ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪ

ವಿಕಿಸೋರ್ಸ್ದಿಂದ
Jump to navigation Jump to search

ಪಂಪ[ಸಂಪಾದಿಸಿ]

ಹತ್ತನೆಯ ಶತಮಾನದಲ್ಲಿದ್ದ ಕವಿ. ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಎಂಬ ಎರಡು ಶ್ರೇಷ್ಠ ಕೃತಿಗಳ ಕರ್ತೃ. ಪ್ರಾಚೀನ ಕನ್ನಡ ಕವಿಗಳಲ್ಲಿ ಅಗ್ರಗಣ್ಯ. ಸಂಸ್ಕøತಕ್ಕೆ ವಾಲ್ಮೀಕಿ ಹೇಗೆ ಆದಿಕವಿಯೊ ಕಾಳಿದಾಸ ಹೇಗೆ ಕುಲ ಗುರುವೊ ಹಾಗೆ ಕನ್ನಡಕ್ಕೆ ಪಂಪ ಆದಿಕವಿಯೂ ಅಗ್ರಕವಿಯೂ ಕವಿಕುಲಗುರುವೂ ಆಗಿದ್ದಾನೆ ಎಂಬ ವಿಮರ್ಶಕ ಪರಂಪರೆಯ ಉಕ್ತ ಅತ್ಯುಕ್ತಿಯಲ್ಲ. ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ ಎಂಬ ಕವಿನಾಗರಾಜನ (ಕ್ರಿ. ಶ. 1331) ಉಕ್ತಿಯಂತೂ ಎಂದಿಗೂ ಸಲ್ಲುವ ಮಾತು. ಅನೇಕ ಕನ್ನಡ ಕವಿಗಳು ಪಂಪನ ಪ್ರಭಾವಕ್ಕೆ ಒಳಗಾಗಿದ್ದಾರೆ. [[ರನ್ನ][ನಂತೂ (ಕ್ರಿ. ಶ. 993) ಪಂಪನ ವಿಕ್ರಮಾರ್ಜುನ ವಿಜಯಕ್ಕೆ ಬಹುವಿಧಗಳಲ್ಲಿ ಋಣಿಯಾಗಿದ್ದಾನೆ. ಪಂಪನ ಭಾರತ ವಿಕ್ರಮಾರ್ಜುನ ವಿಜಯವಾದರೆ ರನ್ನನ ಗದಾಯುದ್ಧ ಸಾಹಸ ಭೀಮ ವಿಜಯ. ಆಶ್ರಯದಾತನನ್ನು ಕಥಾನಾಯಕನಿಗೆ ಹೋಲಿಸಿ ಕಥೆಯನ್ನು ಹೇಳುವ ರೀತಿಯಲ್ಲಿಯೂ ರನ್ನನಲ್ಲಿ ಪಂಪನ ಅನುಕರಣವಿದೆ. ಇಷ್ಟೇ ಅಲ್ಲ. ಈ ಗದಾಯುದ್ಧದ ಕಥೆಗೆ ಪಂಪ ಭಾರತದ ಹದಿಮೂರನೆಯ ಆಶ್ವಾಸದ 49ನೆಯ ಪದ್ಯದಿಂದ ಆ ಆಶ್ವಾಸಾಂತ್ಯದವರೆಗಿನ ಕಥೆಯೇ ಮೂಲ ; ವರ್ಣನಾದಿಗಳೂ ಕೆಲವಡೆಗಳಲ್ಲಿ ಪಂಪಭಾರತವನ್ನೇ ಅನುಸರಿಸಿವೆ. ಕೆಲವು ಪದ್ಯಗಳೂ ಪದ್ಯಭಾಗಗಳೂ ಪಂಪಭಾರತದ ಈ ಭಾಗದ ಪಡಿನೆಳಲಿನಂತಿವೆ.

ರಾಮಚಂದ್ರಚರಿತಪುರಾಣಕರ್ತೃವಾದ ನಾಗಚಂದ್ರ (ಕ್ರಿ. ಶ. ಸು. 1100) ತನ್ನನ್ನು "ಅಭಿನವ ಪಂಪ"ನೆಂದು ಕರೆದುಕೊಂಡ. ಅವನ ಕೃತಿ ಪಂಪರಾಮಾಯಣವೆಂದು ಪ್ರಸಿದ್ಧವಾಯಿತು. ಇನ್ನೂ ಅನೇಕ ಕವಿಗಳು-ಪಂಪನ ಗೀರ್ಗುಂಫದ ಪೆಂಪು, ಅಸದೃಶ್ಯಮಪ್ಪಪೂರ್ವರಸಂ, ಸನ್ನುತ ಕವಿತಾಗುಣ, ಹಂಪದೇವೋಕ್ತಪ್ರಯೋಗ, ರಸಿಕಾಗ್ರಣಿ ಪಂಪನ ನುಣ್ಬುವೆತ್ತ ನುಡಿ, ಪಂಪನಿಂಪು, ಪಂಪನೋಜೆ-ಎಂದು ಮುಂತಾಗಿ ಪಂಪನ ಕವಿತೆ ಗುಣಗಳನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಕುಮಾರವ್ಯಾಸಭಾರತದಲ್ಲಿಯೂ ಪಂಪಭಾರತದ ಪ್ರಭಾವವನ್ನು ಗುರುತಿಸಿದ್ದಾರೆ. ಈ ಪಂಪಪ್ರಶಂಸೆಯ ಹಿನ್ನೆಲೆಯಲ್ಲಿ ಪಂಪ ಕನ್ನಡ ಕವಿಕುಲಗುರು ಎಂಬ ಪ್ರಶಸ್ತಿಗೆ ಸರ್ವಥಾ ಅರ್ಹನೆನ್ನಲು ಯಾವ ಅಡ್ಡಿಯೂ ಇಲ್ಲ. ವಿಮರ್ಶೆಯ ತಕ್ಕಡಿಯಲ್ಲಿಟ್ಟು ತೂಗಿ ಹಿಂದಿನದಕ್ಕೆಲ್ಲ ಹೊಸಬೆಲೆಯನ್ನು ಕಟ್ಟುತ್ತಿರುವ ಈಗಿನ ಕಾಲದಲ್ಲಿ ಕೂಡ ಈತನ ಸ್ಥಾನ ಮಹತ್ತ್ವಗಳಿಗೆ ಕುಂದು ಬಂದಿಲ್ಲ ಎಂಬ ತೀ.ನಂ. ಶ್ರೀಯವರ ಮಾತು ಒಪ್ಪತಕ್ಕದ್ದು.

ತೆಲುಗಿನಲ್ಲಿ ವ್ಯಾಸಭಾರತವನ್ನು ಅನುವಾದಿಸತೊಡಗಿ ಮೂರುಪರ್ವಗಳಷ್ಟನ್ನು ಮಾತ್ರ ಬರೆದ ನನ್ನಯಭಟ್ಟನ ಕೃತಿಯಲ್ಲಿ ಪಂಪನ ಭಾರತದ ಪ್ರಭಾವವನ್ನು ಆಂಧ್ರ ವಿದ್ವಾಂಸರು ಗುರುತಿಸಿದ್ದಾರೆ. ಪಂಪನ ಪ್ರಭಾವ ಮುದ್ರೆಯ ವ್ಯಾಪಕತ್ವಕ್ಕೆ ಇದು ಗಮನಾರ್ಹ ನಿದರ್ಶನ.

