ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತುಂಗಭದ್ರಾ

ವಿಕಿಸೋರ್ಸ್ದಿಂದ

ತುಂಗಭದ್ರಾ ದಕ್ಷಿಣ ಭಾರತದ ಒಂದು ನದಿ. ಕೃಷ್ಣಾ ನದಿಯ ಒಂದು ಪ್ರಮುಖ ಉಪನದಿ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಪಶ್ಚಿಮ ಘಟ್ಟಕ್ಕೆ ಏರಿದ ವರಾಹ ಪರ್ವತದ ಗಂಗಾಮೂಲದಲ್ಲಿ ಉಗಮಿಸುವ ತುಂಗಾ (ನೋಡಿ- ತುಂಗಾ) ಮತ್ತು ಭದ್ರಾ (ನೋಡಿ- ಭದ್ರಾ-1) ನದಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಪಟ್ಟಣಕ್ಕೆ ಸು. 13 ಕಿಮೀ. ಈಶಾನ್ಯದಲ್ಲಿ ಕೂಡಲಿಯ ಬಳಿ ಒಂದಾಗುತ್ತವೆ. ಅಲ್ಲಿಂದ ಮುಂದೆ ಹರಿಯುವ ನದಿಗೆ ತುಂಗಭದ್ರಾ ಎಂಬ ಹೆಸರು ಬಂದಿದೆ. ಆಂಧ್ರ ಪ್ರದೇಶದಲ್ಲಿ ಕರ್ನೂಲಿನಿಂದ ಸ್ವಲ್ಪ ಕೆಳಕ್ಕೆ ಇದು ಕೃಷ್ಣಾ ನದಿಯನ್ನು ಕೂಡಿಕೊಳ್ಳುತ್ತದೆ. ನದಿಯ ಒಟ್ಟೂ ಉದ್ದ ಸು. 644 ಕಿಮೀ. ಕೂಡಲಿಯ ಬಳಿಯಿಂದ ಆರಂಭವಾಗಿ ಶಿವಮೊಗ್ಗ ಜಿಲ್ಲೆಯನ್ನು ಬಿಡುವವರೆಗೂ ಉತ್ತರ ದಿಕ್ಕಿಗೆ ಹರಿಯುವ ತುಂಗಭದ್ರಾ ನದಿಗೆ ಅನಂತರ ಈಶಾನ್ಯಾಭಿಮುಖವಾಗಿ ಮುಂದುವರಿಯುವುದು. ಧಾರವಾಡ ಜಿಲ್ಲೆಯ ಆಗ್ನೇಯ ಅಂಚಿನಲ್ಲಿ ಸಾಗುತ್ತದೆ: ಧಾರವಾಡ-ಚಿತ್ರದುರ್ಗ ಜಿಲ್ಲೆಗಳ ನಡುವಣ ನೈಸರ್ಗಿಕ ಎಲ್ಲೆಯಾಗಿ ಪರಿಣಮಿಸುತ್ತದೆ. ಈ ಭಾಗದಲ್ಲಿ ಇದನ್ನು ಸೇರುವ ಮುಖ್ಯ ಉಪನದಿ ಕುಮುದ್ವತಿ. ಇದು ಹರಿಹರದಿಂದ ಸ್ವಲ್ಪ ಮೇಲೆ, ರಾಣಿಬೆನ್ನೂರು ತಾಲ್ಲೂಕಿನ ಮೂದೇನೂರಿನ ಹತ್ತಿರ ತುಂಗಭದ್ರಾ ನದಿಯನ್ನು ಎಡಗಡೆಯಲ್ಲಿ ಸಂಗಮಿಸುತ್ತದೆ. ಬಲಗಡೆಯಿಂದ ಹರಿದುಬರುವ ಸ್ಯಾಗಲಹಳ್ಳ, ಸೂಳೆಕೆರೆಹಳ್ಳ ಅಥವಾ ಹರಿದ್ರಾ ಎಂಬ ಹಳ್ಳ ಹರಿಹರದ ಬಳಿ ತುಂಗಭದ್ರೆಯನ್ನು ಕೂಡಿಕೊಳ್ಳುತ್ತದೆ.

