ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಠೇವಣಿ ವಿಮೆ
ಠೇವಣಿ ವಿಮೆ - ಒಂದು ಬ್ಯಾಂಕು ದಿವಾಳಿಯಾದ ಪಕ್ಷದಲ್ಲಿ ಅದರ ಠೇವಣಿದಾರರಲ್ಲೊಬ್ಬೊಬ್ಬರಿಗೂ ಸಂಭವಿಸುವ ನಷ್ಟವನ್ನು, ಇದಕ್ಕಾಗಿ ಆ ಬ್ಯಾಂಕಿನಿಂದ ಪಡೆದ ಪ್ರೀಮಿಯಮಿನ ಮೊಬಲಗಿಗೆ ಪ್ರತಿಯಾಗಿ. ಒಂದು ನಿರ್ದಿಷ್ಟವಾದ ಪರಿಮಿತಿಯವರೆಗೆ ಭರ್ತಿಮಾಡಿಕೊಡಲು ಒಪ್ಪಿ ಬ್ಯಾಂಕಿಗೂ ವಿಮಾಸಂಸ್ಥೆಗೂ ಆದ ಕರಾರು. ಬ್ಯಾಂಕಿಂಗ್ ವ್ಯವಹಾರ ವಿಶಿಷ್ಟವಾದ್ದು. ಈ ವ್ಯವಹಾರದಲ್ಲಿ ನಂಬಿಕೆ ಅತ್ಯಂತ ಮುಖ್ಯ ಅಂಶ. ಒಂದು ಬ್ಯಾಂಕಿನಲ್ಲಿ ಅದರ ಠೇವಣಿದಾರರು ಇಟ್ಟಿರುವ ನಂಬಿಕೆಯೇ ಆ ಬ್ಯಾಂಕಿನ ಜೀವಾಳ. ಪ್ರತಿ ಬ್ಯಾಂಕೂ ಸುಗಮವಾಗಿ ವ್ಯವಹಾರ ನಡೆಸುವುದು ಸಾಧ್ಯವಾಗಿರುವುದು ಇದರಿಂದಲೇ. ದೇಶದ ಎಲ್ಲ ಬ್ಯಾಂಕುಗಳ ಠೇವಣಿದಾರರೂ ಅವುಗಳಲ್ಲಿ ಇಟ್ಟಿರುವ ಭರವಸೆಯಿಂದಾಗಿ ಬ್ಯಾಂಕಿಂಗ್ ವ್ಯವಹಾರ ಅಬಾಧಿತವಾಗಿ ನಡೆಯಲು ಸಾಧ್ಯವಾಗಿದೆ. ಒಂದು ಬ್ಯಾಂಕು ಅಕಸ್ಮಾತ್ ದಿವಾಳಿಯಾದರೆ ಆ ಬ್ಯಾಂಕಿನ ಠೇವಣಿದಾರರು ಮಾತ್ರವಲ್ಲದೆ ಇತರ ಬ್ಯಾಂಕುಗಳ ಠೇವಣಿದಾರರಿಗೂ ಗಾಬರಿ ಮೂಡುತ್ತದೆ. ಈ ಮನಃಸ್ಥಿತಿಯಲ್ಲಿ ಇತರ ಬ್ಯಾಂಕುಗಳ ಠೇವಣಿದಾರರೂ ತಂತಮ್ಮ ಠೇವಣಿಗಳನ್ನು ಹಿಂದಕ್ಕೆ ಪಡೆಯಲು ನುಗ್ಗುತ್ತಾರೆ. ಇಂಥ ನೂಕುನುಗ್ಗಲು ಏರ್ಪಟ್ಟರೆ ಎಷ್ಟೇ ಸದೃಢ ಬ್ಯಾಂಕೂ ತನ್ನ ಎಲ್ಲ ಠೇವಣಿಗಳನ್ನೂ ಒಮ್ಮೆಗೇ ಹಿಂದಿರುಗಿಸಲು ಅಸಮರ್ಥವಾಗುತ್ತದೆ. ಆಗ ಠೇವಣಿದಾರರು ತಮ್ಮ ಠೇವಣಿಯ ಮೊಬಲಗೆಲ್ಲವನ್ನೋ ಅದರ ಒಂದು