ಕನ್ನಡ ಕವಿಗಳು ಸಾಧಾರಣವಾಗಿ ತಮ್ಮ ಕೃತಿಗಳಲ್ಲಿ ಸ್ವವಿಷಯವನ್ನು ವಿಶೇಷವಾಗಿ ಪ್ರಸ್ತಾಪಿಸುವುದಿಲ್ಲ. ಆದರೆ ಪಂಪ ತನ್ನ ಎರಡು ಕೃತಿಗಳಾದ ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯಗಳಲ್ಲಿ ಸ್ವವಿಷಯವನ್ನು ತಕ್ಕಮಟ್ಟಿಗೆ ವಿವರಪೂರ್ಣವಾಗಿಯೆ ಹೇಳಿಕೊಂಡಿರುವುದು ಕನ್ನಡಿಗರ ಪುಣ್ಯ. ಅಲ್ಲದೆ, ಅವನ ಹೇಳಿಕೆಗಳು ಹಲವು ಚಾರಿತ್ರಿಕಾಂಶಗಳಿಂದಲೂ ಶಾಸನಗಳಿಂದಲೂ ಸಮರ್ಥನೆಗೊಂಡಿರುವುದು ಕವಿವಾಕ್ಯಗಳು ಎಲ್ಲ ಸಂದರ್ಭಗಳಲ್ಲೂ ಅವಿಶ್ವಸನೀಯಗಳಲ್ಲ ಎಂಬುದಕ್ಕೆ ನಿದರ್ಶನಗಳಾಗಿವೆ. ಪಂಪ ಆದಿಪುರಾಣದಲ್ಲಿ ತಾನು ದುಂದುಭಿ ಸಂವತ್ರಸರೋದ್ಭವಂ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಶಕರವರುಷಮೆಂಟುನೂಕ್ಕೆ ಕಡೆಯೊಳವತ್ತುಮೂರು ಸಂದಂದು ಜಗತ್ಪ್ರಕಟ ಪ್ಲವಸಂವತ್ಸರದಲ್ಲಿ (ಶಾ.ಶ. 863)ರಲ್ಲಿ ಎಂದರೆ ಕ್ರಿ.ಶ. 941ರಲ್ಲಿ (ಅಥವಾ ಕೆಲವು ವಿದ್ವಾಂಸರು ಅಭಿಪ್ರಾಯಪಡುವಂತೆ 942ರಲ್ಲಿ) ಈ ಕೃತಿ ರಚಿತವಾಯಿತೆಂದು ಅದರಿಂದಲೇ ತಿಳಿದುಬರುತ್ತದೆ. ಈ ಪ್ಲವ ಸಂವತ್ಸರಕ್ಕೆ ಹಿಂದೆ ಬರುವ ದುಂದುಭಿಸಂವತ್ಸರ ಕ್ರಿ.ಶ. 902ಕ್ಕೆ (ಅಥವಾ 903ಕ್ಕೆ) ಸರಿಹೊಂದುತ್ತವೆ. ಆದ್ದರಿಂದ, ಪಂಪನ ಜನ್ಮವರ್ಷವನ್ನು ಕ್ರಿ. ಶ. 902 (ಅಥವಾ 903) ಎಂದು ನಿಸ್ಸಂದಿಗ್ಧವಾಗಿ ಹೇಳಬಹುದು. ಎಂದಮೇಲೆ, ಕವಿಯ 39-40ನೆಯ ವರ್ಷದಲ್ಲಿ ಆದಿಪುರಾಣ ರಚಿತವಾದಂತಾಯಿತು. ಈ ವೇಳೆಗೇ ಆತ ಚಾಲುಕ್ಯ ವಂಶದ ಎರಡನೆಯ ಅರಿಕೇಸರಿಯ ಆಶ್ರಯವನ್ನು ಪಡೆದಿದ್ದನೆಂದು ಕೆಲವರ ಊಹೆ. ಗುಣಾರ್ಣವನೆಂಬುದು ಅರಿಕೇಸರಿಯ ಪ್ರಸಿದ್ಧವಾದ ಬಿರುದು. ಕವಿತಾಗುಣಾರ್ಣವನೆಂಬುದು ಪಂಪನ ಮೆಚ್ಚ್ಚಿನ ಬಿರುದು. ಎರಡು ಕಾವ್ಯಗಳಲ್ಲಿಯೂ ಈ ಬಿರುದು ಉಕ್ತವಾಗಿದೆ. ಆದ್ದರಿಂದ, ಆದಿಪುರಾಣ ರಚನೆಯ ಕಾಲದಲ್ಲಿಯೆ ಕವಿ ಅರಿಕೇಸರಿಯ ಮನ್ನಣೆಗೆ ಪಾತ್ರನಾಗಿದ್ದನೆಂದೂ ತನ್ನ ಕವಿತಾಸಾಮಥ್ರ್ಯ ನಿಮಿತ್ತದಿಂದ ಕವಿತಾ ಗುಣಾರ್ಣವನೆಂಬ ಬಿರುದನ್ನು ಪಡೆದಿದ್ದನೆಂದೂ ಊಹಿಸಲವಕಾಶವಾಗಿದೆ. ಆದರೆ, ಆದಿಪುರಾಣದಲ್ಲಿ ಕಾವ್ಯ ಪ್ರಯೋಜನಗಳನ್ನು ತಿಳಿಸುವ ಪದ್ಯವೊಂದರಲ್ಲಿ (1-36), ಕವಿತೆಯಿಂದ ಕವಿಗೆ ದೊರೆಯುವ ಫಲಗಳು ಪೂಜೆ (ರಾಜಮರ್ಯಾದೆ), ನೆಗಲ್ತ್ (ಕೀರ್ತಿ), ಲಾಭ (ದ್ರವ್ಯಸಂಪಾದನೆ), ಜಿನೇಂದ್ರ ಗುಣಸ್ತುತಿಯಿಂದ ಇಂದ್ರಪೂಜೆ, ಲೋಕಮಾನ್ಯತೆ, ಮುಕ್ತಲಾಭ ಇವು ತಾವಾಗಿಯೇ ಲಭಿಸುತ್ತವೆ ; ಆದ್ದರಿಂದ, ಪೆರೀವುದೇಂ ಪೆರರು ಮಾಡುವುದೇಂ, ಪೆರಂದಮಪ್ಪುದೇಂ ಎಂದು ಪಂಪ ನುಡಿದಿರುವುದರಲ್ಲಿ ರಾಜಮನ್ನಣೆ ಬಗೆಗೆ ತಿರಸ್ಕಾರಭಾವ ಸುವ್ಯಕ್ತವಾಗಿದೆ. ಅಲ್ಲದೆ, ಬುಧಸಮೂಹಮಿದಂ ಪೇದೊಡೆ ಪೇಲ್ಕಂಬಗೆದಂದೆಂ ಎಂದೂ ಕವಿ ಸ್ಪಷ್ಟವಾಗಿ ಹೇಳಿದ್ದಾನೆ. ಈ ಬುಧಸಮೂಹ ಪಂಪನನ್ನು ಕೊಂಡಾಡಿರುವಂತೆ ಬರೆದಿರುವ ಪದ್ಯಗಳಲ್ಲಿ (ಆ. ಪು. 1-26 ರಿಂದ 33) ಪಂಪನನ್ನು ಬಿರುದುಗಳಾದ ಸುಕವಿಜನಮನೋಮಾನಸೋತ್ತಂಸ ಹಂಸ, ಕವಿತಾಗುಣಾರ್ಣವ, ಸಂಸಾರ ಸಾರೋದಯ, ಸರಸ್ವತೀ ಮಣಿಹಾರ ಎಂಬಿವು ಹೇಗೆ ಅರ್ಥಾನುಗುಣ್ಯವಾಗಿ ಪಂಪನಿಗೆ ಒಪ್ಪುತ್ತವೆ ಎಂದು ಒಕ್ಕಣಿಸುವ ಸಂದರ್ಭದಲ್ಲಿ-'ಇದು ನಿಚ್ಚಂ ಪೊಸತರ್ಣವಂಬೊಲತಿ ಗಂಭೀರಂ ಕವಿತ್ವಂ ಜಗಕ್ಕದದಂ ಕವಿತಾ ಗುಣಾರ್ಣವಂ' ಎಂಬುದಾಗಿ ಅ ಬಿರುದು ಸಲ್ಲುವುದರ ಔಚಿತ್ಯವನ್ನು ತಿಳಿಸಿದೆ. ಇದರಿಂದಾಗಿ, ಈ ಬಿರುದು ಅರಿಕೇಸರಿಯಿಂದ ಪಡೆದುದಲ್ಲ ಎನ್ನಬೇಕಾಗುತ್ತದೆ. ಈ ಕಾಲದಲ್ಲಿ, ಪಂಪನಿಗೂ ಅರಿಕೇಸರಿಗೂ ಇದ್ದ ಬಾಲ್ಯಸ್ನೇಹ ಬಹುಶಃ ಹಸುರಾಗಿಯೇ ಇದ್ದರೂ ಇಬ್ಬರ ನಡುವೆ ಆಶ್ರಿತ ಆಶ್ರಯದಾತ ಸಂಬಂಧ ಇನ್ನೂ ಸಂಘಟಿಸಿರಲಿಲ್ಲ ಎನ್ನಬಹುದಾಗಿದೆ. ಆದಿಪುರಾಣ ರಚಿತವಾದ ಮೇಲೆ ವಿಕ್ರಮಾರ್ಜುನವಿಜಯ ರಚಿತವಾಯಿತೆಂಬ ಬಗೆಗೆ ಸಂದೇಹವಿಲ್ಲವಷ್ಟೆ. ಆದಿಪುರಾಣ ರಚನೆಯಿಂದ ಸಮರ್ಥಕವಿಯೆಂದು ಬಹುಬೇಗನೆ ಪ್ರಸಿದ್ಧಿಗೆ ಬಂದ ಬಾಲ್ಯಸ್ನೇಹಿತನನ್ನು ಅರಿಕೇಸರಿ ಬಯಟ್ಟಿ ಕರೆಸಿಕೊಂಡು, ಪಿರಿದನಿತ್ತು ಗೌರವಿಸಿ, ಈತೆ ದಿತಿಹಾಸಕಥೆಯನೊಪ್ಪಿಸೆ ಕುತು, ಬರಿಸದೊಳಗೆ ಸಮೆವಿನಗಂ-ಆದೇಶವಿತ್ತ. ಪಂಪನಿಗೆ ವರ್ಷವೂ ಬೇಕಾಗಲಿಲ್ಲ. ಆತ ಭಾರತವನ್ನು ಆರು ತಿಂಗಳಿನಲ್ಲಿಯೆ ಬರೆದು ಮುಗಿಸಿಬಿಟ್ಟ, ಪೂಣ್ದ ತೆದೆ, ಒಂದದಿಂಗಳೊಳ್ ಒಂದು ಮೂರು ತಿಂಗಳೊಳ್ ಸಮಾಪ್ತಿಯಾದುದು-ಎಂಬ ಮಾತಿನ ಆಧಾರದ ಮೇಲೆ ಒಂದೇ ವರ್ಷದಲ್ಲಿ (ಎಂದರೆ, ಆದಿಪುರಾಣ ರಚಿತವಾದ ವರ್ಷದಲ್ಲಿಯೆ) ಎರಡೂ ರಚಿತವಾದವು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದು ವಸ್ತು ಸ್ಥಿತಿಗೆ ದೂರವಾದ ಮಾತಾಗಿ ಕಾಣುತ್ತದೆ. ಈ ಎರಡು ಗ್ರಂಥಗಳ ಶೈಲಿಯನ್ನೂ ಹೋಲಿಸಿದರೆ ಎರಡಕ್ಕೂ ನಡುವೆ ತಕ್ಕಮಟ್ಟಿನ ಕಾಲ ಕಳೆದಿರಬೇಕೆಂದು ಚೆನ್ನಾಗಿ ಗೊತ್ತಾಗುತ್ತದೆ. (ತೀ.ನಂ.ಶ್ರೀ). ಈ ನಡುವಣ ಅಂತರ ಎಷ್ಟು ಎಂದು ನಿಕರವಾಗಿ ಹೇಳುವುದು ಕಷ್ಟ. ಅರಿಕೇಸರಿಯ ಮಗ ಬದ್ದೆಗನ ಆಸ್ಥಾನದಲ್ಲಿ (ಅಥವಾ ಆಳ್ವಿಕೆಯಲ್ಲಿ), ಕ್ರಿ.ಶ. 959 ರಲ್ಲಿ ಸೋಮದೇವ ಯಶಸ್ತಿಲಕ ಚಂಪೂವನ್ನು ರಚಿಸಿದ. ಆಗ ಅರಿಕೇಸರಿ ಅತೀತನಾಗಿ ವರ್ಷಗಳೆಷ್ಟಾಗಿದ್ದುವು ಎಂಬುದಿನ್ನೂ ಗೊತ್ತಾಗಿಲ್ಲ. ಅಂತೂ ಆದಿಪುರಾಣವನ್ನು ಬರೆದ 941 ಹಾಗೂ ಯಶಸ್ತಿಲಕ ರಚನೆಯ 959,-ಈ ನಡುವಣ 18 ವರ್ಷಗಳ ಮಧ್ಯದಲ್ಲಿ ಸಮಸ್ತಭಾರತದ (ಪಂಪಭಾರತದ)ನಿರ್ಮಾಣವಾಗಿರಬೇಕು ಎಂಬ ಮುಳಿಯ ತಿಮ್ಮಪ್ಪಯ್ಯನವರ ಗ್ರಹಿಕೆ ಪರಮಾವಧಿಯ ಅಂತರವನ್ನು ಸೂಚಿಸಿದೆ. ಈ ಅಂತರವನ್ನು ತಕ್ಕಮಟ್ಟಿಗೆ ಸರಿಯಾಗಿ ನಿರ್ಧರಿಸಲು, ಈಚೆಗೆ ದೊರೆತ, ಪಂಪನ ತಮ್ಮ ಜಿನವಲ್ಲಭನ ಶಾಸನ ತುಸು ನೆರವು ನೀಡುತ್ತದೆ. ತಾನು ರಚಿಸಿದ ವಿಕ್ರಮಾರ್ಜುನ ವಿಜಯದಿಂದ ಸುಪ್ರೀತನಾಗಿ, ಅರಿಕೇಸರಿ ಧರ್ಮಪುರವನ್ನು ಶಾಸನದಗ್ರಹಾರವಾಗಿ ತನಗೆ ಕೊಟ್ಟನೆಂಬ ಪಂಪನ ಹೇಳಿಕೆಯನ್ನು ಈ ಶಾಸನ ನಿರ್ವಿಕಾರವಾಗಿ ಸಮರ್ಥಿಸುತ್ತದೆ. ಶಾಸನದ ಲಿಪಿಯ ಆಧಾರದ ಮೇಲೆ ಅದರ ಕಾಲವನ್ನು ಕ್ರಿ. ಶ. ಸು. 950-60 ಎಂದು ಊಹಿಸಲಾಗಿದೆ. ಪಂಪ ನಿಧನನಾದ ಮೇಲೆ, ಬಹುಶಃ ಧರ್ಮಪುರದ ನಿವಾಸಿಗಳು, ದತ್ತಿಯ ವಿಚಾರವನ್ನು ಪ್ರಶ್ನಿಸಿ ಪ್ರತಿಭಟಿಸಿರಬೇಕು. ಅದಕ್ಕೆ ಉತ್ತರರೂಪವಾಗಿ ಬರೆದಂತಿದೆ-ಜಿನವಲ್ಲಭಶಾಸನ. ಹಾಗಿಲ್ಲದಿದ್ದ ಪಕ್ಷದಲ್ಲಿ, ಬರೆದುದೆ ತಾಮ್ರಶಾಸನಂ, ಆದೇಯಮೆ ಧರ್ಮಪುರಂ, ನಗಲ್ತ್ ವೆತ್ತ ಅರಿಗನ ಕೊಟ್ಟುದೇ, ನೆಗ ಪೆತ್ತುದೇ, ಪೇ ಎಂದು, ನೀಂ ಮರುಳೆ, ಪಲರ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿನೋಡು ಸುಂದರ ವೃಷಭಾಚಳೊನ್ನತ ಶಿಲಾತಲದೊಳ್ ಬರೆದಕ್ಕರಗಳಂ ಎಂದು ಶಿಲಾಶಾಸನವೊಂದರ ಮೂಲಕ ಘೋಷಿಸಬೇಕಾದ ಅಗತ್ಯವಿರಲಿಲ್ಲ. ಅಲ್ಲದೆ, ಈ ಶಾಸನ ಪಂಪನ ಮರಣಾನಂತರದ್ದೆಂದೂ ಸುಲಭವಾಗಿ ಊಹಿಸಬಹುದು. ಪಂಪನಿಗೂ ಅವನ ತಮ್ಮನಿಗೂ ಹೆಚ್ಚೆಂದರೆ ಐದು ವರ್ಷಗಳ ಅಂತರವಿಟ್ಟುಕೊಂಡರೂ ಜಿನವಲ್ಲಭ ದೀರ್ಘಾಯುವಾಗಿದ್ದನೆಂದು ಭಾವಿಸಿದ್ದರೂ ಆತ ಕ್ರಿ.ಶ. 975ರ ಸುಮಾರಿನಲ್ಲಿ ತೀರಿಕೊಂಡಿರಬೇಕು. ಆದ್ದರಿಂದ, ಶಾಸನದ ಕಾಲವನ್ನು 975ಕ್ಕಿಂತ ಮುಂದಕ್ಕೆ ನೂಕಲು ಸಾಧ್ಯವಾಗದು. ಈಗ ಊಹಿಸಿರುವಂತೆ, ಅದರ ಕಾಲವನ್ನು ಸು. 960 ಎಂದು ಪರಿಗಣಿಸಬಹುದು. ಎಂದರೆ, ಇದು ಬದ್ದೆಗನ ಆಳ್ವಿಕೆಯ ಕಾಲ. ಅರಿಕೇಸರಿ ಪಂಪರಿಬ್ಬರೂ ಬದುಕಿರುವಂದು ಧರ್ಮಪುರದಾನವನ್ನು ಪ್ರಶ್ನಿಸುವ ಧೈರ್ಯ ತಾನೆ ಯಾರಿಗಿದ್ದೀತು ? ಜೈನನಾದ ಪಂಪ ತೀರಿಕೊಂಡ ಕೆಲವು ವರ್ಷಗಳ ಮೇಲೆ ಧರ್ಮಪುರ ಅಗ್ರಹಾರದ ವೈದಿಕ ಮಂಡಲ ಶಾಸನದ ಅಸ್ತಿತ್ವವನ್ನು ಪ್ರಶ್ನಿಸಿರಬಹುದು. ಈ ಸಂಭವನೀಯ ಘಟನೆಗಳ ಹಿನ್ನೆಲೆಯಲ್ಲಿ, ಅರಿಕೇಸರಿ ಪಂಪರ ಮರಣಕಾಲವನ್ನು 955 ರ ಎಲ್ಲೆ ಕಟ್ಟಿನೊಳಗೆ ಇರಿಸಬಹುದು. ಈ ಹಿಂದೆಯೇ ಸೂಚಿಸಿರುವಂತೆ, ಎರಡು ಕೃತಿಗಳ ಶೈಲಿಯ ವ್ಯತ್ಯಾಸವನ್ನೂ ಗಮನಕ್ಕೆ ತಂದುಕೊಂಡು, ವಿಕ್ರಮಾರ್ಜುನ ವಿಜಯದ ರಚನಾಕಾಲವನ್ನು ಕ್ರಿ. ಶ. ಸು. 945-50 ಎಂದು (ಬೇರೆಯ ಪ್ರಮಾಣ ದೊರೆಯುವವರೆಗೆ) ತಾತ್ಕಾಲಿಕವಾಗಿ ನಿರ್ಧರಿಸಬಹುದು.

