟೊ ಕೋಪರೇಷನ್) : ಎರಡು ಸಂದಣಿಗಳಿಗೂ ಇದು ಅನುಕೂಲಕರ. ಆದರೆ ಒಂದರ ಸಹವಾಸ ಇನ್ನೊಂದಕ್ಕೆ ಅವಶ್ಯಕವಲ್ಲ.
(ix) ಪರಸ್ಪರತೆ (ಮ್ಯೂಚುವಾಲಿಸಮ್); ಎರಡು ಸಂದಣಿಗಳಿಗೂ ಅನುಕೂಲಕರ. ಆದರೆ ಒಂದರ ಸಹವಾಸ ಇನ್ನೊಂದಕ್ಕೆ ಅವಶ್ಯಕ.
ಈ ಎಲ್ಲ ರೀತಿಯ ಸಂದಣಿ ಅಂತರಕ್ರಿಯೆಗಳು ಸಮುದಾಯಗಳಲ್ಲಿ ಕಂಡುಬರಬಹುದು. ಒಂದು ನಿರ್ದಿಷ್ಟ ಪ್ರಭೇದದ ಜೀವಿಗಳ ಜೊತೆಯ ಅಂತರಕ್ರಿಯೆ ಬೇರೆ ಬೇರೆ ಪರಿಸರ ಸ್ಥಿತಿಗಳಲ್ಲಿ ಅಥವಾ ಅವುಗಳ ಜೀವನಚರಿತ್ರೆಯ ಕ್ರಮಾನುಗತ ಹಂತಗಳಲ್ಲಿ ಬದಲಾಗಬಹುದು. ಆದ್ದರಿಂದ ಎರಡು ಪ್ರಭೇದಗಳು ಒಂದು ಕಾಲದಲ್ಲಿ ಪರಾವಲಂಬನೆಯನ್ನು ಅಥವಾ ಸಹಭೋಜನದ ಅಂತರ ಕ್ರಿಯೆಯನ್ನು ತೋರುತ್ತಿದ್ದು ಮತ್ತೊಂದು ಸಂದರ್ಭದಲ್ಲಿ ಪೂರ್ಣತಟಸ್ಥವಾಗಿ ಇರಬಹುದು. ಅಂತರಕ್ರಿಯೆಗಳ ಪ್ರಭಾವವನ್ನು ತಿಳಿಯಲು ಪ್ರಯೋಗ ಶಾಲೆಗಳಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ. ಒಂದು ಪರಿಸರವ್ಯವಸ್ಥೆಯ ಅಂತರಕ್ರಿಯೆಗಳ ಪೂರ್ಣವಿಚಾರವನ್ನು ತಿಳಿಸುವಾಗ ಮೇಲೆ ಹೇಳಿದ ಒಂಬತ್ತು ಅಂತರಕ್ರಿಯೆಗಳನ್ನು (i) ಋಣಾತ್ಮಕ ಅಂತರಕ್ರಿಯೆಗಳು (ನೆಗೆಟಿವ್ ಇಂಟರ್‍ಆ್ಯಕ್ಷನ್ಸ್) ಮತ್ತು (ii) ಧನಾತ್ಮಕ ಅಂತರಕ್ರಿಯೆಗಳು (ಪಾಸಿಟಿವ್ ಇಂಟರ್‍ಆ್ಯಕ್ಷನ್ಸ್) ಎಂಬ ಎರಡು ಪಂಗಡಗಳಾಗಿ ವಿಂಗಡಿಸಬಹುದು. ಈ ಎರಡು ಪಂಗಡಗಳ ಮುಖ್ಯವಾದ ಮೂಲ ತತ್ತ್ವಗಳು ಈ ರೀತಿ ಇವೆ : (i) ಪರಿಸರವ್ಯವಸ್ಥೆಗಳ ವಿಕಾಸ ಮತ್ತು ಬೆಳೆವಣಿಗೆಯಲ್ಲಿ ಋಣಾತ್ಮಕ ಅಂತರ ಕ್ರಿಯೆಗಳು ಧನಾತ್ಮಕ ಸಹಜೀವನತೆಯ ಪರ ಕಡಿಮೆಯಾಗಿ ಅಂತರ ಕ್ರಿಯೆಯನ್ನೊಳಗೊಂಡ ಪ್ರಭೇದಗಳ ಉಳಿಕೆಯನ್ನು ಹೆಚ್ಚುಮಾಡುತ್ತವೆ. (ii) ಹೊಸ ಸಹವಾಸಗಳು ಸಾಮಾನ್ಯವಾಗಿ ಹಳೆಯ ಸಹವಾಸಗಳಿಗಿಂತ, ತೀವ್ರ ಋಣಾತ್ಮಕ ಸಹಕ್ರಿಯೆಗಳನ್ನು (ಕೋ ಆ್ಯಕ್ಷನ್ಸ್) ಬೆಳೆಸುತ್ತವೆ.
ಅಂತರಕ್ರಿಯಾ ಚಟುವಟಿಕೆಗಳಾಗುತ್ತಿರುವ ಎರಡು ಪ್ರಭೇದಗಳಲ್ಲಿ ಹಾನಿಕರ ಪರಿಣಾಮಗಳಿಲ್ಲದೆ ಉಪಯುಕ್ತ ಪರಿಣಾಮಗಳಾದಾಗ ಎರಡು ಸಂದಣಿಗಳೂ ಬೆಳೆದು ವೃದ್ಧಿಯಾಗಿ ಪರಸ್ಪರ ಅನುಕೂಲವಾಗುವ ಸಮತೋಲನೆಯ ಮಟ್ಟವನ್ನು ಮುಟ್ಟುತ್ತವೆ. ಸಂದಣಿಗಳ ಅಂತರಕ್ರಿಯೆಗಳನ್ನು ವಿವರಿಸುವಾಗ ಸಹಜೀವನ (ಸಿಂಬಯೋಸಿಸ್) ಎಂಬ ಪದವನ್ನು ಉಪಯೋಗಿಸುವುದುಂಟು. ಈ ಪದಕ್ಕೆ ವಿವಿಧ ಸಂದರ್ಭಗಳಲ್ಲಿ ವಿವಿಧ ಅರ್ಥಗಳಿವೆ. ಉದಾಹರಣೆಗೆ ಈ ಪದವನ್ನು ಪರಸ್ಪರತೆ ಎಂಬ ಅರ್ಥದಲ್ಲೂ ಕೆಲವು ಸಂದರ್ಭಗಳಲ್ಲಿ ಸಹಭೋಜನ ಹಾಗೂ ಪರಾವಲಂಬನ ಎಂಬ ಅರ್ಥದಲ್ಲೂ ಉಪಯೋಗಿಸುವರು. ಋಣಾತ್ಮಕ ಅಂತರಕ್ರಿಯೆಗಳಲ್ಲಿ ಅಂತರ ಪ್ರಭೇದಾತ್ಮಕ ಸ್ಪರ್ಧೆ ಒಂದು ವಿಧ. ಎರಡು ಜೀವಿಗಳು ಒಂದೇ ಪದಾರ್ಥಕ್ಕೆ ಹೊಡೆದಾಡುವುದನ್ನು ಸ್ಪರ್ಧೆ ಎಂದು ಕರೆಯಲಾಗುತ್ತದೆ. ಎರಡು ಅಥವಾ ಅನೇಕ ಪ್ರಭೇದ ಸಂದಣಿಗಳ ನಡುವಣ ಅಂತರ ಕ್ರಿಯೆಯನ್ನು ಸಂದಣಿ ಅಂತರಸ್ಪರ್ಧೆ ಎನ್ನುವರು. ಇದರಿಂದ ಸಂದಣಿಯ ಬೆಳೆವಣಿಗೆಯೂ ಸ್ಪರ್ಧೆಯಲ್ಲಿ ಬದುಕಿ ಉಳಿದ ಜೀವಿಗಳೂ ಪ್ರಭಾವಿತವಾಗುತ್ತವೆ. ಸ್ಪರ್ಧೆಯ ಅಂತರಕ್ರಿಯೆ ಸಾಮಾನ್ಯವಾಗಿ ನೆಲೆ, ಬೆಳಕು, ತ್ಯಾಜ್ಯ ಪದಾರ್ಥಗಳು ಹಿಂಸ್ರಪ್ರಾಣಿಗಳಿಗೆ ಈಡಾಗುವುದು. ರೋಗ ಮತ್ತು ಇತರ ರೀತಿಯ ಪರಸ್ಪರತೆಯ ಅಂತರಕ್ರಿಯೆಗಳನ್ನು ಒಳಗೊಳ್ಳುತ್ತದೆ. ಅಂತರ ಸಂದಣಿಯ ಸ್ಪರ್ಧೆ ಎರಡು ಸಂದಣಿಗಳಲ್ಲಿ ಸಮತೋಲನೆಯ ಹೊಂದಾಣಿಕೆಗಳನ್ನು ಉಂಟು ಮಾಡಬಹುದು ಅಥವಾ ಒಂದು ಸಂದಣಿಯ ಬದಲು ಮತ್ತೊಂದು ಸಂದಣಿಯನ್ನು ತರಬಹುದು ಅಥವಾ ಆ ಸಂದಣಿ ಬೇರೆ ಪ್ರದೇಶವನ್ನು ಆಕ್ರಮಿಸುವಂತೆ ಅಥವಾ ಬೇರೆ ಆಹಾರವನ್ನು ಉಪಯೋಗಿಸುವಂತೆ ಮಾಡಬಹುದು. ಒಂದೇ ರೀತಿಯ ಸ್ವಭಾವವುಳ್ಳ ಬಹು ಹತ್ತಿರ ಸಂಬಂಧಿಜೀವಿಗಳು ಸಾಮಾನ್ಯವಾಗಿ ಒಂದೇ ಪ್ರದೇಶದಲ್ಲಿ ವಾಸಿಸುವುದಿಲ್ಲ ಎಂಬ ಅಂಶವನ್ನು ಗಮನಿಸಲಾಗಿದೆ. ಅವು ಒಂದೇ ಸ್ಥಳದಲ್ಲಿದ್ದರೆ ಭಿನ್ನತೆರನ ಆಹಾರವನ್ನು ಉಪಯೋಗಿಸುತ್ತವೆ; ಅಥವಾ ಪರಿಸರದಲ್ಲಿ ಬೇರೆ ಬೇರೆಯ ಆಯ್ಕೆಯ ಕ್ಷೇತ್ರಗಳಲ್ಲಿ (ನಿಚ್) ವಾಸಿಸುತ್ತವೆ. ಯಾವುದೇ ಎರಡು ಪ್ರಭೇದಗಳು ಒಂದೇ ರೀತಿಯ ಆಯ್ಕೆಯ ಕ್ಷೇತ್ರವನ್ನು ಆಕ್ರಮಿಸಲಾರವು. ಆದರೆ ಒಂದು ಪ್ರಭೇದದ ಗುಣಗಳು ಮತ್ತೊಂದರ ಗುಣಗಳನ್ನು ಹೆಚ್ಚಾಗಿ ಹೋಲುವ ಸಂದರ್ಭಗಳಲ್ಲಿ ಅವುಗಳ ಕ್ಷೇತ್ರಾವಶ್ಯಕತೆಗಳು ಒಂದೇ ರೀತಿಯಾಗಿರುವುವು. ಇಂಥ ಸಂದರ್ಭಗಳಲ್ಲಿ ಸ್ಪರ್ಧೆ ಇದ್ದೇ ಇರುವುದು. ಪ್ರಾಯೋಗಿಕ ಅಧ್ಯಯನಗಳ ಪ್ರಕಾರ ಅನೇಕ ಸಂದರ್ಭಗಳಲ್ಲಿ ಒಂದು ಕ್ಷೇತ್ರವನ್ನು ಒಂದೇ ಪ್ರಭೇದ ಸಂದಣಿ ಅಲಂಕರಿಸುತ್ತದೆ. ಹತ್ತಿರ ಸಂಬಂಧಿ ಪ್ರಭೇದಗಳಲ್ಲಿ ಒಂದು ಪ್ರಭೇದ ಇನ್ನೊಂದನ್ನು ಒಂದು ಪರಿಸರ ವ್ಯವಸ್ಥೆಯಿಂದ ಬೇರ್ಪಡಿಸುವ ಸ್ಪರ್ಧಾಪ್ರವೃತ್ತಿಯನ್ನು ಸ್ಪರ್ಧಾತ್ಮಕ ಬಹಿಷ್ಕರಣ ತತ್ತ್ವ (ಕಾಂಪಿಟಿಷನ್ ಎಕ್ಸ್‍ಕ್ಲೂಷನ್ ಪ್ರಿನ್ಸಿಪಲ್) ಎಂದು ಕರೆಯುವರು. ಈ ತತ್ತ್ವವನ್ನು ಉದಾಹರಣೆಯಿಂದ ವಿವರಿಸಬಹುದು. ಪ್ಯಾರಮೀಸಿಯಮ್ ಕಾಡೇಟಮ್ ಮತ್ತು ಪ್ಯಾರಮೀಸಿಯಮ್ ಅರೀಲಿಯ ಪ್ರಭೇದಗಳನ್ನು ಬೇರೆ ಬೇರೆಯಾಗಿ ಅನುಕೂಲತಮ ಪರಿಸ್ಥಿತಿಗಳಲ್ಲಿ ಬೆಳೆಸಿದಾಗ ಅವು ಸಾಮಾನ್ಯ ರೀತಿಯ ಸಿಗ್ಮಾಯಿಡ್ ಬೆಳೆವಣಿಗೆ ವಕ್ರರೇಖೆಯನ್ನನುಸರಿಸಿ ಬೆಳೆಯುವುವು. ಆದರೆ ಎರಡು ಪ್ರಭೇದಗಳನ್ನು ಕೂಡಿಸಿ ಕೃಷಿಮಾಡಿದಾಗ ಪ್ಯಾ. ಕಾಡೇಟಮ್‍ನ ಬೆಳೆವಣಿಗೆ ಆಗುವುದಿಲ್ಲ
ಪರಭಕ್ಷಣೆ ಮತ್ತು ಪರಾವಲಂಬನೆ : ಇವೆರಡೂ ಋಣಾತ್ಮಕ ರೀತಿಯ ಅಂತರಕ್ರಿಯೆಗಳು ಪರಭಕ್ಷಿಗಳು ಮತ್ತು ಪರಾವಲಂಬಿಗಳು ಜೀವಿಗಳನ್ನು ಸಾಯಿಸುವುವು ಮತ್ತು ಗಾಯಗೊಳಿಸುವುವು. ಒಂದು ರೀತಿಯಲ್ಲಿ ಇವು ಸಂದಣಿಗಳ ಬೆಳೆವಣಿಗೆಯ ದರವನ್ನು ಕಡಿಮೆ ಮಾಡುತ್ತವೆ. ಇವು ಹೆಚ್ಚಾಗಿ ಹಾನಿಕರವಾದರೂ ಕೆಲವು ಸಂದರ್ಭಗಳಲ್ಲಿ ಮನುಷ್ಯನಿಗೆ ಅನುಕೂಲವಾಗುವ ಕಾರ್ಯಗಳನ್ನು ಮಡುವುದೂ ಉಂಟು. ಉದಾಹರಣೆಗೆ ಇವು ತಮ್ಮ ಚಟುವಟಿಕೆಗಳಿಂದ ಸಸ್ಯಾಹಾರಿ ಕೀಟಗಳ ಸಂದಣಿಯ ಸಾಂದ್ರತೆಯನ್ನು ಕಡಿಮೆ ಮಾಡುತ್ತವೆ. ಆತಿಥೇಯ ಸಂದಣಿ ಒಂದು ಮಿತಿಯಲ್ಲಿದ್ದಾಗ ಈ ಕಾರ್ಯ ಸಾಧ್ಯ. ಆದರೆ ಆತಿಥೇಯ ಸಂದಣಿ ಸಾಂದ್ರತಾವಲಂಬಿ ನಿಯಂತ್ರಣದಿಂದ ತಪ್ಪಿಸಿಕೊಂಡು ಪರಿಸರದ ಧಾರಣಸಾಮಥ್ರ್ಯವನ್ನು ಮೀರಿ ಬೆಳೆದಾಗ ಅವುಗಳ ಮೇಲೆ ಪರಭಕ್ಷಿಗಳು ಹಾಗೂ ಪರಾವಲಂಬಿಗಳು ಯಾವ ತೆರನ ಪ್ರಭಾವವನ್ನೂ ಬೀರಲಾರವು. ಪರಭಕ್ಷಿಗಳ ಒತ್ತಡ ಕಡಿಮೆಯಾದಾಗ ಆತಿಥೇಯ ಸಂದಣಿ ಹೆಚ್ಚಾಗಿ ಸ್ಫೋಟಗೊಳ್ಳಬಹುದು. ಇದನ್ನು ಆರಿಜೋನದ ಕೈಬಾಟ್ ಹುಲ್ಲುಗಾವಲಿನ ಜಿಂಕೆಗಳ ಬೆಳೆವಣಿಗೆಯ ಮೂಲಕ ಉದಾಹರಿಸಬಹುದು. 