ಭಾಗವನ್ನೋ ಪಡೆಯಲಾಗದೆ ನಷ್ಟ ಹೊಂದುವ ಸಂಭಾವ್ಯತೆಯುಂಟು. ಇದನ್ನು ನಿವಾರಿಸಲು ಠೇವಣಿ ವಿಮೆ ನೆರವಾಗುತ್ತವೆ. ದಿವಾಳಿಯಾದ ಬ್ಯಾಂಕಿಗೆ ಈ ವ್ಯವಸ್ಥೆಯಿಂದ ತನ್ನ ಠೇವಣಿದಾರರ ಠೇವಣಿಗಳನ್ನು ಹಿಂದಿರುಗಿಸಲು ಸಾಧ್ಯವಾಗದಂಥ ಪರಿಸ್ಥಿತಿಗೆ ಪರಿಹಾರ ಒದಗುತ್ತದೆ. ಇಡೀ ಬ್ಯಾಂಕುಗಳ ಸಮುದಾಯದಲ್ಲೆ ನಂಬಿಕೆ ಕಳೆದುಹೋಗುವ ಪರಿಸ್ಥಿತಿ ಒದಗುವುದನ್ನೂ ಇದು ನಿವಾರಿಸುತ್ತದೆ. ಜನಗಳಲ್ಲಿ ಬ್ಯಾಂಕುಗಳ ಬಗ್ಗೆ ವಿಶ್ವಾಸವನ್ನು ದೃಢಗೊಳಿಸಿ, ಅವರಲ್ಲಿ ಬ್ಯಾಂಕಿಂಗ್ ಅಭ್ಯಾಸವನ್ನು ರೂಢಿಸಿ, ಠೇವಣಿಗಳು ಬೆಳೆಯಲು ಈ ವ್ಯವಸ್ಥೆ ಸಹಾಯ ನೀಡುತ್ತದೆ.
ಠೇವಣಿ ವಿಮೆ ಮೊಟ್ಟಮೊದಲು 1933ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಆರಂಭವಾಯಿತು. 1930ರ ದಶಕದಲ್ಲಿ ವ್ಯಾಪಕವಾಗಿ ಬ್ಯಾಂಕುಗಳು ದಿವಾಳಿಯಾದಾಗ ಅಲ್ಲಿಯ ಸರ್ಕಾರ ಫೆಡರಲ್ ಠೇವಣಿ ವಿಮಾ ನಿಗಮವನ್ನು ಆರಂಭಿಸಿತು. ಪ್ರತಿ ಠೇವಣಿದಾರನ ಠೇವಣಿಯನ್ನೂ 2,500 ಡಾಲರ್ ಗರಿಷ್ಠ ಮಿತಿಯವರೆಗೆ ವಿಮೆ ಮಾಡಲು ಇದಕ್ಕೆ ಅಧಿಕಾರ ನೀಡಲಾಯಿತು. ( ಈ ಗರಿಷ್ಠ ಮಿತಿಯನ್ನು ಕ್ರಮೇಣ ಏರಿಸಲಾಗಿದೆ.) ಫೆಡರಲ್ ರಿಸರ್ವ್ ವ್ಯವಸ್ಥೆಯ ಎಲ್ಲ ಸದಸ್ಯ ಬ್ಯಾಂಕುಗಳೂ ಠೇವಣಿ ವಿಮೆ ಇಳಿಸುವುದು ಕಡ್ಡಾಯವಾಯಿತು. ಬ್ಯಾಂಕುಗಳ ವ್ಯವಹಾರ ದಕ್ಷತೆಯಿಂದ ನಡೆಯುವಂತೆ ಮಾಡಲೂ ಫೆಡರಲ್ ವಿಮಾ ನಿಗಮ ಅನೇಕ ಕ್ರಮಗಳನ್ನು ಕೈಗೊಂಡಿತು. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆ ಉತ್ತಮಗೊಂಡಿತು.
