ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೆನ್ನರ್, ಎಡ್ವರ್ಡ್

ವಿಕಿಸೋರ್ಸ್ದಿಂದ

ಜೆನ್ನರ್, ಎಡ್ವರ್ಡ್ 1749-1823. ಇಂಗ್ಲೆಂಡಿನ ವೈದ್ಯ. ದೇವಿ ಹಾಕುವುದರ ಮೂಲಕ ಮನುಷ್ಯನಿಗೆ ಸಿಡುಬು ರೋಗದ ವಿರುದ್ಧ ರಕ್ಷಣೆಯನ್ನು ನೀಡುವ ವಿಧಾನವನ್ನು ಮೊದಲಿಗೆ ಆವಿಷ್ಕರಿಸಿದಾತ. ಜನನ 1749 ಮೇ 17 ; ಮರಣ 1823 ಜನವರಿ 24. ಸ್ವಂತ ಪಟ್ಟಣ ಬಕ್ರ್ಲಿ. ಮೊದಲು ಸಾಡ್‍ಬರಿ ಎಂಬಲ್ಲಿಯೂ 770ರ ಅನಂತರ ಲಂಡನ್ನಿನಲ್ಲಿಯೂ ವೈದ್ಯವಿದ್ಯಾಭ್ಯಾಸ ಮಾಡಿದ. ತನ್ನ ಊರಿನಲ್ಲೆ ವೈದ್ಯವೃತ್ತಿಯಲ್ಲಿ ತೊಡಗಿದ. ರಾಡ್‍ಬರೋ ಎಂಬಲ್ಲಿ ವೈದ್ಯರ ಒಂದು ಸಂಘವನ್ನು ಸ್ಥಾಪಿಸಿ ಅದರ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ. ವೈದ್ಯಕೀಯದಲ್ಲಿ ಮಾತ್ರವಲ್ಲ ಇತರ ವಿಜ್ಞಾನಗಳಲ್ಲಿಯೂ ಈತನಿಗೆ ಬಲು ಆಸಕ್ತಿ. ಒಬ್ಬೆ ಮುಳ್ಳುಹಂದಿಯ ಶಿಶಿರನಿದ್ರೆ (ಹೈಬರ್‍ನೇಷನ್ ಇನ್ ಹೆಡ್ಜ್ ಹಾಗ್), ಅನ್ಯ ಪಕ್ಷಿಗಳ ಗೂಡಿನಲ್ಲಿ ಕೋಗಿಲೆ ಮರಿಯ ಜನನ ಮತ್ತು ಬೆಳೆವಣಿಗೆ, ತನ್ನ ಪ್ರಾಂತ್ಯದಲ್ಲಿನ ಖನಿಜ ಸ್ವರೂಪ-ಇವುಗಳ ವ್ಯಾಸಂಗವನ್ನೂ ಕೈಗೊಂಡಿದ್ದ. ಹೈಡ್ರೊಜನ್ ತುಂಬಿ ಆಕಾಶಬುಟ್ಟಿಯನ್ನು ತಯಾರಿಸುವ ಪ್ರಯತ್ನವನ್ನು ತನ್ನ ಪ್ರಾಂತ್ಯದಲ್ಲಿ ಪ್ರಪ್ರಥಮವಾಗಿ ಮಾಡಿದ. ಇವೆಲ್ಲವುಗಳ ಜೊತೆಗೆ ಈತ ಒಬ್ಬ ಕವಿ ಹಾಗೂ ಸಂಗೀತಜ್ಞ. ಒಟ್ಟಿನಲ್ಲಿ ಬಹುಮುಖ ಚಟುವಟಿಕೆಯುಳ್ಳವನಾಗಿ ಜನರ ವಿಶ್ವಾಸ ಪಡೆದಿದ್ದಾತ. ಶರೀರ ಚಿಕಿತ್ಸಕನಾಗಿ (ಫಿಸಿóಷಿಯನ್) ಮಾತ್ರ ವೈದ್ಯವೃತ್ತಿಯನ್ನು ಮುಂದುವರಿಸಬೇಕೆಂದು ನಿರ್ಧರಿಸಿ, ಅದಕ್ಕೆ ತಕ್ಕ ಯೋಗ್ಯತೆ ಪಡೆಯಲು ಸೇಂಟ್ ಆಂಡ್ರೊ ಕಾಲೇಜಿನ ಎಂ.ಡಿ. ಡಿಗ್ರಿಯನ್ನು ಪಡೆದ (1792).

