ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೊಂಬಿದಾಸರು
ದೊಂಬಿದಾಸರು - ಕರ್ನಾಟಕದ ಆದ್ಯಂತ ಹರಡಿಕೊಂಡಿರುವ ಅತ್ಯಂತ ಜನಪ್ರಿಯ ಲೌಕಿಕ ವೃತ್ತಿಗಾಯಕರು; ಗಾಯನ ಸಂಪ್ರದಾಯದ ಜೊತೆಗೆ ಜನಪದ ರಂಗಭೂಮಿಗೂ ತಮ್ಮ ನಾಟಕಕಲೆಯಿಂದ ಅಪೂರ್ವ ಕೊಡುಗೆಗಳನ್ನಿತ್ತವರು; ಈ ಎರಡು ಕಲಾಪ್ರಕಾರಗಳಿಂದಲೂ ಜನಪದರ ಹೃದಯವನ್ನು ಗೆದ್ದು ಜೀವನೋಪಾಯವನ್ನು ಕಂಡುಕೊಂಡ ಅರೆ - ಅಲೆಮಾರಿ ಜನಾಂಗದವರು. ಆಂಧ್ರದ ಕೆಲವು ಭಾಗಗಳಲ್ಲಿ ಈ ಗಾಯಕರಿರುವರೆಂದು ತಿಳಿದುಬರುತ್ತದೆ. ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವ ಇವರು ಮೈಸೂರು, ಮಂಡ್ಯ, ತುಮಕೂರು, ಹಾಸನ, ಬೆಂಗಳೂರು, ಕೋಲಾರ, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ಅಲ್ಲಲ್ಲಿ ಚದರಿ ಹೋಗಿದ್ದಾರೆ. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್‍ಸ್ ಗ್ರಂಥಗಳಲ್ಲಿ ಭಿಕ್ಷಾಟನೆಯಿಂದ ಜೀವಿಸುವ ಇವರನ್ನು ಬಲಿಜ ಜನಾಂಗದ ಒಂದು ಉಪಜನಾಂಗವಾಗಿ ಪರಿಗಣಿಸಲಾಗಿದ್ದು ಇವರನ್ನು ದಂಡಿದಾಸರು ಎಂದು ಹೆಸರಿಸಲಾಗಿದೆ.
ದೊಂಬಿದಾಸರನ್ನು ದಂಡಿದಾಸರೆಂದಿರುವುದರಿಂದ ಇವರು ಯುದ್ಧ ಸಂದರ್ಭಗಳಲ್ಲಿ ದಂಡಿನ ಜೊತೆಯಲ್ಲಿ ಹೋಗಿ ಅವರಿಗೆ ತಮ್ಮ ಗಾಯನ ಹಾಗೂ ನಾಟಕಗಳಿಂದ ರಂಜನೆಯನ್ನುಂಟು ಮಾಡುತ್ತಿದ್ದವರಿರಬಹುದೆಂದು ಊಹಿಸಬಹುದಾಗಿದೆ. ಉತ್ತರ ಕರ್ನಾಟಕದಲ್ಲಿ ಇವರನ್ನು ದುಂಬೇದಾಸರು ಎಂದು ಕರೆಯುತ್ತಾರೆ. ಈ ಜನಾಂಗಕ್ಕಿರುವ ಹೆಸರಿನ ಬಗೆಗೆ ವಿವಿಧ ರೀತಿಯ ವಿವರಣಾತ್ಮಕ ಕಥೆಗಳಿವೆ. ಇವರು ಬಳಸುವ ಏಕನಾದ ಅಥವಾ ಏಕತಾರಿ ಎಂಬ ವಾದ್ಯದ ದನಿ ದುಂಬಿಯ ಝೇಂಕಾರದಂತಿರುವುದರಿಂದ ಅವರಿಗೆ ದುಂಬಿದಾಸರೆಂದು ಹೆಸರಾಯಿತಂತೆ. ಈ ದಾಸರು ಕತೆ ಮಾಡುತ್ತಿರುವಲ್ಲಿ ಜನ ದೊಂಬಿಯೆಬ್ಬಿಸಿದ್ದರಿಂದ ಇವರಿಗೆ ದೊಂಬಿದಾಸರೆಂದು ಹೆಸರು ಬರಲು ಕಾರಣವಾಯಿತಂತೆ ಇವರ ನಾಟಕಗಳು ಯಾವ ಕಟ್ಟುಪಾಡುಗಳಿಗೂ ಸಿಕ್ಕದೆ ಸುಸ್ವತಂತ್ರವಾಗಿದ್ದು ಹಾಡುಗಳು ಹಾಗೂ ಸಂಭಾಷಣೆಗಳು ಒಟ್ಟಾರೆ ದೊಂಬಿ ಎಬ್ಬಿಸಿದಂತೆ ಕಂಡುದರಿಂದ ಇವರನ್ನು ದೊಂಬಿದಾಸರೆಂದು ಕರೆದರೇನೋ. ವೈಷ್ಣವ ಪಂಥದ ಅನುಯಾಯಿಗಳಾದ ಇವರಿಗೆ ದಾಸ ಎನ್ನುವ ಪದ ಸಹಜವಾಗಿಯೇ ಸೇರಿಕೊಂಡಿರಬೇಕು. ಆದರೆ ದೊಂಬಿದಾಸ ಎಂಬ ಪದ ದೊಂಗದಾಸ ಎಂಬ ಪದದ ರೂಪಾಂತರವೆಂಬುದಕ್ಕೆ ಕೆಲವು ಐತಿಹ್ಯ ಹಾಗೂ ಕುಲಪುರಾಣಗಳು ಸಾಕ್ಷ್ಯ ಒದಗಿಸುತ್ತವೆ.
