ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧರ್ಮಸೂತ್ರಗಳು
ಧರ್ಮಸೂತ್ರಗಳು - ನಾಲ್ಕು ವಿಧ ಕಲ್ಪಗಳಲ್ಲಿ ಒಂದು. ಶ್ರೌತ ಸೂತ್ರಗಳು, ಗೃಹ್ಯಸೂತ್ರಗಳು, ಶುಲ್ವಸೂತ್ರಗಳು ಉಳಿದ ಮೂರು.
ಈ ನಾಲ್ಕರಲ್ಲಿ ಗೃಹ್ಯ ಮತ್ತು ಧರ್ಮಸೂತ್ರಗಳು ಹೆಚ್ಚು ನಿಕಟವಾಗಿರುವುದನ್ನು ಕಾಣಬಹುದು. ಗರ್ಭಾಧಾನ ಮೊದಲ್ಗೊಂಡು ಅನೇಕ ಸಂಸ್ಕಾರಗಳನ್ನು ಗೃಹ್ಯಸೂತ್ರಗಳು ನಿರೂಪಿಸುವುವು. ಗೃಹ್ಯಸೂತ್ರಗಳಲ್ಲುಕ್ತವಾದ ಕೆಲವು ಸಂಸ್ಕಾರಗಳ ವಿವೇಚನೆ ಧರ್ಮಸೂತ್ರಗಳಲ್ಲಿ ಕಂಡುಬಂದರೂ ಧರ್ಮ ಸೂತ್ರಗಳು ಆಚಾರ ಕರ್ತವ್ಯಕರ್ಮ ಆಶ್ರಮಧರ್ಮ ವರ್ಣಧರ್ಮ ರಾಜಧರ್ಮ ವ್ಯವಹಾರನಿಯಮ ಪ್ರಾಯಶ್ಚಿತ್ತ ವಿಧಾನ ಮೊದಲಾದವನ್ನು ವಿಶದವಾಗಿ ನಿರೂಪಿಸುವುವು.
ಧರ್ಮ ಶಬ್ದ ಕಾನೂನು, ಮತ, ಆಚಾರ, ರೂಢಿ-ಈ ಎಲ್ಲವನ್ನು ಒಳಗೊಂಡು ವ್ಯಾಪಕಾರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. ಸರ್ವಧರ್ಮಸೂತ್ರಾಣಾಂವರ್ಣಾಶ್ರಮ ಧರ್ಮೊಪದೇಶಿತ್ವಾತ್ ಎಂದು ಹೇಳಿ ವರ್ಣ ಮತ್ತು ಆಶ್ರಮ ಧರ್ಮವನ್ನು ತಿಳಿಸುವುದೇ ಎಲ್ಲ ಧರ್ಮಸೂತ್ರಗಳ ಮುಖ್ಯಗುರಿ ಎಂದು ತಂತ್ರವಾರ್ತಿಕ ತಿಳಿಸುತ್ತದೆ.
ಗೌತಮ ಧರ್ಮಸೂತ್ರ: ಈಗ ದೊರೆತಿರುವ ಧರ್ಮಸೂತ್ರಗಳಲ್ಲೆಲ್ಲ ಪ್ರಾಚೀನವಾದುದು. ಇದು ಸಾಮವೇದದ ರಾಣಾಯನೀಯ ಶಾಖೆಗೆ ಸೇರಿದ್ದೆಂದು ನಂಬಲಾಗಿದೆ. ಭೌಧಾಯನ, ವಸಿಷ್ಠ ಮೊದಲಾದವರು ಗೌತಮನನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ವರ್ಣಧರ್ಮ, ರಾಜಧರ್ಮ, ಉಪನಯನ, ಬ್ರಹ್ಮಚಾರಿಯ ನಿಯಮಗಳು ನಾಲ್ಕು ಆಶ್ರಮಗಳು, ಸ್ನಾತಕಧರ್ಮ, ಸಾಕ್ಷಿನಿಯಮಗಳು, ತಪ್ಪಿಗೆ ಶಿಕ್ಷೆ, ನಿಯೋಗ, ಆಸ್ತಿವಿಭಾಗ, ಸ್ತ್ರೀಧನ ಮೊದಲಾದ ಅಂಶಗಳು ಇಲ್ಲಿ ಪ್ರತಿಪಾದಿತವಾಗಿವೆ. ಗೌತಮ ಎಂಟು ಆತ್ಮಗುಣಗಳನ್ನು ಹೇಳಿ, ಇತರ ಸಂಸ್ಕಾರಗಳು ಈ ಆತ್ಮಗುಣಗಳ ವಿಕಾಸಕ್ಕೆ ಸಹಾಯಕವಾಗಬೇಕೆಂದು ಹೇಳಿದ್ದಾನೆ.