ಪಂಪ ವಿಕ್ರಮಾರ್ಜುನ ವಿಜಯವನ್ನು ಅರಿಕೇಸರಿಯ ರಾಜಧಾನಿಯಾದ ಬೋಧನದಲ್ಲಿ ಬರೆದ, ಆದಿಪುರಾಣವನ್ನು ರಾಷ್ಟ್ರಕೂಟ ರಾಜ್ಯದಲ್ಲಿ ಬರೆದ ಎಂದು ರನ್ನನ ಹೇಳಿಕೆಯಿಂದ ತಿಳಿದುಬರುತ್ತದೆ. ರನ್ನನ ಮನಸ್ಸಿನಲ್ಲಿ ಆದಿಪುರಾಣಕರ್ತ ಪಂಪನೇ ಇದ್ದಿರಬೇಕು. ಆದಿಪುರಾಣದಲ್ಲಿ ಪೆರರೀವುದೇಂ ಮುಂತಾಗಿ ಪಂಪ ಹೇಳುವಲ್ಲಿ, ರಾಷ್ಟ್ರಕೂಟ ದೊರೆಯನ್ನೇ ಅವನು ಕುರಿತಿರಬಹುದೆಂದು ತೋರುತ್ತದೆ.

ಪಂಪನ ವಂಶಾಭಿಮಾನ ಶ್ಲಾಘ್ಯವಾದದ್ದು. ಅವನು ಹುಟ್ಟಿನಿಂದ ಜೈನನಾದರೂ ವೈದಿಕಮತಾವಲಂಬಿಗಳಾಗಿದ್ದ ತನ್ನ ಪೂರ್ವಜರನ್ನು ಹೆಮ್ಮೆಯಿಂದಲೇ ನೆನೆದಿದ್ದಾನೆ. ಜಿನಾಗಮವನ್ನು ಬೆಳಗುವ ಆದಿಪುರಾಣದಲ್ಲಿ ಆತ್ಮ ವೃತ್ತಾಂತವನ್ನು ವರ್ಣರಂಜಿತವಾಗಿ ಚಿತ್ರಿಸಿದ್ದರೂ ಅಲ್ಲಿ ವೈದಿಕನಿಷ್ಠ ವಂಶದ ವಿಚಾರವನ್ನು ಬೆರೆಸಲು ಇಷ್ಟಪಡದೆ, ವೈದಿಕ ಧರ್ಮಾವಲಂಬಿಯಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ನಿರೂಪಿಸಿರುವ ಲೌಕಿಕ ಕಾವ್ಯವಾದ ವಿಕ್ರಮಾರ್ಜುನ ವಿಜಯದ ಆದಿಭಾಗದಲ್ಲಿ ಅರಿಕೇಸರಿಯ ವಂಶದ ವರ್ಣನೆಯನ್ನು ಚಾರಿತ್ರಿಕ ಸತ್ಯಕ್ಕೆ ವಿರೋಧವಾಗದಂತೆ ವರ್ಣಿಸಿ, ಕಾವ್ಯಾಂತ್ಯದಲ್ಲಿ ತನ್ನ ವಂಶವನ್ನು ವರ್ಣಿಸಿರುವುದು ಪಂಪನ ಔಚಿತ್ಯದೃಷ್ಟಿಯನ್ನು ಸೂಚಿಸುತ್ತದೆ.

ಪಂಪನಪೂರ್ವಜರ ಸ್ಥಳ ವೆಂಗಿಮಂಡಲದ (ಕೃಷ್ಣಾ ಗೋದಾವರೀ ನದಿಗಳ ನಡುವೆ ಪೂರ್ವಸಮುದ್ರಪರ್ಯಂತ ಹಬ್ಬಿದ್ದ ಪ್ರದೇಶ) ವೆಂಗಿಪ ವಂಶದ ಮೂಲಪುರುಷ ಮಾಧವ ಸೋಮಯಾಜಿ. ನಾಲ್ಕುಗ್ರಾಮಗಳ ಅಗ್ರಹಾರದ ಸಂಪತ್ಪದವಿಗಳಿಗೆ ಸ್ವಾಮಿಯಾಗಿದ್ದ ಆತ ಸರ್ವಕ್ರತುಯಾಜಿ ಎಂದು ಪ್ರಸಿದ್ಧನಾದ. ಈ ಸರ್ವಕ್ರತುಗಳಲ್ಲಿ ಅಶ್ವಮೇಧಾದಿ ಪಶುಹಿಂಸಾತ್ಮಕ ಯಜ್ಞಗಳೂ ಸೇರುತ್ತವೆ. ಜೈನನಾದ ಪಂಪನಿಗೆ ತನ್ನ ವಂಶದ ಮೂಲ ಪುರುಷನ ಹಿಂಸಾತ್ಮಕ ಯಜ್ಞಯಾಗಾದಿಕರ್ಮಗಳು ಹಿಡಿಸದಾದವು ; ಅವನ ಯಜ್ಞದ ಹೊಗೆ ದಿಗ್ವನಿತೆಗೆ ಮಾಟದ ಕುರುಳ್, ತ್ರಿಭುವ ಕಾಂತೆಗಂ ಕಂಠಾಭರಣಂ ಎನ್ನುವಂತೆ ಕಪ್ಪಾಗಿ ಒಪ್ಪಾಗಿದ್ದರೂ ಅವನ ಧವಳಕೀರ್ತಿಯನ್ನೂ ಕರಿದು ಮಾಡಿತು ಎಂದು ಪಂಪ ಕೊರಗಿದ್ದಾನೆ. ಸೊಮಯಾಜಿಯ ಮಗನಾದ ಅಭಿಮಾನಚಂದ್ರ ಬಹುಶಃ ಪಿತ್ರಾರ್ಜಿತವಾಗಿ ಬಂದ ಐಶ್ವರ್ಯವನ್ನೆಲ್ಲ ಬೇಡಿದವರಿಗೆ ದಾನಮಾಡಿ ಪ್ರಸಿದ್ಧನಾದ. ಆತನ ಮಗ ಕೊಮರಯ್ಯ. ಇವತ ಪಿತ್ರಾರ್ಜಿತ ಎಂದರೆ ಸಮಸ್ತವೇದ ವೇದಾಂಗ ಸಮುದ್ಯೋತಿತಮತಿ ಹಾಗೂ ಉಚಿತಪುರಾತನ ಚರಿತಂ-ಇಷ್ಟೆ ! ಇವನ ಮಗ ಭೀಮವಯ್ಯ (ಭೀಮಪಾರ್ಯ?). ವಿಕ್ರಮಾರ್ಜುನ ವಿಜಯದ ಮುದ್ರಿತ ಪ್ರತಿಗಳಲ್ಲಿ ಅಭಿರಾಮದೇವರಾಯಂ ಎಂಬ ಪಾಠವೇ ಅಂಗೀಕೃತವಾಗಿದ್ದು, ಇದೇ ಪಂಪನ ತಂದೆ ಹೆಸರು ಎಂದು ಈವರೆಗಿನ ತಿಳುವಳಿಕೆಯಾಗಿತ್ತು. ಎರಡು ಹಸ್ತ ಪ್ರತಿಗಳಲ್ಲಿ ಭೀಮನಾಮಧೇಯಂ ಎಂಬ ಪಾಠಾಂತರವೂ ಇದ್ದು, ಇದು ಜಿನವಲ್ಲಭನ ಶಾಸನದಿಂದ ಸಮರ್ಥಿತವಾಗಿದೆ. ಜೈನಧರ್ಮಕ್ಕೆ ಮತಾಂತರ ಹೊಂದಿದ ಭೀಮ ನಾಮಧೇಯನ ಮಗ ತಾನು ಎಂದು ಹೇಳಿಕೊಳ್ಳುವುದರಲ್ಲಿ ಅತಿಶಯವಾದ ಹೆಮ್ಮೆ, ಪಂಪನಿಗೆ. ಜಾತಿಯೊಳೆಲ್ಲಂ ಉತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇಮಾತೊ ಜಿನೇಂದ್ರ ಧರ್ಮಮೆವಲಂ ದೊರೆ ಧರ್ಮದೊಳೆಂದು ನಂಬಿ ತಜ್ಯಾತಿಯನುತ್ತರೋತ್ತರಮೆ ಮಾಡಿ ಭೀಮಪಯ್ಯ ಖ್ಯಾತನಾದನಂತೆ. ತಾನು ಅಂಥವನ ಮಗ ಎಂದು ಪಂಪನ ಹೆಮ್ಮೆಯ ಮಾತು. ಪಂಪನ ಈ ಮಾತನ್ನೂ ಅಭಿಮಾನದಿಂದ ಮಾಡಿರುವ ಪೂರ್ವಜರ ವರ್ಣನೆಯನ್ನೂ ಒಟ್ಟಿನಲ್ಲಿ ಪರಿಶೀಲಿಸಿದರೆ-ಪಂಪನಿಗೆ ಜೈನಧರ್ಮದಲ್ಲಿ ಎಷ್ಟು ಅಭಿಮಾನವೊ ತನ್ನ ಪೂರ್ವಿಕರ ವೈದಿಕ ಪರಂಪರೆಯಲ್ಲಿಯೂ ವಿಪ್ರಕುಲದಲ್ಲಿಯೂ ಅಷ್ಟೇ ಅಭಿಮಾನವಿತ್ತು ಎನ್ನಬೇಕಾಗುತ್ತದೆ. ಕುಲಾಭಿಮಾನದ ಬಗೆಗೆ ಭಾರತದಲ್ಲಿ ಅಲ್ಲಲ್ಲಿ ಬರುವ ತಿರಸ್ಕಾರದ ಮಾತುಗಳನ್ನು ಈ ಹಿನ್ನೆಲೆಯಲ್ಲಿ ವಿಮರ್ಶಿಸಬೇಕು.

