ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂದಿನೀ
ನಂದಿನೀ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಿಂದ ನಂದಿನೀ ಹೆಸರಿನ ಒಂದು ಮಾಸಪತ್ರಿಕೆಯೂ ಶಿರಸಿಯಿಂದ ಇದೇ ಹೆಸರಿನ ಒಂದು ವಾರಪತ್ರಿಕೆಯೂ ಪ್ರಕಟವಾಗುತ್ತಿದ್ದುವು. ನಂದಿನೀ ಮಾಸಪತ್ರಿಕೆಯ ಸಂಪಾದಕರು ನಾರಾಯಣ ಸುಬ್ರಹ್ಮಣ್ಯ ಶಾಸ್ತ್ರಿ ಭಡತಿ. ಅವರೇ ಅದರ ಪ್ರಕಾಶಕರು ಹಾಗೂ ಮುದ್ರಕರು. ಅದಕ್ಕಾಗಿ ಅವರು ನಂದಿನೀ ಮುದ್ರಣಾಲಯವನ್ನು ಸ್ಥಾಪಿಸಿದ್ದರು. ಪತ್ರಿಕೆಯ ಪ್ರಥಮ ಸಂಚಿಕೆ ಶಾಲಿವಾಹನ ಶಕೆ 1847ನೆಯ ಕಾರ್ತೀಕ ಮಾಸ ಶುಕ್ಲಪಕ್ಷದಲ್ಲಿ 1925ರ ಅಕ್ಟೋಬರ್‍ನಲ್ಲಿ ಪ್ರಕಟವಾಯಿತು. ಡಿಮೈ 1/8 ಆಕಾರದ 30-40 ಪುಟಗಳಿಂದ ಕೂಡಿದ್ದ ಈ ಪತ್ರಿಕೆಯ ವಾರ್ಷಿಕ ಚಂದಾ ಅಂಚೆ ಸಹಿತ ರೂ.2. ಪತ್ರಿಕೆಯ ಪ್ರಸಾರ ಸುಮಾರು ಒಂದೂವರೆ ಸಾವಿರ. ಈ ಪತ್ರಿಕೆ ಧಾರ್ಮಿಕ ಸಾಂಸ್ಕøತಿಕ ಸಾಮಾಜಿಕ ವಿಚಾರಗಳಿಗೆ ಮೀಸಲಾಗಿತ್ತು. ಸಂಪಾದಕರು ತೀವ್ರ ಕಾಯಿಲೆಗೆ ಒಳಗಾದ್ದರಿಂದ ಪತ್ರಿಕೆಯ ಪ್ರಕಟಣೆ 1931ರಲ್ಲಿ ನಿಂತುಹೋಯಿತು.
ನಂದಿನೀ ಮಾಸಪತ್ರಿಕೆ ನಿಂತ ಮೇಲೆ ಅದರ ಮುದ್ರಣಾಲಯ ಶಿರಸಿಗೆ ಸ್ಥಳಾಂತರಗೊಂಡಿತು. ನಂದಿನೀ ವಾರಪತ್ರಿಕೆ ಶಿರಸಿಯಿಂದ, ಅದೇ ಮುದ್ರಣಾಲಯದಲ್ಲಿ ಅಚ್ಚಾಗಿ, 1937ರ ಫೆಬ್ರವರಿ 9ರಿಂದ ಪ್ರಕಟವಾಗತೊಡಗಿತು. ಕ್ರೌನ್ 1/4 ಆಕಾರದ 8 ಪುಟಗಳೊಡನೆ ಪ್ರತಿ ಮಂಗಳವಾರ ಪ್ರಕಟವಾಗುತ್ತಿದ್ದ ಈ ಪತ್ರಿಕೆಗೆ ಡಿ.ಎಸ್.ವಿಶ್ವಾಮಿತ್ರರು ಸಂಪಾದಕರೂ ಮಹಾಬಲೇಶ್ವರ ಕೃಷ್ಣಪ್ಪ ಹೆಗಡೆಯವರು ಪ್ರಕಾಶಕರೂ ಸೀತಾರಾಮ ವಿಘ್ನೇಶ್ವರ ಭಡತಿಯವರು ಮುದ್ರಕರೂ ಆಗಿದ್ದರು. ಪತ್ರಿಕೆಯ ವಾರ್ಷಿಕ ಚಂದಾ ರೂ. 3. ಬಿಡಿ ಪತ್ರಿಕೆಯ ಬೆಲೆ ಒಂದು ಆಣೆ (ಸು.6 ಪೈಸೆ). ಒಂದೂವರೆ ಸಾವಿರಕ್ಕೂ ಹೆಚ್ಚು ಚಂದಾದಾರರಿದ್ದ ಈ ಪತ್ರಿಕೆಯ ಸಂಪಾದಕೀಯ ಉಚ್ಚಮಟ್ಟದ್ದಾಗಿರುತ್ತಿತ್ತು. ಅರವಿಂದ, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ ಮುಂತಾದವರ ತತ್ತ್ವಗಳ ಪ್ರತಿಪಾದನೆಗೆ ಪತ್ರಿಕೆಯಲ್ಲಿ ವಿಶೇಷ ಅವಕಾಶವಿತ್ತು.
ಪತ್ರಿಕೆಯಲ್ಲಿ ರಾಜಕೀಯ ಸಾಮಾಜಿಕ ವರದಿಗಳೂ ಕೃಷಿ, ಪಶುಪಾಲನೆ ವಿಚಾರಗಳೂ ದೇಶ ವಿದೇಶಗಳ ವರ್ತಮಾನಗಳೂ ಸ್ಥಾನಿಕ ಸುದ್ದಿಗಳೂ ಪ್ರಕಟವಾಗುತ್ತಿದ್ದವು. ಅಡಕೆ ತೋಟಗಾರರ ಸಮಸ್ಯೆಗಳೂ ಜಿಲ್ಲೆಯ ಅರಣ್ಯಸಂಕಷ್ಟಗಳೂ ಚರ್ಚಿಸಲ್ಪಡುತ್ತಿದ್ದವು.
ಅರಣ್ಯಪ್ರಧಾನವಾದ ಈ ಭಾಗದಲ್ಲಿ ಆಗ ಸಾರಿಗೆ ಸಂಪರ್ಕಗಳು ಬಹಳ ದುಸ್ತರವಾಗಿದ್ದವು. ಅಂಚೆ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ನಂದಿನೀ ಪತ್ರಿಕೆಯನ್ನು ಸಕಾಲದಲ್ಲಿ ತಲುಪಿಸಲು, ವಿತರಣೆ ಮಾಡಲು ಪತ್ರಿಕೆ ತನ್ನದೇ ಆದ ವ್ಯವಸ್ಥೆ ಮಾಡಿಕೊಂಡಿತ್ತು.
ನಂದಿನೀ ವಾರಪತ್ರಿಕೆ ಜನಜಾಗೃತಿಯನ್ನೂ ವಿಚಾರಕ್ರಾಂತಿಯನ್ನೂ ಉಂಟು ಮಾಡಿ ಜನಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿ ಪ್ರಸಿದ್ಧಿ ಹಾಗೂ ಗೌರವ ಪಡೆಯಿತಾದರೂ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲಾರದೆ 1952ರಲ್ಲಿ ನಿಂತುಹೋಯಿತು. (ಎಚ್.ಎಸ್.ಎಚ್.ಇ.)