ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದರಿಯಾ ದೌಲತ್
ಗೋಚರ
ದರಿಯಾ ದೌಲತ್ -
ಹೈದರ ಅಲಿ ಮಂಗಳೂರಿನ ಸಮುದ್ರ ತೀರದವರೆಗೂ ತನ್ನ ರಾಜ್ಯ ವಿಸ್ತರಿಸಿದ್ದರ ಸಂತೋಷದ ನೆನಪಿಗಾಗಿ ಶ್ರೀರಂಗ ಪಟ್ಟಣದಲ್ಲಿ ಕಟ್ಟಿಸಿದ ಬೇಸಗೆ ಅರಮನೆ. ಬಹು ಹಿಂದೆ ಮಹಾನವಮಿ ಮಂಟಪವಿದ್ದ ಕಡೆ ಎಂದರೆ ಕೋಟೆಯ ಹೆಬ್ಬಾಗಿಲಿಗೆ ಎದುರಾಗಿ ಇದು ಪೂರ್ವದಿಕ್ಕಿನಲ್ಲಿ ಇದೆ. ದರಿಯಾ ದೌಲತ್ ಎಂದರೆ ಸಮುದ್ರದ ಮೇಲಿನ ರಾಜ್ಯವೆಂದು ಅರ್ಥ. ಅರಮನೆಯ ಸುತ್ತಲೂ ರಮ್ಯ ಉದ್ಯಾನವನವಿದ್ದು ಅದಕ್ಕೆ ಬಂಗಾರದೊಡ್ಡಿ ನಾಲೆಯಿಂದ ನೀರು ಬರುವಂತೆ ಮಾಡಲಾಗಿದೆ. ಈ ಮಹಲು ಇಸ್ಲಾಂ ವಾಸ್ತುಕಲೆಯ ಅತ್ಯುತ್ತಮ ನಿದರ್ಶನವಾಗಿದೆ. ಬೇಸಗೆಯಲ್ಲೂ ಬೇಸರಿಕೆ ಆದಾಗಲೂ ಸುಲ್ತಾನರು ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಕಟ್ಟಡ ಎತ್ತರವಾದ ಜಗುಲಿಯ ಮೇಲೆ ಇದೆ. ಸುತ್ತಲೂ ಬಹು ನೀಳವಾದ, ಕಲಾತ್ಮಕವಾದ ಕಂಬಗಳಿಂದ ಕೂಡಿದ ಕೈಸಾಲೆ ಇದೆ. ನಾಲ್ಕು ಕೆಡೆಗಳಿಂದಲೂ ಮೇಲಕ್ಕೆ ಹತ್ತಿ ಹೋಗುವುದಕ್ಕೆ ಗೋಡೆಗಳ ನಡುವೆ ಕಿರಿದಾದ ಹಂತಗಳಿವೆ. ಮೇಲಿನ ಅಂತಸ್ತಿನಲ್ಲಿ ನವಾಬನ ಮತ್ತು ಜನಾನಾ (ಹೆಂಗಸರ) ಕೋಣೆಗಳಿವೆ. ಕೆಳಗಡೆ ವಿಶಾಲವಾದ ದರ್ಬಾರು ಸಭಾಂಗಣವಿದೆ. ಮೇಲಿನ ಮಹಡಿಯಲ್ಲಿ ಚಾಚಿದ ಮೊಗಸಾಲೆ ಇದ್ದು ಆ ಸ್ಥಳದಲ್ಲೇ ನವಾಬ ತನ್ನ ದೈನಂದಿನ ದರ್ಬಾರು ನಡೆಸುತ್ತಿದ್ದ. ಇದರ ಸುತ್ತಲೂ ಎತ್ತರವಾದ ವಿಶಾಲವಾದ ಕೈಸಾಲೆಗಳಿವೆ. ಗೋಡೆಗಳ ಹೊರಗಡೆ ಆಗಿನ ಕಾಲದ ಪ್ರಮುಖ ಘಟನೆಗಳನ್ನೂ ಯುದ್ಧಗಳನ್ನೂ ಸಮಕಾಲೀನ ರಾಜರುಗಳನ್ನು ವರ್ಣಚಿತ್ರಗಳಲ್ಲಿ ಚಿತ್ರಿಸಲಾಗಿದೆ. ಇವುಗಳ ಕಾಲ ಸು. 1791.
ಒಳಗಿನ ಗೋಡೆಗಳ ಮೇಲೆ ಕಂಬಗಳ ಮೇಲೆ ಚಾವಣಿಗಳ ಕೆಳಭಾಗಗಳಲ್ಲಿ ಎಲ್ಲೂ ಜಾಗ ಖಾಲಿ ಬಿಡದೆ ವಿವಿಧ ವರ್ಣದಿಂದಲೂ ಚಿನ್ನದ ಮುಲಾಮಿನಿಂದಲೂ ಚಿತ್ರಗಳನ್ನು ಬಿಡಿಸಲಾಗಿದೆ. ಈ ಚಿತ್ರಗಳಲ್ಲಿನ ಎಲೆ, ಬಳ್ಳಿ, ಹೂ, ಮೃಗಪಕ್ಷಿಗಳು ನಿಸರ್ಗ ಸಹಜವಾಗಿವೆ. ಗಾಳಿ ಹಾಗೂ ಬಿಸಿಲಿನ ತಾಪಕ್ಕೆ ಅಳಿಸಿಹೋದ ಇವುಗಳ ಕೆಲವು ಭಾಗಗಳನ್ನು 1920 ರಲ್ಲಿ ಮತ್ತೆ ಸರಿಪಡಿಸುವ ಪ್ರಯತ್ನ ನಡೆಯಿತು.
ಇಲ್ಲಿಯ ಚಿತ್ರಗಳಲ್ಲಿನ ವರ್ಣಗಳು ಈಗಲೂ ತಮ್ಮ ಹೊಳಪನ್ನು ಕಳೆದುಕೊಳ್ಳದೆ ಬಹು ಜನರ ಗಮನವನ್ನು ಸೆಳೆಯುತ್ತಿವೆ. ಸಂಶೋಧಕ ಬೆಂಜಮಿನ್ ಹ್ಯಾನಿ ಎಂಬಾತ ಪರೀಕ್ಷೆ ನಡೆಸಿ ಈ ವರ್ಣಗಳನ್ನು ಹೇಗೆ ತಯಾರಿಸಿಕೊಳ್ಳಲಾಯಿತು ಎಂಬುದರ ಬಗ್ಗೆ ಅನೇಕ ವಿವರಗಳನ್ನು ಕೊಟ್ಟಿದ್ದಾನೆ. (ಪಿ.ಆರ್.ಟಿ.; ಕೆ.ಎಸ್.ಐ.)
ಶ್ರೀರಂಗಪಟ್ಟಣ ಬ್ರಿಟಿಷರ ವಶವಾದ ಮೇಲೆ ಈ ಕಟ್ಟಡ ಶಿಥಿಲವಾಗುತ್ತ ಬಂತು. ಇದನ್ನು ಕೆಡವಿ, ಆ ಸ್ಥಳದಲ್ಲಿ ಕರ್ನಲ್ ವೆಲೆಸಿ (ಡ್ಯೂಕ್ ಆಫ್ ವೆಲಿಂಗಟನ್) ಕುದುರೆಯ ಮೇಲೆ ಕುಳಿತಿರುವ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಆಗಿನ ಗವರ್ನರ್ ಜನರಲ್ ಲಾರ್ಡ್ ಡಾಲ್‍ಹೌಸಿ ಅಪ್ಪಣೆ ಮಾಡಿದ. (2-11-1844). ಆದರೆ ಆಗ ಉಂಟಾದ ಕ್ಷಾಮದ ಅವಾಂತರದಲ್ಲಿ ಅದು ನಿಂತುಹೋಯಿತು. 1883 ರಲ್ಲಿ ಮಹಾರಾಜ ಚಾಮರಾಜ ಒಡೆಯರು ಅದನ್ನು ಕೆಡವಿಸದೆ ಕಾಪಾಡಿಕೊಂಡು ಬರುವಂತೆ ಆಜ್ಞೆ ಮಾಡಿದರು.
