ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಗಿನಿ

ವಿಕಿಸೋರ್ಸ್ದಿಂದ

ನ್ಯೂಗಿನಿ - ಗ್ರೀನ್‍ಲೆಂಡನ್ನು ಬಿಟ್ಟರೆ ಪ್ರಪಂಚದ ಎರಡನೇ ದೊಡ್ಡ ದ್ವೀಪ. ಭೂವೈಜ್ಞಾನಿಕವಾಗಿ ಆಸ್ಟ್ರೇಲಿಯ ಖಂಡದ ವಿಸ್ತರಣೆಯೆಂದೇ ಇದನ್ನು ಭಾವಿಸಬಹುದು. ಇದು ಆಸ್ಟ್ರೇಲಿಯದ ಉತ್ತರಕ್ಕೆ ಅತ್ಯಂತ ಹತ್ತಿರವೆಂಬಲ್ಲಿ ಕೇವಲ ಸುಮಾರು 160ಕಿಮೀ ದೂರದಲ್ಲಿದೆ. ವಾಯವ್ಯ-ಆಗ್ನೇಯವಾಗಿ, ದ. ಅ. 00 19 100 43 ಮತ್ತು ಪೂರೇ. 1300 45 1500 48 ನಡುವೆ ವಿಸ್ತರಿಸಿರುವ ನ್ಯೂ ಗಿನಿ ದ್ವೀಪ ಆಸ್ಟ್ರೇಲಿಯದ ಮೇಲೆ ಕಾಲೂರಿ ನಿಂತು ಇಂಡೋನೇಷ್ಯ ದ್ವೀಪಗಳ ಕಡೆಗೆ ಕೊಕ್ಕು ಚಾಚಿದ ಒಂದು ಭಾರಿ ಪಕ್ಷಿಯಂತೆ ತೋರುತ್ತದೆ. ಸುಮಾರು 2,400 ಕಿಮೀ. ಉದ್ದವಾಗಿಯೂ ಮಧ್ಯದಲ್ಲಿ 800ಕಿಮೀ, ಅಗಲವಾಗಿಯೂ ಇರುವ ಈ ದ್ವೀಪದ ವಿಸ್ತೀರ್ಣ 885,780ಚ. ಕಿಮೀ.

ರಾಜಕೀಯವಾಗಿ ನ್ಯೂಗಿನಿ ದ್ವೀಪ ಭಾಗಗಳಾಗಿವೆ. ಪೂ. ರೇ 1410ಯ ವರೆಗೆ (ಫ್ಲೈ ನದಿ ಗಡಿಯಾಗಿರುವ ಸ್ವಲ್ಪ ದೂರವನ್ನು ಬಿಟ್ಟು) ಪಶ್ಚಿಮಕ್ಕಿರುವ ಸುಮಾರು ಅರ್ಧ ಭಾಗ ಇಂಡೋನೇಷ್ಯ ದೇಶದ ಒಂದು ಪ್ರಾಂತ್ಯವಾಗಿದೆ. ಇದಕ್ಕೆ ಇರೀಯಾನ್ ಬಾರಾತ್ (ಪಶ್ಚಿಮ ಇರೀಯಾನ್) ಎಂದು ಈಗ ಹೆಸರು. ಉಳಿದ ಭಾಗದ ದಕ್ಷಿಣಾರ್ಧ ಪಾಪ್ಯವ ಪ್ರದೇಶವೆನಿಸಿದ್ದು ಅಸ್ಟ್ರೇಲಿಯಕ್ಕೆ ಸೇರಿತ್ತು. ಉತ್ತರಾರ್ಧ ವಿಶ್ವಸಂಸ್ಥೆಯ ನ್ಯಾಸ ಪ್ರದೇಶವಾಗಿದ್ದು ಇದೂ ಪಾಪ್ಯವ ಪ್ರದೇಶವೂ ಪಾಪ್ಯವ ನ್ಯೂ ಗಿನಿಯೆಂಬ ಹೆಸರಿನಿಂದ ಆಸ್ಟ್ರೇಲಿಯದ ಆಡಳಿತಕ್ಕೆ ಒಳಪಟ್ಟಿದ್ದುವು. ಆಸ್ಟ್ರೇಲಿಯ 1973ರ ಡಿಸಂಬರ್ 1ರಂದು ಪಾಪ್ಯವ ನ್ಯೂಗಿನಿಗೆ ಸ್ವಾಯತ್ತತೆಯನ್ನು ನೀಡಿತು. 1975ರ ಸೆಪ್ಟೆಂಬರ್ 16ರಂದು ಇದು ಸ್ವತಂತ್ರವಾಯಿತು. ನ್ಯೂ ಗಿನಿಯ ಈ ರಾಜಕೀಯ ಭಾಗಗಳ ಆಡಳಿತಗಳಿಗೆ ಅವುಗಳ ಸಮೀಪದ ನೂರಾರು ದ್ವೀಪಗಳು ಸೇರಿವೆ. ಇವನ್ನೂ ಸೇರಿಸಿದರೆ ಇವುಗಳ ಒಟ್ಟು ವಿಸ್ತೀರ್ಣ ಇನ್ನೂ ಸುಮಾರು ಒಂದು ಲಕ್ಷ ಚ. ಕಿ. ಮೀ. ಗಳಷ್ಟು ಹೆಚ್ಚುತ್ತದೆ. ಜನಸಂಖ್ಯೆ ಸುಮಾರು 6 ಮಿಲಿಯನ್ (2001).

ಭೂಲಕ್ಷಣ: ನ್ಯೂ ಗಿನಿ ದ್ವೀಪದ ಭೂಭೌತ ಚರಿತ್ರೆಯನ್ನು ಸರಿಯಾಗಿ ಶೋಧಿಸಿಲ್ಲ. ಪ್ಲೀಸ್ಟೊಸೀನ್ ಯುಗದಲ್ಲಿ ಅದು ಬಹುಶಃ ಆಸ್ಟ್ರೇಲಿಯದ್ದೇ ಭಾಗವಾಗಿದ್ದಿರಬಹುದು. ಅದರ ನಡುವೆ ಉದ್ದಕ್ಕೂ 80ಕಿಮೀ-240ಕಿಮೀ. ಅಗಲದ ಉನ್ನತ ಪರ್ವತ ಶ್ರೇಣಿಗಳು ಹಬ್ಬಿವೆ. ಇವುಗಳ ಅನೇಕ ಶಿಖರಗಳು 4,570ಮೀ.ಗಳಿಗಿಂತ ಎತ್ತರವಾಗಿವೆ. ಈ ಪ್ರದೇಶ ಭೂಮಧ್ಯೆ ರೇಖೆಗೆ ತೀರ ಹತ್ತಿರವಾಗಿದ್ದರೂ 4,115ಮೀ. ಗಳಿಗಿಂತ ಹೆಚ್ಚು ಎತ್ತರವಾದ ಶಿಖರಗಳು ನಿತ್ಯಹಿಮಾವೃತವಾಗಿವೆ. ಪಶ್ಚಿಮ ಇರೀಯಾನ್ ಭಾಗದ ಅತ್ಯುನ್ನತ ಶಿಖರಗಳು ಕಾರ್ಟೆನ್ಸ್ತ್ (ಇಂಡೋನೇಷ್ಯನ್ ಹೆಸರು ಜಾಜಾ), ವಿಲ್ ಹೆಲ್ಮಿನಾ, ಐಡೆನ್‍ಬರ್ಗ್, ಜೂಲಿಯಾನ, ಪಾಪ್ಯವ ನ್ಯೂ ಗಿನಿ ಭಾಗದಲ್ಲಿ ಬಿಸ್ಮಾರ್ಕ್, ಓವೆನ್, ಸ್ಟಾನ್ಲಿ ಶ್ರೇಣಿಗಳಲ್ಲಿಯೂ 40,000 ಮೀ. ಗಿಂತ ಎತ್ತರದ ಅನೇಕ ಶಿಖರಗಳಿವೆ; ಇವುಗಳಾಚೆ ಪೂರ್ವ ತುದಿಯಲ್ಲೂ ಇದಕ್ಕೆ ಹೊಂದಿದ ದ್ವೀಪಗಳಲ್ಲೂ ಇರುವ ಶಿಖರಗಳಲ್ಲಿ ಹಲವು ಜೀವಂತ ಜ್ವಾಲಾಮುಖಿಗಳು, ಈ ಶ್ರೇಣಿಗಳಲ್ಲಿ ಹುಟ್ಟಿ ಸಮುದ್ರಕ್ಕೆ ವೇಗವಾಗಿ ಧಾವಿಸುವ ನದಿಗಳ ಪೈಕಿಗಳು. ವ್ಯಾಯುವ್ಯಗಾಮಿ ಮ್ಯಾಂಬರಾಮೋ, ದಕ್ಷಿಣಗಾಮಿ ಡೀಗುಲ್, ಉತ್ತರಗಾಮಿ ಸೆಪಿಕ್, ಈಶಾನ್ಯ ಕರಾವಳಿಗೆ ಹರಿಯುವ ಮಾರ್ಖಮ್, ಆಗ್ನೇಯದಲ್ಲಿ ಸಮುದ್ರ ಸೇರುವ ಪುರಾರೀ ಮತ್ತು ಫ್ಲೈ ಇವು ಹೆಸರಿಸತಕ್ಕವು. ಸೆಪಿಕ್ ನಡಿಯಲ್ಲಿ 480 ಕಿಮೀ. ವರೆಗೂ ಇತರ ಹಲವು ನದಿಗಳಲ್ಲಿ 160ಕಿಮೀ. ವರೆಗೂ ನೌಕಾಯಾನ ಸಾಧ್ಯವಿದೆ. ಶ್ರೇಣಿಗಳ ನಡುವೆ ಬಹಳ ಕಡಿದಾದ ಕಣಿವೆಯಿದೆ. ಅದಕ್ಕೆ ಸರೋವರದ ಬಯಲೆಂದು ಹೆಸರು. ಇಲ್ಲಿ ರಾವುಫೇರ್ ಮತ್ತು ಐಡೆನ್‍ಬರ್ಗ್ ನದಿಗಳು ಹರಿಯುತ್ತವೆ. ಚಿಕ್ಕಪುಟ್ಟ ಸರೋವರಗಳೂ ಇವೆ.

ಕರಾವಳಿಯ ಬಯಲಿನ ಬಹುಭಾಗದಲ್ಲಿ ವಿಸ್ತಾರವಾದ ಜವುಗು ನೆಲಗಳು ಗುಲ್ಮವೃಕ್ಷಗಳಿಂದಲೂ ಬೆಂಡು ಅಥವಾ ಎತ್ತರದ ಹುಲ್ಲಿನಿಂದಲೂ ಕಿಕ್ಕಿರಿದಿವೆ. ಒಳನಾಡಿನಲ್ಲಿ ಮಳೆಯ ನೀರು ರಭಸದಿಂದ ಹರಿದು ಮಣ್ಣನ್ನು ಕೊಚ್ಚಿಹಾಕಿರುವುದರಿಂದ ನೆಲ ಬಹುಮಟ್ಟಿಗೆ ಬರಡಾಗಿದೆ. ಮಧ್ಯದ ಪ್ರಸ್ಥಭೂಮಿ ಮತ್ತು ಅಗಲವಾದ ಕಣಿವೆ ಮಾತ್ರ ಹುಲುಸಾಗಿವೆ.

