ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸಿಂಹಸ್ವಾಮಿ, ಕೆ ಎಸ್
ನರಸಿಂಹಸ್ವಾಮಿ, ಕೆ ಎಸ್ 1915-2003. ಆಧುನಿಕ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡ ಸಾಹಿತ್ಯದ ನವೋದಯ ಕಾಲದಿಂದ ನವ್ಯ ಕಾವ್ಯ ಸೃಷ್ಟಿಯ ಕಾಲದವರೆಗೂ ತಮ್ಮ ಕಾವ್ಯಸೃಷ್ಟಿಯನ್ನು ನಡೆಸುತ್ತ ಬಂದಿದ್ದಾರೆ. ಈ ಅವಧಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನೆಲ್ಲ ತಮ್ಮ ಕಾವ್ಯಶೈಲಿಯಲ್ಲೂ ಬಳಸಿಕೊಂಡಿದ್ದಾರೆ. ಆದರೆ ತಮ್ಮ ಮೊದಲ ಕವನ ಸಂಗ್ರಹವಾದ ಮೈಸೂರು ಮಲ್ಲಿಗೆಯಿಂದ ಗಳಿಸಿದ ಕೀರ್ತಿ ಮತ್ತು ಜನಪ್ರಿಯತೆ ಅವರಿಗೆ ಅವರ ಇತರ ಕವನ ಸಂಗ್ರಹಗಳಿಂದ ಹೆಚ್ಚಾಗಲಿಲ್ಲ ಎನಿಸುತ್ತದೆ. ಮೊದಲು ಸಂಪಾದಿಸಿದ ಕೀರ್ತಿ ಅಳಿಸಲಿಲ್ಲ ಎಂಬ ಮಾತೂ ನಿಜ. ಅದು ಗಟ್ಟಿಯಾಗಿ ನಿಂತಿತು. ಪ್ರತಿಭೆಯಲ್ಲಾಗಲಿ, ಕಾವ್ಯ ರಚನಾಶಕ್ತಿಯಲ್ಲಾಗಲೀ ವಸ್ತುವಿನ ಆಯ್ಕೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಮೊದಲ ಕಾವ್ಯದಲ್ಲಿ ಕಾಣಿಸಿಕೊಂಡ ಅವರ ಪ್ರತಿಭೆ, ಶಕ್ತಿ, ವಿವೇಚನೆ ಕಡಿಮೆ ಆಗಲಿಲ್ಲ. ಅವರ ಅನುಭವ ಬೆಳೆದಂತೆ ಅವೂ ಬೆಳೆದವು. ಆದರೆ ಮೈಸೂರು ಮಲ್ಲಿಗೆ ತಂದುಕೊಟ್ಟ ಕೀರ್ತಿ ಮಸುಕಿಲ್ಲದೆ ಹಾಗೆಯೇ ನಿಂತಿತು. ಅದಕ್ಕೆ ಚ್ಯುತಿ ಇಲ್ಲ.
ನರಸಿಂಹಸ್ವಾಮಿ ಜನವರಿ 1915ರ 26ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಹುಟ್ಟಿದರು. ತಂದೆ ಕಿಕ್ಕೇರಿ ಸುಬ್ಬರಾಯರು. ತಾಯಿ ಹೊಸಹೊಳಲು ನಾಗಮ್ಮನವರು. ತಂದೆ ಮೈಸೂರಿನಲ್ಲಿ ಒಂದು ಅಂಗಡಿಯ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ಅದೇ ಅವರ ಉದ್ಯೋಗವಾದರೂ ಅವರ ಒಲುಮೆ ಪಿಟೀಲು ವಾದನದಲ್ಲಿತ್ತು. ಈ ಕಲೆಯ ಅಂಶ ಸ್ವಾಮಿಯವರಲ್ಲಿ ಮತ್ತೊಂದು ರೂಪದಲ್ಲಿ ಹೊರಹೊಮ್ಮಿತು. ಸ್ವಾಮಿಯವರ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಹೈಸ್ಕೂಲು, ಮೈಸೂರಿನ ಇಂಟರ್ಮೀಡಿಯಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಾಯಿತು. ಪಠ್ಯವಿಷಯ-ಐ.