1907ರಲ್ಲಿ ಕೈಬಾಟ್ ಪ್ರಸ್ಥಭೂಮಿಯ ಸುಮಾರು 7,00,000 ಎಕರೆ ಜಮೀನಿನಲ್ಲಿ ಸುಮಾರು 4,000 ಜಿಂಕೆಗಳಿದ್ದುವು. ಸುಮಾರು 17 ವರ್ಷಗಳಲ್ಲಿ ಅವುಗಳ ಸಂಖ್ಯೆ 100,000ಕ್ಕೆ ಏರಿತು. 1907ರಲ್ಲಿ ಜಿಂಕೆಗಳ ಶತ್ರುಗಳಾದ ತೋಳ, ಕಯೋಟ್ ಮತ್ತು ಪ್ಯೂಮಗಳನ್ನು ಕೊಲ್ಲುವ ಪ್ರಯತ್ನಗಳು ಪ್ರಾರಂಭವಾಗಿ ಸುಮಾರು 15-20 ವರ್ಷಗಳಲ್ಲಿ ಹೆಚ್ಚು ಸಂಖ್ಯೆಯ ಪರಭಕ್ಷಿಗಳು ನಾಶವಾದವು. ಇದರಿಂದಾಗಿ ಜಿಂಕೆಗಳ ಸಂಖ್ಯೆ ಬರುಬರುತ್ತಾ ಹೆಚ್ಚಾಗಿ 1924ರಲ್ಲಿ ಅವುಗಳ ಸಂಖ್ಯೆ 100,000ಕ್ಕೆ ಏರಿತು. ಒಂದು ಪರಿಮಿತಿಯಲ್ಲಿದ್ದ ಜಿಂಕೆಗಳ ಸಂಖ್ಯೆ ಹೆಚ್ಚಾಗಿ ಆ ಪ್ರದೇಶದಲ್ಲಿದ್ದ ಆಹಾರವನ್ನೆಲ್ಲ ಅವು ಉಪಯೋಗಿಸುತ್ತ ಬಂದವು. ತತ್ಫಲವಾಗಿ ಆಹಾರ ಸಾಲದೆ ಬಂದು ಅನೇಕ ಜಿಂಕೆಗಳು ಸತ್ತವು. 1939ರ ಹೊತ್ತಿಗೆ ಕೇವಲ 10,000 ಜಿಂಕೆಗಳು ಮಾತ್ರ ಉಳಿದಿದ್ದುವು. ನಿಸರ್ಗದಲ್ಲಿ ಪರಭಕ್ಷಿ ಮತ್ತು ಆತಿಥೇಯ ಜೀವಿಗಳ ಪ್ರಮಾಣವು ಅವುಗಳ ಸಂದಣಿಯನ್ನು ಒಂದು ಸಮತೋಲನ ಹಂತದಲ್ಲಿಡುವುದನ್ನೂ ಒಂದು ಪರಿಸರ ವ್ಯವಸ್ಥೆಯ ಧಾರುಣ ಸಾಮಥ್ರ್ಯವನ್ನು ಮೀರಿ ಒಂದು ಸಂದಣಿ ಬೆಳೆದರೆ ಆಗುವ ಹಾನಿಯನ್ನೂ ಈ ಉದಾಹರಣೆ ತಿಳಿಸುತ್ತದೆ. ಬೇರೆ ಸಂದರ್ಭಗಳಲ್ಲಿಯೂ ಸಂದಣಿಯ ಸ್ಪೋಟವಾಗಬಹುದು. ಉದಾಹರಣೆಗೆ ಒಂದು ಹೊಸ ಪ್ರದೇಶಕ್ಕೆ ಒಂದು ಪ್ರಭೇದವನ್ನು ಸೇರಿಸಿದಾಗ ಸಂದಣಿಯ ಸ್ಫೋಟವಾಗಬಹುದು. ಇದಕ್ಕೆ ಎರಡು ಕಾರಣಗಳಿವೆ ; (i) ಹೊಸ ಪ್ರದೇಶದಲ್ಲಿ ಉಪಯೋಗಿಸದೆ ಇರುವ ಆಹಾರ ಪದಾರ್ಥ ಇರುವುದು, (ii) ಋಣಾತ್ಮಕ ಅಂತರಕ್ರಿಯೆಗಳಿಲ್ಲದಿರುವುದು. ಈ ಎರಡು ಅಂಶಗಳು ಜೀವಿಯ ಬೆಳೆವಣಿಗೆಗೆ ಅನುಕೂಲವಾಗಿ ಜೀವಿಸಂದಣಿ ಅತಿ ಜಾಗ್ರತೆಯಾಗಿ ಬೆಳೆದು ಸಂದಣಿಯ ಸ್ಫೋಟನೆ ಉಂಟಾಗುತ್ತದೆ. ಉದಾಹರಣೆಗೆ ಆಸ್ಟ್ರೇಲಿಯ ಖಂಡಕ್ಕೆ ಸೇರಿದ ಮೊಲಗಳು ಯಾವ ಪರಭಕ್ಷಿಗಳ ಆತಂಕವಿಲ್ಲದೆ ಅಲ್ಲಿನ ಆಹಾರವನ್ನು ಉಪಯೋಗಿಸಿ ಅತಿವೇಗದಲ್ಲಿ ವೃದ್ಧಿಯಾಗಿ ಆ ಖಂಡವನ್ನೆಲ್ಲ ಆಕ್ರಮಿಸಿದವು.
ಧನಾತ್ಮಕ ಅಂತರಕ್ರಿಯೆಗಳು : ಸಹಭೋಜನ, ಸಹಕಾರ ಮತ್ತು ಪರಸ್ಪರತೆ ಇವು ಧನಾತ್ಮಕ ಅಂತರಕ್ರಿಯೆಗಳನ್ನು ತೋರಿಸುತ್ತವೆ. ಎರಡು ಪ್ರಭೇದ ಸಂದಣಿಗಳ ಸಹವಾಸ (ಅಸೋಸಿಯೇಷನ್) ಧನಾತ್ಮಕ ಕ್ರಿಯೆಗಳಲ್ಲಿ ಅಂತ್ಯಗೊಳ್ಳಬಹುದು. ಈ ಬಗೆಯ ಕ್ರಿಯೆಯ ವ್ಯಾಪ್ತಿ ಸಂದಣಿಗಳಲ್ಲಿ ಹೆಚ್ಚಾಗಿದೆ. ಸ್ಪರ್ಧೆ ಪರಾವಲಂಬನೆ ಮುಂತಾದ ಕ್ರಿಯೆಗಳಷ್ಟೆ ಈ ಅಂತರಕ್ರಿಯೆಯೂ ಮುಖ್ಯ. ಇವುಗಳ ಕ್ರಿಯೆಗಳು ಸಂದಣಿಯ ಮತ್ತು ಸಮುದಾಯಗಳ ರೀತಿನೀತಿಗಳನ್ನು ತಿಳಿಯಲು ಸಹಾಯಕವಾಗುತ್ತವೆ. ಧನಾತ್ಮಕ ಅಂತರಕ್ರಿಯೆಗಳನ್ನು ವಿಕಾಸ ಕ್ರಮದಲ್ಲಿ ಈ ರೀತಿಯಲ್ಲಿ ಪರಿಗಣಿಸಬಹುದು.
(i) ಸಹಭೋಜನ (ಒಂದು ಸಂದಣಿ ಅನುಕೂಲ ಪಡೆಯುವುದು)
(ii) ಆದ್ಯಸಹಕಾರ (ಎರಡು ಸಂದಣಿಗಳೂ ಅನುಕೂಲ ಪಡೆಯುವುದು)
(iii) ಪರಸ್ಪರತೆ (ಎರಡು ಸಂದಣಿಗಳೂ ಅನುಕೂಲಗಳನ್ನು ಪಡೆಯುವುವಲ್ಲದೆ ಒಂದು ಸಂದಣಿ ಮತ್ತೊಂದರ ಮೇಲೆ ಪೂರ್ಣವಾಗಿ ಅವಲಂಬಿತವಾಗಿರುತ್ತದೆ). ನಿಸರ್ಗದಲ್ಲಿ ಸ್ಪರ್ಧೆಯ ಅಂತರಕ್ರಿಯೆ ಬಹುಮುಖ್ಯವಾದುದು. ಈ ಕ್ರಿಯೆಯಿಂದ ಮತ್ತು ಸಹಕಾರ ಕ್ರಿಯೆಯಿಂದ ನಿಸರ್ಗದ ಆಯ್ಕೆ ಆಗುತ್ತದೆ.
ಪರಿಸರ ವ್ಯವಸ್ಥೆಯ ಸಮತೋಲನೆ ಎರಡು ಸಂದಣಿಗಳ ಋಣಾತ್ಮಕ ಮತ್ತು ಧನಾತ್ಮಕ ಅಂತರಕ್ರಿಯೆಗಳ ಸಮತೋಲನೆಯನ್ನು ಅವಲಂಬಿಸಿದೆ. ಸಹಭೋಜನಕ್ರಿಯೆ ಒಂದು ಸರಳರೀತಿಯ ಧನಾತ್ಮಕ ಅಂತರಕ್ರಿಯೆ. ಇದು ಬಹುಶಃ ಉಪಕಾರದ ಸಂಬಂಧಗಳ ಬೆಳೆವಣಿಗೆಯ ಮೊದಲ ಹೆಜ್ಜೆಯಾಗಬಹುದು. ಈ ಕ್ರಿಯೆ ಕಡಲಿನ ಅಚಲ ಸಸ್ಯಗಳ ಮತ್ತು ಪ್ರಾಣಿಗಳ ನಡುವೆ ಹಾಗೂ ಚಲನಾಜೀವಿಗಳಲ್ಲಿ ಬಹು ಸಾಮಾನ್ಯ. ಹುಳುವಿನ ಬಿಲ, ಮೃದ್ವಂಗಿ ಅಥವಾ ಸ್ಪಂಜುಗಳಲ್ಲಿ ಅನೇಕ ಅತಿಥಿಗಳು ಇದ್ದೇ ಇರುವುವು. ಇವುಗಳಿಗೆ ಸಾಮಾನ್ಯವಾಗಿ ಬೇಕಾದುದು ಅತಿಥೇಯದ ಸ್ಥಳದ ಆಶ್ರಯ. ಆದರೆ ಈ ಅತಿಥಿಗಳಿಂದ ಆತಿಥೇಯಕ್ಕೆ ತೊಂದರೆಯಾಗಲಿ ಅನುಕೂಲಾಗಲಿ ಇಲ್ಲ. ವಿವಿಧ ಜಾತಿಯ ಸಹಭೋಜಿ ಮೀನುಗಳು, ಕಪ್ಪೆಚಿಪ್ಪು ಪ್ರಾಣಿಗಳು, ಪಾಲಿಕೀಟ, ಹುಳುಗಳು, ಏಡಿಗಳು ಆತಿಥೇಯ ಪ್ರಾಣಿಗಳ ಆಹಾರ ಅಥವಾ ತ್ಯಾಜ್ಯಪದಾರ್ಥಗಳನ್ನು ಕಸಿದುಕೊಂಡು ಜೀವಿಸುತ್ತವೆ. ಸಹಭೋಜನವನ್ನು ಏಡಿ ಮತ್ತು ಕುಟುಕುಕಣವಂತಗಳಲ್ಲಿ (ಸೀಲೆಂಟೆರೇಟ) ಕಾಣಬಹುದು. ಕುಟುಕುಕಣವಂತಗಳು ಏಡಿಯ ಬೆನ್ನಿನ ಮೇಲೆ ಬೆಳೆಯುವುವು. ಇದರಿಂದ ಏಡಿಯ ಸುಳಿವು ಬೇರೆ ಪ್ರಾಣಿಗಳಿಗೆ ತಿಳಿಯದ ಹಾಗೆ ಮಾಡಿ ಏಡಿಯನ್ನು ಪರೋಕ್ಷವಾಗಿ ರಕ್ಷಿಸುತ್ತವೆ. ಇದಕ್ಕೆ ಪ್ರತಿಯಾಗಿ ಏಡಿ ಕುಟುಕುಕಣವಂತಗಳ್ನನು ತಾನು ಹೋಗುವ ಕಡೆಯಲ್ಲೆಲ್ಲ ಕರೆದುಕೊಂಡು ಹೋಗುತ್ತದೆ. ಅಲ್ಲದೆ ಅದಕ್ಕೆ ತಾನು ಬೇರೆ ಪ್ರಾಣಿಯನ್ನು ಹಿಡಿದು ತಿನ್ನುವಾಗ ಆಹಾರಕಣಗಳನ್ನು ಒದಗಿಸುತ್ತದೆ. ಈ ರೀತಿಯ ಸಹವಾಸ ಇಲ್ಲದಿದ್ದರೂ ಅವು ಜೀವಿಸಬಲ್ಲವು. ಆದರೆ ಈ ರೀತಿಯ ಸಹಕಾರ ಮುಂದುವರಿದಾಗ ಪ್ರತಿಯೊಂದು ಪ್ರಭೇದವೂ ಮತ್ತೊಂದರ ಪೂರ್ಣ ಆಶ್ರಯದಾತವಾಗಿರುತ್ತವೆ. ಇಂಥ ಅಂತರಕ್ರಿಯೆಯನ್ನು ಪರಸ್ಪರತೆ ಅಥವಾ ಆವಶ್ಯಕ ಸಹಜೀವನ (ಆಬ್ಲಿಗೇಟ್ ಸಿಂಬೈಯೋಸಿಸ್) ಎಂದು ಹೆಸರಿಸಲಾಗುತ್ತದೆ. ಉದಾಹರಣೆಗೆ:
(i) ಗೆದ್ದಲು ಹುಳು ಮತ್ತು ಕರುಳಿನ ಕಶಾಂಗಿ ಪ್ರೋಟೊಜೋವಗಳ ಸಹ ಜೀವನ : ಅನೇಕ ಗೆದ್ದಲು ಹುಳುಗಳು ತಾವು ತಿನ್ನುವ ಮರವನ್ನು ಜೀರ್ಣಮಾಡಿಕೊಳ್ಳಲಾರವು. ಆದರೆ ಅವುಗಳ ಕರುಳಿನಲ್ಲಿರುವ ಕಶಾಂಗಿಗಳು (ಫ್ಲಾಜೆಲೇಟ್ಸ್) ಮರದಲ್ಲಿರುವ ಸೆಲ್ಯುಲೋಸ್ ಮತ್ತು ಇತರ ಸಸ್ಯಗಳ ಉಳಿಕೆಗಳನ್ನು ತಾವು ಸ್ರವಿಸುವ ಕಿಣ್ವಗಳ ಸಹಾಯದಿಂದ ಜೀರ್ಣಿಸುತ್ತವೆ. ಗೆದ್ದಲು ಹುಳು ಕಶಾಂಗಿಗಳಿಗೆ ಆಶ್ರಯ ಕೊಡುವುದಲ್ಲದೆ ಅವುಗಳ ಪ್ರಸಾರ ಮತ್ತು ಪುನರ್ ಸಂಪರ್ಕಗಳಿಗೆ (ರೀ ಇನ್‍ಫೆಕ್ಷನ್) ಸಹಾಯ ಮಾಡುತ್ತದೆ.