ಭಾರತದಲಿ:್ಲ ಭಾರತದ ರಿಸರ್ವ್ ಬ್ಯಾಂಕಿನ ಸಮೀಕ್ಷೆಯೊಂದರ ಪ್ರಕಾರ 1913 ರಿಂದ 1951ರವರೆಗೆ ದಿವಾಳಿಯಾದ ಬ್ಯಾಂಕುಗಳ ಸಂಖ್ಯೆ 485. ಬ್ಯಾಂಕುಗಳು ದಿವಾಳಿಯೇಳುವುದರಿಂದ ಉಂಟಾಗುವ ಆಘಾತವನ್ನು ತಪ್ಪಿಸಲು ಠೇವಣಿ ವಿಮೆಯನ್ನು ಜಾರಿಗೆ ತರಬೇಕೆಂದು 1950ರಲ್ಲಿ ಗ್ರಾಮೀಣ ಬ್ಯಾಂಕಿಂಗ್ ವಿಚಾರಣಾ ಸಮಿತಿ ಶಿಫಾರಸು ಮಾಡಿತು. ಅನಂತರ 1954ರಲ್ಲಿ ಷ್ರಾಫ್ ಸಮಿತಿಯೂ ಈ ಸಲಹೆಗೆ ದೇಶದ ದೊಡ್ಡ ಬ್ಯಾಂಕುಗಳು ತಮ್ಮ ಭದ್ರತೆಯ ಬಗ್ಗೆ ನಿಶ್ಚಿಂತ ಸ್ಥಿತಿಯಿಂದಿದ್ದುದೂ ಸಣ್ಣಪುಟ್ಟ ಬ್ಯಾಂಕುಗಳು ದಿವಾಳಿಯೆದ್ದಾಗ ಉಂಟಾಗುವ ಹಾನಿಯನ್ನು ಭರ್ತಿಮಾಡಲು ತಾವು ವಿಮಾಕಂತುಗಳನ್ನು ಕೊಡಬೇಕೆಂಬುದೂ ಅವುಗಳ ವಿರೋಧಕ್ಕೆ ಮುಖ್ಯ ಕಾರಣಗಳು. ಆದರೆ 1960ರಲ್ಲಿ ಎರಡು ದೊಡ್ಡ ಅನುಸೂಚಿತ ಬ್ಯಾಂಕುಗಳೇ ದಿವಾಳಿಯೆದ್ದುವು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ರೂಢಿಸಿ ಬೆಳೆಸಲು ಠೇವಣಿ ವಿಮೆ ಜಾರಿಗೆ ಬರಲೇಬೇಕೆಂಬುದು ಸರ್ಕಾರದ ಅಭಿಪ್ರಾಯವಾಯಿತು. ಈ ಹಿನ್ನೆಲೆಯಲ್ಲಿ ರಿಸರ್ವ್‍ಬ್ಯಾಂಕಿಗೆ ಬ್ಯಾಂಕುಗಳ ಮೇಲಿದ್ದ ಹತೋಟಿಯ ಅಧಿಕಾರವನ್ನು ಹೆಚ್ಚಿಸಲಾಯಿತು. ಒಡನೆಯೇ ಠೇವಣಿ ವಿಮಾ ಯೋಜನೆಯೂ ರೂಪುಗೊಂಡಿತು.
