ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧುತ್ತರಗಿ ಪಿ ಬಿ
ಧುತ್ತರಗಿ ಪಿ ಬಿ
1929. ವೃತ್ತಿ ರಂಗಭೂಮಿಯ ನಟ, ನಾಟಕಕಾರ. ಪುಂಡಲೀಕಗೌಡ ಬಸವನಗೌಡ ಧುತ್ತರಗಿ ಇವರ ಪೂರ್ಣ ಹೆಸರು. ಇಂದಿನ ಬಾಗಲಕೋಟೆ ಜಿಲ್ಲೆಯ ಸೂಳೇ ಭಾವಿಯಲ್ಲಿ 1929 ಜೂನ್ 15 ರಂದು ಜನಿಸಿದರು. ಇವರ ತಂದೆ ಬಸವನಗೌಡ, ತಾಯಿ ಸಂಕಮ್ಮ. ಇವರ ಪೂರ್ವಜರು ಗುಲ್ಬರ್ಗ ಜಿಲ್ಲೆಯ ಧುತ್ತರಗಿಯಿಂದ ವಲಸೆ ಬಂದುದರಿಂದ ಅದೇ ಹೆಸರು ಮನೆತನಕ್ಕೆ ಉಳಿಯಿತು. ನೇಕಾರಿಕೆ ಮತ್ತು ಬಟ್ಟೆ ವ್ಯಾಪಾರ ಇವರ ಮನೆತನದ ಮೂಲವೃತ್ತಿ.
ಬಡತನದ ದೆಸೆಯಿಂದಾಗಿ ಬಸವನ ಗೌಡರಿಗೆ ಮಗನನ್ನು ಓದಿಸುವುದು ಸಾಧ್ಯವಾಗಲಿಲ್ಲ. ನಟನೆಯ ಬಗ್ಗೆ ಒಲವಿದ್ದ ಬಸವನಗೌಡರು ಹಂದಿಗನೂರು ಸಿದ್ರಾಮಪ್ಪನವರ ಕಂಪನಿಗೆ ಸೇರಿ ನಟರಾದರು. ಇದರಿಂದ ಮಗ ಖ್ಯಾತ ನಾಟಕಕಾರನಾಗಲು ಸಾಧ್ಯವಾಯಿತು.
ಹಂದಿಗನೂರು ಸಿದ್ರಾಮಪ್ಪನವರ ನಾಟಕ ಮಂಡಳಿಯಲ್ಲಿ ತಮ್ಮ ಅಂತರಂಗದ ಪ್ರತಿಭೆಯನ್ನು ಗುರುತಿಸಿಕೊಳ್ಳುವ ಸದವಕಾಶ ಧುತ್ತರಗಿಯವರಿಗೆ ದೊರೆಯಿತು. ಹೀಗಾಗಿಯೇ ಎಲ್ಲರ ಅಚ್ಚುಮೆಚ್ಚಿನವರಾದರು. ಕಂಪನಿ ಸಹವಾಸ ಬಹುದಿನ ಅಲ್ಲವೆಂಬ ವ್ಯವಹಾರe್ಞÁನ ಬಾಲಕ ಮಂಡಲೀಕನಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಹೀಗಾಗಿ ಉದರಪೋಷಣೆಗಾಗಿ ನೇಕಾರಿಕೆಯನ್ನು ಮುಂದುವರಿಸಿ ನಾಟಕದ ಗೀಳಿಗೆ ಓದುವ ಗೀಳನ್ನು ಬೆಳೆಸಿಕೊಡು ಬಡತನದಲ್ಲೂ ಆತ್ಮತೃಪ್ತಿಯನ್ನು ಕಂಡುಕೊಂಡರು. ಓದುವ ಗೀಳನ್ನು ಹಿಂಗಿಸುವ ಸಲುವಾಗಿ ಮಿತ್ರರ ಜೊತೆ ಸೇರಿ ರವೀಂದ್ರ ಗ್ರಂಥಾಲಯವನ್ನು ಹುಟ್ಟುಹಾಕಿದರು.
ನಾಟಕದ ಮೂಲಕ ಕಲಾಮೌಲ್ಯ ಮತ್ತು ಜೀವನಮೌಲ್ಯಗಳನ್ನು ಬೆಳೆಯಿಸುವ ಕಾಯಕಕ್ಕೆ ಪಾವಿತ್ರ್ಯವನ್ನು ತಂದುಕೊಡುವಲ್ಲಿ ಇವರು ನಿಷ್ಠೆಯಿಂದ ಸೇವೆಸಲ್ಲಿಸಿದ್ದಾರೆ. ಚಿತ್ತರಗಿಯ ಶ್ರೀ ಕುಮಾರವಿಜಯ ನಾಟ್ಯಸಂಘಕ್ಕೆ ನ್ಯಾಯಾಧೀಶ ಎಂಬ ನಾಟಕ ರಚಿಸಿಕೊಟ್ಟರು. ಈ ನಾಟಕ ಪ್ರದರ್ಶಿಸಿದ ಕಂಪನಿಗೂ ನಾಟಕಕಾರರಿಗೂ ಒಳ್ಳೆಯ ಹೆಸರು ಬಂತು. ಸಂಸಾರದ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿ ತಮ್ಮ ನಾಟಕದ ಹಸ್ತಪ್ರತಿಗಳನ್ನು ಇಲಕಲ್ ಮತ್ತು ಗೋಕಾಕದ ಕಂಪನಿಗೆ ಮಾರಿದರು. ಹಣ ತರುವಷ್ಟರಲ್ಲಿಯೇ ಇವರ ಪತ್ನಿ ನಿಧನರಾದದ್ದು ಇವರ ಬದುಕಿನ ದೊಡ್ಡ ದುರಂತ.