(ii) ಹುತ್ತವನ್ನು ನಿರ್ಮಿಸುವ ಉಷ್ಣವಲಯದ ಇರುವೆ ಮತ್ತು ಶಿಲೀಂಧ್ರಗಳ ಅಂತರಕ್ರಿಯೆ : ಇರುವೆಗಳು ಅವುಗಳ ಗೂಡುಗಳಲ್ಲಿರುವ ಎಲೆಗಳನ್ನು ಅವುಗಳ ಮಲದಿಂದ ಗೊಬ್ಬರವಾಗಿ ಪಿರವರ್ತಿಸಿ ಶಿಲೀಂದ್ರ ಹೊಸ ಎಲೆಗಳ ಮೇಲೆ ಬೆಳೆಯಲು ಅನುಕೂಲ ಮಾಡಿಕೊಡುವುವು. ಅಂದರೆ ಇರುವೆಗಳು ತಮ್ಮ ಗೂಡುಗಳಲ್ಲಿ ಶಿಲೀಂಧ್ರತೋಟವನ್ನು ಕೃಷಿ ಮಾಡುತ್ತವೆ. ಶಿಲೀಂಧ್ರ ಪ್ರತಿಯಾಗಿ ಅವುಗಳ ಕಿಣ್ವಗಳಿಂದ ಸೆಲ್ಯುಲೋಸನ್ನು ಜೀರ್ಣಿಸಿ ಇರುವೆಗಳಿಗೆ ವಿಪುಲ ಮೊತ್ತದ ಸೆಲ್ಯುಲೋಸ್ ಸಿಗುವ ಹಾಗೆ ಮಾಡುವುದು. ಇರುವೆಗಳ ಮಲದಲ್ಲಿ ಪ್ರೋಟೀನನ್ನು ಜೀರ್ಣಿಸುವ ಕಿಣ್ವಗಳಿವೆ. ಆದರೆ ಇದು ಶಿಲೀಂಧ್ರದಲ್ಲಿಲ್ಲ. ಈ ರೀತಿಯ ಸಹಜೀವನದಿಂದ ಒಂದು ಜೀವಿ ಮತ್ತೊಂದು ಜೀವಿಗೆ ಸಹಾಯಕವಾಗುತ್ತದೆ. (ಎನ್.ವಿ.ಎ.)
ಮಾನವ ಪರಿಸರಶಾಸ್ತ್ರ : ಮಾನವಕುಲ ಮತ್ತು ಅದರ ಪರಿಸರವನ್ನು ಅಭ್ಯಾಸಮಾಡುವ ಈ ಶಾಸ್ತ್ರ (ಹ್ಯೂಮನ್ ಈಕಾಲಜಿ) ಜೀವಿಸಂದಣಿ ಪರಿಸರಶಾಸ್ತ್ರ ಒಂದು ಮುಖ್ಯ ಭಾಗವಾಗಿ ಈಗ ಭರದಿಂದ ಬೆಳೆಯುತ್ತಿದೆ. ಮಾನವ ಜನಸಂಖ್ಯೆಗೆ ಸಂಬಂಧಪಟ್ಟ ಕೆಲವು ವಿಷಯಗಳಿಗಷ್ಟೇ ಸೀಮಿತವಾದ ಜನಸಂಖ್ಯಾಶಾಸ್ತ್ರಕ್ಕಿಂತ (ಡಿಮೊಗ್ರಫೀ) ಇದು ವಿಶಾಲವಾದ ಶಾಸ್ತ್ರ. ಪರಿಸರದ ಎಲ್ಲ ಪ್ರಭಾವಗಳನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳುತ್ತಾರೆ. ಅಲ್ಲದೆ ಇಲ್ಲಿ ಕೇವಲ ಮಾನವ ಜನಸಂಖ್ಯೆಯನ್ನು ಮಾತ್ರವಲ್ಲ ಅದಕ್ಕೆ ಸಂಬಂಧಿಸಿದಂತೆ ಪ್ರಾಣಿ ಮತ್ತು ಸಸ್ಯಕುಲಗಳ ಜನಸಂಖ್ಯೆಯನ್ನೂ ಅಧ್ಯಯನ ಮಾಡಲಾಗುತ್ತದೆ. ಯಾವುದೇ ಪ್ರದೇಶದಲ್ಲಿ ಕಂಡುಬರುವ ಜೀವಜಾತಿಗೆ ಸೇರಿದ ಎಲ್ಲ ವ್ಯಕ್ತಿಗಳನ್ನೂ ಒಟ್ಟಾಗಿ ಒಂದು ಜೀವಿಸಂದಣಿ ಎಂದು ಕರೆಯಬಹುದು. ಈ ಸಂದಣಿಗೆ ತನ್ನದೇ ಆದ ಜನನಪ್ರಮಾಣ, ಮರಣಪ್ರಮಾಣ, ಸಾಂದ್ರತೆ, ವಯೋವಿತರಣೆ, ಸಂಖ್ಯಾ ಪ್ರಸಾರ, ವೃದ್ಧಿಯ ಗತಿ ಮುಂತಾದ ಲಕ್ಷಣಗಳಿವೆ. ಪ್ರತಿಯೊಂದು ಸಂದಣಿಗೂ ಅವಶ್ಯಕವಾದ ಪರಿಸರದ ಅನೇಕ ಅಂಶಗಳಿವೆ. ಅವುಗಳಲ್ಲಿ ವಾಯುಗುಣ, ಬೆಳಕು, ನೆಲ, ಆಹಾರ, ಕಾವು-ಇವು ಕೆಲವು. ಕಾಲಕ್ರಮದಲ್ಲಿ ಜನಸಂಖ್ಯೆಯಲ್ಲಿ ಏರಿಳಿತಗಳಾಗುವುದಿದೆ. ಜನನಪ್ರಮಾಣ, ಮರಣಪ್ರಮಾಣ, ವೃದ್ಧಿ ಪ್ರಮಾಣಗಳು ಏರಿಳಿತಗಳೂ ಜನಸಾಂದ್ರತೆಯ ಏರಿಳಿತಗಳೂ ಆಗುತ್ತವೆ. ಕೆಲವು ಜೀವಿಗಳಲ್ಲಿ ಜನಸಾಂದ್ರತೆ ತೀರ ಹೆಚ್ಚುತ್ತಿರುವ ಹಾಗೆಯೇ ಜನನ ಪ್ರಮಾಣ ಇಳಿಯುತ್ತ ಹೋಗುವುದನ್ನು ಕಾಣುತ್ತೇವೆ. ಮತ್ತೆ ಕೆಲವು ಹೀಗೆ ತಂತಾನೆ ಕುಂಠಿತವಾಗದೆ ಜ್ಯಾಮಿತಿಯ ರೀತ್ಯ ಬೆಳೆಯುತ್ತ ಹೋಗುತ್ತವೆ. ಉದಾಹರಣೆಗೆ ಮಾನವ ಜನಸಂಖ್ಯೆ ಹೊರಗಿನ ಅಡತಡೆಗಳಿಲ್ಲದಿದ್ದರೆ ಬೆಳೆಯುತ್ತ ಹೋಗಿ ಕೊನೆಗೊಮ್ಮೆ ತನ್ನ ಶಕ್ತಿ ಹಾಗೂ ಸಂಪನ್ಮೂಲಗಳ ಮಿತಿ ದಾಟುವ ಸಂಭವವಿದೆ. ಇನ್ನೂ ಕೆಲವು ಸಂದಣಿಗಳಲ್ಲಿ ಅತಿ ವಿರಳತೆ ಅಥವಾ ಅತ್ಯಧಿಕ ಸಾಂದ್ರತೆಯಿದ್ದಾಗ ಜನನಪ್ರಮಾಣ ಬೆಳೆಯುವುದಿಲ್ಲ. ಅದು ಮಧ್ಯಮ ಪ್ರಮಾಣದಲ್ಲಿದ್ದಾಗ ಮಾತ್ರ ಜನನಪ್ರಮಾಣ ಹೆಚ್ಚಾಗಿರುತ್ತದೆ. ಇನ್ನೂ ಒಂದು ವೈಲಕ್ಷಣ್ಯವನ್ನು ನಾವು ಕೆಲವು ಸಂದಣಿಗಳಲ್ಲಿ ಗುರುತಿಸಬಹುದು. ಅದೆಂದರೆ, ಕೆಲವು ವರ್ಷಗಳಿಗೊಮ್ಮೆ ಅವು ಅತಿ ಪ್ರಜನನಶಕ್ತಿಯನ್ನು ಪ್ರದರ್ಶಿಸಿ ಮತ್ತೆ ಹಿಂಬೀಳುತ್ತವೆ.