ಠೇವಣಿ ವಿಮೆಯನ್ನು ಜಾರಿಗೆ ತರುವ ಉದ್ದೇಶದಿಂದ ತರಲಾದ ಠೇವಣಿ ವಿಮಾ ವಿಧೇಯಕಕ್ಕೆ ಸಂಸತ್ತು ಅಂಗೀಕಾರ ನೀಡಿತು (1961). ಠೇವಣಿ ವಿಮಾ ಅಧಿನಿಯಮ 1962ರ ಜನವರಿ ಒಂದರಿಂದ ಜಾರಿಗೆ ಬಂದು, ಅಂದಿನಿಂದ ಠೇವಣಿ ವಿಮಾ ನಿಗಮ ಅಸ್ತಿತ್ವಕ್ಕೆ ಬಂತು. ಇದರ 1 ಕೋಟಿ ರೂ.ಗಳ ಬಂಡವಾಳವನ್ನು 1 ಳಿ ಕೋಟಿ ರೂ.ಗಳಿಗೆ ಹೆಚ್ಚಿಸಲಾಯಿತು. ಠೇವಣಿ ವಿಮಾ ನಿಗಮದ ಸ್ಥಾಪನೆ ಭಾರತದ ಬ್ಯಾಂಕಿಂಗ್ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. ಬ್ಯಾಂಕು ದಿವಾಳಿಯಾದ ಕಾರಣದಿಂದ ಸಣ್ಣಪುಟ್ಟ ಠೇವಣಿದಾರರಿಗೆ ಆಗುವ ನಷ್ಟಸಂಭವಕ್ಕೆ ರಕ್ಷಣೆ ಒದಗಿಸುವುದೂ ಜನರಲ್ಲಿ ಬ್ಯಾಂಕಿಂಗ್ ಅಭ್ಯಾಸವನ್ನು ಪ್ರೋತ್ಸಾಹಿಸುವುದೂ ಇದರ ಉದ್ದೇಶಗಳು. ಠೇವಣಿ ವಿಮಾ ನಿಗಮಕ್ಕೆ ಎರಡು ನಿಧಿಗಳಿವೆ: 1 ಸಾಮಾನ್ಯ ನಿಧಿ: 1 ಳಿ ಕೋಟಿ ರೂ.ಗಳ ಬಂಡವಾಳವನ್ನು ಸಂಪೂರ್ಣವಾಗಿ ರಿಸರ್ವ್ ಬ್ಯಾಂಕುಸಲ್ಲಿಸಿದೆ. ಈ ಮೊಬಲಗನ್ನು ಕೇಂದ್ರ ಸರ್ಕಾರದ ಪ್ರತಿಭೂತಿಗಳಲ್ಲಿ ಹೂಡಲಾಗಿದ್ದು ಇದರಿಂದ ಬರುವ ಬಡ್ಡಿಯನ್ನು ವ್ಯವಸ್ಥಾಪನ ವೆಚ್ಚಗಳಿಗೆ ಬಳಸಲಾಗುತ್ತದೆ. 2. ಠೇವಣಿ ವಿಮಾ ನಿಧಿ: ಈ ನಿಧಿಯಲ್ಲಿ ಸೇರುವ ಬಾಬ್ತುಗಳು ಇವು: i ಬ್ಯಾಂಕುಗಳಿಂದ ಠೇವಣಿ ವಿಮಾ ನಿಗಮ ವಸೂಲು ಮಾಡಿದ ವಿಮಾ ಕಂತುಗಳು. ii ದಿವಾಳಿಯೆದ್ದ ಬ್ಯಾಂಕಿನ ಅವಸಾಯಕನ್ನು (ಲಿಕ್ವಿಡೇಟರ್) ಮರುಪಾವತಿ ಮಾಡಿದ ಮೊಬಲಗು, iii ಭಾರತದ ರಿಸರ್ವ್ ಬ್ಯಾಂಕು ಮುಂಗಡ ನೀಡಿರಬಹುದಾದ ಮೊಬಲಗು, iv ಸಾಮಾನ್ಯ ನಿಧಿಯಿಂದ ವರ್ಗಾವಣೆಯಾಗಿ ಬಂದ ಮೊಬಲಗು.
