ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೇವಚಂದ್ರ

ವಿಕಿಸೋರ್ಸ್ದಿಂದ

"ದೇವಚಂದ್ರ" :- 1770-1841. ಜೈನಕವಿ.ಆಶ್ರಯ:-ಮುಮ್ಮಡಿ ಕೃಷ್ಣರಾಜ ಒಡೆಯರ್ . ರಾಮಕಥಾವತಾರ ಮತ್ತು ರಾಜಾವಳೀ ಕಥೆ ಎಂಬ ಗ್ರಂಥಗಳ ಕರ್ತೃ. ಈತನ ಸ್ಥಳ ಕನಕಗಿರಿ ಅಥವಾ ಮಲೆಯೂರು. ಮಲೆಯೂರ ಪಾಶ್ರ್ವನಾಥ ಈತನ ಕುಲದೈವ. ರಾಜಾವಳೀ ಕಥೆಯಿಂದ ಈತ ಇನ್ನೂ ಅನೇಕ ಗ್ರಂಥಗಳನ್ನು ಬರೆದಿರುವಂತೆ ತಿಳಿಯುತ್ತದೆ. ಈ ಗ್ರಂಥದಿಂದ ಕವಿಯ ಬಗ್ಗೆ ಈ ಕೆಲವು ವಿಷಯಗಳು ತಿಳಿದುಬರುತ್ತವೆ.

ಈತನ ತಂದೆ ದೇವಯ್ಯ, ತಾಯಿ ಕುಸುಮಾಜಮ್ಮ ಅಣ್ಣಂದಿರು ಚಂದಪಾರ್ಯ, ಪದ್ಮರಾಜರು, ಪದ್ಮರಾಜ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಕವಿ 1770ರಲ್ಲಿ ಹುಟ್ಟಿದ. 14ನೆಯ ವರ್ಷದಿಂದ ಕರಣಿಕಾಗ್ರ ಗಣ್ಯನೆನಿಸಿ ಕವನಕಟ್ಟಲಾರಂಭಿಸಿದ. ಈತನ ಪ್ರಥಮಗ್ರಂಥ "ಪೂಜ್ಯಪಾದ ಚರಿತೆ" 1792ರಲ್ಲಿ ರಚಿತವಾಯಿತು. ರಾಮಕಥಾವತಾರವನ್ನು 1797ರಲ್ಲಿ ಆರು ತಿಂಗಳಲ್ಲಿ ಬರೆದ. 1804ರಲ್ಲಿ ಕಾಲಿನ್ ಮೆಕೆಂಜಿ ಮೈಸೂರು ದೇಶದ ಪೈಮಾಸಿ ಕೆಲಸವನ್ನು ಆರಂಭಿಸಿದ. ಮೆಕೆಂಜಿಗೆ ಆತನ ಕಾರ್ಯದಲ್ಲಿ ಸಹಾಯಮಾಡಿ ದೇಶದ ಪೂರ್ವವೃತ್ತಾಂತಗಳನ್ನೂ ಬರೆದುಕೊಟ್ಟ. ಕರ್ಣಾಟಕ ದೇಶದೊಳು ನಡೆದ ಪ್ರಪಂಚಗಳನ್ನೆಲ್ಲ ಕ್ರೋಡೀಕರಿಸಿ ಬರೆದ ಕಥಾಸಂಗ್ರಹವೇ ರಾಜಾವಳೀ ಕಥೆ. ಈ ಕಥೆಯನ್ನು ಮುಮ್ಮಡಿ ಕೃಷ್ಟರಾಜ ಒಡೆಯರ ಆಶ್ರಿತ ವೈದ್ಯ "ಸೂರಿಪಂಡಿತರ" ಪ್ರೋತ್ಸಾಹದಿಂದ 1838ರಲ್ಲಿ ಬರೆದು 1841ರಲ್ಲಿ ರಾಣಿ "ದೇವೀರಾಂಬೆಗೆ' ಇದನ್ನು ಒಪ್ಪಿಸಿದ.