ಬೌಧಾಯನ ಧರ್ಮಸೂತ್ರ: ಇದು ಕೃಷ್ಣಯಜುರ್ವೇದಕ್ಕೆ ಸೇರಿದುದು. ಇದರ ನಾಲ್ಕು ವಿಭಾಗಗಳಲ್ಲಿ ಶಿಷ್ಯ, ಪರಿಷದ್, ಉಪನಯನ, ಸ್ನಾತಕ, ವರ್ಣ, ರಾಜಕರ್ತವ್ಯ, ಪಂಚಮಹಾಪಾತಕಗಳು, ಎಂಟು, ವಿವಾಹಗಳು, ಪ್ರಾಯಶ್ಚಿತ್ತ, ಆಸ್ತಿಯ ವಿಭಾಗ ಮೊದಲಾದುವು ಪ್ರತಿಪಾದಿತವಾಗಿವೆ. ನಾಲ್ಕನೆಯ ಭಾಗ ಅನಂತರ ಸೇರಿಸಿದ್ದಾಗಿರಬೇಕೆಂದು ಪಿ.ವಿ. ಕಾಣೆ ಅವರ ಅಭಿಪ್ರಾಯ.
ಆಪಸ್ತಂಬ ಧರ್ಮಸೂತ್ರ: ಇದು ಆಪಸ್ತಂಬ ಕಲ್ಪಸೂತ್ರದ 28 ಮತ್ತು 29ನೆಯ ಪ್ರಶ್ನೆಗಳಲ್ಲುಕ್ತವಾಗಿ ಕೃಷ್ಣಯಜುರ್ವೇದದ ತೈತ್ತಿರೀಯ ಶಾಖೆಗೆ ಸೇರಿದೆ. ಆಪಸ್ತಂಬ ಮತ್ತು ಬೌಧಾಯನ ಧರ್ಮಸೂತ್ರಗಳಲ್ಲಿ ಕೆಲವು ಅಂಶಗಳಲ್ಲಿ ಸಾಮ್ಯವೂ ಮತ್ತೆ ಕೆಲವು ಅಂಶಗಳಲ್ಲಿ ಅಂತರವೂ ಕಂಡುಬರುತ್ತದೆ. ಬೌಧಾಯನ ಮತ್ತು ಗೌತಮರು ನಿಯೋಗಪದ್ಧತಿಯನ್ನು ಅಂಗೀಕರಿಸಿದ್ದಾರೆ. ಆದರೆ ಆಪಸ್ತಂಬ ಅದನ್ನು ನಿರಾಕರಿಸಿದ್ದಾನೆ. ಬೌಧಾಯನ ಮತ್ತು ಗೌತಮರು ಎಂಟು ವಿಧವಾದ ವಿವಾಹಗಳನ್ನು ಅಂಗೀಕರಿಸಿದರೆ ಆಪಸ್ತಂಬ ಪ್ರಾಜಾಪತ್ಯ ಮತ್ತು ಪೈಶಾಚ ವಿವಾಹಪದ್ಧತಿಗಳನ್ನು ಒಪ್ಪದೆ ಉಳಿದ ಆರು ವಿಧವಾದ ವಿವಾಹಗಳನ್ನು ಮಾತ್ರ ಅಂಗೀಕರಿಸಿದ್ದಾನೆ. ಹಿರಿಯ ಮಗನಿಗೆ ಹೆಚ್ಚು ಆಸ್ತಿ ಕೊಡಬೇಕೆಂದು ಬೌಧಾಯನ ಹೇಳಿದರೆ ಆಪಸ್ತಂಬ ಇದಕ್ಕೆ ಸಮ್ಮತಿಸುವುದಿಲ್ಲ. ಆಪಸ್ತಂಬ ಧರ್ಮಸೂತ್ರದಲ್ಲಿ ಪೂರ್ವ ಮೀಮಾಂಸೆಯ ಅನೇಕ ಪಾರಿಭಾಷಿಕ ಶಬ್ದ ಪ್ರಯೋಗಗಳು ಕಂಡುಬರುತ್ತವೆ.
ಹಿರಣ್ಯಕೇಶಿ ಧರ್ಮಸೂತ್ರ: ಯಜುರ್ವೇದದ ತೈತ್ತಿರೀಯ ಶಾಖೆಗೆ ಸೇರಿದ ಇದು ಹಿರಣ್ಯಕೇಶಿ ಕಲ್ಪಸೂತ್ರದ 26 ಮತ್ತು 27ನೆಯ ಪ್ರಶ್ನೆಗಳಲ್ಲುಕ್ತವಾಗಿದೆ. ಆಪಸ್ತಂಬ ಧರ್ಮಸೂತ್ರದಿಂದ ಅನೇಕ ಸೂತ್ರಗಳನ್ನು ತೆಗೆದುಕೊಂಡು ಅವುಗಳನ್ನು ಇಲ್ಲಿ ಮತ್ತೆ ವಿಭಜಿಸಿ ಸಕ್ರಮವಾಗಿ ನಿರೂಪಿಸಿದೆ.
ವಸಿಷ್ಠ ಧರ್ಮಸೂತ್ರ: ಇದು ಋಗ್ವೇದಕ್ಕೆ ಸೇರಿದ್ದೆಂದು ಕುಮಾರಿಲ ಹೇಳಿದ್ದಾನೆ. ಪ್ರಮಾಣಗ್ರಂಥವೆಂದು ಇತರ ವೇದಗಳ ಶಾಖೆಯವರೂ ಇದನ್ನು ಅಂಗೀಕರಿಸಿದ್ದಾರೆ. ಇದರಲ್ಲಿ ಮೂವತ್ತು ಅಧ್ಯಾಯಗಳಿವೆ. ವಸಿಷ್ಠ ನಿಯೋಗಪದ್ಧತಿ ಹಾಗೂ ಬಾಲವಿಧವಾಪುನರ್ವಿವಾಹಗಳಿಗೆ ಪುರಸ್ಕಾರವಿತ್ತಿದ್ದಾನೆ. ಆರು ವಿಧವಾದ ವಿವಾಹಗಳನ್ನು ಮಾತ್ರ ಅಂಗೀಕರಿಸಿ ಬ್ರಾಹ್ಮಣ ಶೂದ್ರಕನ್ಯೆಯನ್ನು ವಿವಾಹವಾಗುವುದನ್ನು ನಿಷೇಧಿಸಿದ್ದಾನೆ.
ವಿಷ್ಣು ಧರ್ಮಸೂತ್ರ: ಇದು ಯಜುರ್ವೇದದ ಕಠ ಶಾಖೆಗೆ ಸೇರಿದುದು. ಪುರುಷೋತ್ತಮನಾದ ವಿಷ್ಣುವೇ ಇದನ್ನನುಗ್ರಹಿಸಿದನೆಂದು ಪ್ರತೀತಿ. ಇದರಲ್ಲಿ ಒಂದು ನೂರು ಅಧ್ಯಾಯಗಳಿವೆ. ವಾಸುದೇವನ ಆರಾಧನೆಯನ್ನು ಇಲ್ಲಿ ಒತ್ತಿ ಹೇಳಿದೆ.
ಹಾರೀತನ ಧರ್ಮಸೂತ್ರ: ಇದು ಕೃಷ್ಣಯಜುರ್ವೇದದ ಮೈತ್ರಾಯನೀಯ ಶಾಖೆಗೆ ಸೇರಿದ ಪ್ರಾಚೀನ ಕೃತಿ. ಏಕೆಂದರೆ ಬೌಧಾಯನ, ಆಪಸ್ತಂಬ, ವಸಿಷ್ಠ ಮೊದಲಾದವರು ಹಾರೀತನನ್ನು ಹೆಸರಿಸಿದ್ದಾರೆ. ಈತ ಎಂಟು ವಿಧವಾದ ವಿವಾಹಗಳನ್ನಂಗೀಕರಿಸಿದ್ದರೂ ಆರ್ಷ ಮತ್ತು ಪ್ರಾಜಾಪತ್ಯಗಳಿಗೆ ಬದಲಾಗಿ ಕ್ಷಾತ್ರ ಮತ್ತು ಮಾನುಷ ವಿವಾಹಗಳನ್ನು ಹೇಳಿದ್ದಾನೆ. ಹೆಂಗಸರಲ್ಲಿ ಬ್ರಹ್ಮವಾದಿನಿಯರು ಉಪನಯನಕ್ಕೆ ಅರ್ಹರು. ಅವರು ವೇದಾಧ್ಯಯನ ಮಾಡಬಹುದು ಎಂದೂ ಪ್ರತಿಪಾದಿಸಿದ್ದಾನೆ.