ಒಂದು ಐತಿಹ್ಯದ ಪ್ರಕಾರ ತಿರುಪತಿ ವೆಂಕಟರಮಣ ಸ್ವಾಮಿಯ ಭಕ್ತರಾದ ಇವರು ಆ ದೇವರಿಗೆ ಸಲ್ಲಿಸಬೇಕಾಗಿದ್ದ ವಾರ್ಷಿಕ ಕಾಣಿಕೆಯನ್ನು ಒಪ್ಪಿಸದೆ ಕೈಕೊಟ್ಟರೆಂಬ ಕಾರಣದಿಂದ ಇವರನ್ನು ಜನ ದೊಂಗದಾಸರು (ಕಳ್ಳದಾಸರು) ಎಂದು ಕರೆದರು. ದೊಂಗದಾಸ ಕ್ರಮೇಣ ದೊಂಬಿದಾಸ ಎಂದಾಯಿತೆಂದು ಹೇಳುತ್ತಾರೆ. ಇವರನ್ನು ಹೆಣ್ಣುವೇಷದವರೆಂದೂ ದೊಂಗದಾಸರೆಂದೂ ಕರೆಯುವುದಕ್ಕೆ ವಿವರಣೆಯನ್ನು ಕೊಡುವ ಸ್ವಾರಸ್ಯವಾದ ಪುರಾಣ ಕಥೆಯೊಂದು ಹೀಗಿದೆ;
ಇಬ್ಬರು ಗಂಡಸರು ಯಾವುದೋ ಒಂದು ದಾರಿಯಲ್ಲಿ ಬರುತ್ತಿದ್ದರು. ಪಾರ್ವತಿ ವಿಹಾರಾರ್ಥವಾಗಿ ಭೂಲೋಕದಲ್ಲಿ ಸಂಚರಿಸುತ್ತ ಬರುತ್ತಿರುವಾಗ ಅವಳನ್ನು ಇಬ್ಬರೂ ಕಂಡರು. ಅವಳ ಮನಮೋಹಕ ದೈವೀಸೌಂದರ್ಯವನ್ನು ಕಂಡು ಅವಳಿಗಾಗಿ ಆಸೆಪಟ್ಟು ಇಬ್ಬರೂ ಧೈರ್ಯಮಾಡಿ ನನ್ನನ್ನು ಮದುವೆಯಾಗು ನನ್ನ ಹೆಂಡತಿಯಾಗು ಎಂದು ಅಂಗಲಾಚಿದರು. ಆಗ ಪಾರ್ವತಿ ಕೋಪದಿಂದ ಲೋಕಮಾತೆಯಾದ ನನ್ನನ್ನೇ ಬಯಸಿದ ನೀವು ನಪುಂಸಕರಾಗಿರೆಂದು ಶಾಪಕೊಟ್ಟಳಂತೆ. ಶಾಪಗ್ರಸ್ತರಾದ ಇವರು ತಾವು ಮಾಡಿದ ಅಪರಾಧಕ್ಕೆ ಪಶ್ಚಾತ್ತಾಪ ಪಟ್ಟಾಗ ಅವರ ಪುರುಷತ್ವ ಉಳಿಸಿಕೊಳ್ಳಲು ಹೆಣ್ಣುವೇಷಧರಿಸಿ ಜನರನ್ನು ರಂಜಿಸುವಂತೆ ಹೇಳಿದಳಂತೆ, ಅಂದಿನಿಂದ ದೊಂಗದಾಸರಿಗೆ ಹೆಣ್ಣು ವೇಷದವರು ಎಂಬ ಹೆಸರು ಬಂದಿತಂತೆ.
ಅರೆ - ಅಲೆಮಾರಿಗಳಾದ ದಾಸರುಗಳಲ್ಲಿ ಕೋಲೆಬಸವ ದಾಸರು, ಏಡುಮಲಿ ಸೆಟ್ಟೋಡು, ಏಡು ಕೋಮ್ಟೇಡು, ಬಮ್ಮನ ಪಲ್ಲೋಡು, ಏಡು ಪಡುತ್ಲೋಡು, ಸ್ವಾಮ್‍ಕಟ್ಟೋಡು, ತಿರುಮ್ಲೋಡು, ಗ್ವಾದಾವಾಡು ಮುಂತಾದ ಉಪಜಾತಿಗಳಿವೆ. ಇವರಲ್ಲಿ ದೊಂಬಿದಾಸರು ಏಡು ಪಡುತ್ಲೋಡು ಗುಂಪಿಗೆ ಸೇರಿದವರು.