ವಾಯುಗುಣ: ಪರ್ವತದ ತಪ್ಪಲುಗಳ ಸುಖವಾದ ಹವೆಯ ಪ್ರದೇಶಗಳನ್ನು ಬಿಟ್ಟರೆ ದ್ವೀಪದ ಉಳಿದೆಡೆ ಹವೆ ತೇವದಿಂದ ಕೂಡಿ ಬಿಸಿಯಾಗಿದೆ. ಸಮುದ್ರಮಟ್ಟದಲ್ಲಿ ಉಷúತೆಯ ಸರಾಸರಿ 210ಅ 220ಅ ಇರುತ್ತದೆ. ಅನೇಕ ಪ್ರದೇಶಗಳಲ್ಲಿ 250ಮಿಮೀ. ಮೀರಿ ಮಳೆ ಬೀಳುತ್ತದೆ. ವಾಯುವ್ಯ ಮಳೆ ಡಿಸೆಂಬರ್ ಮಾರ್ಚ್ ನಡುವೆ: ಆಗ್ನೇಯ ಮಳೆ ಮೇ-ಅಕ್ಟೋಬರ್ ನಡುವೆ. ಒಟ್ಟು ಸರಾಸರಿ 510ಸೆಂ.ಮೀ. ಮಳೆಯಾಗುತ್ತದೆ.

ಸಸ್ಯ ಮತ್ತು ಪ್ರಾಣಿಪ್ರಪಂಚ: ನ್ಯೂ ಗಿನಿಯ ಸೇಕಡ 70ರಷ್ಟು ನೆಲ ಅರಣ್ಯಮಯ. ಸಸ್ಯಶಾಸ್ತ್ರೀಯ ಸಮೀಕ್ಷೆ ಇನ್ನೂ ಅಪೂರ್ಣವಾಗಿದೆ. ಆಸ್ಟ್ರೇಲಿಯದ ಸಸ್ಯ ಪ್ರಪಂಚದ ಹೋಲಿಕೆಯಿದ್ದರೂ ಭಾರತ-ಮಲಯ ವಲಯದ ಪ್ರಭಾವವೂ ಇದೆ. 1,829 ಮೀ. ಗಿಂತ ತಗ್ಗಾದ ಪ್ರದೇಶಗಳಲ್ಲಿ ನಿತ್ಯಪರ್ಣಿ ಅರಣ್ಯಗಳು ಸೂರ್ಯಪ್ರಕಾಶವನ್ನು ಒಳಗೆ ಬಿಡದಷ್ಟು ದಟ್ಟವಾಗಿವೆ. ಇದಕ್ಕಿಂತ ಎತ್ತರವಾದ ಪ್ರದೇಶಗಳಲ್ಲಿ ಸೂಚೀಪರ್ಣಿಗಳಿವೆ: ಎತ್ತರವಾದ ಕಾಂಗರೂ ಮತ್ತು ಕುನಾಯಿ ಹುಲ್ಲಿನ ಪ್ರದೇಶಗಳೂ ಸಾಕಷ್ಟಿವೆ. ದ್ವೀಪದಲ್ಲಿ ಒಳ್ಳೆ ಗಟ್ಟಿಯಾದ ಮರಗಳು ಬೇಕಾದಷ್ಟಿದ್ದರೂ ಸಂಪರ್ಕ ಮಾರ್ಗಗಳಿಲ್ಲದೆ ಅವುಗಳ ವ್ಯಾಪಾರಿ ವಿನಿಯೋಗ ಆಗಿಲ್ಲ.