ದನದ ಸಿಡುಬು ಎದ್ದ ಮನುಷ್ಯರಿಗೆ ಮಾನವ ಸಿಡುಬುರೋಗ ಅಂಟುವುದಿಲ್ಲವೆಂಬುದು ಆಗಿನ ಕಾಲದಲ್ಲಿ ಜನಜನಿತ ವಿಷಯ. ಸಾಡ್‍ಬರಿಯಲ್ಲಿ ಚೆನ್ನರ್ ಶಿಷ್ಯ ವೃತ್ತಿಯಲ್ಲಿದ್ದಾಗ ಕವಾಡಗಿತ್ತಿಯೊಬ್ಬಳು ತನಗೆ ದನದ ಸಿಡುಬು ಬಂದಿತ್ತಾದ್ದರಿಂದ ಮಾನವ ಸಿಡುಬಿನ ಹೆದರಿಕೆ ಇಲ್ಲವೆಂದು ಹೇಳಿದ್ದನ್ನು ಕೇಳಿದ. ಅಂದಿನಿಂದ ಈತ ಈ ಪರಿಹಾರದ ವಿಚಾರ ಯೋಚಿಸುತ್ತಿದ್ದುದುಂಟು. ಕೊನೆಗೆ 1788ರಲ್ಲಿ ದನದ ಸಿಡುಬು ಮಾನವರಲ್ಲಿ ಕಂಡುಬಂದಿದ್ದಂತೆ ಒಂದು ಚಿತ್ರವನ್ನು ತಯಾರಿಸಿ ಲಂಡನ್ನಿನಲ್ಲಿ ಕೆಲವು ಪ್ರಮುಖ ವೈದ್ಯರಿಗೆ ತೋರಿಸಿದ್ದೂ ಆಯಿತು. ಆದರೆ ವಿಷಯಗ್ರಹಣೆಗೆ ಸಾಕಷ್ಟು ಸಾಮಗ್ರಿ ಇಲ್ಲವೆಂದು ತೋರಿದ್ದರಿಂದ ಜೆನ್ನರನ್ನು ವಾಪಸ್ಸು ಬಕ್ರ್ಲಿಗೆ ತೆರಳಿ ವ್ಯಾಸಂಗವನ್ನು ಮುಂದುವರಿಸಬೇಕಾಯಿತು. ಈ ವ್ಯಾಸಂಗದಿಂದ ದನದ ಹಾಗೊ ಮಾನವರ ಸಿಡುಬುಗಳಿಗೆ ಇರುವ ಹೋಲಿಕೆ ವ್ಯತ್ಯಾಸಗಳು ಮನದಟ್ಟಾದವು. ಕುದುರೆಗಳ ಹಿಮ್ಮಡಿರೋಗ ಕೂಡ ದನದ ಮತ್ತು ಮಾನವರ ಸಿಡುಬಿಗೆ ಸಂಬಂಧಿಸಿದ್ದೇ ಎಂಬುದೂ ಸ್ಪಷ್ಟವಾಯಿತು. ಕೊನೆಗೆ ಜೆನ್ನರ್ 1796ರ ಮೇ 14ನೆಯ ತಾರೀಖಿನ ದಿನ ಒಬ್ಬ ಹಾಲು ಕರೆಯುವ ಹುಡುಗಿಯ ಕೈಮೇಲಿದ್ದ ದನದ ಸಿಡುಬಿನ ಗುಳ್ಳೆಯ ರಸಿಕೆಯನ್ನು 8 ವರ್ಷದ ಹುಡುಗನೊಬ್ಬನ ಚರ್ಮಕ್ಕೆ ಚುಚ್ಚಿದ. ಸುಮಾರು 2 ತಿಂಗಳಾದ ಬಳಿಕ ಅದೇ ಹುಡುಗನಿಗೆ ಮಾನವ ಸಿಡುಬಿನ ರಸಿಕೆಯನ್ನು ಚುಚ್ಚಿದ. ಹುಡುಗನಿಗೆ ಸಿಡುಬುರೋಗ ಉಂಟಾಗಲಿಲ್ಲ. ಮುಂದೆ ಕೆಲಕಾಲ ದನದ ಸಿಡುಬಿನ ಕೀವು ದೊರಕಲಿಲ್ಲವಾದ್ದರಿಂದ ಪರೀಕ್ಷೆಯನ್ನು ಮುಂದುವರಿಸಲಾಗಲಿಲ್ಲ. 1798ರ ವಸಂತಋತುವಿನಲ್ಲಿ ಪುನಃ ದನದ ಸಿಡುಬು ಕಂಡುಬಂದಾಗ ಜೆನ್ನರ್ ತನ್ನ ವ್ಯಾಸಂಗವನ್ನು ಮುಂದುವರಿಸಿ ಮೇಲೆ ಹೇಳಿದ ಪ್ರಯೋಗಫಲವನ್ನು ಖಚಿತಪಡಿಸಿದ. ದನದ ಸಿಡುಬುರೋಗದ ಕಾರಣ ಹಾಗೂ ಅದರ ರಸಿಕೆಯ ಪರಿಣಾಮಗಳ ಬಗ್ಗೆ ನಡೆಸಿದ ಪರಿಶೀಲನೆಗಳು ಎಂಬ ಒಂದು ಕೃತಿಯನ್ನು ಬರೆದು ಪ್ರಚುರಪಡಿಸಿದ ಕೂಡ. ಮಾನವರಲ್ಲಿ ದನದ ಸಿಡುಬೂ ಮಾನವನ ಸಿಡುಬೂ ಕೆಲವು ವೇಳೆ ಒಂದೇ ರೀತಿ ಕಾಣಬರುತ್ತವೆ. ದನಗಳಲ್ಲಿಯೇ ಕೆಚ್ಚಲಿನ ಮೇಲೆ ಸಿಡುಬಿನ ಹಾಗೆ ಕಾಣುವ ಇತರ ವ್ರಣಗಳೂ ಇರುವುವು. ಇವನ್ನು ಬಿಟ್ಟು ಎಚ್ಚರಿಕೆಯಿಂದ ದನದ ಸಿಡುಬಿನ ರಸಿಕೆಯನ್ನು ಮಾತ್ರ ತೆಗೆದು ಉಪಯೋಗಿಸಬೇಕು ; ಹಾಗೆ ಮಾಡಿದರೆ ಮಾತ್ರ ಕ್ಷೇಮ-ಹೀಗೆಂದು ಜೆನ್ನರ್ ಸಾರಿ ಸಾರಿ ಹೇಳುತ್ತಿದ್ದರೊ ಕೆಲವರು ಇದನ್ನು ಗ್ರಹಿಸದೆ ಬೇಕಾಬಿಟ್ಟಿಯಾಗಿ ರಸಿಕೆಯನ್ನು ಉಪಯೋಗಿಸುತ್ತಿದ್ದುದರಿಂದ ಎಷ್ಟೊ ಅನರ್ಥಗಳಾದದ್ದುಂಟು. 1799ರಲ್ಲಿ ಜಾರ್ಜ್ ಪಿಯರ್ಸನ್ ಎಂಬಾತ ಈ ರೀತಿ ನ್ಯೂನತೆಯಿಂದ ಕೂಡಿದ ದೇವಿ ಹಾಕುವ ವಿಧಾನವನ್ನು ಧರ್ಮಾರ್ಥವಾಗಿ ನಡೆಸಲು ಲಂಡನ್ನಿನಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸುವ ಏರ್ಪಾಡು ಮಾಡುತ್ತಿದ್ದುದನ್ನು ತಿಳಿದ ಜೆನ್ನರ್ ಇಂಥ ಕ್ರಮದಿಂದ ಆಗಬಹುದಾದ ಅನರ್ಥಗಳನ್ನು ಸಂಬಂಧಪಟ್ಟ ಗೌರವಾನ್ವಿತ ವ್ಯಕ್ತಿಗಳಿಗೆ ವಿವರಿಸಿ ಆ ಸಂಸ್ಥೆಯ ಸ್ಥಾಪನೆಗೆ ಕಲ್ಲುಹಾಕಿದ. ಕೆಲಕಾಲ ಲಂಡನ್ನಿನಲ್ಲಿ ನಿಂತು ಆಸಕ್ತ ವೈದ್ಯರಿಗೆ ತನ್ನ ನೇತೃತ್ವದಲ್ಲಿ ದೇವಿಹಾಕುವ ವಿಧಾನವನ್ನು ತೋರಿಸಿಕೊಟ್ಟಿದ್ದೂ ಇತ್ತು. ಈ ಕಾಲದಲ್ಲಿ ಜೆನ್ನರನಿಗೆ ರಾಜಮನೆತನದವರ ಪರಿಚಯವಾಗಿ ಅವರ ಹಾಗೂ ವೈದ್ಯರ ಬೆಂಬಲದಿಂದ ದೇವಿಹಾಕುವ ವಿಧಾನ ಜನಪ್ರಿಯವಾಯಿತು. ಮುಂದೆ 2 ವರ್ಷಗಳಲ್ಲಿ ಇಂಗ್ಲೆಂಡಿನಲ್ಲೆಲ್ಲ ದೇವಿಹಾಕುವುದು ಬಳಕೆಗೆ ಬಂತು. 1802ರಲ್ಲಿ ಇಂಗ್ಲೆಂಡಿನ ಸಂಸತ್ತಿನಲ್ಲಿ ಜೆನ್ನರನಿಗೆ 10,000 ಪೌಂಡುಗಳನ್ನು ಸಹಾಯದ್ರವ್ಯವಾಗಿ ಕೊಡಬೇಕೆಂಬ ವಿಚಾರವನ್ನು ಮಂಡಿಸಲಾಯಿತು. ಮಂಡನೆಗೆ ಮನ್ನಣೆ ದೊರಕಿದರೂ ಜೆನ್ನರನಿಗೆ ಹಣ ದೊರಕಿದ್ದು 2 ವರ್ಷಗಳ ಅನಂತರವೇ. ಅದರಲ್ಲಿ ಖರ್ಚಿಗೆಂದು 1000 ಪೌಂಡು ವಜಾ ಬೇರೆ. ಲಂಡನ್ನಿನಲ್ಲಿ ಜನ್ನೇರಿಯನ್ ಇನ್ಸ್‍ಟಿಟ್ಯೂಟ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಬೇಕೆಂದೂ ಅದರಲ್ಲಿ ಮಾನವನಸಿಡುಬು ಹಾಗೊ ದೇವಿಹಾಕುವ ವಿಧಾನ ಇವುಗಳ ಅಧ್ಯಯನ ಪ್ರಾರಂಭಿಸಬೇಕೆಂದೊ ಜೆನ್ನರ್ ಅ ಸಂಸ್ಥೆಯ ಅಧ್ಯಕ್ಷನಾಗಬೇಕೆಂದೂ ನಿರ್ಧಾರವಾಯಿತು (1803). ಜೆನ್ನರ್ ಲಂಡನ್ನಿಗೆ ಬಂದು ಆಸಕ್ತ ವ್ಯಕ್ತಿಗಳಿಗೆ ಖುದ್ದಾಗಿ ದೇವಿಹಾಕುವುದಕ್ಕೆ ಪ್ರಾರಂಭಿಸಿದ. ಬಡಬಗ್ಗರಿಗೆ ಮುಫತ್ತಾಗಿಯೇ ದೇವಿ ಹಾಕಲ್ಪಡುತ್ತಿತ್ತು. ದಿನವೂ 300ಕ್ಕೆ ಮೇಲ್ಪಟ್ಟು ಜನ ಹೀಗೆ ದೇವಿ ಹಾಕಿಸಿಕೊಳ್ಳುತ್ತಿದ್ದರು. ಆದರೆ ಸಂಸ್ಥೆಯ ಕಾರ್ಯನಿರ್ವಾಹಕ ವ್ಯಕ್ತಿಯ ಕರ್ತವ್ಯಪಾಲನೆಯಲ್ಲಿ ಶಿಸ್ತು ಇಲ್ಲದಿದ್ದರಿಂದ ಸಂಸ್ಥೆ ಬೇಗ ಮುಳುಗಿಹೋಯಿತು. ಅಲ್ಲದೆ ಸರ್ಕಾರದಿಂದ ನೆರವು ಪಡೆದಿರುವುದರಿಂದ ಎಲ್ಲರಿಗೂ ಮುಫತ್ತಾಗಿ ದೇವಿಹಾಕಬೇಕೆಂದು ನಿರೀಕ್ಷೆ ವ್ಯಕ್ತಪಟ್ಟಿತು. ಇದರಿಂದ ಜೆನ್ನರನಿಗೆ ತನ್ನ ವೈದ್ಯವೃತ್ತಿಯನ್ನು ಬದಿಗಿಟ್ಟು ಲಂಡನ್ನಿನಲ್ಲಿ ತಂಗಿರುವುದಕ್ಕೆ ವ್ಯವಧಾನ ಸಾಲದೆ ಪುನಃ ಬಕ್ರ್ಲಿಗೆ ಮರಳಿದ. ಅನಂತರ ಅವನ ಸ್ನೇಹಿತರು ದೇವಿಹಾಕುವ ಉಪಯುಕ್ತತೆಯ ವಿಚಾರವಾಗಿ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಈ ಸಂಸ್ಥೆಯವರಿಗೆ ಮಾಹಿತಿ ಒದಗಿಸಬೇಕೆಂದು ಆತನನ್ನು ಒತ್ತಾಯಪಡಿಸಿದರು. ಇದರ ಫಲವಾಗಿ ಸಾರ್ವತ್ರಿಕವಾಗಿ ದೇವಿ ಹಾಕುವುದು ಸೂಕ್ತಮಾರ್ಗ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದರಿಂದ ಪ್ರಭಾವಿತನಾದ ಮಾಕ್ರ್ವಿಸ್ ಆಫ್ ಲ್ಯಾನ್ಸ್‍ಡೌನ್ ಎಂಬಾತ ಸಂಸತ್ತಿನ ಮುಂದೆ ಪುನಃ ಈ ವಿಷಯವನ್ನು ಮಂಡಿಸಿದ (1906). ಸಂಸತ್ತು ಜೆನ್ನರನಿಗೆ 30,000 ಪೌಂಡುಗಳ ಸಹಾಯಧನವನ್ನು ಮಂಜೂರು ಮಾಡಿತು. ಅಲ್ಲದೆ ಮುಫತ್ತಾಗಿ ದೇವಿಹಾಕಬೇಕೆಂಬ ಕಡ್ಡಾಯವನ್ನೂ ವಿಧಿಸಲಿಲ್ಲ. ಬಂದ ಹಣದಲ್ಲಿ ಜೆನ್ನರ್ 7000 ಪೌಂಡುಗಳನ್ನು ಭಾರತದಲ್ಲಿ ದೇವಿಹಾಕುವ ಕ್ರಮ ವ್ಯಾಪಕವಾಗುವಂತೆ ಮೊದಲು ಕಳುಹಿಸಿಕೊಟ್ಟನೆಂದು ತಿಳಿದಿದೆ. ಇನ್ನೊಂದು ವರದಿಯ ಪ್ರಕಾರ ಭಾರತದಿಂದಲೇ 7383 ಪೌಂಡುಗಳ ಸಹಾಯದ್ರವ್ಯ ಜೆನ್ನರಿಗೆ ಒದಗಿತೆಂದೂ ಹೇಳಲಾಗಿದೆ. 