ಮನೆ ಮಾತು ತೆಲುಗಾದರೂ ದೊಂಬಿದಾಸರ ಕಾವ್ಯ ಭಾಷೆ ಕನ್ನಡ : ನಾಟಕಗಳ ಹಾಗೂ ವ್ಯಾವಹಾರದ ಭಾಷೆಯೂ ಕನ್ನಡ. ಕನ್ನಡ ತೆಲುಗು ಭಾಷೆಗಳ ಬಾಂಧವ್ಯ ವಿಶೇಷವಾಗಿದ್ದ ವಿಜಯನಗರದ ಅರಸರ ಕಾಲದಿಂದ ಇವರು ಕರ್ನಾಟಕಾಂಧ್ರ ಗಡಿ ಭಾಗಗಳಿಂದ ಕನ್ನಡ ನಾಡಿನ ಇತರ ಭಾಗಗಳಲ್ಲೆಲ್ಲ ಹರಡಿಕೊಂಡರೆಂದು ಕಾಣುತ್ತದೆ. ಮಾಗಡಿ ಕೆಂಪೇಗೌಡನ ವಂಶಸ್ಥರಾದ ಮೊರಸು ಒಕ್ಕಲಿಗ ಅರಸು ಸಂತತಿಯವರು ಕನ್ನಡ ತೆಲುಗು ಭಾಷೆಗಳೆರಡಕ್ಕೂ ಸಮಾನ ಸ್ಥಾನವನ್ನು ಕೊಟ್ಟುದಲ್ಲದೆ ಇಮ್ಮಡಿ ಕೆಂಪೇಗೌಡ ಬರೆದಿರುವ ಗಂಗಾಗೌರೀ ವಿಲಾಸಮು ಎಂಬ ತೆಲುಗು ಕಾವ್ಯ ದೊಂಬಿದಾಸರು ಹಾಡುವ ಗಂಗೆ-ಗೌರಿ ಕಥೆಗೆ ಮೂಲವಾಗಿರಬಹುದು ಇಲ್ಲವೆ ದೊಂಬಿದಾಸರು ಹಾಡುತ್ತಿದ್ದ ಕಥೆಯನ್ನೆ ಇಮ್ಮಡಿ ಕೆಂಪೇಗೌಡ ತನ್ನ ಕಾವ್ಯದ ಕಥಾವಸ್ತುವನ್ನಾಗಿ ಎತ್ತಿಕೊಂಡಿರಬಹುದು. ಅಲ್ಲದೆ ದೊಂಬಿದಾಸರಿಗೆ ಮಾಗಡಿಕೆಂಪೇಗೌಡನ ಬಗ್ಗೆ ಹಾಗೂ ಅವನ ವಂಶಸ್ಥರ ಬಗ್ಗೆ ಇರುವ ಗೌರವ ಶ್ರದ್ಧೆ ಭಕ್ತಿಗಳು ಇವರು ಹಾಡುವ ಐತಿಹಾಸಿಕ ಕಾವ್ಯ `ಮಾಗಡಿ ಕೆಂಪೇಗೌಡ ರಲ್ಲಿ ಪಡಿಮೂಡಿವೆ. ಇವರು ಆಂಧ್ರದಿಂದ ಬಂದ ತೆಲುಗರೇ ಆಗಿದ್ದರೂ ಈಗ ಇವರನ್ನು ತೆಲುಗರೆಂದು ಕರೆಯುವುದಕ್ಕೂ ಸಾಧ್ಯವಾಗದಷ್ಟು ರೀತಿಯಲ್ಲಿವರು ಕನ್ನಡ ಭಾಷೆಯ ಶ್ರೇಷ್ಠ ಜನಪದ ಗಾಯಕರ ಸಾಲಿನಲ್ಲಿ ನಿಲ್ಲಬಲ್ಲವರಾಗಿದ್ದಾರೆ ; ಹೀಗಾಗಿ ಕನ್ನಡಿಗರೇ ಆಗಿ ಹೋಗಿದ್ದಾರೆ.
ಇವರ ಗುರುಗಳು ಕಂಚಿ ತಿರುಮಲೆ ತಾತಾಚಾರ್ಯರೆಂಬ ವಿಷಯ ಪರಂಪರೆಯಿಂದ ಬಂದುದಾಗಿದೆ. ಕುಣಿಗಲ್ ಬಳಿಯಿರುವ ಹೂಲಿಕೆರೆಯಲ್ಲಿ ತಮ್ಮ ಮಠವಿರುವುದಾಗಿಯೂ ಹೇಳಿಕೊಳ್ಳುತ್ತಾರೆ. ವೈಷ್ಣವ ಸಂಪ್ರದಾಯದ ಇವರಿಗೆ ತಿರುಪತಿ ವೆಂಕಟರಮಣಸ್ವಾಮಿ, ನರಸಿಂಹ ಸ್ವಾಮಿ, ಚಲುವರಾಯಸ್ವಾಮಿ, ಶ್ರೀರಂಗನಾಥ ಮುಂತಾದ ದೇವತೆಗಳಲ್ಲದೆ ಮಾರಿ ಮುಂತಾದ ಗ್ರಾಮ ದೇವತೆಗಳೂ ಮನೆದೇವರಾಗಿವೆ.
ದೊಂಬಿದಾಸರಲ್ಲಿ ಗಂಡಸರಿಗೆ ವೆಂಕಟಪ್ಪ, ವೆಂಕಟಯ್ಯ, ವೆಂಕಟಾಚಲ, ಮುನಿಯಪ್ಪ, ಭದ್ರಕಾಳ, ಕಾಳಯ್ಯ, ಗಿರಿಯಪ್ಪ, ಮುನಿವೆಂಕಟಪ್ಪ, ತಿರುಮಲಯ್ಯ, ಸುಬ್ಬಯ್ಯ, ಮುಂತಾದ ಹೆಸರುಗಳನ್ನು ಹೆಂಗಸರಿಗೆ ಭದ್ರಿ, ವೆಂಕ್ಟಿ, ಲಕ್ಷ್ಮೀ, ಅಲುಮೇಲಮ್ಮ, ಮುನಿಯಮ್ಮ, ಪೆದ್ದ ಮುನಿಯಮ್ಮ ಮುಂತಾದ ಹೆಸರುಗಳನ್ನು ಇಡುತ್ತಾರೆ.
ಇವರು ಬಳಸುವ ಆಭರಣಗಳಲ್ಲಿ ಮೂಕುಪಟಿಕ (ಮೂಗುಬಟು), ನಲ್ ಗಾಜುಲು (ಕರೀ ಬಳೆ), ಕಮುಲು (ಓಲೆ), ಕಾಲಂದ್ಗುಲು (ಕಾಲಂದಿಗೆ), ಸುಮರ್-ಕುಪ್ಗ್ಯ (ಕುಪ್ಗೆ), ಸಿಮ್ಮುನ ಮುರಾಲು (ಸಿಂಹನ ಮುರವು ಎಂಬ ಕಿವಿಯಾಭರಣ), ಕಡಗಾಲು, ಒಡ್ಯಾಣಮು, ಕಾಲುಂಗ್ರಾಲು - ಇವು ಕೆಲವು ಮಾತ್ರ. ಹೆಂಗಸರು ಹಲ್ಲಿಗೆ ಕರುಕಾಯ್‍ಪುಡಿ ಹಾಕಿಕೊಂಡು ಹಲ್ಲುಗಳನ್ನು ಕಪ್ಪು ಮಾಡಿಕೊಳ್ಳುತ್ತಾರೆ. ಹಣೆ, ಮುಂಗೈ, ರಟ್ಟೆಗಳಿಗೆ ಹಚ್ಚೆ ಹಾಕಿಸಿಕೊಂಡು ತಮ್ಮ ಅಲಂಕಾರವನ್ನು ಹೆಚ್ಚಿಸಿಕೊಳ್ಳುತ್ತಾರೆ.