ವಿಕ್ರಮಾರ್ಜುನ ವಿಜಯದಲ್ಲಿ ಕವಿ ತನ್ನ ತಾಯಿಯ ಹೆಸರಾಗಲಿ, ತಮ್ಮನ ಹೆಸರಾಗಲಿ ಹೇಳಿಲ್ಲ. ಜಿನವಲ್ಲಭನ ಶಾಸನದಿಂದ ಕೆಲವು ಹೊಸ ಸಂಗತಿಗಳು ತಿಳಿದುಬಂದಿವೆ. ಜಿನವಲ್ಲಭ ತನ್ನನ್ನು ಪಂಪಾಭಿಧಾನಾನುಜ, ಪಂಪಾರ್ಯಾನುಜ ಎಂದು ಕರೆದುಕೊಂಡಿದ್ದಾನೆ ; ಅವನ ತಾಯಿ ಜೋಯಿಸ ಸಿಂಘನ ಮೊಮ್ಮಗಳು, ಆಕೆಯ ತವರೂರು ಬೆಳ್ವೊಲದ ಅಣ್ಣಿಗೇರಿ. ಹೀಗೆ ಪಂಪನ ತಾಯಿಯ ತವರೂರಿನ ಸಂಗತಿ ತಿಳಿದುಬಂದಿರುವುದು ಪಂಪನ ; ಜೀವನ ವೃತ್ತಾಂತದ ಮೇಲೆ ಹೊಸ ಬೆಳಕನ್ನು ಚೆಲ್ಲುವುದಾಗಿದೆ. ಪಂಪ ವಿಕ್ರಮಾರ್ಜುನ ವಿಜಯವನ್ನು ಬರೆದದ್ದು ಅರಿಕೇಸರಿಯ ರಾಜಧಾನಿಯಲ್ಲಿ (ಅರಿಕೇಸರಿಯ ರಾಜಧಾನಿ ಬೋಧನವೇ ಇಲ್ಲವೆ ವೇಮುಲವಾಡವೇ ಎಂಬ ಬಗೆಗೆ ಭಿನ್ನಾಭಿಪ್ರಾಯವಿದೆ). ಅದು ಇದ್ದದ್ದು ಕನ್ನಡ ತೆಲುಗುಗಳೆರಡೂ ಪ್ರಚಾರದಲ್ಲಿದ್ದ ಸೀಮೆಯಲ್ಲಿ. ಜಿನವಲ್ಲಭನ ಗಂಗಾಧರಂ ಕನ್ನಡ ಶಾಸನದಲ್ಲಿ ಮೂರು ತೆಲುಗು ಕಂದಪದ್ಯಗಳಿರುವ ಅಂಶವನ್ನು ಇಲ್ಲಿ ಗಮನಿಸಬಹುದು. ಪಂಪನ ಪೂರ್ವಜರು ವೆಂಗಿಪುವಿನ (ತೆಲುಗಿನಲ್ಲಿ ವೆಂಗಿಪರ್ರು ಎಂದು ಉಚ್ಚರಿಸುತ್ತಿದ್ದೆರೆಂದು ಕಾಣುತ್ತದೆ) ಕಮ್ಮೆ ಬ್ರಾಹ್ಮಣರು (ಕರ್ಮಕಾಂಡಕ್ಕೆ ಪ್ರಾಧಾನ್ಯ ಕೊಟ್ಟ ಸ್ಮಾರ್ತರು). ಬಹುಶಃ ಕನ್ನಡ ತೆಲುಗುಗಳೆರಡನ್ನೂ ಬಲ್ಲವರು. ಆದರೆ, ಭಾರತದಲ್ಲಿ ಪಂಪ ಹೇಳುವುದೇನು ? ರಾಜದ್ರಾಜಕಮೆನಿಸಿದ ಸಾಜದ ಪುಲಿಗಯ ತಿರುಳಕನ್ನಡದೊಳ್ ನಿವ್ರ್ಯಾಜದೆಸಕದೊಳೆ ಪುದಿದೊಂದೋಜೆಯ ಬಲದಿನಿಯ ಕವಿತೆ ಪಂಪನ ಕವಿತೆ - ಎಂದಲ್ಲವೆ ? ಈ ತಿರುಳಗನ್ನಡ ಅವನ ನಾಲಗೆಯಲ್ಲಿ ಊರಿದ್ದು ಹೇಗೆ ? ಜಿನವಲ್ಲಭನ ಶಾಸನದಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕುತ್ತದೆ. ಪಂಪನ ತಾಯಿಯ ಊರು ಬೆಳ್ವೊಲ. ಪ್ರಾಂತ್ಯ ಕವಿರಾಜಮಾರ್ಗಕಾರನೂ ಪಂಪನೂ ಹೊಗಳುವ ತಿರುಳ್ಗನ್ನಡದ ಪುಲಿಗೆರೆಯ ನೆರೆಯ ನಾಡು, ಪಂಪ ತನ್ನ ಶೈಶವ ಬಾಲ್ಯಗಳನ್ನು ಇಲ್ಲಿಯೇ ಕಳೆದಿರಬೇಕು. ಭೀಮಪಯ್ಯನೂ ವೆಂಗಿಪವನ್ನು ಬಿಟ್ಟು ಈ ಪ್ರಾಂತ್ಯಕ್ಕೆ ಬಂದು ನೆಲಸಿರಬಹುದು. ಅರಿಕೇಸರಿಯೂ ಇಂದ್ರೇಂದ್ರನ (ಎಂದರೆ, ರಾಷ್ಟ್ರಕೂಟ ಚಕ್ರವರ್ತಿ ಮೂರನೆಯು ಇಂದ್ರ ಕ್ರಿ.ಶ. 915-928) ತೋಳೆ ತೊಟ್ಟಲಾಗಿರೆ. ಬಳೆದವ ಬಹುಶಃ ಸಮಾನ ವಯಸ್ಕರಾದ ಅರಿಕೇಸರಿ ಪಂಪರು ರಟ್ಟ (ರಾಷ್ಟ್ರಕೂಟ) ರಾಜ್ಯದಲ್ಲಿ ಒಂದೇ ಗುರುಕುಲದಲ್ಲಿ ಓದಿದವರು. ಒಡನೋದಿದವರಾಗಿ ಒಡನಾಡಿಗಳು. ಒಡನಾಟ ನಿಮಿತ್ತದಿಂದ, ಅರಿಕೇಸರಿಯ ಶಸ್ತ್ರಾಭ್ಯಾಸದಲ್ಲಿ ಬ್ರಾಹ್ಮಣ ಕುಲದ ಜೈನ ಪಂಪ ಪಾಲ್ಗೊಂಡ, ಅರಿಕೇಸರಿ ಕವಿತಾಗುಣವನ್ನು ಮೆಚ್ಚಿಕೊಂಡು, ಅವನ ಕಾವ್ಯರಚನೆಯಲ್ಲಿ ಆಸಕ್ತಿ ತಳೆದವನಾದ. ಸಮಾನಶೀಲರಾದ ಇಬ್ಬರ ಸ್ನೇಹ ಗಾಢವಾಗಿ ಬೆಳೆಯಿತು. ಪಂಪನನ್ನು ಅರಿಕೇಸರಿ ಮನ್ನಿಸಿ, ಈ ಬಾಲ್ಯ ಸ್ನೇಹಿತನನ್ನು ಕರೆಯಿಸಿಕೊಂಡು, ಅವನಿಂದ ಇತಿಹಾಸಕಥೆಯನ್ನು ಬರೆಯಿಸುವ ವೇಳೆಗೆ (ಪಂಪನ ಒಂದು ಪದ್ಯದ ಆಧಾರದ ಮೇಲೆ) ಪಂಪ ಅರಿಕೇಸರಿಯ ಪರವಾಗಿ ಅನೇಕ ಯುದ್ಧಗಳಲ್ಲಿ ಹೋರಾಡಿದನೆಂದು ಸಾಮಾನ್ಯವಾಗಿ ಎಲ್ಲ ವಿದ್ವಾಂಸರೂ ಅಭಿಪ್ರಾಯಪಟಿದ್ದಾರೆ. ಇದು ಸರಿಯೆಂದು ತೋರುವುದಿಲ್ಲ. ಆಧಿನಾಥ ಎಂದರೆ ಚಕ್ರವರ್ತಿ. ಅರಿಕೇಸರಿ ರಾಷ್ಟ್ರಕೂಟ ಚಕ್ರವರ್ತಿಗಳ ಸಾಮಂತ ಚೂಡಾಮಣಿ. ಆದ್ದರಿಂದ ಬಹುಶಃ ಅರಿಕೇಸರಿ ಬದ್ದೆಗನಿಗಾಗಿ (ಸು. 930-35ರ ನಡುವೆ) ಹೋರಾಡಿದಾಗ, ಮತ್ತಿನ್ನೂ ಕೆಲವು ಸಂದರ್ಭಗಳಲ್ಲಿ ಪಂಪನೂ ಅವನ ಪಕ್ಷವಾಗಿ ಹೋರಾಡಿ ಪ್ರಸಿದ್ಧನಾಗಿರಬೇಕು. ಆದ್ದರಿಂದ, ಪಂಪ ರಟ್ಟ ರಾಜ್ಯದಲ್ಲಿ ರಾಷ್ಟ್ರಕೂಟ ಚಕ್ರವರ್ತಿಗಳ ಅಧೀನನಾಗಿ ದಂಡನಾಯಕರಲ್ಲಿ ಒಬ್ಬನಾಗಿ ಸೈನಿಕ ವೃತ್ತಿಯನ್ನು ಅವಲಂಬಿಸಿ ಅನೇಕ ಯುದ್ಧಗಳಲ್ಲಿ ಹೋರಾಡಿದ. ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಯಾದವೀ ಕಲಹ ಪ್ರಾಪ್ತವಾದಾಗ ಬದ್ದೆಗನ ಪಕ್ಷ ವಹಿಸಿದ್ದ ಅರಿಕೇಸರಿಯ ಜೊತೆಯೆ ಹೋರಾಡಿದ್ದು ತೀರ ಸಂಭವ. ಬದ್ದೆಗನೇ (ಅಮೋಘವರ್ಷ 3 : ಕ್ರಿ.ಶ. 935-939) ಪಂಪನ ಆ ಪದ್ಯದಲ್ಲಿ ಉಕ್ತನಾದ ಆಧಿನಾಥ. ಪಂಪನಿಗೂ, ಅರಿಕೇಸರಿಗೂ ಮುಂದೆ, ಕೃಷ್ಣ III (ರನ್ನರ : ಕ್ರಿ.ಶ. 939-966) ಪೊನ್ನನನ್ನು ಕವಿಚಕ್ರವರ್ತಿಯೆಂದು ಮನ್ನಿಸಿದನೇ ಹೊರತು ಪಂಪನನ್ನಲ್ಲ. ಈ ಹಿನ್ನೆಲೆಯಲ್ಲಿ ಹೇಳಿರಬಹುದೆ ಪಂಪ ಪೆರೀವುದೇಂ ಎಂದು ಮುಂತಾಗಿ ? ರಾಜರ ಬಗೆಗೆ ತಿರಸ್ಕಾರದ ಮಾತು ಬಂದಾಗಲೆಲ್ಲ ಅದು ಅವಶ್ಯವಾಗಿ ಪಂಪನ ಸ್ವಂತ ಅಭಿಪ್ರಾಯವೆಂದು ಗ್ರಹಿಸಬೇಕಾಗಿಲ್ಲವಾದರೂ ಹಲವು ಬಾರಿ ಮೊನೆಯೂರಿ ಬಂದಿರುವ ಅಂಥ ಮಾತುಗಳ ಹಿಂದೆ ಪಂಪನ ತಿರಸ್ಕಾರ ಮನೋಭಾವವನ್ನೂ ಗುರುತಿಸಿದರೆ ತಪ್ಪಾಗದು. ಅಂಥಲ್ಲಿ, ಅವನ ಮನಸ್ಸಿನಲ್ಲಿ ನಾಮ ಧಾರಕ ನೃಪರಾದ ರಾಷ್ಟ್ರಕೂಟ ಚಕ್ರವರ್ತಿಗಳಿಗೂ ಅವರ ಇತರ ಮಹಾಸಾಮಂತರೂ ಇದ್ದಿರಬಹುದೇ ಹೊರತು ಸಾಮಂತ ಚೂಡಾಮಣಿಯಾದ ಗುಣಾರ್ಣವ ಅರಿಕೇಸರಿಯಲ್ಲವೆಂಬುದು ಸ್ಪಷ್ಟ. (ಆದಿಪುರಾಣ ರಚನೆಯ ಕಾಲದಲ್ಲಿ ಗುಣಾರ್ಣವನನ್ನು ನೆನೆದು ತನ್ನನ್ನು ಕವಿತಾಗುಣಾರ್ಣವ ಎಂದು ಪಂಪ ಕರೆದುಕೊಂಡಿರಬಹುದು. ಕ್ರಿ.ಶ. 927ರ ವೇಮುಲವಾಡ ಶಾಸನದಲ್ಲಿಯೆ ಅರಿಕೇಸರಿಗೆ ಗುಣಾರ್ಣವನೆಂಬ ವಿಶೇಷವಿದೆ). ಜೋಳದ ಪಾಳಯ ಸೇವಕ-ಸೇವ್ಯ ಸಂಬಂಧ ಪಂಪ-ಅರಿಕೇಸರಿಗಳ ನಡುವೆ ಇದ್ದಂತೆ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ಪರಿಭಾವಿಸಿದರೆ, ಅರಿಕೇಸರಿಯ ಗುಣಾರ್ಣವವನ್ನು ಮೆಚ್ಚಕೊಂಡಿದ್ದ ಪಂಪನಿಗ, ಈ ಕಥೆಯೊಳ್ ಗುಣಾರ್ಣವ ಭೂಭುಜನಂ ಕಿರೀಟಿಯೊಳ್ ತಗುಳ್ಚಿ ಪೋಲಿಪೊಡೆ ಅತ ಯಾದದ್ದು ಆಶ್ಚರ್ಯವೆನಿಸದು.

