ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸೋಬವಾಡಿ

ವಿಕಿಸೋರ್ಸ್ದಿಂದ

ನರಸೋಬವಾಡಿ ಮಹಾರಾಷ್ಟ್ರ ರಾಜ್ಯದಲ್ಲಿನ ಒಂದು ಪ್ರಸಿದ್ಧ ದತ್ತ ಕ್ಷೇತ್ರ. ಮೀರಜ್-ಕೊಲ್ಲಾಪುರ ರೈಲ್ವೆ ರಸ್ತೆಯಲ್ಲಿ ಜಯಸಿಂಗಪುರ ನಿಲ್ದಾಣದಿಂದ ಎಂಟು ಮೈಲಿ ಅಂತರದಲ್ಲಿ ಕೃಷ್ಣಾ ಹಾಗೂ ಪಂಚಗಂಗಾ ನದಿಗಳ ಸಂಗಮ ಸ್ಥಾನದಲ್ಲಿದೆ. ಇದರ ಮೂಲನಾಮ ಅಮರಾಪುರ. ದತ್ತೋಪಾಸಕನಾದ ನರಸಿಂಹ ಸರಸ್ವತಿ ಎಂಬ ಸಂತನಿಂದ ಇದಕ್ಕೆ ನರಸೋಬವಾಡಿ ಎಂದು ಹೆಸರು ಬಂತು.

ಕೃಷ್ಣಾನದಿಯ ಪ್ರಶಸ್ತ ಘಾಟ್, ದತ್ತನ ಪಾದುಕೆಗಳ ಮಂದಿರಗಳು ನೋಡಲು ಬಹು ಮನೋಜ್ಞವಾಗಿವೆ. ನರಸಿಂಹಸರಸ್ವತಿಯು ಇಲ್ಲಿಂದ ಗಾಣಗಾಪುರಕ್ಕೆ ಹೋಗುವ ಮೊದಲು ಈ ಪಾದುಕೆಗಳನ್ನು ಮಾಡಿಸಿ ಸ್ಥಾಪಿಸಿ ಪೂಜೆಗೆಂದು ಭಾರದ್ವಾಜಗೋತ್ರದ ಬಹಿರಂಭಟ್ಟ ಎಂಬ ವ್ಯಕ್ತಿಯನ್ನು ನೇಮಿಸಿ ಹೋದನೆಂದು ಗುರುಚಾರಿತ್ರ ಗ್ರಂಥದಲ್ಲಿ ಹೇಳಿದೆ.

ನರಸೋಬವಾಡಿಯಲ್ಲಿ ನರಸಿಂಹ ಸರಸ್ವತಿಯ ಸಮಕಾಲೀನರಾದ ರಾಮಚಂದ್ರ ಯೋಗಿ, ಟೇಂಬೆ ಮಹಾರಾಜ ಎಂದು ಪ್ರಸಿದ್ಧರಾದ ವಾಸುದೇವಾನಂದ ಸರಸ್ವತಿ, ನಾರಾಯಣಸ್ವಾಮಿ, ಕಾಶೀಕರ್ ಸ್ವಾಮಿ, ಗೋಪಾಲಸ್ವಾಮಿ ಮತ್ತು ಮೌನಿಸ್ವಾಮಿ ಮುಂತಾದ ತಪಸ್ವಿಗಳ ಸಮಾಧಿ ಸ್ಮಾರಕಗಳಿವೆ. ಇಲ್ಲಿನ ನದಿಯ ಘಟ್ಟವನ್ನು ಏಕನಾಥ ಮಹಾರಾಜ ಕಟ್ಟಿಸಿದನೆಂದು ಹೇಳಲಾಗುತ್ತದೆ. ಇದರ ಹತ್ತಿರದಲ್ಲೇ ಇರುವ ಅವರವಾಡ ಹಾಗೂ ಗೌರವಾಡ ಹಳ್ಳಿಗಳನ್ನು ಬಿಜಾಪುರದ ಸುಲ್ತಾನ ಆದಿಲ್‍ಶಹ ಇನಾಮಾಗಿ ಕೊಟ್ಟಿದ್ದಂತೆಯೂ ತಿಳಿದುಬರುತ್ತದೆ.

ಭೂತಬಾಧೆಯುಳ್ಳವರು ನರಸೋಬವಾಡಿಗೆ ಬಂದು ಪರಿಹಾರಕ್ಕೆಂದು ತಪಸ್ಸು ಮಾಡುವುದುಂಟು. ಅನೇಕರು ಇಲ್ಲಿಗೆ ಗುರುಚಾರಿತ್ರ ಪಾರಾಯಣ ಮಾಡಲು ಬರುವುದುಂಟು. ದತ್ತಜಯಂತಿ ಮತ್ತು ಗುರುದ್ವಾದಶಿ ಸಮಯದಲ್ಲಿ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತ್ರೆ ಸೇರುತ್ತದೆ. (ಎಸ್.ಎಸ್.ಜೆ.ಎ.)