ಎಸ್.ಸಿ. ಇಂಜಿನಿಯರಿಂಗ್, ಇಂಗ್ಲಿಷ್, ಗಣಿತ, ಭೌತಶಾಸ್ತ್ರ. ಕಾಲೇಜು ವಿದ್ಯಾಭ್ಯಾಸ ಆರ್ಥಿಕ ತೊಂದರೆಗಳಿಂದಾಗಿ ಮೊಟಕಾಯಿತು. ಪದವಿ ವ್ಯಾಸಂಗ ಪೂರ್ಣವಾಗಲಿಲ್ಲ. ಕನ್ನಡದ ಮೇಲೆ ಹೆಚ್ಚು ಒಲವು ಇದ್ದುದರಿಂದ ತಮ್ಮ ಓದಿನ ವಿಷಯ ಅಲ್ಲದಿದ್ದರೂ ಕನ್ನಡದ ತರಗತಿಗಳಿಗೆ ಹೋಗಿ ಆ ಪಾಠಗಳನ್ನು ಕೇಳುತ್ತಿದ್ದರು. 19ನೆಯ ವಯಸ್ಸಿಗೆ ಓದು ನಿಂತುಹೋಯಿತು. 22ಕ್ಕೆ ಕೆಲಸಕ್ಕೆ ಸೇರಿಕೊಂಡರು (1937). ಅದರ ಹಿಂದಿನ ವರ್ಷವೇ ಅವರಿಗೆ ವಿವಾಹವಾಗಿತ್ತು. ಕೈಹಿಡಿದ ಹೆಂಡತಿ ಶಿವಮೊಗ್ಗದ ವೆಂಕಮ್ಮ. ಮದುವೆ ಆದದ್ದು ತಿಪಟೂರಿನಲ್ಲಿ. ಆ ವಯಸ್ಸಿನ ಅವರ ಪ್ರೇಮಮಯ ಜೀವನ ಅವರ ಪ್ರೇಮಗೀತೆಗಳಿಗೆ ಸ್ಪೂರ್ತಿ ನೀಡಿತು. ಅವರ ಮೊದಲ ಕವನ ಕಬ್ಬಿನ ಕೂಗು (1931). ಕವಿಯ ಹೃದಯದ ಧ್ವನಿಯಾದರೂ ಮುಂದೆ ಅದು ಪ್ರಣಯದ ವಿವಿಧ ಅನುಭವಗಳ ಅಮೃತವಾಣಿಗಳಾಗಿ ಹೊಮ್ಮಿತು.
ಸ್ವಾಮಿ ಅವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ (1942). ಈಗ ಅದು ಅನೇಕ ಮುದ್ರಣಗಳನ್ನು ಕಂಡಿದೆ. ಸಂಕೋಚ ಪ್ರಕೃತಿಯ ಸ್ವಾಮಿಯವರು ತಮ್ಮ ಕವನಗಳನ್ನು ಪ್ರಕಟಿಸುವುದಕ್ಕೆ ನಾಚಿಕೆಪಡುತ್ತಿದ್ದ ಆ ಕಾಲದಲ್ಲಿ ಅದನ್ನು ಬೆಳಕಿಗೆ ತಂದವರು ಎ.ಆರ್.ಕೃಷ್ಣಶಾಸ್ತ್ರಿಗಳು, ಟಿ.ಎಸ್.ವೆಂಕಣ್ಣಯ್ಯ ಮತ್ತು ತೀ.ನಂ.ಶ್ರೀ. ಅವರು. ಮೈಸೂರು ಮಲ್ಲಿಗೆ ಪ್ರಕಟವಾಯಿತು. ಕವನ ಮಲ್ಲಿಗೆಯ ಸೌರಭ ಕ್ಷಿಪ್ರದಲ್ಲಿಯೇ ನಾಡಿನ ಆದ್ಯಂತ ಪಸರಿಸಿತು. ಯಾವ ತರುಣನ ಬಾಯಲ್ಲಿಯೂ ಆ ಕವನಗಳೇ. ಕವಿ ಬೆಳಗ್ಗೆ ಎದ್ದ, ತನ್ನ ಕೀರ್ತಿಯನ್ನು ಕಂಡ ಎನ್ನುವಂತೆ ಸ್ವಾಮಿಯವರ ಕೊರಳಿಗೆ ಮಲ್ಲಿಗೆಯ ಹಾರ ಬಿತ್ತು.
