ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಾಲೊಮೈಟ್

ವಿಕಿಸೋರ್ಸ್ದಿಂದ

ಡಾಲೊಮೈಟ್ - ಮೆಗ್ನೀಸಿಯಮ್ ಹಾಗೂ ಕ್ಯಾಲ್ಸಿಯಮ್ ಕಾರ್ಬೊನೇಟುಗಳ ಸಂಮಿಶ್ರಣ ಸಂಯೋಜನೆಯುಳ್ಳ [CaMg(CO3)2] ಖನಿಜ ಅಥವಾ ಶಿಲೆ. ಇದನ್ನು 1791ರಲ್ಲಿ ಮೊದಲ ಬಾರಿಗೆ ಆವಿಷ್ಕರಿಸಿದ ಕೌಂಟಿ ಡಾಲಾಮ್ಯ (1750-1801) ಎಂಬ ಫ್ರೆಂಚ್ ಭೂವಿe್ಞÁನಿಯ ಗೌರವಾರ್ಥ ಇದಕ್ಕೆ ಡಾಲೊಮೈಟ್ ಎಂದು ಹೆಸರಿಡಲಾಯಿತು. ಈ ಹೆಸರನ್ನು ಖನಿಜ ಮತ್ತು ಶಿಲೆ ಇವೆರಡಕ್ಕೂ ಉಪಯೋಗಿಸಲಾಗುತ್ತದೆ. ಇದರಿಂದಾಗಿ ವ್ಯಾಖ್ಯೆಯಲ್ಲಿ ಉಂಟಾಗುವ ತೊಡಕನ್ನು ನಿವಾರಿಸಲು ಕೆಲ ವಿe್ಞÁನಿಗಳು ಬಗೆ ಬಗೆಯ ಸೂಚನೆಗಳನ್ನು ನೀಡಿದ್ದಾರೆ. ಆದರೆ ಪೆಟ್ಟಿ ಜಾನ್ ಎಂಬಾತ ನೀಡಿರುವ ವ್ಯಾಖ್ಯೆಯೇ ಹೆಚ್ಚು ಸಮರ್ಪಕವಾಗಿದೆ. ಒgಅo3ರ ಪ್ರಮಾಣ 5-10%, 10-50%, 50-90% ಮತ್ತು 90% ಕ್ಕಿಂತ ಹೆಚ್ಚಾಗಿದ್ದರೆ ಅನುಕ್ರಮವಾಗಿ ಮೆಗ್ನೀಷಿಯಮ್ ಯುಕ್ತ ಸುಣ್ಣಕಲ್ಲು, ಡಾಲೊಮೈಟ್‍ಯುಕ್ತ ಸುಣ್ಣಕಲ್ಲು, ಕ್ಯಾಲ್ಸೈಟ್‍ಯುಕ್ತ ಡಾಲೊಮೈಟ್ ಮತ್ತು ಡಾಲೊಮೈಟ್ ಎಂದು ಕರೆಯಬೇಕೆಂದು ಆತ ಸೂಚಿಸಿದ. ಕ್ಯಾಲ್ಸಿಯಮ್ ಮತ್ತು ಮೆಗ್ನೀಷಿಯಮ್‍ಗಳ ಕಾರ್ಬೊನೇಟುಗಳಲ್ಲದೆ ಡಾಲೊಮೈಟಿನಲ್ಲಿ ಸಿಲಿಕ, ಅಲ್ಯುಮಿನ, ಕಬ್ಬಿಣದ ಆಕ್ಸೈಡ್ ಇತ್ಯಾದಿ ಕಲ್ಮಷಗಳಿರುತ್ತವೆ.

