ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾಕ್ಲ ಮಕಾನ್

ವಿಕಿಸೋರ್ಸ್ದಿಂದ

ಟಾಕ್ಲ ಮಕಾನ್ ಮಧ್ಯ ಏಷ್ಯದ ಒಂದು ಮರುಭೂಮಿ. ಪಶ್ಚಿಮ ಚೀನದ ಷಿಂಜೀಯಾಂಗ್ ವೀಗೂರ್ ಪ್ರದೇಶದ ಮಧ್ಯದಲ್ಲಿ ಟಾರಿಮ್ ನದೀ ಪ್ರದೇಶದ ಬಹುಭಾಗವನ್ನಾಕ್ರಮಿಸಿಕೊಂಡಿದೆ. ಇದರ ಉತ್ತರದಲ್ಲಿ ಟೀಯೆನ್ ಷಾನ್ ಮತ್ತು ದಕ್ಷಿಣದಲ್ಲಿ ಕೂನ್ ಲೂನ್ ಪರ್ವತಗಳಿವೆ. ಸ್ಥೂಲವಾಗಿ ಉ.ಅ. 38º-41º ಮತ್ತು ಪೂ.ರೇ. 78º-88º ನಡುವೆ, 1,25,000 ಚ.ಮೈ.ಗಳಷ್ಟು ವಿಸ್ತಾರವಾಗಿರುವ ಈ ಮರುಭೂಮಿ ಚಲಿಸುವ ಮರಳುಗುಡ್ಡೆಗಳಿಂದ ಕೂಡಿ, ಬಹುತೇಕ ನಿರ್ಜಲವಾಗಿದೆ. ಖೋಟಾನ್ ಮತ್ತು ಕೆರಿಯ ನದಿಗಳು ಉತ್ತರಾಭಿಮುಖವಾಗಿ ಈ ಮರುಭೂಮಿಗೆ ಹರಿದು ಬಂದು ಬತ್ತಿಹೋಗುತ್ತವೆ. ಮರುಭೂಮಿಯ ಉತ್ತರದ ಅಂಚಿನಲ್ಲಿ ಟಾರಿಮ್ ನದಿ ಹರಿಯುತ್ತದೆ. ಈ ನದಿಗಳು ಹರಿಯುವ ಎಡೆ ಬಿಟ್ಟರೆ ಉಳಿದ ಪ್ರದೇಶ ವಾಸಯೋಗ್ಯವಲ್ಲ. ಟಾಕ್ಲ ಮಕಾನಿನ ದಕ್ಷಿಣ ಮತ್ತು ನೈಋತ್ಯ ಭಾಗಗಳು ಬಹುತೇಕ ಮರಳುಗುಡ್ಡೆಗಳಿಂದ ಆವೃತವಾಗಿವೆ. ಈ ಭಾಗಗಳ ಮೇಲೆ ಈಶಾನ್ಯ ಮಾರುತಗಳು ಬಿರುಸಾಗಿ ಬೀಸುತ್ತವೆ. ಮರಳುಗುಡ್ಡೆಗಳ ದಕ್ಷಿಣ ಪಾಶ್ರ್ವ ಹೆಚ್ಚು ಕಡಿದು. ಈಶಾನ್ಯದಲ್ಲಿ ಟಾರಿಮ್ ನದಿಯ ಕೆಳದಂಡೆಯಿಂದ ಹಿಡಿದು ಮರುಭೂಮಿಯ ಆಗ್ನೇಯ ಭಾಗದವರೆಗಿನ ಪ್ರದೇಶ ಉಳಿದ ಭಾಗಕ್ಕಿಂತ ಭಿನ್ನವಾಗಿದೆ. ಇಲ್ಲಿ ಮರಳುಗುಡ್ಡೆಗಳ ನಡುನಡುವೆ ಮೈದಾನಗಳ ಅಥವಾ ಹಳೆಯ ನಾಲೆಗಳ ಪ್ರದೇಶಗಳುಂಟು. ಈ ಪ್ರದೇಶಗಳು ಮಾರುತಗಳ ಕ್ರಿಯೆಯಿಂದಾಗಿ ನಗ್ನೀಕೃತವಾಗಿವೆ. ಟಾರಿಮ್ ನದಿ ಮತ್ತು ಲಾಪ್ ನಾರ್ ಸರೋವರ ಈ ಪ್ರದೇಶದಲ್ಲಿ ಆಗಿಂದಾಗ್ಗೆ ಸ್ಥಳ ಬದಲಿಸುತ್ತ ಬಂದದ್ದರ ಫಲವಾಗಿ ಕೆಲವು ಎಡೆಗಳಲ್ಲಿ ನೆಲದ ಅಡಿಯಲ್ಲಿ ತುಂಬ ಮೇಲುಗಡೆಯಲ್ಲೇ ಸಿಹಿ ಅಥವಾ ಉಪ್ಪು ನೀರಿನ ಸೆಲೆಗಳುಂಟು.

ಟಾಕ್ಲ ಮಕಾನಿನ ವಾಯುಗುಣ ವೈಪರೀತ್ಯದಿಂದ ಕೂಡಿದ್ದು. ಮರುಭೂಮಿಯ ಬಹುತೇಕ ಪ್ರದೇಶದಲ್ಲಿ ಚಳಿಗಾಲದಲ್ಲಿ - 23ºಅ. (-10º ಈ.) ನಷ್ಟು ಕಡಿಮೆ ಉಷ್ಣತೆ ಇರುತ್ತದೆ. ಆಗ್ನೆಯ ಭಾಗದಲ್ಲಿ ಹಿಮ ಬಿರುಗಾಳಿಗಳು ಬೀಸುವುದುಂಟು. ಇದರಿಂದಾಗಿ ಅಲ್ಲಿ ಕೆಲವು ವೇಳೆ ಉಷ್ಣತೆ -30º ಅ. (-22º ಈ.) ವರೆಗೂ ಇಳಿಯುತ್ತದೆ. ಬೇಸಗೆಯ ಹೊತ್ತಿಗೆ ಟಾಕ್ಲ ಮಕಾನಿನಲ್ಲಿ ಉಷ್ಣತೆ 30º ಅ. (86º ಈ.) ವರೆಗೂ ಏರುವುದುಂಟು. ಮರಳುಗಡ್ಡೆಗಳಿಂದ ಕೂಡಿದ ಒಳಪ್ರದೇಶದಲ್ಲಿ ಬೇಸಗೆಯಲ್ಲಿ ಇನ್ನೂ ಹೆಚ್ಚಿನ ಉಷ್ಣತೆ ಇರುವುದುಂಟು. ಉಸಿರು ಸಿಕ್ಕಿಸುವಂಥ ಮರಳುಬಿರುಗಾಳಿಗಳಿಂದಾಗಿ ಮರುಭೂಮಿಯ ಪ್ರದೇಶ ದುರ್ಭೇದ್ಯವಾಗಿರುತ್ತದೆ.

ಮರುಭೂಮಿಯ ಮಧ್ಯಭಾಗದಲ್ಲಿ ಸಸ್ಯಪ್ರಾಣಿಜೀವನ ಬಹುತೇಕ ಶೂನ್ಯ. ಅದರೆ ಜೀವತೊರೆಗಳ ಬಳಿಯಲ್ಲಿ ಹಾಗೂ ಪೂರ್ವದಲ್ಲಿ ಅಲ್ಲಲ್ಲಿ ಹುಲ್ಲುಗಾಡು ಪ್ರರೂಪಿ ಸಸ್ಯಗಳು, ಜೊಂಡು, ಟಮಾರಿಸ್ಕ್, ಪಾಪ್ಲರ್ ವಿರಳವಾಗಿ ಕಂಡುಬರುತ್ತವೆ. ಟಾರಿಮ್ ನದಿಯ ಕೆಳದಂಡೆಯ ಪ್ರದೇಶದಲ್ಲಿ ಮತ್ತು ಲಾಪ್ ನಾರ್ ಸುತ್ತಮುತ್ತ ಜೊಂಡು ಒತ್ತಾಗಿ ಬೆಳೆಯುತ್ತದೆ. ನೀರೂ ಸಸ್ಯವೂ ಇರುವೆಡೆಯಲ್ಲಿ ಸಾಂದ್ರೀಕೃತವಾಗಿರುವ ಪ್ರಾಣಿಗಳಲ್ಲಿ ಮೊಲ, ದಂಶಕ, ನರಿ, ತೋಳ, ಕಾಡುಹಂದಿ, ಜಿಂಕೆ ಮುಖ್ಯವಾದವು. ಪೂರ್ವಭಾಗದಲ್ಲಿ ಕೆಲವು ಎಡೆ ಕಾಡು ಒಂಟೆಗಳಿವೆ. ಪಶ್ಚಿಮಕ್ಕಿಂತ ಪೂರ್ವದ ಕಡೆ ಪ್ರಾಣಿಗಳು ಹೆಚ್ಚು. ಟಾರಿಮ್ ಕೆಳದಂಡೆ ಪ್ರದೇಶದಲ್ಲಿ ಮತ್ತು ಲಾಪ್ ನಾರ್‍ನಲ್ಲಿ ಅನೇಕ ಬಗೆಯ ಮೀನುಗಳೂ ಹಕ್ಕಿಗಳೂ ಇವೆ.