ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಯಿಕೆಮ್ಮು
ನಾಯಿಕೆಮ್ಮು ಮೇಲೆ ಮೇಲೆ ಒತ್ತಿ ಬರುವ ಕೆಮ್ಮು ಮತ್ತು ಕೆಮ್ಮಿ ಆದ ಬಳಿಕ ಕೂಗುಸಿರು ಇವು ವಿಶಿಷ್ಟ ಲಕ್ಷಣಗಳಾಗಿರುವ ಬೇನೆ (ಹ್ವೂಪಿಂಗ್ ಕಾಫ್). ಸಾಮಾನ್ಯವಾಗಿ ಐದು ವರ್ಷಗಳಿಗೆ ಒಳಪಟ್ಟ ಮಕ್ಕಳಿಗೆ ಸೀಮಿತ. ಕೆಟ್ಟ ಕೆಮ್ಮು, ಕುಕ್ಕಲು ಕೆಮ್ಮು ಪರ್ಯಾಯನಾಮಗಳು. ಈ ಕಾಯಿಲೆ ಇರುವ ಮಗು ಕೆಮ್ಮುವಾಗ ನಾಲಿಗೆಯನ್ನು ಸ್ವಲ್ಪ ಮಟ್ಟಿಗೆ ಹೊರಚಾಚಿ ಒಂದೇ ಸಮನೆ ಮುಖ ನೀಲಿಕಟ್ಟುವತನಕವೂ ಕೆಮ್ಮಿ ಆಮೇಲೆ ಹೂ ಊ ಊಪ್ ಎಂದು ಶಬ್ದ ಮಾಡುತ್ತ ದೀರ್ಘವಾದ ಉಸಿರು ಎಳೆದುಕೊಳ್ಳುತ್ತದೆ. ಆ ವೇಳೆ ಧ್ವನಿಪಟಲಗಳು ಅರೆ ಮುಚ್ಚಿಕೊಂಡಿರುವುದು ಇಂಥ ವಿಶಿಷ್ಟ ಶಬ್ದಕ್ಕೆ ಕಾರಣ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಎಳೆಗೂಸಿನಲ್ಲಿ ಈ ತರಹ ಸದ್ದಾಗದೇ ಇರಬಹುದು. ಕೆಲವು ರೋಗಿಗಳಲ್ಲಿ ಕೆಮ್ಮಿನ ಬದಲು ಬರೀ ಸೀನುಗಳೇ ಕಾಣಿಸಿಕೊಳ್ಳಬಹುದು. ಕೆಮ್ಮು ಅತಿಯಾದರೆ ಕೊನೆಯಲ್ಲಿ ವಾಂತಿಯೂ ಆಗಬಹುದು. ಮೈಗೆ ಆಹಾರ ದಕ್ಕದಷ್ಟು ವಾಂತಿ ಕೂಡ ಸಂಭಾವ್ಯ. ಒಂದು ವರ್ಷ ಒಳಗಿನ ಮಕ್ಕಳಲ್ಲಿ ಈ ರೋಗ ಮಾರಕವಾಗಿ ಪರಿಣಮಿಸುವುದುಂಟು.