ಸಂಯೋಜನೆ ಮತ್ತು ರಚನೆ: ಸ್ಥೂಲವಾಗಿ, ಆಕಾರ ಮತ್ತು ರಚನೆಯಲ್ಲಿ ಡಾಲೊಮೈಟ್ ಸುಣ್ಣಕಲ್ಲನ್ನೇ ಹೋಲುತ್ತದೆ. ಸೂಕ್ಷ್ಮವಾಗಿ ಅದು ಸುಣ್ಣ ಕಲ್ಲಿಗಿಂತ ಭಿನ್ನವಾದ ಗುಣಗಳನ್ನು ಪ್ರದರ್ಶಿಸುವುದುಂಟು. ಮೂಲ ನಿಕ್ಷೇಪವಾದ ಸುಣ್ಣಕಲ್ಲನ್ನು ಸ್ಥಾನಪಲ್ಲಟಗೊಳಿಸಿ, ಆ ಸ್ಥಳದಲ್ಲಿ ಡಾಲೊಮೈಟ್ ಉಂಟಾಗುವುದರಿಂದ ಸುಣ್ಣಕಲ್ಲಿನ ರಚನೆ ಇತ್ಯಾದಿಗಳ ಬಹುಭಾಗ ನಶಿಸಿಹೋದರೂ ಅದು ಕೊಂಚಮಟ್ಟಿಗೆ ಅವಶೇಷರೂಪದಲ್ಲಿ ಉಳಿದಿರುತ್ತದೆ. ಈ ಬಗೆಯ ವಿಶೇಷತೆಯನ್ನು ದೊಡ್ಡಹರಳಿನ (ಕೋರ್ಸ್ ಗ್ರೇನ್ಡ್) ಡಾಲೊಮೈಟಿನಲ್ಲಿ ಸಾಮಾನ್ಯವಾಗಿ ಕಾಣಬಹುದು. ಮೂಲಶಿಲೆಯಲ್ಲಿಯ ಪಳೆಯಳಿಕೆಗಳ ಅಸ್ಪಷ್ಟ ಗುರುತುಗಳನ್ನು ಡಾಲೊಮೈಟಿನಲ್ಲಿ ಗುರುತಿಸಬಹುದು. ಸುಣ್ಣಕಲ್ಲನ್ನು ಡಾಲೊಮೈಟು ಸ್ಥಾನಪಲ್ಲಟಗೊಳಿಸುವ ಈ ಕ್ರಿಯೆಗೆ ಡಾಲೊಮೈಟೀಕರಣ ಎಂದು ಹೆಸರು.

ಸೂಕ್ಷ್ಮಹರಳುಗಳ ಡಾಲೊಮೈಟ್ ಶಿಲೆಯಲ್ಲಿ ಪ್ರವಾಹಸ್ತರಗಳು (ಕರೆಂಟ್ ಬೆಡ್ಡಿಂಗ್) ಮೊದಲಾದ ನಿಶ್ಚಿತ ಅವಸಾದೀ ಶಿಲಾರಚನೆಗಳು (ಸೆಡಿಮೆಂಟರಿ ರಾಕ್‍ಸ್ಟ್ರಕ್ಚರ್ಸ್) ಇವೆ. ಸ್ಥಾನಪಲ್ಲಟ ಕ್ರಿಯೆಯ ಯಾವ ಗುರುತುಗಳೂ ಇರುವುದಿಲ್ಲ. ಇದರಿಂದ ಇಂಥ ಶಿಲೆಗಳನ್ನು ಮೂಲದಲ್ಲಿಯೇ ಗಟ್ಟಿಗೊಂಡ ಡಾಲೊಮೈಟ್ ಅವಸಾದೀ ಶಿಲೆಗಳೆಂದು ಕರೆದಿದೆ.

