ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆರಿಗೆ

ವಿಕಿಸೋರ್ಸ್ದಿಂದ

ತೆರಿಗೆ - ಸಾರ್ವಜನಿಕ ಉದ್ದೇಶಗಳಿಗಾಗಿ ವ್ಯಕ್ತಿಗಳ ಅಥವಾ ಸ್ವತ್ತಿನ ಮೇಲೆ, ಸಾಮಾನ್ಯವಾಗಿ ದ್ರವ್ಯರೂಪದಲ್ಲಿ ಪ್ರಾಧಿಕೃತವಾಗಿ, ನಿಯತವಾಗಿ ವಿಧಿಸಲಾದ ಪ್ರಭಾರ ಅಥವಾ ಹೊರೆ; ಕಂದಾಯ ; ಕರ (ಟ್ಯಾಕ್ಸ್) ಸರ್ಕಾರ ತನ್ನ ಅನೇಕ ಕರ್ತವ್ಯಗಳನ್ನು ನಿರ್ವಹಿಸುವುದಕ್ಕಾಗಿ ಖರ್ಚು ಮಾಡುವುದು ಅನಿವಾರ್ಯ ಇದಕ್ಕಾಗಿ ಹಣ ಕೂಡಿಸಲು ಅದು ವಿವಿಧ ಆದಾಯ ಮೂಲಗಳನ್ನು ಅವಲಂಬಿಸಿರುತ್ತದೆ. ಅಂಥ ಮೂಲಗಳಲ್ಲಿ ತೆರಿಗೆ ಬಹು ಮುಖ್ಯ ವಾದ್ದು. ಜನರು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಾದ್ದು ಇದು. ಈ ಹಣ ಸಾರ್ವಜಕರಿಗೆ ಉಪಯುಕ್ತವಾದ ಸರ್ಕಾರದ ಕರ್ತವ್ಯ ನಿರ್ವಹಣೆಗೆ ವಿನಿಯೋಗವಾಗುತ್ತದೆ. ಅದರೆ ತೆರಿಗೆ ಕೊಡುವವನು ತಾನು ಸರ್ಕಾರಕ್ಕೆ ಸಲ್ಲಿಸುವ ಹಣಕ್ಕೆ ಸಮಾನವಾದ ಪ್ರತಿಫಲವನ್ನು ನಿರೀಕ್ಷಿಸುವಂತಿಲ್ಲ. ಅಂದರೆ ಯಾವುದೇ ವ್ಯಕ್ತಿ ಸರ್ಕಾರಕ್ಕೆ ಕೊಡುವ ತೆರಿಗೆ ನೇರವಾದ ಪ್ರತ್ಯರ್ಪಣೆ ಇರುವುದಿಲ್ಲ. ಯಾವುದಾದರೂ ನಿರ್ದಿಷ್ಟ ಸೇವೆಗಾಗಿ ಸರ್ಕಾರ ಶುಲ್ಕ ಅಥವಾ ದರವನ್ನು ವಿಧಿಸಬಹುದು. ಅಲ್ಲಿ ಒಬ್ಬ ವ್ಯಕ್ತಿ ಕೊಡುವ ಹಣಕ್ಕೆ ನೇರವಾದ ಪ್ರತ್ಯರ್ಪಣೆಯುಂಟು. ಆದರೆ ತೆರಿಗೆಯ ವಿಷಯದಲ್ಲಿ ಹೀಗಾಗುವುದಿಲ್ಲ. ಈ ಕಾರಣದಿಂದ ತೆರಿಗೆ ಇತರ ಆದಾಯ ಮೂಲಗಳಿಂದ ವಿಭಿನ್ನವಾಗಿದೆ. ತೆರಿಗೆಯಿಂದ ಬರುವ ಆದಾಯವನ್ನು ಸರ್ಕಾರ ಇಡೀ ಸಮುದಾಯಕ್ಕೆ ಉಪಯೋಗವಾಗುವ ಪ್ರಧಾನ ಕರ್ತವ್ಯಗಳ ನಿರ್ವಹಣೆಗೆ

ಉಪಯೋಗಿಸುತ್ತಿದಾದ್ದರಿಂದ ತೆರಿಗೆ ಪಾವತಿ ಮಾಡುವವರಿಗೂ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಅವರು ತೆರಿಗೆಯ ರೂಪದಲ್ಲಿ ಕೊಡುವ ಮೊಬಲಗಿಗೆ ಸರ್ಕಾರದಿಂದ ನೇರ ಪ್ರತಿಫಲ ದೊರಕುವುದಿಲ್ಲವೆಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ತೆರಿಗೆಗಳಿಗೆ ಸಂಬಂಧಿಸಿದ ಕಾನೂನಿನಲ್ಲಿ ಸಾಮಾನ್ಯವಾಗಿ ತೆರಿಗೆಯ ವಸ್ತುವಿಗೂ ತೆರಿಗೆಯ ಆಧಾರಕ್ಕೂ ಭೇದ ಕಲ್ಪಿಸಲಾಗಿರುತ್ತದೆ. ಸರಕು, ಸ್ವತ್ತಿನ ಮಾರಿಗೆ ಕೊಳ್ಳಿಕೆಗಳೇ ಮುಂತಾದ ವಹಿವಾಟುಗಳು-ಇವು ತೆರಿಗೆಯ ವಸ್ತುಗಳು. ತೆರಿಗೆಯ ದರ ಅನ್ವಯವಾಗುವ ಏಕಮಾನವನ್ನು ಆಧಾರ ಎಂದು ಪರಿಗಣಿಸಲಾಗುತ್ತದೆ. ತೆರಿಗೆಯ ವಸ್ತುವಾದ ಮೋಟಾರು, ವಾಹನದ ಮೇಲೆ ತೆರಿಗೆ ವಿಧಿಸುವಾಗ ಅದರ ತೂಕ, ಅಶ್ವಸಾಮಥ್ರ್ಯ, ಮೌಲ್ಯ ಇಲ್ಲವೇ ವಯಸ್ಸಿಗೆ ಅನುಗುಣವಾಗಿ ದರ ನಿಗದಿಮಾಡಬಹುದು. ಇಲ್ಲಿ ತೂಕ, ಅಶ್ವಸಾಮಥ್ರ್ಯ, ಮೌಲ್ಯ ಅಥವಾ ವಯಸ್ಸು ತೆರಿಗೆಯ ಆಧಾರವೆನಿಸುತ್ತದೆ. ಸ್ವತ್ತಿನ ತೆರಿಗೆಯ ದರವನ್ನು ಅದರ ಸ್ಥೂಲ ಮೌಲ್ಯದ ಇಲ್ಲವೇ ಬಾಡಿಗೆಯ ಆಧಾರದ ಮೇಲೋ ಸಕ್ಕರೆಯ ಮೇಲಣ ಸುಂಕವನ್ನು ಅದರ ಚಿಲ್ಲರೆ ಬೆಲೆಯ ಇಲ್ಲವೇ ತೂಕದ ಮೇಲೋ ನಿಷ್ಕರ್ಷಿಸಬಹುದು.

ಉದ್ದೇಶಗಳು : ತೆರಿಗೆಗಳನ್ನು ಸಾಮನ್ಯವಾಗಿ ಈ ಉದ್ದೇಶಗಳಿಗಾಗಿ ವಿಧಿಸಲಾಗುತ್ತದೆ : 1 ಸರ್ಕಾರದ ಖರ್ಚಿಗಾಗಿ ಹಣವನ್ನು ಕೂಡಿಸುವುದು. ರಾಜ್ಯಾದಾಯ ತೆರಿಗೆಯ ಒಂದು ಉದ್ದೇಶ, ಸರ್ಕಾರ ನಿರ್ವಹಿಸುವ ಕರ್ತವ್ಯಗಳು ಹೆಚ್ಚಿದಂತೆ ಅದರ ಖರ್ಚೂ ಹೆಚ್ಚುತ್ತದೆ. ಈ ಖರ್ಚಿಗೆ ಅಗತ್ಯವಾದ ಹಣವನ್ನು ಕೂಡಿಸಲು ಸರ್ಕಾರ ಅವಲಂಬಿಸುವ ವಿವಿಧ ಮೂಲಗಳ ಪೈಕಿ ತೆರಿಗೆ ಬಹಳ ಮುಖ್ಯವಾದ್ದು, ಸರ್ಕಾರದ ಕಾರ್ಯ ನಿರ್ವಹಣೆಗೆ ಅಗತ್ಯವಾದ ಹಣವನ್ನು ದೊರಕಿಸಿಕೊಳ್ಳುವುದಷ್ಟೇ ತೆರಿಗೆಗಳನ್ನು ವಿಧಿಸುವುದರ ಉದ್ದೇಶವಾಗಿರತಕ್ಕದ್ದೆಂಬುದು ಹಿಂದೆ ಇದ್ದ ಅಭಿಪ್ರಾಯ. ಇಂದು ತೆರಿಗೆಗಳ ಉದ್ದೇಶ ಇದೊಂದೇ ಅಲ್ಲ. 2 ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು-ಆರ್ಥಿಕ ಉತ್ಕರ್ಷ ಮತ್ತು ಆರ್ಥಿಕ ಕುಸಿತವನ್ನು ನಿಯಂತ್ರಿಸುವುದು-ತೆರಿಗೆ ನೀತಿಯ ಒಂದು ಉದ್ದೇಶವಾಗಿರಬಹುದು. ಆರ್ಥಿಕ ಕುಸಿತ ಉಂಟಾದಾಗ ಆರ್ಥಿಕ ಚಟುವಟಿಕೆಗಳ ಮಟ್ಟ ಕಡಿಮೆಯಾಗಿ ನಿರುದ್ಯೋಗ ಉಂಟಾದಾಗ ಅರ್ಥಿಕತೆ ಚೇತರಿಸಿಕೊಳ್ಳಬೇಕಾದರೆ ಸರಕು ಸೇವೆಗಳಿಗೆ ಬೇಡಿಕೆಯೂ ಬಂಡವಾಳ ವಿನಿಯೋಜನೆಯೂ ಹೆಚ್ಚುವಂತೆ ಮಾಡಬೇಕು. ತೆರಿಗೆ ದರವನ್ನು ಇಳಿಸುವುದು ಮೂಲಕ ಈ ಉದ್ದೇಶ ಸಾಧಿಸಬಹುದು. ಅಂತೆಯೇ ಆರ್ಥಿಕ ಉತ್ಕರ್ಷದ ಕಾಲದಲ್ಲಿ ತೆರಿಗೆ ದರವನ್ನು ಹೆಚ್ಚಿಸಿ ಬೇಡಿಕೆ ಇಳಿಯುವಂತೆ ಮಾಡಬಹುದು. 3 ಬೆಲೆಗಳ ಸ್ಥಿರತೆಯನ್ನು ಕಾಪಾಡುವುದು ತೆರಿಗೆಯ ಉದ್ದೇಶವಾಗಿರಬಹುದು. ಹಣದ ಉಬ್ಬರ ಮತ್ತು ಇಳಿತಗಳ ಅತಿರೇಖಗಳನ್ನು ತಪ್ಪಿಸಿ ಹಣದ ಮೌಲ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗದಂತೆ ನೋಡಿಕೊಳ್ಳುವ ಕರ್ತವ್ಯದ ನಿರ್ವಹಣೆಗಾಗಿ ಇದನ್ನು ಬಳಸಬಹುದು. ಬೇಡಿಕೆಯ ಹೆಚ್ಚಳ ಹಣದುಬ್ಬರಕ್ಕೆ ಬಹು ಮುಖ್ಯವಾದ ಕಾರಣ. ಹಣದುಬ್ಬರವನ್ನು ನಿಯಂತ್ರಿಸಬೇಕಾದರೆ ಬೇಡಿಕೆಯನ್ನು ಕಡಿಮೆ ಮಾಡುವುದು ಅಗತ್ಯ. ತೆರಿಗೆಯ ದರವನ್ನು ಹೆಚ್ಚಿಸಿದಾಗ ಅನುಭೋಗ ಖರ್ಚಿಗಾಗಿ ಜನರ ಕೈಯಲ್ಲಿ ಉಳಿಯುವ ಹಣ ಕಡಿಮೆಯಾಗಿ ಬೇಡಿಕೆ ಇಳಿಮುಖವಾಗಿ ಹಣದುಬ್ಬರದ ಸಮಸ್ಯೆಗೆ ಪರಿಹಾರ ದೊರಕುತ್ತದೆಯೆಂದು ವಾಸಿಸಲಾಗಿದೆ. ಹಣದ ಇಳಿತದ ಪರಿಸ್ಥಿತಿಯಲ್ಲಿ ತೆರಿಗೆ ದರವನ್ನು ಇಳಿಸಿ ಅನುಭೋಗ ಖರ್ಚಿಗಾಗಿ ಜನರ ಕೈಯಲ್ಲಿ ಉಳಿಯುವ ಹಣ ಹೆಚ್ಚುವಂತೆ ಮಾಡಿ ತನ್ಮೂಲಕ ಬೇಡಿಕೆ ಹೆಚ್ಚುವಂತೆಯೂ ಬೆಲೆಗಳೂ ಏರವಂತೆಯೂ ಮಾಡಬಹುದು ಎನ್ನಬಹುದು. 4 ಆರ್ಥಿಕ ಅಸಮತೆಯನ್ನು ಕಡಿಮೆ ಮಾಡುವುದು ತೆರಿಗೆಯ ಉದ್ದೇಶವಾಗಿರಬಹುದು. ಹೆಚ್ಚು ವರಮಾನ ಪಡೆಯುವವರ ಮೇಲೆ ಮತ್ತು ಹೆಚ್ಚಿನ ಪರಿಮಾಣದ ಸಂಪತ್ತನ್ನು ಹೊಂದಿರುವವರ ಮೇಲೆ ಹೆಚ್ಚಿನ ದರದ ವರಮಾನ ಮತ್ತು ಸಂಪತ್ತು ತೆರಿಗೆಗಳನ್ನು ವಿಧಿಸುವುದರ ಮೂಲಕ ಮತ್ತು ಶ್ರೀಮಂತರು ಬಳಸುವ ಭೋಗವಸ್ತುಗಳ ಮೇಲೆ ಹೆಚ್ಚಿನ ದರದ ತೆರಿಗೆ ವಿಧಿಸುವುದರ ಮೂಲಕ ಆರ್ಥಿಕ ಅಸಮತೆಯನ್ನು ಕಡಿಮೆ ಮಾಡಬಹುದು. ಅನೇಕ ರಾಷ್ಟ್ರಗಳಲ್ಲಿ ಈ ಉದ್ದೇಶದಿಂದ ತೆರಿಗೆ ನೀತಿಯನ್ನು ರೂಪಿಸಿರುವುದುಂಟು. 5 ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ತೆರಿಗೆಯ ಉದ್ದೇಶವಾಗಿರಬಹುದು. ಈ ಉದ್ದೇಶ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಶೇಷ ಮಾನ್ಯತೆ ಪಡೆದಿದೆ. ಸರ್ಕಾರಿ ವಲಯದಲ್ಲಿ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಾದ ಹಣವನ್ನು ಕೂಡಿಸುವುದರಲ್ಲಿ ಅಡಚಣೆ ಇಲ್ಲದೆ ಅರ್ಥಿಕಾಭಿವೃದ್ಧಿ ಮುಂದುವರಿಯಲು ಅಗತ್ಯವಾದ ಬೆಲೆ ಸ್ಥಿರತೆಯನ್ನು ಕಾಪಾಡುವುದರಲ್ಲಿ ಮತ್ತು ಖಾಸಗಿ ವಲಯದ ಬೆಳೆವಣಿಗೆಗೆ ಅಗತ್ಯವಾದ ಉತ್ತೇಜಕಗಳನ್ನು ಒದಗಿಸುವುದರಲ್ಲಿ ತೆರಿಗೆ ವಿಶೇಷ ಪಾತ್ರ ವಹಿಸುತ್ತದೆ. ಆರ್ಥಿಕಾಭಿವೃದ್ಧಿಗೆ ಬಂಡವಾಳ ಶೇಖರಣೆ ಬಹುಮುಖ್ಯ. ಖಾಸಗಿ ಬಂಡವಾಳಶೇಖರಣೆ ಹೆಚ್ಚಾಗಿಲ್ಲದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತೆರಿಗೆಯ ಮೂಲಕ ಸರ್ಕಾರಿ ಬಂಡವಾಳ ಶೇಖರತೆಯನ್ನು ಹೆಚ್ಚಿಸಿ ಒಟ್ಟು ಬಂಡವಾಳ ಶೇಖರಣೆ ಗಣನೀಯವಾಗಿ ಹೆಚ್ಚುವಂತೆ ಮಾಡುವುದು ಅಗತ್ಯ. ಬೆಲೆ ಸ್ಥಿರತೆ ಇರುವಂಥ ಪರಿಸ್ಥಿತಿ ಆರ್ಥಿಕಾಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ. ತೆರಿಗೆ ನೀತಿಯನ್ನು ಸೂಕ್ತ ರೀತಿಯಲ್ಲಿ ರೂಪಿಸಿ ಬೆಲೆ ಸ್ಥಿರತೆಯನ್ನು ಕಾಪಾಡುವುದರ ಮೂಲಕ ಆರ್ಥಿಕಾಭಿವೃದ್ಧಿಗೆ ಅದರ ನೆರವನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ತೆರಿಗೆ ಉತ್ತೇಜಕಗಳೂ ಆರ್ಥಿಕಾಭಿವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಖಾಸಗಿ ಬಂಡವಾಳ ಶೇಖರಣೆಯನ್ನು ಹೆಚ್ಚಿಸುವುದಕ್ಕೆ ಉಳಿತಾಯದ ಮಟ್ಟ ಹೆಚ್ಚುವುದು ಅಗತ್ಯ. ಉಳಿತಾಯಕ್ಕೆ ಉತ್ತೇಜನ ಕೊಡುವ ರೀತಿಯಲ್ಲಿ ತೆರಿಗೆ ನೀತಿಯನ್ನು ರೂಪಿಸಬಹುದು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ಅಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಿಗೆ ಕೆಲವು ತೆರಿಗೆಗಳಿಂದ ವಿನಾಯಿತಿ ಕೊಡಬಹುದು. ಹೀಗೆ ಆರ್ಥಿಕಾಭಿವೃದ್ದಿಯನ್ನು ಉದ್ದೇಶವಾಗಿಟ್ಟುಕೊಂಡು ಅದಕ್ಕೆ ಬೇಕಾದ ರೀತಿಯಲ್ಲಿ ತೆರಿಗೆ ನೀತಿಯನ್ನು ರೂಪಿಸಬಹುದು.

ತೆರಿಗೆಯ ವಿಧಗಳು : ತೆರಿಗೆಗಳಲ್ಲಿ ಹಲವು ವಿಧಗಳಿವೆ. ಸರ್ಕಾರದ ಜವಾಬ್ದಾರಿ ಹೆಚ್ಚಿದಂತೆ ಅದರ ಖರ್ಚು ಹೆಚ್ಚಿ. ಆ ಖರ್ಚಿನ ನಿರ್ವಹಣೆಗೆ ಅಗತ್ಯವಾದ ಹಣವನ್ನು ಕೂಡಿಸಲು ಹೊಸ ಹೊಸ ತೆರಿಗೆ ಮೂಲಗಳನ್ನು ಸರ್ಕಾರ ಹುಡುಕುತ್ತ ಬಂದಿದೆ. ಪರಿಣಾಮವಾಗಿ ಇಂದು ಹಲವು ಬಗೆಯ ತೆರಿಗೆಗಳು ಜನರ ಮೇಲೆ ಬೀಳುತ್ತದೆ.

1 ವೈಯಕ್ತಿಕ ವರಮಾನ ತೆರಿಗೆ : ಒಬ್ಬ ಅಥವಾ ಅವಿಭಕ್ತ ಕುಟುಂಬದ ವೈಯಕ್ತಿಕ ವರಮಾನದ ಮೇಲೆ ವಿಧಿಸಲಾಗುವ ತೆರಿಗೆ. ಸರ್ಕಾರದ ಆದಾಯದ ದೃಷ್ಟಿಯಿಂದ ಮತ್ತು ಸಮಾಜದಲ್ಲಿ ಆರ್ಥಿಕ ಅಸಮತೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ತೆರಿಗೆ ಪ್ರಮುಖ ಸ್ಥಾನ ಪಡೆದಿದೆ. ಒಬ್ಬ ವ್ಯಕ್ತಿಯ ಒಟ್ಟು ವಾರ್ಷಿಕ ವರಮಾನ ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಾಗಿದ್ದಾಗ ಆ ಹೆಚ್ಚಿನ ವರಮಾನದ ಮೇಲೆ ತೆರಿಗೆ ಬೀಳುತ್ತದೆ. ವರಮಾನ ಮಟ್ಟ ಹೆಚ್ಚಿದಂತೆ ತೆರಿಗೆಯ ದರವೂ ಹೆಚ್ಚುತ್ತದೆ.