ಇಲ್ಲಿನ ಭಿತ್ತಿ ಚಿತ್ರಗಳು ವೈಶಿಷ್ಯಪೂರ್ಣವಾದುವು. ಅವುಗಳಲ್ಲಿ ಅಂದಿನ ಕಾಲದ ಜೀವನವನ್ನು ಪ್ರತಿಬಿಂಬಿಸುವ ನಡೆನುಡಿಗಳು, ಉಡಿಗೆತೊಡಿಗೆಗಳು, ಅಲಂಕಾರ ಪದ್ಧತಿಗಳು, ಆಭರಣಗಳು, ಆಯುಧ ಸಮಗ್ರಿಗಳು ಚಿತ್ರಕಾರರ ಕುಂಚದಿಂದ ಸುಂದರವಾಗಿ ಹೊರಹೊಮ್ಮಿವೆ.
ಈ ಚಿತ್ರಗಳಲ್ಲಿನ ಮಾನವರ ಅಂಗಾಂಗಗಳೂ ಹಾವಭಾವಭಂಗಿಗಳೂ ಸ್ವಾಭಾವಿಕವಾಗಿವೆ. ಕಲಾವಿದರ ಚಿತ್ರಶೈಲಿ, ವರ್ಣಗಳ ಜೋಡಣೆ ಎಲ್ಲವೂ ವಿವಿಧ ದೇಶಗಳಲ್ಲಿ ಚಿತ್ರಕಾರರನ್ನು ಸೋಜಿಗಪಡಿಸುವಂತಿವೆ. ಕರ್ನಾಟಕ ಚಿತ್ರಕಾರರ ಈ ಕಲೆಗಾರಿಕೆಯ ಮೇಲೆ ಪಾಶ್ಚಾತ್ಯ ಚಿತ್ರಕಲೆಯ ಪ್ರಭಾವ ಬಿದ್ದಿರುವುದನ್ನು ಇಲ್ಲಿ ಕಾಣಬಹುದು. ಇಲ್ಲಿಯ ಪಶ್ಚಿಮ ದಿಕ್ಕಿನ ಭಿತ್ತಿಯ ಚಿತ್ರಗಳಲ್ಲಿ ಅಂದಿನ ಯುದ್ಧಗಳ ಸನ್ನಿವೇಶಗಳನ್ನು ರೂಪಿಸಲಾಗಿದೆ. ಹೈದರ ಅಲಿ ಹೈದರಾಬಾದ್ ನಿಜಾಮನ ಜೊತೆ ಬ್ರಿಟಿಷ್‍ರನ್ನು ಎದುರಿಸಿದ ಚಿತ್ರಣ ಅಪೂರ್ವವಾದುದು. ಮಿತ್ರ ನಿಜಾಮ ಮತ್ತೆ ಬ್ರಿಟಿಷ್‍ರ ಕಡೆಗೆ ಹೋದದ್ದರಿಂದ ಟಿಪ್ಪುವಿಗೆ ಅಸಮಾಧಾನವೂ ಕೋಪವೂ ಬಂತು. ಅದರ ಸಂಕೇತವಾಗಿ ಒಂದು ಚಿತ್ರವನ್ನೇ ಬರೆಸಿದ. ನಿಜಾಮನ ಸೈನ್ಯದ ದಂಡನಾಯಕ ಕುದುರೆಯ ಮೇಲೆ ಕುಳಿತಿರವಂತೆ ಚಿತ್ರಿಸಿ ಅವನ ಕೆಳಗೆ ಹಸು ಮತ್ತು ಹಂದಿಗಳನ್ನು ಚಿತ್ರಿಸಲಾಗಿದೆ. ನಿಜಾಮನ ಸೈನ್ಯ ಹಸುವಿನಂತೆ ಬಂದು ಹಂದಿಯಂತೆ ಬ್ರಿಟಿಷರ ಕಡೆ ಸೇರಿಕೊಂಡಿತು ಎಂಬುದರ ಸಂಕೇತವಾಗಿ ಟಿಪ್ಪು ಹೀಗೆ ಚಿತ್ರ ಬರೆಸಿದನಂತೆ.
