ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೇಮ್ಸ್ ಬಾಂಡ್
ಜೇಮ್ಸ್ ಬಾಂಡ್ ಇಯಾನ್ ಫ್ಲೆಮಿಂಗನ (1908-1964) ಮಾನಸಪುತ್ರ. ಆತನ ಹದಿಮೂರು ಕಾದಂಬರಿಗಳ ಕಥಾನಾಯಕ. ಫ್ಲೆಮಿಂಗ್ ಇಂಗ್ಲೆಂಡಿನ ಲಂಡನ್ ಟೈಮ್ಸ್ ಪತ್ರಿಕೆಯ ವಿದೇಶ ವಾರ್ತಾ ವಿಭಾಗದ ಪರ್ಯಾಲೋಚಕನಾಗಿದ್ದ. ಪತ್ತೇದಾರಿ ಕಾದಂಬರಿ ಕ್ಷೇತ್ರದ ಹಾಗೂ ಚಿತ್ರಜಗತ್ತಿನ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ನೂತನ ದಾಖಲೆಗಳನ್ನು ಸ್ಥಾಪಿಸಿದವ ಫ್ಲೆಮಿಂಗ್, ಈತನ ಕಾದಂಬರಿಗಳು ಇಪ್ಪತ್ತರಿಂದ ಮೂವತ್ತು ಬಾರಿ ಮುದ್ರಣಗೊಂಡಿವೆಯಲ್ಲದೆ ಕೆಲವು ಕಾದಂಬರಿಗಳ 20,00,000 ಲಕ್ಷ ಪ್ರತಿಗಳು ಮಾರಾಟವಾಗಿವೆ. ಈತನ ಕಾದಂಬರಿಗಳನ್ನು ಆಧರಿಸಿ ನಿರ್ಮಾಣವಾದ ಚಲನಚಿತ್ರಗಳು ವಿಶ್ವದ ಮೂಲೆಮೂಲೆಯಲ್ಲಿ ಇಂದಿಗೂ ಪ್ರದರ್ಶಿತವಾಗುತ್ತಿದೆ. ಫ್ಲೆಮಿಂಗನ ಹದಿಮೂರು ಕಾದಂಬರಿಗಳಿವು : 1 ಕ್ಯಾಸಿನೊ ರಾಯಲೆ, 2 ಲಿವ್ ಅಂಡ್ ಲೈಡ್ ಡೈ, 3 ಮೂನ್ ರೇಕರ್, 4 ಡೈಮಂಡ್ಸ್ ಫಾರ್ ಎವರ್, 5 ಫ್ರಂ ರಷ್ಯ ವಿತ್ ಲೌ, 6 ಡಾಕ್ಟರ್ ನೊ, 7 ಗೋಲ್ಟ್ ಫಿಂಗರ್, 8 ಫಾರ್ ಯುವರ್ ಐಸ್ ಓನ್ಲಿ, 9 ತಂಡರ್ ಬಾಲ್, 10 ಆನ್ ಹರ್ ಮೆಜಸ್ಟೀಸ್ ಸೀಕ್ರೆಟ್ ಸರ್ವಿಸ್, 11 ದಿ ಸ್ಪೈ ಹೂ ಲವ್ಡ್ ಮಿ, 12 ಯು ಓನ್ಲಿ ಲಿವ್ ಟ್ವೈಸ್, 13 ದಿ ಮ್ಯಾನ್ ವಿತ್ ದಿ ಗೋಲ್ಟನ್ ಗನ್.
