ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದತ್ತ, ಮೈಕೇಲ್ ಮಧುಸೂದನ

ವಿಕಿಸೋರ್ಸ್ದಿಂದ

ದತ್ತ, ಮೈಕೇಲ್ ಮಧುಸೂದನ 1824-1873. ಅತ್ಯಂತ ಮಹತ್ತ್ವದ ಬಂಗಾಳಿ ಸಾಹಿತಿ. ರಾಜನಾರಾಯಣ ಮತ್ತು ಜಾಹ್ನವಿ ದತ್ತರ ಒಬ್ಬನೇ ಮಗ. ಇಂದಿನ ಬಾಂಗ್ಲಾದೇಶದ ಜೈಶೋರ್ ಜಿಲ್ಲೆಯ ಸಗರ್‍ದಾಡಿ ಎಂಬುದು ಈತನ ಜನ್ಮಸ್ಥಳ. ಕಲ್ಕತ್ತದ ಪ್ರಸಿದ್ಧ ಹಿಂದೂ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದ. ಆಗಲೇ ಇಂಗ್ಲಿಷಿನಲ್ಲಿ ಕವನ ರಚಿಸುವ ಹವ್ಯಾಸವಿತ್ತು. 1843ರಲ್ಲಿ ಕ್ರೈಸ್ತ ಧರ್ಮಾನುಯಾಯಿಯಾಗಿ ಮೈಕೇಲ್ ಮಧುಸೂದನ ಎಂದು ಹೆಸರು ಬದಲಿಸಿಕೊಂಡ. 1848ರಲ್ಲಿ ಮದ್ರಾಸ್ ನಗರದ ಗಂಡುಮಕ್ಕಳ ಅನಾಥಾಲಯದಲ್ಲಿ ಇಂಗ್ಲಿಷ್ ಉಪಾಧ್ಯಾಯನಾಗಿ ಕೆಲಸಕ್ಕೆ ಸೇರಿದ. ಅಲ್ಲಿಯೇ ರೆಬೆಕ ಮ್ಯಾಕ್ಟವೀಸ್ ಎಂಬ ಆಂಗ್ಲ ಕನ್ಯೆಯನ್ನು ವಿವಾಹವಾದ. 1849ರಲ್ಲಿ ದಿ ಕ್ಯಾಪ್ಟಿವ್ ಲೇಡಿ (ಸೆರೆಸಿಕ್ಕಿದ ಹೆಂಗಸು) ಎಂಬ ತನ್ನ ಮೊದಲ ಇಂಗ್ಲಿಷ್ ನೀಳ್ಗವನವನ್ನು ಟಿಮೋತಿ ಎಂಬ ಕಾವ್ಯನಾಮದಿಂದ ಪ್ರಕಟಿಸಿದ. ಈ ಪುಸ್ತಕವನ್ನು ನೋಡಿದ ಜೆ.ಇ. ಡ್ರಿಂಕ್‍ವಾಟರ್ ಬೆತೂನ್ ಎಂಬ ಆಂಗ್ಲೇಯ ಈತನನ್ನು ಬಂಗಾಳಿಯಲ್ಲೇ ಬರೆಯುವಂತೆ ಪ್ರೋತ್ಸಾಹಿಸಿದ. 1852ರಲ್ಲಿ ದತ್ತ ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಉಪಾಧ್ಯಾಯನಾಗಿ ಸೇರಿದ. ಮೊದಲ ಹೆಂಡತಿಯಿಂದ ಬೇರೆಯಾಗಿ ಎಮಿಲಾ ಹೆನ್ರಿಟ್ವಾ ಸೋಫಿಯ ಎಂಬ ಫ್ರೆಂಚ್ ಕನ್ಯೆಯನ್ನು ಮದುವೆಯಾದ. ಪುನಃ ಕಲ್ಕತ್ತೆಗೆ ಹಿಂದಿರುಗಿ ಪೊಲೀಸ್ ಮಾಜಿಸ್ಟ್ರೇಟ್ ಒಬ್ಬನ ಗುಮಾಸ್ತೆಯಾದ. ವಿದ್ಯಾಸಾಗರನ ನೆರವಿನಿಂದ 1862ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ. 1866ರಲ್ಲಿ ಭಾರತಕ್ಕೆ ಹಿಂದಿರುಗಿ, ಹೂಗ್ಲಿಯಲ್ಲಿ ನೆಲಸಿ, ಕಡುಬಡತನದಿಂದ ಜೀವನ ನಿರ್ವಹಣೆ ಮಾಡಿದ.