ಸುಣ್ಣಕಲ್ಲು ಮತ್ತು ಡಾಲೊಮೈಟ್: ಸುಣ್ಣಕಲ್ಲು ಮತ್ತು ಡಾಲೊಮೈಟುಗಳ ಸಂಯೋಜನೆಯಲ್ಲಿ ಕೊಂಚಮಟ್ಟಿನ ಸಾಮ್ಯ ಇದ್ದು ಇವು ನಿಸರ್ಗದಲ್ಲಿ ಹೆಚ್ಚಾಗಿ ಒಟ್ಟೊಟ್ಟಿಗೇ ದೊರೆಯುತ್ತವೆ. ಕೆಲವು ವಿಶಿಷ್ಟ ಗುಣಗಳಿಂದಾಗಿ ಇವನ್ನು ಬೇರೆ ಬೇರೆಯಾಗಿ ಗುರುತಿಸುವುದು ಸಾಧ್ಯ. ಹೆಚ್ಚು ಡಾಲೊಮೈಟಿನ ಅಂಶವುಳ್ಳ ಸುಣ್ಣಕಲ್ಲು ಇತರ ಸಾಮಾನ್ಯ ಸುಣ್ಣಕಲ್ಲಿಗಿಂತ (ಅಂದರೆ ಕ್ಯಾಲ್ಸೈಟ್ ಅಂಶ ಹೆಚ್ಚಾಗಿರುವ ಸುಣ್ಣಕಲ್ಲು) ಹೆಚ್ಚು ಸಾಂದ್ರ. ತುಲನಾತ್ಮಕವಾಗಿ ಕಠಿಣ. ಹೆಚ್ಚು ಬಡಿಯುವುದರಿಂದ ಡಾಲೊಮೈಟನ್ನು ಛಿದ್ರಗೊಳಿಸಬಹುದು. ದುರ್ಬಲ ಹೈಡ್ರೊಕ್ಲೋರಿಕ್ ಆಮ್ಲ ಡಾಲೊಮೈಟನ್ನು ಕರಗಿಸಲಾರದು. ಆದರೆ ಸುಣ್ಣ ಕಲ್ಲಿನ ಮೇಲೆ ವರ್ತಿಸಿ, ಅಧಿಕ ಮೊತ್ತದ ಕಾರ್ಬನ್ ಡೈಆಕ್ಸೈಡನ್ನು ಹೊರಗೆಡಹುತ್ತದೆ. ಮಳೆ ಗಾಳಿಗಳ ಪರಿಣಾಮದಿಂದಾಗಿ ಡಾಲೊಮೈಟ್ ಶಿಲೆಯ ಮೇಲ್ಮೈಗೆ ಒಂದು ವಿಶಿಷ್ಟ ಪೊರೆ ಬರುವುದುಂಟು. ಈ ಪೊರೆ ಆನೆಯ ತೊಗಲನ್ನು ಹೋಲುತ್ತದೆ. ಈ ಬಗೆಯ ಶಿಥಿಲೀಕರಣಕ್ಕೆ ಆನೆ ತೊಗಲಿನಂಥ ಶಿಥಿಲೀಕರಣ ಎಂದು ಕರೆಯುವುದಿದೆ.

ಹುಟ್ಟು ಮತ್ತು ಅಸ್ತಿತ್ವ: ಡಾಲೊಮೈಟಿಗೆ ಭೂಮಿಯ ಎಲ್ಲ ಯುಗಗಳ ಸ್ತರಗಳಲ್ಲಿಯೂ ಒಂದಲ್ಲಒಂದು ಬಗೆಯ ಅಸ್ತಿತ್ವ ಉಂಟು; ಹಳೆಯ ಶಿಲಾಸಮುದಾಯದಲ್ಲಿ ಅದರಲ್ಲಿಯೂ ಪ್ರಾಚೀನ ಜೀವಿಯುಗದಲ್ಲಿ (ಪೇಲಿಯೋeóÉೂೀಯಿಕ್) ಸಹ ಇದು ಅಸ್ತಿತ್ವದಲ್ಲಿದ್ದುದು ಕಂಡುಬಂದಿದೆ. ಸುಣ್ಣಕಲ್ಲಿನ ಜೊತೆಗೆ ಡಾಲೊಮೈಟ್ ದೊರೆಯುವುದು ಸಾಮಾನ್ಯ. ಸ್ಫಟಿಕಾಕಾರದ ಡಾಲೊಮೈಟ್ ಶಿಲೆ ಸರ್ಪೆಂಟೀನ್ ಅಥವಾ ಮೆಗ್ನೀಷಿಯಮ್ ಭರಿತ ಶಿಲೆಗಳ ಜೊತೆಯಲ್ಲೂ ದೊರೆಯುತ್ತದೆ.

