ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗೇಗೌಡ, ಹೆಚ್ ಎಲ್

ವಿಕಿಸೋರ್ಸ್ದಿಂದ

ಎಚ್.ಎಲ್.ನಾಗೇಗೌಡ:- ಜಾನಪದ ಕಲೆ ಹಾಗೂ ಕಲಾವಿದರ ಬಗ್ಗೆ ಅಭಿಮಾನ, ಕಳಕಳಿಯುಳ್ಳ ಹಿರಿಯ ಜಾನಪದ ತಜ್ಞ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ, ಜಾನಪದ ಲೋಕದ ರೂವಾರಿ ಹೆಚ್.ಎಲ್.ನಾಗೇಗೌಡ ಅವರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿಯಲ್ಲಿ 1915ರ ಫೆಬ್ರವರಿ 11 ರಂದು ಜನಿಸಿದರು. ಮೈಸೂರಿನಲ್ಲಿ ಬಿ.ಎಸ್.ಸಿ.ಪದವಿಯನ್ನು, ಪೂನಾದಲ್ಲಿ ಕಾನೂನು ಪದವಿಯನ್ನು ಪಡೆದು ನರಸಿಂಹರಾಜಪುರ ಮುನ್ಸೀಫ್ ಕೋರ್ಟ್‍ನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿಜೀವನ ಪ್ರಾರಂಭಿಸಿದ 1946ರಲ್ಲಿ ಎಂ.ಸಿ.ಎಸ್.ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೆವಿನ್ಯೂ ಪ್ರೊಬೇಷನರ್ ಆಗಿ 1960ರಲ್ಲಿ ಐ.ಎ.ಎಸ್.ಅಧಿಕಾರಿಯಾಗಿ ನೇಮಕಗೊಂಡು ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ, ಕಾರ್ಮಿಕ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಆಯುಕ್ತರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ವಿವಿಧ ಹುದ್ದೆಗಳಲ್ಲಿ ಸುಮಾರು 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಹೆಚ್.ಎಲ್ ನಾಗೇಗೌಡರು ಮೂಲತಃ ಕಲಿತದ್ದು ವಿಜ್ಞಾನ ಮತ್ತು ನ್ಯಾಯಶಾಸ್ತ್ರ. ವೃತ್ತಿ ಜೀವನ ಆಡಳಿತ ಕ್ಷೇತ್ರದಲ್ಲಿ ಆಸಕ್ತಿ ಬೆಳೆದದ್ದು ಕನ್ನಡ ಸಾಹಿತ್ಯ ಮತ್ತು ಜಾನಪದದಲ್ಲಿ. ಸೃಜನಶೀಲ ಬರವಣಿಗೆಯಂತೆಯೇ ಇವರ ಅನುವಾದ ಸಾಹಿತ್ಯ ಕೂಡ ಕೇವಲ ರೂಪಾಂತರವಾಗಿರದೆ ಪುನರ್ ಸೃಷ್ಟಿಯನ್ನು ಹೊಂದಿದೆ. `ಪ್ರವಾಸಿ ಕಂಡ ಇಂಡಿಯಾದ ಸಂಪುಟಗಳನ್ನು ನೋಡುವಾಗ ಭಾರತೀಯ ಸಂಸ್ಕøತಿಯ ವೈಭವದ ಚಿತ್ರಣ ಕಣ್ಮುಂದೆ ಸುರುಳಿ ಬಿಚ್ಚಿ ಹರಡಿದಂತೆ ಭಾಸವಾಗುತ್ತದೆ. ಜನಪದ ಭಾಷೆಯನ್ನು ಅದರ ಸತ್ವದೊಂದಿಗೆ ಪರಿಣಾಮಕಾರಿಯಾಗಿ ದುಡಿಸಿಕೊಂಡವರು ಸಂಕೀರ್ಣತೆಯಿಂದ ಹೊರತಾದ, ಪಾಂಡಿತ್ಯ ಭಾರದಿಂದ ನರಳದ ಗ್ರಾಮ್ಯ ನುಡಿಗಟ್ಟುಗಳು, ಪದಪುಂಜಗಳು, ದಟ್ಟ ವಾಸ್ತವಿಕ ಪ್ರಜ್ಞೆಯಿಂದ ಕೂಡಿದ ನಾಗೇಗೌಡರ ಕೃತಿಗಳು ನವಿರಾದ ಹಾಸ್ಯದೊಂದಿಗೆ ರೋಚಕತೆಯನ್ನುಂಟು ಮಾಡುತ್ತವೆ.