ಚಿತ್ರದುರ್ಗ ಜಿಲ್ಲೆಯ ಎಲ್ಲೆಯನ್ನು ದಾಟಿದ ಮೇಲೂ ತುಂಗಭದ್ರಾ ನದಿ ಧಾರವಾಡ ಜಿಲ್ಲೆಯಂಚಿನಲ್ಲೇ ಸಾಗುತ್ತದೆ. ಆದರೆ ಅದು ಸ್ಥೂಲವಾಗಿ ವಾಯುವ್ಯಾಭಿಮುಖವಾಗಿ ಅಂಕುಡೊಂಕಾಗಿ ಮುಂದುವರಿದು ಅನಂತರ ಮತ್ತೆ ಈಶಾನ್ಯಾಭಿಮುಖವಾಗಿ ಹರಿಯುತ್ತದೆ. ಈ ಭಾಗದಲ್ಲಿ ಅದು ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ನಡುವಣ ನೈಸರ್ಗಿಕ ಎಲ್ಲೆಯಾಗಿ ಪರಿಣಮಿಸುತ್ತದೆ. ಇಲ್ಲಿ ಅದರ ಎಡದಂಡೆಯ ಮುಖ್ಯ ಉಪನದಿ ವರದಾ. ಇದು ತುಂಗಭದ್ರೆಯನ್ನು ಸಂಗಮಿಸುವುದು ಕರಜಗಿ ತಾಲ್ಲೂಕಿನ ಗಳಗನಾಥದ ಬಳಿಯಲ್ಲಿ. ಇದಲ್ಲದೆ ಕೆಲವು ಸಣ್ಣ ಹೊಳೆಗಳೂ ಅದನ್ನು ಸೇರುತ್ತವೆ.

ಧಾರವಾಡ ಜಿಲ್ಲೆಯ ಎಲ್ಲೆಯಿಂದ ಮುಂದಕ್ಕೆ ತುಂಗಭದ್ರಾ ನದಿ ಸ್ಥೂಲವಾಗಿ ಅದೇ ದಿಕ್ಕಿನಲ್ಲಿ ರಾಯಚೂರು ಜಿಲ್ಲೆಯ ಅಂಚಿನಲ್ಲಿ ಹರಿದು, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳನ್ನು ಪ್ರತ್ಯೇಕಿಸುತ್ತದೆ. ಸುಪ್ರಸಿದ್ಧ ತುಂಗಭದ್ರಾ ಜಲಾಶಯ ನಿರ್ಮಿತವಾಗಿರುವುದು ಈ ಭಾಗದಲ್ಲೆ. ಬಲಗಡೆಯ ಉಪನದಿಗಳು, ಚಿಕ್ಕ ಹಗರಿ ಮತ್ತು ವೇದಾವತಿ (ಹಗರಿ). ಚಿಕ್ಕ ಹಗರಿ ನದಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಹತ್ತಿರವೂ ವೇದಾವತಿ ನದಿ ಸಿರಗುಪ್ಪದಿಂದ ಕೆಳಕ್ಕೆ ಹಳೆಕೋಟೆಯ ಸನಿಯದಲ್ಲೂ ತುಂಗಭದ್ರೆÉ್ರಯನ್ನು ಕೂಡಿಕೊಳುತ್ತದೆ. ಹಗರಿಬೊಮ್ಮನಹಳ್ಳಿಯಿಂದ ಸ್ವಲ್ಪ ಕೆಳಕ್ಕೆ ಹಂಪಾಪಟ್ಣ ಹಳ್ಳವೂ ಕಂಪ್ಲಿಯ ಪೂರ್ವದಲ್ಲಿ ರಾಮಪ್ಪವಂಕವೂ ಬಲದಂಡೆಯ ಎರಡು ಸಣ್ಣ ಹೊಳೆಗಳು. ಎಡಭಾಗದಲ್ಲಿ ಅದನ್ನು ಕೂಡಿಕೊಳ್ಳುವ ಹಳ್ಳಗಳು ಮಸ್ಕಿನಾಲಾ ಮತ್ತು ಹಿರೇಹಳ್ಳ. ಬಳ್ಳಾರಿಯ ಅಂಚನ್ನು ಬಿಟ್ಟಮೇಲೂ ತುಂಗಭದ್ರಾ ನದಿ ರಾಯಚೂರು ಜಿಲ್ಲೆಯ ಅಂಚಿನಲ್ಲೇ ಮುಂದುವರಿದು ಸ್ವಲ್ಪ ದೂರವಾದ ಮೇಲೆ ಪೂರ್ವದಿಕ್ಕಿಗೆ ಪ್ರವಹಿಸುತ್ತದೆ. ಕರ್ನಾಟಕದ ಗಡಿಯನ್ನು ದಾಟಿದ ಅನಂತರ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಮುಂದುವರಿದು, ಬಲ ಬದಿಯಲ್ಲಿ ಹಿಂದ್ರಿ ಹೊಳೆಯನ್ನು ಕೂಡಿಕೊಂಡು ಕರ್ನೂಲು ಪಟ್ಟಣದಿಂದ ಮುಂದೆ ಈಶಾನ್ಯದ ಕಡೆಗೆ ದಿಕ್ಕು ಬದಲಿಸಿ ಸ್ವಲ್ಪ ದೂರ ಹರಿದು, ಕೃಷ್ಣಾ ನದಿಯಲ್ಲಿ ಸಂಗಮಿಸುತ್ತದೆ.

