ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜುಂಡಕವಿ

ವಿಕಿಸೋರ್ಸ್ದಿಂದ

ನಂಜುಂಡಕವಿ:- ೧೬ನೆಯ ಶತಮಾನದ ಶೈವಕವಿ; ಕ್ರಿ.ಶ.ಸು. 1525 ಎಂದು ಕವಿಚರಿತೆಕಾರರ ಮತ. ರಾಮನಾಥಚರಿತ್ರೆ ಎಂಬ ಸಾಂಗತ್ಯ ಕಾವ್ಯ ಈತನ ಕೃತಿ. ನಂಜರಾಜ ಆಸ್ಥಾನ ಕವಿ.ಕವಿ ತನ್ನ ತಂದೆಯ ಬಗ್ಗೆ ಕಾವ್ಯದಲ್ಲಿ ವಿಶೇಷವಾಗಿ ಮಾಡಿರುವ ಹೊಗಳಿಕೆಯ ಹಿಂದೆ ಪರೋಕ್ಷವಾಗಿ ತನ್ನ ಅಗ್ಗಳಿಕೆ, ಪ್ರತಿಷ್ಠೆಗಳನ್ನು ಸೂಚಿತವಾಗಿ ಹೇಳಿಕೊಂಡಿದ್ದಾನೆ. ಚಂಗಳನಾಡನಾಲ್ವತ್ತು ನಾಯಕ ಗಜಸಿಂಗವೆನಿಪ ಮಾಧವನ ಅಂಗೋದ್ಭವ, ಯದುಕುಲಾಮಾತ್ಯರೆಂದೆಂಬ ಕಲಾಗತವಿದಿತಬಿರುದನಾಂತೆಸೆವ ಚದುರ ಮಾಧವನಾತ್ಮಜ, ಅಂಡದ ಝಲ್ಲಿಯಾನೆಯ ನಿಗಳಕೆ ಮಾರ್ಕೊಂಡು ಮಲೆವ ರಾವುತರ ಹಿಂಡಿನ ಗಂಡ ಮಾಧವನಾತ್ಮಜ, ವಿನಯ ವಿಕ್ರಮ ವಿಭಾಸಿಯೆಂದೆನಿಪ ಮಾಧವನಾಮನ ಉದರಾಬ್ಧಿಭವಚಂದ್ರ ಎಂಬ ಉಲ್ಲೇಖಗಳನ್ನು ಇಲ್ಲಿ ನೆನೆಯಬಹುದು. ರಾಮನಾಥಚರಿತ್ರೆ ರಾಮನಾಥ ಅಥವಾ ಕುಮಾರರಾಮನೆಂಬ ವೀರನ ಚರಿತ್ರೆಯನ್ನು ಕುರಿತಿರುವುದು. ವೀರಕಾವ್ಯವನ್ನು ಬರೆಯುತ್ತಿರುವುದಕ್ಕೆ ತನಗೊಂದು ವಿಶೇಷವಾದ ಅರ್ಹತೆಯಿದೆ ಎಂದೂ ಕವಿ ಪ್ರಸ್ತಾಪಿಸುತ್ತಾನೆ. ತನ್ನ ಕಿರಿಯ ತಂದೆ (ಚಿಕ್ಕಪ್ಪ) ಯುದ್ಧವೀರನಾಗಿದ್ದು ಯುದ್ಧದಲ್ಲೇ ಸತ್ತನೆಂಬುದುದನ್ನು ಹೇಳುತ್ತ (ತಾನೂ ಸ್ವತಃ ಯುದ್ಧವನ್ನು ಸಂದರ್ಶಿಸಿದ್ದನೆಂಬ ಭಾವದಲ್ಲಿ) ಕೋವಿದರು ತನಗೆ ವೀರ ರಾಮನಾಥನ ಚರಿತ್ರೆಯನ್ನು ಹೇಳುವುದು ಅನುಚಿತವಲ್ಲವೆಂದಿದ್ದರಿಂದ ತಾನು ರಾಮನಾಥಚರಿತ್ರೆಯನ್ನು ಬರೆಯುತ್ತಿರುವೆ ಎಂದು ಹೇಳಿಕೊಂಡಿದ್ದಾನೆ.

