ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಾರ್ವಿನ್, ಚಾಲ್ರ್ಸ್‌ ರಾಬರ್ಟ್

ವಿಕಿಸೋರ್ಸ್ದಿಂದ

ಡಾರ್ವಿನ್, ಚಾಲ್ರ್ಸ್ ರಾಬರ್ಟ್ 1809-1882. ಇಂಗ್ಲೆಂಡಿನ ಪ್ರಖ್ಯಾತ ಪ್ರಕೃತಿ ವಿಜ್ಞಾನಿ. ಜೀವಿವಿಕಾಸಕ್ಕೆ ಪ್ರಕೃತಿ ಕೈವಾಡವೇ ಮೂಲ ಹಾಗೂ ಆಧಾರ ಎಂದು ಪ್ರತಿಪಾದಿಸಿ ಜೀವವಿಜ್ಞಾನದ, ಅಷ್ಟೇಕೆ ಮಾನವನ ವಿಚಾರಧಾಟಿಯನ್ನು ಬದಲಿಸಿದ ಕ್ರಾಂತಿಕಾರಿ. 1809ರ ಫೆಬ್ರವರಿ 12ರಂದು ಇಂಗ್ಲೆಂಡಿನ ಷ್ರೂಸ್‍ಬರಿಯಲ್ಲಿ ಜನಿಸಿದ. ತಂದೆ ರಾಬರ್ಟ್‍ವಾರಿಂಗ್ ಡಾರ್ವಿನ ಹೆಸರಾಂತ ವೈದ್ಯ. ತಾಯಿ ಸುಸಾನ್ ವಿದ್ಯಾವಂತೆ, ಒಳ್ಳೆಯ ಗೃಹಿಣಿ, ಇಂಗ್ಲೆಂಡಿನ ಸುಸಂಸ್ಕøತ ಹಾಗೂ ಕುಂಭಕಲೆಗೆ ಹೆಸರಾಗಿದ್ದ ವೆಜ್‍ವುಡ್ ಮನೆತನದಿಂದ ಬಂದವಳು. ತಾತ ಎರ್ಯಾಸ್ಮಸ್ ಡಾರ್ವಿನ್ ಇಂಗ್ಲೆಂಡಿನ ಪ್ರಸಿದ್ಧ ವೈದ್ಯ. ಪ್ರಕೃತಿವಿe್ಞÁನಿ ಹಾಗೂ ಕವಿ.

ಡಾರ್ವಿನ್ನನ ಬಾಲ್ಯವಿದ್ಯಾಭ್ಯಾಸ ತವರೂರಿನಲ್ಲೇ ಆರಂಭವಾಯಿತು. ಎಂಟನೆಯ ವಯಸ್ಸಿನಲ್ಲಿ ಯೂನಿಟೇರಿಯನ್ ಚರ್ಚಿಗೆ ಸೇರಿದ್ದ ಪಾಠಶಾಲೆಗೆ ಹೋಗಲಾರಂಭಿಸಿದ. ಮಾರನೆಯ ವರ್ಷ ಆ ಶಾಲೆಯನ್ನು ಬಿಟ್ಟು ಅದೇ ಊರಿನ ಮತ್ತೊಂದು ಶಾಲೆಗೆ ಪ್ರವೇಶ. ಆ ಶಾಲೆಯ ಉಪಾಧ್ಯಾಯ ಸ್ಯಾಮ್ಯುಯಲ್ ಬಟ್ಲರ್ ಸಾಂಪ್ರದಾಯಿಕ ಪಂಥದವರು. ಅವರು ಹೇಳಿ ಕೊಡುತ್ತಿದ್ದ ವ್ಯಾಕರಣ, ಲಕ್ಷಣಶಾಸ್ತ್ರಗಳು ಚಾಲ್ರ್ಸ್‍ಗೆ ಹಿಡಿಸುತ್ತಿರಲಿಲ್ಲ. ಬದಲು ಕಾಡಿಗೆ ಹೋಗಿ ವಿವಿಧ ಬಗೆಯ ಸಸ್ಯಗಳನ್ನು ಸಂಗ್ರಹಿಸುವುದು, ಚಿಟ್ಟೆಗಳೇ ಮೊದಲಾದ ಪುಟ್ಟಪುಟ್ಟ ಪ್ರಾಣಿಗಳನ್ನು ಹಿಡಿಯುವುದು ಮತ್ತು ಅವುಗಳ ರೂಪುರಚನೆಗಳನ್ನು ಅಧ್ಯಯನ ಮಾಡುವುದು ಇವನಿಗೆ ಪ್ರಿಯವೆನಿಸಿತ್ತು. ಇದರಿಂದಾಗಿ ತಂದೆಯ ಕೋಪಕ್ಕೆ ಗುರಿಯಾಗಿದ್ದುದೂ ಉಂಟು. ಅನಂತರ ತಂದೆಯ ಅಪೇಕ್ಷೆಯಂತೆ ವೈದ್ಯ ಶಿಕ್ಷಣಕ್ಕಾಗಿ 1825ರಲ್ಲಿ ಎಡಿನ್‍ಬರೋವಿಗೆ ಹೋದ. ಕೆಲವು ತಿಂಗಳುಗಳಲ್ಲಿಯೇ ವೈದ್ಯಶಿಕ್ಷಣವೂ ಬೇಸರವೆನಿಸಿತು. ಆದರೆ ಅಲ್ಲಿದ್ದ ಪ್ರಕೃತಿವಿe್ಞÁನದ ಶಾಖೆ ಮಾತ್ರ ಈತನನ್ನು ಆಕರ್ಷಿಸಿತು. ಅಲ್ಲಿ ಗಿಡಮರಗಳನ್ನೂ ವಿವಿಧ ಪ್ರಾಣಿಗಳನ್ನೂ ಅಧ್ಯಯನ ಮಾಡಲು ಪ್ರಾರಂಭಿಸಿದ. ಅಲ್ಲಿನ ಪ್ರಕೃತಿವಿe್ಞÁನದ ಶಿಕ್ಷಕರಾಗಿದ್ದ ರಾಬರ್ಟ್ ಎಡ್ಮಂಡ್ ಗ್ರಾಂಟ್ ಮತ್ತು ವಿಲಿಯಮ್ ಮ್ಯಾಕ್‍ಗಿಲಿವ್ರೆಯವರೊಡನೆ ನಿಕಟಸಂಬಂಧ ಬೆಳೆಯಿತು. ಅಲ್ಲದೆ ಅಲ್ಲಿಯ ಪ್ಲಿಸಿಯನ್ ಸಂಘದ ಆಶ್ರಯದಲ್ಲಿ ಆಗಾಗ್ಗೆ ಸಮುದ್ರತೀರಕ್ಕೆ ಹೋಗಿ ಪ್ರಾಣಿ ಮತ್ತು ಸಸ್ಯಗಳ ಅಧ್ಯಯನದಲ್ಲಿ ತೊಡಗುತ್ತಿದ್ದ. ಮಗನ ಚಟುವಟಿಕೆಗಳಿಗೆ ಬೇಸತ್ತ ತಂದೆ ಈತ ಮತಧರ್ಮಶಾಸ್ತ್ರದಲ್ಲಿ ಶಿಕ್ಷಣ ಪಡೆದು ಮಠಾಧಿಪತಿಯಾದರೂ ಆಗಲೆಂದು ಡಾರ್ವಿನ್ನನನ್ನು ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ (1827) ಕಳುಹಿಸಿದ. ಡಾರ್ವಿನ್ ಅಲ್ಲಿನ ಕ್ರೈಸ್ಟ್ ಕಾಲೇಜಿಗೆ ಸೇರಿದ. ಆದರೆ ಅಲ್ಲಿಯೂ ಶಿಕ್ಷಣದಲ್ಲಿ ಆಸಕ್ತಿಯುಂಟಾಗಲಿಲ್ಲ. ಆಗಿನ ಕಾಲಕ್ಕೆ ಈ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಮತ್ತು ಗಣಿತಶಾಸ್ತ್ರಗಳಿಗೆ ಪ್ರಾಧಾನ್ಯ ಇತ್ತೇ ವಿನಾ ಪ್ರಕೃತಿವಿe್ಞÁನಕ್ಕೆ ಪ್ರಾಮುಖ್ಯವಿರಲಿಲ್ಲ. ಅಲ್ಲಿದ್ದ ಸಸ್ಯಶಾಸ್ತ್ರದ ಶಿಕ್ಷಕರಾದ ಜಾನ್ ಸ್ಟೀವೆನ್ಸ್ ಹೆನ್ಸ್ಲೊ ಮತ್ತು ಭೂವಿe್ಞÁನದ ಶಿಕ್ಷಕರಾದ ವಿಲಿಯಮ್ ಸೆಜ್‍ವಿಕ್ ಅವರ ಪಾಠಪ್ರವಚನಗಳು ಮಾತ್ರ ಈತನನ್ನು ಆಕರ್ಷಿಸಿದುವು. ಮತಧರ್ಮಶಾಸ್ತ್ರದ ಪರೀಕ್ಷೆಯಲ್ಲಿ ಸಾಮಾನ್ಯದರ್ಜೆಯಲ್ಲಿ ಉತ್ತೀರ್ಣನಾಗಿ ಬಿ.ಎ. ಪದವಿಯನ್ನು ಪಡೆದ (1841).