ಮದುವೆ ಶಾಸ್ತ್ರಗಳಿಗೆ ದೊಂಬಿದಾಸರು ಬ್ರಾಹ್ಮಣ ಪುರೋಹಿತರನ್ನು ಕರೆಸುವುದಿಲ್ಲ. ಹೆಣ್ಣಿನ ಮನೆಯಲ್ಲೇ ಮದುವೆ ನಡೆಯುತ್ತದೆ. ಗಂಡು ಮದುವೆಯಾಗಿ ಮೊದಲ ಮಗುವಾಗುವವರೆಗೂ ಅಥವಾ ಕೊನೆಯ ತನಕವೂ ಹೆಂಡತಿಯ ಮನೆಯಲ್ಲೇ ಉಳಿಯುವ ಪದ್ಧತಿ ಇಂದಿಗೂ ಉಳಿದುಬಂದಿದೆ. ಇಂಥ ಮನೆಯಲ್ಲಿ ಹೆಣ್ಣಿದೆ, ಅವರು ತಮ್ಮ ಗಂಡಿಗೆ ಹೆಣ್ಣು ಕೊಡಲು ಬಯಸುತ್ತಾರೆಂದು ತಿಳಿದ ಮೇಲೆ ಮೂರು ಅಥವಾ ಐದು ಜನ ಮುತ್ತೈದೆಯರು ಅರಿಸಿನ ಕುಂಕುಮ ಅಕ್ಷತೆ ತೆಗೆದುಕೊಂಡು ಹೋಗಿ ಒಪ್ಪಿಗೆ ಮಾತಾಡಿ ಬರುತ್ತಾರೆ. ಅನಂತರ ಶುಭ ದಿನವೊಂದರಲ್ಲಿ ಒಂಭತ್ತು ಜನ ಹೋಗಿ ಲಗ್ನ ನಿಶ್ಚಯಿಸಿ ಒಕ್ಕಾಕ ಶಾಸ್ತ್ರ (ವೀಳೆಯದ ಶಾಸ್ತ್ರ) ಮಾಡಿಕೊಂಡು ಬರುತ್ತಾರೆ. ಮದುವೆಗೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡು ನಿಶ್ಚಿತ ದಿನದಲ್ಲಿ ಗಂಡನ್ನು ಹೆಣ್ಣಿನ ಮನೆಗೆ ನಡೆಮಡಿಯ ಮೇಲೆ ವಾದ್ಯ ಹಾಗೂ ಪತ್ತುಗಳ ಸಮೇತ ಕರೆದುಕೊಂಡು ಬಂದು ಕೈಕಾಲು ತೊಳೆದು ಇಳಿದುಕೊಳ್ಳಲು ದೇವಸ್ಥಾನದಲ್ಲಿ ಏರ್ಪಾಡು ಮಾಡುತ್ತಾರೆ. ಹೀಗೆ ಗಂಡನ್ನು ಹೆಣ್ಣಿನ ಮನೆಗೆ ಕರೆದುಕೊಂಡು ಬಂದ ದಿನ ಚಪ್ಪರದ ದಿನ. ಅಂದು ಹೆಣ್ಣು ಗಂಡುಗಳನ್ನು ಹಸೆಮಣಿ ಮೇಲೆ ಕೂರಿಸಿ ಮುತ್ತೈದೆಯೊಬ್ಬಳು ಎರಡು ಒನಕೆಗಳನ್ನು ಪೂಜಿಸಿ ಅವನ್ನು ಎರಡು ಕೈಗಳಲ್ಲೂ ಕತ್ತರಿಯ ಆಕಾರಕ್ಕೆ ಜೋಡಿಸಿ ಹಿಡಿದುಕೊಂಡು ಎಡಗೈ ಒನಕೆಯನ್ನು ಹೆಣ್ಣಿನ ಭುಜಕ್ಕೂ ಬಲಗೈ ಒನಕೆಯನ್ನು ಗಂಡಿನ ಭುಜಕ್ಕೂ ತಾಕಿಸುತ್ತ ಮೂರು ಸಲ ಅದಲು ಬದಲು ಮಾಡುತ್ತಾಳೆ. ಅನಂತರ ಹೆಣ್ಣು ಗಂಡುಗಳ ಮುಂದೆ ಒರಳು ಕಲ್ಲನ್ನು ಮಡಗಿ ಮೂರು ಜನ ಮುತ್ತೈದೆಯರು ಬತ್ತ ಕುಟ್ಟುವ ಶಾಸ್ತ್ರ ಮಾಡುತ್ತಾರೆ. ಈಗ ಹೆಣ್ಣು ಗಂಡುಗಳು ಒಂದೊಂದು ಒನಕೆಯನ್ನು ಹಿಡಿದು ಮೂರು ಸಲ ಕುಟ್ಟಿದ ಮೇಲೆ ಮುತ್ತೈದೆಯರು ಶಾಸ್ತ್ರದ ಬತ್ತ ಕುಟ್ಟುತ್ತಾರೆ. ಅನಂತರ ಮಣ್ಣುಂಡೆ ಶಾಸ್ತ್ರ. ಪೂಜಿಸಿರುವ ಕೆಮ್ಮಣ್ಣಿನ ಉಂಡೆಗಳನ್ನು ಚಪ್ಪರದ ಪ್ರತಿ ಕಂಬಕ್ಕೂ ಒಂದೊಂದರಂತೆ ಇಡುತ್ತಾರೆ. ಇದಿಷ್ಟು ಮೊದಲ ದಿನದ ಶಾಸ್ತ್ರಗಳು. ಎರಡನೆಯ ದಿನ ಧಾರೆ. ವೀಳೆಯದೆಲೆ ಮೇಲೆ ಗಂಡಿನ ಕೈಗೆ ಕಾಯಿ, ಹೆಣ್ಣಿನ ಕೈಗೆ ಬಾಳೆಹಣ್ಣಿನ ಚಿಪ್ಪು ಇರಿಸಿ ಹಾಲು ಬಿಡುತ್ತಾರೆ. ಜನಾಂಗದ ಮುಖ್ಯಸ್ಥ ಅರಿಸಿನ ಕುಂಕುಮ ಅಕ್ಷತೆ ವೀಳೆಯದೆಲೆ ಅಡಕೆ ತಾಲಿ ಮುಂತಾದ ಮಂಗಳವಸ್ತುಗಳನ್ನು ತಟ್ಟೆಯೊಂದರಲ್ಲಿಟ್ಟು ಹಿರಿಯರ ಕೈಯಲ್ಲೆಲ್ಲ ಸಣ್ ಮಾಡಿಸಿ ತಂದು ಗಂಡಿನ ಕೈಗೆ ಕೊಡುತ್ತಾನೆ. ಗಂಡು ತಾಲಿಯನ್ನು ಮೂರು ಗಂಟು ಹಾಕಿ ಕಟ್ಟುತ್ತಾನೆ. ಆಗ ಮುಖ್ಯಸ್ಥ ಗಂಡು ಹೆಣ್ಣುಗಳಿಗೆ ಕೆಲವು ಪ್ರಶ್ನೆಗಳನ್ನು ಹಾಕಿ ಒಬ್ಬರನ್ನೊಬ್ಬರು ನೋಡಿದ್ದಕ್ಕೆ ಉತ್ತರ ಪಡೆಯುತ್ತಾನೆ. ಅನಂತರ ಮುಯ್ಯಿ ಹಾಕುವವರು ಹಾಕಿ ಊಟಮಾಡಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ.
ಮೊದಲ ಹೆಂಡತಿ ತೀರಿಕೊಂಡರೆ ಗಂಡ ಎರಡನೆಯ ಹೆಂಡತಿ ತರಬಹುದು. ಎರಡನೆ ಮದುವೆ ಶಾಸ್ತ್ರೀಯವಾಗಿಯೇ ನಡೆಯಬಹುದು. ಇಲ್ಲದೆ ಇದ್ದರೆ ಕಟ್ಟಿಂಪು (ಕೂಡಾವಳಿ) ಆಗಬಹುದು. ಎರಡನೆಯ ಹೆಂಡತಿ ವಿಧವೆ ಅಥವಾ ಹಿಂದಿನ ಗಂಡನನ್ನು ಬಿಟ್ಟವಳು ಆಗಿರುತ್ತಾಳೆ. ಗಂಡನನ್ನು ಬಿಟ್ಟವಳಾದಾಗ ಎರಡನೆ ಗಂಡ ಅವಳ ಹಿಂದಿನ ಗಂಡನಿಗೆ ನಷ್ಟವನ್ನು ತುಂಬಿ ಕೊಡಬೇಕಾಗುತ್ತದೆ.
ಹೆಣ್ಣು ಮೊದಲ ಬಸುರಿಯಾದಾಗ ಹೆರಿಗೆ ಸಮಯದಲ್ಲಿ ತಡೆಕಾಯಿ ಎಂಬ ಹೆಸರಿನಿಂದ ಒಂದು ತೆಂಗಿನ ಕಾಯಿಯನ್ನು ನಿವಾಳಿಸಿ ಒಡೆಯುತ್ತಾರೆ. ಮಗು ಹುಟ್ಟಿದ ಕೂಡಲೇ ಸೂಜಿಯನ್ನು ಕಾಯಿಸಿ ಪಕ್ಕೆ, ಹಣೆ ಮುಂಗೈ, ಮುಂಗಾಲುಗಳಿಗೆ ಚಿಟಿಗಿ ಹಾಕುತ್ತಾರೆ, ಹನ್ನೆರಡನೆಯ ದಿನದಲ್ಲಿ ನಾಮಕರಣ. ಅಂದು ದಾಸಪ್ಪನನ್ನು ಕರೆಸಿ ಶಂಖ, ಜಾಗಟೆ ಊದಿಸಿ ಮೀಸಲು ತೆಗೆಸಿ ವೆಂಕಟರಮಣ ಸ್ವಾಮಿ ಪೂಜೆ ಮಾಡಿ, ಮಾಡಿದ ಅಡಿಗೆಯನ್ನೆಲ್ಲ ಎಡೆ ಮಾಡಿಸುತ್ತಾರೆ. ದಾಸಪ್ಪ, ನಿರ್ಧರಿಸುವ ಹೆಸರನ್ನು ಗಟ್ಟಿಯಗಿ ಹೇಳಿ ಶಂಖವನ್ನು ಊದಿ ಜಾಗಟೆ ಬಾರಿಸುತ್ತಾನೆ. ತಿಂಗಳವರೆಗೆ ತಣ್ಣೀರನ್ನು ಮುಟ್ಟದೇ ಇದ್ದ ಬಾಣಂತಿ ಅನುಕೂಲ ದಿನದಲ್ಲಿ ಗಂಗೆ ಪೂಜೆ ಮಾಡಿ ದಿನನಿತ್ಯದ ಕೆಲಸಕ್ಕೆ ತೊಡಗುತ್ತಾಳೆ.
ಹೆಣ್ಣು ಋತುಮತಿಯಾದಾಗ ಅತ್ತಿಸೊಪ್ಪು, ಕಳ್ಳಿಗುಡಿ, ತೆಂಗಿನಗರಿಗಳಲ್ಲಿ ಗುಡಿಸಲು ಕಟ್ಟಿ ಹನ್ನೆರಡು ದಿನಗಳವರೆಗೆ ಆಕೆಯನ್ನು ಅದರಲ್ಲಿಡುತ್ತಾರೆ. ಹನ್ನೆರಡನೆ ದಿನ ಸೂತಕ ತೆಗೆದು ಹುಡುಗಿಯನ್ನು ಹಸೆ ಕೂರಿಸಿ ಒಳಕ್ಕೆ ಕರೆದುಕೊಳ್ಳುತ್ತಾರೆ.
