ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೀಕ್ಷಿತ, ಮುತ್ತುಸ್ವಾಮಿ

ವಿಕಿಸೋರ್ಸ್ದಿಂದ

ದೀಕ್ಷಿತ, ಮುತ್ತುಸ್ವಾಮಿ 1776-1835. ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ದಕ್ಷಿಣ ದೇಶದಲ್ಲಿ ಕರ್ನಾಟಕ ಸಂಗೀತವನ್ನು ಬೆಳೆಸಿದ ಪ್ರಸಿದ್ಧ ವಾಗ್ಗೇಯಕಾರರಲ್ಲಿ ಒಬ್ಬರು. ಹುಟ್ಟಿದ್ದು ತಂಜಾವೂರು ಜಿಲ್ಲೆಗೆ ಸೇರಿದ ತಿರುವಾರೂರಲ್ಲಿ. ತಂದೆ ರಾಮಸ್ವಾಮಿ ದೀಕ್ಷಿತ್ ಉತ್ತಮ ಸಂಗೀತಗಾರರು, ವೈಣಿಕರು, ಆಚಾರವಂತ ಮನೆತನಕ್ಕೆ ಸೇರಿದವರು. ಬಾಲಕ ಮುತ್ತುಸ್ವಾಮಿಗೆ ತಂದೆ ಸಂಸ್ಕøತ ಮತ್ತು ಸಂಗೀತವನ್ನು ಕಲಿಸಿದವರು ವೇದಾಧ್ಯಯನ ಮಾಡಿಸಿದರು. ಇವರು ಮದ್ರಾಸಿನ ಮಣಲಿಯಲ್ಲಿದ್ದಾಗ ಚಿದಂಬರನಾಥ ಯೋಗಿ ಎನ್ನುವವರು ಬಾಲಕನ ತೇಜಸ್ಸನ್ನು ಕಂಡು ಮೆಚ್ಚಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮ ಜೊತೆಯಲ್ಲಿ ಕಾಶಿಗೆ ಕರೆದುಕೊಂಡು ಹೋದರು. ಮುತ್ತುಸ್ವಾಮಿ ಕಾಶಿಯಲ್ಲಿ ಗುರುಗಳ ಬಳಿ ಕೆಲವು ವರ್ಷ ಇದ್ದು ವಿದ್ಯಾ, ಮಂತ್ರಶಾಸ್ತ್ರ, ಯೋಗಶಾಸ್ತ್ರಗಳ ಉಪದೇಶ ಪಡೆದು ಕಾಶಿಯಿಂದ ಹಿಂತಿರುಗುವಾಗ ದಾರಿಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರವಾದ ತಿರುತ್ತಣಿಯ ಬೆಟ್ಟದ ಮೇಲೆ ಷಡಕ್ಷರಿ ಮಂತ್ರವನ್ನು ಜಪಿಸುತ್ತ 40 ದಿನಗಳು ಕಳೆದ. ಸುಬ್ರಹ್ಮಣ್ಯ (ಮುರುಗ) ದೇವರೇ ದರ್ಶನ ದಯಪಾಲಿಸಿ ಈತನ ಬಾಯಲ್ಲಿ ಕಲ್ಲುಸಕ್ಕರೆ ಚೂರನ್ನು ಪ್ರಸಾದವಾಗಿ ಉಣಿಸಿ ಮಾಯವಾದನೆಂದು ಪ್ರತೀತಿ ಇದೆ.