ತುಂಗಭದ್ರಾ ನದಿಯ ಹರಿವನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು ; 1 ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಮೇಲಕ್ಕೆ ಸು. 10 ಕಿಮೀ. ದೂರದಲ್ಲಿರುವ ವಲ್ಲಭಪುರದವರೆಗೆ ನದಿ ಸಾಮಾನ್ಯವಾಗಿ ಕಡಿದಾದ ದಂಡೆಗಳಿಂದ ಕೂಡಿದ್ದು ಪ್ರತಿ ಕಿಮೀ. ಗೂ ಸರಾಸರಿಯಲ್ಲಿ ಸು. 40 ಸೆಂಮೀ. ಗಳಷ್ಟು ಇಳಿಯುತ್ತ ಸಾಗುತ್ತದೆ. ಈ ಭಾಗದಲ್ಲಿ ನೀರಾವರಿಗಾಗಿ ಅಣೆಕಟ್ಟುಗಳು ಯಾವುವೂ ಇಲ್ಲ. ಕೊಪ್ಪಳ ಮತ್ತು ಹರಿಹರ ತಾಲ್ಲೂಕುಗಳಲ್ಲಿ ನದಿಯಿಂದ ನೀರನ್ನು ಎತ್ತಿ ಸಾಗುವಳಿಗೆ ಬಳಸಿಕೊಳ್ಳಲಾಗುತ್ತಿದೆ. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕಟ್ಟಲಾದ ವಲ್ಲಭಪುರ ಅಣೆಕಟ್ಟೆ ಈಗ ತುಂಗಭದ್ರಾ ಜಲಾಶಯದಲ್ಲಿ ಮುಳುಗಿದೆ. 2 ವಲ್ಲಭಪುರದಿಂದ ಕಂಪ್ಲಿಯ ವರೆಗೆ ನೀರಿನ ಹರಿವಿನ ವೇಗ ಅಧಿಕ. ಇಲ್ಲಿ ಕಿಮೀ. ಗೆ 280 ಸೆಂಮೀ. ಗಳಂತೆ ನದಿಯ ಮಟ್ಟ ತಗ್ಗುತ್ತ ಹೋಗುತ್ತದೆ. ಈ ಭಾಗದಲ್ಲಿ ವಿಜಯನಗರ ಕಾಲದಲ್ಲಿ ಹಲವು ಅಣೆಕಟ್ಟೆಗಳನ್ನು ಕಟ್ಟಲಾಗಿತ್ತು. ಹೊಸಪೇಟೆಯ ಬಳಿಯ ಅಣೆಕಟ್ಟೆಯೂ ತುಂಗಭದ್ರಾ ಜಲಾಶಯದಿಂದಾಗಿ ಮುಳುಗಿಹೋಗಿದೆ. (ನೋಡಿ- ತುಂಗಭದ್ರಾ-ಯೋಜನೆ). ಆದರೆ ವಲ್ಲಭಪುರ ಹೊಸಪೇಟೆ ಅಣೆಕಟ್ಟೆಗಳಿಂದ ನಿರ್ಮಿಸಲಾಗಿದ್ದ ಬಸವಣ್ಣ ನಾಲಾ (10 ಕಿಮೀ.) ಮತ್ತು ರಾಯನಾಲಾ (28 ಕಿಮೀ.) ಗಳಿಗೆ ತುಂಗಭದ್ರಾ ಜಲಾಶಯದಿಂದಲೇ ನೀರನ್ನು ಬಿಡಲಾಗುತ್ತಿದೆ. ತುಂಗಭದ್ರಾ ಕಟ್ಟೆಯಿಂದ ಕೆಳಗೆ ಇರುವ ಹೊಸೂರು