ಮತ್ತೊಂದು ಯುದ್ಧಚಿತ್ರದಲ್ಲಿ ಹೈದರ್‍ಅಲಿ ಆನೆಯ ಮೇಲಿರುವ ಅಂಬಾರಿಯಲ್ಲಿ ಕುಳಿತು ಸವಾರಿ ಮಾಡುವಂತೆ ಬಿಡಿಸಿದ. ಅವನ ಹಿಂದೆ ಐದು ಆನೆಗಳ ಸೈನ್ಯವಿದೆ. ಅವನ ಮುಂದೆ ಕತ್ತಿ ಹಿಡಿದ ಕುದುರೆ ಸವಾರನೂ ಭರ್ಜಿ ಹಿಡಿದ ಕಾಲಾಳುಗಳೂ ಇದ್ದಾರೆ. ಕುದುರೆ ಸವಾರರು ಬಟ್ಟೆ, ಶಿರಸ್ತ್ರಾಣ, ಉದ್ದನೆ ಕೋಟು, ಷರಾಯಿ ಮತ್ತು ಮೆಟ್ಟುಗಳನ್ನು ಧರಿಸಿದ್ದಾರೆ. ಕಾಲಾಳುಗಳು ಜೋಡು ಪಟ್ಟೆ ರುಮಾಲು ಧರಿಸಿ ಕರವಸ್ತ್ರಗಳನ್ನು ಹಿಡಿದಿದ್ದಾರೆ. ಈ ಚಿತ್ರದ ಪಕ್ಕದಲ್ಲಿ ಹೈದರಾಬಾದ್ ನಿಜಾಮ ಕುದುರೆಯ ಮೇಲಿರುವಂತೆ, ಅವನ ಹಿಂಭಾಗದಲ್ಲಿ ಆನೆ ಸಾಲು, ಮುಂದೆ ಕಾಲಾಳುಗಳೂ ಇರುವಂತೆ ಚಿತ್ರಿಸಲಾಗಿದೆ. ಇದು ಎರಡನೆಯ ಮೈಸೂರು ಯುದ್ಧವನ್ನು ಸೂಚಿಸುವ ಚಿತ್ರ. ಇಲ್ಲಿ ಟಿಪ್ಪು ಕುದುರೆಯ ಮೇಲೆ ಕುಳಿತಿದ್ದಾನೆ. ಅವನ ಜೊತೆ ವಿಶ್ವಾಸಘಾತುಕನಾದ ಕಾರ್ಯದರ್ಶಿ ಮೀರ್‍ಸಾದಕ್ ಮಾತಾಡುತ್ತಿರುವಂತಿದೆ. ಕಾಲಾಳುಗಳು ಹಿಂಬದಿಯಲ್ಲಿಯೂ ಉಕ್ಕಿನ ಕವಚದಲ್ಲಿರುವ ಕುದುರೆ ಸೈನ್ಯ ಮುಂದುಗಡೆಯೂ ಹುಲಿಪಟ್ಟೆಯ ಧ್ವಜವನ್ನು ಹಿಡಿದು ಸಾಗುವ ಮೂರು ಆನೆ ಮತ್ತು ಎರಡು ಒಂಟೆ ಸೈನಿಕರೂ ಇಲ್ಲಿದ್ದಾರೆ. ಧ್ವಜವನ್ನು ಹಿಡಿದ ಫ್ರೆಂಚ್ ಕುದುರೆ ಸೈನ್ಯ ಲಾಲಿಯ ನಿರ್ದೇಶನದಲ್ಲಿ ಮುನ್ನಡೆಯುವಂತೆ ಕಾಣಿಸಲಾಗಿದೆ. ಇಲ್ಲಿಯ ಮತ್ತೊಂದು ಅಪೂರ್ವ ಚಿತ್ರ ಕಾಂಜೀವರಂ ಬಳಿ ನಡೆದ ಯುದ್ಧದಲ್ಲಿ ಮೈಸೂರಿಗೆ ಜಯವಾದ ಸನ್ನಿವೇಶದ್ದು. ಗಜಾರೋಹಿಗಳಾಗಿ ಹೈದರ್ ಮತ್ತು ಟಿಪ್ಪು