ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧಾರವಾಡ ಶಿಲಾವರ್ಗ

ವಿಕಿಸೋರ್ಸ್ದಿಂದ

ಧಾರವಾಡ ಶಿಲಾವರ್ಗ - ಧಾರವಾಡದ ಬಳಿ ಇರುವ ಸ್ಫಟಿಕಾತ್ಮಕ ಪದರುಶಿಲೆಗಳ (ಕ್ರಿಸ್ಟಲೈನ್ ಶಿಷ್ಟ್ಸ್) ಭೂವೈe್ಞÁನಿಕ ನಾಮಧೇಯ (ಧಾರ್ವಾರ್ ಸಿಸ್ಟಮ್) ಆರ್. ಬಿ. ಫುಟ್ ಎಂಬಾತ ನೀಡಿದ (1886) ಹೆಸರಿದು. ಧಾರವಾಡ ಪದರು ಶಿಲೆಗಳು ಅಥವಾ ಧಾರವಾಡಗಳು ಎಂಬುದಾಗಿ ಕೂಡ ಈ ವರ್ಗವನ್ನು ಉಲ್ಲೇಖಿಸುವುದುಂಟು. ಇದು ಶಿಲಾರಸ, ಶಿಲಾದೂಳು ಮುಂತಾದ ಜ್ವಾಲಾಮುಖಿಜ ವಸ್ತುವಿಶೇಷಗಳಿಂದ ಮಿಶ್ರಿತವಾದ ಪ್ರಸ್ತರೀ(ಪದರು) ಶಿಲಾಸಮುದಾಯ ಎಂದೂ ಈ ಪದರು ಶಿಲಾವರ್ಗ ಗ್ರಾನಿಟಾಯ್ಡ್ ನೈಸ್‍ಗಳ ಭೂಸಂಮರ್ದದಿಂದ ಮಡಚಿ ಛಿದ್ರಗೊಂಡು ನಗ್ನೀಕೃತವಾದ ಬಳಿಕ ಅವುಗಳ ಮೇಲೆ ಸ್ತರಭಂಗವಾಗಿ ಉತ್ಪನ್ನವಾದ ಜಲಜಶಿಲೆಗಳ ರೂಪಾಂತರಗಳೆಂದೂ ಭಾವಿಸಲಾಗಿತ್ತು. ಮುಂದೆ ಈ ವಿಚಾರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದು ಧಾರವಾಡ ಶಿಲಾವರ್ಗದ ಕೆಲವು ಶಿಲೆಗಳಲ್ಲಿ ಜಲಜಶಿಲೆಗಳ ಸ್ವಾಭಾವಿಕವಾದ ರಚನಾಕೃತಿಗಳ ಸಂದೇಹಾತೀತ ಕುರುಹುಗಳು ಸಾಕಷ್ಟು ಇರುವುದು ದÀೃಢಪಟ್ಟಿತು. ಅದ್ದರಿಂದ ಇಲ್ಲಿನ ಪೆಂಟೆಕಲ್ಲು (ಕಾಂಗ್ಲೋಮರೇಟ್), ಸಿಕತಶಿಲೆ (ಮರಳ್ಗಲ್ಲು, ಸ್ಯಾಂಡ್ ಸ್ಟೋನ್), ಗೋಡುಕಲ್ಲು, ಸುಣ್ಣಕಲ್ಲು ಮತ್ತು ಕೆಲವು ವಿಧವಾದ ಪದರು ಶಿಲೆಗಳು ನಿರ್ದಿಷ್ಟವಾಗಿ ಜಲಜಶಿಲೆಗಳ ರೂಪಾಂತರಗಳೆಂದು ನಿರ್ಧರಿತವಾಯಿತು (1905).

ಘಟಕ ಶಿಲಾವಿಭಾಗಗಳು: ಧಾರವಾಡ ಶಿಲಾವರ್ಗದಲ್ಲಿ ಮುಖ್ಯವಾಗಿ ಈ ಕೆಳಗಿನ ನಾಲ್ಕು ಬಗೆಯ ಶಿಲಾಪಂಗಡಗಳಿವೆ - 1 ಜ್ವಾಲಾಮುಖಿಜಶಿಲೆಗಳು, 2 ಸ್ಫಟಿಕಾಕೃತಿಯ ಪದರುಶಿಲೆಗಳು, 3 ರೂಪಗೆಟ್ಟ ಪ್ರಸ್ತರೀ ಶಿಲೆಗಳು, 4 ಅಂತಸ್ತರಿತ ಅಥವಾ ಒಳನುಗ್ಗಿದ ಅಗ್ನಿಶಿಲೆಗಳು.