ಅದೇ ಸಮಯಕ್ಕೆ ಸರಿಯಾಗಿ ಎಚ್.ಎಂ.ಎಸ್. ಬೀಗಲ್ ಎಂಬ ಬ್ರಿಟಿಷ್ ಹಡಗು ದಕ್ಷಿಣ ಅಮೆರಿಕ ಹಾಗೂ ಆಸ್ಟ್ರೇಲಿಯ ಖಂಡಗಳ ತೀರಪ್ರದೇಶಗಳಿಗೆ ಭೇಟಿಕೊಟ್ಟು ಅಲ್ಲಿನ ಭೂವಿe್ಞÁನ, ಪ್ರಕೃತಿವಿe್ಞÁನ ಮೊದಲಾದವುಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಯಾನ ಹೊರಟಿತ್ತು. ಅದಕ್ಕೆ ಒಬ್ಬ ಪ್ರಕೃತಿ ವಿe್ಞÁನಿಯ ಆವಶ್ಯಕತೆಯಿತ್ತು. ಡಾರ್ವಿನ್ನನಿಗೆ ಈ ಕರ್ತವ್ಯಭಾರವನ್ನು ಹೊರುವ ಕರೆ ಬಂತು. ಮೊದಲಮೊದಲು ಡಾರ್ವಿನ್ನನ ತಂದೆ ವಿರೋಧಿಸಿದ. ಆದರೆ ಡಾರ್ವಿನ್ನನ ಸೋದರಮಾವ ಎರಡನೆಯ ಜೊಸೈಯ ವೆಜ್‍ವುಡ್ ಶಿಫಾರ್ಸಿನಿಂದಾಗಿ ಪ್ರಕೃತಿವಿe್ಞÁನಿಯಾಗಿ ಸೇರಿಕೊಂಡ. 1831-1836ರ ವರೆಗೆ 5 ವರ್ಷಗಳ ಕಾಲ ಬೀಗಲ್ ಹಡಗು ದಕ್ಷಿಣ ಅಮೆರಿಕದ ತೀರದ ರೇವುಗಳಲ್ಲಿ ತಂಗಿದ್ದು ಬ್ರಜಿûಲ್, ರಯೊಡಿಜನಿರೊ, ಮಾಂಟಿವಿಡಿಯೋ, ಬೆರಿಯ ಬ್ಲಾಂಕ, ಉರುಗ್ವೆ, ಪಟಗೋನಿಯ, ಟೀಯೆರ ಡೆಲ್ ಫೂಯೇಗೋ, ಚಿಲಿ, ಭೂಮಧ್ಯರೇಖೆಯ ಬಳಿಯಿರುವ ಮತ್ತು ದಕ್ಷಿಣ ಅಮೆರಿಕ ಖಂಡಕ್ಕೆ 800-960 ಕಿ.ಮೀ. ದೂರವಿರುವ ಗಲಾಪಗಸ್ ದ್ವೀಪಗಳನ್ನು ಸಂದರ್ಶಿಸಿ ಮುಂದುವರಿದು ತಾಹಿತಿ ದ್ವೀಪಗಳು, ನ್ಯೂಜಿûೀಲೆಂಡ್, ಆಸ್ಟ್ರೇಲಿಯ, ಕೀಲಿಂಗ್ ದ್ವೀಪಗಳು, ಮಾರಿಷಸ್, ಸೇಂಟ್ ಹೆಲಿನ, ಬೇಹಿಯ ಮೊದಲಾದ ಪ್ರದೇಶಗಳಿಗೆ ಭೇಟಿಕೊಟ್ಟು ಕೊನೆಗೆ ತಾಯ್ನಾಡಿಗೆ ಹಿಂದಿರುಗಿತು.

ಚಾಲ್ರ್ಸ್ ಒಳ್ಳೆಯ ಸಂಶೋಧಕ, ನೋಡಿದ್ದನ್ನು ನಿಖರವಾಗಿ ವರದಿ ಮಾಡತಕ್ಕವ, ಬೇಸರಪಡದೆ ತಾಳ್ಮೆಯಿಂದ ಪ್ರಕೃತಿದತ್ತವಾದ ಸಸ್ಯಪ್ರಾಣಿಗಳನ್ನು ಪರೀಕ್ಷಿಸುವುದೇ ಅಲ್ಲದೆ ಅವುಗಳನ್ನು ಮತ್ತು ಆಯಾ ಪರಿಸರಗಳಲ್ಲಿ ದೊರಕುವ ಗತಕಾಲದ ಜೀವಿಗಳ ಪಳೆಯುಳಿಕೆಗಳನ್ನು ಈತ ಸಂಗ್ರಹಿಸಿದ. ಹೀಗೆ ಸಂಗ್ರಹಿಸಿದ ವಸ್ತುಗಳನ್ನು ಹಡಗಿನಲ್ಲಿ ತುಂಬಿಕೊಳ್ಳುತ್ತಿದ್ದುದೇ ಅಲ್ಲದೆ ಪ್ರತಿರೇವಿನಲ್ಲೂ ಅವನ್ನು ಮನೆಗೆ ಕಳುಹಿಸಿಕೊಡುತ್ತಿದ್ದ. ಹಡಗಿನ ಯಾನ ನಿಜವಾಗಿಯೂ ಸಾಹಸ ಹಾಗೂ ಅಪಾಯದಿಂದ ಕೂಡಿತ್ತು. ಪಟಗೋನಿಯ ಮತ್ತು ಟೀಯೆರಡೆಲ್ ಫೂಯೇಗೋಗಳಲ್ಲಿ ಆ ಕಾಲದ ಮತ್ತು ಗತಿಸಿದ ಕಾಲದ ಜೀವರಾಶಿಗಳಲ್ಲಾಗುವ ಬದಲಾವಣೆಗಳನ್ನು ನೋಡಿ ಜೀವಿಗಳು ನಿರಂತರವಾಗಿ ಬದಲಾವಣೆ ಹೊಂದುತ್ತವೆಂಬುದನ್ನು ಮನಗಂಡ. ಜೀವವಿಕಾಸದ ಸ್ಥೂಲಚಿತ್ರ ಮಸಕು ಮಸಕಾಗಿ ಈತನ ಮನಸ್ಸಿನಲ್ಲಿ ಹೊಳೆಯಿತು. ಆ ಕಾಲಕ್ಕೆ ಸರ್ ಚಾಲ್ರ್ಸ್ ಲೈಯಲ್ಲನ ಭೂ ವಿe್ಞÁನದ ಪುಸ್ತಕವನ್ನು ಈತ ಓದಿದ್ದ. ಲೈಯಲ್ ತನ್ನ ಪುಸ್ತಕದಲ್ಲಿ ಭೂಮಿಯ ಲಕ್ಷಣಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ, ಇಂದಿನ ಭೂಲಕ್ಷಣಗಳು ಹಿಂದಿನ ಭೌಗೋಳಿಕ ಲಕ್ಷಣಗಳನ್ನು ನಿರ್ಧರಿಸಬಹುದು ಎಂದು ನಿರೂಪಿಸಿದ್ದ. ಈ ಸಿದ್ಧಾಂತದ ಹಿನ್ನೆಲೆಯಲ್ಲಿ ಇಂದಿನ ಪ್ರಾಣಿಗಳನ್ನು ಮತ್ತು ಗತಿಸಿದ ಪ್ರಾಣಿಗಳ ಫಾಸಿಲುಗಳನ್ನು ಡಾರ್ವಿನ್ ತುಲನಾತ್ಮಕವಾಗಿ ಅಧ್ಯಯನ ಮಾಡಿದ.

ಗಲಾಪಾಗಸ್ ದ್ವೀಪಗಳು ಅಗ್ನಿಪರ್ವತಗಳ ಚಟುವಟಿಕೆಯಿಂದ ರೂಪುಗೊಂಡ ದ್ವೀಪಗಳು. ಇವು ಪ್ರಾಕೃತಿಕ ಪ್ರಯೋಗಾಲಯಗಳಂತಿದ್ದು ಜೀವಪ್ರಭೇದಗಳ ಹುಟ್ಟಿನ ಇತಿಹಾಸವನ್ನು ವಿವರಿಸುವಂತಿದ್ದುವು. ಆ ದ್ವೀಪಗಳ ಜೀವಿಸಂಪತ್ತನ್ನು ಪರೀಕ್ಷಿಸುತ್ತಿದ್ದಾಗ ಅಲ್ಲಿ ವಾಸಿಸುತ್ತಿದ್ದ ದೈತ್ಯಕಾರದ ಆಮೆಗಳು ಒಂದೊಂದು ದ್ವೀಪದಲ್ಲೂ ಒಂದೊಂದು ತೆರನಾಗಿದ್ದುದನ್ನು ಡಾರ್ವಿನ್ ಗಮನಿಸಿದ. ಹೊರನೋಟಕ್ಕೆ ಬೇರೆಬೇರೆಯಾಗಿದ್ದರೂ ಅವು ಪರಸ್ಪರ ಸಂಬಂಧಿಗಳೆಂಬ ಅಂಶ ಎದ್ದುಕಾಣುತ್ತಿತ್ತು. ಈ ತುಲನಾತ್ಮಕ ಅಧ್ಯಯನದಿಂದ ಹತ್ತಿರದ ಖಂಡಪ್ರದೇಶದಲ್ಲಿ ವಾಸಿಸುವ ಒಂದು ಮೂಲ ಆಮೆಯ ಗುಂಪಿನಿಂದ ಶಾಖೋಪಶಾಖೆಗಳಾಗಿ ಕವಲೊಡೆದು ಕೊನೆಗೆ ಈಗಿನ ಆಮೆಗಳು ರೂಪುಗೊಂಡಿರುವುವೆಂದು ಡಾರ್ವಿನ್ನನಿಗೆ ಭಾಸವಾಯಿತು. ಇದೇ ಕತೆ ಅಲ್ಲಿದ್ದ ಫಿಂಚ್ ಪಕ್ಷಿಗಳಿಗೂ ಅನ್ವಯವಾಗುವುದನ್ನು ಮನದಟ್ಟು ಮಾಡಿಕೊಂಡ. ಈ ಯಾನ ಡಾರ್ವಿನ್ನನ ಜೀವನದಲ್ಲಿಯೇ ಅತ್ಯಂತ ಮುಖ್ಯ ಘಟನೆಯೆನಿಸಿತು. ತಾಯ್ನಾಡಿಗೆ ಹಿಂದಿರುಗಿದ ಮೇಲೆ ಸಾಕುಪ್ರಾಣಿ ಹಾಗೂ ಸಾಗುವಳಿ ಸಸ್ಯಗಳಲ್ಲಿ ಕಂಡುಬರುವ ವಿವಿಧತೆಗಳ ಬಗ್ಗೆ ಹಾಗೂ ಉತ್ತಮೋತ್ತಮ ತಳಿಗಳ ಆಯ್ಕೆ ಮಾಡಿ ಉತ್ತಮ ತಳಿಗಳನ್ನು ವೃದ್ಧಿಪಡಿಸುವುದರ ಬಗ್ಗೆ ಮಾಹಿತಿ ಮತ್ತು ವಿವರಗಳನ್ನು ಕಲೆಹಾಕಲಾರಂಭಿಸಿದ. ಮಾನವನ ಫಲದಾಯಕ ಪ್ರಗತಿಗೆ ಆಯ್ಕೆಯೇ ಪ್ರಧಾನವೆಂಬುದು ಈತನಿಗೆ ವೇದ್ಯವಾಯಿತು. ಭೂವಿe್ಞÁನ, ವ್ಯವಸಾಯ, ಮಾನವಶಾಸ್ತ್ರಗಳ ಬಗ್ಗೆ ಹೊಸ ಹೊಸ ವಿಷಯಗಳಿಗಾಗಿ ತಜ್ಞರೊಡನೆ ಪತ್ರ ವ್ಯವಹಾರಮಾಡಿ ವಿಷಯಗಳನ್ನು ಸಂಗ್ರಹಿಸಿದ. ಏತನ್ಮಧ್ಯೆ ನೌಕಾಯಾತ್ರೆಯಲ್ಲಿ ಆದ ಅನುಭವಗಳನ್ನು ಬೀಗಲ್ ಯಾತ್ರೆಯಲ್ಲಿ ನಡೆಸಿದ ಭೂವೈe್ಞÁನಿಕ ಮತ್ತು ಪ್ರಕೃತಿವೈe್ಞÁನಿಕ ಸಂಶೋಧನೆಗಳು (1839), ಪ್ರಕೃತಿ ವಿe್ಞÁನಿಯ ಪ್ರಪಂಚಯಾತ್ರೆ (1845) ಎಂಬ ಲೇಖನಗಳಲ್ಲಿ ಬರೆದ. ಇವುಗಳ ಜೊತೆಗೆ ಹವಳದಿಣ್ಣೆಗಳ ರಚನೆ ಮತ್ತು ಪ್ರಸರಣ (1842), ಬೀಗಲ್ ಯಾತ್ರೆಯ ಪ್ರಾಣಿಶಾಸ್ತ್ರ (1843), ಅಗ್ನಿಪರ್ವತ ದ್ವೀಪಗಳು (1844), ಭೂವಿe್ಞÁನದ ಸಂಕ್ಷೇಪಣಗಳು (1844-46) ಎಂಬ ಪ್ರಬಂಧಗಳನ್ನೂ ರಚಿಸಿದ.

1838ರಲ್ಲಿ ಈತನ ಜೀವನದಲ್ಲಿ ಎರಡು ಪ್ರಮುಖ ಘಟನೆಗಳು ಜರುಗಿದವು. ಮೊದಲನೆಯದು ತನ್ನ ಸೋದರಮಾವನ ಮಗಳಾದ ಎಮ್ಮ ವೆಜ್‍ವುಡ್‍ಳೊಂದಿಗೆ ವಿವಾಹ. ಎರಡನೆಯದು ಸಮಾಜಶಾಸ್ತ್ರ ಹಾಗೂ ಗಣಿತಶಾಸ್ತ್ರಗಳಿಗೆ ಸಂಬಂಧಿಸಿದ ತಾಮಸ್ ರಾಬರ್ಟ್ ಮ್ಯಾಲ್ತಸ್‍ನ ಜೀವಸಂದಣಿಯ ತತ್ತ್ವಗಳಿಗೆ ಸಂಬಂಧಿಸಿದ ಪ್ರಬಂಧವನ್ನು (1798) ಓದಿದ್ದು. ಈ ಗ್ರಂಥ ಡಾರ್ವಿನ್ನನ ಮನಸ್ಸಿನಲ್ಲಿ ಜೀವಿವಿಕಾಸದ ವಿಚಾರಸರಣಿಯನ್ನು ವೈe್ಞÁನಿಕ ನಿಟ್ಟಿನಲ್ಲಿ ಕರೆದೊಯ್ಯಲನುವಾಯಿತು. ಮನುಷ್ಯರ ಸಂಖ್ಯೆ ಜ್ಯಾಮಿತೀಯ ಶ್ರೇಣಿಯಲ್ಲಿ ಹೆಚ್ಚುತ್ತದೆಯೆಂದೂ ಇದರಿಂದ ಪ್ರಕೃತಿ ಒದಗಿಸುವ ಆಹಾರಕ್ಕೆ ಚ್ಯುತಿಬರುತ್ತದೆಂದೂ ತತ್ಫಲವಾಗಿ ಬಾಳ್ವೆಗಾಗಿ ಹೋರಾಟ ನಡೆಯುತ್ತದೆ ಹಾಗೂ ಹಸಿವು, ರೋಗರುಜಿನಗಳು, ಯುದ್ಧ ಮೊದಲಾದವು ಮಾನವ ಸಂಖ್ಯೆಯನ್ನು ಒಂದು ಸ್ತಿಮಿತದಲ್ಲಿಡುವುವೆಂದೂ ಮ್ಯಾಲ್ತಸ್ ತನ್ನ ಗ್ರಂಥದಲ್ಲಿ ವಿವರಿಸಿದ್ದ. ಇದರ ಜೊತೆಗೆ ಡಾರ್ವಿನ್ ತನ್ನ ದೇಶಪರ್ಯಟನೆಯಲ್ಲಿ ಗಮನಿಸಿದ ಜೀವನದ ಹೋರಾಟ, ಬಲಿಷ್ಠರ ಉಳಿವು, ಅಬಲರ ಅಳಿವು ಮುಂತಾದವುಗಳ ಫಲವಾಗಿ ಪ್ರಭೇದಗಳ ಉಗಮ ಎಂಬ ಜೀವಿವಿಕಾಸದ ಕಲ್ಪನೆ ಈತನ ಮನಸ್ಸಿನಲ್ಲಿ ರೂಪುಗೊಂಡಿತು. ಜೀವಿಗಳ ಮೇಲೆ ಪ್ರಕೃತಿ ಆಯ್ಕೆ (ನ್ಯಾಚುರಲ್ ಸೆಲೆಕ್ಷನ್) ಬೀರುವ ಪ್ರಭಾವದ ಅರಿವಾದುದು ಈ ಗ್ರಂಥದ ಮೂಲಕವೇ. ಫ್ರಾನ್ಸಿನ ಜೀವಿವಿಕಾಸವಾದಿ ಲಮಾರ್ಕ್ ಎಲ್ಲಿ ಎಡವಿದ್ದನೋ ಅಲ್ಲಿ ಈತ ಜಯಗಳಿಸಿದ್ದ. ಆದರೂ ಲಮಾರ್ಕನ ವಿಚಾರಸರಣಿಯನ್ನು ಡಾರ್ವಿನ್ ಭಾಗಶಃ ಒಪ್ಪಿಕೊಂಡಿದ್ದ. ಆದರೆ ಈತನ ದೃಷ್ಟಿಯಲ್ಲಿ ಜೀವಿಪ್ರಭೇಧಗಳು ಉಗಮಕ್ಕೆ ಪ್ರಕೃತಿ ಕೈವಾಡವೇ ಪ್ರಮುಖ ಹಾಗೂ ಪ್ರಬಲ ಅಂಶ.