ಇವರೀರ್ವರೂ ತಮ್ಮ ಪಡೆಗಳನ್ನು ನಿರ್ದೇಶಿಸುತ್ತಿರುವಂತೆ ಚಿತ್ರಿಸಲಾಗಿದೆ. ಮೈಸೂರಿನ ಕುದುರೆ ಸವಾರ ಸೈನಿಕರು ಬ್ರಿಟಿಷ್ ಸೈನ್ಯವನ್ನು ಮುಂದೆ ಹಾಗೂ ಹಿಂದೆ ಹೀಗೆ ಎರಡೂ ಕಡೆಗಳಿಂದ ಮುತ್ತಿದ್ದಾರೆ. ಫ್ರೆಂಚ್ ಫಿರಂಗಿ ದಳದವರೂ ರುಮಾಲು, ಕಂಚಿನ ಟೋಪಿ, ವಜ್ರಕವಚ, ಇಜಾರ ಧರಿಸಿರುವ ಮೈಸುರು ಸೈನ್ಯದ ದಂಡನಾಯಕರೂ ಯುದ್ಧದಲ್ಲಿ ಪರಿಣಾಮಕಾರಿಯಾಗಿ ಪಾತ್ರನಿರ್ವಹಿಸುತ್ತಿದ್ದಾರೆ. ಕೆಂದುಕೋಟು ಧರಿಸಿದ ಇಂಗ್ಲಿಷ್ ಸೈನಿಕರು ತಮ್ಮ ಮದ್ದು ಗುಂಡುಗಳನ್ನೂ ತಮ್ಮ ಮುಖ್ಯಸ್ಥ ಕರ್ನಲ್ ಬೇಲಿಯನ್ನು ರಕ್ಷಿಸಲು ವ್ಯೂಹ ರಚಿಸುತ್ತಿರುವುದನ್ನು ಸೊಗಸಾಗಿ ಚಿತ್ರಿಸಲಾಗಿದೆ. ಬೇಲಿ ಚಿಂತಾಗ್ರಸ್ತನಾಗಿ ಕೈಬೆರಳುಗಳನ್ನು ತುಟಿಯ ಮೇಲಿಸಿಕೊಂಡು ಮುಚ್ಚುಬಂಡಿಯಲ್ಲಿ (ಮೇನೆ) ಕುಳಿತಿದ್ದಾನೆ. ಇಲ್ಲಿ ಕೈಗೆ ಕೈ ಕೊಟ್ಟು ಯುದ್ಧಕ್ಕೆ ತೊಡಗಿರುವ ದೃಶ್ಯ ಮನೋಜ್ಞವಾದುದು. ಚರಿಯಾ ದೌಲತ್ ಅರಮನೆಯ ಪೂರ್ವದಿಕ್ಕಿನ ಭಿತ್ತಿಯಲ್ಲಿ ಅನೇಕ ರಾಜರ, ನವಾಬರ, ಪಾಳೇಗಾರರ ಚಿತ್ರಗಳಿವೆ. ಚಿತ್ತೂರಿನ ಹಿಂದೂರಾಣಿ, ಮಹಮ್ಮದ್ ಅಲಿ, ಬಾಲಾಜಿ ಮತ್ತು ಅವನ ರಾಣಿ, ತಂಜಾವೂರಿನ ರಾಜ, ಕೊಡಗಿನ ವೀರರಾಜ, ಔಂಧ್ ಸಾಮಂತರು, ಆರ್ಕಾಟ್ ಹಾಗೂ ಕಡಪದ ನವಾಬರು, ಪೇಶ್ವೆ ಮನೆತನದ 2ನೆಯ ಬಾಲಾಜಿ, ಮುಮ್ಮಡಿ ಕೃಷ್ಣರಾಜ ಒಡೆಯರು (ಇದು ಅನಂತರದ ಚಿತ್ರವೆನ್ನುತ್ತಾರೆ) ಚಿತ್ರದುರ್ಗದ ಮದಕರಿ ನಾಯಕ, ಕಿತ್ತೂರು ರಾಣಿ ಚೆನ್ನಮ್ಮ-ಮುಂತಾದವು ಇವುಗಳಲ್ಲಿ ಮುಖ್ಯವಾದವು.
