ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾಲಮೀ, ಕ್ಲಾಡಿಯಸ್

ವಿಕಿಸೋರ್ಸ್ದಿಂದ

ಟಾಲಮೀ, ಕ್ಲಾಡಿಯಸ್ ಕ್ರಿ..ಶ. 127-151ರ ಅವಧಿಯಲ್ಲಿ ಪ್ರಸಿದ್ಧನಾಗಿದ್ದ ಗ್ರೀಕ್ ಖಗೋಳವಿಜ್ಞಾನಿ. ಮೂಲತಃ ಇವನು ಈಜಿಪ್ಟ್ ದೇಶದವನೆಂದು ತಿಳಿದುಬಂದಿದೆ. ಅಲ್ಲಿನ ಅಲೆಕ್ಸಾಂಡ್ರಿಯ ಪಟ್ಟಣದಲ್ಲಿ ತನ್ನ ಜೀವನವನ್ನು ಕಳೆದನೆಂಬುದನ್ನು ಬಿಟ್ಟು ಇವನ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಈ ಕಾಲಕ್ಕೆ ಸರಿಯಾಗಿ ಈಜಿಪ್ಟ್ ದೇಶವನ್ನು ಸುಮಾರು ಮೂರು ಶತಮಾನಗಳ ವರೆಗೆ ಆಳಿದ ಲಾಗೈಡ್ಸ್ ವಂಶದ ಆಳ್ವಿಕೆ ಕೊನೆಗೊಂಡಿತ್ತು. ಆ ವಂಶಪರಂಪರೆಗೆ ಸೇರಿದ ಟಾಲಮೀ ಸೋಟರ್ ಎಂಬ ದೊರೆ ಈಜಿಪ್ಟ್ ದೇಶದ ಪ್ರಸಿದ್ಧವಾದ ಅಲೆಕ್ಸಾಂಡ್ರಿಯ ಪಟ್ಟಣವನ್ನು ನಿರ್ಮಿಸಿದ. ಈ ವಂಶದ ಆಳ್ವಿಕೆ ಕೊನೆಗೊಂಡ ಬಳಿಕ ಈಜಿಪ್ಟ್ ದೇಶ ರೋಮನ್ ಚಕ್ರಾಧಿಪತ್ಯಕ್ಕೆ ಸೇರಿಹೋಯಿತು. ಇದೇ ಕಾಲಕ್ಕೆ ಗ್ರೀಸ್ ದೇಶದವರಿಗೂ ಪೌರಸ್ತ್ಯದೇಶದವರಿಗೂ ಸಂಪರ್ಕ ಹೆಚ್ಚಾಗಿ ಏರ್ಪಟ್ಟು ಪಾಶ್ಚಾತ್ಯ ಮತ್ತು ಪೌರಸ್ತ್ಯ ವಿಜ್ಞಾನಿಗಳ ಭಾವನೆಗಳ ಸಂಘರ್ಷ, ಸಂಪರ್ಕಗಳಿಂದ ವಿಜ್ಞಾನದ ಬೆಳೆವಣಿಗೆ ಪರಿಪಕ್ವವಾಗಿತ್ತು. ಗ್ರೀಸ್ ದೇಶದವರ ದರ್ಶನದ ಮೇಲೆ ಪೌರಸ್ತ್ಯದರ್ಶನ ಪ್ರಭಾವ ಬೀರಿತು. ಅಲೆಕ್ಸಾಂಡ್ರಿಯ ಪಟ್ಟಣ ಪ್ರಸಿದ್ಧ ವಿಜ್ಞಾನಿಗಳ ಬೀಡಾಗಿತ್ತು. ವಿಜ್ಞಾನಿಗಳ ಒಂದು ಹೊಸಪೀಳಿಗೆ ಉದ್ಭವವಾಗಿದ್ದು ನವಚೈತನ್ಯಕ್ಕೆ ಕಾರಣರಾದವರಲ್ಲಿ ಡಯೊಫಾಂಟಸ್, ಪಾಪಸ್ ಮುಂತಾದ ವಿಜ್ಞಾನಿಗಳೊಂದಿಗೆ ಟಾಲಮೀ ವಹಿಸಿದ ಪಾತ್ರಕ್ಕೂ ಹೆಚ್ಚಿನ ಮಹತ್ತ್ವ ಉಂಟು.