ರಾಮನಾಥಚರಿತ್ರೆಯಲ್ಲಿ 12 ಆಶ್ವಾಸಗಳು, 47 ಸಂಧಿಗಳು, 5,807 ಪದ್ಯಗಳು ಇವೆ. ಕುಂತಳ ದೇಶದ ಕಂಪಿಲರಾಜನ ಮಗ ರಾಮನಾಥನ ಶೌರ್ಯ ಶುಚಿತ್ವ ಗುಣಗಳ ಅಭಿವ್ಯಕ್ತಿಯೇ ರಾಮನಾಥಚರಿತ್ರೆಯ ಕಥಾವಸ್ತು. ಹುಳಿಹೇರು ಪ್ರಕರಣ, ಹೊಯ್ಸಳ ವೀರಬಲ್ಲಾಳ, ಕಾಕತಿವೀರರುದ್ರ, ಕರಿಪತಿಕಪಿಲೇಶ್ವರ, ಡಿಲ್ಲಿಯ ಸುರುತಾಳ-ಇವರುಗಳೊಂದಿಗೆ ರಾಮನಾಥ ಯುದ್ಧ ಮಾಡಿದುದು, ಅವನ ಸಾಹಸಗಳು ಮತ್ತು ಪರಾಕ್ರಮಗಳು ಕೃತಿಯಲ್ಲಿ ವಿಸ್ತøತವಾಗಿ ವರ್ಣಿತವಾಗಿವೆ. ತುರುಕರೊಂದಿಗೆ ಎರಡು ಸಲ ಹೋರಾಡಿ ಗೆದ್ದು ರಾಮನಾಥ ಮೂರನೆಯ ಸಲ ಅವರು ಹೆಂಗಸೊಬ್ಬಳೊಡನೆ ಬಂದಾಗ, ಹೆಂಗಸಿನೊಡನೆ ಯುದ್ಧ ಮಾಡುವುದಿಲ್ಲವೆಂದು ಶಸ್ತ್ರಸನ್ಯಾಸ ಕೈಗೊಂಡಾಗ ಶತ್ರುಪಕ್ಷದವರು ಅವನನ್ನು ಸಂಹರಿಸುತ್ತಾರೆ. ರೂಪಿನಲ್ಲಿ ಅತ್ಯಂತ ಸುಂದರನಾದ ರಾಮನಾಥ ತನ್ನನ್ನು ಮಲತಾಯಿ ರತ್ನಾಜಿ ಮೋಹಿಸಿದಾಗ, ಆಕೆಗೆ ಧರ್ಮವನ್ನು ಬೋಧಿಸಿ ಪರವನಿತಾ ಸಹೋದರ ತಾನೆಂಬುದನ್ನು ಶ್ರುತಪಡಿಸುತ್ತ ಹೊರಟು ಬರುವಲ್ಲಿ ಕವಿ ಅವನ ಶುಚಿತ್ವಗುಣವನ್ನು ನಿಚ್ಚಳವಾಗಿ ತೋರಿಸಿಕೊಟ್ಟಿದ್ದಾನೆ.

