ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾರಾನಾಥ
ತಾರಾನಾಥ 1891-1942. ವೈದ್ಯ ಶಿಕ್ಷಣತಜ್ಞ. ಸಮಾಜಸೇವಕ ಹಾಗೂ ರಾಜಕೀಯಪಟು. ಕರ್ನಾಟಕದ ಆಯುರ್ವೇದ ಕ್ಷೇತ್ರದಲ್ಲಿ ಹೆಸರಾದ ಇವರು ಮಂಗಳೂರಿನಲ್ಲಿ ಜನಿಸಿದರು. ತಂದೆ ರಂಗರಾಯರಿಂದ ಸಂಸ್ಕøತ, ಸಂಗೀತ, ವೈದಿಕಗಳನ್ನು ಕಲಿತರು. ಆಧ್ಯಾತ್ಮಿಕ ಜ್ಞಾನಾರ್ಜನೆಯ ಹುಚ್ಚಿನಿಂದ ಬಾಲ್ಯದಲ್ಲಿಯೇ ಸಂನ್ಯಾಸಿಗಳ ಹಿಂದೆ ಅಲೆದಾಡಿ ನಾಲ್ಕಾರು ವರ್ಷಗಳ ಅನಂತರ ಹೈದರಾಬಾದಿನ ಪಾಶ್ಚಾತ್ಯ ವೈದ್ಯಕೀಯ ಕಾಲೇಜನ್ನು ಸೇರಿ ರಸಾಯನ ಶಾಸ್ತ್ರವನ್ನು ಕಲಿಯತೊಡಗಿದರು. ಮೂರು ವರ್ಷ ವ್ಯಾಸಂಗ ಮಾಡಿ ಓದನ್ನು ಅರ್ಧದಲ್ಲಿಯೇ ಬಿಟ್ಟು ಹೈದರಾಬಾದಿನ ಸರ್ಕಾರಿ ವಿದ್ಯಾ ಇಲಾಖೆಯಲ್ಲಿ ದಾಖಲಾಗಿ ರಾಯಚೂರಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾದರು. ಆಗ ಅಲ್ಲಿಗೆ ಆಗಮಿಸಿದ್ದ ನೇಪಾಳದ ಯೋಗಿ ಉತ್ತಮದಾಸ ಪರಮಹಂಸರು ಮತ್ತು ಯೋಗಿಶ್ವರಾನಂದರಿಂದ ಯೋಗ ಮತ್ತು ಆಯುರ್ವೇದ ದೀಕ್ಷೆಯನ್ನು ಪಡೆದರು. ಆಗಿನ ಹೈದರಾಬಾದ್ ಸರ್ಕಾರ ಕನ್ನಡಿಗರಿಗೆ ಕೊಡುತ್ತಿದ್ದ ಉಪಟಳವನ್ನು ಪ್ರತಿಭಟಿಸಿ ತಮ್ಮ ಹುದ್ದಗೆ ರಾಜೀನಾಮೆ ಕೊಟ್ಟು ರಾಯಚೂರಿನಲ್ಲಿಯೇ ಹಮ್‍ದರ್ದ್ ಮದರಸಾ ಎಂಬ ಶಾಲೆಯನ್ನು ಸ್ಥಾಪಿಸಿ ಅಲ್ಲಿ ಕನ್ನಡ ಶಿಕ್ಷಣ ಕ್ರಮವನ್ನು ಜಾರಿಗೆ ತಂದರು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಶ್ರೇಷ್ಠ ನಾಯಕರೆನಿಸಿಕೊಂಡ ಇವರನ್ನು ನಿಜಾಂ ಸರ್ಕಾರ ರಾಜ್ಯದಿಂದ ಗಡೀಪಾರು ಮಾಡಿತು. ಇದರಿಂದ ಧೃತಿಗೆಡದೆ 1920ರಲ್ಲಿ ತುಂಗಭದ್ರೆಯ ಈಚೆಯ ದಡದಲ್ಲಿ ಪ್ರೇಮಾಯತನವೆಂಬ ಆಶ್ರಮವೊಂದನ್ನು ಸ್ಥಾಪಿಸಿ ಆಯುರ್ವೇದ, ಸಾಹಿತ್ಯ, ಯೋಗ, ಸಮಾಜ ಶಾಸ್ತ್ರ ಮತ್ತು ಪತ್ರಿಕೋದ್ಯಮಗಳಲ್ಲಿ ಶಿಕ್ಷಣಕ್ಕೆ ಏರ್ಪಾಡು ಮಾಡಿದರು. ಅಲ್ಲಿನ ಆಯುರ್ವೇದ ವಿಭಾಗ 1932 ರ ವೇಳೆಗೆ ಪ್ರೇಮ ಮೆಡಿಕಲ್ ಸ್ಕೂಲ್ ಎಂಬ ಹೆಸರನ್ನು ಪಡೆದು ಮೂರು ವರ್ಷಗಳ ಅಧ್ಯಯನಾನಂತರ ಭಿಷಗಿಂದು, ಐದು ವರ್ಷಗಳ ಅಧ್ಯಯನಾನಂತರ ಆಯುರ್ವೇದ ಚೂಡಾಮಣಿ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿತು. ಅಧ್ಯಾತ್ಮಜ್ಞಾನ, ಪಂಚಭೂತ ವಿಜ್ಞಾನ, ಯೋಗ, ತಂತ್ರವಿದ್ಯೆ, ರಸಶಾಸ್ತ್ರ ಮುಂತಾದ ವಿಷಯಗಳಲ್ಲಿ ಪಾಂಡಿತ್ಯ ಪಡೆದಿದ್ದ ತಾರಾನಾಥರಲ್ಲಿ ನೂರಾರು ದೇಶ ವಿದೇಶೀಯ ವಿದ್ಯಾರ್ಥಿಗಳಿರುತ್ತಿದ್ದರು. ಕರ್ನಾಟಕದ ಸಾಹಿತ್ಯ, ಕಲೆ, ನಾಟಕ, ಸಂಗೀತ, ಮುಂತಾದ ಕ್ಷೇತ್ರಗಳಲ್ಲೂ ತಾರಾನಾಥರು ಸೇವೆ ಸಲ್ಲಿಸಿದ್ದಾರೆ. ಧರ್ಮ ಸಂಭವ ಎಂಬ ಸಾಮಾಜಿಕ ಸುಧಾರಣೆಯ ಗ್ರಂಥ. ಪ್ರಸಿದ್ಧ ರಸೌಷಧಿಗಳು ಎಂಬ ವೈದ್ಯಗ್ರಂಥಗಳನ್ನು ಪ್ರಕಟಿಸಿದುದಲ್ಲದೆ ಪ್ರೇಮ ಎಂಬ ನಿಯತಕಾಲಿಕ ಪತ್ರಿಕೆಯನ್ನು ಇವರು ಹೊರತಂದರು. ಇವರು 1937ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲಭಾರತ ಆಯುರ್ವೇದ ಮತ್ತು ಯನಾನಿ ಆ ನುವಂಶಿಕ ವೈದ್ಯರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಇಳಿವಯಸ್ಸಿನಲ್ಲಿ ವಿಶ್ರಾಂತಿಗೆಂದು ಬೆಂಗಳೂರಿನಲ್ಲಿದ್ದಾಗ 1942ರಲ್ಲಿ ದೈವಾಧೀನರಾದರು (ಕೆ.ಆರ್.ಎಸ್.)