ಜ್ವಾಲಾಮುಖಿಜ ಶಿಲೆಗಳ ಗುಂಪು ಮುಖ್ಯವಾಗಿ ರಾಸಾಯನಿಕ ವ್ಯತ್ಯಾಸದಿಂದ ಒಡಗೂಡಿದ ಘನೀಭೂತ ವಿವಿಧ ಶಿಲಾರಸಗಳು. ಡೈಕ್‍ಗಳು, ಶಿಲಾದÀೂಳು ಮುಂತಾದ ಶಿಲಾವಸ್ತುಗಳಿಂದ ಕೂಡಿರುತ್ತದೆ.

ಸ್ಫಟಿಕಾಕೃತಿಯ ಪದರುಶಿಲೆಗಳ ಸಮುದಾಯದಲ್ಲಿ ಕಪ್ಪು ಹಾರ್ನ್‍ಬ್ಲೆಂಡ್ ಪದರುಶಿಲೆ, ಕ್ಲೋರೈಟ್ ಪದರುಶಿಲೆ, ಅಭ್ರಕ ಪದರು ಶಿಲೆ, ಕರಿ ಅಭ್ರಕ, ಕಯನೈಟ್, ಸಿಲಿಮನೈಟ್, ಕಾರ್ಡಿಯರೈಟ್, ಮುಂತಾದ ರೂಪಾಂತರ ಶಿಲೆಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಸ್ಫಟಿಕೀಕೃತವಾದ ಖನಿಜಗಳನ್ನು ವಿವಿಧ ಪ್ರಮಾಣಗಳಲ್ಲಿ ಒಳಗೊಂಡ ಪದರುಶಿಲೆಗಳು ಇವೆ. ಈ ಪದರುಶಿಲೆಗಳಲ್ಲಿ ಮೊದಲಿನ ಮೂರು ವಿಧಗಳ ವಿನಾ ಉಳಿದವುಗಳೆಲ್ಲವೂ ಅಧಿಕ ರೂಪಾಂತರಿಸಿದ ಅಶುಭ್ರ ಜಲಜಶಿಲೆಗಳೆಂದು ಕಂಡುಬಂದಿದೆ. ರೂಪಗೆಟ್ಟ ಅಥವಾ ವಿರೂಪಿಸಿದ ಜಲಜಶಿಲಾಶ್ರೇಣಿಯಲ್ಲಿ ಪೆಂಟೆಕಲ್ಲು, ಮರಳ್ಗಲ್ಲು (ಸಿಕತಶಿಲೆ). ಗೋಡುಕಲ್ಲು, ಕಬ್ಬಿಣಸಿಕತ ಮಿಶ್ರಿತ ಪಟಿಗಲ್ಲು ಸ್ಫಟಿಕೀಕರಿಸಿದ ಸುಣ್ಣಕಲ್ಲು ಅಥವಾ ಅಮೃತಶಿಲೆಗಳು ಮುಖ್ಯವಾದವು. ಇವೆಲ್ಲವೂ ನಿಸ್ಸಂದೇಹವಾಗಿ ಜಲಜಶಿಲೆಗಳ ರೂಪಾಂತರಗಳೆಂದು ಈಗ ಖಚಿತವಾಗಿ ನಿರ್ಣಯಿಸಲಾಗಿದೆ.

ಅಗ್ನಿಶಿಲಾ ಅಂತಸ್ಸರಣಗಳಲ್ಲಿ ಕ್ಷಾರ ಮತ್ತು ಅತಿಕ್ಷಾರ ಶಿಲೆಗಳೂ ಮತ್ತೆ ಕೆಲವು ಗ್ರಾನೈಟ್ ಪಾರ್ಫಿರಿಗೆ ಕ್ರಮವಾಗಿ ಹೊಂದಿಕೊಳ್ಳುವ ಸೂಕ್ಷ್ಮಕಣ ಶಿಲೆಗಳೂ ಇರುವುದಾಗಿ ಕಂಡುಬಂದಿದೆ.