ಸ್ವಾಭಿಮಾನಿಯಾದ ಪಂಪನಿಗೆ ತನ್ನ ರೂಪಿನಲ್ಲಿ, ವ್ಯಕ್ತಿತ್ವದಲ್ಲಿ ಮಿಗಿಲಾದ ಹೆಮ್ಮೆ. ತಾನು ಧಾತ್ರಿವಳಯ ನಿಳಿಂಪು, ಚತುರಂಗಬಳಭಯಂಕರಣಂ, ನಿಷ್ಕಂಪಂ, ಲಲಿತಾಲಂಕರಣಂ. ಪಂಚಶರೈಕರೂಪಂ, ಅಪಗತಪಾಪಂ, ಅವನ ರೂಪೋ ಕದಳೀ ಗರ್ಭಶ್ಯಾಮಂ, ಮೃದುಕುಟಿಲ ಶಿರೋರುಹಂ, ಮೃದುಮಧ್ಯಮತನು, ಹಿತಮಿತ ಮೃದುವಚನಂ, ಲಲಿತಮಧುರ ಸುಂದರವೇಷಂ. ತನ್ನ ಲಲನಾಲೋಲುಪ್ತಿಯನ್ನೂ ಸಂಕೋಚವಿಲ್ಲದೆ ತಿಳಿಸಿದ್ದಾನೆ, ಪಂಪ ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನನ ಮೂಲಕ ಮಾಡಿಸಿರುವ ಬನವಾಸಿಯ ವರ್ಣನೆ ಪಂಪ ಅರಿಕೇಸರಿಗಳಿಬ್ಬರ ಬನವಾಸಿ ಪ್ರೇಮಕ್ಕೂ ನಿದರ್ಶನ. ಪಂಪನ ತಾಯ ತವರೂರು ಪುಲಿಗೆರೆ ಎಂದು ಹಿಂದೆಯೇ ಸೂಚಿಸಿದೆ ; ಪುಲಿಗೆರೆ ಬನವಾಸಿಯ ನೆರೆಕರೆಯ ಊರು. ಬಾಲ್ಯದ ಒಡನಾಡಿಗಳಾಗಿದ್ದ ಅರಿಕೇಸರಿ ಪಂಪರು ಬನವಾಸಿಯ ಪ್ರಾಂತ್ಯದಲ್ಲಿ ಒಂದಿಗೆಯೇ ಕೆಲ ಕಾಲವನ್ನಾದರೂ ಕಳೆದಿರಬೇಕು ; ಇಬ್ಬರಿಗೂ ಅದು ಮಾತಾಮಹರ ಕಡೆಯವರ ಬೀಡು. ಈ ಸಂದರ್ಭದ ಹಿನ್ನೆಲೆಯಲ್ಲಿಯೇ ಬನವಾಸಿಯ ವರ್ಣನೆಯ ಔಚಿತ್ರಯವನ್ನು ಕಂಡುಕೊಳ್ಳಬೇಕು. ಪಂಪ ಅರಿಕೇಸರಿಗಳ ಬದುಕಿನುದ್ದಕ್ಕೂ ಸಾಗಿಬಂದ ಈ ಸ್ನೇಹವೇ ಕರ್ಣದುರ್ಯೋಧನರ ಸ್ನೇಹದ ಚಿತ್ರಣದ ವಾಜ್ಯದಲ್ಲಿ ಚಿತ್ರಿತವಾಗಿದೆಯೆಂದು ಅನೇಕ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಪಂಪನ ಸಂಬಂಧವಾಗಿ ನಾವು ಮಾಡಬಹುದಾದ ಸಂಭಾವ್ಯ ಊಹೆಗಳಲ್ಲಿ ಇದೂ ಒಂದು. ಬನವಾಸಿಯ ವರ್ಣನೆ ಪಂಪನಿಗೆ ಎಷ್ಟರಮಟ್ಟಿಗೆ ಸಂಬಂಧಪಟ್ಟುದೋ ಅರಿಕೇಸರಿಗೂ ಅಷ್ಟರ ಮಟ್ಟಿಗೆ ಸಂಬಂಧಪಟ್ಟದ್ದು. ಪದ್ಯ :- ತೆಂಕಣಗಾಳಿ ಸೋಂಕಿದೊಡಂ, ಒಳ್ನೂಡಿಗೇಳ್ದೊಡಂ, ಇಂಪನಾಳ್ದಗೇ ಯಂ ಕಿವಿವೊಕ್ಕೊಡಂ, ಬಿರಿದ ಮಲ್ಲಿಗೆಗಂಡೊಡಂ, ಆದಕೆಂದಲಂ ಪಂಗೆಡೆಗೊಂಡೊಡಂ, ಮಧುಮಹೋತ್ಸವಮಾದೊಡಂ. ಏನನೆಂಬೆನ್, ಆರ್ ಅಂಕುಸಮಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಂ ಪದ್ಯ :-

ತವರು ನಾಡಿನ ಬಗೆಗಿನ ಈ ಅದಮ್ಯವಾದ ತೊಳಲಿಕೆ ಪಂಪನ ಹೃದಯದಿಂದ ಚಿಮ್ಮಿರುವುದು ಎಷ್ಟು ಸತ್ಯವೋ ಅರಿಕೇಸರಿಯ ಹೃದಯವನ್ನು ತಟ್ಟಿರುವದೂ ಅಷ್ಟೇ ಸತ್ಯ

ಗುರು ದೇವೇಂದ್ರಮುನೀಂದ್ರಂ. ರಾಜಾಧಿರಾಜರಿಂದ ಪೂಜಿತರಾದ. ಕೊಂಡ ಕುಂದಾನ್ವಯದ ಈದೇವೇಂದ್ರಮುನಿ ಬಹಳ ಪ್ರಖ್ಯಾತನಾಗಿದ್ದನೆಂದು ಶ್ರವಣಬೆಳ್ಗೊಳದ ಶಾಸನವೊಂದರಿಂದ ತಿಳಿದುಬರುತ್ತದ. ಈ ಆಧಾರದಿಂದ ದೇವೇಂದ್ರ ಮುನಿಯ ಸ್ಥಳ ಶ್ರವಣಬೆಳ್ಗೊಳವೆಂದೂ ಪಂಪನ ವಿದ್ಯಾಭ್ಯಾಸ ಅಲ್ಲಿಯೇ ಸಾಗಿತೆಂದೂ ಕೆ.ಜಿ. ಕುಂದಣಗಾರರು ಊಹಿಸುತ್ತಾರೆ. ಪಂಪ ತನ್ನ ಗುರುಗಳನ್ನು ಸ್ಮರಿಸುವಾಗ ಜಯನಂದಿಮುನಿಯನ್ನು ಸ್ಮರಿಸುವುದರಿಂದಲೂ ಜಿನವಲ್ಲಭ ತನ್ನ ಶಾಸನದಲ್ಲಿ ಕೊಂಡ ಕುಂದೆಯ ದೇಸಿಗ ಗಣದ ಪೊತ್ಥಗೆಯ ಬಳಿಯ ಪಂಡರಂಗವಲ್ಲಿಯ ಜಯಣನ್ದಿ ಸಿದ್ದಾನ್ತ ಭಟಾರರ ಗುಡ್ಡಂ ಜಿನವಲ್ಲಭಂ ಎಂದು ಹೇಳಿಕೊಂಡಿರುವುದರಿಂದಲೂ ಅಣ್ಣತಮ್ಮಂದಿರಿಬ್ಬರೂ ಜಯನಂದಿಯ ಶಿಷ್ಯರಾಗಿದ್ದರೆಂದು ಹೇಳಬಹುದು. ಮುನಿಜನದೋದಿಸಿದೋಜೆಯೊಳನುವದಿಪುದಿದೊಂದೆ ಕೊಂಡ ಕುಂದಾನ್ವಯ ನಂದನ ವನಶುಕಂ ಎಂಬ ಪಂಪನ ಹೇಳಿಕೆ ಇದಕ್ಕೆ ಪೋಷಕವಾಗಿದೆ.

ಈಗ ಪಂಪನವೆಂದು ನಮಗೆ ದೊರೆತಿರುವ ಕೃತಿಗಳೆಂದರೆ ಆದಿ ಪುರಾಣ ಮತ್ತು ಪಂಪಭಾರತ ಎಂದು ಪ್ರಸಿದ್ಧವಾಗಿರುವ ವಿಕ್ರಮಾರ್ಜುನವಿಜಯ. ವಿಕ್ರಮಾರ್ಜುನ ವಿಜಯದಲ್ಲಿ ಪಂಪ ತನ್ನ ಕೃತಿಗಳೆಂದು ಹೆಸರಿಸಿರುವವಾದರೂ ಈ ಎರಡು ಕೃತಿಗಳೇ. ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟಿದುವು ಸಮಸ್ತ ಭಾರತಮುಂ ಆದಿ ಪುರಾಣ ಮಹಾಪ್ರಂಧಮುಂ ಎಂಬ ಪಂಪನ ಹೇಳಿಕೆಗೆ, ಈ ಎರಡು ಕೃತಿಗಳು ಪಂಪ ಪೂರ್ವ ಗಣ್ಯಕೃತಿಗಳೆಲ್ಲವನ್ನೂ ಮೀರಿಸಿದುವು ಎಂದು ಸಾಮಾನ್ಯವಾಗಿ ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿರುವುದು ಸರಿಯೆಂದು ಕಾಣುತ್ತದೆ. ಮುಳಿಯ ತಿಮ್ಮಪ್ಪಯ್ಯನವರಾದರೊ ಈ ಹೇಳಿಕೆಯಿರುವ ಪದ್ಯವನ್ನು ವಿಸ್ತಾರವಾಗಿ ವಿಮರ್ಶೆ ಮಾಡಿ, ಅವನು ಅಭ್ಯಾಸ ಕವಿತೆಗಳಾಗಿ ಜಸಗಬ್ಬ, ಚಳಗಬ್ಬ, ಅಳಂಕೃತಿಗಬ್ಬ, ಕೈತಗಬ್ಬ, ದೇಸಿಗಬ್ಬ, ವಸ್ತುವಿದ್ಯೆಯ ಕಬ್ಬ ಎಂಬ ವಿಶಿಷ್ಟ ಗುಣೋಪೇತಗಳಾದ ಕೆಲವು ಕಾವ್ಯಗಳನ್ನು ಬರೆದಿದ್ದರಬೇಕೆಂದೂ ತನ್ನ ಈ ಮೊದಲಿನ ಕಬ್ಬಗಳನ್ನು ತನ್ನ ಭಾರತ ಮತ್ತು ಆದಿಪುರಾಣಗಳು ಇಕ್ಕಿಮೆಟ್ಟಿದುವು ಎಂದು ಹೇಳಿಕೊಂಡಿರುವನೆಂದೂ ಅಭಿಪ್ರಾಯಪಟ್ಟಿದ್ದಾರೆ. ಆತ ಅಭ್ಯಾಸ ಕವಿತೆಗಳನ್ನು ರಚಿಸಿದ್ದಿರಬಹುದು. ಆದರೆ ತನ್ನ ಪೂರ್ವ ಕಾವ್ಯಗಳ ಸ್ವರೂಪವನ್ನೇ ಪ್ರಸ್ತು ಪದ್ಯದಲ್ಲಿ ವಿವರಿಸಿದ್ದಾನೆ ಎನ್ನುವುದು ನಿರಾಧಾರವಾದ ಊಹೆ ಮಾತ್ರವಾಗಿ ಕಾಣುತ್ತದೆ.