2 ಕಂಪನಿ ತೆರಿಗೆ : ವೈಯಕ್ತಿಕ ವರಮಾನದ ಮೇಲೆ ತೆರಿಗೆ ವಿಧಿಸುವಂತೆಯೇ ಕಂಪನಿಗಳ ವರಮಾನದ ಮೇಲೊ ತೆರಿಗೆ ವಿಧಿಸುವುದು ರೂಢಿಯಲ್ಲಿದೆ. ಸಾಮಾನ್ಯವಾಗಿ ವರಮಾನ ತೆರಿಗೆಯನ್ನು ವೈಯಕ್ತಿಕ ವರಮಾನ ತೆರಿಗೆ ಮತ್ತು ಕಂಪನಿಗಳ ಮೇಲಿನ ವರಮಾನ ತೆರಿಗೆ ಎಂದು ಎರಡು ವರ್ಗಗಳಾಗಿ ವಿಂಗಡಿಸುವುದುಂಟು. ಕಂಪನಿ ತೆರಿಗೆಯನ್ನು ಸಮರ್ಥಿಸುವ ಕೆಲವು ಸಿದ್ಧಾಂತಗಳಿವೆ. ಕಂಪನಿಗಳ ಅವಿಚ್ಛಿನ್ನತೆ ಷೇರುದಾರರ ಪರಿಮಿತ ಹೊಣೆ. ಷೇರುಗಳ ಹಸ್ತಾಂತರಣ ಮುಂತಾದ ವಿಶೇಷ ಸೌಲಭ್ಯಗಳನ್ನು ಕಂಪನಿಗಳಿಗೆ ಸರ್ಕಾರ ಕೊಟ್ಟಿರುವುದರಿಂದ ಅವು ಪ್ರಗತಿ ಹೊಂದಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಿದೆ. ಆ ಲಾಭದ ಒಂದು ಭಾಗವನ್ನು ಸರ್ಕಾರ ತೆರಿಗೆ ರೂಪದಲ್ಲಿ ತೆಗೆದುಕೊಳ್ಳುವುದು ಸರಿ-ಎಂಬುದು ವಿಶೇಷಾದಿಕಾರ ಸಿದ್ಧಾಂತ ನೀಡುವ ಸಮರ್ಥನೆ. ಏನೆಂದರೆ ಕಂಪನಿಗಳು ಬೃಹದ್ಗಾತ್ರದ ಉದ್ಯಮದಲ್ಲಿ ತೊಡಗಿರುವುದರಿಂದ ಅವುಗಳಲ್ಲಿ ಆರ್ಥಿಕಶಕ್ತಿ ಕೇಂದ್ರಿಕೃತವಾಗಿದೆ. ಆರ್ಥಿಕ ಅಸಮತೆಗೆ ಇದು ಒಂದು ಕಾರಣ. ಆರ್ಥಿಕಶಕ್ತಿಯ ಕೇಂದ್ರೀಕರಣವನ್ನೂ ಆರ್ಥಿಕ ಅಸಮತೆಯನ್ನೂ ಕಡಿಮೆ ಮಾಡುವ ದೃಷ್ಟಿಯಿಂದ ಕಂಪನಿಗಳ ಮೇಲೆ ತೆರಿಗೆ ವಿಧಿಸಿ ಅದರಿಂದ ಬರುವ ಆದಾಯವನ್ನು ಸಾರ್ವಜನಿಕ ಉಪಯೋಗಕ್ಕೆ. ಸರ್ಕಾರ ಬಳಸಬಹುದು ಎಂಬುದು ಸಾಮಾಜಿಕ ರಾಜಕೀಯ ಸಿದ್ಧಾಂತದ ಪ್ರಕಾರ ಈ ತೆರಿಗೆಗೆ ದೊರಕುವ ಸಮರ್ಥನೆ. ಕಂಪನಿಗಳು ಒಳ್ಳೆಯ ಲಾಭ ಗಳಿಸುವುದದರಿಂದ ಅವುಗಳ ತೆರಿಗೆ ಕೊಡುವ ಸಾಮಥ್ರ್ಯ ಅಧಿಕವಾಗಿಯೇ ಇರುತ್ತದೆ. ಈ ಕಾರಣಕ್ಕಾಗಿ ಅವುಗಳ ಮೇಲೆ ತೆರಿಗೆ ವಿಧಿಸುವುದು ಸಮರ್ಥನೀಯ ಎಂದು ಸಲ್ಲಿಕೆ ಸಾಮಥ್ರ್ಯ ಸಿದ್ಧಾಂತ ಹೇಳುತ್ತದೆ. ಇವಲ್ಲದೆ ಇನ್ನೂ ಕೆಲವು ಸಮರ್ಥನೆಗಳುಂಟು. ಕಂಪನಿಗಳು ವ್ಯವಸ್ಥಿತ ಸಂಸ್ಥೆಗಳು ಅವು ಕಡ್ಡಾಯವಾಗಿ ಲೆಕ್ಕಪತ್ರಗಳನ್ನಿಟ್ಟುಕೊಂಡಿರುವುದರಿಂದ ಅವುಗಳ ಮೇಲೆ ತೆರಿಗೆ ವಿಧಿಸಿ ವಸೂಲು ಮಾಡುವುದು ಸುಲಭ. ಸರ್ಕಾರ ಮಾಡುವ ಖರ್ಚಿನಿಂದಾಗಿ ಕಂಪನಿಗಳು ತಮಗೆ ಬೇಕಾದ ತಾಂತ್ರಿಕ ಮತ್ತಿತರ ಸಿಬ್ಬಂದಿ ವರ್ಗವನ್ನು ಅದರ ಶಿಕ್ಷಣಕ್ಕಾಗಿ ತಮ್ಮ ಪಾಲಿನ ಯಾವ ವೆಚ್ಚವೂ ಇಲ್ಲದೆ- ಪಡೆಯುತ್ತವೆ. ಸರ್ಕಾರ ಇದಕ್ಕಾಗಿ ಮಾಡುವ ಖರ್ಚನ್ನು ಕಂಪನಿಗಳ ಮೇಲೆ ವರಮಾನ ತೆರಿಗೆ ವಿಧಿಸಿ ಸ್ವಲ್ಪ ಮಟ್ಟಿಗಾದರೂ ಹಿಂದಕ್ಕೆ ಪಡೆದುಕೊಳ್ಳಬಹುದು. ಈ ಕಾರಣದಿಂದಲೂ ಕಂಪನಿ ತೆರಿಗೆಗೆ ಸಮರ್ಥನೆ ನೀಡಲಾಗಿದೆ. ಕಂಪನಿಗಳು ಬೃಹತ್ ಉದ್ಯಮಗಳನ್ನು ನಡೆಸುವುದರಿಂದ ನಗರಗಳಲ್ಲಿ ವಾಸಸ್ಥಳದ ಅಭಾವ. ಪರಿಸರ ಮಾಲಿನ್ಯ ಮುಂತಾದ ಸಮಸ್ಯೆಗಳು ಹೆಚ್ಚುತ್ತದೆ. ಇವುಗಳ ನಿವಾರಣೆಗೆ ಸರ್ಕಾರ ವಿಶೇಷವಾಗಿ ವೆಚ್ಚ ಮಾಡಬೇಕಾಗುವುದರಿಂದ ಕಂಪನಿಗಳ ಆದಾಯದ ಮೇಲೆ ತೆರಿಗೆ ವಿಧಿಸುವುದು ನ್ಯಾಯವೆಂದೂ ವಾದಿಸಲಾಗಿದೆ.

3 ಭೂಕಂದಾಯ : ಭೂಕಂದಾಯ ಬಹಳ ಹಿಂದಿನಿಂದಲೂ ಇರುವ ಒಂದು ತೆರಿಗೆ ವ್ಯವಸಾಯ ಭೂಮಿಯ ಹುಟ್ಟುವಳಿಯಿಂದ ಸರ್ಕಾರ ಪಡೆಯುವ ಒಂದು ನಿರ್ದಿಷ್ಟ ಪಾಲೇ ಭೂಕಂದಾಯ. ಒಂದು ಎಕರೆ ಭೂಮಿಯಲ್ಲಿ ದೊರೆಯುವ ಉತ್ಪನ್ನ ಭೂಮಿಯ ಫಲವತ್ತತೆ, ನೀರಾವರಿ ಸೌಲಭ್ಯ, ವಾಯುಗುಣ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಅಂಶಗಳನ್ನೆಲ್ಲ ಗಣನೆಗೆ ತೆಗೆದುಕೊಂಡು ಒಂದು ಪ್ರದೇಶದಲ್ಲಿ ಒಂದು ಎಕರೆಗೆ ಎಷ್ಟು ಭೂಕಂದಾಯ ಇರಬೇಕೆಂಬುದು ನಿಗದಿಯಾಗಿರುತ್ತದೆ. ಹೆಚ್ಚು ಭೂಮಿಯನ್ನು ಹೊಂದಿರುವವರ ಮತ್ತು ಕಡಿಮೆ ಭೂಮಿಯನ್ನು ಹೊಂದಿರುವವರ ನಡುವೆ ಭೂಕಂದಾಯದ ದರದಲ್ಲಿ ವ್ಯತ್ಯಾಸವಿಲ್ಲದಿರುವುದರಿಂದ ಹೆಚ್ಚು ಆದಾಯ ಪಡೆಯುವವರ ಮೇಲೆ ಹೆಚ್ಚು ಹೊರೆ ಬೀಳುವಂತೆ ಮಾಡಲು ಈ ಪದ್ಧತಿಯಲ್ಲಿ ಸಾಧ್ಯವಾಗಿಲ್ಲ. ಭಾರತದಲ್ಲಿ ಈ ನ್ಯೂನತೆಯನ್ನು ಹೋಗಲಾಡಿಸಲು ಭೂಕಂದಾಯದಲ್ಲಿ ಸೂಕ್ತ ಮಾರ್ಪಡುಗಳಾಗಬೇಕೆಂದು ವಾದಕ್ಕೆ ಇತ್ತೀಚೆಗೆ ಬೆಂಬಲ ದೊರಕುತ್ತಿದೆ.

4 ಸ್ವತ್ತು ತೆರಿಗೆ : ವರಮಾನದ ಮೇಲಷ್ಟೇ ಅಲ್ಲದೆ ಒಬ್ಬ ವ್ಯಕ್ತಿ ಅಥವಾ ಅವಿಭಕ್ತ ಕುಟುಂಬ ಹೊಂದಿರುವ ಸ್ವತ್ತು ಅಥವಾ ಸಂಪತ್ತಿನ ಮೇಲೂ ತೆರಿಗೆ ವಿಧಿಸುವುದುಂಟು. ದಾಯಭಾಗ ತೆರಿಗೆ ಅಥವಾ ಸ್ವತ್ತು ಹಕ್ಕುದಾರಕೆಯ ಮೇಲೆ ತೆರಿಗೆ ವಿಧಿಸಬಹುದು ಮತ್ತು ಒಬ್ಬ ವ್ಯಕ್ತಿ ಅಥವಾ ಅವಿಭಕ್ತ ಕುಟುಂಬ ಹೊಂದಿರುವ ಸಂಪತ್ತಿನ ಮೇಲೆ ತೆರಿಗೆ ವಿದಿಸಬಹುದು. ಒಬ್ಬ ವ್ಯಕ್ತಿಯ ಮರಣಾನಂತರ ಸ್ವತ್ತು ಉತ್ತರಾಧಿಕಾರಿಗಳ ಕೈಸೇರುವಾಗ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅವರು ಅನಾಯಾಸವಾಗಿ ಸ್ವತ್ತನ್ನು ಪಡೆಯುವುದರಿಂದ ಅದರ ಸ್ವಲ್ಪ ಭಾಗ ಸಾರ್ವಜನಿಕ ಉಪಯೋಗಕ್ಕೆ ದೊರಕುವಂತೆ ಮಾಡುವುದೇ ಈ ತೆರಿಗೆ ವಿಧಿಸುವುದರ ಉದ್ದೇಶ. ಒಬ್ಬ ವ್ಯಕ್ತಿ ಅಥವಾ ಕುಟುಂಬ ನಿಗದಿಯಾದ ಪರಿಮಾಣಕ್ಕಿಂತ ಹೆಚ್ಚಾಗಿರುವ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಯೇ ಸಂಪತ್ತು ತೆರಿಗೆ. ಭೂಮಿ, ಕಟ್ಟಡಗಳು, ಬೆಲೆ ಬಾಳುವ ಒಡವೆವಸ್ತು ಮತ್ತು ಇತರ ಗೃಹೋಪಯುಕ್ತ ವಸ್ತುಗಳನ್ನು ಸಂಪತ್ತೆಂದು ಪರಿಗಣಿಸಲಾಗಿದೆ.

5 ಖರ್ಚು ತೆರಿಗೆ : ಒಬ್ಬ ವ್ಯಕ್ತಿಯ ತೆರಿಗೆ ಕೊಡುವ ಸಾಮಥ್ರ್ಯವನ್ನು ಅವನ ವರಮಾನಕ್ಕಿಂತ ಖರ್ಚು ಚೆನ್ನಾಗಿ ಸೂಚಿಸುವುವೆಂಬ ಭಾವನೆಯ ಮೇಲೆ ಖರ್ಚು ತೆರಿಗೆಯನ್ನು ಸಮರ್ಥಿಸಲಾಗಿದೆ. ಖರ್ಚು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನದಾಗಿದ್ದಾಗ ಈ ತೆರಿಗೆ ಬೀಳುತ್ತದೆ. ಖರ್ಚು ಹೆಚ್ಚಿದಂತೆ ತೆರಿಗೆಯ ಭಾರವು ಹೆಚ್ಚುವುದರಿಂದ ಉಳಿತಾಯಕ್ಕೆ ಉತ್ತೇಜನ ನೀಡುತ್ತದೆಂಬ ದೃಷ್ಟಿಯಿಂದಲೂ ತೆರಿಗೆಯನ್ನು ಸಮರ್ಥಿಸಲಾಗಿದೆ. ಬ್ರಿಟಿಷ್ ಅರ್ಥಶಾಸ್ತ್ರಜ್ಞ ಕಾಲ್ಡರರ ಸಲಹೆಯ ಮೇರೆಗೆ ಭಾರತದಲ್ಲಿ 1957 - 58 ರಲ್ಲಿ ಜಾರಿಗೆ ತರಲಾದ ಈ ತೆರಿಗೆಯನ್ನು 1962 - 63 ರಲ್ಲಿ ಹಿಂದೆಗೆದುಗೊಂಡು ಪುನಃ 1963 - 64 ರಲ್ಲಿ ಜಾರಿಗೆ ಕೊಡಲಾಯಿತು. ಆದರೆ ಮತ್ತೆ 1966 - 67 ರಲ್ಲಿ ಇದನ್ನು ವಿಧಿಸುವುದನ್ನು ನಿಲ್ಲಿಸಲಾಯಿತು.

6 ವ್ಯಾಪಾರದ ಸರಕುಗಳ ಮೇಲಿನ ತೆರಿಗೆಗಳು : ಆಮದು ಮತ್ತು ರಫ್ತು ತೆರಿಗೆಗಳು, ಅಬ್ಕಾರಿ ಸುಂಕ ಮತ್ತು ಮಾರಾಟ ತೆರಿಗೆ - ಇವು ವ್ಯಾಪಾರ ಸರಕುಗಳ ಮೇಲಿನ ತೆರಿಗೆಗಳ ಗುಂಪಿಗೆ ಸೇರಿದವು. ಒಂದು ರಾಷ್ಟ್ರ ಆಮದಾಗುವ ಸರಕುಗಳ ಮೇಲೆ ಹಲವು ಕಾರಣಗಳಿಂದಾಗಿ ತೆರಿಗೆ ವಿಧಿಸಬಹುದು. ಈ ರೀತಿಯ ತೆರಿಗೆಯಿಂದ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ; ವಿದೇಶೀ ಪೈಪೋಟಿಯನ್ನು ಕಡಿಮೆ ಮಾಡಿ ಅಥವಾ ತಪ್ಪಿಸಿ ಸ್ವದೇಶೀ ಕೈಗಾರಕೆಗಳ ಬೆಳವಣಿಗೆಗೆ ಪ್ರೋತ್ಸಾಹ ದೊರಕುವಂತೆ ಮಾಡಬಹುದು; ವಿದೇಶೀ ವಿನಿಮಯದ ಉಳಿತಾಯವನ್ನೂ ಮಾಡಬಹುದು - ಎಂಬವು ಮುಖ್ಯ ಕಾರಣಗಳು. ರಾಷ್ಟ್ರದಿಂದ ರಫ್ತಾಗುವ ಸರಕುಗಳ ಮೇಲೂ ತೆರಿಗೆ ವಿಧಿಸಿ ಸರ್ಕಾರ ಆದಾಯ ಪಡೆಯುತ್ತದೆ. ರಫ್ತು ವ್ಯಾಪಾರ ಹೆಚ್ಚಾಗಿದ್ದಾಗ ಮತ್ತು ತೆರಿಗೆಯಿಂದ ರಫ್ತು ವ್ಯಾಪಾರಕ್ಕೆ ಅಡ್ಡಿಯಾಗದಿದ್ದರೆ ಈ ತೆರಿಗೆಯಿಂದ ಸರ್ಕಾರ ಹೆಚ್ಚು ಆದಾಯ ಗಳಿಸಬಹುದು.

ವಿದೇಶೀ ವ್ಯಾಪಾರದ ಸರಕುಗಳ ಮೇಲೆ ತೆರಿಗೆ ವಿಧಿಸುವಂತೆಯೇ ಸ್ವದೇಶದಲ್ಲಿಯೇ ತಯಾರಾಗಿ ಬಿಕರಿಯಾಗುವ ಸರಕುಗಳ ಮೇಲೂ ತೆರಿಗೆ ವಿಧಿಸುವುದು ರೂಢಿಯಲ್ಲಿದೆ. ಇಂಥ ತೆರಿಗೆಯನ್ನು ಅಬ್ಕಾರಿ ಸುಂಕ ಎಂದು ಕರೆಯುತ್ತಾರೆ. ರಾಜ್ಯಾದಾಯದ ದೃಷ್ಟಿಯಿಂದ ಹಾಗೂ ಅನಗತ್ಯ ಅಥವಾ ಅಪಾಯಕಾರಿ ವಸ್ತುಗಳ ಬಳಕೆಯನ್ನು ನಿರ್ಬಂಧಿಸುವ ಉದ್ದೇಶದಿಂದ ಅಬ್ಕಾರಿ ಸುಂಕವನ್ನು ವಿಧಿಸಲಾಗುತ್ತದೆ. ಬಟ್ಟೆ, ಸೀಮೆಎಣ್ಣೆ, ಸಕ್ಕರೆ, ಹೊಗೆಸೊಪ್ಪು ಮುಂತಾದ ಅನೇಕ ದಿನ ಬಳಕೆ ಸರಕುಗಳ ಮೇಲೆ ಅಬ್ಕಾರಿ ಸುಂಕ ವಿಧಿಸಿ ಸರ್ಕಾರ ಆದಾಯ ಪಡೆಯುತ್ತದೆ. ಅಫೀಮು ಮುಂತಾದ ಮಾದ ವಸ್ತುಗಳ ಮೇಲೆ ವಿಧಿಸುವ ಸುಂಕದಿಂದ ರಾಜ್ಯಾದಾಯವನ್ನು ಹೆಚ್ಚಿಸುವ ದೃಷ್ಟಿಯ ಜೊತೆಗೆ, ಜನರ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುವ ಈ ವಸ್ತುಗಳ ಬಳಕೆಯನ್ನು ನಿರ್ಬಂಧಿಸುವ ಉದ್ದೇಶವೂ ಇದೆ. ಭಾರತದಲ್ಲಿ ಅಬ್ಕಾರಿ ಸುಂಕವನ್ನು ಕೆಲವು ವಸ್ತುಗಳ ಮೇಲೆ ಕೇಂದ್ರ ಸರ್ಕಾರವೂ ಕೆಲವು ವಸ್ತುಗಳ ಮೇಲೆ ರಾಜ್ಯ ಸರ್ಕಾರಗಳೂ ವಿಧಿಸುತ್ತವೆ.

ಅಬ್ಕಾರಿ ಸುಂಕವಷ್ಟೇ ಅಲ್ಲದೆ ಮಾರಾಟ ತೆರಿಗೆಯಿಂದ ಸರ್ಕಾರ ಸಾಕಷ್ಟು ಆದಾಯ ಪಡೆಯುತ್ತದೆ. ಸಾಮಾನ್ಯ ಬಳಕೆಯ ಎಲ್ಲ ಸರಕುಗಳ ಮೇಲೂ ತೆರಿಗೆ ವಿಧಿಸುವುದರಿಂದ ಜನಸಾಮಾನ್ಯರಿಗೆ ಇದು ಹೊರೆಯಾಗಿ ಪರಿಣಮಿಸುತ್ತದೆ. ಶ್ರೀಮಂತರು ಬಳಸುವ ಭೋಗವಸ್ತುಗಳ ಮೇಲೆ ಮಾತ್ರ ತೆರಿಗೆ ವಿಧಿಸುವುದರ ಮೂಲಕ ಜನಸಾಮಾನ್ಯರಿಗೆ ಈ ತೆರಿಗೆಯ ಹೊರೆಯನ್ನು ತಪ್ಪಿಸಬಹುದು. ಆದರೆ ಸರ್ಕಾರದ ವೆಚ್ಚ ನಿರ್ವಹಣೆಗೆ ಹೆಚ್ಚು ಹೆಚ್ಚು ರಾಜ್ಯಾದಾಯವನ್ನು ಪಡೆಯುವುದರ ಅವಶ್ಯಕತೆ ಇರುವಾಗ ಸಾಮಾನ್ಯ ಬಳಕೆಯ ಸರಕುಗಳ ಮೇಲೂ ತೆರಿಗೆ ವಿಧಿಸುವುದು ಅನಿವಾರ್ಯವೆನಿಸಿದೆ.