ನಿಚ್ಚಳವಾದ ಸ್ತರಗಳು, ಪ್ರವಾಹಸ್ತರಗಳು ಮತ್ತಿತರ ಅವಸಾದೀ ಶಿಲೆಗಳೊಡನೆ ಅಸ್ತಿತ್ವ-ಇವು ಡಾಲೊಮೈಟ್ ಶಿಲೆಯನ್ನು ಅವಸಾದೀ ಶಿಲೆಯೆಂಬುದಾಗಿ ಸ್ಪಷ್ಟಪಡಿಸುತ್ತವೆ. ಡಾಲೊಮೈಟ್ ಹರಳು ಮೂಲಶಿಲಾರಚನೆಯನ್ನು ಅಡ್ಡ ಹಾಯ್ದಿರುವಿಕೆ, ಡಾಲೊಮೈಟಿನ ಅಸ್ತಿತ್ವದಲ್ಲಿ ಭೂರಚನೆಯ ನಿಯಂತ್ರಣ, ಮೂಲ ಶಿಲೆಯಲ್ಲಿನ ಫಾಸಿಲುಗಳು ಮತ್ತು ಇತರ ಮೆಗ್ನೀಷಿಯಮ್ ಭರಿತ ಶಿಲೆಗಳೊಡನೆ ಸಹ ಅಸ್ತಿತ್ವದಲ್ಲಿರುವುದು- ಇವು ಡಾಲೊಮೈಟೀಕರಣವನ್ನು ಸ್ಥಿರೀಕರಿಸುತ್ತವೆ.

ಹಂಚಿಕೆ: ಪ್ರಪಂಚದ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಭಾರತದ ಒರಿಸ್ಸ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲೂ ಹೇರಳವಾಗಿ ಡಾಲೊಮೈಟ್ ನಿಕ್ಷೇಪಗಳಿವೆ. ಕರ್ನಾಟಕದಲ್ಲಿ ಆರ್ಕೇಯನ್ ಶಿಲಾಸಮುದಾಯಕ್ಕೆ ಸೇರಿದ ಡಾಲೊಮೈಟ್ ನಿಕ್ಷೇಪಗಳು ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕಲಾದಾಗಿ ಶ್ರೇಣಿಗೆ ಸೇರಿದ ನಿಕ್ಷೇಪಗಳು ಬಾಗಲ್ಕೊಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸಿಗುತ್ತವೆ.

ಉಪಯೋಗ: ಡಾಲೊಮೈಟ್ ಔದ್ಯಮಿಕ ದೃಷ್ಟಿಯಿಂದ ಹೆಚ್ಚು ಉಪಯುಕ್ತ. ಕಬ್ಬಿಣ ಮತ್ತು ಉಕ್ಕಿನ ತಯಾರಿಕೆಯಲ್ಲಿ ಇದನ್ನು ಸ್ರಾವಕವಸ್ತುವನ್ನಾಗಿಯೂ (ಫ್ಲಕ್ಸ್) ಅಗ್ನಿನಿರೋಧಕ ಇಟ್ಟಿಗೆಗಳನ್ನಾಗಿಯೂ ಉಪಯೋಗಿಸುತ್ತಾರೆ. ಇದಲ್ಲದೆ ಕಾಗದ, ರಬ್ಬರ್, ಗಾಜು ಮತ್ತು ಹಲವಾರು ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿ ಡಾಲೊಮೈಟಿನ ಉಪಯೋಗ ಇದೆ. ವಿಶೇಷ ಗುಣಗಳುಳ್ಳ ಡಾಲೊಮೈಟನ್ನು ಉದ್ದೇಶಕ್ಕೆ ಅನುಗುಣವಾಗಿ ಬೇರೆ ಬೇರೆ ಕೆಲಸಗಳಿಗೆ ಬಳಸುವುದುಂಟು. ಡಾಲೊಮೈಟಿನಲ್ಲಿ ಕಲ್ಮಷಗಳ ಪ್ರಮಾಣ ಕಡಿಮೆಯಾಗಿರುವುದು ಅಪೇಕ್ಷಣೀಯ. ಆದರೆ ಈ ಪ್ರಮಾಣ 7%ಕ್ಕಿಂತ ಹೆಚ್ಚಾಗಿದ್ದರೆ ಅಂಥ ಡಾಲೊಮೈಟನ್ನು ಕೈಗಾರಿಕೆಗಳಲ್ಲಿ ಉಪಯೋಗಿಸುವುದಿಲ್ಲ. ಇಂಥ ಡಾಲೊಮೈಟನ್ನು ಜಲ್ಲಿಕಲ್ಲು, ಕಟ್ಟಡದ ಕಲ್ಲು, ನೆಲಗಟ್ಟಿನ ಹಾಸುಗಲ್ಲು ಇತ್ಯಾದಿ ರೂಪಗಳಲ್ಲಿ ಬಳಸುತ್ತಾರೆ. (ಎಚ್.ಸಿ.ಎಸ್.; ಕೆ.ಜಿ.ಎಸ್.)