ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಯಕ ಹಾ ಮಾ

ವಿಕಿಸೋರ್ಸ್ದಿಂದ

ಹಾ.ಮಾ.ನಾಯಕ :-- ೧೨೩೧-೨೦೦೦. ಕನ್ನಡ ಅಂಕಣ ಪ್ರಕಾರಕ್ಕೆ ಘನತೆ, ಗೌರವ, ಕೀರ್ತಿ, ಸಾಹಿತ್ಯಕ ಮೌಲ್ಯ ತಂದುಕೊಟ್ಟ ಪ್ರಸಿದ್ಧ ಸಾಹಿತಿ. `ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ. ಹಾರೋಗದ್ದೆ ಮಾನಪ್ಪ ನಾಯಕ ಎಂಬುದು ಇವರ ಪೂರ್ಣ ಹೆಸರು. ಕನ್ನಡ ನಾಡಿನ ಉದ್ದಗಲಕ್ಕೆ ಹಾಮಾನಾ ಎಂದೇ ಚಿರಪರಿಚಿತರಾಗಿದ್ದರು. ಇವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931 ನವೆಂಬರ್ 12 ರಂದು ಜನಿಸಿದರು. ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಿಯಮ್ಮ. ಎಂಟು ಮಕ್ಕಳ ದೊಡ್ಡ ಕುಟುಂಬದಲ್ಲಿ ಇವರೇ ಹಿರಿಯ ಮಗ. ಬಡತನದಲ್ಲಿ ಬಾಲ್ಯವನ್ನು ಕಳೆದ ಇವರು ಓದಿ ವಿದ್ಯಾವಂತರಾಗಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸವನ್ನು ಶಿವಮೊಗ್ಗೆಯಲ್ಲೂ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲೂ ನಡೆಸಿದರು. ಇವರು ಬಿ. ಎ.ಆನರ್ಸ್ ಮಾಡಿದ ಮೇಲೆ, (1955) ಭಾಷಾವಿಜ್ಞಾನದಲ್ಲಿ ಎಂ.ಎ. ಪಡೆದರು (1958). ಅನಂತರ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪಡೆದರು (1964).

ಅನರ್ಸ್ ಪದವಿ ಪಡೆದ ಮೇಲೆ ಇವರು ತುಮಕೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾದರು (1955). ಅನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಭಾಷಾವಿಜ್ಞಾನದ ರೀಡರ್ ಆದರು (1959). 1961ರಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗಕ್ಕೆ ಬಂದ ಇವರು ಕಾಲಕ್ರಮೇಣ ಪ್ರವಾಚಕರಾಗಿ, 1968ರಲ್ಲಿ ಕನ್ನಡ ಪ್ರಾಧ್ಯಾಪಕರಾದರು. ದೇ.ಜವರೇಗೌಡರ ಅನಂತರ 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು. 1984ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡ ಇವರು ಎರಡು ವರ್ಷಗಳ ಅನಂತರ ತಾತ್ವಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿ ಕನ್ನಡ ಅಧ್ಯಯನ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಮರಳಿದರು. 1991 ಫೆಬ್ರವರಿಯಂದು ನಿವೃತ್ತರಾದರು. ಅನಂತರ ಮೈಸೂರಿನಲ್ಲಿಯೇ ನೆಲೆಸಿದ್ದ ಇವರು 2000 ನವೆಂಬರ್ 10 ರಂದು ನಿಧನ ಹೊಂದಿದರು.