ವರ್ಗೀಕರಣ ಮತ್ತು ಕಾಲ: ಕರ್ನಾಟಕದಲ್ಲಿ ಧಾರವಾಡ ಶಿಲಾವರ್ಗ ತಳಭಾಗ, ಮಧ್ಯಭಾಗ, ಮತ್ತು ಮೇಲುಭಾಗವೆಂದು ಮೂರುಭಾಗಗಳಾಗಿ ವಿಭಾಗಗೊಂಡಿದೆ. ತಳಭಾಗ ಮುಖ್ಯವಾಗಿ ಸಣ್ಣ ಸಣ್ಣ ಪಟ್ಟಿಗಳಂತಿರುವ ಆದಿಜನಿತ ಆದಿಮ ಗೋಡು ಶಿಲೆಗಳಿಂದ ಬೆರೆತಿರುವ ವಿವಿಧ ಜ್ವಾಲಾಮುಖಿಜ ಶಿಲೆಗಳಿಂದಲೂ ಮಧ್ಯಭಾಗ ಜ್ವಾಲಾಮುಖಿಜ ಶಿಲಾಮಿಶ್ರಿತ ಮತ್ತು ಅಂತಸ್ಸರಿತ ಅಗ್ನಿಶಿಲೆಗಳಿಂದ ಕೂಡಿದ ಪ್ರಸ್ತರೀ ಶಿಲೆಗಳಿಂದಲೂ ಮೇಲುಭಾಗ ಮಧ್ಯಭಾಗದ ಪ್ರಸ್ತರೀ ಶಿಲೆಗಳಿಗೆ ರೂಪುರಚನೆಗಳಲ್ಲಿ ಕೊಂಚ ವ್ಯತ್ಯಾಸವಿರುವ ಪ್ರಸ್ತರೀ ಶಿಲೆಗಳಿಂದಲೂ ಕೂಡಿವೆ. ಈ ಮೂರು ವಿಭಾಗಗಳು ಅಥವಾ ವಿಂಗಡಣೆಗಳನ್ನು ಮೊದಲಿನ ಮೈಸೂರು ಸಂಸ್ಥಾನದ ಉತ್ತರ ಭಾಗದಲ್ಲಿ ಖಚಿತವಾಗಿ ಕಾಣಬಹುದೇ ವಿನಾ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ, ಒತ್ತಡ ಸ್ತರಪಲ್ಲಟ ಮತ್ತು ಅಧಿಕ ರೂಪಾಂತರ ಮುಂತಾದ ಕಾರಣಗಳಿಂದ ಗುರ್ತಿಸಲಾಗುವುದಿಲ್ಲ.

ಧಾರವಾಡ ಶಿಲಾವರ್ಗ ಉತ್ಪತ್ತಿಯಾದ ಕಾಲ ಜ್ವಾಲಾಮುಖಿಯ ಶಿಲಾರಸಗಳು ಧಾರಾಳವಾಗಿ ಹೊರಹೊಮ್ಮಿ ಹರಿದು ಘನೀಭೂತವಾದ ಪ್ರಕರಣದಿಂದ ಅರಂಭವಾಯಿತೆಂದು ತಿಳಿದುಬರುತ್ತದೆ. ಈ ಶಿಲಾರಸಗಳು ಅನೇಕ ಸ್ಥಳಗಳಲ್ಲಿ ಮತ್ತು ಜನಪ್ರದೇಶಗಳಲ್ಲಿ ಹರಿದು ಘನೀಭವಿಸಿರುವುದೂ ಕಂಡುಬಂದಿದೆ. ಅನಂತರ ಬಹುಕಾಲದ ಮೇಲೆ ಕ್ರಮೇಣ ಆಳದಲ್ಲಿ ಹೆಚ್ಚುತ್ತಲಿದ್ದ ಕಡಲು ಪ್ರದೇಶಗಳಲ್ಲಿ ಪ್ರಸ್ತರೀ ಶಿಲೆಗಳ ಉತ್ಪತ್ತಿ ರೂಪುರಚನೆಗಳು ಆರಂಭವಾದವೆಂದು ಕಂಡುಬರುತ್ತದೆ.