ಮೇಲೆ ಹೇಳಿರುವ ತೆರಿಗೆಗಳೇ ಅಲ್ಲದೆ ಮೋಟಾರು ವಾಹನಗಳ ತೆರಿಗೆ, ಮನೋರಂಜನೆ ತೆರಿಗೆ, ಜೂಜು ಮತ್ತು ಬಹುಮಾನ ಸ್ಪರ್ಧೆಗಳ ತೆರಿಗೆ, ಪಟ್ಟಣಗಳಲ್ಲಿರುವ ಸ್ವತ್ತಿನ ಮೇಲೆ ತೆರಿಗೆ ಮುಂತಾದ ಹಲವು ತೆರಿಗೆಗಳಿಂದ ಸರ್ಕಾರ ಆದಾಯ ಪಡೆಯುತ್ತದೆ.

ತೆರಿಗೆಗಳ ವರ್ಗೀಕರಣ : ಮೇಲೆ ಹೇಳಿರುವವುಗಳಲ್ಲಿ ಕೆಲವು ಪ್ರತ್ಯಕ್ಷ ತೆರಿಗೆಗಳು, ಮತ್ತೆ ಕೆಲವು ಪರೋಕ್ಷ ತೆರಿಗೆಗಳು. ತೆರಿಗೆಯನ್ನು ವಿಧಿಸಿದಾಗ ಅದರ ಹೊರೆ ಯಾರ ಮೇಲೆ ಬೀಳುತ್ತದೆಂಬುದರ ಆಧಾರದಮೇಲೆ ಒಂದು ತೆರಿಗೆ ಪ್ರತ್ಯಕ್ಷವೇ ಅಥವಾ ಪರೋಕ್ಷವೇ ಎಂದು ಹೇಳಬಹುದು. ತೆರಿಗೆಯನ್ನು ಯಾರ ಮೇಲೆ ವಿಧಿಸಲಾಗುತ್ತದೆಯೋ ಅವರೇ ತೆರಿಗೆಯ ಭಾರವನ್ನು ಹೊರಬೇಕಾದರೆ, ಅಂದರೆ ತೆರಿಗೆಯ ಭಾರವನ್ನು ಇತರರಿಗೆ ಅಂತರಣಗೊಳಿಸುವುದು (ಷಿಫ್ಟ್) ಸಾಧ್ಯವಾಗದಿದ್ದರೆ ಅಂಥದು ಪ್ರತ್ಯಕ್ಷ ತೆರಿಗೆ . ವೈಯಕ್ತಿಕ ಆದಾಯ ತೆರಿಗೆ, ಸಂಪತ್ತು ತೆರಿಗೆ - ಇವು ಪ್ರತ್ಯಕ್ಷ ತೆರಿಗೆಗಳಿಗೆ ಉದಾಹರಣೆಗಳು. ತೆರಿಗೆಯನ್ನು ಒಬ್ಬರ ಮೇಲೆ ವಿಧಿಸಿದಾಗ ಅದರ ಹೊರೆಯನ್ನು ಮತ್ತೊಬ್ಬರಿಗೆ ಅಂತರಣಗೊಳಿಸುವುದು ಸಾಧ್ಯವಿದ್ದರೆ ಅಂಥದು ಪರೋಕ್ಷ ತೆರಿಗೆ. ಆಮದು ಮತ್ತು ರಫ್ತುಸುಂಕ, ಮಾರಾಟ ತೆರಿಗೆ - ಇವು ಪರೋಕ್ಷ ತೆರಿಗೆಗಳಿಗೆ ಉದಾಹರಣೆಗಳು. ಇವನ್ನು ಮಾರಾಟಗಾರರ ಮೇಲೆ ವಿಧಿಸಲಾದರೂ ಅಂತಿಮವಾಗಿ ಇವುಗಳ ಹೊರೆ ಬೀಳುವುದು ಅನುಭೋಗಿಗಳ ಮೇಲೆ. ವ್ಯಾಪಾರಿ ತೆರಿಗೆಯನ್ನು ಬೆಲೆಗೆ ಸೇರಿಸಿ ಅನುಭೋಗಿಯಿಂದ ಅದನ್ನು ವಸೂಲು ಮಾಡಿಕೊಳ್ಳುತ್ತಾನೆ.

ಆದರೆ ಈ ರೀತಿಯ ವಿಂಗಡನೆಯ ಆಧಾರದ ಬಗ್ಗೆ ಭಿನ್ನಾಭಿಪ್ರಾಯಗಳುಂಟು. ತೆರಿಗೆಯ ಹೊರೆಯನ್ನು ಇನ್ನೊಬ್ಬರಿಗೆ ಅಂತರಣಗೊಳಿಸಲಾಗದಿದ್ದರೆ ಅಂಥದು ಪ್ರತ್ಯಕ್ಷ ತೆರಿಗೆ ಎನ್ನಲಾಗಿದೆಯಾದರೂ ಎಂಥ ತೆರಿಗೆಯನ್ನೂ ಸಂಪೂರ್ಣವಾಗಿ ಅಥವಾ ಭಾಗಶಃ ಅಂತರಣಗೊಳಿಸಬಹುದೆಂದು ತೋರಿಸುವುದು ಸಾಧ್ಯ. ಆದರೆ ಕೆಲವು ತೆರಿಗೆಗಳನ್ನು ಇತರ ತೆರಿಗೆಗಳಿಗಿಂತ ಹೆಚ್ಚು ಸುಲಭವಾಗಿ ಅಂತರಣಗೊಳಿಸುವುದು ಸಾಧ್ಯ.

ತೆರಿಗೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದಷ್ಟೇ ಅಲ್ಲದೆ ಆರೋಹಿ (ಪ್ರೋಗ್ರೆಸಿವ್) ತೆರಿಗೆ, ಮತ್ತು ಅವರೋಹಿ (ರಿಗ್ರೆಸಿವ್) ತೆರಿಗೆ ಮತ್ತು ಅನುಪಾತಿ (ಪ್ರೊಪೊರ್ಷನಲ್) ತೆರಿಗೆ ಎಂದೂ ವರ್ಗೀಕರಿಸಬಹುದು. ತೆರಿಗೆಯ ಆಧಾರ (ಬೇಸ್) ಹೆಚ್ಚಿದಂತೆ ಅದಕ್ಕಿಂತ ಹೆಚ್ಚಿನ ಅನುಪಾತದಲ್ಲಿ ತೆರಿಗೆಯ ಭಾರ ಹೆಚ್ಚಿದರೆ ಅದು ಆರೋಹಿ ತೆರಿಗೆ, ಹೆಚ್ಚಿನ ವರಮಾನದ ಹಂತಗಳಲ್ಲಿ ಹೆಚ್ಚಿನ ದರಗಳಲ್ಲಿ ವರಮಾನ ತೆರಿಗೆ ವಿಧಿಸುವುದು ಇದಕ್ಕೆ ಉದಾಹರಣೆ. ತೆರಿಗೆಯ ಆದಾರ ಹೆಚ್ಚಿದಂತೆ ತೆರಿಗೆಯ ಭಾರ ಅದಕ್ಕಿಂತ ಕಡಿಮೆಯ ಅನುಪಾತದಲ್ಲಿ ಹೆಚ್ಚಿದರೆ ಅದು ಅವರೋಹಿ ತೆರಿಗೆ. ಎಲ್ಲ ತೆರಿಗೆದಾರರ ಮೇಲೂ ಸಾಪೇಕ್ಷವಾಗಿ ಏಕ ರೀತಿಯ ಭಾರ ಬೀಳುವಂತಿದ್ದರೆ ಅಂಥದು ಅನುಪಾತಿ ತೆರಿಗೆ. ಅನುಪಾತಿ ತೆರಿಗೆಗೆ ಮೌಲ್ಯಾನುಗುಣ ಅಬ್ಕಾರಿ ಸುಂಕ ಉದಾಹರಣೆ. ಸಿಗರೇಟು, ಸಕ್ಕರೆ ಮುಂತಾದವುಗಳ ಮೇಲೆ ಮೌಲ್ಯಾನುಗುಣವಾಗಿ ವಿಧಿಸಲಾದ ತೆರಿಗೆ ಅನುಪಾತಿ ತೆರಿಗೆಯೆನಿಸಿದರೂ ವಾಸ್ತವವಾಗಿ ಅದು ಅವರೋಹಿಯಾಗಿ ಪರಿಣಮಿಸುತ್ತದೆ. ವೈಯುಕ್ತಿಕ ವರಮಾನ ಅಧಿಕವಾದಂತೆ ಆ ಪದಾರ್ಥಗಳ ಮೇಲೆ ಖರ್ಚು ಮಾಡುವ ವರಮಾನದ ಪ್ರಮಾಣಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಅವರೋಹಿ ಮತ್ತು ಅನುಪಾತಿ ತೆರಿಗೆ ಪದ್ಧತಿಗಳಿಗೆ ಬದಲಾಗಿ ಆರೋಹಿ ತೆರಿಗೆ ಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದೆ.

ತೆರಿಗೆಯ ಇತಿಹಾಸ : ರಾಜ್ಯಾದಾಯಕ್ಕಾಗಿ ತೆರಿಗೆಯನ್ನವಲಂಬಿಸುವುದು ಮಾನವ ಇತಿಹಾಸದಲ್ಲಿ ಬಹಳ ತಡವಾಗಿಯೇ ಆರಂಭವಾಯಿತು. ಅನೇಕ ಶತಮಾನಗಳವರೆಗೆ ರಾಜನಿಗೆ ಸೇರಿದ ಭೂಮಿಕಾಣಿ ರಾಜ್ಯಾದಾಯದ ಪ್ರಮುಖ ಮೂಲವಾಗಿತ್ತು. ಅನಂತರ ತೆರಿಗೆ ವಿಧಿಸುವುದು ಆರಂಭವಾಯಿತು. ಪ್ರಾಚೀನ ರೋಮ್ ಮತ್ತು ಗ್ರೀಸ್‍ನಲ್ಲಿ ಗಣಿಗಳಿಂದ ಬರುತ್ತಿದ್ದ ಆದಾಯ, ಯುದ್ಧದಲ್ಲಿ ಸೋತವರು ಕೊಡುತ್ತಿದ್ದ ಕಪ್ಪ ಮತ್ತು ಶ್ರೀಮಂತ ಪ್ರಜೆಗಳು ನೀಡುತ್ತಿದ್ದ ಕೊಡುಗೆಗಳಷ್ಟೇ ಅಲ್ಲದೆ ವ್ಯಾಪಾರ ಮತ್ತು ಅನುಭೋಗಗಳ ಮೇಲಿನ ತೆರಿಗೆಗಳಿಂದ ರಾಜ್ಯಕೋಶ ತುಂಬುತ್ತಿತ್ತು. ತಲೆಗಂದಾಯ ಮತ್ತು ಉತ್ತರಾಧಿಕಾರ ತೆರಿಗೆಗಳ ಹೊರತಾಗಿ ಪ್ರತ್ಯಕ್ಷ ತೆರಿಗೆ ಪ್ರಾಚೀನ ರೋಮ್‍ನಲ್ಲಿ ಅಪರಿಚಿತವಾಗಿತ್ತು. ಊಳಿಗಮಾನ್ಯ ಪದ್ಧತಿ ಪ್ರಚಲಿತವಿದ್ದ ಮಧ್ಯಯುಗದಲ್ಲಿ ತೆರಿಗೆಗಳಿಗೆ ಪ್ರಾಮುಖ್ಯವಿರಲಿಲ್ಲ. ಗೇಣಿಯ ರೂಪದಲ್ಲಿ ರಾಜ್ಯಾದಾಯ ದೊರಕುತ್ತಿತ್ತು. ಊಳಿಗಮಾನ್ಯಪದ್ಧತಿ ಅವನತಿ ಹೊಂದಿದಂತೆ ರಾಜ್ಯಾದಾಯಕ್ಕೆ ತೆರಿಗೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿ, ತೆರಿಗೆಗಳಿಗೆ ಹೆಚ್ಚು ಪ್ರಾಮುಖ್ಯ ನೀಡುವುದು ಆರಂಭವಾಯಿತು. ಮಧ್ಯಯುಗದಲ್ಲಿ ಬ್ರಿಟನ್ ಮತ್ತು ಫ್ರಾನ್ಸ್‍ಗಳಲ್ಲಿ ರಾಜ್ಯಾದಾಯಕ್ಕಾಗಿ ಭೂಕಂದಾಯವನ್ನು ಅವಲಂಬಿಸುವುದು ಹೆಚ್ಚಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಭೂಮಿ, ಮನೆಗಳು, ವೈಯಕ್ತಿಕ ಆಸ್ತಿಗಳನ್ನೊಳಗೊಂಡ ಸ್ವತ್ತಿನ ತೆರಿಗೆಯನ್ನು ಜಾರಿಗೆ ತರಲಾಯಿತು. ಇದು ಬ್ರಿಟಿಷ್ ಭೂ ತೆರಿಗೆಯ ಒಂದು ವಿಸ್ತøತ ಮಾದರಿಯಾಗಿತ್ತು. ಹಲವಾರು ದೇಶಗಳಲ್ಲಿ 14 - 19 ನೆಯ ಶತಮಾನಗಳಲ್ಲಿ ವಾಣಿಜ್ಯ ಅಭಿವೃದ್ಧಿಯಾದಂತೆ ಆಮದು ಮತ್ತು ರಫ್ತು ಸುಂಕಗಳು ಮತ್ತು ಅಬ್ಕಾರಿ ಸುಂಕ ಪ್ರಾಮುಖ್ಯ ಪಡೆದವು. ಅಂತೆಯೇ ತಲೆಗಂದಾಯವೂ ಪ್ರಾಮುಖ್ಯ ಪಡೆಯಿತು. ಬ್ರಿಟನ್ 1796 ರಲ್ಲಿ ಸ್ವತ್ತು ವರ್ಗಾವಣೆ ತೆರಿಗೆಯನ್ನೂ 1798 ರಲ್ಲಿ ವರಮಾನ ತೆರಿಗೆಯನ್ನೂ ಜಾರಿಗೆ ತಂದಿತು. 20 ನೆಯ ಶತಮಾನದ ಮೊದಲ ಅರ್ಧ ಭಾಗದಲ್ಲಿ ವರಮಾನ ಮತ್ತು ಸ್ವತ್ತುಗಳ ಮೇಲಿನ ತೆರಿಗೆಗಳಂಥ ಪ್ರತ್ಯಕ್ಷ ತೆರಿಗೆಗಳನ್ನು ಹೆಚ್ಚುಹೆಚ್ಚಾಗಿ ಬ್ರಿಟನ್ ಅವಲಂಬಿಸಿತು. ಅಮೆರಿಕ ಸಂಯುಕ್ತಸಂಸ್ಥಾನ ಒಂದನೆಯ ಮಹಾಯುದ್ಧದ ಕಾಲದವರೆಗೆ ಆಸ್ತಿ ತೆರಿಗೆಯನ್ನೇ ಪ್ರಮುಖವಾಗಿ ಅವಲಂಬಿಸಿತ್ತು. ಅನಂತರ, ಎಂದರೆ ಒಂದನೆಯ ಮಹಾಯುದ್ಧ ಕಾಲದಲ್ಲಿ ಮತ್ತು ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ನಡುವಣ ಕಾಲದಲ್ಲಿ ಅದು ವೈಯಕ್ತಿಕ ವರಮಾನ ತೆರಿಗೆ ಮುಂತಾದ ಪ್ರತ್ಯಕ್ಷ ತೆರಿಗೆಗಳನ್ನು ಜಾರಿಗೆ ಕೊಟ್ಟಿತಲ್ಲದೆ ಅಬ್ಕಾರಿ ಸುಂಕದ ವ್ಯಾಪ್ತಿಯನ್ನು ಹೆಚ್ಚಿಸಿತು ಮತ್ತು ಸಾಮಾಜಿಕಾ ಭದ್ರತಾ ತೆರಿಗೆಗಳನ್ನು ಜಾರಿಗೆ ತಂದಿತು.

