ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೊರೆಸ್ವಾಮಿ ಅಯ್ಯಾಂಗಾರ್ ವಿ

ವಿಕಿಸೋರ್ಸ್ದಿಂದ

ದೊರೆಸ್ವಾಮಿ ಅಯ್ಯಾಂಗಾರ್ ವಿ 19201997. ಅಖಿಲ ಭಾರತ ಖ್ಯಾತಿಯ ಪ್ರಸಿದ್ಧ ವೈಣಿಕರು. 1920ರಲ್ಲಿ ಜನಿಸಿದರು. ತಂದೆ ವೆಂಕಟೇಶ ಅಯ್ಯಂಗಾರ್ ಅವರು ಸ್ವತಃ ವೀಣೆ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ದೊರೆಸ್ವಾಮಿ ಅಯ್ಯಂಗಾರ್ಯರು ತಮ್ಮ ತಂದೆಯವರಲ್ಲಿಯೇ ಮೊದಲಿಗೆ ವೀಣಾಭ್ಯಾಸ ಮಾಡಿ, ಮುಂದಿನ ಪ್ರೌಢ ವ್ಯಾಸಂಗವನ್ನು ವೈಣಿಕಪ್ರವೀಣರೂ ಆಸ್ಥಾನ ವಿದ್ವಾಂಸರೂ ಆಗಿದ್ದ ವೆಂಕಟಗಿರಿಯಪ್ಪನವರಲ್ಲಿ ಮುಂದುವರಿಸಿ ಅವರ ಅತ್ಯಂತ ಪ್ರಿಯ ಶಿಷ್ಯರಾಗಿ, ಅನೇಕ ವರ್ಷಗಳ ಕಾಲ ವಿದ್ಯಾರ್ಜನೆಮಾಡಿ ಗುರುಕೃಪೆಗೆ ಪಾತ್ರರಾದರು. ಚಿಕ್ಕವಯಸ್ಸಿನಲ್ಲಿಯೇ ನಾಲ್ವಡಿ ಕೃಷ್ಣರಾಜೇಂದ್ರರ ಆಸ್ಥಾನದಲ್ಲಿ ವಿದ್ವಾಂಸರಾಗಿ ಗೌರವಕ್ಕೆ ಭಾಜನರಾದರು. ಟಿ.ಚೌಡಯ್ಯನವರ ಜೊತೆಯಲ್ಲಿ ಭಾರತದಾದ್ಯಂತ ಸುಮಾರು ಹತ್ತು ವರುಷಗಳಿಗೂ ಮೀರಿ ಯಶಸ್ವಿಯಾಗಿ ಸಂಗೀತ ಕಛೇರಿಗಳನ್ನು ಮಾಡಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದ ಪದವೀಧರರೂ ಹೌದು. ಹಿಮಾಲಯದ ಯೋಗವೇಂದಾತ ಆಶ್ರಮದ ಸ್ವಾಮಿ ಶಿವಾನಂದರ ಅನುಗ್ರಹಕ್ಕೆ ಪಾತ್ರರಾಗಿ ವೈಣಿಕ ವಿದ್ಯಪಾರಂಗತ ಎಂಬ ಪ್ರಶಸ್ತಿಯನ್ನು ಗಳಿಸಿದರು (1960). ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಮೊದಲಾದ ಭಾರತದ ಅನೇಕ ಸಂಗೀತ ಸಭೆಗಳಲ್ಲಿ ವೀಣೇ ಕಛೇರಿ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟರು. 1970ರಲ್ಲಿ ಶಿರಾಜ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿ ಕೀರ್ತಿಪ್ರಶಂಸೆಗಳಿಗೆ ಪಾತ್ರರಾದರು. ಮೃದುಸ್ವಭಾವದವರೂ ನಿರಾಡಂಬರ ವ್ಯಕ್ತಿತ್ವವುಳ್ಳವರೂ ಆದ ಇವರು ವೀಣಾವಾದನ ಕಲೆಯನ್ನು ತಪಸ್ಸಿನಂತೆ ಸಾಧಿಸಿ ಸಿದ್ಧಿಪಡೆದವರು. ಇವರು ನಾಡಿನಾದ್ಯಂತ ರಸಿಕ ಜನರ ಹಾಗೂ ಖ್ಯಾತ ವಿದ್ವಾಂಸರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. 1971ರಲ್ಲಿ ಇವರಿಗೆ ರಾಷ್ಟ್ರಪ್ರಶಸ್ತಿ ದೊರಕಿತು. 1976ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. 1997 ಅಕ್ಟೋಬರ್ 26ರಂದು ಇವರು ನಿಧನರಾದರು. ಇವರು ಬೆಂಗಳೂರು ಆಕಾಶವಾಣಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. (ವಿ.ಡಿ.)