ಪ್ರಾಣಿ ವಿಷಯದಲ್ಲಿ ನ್ಯೂಗಿನಿ ಆಸ್ಟ್ರೇಲಿಯಕ್ಕೆ ಸಮೀಪವಾಗಿದೆಯಲ್ಲದೆ, ದೀರ್ಘಕಾಲದಿಂದ ಇರು ಪ್ರತ್ಯೇಕವಾಗಿರುವುದರಿಂದ ಆಸ್ಟ್ರೇಲಿಯದಲ್ಲಿ ಅಳಿದುಹೋದ ಕೆಲವು ಪ್ರಾಣಿಜಾತಿಗಳು ಇಲ್ಲಿ ಉಳಿದಿವೆ. ಮಾಸ್ರ್ಯೂಷಿಯಲ್ ವರ್ಗದ 100ಕ್ಕೂ ಹೆಚ್ಚು ಪ್ರಾಣಿಜಾತಿಗಳಿವೆ. ವೃಕ್ಷವಾಸಿ ಕಾಂಗರು ಅಥವಾ ಹಾರಾಡುವ ನರಿ ಎಲ್ಲಕ್ಕೂ ದೊಡ್ಡದು. ಎಚಿಡ್ನಾ ಎಂಬ ತತ್ತಿ ಇಡುವ ಸ್ತನಿಯೊಂದು ಇಲ್ಲಿಯ ಪ್ರಾಣಿ ವಿಶೇಷ. ದಸ್ಯೂರ್ ಎಂಬ ಸ್ಥಳೀಯ ಬೆಕ್ಕು ಇಲ್ಲಿಯ ಮಾಂಸಾಹಾರಿ ಪ್ರಾಣಿ, ಬಗೆಬಗೆಯ ಮೊಸಳೆಗಳು. ಆಮೆಗಳು, ಓತಿಕಾಟಗಳು, ಹೆಬ್ಬಾವನ್ನೊಳಗೊಂಡು ವಿವಿಧ ನಿರ್ವಿಷ ಮತ್ತು ಸಮಿಷ ಉರಗಗಳು, 80ಕ್ಕೂ ಹೆಚ್ಚು ಜಾತಿಗಳ ಚೇಳುಗಳು, ಜಿಗಣೆಗಳು, ಮಲೇರಿಯ ಸೊಳ್ಳೆಗಳು ಇಲ್ಲಿವೆ.

ಪಕ್ಷಿ ಪ್ರಪಂಚ ಆಸ್ಟ್ರೇಲಿಯದ್ದಕ್ಕೆ ಜ್ಞಾತಿಯಾದ್ದು. ಜಗತ್ತಿನ ಅತಿಸುಂದರ ಪಕ್ಷಿಗಳೆಂದು ಫಲಭಕ್ಷಕ ಸ್ವರ್ಗಪಕ್ಷಿ ಮತ್ತು ಕೆಸೋವರಿ ಎಂಬುವುಗಳ ಅನುಕ್ರಮವಾಗಿ 59 ಮತ್ತು 39 ಜಾತಿಗಳು ಇಲ್ಲಿ ಮತ್ತು ಪೂರ್ವ ಆಸ್ಟ್ರೇಲಿಯದಲ್ಲಿ ಮಾತ್ರ ಕಾಣಸಿಗುತ್ತವೆ. ಪಾರಿವಾಳ, ಗಿಳಿ, ಮೀನ್ಚುಳ್ಳಿ ಮೊದಲಾದ ಹಕ್ಕಿಗಳೂ ಇವೆ. ಅತ್ಯಂತ ಸುಂದರವಾದ ಚಿಟ್ಟೆಹುಳುಗಳು ಇಲ್ಲಿವೆ. ಕರಾವಳಿಯಲ್ಲಿ ಅನೇಕ ಜಾತಿಯ ಮೀನುಗಳು ಲಭ್ಯವಾಗಿವೆ.

ಜನಾಂಗಗಳು: ಇಲ್ಲಿಯ ಮೂಲನಿವಾಸಿ ಜನಾಂಗಗಳಲ್ಲಿ ಹೆಚ್ಚಿನವರು ಕಪ್ಪು ಬಣ್ಣದವರು. ಪ್ರಾಚೀನತಮ ವಲಸೆಗಾರರಾದ ನೆಗ್ರಿಟೋ ಜಾತಿಯ 1.52ಮೀಗಿಂತ ಕುಳ್ಳರಾದ ಪಿಗ್ಮಿಗಳು ಒಳ ನಾಡಿನ ದುರ್ಗಮ ಪ್ರದೇಶಗಳಲ್ಲಿದ್ದಾರೆ.