1859ರಿಂದ 1862 ಈತನ ಸಾಹಿತ್ಯ ಜೀವನದ ಪ್ರಮುಖ ವರ್ಷಗಳು. ಮುಖ್ಯವಾಗಿ ಈತ ಮೂರು ನಾಟಕಗಳನ್ನೂ ನಾಲ್ಕು ಪದ್ಯಕೃತಿಗಳನ್ನೂ ರಚಿಸಿದ್ದಾನೆ.

ಶರ್ಮಿಷ್ಠಾ ನಾಟಕ (1853) : ಮಹಾಭಾರತ ಕಥೆಯನ್ನು ಆಧರಿಸಿರುವ ಇದು ಸಂಸ್ಕøತ ನಾಟಕಗಳ ಮಾದರಿಯಲ್ಲಿದ್ದು ಮನುಷ್ಯತ್ವದ ಮಹತ್ತ್ವವನ್ನು ಎತ್ತಿ ಹಿಡಿಯುತ್ತದೆ.

ಪದ್ಮಾವತೀ ನಾಟಕ (1860) : ಇಲೀಯಡ್ ಮಹಾಕಾವ್ಯದಲ್ಲಿ ಬರುವ ಚಿನ್ನದ ಸೇಬಿನ ಕಥೆಯನ್ನು ಭಾಗಶಃ ಭಾರತೀಕರಣ ಮಾಡಿಕೊಂಡು ರಚಿತವಾಗಿರುವ ನಾಟಕವಿದು.

ಕೃಷ್ಣಾಕುಮಾರೀ ನಾಟಕ (1861) : ಷೇಕ್ಸ್‍ಪಿಯರನ ಮಾದರಿಯಲ್ಲಿ ಪ್ರಥಮ ಬಾರಿಗೆ, ಬಂಗಾಳಿಯಲ್ಲಿ ರಚಿತವಾದ ಚಾರಿತ್ರಿಕ ರಮ್ಯ ದುರಂತ ನಾಟಕವಿದು. ಇದೇ ಮಾದರಿಯನ್ನು ಅನಂತರದ ಕೃತಿಗಳಲ್ಲಿಯೂ ಕಾಣಬಹುದು : ಮಾಯಾಕಾನನ್ ಏಕೀಕೀ ಬಾಲ ಸಭ್ಯತಾ (1860) ಮತ್ತು ಬುಡೋ ಶಾಲೀಕೇರ್ ಘಾಡೇ ರೋನ್(1860)ಗಳಲ್ಲಿ ಯುವಕ ಬಂಗಾಳಿಗಳನ್ನು ವಿಡಂಬಿಸಿದ್ದಾನೆ. ಇಲ್ಲಿನ ವಿಡಂಬನೆ ಮೋಲ್ಯೆರ್‍ನಲ್ಲಿರುವಷ್ಟು ಚುರುಕಾಗಿದೆ ಎಂದು ವಿಮರ್ಶಕರ ಅಭಿಪ್ರಾಯ. ದೀನಬಂಧುಮಿತ್ರ ಅವರ ನೀಲದರ್ಪಣ್ ಎಂಬ ನಾಟಕವನ್ನು ಈತ ಇಂಗ್ಲಿಷಿಗೆ ಅನುವಾದಿಸಿದ್ದಾನೆ.

1861ರಲ್ಲಿ ಬಂದ ತಿಲೋತ್ತಮಾ ಸಂಭವ ಕಾವ್ಯ ಪುರಾಣ ಕಥೆಯನ್ನು ಆಧರಿಸಿ ಬರೆದ ಪ್ರಥಮ ಕೃತಿ. ಸರಳ ರಗಳೆಯನ್ನು ಪ್ರಥಮ ಬಾರಿಗೆ ಬಂಗಾಳಿಯಲ್ಲಿ ತಂದ ಕೀರ್ತಿ ದತ್ತನದು.

ಮೇಘನಾದವಧ ಕಾವ್ಯ ಸಾಹಿತ್ಯಕ್ಕೆ ಈತನ ಅತ್ಯುತ್ತಮ ಕೊಡುಗೆ. ಬಂಗಾಳಿಯಲ್ಲಿ ಪಾಶ್ಚಾತ್ಯ ಮಹಾಕಾವ್ಯಗಳ ಮಾದರಿಯಲ್ಲಿ ಬರೆದ ಮೊದಲ ಮಹಾಕಾವ್ಯವಿದು. ಈ ಕಾವ್ಯಕ್ಕೆ ಮೂಲ ರಾಮಾಯಣ. ಮೇಘನಾದ (ಇಂದ್ರಜಿತು) ತನ್ನ ತಾಯ್ನಾಡಾದ ಲಂಕೆಯನ್ನು ಲಕ್ಷ್ಮಣನಿಂದ ರಕ್ಷಿಸುವುದಕ್ಕಾಗಿ ನಡೆಸಿದ ಪ್ರಯತ್ನ, ಆತನ ಸಾವು-ಇವನ್ನು ಇಲ್ಲಿ ಬಣ್ಣಿಸಲಾಗಿದೆ.