ಇವರು ರಚಿಸಿದ ಮಲಮಗಳು ನಾಟಕ ಗುಬ್ಬಿಕಂಪನಿಯೂ ಸೇರಿದಂತೆ ಕರ್ನಾಟಕದ ಎಲ್ಲ ಕಂಪನಿಗಳಲ್ಲೂ ಜಯಭೇರಿ ಬಾರಿಸಿ ಲಕ್ಷಕ್ಕೂ ಮೀರಿದ ಪ್ರಯೋಗ ಕಂಡು ವೃತ್ತಿರಂಗಭೂಮಿಯ ಇತಿಹಾಸದಲ್ಲಿ ದಾಖಲೆ ಸ್ಥಾಪಿಸಿತು. ಇದರೊಂದಿಗೆ ಇವರಿಗೆ ಹೆಸರು ತಂದಿದ್ದು ಸಂಪತ್ತಿಗೆ ಸವಾಲ್ ಎಂಬ ನಾಟಕ. ನಾಡಿನಾದ್ಯಂತ ಅಪಾರ ಜನಮನ್ನಣೆ ಪಡೆದು ಚಲನಚಿತ್ರವಾಗಿ ನಟ ರಾಜಕುಮಾರರನ್ನು ಮೇರು ನಟನನ್ನಾಗಿಸಿತು. ಈ ಚಲನಚಿತ್ರ ತೆಲಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಮಿಂಚಿದ್ದು ಒಂದು ಇತಿಹಾಸವೆನಿಸಿದೆ.
ಮನೆ ಎರಡು ಮನ ಒಂದು ಎಂಬ ನಾಟಕ ಬರೆದು ಬನಶಂಕರಿಯಲ್ಲಿ ತಾಲೀಮು ನಡೆಸುತ್ತಿದ್ದಾಗ (1968) ಖ್ಯಾತನಟಿ ಸರೋಜಮ್ಮ ಅವರೊಂದಿಗೆ ಪ್ರಣಯಾಂಕುರವಾಗಿ ಅವರನ್ನು ವಿವಾಹವಾದರು. ಅನಂತರ ತ್ರಿಪುರಸುಂದರಿ ನಾಟ್ಯ ಸಂಘವನ್ನು ಕಟ್ಟಿಕೊಂಡು ತಾವೇ ಬರೆದ ನಾಟಕಗಳನ್ನು ರಂಗದ ಮೇಲೆ ತರುವ ಹೊಸ ಅಭಿಯಾನ ಆರಂಭಿಸಿದರು. ಇದರಿಂದಾಗಿ ಆರ್ಥಿಕ ಭದ್ರತೆ ದೊರೆಯಿತು. ಮತ್ತೆ ಅದೇ ವರ್ಷ ಕಂಪನಿಯ ಹೆಸರನ್ನು ಶ್ರೀ ವಿಜಯ ಕಲಾ ನಾಟ್ಯ ಸಂಘ, ಇಲಕಲ್ಲ ಎಂದು ಬದಲಾಯಿಸಿ ಹೆಸರಾಂತ ಗೋಕಾಕದ ಕಂಪನಿಗೂ ಸವಾಲೊಡ್ಡಿದರು.
ಜೀವನಾನುಭವವನ್ನು ನಾಟಕವನ್ನಾಗಿಸುವ ಚತುರತೆ ಇವರಿಗೆ ಕರಗತವಾಗಿತ್ತು. ಇವರು 31 ಸಾಮಾಜಿಕ, 9 ಐತಿಹಾಸಿಕ, 5 ಪೌರಾಣಿಕ ಹಾಗೂ 7 ಭಕ್ತಿ ಪ್ರಧಾನ ನಾಟಕಗಳನ್ನು ರಚಿಸಿ ರಂಗಸಾಹಿತ್ಯಕ್ಕೆ ಹೊಸ ಮೆರುಗು ನೀಡಿದರು. ಇದರೊಂದಿಗೆ ರಂಗಭೂಮಿಯಲ್ಲಿ ಯಶಸ್ವಿಯಾದ ಸಂಪತ್ತಿಗೆ ಸವಾಲ್, ಸೊಸೆ ತಂದ ಸೌಭಾಗ್ಯ (ಮೂಲತಃ ಚಿಕ್ಕ ಸೊಸೆ) ಎಂಬ ನಾಟಕಗಳು ಬೆಳ್ಳಿಪರದೆಯ ಮೇಲೆ ಮೂಡಿಬಂದದ್ದೂ ಇನ್ನೊಂದು ವಿಶೇಷ.
ನಾಡಿನ ಹೆಸರಾಂತ 35 ಕಂಪನಿಗಳು ಇವರ ನಾಟಕಗಳನ್ನು ಆಡಿ ಪ್ರೇಕ್ಷಕರ ಮನ ತಣಿಸಿವೆ. ಇವರ ನಾಟಕದ ಸವಿಯನ್ನುಂಡ ಅಭಿಮಾನಗಳು ಇವರಿಗೆ ನಾಟಕಸಾಹಿತ್ಯ ರತ್ನ, ನಾಟ್ಯ ಕವಿ ಪ್ರಕಾಶ, ನಾಟ್ಯಕವಿಪುಂಗವ, ಕವಿಶ್ರೇಷ್ಠರವಿಕೀರ್ತಿ ಇತ್ಯಾದಿ ಬಿರುದುಗಳನ್ನಿತ್ತು ಸನ್ಮಾನಿಸಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ವೃತ್ತಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ಡಾ. ಗುಬ್ಬಿವೀರಣ್ಣ ಪ್ರಶಸ್ತಿಯನ್ನೂ ಇವರಿಗೆ ನೀಡಲಾಗಿದೆ (1999). (ಕೆ.ಪಿ.ಜಿ.)