ಭಾರತದಲ್ಲಿ : ಭಾರತದಲ್ಲಿ ವೇದಗಳ ಕಾಲದಷ್ಟು ಹಿಂದೆಯೇ ತೆರಿಗೆ ವಿಧಿಸುವ ಪದ್ಧತಿ ಜಾರಿಯಲ್ಲಿತ್ತು. ಋಗ್ವೇದಸಂಹಿತೆಯಲ್ಲಿ ಹೇಳಿರುವಂತೆ, ರಾಜನಿಗೆ ಪ್ರಜೆಗಳು ಮೊದಲು ಸ್ವಯಂಪ್ರೇರಣೆಯಿಂದಾಗಿ ಪಾವತಿ ಮಾಡುತ್ತಿದ್ದು ಅನಂತರ ಕಡ್ಡಾಯವಾಗಿ ಪಾವತಿ ಮಾಡುವುದು ಆರಂಭವಾಯಿತು. ವ್ಯವಸಾಯೋತ್ಪನ್ನದ ಒಂದು ಭಾಗವನ್ನು ರಾಜನಿಗೆ ತೆರಿಗೆಯಾಗಿ ಒಪ್ಪಿಸುತ್ತಿದ್ದಿರಬೇಕೆಂಬ ಸಂಗತಿ ಋಗ್ವೇದ ಸಂಹಿತೆಯಿಂದ ತಿಳಿದುಬರುತ್ತದೆ. ಈ ರೀತಿ ಪ್ರಜೆಗಳಿಂದ ರಾಜನಿಗೆ ಸಲ್ಲುತ್ತಿದ್ದ ತೆರಿಗೆಯನ್ನು ಬಲಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದಲ್ಲದೆ ಯುದ್ಧದಲ್ಲಿ ಸೋತವರು ಸಲ್ಲಿಸುತ್ತಿದ್ದ ಕಪ್ಪ ರಾಜ್ಯಾದಾಯದ ಒಂದು ಮುಖ್ಯ ಮೂಲವಾಗಿತ್ತು. ರಾಜ ವ್ಯವಸಾಯೋತ್ಪನ್ನದ ಒಂದು ಪಾಲನ್ನು ಆದಾಯವಾಗಿ ಪಡೆಯುತ್ತಿದ್ದನೆಂದು ಅಥರ್ವಣ ವೇದ ಸಹ ತಿಳಿಸುತ್ತದೆ. ರಾಜ ಒದಗಿಸುವ ರಕ್ಷಣೆಗೆ ಪ್ರತಿಯಾಗಿ ಪ್ರಜೆಗಳು ತೆರಿಗೆ ಸಲ್ಲಿಸಬೇಕೆಂಬ ಭಾವನೆ ಆ ಕಾಲದಲ್ಲಿತ್ತು. 17 ಮತ್ತು 18 ನೆಯ ಶತಮಾನಗಳಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿದ್ದ, ತೆರಿಗೆ ಕೊಡುವುದು ಸರ್ಕಾರ ಒದಗಿಸುವ ಸೇವೆಗೆ ಪ್ರತಿಯಾಗಿ ಎಂಬ ಭಾವನೆಗೆ ಇದು ಸರಿಸಮನಾಗಿದೆ. ಭಾರತದ ತೆರಿಗೆ ಪದ್ಧತಿಯ ವಿಕಾಸ ಕೌಟಿಲ್ಯನ ಅರ್ಥಶಾಸ್ತ್ರದಿಂದಲೂ ತಿಳಿಯುತ್ತದೆ. ಭೂ ಉತ್ಪನ್ನದ ಆರನೆಯ ಒಂದು ಭಾಗವನ್ನು ಅವನ ಕಾಲದಲ್ಲಿ ಪ್ರಜೆಗಳು ರಾಜನಿಗೆ ಒಪ್ಪಿಸುತ್ತಿದ್ದರು. ಅಷ್ಟೇ ಅಲ್ಲದೆ ರಾಜ್ಯದ ವೆಚ್ಚಕ್ಕಾಗಿ ಪ್ರಜೆಗಳು ನಗದಾಗಿ, ದನಕರುಗಳ ರೂಪದಲ್ಲಿ ಮತ್ತು ಕಚ್ಚಾಸಾಮಗ್ರಿಗಳ ರೂಪದಲ್ಲಿ ಸಲ್ಲಿಸುತ್ತಿದ್ದರು. ಕಾಲದಿಂದ ಕಾಲಕ್ಕೆ ತೆರಿಗೆ ಪದ್ಧತಿ ಬದಲಾವಣೆ ಹೊಂದುತ್ತಿದ್ದರೂ ಒಟ್ಟಿನಲ್ಲಿ ಬ್ರಿಟಿಷರ ಕಾಲಕ್ಕೆ ಹಿಂದಿನ ಭಾರತದಲ್ಲಿ ಇತರ ರೀತಿಯ ಕೆಲವು ತೆರಿಗೆಗಳು ಇದ್ದುವಾದರೂ ಭೂಕಂದಾಯ ಅತ್ಯಂತ ಮುಖ್ಯವಾದ ಆದಾಯಮೂಲವಾಗಿತ್ತು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭ ಕಾಲದಲ್ಲಿ ಹಲವು ರೀತಿಯ ಸಣ್ಣ ಸಣ್ಣ ತೆರಿಗೆಗಳಿದ್ದವು. ಕ್ರಮೇಣ ಅವನ್ನು ತೆಗೆದುಹಾಕಿ ಭೂಕಂದಾಯವೊಂದನ್ನೇ ಅವಲಂಬಿಸುವ ಪ್ರಯತ್ನ ಸ್ವಲ್ಪ ಕಾಲ ನಡೆಯಿತು. ಆದರೆ 1857 ರ ಬಂಡಾಯದ ಸಂದರ್ಭದಲ್ಲಿ ರಾಜ್ಯಾದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹಲವು ತೆರಿಗೆಗಳನ್ನು ವಿಧಿಸುವುದು ಪುನರಾರಂಭವಾಯಿತು. 1860 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ವರಮಾನ ತೆರಿಗೆಯನ್ನು ಜಾರಿಗೆ ತರಲಾಯಿತು. ಆದರೆ ಇದು ಅರೆ ಮನಸ್ಸಿನಿಂದ ಕೈಗೊಂಡ ಕ್ರಮ. ಬ್ರಿಟಿಷ್ ಮಾದರಿಯ ವರಮಾನ ತೆರಿಗೆ ಭಾರತದ ಪರಿಸ್ಥಿತಿಗೆ ಸರಿಹೊಂದುವುದಿಲ್ಲವೆಂಬುದು ಅದಕ್ಕೆ ಒಂದು ಕಾರಣ. 1866 ರಲ್ಲಿ ಎಲ್ಲ ಶಂಕೆಯನ್ನು ಬದಿಗೊತ್ತಿ ತೆರಿಗೆ ಅಧಿನಿಯಮದಲ್ಲಿ ವರಮಾನ ತೆರಿಗೆಗೆ ಶಾಶ್ವತ ಸ್ಥಾನವನ್ನು ಕಲ್ಪಿಸಲಾಯಿತು. ಭಾರತದ ತೆರಿಗೆ ಪದ್ಧತಿಯ ವಿಕಾಸದಲ್ಲಿ ಇದು ಪ್ರಮುಖ ಘಟ್ಟ. ಅಲ್ಲಿಂದ ಮುಂದೆ ತೆರಿಗೆ ಪದ್ಧತಿ ಕ್ರಮಬದ್ಧವಾಗಿ ಬೆಳೆಯತೊಡಗಿತು. ಕಾಲಕ್ರಮದಲ್ಲಿ ಕಂಪನಿಗಳ ವರಮಾನದ ಮೇಲೆ ಪ್ರತ್ಯೇಕವಾಗಿ ತೆರಿಗೆ ವಿಧಿಸುವುದು ಆರಂಭವಾಗಿ ಕಾರ್ಪೋರೇಷನ್ ತೆರಿಗೆ ಜಾರಿಗೆ ಬಂತು. ಸ್ವಾತಂತ್ರ್ಯಾನಂತರ ಮತ್ತಷ್ಟು ಹೊಸ ಪ್ರತ್ಯಕ್ಷ ತೆರಿಗೆಗಳು ಜಾರಿಗೆ ಬಂದುವು. ಸಂಪತ್ತು ತೆರಿಗೆ ಮತ್ತು ಖರ್ಚು ತೆರಿಗೆಯನ್ನು 1957 ರಲ್ಲಿ ಜಾರಿಗೆ ಕೊಡಲಾಯಿತು. ಖರ್ಚು ತೆರಿಗೆಯನ್ನು ಹಿಂದೆಯೇ ತಿಳಿಸಿರುವಂತೆ ಅನಂತರ ಕೈಬಿಡಲಾಯಿತು. ಕೊಡುಗೆ ತೆರಿಗೆಯನ್ನು 1958 ರಲ್ಲಿ ಜಾರಿಗೆ ತರಲಾಯಿತು. ಅಲ್ಲದೆ ಸ್ವಾತಂತ್ರ್ಯಾನಂತರದ ಕಾಲದಲ್ಲಿ ಪರೋಕ್ಷ ತೆರಿಗೆಗಳಾದ ಆಮದು ಮತ್ತು ರಫ್ತು ಸುಂಕ, ಅಬ್ಕಾರಿ ಸುಂಕ, ವ್ಯಾಪಾರಿ ತೆರಿಗೆ ಮುಂತಾದವುಗಳ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಒಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಕ್ರಮಗಳಿಗೆ ಸಂಪನ್ಮೂಲಗಳನ್ನು ರೂಢಿಸುವ ಮತ್ತು ಆರ್ಥಿಕ ಅಸಮತೆಯನ್ನು ಕಡಿಮೆಮಾಡುವ ಉದ್ದೇಶದಿಂದ ತೆರಿಗೆಗಳನ್ನು ವ್ಯಾಪಕವಾಗಿ ವಿಧಿಸಲಾಗಿದೆ. ಆದರೆ ತೆರಿಗೆಗಳು ಎಷ್ಟರಮಟ್ಟಿಗೆ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಒದಗಿಸಬಲ್ಲವೆಂಬುದು ರಾಷ್ಟ್ರದ ತೆರಿಗೆ ಹೊರುವ ಸಾಮಥ್ರ್ಯವನ್ನು ಅವಲಂಬಿಸಿರುತ್ತದೆ.

ತೆರಿಗೆ ಪಾವತಿ ಸಾಮಥ್ರ್ಯ : ಸರ್ಕಾರದ ಖರ್ಚುಗಳನ್ನು ನಿರ್ವಹಿಸಲು ಮತ್ತು ಇತರ ಆರ್ಥಿಕ ಉದ್ದೇಶಗಳನ್ನು ಈಡೇರಿಸಲು ಜನರು ಎಷ್ಟು ತೆರಿಗೆ ಕೊಡಬಲ್ಲರು ಎಂಬುದನ್ನು ನಿರ್ಧರಿಸುವುದು ಸಾರ್ವಜನಿಕ ಹಣಕಾಸಿನ ಸಮಸ್ಯೆಗಳಿಗೆ ಬಹು ಮುಖ್ಯವಾದ್ದು. ಜನರ ತೆರಿಗೆ ಪಾವತಿ ಸಾಮಥ್ರ್ಯ ಎಷ್ಟು ಮತ್ತು ಯಾವ ಮಟ್ಟದವರೆಗೆ ತೆರಿಗೆಯ ಭಾರವನ್ನು ಹೆಚ್ಚಿಸಬಹುದು ಎಂಬವುಗಳ ನಿರ್ಣಯ ತುಂಬ ಜಟಿಲವಾದ್ದು. ಕರಾರುವಾಕ್ಕಾಗಿ ಅವುಗಳ ನಿರ್ಣಯ ಸಾಧ್ಯ ವಿಲ್ಲದ್ದರಿಂದ ತೆರಿಗೆ ಪಾವತಿ ಸಾಮಥ್ರ್ಯ ಎಂಬ ಪರಿಕಲ್ಪನೆಯೇ ಅನಾವಶ್ಯಕವಾದುದೆಂದು ಕೆಲವರ ಅಭಿಪ್ರಾಯ.

ತೆರಿಗೆ ಪಾವತಿ ಸಾಮಥ್ರ್ಯ ಎಂಬುದನ್ನು ಎರಡು ಅರ್ಥಗಳಲ್ಲಿ ಉಪಯೋಗಿಸಬಹುದು. 1 ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ಮತ್ತು 2 ಸಾಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ. ರಾಷ್ಟ್ರದ ಆರ್ಥಿಕ ಪರಿಸ್ಥಿತಿಯನ್ನು ಅಸ್ತವ್ಯಸ್ತಗೊಳಿಸದೆ ಮತ್ತು ಜನರು ಅಸುಖದ ಹಾಗೂ ದೀನ ಜೀವನ ನಡೆಸುವಂತೆ ಮಾಡದೆ ಅವರಿಂದ ತೆಗೆದುಕೊಳ್ಳಬಹುದಾದ ತೆರಿಗೆಯ ಗರಿಷ್ಠ ಮೊತ್ತ ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯವನ್ನು ಸೂಚಿಸುತ್ತದೆ. ಹಾಗಾದರೆ ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯದ ಪರಿಮಿತಿ ಯಾವುದು ? ತೆರಿಗೆಯ ಮಟ್ಟ ಆ ಪರಿಮಿತಿಯನ್ನು ಮೀರಿದೆ ಎಂದು ಹೇಳುವುದು ಯಾವಾಗ ? ತೆರಿಗೆದಾರನನ್ನು ಸಂಪೂರ್ಣವಾಗಿ ಹಿಂಡಿಹಾಕುವವರೆಗೆ, ಅಂದರೆ ಅವನ ಆದಾಯವನ್ನೆಲ್ಲ ಕೊನೆಯ ಪೈಸದವರೆಗೆ ತೆರಿಗೆಯ ರೂಪದಲ್ಲಿ ಸರ್ಕಾರ ತೆಗೆದುಕೊಂಡು ಬಿಡುವವರೆಗೆ ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯವಿದೆ ಎಂದು ಹೇಳುವುದುಂಟು. ಆ ಮಟ್ಟದವರೆಗೆ ತೆರಿಗೆ ವಿಧಿಸಿದಾಗ ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ರಾಷ್ಟ್ರದ ಒಟ್ಟು ವರಮಾನಕ್ಕೆ ಸಮನೆಂದು ಹೇಳಬಹುದು. ಆದರೆ ವಾಸ್ತವ ಪ್ರಪಂಚದಲ್ಲಿ, ಸರ್ಕಾರವೇ ಜನರ ಸರ್ವ ಅಗತ್ಯಗಳನ್ನೂ ಪೂರ್ಣವಾಗಿ ಒದಗಿಸುವ ಜವಾಬ್ದಾರಿ ಹೊರದೆ ತೆರಿಗೆಯ ಹೊರೆಯನ್ನು ಆ ಮಟ್ಟಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲವಾದ್ದರಿಂದ, ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ಒಂದು ಅನಾವಶ್ಯಕ ಮತ್ತು ಕೇವಲ ಭ್ರಾಮಕ ಭಾವನೆ ಎಂಬ ಅಭಿಪ್ರಾಯವಿದೆ. ಇದನ್ನು ಅರ್ಥಪೂರ್ಣ ಪರಿಕಲ್ಪನೆಯನ್ನಾಗಿ ಮಾಡಬೇಕಾದರೆ ಇದು ತೆರಿಗೆಯನ್ನು ಯಾವ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಬಹುದೆಂಬುದನ್ನು ಸೂಚಿಸುವಂತೆ ಮಾಡಬೇಕು. ತೆರಿಗೆ ಪಾವತಿಯಿಂದ ಮಾಡಲಾದ ತ್ಯಾಗ, ಸಾರ್ವಜನಿಕ ವೆಚ್ಚದಿಂದ ದೊರಕುವ ಪ್ರತಿಫಲ ಇವೆರಡೂ ಯಾವ ಪ್ರಮಾಣದ ತೆರಿಗೆಯಲ್ಲಿ ಸಮನಾಗಿರುತ್ತವೆಯೋ ಆ ಪ್ರಮಾಣವೇ ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯಕ್ಕೆ ಸಮನೆಂದು ಭಾವಿಸುವುದಾದರೆ, ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ಒಂದು ಉಪಯುಕ್ತ ಪರಿಕಲ್ಪನೆಯಾಗುತ್ತದೆ. ಪ್ರತಿಫಲಕ್ಕಿಂತ ತ್ಯಾಗ ಹೆಚ್ಚಿನದಾಗಿದ್ದರೆ, ಗರಿಷ್ಠ ತೆರಿಗೆ ಪಾವತಿ ಸಾಮಥ್ರ್ಯವನ್ನು ತೆರಿಗೆ ಮೀರಿದಂತಾಗುತ್ತದೆ.

ನಿರಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ಕೇವಲ ಭ್ರಾಮಕ ಭಾವನೆಯಾದರೆ ಸಾಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ಅರ್ಥಪೂರ್ಣವೂ ಉಪಯುಕ್ತವೂ ಆದ ಪರಿಕಲ್ಪನೆ ಎಂಬುದು ಕೆಲವು ತಜ್ಞರ ಅಭಿಪ್ರಾಯ. ಸಾಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯ ಸರ್ಕಾರದ ಒಟ್ಟು ಖರ್ಚನ್ನು ತೆರಿಗೆ ರೂಪದಲ್ಲಿ ವಿವಿಧ ಜನರು ಅಥವಾ ವಿವಿಧ ವರ್ಗಗಳ ಜನರು ಹೇಗೆ ಹಂಚಕೊಳ್ಳುತ್ತಾರೆಂಬುದಕ್ಕೆ ಸಂಬಂಧಿಸಿದ್ದು. ಒಟ್ಟು ಖರ್ಚನ್ನು ಅದರಿಂದ ಪ್ರಯೋಜನ ಪಡೆಯುವವರೆಲ್ಲರೂ ಯಾವ ಪ್ರಮಾಣದಲ್ಲಿ ಹಂಚಿಕೊಳ್ಳಬೇಕೆಂಬುದನ್ನು ಇದು ಸೂಚಿಸುತ್ತದೆ. ಒಬ್ಬ ಅಥವಾ ಒಂದು ವರ್ಗ ಸಾಮಾನ್ಯ ಖರ್ಚು ನಿರ್ವಹಣೆಗೆ ತಾನು ಕೊಡಬೇಕಾದ ಪಾಲಿಗಿಂತ ಮೇಲ್ಪಟ್ಟು ಕೊಟ್ಟಾಗ ಸಾಪೇಕ್ಷ ತೆರಿಗೆ ಪಾವತಿ ಸಾಮಥ್ರ್ಯವನ್ನು ಮೀರಿದಂತಾಗುತ್ತದೆ.

ಒಂದು ರಾಷ್ಟ್ರದ ತೆರಿಗೆ ಪಾವತಿ ಸಾಮಥ್ರ್ಯವನ್ನು ಕೆಲವು ಅಂಶಗಳು ನಿರ್ಧರಿಸುತ್ತವೆ. ಮೊದಲನೆಯದಾಗಿ, ರಾಷ್ಟ್ರೀಯ ವರಮಾನದ ಮಟ್ಟ, ಅದರ ಹಂಚಿಕೆ ಮತ್ತು ಅದು ಎಷ್ಟರಮಟ್ಟಿಗೆ ಸ್ಥಿರವಾಗಿದೆ ಎಂಬ ಅಂಶಗಳು ತೆರಿಗೆ ಹೊರುವ ಸಾಮಥ್ರ್ಯದ ನಿರ್ಧಾರಗಳು. ರಾಷ್ಟ್ರೀಯ ವರಮಾನ ಹೆಚ್ಚಾಗಿರುವ ದೇಶಗಳ ತೆರಿಗೆ ಪಾವತಿ ಸಾಮಥ್ರ್ಯವೂ ಹೆಚ್ಚಾಗಿರುತ್ತದೆ. ಹಿಂದುಳಿದ ದೇಶಗಳಲ್ಲಿ ತೆರಿಗೆಯಿಂದ ರಾಜಸ್ವವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗದಿರುವುದಕ್ಕೆ ಅವುಗಳ ರಾಷ್ಟ್ರೀಯ ವರಮಾನದ ಮಟ್ಟ ಕಡಿಮೆ ಇರುವುದೇ ಕಾರಣ. ರಾಷ್ಟ್ರೀಯ ವರಮಾನದ ಹಂಚಿಕೆಗಳಲ್ಲಿ ಹೆಚ್ಚಿನ ಅಸಮತೆ ಇರುವ ರಾಷ್ಟ್ರಗಳಲ್ಲಿ ತೆರಿಗೆ ಪಾವತಿ ಸಾಮಥ್ರ್ಯ ಹೆಚ್ಚಾಗಿರುತ್ತದೆ. ಅಸಮತೆ ಇರುವಾಗ ಹೆಚ್ಚು ವರಮಾನ ಪಡೆಯುವ ವರ್ಗಗಳ ಮೇಲೆ ತೆರಿಗೆನ್ನು ಹೆಚ್ಚಿಸಿ ರಾಜಸ್ವವನ್ನು ಹೆಚ್ಚಿಸಿಕೊಳ್ಳಬಹುದು. ಅಂತೆಯೇ ರಾಷ್ಟ್ರೀಯ ವರಮಾನದಲ್ಲಿ ಹೆಚ್ಚು ಸ್ಥಿರತೆ ಇದ್ದರೆ, ಅಂದರೆ ರಾಷ್ಟ್ರೀಯ ವರಮಾನದಲ್ಲಿ ಗಮನಾರ್ಹ ಏರಿಳಿತಗಳಿಲ್ಲದಿದ್ದರೆ ತೆರಿಗೆ ಪಾವತಿ ಸಾಮಥ್ರ್ಯ ಹೆಚ್ಚಾಗಿರುತ್ತದೆ. ಜನರ ವರಮಾನದಲ್ಲಿ ಏರುಪೇರುಗಳಿಲ್ಲದಿದ್ದರೆ ಸರ್ಕಾರಕ್ಕೆ ಬರುವ ಆದಾಯದಲ್ಲೂ ಸ್ಥಿರತೆ ಇರುತ್ತದೆ. ಎರಡನೆಯದಾಗಿ, ರಾಷ್ಟ್ರದ ಜನಸಂಖ್ಯೆಯೂ ತೆರಿಗೆ ಪಾವತಿ ಸಾಮಥ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿ ಜನಸಂಖ್ಯೆ ಇರುವ ದೇಶಗಳಲ್ಲಿ ತಲಾ ವರಮಾನ ಕಡಿಮೆ ಇದ್ದ, ತೆರಿಗೆ ಪಾವತಿ ಸಾಮಥ್ರ್ಯವೂ ಕಡಿಮೆ ಇರುತ್ತದೆ. ಮೂರನೆಯದಾಗಿ, ಸರ್ಕಾರ ಅನುಸರಿಸುವ ತೆರಿಗೆ ಪದ್ಧತಿಯೂ ರಾಷ್ಟ್ರದ ತೆರಿಗೆ ಪಾವತಿ ಸಾಮಥ್ರ್ಯವನ್ನು ನಿರ್ಧರಿಸುತ್ತದೆ. ಹೆಚ್ಚಿನ ವರಮಾನ ಪಡೆಯುವುದರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಆರೋಹಿ ತೆರಿಗೆ ಪದ್ಧತಿಯನ್ನು ಅನುಸರಿಸಿದಾಗ ಜನರಿಂದ ಹೆಚ್ಚಿನ ಹಣವನ್ನು ಸರ್ಕಾರ ಪಡೆಯುವುದು ಸಾಧ್ಯವಾಗುತ್ತದೆ. (ಬಿ.ಎಸ್.ಎಸ್.ಎ.)

ತೆರಿಗೆ ನಿಯಮಗಳು : ತೆರಿಗೆಯನ್ನು ವಿಧಿಸುವಾಗ ಹಿಂದಿನಿಂದಲೂ ಕೆಲವು ನಿಯಮಗಳನ್ನು ಅನುಸರಿಸುತ್ತ ಬರಲಾಗಿದೆ : ತೆರಿಗೆ ಪದ್ಧತಿಯನ್ನು ಸಮಷ್ಟಿ ದೃಷ್ಟಿಯಿಂದ ನೋಡಬೇಕು. ತೆರಿಗೆಯ ನಿಯಮಗಳನ್ನು ಮೂರು ದೃಷ್ಟಿಯಿಂದ ನೋಡಬೇಕಾಗುತ್ತದೆ : 1 ತೆರಿಗೆ ಕೊಡುವವನ ದೃಷ್ಟಿ, 2 ತೆರಿಗೆಯನ್ನು ವಿಧಿಸುವ ಸರ್ಕಾರದ ದೃಷ್ಟಿ ಮತ್ತು 3 ಸಮಾಜದ ದೃಷ್ಟಿ. ಸರ್ಕಾರ ತೆರಿಗೆಗಳನ್ನು ವಿಧಿಸುವಾಗ ಆಗಿನ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಈ ಮೂರು ದೃಷ್ಟಿಗಳನ್ನೂ ಸಮನ್ವಯ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ತೆರಿಗೆ ಕೊಡುವವನ ದೃಷ್ಟಿಯಿಂದ ಅವನ ತೆರಿಗೆ ಪಾವತಿ ಸಾಮಥ್ರ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದನ್ನು ಅಳೆಯುವುದು ಹೇಗೆ ಎಂಬುದು ಪ್ರಶ್ನೆ. ತೆರಿಗೆ ಕೊಡುವವನ ಆದಾಯ, ಆಸ್ತಿ, ಖರ್ಚು, ತ್ಯಾಗ, ಸಾರ್ವಜನಿಕ ವೆಚ್ಚದಿಂದ ಆಗಬಹುದಾದ ಅನುಕೂಲತೆ - ಇವೆಲ್ಲವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ತೆರಿಗೆ ವಸೂಲಿನಲ್ಲಿ ಮಿತವ್ಯಯ, ತೆರಿಗೆ ಕಾರ್ಯತಃ ಸಾಧುವೆ, ತೆರಿಗೆ ವಿಧಿಸುವ ಹಕ್ಕು ಆ ಸರ್ಕಾರದ ಅಥವಾ ಸಾರ್ವಜನಿಕ ಅಧಿಕಾರದ ವ್ಯಾಪ್ತಿಯಲ್ಲಿದೆಯೆ, ತೆರಿಗೆಯನ್ನು ಸುಲಭವಾಗಿ ತಪ್ಪಿಸಿಕೊಳ್ಳಲು ಅಥವಾ ಮೋಸ ಮಾಡಲು ಸಾಧ್ಯವೆ, ತೆರಿಗೆಯಿಂದಾಗಿ ದೀರ್ಘಾವಧಿಯಲ್ಲಿ ತೆರಿಗೆಯ ಮೂಲವೇ ಹಾಳಾಗುವ ಅಪಾಯವಿದೆಯೆ, ತೆರಿಗೆ ರಾಜಕೀಯ ಸಮಸ್ಯೆಗಳನ್ನೆಬ್ಬಿಸಿ ದೇಶದಲ್ಲಿ ಅಶಾಂತಿಯನ್ನುಂಟು ಮಾಡುತ್ತದೆಯೆ ಮತ್ತು ಅದರಿಂದ ಅಂತರರಾಷ್ಟ್ರೀಯ ಸಮಸ್ಯೆಗಳು ಸಂಭವಿಸುವುವೆ ಎಂಬಿವು ತೆರಿಗೆ ಎತ್ತುವ ಸರ್ಕಾರದ ದೃಷ್ಟಿಯಿಂದ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು. ಉತ್ಪಾದನೆ, ವಿನಿಮಯ, ಹಂಚಿಕೆ, ಅನುಭೋಗ, ಬಂಡವಾಳ ಶೇಖರಣೆ - ಇವುಗಳ ಮೇಲೆ ತೆರಿಗೆಯಿಂದ ಆಗುವ ಆರ್ಥಿಕ ಪರಿಣಾಮವನ್ನು ನೋಡಬೇಕು. ಇದು ಸಾಮಾಜಿಕ ದೃಷ್ಟಿ.