ಧಾರವಾಡ ಶಿಲಾವರ್ಗದ ಕೆಲವು ಶಿಲೆಗಳ ಶುದ್ಧವಯಸ್ಸನ್ನು ವಿಕಿರಣಮಾಪಕ ಸಲಕರಣೆಗಳಿಂದ ಅಳೆಯಲಾಗಿದೆ. ಆ ಪ್ರಕಾರ ಶಿಲಾವರ್ಗದ ಮೇಲುಭಾಗ ಪ್ರಾಯಶಃ 160 ಕೋಟಿಯಿಂದ 200 ಕೋಟಿ ವರ್ಷಗಳ ಹಿಂದೆ ಉತ್ಪನ್ನವಾಯಿತೆಂದೂ ಮಧ್ಯಭಾಗದ ಶಿಲೆಗಳು ಸುಮಾರು 220 ಕೋಟಿಯಿಂದ 240 ಕೋಟಿ ವರ್ಷಗಳ ಹಿಂದೆಉತ್ಪನ್ನವಾದುವೆಂದೂ ತಳಭಾಗ 250 ಕೋಟಿ ವರ್ಷಗಳಿಗಿಂತಲೂ ಹಿಂದೆ ರೂಪುಗೊಂಡಿತೆಂದೂ ಕಂಡುಬಂದಿದೆ. ಅಂದರೆ ಧಾರವಾಡ ಶಿಲಾವರ್ಗ ಸೂಚಿಸುವ ಆದ್ಯಂತ ಕಾಲ ಒಟ್ಟು ಸುಮಾರು 100 ಕೋಟಿ ವರ್ಷ ಮೀರಿರುವುದಾಗಿ ತೋರುತ್ತದೆ.

ವಿಸ್ತಾರ ಮತ್ತು ಹಂಚಿಕೆ: ಧಾರವಾಡ ಶಿಲಾವರ್ಗ ಈಗಿನ ಕರ್ನಾಟಕ ರಾಜ್ಯದಲ್ಲಿ ಸುಮಾರು 20,712 ಚದರ ಕಿ.ಮೀಗÀಳಷ್ಟು ಪ್ರದೇಶವನ್ನು ಆಕ್ರಮಿಸಿದೆ. ಇದು ಅನೇಕ ನೀಳವಾದ ಇಕ್ಕಟ್ಟು ಪದರುಶಿಲಾಪಟ್ಟಿಗಳಂತೆ ಗ್ರ್ಯಾನಿಟಿಕ್ ನೈಸ್ ಪ್ರದೇಶಗಳಲ್ಲಿ ಬೇರೆ ಬೇರೆ ಪಟ್ಟಿಗಳಾಗಿ ಹಂಚಿಕೊಂಡಿದೆ. ಇವು ಉದ್ದದಲ್ಲಿ ಸುಮಾರು 32 ಕಿ.ಮೀ.ಗಳಿಂದ 400 ಕಿ.ಮೀಗಳು ಮೇಲ್ಪಟ್ಟು ಅಗಲದಲ್ಲಿ ಕೇವಲ 800 ಮೀಗಳಷ್ಟು ಬಲು ಅಗಲವಾದ ಭಾಗಗಳಲ್ಲಿ 32 ಕಿ.ಮೀ.ಗಳವರೆಗೂ ಇರುತ್ತವೆ. ಇವನ್ನು ಪದರು ಶಿಲಾ ಪಟ್ಟಿಗಳೆಂದು ಕರೆಯುವುದು ರೂಢಿ. ವರ್ಣನೆಯ ಸಲುವಾಗಿ ಇವನ್ನು ಪಶ್ಚಿಮ, ಮಧ್ಯಪಶ್ಚಿಮ, ಮಧ್ಯ, ಪೂರ್ವ ಮಧ್ಯ ಮತ್ತು ಪೂರ್ವವಲಯಗಳೆಂದು ಐದು ವಲಯಗಳಾಗಿ ವಿಂಗಡಿಸಿದೆ. ಸಾಧಾರಣವಾಗಿ ಕಪ್ಪು ಹಾರ್ನ್‍ಬ್ಲೆಂಡ್ ಪದರು ಶಿಲೆಗಳು ರಾಜ್ಯದ ಪೂರ್ವ ಪಶ್ಚಿಮ ಮತ್ತು ಮಧ್ಯದಕ್ಷಿಣ ಭಾಗಗಳಲ್ಲಿಯೂ ಕ್ಲೋರೈಟ್ ಮತ್ತು ಅಭ್ರಕ ಪದರು ಶಿಲೆಗಳು ಉತ್ತರ ಮತ್ತು ಮಧ್ಯ ಉತ್ತರ ಪ್ರದೇಶಗಳಲ್ಲಿಯೂ ಇತರ ಸಿಲ್ಲಿ ಮನ್ಶೆಟ್‍ಕಾರ್ಡಿಯರೈಟ್ ಮುಂತಾದ ಖನಿಜಗಳನ್ನು ಒಳಗೊಂಡ ಪದರು ಶಿಲೆಗಳು ದಕ್ಷಿಣ ಮತ್ತು ಮಧ್ಯ ದಕ್ಷಿಣ ಭಾಗಗಳಲ್ಲಿಯೂ ಹರಡಿರುತ್ತವೆ. ಧಾರವಾಡ ಶಿಲಾವರ್ಗದ ವಿವಿಧ ಶಿಲಾಭೇದಗಳೆಲ್ಲವೂ ಪ್ರತಿಯೊಂದು ವಲಯದ ಪ್ರತಿಯೊಂದು ಪದರುಶಿಲಾ ಪಟ್ಟಿಯಲ್ಲಿಯೂ ಇರುವುದಿಲ್ಲ.