ಟಾಲಮಿ ತನ್ನ ಹೊಸ ಆವಿಷ್ಕಾರಗಳಿಂದ ಪ್ರಸಿದ್ಧನಾದವನಲ್ಲ. ಜ್ಯಾಮಿತಿಯ ಬಗ್ಗೆ ಅಲ್ಲಿಯವರೆಗೆ ತಿಳಿದ ವಿಷಯಗಳನ್ನೆಲ್ಲ ಕ್ರೋಡೀಕರಿಸಿ, ವಿಷಯಗಳನ್ನೆಲ್ಲ ಕ್ರಮಬದ್ಧವಾಗಿ ಒಂದು ಪುಸ್ತಕದ ರೂಪದಲ್ಲಿ ಯೂಕ್ಲಿಡ್ (ಕ್ರಿ .ಪೂ. ಸು. 300) ಹೇಗೆ ರೂಪಿಸಿದನೋ ಹಾಗೆ ಖಗೋಳವಿಜ್ಞಾನಕ್ಕೆ ಸಂಬಂಧಿಸಿದಂತೆ ತನ್ನ ಕಾಲದವರೆಗೆ ಆಗಿದ್ದ ಆವಿಷ್ಕಾರಗಳನ್ನೆಲ್ಲ ಕ್ರೋಡೀಕರಿಸಿ ಆಲ್ಮಜೆಸ್ಟ್ ಎಂಬ ಪುಸ್ತಕ ರೂಪದಲ್ಲಿ ತಂದ ಕೀರ್ತಿ ಟಾಲಮೀಯದು. ವಿಷಯ ಪ್ರತಿಪಾದನೆಯಲ್ಲಿ ಈತ ತೋರಿಸುವ ಕೌಶಲ ಮತ್ತು ಶಾಸ್ತ್ರೀಯ ನಿಷ್ಕøಷ್ಟತೆಗಳಿಂದಾಗಿ ಈ ಗ್ರಂಥ ಶತ ಶತಮಾನಗಳವರೆಗೆ ಎಂದರೆ ಕೊಪರ್ನಿಕಸ್ (1473-1543) ಮತ್ತು ಕೆಪ್ಲರನ (1571-1630) ಕಾಲದವರೆಗೂ ವಿಜ್ಞಾನಿಗಳ ಆದರ್ಶ ಗ್ರಂಥವಾಗಿತ್ತು. ಕ್ರಿ.ಪೂ.ಸು. 120ರಲ್ಲಿದ್ದ ಹಿಪ್ಟಾರ್ಕಸ್ ಎಂಬ ಪ್ರಸಿದ್ಧ ಗ್ರೀಕ್ ವಿಜ್ಞಾನಿಯ ಆವಿಷ್ಕಾರಗಳನ್ನೆಲ್ಲ ಟಾಲಮೀ ತನ್ನ ಆಲ್ಮಜೆಸ್ಟ್ ಗ್ರಂಥದಲ್ಲಿ ಅಳವಡಿಸಿದ್ದಾನೆ. ಹಿಪ್ಪಾರ್ಕಸ್ ಖಗೋಳಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿದ್ದ. ಆದರೆ ಆತನ ಆವಿಷ್ಕಾರಗಳ ಬಗ್ಗೆ ತಿಳಿಯಲು ಅವನ ಹೆಸರಿನಲ್ಲಿರುವ ಯಾವ ಗ್ರಂಥವೂ ಈಗ ಲಭಿಸಿಲ್ಲ. ಹೀಗಾಗಿ ಅವನ ಅಧ್ಯಯನದ ಬಗ್ಗೆ ಎಲ್ಲ ವಿಷಯಗಳನ್ನೂ ಟಾಲಮೀಯ ಆಲ್ಮಜೆಸ್ಟ್ ಗ್ರಂಥದಿಂದಲೇ ತಿಳಿಯಬೇಕಾಗಿದೆ. ಟಾಲಮೀಯ ಸಿದ್ಧಿ ಸಾಧನೆಗಳ ಬಗ್ಗೆ ತಿಳಿಯಲು. (ಎಲ್.ಎನ್.ಸಿ.)