ಪಾಪ್ಯವನರದು ಎರಡನೆಯ ಮುಖ್ಯ ಗುಂಪು. ಮಲಯ ಭಾಷೆಯಲ್ಲಿ ಉಣ್ಣೆ ಕೂದಲಿನವರೆಂದು ಅರ್ಥ ಕೊಡುವ ಇವರ ಹೆಸರು ಅನ್ವರ್ಥವಾದ್ದು. ಒಳನಾಡಿನ ತಗ್ಗುಪ್ರದೇಶ ಮತ್ತು ದಕ್ಷಿಣ ಮತ್ತು ಪಶ್ಚಿಮ ಕರಾವಳಿ ಇವರ ನೆಲೆ. ಕೊನೆಗೆ ಬಂದವರು ಮಲೆನೇಷಿಯನರು. ಇವರ ವಸತಿ ಹೆಚ್ಚಾಗಿ ಪಾಪ್ಯವ ಕರಾವಳಿ ಮತ್ತು ನೆರೆಹೊರೆಯ ದ್ವೀಪಗಳಲ್ಲಿ ಇದೆ. ಬಿಳಿಯರ ಸಂಖ್ಯೆ ಅಲ್ಪ.

ನ್ಯೂ ಗಿನಿಯಲ್ಲಿ ಪ್ರಚಲಿತವಾದ 500ಕ್ಕೂ ಮೇಲ್ಪಟ್ಟ ಭಾಷೆಗಳನ್ನು ಪಾಪ್ಯವನ್ ಮತ್ತು ಮಲೆನೇಷಿಯನ್ ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಎಷ್ಟೋ ವೇಳೆ ನೆರೆಹೊರೆಯ ಹಳ್ಳಿಯವರಿಗೆ ಪರಸ್ಪರ ಭಾಷೆಗಳು ಅರ್ಥವಾಗುವುದಿಲ್ಲ. ಒಂದು ತರಹದ ಅಪಭ್ರಂಶ ಮಲೆನೇಷಿಯರ ವ್ಯವಹಾರಭಾಷೆಯಾಗಿದೆ. ಇವರ ಧರ್ಮಗಳನ್ನು ಕ್ರೈಸ್ತ, ಮುಸ್ಲಿಂ ಮತ್ತು ಸ್ಥಳೀಯ ಎಂದು ವರ್ಗೀಕರಿಸಿದ್ದರೂ ಹೆಚ್ಚಿನವರು ಪಿತೃಪೂಜಕರು, ಭೂತಪಿಶಾಚಿ ಮಂತ್ರಮಾಟಗಳಲ್ಲಿ ವಿಶ್ವಾಸವುಳ್ಳವರು. ಮಾಟದ ಸಂಶಯದಿಂದ ಹಳ್ಳಿಹಳ್ಳಿಗಳ ನಡುವೆ ಯುದ್ಧಗಳಾಗುವುದುಂಟು. ಈಚಿಗಿನವರೆಗೂ ತಲೆಬೇಟೆಯ ಕ್ರೂರ ರೂಢಿ ಇಲ್ಲಿ ಇತ್ತು. ಅನೇಕ ಜಾತಿಗಳವರು ಇನ್ನೂ ಎಲೆಯುಡುಗೆಯ ಅವಸ್ಥೆಯಲ್ಲಿದ್ದಾರೆ. ಇವರು ಕಲ್ಲು, ಕವಡೆ, ಸೀಳಿದ ಬಿದಿರಿನ ಆಯುಧಗಳನ್ನು ಬಳಸುತ್ತಾರೆ. ಪರ್ಣಕುಟೀರಗಳಲ್ಲಿ ಇವರ ವಾಸ. ಕೃಷಿಯೆಂದರೆಬಹುಶಃ ತೋಟಗಾರಿಕೆ. ಕಬ್ಬು, ಬಾಳೆ, ಗೆಣಸು, ಟಾರೋ ಎಂಬ ಸಸ್ಯದ ಗಡ್ಡೆ ಮತ್ತು ಸೊಪ್ಪು, ತೆಂಗಿನಕಾಯಿ ಬೆಳೆಸಿ ತಿನ್ನುತ್ತಾರೆ. ಕೆಲವು ಜನಾಂಗಗಳವರಂತೂ ಸಾಬಕ್ಕಿಯ ಮೇಲೆಯೆ ಬದುಕುತ್ತಾರೆ.; ನಾಯಿ, ಹಂದಿ, ಹಕ್ಕಿ, ಆಮೆ ಮೀನು, ಓತಿಕಾಟಗಳು ಮಾಂಸಾಹಾರದ ಮೂಲಗಳು.