ಶಿಲಾವರ್ಗ ಪರಸ್ಪರ ಸಂಬಂಧ: ಧಾರವಾಡ ಶಿಲಾವರ್ಗವನ್ನು ಹೋಲುವ ಅಧಿಕ ರೂಪಾಂತರಗೊಂಡ ಸ್ಫಟಿಕಾಕೃತಿಯ ಪದರುಶಿಲೆಗಳು ಮತ್ತು ಇತರ ಶಿಲಾ ವಿಭೇದಗಳು ಭಾರತದ ಇತರ ಭಾಗಗಳಲ್ಲಿವೆ. ಅವುಗಳಲ್ಲಿ ಮುಖ್ಯವಾದವು ರಾಜಸ್ತಾನದ ಇರಾವತಿ ಶಿಲಾವರ್ಗ, ಗುಜರಾತಿನ ಚಂಪಾನೇರ್ ವರ್ಗ, ಮಧ್ಯಪ್ರದೇಶದ ಸಾಸರ್ ಸಕೋಲಿವರ್ಗಗಳು; ಬಿಹಾರ, ಒರಿಸ್ಸಗಳ ಕೊಲ್ಹಾನ ಮುಂತಾದ ಶಿಲಾವರ್ಗಗಳು, ಪೂರ್ವಘಟ್ಟಗಳ ಖಾಂಡಲೈಟ್ ಶಿಲಾವರ್ಗ. ಇವುಗಳ ಪೈಕಿ ಅನೇಕವನ್ನು ಸಾಮಾನ್ಯವಾಗಿ ಧಾರವಾಡ ಶಿಲಾವರ್ಗಕ್ಕೆ ಹೋಲಿಸಲಾಗಿದೆ. ಆದರೆ ಅವುಗಳಲ್ಲಿ ಯಾವುವು ಧಾರವಾಡ ಶಿಲಾವರ್ಗದ ಯಾವ ವಿಭಾಗಕ್ಕೆ ಪರಸ್ಪರ ಸಂಬಂಧಪಟ್ಟವು ಎಂಬುದನ್ನು ಖಚಿತವಾಗಿ ತಿಳಿಯಲು ಹೆಚ್ಚಿನ ಪರಿಶೋಧನೆಗಳು ನಡೆಯಬೇಕಾಗಿವೆ.

ಆರ್ಥಿಕ ಖನಿಜಗಳು: ಧಾರವಾಡ ಶಿಲಾವರ್ಗ ಕರ್ನಾಟಕದಲ್ಲಿ ದೊರೆಯುವ ಚಿನ್ನ, ಕಬ್ಬಿಣ, ಕ್ರೋಮಿಯಮ್, ಮ್ಯಾಂಗನೀಸ್, ಸೀಸ ಮತ್ತು ಸುರಮ ಲೋಹ ಖನಿಜಗಳ ಅದುರುಗಳನ್ನೂ ಕಲ್ನಾರು, ಕುರಂದ, ಗಾರ್ನೆಟ್, ಗ್ರಾಫೈಟ್, ವಿವಿಧ ಸುಣ್ಣಕಲ್ಲುಗಳು. ಮ್ಯಾಗ್ನಸೈಟ್, ಕಯನೈಟ್, ಸಿಲ್ಲಿಮನೈಟ್ ಮುಂತಾದ ಅನೇಕ ಲೋಹೇತರ ಉಪಯುಕ್ತ ಖನಿಜಗಳನ್ನೂ ಒಳಗೊಂಡಿದೆ. (ಬಿ.ಆರ್.ಆರ್.)