ಹಾ.ಮಾ. ನಾಯಕರು ಹದಿನೈದು ವರ್ಷಗಳ ಕಾಲ (1969-84) ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ದೇ.ಜವರೇಗೌಡರು ಆರಂಭಿಸಿದ ಕನ್ನಡ ವಿಶ್ವಕೋಶ, ಎಪಿಗ್ರಾಫಿಯಾ ಕರ್ನಾಟಿಕ, ಹರಿದಾಸ ಸಾಹಿತ್ಯ ಸಂಪಾದನೆ, ಜಾನಪದ ಗ್ರಂಥಗಳ ಪ್ರಕಟಣೆಯ ಯೋಜನೆಗಳನ್ನು ಮುನ್ನಡೆಸಿದರು. ಜತೆಗೆ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ರೈಟರ್ಸ್ ಅಂಡ್ ದೇರ್ ವಕ್ರ್ಸ್, ಧರ್ಮಶಾಸ್ತ್ರದ ಇತಿಹಾಸ ಹಾಗೂ ಮಹಾಭಾರತ ಸಂಪುಟಗಳನ್ನು ಪ್ರಕಟಿಸಿದರು. ಎಂ.ಆರ್. ಶ್ರೀ. ಅವರ ಲೇಖನಗಳು, ಎಸ್.ಶ್ರೀಕಂಠಶಾಸ್ತ್ರಿಗಳ ಲೇಖನಗಳು, `ಶ್ರೀ ಅವರ ರಚನೆಗಳ ಸಮಗ್ರ ಸಂಪುಟಗಳನ್ನು ಹೊರತಂದರು. ತಮ್ಮ ನಿರ್ದೇಶಕತ್ವದ ಅವದಿಯಲ್ಲಿ 350 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದರು. ಕನ್ನಡದ ಅತಿ ಮಹತ್ವದ ಯೋಜನೆಗಳಲ್ಲಿ ಅಧ್ಯಯನ ಸಂಸ್ಥೆ ಪಾಲ್ಗೊಳ್ಳುವಂತಾಗಿಸಿದರು. ರಚನಾತ್ಮಕ ಹಾಗೂ ಮಹತ್ತ್ವಪೂರ್ಣ ಕೆಲಸಗಳಿಂದ ಕನ್ನಡ ಕಟ್ಟುವ ಕೆಲಸವನ್ನು ನಿರಂತರವಾಗಿಸಿದರು.

ನಾಯಕರು 80ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹದಿನೆಂಟರ ಹರೆಯದಲ್ಲಿ ಪ್ರಕಟಿಸಿದ `ಬಾಳ್ನೋಟಗಳು ಇವರ ಮೊದಲ ಕೃತಿ. ಇದು ಸಾಹಿತಿಗಳ ಮೆಚ್ಚುಗೆಗೂ ಊರವರ ವಿವಾದಕ್ಕೂ ಪಾತ್ರವಾಗಿದ್ದುಂಟು. ಪ್ರಬಂಧ, ಜೀವನಚರಿತ್ರೆ, ವಿಮರ್ಶೆ, ಅನುವಾದ, ಸೂಚಿಸಾಹಿತ್ಯ, ಅಂಕಣ ಪ್ರಕಾರ ಇವು ನಾಯಕರು ಕೃಷಿ ಮಾಡಿದ ಮುಖ್ಯ ಕ್ಷೇತ್ರಗಳು. `"ನಮ್ಮ ಮನೆಯ ದೀಪ "ವಿವಿಧ ಭಾಷೆಗಳಿಗೆ ಅನುವಾದಗೊಂಡು ಮನೆಮಾತಾಗಿರುವ ಲಲಿತ ಪ್ರಬಂಧ ಕೃತಿ. 'ಜಾನಪದ ಸ್ವರೂಪ' ಜಾನಪದದ ವೈಜ್ಞಾನಿಕ ಅಧ್ಯಯನವನ್ನು ಉದ್ಘಾಟಿಸಿದ ಕಿರುಕೃತಿ. ಹಲವಾರು ಮುದ್ರಣ ಕಂಡಿರುವ ಹೊತ್ತಿಗೆ, `ರವೀಂದ್ರನಾಥ ಠಾಕೂರ್ ಒಪ್ಪವಾದ ಒಂದು ಜೀವನಚರಿತ್ರೆ, `ಪ್ರಣಯ ಪದಾವಳಿ' ಮೈಥಿಲಿಯ ವಿದ್ಯಾಪತಿಯ ಹಾಡುಗಳ ಅನುವಾದವಾದರೆ `ಸುನೇರಿ' ಅಮೃತಾಪ್ರೀತಮ್ ಅವರ ಪಂಜಾಬಿ ಕವನಗಳ ಕನ್ನಡ ಅನುವಾದ. ಜಾನಪದ ಗ್ರಂಥಗಳು, ಗೋಕಾಕರ ಗ್ರಂಥಗಳು, ಮಾಸ್ತಿಯವರ ಕೃತಿಗಳನ್ನು ಕುರಿತಂತೆ ಇವರು ಸೂಚಿಗಳನ್ನು ತಯಾರಿಸಿದ್ದಾರೆ. ಈ ಎಲ್ಲವೂ ಹಾ ಮಾ ನಾಯಕರ ಆಸಕ್ತಿಯ ವೈವಿಧ್ಯ, ಬಹುಶ್ರುತತೆಗೆ ಸಾಕ್ಷಿ.