ತೆರಿಗೆ ಕೊಡುವ ವ್ಯಕ್ತಿ, ಸರ್ಕಾರ ಮತ್ತು ಸಮಾಜದ ದೃಷ್ಟಿಯಿಂದ ಸಮನ್ವಯದ ಜೊತೆಗೆ ತೆರಿಗೆಯ ಉದ್ದೇಶವನ್ನೂ ಮರೆಯಲಾಗುವುದಿಲ್ಲ. ತೆರಿಗೆಯ ಉದ್ದೇಶ ಸರ್ಕಾರಕ್ಕೆ ಹಣವನ್ನು ಒದಗಿಸುವುದು ಮಾತ್ರ ಎಂಬ ಭಾವನೆ ಹಿಂದೆ ಇತ್ತು. ತೆರಿಗೆಯಲ್ಲಿ ಆದಾಯ ಮುಖ್ಯವಾದರೂ ಅದನ್ನು ಒದಗಿಸುವುದೇ ತೆರಿಗೆಯ ಮುಖ್ಯ ಉದ್ದೇಶವಲ್ಲದಿರಬಹುದು. ಈಗ ತೆರಿಗೆಯನ್ನು ಸಮಾಜದ ಆರ್ಥಿಕತೆಯ ದೃಷ್ಟಿಯಿಂದಲೂ ನೋಡಬೇಕೆಂದು ಒಪ್ಪಿಕೊಳ್ಳಲಾಗಿದೆ. ಈ ಉದ್ದೇಶದ ಪ್ರಕಾರ ತೆರಿಗೆಯನ್ನು ಸಮಾಜದ ಆರ್ಥಿಕ ಜೀವನವನ್ನು ನಿಯಂತ್ರಿಸಲು ಒಂದು ಸಾಧನವನ್ನಾಗಿ ಮಾಡಿಕೊಳ್ಳಲಾಗಿದೆ. ಉದಾಹರಣೆಗೆ, ತೆರಿಗೆಗಳು ಸಮಾಜದಲ್ಲಿ ಅನುಭೋಗವನ್ನು ನಿಯಂತ್ರಿಸುವ ಉದ್ದೇಶ ಹೊಂದಿರಬಹುದು. ಹಾನಿಕರವಾದ ಮಾದಕದ್ರವ್ಯಗಳ ಮೇಲೆ ತೆರಿಗೆ ವಿಧಿಸುವುದರಿಂದ ಅವುಗಳ ಅನುಭೋಗವನ್ನು ಕಡಿಮೆ ಮಾಡಿ ಸಮಾಜದ ಹಿತವನ್ನು ಸಾಧಿಸಬಹುದು. ತೆರಿಗೆಯನ್ನು ರಾಷ್ಟ್ರೀಯ ವರಮಾನದ ಮಟ್ಟವನ್ನು ನಿಯಂತ್ರಿಸಲೂ ಉಪಯೋಗಿಸಲಾಗುತ್ತದೆ. ತೆರಿಗೆಯ ಮೂಲಕ ಸರ್ಕಾರಕ್ಕೆ ವರಮಾನದ ವರ್ಗಾವಣೆ ಆಗುವುದರಿಂದ ಖಾಸಗಿ ವಲಯದ ಅನುಭೋಗ, ಬಂಡವಾಳ ವಿನಿಯೋಜನೆ, ವರಮಾನದ ಮಟ್ಟ - ಇವುಗಳಲ್ಲಿ ವ್ಯತ್ಯಾಸವಾಗಿ ರಾಷ್ಟ್ರೀಯ ವರಮಾನ ಮಟ್ಟದಲ್ಲೂ ವ್ಯತ್ಯಾಸವಾಗಬಹುದು. ಈ ತೆರಿಗೆಯ ಮೂಲಕ ಖಾಸಗಿ ಅನುಭೋಗವನ್ನು ಕಡಿಮೆ ಮಾಡಿ ಬಂಡವಾಳ ವಿನಿಯೋಜನೆಯನ್ನು ಹೆಚ್ಚಿಸಬಹುದು. ಹಣದುಬ್ಬರದ ಪರಿಸ್ಥಿತಿಯನ್ನು ತಡೆಗಟ್ಟಲೂ ತೆರಿಗೆಯನ್ನು ಉಪಯೋಗಿಸಬಹುದು. ಒಂದು ದೇಶದ ರಾಷ್ಟ್ರೀಯ ವರಮಾನವನ್ನು ಸರಿಯಾದ ಮಟ್ಟದಲ್ಲಿರುವಂತೆ ಮಾಡಲು ಅದೊಂದು ಸಾಧನವಾಗಿ ಬಳಕೆಯಾಗಬಹುದು. ಕೊನೆಯದಾಗಿ, ಮಿಶ್ರ ಆರ್ಥಿಕ ವ್ಯವಸ್ಥೆಗಳನ್ನೊಳಗೊಂಡಿರುವ ಅಬಿವೃದ್ಧಿಶೀಲ ದೇಶಗಳಲ್ಲಿ ತೆರಿಗೆಯನ್ನು ಉತ್ಪಾದನೆಗೆ ಉತ್ತೇಜನಕಾರಿಯಾಗುವ ಸಾಧನವನ್ನಾಗಿ ಮಾಡಬಹುದು. ಆದ್ದರಿಂದ ತೆರಿಗೆಯ ನಿಯಮವನ್ನು ಚರ್ಚಿಸುವಾಗ ಈ ವಿಶಾಲವಾದ ಮತ್ತು ಬಹುಮುಖವಾದ ದೃಷ್ಟಿಯನ್ನೂ ಇಟ್ಟುಕೊಳ್ಳುವುದು ಅಗತ್ಯವಾಗುತ್ತದೆ.

ತೆರಿಗೆಯನ್ನು ವಿಧಿಸಲು ಕೆಲವು ಮುಖ್ಯ ನಿಯಮಗಳನ್ನು ಅರ್ಥಶಾಸ್ತ್ರದ ಪಿತಾಮಹನೆನಿಸಿದ ಆಡಮ್ ಸ್ಮಿತ್ (1723 - 90) ಬಹಳ ಹಿಂದೆಯೇ ನೀಡಿದ್ದಾನೆ. ಈ ನಿಯಮಗಳು ಬಹಳ ಹಳೆಯವಾದರೂ ಇವು ಬಹಳ ಸರಳವೆಂದು ಕೆಲವರು ಪರಿಗಣಿಸಿದ್ದರೂ ಇಂದಿಗೂ ಇವುಗಳ ಪ್ರಾಮುಖ್ಯ ಕುಗ್ಗಿಲ್ಲ. ಅನಂತರ ಬಂದ ಅರ್ಥಶಾಸ್ತ್ರಜ್ಞರು ಇವಕ್ಕೆ ಕೆಲವು ಹೊಸ ನಿಯಮಗಳನ್ನು ಸೇರಿಸಿದ್ದಾರೆ. ಹಳೆಯ ನಿಯಮಗಳಲ್ಲಿ ಯಾವುದು ಹೆಚ್ಚು ಪ್ರಾಮುಖ್ಯ ಪಡೆದಿದೆ ಎಂಬ ವಿಷಯವಾಗಿ ವಾದ ವಿವಾದಗಳೂ ನಡೆದಿವೆ. ಆದರೂ ಆಡಮ್ ಸ್ಮಿತ್ತನ ಆ ನಿಯಮಗಳು ಈಗಲೂ ಪ್ರಭಾವಶಾಲಿಗಳಾಗಿಯೇ ಉಳಿದಿವೆ.

ಆಡಮ್ ಸ್ಮಿತ್ ಪ್ರತಿಪಾದಿಸಿದ ನಾಲ್ಕು ನಿಯಮಗಳು ಇವು : 1 ತೆರಿಗೆಗಳು ಸಮನಾಗಿರಬೇಕು. 2 ತೆರಿಗೆಯಲ್ಲಿ ಅನುಕೂಲತೆ ಇರಬೇಕು. 3 ತೆರಿಗೆಗಳು ನಿಶ್ಚಿತವಾಗಿರಬೇಕು. 4 ತೆರಿಗೆ ವಸೂಲಿನಲ್ಲಿ ಮಿತವ್ಯಯವಿರಬೇಕು. ಈ ನಾಲ್ಕು ನಿಯಮಗಳಲ್ಲಿ ಮೊದಲನೆಯದು ತೆರಿಗೆಯ ತತ್ತ್ವಕ್ಕೆ ಸಂಬಂಧಪಟ್ಟ ಮುಖ್ಯವಾದ ನಿಯಮ. ಉಳಿದವು ತೆರಿಗೆಯ ಯಶಸ್ವೀ ಆಡಳಿತಕ್ಕೆ ಸಂಬಂಧಪಟ್ಟಂಥವು.

1 ಸಮಾನತೆ : ತೆರಿಗೆ ಕೊಡುವುದರಿಂದ ತೆರಿಗೆದಾರರು ತಮ್ಮ ವರಮಾನದಲ್ಲಿ ಸ್ವಲ್ಪ ಭಾಗವನ್ನು ಕಳೆದುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಅವರು ಅನುಭೋಗದಲ್ಲಿ ಕಡಿತ ಮಾಡಿಕೊಂಡಂತಾಗುತ್ತದೆ. ಇದು ತೆರಿಗೆದಾರರು ಮಾಡಬೇಕಾದ ತ್ಯಾಗ ; ಇದೇ ತೆರಿಗೆಯ ಹೊರೆ. ಇದು ಎಲ್ಲ ತೆರಿಗೆದಾರರ ಮೇಲೂ ಸಮನಾಗಿ ಬೀಳಬೇಕೆಂಬುದಾಗಿ ಆಡಮ್ ಸ್ಮಿತ್ ಹೇಳುತ್ತಾನೆ. ಇದೇ ಸಮಾನತೆಯ ನಿಯಮ. ಪ್ರತಿಯೊಂದು ದೇಶದ ಪ್ರಜೆಗಳೂ ಸರ್ಕಾರಕ್ಕೆ ಬೆಂಬಲವಾಗಿ, ತಂತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ - ಎಂದರೆ ಸರ್ಕಾರದ ರಕ್ಷಣೆಯ ಅಡಿಯಲ್ಲಿ ತಾವು ಅನುಭವಿಸುವ ವರಮಾನಕ್ಕೆ ಅನುಗುಣವಾಗಿ - ಸರ್ಕಾರಕ್ಕೆ ಧನಸಹಾಯ ಮಾಡಬೇಕು. ಎಂದರೆ ತನ್ನ ಸಾಮಥ್ರ್ಯಕ್ಕೆ ಅನುಸಾರವಾಗಿ ತೆರಿಗೆ ಸಲ್ಲಿಸಬೇಕು. ತೆರಿಗೆಗಳು ಸಮಾನವಾಗಿರಬೇಕೆಂದರೆ ಮುಖ್ಯ ತೆರಿಗೆಯ ಭಾರ ಅದನ್ನು ಪಾವತಿ ಮಾಡುವವರ ಸಾಮಥ್ರ್ಯಕ್ಕೆ ಅನುಗುಣವಾಗಿರಬೇಕು. ತೆರಿಗೆ ಪಾವತಿ ಸಾಮಥ್ರ್ಯವನ್ನು ಅಳೆಯುವುದು ಕಷ್ಟದ ಕೆಲಸ. ತೆರಿಗೆ ಸಾರ್ವಜನಿಕ ಪ್ರಾಧಿಕಾರದಿಂದ ದೊರೆಯುವ ಫಲ ಅಥವಾ ಪ್ರಯೋಜನಕ್ಕೆ (ಬೆನಿಫಿಟ್) ಸಮನಾಗಿರಬೇಕೆಂದು ಕೆಲವರು ವಾದಿಸುತ್ತಾರೆ. ಆದರೆ ತೆರಿಗೆಯಲ್ಲಿ ತೆರಿಗೆಯ ಭಾರತಕ್ಕೆ ಅನುಗುಣವಾಗಿ ನೇರವಾದ ಪ್ರಯೋಜನವೇನೂ ಇರುವುದಿಲ್ಲ. ಸಾರ್ವಜನಿಕ ವೆಚ್ಚದಿಂದ ತೆರಿಗೆಗೆ ಸಮಾನವಾದ ಪ್ರಯೋಜನ ಉಂಟುಮಾಡಿದರೆ, ಹೆಚ್ಚು ತೆರಿಗೆ ಕೊಡುವ ಶ್ರೀಮಂತರಿಗೆ ಹೆಚ್ಚು ಪ್ರಯೋಜನ ದೊರಕಬೇಕಾಗುತ್ತದೆ. ಸಾರ್ವಜನಿಕ ಪ್ರಾಧಿಕಾರ ನೀಡುವ ಸೇವೆಯ ವೆಚ್ಚಕ್ಕೆ ಅನುಗುಣವಾಗಿ ತೆರಿಗೆ ಇರಬೇಕೆಂಬ ವಾದವನ್ನು ಇನ್ನೂ ಕೆಲವರು ಮುಂದಿಡುತ್ತಾರೆ. ಪ್ರತಿಯೊಬ್ಬ ತೆರಿಗೆದಾರನಿಗೂ ಸಾರ್ವಜನಿಕ ಸೇವೆಯನ್ನು ಒದಗಿಸಲು ಇರುವ ವೆಚ್ಚವನ್ನು ಕಂಡುಹಿಡಿಯುವುದು ಅಸಾಧ್ಯ. ತೆರಿಗೆಯ ಭಾರವನ್ನು ಪ್ರಯೋಜನ ಅಥವಾ ವೆಚ್ಚದ ತತ್ತ್ವದ ಮೇಲೆ ಹಂಚುವುದು ಸಾದುವಲ್ಲ. ಸಾಧ್ಯವೂ ಅಲ್ಲ. ಆದ್ದರಿಂದ ತೆರಿಗೆದಾರನ ಪಾವತಿ ಸಾಮಥ್ರ್ಯಕ್ಕೆ ಅನುಗುಣವಾಗಿ ತೆರಿಗೆಯ ಭಾರವನ್ನು ಹಂಚಬೇಕೆಂದು ಎಲ್ಲರೂ ಒಪ್ಪುತ್ತಾರೆ.

ತ್ಯಾಗದ ಮೇಲೆ ರೂಪಿತವಾಗಿರುವ ತೆರಿಗೆ ಪಾವತಿ ಸಾಮಥ್ರ್ಯದ ಅಳತೆಯನ್ನು ಸಮಾನ ತ್ಯಾಗ, ಅನುಪಾತ ತ್ಯಾಗ ಮತ್ತು ಕನಿಷ್ಠ ತ್ಯಾಗದ ದೃಷ್ಟಿಯಿಂದ ಅಳೆಯಬಹುದು. ಇದರಲ್ಲಿ ಕನಿಷ್ಠ ತ್ಯಾಗದ ದೃಷ್ಟಿ ಪ್ರಾಮುಖ್ಯ ಪಡೆದಿದೆ. ಇದನ್ನು ಪಿಗು ಮತ್ತು ಎಜ್‍ವರ್ತ್ ಪ್ರತಿಪಾದಿಸಿದ್ದಾರೆ. ಇದರ ಪ್ರಕಾರ, ತೆರಿಗೆಯಿಂದ ಉಂಟಾಗುವ ತ್ಯಾಗ ಒಟ್ಟಿನಲ್ಲಿ ಅತ್ಯಂತ ಕಡಿಮೆಯಾಗಿರಬೇಕು. ಉದಾಹರಣೆಗೆ ರೂ. 500 ವರಮಾನ ಇರುವ ಒಬ್ಬನಿಂದ 10 ರೂಪಾಯಿ ತೆರಿಗೆ ತೆಗೆದುಕೊಳ್ಳುವುದರಿಂದ ಅವನು ಮಾಡಬೇಕಾಗುವ ತ್ಯಾಗ, ರೂ. 50,000 ವರಮಾನ ಇರುವ ಇನ್ನೊಬ್ಬನಿಂದ ರೂ. 1,000 ತೆರಿಗೆ ತೆಗೆದುಕೊಳ್ಳುವುದರಿಂದ ಮಾಡಬೇಕಾಗುವ ತ್ಯಾಗಕ್ಕೆ ಸಮನಾದರೂ ರೂ. 1,000 ತೆರಿಗೆಯನ್ನು ರೂ. 500 ವರಮಾನವಿರುವ 100 ಜನರಿಂದ ತಲಾ ರೂ. 10 ನಂತೆ ತೆಗೆದುಕೊಳ್ಳುವ ಬದಲು ರೂ. 50,000 ವರಮಾನವಿರುವ ಒಬ್ಬನಿಂದಲೇ ತೆಗೆದುಕೊಳ್ಳುವುದರಿಂದ ಸಮಾಜದ ಒಟ್ಟು ತ್ಯಾಗ ಅತ್ಯಂತ ಕಡಿಮೆಯಾಗಿರುತ್ತದೆ. ವರಮಾನ ಹೆಚ್ಚಿದಂತೆಲ್ಲ ಹಣದ ಸೀಮಾಂತ ತುಷ್ಟಿಗುಣ ಕಡಿಮೆಯಾಗುವುದರಿಂದ ವರಮಾನ ಹೆಚ್ಚಿದಷ್ಟೂ ತೆರಿಗೆಯನ್ನು ತೀವ್ರವಾಗಿ ಏರಿಸುವುದು ಸರಿ ಎಂಬ ತತ್ತ್ವಕ್ಕೆ ಇದು ಅನುಸಾರವಾಗಿದೆ. ಈ ತತ್ತ್ವವನ್ನು ಆಚರಣೆಗೆ ತಂದರೆ ಒಂದು ನಿರ್ದಿಷ್ಟ ಮೊಬಲಗಗಿಂತ ಕಡಿಮೆ ವರಮಾನ ಪಡೆಯುವುದರ ಮೇಲೆ ಯಾವ ತೆರಿಗೆಯನ್ನೂ ಹಾಕುವಂತಿಲ್ಲ. ಅದಕ್ಕಿಂತ ಹೆಚ್ಚಿನ ವರಮಾನ ಪಡೆಯುವವರ ಮೇಲೆ ತೀವ್ರವಾಗಿ ಏರುವ ದರದಲ್ಲಿ ತೆರಿಗೆ ವಿಧಿಸಿ ಅವರ ವರಮಾನವನ್ನು ನಿರ್ದಿಷ್ಟ ಮಟ್ಟಕ್ಕೆ ಇಳಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ಸಾಮಾನ್ಯ ಕುಟುಂಬಕ್ಕೆ ರೂ. 5,000 ವಾರ್ಷಿಕ ವರಮಾನ ಅವಶ್ಯಕವೆಂದು ಪರಿಗಣಿಸುವುದಾದರೆ, ರೂ 5,000 ವರಮಾನದ ವರೆಗೂ ಯಾವ ವರಮಾನ ತೆರಿಗೆಯನ್ನೂ ವಿಧಿಸಬಾರದು. ಇದರ ಮೇಲಣ ವರಮಾನಗಳನ್ನು ತೆರಿಗೆ ವಿಧಿಸುವುದರ ಮೂಲಕ ರೂ. 5,000 ಕ್ಕೆ ಇಳಿಸಬೇಕಾಗುತ್ತದೆ. ಇದು ತಾತ್ತ್ವಿಕವಾಗಿ ಸರಿ ಎಂದರೂ, ಕಾರ್ಯತಃ ಸಾಧ್ಯವಾಗುವಂಥದಲ್ಲ. ಎಲ್ಲ ವರಮಾನವನ್ನೂ ಒಂದೇ ಮಟ್ಟಕ್ಕೆ ತೆರಿಗೆಯ ಮೂಲಕ ಇಳಿಸುವುದಾದರೆ ಯಾರೂ ಆ ನಿರ್ದಿಷ್ಟ ವರಮಾನಕ್ಕಿಂತ ಹೆಚ್ಚು ಸಂಪಾದಿಸಲು ತೊಡಗದೆಯೆ ಇರಬಹುದು. ಇದರಿಂದ ಉತ್ಪಾದನೆ, ವರಮಾನ, ಬಂಡವಾಳ ಶೇಖರಣೆ ಎಲ್ಲಕ್ಕೂ ಅಡ್ಡಿಯಾಗುತ್ತದೆ. ಅಲ್ಲದೆ, ತ್ಯಾಗವೆನ್ನುವುದು ಒಬ್ಬನ ವೈಯಕ್ತಿಕ ಪ್ರಕ್ರಿಯೆ. ಇದನ್ನು ನಿರ್ದಿಷ್ಟವಾಗಿ ಅಳೆಯುವುದು ಸಾಧ್ಯವಿಲ್ಲ.