ದರಿಯಾದೌಲತ್ ಅರಮನೆಗೆ ಹೀಗೆ ಒಂದು ಕಲಾಸಂಗ್ರಹಾಲಯವೂ ಆಗಿದೆ. ಇದು ಹಿಂದೆ ಮೈಸೂರು ಸರ್ಕಾರದ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿತ್ತು. 1959 ರಲ್ಲಿ ಇವನ್ನು ರಾಷ್ಟ್ರೀಯ ಸ್ಮಾರಕ ಎಂದು ಸಾರಲಾಯಿತು. ಹೈದರ ಹಾಗೂ ಟಿಪ್ಪುವಿಗೆ ಸೇರಿದ ವರ್ಣಚಿತ್ರಗಳು, ಛಾಯಾ ಚಿತ್ರಗಳು, ಲಿತೊ ಚಿತ್ರಗಳೂ ಮತ್ತು ಅವರು ಬಳಸುತ್ತಿದ್ದ ವಸ್ತುಗಳು ಬಟ್ಟೆಬರೆ-ಇವನ್ನೆಲ್ಲ ಮೇಲುಮಹಡಿಯಲ್ಲಿ ಸೊಗಸಾಗಿ ಜೋಡಿಸಿ ಪ್ರದರ್ಶಿಸಲಾಗಿದೆ. ಇವೆಲ್ಲ ಈ ಮೊದಲು ದೆಹಲಿ, ಕಲ್ಕತ್ತ ಮುಂತಾದ ಸಂಗ್ರಹಾಲಯಗಳಲ್ಲಿ ಇದ್ದುವು. ಇವೆಲ್ಲವನ್ನೂ ಒಂದೆಡೆ ಸೇರಿಸಿ ಪ್ರೇಕ್ಷಕರಿಗೆ ನೋಡಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಸಂಗತಿ. ಇಲ್ಲಿ ಪ್ರದರ್ಶಿಸಿರುವ ಚಿತ್ರಗಳಲ್ಲಿ ಹುಲಿಯೂರುದುರ್ಗ, ಕೃಷ್ಣಗಿರಿ, ಹೊಸೂರುದುರ್ಗ, ನಂದಿದುರ್ಗ, ಮುಂತಾದವುಗಳ ನಿಸರ್ಗದ ಸೊಬಗನ್ನು ಕಾಣಬಹುದಾಗಿದೆ. ಅಲ್ಲದೆ ಬೆಂಗಳೂರಿನ ಉತ್ತರದ್ವಾರ, ಟಿಪ್ಪುವಿನ ಬೆಂಗಳೂರು ಅರಮನೆ, ಅಂದಿನ ಬೆಂಗಳೂರು, ಬೆಂಗಳೂರು ದಿಲ್ಲಿದ್ವಾರದ ಚಿತ್ರಗಳೂ ಮನೋಜ್ಞಾನವಾಗಿವೆ. ಇಷ್ಟೇ ಅಲ್ಲದೆ ಹೈದರಾಲಿ ಟಿಪ್ಪುವಿನ ಕೊನೆ ಪ್ರಯತ್ನ ಹಾಗೂ ಪತನ, ಶ್ರೀರಂಗಪಟ್ಟಣದ ಮುತ್ತಿಗೆ ಟಿಪ್ಪುವಿನ ಇಬ್ಬರು ಮಕ್ಕಳನ್ನು ಬ್ರಿಟಿಷರ ವಶಕ್ಕೆ ಒಪ್ಪಿಸುತ್ತಿರುವುದು ಮುಂತಾದ ಲಿತೋ ಚಿತ್ರಗಳು ಅಂದಿನ ಚಾರಿತ್ರಿಕ ಘಟನೆಗಳ ಪ್ರತೀಕಗಳಾಗಿವೆ. ಟಿಪ್ಪುವಿನ ಬೃಹದಾಕಾರದ ತೈಲವರ್ಣದ ಭಾವಚಿತ್ರ ಪಾಶ್ಚಾತ್ಯ ಕಲಾಶೈಲಿಯಲ್ಲಿದ್ದು ಬಹು ಆಕರ್ಷಕವಾಗಿದೆ. 