ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಾಸರ ಹಾವು (ಹೆಬ್ಬಾವು, ಅಜಗರ)

ವಿಕಿಸೋರ್ಸ್ದಿಂದ

ದಾಸರ ಹಾವು (ಹೆಬ್ಬಾವು, ಅಜಗರ)

ಸರೀಸೃಪ ವರ್ಗದ, ಡಯಾಪ್ಸಿಡ ಉಪವರ್ಗ, ಸ್ಕ್ವಾಮೇಟ ಗಣ, ಒಫೀಡಿಯ ಉಪಗಣ ಮತ್ತು ಪೈಥಾನಿನೀ ಕುಟುಂಬಕ್ಕೆ ಸೇರಿದ ಹಾವು (ಪೈಥಾನ್). ಹೆಬ್ಬಾವು, ಅಜಗರ, ಪರ್ಯಾಯ ನಾಮಗಳು. ಇದರಲ್ಲಿ ಹಲವಾರು ಪ್ರಭೇದಗಳುಂಟು. ಕಲ್ಲುಗಳು, ಪೊದೆಗಳು ಇರುವಂಥ ನೀರಿನ ಆಸರೆ ಚೆನ್ನಾಗಿರುವಂಥ ಸ್ಥಳಗಳಲ್ಲಿ ಇದು ವಾಸಿಸುತ್ತದೆ. ತುಂಬ ಉದ್ದಕ್ಕೆ ಬೆಳೆಯುವ ಹಾವು ಇದು. ಸಾಮಾನ್ಯವಾಗಿ ಇದರ ಉದ್ದ 10'-15', ಅಪೂರ್ವವಾಗಿ 30' ಉದ್ದಕ್ಕೆ ಬೆಳೆದಿರುವ ದಾಸರ ಹಾವುಗಳೂ ಕಾಣಸಿಕ್ಕಿವೆ. ದೇಹದ ಸುತ್ತಳತೆ ಸುಮಾರು 3' ಇರುವುದುಂಟು. ತೂಕ ಸುಮಾರು 250 ಪೌಂಡುಗಳು.

ದಾಸರ ಹಾವುಗಳ ಕಣ್ಣುಪಾಪೆ ಸಾಧಾರಣ ಉದ್ದುದ್ದವಾಗಿದೆ. ಮೂಗಿನ ಹೊಳ್ಳೆಗಳು ದೊಡ್ಡವು : ಮೂತಿಯ ತುದಿಯಲ್ಲಿ ಎತ್ತರದ ಸ್ಥಾನದಲ್ಲಿ ಸ್ಥಿತವಾಗಿರುವುದರಿಂದ ಹಾವು ನೀರಿನಲ್ಲಿರುವಾಗ ನೀರಿನಿಂದ ಮೇಲಕ್ಕೆ ಎತ್ತಿಕೊಂಡಂತಿರುವುದು. ಇದರಿಂದ ಉಸಿರಾಟಕ್ಕೆ ಅನುಕೂಲ. ಬಾಲ ಚಿಕ್ಕದಾಗಿ, ಉರುಟಾಗಿದೆ. ಇದಕ್ಕೆ ಗ್ರಹಣಸಾಮಥ್ರ್ಯ ಉಂಟು. ಉದರ ಭಾಗದ ಮಧ್ಯದಲ್ಲಿರುವ ಹುರುಪೆಗಳು ಸಣ್ಣದಾಗಿರುತ್ತದೆ. ದಾಸರ ಹಾವಿಗೆ ಕೈಕಾಲುಗಳು ಇಲ್ಲದಿದ್ದರೂ, ಇದರ ಕಿಬ್ಬೊಟ್ಟೆಯ ತಟ್ಟೆಲುಬಿನ ಮತ್ತು ಹಿಂಗಾಲಿನ ಮೂಳೆಯ ಕುರುಹುಗಳನ್ನು ಕಾಣಬಹುದು.

