ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನವ್ಯ ಕಲೆ
ನವ್ಯ ಕಲೆ - ಇಪ್ಪತ್ತನೆಯ ಶತಮಾನದಲ್ಲಿ ಬೆಳೆದು ಬರುತ್ತಿರುವ ಒಂದು ಹೊಸ ರೀತಿಯ ಕಲಾಪಂಥ. ಯುಗಧರ್ಮಕ್ಕನುಗುಣವಾಗಿ ನವ್ಯ ಕಲಾವಿದನ ಮನೋಧರ್ಮವೂ ಆತನ ಕೃತಿಗಳ ಜಾಡೂ ಬದಲಾದ್ದನ್ನು ಮುಖ್ಯವಾಗಿ ಇಲ್ಲಿ ಗಮನಿಸಬೇಕಾಗುತ್ತದೆ. ಶೈಲಿಯ ದೃಷ್ಟಿಯಿಂದ ಮಾತ್ರವಲ್ಲದೆ, ಕಲಾವಸ್ತುವಿನ ಆಯ್ಕೆ, ನಿರೂಪಣ ವಿಧಾನ, ಧ್ಯೇಯ ಧೋರಣೆಗಳಲ್ಲೂ ಈ ಹೊಸತನ ಕಾಣುತ್ತದೆ. ಅಷ್ಟೇ ಅಲ್ಲದೆ ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಲೌಕಿಕ ಬದಲಾವಣೆಗಳೂ ನವ್ಯಕಲೆಯಲ್ಲಿ ಪ್ರತಿಬಿಂಬಿತವಾಗಿರುವುದುಂಟು. ನವ್ಯಕಲೆಯ ಧ್ಯೇಯ ಧೋರಣೆಗಳನ್ನು ಇಲ್ಲಿ ಸಂಗ್ರಹವಾಗಿ ನಿರೂಪಿಸಲಾಗಿದೆ.
ಕಳೆದ ಎರಡು ಮಹಾಯುದ್ಧಗಳ ಅನಂತರದಲ್ಲುಂಟಾದ ಔದ್ಯೋಗಿಕ ಕ್ರಾಂತಿ, ತಾಂತ್ರಿಕ ಪ್ರಗತಿ, ಜೀವನ ಸಂಕೀರ್ಣತೆ ಮುಂತಾದವುಗಳಿಂದಾಗಿ ಜೀವನದ ಮೌಲ್ಯಗಳಲ್ಲಿ ಏರುಪೇರಾಗಲು ಆರಂಭವಾಯಿತು. ಈ ಅವಸ್ಥೆಯ ಪ್ರಭಾವ ಸಮಕಾಲೀನ ಪ್ರಜ್ಞೆಯುಳ್ಳ, ಸೂಕ್ಷ್ಮಜೀವಿಯಾದ ನವ್ಯ ಕಲಾವಿದನ ಮೇಲೆ ಗಾಢವಾಗಿ ಆದದ್ದುಂಟು. ತತ್ಪರಿಣಾಮವಾಗಿ ತನ್ನ ಅನಿಸಿಕೆಗಳನ್ನು ಯಥಾವತ್ತಾಗಿ ಪ್ರತಿಬಿಂಬಿಸಲು ಸಮರ್ಥವಾದ ಹೊಸ ಮಾರ್ಗವನ್ನು, ಶೈಲಿ ವಿಧಾನಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದ. ಈ ದಿಶೆಯಲ್ಲಿ ಆಧುನಿಕ ಕಲೆ ಹಲವು ವೇಳೆ ವ್ಯಕ್ತಿನಿಷ್ಠವಾದದ್ದುಂಟು. ಅಂತೆಯೇ ಕ್ಯೂಬಿಸಂ, ಡಾಡಾಯಿಸಂ, ಇಂಪ್ರೆಷನಿಸಂ, ಫ್ಯೂಚರಿಸಂ ಮುಂತಾದ ಪಂಥಗಳು ಹುಟ್ಟಿಕೊಂಡವು. ಸೆಜಾನ್, ಮಾಟೇಮೊನೆ, ಅಟ್ರುಕ್, ವಾನ್‍ಗೊ, ಸ್ವಾರ್ಡೀ ಮುಂತಾದವರು ಇವನ್ನು ಪುರಸ್ಕರಿಸಿದವರು. ಕಾಲಕ್ರಮದಲ್ಲಿ ಈ ಪಂಥ ವಿಶ್ವವ್ಯಾಪಿಯಾಯಿತು. ಅಮೃತ್ ಶೇರ್‍ಗಿಲ್, ಕೆ.ಕೆ.ಹೆಬ್ಬಾರ್ ಮುಂತಾದವರ ಕೃತಿಗಳಲ್ಲಿ ಇದರ ಸೊಬಗನ್ನು ಕಾಣಬಹುದು.