ರೋಗಿ ಕೆಮ್ಮಿದಾಗ ಹೊರಬೀಳುವ ಎಂಜಲಿನ ತುಂತುರುಗಳಲ್ಲಿ ರೋಗಾಣುಗಳಿದ್ದು ಅವನ್ನು ಒಳಗೊಂಡ ವಾಯುವನ್ನು ಸೇವಿಸಿದ ಮಗುವಿಗೆ ನಾಯಿಕೆಮ್ಮು ಹರಡುತ್ತದೆ. ಇದು ಪ್ರಪಂಚದಲ್ಲಿ ಸರ್ವವ್ಯಾಪಿ. ಇದರಿಂದ ಅನೇಕ ತೀವ್ರ ತರಹ ದುಷ್ಪರಿಣಾಮಗಳಾಗಬಹುದಾದರೂ ಇದು ಸಾಮಾನ್ಯವಾಗಿ ತಾನೇ ಪ್ರಾಣಾಂತಿಕವೇನೂ ಅಲ್ಲ. ಆ ದುಷ್ಪರಿಣಾಮಗಳೆಂದರೆ ನಾಲಗೆಯ ಕೆಳಗೆ ಹುಣ್ಣು, ನ್ಯೂಮೋನಿಯ, ಕಣ್ಣಿನೊಳಗೆ ರಕ್ತಸ್ರಾವ, ಛಾಯಾಗ್ರಾಹಕ ಪೊರೆ ಕಿತ್ತುಹೋಗುವುದು, ಗೂದೆ ಹೊರಚಾಚಿಕೊಳ್ಳುವುದು, ಅಂಡವಾಯು, ಮೆದುಳಿನಲ್ಲಿ ರಕ್ತಸ್ರಾವದಿಂದ ಅಥವಾ ಆಕ್ಸಿಜನ್ನಿನ ಕೊರತೆಯಿಂದ ಅದಿರು ವಾಯು ಇತ್ಯಾದಿ. ಮಿದುಳ ಮೇಲಿನ ಪರಿಣಾಮಗಳ ಪೈಕಿ ಕೆಲವು ಶಾಶ್ವತವಾಗಿ ನೆಲೆನಿಲ್ಲಬಹುದು.
ನಾಯಿಕೆಮ್ಮನ್ನು ವಾಸಿಮಾಡಲು ಕ್ಲೋರೋಮೈಸೆಟಿನ್, ಟೆಟ್ರಸೈಕ್ಲಿನ್ ಮತ್ತು ಎರಿತ್ರೋಮೈಸಿನುಗಳಲ್ಲಿ ಯಾವುದಾದರೂ ಒಂದು ಔಷಧಿಯನ್ನು ಉಪಯೋಗಿಸುತ್ತಾರೆ. ಆದರೆ ಇವು ಯಾವುವೂ ಇದನ್ನು ಗುಣಪಡಿಸಬಲ್ಲವೆಂಬ ಭರವಸೆ ಇಲ್ಲ. ಮಾನವಜನ್ಯ ಅಧಿಕ ಬಲಯುಕ್ತ ಪ್ರತಿರೋಧಕ ಲಸಿಕೆ ಮತ್ತು ರೋಗಾಣುಬಂಧಕ ಗ್ಯಾಮ ಗ್ಲಾಬ್ಯುಲಿನ್ ಇವುಗಳ ಪ್ರಯೋಗಗಳು ನಡೆದಿವೆ. ಫಲಿತಾಂಶವನ್ನು ಕಾದು ನೋಡಬೇಕು. ಪರಿಸ್ಥಿತಿ ಹೀಗಿರುವಾಗ ಚಿಕಿತ್ಸೆಗಿಂತ ರೋಗ ಅಂಟದಂತೆ ರಕ್ಷಣೆ ಒದಗಿಸುವುದೇ ಮೇಲು. ಮಗು ಹುಟ್ಟಿದ ಮೂರು ತಿಂಗಳಲ್ಲೇ ಆರಂಭಿಸಿ ತ್ರಿವಿಧ ಲಸಿಕೆಯನ್ನು ಚುಚ್ಚುಮದ್ದಾಗಿ ತಿಂಗಳಿಗೊಂದರಂತೆ ಮೂರು ತಿಂಗಳು ಬಳಸುವುದರಿಂದ ಮಗುವಿಗೆ ರಕ್ಷಣೆ ಕೊಡಬಹುದು. ಈ ಲಸಿಕೆ ನಾಯಿಕೆಮ್ಮು, ಡಿಫ್ತೀರಿಯಾ ಮತ್ತು ಧನುರ್ವಾಯು ಈ ಮೂರು ಕಾಯಿಲೆಗಳನ್ನು ತಡೆಯಬಲ್ಲುದು. ಚತುರ್ವಿಧ ಚುಚ್ಚು ಲಸಿಕೆಯನ್ನೂ ಉಪಯೋಗಿಸಬಹುದು. ಇದರಿಂದ ಪೋಲಿಯೋಮಯ ಲೈಟಿಸ್ ರೋಗವನ್ನು ತಡೆಯಬಹುದು. (ಜಿ.ಆರ್.ಸಿ.)