14" ( 18" ಅಳತೆಯ ಸುಮಾರು ಹದಿನಾರು ರೇಖಾಚಿತ್ರಗಳಿವೆ. ಇವುಗಳಲ್ಲಿ ಟಿಪ್ಪು ಕಾಲದ ಕೋಟೆಗಳ ರಕ್ಷಣಾ ನಾಯಕ ಗುಲಾಮ ಅಲಿಖಾನ್, ಮುಮ್ಮಡಿ ಕೃಷ್ಣರಾಜ ಒಡೆಯರ್, ತಾತ ನಂಜರಾಜ, ಟಿಪ್ಪುವಿನ ಹಿರಿಯ ಕಂಚುಕಿ (ದ್ವಾರಪಾಲಕ) ಫಿರೋಜ್ ನ್ಯೂಜ್ ಮತ್ತು ಆತನ ವಕೀಲ ಅಲಿ ರೆಝಾಖಾನ್, ಧಾರವಾಡ ಕೋಟೆಯ ಸೈನ್ಯಾಧಿ ಪತಿ ಬದ್ರೂಜ್ ಜಮಾನ್‍ಖಾನ್ ಟಿಪ್ಪುವಿನ ಮಿತ್ರ ರಾಜಿûಖಾನ್ ಮತ್ತು ಅವನ ದಿವಾನ ಗುಲಾಮ್ ಅಲಿಖಾನ್, ಅಲ್ಲದೆ ಟಿಪ್ಪುವಿನ ಏಳು ಜನ ಗಂಡುಮಕ್ಕಳ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಚಿತ್ರಸಂಗ್ರಹದ ಜೊತೆಗೆ ಇಲ್ಲಿ, ಇತರ ಅಪರೂಪದ ವಸ್ತುಗಳನ್ನೂ ಕಾಣಬಹುದು. ಬ್ರಿಟಿಷ್‍ರ ಮೇಲಿನ ವಿಜಯದ ಐದು ಪದಕಗಳೂ ಇಲ್ಲಿವೆ. ಟಿಪ್ಪುವಿನ ದಿರಹಂ ಎಂಬ ಚಿನ್ನದ ನಾಣ್ಯಗಳು ಅವುಗಳ ಪಳಾಸ್ತರ ಅಚ್ಚುಗಳು ಹೈದರ ಅಲಿ ಫರೂಕಿ ನಾಣ್ಯಗಳು ಇಲ್ಲಿವೆ. ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಟಿಪ್ಪು ಕೊಟ್ಟ ಎರಡು ತೀರ್ಥದ ಬೆಳ್ಳಿಬಟ್ಟಲುಗಳು ಇಲ್ಲಿವೆ. ಈ ಬಟ್ಟಲುಗಳ ಮೇಲೆ ಟಿಪ್ಪು ಸುಲ್ತಾನ್ ಷಾಷಾ ಅವರ ಧರ್ಮ ಎಂದು ಕನ್ನಡದಲ್ಲಿ ಕೆತ್ತಲಾಗಿದೆ. ಇವಿಷ್ಟರ ಜೊತೆಗೆ ಟಿಪ್ಪುವಿಗೆ ಫ್ರೆಂಚರು ಕೊಟ್ಟ ಒಂದು ಬಂಗಾರದ ಗಡಿಯಾರ, ಟಿಪ್ಪು ಉಪಯೋಗಿಸಿದ ಹಸಿರುವರ್ಣದ ರೇಷ್ಮೆ ಷರ್‍ವಾನಿ, ಜರಾತಾರಿಯ ಕೆಂಪು ಪೈಜಾಮ, ತಾಳೆ ಓಲೆಗರಿಯ ಟೋಪಿ ಮುಂತಾದ ಅಪೂರ್ವ ವಸ್ತುಗಳನ್ನು ಇಲ್ಲಿ ಕಾಣಬಹುದು. (ವಿ.ಆರ್.ಟಿ.)