ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರ್ಮನ್ನರು

ವಿಕಿಸೋರ್ಸ್ದಿಂದ

ಇಂಗ್ಲೆಂಡಿನಲ್ಲಿ ಊಳಿಗಮಾನ್ಯ ಪದ್ಧತಿ ಜಾರಿಗೆ ತಂದವನು ವಿಲಿಯಮನೇ. ಅಂದಿನಿಂದ ಸಮಾಜಕ್ಕೆ ಭೂಮಿಯೇ ಬುನಾದಿಯಾಗಿದೆ. ತನ್ನ ಕಾಲದ ಭೂಪದ್ಧತಿಯನ್ನು ಈತ ಒಂದು ಪುಸ್ತಕದಲ್ಲಿ ಬರೆಸಿಟ್ಟ. ದೇಶದಲ್ಲಿರುವ ಒಟ್ಟು ಜಮೀನು ತೆರಿಗೆ, ಶ್ರೀಮಂತರ ಮನೆಗಳು ಇವುಗಳೆಲ್ಲದರ ಲೆಕ್ಕಾಚಾರವನ್ನು ಅದರಲ್ಲಿ ಬರೆಸಿದ. 1085ರಲ್ಲಿ ಬರೆಸಿದ ಈ ಪುಸ್ತಕ ಡೂಮ್ಸ್ ಡೇ ಬುಕ್ ಎಂದು ಹೆಸರಾಗಿದೆ.

ಸಾಲಿಸ್ಬರಿ ಎಂಬಲ್ಲಿ ಜಮೀನುದಾರರನ್ನು ವಿಲಿಯಮ್ ಬರಮಾಡಿಕೊಂಡು ಅವರಿಂದ ಸ್ವಾಮಿಭಕ್ತಿ ಪ್ರತಿಜ್ಞೆ ಪಡೆದ. ಇದೇ ಸಾಲಿಸ್ಬರಿಯ ಪ್ರಮಾಣ. ಇವನ ಕಾಲದಲ್ಲಿ ಚರ್ಚ್ನಿಂದ ಹಿಡಿದು ನ್ಯಾಯಾಲಯದವರೆಗೆ ಸುಧಾರಣೆಯಾಯಿತು. ದಕ್ಷ ಆಡಳಿತ ಈತನ ಕೊಡುಗೆ.

ಒಂದನೆಯ ಹೆನ್ರಿ ಎರಡನೆಯ ವಿಲಿಯಮ್ನ ಸೋದರ. ಈತನ ಕಾಲದಲ್ಲಿ ಕ್ಯೂರಿಯ ರೀಜಿಸ್ ಎಂಬ ಆಡಳಿತ ಸಭೆ ಅಭಿವೃದ್ಧಿ ಹೊಂದಿತು. ಒಬ್ಬ ಮಠಾಧಿಪತಿಯ ನೇಮಕದ ಪ್ರಶ್ನೆಯಿಂದ ಹೆನ್ರಿಗೂ ಚರ್ಚಿಗೂ ಕಾದಾಟವಾಯಿತು. ಇವನನ್ನು ನ್ಯಾಯಸಿಂಹ ಎಂದು ಕರೆಯುತ್ತಿದ್ದರು.

ಎರಡನೆಯ ಹೆನ್ರಿಯ ಕಾಲದಲ್ಲಿ ಸರ್ಕಾರದ ನ್ಯಾಯಾಲಯಗಳು, ಮತೀಯ ನ್ಯಾಯಾಲಯಗಳು ಎಂಬ ಎರಡು ರೀತಿಯ ನ್ಯಾಯಾಲಯಗಳಿದ್ದವು. ಇವುಗಳ ನಡುವೆ ಬಿಕ್ಕಟ್ಟು ಉಂಟಾಯಿತು. ಚರ್ಚಿನ ನ್ಯಾಯಾಲಯಗಳು ಬೇರೆ ಇದ್ದದ್ದನ್ನು ರಾಜ ಸಹಿಸಲಿಲ್ಲ. ಕ್ಯಾಂಟರ್ಬರಿಯ ಮಹಾ ಮಠಾಧಿಪತಿ ಥಾಮಸ್ ಬೆಕೆಟ್ ಈ ರಾಜನ ಆತ್ಮೀಯ ಗೆಳೆಯ. ಅಂಥವನ ಜೊತೆ ಇವನು ಕಾದಾಡಿ 1164ರಲ್ಲಿ ಕ್ಲಾರೆನ್ಡನ್ ಕಾನೂನನ್ನು ಹೊರಡಿಸಿದ. ಮತೀಯ ನ್ಯಾಯಾಲಯದಲ್ಲಿ ನಡೆದ ಮೊಕದ್ದಮೆಗಳು ಅಂತಿಮವಾಗಿ ರಾಜನ ನ್ಯಾಯಾಲಯಕ್ಕೆ ಬರಬೇಕೆಂಬುದು ಈತನ ಆಜ್ಞೆಯಾಗಿತ್ತು. ಇದಕ್ಕೆ ಒಪ್ಪದ ಥಾಮಸ್ ಬೆಕೆಟ್ ತನ್ನ ಜೀವವನ್ನೇ ತೆತ್ತ (ಬೆಕೆಟ್,-ಥಾಮಸ್-ಎ).