ರಾಜಾವಳೀ ಕಥೆ ಗದ್ಯರೂಪದಲ್ಲಿದ್ದು 11 ಅಧಿಕಾರಿಗಳಿಂದ ಕೂಡಿದೆ. ಅಲ್ಲಲ್ಲಿ ಕೆಲವು ಪದ್ಯಗಳೂ ಶ್ಲೋಕಗಳೂ ಇವೆ. ಜೈನಮತಕ್ಕೆ ಸಂಬಂಧಿಸಿದ ಕೆಲವು ಇತಿಹಾಸಗಳೂ ಅನೇಕ ರಾಜರ ಚರಿತ್ರೆಗಳೂ ಕೆಲವು ಕವಿಗಳ ಚರಿತ್ರೆಗಳೂ ಇದರಲ್ಲಿ ಇರುವುದರಿಂದ ಈ ಗ್ರಂಥ ಮಹತ್ತ್ವದ್ದಾಗಿದೆ. ಚಾಮರಾಜ ಮಹಿಷಿ ದೇವೀರಾಂಬೆಯ ಆಜ್ಞಾನುಸಾರ ಕವಿ ಮೈಸೂರು ರಾಜರ ವಂಶಾವಳಿಯನ್ನು ಈ ಗ್ರಂಥದಲ್ಲಿ ಸಂಗ್ರಹಿಸಿ ಬರೆದಿದ್ದಾನೆ. ಕಾಲ್ಪನಿಕ ಅಂಶಗಳೂ ಇದರಲ್ಲಿ ಮಿಶ್ರಿತವಾಗಿರುವುದರಿಂದ ಚಾರಿತ್ರಿಕ ಸತ್ಯವನ್ನು ಶೋಧಿಸಿ ತೆಗೆಯಬೇಕಾಗುತ್ತದೆ. ತನ್ನ "ಭಾಷೆ ಹಳಗನ್ನಡ, ಬೆಳುಗನ್ನಡ, ಒಳುಗನ್ನಡ, ಮಿಶ್ರಗನ್ನಡ ಅಚ್ಚಗನ್ನಡ ತೆಳುಗನ್ನಡ ಮಿಶ್ರದಿಂದ ಪೊಸತಾಗಿದೆ "ಎಂದು ಕವಿ ಹೇಳಿಕೊಂಡಿದ್ದಾನೆ.

` ನನ್ನಿಯ ನಲ್ಲ ' ಬಲ್ಲಿದರ ಬಲ್ಲಹ, ಪ್ರಜಾನುರಾಗದ ಮೊದಲು, ರಾಮ ಚಂದ್ರರಿಗೆ ಬದಲು, ವೀರದ ಮೊಳೆ, ಬಿನ್ನಣದ ಬೆಳೆ, ದಯೆಯ ಸೊಂಪು, ದಾಕ್ಷಿಣ್ಯದ ಪೆಂಪು, ಒಸಗೆಯುರ್ಬು, ಓಜೆಯ ಕೊರ್ಬು; ತತ್ವಾರ್ಥದೊಳ್-ಬುಧನುಂ ಸುಗುಣಂಗಳೊಳ್ ಗುರು ಎನಿಸಿ... ದಿಕ್ಕುಮಾರನಂತೆ ಬಳೆದಂ' ಮುಮ್ಮಡಿ ಕೃಷ್ಣರಾಜನ ವರ್ಣನೆಯನ್ನೊಳಗೊಂಡ ಈ ಭಾಗದಿಂದ ಈತನ ಶೈಲಿಯನ್ನು ತಿಳಿಯಬಹುದು.

"ರಾಮಕಥಾವತಾರ" 16 ಆಶ್ವಾಸಗಳ ಚಂಪೂಕಾವ್ಯ. ಇದರಲ್ಲಿ ನಾಗಚಂದ್ರನ ರಾಮಚಂದ್ರಚರಿತ ಪುರಾಣದೊಳಗೆ ಹೇಳಿರುವ ಕಥೆಯೇ ಸ್ವಲ್ಪ ವಿಸ್ತಾರವಾಗಿ ವರ್ಣಿತವಾಗಿದೆ. ಆ ಗ್ರಂಥದಿಂದ ಅನೇಕ ಪದ್ಯಗಳು ಅನುವಾದವಾಗಿವೆ. ಅಭಿನವ ಪಂಪಂ ರಚಿಸಿದ ರಾಮಚರಿತ್ರದೊಳ್ ಹಲವೆಡೆಯಲ್ಲಿ ತೋರುವ ಸಂಶಯಂಗಳಂ ನಿವಾರಿಸಲು... ಸಕಲ ಜಿನಶಾಸ್ತ್ರ ಕಥೆಗಳು ಸಂಬಂಧಿಸಿ ಈ ಕಥಾಪ್ರಪಂಚಮನೊರೆದೆಂ ಎಂದು ಕವಿ ಹೇಳುತ್ತಾನೆ. (ಟಿ.ಬಿ.ಎಸ್.)