ಅಣೆಕಟ್ಟೆಯಿಂದ ಕಲಘಟ್ಟ ನಾಲಾ (6 1/2 ಕಿಮಿ.) ಮತ್ತು ಎಡದಂಡೆಯ ಹುಲ್ಗೆ ನಾಲಾ (5 ಕಿಮೀ.) ಇವೆ. ಇವು ಗಂಗಾವತಿ ತಾಲ್ಲೂಕಿಗೆ ಭಾಗಶಾಃ ಸೌಲಭ್ಯ ಒದಗಿಸಿವೆ. ಈ ಭಾಗದ ಇತರ ಅಣೆಕಟ್ಟೆಗಳ ಪೈಕಿ ಹಂಪೆಯಿಂದ ಪಶ್ಚಿಮಕ್ಕೆ 3 ಕಿಮೀ. ದೂರದಲ್ಲಿರುವ ತೂರ್ತ ಅಣೆಕಟ್ಟೆಯೊಂದು. ಇದರ ಬಲದಂಡೆಯ ತೂರ್ತ ನಾಲೆ (16 ಕಿಮೀ.) ಹಂಪೆಗೂ ಎಡದಂಡೆಯ ಆನೆಗೊಂದಿ ನಾಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಪ್ರದೇಶಕ್ಕೂ ನೀರಾವರಿ ಸೌಲಭ್ಯ ವದಗಿಸಿತ್ತದೆ. ಹಂಪೆಯಿಂದ 5 ಕಿಮೀ. ಕೆಳಗೆ ಇರುವುದು ರಾಮಸಾಗರ ಅಣೆಕಟ್ಟೆ. ಇದರ ಬಲ ದಂಡೆಯದು ರಾಮಸಾಗರ ನಾಲೆ (16 ಕಿಮೀ.). ಎಡದಂಡೆಯವು ಮೇಗಣ ಮತ್ತು ಕೆಳಗಣ ಗಂಗಾವತಿ ನಾಲೆಗಳು. ಕಂಪ್ಲಿ ಅಣೆಕಟ್ಟೆಯ ಬಲ ದಂಡೆಯ ನಾಲೆ ಕಂಪ್ಲಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ. 3 ಕಂಪ್ಲಿಯಿಂದ ಮುಂದಕ್ಕೆ ನದಿಯ ಮಟ್ಟದ ಇಳಿತ ಮತ್ತೆ ಕಡಿಮೆಯಾಗುತ್ತದೆ. ಈ ಪ್ರದೇಶದಲ್ಲಿ ಸಿರಗುಪ್ಪದ ಬಳಿಯ ಸಿರಗುಪ್ಪ ಅಣೆಕಟ್ಟೆ (ಬಲದಂಡೆ ನಾಲೆ 19 ಕಿಮೀ.), ದೇಸನೂರು ಅಣೆಕಟ್ಟೆ. (ದೇಸನೂರು ನಾಲೆ 10 ಕಿಮೀ.), ಮಾನ್ವಿಯ ಬಳಿಯ ರಾಜುಲಖಂಡ ಅಣೆಕಟ್ಟೆ, ರಾಜಮೋಹಿಯ ಬಳಿಯ ಅಣೆಕಟ್ಟೆ-ಇವು ಮುಖ್ಯವಾದವು. ತುಂಗಭದ್ರಾ ನದಿಯಲ್ಲಿ ಅಲ್ಲಲ್ಲಿ ನಡುಗಡ್ಡೆಗಳಿವೆ. ಹೊನ್ನಾಳಿ, ಹರಿಹರ, ಹುಲ್ಗಿ, ಕಂಪ್ಲಿ, ಧಡೆಸುಗೂರು, ಗಿಲೇಸುಗೂರು ಮುಂತಾದ ಎಡೆಗಳಲ್ಲಿ ತುಂಗಭದ್ರಾ ನದಿಗೆ ಸೇತುವೆಗಳನ್ನು ರಚಿಸಲಾಗಿದೆ.