ನ್ಯಾಯದರ್ಶಿ (ಜ್ಯೂರಿ) ಪದ್ಧತಿ ಈತನ ಕಾಲದ್ದು. ಈ ಪದ್ಧತಿಯನ್ನು ಈತ ಆರ್ಥಿಕ ವ್ಯವಹಾರ ಮತ್ತು ಆಡಳಿತಕ್ಕೆ ಉಪಯೋಗಿಸಿಕೊಂಡ (ಇಂಗ್ಲಿಷ್-ನ್ಯಾಯ).

ಸಂಪ್ರದಾಯ ನ್ಯಾಯಕ್ಕೆ ಇಂಗ್ಲೆಂಡಿನ ಹೆನ್ರಿಯ ನ್ಯಾಯಾಲಯ ಭದ್ರ ನೆಲಗಟ್ಟಾಗಿತ್ತು. ಈತನ ಅನಂತರ ಬಂದ ಒಂದನೆಯ ರಿಚರ್ಡ್ ಮುಸಲ್ಮಾನರ ವಿರುದ್ಧ ಧರ್ಮಯುದ್ಧದಲ್ಲಿ ಭಾಗವಹಿಸಿದ್ದ. ರಿಚರ್ಡನ ಅನಂತರ ಜಾನ್ ಪಟ್ಟಕ್ಕೆ ಬಂದ. ಈತ ಕ್ರೂರಿಯೂ ಅಸಮರ್ಥನೂ ಆಗಿದ್ದ. ಧರ್ಮಗುರುಗಳು ಹಾಗೂ ಶ್ರೀಮಂತರುಗಳ ಜೊತೆ ಈತ ಸತತವಾಗಿ ಹೋರಾಡಿದ. ಪರಿಣಾಮವಾಗಿ ಈ ಜನ ತಮ್ಮ ಹಕ್ಕುಗಳಿಗಾಗಿ ಚಳವಳಿ ಹೂಡಿದರು. ಮ್ಯಾಗ್ನಕಾರ್ಟ ಆಥವಾ ಮಹಾಸನ್ನದಿಗೆ ದೊರೆ ಕೊನೆಗೂ ಸಹಿ ಹಾಕಬೇಕಾಯಿತು. ಮ್ಯಾಗ್ನಕಾರ್ಟ ಪ್ರಜಾಪ್ರಭುತ್ವದ ತಳಹದಿ, ಸ್ವಾತಂತ್ರ್ಯದ ಸಾಕ್ಷಾತ್ಕಾರ ವಿಚಾರಣೆ ಇಲ್ಲದೆ ಸೆರೆ. ಅನ್ಯಾಯದ ತೆರಿಗೆ ಇವುಗಳ ವಿರುದ್ಧ ರಾಜರಿಂದ ಬರೆಸಿಕೊಂಡ ಈ ಸನ್ನದು ಇಂಗ್ಲೆಂಡಿನ ಸಂವಿಧಾನದ ಮೊದಲ ಮಹಾ ದಾಖಲೆಯೆನಿಸಿದೆ.