ಅಲ್ಲಿಯೇ ಮಾನಸ ಗುರುಗುಹ-ಮುಂತಾದ ಒಂಬತ್ತು ಕೀರ್ತನೆಗಳನ್ನು ರಚಿಸಿದ್ದಲ್ಲದೆ ಮುತ್ತುಸ್ವಾಮೀ ದೀಕ್ಷಿತರು ಗುರುಗುಹ ಎಂಬ ಅಂಕಿತವನ್ನು ಧಾರಣಮಾಡಿದರು. ಇವರ ತಮ್ಮಂದಿರಾದ ಬಾಲುಸ್ವಾಮಿಯವರೂ ಪ್ರಸಿದ್ದ ಸಂಗೀತಗಾರರಾಗಿ ಎಟ್ಟಿಯಾಪುರದ ರಾಜರ ಆಹ್ವಾನದ ಮೇರೆಗೆ ಅಲ್ಲಿನ ಆಸ್ಥಾನ ವಿದ್ವಾಂಸರಾದರು. ತಮ್ಮನ ಬಳಿ ಇದ್ದಾಗಲೇ ಮುತ್ತುಸ್ವಾಮಿ ದೀಕ್ಷಿತರು ತೀರಿಕೊಂಡರು. ಯಥಾವಿಧಿ ತಮ್ಮ ನಿತ್ಯಕರ್ಮಗಳನ್ನು ಮುಗಿಸಿ ಮೀನಾಕ್ಷಿ ಮೇಮುದಂ ದೇಹಿ ಎನ್ನುವ ಕೀರ್ತನೆಯಲ್ಲಿ, ಮೀನಲೋಚನಿ, ಪಾಪಾಮೋಚಿನಿ ಎನ್ನುವ ಸಾಲನ್ನು ಹಾಡುತ್ತಿರುವಂತೆಯೇ ಅವರೂ ತೀರಿಕೊಂಡರು.

ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಬಹುಪಾಲು ಸಂಸ್ಕøತದಲ್ಲಿವೆ. ಅವುಗಳ ರಾಗಭಾವವನ್ನು ಮೂರು ಸ್ಥಾಯಿಗಳಲ್ಲಿಯೂ ವಿನ್ಯಾಸಗೊಳಿಸಿರುವುದು ಅವುಗಳ ವೈಶಿಷ್ಟ್ಯ. ಶೈವ ವೈಷ್ಣವ ದೇವೀ-ಉಪಾಸನೆಗಳಿಗೆ ಅನುಕೂಲವಾಗುವಂತೆ ಯಾವ ಭೇದಭಾವವೂ ಇಲ್ಲದೆ ದೀಕ್ಷಿತರು ಕೀರ್ತನೆಗಳನ್ನು ರಚಿಸಿದ್ದಾರೆ. ರಾಗಮಾಲಿಕೆಗಳು, ವರ್ಣ ಮುಂತಾದ ರಚನೆಗಳನ್ನೂ ಮಾಡಿದ್ದಾರೆ. ಶುದ್ದ ದೇಶೀ ರಾಗಗಳಲ್ಲಿ ಮಾತ್ರವಲ್ಲದೆ ಕಾಶಿಯಲ್ಲಿದ್ದುದರ ಫಲವಾಗಿ ಯಮನ್ ಕಲ್ಯಾಣಿ, ಹಮೀರ್ ಕಲ್ಯಾಣಿ, ಬೃಂದಾವನ ಸಾರಂಗ್ ಮುಂತಾದ ಹಿಂದುಸ್ತಾನಿ ರಾಗಗಳನ್ನು ಬಳಸಿಕೊಂಡು ಜನಪ್ರಿಯವಾದ ಭಾವಪೂರಿತವಾದ ಕೀರ್ತನೆಗಳನ್ನೂ ಮಣಲಿಯಲ್ಲಿದ್ದಾಗ ಪಾಶ್ಚಾತ್ಯ ಬ್ಯಾಂಡ್ ವಾದ್ಯದ ಮಟ್ಟುಗಳನ್ನು ಅನುಸರಿಸಿ `ಶಕ್ತಿಸಹಿತ ಗಣಪತಿ', ಶ್ಯಾಮಳೇ ಮೀನಾಕ್ಷಿ ಮುಂತಾದ ಕೀರ್ತನೆಗಳನ್ನೂ ರಚಿಸಿದ್ದಾರೆ. (ಕೆ.ಎಸ್.ಜಿ.ಆರ್.)