ಈ ಎಲ್ಲ ಕಾದಂಬರಿಗಳ ನಾಯಕ ಜೇಮ್ಸ್ ಬಾಂಡ್; ಪತ್ತೇದಾರಿ ಕಾದಂಬರೀ ಪ್ರಿಯರ ಆರಾಧಕ; ಸಾಹಸ ಚಿತ್ರ ಪ್ರೇಕ್ಷಕಾಭಿಮಾನಿಗಳ ಮಾಂತ್ರಿಕ ವೀರ ಪುರುಷ; ವಿಶ್ವಾದ್ಯಂತ ಕಾದಂಬರಿಪ್ರಿಯರ ಮನತಣಿಸಿ, ಚಿತ್ರಲೋಕದಲ್ಲಿ ಆಬಾಲವೃದ್ಧರಿಗೆ ಸಾಹಸಕೃತ್ಯಗಳ ಪ್ರತೀಕವಾಗಿ ಮನತಣಿಸಿದವ. ಈತನ ವೇಷಭೂಷಣ, ಅಲಂಕರಣಗಳನ್ನು ಅನುಕರಿಸಿ ಬೀದಿಬೀದಿಯಲ್ಲಿ ಕಾಣುವ ಬಾಂಡ್ ಯುವಕರೇ ಇವನ ಜನಪ್ರಿಯತೆಗೆ ಸಾಕ್ಷಿ. ಬಾಂಡ್ ಅತಿಕಾಮಿ ಹಾಗೂ ಏಕಮೇವಾದ್ವಿತೀಯ ಪತ್ತೇದಾರಿ ಮಾಂತ್ರಿಕ. ಬ್ರಿಟಿಷ್ ಪತ್ತೇದಾರಿ ಸಂಸ್ಥೆಯ ಪತ್ತೇದಾರ ಸಹಸ್ರರಲ್ಲಿ ಜೇಮ್ಸ್ ಪ್ರಪ್ರಥಮ ಪತ್ತೇದಾರ. ಇವನು ಬಳಸುವ ಕಾರು, ಪಿಸ್ತೂಲು, ಧರಿಸುವ ಗಡಿಯಾರ, ಷರಟು, ಕೋಟಿನ ಗುಂಡಿಗಳು, ಪಾದರಕ್ಷೆ, ಸೊಂಟದ ಪಟ್ಟಿ ಎಲ್ಲವೂ ಈತನಿಗಾಗಿಯೇ ವಿಶೇಷವಾಗಿ ತಯಾರಾದವು. ಅನೇಕ ವೇಳೆ ಈತ ತನ್ನ ದೇಹದ ಚರ್ಮ ಸೀಳಿ ಅದರಡಿ ಅಸ್ತ್ರಗಳನ್ನು ಬಚ್ಚಿಟ್ಟುಕೊಳ್ಳುವುದೂ ಉಂಟು. ಬೆತ್ತಲೆಯಿದ್ದರೂ ಶತ್ರುಗಳ ಕೋಟೆಯಿಂದ ತಪ್ಪಿಸಿಕೊಂಡು ಹೊರಬರಲು ಈತ ಶಕ್ತ.
ಜೇಮ್ಸ್ ಬಾಂಡನ ಸಾಂಕೇತಿಕ ಸಂಖ್ಯೆ 007. ಸಂಖ್ಯೆಯ ಮೊದಲೆರಡು ಶೂನ್ಯಗಳು ಈತನ ಘನತೆ ಗೌರವ ಸ್ಥಾನಗಳ ನಿರ್ದೇಶಕಗಳು. ಈ ಸಂಖ್ಯೆಯ ಸಂಪಾದನೆಯಿಂದ ಈತ ಎಲ್ಲಿ ಯಾರನ್ನಾದರೂ ಕೊಲ್ಲಲು ಸ್ವತಂತ್ರ. ಈ ಸಂಖ್ಯೆಗಳು ಈತನಿಗೆ ಘನತೆಗೌರವಗಳನ್ನು ತಂದುಕೊಟ್ಟಿರುವಂತೆಯೇ ವಿಪತ್ಕಾರಕ ಪ್ರಾಣಾಂತಿಕ ಕಾರ್ಯನಿರ್ವಹಣೆಯ ಹೊಣೆಯನ್ನೂ ತಂದುಕೊಟ್ಟಿವೆ. ಸಾಮಾನ್ಯ ಪತ್ತೇದಾರರು ನಿರ್ವಹಿಸಲಾಗದ ಅಸಾಮಾನ್ಯ ಕಾರ್ಯನಿರ್ವಹಣೆ ಈತನ ಪಾಲು. ಇವನ ಪುರುಷಸಿಂಹತನಕ್ಕೆ ಆಕರ್ಷಿತರಾಗದ ಸುಂದರಿಯಿಲ್ಲ. ವಿಶ್ವದ ವಿವಿಧ ಭಾಗದ ವಿವಿಧ ವರ್ಣದ ಸುಂದರಿಯರು ಇವನೊಂದಿಗೆ ಸುಖಿಸಿದ್ದಾರೆ. ಇವನಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಆದರೂ ಈತ ಬ್ರಹ್ಮಚಾರಿ ಮದುವೆಯಾಗದವ.