ಇತಿಹಾಸ: ಮಸಾಲೆ ದ್ವೀಪಗಳನ್ನು ಹುಡುಕುತ್ತ 1511ರಲ್ಲಿ ಬಂದ ಪೋರ್ಚುಗೀಸ್ ನಾವಿಕ ಆಂತಾನ್ಯೂ ದಿ ಆಬ್ರೇಯೂ ಈ ದ್ವೀಪವನ್ನು ಕಂಡ ಮೊದಲ ಯೂರೋಪಿಯನ್ ಎಂದು ತೋರುತ್ತದೆ. ದ್ವೀಪದ ಭೂಸ್ವರೂಪ ಆಫ್ರಿಕದ ಗಿನಿ ಪ್ರದೇಶವನ್ನು ಹೋಲುತ್ತಿದ್ದುದರಿಂದ ಸ್ಪ್ಯಾನಿಷ್ ಶೋಧಕರು ಇದಕ್ಕೆ ನ್ಯೂಗಿನಿಯೆಂದು ಕೊಟ್ಟ ಹೆಸರು ಶಾಶ್ವತವಾಯಿತು. 1528ರಲ್ಲಿ ಅವರು ಕರಾವಳಿಯಲ್ಲಿ ಬಂಗಾರವನ್ನು ಕಂಡರು. 19ನೆಯ ಶತಮಾನದಲ್ಲಿ ಡಚ್ಚರು ದ್ವೀಪದ ಪಶ್ಚಿಮಾರ್ಧದ ಮೇಲೆ ಪ್ರಭುತ್ವ ಸಾರಿ ಪೂರ್ವದ ಕಡೆ ವಿಸ್ತರಿಸಿದರು. 1884ರಲ್ಲಿ ಜರ್ಮನರು ಡಚ್ ಪ್ರದೇಶದ ಪೂರ್ವಕ್ಕೆ ಉತ್ತರ ಭಾಗವನ್ನು ಆಕ್ರಮಿಸಿದರು. 1906ರಲ್ಲಿ ಪೂರ್ವ ದಕ್ಷಿಣ ಪ್ರದೇಶವನ್ನು ಇಂಗ್ಲಿಷರು ವಶಪಡಿಸಿಕೊಂಡು, ಆಸ್ಟ್ರೇಲಿಯದ ಆಡಳಿತಕ್ಕೆ ಒಪ್ಪಿಸಿದರು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನರಿಗೆ ಸೇರಿದ್ದ ಪ್ರದೇಶವನ್ನೂ ಬ್ರಿಟಿಷರು ವಶಪಡಿಸಿಕೊಂಡರು. ಅದನ್ನು ರಾಷ್ಟ್ರಗಳ ಕೂಟದ ಅದಿಷ್ಟ ಪ್ರದೇಶವೆಂದು ಗ್ರಹಿಸಿ ಆಡಳಿತವನ್ನು ಆಸ್ಟ್ರೇಲಿಯಕ್ಕೆ ಒಪ್ಪಿಸಲಾಯಿತು. ಎರಡನೆಯ ಮಹಾಯುದ್ದದ ಅನಂತರ ಈ ಪ್ರದೇಶ ವಿಶ್ವಸಂಸ್ಥೆಯ ನ್ಯಾಸ ಪ್ರದೇಶವೆನಿಸಿತು. ಡಚ್ಚರಿಗೆ ಸೇರಿದ್ದ ಪಶ್ಚಿಮ ನ್ಯೂ ಗಿನಿಯ ಮೇಲೆ ಅವರಿಂದ ಸ್ವತಂತ್ರವಾದ ಇಂಡೋನೇಷ್ಯದ ಹಕ್ಕು ಮಂಡಿಸಿದ್ದು, ಸ್ವಲ್ಪ ವಿವಾದದ ಅನಂತರ ಅದು ಸ್ವೀಕೃತವಾಗಿ, 1963ರಲ್ಲಿ ಈ ಪ್ರದೇಶ ಇಂಡೊನೇಷ್ಯಕ್ಕೆ ವರ್ಗವಾಯಿತು. 