ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧರ್ಮಕೀರ್ತಿ

ವಿಕಿಸೋರ್ಸ್ದಿಂದ

ಧರ್ಮಕೀರ್ತಿ ಕ್ರಿ. ಶ. 6 ನೆಯ ಶತಮಾನದಲ್ಲಿದ್ದ ಬೌದ್ಧ ಪಂಡಿತ. ಭಾರತೀಯ ದರ್ಶನದಲ್ಲಿ ಈತನದು ಉಜ್ಜ್ವಲವಾದ ಹೆಸರು. ಪಾಶ್ಚಾತ್ಯ ದರ್ಶನದಲ್ಲಿ ಇಮ್ಮಾನ್ಯುಎಲ್ ಕಾಂಟ್ ಹೇಗೋ ಹಾಗೆ ಭಾರತೀಯರಲ್ಲಿ ಈತ. ದಕ್ಷಿಣದ ತಿರುಮಲೆ ಈತನ ಹುಟ್ಟೂರು. ಮನೆತನ ವೇದಾಧ್ಯಯನ ಸಂಪನ್ನರಾದ ಬ್ರಾಹ್ಮಣರದ್ದು. ಎಳೆತನದಲ್ಲೇ ವೈದಿಕ ವಾಙ್ಮಯವನ್ನು ವಶಮಾಡಿಕೊಂಡು ಜಿಜ್ಞಾಸುವಾಗಿ ನಾಲಂದಾಕ್ಕೆ ತೆರಳಿ ಅಲ್ಲಿ ವಿದ್ಯಾಲಯದ ಅಧಿಪತಿಯಾಗಿದ್ದ ಧರ್ಮಪಾಲನ ಬಳಿ ಶಿಷ್ಯನಾಗಿ ನಿಂತ. ಧರ್ಮಪಾಲನೂ ಅವನ ಹಿರಿಯನಾಗಿದ್ದ ದಿಙ್ನಗನೂ ವಸುಬಂಧುವಿನ ಪಂಥದವರು. ಇವರಿಬ್ಬರ ಪ್ರಭಾವವೂ ಧರ್ಮ ಕೀರ್ತಿಯ ಮೇಲೆ ಬಿದ್ದಿತು. ಟಿಬೆಟನ್ ಸಂಪ್ರದಾಯ ಜಂಬೂದ್ವೀಪದ ಆರು ಆಭರಣಗಳಲ್ಲಿ ಧರ್ಮಕೀರ್ತಿಯನ್ನೂ ಸೇರಿಸುತ್ತದೆ. (ಉಳಿದವರು ನಾಗಾರ್ಜುನ, ಆಯುರ್ವೇದ, ಅಸಂಗ, ವಸುಬಂಧು, ದಿಙ್ನಗ) ದಿಙ್ನಗನೂ ಧರ್ಮಕೀರ್ತಿಯೂ ಒಂದು ಒಲವಿನವರು ; ಧರ್ಮದ ಫಲಕ್ಕಿಂತ ತರ್ಕ, ನ್ಯಾಯ, ವಾದಗಳ ಮೇಲೆ ಇವರಿಗೆ ಅನುರಕ್ತಿ ಹೆಚ್ಚು. ಭಾರತದ ಪ್ರಮಾಣಶಾಸ್ತ್ರವನ್ನು ರೂಪಿಸಲು ಇವರಿಬ್ಬರೂ ನೆರವಾದರು. ಧರ್ಮಕೀರ್ತಿ ಕ್ರಿ. ಶ. 650ರಲ್ಲಿ ತೀರಿಕೊಂಡ ಸ್ಟ್ರೋಂಗ್ - ಬ್ಸ್ತನ್ - ಸ್ಗಂ- ಪೋ ಎಂಬ ಟಿಬೆಟನ್ ದೊರೆಯ ಸಮಕಾಲೀನ ಎಂದು ಲಾಮಾ ತಾರಾನಾಥ ಬರೆಯುತ್ತಾನೆ.