ಆದಿಪುರಾಣ, ಪಂಪಭಾರತ : ಆದಿಪುರಾಣ ವಿಕ್ರಮಾರ್ಜುನ ವಿಜಯಗಳೆರಡೂ ಕನ್ನಡದ ಅಗ್ರಮಾನ್ಯ ಆದಿಮಹಾಕಾವ್ಯಗಳು. ಚಂಪೂ ಕಾವ್ಯಪ್ರಕಾರದ ಶ್ರೇಷ್ಠತಮ ಮಾದರಿಗಳು. ಆದಿಪುರಾಣ ಧಾರ್ಮಿಕಗ್ರಂಥ ; ಲೋಕ ಕಲ್ಯಾಣಕ್ಕಾಗಿ ಧರ್ಮಾಮೃತವನ್ನು ವರ್ಷಿಸಿದ ಆದಿತೀರ್ಥೇಶ್ವರಚರಿತ. ಕರ್ಣಾಮೃತಸ್ಯಂದಿಯಕ್ಕಿದು ಭವ್ಯಾವಳಿಗೆ ಎಂದು ಪಂಡಿತರು ಪ್ರೇರಿಸಿದರೂ ಮುಖ್ಯವಾಗಿ ತನಗೆ ಪುಣ್ಯದೊರಕಲೆಂದೂ ಕರ್ಮನಿರ್ಜರೆಯಾಗಲೆಂದೂ ಬಯಸಿ, ಅನಂತಸುಖಾಭಿಲಾಷಿಯಾಗಿ ಷೋಡಷ ಭಾವನೆಯಿಂದ ಬರೆದ ಷೋಡಶಾಶ್ವಾಸಗಳುಳ್ಳ ಪವಿತ್ರ ಗ್ರಂಥ. ಈ ಕಾವ್ಯ ರಚನೆಯಿಂದ ಪಂಪ ಆತ್ಮಸಂತುಷ್ಟಿಯನ್ನೂ ಪಂಡಿತ ಪ್ರಶಂಸೆಯನ್ನೂ ಗಳಿಸಿ ಪುರಾಣಕವಿಯೆಂದು ಪ್ರಸಿದ್ಧನಾದ.

ಪಂಪನ ಆದಿಪುರಾಣ ಜಿನಸೇನಾಚಾರ್ಯರ ಪೂರ್ವಪುರಾಣಕ್ಕೆ ಅನೇಕ ವಿಧಗಳಲ್ಲಿ ಋಣಿಯಾಗಿದೆ. ವಿಶ್ರುತವೀರಸೇನ ಜಿನಸೇನಾಚಾರ್ಯ ಪರ್ಯಂತಮಾಗಿರೆ ಬಂದೀ ಕಥೇಗುಣ್ಪುವೆತ್ತುದು, ಆಂ ಧೃಷ್ಟನೆನ್ ಈ ಕಥಾಬ್ದಿಯುಮಮನೇನಿಸಲ್ ಮನಂದಂದೆನೋ-ಎಂದು ತನ್ನ ಋಣವನೊಪ್ಪಿಕೊಂಡು ಪಂಪ ವಿನಯವನ್ನು ಮೆರೆದಿದಾನೆ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ಧಿಯನೀಸುವೆನ್ ಕವಿವ್ಯಾಸನೆನ್ ಎಂಬ ಗರ್ವಮೆನಗಿಲ್ಲ ಎಂದು ವಿಕ್ರಮಾರ್ಜುನ ವಿಜಯದಲ್ಲೂ ಇದೇ ಗುಣವನ್ನು ವ್ಯಕ್ತಪಡಿಸಿದ್ದಾನೆ. ಹೀಗೆ, ಈ ಎರಡು ಕೃತಿಗಳಲ್ಲಿಯೂ ಪಂಪ ಕಥಾವಸ್ತು ವಿಷಯದಲ್ಲಿ ಹೆರರಿಗೆ ಕಡಹೊತ್ತಿದ್ದರೂ ಅವನ ಅನ್ಯಾದೃಶ ಪ್ರತಿಭೆ ಮೂಲ ಕಥೆಗಳನ್ನು ಕುಗ್ಗಿಸುವಲ್ಲಿ ಕುಗ್ಗಿಸಿ, ಹಿಗ್ಗಸಬೇಕಾದಲ್ಲಿ ಹಿಗ್ಗಿಸಿ, ಆದಿಪುರಾಣದಲ್ಲಿ ಕಾವ್ಯಧರ್ಮ-ಧರ್ಮಗಳ ಸಮನ್ವಯವನ್ನು ಬಹುಮಟ್ಟಿಗೆ ಸಾಧಿಸಿ, ಭಾರತದಲ್ಲಿ ಲೌಕಿಕವನ್ನು ಎಂದರೆ ಲೋಕಧರ್ಮವನ್ನು ಉಜ್ಜ್ವಲವಾಗಿ ಬೆಳಗಿಸಿದೆ. ಎರಡು ಮಹಾಕಥಾಸಾಗರಗಳನ್ನೂ ಬಲ್ಮೆಯಿಂದ ಈಸಿ ಪಂಪ ಪಾರಂಗತನಾಗಿದ್ದಾನೆ. ಕತೆಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತಭಾರತಮುಮನ್ ಅಪೂರ್ವಮಾಗೆ ಪೇ ಇರಲಿಲ್ಲ. ವರ್ಣಕಂ (ಎಂದರೆ ಕಾವ್ಯೋಚಿತ ವರ್ಣನೆಗಳು) ಕಥೆಯೊಳೊಡಂಬಡಂಪಡೆಯ ಪೇಳ್ವೊಡೆ ಪಂಪನೆ ಪೇಳ್ ಎಂದು ಪಂಡಿತರೇ ಹೊಗಳಲು ಈ ಕೃತಿಯನ್ನು ರಚಿಸಲು ಮನಸ್ಸಾಯಿತೆಂದು ಹೇಳಿದ್ದಾನೆ. ಅಲ್ಲದೆ, ಅರಿಕೇಸರಿ ಪಂಪನಿಗೆ ಪಿರಿದನಿತ್ತು ಗೌರವಿಸಿ, ಇತಿಹಾಸ ಕಥೆಯನ್ನು ಬರೆಯಲೊಪೊಸಿದ. ಗುಣಾರ್ಣವನ ಒಳ್ಪು ಅವನ ಮನಸ್ಸನುನ ಹಿಡಿಯಿತು. ಒಟ್ಟಿನಲ್ಲಿ ಪೂರ್ವಭೂಮಿಪರನ್ನು ಮೀರಿಸಿದ ಅರಿಕೇಸರಿಯನ್ನು ಅರ್ಜುನನೊಂದಿಗೆ ಹೋಲಿಸಲು ಪಂಪನಿಗೆ ಒಲವಾಯಿತು. ಅರ್ಜುನನೊಂದಿಗೆ ಅಭೇದಕಲ್ಪನೆಮಾಡಿ, ಚಾಗಬೀರಗಳಲ್ಲಿ ಅಸಮಾನನಾದ ಅರಿಕೇಸರಿಯನ್ನು ಕಥಾನಾಯಕನ್ನಾಗಿ ಮಾಡಿಕೊಂಡ.