1842ರ ಹೊತ್ತಿಗೆ ಡಾರ್ವಿನ್ನನ ಮನಸ್ಸಿನಲ್ಲಿ ಜೀವಿವಿಕಾಸದ ತತ್ತ್ವಗಳ ಪ್ರಮುಖ ರೂಪರೇಖೆಗಳ ಚೌಕಟ್ಟು ನಿರ್ಮಾಣವಾಗಿತ್ತು. ಈ ವೇಳೇ ಡಾರ್ವಿನ್ನನ ಆರೋಗ್ಯ ಕುಂಠಿತಗೊಂಡುದರಿಂದ ಈತ ಲಂಡನ್ ನಗರವನ್ನು ಬಿಟ್ಟು ಕೆಂಟ್ ಪ್ರದೇಶದಲ್ಲಿರುವ ಡೌನ್ ಎಂಬ ಗ್ರಾಮಕ್ಕೆ ಬಂದು ನೆಲೆಸಿದ. ಇದೇ ಈತನ ಮುಂದಿನ ಜೀವನದ ಕ್ರಿಯಾಕ್ಷೇತ್ರವಾಯಿತು. 1844ರಲ್ಲಿ ತನ್ನ ತತ್ತ್ವದ ವಿವರಗಳನ್ನು ಹೆಚ್ಚಿಸಿ 231 ಪುಟದ ಪ್ರಬಂಧದಲ್ಲಿ ಬರೆದಿಟ್ಟ. ಆದರೆ ಅದನ್ನು ಪ್ರಕಟಿಸುವ ಧೈರ್ಯ ಮಾಡಲಿಲ್ಲ. ತನ್ನ ಲೇಖನವನ್ನು ಆಪ್ತರಾದ ಸರ್ ಚಾಲ್ರ್ಸ್ ಲೈಯಲ್‍ಗೆ. (1797-1875) ತೋರಿಸಿದ. ಡಾರ್ವಿನ್ 1839-43ರವರೆಗೆ ಲಂಡನ್ನಿನ ಭೂವಿಜ್ಞಾನದ ಸಂಘದ ಕಾರ್ಯದರ್ಶಿಯಾಗಿ ಕೆಲಸಮಾಡುತ್ತಿದ್ದ ಕಾಲದಲ್ಲಿ ಲೈಯಲ್ ಒಡನೆ ನಿಕಟ ಸಂಪರ್ಕ ಬೆಳಸಿಕೊಂಡಿದ್ದ.

1846-54ರ ವರೆಗೂ ತನ್ನ ದಿನಚರಿಯ ಹೆಚ್ಚು ಕಾಲವನ್ನು ಆಧುನಿಕ ಮತ್ತು ಪ್ರಾಚೀನ ಸಿರಿಪೀಡಿಯಗಳ ಅಧ್ಯಯನದ ಬಗ್ಗೆ ವ್ಯಯಿಸಿದ. ಇದರ ಫಲವೇ ಬದುಕಿರುವ ಸಿರಿಪೀಡಿಯ ಮತ್ತು ಬ್ರಿಟನ್ನಿನ ಪ್ರಾಚೀನ ಸಿರಿಪೀಡಿಯ ಎಂಬ ಗ್ರಂಥದ ಪ್ರಕಟನೆ (1854).

ಕೊನೆಗೂ ಧೈರ್ಯಮಾಡಿ ತನ್ನ ಮನಸ್ಸಿನಲ್ಲೇ ರೂಪುಗೊಂಡಿದ್ದ ಜೀವಿ ವಿಕಾಸದ ತತ್ತ್ವಗಳನ್ನು ಪ್ರಬಂಧದ ರೂಪದಲ್ಲಿ 1856ರಲ್ಲಿ ಬರೆಯಲಾರಂಭಿಸಿದ. ಅಷ್ಟರ ಹೊತ್ತಿಗೆ ಅದೇ ವರ್ಷದ ಜೂನ್ ತಿಂಗಳಲ್ಲಿ ಆಲ್ಫ್ರೆಡ್ ರಸೆಲ್ ವ್ಯಾಲೇಸ್‍ನಿಂದ (1823-1913) ಒಂದು ಕಾಗದ ಬಂತು. ಇಂಗ್ಲೆಂಡಿನ ಪ್ರಕೃತಿವಿಜ್ಞಾನಿಯಾಗಿದ್ದ ಈತ ದಕ್ಷಿಣ ಅಮೆರಿಕ ಮತ್ತು ಈಸ್ಟ್ ಇಂಡೀಸ್‍ಗಳಿಗೆ ಭೇಟಿಕೊಟ್ಟು ವಲಯ ದ್ವೀಪಸ್ತೋಮಗಳಲ್ಲಿ ಒಂದಾದ ಮಲಕಸ್‍ನಲ್ಲಿರುವ ಟೆರ್‍ನಾಟ್ ಎಂಬಲ್ಲಿ ಸಂಶೋಧನೆ ನಡೆಸುತ್ತಿದ್ದ. ಪತ್ರದಲ್ಲಿ ಡಾರ್ವಿನ್ನನ ಮನಸ್ಸಿನಲ್ಲಿಯೇ ಇದ್ದ ಜೀವಿವಿಕಾಸದ ಚಿತ್ರದ ಸಂಕ್ಷಿಪ್ತ ವಿವರಣೆ ಇತ್ತು. ಈ ಕಾಗದವನ್ನು ಆಪ್ತರಾದ ಲೈಯಲ್ ಮತ್ತು ಹುಕರ್ ಅವರಿಗೆ ತೋರಿಸಿದ. ಅವರು ವ್ಯಾಲೇಸ್ ಪ್ರಬಂಧವನ್ನೂ ಡಾರ್ವಿನ್ ಬರೆದಿದ್ದ ಪ್ರಬಂಧದ ಸಾರಾಂಶವನ್ನೂ ಲಿನಿಯನ್ ಸಂಘದಲ್ಲಿ ಓದುವಂತೆ ಡಾರ್ವಿನ್ನನ ಮನವೊಲಿಸಿದರು. ಈ ಲೇಖನಗಳನ್ನು 1858 ಜುಲೈ ಒಂದನೆಯ ತಾರೀಕು ಓದಿದ. ಅಲ್ಲದೆ ಸಂಘದ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವೂ ಆಯಿತು. ವ್ಯಾಲೇಸ್ ಕೂಡ ಚಾಲ್ರ್ಸ್ ಡಾರ್ವಿನ್ನನ ಜೀವಿವಿಕಾಸದ ತತ್ತ್ವಗಳನ್ನು ಪ್ರತಿಪಾದಿಸಿದ್ದರೂ ಮಾಹಿತಿಗಳನ್ನು ಸಂಗ್ರಹಿಸಿ ಒಪ್ಪವಾದ ರೀತಿಯಲ್ಲಿ ಅಳವಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಕೀರ್ತಿ ಡಾರ್ವಿನ್ನನಿಗೆ ಸಲ್ಲುತ್ತದೆ.

ಡಾರ್ವಿನ್ನನಿಗಿಂತ ಹಿಂದೆಯೇ ಹಲವಾರು ಪಕೃತಿವಿಜ್ಞಾನಿಗಳು, ಕವಿಗಳು, ತತ್ತ್ವಶಾಸ್ತ್ರಜ್ಞರು, ದಾರ್ಶನಿಕರು ಬಹು ಹಿಂದಿನಿಂದ ಜೀವಿಸ್ವರೂಪದಲ್ಲಿ ಕಂಡು ಬರುವ ಬದಲಾವಣೆಗಳನ್ನು ವಿವರಿಸುತ್ತ ಬಂದಿದ್ದರೂ (ಡಾರ್ವಿನ್ನನ ತಾತ ಎರ್ಯಾಸ್ಮಸನೂ ಜೀವಿವಿಕಾಸ ತತ್ತ್ವ ಪ್ರತಿಪಾದಿಸಿದವನು) ಬೈಬಲಿನಲ್ಲಿ ನಿರೂಪಣೆಯಾಗಿದ್ದ ವಿಶೇಷ ಸೃಷ್ಟಿಯ ಬಗ್ಗೆ ಪ್ರತಿಭಟನೆ ನಡೆದಿರಲಿಲ್ಲ. ಆದರೆ ಡಾರ್ವಿನ್ ತಾನು ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳ ಮೂಲಕ ವ್ಶೆಜ್ಞಾನಿಕ ದಾಖಲೆಗಳನ್ನು ನೀಡಿ 1859ರಲ್ಲಿ ಪ್ರಕೃತಿಕೈವಾಡದಿಂದ ಪ್ರಭೇದಗಳ ಉಗಮ ಎಂಬ ಕ್ರಾಂತಿಕಾರಿ ಗ್ರ್ರಂಥವನ್ನು ಪ್ರಕಟಿಸಿದ. ಮ್ಯಾಲ್ತಸ್‍ನ ಪುಸ್ತಕದ ಓದುವಿಕೆಯಿಂದ ಪ್ರಗತಿ ಕೈವಾಡದ ಅರಿವು ಉಂಟಾಯಿತಾದರೂ ಈತನ ತತ್ತ್ವ ಪ್ರತಿಪಾದನೆಗೆ ಬೇಕಾದ ಬಾಳ್ವೆಗಾಗಿ ಹೋರಾಟ ಅಥವಾ ಜೀವನದ ಹೋರಾಟ. ಯೋಗ್ಯತಮ ಜೀವಿಗಳ ಉಳಿವು ಎಂಬ ಉಪಯುಕ್ತಪದಸಮುಚ್ಚಯಗಳನ್ನು ಒದಗಿಸಿದವು ಹರ್ಬರ್ಟ್ ಸ್ಪೆನ್ಸರನ (1820-1903) ಲೇಖನಗಳು. ಈ ಗ್ರಂಥದಲ್ಲಿ ಜೀವಿವಿಕಾಸದ ತರ್ಕ ಸರಳವಾಗಿದೆ. ಸ್ಪಷ್ಟವಾಗಿದೆ. ಇದು ಪ್ರಕಟಣೆಯಾದ ದಿನವೇ (24, ನವೆಂಬರ್ 1859) ಮುದ್ರಿಸಿದ 1250 ಪ್ರತಿಗಳೆಲ್ಲವೂ ಖರ್ಚಾದವಂತೆ; ಇದರಿಂದ ಅದೇ ವರ್ಷ ಈ ಗ್ರಂಥದ ಎರಡನೆಯ ಮುದ್ರಣ ಹೊರಬಿತ್ತು. ಈ ಗ್ರಂಥ ಜನಪ್ರಿಯವಾದ್ದರಿಂದ ಡಾರ್ವಿನ್ನನ ಜೀವಮಾನದಲ್ಲಿಯೇ ನಾಲ್ಕು ಬಾರಿ 1861, 1866, 1869 ಮತ್ತು 1872ಗಳಲ್ಲಿ ಪರಿಷ್ಕರಿಸಲ್ಪಟ್ಟಿತು.

ಇಂಗ್ಲೆಂಡು, ಯೂರೋಪು ಮತ್ತು ಅಮೆರಿಕಗಳ ವಿಜ್ಞಾನಿಗಳು ಡಾರ್ವಿನ್ನನ ಜೀವಿವಿಕಾಸವಾದವನ್ನು ಒಪ್ಪಿಕೊಂಡು. ಸ್ವಾಗತಿಸಿದರು. ಆದರೆ ಮತಧರ್ಮದಲ್ಲಿ ಅದರಲ್ಲೂ ಬೈಬಲಿನ ನಿರೂಪಣೆಯಲ್ಲಿ ನಂಬಿಕೆಯನ್ನಿಟ್ಟಿದವರಿಗೂ ವಿಕಾಸವಾದವನ್ನು ಒಪ್ಪಿಕೊಂಡ ಹೊಸ ಪಂಥದವರಿಗೂ ಘರ್ಷಣೆಗಳಾರಂಭವಾದವು. ಡಾರ್ವಿನ್ ತನ್ನ ಸಿದ್ಧಾಂತವನ್ನು ಪ್ರಚುರಪಡಿಸುವುದಕ್ಕಾಗಲೀ ಪ್ರತಿಪಾದಿಸುವುದಕ್ಕಾಗಲೀ ಸಾರ್ವಜನಿಕವಾಗಿ ವೇದಿಕೆಯ ಮೇಲೆ ನಿಂತವನಲ್ಲ. ಆದರೆ ಇಂಗ್ಲೆಂಡಿನ ತಾಮಸ್ ಹೆನ್ರಿ ಹಕ್ಸ್ಲೀ (1825-95) ಜರ್ಮನಿಯ ಎರ್ನೆಸ್ಟ್ ಹೆಕೆಲ್ ಮತ್ತು ಅಮೆರಿಕದ ಅಸಾ ಗ್ರೇ ಅವರು ಬೈಬಲಿನಲ್ಲಿ ನಿವೇದಿಸಿರುವ ಮಾನವನ ವಿಶೇಷ ಸೃಷ್ಟಿ ಸುಳ್ಳೆಂದು, ಹೇಳಿ ಪ್ರತಿಯೊಂದು ಜೀವಿರಾಶಿಯೂ ಪ್ರಕೃತಿ ಕೈವಾಡದಿಂದ ರೂಪುಗೊಂಡಿರುವುದೆಂಬ ಡಾರ್ವಿನ್ನನ ವಿಚಾರಸರಣಿಗಳನ್ನು ಮತ್ತು ತತ್ತ್ವ ನಿರೂಪಣೆಗಳನ್ನು ತಮ್ಮ ತಮ್ಮ ತಾಯ್ನಾಡುಗಳಲ್ಲಿ ವಿವರಿಸಿದರು.