ಹೆಚ್.ಎಲ್.ನಾಗೇಗೌಡರ ಜೀವನಾನುಭವದ ವ್ಯಾಪ್ತಿ ಮತ್ತು ವಿಶಾಲತೆಗೆ ಅವರು ರಚಿಸಿರುವ ಸುಮಾರು 40 ಕೃತಿಗಳು ಸಾಕ್ಷಿಯಾಗಿವೆ. ತಾರುಣ್ಯದಲ್ಲಿ ರಚಿಸಿದ ಕವನ ಸಂಕಲನ `ನಾನಾಗುವೆ ಗೀಜಗನಹಕ್ಕಿ ಯಿಂದ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಾಗೇಗೌಡರು ಕಾದಂಬರಿಗಳು, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯದ ಜೊತೆಗೆ ಜಾನಪದ ಸಂಗ್ರಾಹಕರಾಗಿ ಸೋಬಾನೆ ಚಿಕ್ಕಮ್ಮನ ಪದಗಳು, ಪದವದೆ ನಮ್ಮ ಎದೆಯಲ್ಲಿ. ದುಂಡು ಮಲ್ಲಿಗೆ ಹೂ ಬುಟ್ಟೀಲಿ ಬಂದಾವ, ಇತ್ಯಾದಿ ಪ್ರಮುಖ ಸಂಕಲನಗಳನ್ನೂ, ಕರ್ನಾಟಕದ ಸಮಗ್ರ ಜಾನಪದ ಪರಂಪರೆಯನ್ನು ಸ್ಥೂಲವಾಗಿ ಪ್ರತಿಬಿಂಬಿಸುವ ಎಸೆನ್ಷಿಯಲ್ ಆಫ್ ಕರ್ನಾಟಕ ಫೋಕ್ ಲೋರ್ ಕೃತಿಯನ್ನು ಪ್ರೊ|| ಎಚ್.ಎ.ರಾಮಕೃಷ್ಣ ಅವರೊಂದಿಗೆ ಹೊರತಂದಿದ್ದಾರೆ.

ಜಾನಪದ ಸಂರಕ್ಷಣೆ, ಸಂವರ್ಧನೆ, ಪ್ರಚಾರಗಳಿಗೆ ಜೀವನವನ್ನು ಮುಡುಪಾಗಿಟ್ಟಿರುವ, ಜಾನಪದ ಲೋಕದ ನಿರ್ಮಾತೃ ನಾಗೇಗೌಡರನ್ನು ಅರಸಿ ಬಂದಿರುವ ಹಲವಾರು ಪ್ರಶಸ್ತಿ ಪುರಸ್ಕಾರಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗಳು ಪ್ರಮುಖವಾದವುಗಳು.

ಸಮಗ್ರ ಜಾನಪದ ಕೋಶ ರಚಿಸಿ ಜಾನಪದ ಸಿರಿಭುವನ ಸ್ಥಾಪಿಸಿರುವ ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹದಿಂದ ದುಡಿಯುತ್ತಿರುವ ಹಿರಿಯ ಜಾನಪದ ವಿದ್ವಾಂಸರೂ ಖ್ಯಾತ ಸಾಹಿತಿ ಆದ ಎಚ್.ಎಲ್.ನಾಗೇಗೌಡ ಅವರಿಗೆ 2004ನೇ ಸಾಲಿನ ರಾಜ್ಯದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ ಪಂಪ ಪ್ರಶಸ್ತಿಯೂ ಸಂದಿದೆ. *