ಸ್ವಾಮಿಯವರು ನವೋದಯ ಕಾವ್ಯ ಮಾರ್ಗವನ್ನು ಹಿಡಿದು ಮುಂದುವರಿದರು. ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತೆಗಳು, ರೂಪುಗೊಳ್ಳುತ್ತಿದ್ದ ಸುನೀತಿಗಳು, ಇಂಗ್ಲಿಷ್ ಕವಿಗಳ ಪ್ರಭಾವ ಅವರ ರಚನೆಗೆ ಪುಷ್ಟಿ ಕೊಟ್ಟವು. ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ನಗರಕ್ಕೆ ವೃತ್ತಿಯ ದೆಸೆಯಿಂದ ಬಂದು ಸಂಸಾರ ನಿರ್ವಹಿಸಬೇಕಾಯಿತು. ಬದುಕಿನ ವಾತಾವರಣ ಬದಲಾಗುತ್ತ, ವಿಶಾಲವಾಗುತ್ತ, ಸಮಸ್ಯೆಯಾಗುತ್ತ ನಡೆದಂತೆ ಅದನ್ನು ಅನುಸರಿಸಿ ಅವರ ಕಾವ್ಯರಚನಾ ಪದ್ಧತಿಯೂ ಮಾರ್ಪಾಟು ಹೊಂದುತ್ತ ಬಂತು. ಐರಾವತ (1945), ದೀಪದ ಮಲ್ಲಿ (1947), ಉಂಗುರ (1949), ಇರುವಂತಿಗೆ (1952), ಶಿಲಾಲತೆ (1958), ಮನೆಯಿಂದ ಮನೆಗೆ (1960), ತೆರೆದ ಬಾಗಿಲು (1976), ನವಪಲ್ಲವ (1983), ದುಂಡು ಮಲ್ಲಿಗೆ (1993), ನವಿಲ ದನಿ (1999), ಸಂಜೆ ಹಾಡು (2000), ಕೈಮದದ ಸೆಳಲಲ್ಲಿ (2001), ಎದೆ ತುಂಬ ನಕ್ಷತ್ರ (2000), ಮೌನದಲ್ಲಿ ಮಾತು ಹುಡುಕುತ್ತ (2003) - ಇವು ಅವರ ಕವನ ಸಂಗ್ರಹಗಳು. ಹಾಡು ಹಸ್ತೆ (2003), ಆಯ್ದ ಅತ್ಯುತ್ತಮ ಗೀತೆಗಳು ಮತ್ತು ಮಲ್ಲಿಗೆಯ ಮಾಟ (2004) ಸ್ವಾಮಿಯವರ ಕವನಸಂಕಲನ. ಈ ಕಾವ್ಯ ಕೃತಿಗಳನ್ನಲ್ಲದೆ ಮಾದರಿಯ ಕಲ್ಲು (1942), ಉಪವನ (1958), ದಮಯಂತಿ (1970) ಸಿರಿಮಲ್ಲಿಗೆ (1990) ಎಂಬ ಗದ್ಯ ಕೃತಿಗಳನ್ನು ಇವರು ಬರೆದಿದ್ದಾರೆ. ಅಲ್ಲದೆ ಇಂಗ್ಲಿಷ್‍ನಿಂದ ಗಾಂಧೀಜಿಯವರ ಹಲವು ಉಕ್ತಿಗಳನ್ನೂ ಯೂರಿಪಿಡೀಸನ ಮೀಡಿಯಾ ನಾಟಕವನ್ನೂ ಮಾರ್ಕ್‍ಟ್ವೇನನ ಹಕಲ್‍ಬರಿಫಿನ್ನನ ಸಾಹಸಗಳು (1969) ಎಂಬ ಕಾದಂಬರಿಯನ್ನೂ ಹರೀಂದ್ರನಾಥ ಚಟ್ಟೋಪಾಧ್ಯಾಯರ ಕೆಲವು ಮಕ್ಕಳ ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಬರ್ಟ್ ಬನ್ರ್ಸ್ ಕವಿಯ ಕೆಲವು ಪ್ರೇಮಗೀತೆಗಳನ್ನು (1997) ಮತ್ತು ಕೆಲವು ಚೀನೀ ಕವನಗಳು (1997) - ಸ್ವಾಮಿಯವರ ಅನುವಾದ ಕ್ಷೇತ್ರದಲ್ಲಿನ ಗಣನೀಯ ಕೊಡುಗೆಗಳು.
ಮೈಸೂರು ಮಲ್ಲಿಗೆ ಕೃತಿ ದೇವರಾಜ ಬಹಾದ್ದೂರ್ ಬಹುಮಾನವನ್ನೂ (1943) ಶಿಲಾಲತೆ ಮೈಸೂರು ರಾಜ್ಯದ ಸಂಸ್ಕøತಿ ಪ್ರಸಾರ ಶಾಖೆಯ ಬಹುಮಾನವನ್ನೂ (1957) ತೆರೆದ ಬಾಗಿಲು ಕವನ ಸಂಗ್ರಹ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ (1977) ಪಡೆದಿವೆ. ಕೇರಳದ ಕವಿ `ಕುಮಾರನ್ ಆರಾನ್ ಪ್ರಶಸ್ತಿ (1987) ಮತ್ತು ಕರ್ನಾಟಕ ಸರಕಾರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಪಂಪ ಪ್ರಶಸ್ತಿ (1999) ಪುರಸ್ಕøತರು. ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ ಲಿಟ್ ಪದವಿ (1992) ಗೌರವಕ್ಕೆ ಪಾತ್ರರಾಗಿದ್ದಾರೆ.