ಡಾರ್ವಿನ್ ತನ್ನ ಕ್ರ್ರಾಂತಿಕಾರಿ ಕೃತಿಗೆ ಸಂಪೋಷಣೆ ಕೊಡುವ ಮತ್ತೆ ಮೂರು ಗ್ರಂಥಗಳನ್ನು ಪ್ರಕಟಿಸಿದ. ಪಳಗಿಸಿದ ಸಸ್ಯ ಮತ್ತು ಪ್ರಾಣಿಗಳ ವಿವಿಧತೆಗಳು (1868), ಮಾನವನ ಅವತರಣ (1871) ಮತ್ತು ಮಾನವನ ಮತ್ತು ಪ್ರಾಣಿಗಳಲ್ಲಿ ಸಂವೇಗಗಳ ಅಭಿವ್ಯಕ್ತತೆ (1872)-ಇವೇ ಈ ಗ್ರಂಥಗಳು. ತನ್ನ ವಾದಕ್ಕೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಈ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾನೆ. ಇವು ಮತಾನುಯಾಯಿಗಳನ್ನು ಮತ್ತೆ ಮತ್ತೆ ಕೆರಳಿಸಿದ್ದವು. ಡಾರ್ವಿನ್ ವೈಯಕ್ತಿಕವಾಗಿ ಸಹೃದಯ, ದಯಾಳು, ವಿನಯಪರ, ಉದಾರಿ, ಸಭೆಸಮಾರಂಭಗಳಲ್ಲಿ ಭಾಗವಹಿಸಲು ಎಂದೂ ಮುಂದೆ ಬಂದವನಲ್ಲ. ಮೇಲಿನ ಕೃತಿಗಳಲ್ಲದೆ ತನ್ನ ಗ್ರಾಮದಲ್ಲಿಯೇ ಇದ್ದು ಮೌನವಾಗಿ ಸಂಶೋಧನೆ ನಡೆಸಿ ಅನೇಕ ಗ್ರಂಥಗಳನ್ನು ಪ್ರಕಟಿಸಿದ. ಇವುಗಳಲ್ಲಿ ಮುಖ್ಯವಾದವು: ಆರ್ಕಿಡ್ ಹೂಗಳಲ್ಲಿ ನಿಷೇಚನೆ (1862), ಸುರುಳಿ ಬಳ್ಳಿಗಳ ಚಲನೆ ಮತ್ತು ಸ್ವಭಾವ (1864), ಕೀಟಾಹಾರಿ ಸಸ್ಯಗಳು (1875), ಸ್ವಕೀಯ ಮತ್ತು ಪರಕೀಯ ಪರಾಗ ಸ್ಪರ್ಶದಿಂದ ಸಸ್ಯವರ್ಗಗಳಲ್ಲಾಗುವ ಬದಲಾವಣೆಗಳು (1876), ಒಂದೇ ಜೀವಿ ಪ್ರಬೇಧದ ಸಸ್ಯದ ಹೂಗಳಲ್ಲಿ ಕಂಡುಬರುವ ರೂಪವೈವಿಧ್ಯ (1877), ಸಸ್ಯಗಳಲ್ಲಿ ಚಲನಶಕ್ತಿ (1880), ಎರೆ ಹುಳುಗಳು ಮಣ್ಣನ್ನು ಸಜ್ಜುಗೊಳಿಸುವ ಕ್ರಿಯೆ (1881).

ಡಾರ್ವಿನ್ ದಂಪತಿಗಳಿಗೆ ಹತ್ತು ಜನ ಮಕ್ಕಳು. ಅವರಲ್ಲಿ ಮೂವರು ಎಳೆ ವಯಸ್ಸಿನಲ್ಲಿಯೇ ತೀರಿಕೊಂಡರು. ಗಂಡು ಮಕ್ಕಳಲ್ಲಿ ನಾಲ್ವರು ಹೆಸರಾಂತ ವಿಜ್ಞಾನಿಗಳು. ಹಿರಿಯ ಮಗ ವಿಲಿಯಂ ಎರ್ಯಾಸ್ಮಸ್ ಡಾರ್ವಿನ್. ಸೌತ್ ಹಾಂಪ್ಟನ್‍ನಲ್ಲಿ ವಾಣಿಜ್ಯ ವ್ಯವಹಾರಗಳಲ್ಲಿ ನಿರತನಾಗಿದ್ದ ಧನಿಕ. ಎರಡನೆಯವನು ಜಾರ್ಜ್ ಹಾವರ್ಡ್ ಡಾರ್ವಿನ್ (1845-1913), ಈತ ಬ್ರಿಟನ್ನಿನ ಹೆಸರಾಂತ ಖಗೋಳಶಾಸ್ತ್ರಜ್ಞ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ. ಸೌರವ್ಯೂಹದ ವಿಕಾಸದ ಬಗೆ ಪ್ರೌಢತತ್ತ್ವವನ್ನು ನಿರೂಪಿಸಿದ. ಅಲ್ಲದೆ ಸಾಗರದ ಅಲೆಗಳ ಬಗ್ಗೆ ಸಂಶೋಧನೆಯನ್ನೂ ನಡೆಸಿದ. ಮೂರನೆಯ ಮಗ ಸರ್ ಫ್ರಾನ್ಸಿಸ್ ಡಾರ್ವಿನ್ (1848-1925) ಲಂಡನ್ನಿನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ವೈದ್ಯವೃತ್ತಿಗಾಗಿ ಶಿಕ್ಷಣ ಪಡೆದಿದ್ದರೂ ಆ ಕ್ಷೇತ್ರದಲ್ಲಿ ಮುಂದುವರಿಯದೆ ತಂದೆಯ ಕೆಲಸದಲ್ಲಿ ಸಹಾಯಕನಾಗಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸಸ್ಯವಿಜ್ಞಾನದ ರೀಡರ್ ಆಗಿದ್ದ. ಈತ ತಂದೆಯೊಡನೆ ಸೇರಿಕೊಂಡು ಸಸ್ಯಗಳ ಚಲನಶಕ್ತಿಯ ಬಗ್ಗೆ ಸಂಶೋಧನೆ ನಡೆಸಿದ. ತನ್ನ ತಂದೆಯ ಜೀವನ ಚರಿತ್ರೆಯನ್ನೂ ಈತ ಬರೆದಿದ್ದಾನೆ. ನಾಲ್ಕನೆಯ ಮಗನೇ ಲಿಯೊನಾರ್ಡ್ ಡಾರ್ವಿನ್. ರಾಯಲ್ ಎಂಜಿನಿಯರಿಂಗ್ ಶಾಲೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದವನು ಮತ್ತು ಖಗೋಳಶಾಸ್ತ್ರದಲ್ಲಿ ಸಂಶೋಧನೆ ನಡೆಸಿದವನು. ಹಾರಸ್ ಡಾರ್ವಿನ್ ಎಂಬವನು ಐದನೆಯವನು. ಈತ ಯಂತ್ರವಿಜ್ಞಾನದಲ್ಲಿ ಚತುರ. ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನೋಪಕರಣಗಳ ಕಾರ್ಖಾನೆಯನ್ನು ವೃದ್ಧಿಪಡಿಸಿದ.

ಡಾರ್ವಿನ್ನನ ಮುಪ್ಪಿನ ಸಮಯದಲ್ಲಿ ಅವನಿಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಎಲ್.ಎಲ್.ಡಿ. ಗೌರವ ಪದವಿಯನ್ನು ನೀಡಿತು. (1877). ಇದಕ್ಕೆ ಆರು ವರ್ಷಗಳ ಹಿಂದೆಯೇ ಈತನಿಗೆ ಪ್ರಷ್ಯನ್ ಆರ್ಥರ್ ಆಫ್ ನೈಟ್‍ಹುಡ್ ಎಂಬ ಅಂತರ ರಾಷ್ಟ್ರೀಯ ಪ್ರಶಸ್ತಿಯೂ ಬಂದಿತ್ತು. 1879ರಲ್ಲಿ ಲಂಡನ್ನಿನ ಫಿಸೀóಷಿಯನ್ಸ್ ಕಾಲೇಜಿನವರು ಸ್ವರ್ಣಪದಕವನ್ನು ಕೊಟ್ಟು ಸತ್ಕರಿಸಿದರು. 1882ರ ಏಪ್ರಿಲ್ 26ರಂದು ಈತ ತೀರಿಕೊಂಡಾಗ ಈತನ ಪ್ರಾರ್ಥಿವ ಶರೀರವನ್ನು ವೆಸ್ಟ್ ಮಿನ್‍ಸ್ಟರ್ ಅಬೆಯಲ್ಲಿ ಐಸಾಕ್ ನ್ಯೂಟನ್ನನ ಸಮಾಧಿಯ ಪಕ್ಕದಲ್ಲಿ ಹೂಳಲಾಯಿತು. ಅಂತ್ಯ ಸಂಸ್ಕಾರದ ಸಮಯದಲ್ಲಿ ಇವನ ಆಪ್ತರಾದ ಹುಕರ್, ಹಕ್ಸ್‍ಲೀ ಮತ್ತು ವ್ಯಾಲೇಸ್ ಇದ್ದರಲ್ಲದೆ ಅಮೆರಿಕದ ರಾಯಭಾರಿ ಜೇಮ್ಸ್ ರಸೆಲ್ ಲವೆಲ್ ಹಾಗೂ ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಮತ್ತು ರಷ್ಯಗಳ ರಾಜತಾಂತ್ರಿಕರೂ ಇದ್ದರು. (ಬಿ.ಎಸ್.ಬಿ.; ಜೆ.ಆರ್.ವಿ.)