ಸಾಮಾನ್ಯವಾಗಿ ಬಹಿರಂಗ ಇಲ್ಲವೆ ಅಂತರಂಗಕ್ಕೆ ಸಂಬಂಧಪಟ್ಟ ಯಾವುದೊ ಒಂದು ಚಿತ್ರ ಒಂದು ಅನಿಶ್ಚಿತ ಹಾಗೂ ನಿಗೂಢ ರೂಪದಲ್ಲಿ ಒಡಮೂಡಿದರೆ ಅದು ನವ್ಯಕಲೆಯೆನ್ನಿಸಿಕೊಳ್ಳುತ್ತದೆಯೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ ಮಕ್ಕಳ ಕಲೆ ಇಲ್ಲವೆ ಪ್ರಾಗೈತಿಹಾಸಿಕ ಕಲೆ (ಆದಿಮಾನವನ ಕಲೆ) ಇಂದಿನ ನವ್ಯ ಕಲೆಗೆ ಮೂಲ. ಅಂತೂ ನಿಜವಾದ ನವ್ಯಕಲೆಯಲ್ಲಿ ಆತ್ಮಸೌಂದರ್ಯದ ಅಭಿವ್ಯಕ್ತಿಯನ್ನು ಕಾಣಬಹುದು. ಕಾರಣ ಅದು ಅಂತರಂಗದ ಅನುಭವದಿಂದ ಸ್ಫುರಣೆಗೊಂಡ ಒಂದು ಭಾವನಾತ್ಮಕ ಪ್ರಯೋಗ. ಸಹೃದಯನಾದವ ತನ್ನ ಸಂವೇದನೆಗಳೊಂದಿಗೆ ನವ್ಯಕೃತಿಯೊಡನೆ ಸಂವಾದ ಹೂಡುವ ಶಕ್ತಿಸಾಮಥ್ರ್ಯ ಪಡೆದಲ್ಲಿ ಮಾತ್ರ ಅದು ಅರ್ಥಪೂರ್ಣವಾದೀತು. ಅಂತೆಯೇ ನವ್ಯಕಲೆಯನ್ನು ಅರ್ಥಮಾಡಿಕೊಂಡು ಮೆಚ್ಚಲು ವಾಸ್ತವವಾಗಿ ಕಲಾಪ್ರಜ್ಞೆ, ಸೂಕ್ಷ್ಮಸಂವೇದನೆ ಗಾಢವಾಗಿರಬೇಕು.
ನವ್ಯಕಲೆಯಲ್ಲಿ ನಿರೂಪಣೆಗಿಂತ ಹೆಚ್ಚಾಗಿ ಆಕೃತಿ ವರ್ಣ ಹಾಗೂ ಅಭಿವ್ಯಕ್ತಿಗಳ ಮೇಲೆ ಹೆಚ್ಚಿನ ಒತ್ತು ಬಿದ್ದಂತೆ ತೋರುತ್ತದೆ. ಆದಿಮಾನವ ತನ್ನ ಆಲೋಚನೆಗಳನ್ನು ಬಹುಶಃ ಸೂಕ್ಷ್ಮವಾಗಿ ಕೆಲವೊಮ್ಮೆ ಕೇವಲ ಚಿಹ್ನೆಗಳಿಂದ ಅಭಿವ್ಯಕ್ತಿಗೊಳಿಸುತ್ತಿದ್ದಂತೆ ನವ್ಯ ಕಲಾವಿದ ತನ್ನ ಬದುಕಿನ ಎಲ್ಲ ಸಂಕೀರ್ಣತೆಗಳನ್ನು ಅಮೂರ್ತ ಮಾಧ್ಯಮದಲ್ಲಿ, ಸಹೃದಯನಾದವನಿಗೆ ಕಾಣಿಸಬಯಸುತ್ತಾನೆ. ಇದು ಕೆಲವರಿಗೆ ಬಹುಬೇಗನೆ ಅರ್ಥವಾಗದಿರಬಹುದು. ಒಮ್ಮೊಮ್ಮೆ ನವ್ಯ ಕಲೆಯಲ್ಲಿ ಯಾವುದೇ ನಿರ್ದಿಷ್ಟ ವಸ್ತು ಇದ್ದಂತೆಯೇ ತೋರುವುದಿಲ್ಲ ಎಂಬ ಮಾತೂ ನಿಜ. ಕೆಲವೊಮ್ಮೆ ಭವ್ಯವೂ ಅದ್ಭುತವೂ ಆದ ವಿಷಯಗಳು ಕಲ್ಪನಾವಿಹಾರದಂತೆ ಅಮಿತವಾಗಿಯೂ ತೋರಬಹುದು; ಸ್ವಪ್ನಲೋಕದ ಅಗ್ರಾಹ್ಯ ಪ್ರಪಂಚಕ್ಕೆ ಕೊಂಡೊಯ್ಯಲು ಪ್ರಯತ್ನಿಸುವಂತೆ ಕಂಡೀತು. ಅಲ್ಲಿನ ಬಣ್ಣಗಳ ಅದ್ಭುತ ಲೀಲಾಜಾಲ ಬೆರಗುಗೊಳಿಸುವಂಥದು. ಸಾಂಪ್ರದಾಯಿಕ ಕಲೆಯಲ್ಲಿ ಕಾಣುವ ಸೃಷ್ಟೀಕರಣ ಧ್ಯೇಯ ನವ್ಯಕಲೆಯಲ್ಲಿ ಕಾಣದು. ಕಲೆ ಆದರೂ ಅದು ಒಂದು ವಿಶಿಷ್ಟವಾದ ಅನುಭವವನ್ನುಂಟುಮಾಡುತ್ತದೆ ಎಂದಿಷ್ಟೇ ಹೇಳಬಹುದು.
ಹಾಗಾದರೆ ನವ್ಯಕಲೆಯ ಉದ್ದೇಶವೇನು, ಅದು ಸಾರುವ ಸಂದೇಶವಾದರೂ ಏನು, ಎಂದು ಕೇಳುವವರಿಗೆ ಉತ್ತರಿಸುವುದು ಕಷ್ಟ. ಅದು ನಿರ್ದಿಷ್ಟ ಸಂದೇಶ ರಹಿತ ಎನ್ನುವವರೂ ಇದ್ದಾರೆ. ಇಂಥ ಕಲೆ, ಚಮತ್ಕಾರದ ಚಿತ್ರಗಾರಿಕೆ ಇನ್ನೆಷ್ಟು ದಿನ ಉಳಿದೀತು ಎಂದು ಕೇಳುವವರೂ ಇದ್ದಾರೆ. ಅದೇನಿದ್ದರೂ ಸದ್ಯಕ್ಕಂತೂ ಅದರ ನಾವೀನ್ಯವನ್ನು ಕಂಡು ನಾವು ಬೆರಗಾಗುತ್ತೇವೆ. ವಾಸ್ತವವಾಗಿ ನವ್ಯಕಲೆಯ ಮೌಲ್ಯ ಅಡಗಿರುವುವು ಅದು ನಮ್ಮ ಬದುಕಿನ ಮೇಲೆ ಉಂಟುಮಾಡಬಹುದಾದ ವಿಶೇಷವಾದ ಪರಿಣಾಮದಲ್ಲಿ, ಅದು ಎಷ್ಟರಮಟ್ಟಿಗೆ ಶಕ್ತಿಯುತವೂ ಪ್ರಾಮಾಣಿಕವೂ ಆಗಿದೆಯೆನ್ನುವುದರಲ್ಲಿ, ತನ್ನದೇ ಆದ ಚೆಲುವನ್ನು ಎಷ್ಟರಮಟ್ಟಿಗೆ ನೇರವಾಗಿ ನೀಡಬಲ್ಲುದು ಎಂಬುದರಲ್ಲಿ, ನವ್ಯಕಲೆ ಹಿಂದಿನ ಯಾವುದೇ ಕಾಲದ ಕಲೆಗಿಂತಲೂ ಹೆಚ್ಚು ವೈವಿಧ್ಯಮಯ, ಸಂಕೀರ್ಣ, ಕ್ಲಿಷ್ಟ, ಒಮ್ಮೊಮ್ಮೆ ಅಸಂಬದ್ಧ ಎಂದೂ ತೋರಬಹುದು. (ನೋಡಿ- ಚಿತ್ರಕಲೆ) (ಎಚ್.ಆರ್.ಆರ್.ಬಿ.)