ಸಂಕೀರ್ಣ, ಸಮೀಕ್ಷೆ, ಸಂದರ್ಭ, ಸಂಗ್ರಹ, ಸಂಚಯ, ಸೃಜನ ಮುಂತಾದವು ನಾಯಕರ ಲೇಖನ ಸಂಗ್ರಹಗಳು. ಇವುಗಳಲ್ಲಿ ಆಧುನಿಕ ಕನ್ನಡ ಕೃತಿಗಳ ಬಗ್ಗೆ ಆಧುನಿಕ ಕನ್ನಡ ಸಾಹಿತಿಗಳ ಬಗ್ಗೆ ಬರೆದ ಬರೆಹಗಳಿವೆ. ಇವರಿಗೆ ಸಮಕಾಲೀನ ಭಾರತೀಯ ಸಾಹಿತ್ಯದ ವ್ಯಾಪಕವಾದ ಪರಿಚಯವಿತ್ತು. ಸ್ತವನ, ಸ್ಮರಣ, ಸೊಡರು ಮುಂತಾದ ಸಂಗ್ರಹಗಳಲ್ಲಿ ಇಂಥ ದೃಷ್ಟಿಯ ಹಾಗೂ ಭಾರತೀಯ ಲೇಖಕರನ್ನು ಕುರಿತ ಪರಿಚಯಾತ್ಮಕ ಬರೆಹಗಳಿವೆ. ಗೊರೂರು, ಪರಮೇಶ್ವರಭಟ್ಟ, ಕಾವ್ಯಾನಂದ ಮೊದಲಾದ ಹಿರಿಯರ ಹಾಗೂ ಹಲವಾರು ಕಿರಿಯರ ಪುಸ್ತಕಗಳಿಗೆ ಬರೆದ ಮುನ್ನುಡಿಗಳ ಸಂಕಲನಗಳು ಸಿಂಗಾರ, ಸಂಭ್ರಮ, ಸನಾದಿ, ಸನ್ನುಡಿ, ಸೋಗಿಲು. ಇವು ನಮ್ಮ ಸಾಹಿತಿಗಳನ್ನು ಉತ್ತೇಜಿಸುವ, ಅವರ ಕೃತಿಗಳನ್ನು ಏರು ಬೆಳಕಿನಲ್ಲಿಟ್ಟು ಮುಂದುಮಾಡುವಲ್ಲಿ ಅವರದು ನಿರಂತರ ಪ್ರಯತ್ನ.