ಜೀವಿವಿಕಾಸ ಮೂಲತಃ ಡಾರ್ವಿನ್ನನ ಕಲ್ಪನೆಯಲ್ಲವೆಂಬುದು ಗಮನಿಸಬೇಕಾದ ಅಂಶ. ಕೆಳವರ್ಗದ ಜೀವಿಗಳಲ್ಲಿ ಕಂಡುಬರುವ ವಿಕಾಸಗಳ ಅಂತಿಮ ಫಲವೇ ಮನುಷ್ಯ ಮತ್ತು ಆತನ ದೇಹರಚನೆ ಮತ್ತು ವರ್ತನೆಗಳಲ್ಲಿ ಮೂಲಾಂಶರೂಪಗಳಲ್ಲಿ ಕಂಡುಬರುತ್ತದೆ ಎಂಬ ವಿಚಾರ ಬಹಳ ಪ್ರಾಚೀನವಾದುದು. ಭಾರತೀಯ ವಿಚಾರ ಧಾರೆಯಲ್ಲಿಯೂ (ಜೈನ ಮತ್ತು ವೈದಿಕ) ಜೀವಿವಿಕಾಸಕ್ಕೆ ಸಂಬಂಧಿಸಿದಂತೆ ಕೆಲವು ಒಳನೋಟಗಳು ಅಲ್ಲಲ್ಲಿ ಹೊಳೆದಿರುವುದನ್ನು ಕಾಣಬಹುದು. ಜೀವಿಯೊಂದು ಜನ್ಮ ಜನ್ಮಾಂತರಗಳಲ್ಲಿ ವಿವಿಧ ಪ್ರಾಣಿ ಮತ್ತು ಮಾನವ ರೂಪಗಳನ್ನು ತಾಳಬಹುದೆಂಬ ಜೈನ ಕಲ್ಪನೆಯಲ್ಲಿ ವಿಕಾಸ ಮತ್ತು ಅವನತಿ ಭಾವಗಳೆರಡೂ ಅಡಕವಾಗಿದ್ದರೆ ವೈದಿಕ ದರ್ಶನದ ಅವತಾರ ಕಲ್ಪನೆಯಲ್ಲಿ ವಿಕಾಸ ವಿಚಾರ ಹೊಳೆದಿರುವುದನ್ನು ಕಾಣಬಹುದು. ಇದರಂತೆಯೇ ಪಾಶ್ಚಾತ್ಯರಲ್ಲಿಯೂ ಪ್ರಾಚೀನ ಹಾಗೂ ಹೆದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳ ದಾರ್ಶನಿಕರಲ್ಲಿಯೂ ಕೆಲವರು ಜೀವಿ ವಿಕಾಸದ ಬಗ್ಗೆ ವಿಚಾರ ಮಾಡಿದ್ದುದು ಕಂಡುಬರುತ್ತವೆ. ಪ್ರಾಣಿಗಳ ಮತ್ತು ಮಾನವನ ಉಗಮಕ್ಕೆ ಸಂಬಂಧಿಸಿದಂತೆ, ಡಾರ್ವಿನ್ನನ ಕಾಲದಲ್ಲಿಯೇ ವಿವಿಧ ವಿಚಾರಧಾರೆಗಳು ಪ್ರಚಲಿತವಾಗಿದ್ದವು. ಪ್ರತಿಯೊಂದು ಪ್ರಾಣಿವರ್ಗವೂ ಪ್ರತ್ಯೇಕವಾಗಿ ಸೃಷ್ಟಿಯಾಗಿದೆ ಎಂಬ ನಂಬಿಕೆ ಆ ಕಾಲದಲ್ಲಿ ಬಹಳ ಪ್ರಬಲವಾಗಿತ್ತು. ಒಂದು ಪ್ರಾಣಿವರ್ಗ ಮತ್ತೊಂದು ಪ್ರಾಣಿವರ್ಗವನ್ನಾಗಿ ಕ್ರಮೇಣ ಮಾರ್ಪಡುವ ಸಾಧ್ಯತೆ ಇದೆ ಎಂಬ ವಿಚಾರ ಅಲ್ಲಲ್ಲಿ ಕಂಡುಬರುತ್ತಿತ್ತಾದರೂ ಅದನ್ನು ಪುಷ್ಟೀಕರಿಸುವಂಥ ಪುರಾವೆಗಳು ಅಸ್ಪಷ್ಟ ಹಾಗೂ ಅಪೂರ್ಣವಾಗಿದ್ದವು. ಬಹಳ ಕಾಲದಿಂದ ಈ ಪುರಾವೆಗಳ ಅರಿವಿದ್ದರೂ, ಹರಿದು ಹಂಚಿದಂತಿದ್ದ ಅವುಗಳನ್ನೆಲ್ಲ ಸಂಶ್ಲೇಷಿಸುವ ಮಹತ್ಕಾರ್ಯ ಡಾರ್ವಿನ್ನನ ಪಾಲಿನದಾಗಿತ್ತು. ಬೀಗಲ್ ಯಾನದಿಂದ ತಾನು ಸಂಗ್ರಹಿಸಿದ ಮಾಹಿತಿಗಳನ್ನು ಮತ್ತು ಆಗಲೇ ಸಿದ್ಧರೂಪದಲ್ಲಿದ್ದ ಕೆಲವು ಪುರಾವೆಗಳನ್ನು ಕ್ರೋಢೀಕರಿಸಿ, ತನ್ನ ಪ್ರಬಲ ವಿಚಾರಗಳ ವಿಶ್ಲೇಷಣೆಯ ಒರೆಗಲ್ಲ ಮೇಲಿಟ್ಟು, ಈ ಎಲ್ಲ ತಥ್ಯಾಂಶಗಳ ಮತ್ತು ವಿಚಾರಗಳ ನಡುವಣ ಸಂಬಂಧಗಳನ್ನು ಗುರುತಿಸಿ ಆತ ತನ್ನ ಜೀವಿವಿಕಾಸ ಸಿದ್ಧಾಂತವನ್ನು ರೂಪಿಸಿದ. ತನ್ನ ಸಿದ್ಧಾಂತವನ್ನು ಸಮರ್ಥಿಸಲು ಆತ ಅವಲಂಬಿಸಿದ ಪುರಾವೆಗಳಲ್ಲಿ ಮುಖ್ಯವಾದವುಗಳೆಂದರೆ ಭೂವಿಜ್ಞಾನ ದಾಖಲುಗಳು, ತಪ್ಪಿದ ಕೊಂಡಿಗಳು, ಭೌಗೋಳಿಕ ವಿತರಣೆ, ತೌಲನಿಕ ಅಂಗಾಂಗಶಾಸ್ತ್ರ, ಇತ್ಯಾದಿ. ಇಂಥ ಪುರಾವೆಗಳಲ್ಲದೆ ತನ್ನ ವಾದವನ್ನು ಪುಷ್ಟೀಕರಿಸಲು ಡಾರ್ವಿನ್ ನೈಸರ್ಗಿಕ ಆಯ್ಕೆಯ ಸಿದ್ಧಾಂತವನ್ನು ರೂಪಿಸಿದ.

ಕೇವಲ ತಾರ್ಕಿಕ ವಾದವಿವಾದಗಳ ಜಟಿಲಜಾಲವಾಗಿ ಮಾನಸಿಕ ತತ್ತ್ವಶಾಸ್ತ್ರ (ಮೆಂಟೆಲ್ ಫಿಲಾಸಫಿ) ಎನಿಸಿಕೊಂಡು ಶತ ಶತಮಾನಗಳ ವರೆಗೆ ಉಳಿದು ಬಂದಿದ್ದ ಒಂದು ಜ್ಞಾನಕ್ಷೇತ್ರ ಇಂದು ಆಧುನಿಕ ಮನೋವಿಜ್ಞಾನವೆನಿಸಿ ವೈವಿಧ್ಯಪೂರ್ಣವಾಗಿ ಅಭಿವೃದ್ಧಿ ಹೊಂದಲು ಡಾರ್ವಿನ್ನನ ವಿಕಾಸವಾದವೂ ಪ್ರಮುಖ ಕಾರಣವಾಗಿದೆ ಎಂಬುದು ಗಮನಾರ್ಹ ಸಂಗತಿ. ಜೀವಿಗಳ ವರ್ತನೆಯನ್ನು ಅವಲೋಕನಾತ್ಮಕ ಹಾಗೂ ಪ್ರಾಯೋಗಿಕ ವಿಜ್ಞಾನಗಳಿಂದ ವಸ್ತುನಿಷ್ಠ ರೀತಿಯಲ್ಲಿ ಅಧ್ಯಯನ ಮಾಡಲೂ ಪ್ರಾಣಿಗಳು ಮತ್ತು ಮಾನವ ವರ್ತನೆಗಳ ತೌಲನಿಕ ಪರೀಶೀಲನೆಗೂ ಮೇಲಿನ ಸಿದ್ಧಾಂತ ಪ್ರಬಲ ಆಧಾರವಾಗಿ ಪರಿಣಮಿಸಿತು. ಅಂದಮೇಲೆ ತೌಲನಿಕ ಮನೋವಿಜ್ಞಾನದ (ಕಂಪ್ಯಾರಟಿವ್ ಸೈಕಾಲೊಜಿ) ಉಗಮ ಮತ್ತು ಬೆಳೆವಣಿಗೆಗಳಿಗೆ ಇದರ ಕೊಡುಗೆ ಅಪಾರವಾದುದು ಎಂದು ಹೇಳಿದರೆ ತಪ್ಪಾಗದು. ಇಷ್ಟವಿಲ್ಲದೆ, ಡಾರ್ವಿನ್ನನೇ ಸ್ವಂತ ಸಂಶೋಧನೆಗಳಿಂದ ಮನೋವಿಜ್ಞಾನಕ್ಕೆ ಕೊಡುಗೆ ಇತ್ತಿದ್ದಾನೆ ಎಂಬುದು ಇನ್ನೂ ಕುತೂಹಲಕಾರಿಯಾದ ಅಂಶ.