ದೊಂಬಿದಾಸರಲ್ಲಿ ಕೆಲವರು ಮಂಡ್ಯ ಜಿಲ್ಲೆಯ ಹೊಸಳ್ಳಿ ಮಠದಲ್ಲಿ ದೀಕ್ಷೆ ತೆಗೆದುಕೊಂಡು ಏಕತಾರಿಯನ್ನು ನುಡಿಸುತ್ತ ತತ್ತ್ವದ ಪದಗಳನ್ನು ಹಾಡುತ್ತಾರೆ. ಇಂಥವರ ಅಂತ್ಯಕ್ರಿಯೆ ಉಳಿದವರ ಅಂತ್ಯಕ್ರಿಯೆಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ. ಸತ್ತವನನ್ನು ತೊಳೆದು ಕೀಲು ಕೀಲಿಗೂ ವಿಭೂತಿ ಲೇಪಿಸಿ ಪೂಜಿಸುತ್ತಾರೆ. ಕುರ್ಚಿಯಾಕರದಲ್ಲಿ ನೆಲವನ್ನು ತೋಡಿ ಆ ಗುಂಡಿಯ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಗೂಡನ್ನು ಕೊರೆದು ಆ ಗೂಡುಗಳಲ್ಲಿ ಕೈಯೆಣ್ಣೆ ದೀಪಗಳನ್ನು ಬೆಳಗಿಸುತ್ತಾರೆ. ಅನಂತರ ಕುರ್ಚಿಯಲ್ಲಿ ಕೂರಿಸಿದಂತೆ ಹೆಣವನ್ನು ಕೂರಿಸಿ ಚಪ್ಪಡಿ ಅಥವಾ ಮರದ ಹಲಗೆ ಮುಚ್ಚಿಬಿಡುತ್ತಾರೆ. ಅದರ ಮೇಲೆ ಮಣ್ಣು ಸುರಿದು ಮೇಲೊಂದು ತುಂಬೆ ಗಿಡ ನೆಡುತ್ತಾರೆ. ಹನ್ನೊಂದನೆಯ ದಿನಕ್ಕೆ ದಿನಿ (ತಿಥಿ) ಮಾಡುತ್ತಾರೆ. ನೂರೊಂದು ಎಲೆ, ನೂರೊಂದು ಅಡಕೆ, ನೂರೊಂದು ಹಣ್ಣು, ನೂರೊಂದು ಕಾಯಿ, ಕಡ್ಡಿ ಕರ್ಪೂರಗಳಿಂದ ಪೂಜೆ ಮಾಡಿ ಗುದ್ದಿನ ಮೇಲೆ ಹೊಂಬಾಳೆ ಚುಚ್ಚಿ ಹಾಲುತುಪ್ಪ ಬಿಡುತ್ತಾರೆ. ಅದೆ ಗುದ್ದಿನ ಮೇಲೆ ಹೆಂಡತಿಯ ಬಳೆ ಹೂವು ಕುಂಕುಮಗಳನ್ನು ಕಳೆಯುತ್ತಾರೆ.
ದೊಂಬಿದಾಸರು ಒಕ್ಕಲು ಮಕ್ಕಳು ಮಾಡುವ ಹಬ್ಬಗಳನ್ನೇ ಮಾಡುತ್ತಾರೆ. ಯುಗಾದಿ, ದೀಪಾವಳಿ, ಮಾರ್ಲಮ್ಮಿ ಮುಂತಾದ ಹಬ್ಬಗಳು ಅವುಗಳಲ್ಲಿ ಮುಖ್ಯವಾದವುಗಳು. ಗ್ರಾಮದೇವತೆಯ ಹಬ್ಬಗಳನ್ನು ಮಾಡುತ್ತಾರೆ. ಪ್ರತಿ ಶನಿವಾರ ಒಪ್ಪೊತ್ತಿದ್ದು ವೆಂಕಟರಮಣ ಸ್ವಾಮಿ ಪೂಜೆ ಮಾಡುತ್ತಾರೆ. ಹರಿಸೇವೆ ಮಾಡುವಾಗ ಮರಿಯನ್ನು ಕಡಿಯುತ್ತಾರೆ. `ಹರಿಗೆ ಪೂಜಿಸುತ್ತಾರೆ. `ಹರಿಗೆ ಹೊತ್ತವರು ಬೋಪರಾಕ್ ಎಂದು ಉಗ್ಗಡಿಸುತ್ತ ಮಣೇವು ಹಾಕಿದಲ್ಲಿ ಕಾದಾಡಿಕೊಂಡು ಹಣ್ಣುಗಳನ್ನು ನುಂಗಿ ನೊಣೆಯುತ್ತಾರೆ. ಹರಿಗೆಯನ್ನು ಹೊಳೆ ದಡಕ್ಕೆ ತಂದು ಮತ್ತೆ ಪೂಜಿಸಿ ಅಲ್ಲಿಂದ ಮನೆಗೆ ತರುತ್ತಾರೆ. ಅದಕ್ಕೆ ಮಾಂಸಾಹಾರವನ್ನು ಎಡೆ ಮಡಗಿ ದಾಸಯ್ಯನ ಜೊತೆಯಲ್ಲಿ ಎಲ್ಲರೂ ಗೋವಿಂದೋ ಗೋವಿಂದ ಎಂದು ಕೂಗುತ್ತ ಊಟಕ್ಕೆ ಕುಳಿತುಕೊಳ್ಳುತ್ತಾರೆ.