ಪ್ರತಿಯೊಂದು ಸಂದಣಿಗೂ ತನ್ನದೇ ಆದ ಕಾರ್ಯಕ್ಷೇತ್ರವಿದೆ. ಅದು ಬೇರೆ ಸಂದಣಿಗಳಿಂದ ತನ್ನನ್ನು ಪ್ರತ್ಯೇಕಿಸಿಕೊಂಡು, ರಕ್ಷಣೆ ಪಡೆದು, ಅಲ್ಲೇ ವಾಸಮಾಡುತ್ತದೆ. ತಾತ್ಕಾಲಿಕವಾಗಿ ಹೊರವಲಸೆ ಹೋದರೂ ತಿರುಗಿ ಸ್ವಕ್ಷೇತ್ರಕ್ಕೆ ಮರಳುತ್ತದೆ. ಕೆಲವೊಮ್ಮೆ, ಕಾರಣಾಂತರಗಳಿಂದ ಕೆಲವು ಮರಳಿ ಬಾರದಂತೆ ವಲಸೆ ಹೋದೆಡೆಯೇ ನೆಲಸುತ್ತವೆ. ಇದನ್ನು ಯಾದೃಚ್ಛಿಕ ವಲಸೆ ಎನ್ನಬಹುದು. ವಲಸೆ, ಪ್ರಾಬಲ್ಯ, ವಂಶಾನುಕ್ರಮ, ಸ್ತರೀಕರಣ-ಇವು ಮಾನವ ಪರಿಸರಶಾಸ್ತ್ರದಲ್ಲಿ ಕಂಡುಬರುತ್ತವೆ.
ಇಲ್ಲಿ ಅಧ್ಯಯನ ಮಾಡುವ ಇನ್ನೊಂದು ವಿಷಯವೆಂದರೆ ಭಿನ್ನ ಸಂದಣಿಗಳ ನಡುವಿನ ಅಂತರಕ್ರಿಯೆ. ಪ್ರತಿಯೊಂದು ಸಂದಣಿಯೂ ಯಾವುದಾದರೊಂದು ಜಾಗವನ್ನು ಕೆಲವು ಕಾಲ ಆಕ್ರಮಿಸಿಕೊಂಡಿರುತ್ತದೆ. ಈ ಗೂಡು ಅಥವಾ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಪ್ರಾಣಿಗಳೊಡನೆ ಸ್ಪರ್ಧಿಸುತ್ತದೆ. ಈ ಸ್ಪರ್ಧೆಯಲ್ಲಿ ಬಲಹೀನ ಸ್ಪರ್ಧಿ ನಾಶವಾಗಿ ಸಬಲ ಸ್ಪರ್ಧಿ ಜಯಶಾಲಿಯಾಗಿ ತನ್ನ ಆಧಿಪತ್ಯ ಬೆಳೆಯಿಸಿಕೊಳ್ಳಬಹುದು. ಮತ್ತೆ ಕೆಲವೊಮ್ಮೆ ಅವು ಪರಸ್ಪರ ಹೊಂದಿಕೊಂಡು ಸಹಜೀವನ ನಡೆಸಲೂಬಹುದು. ಇನ್ನೂ ಕೆಲವು ಅಂತರಕ್ರಿಯೆಗಳಿವೆ. ಇವುಗಳಲ್ಲಿ ತಾಟಸ್ಥ್ಯ ಒಂದು. ಪರಸ್ಪರ ಪ್ರಯೋಜನ ಇನ್ನೊಂದು. ಆದ್ಯ ಸಹಕಾರ ಮತ್ತೊಂದು. ಪರಾಶ್ರಯಜೀವನ ಮಗದೊಂದು. ಇವುಗಳಲ್ಲದೆ ಬೇಟೆ-ಬೇಟೆಗಾರರ ಸಂಬಂಧವಾಗಲೀ ಪರಸ್ಪರಾಶ್ರಯವಾಗಲೀ ಇರಬಹುದು.
ಜೀವಿಗಳು ತಮ್ಮ ಸಂಪೋಷಣೆಗಾಗಿ ಬೇರೆ ಜೀವಿಗಳನ್ನು ಅನ್ನವಾಗಿ ಪಡೆಯುವುದು ಎಷ್ಟು ನಿಜವೊ ತಾವೂ ಬೇರೆಯವರ ಅನ್ನವಾಗುವುದೂ ಅಷ್ಟೇ ನಿಜ. ಹೀಗೆ ಅನ್ನದ ಸರಪಣಿಯೊಂದಿದೆ. ಸೌರಶಕ್ತಿಯನ್ನು ಹೀರಿಕೊಳ್ಳುವ ಸಸ್ಯಗಳು, ಸಸ್ಯಗಳನ್ನು ತಿಂದು ಬದುಕುವ ಸಸ್ಯಾಹಾರಿಗಳು, ಹಾಗೂ ಮಾಂಸಾಹಾರಿಗಳಾದ ಪ್ರಾಣಿಜಾತಿಗಳು-ಇವು ಆಹಾರಜಾಲದಲ್ಲಿ ಬಂಧಿತವಾದ ಜೀವಿಗಳು. ಮಾವನ ಸಂದಣಿಗಳು ಉಳಿದ ಜೀವಿಸಂದಣಿಗಳಂತೆ ಹಾಗೆಯೇ ನಿಸರ್ಗದಲ್ಲಿ ಸೆಣಸಿ ಉಳಿದಿವೆ ಹಾಗೂ ಯಶಸ್ವಿಯಾದ ವಂಶಗುಣಗಳನ್ನು ಮುಂದುವರಿಸಿಕೊಂಡು ಬಂದಿವೆ. ಬೇರೆ ಪ್ರಾಣಿಗಳ ಹಾಗೆಯೇ ಮಾನವರೂ ಈ ಪೃಥ್ವಿಯಲ್ಲಿ ಏಕಾಕಿಗಳಲ್ಲ. ಬೇರೆ ಪ್ರಾಣಿಗಳೊಡನೆ ಸಹಕರಿಸುತ್ತ, ಸ್ಪರ್ಧಿಸುತ್ತ, ಆಹಾರಜಾಲಗಳಲ್ಲಿ ಸೇರಿ ಕೊಂಡಿದ್ದಾರೆ. ಪರಸ್ಪರಾಶ್ರಯ ಹಾಗೂ ಪರಾಶ್ರಯದ ತತ್ತ್ವಗಳು ಮಾನವರಿಗೂ ಅನ್ವಯಿಸುತ್ತವೆ. ಮಾನವವಿಕಾಸ ಈ ಅಧ್ಯಯನದ ಮತ್ತೊಂದು ಮುಖ್ಯ ವಿಷಯ. ಸರಳ ಜೀವರಾಶಿಗಳಿಂದ ಮಾನವಸದೃಶ ಪ್ರಾಣಿಗಳ ವರೆಗೆ ಮತ್ತು ಅಲ್ಲಿಂದ ಆಧುನಿಕ ಮಾನವನ ವರೆಗಿನ ವಿಕಾಸವನ್ನು ಇಲ್ಲಿ ನೋಡುತ್ತೇವೆ. ಭೌತಿಕ ಮಾನವಶಾಸ್ತ್ರ, ಪಳಿಯುಳಿಕೆಗಳ ಶಾಸ್ತ್ರ, ಭೂವಿಜ್ಞಾನ ಮತ್ತು ಪ್ರಾಚ್ಯ ಸಂಶೋಧನಾಶಾಸ್ತ್ರಗಳ ಸಹಾಯದಿಂದ ಮಾನವ ಮತ್ತು ಪರಿಸರಗಳ ಸಂಬಂಧವನ್ನು ಕಾಲಕ್ರಮಾನುಗುಣವಾಗಿ ಇಲ್ಲಿ ನೋಡಬಹುದು.