ತೆರಿಗೆದಾರನ ಸಾಮಥ್ರ್ಯವನ್ನು ಅವನ ಖರ್ಚು ಮತ್ತು ವರಮಾನದ ಮೇಲೆ ನಿರ್ಧರಿಸಬಹುದು. ಆಸ್ತಿಯೊಂದನ್ನೇ ತೆಗೆದುಕೊಂಡರೆ ತೆರಿಗೆ ಪಾವತಿ ಸಾಮಥ್ರ್ಯವನ್ನು ಅಳೆಯಲು ಸಾಧ್ಯವಾಗಲಾರದು. ಒಬ್ಬನಿಗೆ ಹೆಚ್ಚು ಆಸ್ತಿ ಇದ್ದು, ಕಡಿಮೆ ವರಮಾನವಿರಬಹುದು. ಇನ್ನೊಬ್ಬನಿಗೆ ಆಸ್ತಿ ಇಲ್ಲದಿದ್ದರೂ ಸೇವೆಯಿಂದಲೇ ಅವನು ಹೆಚ್ಚು ವರಮಾನ ಗಳಿಸಬಹುದು. ಆದರೆ ಒಬ್ಬ ವ್ಯಕ್ತಿಯ ಖರ್ಚನ್ನು ತೆರಿಗೆ ಪಾವತಿ ಸಾಮಥ್ರ್ಯದ ಅಳತೆಗೋಲಾಗಿ ತೆಗೆದುಕೊಂಡರೂ ತೊಂದರೆಗಳುಂಟು. ಅವನ ಕುಟುಂಬ ದೊಡ್ಡದಿದ್ದರೆ, ಅವನಿಗೆ ಹೆಚ್ಚು ಮಂದಿ ಆಶ್ರಿತರಿದ್ದರೆ ಅವನ ಕರ್ಚು ಹೆಚ್ಚಾಗಿರುತ್ತದೆ. ಆದರಿಂದಲೇ ಅವನ ತೆರಿಗೆ ಪಾವತಿ ಸಾಮಥ್ರ್ಯ ಹೆಚ್ಚು ಎಂದು ಹೇಳಲಾಗದು. ಈಗ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವರಮಾನವನ್ನು ತೆರಿಗೆ ಪಾವತಿ ಸಾಮಥ್ರ್ಯದ ಮಾನಕವನ್ನಾಗಿ ತೆಗೆದುಕೊಳ್ಳುವುದು ವಾಡಿಕೆ. ಇಲ್ಲೂ, ವ್ಯಕ್ತಿ ಒಂಟಿಯಾಗಿದ್ದಾನೆಯೆ, ಅವನು ವಿವಾಹಿತನೆ, ಅವನಿಗೆ ಮಕ್ಕಳೂ ಇತರ ಅವಲಂಬಿಗಳೂ ಇದ್ದಾರೆಯೆ, ಅವನು ವರಮಾನವನ್ನು ತನ್ನ ದುಡಿಮೆಯಿಂದ ಪಡೆಯುತ್ತಿದ್ದಾನೆಯೆ ಅಥವಾ ಅದನ್ನು ಪಿತ್ರಾರ್ಜಿತ ಸ್ವತ್ತಿನಿಂದ ಪಡೆಯುತ್ತಿದ್ದಾನೆಯೆ - ಎಂಬೆಲ್ಲ ಅಂಶಗಳನ್ನೂ ಪರಿಗಣಿಸಬೇಕು. ಇದಕ್ಕೆ ಪ್ರತಿಯೊಂದು ಕುಟುಂಬದ ಆಯವ್ಯಯ ಪಟ್ಟಿ ದೊರಕಬೇಕು. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ವರಮಾನದಲ್ಲಿ ಒಂದು ನಿರ್ದಿಷ್ಟ ವರಮಾನವನ್ನು ವಿನಾಯಿತಿಸಿ, ಉಳಿದದ್ದಕ್ಕೆ ಆರೋಹಣ ಕ್ರಮದಲ್ಲಿ ತೆರಿಗೆ ವಿಧಿಸಿದರೆ ತೆರಿಗೆಯಲ್ಲಿ ಸಮಾನತೆ ಉಂಟಾಗುತ್ತದೆ. ವರಮಾನದ ಜೊತೆಗೆ ಸ್ವತ್ತಿನ ಒಡೆತನ, ಖರ್ಚು, ಸ್ವತ್ತನ್ನು ಪಡೆದ ರೀತಿ - ಇವು ತೆರಿಗೆ ಪಾವತಿ ಸಾಮಥ್ರ್ಯದ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಆರೋಹಣ ವರಮಾನ ತೆರಿಗೆಯ ಜೊತೆಗೆ ಸಂಪತ್ತು ತೆರಿಗೆ, ಖರ್ಚು ತೆರಿಗೆ, ಮರಣೋತ್ತರ ತೆರಿಗೆ - ಇವನ್ನು ವಿಧಿಸುವುದರಿಂದ ತೆರಿಗೆ ಪಾವತಿ ಸಾಮಥ್ರ್ಯಕ್ಕೆ ಅನುಗುಣವಾಗಿ ತೆರಿಗೆಯ ಭಾರ ಇರುತ್ತದೆ.

2 ಅನುಕೂಲತೆ : ತೆರಿಗೆ ವಸೂಲು ಮಾಡುವ ಕಾಲವೂ ಕ್ರಮವೂ ಸರ್ಕಾರಕ್ಕೆ ಮಾತ್ರವೇ ಅಲ್ಲದೆ ತೆರಿಗೆದಾರನಿಗೂ ಅನುಕೂಲವಾಗಿರಬೇಕು. ತೆರಿಗೆದಾರನಿಗೆ ಇದರಿಂದ ಹೆಚ್ಚು ತೊಂದರೆಯಾಗದಂತಿರಬೇಕು. ಕೊಡುವುದಕ್ಕೆ ಕೈಯಲ್ಲಿ ಹಣವಿರುವಾಗ ಮತ್ತು ಹಣ ಕೈಗೆ ಬರುವಾಗ ತೆರಿಗೆಯನ್ನು ವಸೂಲು ಮಾಡಬೇಕು. ತೆರಿಗೆಯ ವಸೂಲಿಯ ಕಾಲವನ್ನು ತೆರಿಗೆದಾರ ವರಮಾನ ಪಡೆಯುವ ಕಾಲಕ್ಕೆ ಸರಿಹೊಂದಿಸಿದರೆ ತೆರಿಗೆದಾರನಿಗೂ ಅನುಕೂಲ. ಸರ್ಕಾರಕ್ಕೂ ಅನುಕೂಲ. ಉದಾಹರಣೆಗೆ ಸುಗ್ಗಿಯ ಕಾಲದಲ್ಲಿ ಭೂಕಂದಾಯವನ್ನು ಕಿಸ್ತುಗಳಲ್ಲಿ ವಸೂಲು ಮಾಡಿದರೆ ಪಾವತಿ ಮಾಡಲು ರೈತರಿಗೆ ಅನುಕೂಲವಾಗುತ್ತದೆ. ಸಂಬಳದಿಂದ ಅಥವಾ ಲಾಭಾಂಶದಿಂದ ವರಮಾನ ತೆರಿಗೆಯನ್ನು ಮೂಲದಲ್ಲಿಯೇ ಹಿಡಿದುಕೊಂಡರೆ ತೆರಿಗೆದಾರನಿಗೆ ಅನುಕೂಲ. ಆಮದು ಸರಕುಗಳು ರೇವಿಗೆ ಬಂದಾಗ ವ್ಯಾಪಾರಗಾರರಿಂದ ಒಂದೇ ಗಂಟಿನಲ್ಲಿ ಸುಂಕವನ್ನು ತೆಗೆದುಕೊಂಡರೆ ಅನುಕೂಲ. ತೆರಿಗೆ ಸಲ್ಲಿಸುವ ಕಾಲ, ಸ್ಥಳ, ವಿಧಾನ - ಇವು ಒಟ್ಟಿನಲ್ಲಿ ಸರ್ಕಾರ ಮತ್ತು ತೆರಿಗೆದಾರರಿಬ್ಬರಿಗೂ ಅನುಕೂಲವಾಗಿದ್ದರೆ ತೆರಿಗೆಯ ವಸೂಲಿ ಸುಲಭವಾಗುತ್ತದೆ.

3 ನಿಶ್ಚಯತೆ : ತೆರಿಗೆದಾರ ಎಷ್ಟು ತೆರಿಗೆಯನ್ನು ಯಾವಾಗ ಮತ್ತು ಯಾವ ರೀತಿಯಲ್ಲಿ ಕೊಡಬೇಕು ಎಂಬುದನ್ನು ತೆರಿಗೆದಾರನಿಗೆ ಖಚಿತವಾಗಿ ತಿಳಿಸಬೇಕು. ಇದರಿಂದ ತೆರಿಗೆದಾರನಿಗೆ ತೊಂದರೆ ಇರುವುದಿಲ್ಲ. ವಿವಿಧ ಬಾಬುಗಳಿಂದ ಬರುವ ಆದಾಯವೆಷ್ಟು ಎಂದು ಸರ್ಕಾರಕ್ಕೂ ಖಚಿತವಾಗಿ ಗೊತ್ತಿರುತ್ತದೆ. ಸರ್ಕಾರಕ್ಕೆ ಯಾವ ಯಾವ ತೆರಿಗೆಯಿಂದ ಎಷ್ಟು ವರಮಾನ ಬರಬಹುದು ಎಂಬ ಅಂದಾಜು ಇಲ್ಲದಿದ್ದರೆ ಸರ್ಕಾರ ಆಯವ್ಯಯ ಪಟ್ಟಿಯನ್ನು ಮಾಡುವುದರಲ್ಲಿ ತೊಂದರೆಯಾಗುತ್ತದೆ. ತೆರಿಗೆಯ ಮೊಬಲಗು, ಪಾವತಿಯ ಕಾಲ, ವಿಧಾನ ಮುಂತಾದವು ಖಚಿತವಾಗಿಲ್ಲದಿದ್ದರೆ ತೆರಿಗೆ ವಸೂಲಿ ಕಷ್ಟವಾಗಬಹುದು. ತೆರಿಗೆದಾರ ಕಿರುಕುಳಕ್ಕೆ ಒಳಗಾಗಬಹುದು.

4 ಮಿತವ್ಯಯ : ತೆರಿಗೆ ಆಡಳಿತದಲ್ಲಿ ಮಿತವ್ಯಯ ಅಗತ್ಯ. ತೆರಿಗೆ ವಸೂಲಿ ವ್ಯವಸ್ಥೆಗಾಗಿ ಖರ್ಚು ಅವಶ್ಯಕವಾದರೂ ಅದು ಆದಷ್ಟು ಕಡಿಮೆ ಇರಬೇಕು. ಒಂದು ತೆರಿಗೆಯ ಆದಾಯದ ಬಹುಭಾಗವನ್ನು ತೆರಿಗೆಯ ವಸೂಲಿಗಾಗಿಯೇ ಖರ್ಚು ಮಾಡಬೇಕಾದರೆ ಅದರಿಂದ ಜನರಿಗೆ ವೃಥಾ ತೊಂದರೆಯಾಗುವುದೇ ವಿನಾ, ಸರ್ಕಾರಕ್ಕೆ ಹೆಚ್ಚು ಪ್ರಯೋಜನವೇನೂ ಇರುವುದಿಲ್ಲ. ತೆರಿಗೆ ವಸೂಲಿ ವೆಚ್ಚ ಆದಷ್ಟು ಕಡಿಮೆ ಇರಬೇಕೆಂದರೆ, ಸಿಬ್ಬಂದಿ ಕಡಿಮೆ ಇರಬೇಕೆಂದು ಅರ್ಥವಲ್ಲ. ತೆರಿಗೆಯನ್ನು ಯಶಸ್ವಿಯಾಗಿ ದಕ್ಷತೆಯಿಂದ ಎತ್ತಲು ಎಷ್ಟು ಸಿಬ್ಬಂದಿ ಅಗತ್ಯವೋ ಅಷ್ಟನ್ನು ನೇಮಕ ಮಾಡಬೇಕಾಗುತ್ತದೆ. ಮಿತವ್ಯಯವನ್ನು ವಿಶಾಲದೃಷ್ಟಿಯಿಂದ ನೋಡಬೇಕು. ತೆರಿಗೆ ವಸೂಲಿ ಖರ್ಚಿನ ಜೊತೆಗೆ, ತೆರಿಗೆಯಿಂದ ತೆರಿಗೆದಾರನ ಮೇಲೆ ಮತ್ತು ಸಮಾಜದ ಮೇಲೆ ಆಗುವ ಪರಿಣಾಮವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಒಂದು ತೆರಿಗೆಯಿಂದ ಉತ್ಪಾದನೆ ಕಡಿಮೆಯಾಗುವುದಾದರೆ, ಬಂಡವಾಳ ಶೇಖರಣೆಗೆ ಅಡಚಣೆ ಆಗುವುದಾದರೆ, ತೆರಿಗೆದಾರನ ಕೆಲಸ ಮಾಡುವ ಸಾಮಥ್ರ್ಯವನ್ನು ಆಸಕ್ತಿಯನ್ನೂ ಅದು ಕುಗ್ಗಿಸುವುದಾದರೆ, ಅದರಿಂದ ಮಿತವ್ಯಯ ನಿಯಮವನ್ನು ಪಾಲಿಸಿದಂತಾಗುವುದಿಲ್ಲ. (ಎಸ್.ಎಂ.ವಿ.)

ಆಡಮ್ ಸ್ಮಿತ್ ಪ್ರತಿಪಾದಿಸಿದ ನಿಯಮಗಳಷ್ಟೇ ಅಲ್ಲದೆ ಇತರ ಕೆಲವು ನಿಯಮಗಳೂ ರೂಪಿತವಾಗಿವೆ : 1 ತೆರಿಗೆಗಳು ಸರ್ಕಾರದ ಖರ್ಚಿನ ನಿರ್ವಹಣೆಗೆ ಸಾಕಾಗುವಷ್ಟು ಆದಾಯವನನು ತರುವಂತಿರಬೇಕು. 2 ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವಾಗ ತೆರಿಗೆ ದರದಲ್ಲಿ ಬದಲಾವಣೆ ಇಲ್ಲದೆಯೇ ತೆರಿಗೆಗಳಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುವಂತಿರಬೇಕು. 3 ಬದಲಾಗುವ ಆರ್ಥಿಕ ಪರಿಸ್ಥಿತಿಗಳಿಗೆ ತೆರಿಗೆ ಪದ್ಧತಿ ಹೊಂದಿಕೊಳ್ಳುವಂತಿರಬೇಕು. ತೆರಿಗೆ ಮೂಲಗಳು ತೆರಿಗೆ ವಿಧಾನ ಎಲ್ಲವೂ ಪರಿಸ್ಥಿತಿಗನುಗುಣವಾಗಿ ಬದಲಾಗಬೇಕು. 4 ಸಂಪನ್ಮೂಲಗಳ ಹಂಚಿಕೆ ಅತ್ಯುತ್ತಮ ರೀತಿಯಲ್ಲಿ ಆಗುವುದಕ್ಕೆ ತೆರಿಗೆಗಳು ಅಡ್ಡಿಯಾಗದಂತಿರಬೇಕು. ಈ ಕೆಲವು ನಿಯಮಗಳನ್ನು ಇತ್ತೀಚೆಗೆ ಒತ್ತಿ ಹೇಳಲಾಗಿದ್ದರೂ ಆಡಮ್ ಸ್ಮಿತ್ ಪ್ರತಿಪಾದಿಸಿದ ನಿಯಮಗಳು ಸರ್ವಕಾಲಕ್ಕೂ ಉಳಿಯುವಂಥವಾಗಿದ್ದು ಸರ್ವಮಾನ್ಯತೆ ಪಡೆದಿದೆ. ಅವನ ನಿಯಮಗಳ ಪೈಕಿ ಹೆಚ್ಚು ಗಮನ ಸೆಳೆದಿರುವ ನಿಯಮವೆಂದರೆ ಸಮಾನತೆ. ಈ ನಿಯಮವನ್ನು ವಿಶದೀಕರಿಸಲು ಮತ್ತು ಹೆಚ್ಚು ವೈಜ್ಞಾನಿಕವಾದುದನ್ನಾಗಿ ಮಾಡಲು ಇತ್ತೀಚಿನ ಅರ್ಥಶಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ. ತೆರಿಗೆಗಳನ್ನು ಯಾವ ಸೂತ್ರಗಳ ಆಧಾರದ ಮೇಲೆ ವಿಧಿಸಿದರೆ ಅವುಗಳ ಹೊರೆ ಸಮಾನವಾಗಿ ಬೀಳುತ್ತದೆಂಬುದು ಬಹಳ ಮುಖ್ಯ ಪ್ರಶ್ನೆ ಇದನ್ನು ಹಿಂದೆ ಸ್ಥೂಲವಾಗಿ ವಿವೇಚಿಸಲಾಗಿದೆ. ಈ ಪ್ರಶ್ನೆಗೆ ಉತ್ತರವಾಗಿ ಆರ್ಧಶಾಸ್ತ್ರಜ್ಞರು ರೂಪಿಸುವ ಪ್ರಯೋಜನ ಸೂತ್ರ ಮತ್ತು ಪವತಿ ಸಾಮಥ್ರ್ಯ ಸೂತ್ರಗಳನ್ನು ಮುಂದೆ ಚರ್ಚಿಸಲಾಗಿದೆ.

