ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೇವ್ ಆನಂದ್

ವಿಕಿಸೋರ್ಸ್ದಿಂದ

ದೇವ್ ಆನಂದ್ 1924--, ಹಿಂದಿ ಚತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ. ಹುಟ್ಟಿದ್ದು ಗುರುಪುರದಲ್ಲಿ. ಈತನ ಮೊದಲಿನ ಹೆಸರು ದೇವದತ್ತ ಆನಂದ. ಲಾಹೋರಿನಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದ. ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿ ಪ್ರಭಾತ ಚಿತ್ರಸಂಸ್ಥೆಯವರ ಹಂ ಏಕ್ ಹೈ ನಲ್ಲಿ ನಾಯಕನ ಪಾತ್ರ ನಿರ್ವಹಿಸಿದ. ಈ ಚಿತ್ರ ಬಿಡುಗಡೆಯಾದ ಮೂವತ್ತು ವರ್ಷಗಳ ಅನಂತರ 1976ರಲ್ಲಿ ಬಿಡುಗಡೆಯಾಗಿರುವ ಜಾನೇಮನ್‍ದಲ್ಲಿಯೂ ಈತ ನವಯುವಕನಾಗಿಯೇ ಅಭಿನಯಿಸಿದ್ದಾನೆ. ಇದು ಈತನ ಕಾಲಾತೀತ ಜನಪ್ರಿಯತೆಗೆ ಸಾಕ್ಷಿ. ರಾಜಕಪೂರ್ ಮತ್ತು ದಿಲೀಪ್ ಕುಮಾರರ ಸಮಕಾಲೀನನಾದ ಈತ ಇತ್ತೀಚಿನ ಸಿನಿಮಾ ತಲೆಮಾರಿನ ರಾಜೇಶ್ ಖನ್ನ ಹಾಗೂ ಅಮಿತಾಬ್ ಬಚನ್‍ರಿಗೂ ಹಾಗೂ ಅಷ್ಟೇ ಸಮಕಾಲೀನನಾಗಿದ್ದಾನೆ. ಈತನ ಮುಖ್ಯ ಚಿತ್ರಗಳು ಜಿದ್ದಿ (1948). ಬಾಜಿó (1951). ಟ್ಯಾಕ್ಸಿ ಡ್ರೈವರ್ (1954), ಮುನೀಮ್‍ಜಿ (1955). ಸಿ.ಐ.ಡಿ. (1956), ಬಾರಿಷ್ (1957), ಕಾಲಾ ಪಾನಿ (1958), ಕಾಲಾ ಬಜಾರ್, ಹಂ ದೋನೋ (1961). ಗೈಡ್ (1965), ಜ್ಯುವೆಲ್ ತೀಫ್ (1967), ಜಾನಿ ಮೇರಾ ನಾಮ್ (1970), ಹರೇ ರಾಮ್ ಹರೇ ಕೃಷ್ಣ (1972), ಜಾನೇಮನ್ (1976), ಬುಲೆಟ್ (1977), ತೇರೆ ಗರ್ ಕಿ ಸನಮ್ (1964), ಷರಾಭಿ (1965), ಪ್ಯಾರ್ ಮಹಬೂತ್ (1967), ಮಹಲ್ (1970), ಜಾನಿಮೇರಾನಾಮ್ ಪ್ರೇಮ್ ಪ್ರಜಾರಿ (1971), ತೇರೆ ಮೆರಿ ಸಪ್ನೆ (1972), ಲೂಟ್ ಮಾರ್ (1982), ಸ್ವಾಮಿದಾದಾ (1984), ಆನಂದ್ ಹೌರ್ ಆನಂದ್ (1985), ಲಷ್ಕರ್ (1990). ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಈತನ ಜೊತೆಗೆ ಹೆಚ್ಚು ಕಡಿಮೆ ಹಿಂದಿ ಚಿತ್ರರಂಗದ ಪ್ರಮುಖ ನಟಿಯರೆಲ್ಲರೂ ಕಾಣಿಸಿಕೊಂಡಿದ್ದಾರೆ: ಕಲ್ಪನಾ ಕಾರ್ತಿಕ್, ಗೀತಾಬಾಲಿ, ಸುರೈಯ, ಮಧುಬಾಲಾ, ನರ್ಗೀಸ್ ಕಾಮಿನಿ ಕೌಶಲ್, ನಳಿನಿ ಜಯವಂತ್, ಬೀನಾರಾಯ್, ನೂತನ್ ಸಾಯಿರಾಬಾನು, ಸಾಧನಾ, ನಂದ, ಸುಚಿತ್ರಾ, ಸೇನ್ ಉಷಾ, ಕಿರಣ್, ಮೀನಾಕುಮಾರಿ, ನಿಮ್ಮಿ, ಸಿಮಿ, ಕಲ್ಪನಾ, ವೈಜಯಂತಿಮಾಲಾ, ಶರ್ಮಿಳಾ ಟಾಗೂರ , ಮಮ್ತಾಜ್, ವಹೀದಾ ರಹಮಾನ್, ಜೀನತ ಅಮಾನ್, ಹೇಮಮಾಲಿನಿ-- ಈ ಎಲ್ಲರೊಂದಿಗೆ ಅಭಿನಯಿಸಿ ಇನ್ನೂ ತನ್ನ ಚಿರನೂತನ ಪ್ರೇಮಿ ಯುವಕನ ಇಮೇಜನ್ನು ಈತ ಉಳಿಸಿಕೊಂಡಿದ್ದಾನೆ. ತನ್ನ ಸ್ವಂತ ನವಚೇತನ್ ಚಿತ್ರ ಸಂಸ್ಥೆಯಲ್ಲಿ ಸುಮಾರು 20 ಚಿತ್ರಗಳನ್ನು ಈತ ತಯಾರಿಸಿದ್ದಾನಲ್ಲದೆ ಪ್ರೇಂ ಪೂಜಾರಿ ಹರೇರಾಮ ಹರೇಕೃಷ್ಣ, ಹೀರಾ ಪನ್ನ, ಇಷ್ಕ್ ಇಷ್ಕ್ ಇಷ್ಕ್ ಮೊದಲಾದ ಚಿತ್ರಗಳನ್ನೂ ತಾನೇ ನಿರ್ದೇಶಿಸಿದ್ದಾನೆ. ಚಲನಚಿತ್ರ ನಟರ ಗಿಲ್ಡ್‍ಗೆ ಅದರ ಆರಂಭದಿಂದಲೂ ಅಧ್ಯಕ್ಷನಾಗಿದ್ದಾನೆ. ಮುನೀಮ್‍ಜಿ ಚಿತ್ರಕ್ಕೆ 1958ರಲ್ಲಿ ಫಿಲ್ಮ್ ಕ್ರಿಟಿಕ್ಸ್ ಸಂಸ್ಥೆಯ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಅಲ್ಲದೆ ಈತ ತನ್ನ ಅಭಿನಯಕ್ಕೆ ಪ್ರತಿಷ್ಠಿತ ಪ್ರಶಸ್ತಿಯೆನಿಸಿದ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಎರಡು ಬಾರಿ ಪಡೆದಿದ್ದಾನೆ. (1952-ಕಾಲಾಪಾನಿ ಮತ್ತು 1966-- ಗೈಡ್). ಹಂ ದೋನೋ ದಲ್ಲಿಯ ದ್ವಿಪಾತ್ರಾಭಿನಯಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಗೈಡ್, ಪ್ರೇಮ್‍ಪೂಜಾರಿ, ಹರೇ ರಾಮ ಹರೇ ಕೃಷ್ಣ ಮತ್ತು ಜ್ಯುವೆಲ್ ಥೀಫ್ ಚಿತ್ರಗಳೂ ಅನೇಕ ಪ್ರಶಸ್ತಿಗಳನ್ನು ತಂದಿತ್ತಿವೆ. 1996ರಲ್ಲಿ ಸ್ಕ್ರೀನ್ ವೀಡಿಯೋಕೋನ್ ಪ್ರಶಸ್ತಿ, 1998ರಲ್ಲಿ ಲೈಪ್‍ಟೈಮ್ ಅಚ್ಯುಮೆಂಟ್ ಅವಾರ್ಡ್, 2000 ಜುಲೈದಲ್ಲಿ ಕ್ಯಾಲಿಫೊರ್ನಿಯಾದಲ್ಲಿ ಇಂಡೋ ಅಮೆರಿಕನ್ ಅಸೋಸಿಯೇಷನ್‍ನವರು ಸ್ಟಾರ್ ಆಫ್ ದಿ ಮಿಲೆನಿಯಮ್ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು. 2001, ಆಗಸ್ಟ್ 15ರಂದು `ಪದ್ಮಭೂಷಣ ಪ್ರಶಸ್ತಿ ಬಂದಿತು. 2003 ಡಿಸೆಂಬರ್ 29 ರಂದು ಪ್ರತಿಷ್ಠಿತ `ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಕೊಟ್ಟು ಸನ್ಮಾನಿಸಿದರು. ಅಲ್ಲದೆ ಈತ ದಿ ಈವಿಲ್ ವಿತ್‍ಇನ್ ಎಂಬ ಇಂಗ್ಲಿಷ್ ಚಿತ್ರದಲ್ಲಿಯೂ ಗೈಡ್ ಚಿತ್ರದ ಇಂಗ್ಲಿಷ್ ಅವತರಣಿಕೆಯಲ್ಲಿಯೂ ಇದ್ದಾನೆ.