ಅಧ್ಯಯನಾಂತರ ಬೌದ್ಧ ಭಿಕ್ಷುವಾದ ಧರ್ಮಕೀರ್ತಿ ಒಟ್ಟು ಒಂಬತ್ತು ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಏಳು ಸ್ವತಂತ್ರ ಗ್ರಂಥಗಳು. ಪ್ರಮಾಣವಾರ್ತಿಕ, ಪ್ರಮಾಣವಿನಿಶ್ಚಯ, ನ್ಯಾಯಬಿಂದು, ಸಂತಾನಾಂತರ ಸಿದ್ಧಿ, ಸಂಬಂಧ ಪರೀಕ್ಷೆ, ಹೇತುಬಿಂದು ಮತ್ತು ವಾದನ್ಯಾಯ. ತನ್ನ ಪ್ರಮಾಣವಾರ್ತಿಕಕ್ಕೂ ಸಂಬಂಧ ಪರೀಕ್ಷೆಗೂ ತಾನೇ ವ್ಯಾಖ್ಯಾನ ಬರೆದಿದ್ದಾನೆ.

ಧರ್ಮಕೀರ್ತಿಯ ತತ್ತ್ವನಿರೂಪಣೆಯಲ್ಲಿ ಪ್ರಮಾಣನಿಷ್ಠೆ ಹೆಚ್ಚಾಗಿ ಕಾಣುತ್ತದೆ. ಬೌದ್ಧಧರ್ಮದಲ್ಲಿ ಇವನು ಮೆಚ್ಚಿಕೊಂಡ ವಿವರಗಳಲ್ಲಿ ಮುಖ್ಯವಾದುದೆಂದರೆ ಕ್ಷಣಿಕವಾದ. ಯೇ ಧಮ್ಮಾ ಹೇತುಪ್ಪಭವಾ, ತೇಸಂ ಹೇತುಂ ತಥಾಗತೋ ಆಹ ; ತೇಸಂ ಚ ಯೋ ನಿರೋಧೋ ಯೇವಂವಾದೀ ಮಹಾಸಮಣೋ ಎಂಬುದು ತುಂಬ ಪ್ರಾಚೀನವಾದ ನಿರೂಪಣೆ. ಕಾರ್ಯಗಳ ನಿರೋಧರಿಂದ ಕಾರಣವೂ ಕಾರಣದ ನಿರೋಧದಿಂದ ಕಾರ್ಯದ ನಿರೋಧವೂ ಆಗುವುದೇ ಬೌದ್ಧಧರ್ಮದ ಅಡಿಗಲ್ಲು. ಯಂ ಕಿಂಚಿ ಸಮುದಯಧಮ್ಮಂ ಸಬ್ಬಂ ತಂ ನಿರೋಧದಮ್ಮಂ ಎಂಬುದೇ ಬುದ್ಧ ಕಂಡ ಸಂಬೋಧಿಯ ತಾತ್ಪರ್ಯ. ಧರ್ಮಕೀರ್ತಿ ಈ ನಿಲುವಿನ ಮೇಲೆ, ಉತ್ಪತ್ತಿ ಸ್ವಭಾವವಿರುವ ಪದಾರ್ಥಗಳೂ ಪ್ರವೃತ್ತಿಗಳಿಗೂ ನಾಶಸ್ವಭಾವದವು ಎಂದು ಪರಮಾರ್ಥ ಮತ್ತು ಸಂವೃತ್ತಿ ಸತ್ಯಗಳನ್ನು ನಿರೂಪಿಸಿದ. ಅರ್ಥವಂತವಾದ ಕ್ರಿಯೆಗೆ ಸಮರ್ಥವಾದುದು ಪರಮಾರ್ಥ ಸತ್ಯ ; ಅರ್ಥವಂತವಾದ ಕ್ರಿಯೆಗೆ ಅಸಮರ್ಥವಾದುದು ಸಂವೃತಿ ಅಥವಾ ಕಲ್ಪಿತ ಸತ್ಯ. ಅನುಭವ ವೇದ್ಯವಾಗುವ ವಿಶ್ವವೆಲ್ಲ ಸಂವೃತಿಸತ್ಯವೇ. ಉತ್ಪತ್ತಿಗೆ ಕಾರಣವಿಲ್ಲದಂತೆ ನಾಶವೂ ಅಹೇತುಕವಾದದ್ದು, ಸ್ವಭಾವಸಿದ್ಧವಾದದ್ದು. ಈ ಜ್ಞಾನ ಒದಗಲು ಪ್ರಮಾಣಗಳ ಸಮೀಕ್ಷೆ ಆವಶ್ಯಕ. ಪ್ರಮಾಣವೆಂದರೆ ತಿಳಿಯದ ಅರ್ಥವನ್ನು ಪ್ರಕಾಶಪಡಿಸುವ ವಿಧಾನ, ಸಾಧನ. ಇದು ಕಲ್ಪನೆಗಳ ಬಲದಿಂದ ನಿಲ್ಲದೆ ಅರ್ಥಕ್ರಿಯಾಕಾರಿಯಾಗಿರಬೇಕು - ಎಂದರೆ ಕಾರ್ಯಕ್ಕೆ ಎಡೆ ಮಾಡಿಕೊಡಬೇಕು. ಇದು ಅವಿಸಂವಾದಿ ಜ್ಞಾನವೆನಿಸಿಕೊಳ್ಳುತ್ತದೆ. ಅರ್ಥಕ್ರಿಯಾಕಾರಿತ್ವವೇ ಪ್ರಮಾಣದ ಮುಖ್ಯ ಲಕ್ಷಣವೆಂದು ಧರ್ಮಕೀರ್ತಿಯ ವಾದ. ಈ ದೃಷ್ಟಿಯಿಂದ ಪ್ರತ್ಯಕ್ಷ, ಅನುಮಾನ ಎರಡೇ ನಿರ್ದಿಷ್ಟ ಪ್ರಮಾಣಗಳು. ಸ್ವಲಕ್ಷಣರಿಂದ ಸಿದ್ಧವಾದ ಪ್ರತ್ಯಕ್ಷ, ಸಾಮಾನ್ಯ ಲಕ್ಷಣದಿಂದ ಸಿದ್ಧವಾದ ಅನುಮಾನ ಎರಡೂ ಅರ್ಥಕ್ರಿಯಾಕಾರಿಯಾದವು. ಶಬ್ದ, ಉಪಮಾನ, ಅರ್ಥಾಪತ್ತಿಗಳಿಗೆ ಈ ಗುಣವಿಲ್ಲ. ಪ್ರತ್ಯಕ್ಷದಲ್ಲಿ ಇಂದ್ರಿಯ ಪ್ರತ್ಯಕ್ಷ, ಮಾನಸ ಪ್ರತ್ಯಕ್ಷ, ಸ್ವಸಂವೇದಕ ಪ್ರತ್ಯಕ್ಷ, ಯೋಗಿ ಪ್ರತ್ಯಕ್ಷ ಎಂಬ ನಾಲ್ಕು ವಿಧಗಳನ್ನು ಧರ್ಮಕೀರ್ತಿ ಒಪ್ಪುತ್ತಾನೆ.

ಈ ಪ್ರಮಾಣಗಳ ಆಧಾರದ ಮೇಲೆ ನಿತ್ಯವಾದವನ್ನು ಖಂಡಿಸಿ ಕ್ಷಣಿಕವಾದವನ್ನು ಧರ್ಮಕೀರ್ತಿ ಎತ್ತಿ ಹಿಡಿಯುತ್ತಾನೆ. ಅರ್ಥಕ್ರಿಯಾಸಮರ್ಥವಾದ ವಸ್ತುವೇ ಪರಮಾರ್ಥ ಸತ್ಯವೆಂದ ಮೇಲೆ ವಿಕಾರರಹಿತವಾದ ನಿತ್ಯತತ್ತ್ವ ಕ್ರಿಯಾಕಾರಿಯಾಗದು. ಇತರ ದಾರ್ಶನಿಕರು ಈಶ್ವರ ಮತ್ತು ಆತ್ಮ ಇವು ಇಂದ್ರಿಯ ಗೋಚರವಲ್ಲವೆಂದೂ ನಿಷ್ಕ್ರಿಯವೆಂದೂ ನಿರೂಪಿಸುತ್ತಾರೆ. ಎಂದ ಮೇಲೆ ಇವನ್ನು ಸತ್ಯವೆಂದು ಒಪ್ಪುವುದು ಹೇಗೆ : ಶರೀರವನ್ನೇ ಆಶ್ರಯಿಸಿ ವಿಜ್ಞಾನ ಸಂತತಿಯಿದೆಯೆಂದು ಧರ್ಮಕೀರ್ತಿ ವಾದ. ಇದನ್ನೇ ಆತ್ಮನೆಂದು ಸಂವೃತಿಯಲ್ಲಿ ವ್ಯವಹರಿಸಿದರೂ ಪರಮಾರ್ಥದಲ್ಲಿ ಇದು ಸಲ್ಲದು. ಇದೇ ಕಾರಣದಿಂದ ಈಶ್ವರನ ಅಸ್ತಿತ್ವವನ್ನೂ ಒಪ್ಪಲಾಗದೆಂದು ಧರ್ಮಕೀರ್ತಿಯ ಮತ.