ಕವಿ ನರಸಿಂಹಸ್ವಾಮಿಯವರನ್ನು ಅವರ ಸಾಹಿತ್ಯ ಸೃಷ್ಟಿಗಾಗಿ ಕನ್ನಡ ಜನ ಅನೇಕ ರೀತಿಯಲ್ಲಿ ಸನ್ಮಾನಿಸಿದೆ. ಅವರ ಪ್ರತಿಭೆಯನ್ನು ಮನಗಂಡ ವಿದ್ವಾಂಸರು ಸಾಹಿತ್ಯಪ್ರಿಯರು ಅಭಿಮಾನಿಗಳು, ಸಂಸ್ಥೆಗಳು ಅವರನ್ನು ದೆಹಲಿ ರೇಡಿಯೋ ಕವಿ ಸಮ್ಮೇಳನದಲ್ಲಿ, ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡಿ ತಮ್ಮ ಮೆಚ್ಚುಗೆಯನ್ನು ಪ್ರದರ್ಶಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸುವರ್ಣ ಮಹೋತ್ಸವದಲ್ಲಿ ಅವರನ್ನು ಕಾವ್ಯಕ್ಕಾಗಿ ಸನ್ಮಾನಿಸಿದೆ ಮತ್ತು 1976ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ 49 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕವಿ ಗೋಷ್ಠಿಯ ಅಧ್ಯಕ್ಷರನ್ನಾಗಿ, 1990ರಲ್ಲಿ ಮೈಸೂರಿನಲ್ಲಿ ನಡೆದ 60ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಿದೆ. ಕವಿ ಕೃತಿಗಳನ್ನು ಕುರಿತ ಚಂದನ ಎಂಬ ಅಭಿನಂದನ ಗ್ರಂಥವೊಂದನ್ನು 1972ರಲ್ಲಿ ಅವರ ಅಭಿಮಾನಿಗಳು ಪ್ರಕಟಿಸಿ ಕವಿಗೆ ಗೌರವ ನೀಡಿದ್ದಾರೆ.
ನರಸಿಂಹಸ್ವಾಮಿಯವರು ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದಿಂದ 1970 ನೆಯ ಜನವರಿ 26 ರಂದು ನಿವೃತ್ತರಾದರು. ಅವರಿಗೆ 4 ಜನ ಗಂಡು ಮಕ್ಕಳು, 4 ಜನ ಹೆಣ್ಣು ಮಕ್ಕಳು.
ಸ್ವಾಮಿಯವರ ಮೊದಲ 5 ಸಂಕಲನಗಳಲ್ಲಿ ಕಂಡುಬರುವ ಕವಿತೆಗಳು ಬಹುತೇಕ ಪ್ರಣಯದ ಮಧುರ ಸುಕುಮಾರ ಅನುಭವದ ಚಿತ್ರಗಳನ್ನು ಕೊಡುತ್ತವೆ. ಒಲುಮೆಯ ಗೀತೆಗಳಲ್ಲಿ ಪ್ರೇಮದ ಗಂಗೆ ತುಂಬಿ ಹರಿಯುತ್ತಾಳೆ. ಜೊತೆಗೆ ವಾತ್ಸಲ್ಯಭಾವದ ಚಿತ್ರಗಳು ಒಡಮೂಡಿವೆ. ಅವು ಹಾಡುಗಬ್ಬಗಳಾಗಿ ತರುಣ ವಯಸ್ಸಿನವರ ಅಮರ ಗೀತೆಗಳಾಗಿವೆ, ರಸಕೃತಿಗಳಾಗಿವೆ, ಜನಪ್ರಿಯವೂ ಆಗಿವೆ. ಮೈಸೂರು ಮಲ್ಲಿಗೆ ಕಸ್ತೂರಿಯ ನೆಲದಲ್ಲಿ ಕಾಮನಬಿಲ್ಲನ್ನು ಬಿತ್ತಿ ಬೆಳೆಸಿದ ಹೂದೋಟ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲೆಲ್ಲ ಅದು ತನ್ನ ಸುವಾಸನೆಯನ್ನು ಬೀರಿ ಮರುಳುಗೊಳಿಸಿದೆ. ಅದು ಅರೆಬಿರಿದ ಮೊಗ್ಗಲ್ಲ ಪ್ರಪುಲ್ಲ ಪುಷ್ಪ. ಇವು ವಿಮರ್ಶಕರ ನುಡಿಗಳು.