ಪ್ರತಿಬಾರಿಯೂ ಇವನಿಗೆ ಎದುರಾಗುವ ಶತ್ರುಗಳು ಸೋವಿಯತ್ ಗೂಢಚರ್ಯ ವಿಭಾಗ ಸ್ಮೆರ್ಷ್ (ಎಸ್.ಎಮ್.ಇ.ಆರ್.ಎಸ್.ಎಚ್.) ಪ್ರಜಾಸತ್ತಾತ್ಮಕ ಹಾಗೂ ಕಮ್ಯೂನಿಸ್ಟೇತರ ರಾಷ್ಟ್ರಗಳ ವೈಜ್ಞಾನಿಕ ಹಾಗೂ ಸಾಮಾಜಿಕ ಪ್ರಗತಿಗೆ ವಿಧ್ವಂಸಕ ಕ್ರಿಯೆಗಳ ಮೂಲಕ ಅಡ್ಡಿ ತಂದು ವಿನಾಶ ಮಾಡುವುದು, ಇದಕ್ಕೆ ಅಡ್ಡಿಬಂದವರನ್ನು ಕೊಲ್ಲುವುದು ಸ್ಮೆರ್ಷ್‍ನ ಗುರಿ. ಈ ಕಾರ್ಯಕ್ಕಾಗಿ ದೇಶದ್ರೋಹಿ, ದೇಶಭ್ರಷ್ಟ ವ್ಯಕ್ತಿಗಳಿಗೆ ಅಪಾರ ಹಣದ ಆಮಿಷ ತೋರಿಸಿ ಸಹಸ್ರ ಸಹಸ್ರ ಜನರಿಂದ ತಮ್ಮ ಕೆಲಸವನ್ನು ಸ್ಮೆರ್ಷ್ ನಿರ್ವಹಿಸುತ್ತದೆ. ಈ ವಿದ್ರೋಹಿ ವಂಚಕ ಜಾಲವನ್ನು ವಿನಾಶ ಮಾಡುವುದು ಜೇಮ್ಸ್ ಬಾಂಡನ ಕರ್ತವ್ಯ. ತಮ್ಮ ಎಲ್ಲಾ ಕಾರ್ಯಗಳಿಗೂ ಅಡ್ಡಿಯುಂಟುಮಾಡಿ ವಿನಾಶ ಮಾಡುವ ಬಾಂಡನ್ನು ಎಲ್ಲಿ ಸಿಕ್ಕರಲ್ಲಿ ಕೊಲ್ಲುವ ಆದೇಶ ಹೊತ್ತು ಸ್ಮೆರ್ಷ್ ಗೂಢಚಾರರು ಹೊಂಚುಹಾಕಿ ಅಂತ್ಯದಲ್ಲಿ ಅವನಿಂದಲೇ ಅಸುನೀಗಿದವರು ಹಲವರು.
1962ರಲ್ಲಿ ಡಾಕ್ಟರ್ ನೊ ಎಂಬ ಚಿತ್ರದ ಮೂಲಕ ಚಿತ್ರಪ್ರಪಂಚಕ್ಕೆ ಕಾಲಿರಿಸಿ ಜೇಮ್ಸ್ ಬಾಂಡನ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ ಷಾನ್ ಕಾನರಿ. ಅನಂತರ ಈತ ಫ್ರಮ್ ರಷ್ಯ ವಿತ್ ಲವ್, ಗೋಲ್ಡ್ ಫಿಂಗರ್, ತಂಡರ್ ಬಾಲ್, ಯು ಓನ್ಲಿ ಲಿವ್ ಟ್ವೈಸ್ ಚಿತ್ರಗಳಲ್ಲಿ ನಟಿಸಿದ. 1969ರಲ್ಲಿ ಪ್ರದರ್ಶನಕ್ಕೆ ಬಂದ ಆನ್ ಹರ್ ಮೆಜಸ್ಟೀಸ್ ಸೀಕ್ರೆಟ್ ಸರ್ವಿಸ್ ಚಿತ್ರದಲ್ಲಿ ಜೇಮ್ಸ್ ಬಾಂಡ್‍ನ ಪಾತ್ರವನ್ನು ಜಾರ್ಜ್ ಲ್ಯಾಜಿóನ್‍ಬಿ ನಿರ್ವಹಿಸಿದ್ದಾನೆ.
ಕೇವಲ ಇಂಗ್ಲಿಷ್ ಭಾಷಾ ಜಗತ್ತಿನಲ್ಲಿ ಮಾತ್ರವೇ ಅಲ್ಲದೆ ದೇಶವಿದೇಶಗಳ ನೂರಾರು ಭಾಷೆಗಳಲ್ಲಿ ಬಾಂಡ್ ಮಾದರಿ ಕಾದಂಬರಿಗಳು ಹಾಗೂ ಚಲನಚಿತ್ರಗಳು ತಯಾರಾಗಿವೆ. (ಜೆ.ಎಸ್.ಪಿ.ಎಂ.)