ದಾಸರ ಹಾವು ಸಾಮಾನ್ಯವಾಗಿ ಬಿಸಿರಕ್ತದ ಪ್ರಾಣಿಗಳನ್ನು ಹಿಡಿದು ತಿನ್ನಲು ಇಷ್ಟಪಡುತ್ತದೆ. ಬೇಟೆ ತನ್ನ ಹತ್ತಿರ ಬರುವ ವರೆಗೂ ಮರದ ಮೇಲೆಯೋ ನೀರಿನಲ್ಲಿಯೋ ನೆಲದ ಪೊಟರೆಗಳಲ್ಲೋ ಅಡಗಿಕೊಂಡು ಕಾದಿದ್ದು ಅನಂತರ ಬೇಟೆಯ ಸುತ್ತ ಸುರುಳಿ ಸುತ್ತಿ ನಜ್ಜುಗುಜ್ಜು ಮಾಡಿ ಅಮರಿಕೆಯಿಂದ ಅದನ್ನು ಸಾಯಿಸುತ್ತದೆ. ಹಕ್ಕಿಗಳು, ಸರೀಸೃಪಗಳು ಮತ್ತು ಚಿಕ್ಕ ಗಾತ್ರದ ಸ್ತನಿಗಳೇ ಇದರ ಆಹಾರ. ದಾಸರ ಹಾವು ಎಷ್ಟು ಬಲಶಾಲಿ ಎಂದರೆ ಒಮ್ಮೊಮ್ಮೆ ಹುಲಿ ಮತ್ತು ಹಸುಗಳು ಕೂಡ ಇದಕ್ಕೆ ಸುಲಭವಾಗಿ ಬಲಿಯಾಗುವುದುಂಟು. ಆಹಾರ ಸೇವನೆಯ ಅನಂತರ ಹಾವು ಕೆಲವು ದಿವಸಗಳ ವರೆಗೆ ಅಲ್ಲಾಡದೆ ತೆಪ್ಪಗೆ ನಿದ್ರೆ ಮಾಡುತ್ತಿರುವಂತೆ ಬಿದ್ದಿರುತ್ತದೆ. ಆಹಾರ ಜೀರ್ಣವಾದ ಅನಂತರ ಕೊನೆಯಲ್ಲಿ ಪಚನವಾಗದೆ ಉಳಿದಿರುವ ಕೂದಲಿನ ಉಂಡೆಯನ್ನು ಹೊರಕ್ಕೆ ಕಕ್ಕುವುದು ಇದರ ಕ್ರಮ.

ದಾಸರ ಹಾವು ಒಂದು ಸಲಕ್ಕೆ 8-100 ಮೊಟ್ಟೆಗಳನ್ನು ಇಡುತ್ತದೆ. ಒಂದೊಂದು ಮೊಟ್ಟೆಯೂ 3.5 ಉದ್ದ ಮತ್ತು 2.5 ಅಗಲ ಇರುತ್ತದೆ. ದಾಸರ ಹಾವು ಮೊಟ್ಟೆಗಳಿಗೆ ಕಾವು ಕೊಡುವಾಗ ತನ್ನ ಶರೀರದ ಉಷ್ಣತೆಯನ್ನು ಹೆಚ್ಚಿಸಿಕೊಳ್ಳುವುದೆಂದು ಹೇಳಲಾಗಿದೆ. ದಾಸರ ಹಾವಿನ ಮರಿಗಳು 2' ಅಥವಾ ಸ್ವಲ್ಪ ಹೆಚ್ಚು ಉದ್ದವಾಗಿರುತ್ತದೆ.