ಮಾನವ ಪ್ರಭೇದಗಳನ್ನು ಅವು ಹುಟ್ಟುವ ಸನ್ನಿವೇಶಗಳನ್ನೂ ತಿಳಿಯುವ ಪ್ರಯತ್ನವನ್ನು ಮಾವನ ಪರಿಸರಶಾಸ್ತ್ರಜ್ಞ ಮಾಡುತ್ತಾನೆ. ಆಕೃತಿ ರಚನೆಯ ದೃಷ್ಟಿಯಿಂದ ನೋಡಿದಾಗ ಮಾನವರಲ್ಲಿ ನೀಗ್ರಾಯಿಡ್, ಕಾಕಸಾಯಿಡ್ ಹಾಗೂ ಮಾಂಗಲಾಯಿಡ್ ಎಂಬ ಮೂರು ಉಪಗುಂಪುಗಳನ್ನು ಗುರುತಿಸಬಹುದು. ಈ ಪ್ರಭೇದಗಳು ಹೇಗೆ ಹುಟ್ಟಿದುವೆಂದು ನಿಶ್ಚಯವಾಗಿ ಹೇಳಬಾರದು. ಆದರೂ ಪರಿಸರದ ಪ್ರಭಾವಗಳು ಈ ಪ್ರಭೇದಗಳು ಹುಟ್ಟುವುದಕ್ಕೂ ಕೆಲವು ಪ್ರದೇಶಗಳಲ್ಲೇ ಅವು ಕೇಂದ್ರೀಕೃತವಾಗಿ ಉಳಿಯಲಿಕ್ಕೂ ಅನಂತರ ನಿಧಾನವಾಗಿ ಮಾಯವಾಗಲಿಕ್ಕೂ ಕಾರಣವಾಗಿವೆ ಎಂಬುದಂತೂ ನಿಶ್ಚಿತ. ಬರ್ಗ್‍ಮನ್ ಎಂಬ ವಿದ್ವಾಂಸ ಇಂಥ ಒಂದು ಸಂಗತಿಯನ್ನು ತಿಳಿಸಿದ್ದಾನೆ. ಭೂಮಧ್ಯರೇಖೆಯಿಂದ ಧ್ರುವಗಳತ್ತ ಸರಿದಂತೆ ದೇಹದ ಹೊರಮೈ ಕಡಿಮೆಯಾಗುತ್ತ ಹೋಗುವುದೆಂದು ಅವನ ಆಭಿಮತ. ಎಲೆನ್ ಎಂಬ ಇನ್ನೊಬ್ಬ ವಿಜ್ಞಾನಿಯ ಪ್ರಕಾರ ಶೀತವಲಯಕ್ಕೆ ಹೋದಂತೆ ದೇಹದಲ್ಲಿ ಮುಂಡದ ಪ್ರಮಾಣ ಹೆಚ್ಚಾಗುತ್ತರುಂಡ, ಕೈಕಾಲುಗಳೇ ಮೊದಲಾದ ತುದಿಭಾಗಗಳ ಗಾತ್ರ ಕಡಿಮೆಯಾಗುತ್ತದೆ. ಇಂಥ ಅನೇಕ ಪ್ರಮೇಯಗಳನ್ನು ಭೌತಿಕ ಮಾನವಶಾಸ್ತ್ರಜ್ಞರೂ ಮತ್ತಿತರರೂ ಮುಂದಿಟ್ಟಿದ್ದಾರೆ.
ಪರಿಸರಶಾಸ್ತ್ರಜ್ಞರು ಆದಿಮ ಮತ್ತು ಆಧುನಿಕ ಮಾನವ ಗುಂಪುಗಳ ಗಾತ್ರಕ್ಕೂ ಅವುಗಳ ನೆಲೆಗಳ ವಿಸ್ತೀರ್ಣಕ್ಕೂ ವಾರ್ಷಿಕ ಮಳೆಯ ಪ್ರಮಾಣ ಮೊದಲಾದ ಪರಿಸರದ ಅಂಶಗಳಿಗೂ ಇರುವ ಸಂಬಂಧಗಳನ್ನು ಗುರುತಿಸಿದ್ದಾರೆ. ಆಹಾರ ಉತ್ಪಾದನೆ, ಆಹಾರಜಾಲಗಳ ರಚನೆ ಹಾಗೂ ಸಂದಣಿಗಳ ಸಂಬಂಧವನ್ನು ಗುರುತಿಸಲು ಯತ್ನಿಸಿದ್ದಾರೆ. ವಾಯುಗುಣ, ಸ್ವಾಭಾವಿಕ ಲಕ್ಷಣಗಳು, ಭೂಗುಣ ಮತ್ತು ಆಹಾರಸಂಗ್ರಹಣ ಶಕ್ತಿಗಳನ್ನು ಅನುಸರಿಸಿ ಜನಸಾಂದ್ರತೆ ಹಾಗೂ ಜನನ ಮರಣ ಪ್ರಮಾಣಗಳಲ್ಲಿ ಏರಿಳಿತಗಳಾಗುತ್ತಿದ್ದುದನ್ನು ಕಂಡಿದ್ದಾರೆ. ಸುಮಾರು 42ರಷ್ಟು ಸಂತಾನ ಪಡೆಯಬಹುದಾದ ಮಾನವ ಸ್ತ್ರೀ ಆ ಪ್ರಮಾಣಕ್ಕಿಂತ ನಾಲ್ಕೆಂಟು ಪಟ್ಟು ಕಡಿಮೆ ಸಂತಾನ ಪಡೆಯುತ್ತ ಬಂದುದಕ್ಕೆ ಕಾರಣಗಳನ್ನು ಹುಡುಕಿದ್ದಾರೆ. ಸುಮಾರು 6000-8000 ವರ್ಷಗಳ ಹಿಂದೆಯೇ ಪ್ರಾರಂಭವಾದ ಕೃಷಿಕ್ಷೇತ್ರದ ಬೆಳೆವಣಿಗೆಯಿಂದಾಗಿ ಮಾನವ ನೆಲೆಗಳ ನಿರ್ವಹಣಶಕ್ತಿ ಬೆಳೆಯಿತು. ಇದರಿಂದಾಗಿ ನಗರಗಳು ಹುಟ್ಟುವುದು ಸಾಧ್ಯವಾಯಿತು. ತಾತ್ಕಾಲಿಕವಾಗಿ ಅವು ಸಾಂದ್ರತೆಯ ಮಿತಿಯನ್ನು ದಾಟುವಷ್ಟು ಜನರನ್ನು ಸಾಕುವಷ್ಟು ಸಮರ್ಥವಾಗಿದ್ದುವು. ಆದರೆ ಸಾಂದ್ರತೆ ಹೆಚ್ಚುತ್ತಿದ್ದಂತೆ ರೋಗಗಳು ಹಬ್ಬಿಕೊಳ್ಳುವುದು ಸುಲಭವಾಯಿತು. ಈಜಿಪ್ಟಿನ ಗೋರಿಗಳಲ್ಲಿಟ್ಟ ಶವಗಳಿಂದ ಹರಡಿದ ಕರುಳು ಹಾಗೂ ಮೂತ್ರಕೋಶದ ರೋಗದಿಂದ ಸಾವಿರಾರು ಜನರು ಸತ್ತುದು ಸಾಂಕ್ರಾಮಿಕ ರೋಗದ ವ್ಯಾಪ್ತಿಗೆ ಒಂದು ಪ್ರಾಚೀನ ಉದಾಹರಣೆ. 14ನೆಯ ಶತಮಾನದ ಪ್ಲೇಗುರೋಗದ ಸೋಂಕು ಇನ್ನೊಂದು ಅಂಥ ಉದಾಹರಣೆ. ಇನ್ನೂ ಜೀವಂತವಾಗಿರುವ ಇನ್‍ಫ್ಲುಯೆಂಜ ಪಿಡುಗು ಜನಸಂಖ್ಯೆಯ ಒತ್ತಡವನ್ನು ಕಡಿಮೆ ಮಾಡಬಲ್ಲದಂತೆ. ಆಧುನಿಕ ರೋಗನಿವಾರಕ ಔಷಧಗಳನ್ನು ಹಾಗೂ ಆಹಾರೋತ್ಪಾದನೆಯ ಶಕ್ತಿ ಸುಧಾರಿಸಿದಂತೆ ರೋಗ ಮತ್ತು ಉಪವಾಸಗಳ ಮಾರಕ ಶಕ್ತಿ ಕುಗ್ಗಿದೆ; ಇದರಿಂದ ಜನಸಂಖ್ಯೆ ಆಸ್ಫೋಟಗೊಳ್ಳುತ್ತಿದೆ. ಸದ್ಯ ಮೂವತ್ತೈದು ವರ್ಷಗಳಿಗೊಮ್ಮೆ ಅದು ದ್ವಿಗುಣಗೊಳ್ಳುತ್ತ ನಡೆದಿದೆ.