ಸುಂದರ ಆಕರ್ಷಕ ವ್ಯಕ್ತಿತ್ವವುಳ್ಳ ಈತನ ತಲೆಗೂದಲು ಶೈಲಿ, ಹುಬ್ಬು ಹಾರಿಸುವ ರೀತಿ, ನಡಿಗೆಯ ರೀತಿಗಳಲ್ಲಿ ಈತನದೇ ಆದ ವ್ವೆಶಿಷ್ಟವಿದೆ. ಉಡುಗೆಗೆ ಈತ ಅತ್ಯಂತ ಮಹತ್ವ ಕೊಡುತ್ತಾನೆ. ಹಾಗಾಗಿ ಈತ ರೂಪಿಸಿರುವಂಥ ಅನೇಕ ಉಡುಗೆತೊಡಗೆಗಳ ಶೈಲಿಗಳು ಕಾಲಕಾಲಕ್ಕೆ ಜನಪ್ರಿಯ ಫ್ಯಾಷನ್ ಆದುದುಂಟು. ನವಕೇತನ ಚಿತ್ರಸಂಸ್ಥೆಯ ಯಶಸ್ವಿ ಚಿತ್ರ ಟ್ಯಾಕ್ಸಿ ಡ್ರೈವರ್‍ನಲ್ಲಿ (1954) ತನ್ನ ಜೊತೆ ಅಭಿನಯಿಸಿದ್ದ ನಟಿ ಕಲ್ಪನಾ ಕಾರ್ತೀಕಳನ್ನು ಈತ ಮದುವೆಯಾಗಿದ್ದಾನೆ. ಈತನ ಸಹೋದರರಾದ ಚೇತನ್ ಆನಂದ್ ಹಾಗೂ ವಿಜಯ ಆನಂದರೂ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. (ಎಸ್.ಎಸ್.ಎಂ.ಯು.)