ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಕ್ಕೆಯ ಬೊಮ್ಮಣ್ಣ

ವಿಕಿಸೋರ್ಸ್ದಿಂದ

ಡಕ್ಕೆಯ ಬೊಮ್ಮಣ್ಣ:- ಬಸವ ಪೂರ್ವಯುಗದ ಶರಣರ ಸಾಲಿನಲ್ಲಿ ಒಬ್ಬ. ಈತನಿಗೆ ಡಕ್ಕೆಯ ಮಾರಯ್ಯನೆಂಬ ಹೆಸರೂ ಇದ್ದಿತು. ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಪುರಾಣ, ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯ, ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯ ಸೂತ್ರ ರತ್ನಾಕರ ಮೊದಲಾದ ಗ್ರಂಥಗಳಲ್ಲಿ ಮಾರಯ್ಯನೆಂದಿದೆಯೇ ಹೊರತು ಬೊಮ್ಮಣ್ಣನೆಂದು ಹೇಳಿಲ್ಲ.

ಕರ್ನಾಟಕ ಕವಿಚರಿತ್ರೆಯಂತೆ ಈತನ ವಚನಗಳ ಸಂಖ್ಯೆ 89. ಇವುಗಳಲ್ಲಿ ಕಾಲಾಂತರ ಭೀಮೇಶ್ವರ ಲಿಂಗ ಎಂಬ ಅಂಕಿತವಿದೆ. ಆದರೆ ಫ.ಗು. ಹಳಕಟ್ಟಿಯವರು ಈ ಅಂಕಿತವನ್ನೇ ಡಕ್ಕೆಯ ಮಾರಯ್ಯನಿಗೆ ಉದಾಹರಿಸಿದ್ದಾರೆ. ಬೊಮ್ಮಣ್ಣನ ಕಾರ್ಯವೆಂದರೆ ಡೊಳ್ಳು ಬಾರಿಸುವುದು. ಉಡಿಯಲ್ಲಿ ತಡಿಯಲ್ಲಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು, ಮಾರಿಯನ್ನು ಹೊತ್ತು ಆ ಮೂಲಕವೇ ಜನತೆಗೆ ಶರಣಧರ್ಮವನ್ನು ಈತ ಬೋಧಿಸುತ್ತಿದ್ದ. ಆದುದರಿಂದಲೇ ಇವನಿಗೆ ಮಾರಯ್ಯನೆಂಬ ಹೆಸರು ಬಂದಿರಬಹುದು. ಈತ ಶಂಕರದಾಸಿಮಯ್ಯನ ಕಿರಿಯ ಸಮಕಾಲೀನನಾಗಿದ್ದು ಅವನ ಅಹಂಕಾರವನ್ನು ತೊಡೆದು ಹಾಕಿದ ಒಂದು ಪ್ರಸಂಗವಿದೆ. ದಾಸಿಮಯ್ಯನ ಮನೆಯ ಮುಂದೆ ಮಾರಿಯನ್ನು ಕುಣಿಸುತ್ತ ಬಂದಾಗ, ಕೋಪಗೊಂಡ ದಾಸಿಮಯ್ಯ ಮಾರಿಯನ್ನೂ ಮಾರಯ್ಯನನ್ನೂ ಸುಟ್ಟುಬಿಡುತ್ತೇನೆ ಎಂಬ ಅಹಂಕಾರದಿಂದ ಹಣೆಗಣ್ಣನ್ನು ತೆರೆಯುತ್ತಾನೆ. ಆದರೆ ಆ ಹಣೆಗಣ್ಣ ಉರಿ ಮಾರಯ್ಯನನ್ನು ಸಮೀಪಿಸುವ ಮೊದಲೇ ತಣ್ಣಗಾಯಿತಂತೆ.

ಡಕ್ಕೆಯ ಬೊಮ್ಮಣ್ಣನ ಊರು ಯಾವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಹಳಕಟ್ಟಿಯವರು ಸ್ಕಂದಶಿಲೆ (ಕಂದಗಲ್ಲು) ಆಗಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

ಈತನ ಒಂದು ವಚನ ಹೀಗಿದೆ: ಶರಣಸತಿ ಲಿಂಗಪತಿಯಾದಲ್ಲಿಯೆ, ಕಾಯಗುಣನಿಂದಿತ್ತು ಆತ್ಮಸತಿ ಅರುವು ಪುರುಷನಾದಲ್ಲಿಯೆ ಜೀವಗುಣನಿಂದಿತ್ತು ನೀನೆಂಬುದ ಭಾವಿಸಿ ಮಾಡಿದಾಗಲೆ ಕಾಯಕ ಶುದ್ಧವಾಯಿತ್ತು ಕಾಲಾಂತರ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು. (ಎಂ.ವಿ.ಇ.)