ನಾಯಕರ ಸಾಹಿತ್ಯ ಸಾಧನೆಯ ಪ್ರಧಾನವಾದ ಕೃಷಿ ಇವರ ಅಂಕಣ ಸಾಹಿತ್ಯ. ಶಿವಮೊಗ್ಗೆಯ `ನಂದಿನಿ ಮಾಸಪತ್ರಿಕೆಗೆ ತಮ್ಮ ಹತ್ತೊಂಬತ್ತರ ಹರಯದಲ್ಲೇ ಇವರು ಪೂರ್ಣಿಮೆಗೆ ಪತ್ರಗಳು ಎಂಬ ಶೀರ್ಷಿಕೆಯಲ್ಲಿ ಅಂಕಣ ಬರೆಯುತ್ತಿದ್ದರು. ಅನಂತರ `ಕನ್ನಡಪ್ರಭ, ದಿನಪತ್ರಿಕೆಯ "ಸಾಹಿತ್ಯ ಸಲ್ಲಾಪ" ಅಂಕಣ ಇವರಿಗೆ ಪ್ರಸಿದ್ಧಿ, ಗೌರವ ತಂದುಕೊಟ್ಟಿತು. ಪ್ರಜಾಮತದ ಹಾ ಮಾ ನಾಯಕ ಬರೆಯುತ್ತಾರೆ. ಪ್ರಜಾವಾಣಿಯ `ಸಂಪ್ರತಿ, ಗ್ರಂಥಲೋಕದ `ತಿಂಗಳ ಪುಸ್ತಕ ಇವರಿಗೆ ವಿಪುಲ ಖ್ಯಾತಿ ತಂದುಕೊಟ್ಟಿತು. ತರಂಗ, ಇಂಚರ, ಸಂಕೇತ, ಕರ್ಮವೀರ, ಸುಧಾ ನಿಯತಕಾಲಿಕೆಗಳಲ್ಲೂ ಇವರು ಬರೆದರು. ಸಾಹಿತಿಯೊಬ್ಬರು ಇಷ್ಟೊಂದು ಪತ್ರಿಕೆಗಳಿಗೆ ಹಲವು ವರ್ಷ ಅಂಕಣ ಬರೆದ ನಿದರ್ಶನ ಮತ್ತೊಂದು ಭಾಷೆಯಲ್ಲಿಲ್ಲ. ನಾಯಕರ ಅಂಕಣಗಳು ಬಹುಶ್ರುತತೆಯ, ವ್ಯಾಪಕ ವ್ಯಾಸಂಗದ ತೀಕ್ಷ್ಣ ಚಿಂತನೆಯ, ತೀವ್ರ ಕನ್ನಡ ಭಾಷಾಭಿಮಾನದ ಬಲದಿಂದ ಸತ್ತ್ವಯುತವಾಗಿದ್ದವು. ಮೋಹಕವಾದ ಶೈಲಿ, ಆಕರ್ಷಕವಾದ ನಿರೂಪಣೆ, ವಿಚಾರ ಸಮೃದ್ಧಿಗಳಿಂದ ಅವು ತುಂಬಿಕೊಂಡಿರುತ್ತಿದ್ದವು. ಜಗತ್ತಿನಭಾರತದಕರ್ನಾಟಕದ ಲೇಖಕರು ಕಲಾವಿದರು ಕೃತಿಗಳು ಸಾಂಸ್ಕøತಿಕ ಸಂಘಸಂಸ್ಥೆಗಳು ಮಾತ್ರವಲ್ಲದೆ ವಾರದ ಆಗುಹೋಗುಗಳು ಸಾಮಾನ್ಯ ಓದುಗನಿಗೆ ಇದರ ಮೂಲಕ ಪರಿಚಯವಾಗುತ್ತಿತ್ತು. ಲಲಿತ ಪ್ರಬಂಧದ ಚೌಕಟ್ಟು, ವ್ಯಕ್ತಿ ಚಿತ್ರದ ರೇಖೆಗಳು, ಆತ್ಮಕಥೆಯ ಬಿತ್ತಿ ಅಲ್ಲಿ ಮೇಳವಿಸಿದ್ದುವು. ಸಾಂಸ್ಕøತಿಕ ವಾರಚರಿ, ಸಮೂಹ ಮಾಧ್ಯಮ ಶಿಕ್ಷಣ ಲೇಖನ ಎಂದೂ ಈ ಬರೆಹಗಳನ್ನು ವಿಮರ್ಶಕರು ಹೊಗಳಿದ್ದಾರೆ. ಸಾಹಿತ್ಯ ಸಲ್ಲಾಪ, ಸಲ್ಲಾಪ, ಸಮೂಹ, ಸಂಪರ್ಕ, ಸಾಂಪ್ರತ, ಸಂವಹನ, ಸಂಪ್ರತಿ ಇವು ಇವರ ಕೆಲವು ಮುಖ್ಯ ಅಂಕಣ ಬರೆಹ ಸಂಪುಟಗಳು. ಇವರ `ಸಂಪ್ರತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ (1989). ಅಖಿಲ ಭಾರತ ಮಟ್ಟದಲ್ಲಿ ಅಂಕಣ ಬರೆಹಗಳನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪರಿಗಣಿಸಿದ್ದು ಕನ್ನಡಕ್ಕೆ ಸಂದ ಗೌರವವಾಗಿದೆ.