ಬೀರಾಂಗನಾ ಕಾವ್ಯ (1862) : ಪ್ರಿಯಪ್ರಿಯೆಯರನ್ನು ಕುರಿತ ಸರಳ ರಗಳೆಯ ಈ ವೀರ ಕಾವ್ಯದಲ್ಲಿ ಪೌರಾಣಿಕ ನಾಯಕಿಯರನ್ನು ಬಳಸಿಕೊಳ್ಳಲಾಗಿದೆ.

ಬ್ರಜಾಂಗನಾಕಾವ್ಯ (1861) ರಾಧಾ-ಕೃಷ್ಣರನ್ನು ಕುರಿತಾದ ಒಂದು ಮಧುರ ಕಾವ್ಯ.

1862ರಲ್ಲಿ ವಿದೇಶಯಾತ್ರೆ ಕೈಗೊಂಡು ಫ್ರಾನ್ಸಿನಲ್ಲಿದ್ದಾಗ ದತ್ತ ಸಾನೆಟ್ಟುಗಳನ್ನು ಪ್ರಥಮ ಬಾರಿಗೆ ಬಂಗಾಳಿಯಲ್ಲಿ ತಂದ. 1866ರಲ್ಲಿ ಚತುರ್ದಶ್‍ಪದಿ ಕಬಿತಾವಲೀ (ನೂರು ಸಾನೆಟ್ಟುಗಳ ಒಂದು ಪುಸ್ತಕ) ಹೊರಬಂತು. ಕೆಲವು ಬಿಡಿ ಈತ ಕವನಗಳನ್ನೂ ಬರೆದಿದ್ದಾನೆ. ಹೆಕ್ಟರ್‍ಬಧ್ ಎಂಬುದು ಈತನ ಒಂದೇ ಒಂದು ಗದ್ಯಕೃತಿ.

ಬಂಗಾಳಿಯ ಪಯಾರ್ ಛಂದಸ್ಸಿನ ದುರ್ಬಲತೆಯನ್ನು ಕಂಡುಕೊಂಡ ಈತ ಸಾಂಪ್ರದಾಯಿಕ ಛಂದಸ್ಸಿನ ಗತಿವಿಧಾನವನ್ನು ವಿರೋಧಿಸಿ, ಮಿಲ್ಟನ್ನನ ಮಾದರಿಯಲ್ಲಿ ಸರಳ ರಗಳೆಯನ್ನು ಬಂಗಾಳಿಯಲ್ಲಿ ಮೊದಲಿಗೆ ಪ್ರಚಾರಕ್ಕೆ ತಂದ. ಈ ಬದಲಾವಣೆ, ಬಂಗಾಳೀ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಲೆ ಹೊಕ್ಕು, ಅಂದಿನ ಸಾಹಿತ್ಯದ ಅವಶ್ಯಕತೆಗೆ ತಕ್ಕಂತೆ ಬಳಕೆಗೆ ಬಂತು.

ದತ್ತ ಒಬ್ಬ ಸಮಾಜ ಸುಧಾರಕನೂ ಆಗಿ ಕೆಲಸ ಮಾಡಿದ್ದಾನೆ. ನಿಜವಾಗಿ ಈತ ಪಾಶ್ಚಾತ್ಯ ಸಂಸ್ಕøತಿಯಲ್ಲಿರುವ ಒಳಿತುಗಳನ್ನು ಗಮನಿಸಿ ಅದನ್ನು ತನ್ನ ದೇಶದ ಉತ್ತಮಿಕೆಗೆ ಬಳಸಿಕೊಂಡ ಒಬ್ಬ ದೇಶಪ್ರೇಮಿ. ಭಾರತದ ಗೊಡ್ಡು ಸಂಪ್ರದಾಯಗಳನ್ನು ಈತ ಪ್ರಬಲವಾಗಿ ವಿರೋಧಿಸಿದ. ವಿಧವಾವಿವಾಹ, ಹೆಣ್ಣುಮಕ್ಕಳ ವಿದ್ಯಾಭ್ಯಾಸದ-ಇಂಥ ಸಾಮಾಜಿಕ ಆಸ್ಥೆಗಳ ಬಗ್ಗೆ ಈತನಿಗೆ ತೀವ್ರ ಕಾಳಜಿ ಇತ್ತು. ಬಂಗಾಳೀ ರಂಗದ ಮೇಲೆ ಈತ ಮೊದಲ ಬಾರಿಗೆ ನಟಿಯರನ್ನು ತಂದ.