1808ರಲ್ಲಿ ನ್ಯಾಷನಲ್ ವ್ಯಾಕ್ಸಿನ್ ಎಸ್‍ಟ್ಯಾಬ್ಲಿಷ್‍ಮೆಂಟ್ ಎಂಬ ಸಂಸ್ಥೆ ಸ್ಥಾಪಿತವಾಯಿತು. ಪ್ರಾರಂಭದಲ್ಲಿ ಈ ಸಂಸ್ಥೆಗೆ ಜೆನ್ನರ್ ನಿರ್ದೇಶಕನಾಗಿದ್ದ. ಅನಂತರ ಸಲಹೆಗಾರನಾಗಿ ಕೆಲಸಮಾಡಿದ. ಅನೇಕ ಹೊರದೇಶದವರು ಜೆನ್ನರನನ್ನು ಬಹು ಆದರದಿಂದ ಕಂಡು ಮುಖ್ಯ ವಿಜ್ಞಾನ ಸಂಸ್ಥೆಗಳ ಗೌರವಸದಸ್ಯತ್ವವನ್ನೂ ಗೌರವಪ್ರಶಸ್ತಿಗಳನ್ನೂ ಕೊಟ್ಟು ಗೌರವಿಸಿದರು. ನೆಪೋಲಿಯನ್ ಚಕ್ರವರ್ತಿ ಒಮ್ಮೆ ಒಬ್ಬ ಇಂಗ್ಲಿಷ್ ಕೈದಿಯನ್ನು ಬಿಡಕೂಡದೆಂದು ತೀರ್ಮಾನಿಸಿದ್ದಾಗ ಪತ್ನಿ ಜೊಸೆಫೈನ್ ಜೆನ್ನರನ ಹೆಸರನ್ನು ಹೇಳಿದಳಂತೆ. ನೆಪೋಲಿಯನ್ ಆಹಾ, ನಾವು ಆತನಿಗೆ ಏನನ್ನೂ ನಿರಾಕರಿಸಲಾಗುವುದಿಲ್ಲ ಎಂದು ಹೇಳಿ ಕೈದಿಯನ್ನು ಬಿಡುಗಡೆ ಮಾಡಿದನಂತೆ.

1810ರಲ್ಲಿ ತನ್ನ ಹಿರಿಯ ಮಗ ಕಾಲವಾದ್ದರಿಂದ ಹಾಗೂ ತನ್ನಲ್ಲಿ ರಕ್ತದ ಒತ್ತಡ ಕಂಡುಬಂದದ್ದರಿಂದ ಜೆನ್ನರ್ ತನ್ನ ಬಿಡುವಿಲ್ಲದ ಕಾರ್ಯಕ್ರಮಗಳಿಂದ ವಿಶ್ರಾಂತಿ ಪಡೆದ. 1813ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಈತನಿಗೆ ಎಂ.ಡಿ. ಗೌರವ ಪ್ರಶಸ್ತಿಯನ್ನು ಕೊಟ್ಟಿತು. 1815ರಲ್ಲಿ ಜೆನ್ನರನ ಪತ್ನಿ ತೀರಿಹೋದಳು. ಇದರಿಂದ ಅವನಿಗೆ ಸಿಡುಬಿನ ಕಾರ್ಯಕ್ರಮದಲ್ಲಿ ಆಸಕ್ತಿ ಇನ್ನೂ ತಗ್ಗಿ ಪ್ರಕೃತಿಶಾಸ್ತ್ರ ವ್ಯಾಸಂಗದಲ್ಲಿ ನಿರತನಾಗಿರುವಂತಾಯಿತು. ಜನಪ್ರಿಯನಾಗಿದ್ದರಿಂದ ಗೌರವನ್ಯಾಯಾಧಿಕಾರಿಯಾಗಿ ಕೆಲಸವನ್ನು ಮಾಡಲೇಬೇಕಾಗಿದ್ದಿತು. ಕೆಲವು ರೋಗಗಳಲ್ಲಿ ಗುಳ್ಳೆಗಳನ್ನೆಬ್ಬಿಸುವುದರ ಪರಿಣಾಮ ಎಂಬ ವಿಷಯವನ್ನು ಕುರಿತ ತನ್ನ ಕೃತಿಯನ್ನು 1822ರಲ್ಲಿ ಬರೆದು ಪ್ರಚುರಪಡಿಸಿದ ಹಕ್ಕಿಗಳ ಸಂಚಾರ ಎಂಬ ತನ್ನ ಕೊನೆಯ ಪ್ರಕಟನೆಯನ್ನು ರಾಯಲ್ ಸೊಸೈಟಿಗೆ ಅರ್ಪಿಸಿದ (1823). (ಎಚ್.ಎಸ್.ಎಸ್.ಎಚ್.)