ಪ್ರಯೋಜನ ಸೂತ್ರ : ಸರ್ಕಾರ ಮಾಡುವ ಖರ್ಚಿನಿಂದ ತೆರಿಗೆದಾರರಿಗೆ ಸೌಲಭ್ಯ ದೊರಕುತ್ತದೆ. ಈ ಸೌಲಭ್ಯವೇ ಅವರಿಗೆ ದೊರಕುವ ಪ್ರಯೋಜನ. ಈ ಪ್ರಯೋಜನಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವುದರ ಮೂಲಕ ಸಮಾನತೆಯ ನಿಯಮವನ್ನು ಅಳವಡಿಸುವುದು ಸಾಧ್ಯವೆಂಬ ಅಭಿಪ್ರಾಯವನ್ನು ಪ್ರಯೋಜನ ಸೂತ್ರದ ಮೂಲಕ ಅರ್ಥಶಾಸ್ತ್ರಜ್ಞರು ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯ 17ನೆಯ ಶತಮಾನದಷ್ಟು ಹಿಂದಿನಿಂದಲೂ ಪ್ರಚಲಿತವಿದೆ. ಸರ್ಕಾರ ಜನರಿಗೆ ಒದಗಿಸುವ ರಕ್ಷಣೆಗೆ ಪ್ರತಿಯಾಗಿ ಅವರು ತೆರಿಗೆ ಕೊಡಬೇಕೆಂದು ವಾದವನ್ನೂ ಮಂಡಿಸದಾಗಲೇ ಪ್ರಯೋಜನ ಸೂತ್ರದ ಪ್ರತಿಪಾದನೆಯಾಯಿತು. ಸರ್ಕಾರದ ವೆಚ್ಚದಿಂದ ದೊರಕುವ ಪ್ರಯೋಜನಕ್ಕೆ ಅನುಗುಣವಾಗಿ ತೆರಿಗೆ ವಿಧಿಸಿದರೆ ತೆರಿಗೆಯ ಹೊರೆ ಸಮಾನವಾಗಿ ಹಂಚಿಕೆಯಾಗುತ್ತದೆಂಬ ಅಭಿಪ್ರಾಯವನ್ನು ಸೈದ್ಧಾಂತಿಕವಾಗಿ ಒಪ್ಪಬಹುದಾದರೂ ಈ ಸೂತ್ರವನ್ನು ನಿಜವಾಗಿ ಅನುಸರಿಸುವುದು ಸುಲಭವಲ್ಲ. ಸಾರ್ವತ್ರಿಕ ಉಪಯೋಗಕ್ಕಾಗಿ ಖರ್ಚುಮಾಡುವಾಗ ಯಾರಿಗೆ ಎಷ್ಟು ಖರ್ಚಾಗುತ್ತದೆ ಮತ್ತು ಯಾರಿಗೆ ಎಷ್ಟು ಪ್ರತಿಫಲ ದೊರಕುತ್ತದೆ ಎಂಬುದನ್ನು ಅಳೆಯುವುದು ಕಷ್ಟ. ಸಾರ್ವಜನಿಕ ಖರ್ಚಿನಿಂದ ನಿರ್ವಹಿಸಲ್ಪಡುತ್ತಿರುವ ನ್ಯಾಯಾಂಗದಿಂದ ಯಾವ ವ್ಯಕ್ತಿಗೆ ಎಷ್ಟು ಪ್ರಯೋಗಜನವಾಗಿದೆ ಎಂಬುದನ್ನು ಕರಾರುವಕ್ಕಾಗಿ ಅಳೆಯುವುದು ಸಾಧ್ಯವಿಲ್ಲ. ಅಂತೆಯೇ ರಾಷ್ಟ್ರ ರಕ್ಷಣೆಗಾಗಿ ಮಾಡುವ ವೆಚ್ಚದಲ್ಲಿ ಒಬ್ಬೊಬ್ಬರ ನ್ಯಾಯವಾದ ಪಾಲು ಎಷ್ಟೆಂದು ನಿರ್ಧರಿಸುವುದು ಸಾಧ್ಯವಿಲ. ವಿದ್ಯಾಭ್ಯಾಸ, ಸಾರ್ವಜನಿಕ ಆರೋಗ್ಯ ಮುಂತಾದ ಸೇವೆಗಳನ್ನು ಒದಗಿಸುವಾಗ ಪ್ರತಿಯೊಬ್ಬನೂ ತಾನು ಪಡೆಯುವ ಪ್ರಯೋಜನಕ್ಕೆ ಅನುಗುಣವಾಗಿ ತೆರಿಗೆ ಕೊಡುವಂತೆ ಮಾಡುವುದು ಸುಲಭದ ಕೆಲಸವೇನಲ್ಲ. ಒಂದು ವೇಳೆ ಹಾಗೆ ಮಾಡಬೇಕಾದರೆ ಇಂಥ ಸೇವೆಗಾಗಿ ಹಣ ಕೊಡಲು, ಶಕ್ತಿ ಇರುವವರಿಗೆ ಮಾತ್ರ ಅವುಗಳನ್ನು ಒದಗಿಸಬೇಕಾಗುತ್ತದೆ. ಆದ್ದರಿಂದ ಒಟ್ಟಿನಲ್ಲಿ ಪ್ರಯೋಜನ ಸೂತ್ರವನ್ನನುಸರಿಸಿ ಸಾರ್ವತ್ರಿಕವಾದ ತೆರಿಗೆ ನೀತಿಯನ್ನನುಸರಿಸುವುದು ಕೇವಲ ತಾತ್ತ್ವಿಕ ವಿಷಯವಾಗುತ್ತದೆ. ಅದರೆ ಕೆಲವು ನಿರ್ದಿಷ್ಟ ತೆರಿಗೆಗಳನ್ನು ಪ್ರಯೋಜನ ಸೂತ್ರಕ್ಕನುಗುಣವಾಗಿ ವಿಧಿಸುವುದು. ಸಾಧ್ಯ. ಉದಾರಣೆಗೆ ಹೆದ್ದಾರಿಗಳನ್ನು ಬಳಕೆ ಮಾಡುವುದು. ಪೆಟ್ರೋಲ್ ಮೇಲೆ ಅಥವಾ ವಾಹನಗಳ ಮೇಲೆ ತೆರಿಗೆ ಕೊಡುವುದರ ಮೂಲಕ ಸರ್ಕಾರ ಹೆದ್ದಾರಿಗಳ ನಿರ್ಮಾಣಕ್ಕಾಗಿ ಮಾಡುವ ವೆಚ್ಚವನ್ನು ತುಂಬಿಕೊಡಬಹುದು. ಇಲ್ಲಿ ಹೆದ್ದಾರಿಗಳ ಬಳಕೆಯಿಂದ ಪಡೆಯುವ ಪ್ರಯೋಜನಕ್ಕೆ ಪ್ರತಿಯಾಗಿ ತೆರಿಗೆ ಕೊಟ್ಟಂತಾಯಿತು. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಪೆಟ್ರೋಲ್ ಮತ್ತು ವಾಹನಗಳ ಮೇಲಿನ ತೆರಿಗೆಯಿಂದ ಬರುವ ಆದಾಯ. ಸರ್ಕಾರ ಹೆದ್ದಾರಿಗಳಿಗಾಗಿ ಮಾಡುವ ವೆಚ್ಚಕ್ಕೆ ಹೆಚ್ಚುಕಡಿಮೆ ಸಮನಾಗಿರುತ್ತದೆ. ಅಂತೆಯೇ ವಿಶೇಷ ಕರ ವಿಧಿಸುವಾಗಲೂ ಪ್ರಯೋಜನ ಸೂತ್ರವನ್ನನುಸರಿಸುವುದು ಸಾಧ್ಯ. ಒಆಂದು ಪಟ್ಟಣದಲ್ಲಿ ಜನರು ವಾಸಿಸುವ ಸ್ಥಳವನ್ನು ಆಭಿವೃದ್ಧಿಪಡಿಸಲು ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ವೆಚ್ಚಮಾಡುತ್ತದೆನ್ನೋಣ. ಇದರಿಂದ ಅನುಕೂಲ ಪಡೆಯುವವರ ಮೇಲೆ ವಿಶೇಷ ಕರ ವಿಧಿಸಿ ಅವರು ಪಡೆಯುವ ಅನುಕೂಲಕ್ಕೆ ಅನುಗುಣವಾಗಿ ತೆರಿಗೆ ಕೊಡುವಂತೆ ಮಾಡಬಹುದು. ಸಾಮಾಜಿಕ ಭದ್ರತಾ ತೆರಿಗೆಯನ್ನು ವಿಧಿಸುವಾಗಲೂ ಪ್ರಯೋಜನ ನಿಯಮವನ್ನನುಸರಿಸಬಹುದು. ಆದರೆ ಪ್ರಯೋಜನ ನಿಯಮದಲ್ಲಿ ಒಂದು ಮೂಲಭೂತ ನ್ಯೂನತೆ ಇದೆ. ಈ ನಿಯಮವನ್ನು ಅನುಸರಿಸಿದಾಗ ಸರ್ಕಾರದ ಸೇವೆಗಾಗಿ ಕೊಡುವ ತೆರಿಗೆ ಧನಿಕರಿಗೆ ಕಡಿಮೆಯಾಗಿಯೂ ಇರುತ್ತದೆ. ತೆರಿಗೆ ಕೊಡುವ ಶಕ್ತಿ ಹೆಚ್ಚಾಗಿರುವ ಧನಿಕರು ಆವರ ಶಕ್ತಿಗೆ ತಕ್ಕಂತೆ ತೆರಿಗೆ ಕೊಟ್ಟಂತಾಗುವುದಿಲ್ಲ. ಆದಕಾರಣ ತೆರಿಗೆಯ ಹೊರೆ ಸಮಾನವಾಗಿ ಹಂಚಿಕೆಯಾದಂತಾಗುವುದಿಲ್ಲ.

 	ಪಾವತಿ ಸಾಮಥ್ರ್ಯ ಸೂತ್ರ : ಪ್ರಯೋಜನ ಸೂತ್ರವನ್ನನುಸರಿಸಿ ತೆರಿಗೆ ವಿಧಿಸುವುದು ಸುಲಭದ ಕೆಲಸವಲ್ಲವಾದ್ದರಿಂದ ಅದಕ್ಕೆ ಬದಲಾಗಿ ಪಾವತಿ ಸಾಮಥ್ರ್ಯ ಸೂತ್ರವನ್ನು ಅನುಸರಿಸಬೇಕೆಂಬುದು ಕೆಲವು ಅರ್ಥಶಾಸ್ತ್ರಜ್ಞರ ಅಭಿಮತ. ಈ ಸೂತ್ರದ ಪ್ರಕಾರ ಪ್ರತಿಯೊಬ್ಬನೂ ಅವನು ತೆರಿಗೆ ಕೊಡುವ ಸಾಮಥ್ರ್ಯಕ್ಕೆ ಅನುಗುಣವಾಗಿ ತೆರಿಗೆ ಕೊಟ್ಟರೆ ಸಮಾನತೆಯ ನಿಯಮವನ್ನು ಅನುಸರಿಸಿದಂತಾಗುತ್ತದೆ. ತೆರಿಗೆ ಕೊಟ್ಟರೆ ಸಮಾನತೆಯ ನಿಯಮವನ್ನು ಅನುಸರಿಸಿದಂತಾಗುತ್ತದೆ. ಅಂದರೆ ಜನರ ತೆರಿಗೆ ಪವತಿ ಸಾಮಥ್ರ್ಯದ ಆಧಾರದ ಮೇಲೆ ತೆರಿಗೆ ವಿಧಿಸುವುದೊಂದೇ ತೆರಿಗೆಯ ಭಾರ ಸಮಾನವಾಗಿ ಬೀಳುವಂತೆ ಮಾಡಲು ಇರುವ ಮಾರ್ಗ. ಈ ವಿಧಾನವನ್ನು ಅನುಸರಿಸಬೇಕಾದರೆ ತೆರಿಗೆ ಪಾವತಿ ಸಾಮಥ್ರ್ಯವನ್ನು ಮೊದಲು ನಿರ್ಧರಿಸಬೇಕು ಅದನ್ನು ನಿರ್ಧರಿಸಲು ಎರಡು ಆಧಾರಗಳಿವೆ. ವಸ್ತುನಿಷ್ಠ ಸೂಚಿ ಮತ್ತು ವ್ಯಕ್ತಿನಿಷ್ಟ ಸೂಚಿ. ಆಸ್ತಿ. ಆದಾಯ ಮತ್ತು ಅನುಭೋಗ-ಇವುಗಳ ಮಟ್ಟವನ್ನು ಬಾಹ್ಯಗೋಚರ ಸೂಚಿ ಎಂದೂ ತೆರಿಗೆದಾರರ ತ್ಯಾಗವನ್ನು ಮನೋಗ್ರಾಹ್ಯ ಸೂಚಿ ಎಂದೂ ಹೇಳಬಹುದು.
 	ಬಾಹ್ಯಗೋಚರ ಸೂಚಿಯ ಆಧಾರದ ಮೇಲೆ ತೆರಿಗೆ ಸಲ್ಲಿಕೆ ಸಾಮಥ್ರ್ಯವನ್ನು ಅಳೆಯುವುದು ಬಹಳ ಸುಲಭವೆಂದು ಭಾವಿಸಲಾಗದು. ಒಬ್ಬ ವ್ಯಕ್ತಿ ಹೊಂದಿರುವ ಆಸ್ತಿಯನ್ನು ಅವನ ತೆರಿಗೆ ಪಾವತಿ ಸಾಮಥ್ರ್ಯದ ಸೂಚಿಯನ್ನಾಗಿ ಪರಿಗಣಿಸಬಹುದು. ಆದರೆ ಹಾಗೆ ಮಾಡುವುದರಲ್ಲಿ ಕೆಲವು ಕೊರತೆಗಳಿವೆ. ಆಸ್ತಿಗಿಂತಲೂ ಆಸ್ತಿಯಿಂದ ಬರುವ ವರಮಾನ ಯಾವಾಗಲೂ ಒಚಿದೇ ಸಮನಾಗಿಲ್ಲದಿರಬಹುದು. ಅಷ್ಟೇ ಅಲ್ಲದೆ ಬೇರೆ ವಿಧಗಳಿಂದ ದೊರಕುವ ವರಮಾನವನ್ನು ಗಣನೆಗೆ ತೆಗೆದುಕೊಂಡು ಅದರಲ್ಲಿ ಅಗತ್ಯ ಖರ್ಚಿಗೆಂದು ಸ್ವಲ್ಪ ಭಾಗವನ್ನು ಬಿಟ್ಟು ಉಳಿದ ವರಮಾನವನ್ನು ತೆರಿಗೆ ಪವತಿ ಸಾಮಥ್ರ್ಯ ಸೂಚಿಯನ್ನಾಗಿ ತೆಗೆದುಕೊಳ್ಳಬಹುದು. ಅನುಭೋಗ ಖರ್ಚಿನ ಮಟ್ಟವನ್ನೂ ತೆರಿಗೆ ಪಾವತಿ ಸಾಮಥ್ರ್ಯದ ಸೂಚಿಯನ್ನಾಗಿ ತೆಗೆದುಕೊಳ್ಳಬಹುದು. ಆದರೆ ಇದರ ಆಧಾರದ ಮೇಲೆ ತೆರಿಗೆ ವಿಧಿಸಿದಾಗ, ಉಳಿತಾಯ ಮಾಡುವವನು ಮತ್ತು ಬಂಡವಾಳ ಹೂಡುವವರು ತೆರಿಗೆಯನ್ನು ತಪ್ಪಿಸಿಕೊಳ್ಳುತ್ತಾರೆ. ಈ ಕೆಲವು ಕಾರಣಗಳಿಗಾಗಿ ಆಸ್ತಿ. ವರಮಾನ ಮತ್ತು ಅನುಭೋಗ ಇವುಗಳಲ್ಲಿ ಯಾವುದೇ ಒಂದನ್ನೇ ತೆರಿಗೆ ಸಲ್ಲಿಕೆ ಸಾಮಥ್ರ್ಯದ ಸೂಚಿಯನ್ನಾಗಿ ತೆಗೆದುಕೊಳ್ಳುತ್ತಾರೆ. ಈ ಕೆಲವು ಕಾರಣಗಳಿಗಾಗಿ ಆಸ್ತಿ. ವರಮಾನ ಮತ್ತು ಅನುಭೋಗ ಇವುಗಳಲ್ಲಿ ಯಾವುದೇ ಒಂದನ್ನೇ ತೆರಿಗೆ ಸಲ್ಲಿಕೆ ಸಾಮಥ್ರ್ಯದ ಸೂಚಿಯನ್ನಾಗಿ ಆಸ್ತಿಯ ಮಟ್ಟ ಮತ್ತು ಅನುಭೋಗದ ಮಟ್ಟವನ್ನು ಸಂಪೂರಕ ಸೂಚಿಯನ್ನಾಗಿಯೂ ಇಟ್ಟುಕೊಂಡು ತೆರಿಗೆ ಪಾವತಿ ಸಾಮಥ್ರ್ಯವನ್ನು ನಿರ್ಣಯಿಸಬಹುದೆಂದು ತಜ್ಞರು ಒಪ್ಪಿದ್ದಾರೆ.
  	ತೆರಿಗೆ ಪಾವತಿ ಸಾಮಥ್ರ್ಯವನ್ನು ನಿರ್ಧರಿಸಲು ಬಾಹ್ಯಗೋಚರ ಸೂಚಿಗಿಂತ ಮನೋಗ್ರಾಹ್ಯ ಸೂಚಿ ಉತ್ತಮವಾದ್ದೆಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತೆರಿಗೆದಾರ ಮಾಡುವ ತ್ಯಾಗವನ್ನು ಮನೋಗ್ರಾಹ್ಯ ಸೂಚಿ ಎಂದು ಪರಿಗಣಿಸಲಾಗಿದೆ. ತುಷ್ಟಿಗುಣದ ಪರಸ್ಪರ ಹೋಲಿಕೆ ಸಾಧ್ಯವೆಂಬ ಊಹೆಯ ಮೇಲೆ ಮತ್ತು ವರಮಾನ ಹೆಚ್ಚಿದಂತೆ ಹಣದ ತುಷ್ಟಿಗುಣ ಇಳಿಯುತ್ತದೆಂಬ ಊಹೆಯ ಮೇಲೆ ತ್ಯಾಗನಿಯಮ ರೂಪಿತವಾಗಿದೆ. ಈ ಊಹೆಗಳನ್ನು ಒಪ್ಪುವುದಾದರೆ. ತೆರಿಗೆ ಕೊಡುವುದರಿಂದ ಉಂಟಾಗುವ ತುಷ್ಟಿಗುಣದ ನಷ್ಟ ಹೆಚ್ಚು ವರಮಾನ ಪಡೆಯುವವರಿಗೆ ಕಡಿಮೆಯಾಗಿರುತ್ತದೆಂದೂ ಕಡಿಮೆ ವರಮಾನ ಪಡೆಯುವವರಿಗೆ ಹೆಚ್ಚಾಗಿರುತ್ತದೆಂದು ಹೇಳಬಹುದು. ಹೆಚ್ಚು ವರಮಾನವಿರುವವರಿಗೆ ತಿರಿಗೆ ಕೊಡುವುದರಿಂದ ಉಂಟಾಗುವ ತುಷ್ಟಿಗುಣದ ನಷ್ಟ ಹೆಚ್ಚೆನಿಸದಿರುವುದರಿಂದ ತೆರಿಗೆಯ ಹೊರೆ ಹೆಚ್ಚಾಗಿ ಬೀಳುವಂತೆ ಮಾಡಬೇಕು. ಕಡಿಮೆ ವರಮಾನವಿರುವವರಿಗೆ ತೆರಿಗೆ ಕೊಡುವುದರಿಂದ ಉಂಟಾಗುವ ತುಷ್ಟಿಗುಣದ ನಷ್ಟ ಹೆಚ್ಚೆನಿಸುವುದರಿಂದ ಅವರ ತೆರಿಗೆ ಸಲ್ಲಿಕೆ ಸಾಮಥ್ರ್ಯ ಕಡಿಮೆಯಾಗಿರುತ್ತದೆ. ಆದ್ದರಿಂದ ಅವರ ಮೇಲೆ ತೆರಿಗೆಯ ಹೊರೆ ಕಡಿಮೆಯಾಗಿ ಬೀಳುವಂತೆ ಮಾಡಬೇಕು. ಈ ರೀತಿಯಾಗಿ ಹೆಚ್ಚಿನ ವರಮಾನ ಪಡೆಯುವವರ ಮೇಲೆ ಹೆಚ್ಚಿನ ತೆರಿಗೆಯನ್ನೂ ಕಡಿಮೆ ವರಮಾನ ಪಡೆಯುವವರ ಮೇಲೆ ಕಡಿಮೆ ತೆರಿಗೆಯನ್ನೂ ವಿಧಿಸದಿದ್ದರೆ ಎಲ್ಲ ತೆರಿಗೆದರರ ತ್ಯಾಗ ಒಚಿದೇ ಸಮನಾಗಿರುವಂತೆ ಮಾಡುವುದು ಸಾಧ್ಯವಾಗುವುದಿಲ್ಲ. ಅರ್ಥಶಾಸ್ತ್ರಜ್ಞರು ಸಮತ್ಯಾಗ ನಿಯಮದ ಮೂರು ಭಿನ್ನ ರೂಪಗಳನ್ನು ವಿವರಿಸಿದ್ದಾರೆ. ಅವು ಯವುವೆಂದರೆ ಸಮ ನಿರಪೇಕ್ಷ ತ್ಯಾಗ, ಸಮಾನುಪತಿ ತ್ಯಾಗ ಮತ್ತು ಸಮ ಸೀಮಾಂತ ತ್ಯಾಗ, ತ್ಯಾಗನಿಯ ಮದ ಯಾವುದೇ ಭಿನ್ನರೂಪವನ್ನು ತೆಗೆದುಕೊಂಡರೂ ಅದು ವರಮಾನದ ಸೀಮಾಂತ ತುಷ್ಟಿಗುಣದ ಮಾಪನ, ವರಮಾನದ ತುಷ್ಟಿಗುಣದ ಇಳಿಮುಖ ಪ್ರವೃತ್ತಿ ಮತ್ತು ವ್ಯಕ್ತಿಗಳ ತುಷ್ಟಿಗುಣದ ಪರಸ್ಪರ ಹೋಲಿಕೆ ಇವೆಲ್ಲವೂ ವಿವಾದಾತ್ಮಕ ವಿಷಯಗಳಾಗಿವೆ. ಆದ್ದರಿಂದ ತ್ಯಾಗ ನಿಯಮದ ಸಮಂಜಸತೆ ಸಂದೇಹಾಸ್ಪದವಾದ ವಿಷಯವಾಗಿದೆ.
 ತೆರಿಗೆ ಅಂತರಣ, ತೆರಿಗೆಯ ಆಪಾತ : ತೆರಿಗೆ ನೀತಿಯ ಉದ್ದೇಶ ಸಫಲವಾಗಬೇಕಾದರೆ ಸರ್ಕಾರ ವಿಧಿಸುವ ಪ್ರತಿ ತೆರಿಗೆಯೂ ಅಂತಿಮವಾಗಿ ಯಾರ ಮೇಲೆ ಬೀಳುತ್ತಿದೆಂಬುದು ಸ್ಪಷ್ಟವಾದ ತಿಳಿದಿರಬೇಕು. ಒಬ್ಬ ವ್ಯಕ್ತಿಯ ಮೇಲೆ ತೆರಿಗೆ ವಿಧಿಸಿದಾಗ ಅವರ ಹೊರೆ ಅವನ ಮೇಲೆ ಬೀಳದೆ ಬೇರೆಯವರಿಗೆ ವರ್ಗಾವಣೆಯಾಗಬಹದು. ಇದನ್ನು ತೆರಿಗೆ ಅಂತರಣ ಎನ್ನುತ್ತಾರೆ ತೆರಿಗೆ ಅಂತರಣದಲ್ಲಿ ಎರಡು ವಿಧ : ಪುರೋಗಾಮಿ ಅಂತರಣ ಮತ್ತು ಅಪರಗಾಮಿ ಅಂತರಣ, ಒಂದು ಪದಾರ್ಥದ ತಯಾರಕನ ಮೇಲೆ ಹಾಕಿದ ತೆರಿಗೆ ಸಗಟು ವ್ಯಾಪಾರಿಗೆ, ಅವನಿಂದ ಚಿಲ್ಲರೆ ವ್ಯಾಪಾರಿಗೆ ಮತ್ತು ಚಿಲ್ಲರೆ ವ್ಯಾಪಾರಿಯಿಂದ ಗ್ರಾಹನಿಗೆ ಅಂತರಣಗೊಂಡರೆ ಅಂತಿಮವಾಗಿ ಎಲ್ಲಿ ನಿಲ್ಲುತ್ತದೆಯೋ ಅದೇ ತೆರಿಗೆಯ ಅಪಾತ, ಸಾಂಪ್ರದಾಯಿಕ ಅರ್ಥದಲ್ಲಿ ತೆರಿಗೆಯ ಆಪಾತ ಕೇವಲ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ್ದು, ಆದರೆ ತೆರಿಗೆ ಸರ್ಕಾರದ ಖಜಾನೆ ನೀತಿಯ ಒಂದು ಭಾಗ ಮಾತ್ರ, ಅದರ ಮತ್ತೊಂದು ಭಾಗ ಸಾರ್ವಜನಿಕ ಖರ್ಚು ತೆರಿಗೆದಾರನಿಗೆ ತೆರಿಗೆಯ ಹೊರೆ ಬೀಳುವುದು ಮಾತ್ರವಲ್ಲ: ಸಾರ್ವಜನಿ ಖರ್ಚಿನಿಂದ ಪ್ರಯೋಜನ ದೊರಕುತ್ತದೆ. ತೆರಿಗೆಯ ಹೊರೆ ಅಥವಾ ತೆರಿಗೆಯಿಂದಾಗುವ ನಷ್ಟ ಮತ್ತು ಸಾರ್ವಜನಿಕ ಖರ್ಚಿನಿಂದ ದೊರಕುವ ಪ್ರಯೋಜನ ಎರಡನ್ನೂ ತಾಳೆ ಮಾಡಿ ತೆರಿಗೆಯ ಹೊರೆಯನ್ನೂ ನಿರ್ಧರಿಸಬೇಕೆಂದು ಯು.ಕೆ.ಹಿಕ್ಸ್ ಮತ್ತು ಮಸ್‍ಗ್ರೇವ್ ಪ್ರತಿಪಾದಿಸಿ, ತೆರಿಗೆಯ ಆಪಾತಕ್ಕೆ ಹೊಸ ಅರ್ಥವನ್ನು ಕೊಟ್ಟಿದ್ದಾರೆ. ಖಜಾನೆ ನೀತಿಯ ಎರಡು ಮುಖಗಳಾದ ತೆರಿಗೆ ಮತ್ತು ಸಾರ್ವಜನಿಕ ಖರ್ಚು ಎರಡನ್ನೂ ಗಣನೆಗೆ ತೆಗೆದುಕೊಂಡರೆ ಮಾತ್ರ ತೆರಿಗೆಯ ಹೊರೆಯ ಸ್ಪಷ್ಟ ಚಿತ್ರ ದೊರಕುತ್ತದೆಂಬುದು ಅವರ ಅಭಿಪ್ರಾಯ. ವಿವಿಧ ತೆರಿಗೆಗಳ ಪೈಕಿ ಯಾವ ತೆರಿಗೆಗಳನ್ನು ಅಂತರಣಗೊಳಿಸಬಹುದು ಮತ್ತು ಯಾವ ತೆರಿಗೆಗಳು ಅಂತರಣಗೊಳ್ಳಲಾರವು ಎಂಬುದು ಖಚಿತವಾಗಿ ತಿಳಿದಿದ್ದರೆ ನೀತಿಯನ್ನು ರೂಪಿಸುವುದಕ್ಕೆ ಅನುಕೂಲವಾಗುತ್ತದೆ. ಅಬ್ಕಾರಿ ಸುಂಕ, ಮಾರಾಟ, ಅಂತರರಾಷ್ಟ್ರೀಯ ವ್ಯಾಪಾರದ ಮೇಲಿನ ತೆರಿಗೆ-ಇವು ಅಂತರಣಗೊಳ್ಳಬಲ್ಲ ತೆರಿಗೆಗಳ ಪೈಕಿ ಮುಖ್ಯವಾದವು. ಇವು ಅಂತರಣಗೊಳ್ಳ ಬಲ್ಲ ತೆರಿಗೆಗಳೆಂಬುದನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ ಆದರೆ ಎಲ್ಲ ಸಂದರ್ಭಗಳಲ್ಲಿಯೂ ಇವು ಅಂತರಣಗೊಳ್ಳಬಲ್ಲವೆಂದು ಹೇಳಲಾಗುವುದಿಲ್ಲ. ಅವುಗಳ ಅಂತರಣ ಮಾರುಕಟ್ಟೆಯ ಪರಿಸ್ಥಿತಿಯನ್ನವಲಂಬಿಸಿರುತ್ತದೆ. ವರಮಾನ ತೆರಿಗೆ ಯಾರ ಮೇಲೆ ವಿಧಿಸಲ್ಪಡುತ್ತದೋ ಅವರ ಮೇಲೆಯೇ ಅದರ ಹೊರೆ ಬೀಳುವುದೆಂಬುದು ಸಾಮಾನ್ಯ ನಂಬುಗೆ, ಇದು ಸ್ವಲ್ಪಮಟ್ಟಿಗೆ ವಾದಗ್ರಸ್ತವಾಗಿದ್ದರೂ ಒಟ್ಟಿನಲ್ಲಿ ವರಮಾನ ತೆರಿಗೆ ಸಂತರಣಗೊಳ್ಳಲಾರದೆಂಬ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ದೊರಕಿದೆ. ಆದರೆ ಕಾರ್ಪೋರೇಷನ್ ತೆರಿಗೆ ಅಂತರಣದ ವಿಷಯ ಇನ್ನೂ ವಿವಾದಾತ್ಮಕವಾಗಿಯೇ ಉಳಿದಿದೆ. ಅದರ ಬಗೆ ತಜ್ಞರಲ್ಲಿ ಒಮ್ಮತವಿಲ್ಲ.