ಮೊದಲ ಎಡ್ವರ್ಡ್ನ ಕಾಲದಲ್ಲಿ ಕಾಯಿದೆಗಳ ಸುರಿಮಳೆಯೂ ಆಯಿತು. ಪಾರ್ಲಿಮೆಂಟ್ ಇವನ ಕಾಲದಲ್ಲಿ ಪ್ರಾರಂಭವಾಯಿತು. ಪಾರ್ಲಿಮೆಂಟಿನ ಒಪ್ಪಿಗೆಯಿಲ್ಲದೆ ಯಾವುದೇ ಮಸೂದೆಯನ್ನೂ ಜಾರಿಗೆ ತರುವುದು ಕಷ್ಟವಾಗುತ್ತ ಬಂತು. ಅತ್ತ ಪಾರ್ಲಿಮೆಂಟ್ ಶಕ್ತವಾಗುತ್ತ ಬಂತು. ರಾಜನ ಮಂತ್ರಿಗಳನ್ನು ಮಹಾಭಿಯೋಗಕ್ಕೆ ಗುರಿಮಾಡುವ ಅಧಿಕಾರ ಪಾರ್ಲಿಮೆಂಟಿಗೆ ಲಭಿಸಿತು. ಮೂರನೆಯ ಎಡ್ವರ್ಡನ ಕಾಲಕ್ಕೆ ಪಾರ್ಲಿಮೆಂಟಿನ ಬೆಳೆವಣಿಗೆ ಚೆನ್ನಾಗಿ ಆಯಿತು. ಹೌಸ್ ಆಫ್ ಕಾಮನ್ಸ್, ಹೌಸ್ ಆಫ್ ಲಾಡ್ರ್ಸ್ಗಳ ರಚನೆ ಈ ಕಾಲದಲ್ಲಿ ಆಯಿತು.

ಮೂರನೆಯ ಎಡ್ವರ್ಡ್ನ ಕಾಲದಲ್ಲಿ ಫ್ರಾನ್ಸಿನೊಡನೆ ನೂರು ವರ್ಷಗಳ ಯುದ್ಧ ಆರಂಭವಾಯಿತು. ಇದು ಅವ್ಯಾಹತ ಹೋರಾಟವಲ್ಲ; ಆಗೊಮ್ಮೆ ಈಗೊಮ್ಮೆ ನೂರು ವರ್ಷಗಳ ತನಕ ನಡೆಯಿತು. ಇಂಗ್ಲೆಂಡಿನ ರಾಜರು ಫ್ರೆಂಚ್ ರಾಜರಿಗೆ ಮರ್ಯಾದೆ ತೋರಿಸಬೇಕು ಎಂಬ ಹೇಳಿಕೆ ಈ ಯುದ್ಧಕ್ಕೆ ಪ್ರೇರಣೆಯಾಯಿತು. ಇಂಗ್ಲೆಂಡ್ ದೇಶಕ್ಕೆ ಸ್ಕಾಟ್ಲೆಂಡ್ ವಿರೋಧವಾಗಿತ್ತು. ಅದಕ್ಕೆ ಫ್ರಾನ್ಸ್ ಸಹಾಯ ನೀಡಿತು. ಇಂಗ್ಲೆಂಡ್ ಇದಕ್ಕಾಗಿ ಸಿಡಿದೆದ್ದಿತು. ಪರಿಣಾಮವಾಗಿ ನೂರು ವರ್ಷಗಳ ಯುದ್ಧ ನಡೆಯಿತು. ಮೂರನೆಯ ಎಡ್ವರ್ಡ್, ಐದನೆಯ ಹೆನ್ರಿ ಮತ್ತು ಆರನೆಯ ಹೆನ್ರಿ ಈ ಯುದ್ಧದ ಚಾಲಕರಾದರು.

ಆರನೆಯ ಹೆನ್ರಿಯ ಆಸ್ಥಾನದಲ್ಲಿದ್ದ ಎರಡು ಬಣಗಳ ನಡುವೆ ಯುದ್ಧದ ಬಗ್ಗೆ ನಿಶ್ಚಿತ ನಿಲುವು ಇರಲಿಲ್ಲ. ಒಂದು ಗುಂಪಿಗೆ ಯುದ್ಧ ಬೇಕಿತ್ತು. ಮತ್ತೊಂದು ಶಾಂತಿಗಾಗಿ ಹಂಬಲಿಸುತ್ತಿತ್ತು. ಹೆನ್ರಿಯ ಹೆಂಡತಿ ಮಾರ್ಗರೆಟ್ ಫ್ರಾನ್ಸಿನವಳು. ಆದ್ದರಿಂದ ಅವಳಿಗೆ ಯುದ್ಧ ಬೇಡವಾಗಿತ್ತು. ಲಂಕಾಸ್ಟ್ರಿಯನ್ ಪಂಗಡಕ್ಕೆ ಯುದ್ಧ ಬೇಕಿತ್ತು. ಒಟ್ಟಿನಲ್ಲಿ ಇಂಗ್ಲಿಷರಿಗೆ ನೂರು ವರ್ಷಗಳ ಯುದ್ಧದಲ್ಲಿ ಅಪಜಯವಾಯಿತು.

ಲಂಕಾಸ್ಟ್ರಿಯನ್ನರನ್ನು ರಾಜ್ಯ ಗದ್ದುಗೆಯಿಂದ ಇಳಿಸುವುದು ಯಾರ್ಕರ ಗುರಿಯಾಗಿತ್ತು. ಜೊತೆಗೆ ಫ್ರಾನ್ಸಿನೊಡನೆ ದೀರ್ಘ ಹೋರಾಟ ಮಾಡಿ ಇಂಗ್ಲಿಷರಿಗೆ ಬೇಸರ ಬಂದಿತ್ತು. ಆರನೆಯ ಹೆನ್ರಿಗೆ ಇದ್ದ ಒಬ್ಬ ಮಗ ಪಟ್ಟಕ್ಕೆ ಬರಬೇಕಾದರೆ ಲಂಕಾಸ್ಟ್ರಿಯನ್ನರೊಡನೆ ಯುದ್ಧ ಅನಿವಾರ್ಯವಾಗಿತ್ತು. ಯಾರ್ಕರು ಬಿಳಿಗುಲಾಬಿಯನ್ನೂ ಲಂಕಾಸ್ಟ್ರಿಯನ್ನರು ಕೆಂಪು ಗುಲಾಬಿಯನ್ನೂ ತಮ್ಮ ಚಿಹ್ನೆಗಳಾಗಿ ಉಪಯೋಗಿಸಿದ್ದರಿಂದ ಇವರ ನಡುವೆ ನಡೆದ ಯುದ್ಧಕ್ಕೆ ಗುಲಾಬಿ ಯುದ್ಧವೆಂದು ಹೆಸರಾಯಿತು. ಈ ಯುದ್ಧ ಇಂಗ್ಲೆಂಡಿನ ಶ್ರೀಮಂತರ ಪ್ರಾಬಲ್ಯವನ್ನು ಮುರಿಯಿತು. ನಾರ್ತಾಂಪ್ಟನ್ನಿನಲ್ಲಿ ನಡೆದ ಹೋರಾಟ ಲಂಕಾಸ್ಟ್ರಿಯನ್ನರನ್ನು ಪುಡಿಪುಡಿ ಮಾಡಿತು. ಯಾರ್ಕ್ ಮತ್ತು ಅವರ ಅನುಯಾಯಿಗಳು ಸಾವಿಗೆ ಈಡಾದರು.

ಈ ವೇಳೆಗೆ ಇಟಲಿಯಲ್ಲಿ ಪ್ರಾರಂಭವಾಗಿದ್ದ ಜ್ಞಾನ ಪುನರುಜ್ಜೀವನ ಚಳವಳಿ ಇಂಗ್ಲೆಂಡಿಗೂ ಹಬ್ಬಿತ್ತು. ಮಾನವರಲ್ಲಿ ಬದುಕನ್ನು ಪ್ರೀತಿಸುವಂತೆ, ಸೌಂದರ್ಯವನ್ನು ಆರಾಧಿಸುವಂತೆ, ಮಾನವೀಯತೆಯನ್ನು ಹುಡುಕುವಂತೆ ಇದು ಪ್ರೇರಣೆ ನೀಡಿತು. 4ನೆಯ ಎಡ್ವರ್ಡ್ನ ಕಾಲದಲ್ಲಿ ವಿಲಿಯಂ ಕ್ಯಾಕ್ಸ್ ಟನ್ ಒಂದು ಮುದ್ರಣಾಲಯವನ್ನು ಸ್ಥಾಪಿಸಿದ ಅನೇಕ ಗ್ರಂಥಗಳು ಹೊರಬಂದವು. ಈ ನವೋದಯದ ಕಾಲದಲ್ಲಿ ನವೀನ ಶೈಲಿಯ ಕಲೆ, ನವೀನ ಮತಧರ್ಮ, ಸಾಹಿತ್ಯ ವಿಜ್ಞಾನ ಹೊಸ ಹೊಸ ಭೂಸಂಶೋಧನೆ ಇವೆಲ್ಲ ಸಂಭವಿಸಿದವು