ಧರ್ಮಕೀರ್ತಿಯ ಖ್ಯಾತಿ ಬಹು ವ್ಯಾಪಕವಾಗಿ ಹರಡಿತ್ತು. ಶಾಂತರಕ್ಷಿತ ತನ್ನ ತತ್ತ್ವಸಂಗ್ರಹದಲ್ಲಿ ಈತನ ಅಭಿಪ್ರಾಯಗಳನ್ನು ಗೌರವದಿಂದ ಉಲ್ಲೇಖಿಸುತ್ತಾನೆ. ಶಂಕರಾಚಾರ್ಯರೂ ತಮ್ಮ ಭಾಷ್ಯಗಳಲ್ಲಿ ಧರ್ಮಕೀರ್ತಿಯ ವಾದಗಳನ್ನು ಪ್ರಸ್ತಾಪಿಸುತ್ತಾರೆ. ಬಂಗಾಳದ ಆದಿಶೂರನೆಂಬ ರಾಜನಿಂದ ಆಮಂತ್ರಿಸಲ್ಪಟ್ಟು ಅಲ್ಲಿಗೆ ತೆರಳಿದ ಕಾನ್ಯಕುಬ್ಜದ ಭಟ್ಟನಾರಾಯಣ ಧರ್ಮಕೀರ್ತಿಯ ಶಿಷ್ಯನಾಗಿ ಅವನಿಂದ ಬೌದ್ಧಧರ್ಮದ ಪ್ರಮೇಯಗಳನ್ನು ಕಲಿತು ಧರ್ಮಕೀರ್ತಿಯನ್ನೇ ವಾದದಲ್ಲಿ ಸೋಲಿಸಿದನಂತೆ. ಅನಂತರ ಗುರುಶಿಷ್ಯರಿಬ್ಬರೂ ಸೇರಿ ರೂಪಾವತಾರವೆಂಬ ಗ್ರಂಥವನ್ನು ಬರೆದರೆಂದೂ ಈ ಗ್ರಂಥದ ಮೇಲಿರುವ ನೀವೀಟಿಕೆ ಹೇಳುತ್ತದೆ. ಧರ್ಮಕೀರ್ತಿ ಬೌದ್ಧ ಸಂಗತಿಯೆಂಬ ಮತ್ತೊಂದು ಗ್ರಂಥವನ್ನು ಬರೆದಿದ್ದಾನೆಂದು ಪ್ರತೀತಿಯಿದೆ. ಆರ್. ವಿ. ಕೃಷ್ಣಮಾಚಾರ್ಯರು ಈ ಗ್ರಂಥದಲ್ಲಿ ಬರುವ ಸತ್ಯವಿಕಾವ್ಯ ರಚನಾಮಿವಾಲಂಕಾರ ಭೂಷಿತಾಂ ಎಂಬ ಮಾತಿನ ಆಧಾರದಿಂದ ಧರ್ಮಕೀರ್ತಿ ಅಲಂಕಾರವೆಂಬ ಗ್ರಂಥವನ್ನು ಬರೆದಿದ್ದಾನೆಂದು ಊಹೆ ಮಾಡುತ್ತಾರೆ. ಧರ್ಮಕೀರ್ತಿ ಅಲಂಕಾರಿಕನೂ ಆಗಿದ್ದನೆಂದು ತಿಳಿದುಬರುತ್ತದೆ ; ಭಾಮಹ ಇವನ ಮತವನ್ನು ಸ್ವೀಕರಿಸಿರುವುದೂ ಆನಂದವರ್ಧನ ಇವನ ಮಾತುಗಳನ್ನು ಉಲ್ಲೇಖಿಸಿರುವುದೂ ಇದಕ್ಕೆ ಪುಷ್ಟಿಕೊಡುತ್ತದೆ. (ಎಸ್.ಕೆ.ಆರ್.)