ಬಹುತೇಕ ಕನ್ನಡ ರಾಜ್ಯದಲ್ಲಿ ಹರಿಯುವ ತುಂಗಭದ್ರಾ ನದಿ ಈ ರಾಜ್ಯದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಾಗಿತಿಹಾಸ ಕಾಲದಿಂದಲೂ ಅನೇಕ ಸಂಸ್ಕøತಿಗಳು ಬೆಳೆದಿದ್ದುವೆಂಬುದಕ್ಕೆ ಸಾಕ್ಷಿಯಾಗಿ ನಿಟ್ಟೂರು, ಹಂಪಸಾಗರ ಮುಂತಾದ ನೆಲೆಗಳು ಸಾಕ್ಷಿಯಾಗಿವೆ. ಇತಿಹಾಸ ಕಾಲದಲ್ಲಿ ಇದು ಹಲವು ರಾಜ್ಯಗಳ ನೈಸರ್ಗಿಕ ಗಡಿಯಾಗಿತ್ತು. ವಿಜಯನಗರದ ರಾಜಧಾನಿ ಹಂಪೆಯೂ ಕಂಪಿಲಿಯೂ ಹಲವು ಕೋಟೆಗಳೂ ಇದರ ದಂಡೆಯ ಮೇಲೆ ಸ್ಥಾಪಿತವಾಗಿದ್ದವು. ಈ ನದಿಯ ದಡದಲ್ಲಿ ಹೊನ್ನಾಳಿ, ಹರಿಹರ, ಹೊಸಪೇಟೆ, ಕಂಪ್ಲಿ, ಸಿರಗುಪ್ಪ, ರಾಯಚೂರು, ಗಂಗಾವತಿ, ಕರ್ನೂಲು-ಇವು ದೊಡ್ಡ ಸ್ಥಳಗಳು; ಕೂಡಲಿ, ಹರಿಹರ, ಕುರುವತ್ತಿ, ಮೈಲಾರ, ಗಳಗನಾಥ, ಆನೆಗೊಂದಿ, ಮಾಕಂದ-ಇವು ಪವಿತ್ರ ಕ್ಷೇತ್ರಗಳು.

ತುಂಗಭದ್ರ್ರಾ ಪುರಾಣಪ್ರಸಿದ್ಧವಾದ ಪವಿತ್ರ ನದಿ. ರಾಮಾಯಣದಲ್ಲಿ ಇದನ್ನು ಪಂಪಾ ಎಂದು ಕರೆಯಲಾಗಿದೆ. ಭಾಗವತದಲ್ಲೂ ಮಹಾಭಾರತದಲ್ಲೂ ಇದನ್ನು ಹೆಸರಿಸಲಾಗಿದೆ ವಿಷ್ಣು ವರಾಹಾವತಾರವನ್ನು ತಳೆದು ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಪಾರುಮಾಡಿದ ಮೇಲೆ ಪಶ್ಚಿಮ ಘಟ್ಟದ ಮೇಲೆ ವಿಶ್ರಾಂತಿ ಪಡೆದನೆಂದೂ ಅವನು ಕುಳಿತ ಸ್ಥಳವೇ ವರಾಹ ಪರ್ವತವೆಂದೂ ವರಾಹನ ಬಲ ಕೋರೆದಾಡೆಯಿಂದ ಬಂದ ಬೆವರು ಭದ್ರಾ ನದಿಯಾಗಿಯೂ ಎಡ ಕೋರೆದಾಡೆಯಿಂದ ಸುರಿದ ಬೆವರು ತುಂಗಾ ನದಿಯಾಗಿಯೂ ಹರಿದುವೆಂದು ಬ್ರಹ್ಮಾಂಡಪುರಾಣದಲ್ಲಿ ಹೇಳಲಾಗಿದೆ.