ತನ್ನ ಸಿದ್ಧಾಂತವನ್ನು ಸ್ಥಾಪಿಸುವ ಸಲುವಾಗಿ ಡಾರ್ವಿನ್ನನು ನಡೆಸುತ್ತಿದ್ದ ಸಂಶೋಧನೆಗಳಲ್ಲಿ, ಚಾರಿತ್ರಿಕವಾಗಿ ಪ್ರಾಮುಖ್ಯವೆನಿಸಿರುವ ಸಂವೇಗಗಳ ಮೇಲಿನ ಅವಲೋಕನಗಳೂ ಸೇರುತ್ತವೆ. ಅಂಥ ಅವಲೋಕನಗಳಿಂದ ದೊರೆತ ತಥ್ಯಾಂಶಗಳನ್ನೆಲ್ಲ ಕ್ರೋಡೀಕರಿಸಿ, ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಂವೇಗಗಳ ಅಭಿವ್ಯಕ್ತತೆ ಎಂಬ ಗ್ರಂಥವನ್ನು ಈತ ಪ್ರಕಟಿಸಿದ. ಮಾನವನ ಸಂವೇಗಗಳಿಗೆ ಸಂಬಂಧಿಸಿದಂತೆ ತನ್ನದೇ ಆದ ಒಂದು ಸಿದ್ಧಾಂತವನ್ನು ಡಾರ್ವಿನ್ ಈ ಪುಸ್ತಕದಲ್ಲಿ ಪ್ರತಿಪಾದಿಸಿರುವುದನ್ನು ಕಾಣಬಹುದು. ಈತನ ಪ್ರಕಾರ, ಮನುಷ್ಯನಲ್ಲಿ ಕಂಡು ಬರುವ ಅನೇಕ ಸಂವೇಗಗಳು, ಪ್ರಾಣಿ ಪೂರ್ವಜರಿಂದ ಅನುವಂಶೀಯವಾಗಿ ಬಂದ ಕೊಡುಗೆಗಳು. ಪ್ರಾಣಿಗಳ ಹಂತದಲ್ಲಿ ಉಪಯುಕ್ತವೆನಿಸಿದ್ದ ಈ ಸಂವೇಗಗಳು, ಮಾನವನಲ್ಲಿ ಕೇವಲ ಉಳಿಕೆಗಳೆನಿಸಿ ನಿರುಪಯುಕ್ತವಾಗುತ್ತವೆ. ಉದಾಹರಣೆಗೆ ಕೋಪೋದ್ರಿಕ್ತಸ್ಥಿತಿಯ ಮನುಷ್ಯ ತನ್ನ ಕೋರೆಹಲ್ಲುಗಳನ್ನು ಮಸೆಯುವ ಪ್ರವೃತ್ತಿಯನ್ನು ತೋರುತ್ತಾನೆ. ಹಾಗೆ ಮಾಡುವುದು ನಿರುಪಯುಕ್ತ ಎನಿಸಿದರೂ ಆ ಪ್ರತಿಕ್ರಿಯೆ ನಡೆಯುತ್ತದೆ. ಆದರೆ ಇದೇ ರೀತಿಯ ಪ್ರತಿಕ್ರಿಯೆ ಪ್ರಾಣಿಗಳಲ್ಲಿ ಕಂಡುಬಂದಾಗ, ಕೋಪಕ್ಕೆ ಕಾರಣವಾದ ಜೀವಿಯನ್ನು ಬೆದರಿಸುವುದರ ಜೊತೆಗೆ ಅದರ ಮೇಲೆ ಹಲ್ಲುಗಳನ್ನು ಪ್ರಯೋಗಿಸುವ ಉದ್ದೇಶವೂ ಇರುತ್ತದೆ. ಪ್ರಾಣಿಗಳ ಮಟ್ಟದಲ್ಲಿ ಯಾವುದೋ ಉಪಯುಕ್ತ ಪಾತ್ರವನ್ನು ನಿರ್ವಹಿಸುತ್ತಿದ್ದು, ಮುಂದೆ ವಿಕಾಸ ಪ್ರಕ್ರಿಯೆಯ ಫಲವಾಗಿ ಮಾನವನಲ್ಲಿಯೂ ಕಾಣಿಸಿಕೊಳ್ಳಬಹುದಾದ ಇಂಥ ಉಳಿಕೆಗಳೂ ವಿಕಾಸವಾದಕ್ಕೆ ಪುರಾವೆಗಳೆನಿಸಿವೆ.

ಇಂದು ಆಧುನಿಕ ಮನೋವಿಜ್ಞಾನದಲ್ಲಿ ಕಲಿಕೆ, ಆಲೋಚನೆ, ಅಭಿಪ್ರೇರಣೆ ಮೊದಲಾದ ವರ್ತನಾ ಪ್ರಕಾರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳಿಗೆಲ್ಲ ಡಾರ್ವಿನ್ನನ ವಿಕಾಸವಾದ ಭದ್ರವಾದ ನೆಲಗಟ್ಟನ್ನು ಒದಗಿಸಿದೆ ಎಂದು ಹೇಳಬಹುದು. ಮಾನವನ ಮಟ್ಟದಲ್ಲಿ ಹೆಚ್ಚು ಜಟಿಲವಾಗಿ ಕಂಡುಬರುವ ವರ್ತನೆಯ ಮೂಲ ರೂಪಗಳನ್ನು ಪ್ರಾಣಿಗಳ ಮಟ್ಟದಲ್ಲಿ ಅವಲೋಕಿಸಿ, ತನ್ಮೂಲಕ ರೂಪಿಸಲಾದ ಸಿದ್ಧಾಂತಗಳನ್ನು, ಮಾನವ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಅನ್ವಯಿಸುವ ಅನುಕೂಲ ಇದರಿಂದ ಪ್ರಾಪ್ತವಾಗಿದೆ. ಅಲ್ಲದೆ ಅನೇಕ ವೇಳೆ ನೈತಿಕ ಅಥವಾ ಇತರ ಕಾರಣಗಳಿಗಾಗಿ ಮಾನವನ ಮೇಲೆ ನಡೆಸಲಾದ ಪ್ರಯೋಗಗಳನ್ನು ಪ್ರಾಣಿಗಳ ಮೇಲೆ ನಡೆಸಿ ಅನೇಕ ಜಟಿಲಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವುದು ಸಾಧ್ಯವಾಗಿದೆ. ಒಟ್ಟಿನಲ್ಲಿ ಪ್ರಾಣಿಗಳ ಮತ್ತು ಮನುಷ್ಯನ ಜೈವಿಕ ಹಾಗೂ ಮಾನಸಿಕ ಘಟನೆಗಳ ತೌಲನಿಕ ಅಧ್ಯಯನಗಳಿಗೆ ಡಾರ್ವಿನ್ ಕೊಟ್ಟಿರುವ ಕೊಡುಗೆ ಅನುಪಮವಾದುದು ಎಂದು ಹೇಳಬಹುದು. (ಡಿ.; ಎಸ್.ಕೆ.ಆರ್.) ಪರಿಷ್ಕರಣೆ : ಹರೀಶ್ ಭಟ್