1969ರಲ್ಲಿ ಇಂಡೋನೇಷ್ಯದ ಇರೀಯಾನ್ ಬಾರತ್ ಪ್ರಾಂತ್ಯವಾಯಿತು. ನ್ಯೂ ಗಿನಿ ನ್ಯಾಸ ಪ್ರದೇಶ ಮತ್ತು ಪಾಪ್ಯವ ಪ್ರದೇಶಗಳಿಗೆ 1973ರಲ್ಲಿ ಸ್ವಾಯತ್ತಾಧಿಕಾರ ಪ್ರಾಪ್ತ ವಾಯಿತು. ಇವೆರಡೂ ಸೇರಿದ ಭಾಗಕ್ಕೆ ಪಾಪ್ಯವ ನ್ಯೂ ಗಿನಿ ಎಂದು ಹೆಸರಾಯಿತು. 1975ರಲ್ಲಿ ಸೆಪ್ಪಂಬರ್ 16ರಂದು ಸ್ವತಂತ್ರವಾಯಿತು.

ಸಂಪನ್ಮೂಲಗಳು: ನ್ಯೂಗಿನಿಯ ವಿವಿಧ ಆ ಭಾಗಗಳಲ್ಲಿ ಅಪಾರ ಖನಿಜ, ಜಲವಿದ್ಯುತ್ ಮತ್ತು ಅರಣ್ಯ ಸಂಪನ್ಮೂಲಗಳಿವೆ. ಆದರೆ ಒಳನಾಡಿನ ದುರ್ಗಮತೆಯಿಂದಾಗಿ ಅವಿನ್ನೂ ಹೆಚ್ಚು ಉಪಯೋಗಕ್ಕೆ ಬಂದಿಲ್ಲ. ಪಶ್ಚಿಮ ಇರೀಯಾನ್ ಕರಾವಳಿಯಲ್ಲಿ ಡಚ್ಚರು ಕಲ್ಲೆಣ್ಣೆ ತೆಗೆಯತೊಡಗಿದರು. ಅದು ಮುಂದುವರಿದಿದೆ. ನ್ಯಾಸ ಪ್ರದೇಶದಲ್ಲಿ ಬಹುಕಾಲದಿಂದ ನಡೆದುಬಂದ ಬಂಗಾರ ಗಣಿಗಳ ಉತ್ಪಾದನೆ ಈಗ ಕುಗ್ಗಿದೆ. ಆದರೆ ಪರ್ವತದ ತಪ್ಪಲು ಪ್ರದೇಶಗಳಲ್ಲಿ ಕಾಫಿ, ಕೋಕೋ ಚಹಾ ಮತ್ತು ಪೈರೇಥಿಯಂ ಬೆಳೆಗಳೂ ಕರಾವಳಿಯಲ್ಲಿ ತೆಂಗು -ಕೊಬ್ಬರಿ ಮೀನು ಉದ್ಯಮಗಳೂ ವಿಕಾಸ ಹೊಂದಿವೆ. ಖನಿಜಗಳ ಪೈಕಿ ತಾಮ್ರದ ಅಪಾರ ಅದುರುಗಳ ವಿನಿಯೋಗ ಈಗ ಪ್ರಾರಂಭವಾಗಿ ಅದಕ್ಕೆ ಮಹತ್ತ್ವ ಬರಲಿದೆ. (ಪಿ.ವಿ.ಎ.)