ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾರನ್ಡೈಕ್, ಡೇಮ್ ಸಿಬಿಲ್
ತಾರನ್ಡೈಕ್, ಡೇಮ್ ಸಿಬಿಲ್ 1882 -. ಖ್ಯಾತ ಬ್ರಿಟಿಷ್ ನಟಿ. ಲಿಂಕನ್ ಷೈರಿನ ಗೇನ್ಸ್ ಬರೊನಲ್ಲಿ ಜನಿಸಿದಳು. ರಾಚೆಸ್ಟರ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದಳು. ಬೆನ್ ಗ್ರೀಟ್‍ನ ಅಕಾಡೆಮಿಯಲ್ಲಿ ನಾಟ್ಯರಂಗದ ತರಬೇತಿ ಪಡೆದಳು. ಷೇಕ್ಸ್ ಪೀರಿಯನ್ ನಾಟಕ ಕಂಪನಿಯೊಂದಿಗೆ 1904ರಿಂದ ಮೂರು ವರ್ಷಗಳ ಕಾಲ ಅಮೆರಿಕ ಪ್ರವಾಸ ಮಾಡಿದಳು. ಪ್ರಸಿದ್ಧ ನಟ - ನಿರ್ದೇಶಕನಾಗಿದ್ದ ಸರ್ ಲೂಯಿ ಕ್ಯಾಸನ್ನನನ್ನು ಮದುವೆಯಾದಳು (1908).
1914ರಿಂದ 18ರ ವರೆಗೆ ಲಂಡನ್ನಿನ ಓಲ್ಡ್ ವಿಕ್ ಕಂಪನಿ ಸೇರಿ ಷೇಕ್ಸ್‍ಪಿಯರನ ನಾಟಕಗಳ ನಾಯಕಿಯರ ಪಾತ್ರಗಳನ್ನು ಅಭಿನಯಿಸಿ ಹೆಸರು ಗಳಿಸಿದ್ದಲ್ಲದೆ ಕಂಪನಿಗೂ ಖ್ಯಾತಿ ತಂದಳು. ಇಂಗ್ಲಿಷಿನ ಶ್ರೇಷ್ಠ ರುದ್ರನಾಟಕಗಳ ಖ್ಯಾತ ನಾಯಕಿಯಾಗಿ ಮೆರೆದಳು (1919-20). ಹೆಕುಬಾ ಮತ್ತು ಮಿಡೀಯರ ಪಾತ್ರವಹಿಸುವಲ್ಲಿ ಅದ್ವತೀಯಳೆನಿಸಿದಳು. ಜೂಡಿತ್ ವಾಲಮ್ನಿಯಾ ಮಿಸ್ ಮಫತ್ ಮುಂತಾದ ಪಾತ್ರ ಪ್ರಯೋಗಗಳಲ್ಲೂ ಖ್ಯಾತಳಾದಳು. ಒಟ್ಟಿನಲ್ಲಿ ಸುಖಾಂತ, ದುಃಖಾಂತ, ನವ್ಯ, ಸಾಂಪ್ರದಾಯಿಕ ಎಂಬ ಭೇದವಿಲ್ಲದೆ ಎಲ್ಲ ಬಗೆಯ ನಾಟಕಗಳಲ್ಲೂ ಸಮರ್ಥವಾಗಿ ಪಾತ್ರ ನಿರ್ವಹಿಸಬಲ್ಲ ಶ್ರೇಷ್ಠ ನಟಿಯೆಂದು ಹೆಸರುವಾಸಿಯಾದಳು.
ಬಹುಮುಖ ಪ್ರತಿಭೆಯ ತಾರನ್‍ಡೈಕ್ ಖ್ಯಾತ ನಾಟಕಕಾರ ಬರ್ನಾರ್ಡ್ ಷಾ ಬರೆದ ಸೇಂಟ್ ಜೋನ್ ನಾಟಕದಲ್ಲಿ ಅಮೋಘವಾಗಿ ನಟಿಸಿ ಜನಮೆಚ್ಚುಗೆ ಪಡೆದಳು. (1924), ವೂತ್ ಎಂಡ್ ರಸ್ಟ್, ಟು ವಾಟ್ ರೆಡ್ ಹೆಲ್, ಹಿಂಡ್ಲ್ ವೇಕ್ಸ್, ಟ್ಯೂಡರ್ ರೋಸ್, ಮೇಜರ್ ಬಾರ್ಬರ, ನಿಕಲಸ್ ನಿಕ್ಲ್‍ಬಿ, ದಿ ಮ್ಯಾಜಿಕ್ ಬಾಕ್ಸ್, ಅಲೈವ್ ಎಂಡ್ ಕಿಕಿಂಗ್, ಷೇಕ್ ಹ್ಯಾಂಡ್ಸ್ ವಿತ್ ಡೆವಿಲ್, ಹ್ಯಾಂಡ್ ಇನ್ ಹ್ಯಾಂಡ್ - ಮುಂತಾದ ಶ್ರೇಷ್ಠ ಚಲನಚಿತ್ರಗಳಲ್ಲೂ ನಟಿಸಿದ ಕೀರ್ತಿ ಇವಳದು. ಅರವತ್ತು ದಾಟಿದರೂ ಈಕೆಯ ನಟನೋತ್ಸಾಹ ಕುಗ್ಗಿಲ್ಲ. ದೇಶವಿದೇಶಗಳಲ್ಲಿ ಪ್ರಯೋಗವಾಗುತ್ತಿರುವ ನಾಟಕಗಳಲ್ಲಿ ಇಂದಿಗೂ ಪಾತ್ರ ವಹಿಸುತ್ತ ಬಂದಿದ್ದಾಳಲ್ಲದೆ ಇತ್ತೀಚೆಗೆ, ವೃದ್ಧಸ್ತ್ರೀಯರ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ವಿಶೇಷ ಖ್ಯಾತಿ ಪಡೆದಿದ್ದಾಳೆ. ಇವಳ ಮಗಳು ಆ್ಯನ್ ಕ್ಯಾಸನ್ ಹಾಗೂ ಅಳಿಯ ಡಗ್ಲಸ್ ಕ್ಯಾಂಪ್‍ಬೆಲ್ ಸಹ ನಾಟ್ಯರಂಗದಲ್ಲಿ ಹೆಸರು ವಾಸಿಯಾಗಿದ್ದಾರೆ. (ಎಚ್.ಆರ್.ಆರ್.ಬಿ.)