1973ರ ಸೆಪ್ಟೆಂಬರ್ ವೇಳೆಗೆ ಈ ನಿಧಿ ರೂ.31 ಕೋಟಿಯಷ್ಟಿತ್ತು. ವಿಮೆಯ ವ್ಯಾಪ್ತಿಗೆ ಒಳಪಟ್ಟ ಠೇವಣಿಗಳ ಮೊಬಲಗು ರೂ. 5,852 ಕೋಟಿ ಆಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಹಾಗೂ ಅದರ ಎಲ್ಲ ಉಪಾಂಗಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಅಧಿನಿಯಮ ಜಾರಿಗೆ ಬರುವ ಮುಂಚೆ ಲೈಸೆನ್ಸ್ ಪಡೆದಿದ್ದ ಎಲ್ಲ ಬ್ಯಾಂಕುಗಳಿಗೆ, ಅನಂತರ ಲೈಸೆನ್ಸ್ ನಿರಾಕರಿಸಲ್ಪಡದೇ ಇದ್ದ ಎಲ್ಲ ಬ್ಯಾಂಕುಗಳಿಗೆ ಮತ್ತು ಬ್ಯಾಂಕಿಂಗ್ ಕಂಪನಿಗಳ ಅಧಿನಿಯಮದ 51ನೆಯ ಕಲಮಿನಲ್ಲಿ ಬ್ಯಾಂಕಿಂಗ್ ಕಂಪನಿ ಎಂದು ಅನುಸೂಚಿತವಾದ ಎಲ್ಲ ಬ್ಯಾಂಕುಗಳಿಗೆ ಠೇವಣಿ ವಿಮಾ ನಿಗಮದ ವಿಮಾ ಸೌಲಭ್ಯ ವ್ಯಾಪಿಸಿದೆ. ರಾಜ್ಯ ಸರ್ಕಾರದ, ಕೇಂದ್ರಸರ್ಕಾರದ ಹಾಗೂ ವಿದೇಶೀ ಸರ್ಕಾರಗಳ ಠೇವಣಿಗಳಿಗೂ ಬ್ಯಾಂಕಿಂಗ್ ಕಂಪನಿಗಳು ಇಟ್ಟಿರುವ ಠೇವಣಿಗಳಿಗೂ ಭಾರತದ ಹೊರಗೆ ಸ್ವೀಕರಿಸಲಾದ ಠೇವಣಿಗಳಿಗೂ ಠೇವಣಿ ವಿಮೆ ಅನ್ವಯಿಸುವುದಿಲ್ಲ. ಪ್ರೀಮಿಯಮನ್ನು ಲೆಕ್ಕಹಾಕುವಾಗ ಈ ಠೇವಣಿಗಳನ್ನು ಪರಿಗಣಿಸುವುದಿಲ್ಲ. ಸ್ವಾಯತ್ತೆಯ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಸರ್ಕಾರಿ ಉದ್ಯಮಗಳು ಮತ್ತು ನಿಗಮಗಳು ಇಟ್ಟ ಠೇವಣಿಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಆದ್ದರಿಂದ ಈ ಬಗೆಯ ಠೇವಣಿಗಳನ್ನೂ ಸೇರಿಸಿ ಪ್ರೀಮಿಯಮ್ ಲೆಕ್ಕಹಾಕಲಾಗುತ್ತದೆ.