ದೊಂಬಿದಾಸರು ನೆಲೆಯಿಲ್ಲದ ಜನ. ಬೆಳೆದ ತಾವು ಗುಡ್ಲು ಹಾಕುತ್ತಾರೆ. ಎತ್ತಲಾಗಿ ಬೆಳೆ ಆರಂಭ ಚೆನ್ನಾಗಿದೆಯೋ ಅತ್ತಲಾಗಿ ಹೋಗಿಬಿಡುತ್ತಾರೆ. ಮೊದಮೊದಲು ಇವರಿಗೆ ಮನೆಮಠವೇನೂ ಇದ್ದಿರಲಿಲ್ಲ. ಹಾಳು ಗುಡಿಗಳಲ್ಲಿ ಮಂಟಪಗಳಲ್ಲಿ ತಂಗಿ ಜೀವನ ಸಾಗಿಸುತ್ತಿದ್ದರು. ಈಗೀಗ ಮನೆಮಠ ಆಸ್ತಿಪಾಸ್ತಿಗಳನ್ನು ಕೆಲವರು ಗಳಿಸಿಕೊಂಡು ಬೇಸಾಯ ವ್ಯಾಪಾರ ಮುಂತಾದ ಕಸಬುಗಳಲ್ಲಿ ತೊಡಗಿದ್ದಾರೆ. ಕೆಲವರು ಹಿಂದಿನ ಗಾಯನ, ನಾಟಕ, ಭಿಕ್ಷಾಟನೆಗಳನ್ನು ಬಿಟ್ಟು ನಾಗರಿಕ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದಲ್ಲದೆ ತಮ್ಮನ್ನು ದೊಂಬಿದಾಸರೆಂದು ಕರೆದುಕೊಳ್ಳುವುದು ಅವಮಾನವೆಂದು ಭಾವಿಸಿ ತಾವು ತೆಲುಗು ಜಂಗಮರು ಅಥವಾ ತೆಲುಗು ಬಣಜಿಗರೆಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಬಹಳಷ್ಟು ಜನ ಊರಿಂದ ಊರಿಗೆ ವಲಸೆ ಹೋಗಿ ನಾಟಕ ಮಾಡಿ ಗ್ರಾಮದ ಜನರನ್ನು ರಂಜಿಸುತ್ತಿದ್ದಾರೆ. ಏಕತಾರಿಯನ್ನು ಹಿಡಿದು ಜೋಳಿಗೆಯನ್ನು ಕಂಕುಳಿಗೆ ನೇತುಹಾಕಿಕೊಂಡು ಹಾಡುತ್ತ ಭಿಕ್ಷೆ ಮಾಡುತ್ತಿದ್ದಾರೆ. ಜನಪ್ರಿಯ ವೃತ್ತಿ ಗಾಯಕರಾದ ಇವರಿಗೆ ಹಾಡುವ ಗೀಳಿಗಿಂತಲೂ ಬಣ್ಣ ಹಾಕಿಕೊಂಡು ಕುಣಿಯುವ ಚಟ ಅಸಾಧಾರಣವಾದುದು.
ಭಿಕ್ಷಾಟನೆಗೆ ಹೋಗುವಾಗ ಸಾಮಾನ್ಯವಾಗಿ ಇಬ್ಬರು ಅಥವಾ ಮೂವರು ಒಟ್ಟಾಗಿ ಹೋಗುತ್ತಾರೆ. ಒಬ್ಬ ಏಕತಾರಿಯನ್ನು ಬಲಗೈಲಿ ಹಿಡಿದು ಚಿಟಿಗಿಯನ್ನು ಎಡಗೈಲಿ ಹಿಡಿದು ನುಡಿಸುತ್ತ ಹಾಡುತ್ತಾನೆ. ಇನ್ನಿಬ್ಬರಲ್ಲಿ ಒಬ್ಬ ಉಡದ ಚರ್ಮದಿಂದ ಮಾಡಿದ ದುಮ್ಮಡಿಯನ್ನು ಮತ್ತೊಬ್ಬ ಕಂಚಿನ ಬಟ್ಟು ತಾಳವನ್ನು ಕುಟ್ಟುತ್ತ ಸೊಲ್ಲು ಕೊಡುತ್ತಾರೆ. ಒಬ್ಬನೆ ಗಾಯಕನಿದ್ದಾಗ ಏಕತಾರಿ ಹಾಗೂ ಚಿಟಿಗೆಗಳೇ ಸಾಕಾಗುತ್ತವೆ. ಏಕತಾರಿ ಭಾರತದ ಅತ್ಯಂತ ಪ್ರ್ರಾಚೀನ ಶ್ರುತಿವಾದ್ಯ. ಇದು ಭಾರತದ ಆದ್ಯಂತ ಕಂಡುಬರುತ್ತದೆ. ಈ ವಾದ್ಯವನ್ನು ನುಡಿಸುತ್ತ ಗಂಗೆ - ಗೌರಿ, ಕೃಷ್ಣ - ಕೊರವಂಜಿ, ಮಾಗಡಿ ಕೆಂಪೇಗೌಡ, ಬಂಜೆ ಹೊನ್ನಮ್ಮ, ಬಾಲನಾಗಮ್ಮ, ಪ್ರೇಮಸತ್ಯಭೋಜರಾಜ, ಕೊಣವೇಗೌಡ, ಧರ್ಮರಾಯ, ಕರ್ಮರಾಯ, ಲೋಹಿತಕುಮಾರ-ಬಸವಕುಮಾರ, ಅಣ್ಣ - ತಂಗಿ, ದೇವಗನ್ನೇರು, ದರಿದ್ರಲಕ್ಷ್ಮಿ - ಭಾಗ್ಯಲಕ್ಷ್ಮಿ, ಅತ್ತೆ - ಸೊಸೆ, ಕಲಿಯುಗದ ಬಾಲೆ ಮುಂತಾದ ಕಾವ್ಯಗಳನ್ನು ಇವರು ಹಾಡುತ್ತಾರೆ. ಇವುಗಳಲ್ಲಿ ಹೆಚ್ಚು ಕಾವ್ಯಗಳು