ಪರಿಸರಶಾಸ್ತ್ರಜ್ಞನ ಪ್ರಕಾರ ಪ್ರಾಣಿ ಮತ್ತು ಸಸ್ಯವರ್ಗಗಳಲ್ಲಿ ಸಂಖ್ಯಾ ನಿಯಂತ್ರಣ ವ್ಯವಸ್ಥೆಗಳು ಸಹಜವಾಗಿ ಇವೆ. ಹಾಗೆಯೇ ಮಾನವ ಪರಿಸರದಲ್ಲಿಯೂ ರೋಗ, ಆಹಾರಾಭಾವಗಳು ಒಂದು ಕಾಲಕ್ಕೆ ನಿಯಂತ್ರಣ ಮಾರ್ಗಗಳಾಗಿದ್ದುವು. ರೋಗ ಹಾಗೂ ಅಭಾವಗಳನ್ನು ನಾವು ಈಗ ನಿಯಂತ್ರಿಸುವುದರಲ್ಲಿದ್ದೇವೆ. ಹೀಗಾಗುತ್ತಲೇ ಮತ್ತೆ ಜನಸಂಖ್ಯಾ ಸ್ಫೋಟ ಪ್ರಖರಗೊಳ್ಳುತ್ತಿರುವುದರಿಂದ ಬೇರೆ ಕೆಲವು ನಿಯಂತ್ರಣ ವಿಧಾನಗಳು ಅಗತ್ಯವಾದುವು. ರಾಸಾಯನಿಕ ಸಂಯೋಜನೆಯಿಂದ ಅಥವಾ ಬೇರೆ ವಿಧಾನಗಳಿಂದ ಬೇಕಾದಷ್ಟು ಆಹಾರವನ್ನು ಸೃಷ್ಟಿಸಿ ನೆಲದ ನಿರ್ವಹಣಾಶಕ್ತಿಯನ್ನು ಬೆಳೆಸಬೇಕು. ಹಿಂದೆ ಮಾನವಕುಲಗಳು ಹೀಗೆ ಮಾಡಿದ ದಾಖಲೆಗಳುಂಟು. ದುರ್ಧರ ಪ್ರಸಂಗಗಳಲ್ಲಿ ಅವು ತಮ್ಮ ಆಹಾರಜಾಲಗಳನ್ನು ಬದಲಾಯಿಸಿಕೊಂಡಿವೆ. ಮೊದಲು ಬೇಟೆಯಾಡುತ್ತಿದ್ದಾಗ, ಆ ಮುಂದೆ ಗಡ್ಡೆ ಗೆಣಸು, ಹಣ್ಣುಹಂಪಲು ಮುಂತಾದ ಆಹಾರ ಸಂಗ್ರಹಿಸುತ್ತಿದ್ದಾಗ, ಅನಂತರ ಕೃಷಿಯನ್ನು ಅಭಿವೃದ್ಧಿಗೊಳಿಸಿದಾಗ, ಸಮುದಾಯಗಳ ನಿರ್ವಹಣ ಶಕ್ತಿ ಹೆಚ್ಚಿತು. ಪ್ರಾಣಿಗಳನ್ನು ಹೊಂಚುಹಾಕಿ ಕೊಂದು ತಿನ್ನಬೇಕಾಗಿದ್ದ ಮಾನವ ಆಹಾರವನ್ನು ಬೇರೆಬೇರೆ ವಿಧಾನಗಳಿಂದ ಬೆಳೆದು, ಸಂಗ್ರಹಿಸಿ ತಿನ್ನುವಂತಾಯಿತು. ಇದರಿಂದ ಅವನು ತನ್ನ ಆಹಾರಜಾಲಗಳ ತೊಡಕಿಗೊಳಗಾದ ಬೇರೆ ಸಂದಣಿಗಳ ಸ್ಪರ್ಧೆಯಿಂದ ಪಾರಾಗುವುದು ಸಾಧ್ಯವಾಯಿತು. ತತ್ಪರಿಣಾಮವಾಗಿ ಪರಿಸರವ್ಯೂಹದಲ್ಲಿ ಹೊಸ ಸಂಬಂಧಗಳು ಹುಟ್ಟಿಕೊಂಡವು. ಜನಸಂಖ್ಯೆ ಇಂದು ತೀವ್ರಗತಿಯಿಂದ ಏರುತ್ತಿರುವಾಗ ಮತ್ತೊಮ್ಮೆ ಇಂಥ ಬದಲಾವಣೆ ಅವಶ್ಯಕವಾಗಿದೆ. ಇದು ಸಾಧ್ಯವಾಗದೆ ಹೋದರೆ ಸಂತಾನ ನಿರೋಧಕ ಅತ್ಯಗತ್ಯವೆನಿಸೀತು.
ಪಿರಸರಶಾಸ್ತ್ರಜ್ಞರು ಭಯದಿಮದ ಇದಿರುನೋಡುತ್ತಿರುವ ವಿಷಯವೊಂದಿದೆ. ಈಗ ಗೊತ್ತಿರುವಂತೆ ಜನಸಾಂದ್ರತೆ ವಿಪರೀತವಾಗುತ್ತ ಹೋದಂತೆ ಪ್ರಾಣಿ ಜನಾಂಗಗಳಲ್ಲಿ ವಿಚಿತ್ರವಾದ ಬಳಲಿಕೆಯ ಲಕ್ಷಣಗಳು (ಸ್ಟ್ರೆಸ್ ಸಿಂಡ್ರೊಮಿ) ಕಾಣಿಸಿಕೊಳ್ಳುತ್ತವೆ. ಆಗ ಅವು ತಮ್ಮ ಜನನಿಬಿಡ ಪ್ರದೇಶದಿಂದ ದೂರ ದೂರದ ಪ್ರದೇಶಗಳಿಗೆ ವಲಸೆಹೋಗಿ ತಂಡತಂಡವಾಗಿ ಸಾವನ್ನು ಅಪ್ಪಿದ ಉದಾಹರಣೆಗಳಿವೆ. ಹಾಗೆಯೇ ಮಾನವರಲ್ಲೂ ಆಗಬಹುದೇನೋ ಎಂದು ಕೆಲವು ವಿಜ್ಞಾನಿಗಳು ಶಂಕಿಸಿದ್ದಾರೆ. ಸದ್ಯ ಅಂಥ ಲಕ್ಷಣಗಳೇನೂ ಇಲ್ಲ. ಹಾಗಾಗುವ ಮೊದಲೇ ಪರಿಸರ ಮತ್ತು ಪ್ರಾಣಿಗಳಿಗಿರುವ ಸಂಬಂಧವನ್ನು ಚೆನ್ನಾಗಿ ಅರಿತುಕೊಳ್ಳುವುದು ಶ್ರೇಯಸ್ಕರ. ಮಾನವ ಪರಿಸರಶಾಸ್ತ್ರ ಈ ಬಗ್ಗೆ ಹೆಚ್ಚಿನ ಕೆಲಸ ಮಾಡುತ್ತಾರೆ. ಅನೇಕ ಸಾಂಪ್ರದಾಯಿಕ ವಿಜ್ಞಾನಕ್ಷೇತ್ರಗಳನ್ನು ಅವರಿಸುತ್ತಿರುವ ಈ ಶಾಸ್ತ್ರ ಕಳೆದ ಎರಡು ದಶಕಗಳಲ್ಲಿ ಸಮೃದ್ಧವಾಗಿ ಬೆಳೆದಿದೆ. ಇ. ಪಿ. ಓಡಮ್ ಎಂಬ ತಜ್ಞ ಬರೆದಿರುವ ಈಕಾಲಜಿ (1963) ಹಾಗೂ ಎ. ಎಸ್. ಬೂಫೆ ಬರೆದ ಈಕಾಲಜಿ ಆಫ್ ಪಾಪ್ಯುಲೇಷನ್ಸ್ (1968) ಎಂಬ ಗ್ರಂಥಗಳು ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತವೆ. (ಎಚ್.ವಿ.ಎನ್.)