ರಚನೆಯಲ್ಲಿ ಎರಡನೆಯ ಘಟ್ಟ ಶಿಲಾಲತೆ ಮತ್ತು ಮನೆಯಿಂದ ಮನೆಗೆ ಎಂಬ ಸಂಗ್ರಹಗಳಲ್ಲಿ ಕಂಡುಬರುತ್ತದೆ. ಇಲ್ಲಿ ನವೋದಯದ ಕವಿ ನವ್ಯಕವಿಯಾಗುತ್ತಾನೆ. ಇಂಗ್ಲಿಷ್ ನವ್ಯಕಾವ್ಯಗಳು ಕನ್ನಡದಲ್ಲಿ ಅಂಕುರಿಸುತ್ತಿದ್ದ ನವ್ಯ ಕಾವ್ಯೋದಯದ ಅರುಣಕಾಂತಿ ಅವರ ಕಾವ್ಯಶಕ್ತಿಯನ್ನು ತಟ್ಟಿ ಎಚ್ಚರಿಸಿತು. ಶಿಲ್ಪ, ಪ್ರತಿಮೆ, ಭಾಷೆ, ವಸ್ತು, ತಂತ್ರ ಜೀವನದರ್ಶನಗಳು ಅವರ ರಚನೆಗಳನ್ನು ರೂಪಿಸಿದವು. ಮಧುರಸನ್ನಿವೇಶಗಳು ಜೀವನದ ಜಂಜಡದಿಂದ, ಸಾಮಾಜಿಕ ಪ್ರಭಾವಗಳಿಂದ ಪರಿವರ್ತನೆಯಾದವು. ಜೀವನ ಮೌಲ್ಯಗಳು ವ್ಯತ್ಯಾಸವಾದವು. ಹೊಸ ಭಾವನೆಗಳು ಹೊಸ ಕಾವ್ಯ ಮಾರ್ಗದಲ್ಲಿ ಮೂಡಿಬಂದವು. ಭಾಷೆಯಲ್ಲಿ ಸ್ಪಷ್ಟತೆ, ವಿಡಂಬನೆಯ ಮೊನಚು, ಹಾಸ್ಯದ ಹೊಳಪು ಹೆಣೆದುಕೊಂಡವು. ಬರಿಗೊಡಗಳಿಗೆ ಸಮಾಧಾನ ಎನ್ನುವ ಕವಿತೆಯಲ್ಲಿ ಬರುವ ಬಾಂದಳದ ವಿಮಾನ! ಅದೆಷ್ಟು ನಿಧಾನ! ದಾರವಿಲ್ಲದ ಸೂಜಿ ನಾಟಿದೆ ನೀಲಿ ಬಟ್ಟೆಯಲಿ ಎಂಬ ಚಿತ್ರ ನಯವಂಚನೆಯ ಭರವಸೆಗಳನ್ನು ಮನದಟ್ಟು ಮಾಡಿಸುತ್ತದೆ.
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದ `ತೆರೆದ ಬಾಗಿಲು ಕಾವ್ಯ ಸಂಕಲನ. ರಚನೆಯಲ್ಲಿ ಇದು ಮೂರನೆಯ ಘಟ್ಟ. ರೂಪಕಗಳಾಗಲಿ, ಪ್ರತಿಮೆಗಳಾಗಲಿ ಉದಾಹರಣೆಗಾಗಿ ಕವಿತೆಗಳಲ್ಲಿ ಬರುತ್ತಿದ್ದು ಈಗ ಇಡೀ ಕವನ ಒಂದು ಪ್ರತಿಮೆಯಾಗಿ ಒಂದು ರೂಪಕವಾಗಿ ಮಹಾಪ್ರತಿಮೆಯಾಗುತ್ತದೆ.
ಸ್ವಾಮಿಯವರ ಕೆಲವು ಕವಿತೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಭಾಷಾಂತರವಾಗಿದೆ.
ಸ್ವಾಮಿಯವರು ತಮ್ಮ 90ನೇ ವಯಸ್ಸಿನಲ್ಲಿ 2003ರ ಡಿಸೆಂಬರ್ 28ರಂದು ವಿಧಿವಶರಾದರು. (ಆರ್.ಎಸ್.ಆರ್.)