ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುರ್ಯೋಧನ
ದುರ್ಯೋಧನ ಮಹಾಭಾರತದ ಮಹಾನಾಯಕರಲ್ಲಿ ಒಬ್ಬ. ಕುರು ವಂಶದವನಾದ ಕಾರಣ ಕೌರವನೆಂದು ಪ್ರಸಿದ್ಧ. ಈತ ಧೃತರಾಷ್ಟ್ರನ ಹಿರಿಯ ಮಗ. ತಾಯಿ ಗಾಂಧಾರಿ. ಕಲಿಯ ಅಂಶದಿಂದ ಜನಿಸಿದವ. ಈತನಿಗೆ ತೊಂಬತ್ತೆಂಟು ಜನ ಸಹೋದರರು. ಒಬ್ಬ ಸಹೋದರಿ. ಕಾಶೀರಾಜನ ಮಗಳು ಭಾನುಮತಿ ಹೆಂಡತಿ. ಪಾಂಡುರಾಜನ ಮರಣಾನಂತರ ಪಾಂಡವರೂ ಕೌರವರೂ ಒಂದಾಗಿ ಹಸ್ತಿನಾವತಿಯಲ್ಲಿ ಬೆಳೆಯುತ್ತಿರುವಾಗ ಪಾಂಡವರ ಅಭ್ಯುದಯ ಅದರಲ್ಲೂ ಭೀಮನ ಅದ್ಭುತ ಬಾಲಕೇಳಿಗಳು ದುರ್ಯೋಧನನಲ್ಲಿ ದ್ವೇಷದ ಜ್ವಾಲೆಯನ್ನು ಹತ್ತಿಸಿದವು. ವಿಷಾನ್ನ ಉಣ್ಣಿಸಿ ಹಾವುಗಳಿಂದ ಕಚ್ಚಿಸಿ, ಹಗ್ಗದಿಂದ ಬಿಗಿದು ಗಂಗೆಯಲ್ಲಿ ದೂಡಿದಾಗಲೂ ಭೀಮ ಸಾಯಲಿಲ್ಲ. ದ್ವೇಷ ಛಲಕ್ಕೆ ತಿರುಗಿತು. ಮೊದಲು ಕೃಪಾಚಾರ್ಯನಲ್ಲಿ ಅನಂತರ ದ್ರೋಣನಲ್ಲಿ ಧರ್ನುವಿದ್ಯೆ ಕಲಿತ. ವಿದ್ಯಾಭ್ಯಾಸದ ಕೊನೆಯ ಪರೀಕ್ಷೆಯಲ್ಲಿ ಭೀಮನೊಡನೆ ಗದಾಯುದ್ಧ ಮಾಡಿ ಸೋತ. ಆ ಸಮಯದಲ್ಲಿ ಬಂದ ಕರ್ಣನಿಗೆ ಅಂಗರಾಜ್ಯ ಪದವಿಯನ್ನಿತ್ತು ಪುರಸ್ಕರಿಸಿದ. ದ್ರೋಣ ಕೇಳಿದ ಗುರುದಕ್ಷಿಣೆಗಾಗಿ ದ್ರುಪದನನ್ನು ಹೆಡೆಮುರಿಕಟ್ಟಿ ತರಲು ಹೋಗಿ ದ್ರುಪದನಿಂದ ಸೋತ. ಮತ್ತೆ ಬಲರಾಮನಲ್ಲಿ ಗದಾವಿದ್ಯೆಯನ್ನು ಅಭ್ಯಸಿಸಿದ. ಬಾಲ್ಯದಲ್ಲೇ ತನಗಾಗುತ್ತಿದ್ದ ಸೋಲು ಪಾಂಡವರಿಗೆ ಒದಗುತ್ತಿದ್ದ ವಿಜಯ ಈತ ಪಾಂಡವರ ವಿರುದ್ಧವಾಗಿಯೇ ವರ್ತಿಸಲು ಪೋಷಕವಾಯಿತು. ಧೃತರಾಷ್ಟ್ರ ಯುಧಿಷ್ಠಿರನಿಗೆ ಯೌವರಾಜ್ಯಾಭಿಷೇಕ ಮಾಡಲು ಹವಣಿಸಿದಾಗ ಅದನ್ನು ವಿರೋಧಿಸಿ ನಿಂತ. ಪಾಂಡವರೆಲ್ಲರ ನಾಶಕ್ಕೆ ಹೊಸ ಉಪಾಯ ಯೋಚಿಸಿದ. ಪುರೋಚನಿಂದ ಒಂದು ಅರಗಿನ ಮನೆಯನ್ನು ಕಟ್ಟಿಸಿ ಅದರಲ್ಲಿ ಪಾಂಡವರನ್ನು ಸುಡಲು ಯತ್ನಿಸಿದ. ದ್ರೌಪದಿ ಸ್ವಯಂವರದಲ್ಲಿ ಪಾಂಡವರ ಮೇಲೆ ಯುದ್ಧ ಮಾಡಿ ಯುಧಿಷ್ಠಿರನಿಂದ ಸೋತ. ಅನಂತರ ದ್ರುಪದನನ್ನು ಸೋಲಿಸಲು ಸೈನ್ಯ ಸಮೇತನಾಗಿ ಹೋಗಿ ಭೀಮನಿಂದ ಸೋತ. ರಾಜಸೂಯಯಾಗ ಸಮಯದಲ್ಲಿ ದ್ರೌಪದಿಯನ್ನು ಅಪಹಾಸ್ಯಕ್ಕೀಡಾದ. ಶಕುನಿಯೊಡನೆ ಮಂತ್ರಾಲೋಚಿಸಿ ಕಪಟದ್ಯೂತವನ್ನೇರ್ಪಡಿಸಿ, ತಂದೆಯನ್ನು ಉಪಾಯದಿಂದ ಅದಕ್ಕೆ ಒಪ್ಪಿಸಿದ. ದ್ಯೂತರಲ್ಲಿ ಪಾಂಡವರನ್ನು ಸೋಲಿಸಿದ. ದ್ರೌಪದಿಯನ್ನು ಸಭೆಗೆ ಎಳೆತರುವಂತೆ ದುಶ್ಯಾಸನನಿಗೆ ಆಜ್ಞಾಪಿಸಿ ಆಕೆ ತನ್ನ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ. ಆಗ ದ್ರೌಪದಿ ಶಪಿಸಿದಳು. ಭೀಮ ಪ್ರತಿಜ್ಞೆ ಮಾಡಿದ; ರಾಜ್ಯವನ್ನೇ ಪಣವಾಗಿಟ್ಟು ಸೋತ ಪಾಂಡವರನ್ನು ಕಾಡಿಗೆ ಕಳುಹಿಸಿದ. ಇಷ್ಟಾದರೂ ವ್ಯಾಸರು ಮೈತ್ರೇಯನನ್ನು ಕಳುಹಿಸಿ ಪಾಂಡವರೊಂದಿಗೆ ಸಂಧಿ ಮಾಡಿಕೊ ಎಂದಾಗ ತಿರಸ್ಕರಿಸಿದ. ಪಾಂಡವರು ಕಾಡಿನಲ್ಲಿ ಗೆಡ್ಡೆ ಗೆಣಸು ತಿಂದು ಬದುಕುವಾಗ ಅವರೆದುರು ತನ್ನ ವೈಭವ ಪ್ರದರ್ಶನ ಮಾಡಲು ಘೋಷಯಾತ್ರೆಯ ನೆಪದಿಂದ ಅಲ್ಲಿಗೆ ಹೋಗಿ ಅಲ್ಲಿ ಚಿತ್ರ ಸೇನನೆಂಬ ಗಂಧರ್ವನಿಂದ ಬಂಧಿತನಾಗಿ ಅರ್ಜುನನಿಂದ ಬಿಡುಗಡೆ ಪಡೆದ. ಪಾಂಡವರು ರಾಜಸೂಯಯಾಗ ಮಾಡಿದಂತೆ ತಾನು ವೈಷ್ಣವಯಾಗ ಮಾಡಿದ. ವನವಾಸದಲ್ಲಿದ್ದ ಪಾಂಡವರನ್ನು ಪರೀಕ್ಷಿಸಲು ದುರ್ವಾಸಮುನಿ ಯೋಚಿಸಿದ್ದು ಇವನ ಪ್ರೇರಣೆಯಿಂದಲೇ. ಅಜ್ಞಾತವಾಸದಲ್ಲಿದ್ದ ಪಾಂಡವರನ್ನು ಹೇಗಾದರೂ ಮಾಡಿ ಪತ್ತೆ ಮಾಡಲು ಎಲ್ಲ ಕಡೆ ಚಾರರನ್ನು ಅಟ್ಟಿದ. ಕೊನೆಗೆ ಕೀಚಕವಧೆ ಭೀಮನಿಂದಲೇ ಆಗಿರಬೇಕೆಂದು ಊಹಿಸಿ ವಿರಾಟನ ಗೋವುಗಳನ್ನು ಹರಣ ಮಾಡಿ ಸೋತ. ಪಾಂಡವರ ಸಹಾಯಕ್ಕಾಗಿ ಸೈನ ಸಮೇತ ಬರುತ್ತಿದ್ದ ಶಲ್ಯನನ್ನು ಉಪಾಯಾಂತರದಿಂದ ತನ್ನ ಪಕ್ಷಕ್ಕೆ ಸೇರುವಂತೆ ಮಾಡಿದ. ಯುದ್ಧ ಬೇಡವೆಂದು ಭೀಷ್ಮ ದ್ರೋಣಾದಿಗಳು ಎಷ್ಟು ಉಪದೇಶಿಸಿದರೂ ಕೇಳದೆ ಕರ್ಣ ದುಶ್ಯಾಸನತ ಸಹಾಯದಿಂದಲೇ ಗೆಲ್ಲುತ್ತೇನೆಂದು ಹೇಳಿಕೊಂಡು ಪಾಂಡವರ ನಾಶವೇ ತನ್ನ ಗುರಿ ಎಂದು ಛಲದಿಂದ ಮುನ್ನುಗ್ಗಿದ. ಧೃತರಾಷ್ಟ್ರನ ಬುದ್ಧಿಮಾತನ್ನು ಗಾಳಿಗೆ ತೂರಿದ. ದೂತನಾಗಿ ಬರುತ್ತಿರುವ ಕೃಷ್ಣನನ್ನು ಕಟ್ಟಿಹಾಕಿಸಬೇಕೆಂದು ಯೋಚಿಸಿದ. ಕೃಷ್ಣ ನಾರದ ಗಾಂಧಾರಿ ಇವರುಗಳು ಕೂಡ ಸಂಧಿ ಮಾಡಿಕೊಳ್ಳಲು ಪರಿಪರಿಯಲ್ಲಿ ಹೇಳಿದರೂ ನಿರಾಕರಿಸಿದ. ಕೊನೆಗೂ ಯುದ್ಧ ಅನಿವಾರ್ಯವಾಯಿತು. ತನ್ನ ಸೈನ್ಯವನ್ನು ಮೂರು ವಿಭಾಗವಾಗಿ ವಿಂಗಡಿಸಿಕೊಂಡ. ಮೊದಲಿಗೆ ಭೀಷ್ಮನಿಗೆ ಯುದ್ಧ ಪಟ್ಟಕಟ್ಟಿದ. ಯುದ್ಧಕ್ಕೆ ಸರ್ವ ಸನ್ನಾಹವಾದಾಗಲೂ ಪಾಂಡವರೊಡನೆ ರಾಜಿಮಾಡಿಕೊಳ್ಳುವಂತೆ ಭೀಷ್ಮ ಹೇಳಿದಾಗ ಒಂದು ಸೂಜಿಮೊನೆಯಷ್ಟು ಭೂಮಿಯನ್ನು ಕೊಡೆನು ಎಂದು ಹಠ ಹಿಡಿದ. ಯುದ್ಧ ಕೈಗಟ್ಟಿದ್ದಾಗ ಘಟೋತ್ಕಚನ ಸಂಗಡ ಯುದ್ಧ ಮಾಡಿದ. ಭೀಷ್ಮನ ಸರದಿ ಮುಗಿದ ಅನಂತರ ಕರ್ಣನ ಅನುಮತಿಯಿಂದ ದ್ರೋಣನಿಗೆ ಪಟ್ಟ ಕಟ್ಟಿದ. ಅರ್ಜುನನ ವೀರ ಪ್ರತಿಜ್ಞೆಯಿಂದಾಗಿ ಓಡಿಹೋಗುತ್ತಿದ್ದ ಜಯದ್ರಥನಿಗೆ ಧೈರ್ಯ ತುಂಬಿದ. ದ್ರೋಣನಿಂದ ಮಂತ್ರ ಕವಚ ಸ್ವೀಕರಿಸಿ ಅರ್ಜುನನ ಮೇಲೆ ಯುದ್ಧಕ್ಕೆ ಹೋಗಿ ಸೋತ. ಸಾತ್ಯಕೀಯಿಂದಲೂ ಸೋಲನ್ನು ಅನುಭವಿಸಿದ. ಸೈಂಧವ ವಧೆ ಈತನನ್ನು ಬಹಳವಾಗಿ ನೋಯಿಸಿತು. ದ್ರೋಣನ ಸತ್ಯಸಂಧತೆಯನ್ನೆ ಶಂಕಿಸಿದ. ಈ ನಡುವೆ ನಕುಲನೊಂದಿಗೆ ಯುದ್ಧ ಮಾಡಿ ಅಲ್ಲೂ ಪರಾಜಿತನಾದ. ಈತನ ಅನಂತರ ಲಕ್ಷಣ ಅಭಿಮನ್ಯುವಿನಿಂದ ಮರಣ ಹೊಂದಿದ. ದ್ರೋಣ ವಧೆಯ ಅನಂತರ ಕರ್ಣನಿಗೆ ಪಟ್ಟ ಕಟ್ಟಿದ. ಯುಧಿಷ್ಠಿರರ ಜೊತೆ ಯುದ್ಧಮಾಡಿ ಅವನಿಂದಲೂ ಸೋತ. ಕರ್ಣ ಮತ್ತು ಶಲ್ಯರ ನಡುವೆ ಉಂಟಾದ ವಿರಸವನ್ನು ಹೋಗಲಾಡಿಸಿದ. ಕರ್ಣನ ಸಾವು ಈತನನ್ನು ಬಹಳವಾಗಿ ಅಲ್ಲಾಡಿಸಿತು. ಅನಂತ ಶಲ್ಯನಿಗೆ ಪಟ್ಟ ಕಟ್ಟಿದ. ಧೃಷ್ಟದ್ಯುಮ್ನನ ಜೊತೆ ಯುದ್ಧದಲ್ಲಿ ಸೋತ. ಜಲಸ್ತಂಭ ವಿದ್ಯೆಯಿಂದ ವೈಶಂಪಾಯನ ಸರೋವರದಲ್ಲಿ ಪಾಂಡವರಿಗೆ ಕಾಣದಂತೆ ಅವಿತುಕೊಂಡ. ಈ ಸುದ್ದಿ ಬೇಡರಿಂದ ಪಾಂಡವರಿಗೆ ಮುಟ್ಟಿ ಯುಧಿಷ್ಠಿರ ಭೀಮಾದಿಗಳು ಅಲ್ಲಿ ಧಾವಿಸಿ ಹೀಯಾಳಿಸಿದಾಗ ಗದೆಯೊಂದಿಗೆ ನೀರಿನಿಂದ ಹೊರಬಂದು ಭೀಮನೊಂದಿಗೆ ಗದಾಯುದ್ಧಕ್ಕೆ ಸಿದ್ಧನಾದ. ನಡೆದ ಭೀಕರ ಯುದ್ಧದಲ್ಲಿ ಭೀಮ ಈತನ ತೊಡೆ ಮುರಿದ. ಯುದ್ಧ ಭೂಮಿಯಲ್ಲಿ ತೊಡೆ ಮುರಿದು ಬಿದ್ದ ತನ್ನ ಬಳಿಗೆ ಬಂದ ಕೃತವರ್ಮ, ಕೃಪ, ಅಶ್ವತ್ಥಾಮರು ದಾರುಣ ಸ್ಥಿತಿಯನ್ನು ಕಂಡು ಮರುಗಿ ತಾವು ಪಾಂಡವರ ನಾಶಕ್ಕೆ ಏನನ್ನಾದರೂ ಮಾಡಲು ಸಿದ್ಧರೆಂದು ಪ್ರತಿಜ್ಞೆ ಮಾಡಿದಾಗ ದ್ರೋಣಪುತ್ರ ಅಶ್ವತ್ಥಾಮನಿಗೆ ಯುದ್ಧಪಟ್ಟ ಕಟ್ಟಿದ. ಕೋಪೋದ್ರೇಕದಲ್ಲಿ ಅಶ್ವತ್ಥಾಮ ಪಾಂಡವರ ಮಕ್ಕಳ ತಲೆಯನ್ನು ತರಿದು ತಂದು ತೋರಲಾಗಿ ಬಹಳ ವ್ಯಸನಪಟ್ಟು ಇಹಲೋಕ ಯಾತ್ರೆ ಮುಗಿಸಿದ.
ದುರ್ಯೋಧನ ಎಂಬ ಹೆಸರಿನ ಇನ್ನೊಬ್ಬನಿದ್ದಾನೆ. ಈತ ಸೂರ್ಯವಂಶದ ಒಬ್ಬ ದೊರೆ. ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ದುರ್ಜಯನೆಂಬ ರಾಜನ ಮಗಳಾದ ನರ್ಮದೆ ಈತನ ರೂಪಕ್ಕೆ ಆಕರ್ಷಿತಳಾಗಿ ಈತನನ್ನೇ ವರಿಸುತ್ತಾಳೆ. ಈತನಿಂದ ಸುದರ್ಶನೆ ಎಂಬ ಹೆಣ್ಣುಮಗುವನ್ನು ಪಡೆಯುತ್ತಾಳೆ. ಪ್ರಾಪ್ತ ವಯಸ್ಕಳಾದ ಸುದರ್ಶನೆ ತಂದೆಯ ಯಾಗಮಂದಿರದಲ್ಲಿ ತಂದೆಗೆ ಪೂಜೆಗೆ ಬೇಕಾದ ಸಲಕರಣೆಯನ್ನು ಸಿದ್ಧಗೊಳಿಸುತ್ತಿದ್ದಾಗ ಅವಳ ಸೌಂದರ್ಯಕ್ಕೆ ಮರುಳಾದ ಅಗ್ನಿದೇವ ಬ್ರಾಹ್ಮಣರೂಪದಿಂದ ಕಾಣಿಸಿಕೊಂಡು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಆಗ ಅವಳು ತಾನು ಅಸ್ವತಂತ್ರಳು, ತಂದೆ ಒಪ್ಪಿಗೆ ಬೇಕು ಎನ್ನುತ್ತಾಳೆ. ಅಗ್ನಿ ದುರ್ಯೋಧನನನ್ನು ಒಪ್ಪಿಸಿ ಆಕೆಯನ್ನು ವಿವಾಹವಾಗುತ್ತಾನೆ. (ಬಿ.ಎನ್.ಎನ್.ಬಿ.)