ವಿಮೆಯ ಪ್ರಯೋಜನ ಹೊಂದುವ ಠೇವಣಿದಾರರು ಪ್ರೀಮಿಯಂ ಕೊಡಬೇಕಾಗಿಲ್ಲದ್ದು ಠೇವಣಿ ವಿಮೆಯ ವೈಶಿಷ್ಟ್ಯ. ವಿಮಾ ಯೋಜನೆಗೆ ಒಳಪಟ್ಟ ಬ್ಯಾಂಕುಗಳು ಪ್ರೀಮಿಯಂ ಪಾವತಿಮಾಡಬೇಕು, ಪ್ರೀಮಿಯಮ್ಮನ್ನೂ ಬ್ಯಾಂಕಿನ ಇತರ ಖರ್ಚುಗಳಂತೆ ಪರಿಗಣಿಸಲಾಗುತ್ತದೆ. ವಿಮಾ ಯೋಜನೆಗೆ ಒಳಗಾದ ಪ್ರತಿ ಬ್ಯಾಂಕೂ ಮೂರು ತಿಂಗಳುಗಳಿಗೊಮ್ಮೆ ಪ್ರೀಮಿಯಂ ಪಾವತಿಮಾಡಬೇಕು. ವಿಮೆಯಿಳಿಸಿದ ಬ್ಯಾಂಕಿನ ಎಲ್ಲ ಶಾಖೆಗಳಲ್ಲೂ ಯಾವನೇ ವ್ಯಕ್ತಿ ಒಂದೇ ಅಧಿಕಾರ (ರೈಟ್) ಹಾಗೂ ಸಾಮಥ್ರ್ಯದಲ್ಲಿ (ಕೆಪಾಸಿಟಿ) ತೆರೆದಿರುವ ಎಲ್ಲ ಖಾತೆಗಳ ಠೇವಣಿಗಳೂ ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ. ಒಬ್ಬ ವ್ಯಕ್ತಿಗೆ ಮರುಪಾವತಿಯಾಗಲಿರುವ ಮೊಬಲಗಿನ ಪರಿಮಿತಿಯನ್ನು 1962ರಲ್ಲಿ 1,500ರೂ. ಎಂದು ನಿಗದಿ ಮಾಡಲಾಗಿತ್ತು. ಇದನ್ನು 1968ರಲ್ಲಿ ರೂ. 5000ಕ್ಕೂ 1970ರಲ್ಲಿ ರೂ 10,000ಕ್ಕೂ ಏರಿಸಲಾಯಿತು. ಠೇವಣಿ ವಿಮಾ ಯೋಜನೆಯನ್ನು ಸಹಕಾರಿ ಬ್ಯಾಂಕುಗಳಿಗೂ ಅನ್ವಯಿಸುವ ಉದ್ದೇಶದಿಂದ 1967ರಲ್ಲಿ ಠೇವಣಿ ವಿಮಾ ನಿಗಮ (ತಿದ್ದುಪಡಿ) ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದು 1968ರಲ್ಲಿ ಅಧಿನಿಯಮವಾಗಿ ಜಾರಿಗೆ ಬಂತು. ಇದರ ವ್ಯಾಪ್ತಿಯಲ್ಲಿ ರಾಜ್ಯ ಸಹಕಾರಿ ಬ್ಯಾಂಕುಗಳೂ ಕೇಂದ್ರ ಸಹಕಾರಿ ಬ್ಯಾಂಕುಗಳೂ ಒಂದು ಲಕ್ಷ ರೂಪಾಯಿಗಳಿಗೂ ಮೀರಿದ ಬಂಡವಾಳ ಹಾಗೂ ಮೀಸಲುಗಳನ್ನುಳ್ಳ ಪ್ರಾಥಮಿಕ ಸಹಕಾರಿ ಬ್ಯಾಂಕುಗಳೂ ಬರುತ್ತವೆ. ಸದ್ಯದಲ್ಲಿ ಈ ಯೋಜನೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇಂದ್ರಾಡಳಿತ ಪ್ರದೇಶಗಳಾದ ಗೋವ, ದೀವ್ ಮತ್ತು ದಮನ್‍ನಲ್ಲಿ ಜಾರಿಗೆ ಬಂದಿದೆ. ಇಲ್ಲಿಯ ಸರ್ಕಾರಗಳು ತಮ್ಮ ಸಹಕಾರ ಸಂಘಗಳ ಅಧಿನಿಯಮಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡಿಕೊಂಡಿವೆ. ತಮಿಳು ನಾಡಿನಲ್ಲಿ ರಾಜ್ಯ ಸರ್ಕಾರ ರಿಸರ್ವ್ ಬ್ಯಾಂಕಿನ ಷರತ್ತಿಗೆ ಒಪ್ಪದೇ ತಾನೇ ಸಹಕಾರಿ ಬ್ಯಾಂಕುಗಳ ಠೇವಣಿಗಳ ವಿಮೆಯಿಳಿಸುವ ಯೋಜನೆಯನ್ನು ಕೈಗೊಂಡಿದೆ. (ಡಿ.ಎನ್.ಎಸ್.ಎಂ.)