ಶಂಖಲಿಖಿತರ ಧರ್ಮಸೂತ್ರ: ಇದು ಶುಕ್ಲಯಜುರ್ವೇದದ ವಾಜಸನೇಯಿ ಸಂಹಿತೆಗೆ ಸೇರಿದೆ. ಶಂಖ ಹಾಗೂ ಲಿಖಿತರು ಸಹೋದರರೆಂದು ಮಹಾಭಾರತ ಹೇಳಿದೆ. ಈ ಕೃತಿ ಗದ್ಯ ಮತ್ತು ಶ್ಲೋಕಗಳಿಂದ ಕೂಡಿದೆ. ಕೆಲವೆಡೆ ಗದ್ಯ ಪದ್ಯಗಳಲ್ಲಿ ಭಿನ್ನಾಭಿಪ್ರಾಯ ಕಂಡುಬರುವುದು. ಉದಾ: ಬ್ರಾಹ್ಮಣ ನಾಲ್ಕು ವರ್ಣಗಳಲ್ಲಿ ಯಾವ ಕನ್ಯೆಯನ್ನಾದರೂ ವಿವಾಹವಾಗಬಹುದು ಎಂದು ಸೂತ್ರ (ಗದ್ಯ) ತಿಳಿಸಿದರೆ ಪದ್ಯ ಕೇವಲ ಮೂರು ವರ್ಣಗಳಲ್ಲಿ ಮಾತ್ರ ವಿವಾಹವಾಗಬೇಕೆಂದು ತಿಳಿಸಿದೆ.
ವೈಖಾನಸ ಧರ್ಮಸೂತ್ರ: ಇದು ಬ್ರಹ್ಮಚಾರಿಗಳ, ಗೃಹಸ್ಥರ, ವಾನಪ್ರಸ್ಥರ, ಮತ್ತು ಸಂನ್ಯಾಸಿಗಳ ಕರ್ತವ್ಯ ಮತ್ತು ಧರ್ಮವನ್ನು ವಿಶದವಾಗಿ ನಿರೂಪಿಸುತ್ತದೆ.
ಔಶನಸ ಧರ್ಮಸೂತ್ರ: ಇದು ಚತುರ್ವರ್ಣದವರ ಧಾರ್ಮಿಕ ಕರ್ತವ್ಯಗಳನ್ನು ಮುಖ್ಯವಾಗಿ ವಿವರಿಸುತ್ತದೆ.
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಬರುವ ಧರ್ಮಸ್ಥೀಯ ಅಧ್ಯಾಯ ಧರ್ಮಸೂತ್ರಗಳಲ್ಲುಕ್ತವಾಗಿರುವ ವಿಷಯಗಳನ್ನು ವಿವರಿಸುತ್ತದೆ. ಕೌಟಿಲ್ಯ ವಿಧವೆಯರ ಪುನರ್ವಿವಾಹವನ್ನು ಪುರಸ್ಕರಿಸುವುದಷ್ಟೇ ಅಲ್ಲದೆ ಪತಿ ಪ್ರವಾಸ ಹೋಗಿದ್ದೋ ಅಥವಾ ಎಲ್ಲಿಯಾದರೂ ಹೋಗಿಯೋ ಆತನ ವಿಷಯವನ್ನೇ ತಿಳಿಯಲಾಗದಿರುವಾಗ ಆತನ ಹೆಂಡತಿ ನಿರ್ದಿಷ್ಟ ಕಾಲದ ಅನಂತರ ಪುನರ್ವಿವಾಹವಾಗಬಹುದೆಂದೂ ಹೇಳಿದ್ದಾನೆ. ಕೆಲವೊಂದು ಸಂದರ್ಭಗಳಲ್ಲಿ ವಿವಾಹ ವಿಚ್ಛೇದನಕ್ಕೂ ಅನುಮತಿ ಕೊಟ್ಟಿದ್ದಾನೆ. ಮೇಲಣ ಮೂರು ವರ್ಣದವರಿಗೆ ಶೂದ್ರಸ್ತ್ರೀಯರಲ್ಲಿ ಹುಟ್ಟಿದ ಮಗನಿಗೆ ಆಸ್ತಿಯ ಹಕ್ಕಿಲ್ಲವೆಂದು ಮನು ಹೇಳಿದರೆ ಕೌಟಿಲ್ಯ ಅಂಥವನಿಗೂ ಆಸ್ತಿಯ ಹಕ್ಕಿದೆಯೆಂದು ಹೇಳಿದ್ದಾನೆ.
ಅತ್ರಿ, ಕಾಣ್ವ, ಕಾಶ್ಯಪ, ದೇವಲ, ಗಾಗ್ರ್ಯ, ಪೈಠೀನಸಿ, ಚ್ಯವನ, ಜಾತುಕರ್ಣ, ಶಾತಾತಪ, ಮೊದಲಾದವರೂ ಧರ್ಮಸೂತ್ರಗಳನ್ನು ಬರೆದಿರುವುದಾಗಿ ತಿಳಿದುಬರುತ್ತದೆ. (ಎಚ್.ಪಿ.ಎಂಎ.)