ರಗಳೆಯ ಛಂದಸ್ಸಿಗೆ ತೀರ ಹತ್ತಿರದಲ್ಲಿವೆ. ಆದರೆ ಮಾತ್ರಾಗಣಕ್ಕೆ ಇವು ಅಳವಡುವುದಿಲ್ಲ. ಅಂಶಗಣಕ್ಕೆ ಸರಿಹೊಂದಿಕೊಳ್ಳುತ್ತವೆ. ಇವರ ಕಾವ್ಯಗಳೆಲ್ಲ ಗಂಗೆ - ಗೌರಿ ಕಾವ್ಯವೇ ದೀರ್ಘವಾದುದು ಹಾಗೂ ಶ್ರೇಷ್ಠವಾದುದು. ಇವರ ಕಾವ್ಯಗಳಲ್ಲಿನ ವೈಶಿಷ್ಟ್ಯವೆಂದರೆ ಕಥೆ ತೀವ್ರಗತಿಯಲ್ಲಿ ಸಾಗುವುದು. ಹಾಡುವ ಧಾಟಿ ಅಬಾಲವೃದ್ಧರಾದಿಯಾಗಿ ಎಲ್ಲರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತದೆ. ಸಂದರ್ಭಕ್ಕೆ ತಕ್ಕಂತೆ ಮುಖದಲ್ಲಿ ಭಾವಗಳನ್ನು ಅಭಿವ್ಯಕ್ತಿಸಿ ಹಾಡುವುದರಿಂದ ಸ್ವಾರಸ್ಯ ಹೆಚ್ಚುತ್ತದೆ. ಇವರ ಕಾವ್ಯಗಳಲ್ಲಿ ಸಾಹಿತ್ಯಿಕ ಮೌಲ್ಯಕ್ಕಿಂತ ಸಂಗೀತಮೌಲ್ಯವೇ ಹೆಚ್ಚಿನದೆಂದು ಕಾಣುತ್ತದೆ.
ಹಗಲೆಲ್ಲ ಹಾಡಿ ಹೊಟ್ಟೆಬಟ್ಟೆಗೆ ದಾರಿ ಮಾಡಿಕೊಳ್ಳುವ ಇವರು ತಾವು ಬೀಡು ಬಿಟ್ಟ ಊರುಗಳ ಮೈದಾನದಲ್ಲಿ ಸಣ್ಣದೊಂದು ರಂಗವನ್ನು ಹೂಡಿನಾಟಕಗಳನ್ನು ಪ್ರದರ್ಶಿಸಿ ಹೊಟ್ಟೆಬಟ್ಟೆಗೆ ಧಾನ್ಯಕಾಸು ಮುಂತಾದವನ್ನು ಸಂಪಾದಿಸುತ್ತಾರೆ. ಹೆಂಗಸರು ನಾಟಕದಲ್ಲಿ ಭಾಗವಹಿಸುವುದಿಲ್ಲ. ಗಂಡಸರೇ ಎಲ್ಲ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಸಮಯ ಸ್ಪೂರ್ತಿಯಿಂದಲೇ ಇವರ ಸಂಭಾಷಣೆ ಹಾಗೂ ಹಾಡುಗಳು ಹುಟ್ಟಿಕೊಳ್ಳುತ್ತವೆ. ಇಂಥವರೇ ಇಂಥ ಪಾತ್ರಕ್ಕೆ ಮೀಸಲೆಂಬ ಮಾತೇ ಇಲ್ಲ. ಯಾರು ಯಾವ ಪಾತ್ರವನ್ನಾದರೂ ಯಶಸ್ವಿಯಾಗಿ ಅಭಿನಯಿಸಬಲ್ಲರು. ಹಿಂದೆ ಇವರು ಯಕ್ಷಗಾನಗಳನ್ನು ಪ್ರದರ್ಶಿಸುತ್ತಿದ್ದರಂತೆ. ಈಗ ಅವೇ ಕಥಾವಸ್ತುಗಳನ್ನು ನಾಟಕವಾಗಿ ಪರಿವರ್ತಿಸಿ ಕೊಂಡಿರುವುದಾಗಿ ಹೇಳುತ್ತಾರೆ. ಇವರು ರಾಜಾ ಸತ್ಯವ್ರತ, ರಾಜಾ ವಿಕ್ರಮ, ಶ್ರೀಕೃಷ್ಣಪಾರಿಜಾತ, ಶ್ರಿಕೃಷ್ಣಲೀಲೆ, ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಗಂಗೆ- ಗೌರಿ, ಪ್ರೇಮ ಸತ್ಯಭೋಜ, ನಳಚರಿತ್ರೆ, ಮಾರ್ಕಂಡೇಯ, ಸಾರಂಗಧರ ಮುಂತಾದ ನಾಟಕಗಳನ್ನು ಅಭಿನಯಿಸುತ್ತಾರೆ. ನಾಟಕವನ್ನು ಇವರು ಗುರುಮುಖೇನ ಕಲಿಯುವುದಿಲ್ಲ. ಹತ್ತಾರು ನಾಟಕಗಳನ್ನು ಚಿಕ್ಕಂದಿನಿಂದ ನೋಡಿದ ಅನುಭವವೇ ಇವರನ್ನು ನಟರನ್ನಾಗಿಸುತ್ತದೆ. ವೃತ್ತಿಗಾಯಕರು ಹಾಗೂ ನಾಟಕಕಾರರು ಮಾತ್ರವಾಗಿರದೆ ಹರಿಕಥೆ ಮಾಡುವುದರಲೂ ಇವರು ಎತ್ತಿದ ಕೈ. ಹೀಗಾಗಿ ದೊಂಬಿದಾಸರು ಬಹುಮುಖ ಪ್ರತಿಭೆಯ ಅಪೂರ್ವ ಕಲಾವಿದರಾಗಿದ್ದಾರೆ. (ಪಿ.ಕೆ.ಆರ್‍ಎ.)