ತೆರಿಗೆ ವಿನ್ಯಾಸ : ಒಂದು ರಾಷ್ಟ್ರದ ಆರ್ಥಿಕತೆಯ ವಿನ್ಯಾಸ ಬದಲಾವಣೆಯಾದಂತೆ ತೆರಿಗೆಯ ವಿನ್ಯಾಸವೂ ಬದಲಾಗುತ್ತ ಬಂದಿದೆ. ತೆರಿಗೆ ವಿನ್ಯಾಸ ಯಾವ ತೆರಿಗೆಗಳ ಪ್ರಾಮುಖ್ಯ ಎಷ್ಟು ಮತ್ತು ಒಟ್ಟು ತೆರಿಗೆ ಆದಾಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಪಾಲು ಎಷ್ಟು ಎಂಬುದಕ್ಕೆ ಸಂಬಂಧಿಸಿದ್ದು. ಅರ್ಥಿಕ ಬೆಳವಣಿಗೆಯ ಆರಂಭದ ಘಟ್ಟದಲ್ಲಿ ಕೃಷಿಯೊಂದೇ ಮುಖ್ಯ ಕಸಬೂ ಆದಾದ ಮೂಲವೂ ಆಗಿದ್ದು. ತೆರಿಗೆಗಾಗಿ ಈ ಕ್ಷೇತ್ರವನ್ನೇ ಅವಲಂಬಿಸುವುದು ಅಗತ್ಯವಾಗುತ್ತದೆ. ಆದರೆ ಈ ಕ್ಷೇತ್ರದಲ್ಲಿ ಹಣದ ಮಾಧ್ಯಮದ ಬಳಕೆ ವ್ಯಾಪಕವಾಗಿಲ್ಲದಿರುವುದರಿಂದ ಮತ್ತು ಕೃಷಿಯಿಂದ ವರಮಾನ ಪಡೆಯುವವರು ಸರಿಯಾದ ಲೆಕ್ಕಪತ್ರಗಳನ್ನಿಡುವ ಅಭ್ಯಾಸವನ್ನು ಬೆಳಸಿಕೊಂಡಿಲ್ಲದಿರುವುದರಿಂದ ಕೃಷಿ ವರಮಾನದ ಮೇಲೆ ತೆರಿಗೆ ವಿಧಿಸುವುದು ಬಹಳ ಕಷ್ಟದ ಕೆಲಸ. ಆದ್ದರಿಂದ ಹೆಣೇತರ ರೂಪದ ತೆರಿಗೆಯನ್ನು ಅವಲಂಬಿಸಬೇಕಾಗುತ್ತದೆ. ಕೈಗಾರಿಕಾ ಉತ್ಪಾದನೆ ಅಭಿವೃದ್ಧಿಯಾಗದಿರುವುದರಿಂದ ಅಬ್ಕಾರಿ ಸುಂಕ ಮತ್ತು ಮಾರಾಟ ತೆರಿಗೆಗಳಂಥ ತೆರಿಗೆಗಳಿಂದಲೂ ಅಷ್ಟಾಗಿ ಆದಾಯ ದೊರಕುವುದಿಲ್ಲ. ವರಮಾನ ತೆರಿಗೆಯನ್ನು ವ್ಯಾಪಕವಾಗಿ ವಿಧಿಸುವುದಕ್ಕೂ ಅಡಚಣೆಗಳಿರುತ್ತದೆ. ವಿದೇಶಿ ವ್ಯಾಪಾರಕಾ ಉತ್ಪಾದನೆ ಮತ್ತು ಕೈಗಾರಿಕಾ ಸರಕುಗಳ ವಿಕ್ರಯ ಹೆಚ್ಚಿ. ಪರೋಕ್ಷ ತೆರಿಗೆಗಳ ವ್ಯಾಪ್ತಿ ವಿಸ್ತರಿಸಿ, ಅವುಗಳಿಂದ ಸರ್ಕಾರಕ್ಕೆ ದೊರಕುವ ಆದಾಯ ಅಧಿಕವಾಗುತ್ತದೆ. ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೊಸ ಹೊಸ ತೆರಿಗೆ ಮೂಲಗಳು ದೊರಕುತ್ತದೆ. ಇವನ್ನೆಲ್ಲ ಉಪಯೋಗಿಸಿಕೊಂಡು ಸರ್ಕಾರದ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು. ವ್ಯವಸಾಯವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವರಮಾನ ಪಡೆಯುವವರು. ಸರಿಯಾದ ಲೆಕ್ಕಪತ್ರಗಳನ್ನಿಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ವರಮಾನ ತೆರಿಗೆಯಿಂದ ಸರ್ಕಾರಕ್ಕೆ ದೊರಕುವ ಆದಾಯ ಹೆಚ್ಚುತ್ತದೆ. ಕೈಗಾರಿಕಾಭಿವೃದ್ಧಿಗೆ ಅವಕಾಶ ಹೆಚ್ಚುವುದರಿಂದ ಕಾರ್ಪೋರೇಷನ್‍ಗಳ ಬೆಳವಣಿಗೆಯಾಗಿ ಕಾರ್ಪೋರೇಷನ್ ತೆರಿಗೆಯಿಂದಲೂ ಸರ್ಕಾರಕ್ಕೆ ಹೆಚ್ಚು ಆದಾಯ ದೊರಕುತ್ತದೆ. ಈ ಕಾರಣಗಳಿಂದ ಒಟ್ಟು ತೆರಿಗೆ ಆದಾಯದಲ್ಲಿ ಪ್ರತ್ಯಕ್ಷ ತೆರಿಗೆಗಳ ಪಾಲು ಹೆಚ್ಚುತ್ತದೆ. ತೆರಿಗೆ ವಿನ್ಯಾಸದ ಈ ಬದಲಾವಣೆ ಕೇವಲ ಆರ್ಥಿಕ ಅಂಶಗಳಿಂದಲೇ ಅಲ್ಲದೆ ರಾಜಕೀಯ ಮತ್ತು ಸಾಮಾಜಿಕ ಉದ್ದೇಶಗಳಲ್ಲಿ ಆಗುವ ಬದಲಾವಣೆಗಳಿಂದಲೂ ಪ್ರಭಾವಿತವಾಗಿರುತ್ತದೆ. ವಿವಿಧ ವರ್ಗಗಳ ನಡುವಣ ಅಂತರವನ್ನು ಕಡಿಮೆ ಮಾಡಬೇಕೆಂಬ ಉದ್ದೇಶದ ಪ್ರಾಮುಖ್ಯ ಹೆಚ್ಚಿದಂತೆ ಆರೋಹಿ, ತೆರಿಗೆ ಪದ್ಧತಿಗೆ ಅಧಿಕಾಧಿಕ ಪ್ರಾಮುಖ್ಯ ಸಲ್ಲುತ್ತಿದೆ.

	ಆರ್ಥಿಕಾಭಿವೃದ್ಧಿಯಾದಂತೆ ತೆರಿಗೆ ವಿನ್ಯಾಸ ಹೇಗೆ ಬದಲಾಗುತ್ತದೆಂಬುದನ್ನು ವಿವಿಧ ತಲಾ ವರಮಾನ ಮಟ್ಟಗಳಲ್ಲಿ ವಿವಿಧ ತೆರಿಗೆಗಳಿಂದ ಬರುವ ಆದಾಯ (ಸ್ಥೂಲ ರಾಷ್ಟ್ರೀಯ ಉತ್ಪನ್ನದೊಡನೆ ಹೋಲಿಸಿದಾಗ) ಯಾವ ಮಟ್ಟದಲ್ಲಿರುತ್ತದೆ ಮತ್ತು ಒಟ್ಟು ತೆರಿಗೆ ಆದಾಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಪಾಲು ಎಷ್ಟಿರುತ್ತದೆ ಎಂಬುದರಿಂದ ತಿಳಿಯಬಹುದು. ಕೆಳಗೆ ಕೊಟ್ಟಿರುವ ಕೋಷ್ಟಕ ಅದನ್ನು ಸ್ಪಷ್ಟಪಡಿಸುತ್ತದೆ :
 ತಲಾ ವರಮಾನ ವಿವಿಧ ಮಟ್ಟಗಳಲ್ಲಿ ಆರಿಸಿದ ದೇಶಗಳ ಸರಾಸರಿ ತೆರಿಗೆ ವಿನ್ಯಾಸದ ಸಂಯೋಜಕ: 

ತಲಾವರಮಾನ (ಡಾಲರುಗಳಲ್ಲಿ)

ವರಮಾನ ತೆರಿಗೆಗಳು ಸ್ವತ್ತಿನ ತೆರಿಗೆಗಳು ವಿದೇಶೀ ವ್ಯಾಪಾರದ ಮೇಲಿನ ತೆರಿಗೆಗಳು ಉತ್ಪಾದನೆ ಮತ್ತು ಮಾರಾಟದ ಮೇಲಿನ ತೆರಿಗೆಗಳು ಒಟ್ಟು (ಸಂಬಳ ಪಟ್ಟಿ ತೆರಿಗೆಗಳನ್ನು ಬಿಟ್ಟು) ಸಂಬಳಪಟ್ಟಿ ತೆರಿಗೆಗಳು ಒಟ್ಟು

(ಸ್ಥೂಲ ರಾಷ್ಟ್ರೀಯ ಉತ್ಪನ್ನದ ಶೇಕಡ)

100ಕ್ಕಿಂತ ಕಡಿಮೆ 1.9 0.5 4.6 3.4 11.6 0.5 12.0

100-200 2.6 0.3 4.4 4.5 12.7 0.5 13.2

200-300 2.8 0.6 5.5 4.3 14.4 1.4 15.8

300-400 3.6 1.0 4.6 5.2 13.4 3.0 16.4

400-500 3.4 1.2 3.5 4.2 12.1 2.1 14.3

500-900 4.8 1.4 2.6 1.7 16.7 2.9 19.6

ಅಮೆರಿಕ ಸಂಯುಕ್ತ ಸಂಸ್ಥಾನ 14.8 5.7 0.3 5.3 25.0 5.7 30.8


(ಒಟ್ಟು ತೆರಿಗೆ ಆದಾಯದ ಸೇಕಡ)

100ಕ್ಕಿಂತ ಕಡಿಮೆ 16.3 4.1 38.5 28.0 96.7 7.3 100

100-200 19.6 2.0 33.4 33.8 96.3 3.7 100

200-300 17.5 3.9 35.2 27.3 91.3 8.7 100

300-400 22.3 5.9 27.9 30.6 81.8 18.2 100

400-500 23.4 8.4 24.7 29.2 84.9 15.1 100

500-900 24.7 7.5 13.5 8.5 85.3 14.7 100

ಅಮೆರಿಕ ಸಂಯುಕ್ತ ಸಂಸ್ಥಾನ 48.2 18.5 0.9 17.2 81.5 18.5 100


(ಮೂಲ : ಆರ್.ಎ. ಮಸ್‍ಗ್ರೇವ್ ಮತ್ತು ಪಿ.ಮಸ್‍ಗ್ರೇವ್, 
    ಪಬ್ಲಿಕ್ ಫಿನಾನ್ಸ್ ಇನ್ ತಿಯೊರಿ ಅಂಟ್ ಪ್ರಾಕ್ಟೀಸ್,
    ನ್ಯೂಯಾರ್ಕ್ : ಮ್ಯಕ್‍ಗ್ರಾ-ಹಿಲ್ ಬುಕ್ ಕಂಪನಿ, 1973)
     ಮೇಲಿನ ಕೋಷ್ಟಕದಿಂದ ತೆರಿಗೆ ವಿನ್ಯಾಸಕ್ಕೆ ಸಂಬಂಧಿಸಿದ ಕೆಲವು ಅಂಶಗಳು ವ್ಯಕ್ತಪಡುತ್ತವೆ. ತಲಾ ವರಮಾನದ ಹೆಚ್ಚಿದಂತೆ ಸರ್ಕಾರಕ್ಕೆ ತೆರಿಗೆಗಳಿಂದ ದೊರಕುವ ಆದಾಯ (ಸ್ಥೂಲ ರಾಷ್ಟ್ರೀಯ ಉತ್ಪನ್ನದ ಸೇಕಡ) ಹೆಚ್ಚುತ್ತದೆ. ಅಂತೆಯೇ ವರಮಾನ ತೆರಿಗೆಗಳು, ಆಸ್ತಿ, ತೆರಿಗೆಗಳು ಮತ್ತು ಸಂಬಳಪಟ್ಟಿ ತೆರಿಗೆಗಳಿಂದ ದೊರಕುವ ಆದಾಯದ ಪ್ರಮಾಣವೂ ಹೆಚ್ಚುತ್ತದೆ. ಮತ್ತು ವಿದೇಶೀ ವ್ಯಾಪಾರದ ಮೇಲಿನ ತೆರಿಗೆಗಳು ಮತ್ತು ಉತ್ಪಾದನೆ ಮತ್ತು ಮಾರಾಟದ ಮೇಲಿನ ತೆರಿಗೆಗಳಿಂದ ದೊರಕುವ ಅದಾಯದ ಪ್ರಮಾಣ ಇಳಿಮುಖವಾಗುತ್ತದೆ. ಒಟ್ಟು ತೆರಿಗೆ ಆದಾಯದಲ್ಲಿ ವರಮಾನ ತೆರಿಗೆ ಮುಂತಾದ ಪ್ರತ್ಯಕ್ಷ ತೆರಿಗೆಗಳ ಪಾಲು ಹೆಚ್ಚಿ ವಿದೇಶೀ ವ್ಯಾಪಾರದ ಮೇಲಿನ ತೆರಿಗೆಗಳು, ಉತ್ಪಾದನೆ ಮತ್ತು ಮಾರಾಟದ ಮೇಲಿನ ತೆರಿಗೆಗಳನ್ನೊಳಗೊಂಡ ಪರೋಕ್ಷ ತೆರಿಗೆಗಳ ಪಾಲು ಕಡಿಮೆಯಾಗುತ್ತದೆ. ತಲಾ ವರಮಾನದ ಮಟ್ಟ ಹೆಚ್ಚಿದಂತೆ ಅದರೊಡನೆಯೇ ಮೇಲೆ ಹೇಳಿರುವ ರೀತಿಯಲ್ಲಿ ತೆರಿಗೆ ವಿನ್ಯಾಸ ಬದಲಾವಣೆಯಾಗುವುದು ಕಂಡುಬಂದಿದೆ.			                       (ಬಿ.ಎಸ್.ಎಸ್.ಎ.)