ಆಕಾಶವಾಣಿಯ ಚಿಂತನಚೆನ್ನುಡಿಗಳನ್ನು ಪ್ರಸಾರ ಮಾಡಿ ಆ ಚಿಂತನ ಪ್ರಬಂಧಗಳನ್ನು ಜನಪ್ರಿಯಗೊಳಿಸಿ ಒಂದು ಪ್ರಕಾರವಾಗಿ ಸ್ಥಾಪಿಸಿದ ಕೀರ್ತಿಯಲ್ಲಿ ಅಗ್ರಪಾಲು ನಾಯಕರಿಗೆ ಸಲ್ಲುತ್ತದೆ. ಸೌಜನ್ಯ, ಆತ್ಮವಿಶ್ವಾಸ, ಕರ್ತವ್ಯ, ಮಹತ್ತಾಕಾಂಕ್ಷೆ, ಪ್ರೀತಿ, ಅಧಿಕಾರ, ಸ್ನೇಹ, ಓದುಗಾರಿಕೆ, ಸ್ಥಿತಪ್ರಜ್ಞತೆ, ಭ್ರಷ್ಟಾಚಾರ, ಸಂಸ್ಕøತಿ ಕುರಿತ ಇವರ ಬಾನುಲಿ ಭಾಷಣಗಳು ಅಡಕವೂ ಅನನ್ಯವೂ ಆಗಿವೆ. ಹಲವೆಡೆ ತಾವು ಓದಿದ, ಕೇಳಿದ, ಕಂಡು ಅನುಭವಿಸಿದ ಸಂಗತಿಗಳ ಚಿಂತನೆಗಳ ಎಳೆಗಳನ್ನೂ ಇವರು ಇಲ್ಲಿ ನೇಯ್ದಿದ್ದಾರೆ. ಸೂಲಂಗಿ, ಸಂಗತಿ, ಸಂಪಣ, ಸುರಗಿ ಇವು ಮನನೀಯ ಸಂಕಲನಗಳು. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ರಾಜ, ರಾಣಿ, ರಾಜಕುಮಾರ ಎಲ್ಲ ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು ಎಂದು ಹೇಳಿದ ನಾಯಕರು ಕನ್ನಡದ ಸ್ಥಾನಮಾನ ಕುರಿತಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಹೋರಾಡಿದವರು. ಇಂಗ್ಲಿಷ್ ಮೋಹ, ಹಿಂದಿಯ ಹೇರಿಕೆ, ಸಂಸ್ಕøತಕ್ಕಿದ್ದ ಸವಲತ್ತುಗಳಿಂದ ಕನ್ನಡಕ್ಕೆ ಆಗುತ್ತಿದ್ದ ಅನ್ಯಾಯವನ್ನು ಇವರು ಯೋಚಿಸಿ, ತರ್ಕಿಸಿ ವಾದಿಸುತ್ತಿದ್ದರು. ಶಿವಮೊಗ್ಗೆಯ ಸಾಹಿತ್ಯ ಸಮ್ಮೇಳನದಲ್ಲಿ ಇವರು ಮಂಡಿಸಿದ ಒಂದು ನಿರ್ಣಯ ಗೋಕಾಕ್ ಚಳವಳಿಗೆ(೧೯೮೨) ಕಾರಣವಾಯಿತು. ಕನ್ನಡದ ಕಾರ್ಯಪ್ರಸಾರಗಳಿಗೆ, ಏಳಿಗೆ ಬೆಳವಣಿಗೆಗಳಿಗೆ ಬಿ.ಎಂ. ಶ್ರೀ., ಅ.ನ.ಕೃ., ಅವರ ಅನಂತರ ಕರ್ನಾಟಕದಾದ್ಯಂತ ಸುತ್ತಾಡಿದವರು ಹಾ.ಮಾ.ನಾಯಕರು. ಕೆಲವು ಸಂದರ್ಭದಲ್ಲಿ ನಾಯಕರು ಕನ್ನಡಕ್ಕೆ ಏಕವ್ಯಕ್ತಿ ಕಾವಲು ಸಮಿತಿಯಂತೆಯೂ ಇದ್ದರು.

ನಾಯಕರು ಹಲವು ಬಗೆಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಇವು ಕೆಲವು ಮುಖ್ಯ ಪ್ರಶಸ್ತಿಗಳು. ಇವರ `ಸಲ್ಲಾಪಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, `ಸಂಪ್ರತಿಗೆ ಐಬಿಎಚ್. ಎಜುಕೇಷನ್ ಟ್ರಸ್ಟ್ ಪ್ರಶಸ್ತಿ ಲಬಿsಸಿದ್ದವು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಇವರು ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಜ್ಞಾನಪೀಠ, ಬಿ.ಡಿ. ಗೋಯೆಂಕಾ ಬಹುಮಾನ ಮುಂತಾದ ಸಮಿತಿಗಳಲ್ಲಿದ್ದರು. ದೇಶವಿದೇಶಗಳ ಸಂಕಿರಣಗಳಲ್ಲಿ ಭಾಗವಹಿಸಿದ್ದ ಇವರು ಬೀದರ್‍ನಲ್ಲಿ ನಡೆದ 57ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಶಿಷ್ಯರು, ಮಿತ್ರರು, ಅಭಿಮಾನಿಗಳು ಇವರಿಗೆ 60 ವರ್ಷಗಳು ತುಂಬಿದಾಗ "ಮಾನ "ಎಂಬ ಅಭಿನಂದನ ಗ್ರಂಥ ಸಮರ್ಪಿಸಿದರು (1992). (ಎನ್.ಎಸ್.ಟಿ.)