ಯುದ್ಧವಿವರಗಳು, ರತ್ನಾಜಿಯ ಸೌಂದರ್ಯ, ಶೂಲದ ಹಬ್ಬ, ಚಂಡಾಟ, ಇತರ ಕೆಲವು ಆಚರಣೆಗಳು, ಸಾಂಪ್ರದಾಯಿಕ ವರ್ಣನೆಗಳು- ಇವು ಕವಿಯ ಕೈಯಲ್ಲಿ ದೀರ್ಘವಾಗಿ ರಮ್ಯವಾಗಿ ಬೆಳೆದಿವೆ. ರಾಮನಾಥನ ವರ್ಣನೆಗಾಗಿ ಕವಿ ಸಾವಿರದ ಇನ್ನೂರಕ್ಕೂ ಹೆಚ್ಚು ಪದ್ಯಗಳನ್ನು ಬಳಸಿಕೊಳ್ಳುತ್ತಾನೆ. ಯುದ್ಧವರ್ಣನೆ ಜೀವಂತವಾಗಿ ಕೆಲವೆಡೆ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಯುದ್ಧಮಾಡಲು ನಿಂತ ವೀರರ ಬಗೆ, ಅವರ ನಿಲವು-ಇವನ್ನು ಕವಿ ಉತ್ಸಾಹದಿಂದ ವರ್ಣಿಸಿದ್ದಾನೆ. ಸಾಂಪ್ರದಾಯಿಕವಾದ ವರ್ಣನೆಗಳಲ್ಲಿ ಪೂರ್ವಕವಿಗಳ ಕಾವ್ಯಗಳ ಪ್ರಭಾವವನ್ನು ರೂಢಿಸಿಕೊಂಡು ವರ್ಣಿಸಿರುವನಾದರೂ ಅನೇಕ ಕಡೆ ಸ್ವಂತಿಕತೆಯನ್ನು ಮೆರೆದಿದ್ದಾನೆ. ರಾಮನಾಥ, ರತ್ನಾಜಿ, ಕಂಪಿಲ, ಸುರುತಾಳ-ಮೊದಲಾದ ಪಾತ್ರಗಳು ಪೌರಾಣಿಕ ವ್ಯಕ್ತಿಗಳಾಗಿ ಈ ಕಾವ್ಯದಲ್ಲಿ ವರ್ಣಿತರಾಗಿದ್ದಾರೆ. ವಾಸ್ತವವಾಗಿ ಕಂಪಿಲ, ರಾಮನಾಥ ಇವರು ಐತಿಹಾಸಿಕ ವ್ಯಕ್ತಿಗಳು. ಹೀಗಾಗಿ ಕಾವ್ಯದಲ್ಲಿ ಐತಿಹಾಸಿಕ, ಪೌರಾಣಿಕ ಸಂಗತಿಗಳು ಅಂದಿನ ಸಾಮಾಜಿಕ ಸಂಗತಿಗಳೊಡನೆ ಮೇಳವಿಸಿಕೊಂಡಿವೆ. ಸಾಂಗತ್ಯ ರಚನೆ ಸಲೀಸಾಗಿದೆ; ಆಸ್ವಾದನೀಯವೂ ಆಗಿದೆ.

ಸಾಂಗತ್ಯದ ಮೇರುಕೃತಿ ಭರತೇಶವೈಭವವನ್ನು ಬಿಟ್ಟರೆ ರಾಮನಾಥಚರಿತ್ರೆಯೇ ಮಹತ್ತ್ವದ ಕೃತಿ ಎನಿಸುತ್ತದೆ. ಆಡುಮಾತುಗಳು ನುಡಿಗಟ್ಟುಗಳು ವಿಪುಲ. ಆದರೆ ಉಚಿತ ಬಳಕೆ, ಕವಿ ತೋರುವ ಕನ್ನಡದ ಕಸುವು, ಜನಜೀವನದ ಸಹಜ ಚಿತ್ರಣ, ನಾಡಿನ ಬಗ್ಗೆ ಕವಿಗಿರುವ ಅಭಿಮಾನ- ಇವು ಈ ಕಾವ್ಯದ ಹೆಗ್ಗಳಿಕೆಯ ಹಿಂದಿನ ಕೆಲವು ಕಾರಣಗಳಾಗಿವೆ. (ಆರ್.ಎನ್.ವಿ.)