ಆಫ್ರಿಕದಲ್ಲಿ ದಾಸರ ಹಾವಿನ ನಾಲ್ಕು ಪ್ರಭೇದಗಳು ಮತ್ತು ಏಷ್ಯಾ ಖಂಡದಲ್ಲಿ ಮೂರು ಪ್ರಭೇದಗಳು ಕಾಣದೊರೆಯುವುವು. ಆಸ್ಟ್ರೇಲಿಯದಲ್ಲಿ ಒಂದು ಪ್ರಭೇದ ಉಂಟು. ಇದಕ್ಕೆ ಕಾರ್ಪೆಟ್ ಹಾವು ಎಂಬ ಹೆಸರಿದೆ. ಇದು 6'ಗಳ ವರೆಗೆ ಬೆಳೆಯುತ್ತದೆ. ಇದರ ಉದರ ಹಳದಿ ಬಣ್ಣ. ಬೆನ್ನು ಕಪ್ಪಾಗಿದ್ದು ಅದರ ಮೇಲೆ ಹಳದಿ ಚುಕ್ಕೆಗಳಿವೆ. ಪೈಥಾನ್ ಮೊಲ್ಯೂರಸ್ ಮೊಲ್ಯೂರಸ್ ಎಂಬುದು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ದಾಸರಹಾವು. 8'-16' ಉದ್ದ ಬೆಳೆಯುವ ಈ ಹಾವು ಬಲು ಭಾರವಾಗಿಯೂ ಇದೆ. ಇದರ ತಲೆ ಮತ್ತು ಬೆನ್ನು ಭಾಗದಲ್ಲಿ ಚೌಕಾಕಾರದ ಕಂದುಬಣ್ಣದ ಕಲೆಗಳಿವೆ. ಇದು ಹಗಲು ಮತ್ತು ರಾತ್ರಿ ಬಹಳ ಚುರುಕಾಗಿ ಚಟುವಟಿಕೆಯಿಂದ ಓಡಾಡುತ್ತದೆ. ಪೈಥಾನ್ ರೆಟಿಕ್ಯುಲೇಟಸ್ ಎಂಬ ಇನ್ನೊಂದು ಪ್ರಭೇದ ಪೂರ್ವ ಭಾರತ, ಬರ್ಮ, ಮಲಯ, ಥಾಯ್ಲಂಡ್ ಮತ್ತು ನಿಕೋಬಾರ್ ದ್ವೀಪಗಳ ದಟ್ಟ ಕಾಡುಗಳಲ್ಲಿ ಕಂಡು ಬರುತ್ತದೆ. ಇದರ ಬೆನ್ನಿನ ಭಾಗ ಕಂದುಬಣ್ಣದ್ದು. ಕತ್ತಿನ ಮಧ್ಯಭಾಗದಿಂದ ತಳಭಾಗಕ್ಕೆ ಅಂಡಾಕಾರದ ಕಪ್ಪು ಬಣ್ಣದ ಕಲೆಗಳು ಉಂಟು. ಉದರದ ಬಣ್ಣ ಹಳದಿ. ಅಲ್ಲಲ್ಲಿ ಕಂದು ಚುಕ್ಕೆಗಳಿವೆ. ಬರ್ಮಾದ ಹೆಬ್ಬಾವು ಪೈಥಾನ್ ಮೊಲ್ಯೂರಸ್ ಬಿವಿಟ್ಟಾಟಸ್ ಎಂಬ ಹೆಬ್ಬಾವು ಭಾರತದ ಈಶಾನ್ಯ ರಾಜ್ಯಗಳಲ್ಲೂ ಕಂಡುಬರುತ್ತದೆ. ಇದರ ಹತ್ತಿರ ಸಂಬಂಧಿಯಾದ ಹೆಬ್ಬಾವು ದಕ್ಷಿಣ ಅಮೆರಿಕಾದಲ್ಲಿ ಕಾಣಬರುವ ಅನಕೊಂಡ ಯೂನೆಕ್ಟೆಸ್ ಮ್ಯುರಿನಸ್. (ಎ.ಆರ್. ಐ.) ಪರಿಷ್ಕರಣೆ: ಡಿ.ಆರ್. ಪ್ರಹ್ಲಾದ್