ಎಲ್ಲ ಮೂಢನಂಬಿಕೆಗಳನ್ನೂ ವಿರೋಧಿಸುತ್ತಿದ್ದ ಈತ ಒಬ್ಬ ಕ್ರಾಂತಿಕಾರಿಯಂತೆ ಜೀವನ ನಡೆಸಿದ.

 (ಎಚ್.ಡಿ.ಒ.)

ಮಧುಸೂದನ ದತ್ತ ಬಾಲ್ಯದಲ್ಲಿ ಶಾಳೆಯಲ್ಲಿ ಪರ್ಷಿಯನ್ ಕಲಿತ. ತಯಿ ಇವನಿಗೆ ರಾಮಾಯಣ, ಮಹಾಭಾರತಗಳಲ್ಲಿ ಆಸಕ್ತಿಯನ್ನುಂಟುಮಾಡಿದಳು. ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಗಾಧ ಪ್ರೀತಿಯನ್ನು ಬೆಳೆಸಿಕೊಂಡ. 1844ರಲ್ಲಿ ಬಿಷಪ್ಸ್ ಕಾಲೇಜನ್ನು ಸೇರಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯನ್ನು ಕಲಿತ. ಹೀಗೆ 20ನೆಯ ವಯಸ್ಸಿನ ಹೊತ್ತಿಗೆ ಬಂಗಾಳಿ, ಇಂಗ್ಲಿಷ್, ಲ್ಯಾಟಿನ್, ಗ್ರೀಕ್ ಸಾಹಿತ್ಯಗಳ ನೇರ ಪರಿಚಯವನ್ನು ಪಡೆದುಕೊಂಡಿದ್ದ. 1847ರಿಂದ ಅವನ ಶ್ರೀಮಂತ ತಂದೆ ಅವನಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದ. ಇಲ್ಲಿಂದ ಕವಿಯದು ಹೋರಾಟದ ಬದುಕಾಯಿತು.

1858ರಿಂದ ದತ್ತನ ಸಾಹಿತ್ಯರಚನೆಯ ಫಲದಾಯಕ ಕಾಲ ಪ್ರಾರಂಭವಾಯಿತು. ಅದೇ ವರ್ಷ ಬರೆದ `ಶರ್ಮಿಷ್ಠ ಶ್ರೇಷ್ಠ ನಾಟಕವಲ್ಲದಿದ್ದರೂ ಆಧುನಿಕ ಬಂಗಾಳಿ ನಾಟಕದ ನಾಂದಿ ಇದು ಎಂದು ಗುರುತಿಸುತ್ತಾರೆ. `ಕೃಷ್ಣಕುಮಾರಿ' (1861) ಟ್ರ್ಯಾಜಿಡಿ ಪ್ರಕಾರಕ್ಕೆ ಸೇರಿದ್ದು, ಸಂಸ್ಕøತ ನಾಟಕ ಬಹು ಮೆದು ಎಂದು ಭಾವಿಸಿದ್ದ ದತ್ತ ಈ ಷೇಕ್ಸ್‍ಪಿಯರ್‍ನ ನಾಟಕಗಳನ್ನು ಮಾದರಿಯನ್ನಾಗಿ ಸ್ವೀಕರಿಸಿದು `ಮೇಘನಾದ ಕಾವ್ಯ ಪ್ರಕಟವಾದಾಗ ಅದನ್ನು ಆವರೆಗಿನ ಬಂಗಾಳಿ ಕಾವ್ಯದ ಶಿಖರ ಎಂದು ಓದುಗರೂ ವಿಮರ್ಶಕರೂ ಸ್ವೀಕರಿಸಿದರು.

ಬಂಗಾಳಿ ಸಾಹಿತ್ಯಕ್ಕೆ ಮಧುಸೂದನ ದತ್ತ ಆಧುನಿಕತೆಯನ್ನು ತಂದುಕೊಟ್ಟ ಯೂರೋಪಿನ ಸಾಹಿತ್ಯದಿಂದ ಸ್ವೀಕರಿಸಿದ್ದನ್ನು ಬಂಗಾಳಿ ಸಾಹಿತ್ಯದ ಭಾಗವನ್ನಾಗಿ ಮಾಡಿದ್ದು, ಬದುಕಿನಲ್ಲಿ ಭಾರತೀಯ ಸಂಸ್ಕøತಿ, ಯೂರೋಪಿನ ಸಂಸ್ಕøತಿಗಳ ಸಾಮರಸ್ಯವನ್ನು ಸಾಧಿಸುವುದರಲ್ಲಿ ವಿಫಲನಾದರೂ ಸಾಹಿತ್ಯದಲ್ಲಿ ಯಶಸ್ವಿಯಾದ. (ಎಲ್.ಎಸ್.ಎಸ್)