ಈ ಎರಡು ಕೃತಿಗಳೂ ಪಂಪನ ಪ್ರತಿಭೆಯನ್ನು ಶಾಶ್ವತವಾಗಿ ವಿಶ್ವವ್ಯಾಪಿಯಾಗಿ ಬೆಳಗುವ ಕೃತಿಗಳೆಂಬುದರಲ್ಲಿ ಸಂದೇಹವೇ ಇಲ್ಲ. ಆಧುನಿಕ ವಿಮರ್ಶೆಯ ಪುನರ್ಮೌಲ್ಯ ಮಾಪನದ ಅಗ್ನಿಪರೀಕ್ಷೆಯಲ್ಲಿ ಎಂದೂ ತೇರ್ಗಡೆಯಾಗಬಲ್ಲ ಸತ್ತ್ವವನ್ನು ಹೊಂದಿರುವ ಉದ್ಘಕೃತಿಗಳಿವು. ಆದರೂ ಈ ಕೃತಿಗಳ ಕೆಲವು ಕುಂದು ಕೊರತೆಗಳನ್ನು ಗಮನಿಸದೆ ಹೋದರೆ ವಿಮರ್ಶೆಯ ನೋಂಪಿಗೆ ಭಂಗವುಂಟಾಗುತ್ತದೆ. ಜಿನಸೇನಾಚಾರ್ಯ ಹಾಗೂ ವ್ಯಾಸಮುನೀಂದ್ರರಿಂದ ಕಥಾವಸ್ತುಗಳನ್ನು ಪಡೆದ ಋಣವನ್ನು ಒಪ್ಪಿಕೊಂಡಿರುವ ಪಂಪ ತನಗಿಂತ ಹಿಂದಿನ ಸಂಸ್ಕøತ ಮಹಾಕವಿಗಳಿಂದ ಪ್ರಭಾವಿತನಾಗಿದ್ದರೂ ಅವರನ್ನು ಸ್ಮರಿಸದಿರುವುದು ಒಂದು ಕ್ರಿಯಾಲೋಪವೆಂದೇ ಹೇಳಬೇಕು. ಭಾಸ, ಕಾಳಿದಾಸ, ಹರ್ಷ, ಬಾನ, ಮಾಘ, ಭಾರವಿ. ಈ ಸಂಸ್ಕøತ ಮಹಾಕವಿಗಳ ಪ್ರಭಾವವನ್ನು ಪಂಪನ ಕೃತಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಉದಾಹರಣೆಗೆ, ಅರ್ಜುನನು ಪಾಶುಪತಾಸ್ತ್ರವನ್ನು ಪಡೆದ ಪ್ರಕರಣದಲ್ಲಿ ಭಾರವಿಯ ಕಿರಾತಾರ್ಜುನೀಯದ ಪ್ರಭಾವ ಮುದ್ರೆಯನ್ನು ಕಾಣಬಹುದು. ಆದಿಪುರಾಣದಲ್ಲಿ ಜೈನಧರ್ಮದ ಶಾಸ್ತ್ರ ಪ್ರಕ್ರಿಯೆಯ ವಿವರಗಳನ್ನು ಬಿತ್ತರಿಸಿರುವ ಭಾಗಗಳು ಕಾವ್ಯದ ಉತ್ತಮಿಕೆಯನ್ನು ತಗ್ಗಿಸಿವೆ. ಈ ದೋಷ ಸಂಭವಕ್ಕೆ ವಸ್ತುವಿನ ಸ್ವರೂಪವೇ ಕಾರಣವೆಂದು ಕೆಲವು ವಿಮರ್ಶಕರ ಅಭಿಪ್ರಾಯ. ಕಾವ್ಯ ನಿರೂಪಣೆಯಲ್ಲಿ ಕೈ ಬಿಡಬಹುದಾಗಿದ್ದ ಈ ನೀರಸ ಭಾಗಳನ್ನು ಹಾಗೆ ಮಾಡದಿರಲು ಕವಿಯ ಧರ್ಮಶ್ರದ್ಧೆಯೇ ಕಾರಣ. ವಿಕ್ರಮಾರ್ಜುನ ವಿಜಯದಲ್ಲಿ ಅಜುನ ಅರಿಕೇಸರಿಗಳಿಗೆ ಅಭೇದ ಕಲ್ಪನೆ ಮಾಡಿಕೊಂಡದ್ದರ ಪರಿಣಾಮವಾಗಿ ಅನೇಕ ಆಭಾಸಗಳಿಗೆ ಅವಕಾಶವಾಗಿದೆ. ಕಾವ್ಯದೃಷ್ಟಿಯಿಂದ ಕವಿ ಉದ್ದೇಶಪೂರ್ವಕವಾಗಿ ಮೂಲಕಥೆಯಲ್ಲಿ ಮಾಡಿಕೊಳ್ಳುವ ಮಾರ್ಪಾಟುಗಳಿಗೂ (ಉದಾ : ಭಾಸನ ಪಂಚರಾತ್ರ) ಆಶ್ರಯದಾತನ ಪ್ರೀತ್ಯರ್ಥವಾಗಿ ಮಾಡಿಕೊಳ್ಳಬೇಕಾಗಿ ಬಂದ ಅನಿವಾರ್ಯ ಕಥಾವ್ಯತ್ಯಾಸಗಳಿಗೂ ಇರುವ ಸ್ವರೂಪಭೇದವನ್ನು ಗಮನಿಸಬೇಕು. ಮಹದಾಭಾಸವಾಗಿ ಕಾಣುವ ಒಂದು ದೃಷ್ಟಾಂತವನ್ನು ಇಲ್ಲಿ ಎತ್ತಿ ಹೇಳಬಹುದಾಗಿದೆ. ಮೂಲ ಭಾರತದಲ್ಲಿ ಅರ್ಜುನ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದರೂ ಕುಂತಿಯ ವಾಕ್ಯ ಕಾರಣವಾಗಿ ಅವಳು ಪಂಚವಲ್ಲಭೆಯಯಾಗುವಳಷ್ಟೆ. ಅರಿಕೇಸರಿಯನ್ನು ಪಂಚವಲ್ಲಭೆಯ ಪತಿಯಾಗಿ ಮಾಡುವುದು ಕವಿಗೆ ನುಂಗಲಾರದ ತುತ್ತಾಯಿತು. ಈ ಪ್ರಕರಣವನ್ನು ತೇಲಿಸಿಬಿಟ್ಟ, ದ್ರೌಪದಿಯನ್ನು ಪಾಣಿಗ್ರಹಣ ಮಾಡಿದವ ಅರ್ಜುನನೊಬ್ಬನೇ. ಆದರೆ, ದುಶ್ಯಾಸನನಿಂದ ದ್ರೌಪದಿ ಮಾನಭಂಗವಾದಾಗ ಭೀಮನ ಪ್ರತಿಜ್ಞೆ, ದುಶ್ಯಾಸನ ವಧೆ, ದುಶ್ಯಾಸನ ವಧಾನಂತರ ಪ್ರತಿಜ್ಞಾ ಪೂರಣ ಈ ಸಂದರ್ಭಗಳಲ್ಲಿ ಕವಿ ನಿರುಪಾಯವಾಗಿ ಭೀಮನನ್ನು ಹಿಂಬದಿಯಲ್ಲಿರಿಸಿ ಅಜುನನ್ನು ಕಾರ್ಯರಂಗಕ್ಕೆ ತರಲಾಗದೆ, ಭೀಮನನ್ನೇ ದ್ರೌಪದಿ ಮಾನಸಂರಕ್ಷಕನನ್ನಾಗಿ ಒಪ್ಪಿಕೊಳ್ಳಬೇಕಾಯಿತು. ಕಥೆಗೆ ಸಂಬಂಧವಿಲ್ಲದಿದ್ದರೂ ಅರ್ಜುನನ ವೇಶ್ಯಾವಾಟಿ ವಿಹಾರ, ಮೃಗಯವಿನೋದ ಇವುಗಳ ವರ್ಣನೆ ಯಾವ ರೀತಿಯಿಂದಲೂ ಕಾವ್ಯಕ್ಕೆ ಪೋಷಕಗಳಲ್ಲ. ಧರ್ಮರಾಜ ದ್ರೌಪದಿಯರಿಗೆ ಪಟ್ಟವಾಗದೆ, ಅರ್ಜುನ ಸುಭದ್ರೆಯರಿಗೆ ಪಟ್ಟಾಭಿಷೇಕವಾದಂತೆ ನಿರೂಪಿಸಿರುವುದೂ ನೆನೆಯದಿರಣ್ಣ ಭಾರತದೊಳಿನ್ ಪೆರಾರುಮನ್ ಒಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನಯ ; ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ-ಎಂಬ ಕರ್ಣಪ್ರಶಸ್ತಿಯು ಅನೌಚಿತ್ಯಗಳು. ಅರಿಕೇಸರಿಯ ಬಿರುದುಗಳನ್ನೂ ಪ್ರಶಸ್ತಿಗಳನ್ನೂ ಅರ್ಜುನನಿಗೆ ಆರೋಪಿಸಿರುವಲ್ಲಿಯೂ ಕೆಲವೆಡೆ ಅನೌಚಿತ್ಯ ಕಾನಿಸಿಕೊಂಡಿದೆ. ವ್ಯಾಸರಲ್ಲಿ ಎಷ್ಟೇ ಗೌರವಭಾವವನ್ನು ಹೊಂದಿದ್ದರೂ, ಭಾರತ ಕಥಾಸೂತ್ರಧಾರನೆನ್ನಬಹುದಾದ ಕೃಷ್ಣಪಾತ್ರವನ್ನು ಅಲಕ್ಷಿಸಿರುವುದು ವ್ಯಾಸಭಾರತಕ್ಕೆ ಕವಿಯಿಂದ ಆಗಿರುವ ಅಪಚಾರ. ಭಾರತ ಕಥೆಯ ವೈದಿಕ ಧರ್ಮನಿಷ್ಠೆಯನ್ನು ಅಳಿಸಿ, ಅದನ್ನು ಲೌಕಿಕವಾಗಿ ಮಾಡುವ ಪ್ರಯತ್ನದ ಪರಿಣಾಮವಿದೆಂದು ಕಾಣುತ್ತದೆ. ಹೀಗಿದ್ದರೂ ಪಂಪನ ಕಾವ್ಯಪ್ರತಿಭೆ ಮೂಲಕಥಾಪ್ರಸಂಗಗಳನ್ನು ರಸಸ್ಯಂದಿಯಾಗಿ ನಿರ್ವಹಿಸುವುದು (ಉದಾ : ಪಾಂಡುವಿನ ಮರಣ), ಪಾತ್ರ ನಿರ್ಮಾಣದಲ್ಲಿ ಮಾನವ ಸ್ವಭಾವ ಪ್ರಜೆ. (ಉದಾ : ಕರ್ಣ-ಭೀಷ್ಮರ ಪಾತ್ರಗಳು) , ಕಿರಿದೂಳೆ ಪಿರಿದುಮನರ್ಥಮಂ ನೆಪಲ್ ನೆವ ಅನ್ಯಾದೃಶ ಸಾಮಥ್ರ್ಯ. ಸಂದರ್ಭೋಚಿತವೂ ಹೃದ್ಯವೂ ಆದ ಪ್ರಕೃತಿ ವರ್ಣನೆ, ಅಕ್ಷರಶಕ್ತಿ ಶಬ್ದಶಕ್ತಿ ಅರ್ಥಶಕ್ತಿ ಶಬ್ದಶಕ್ತಿ ಅರ್ಥಶಕ್ತಿ, ಛಂದೋಲಯ ಇವುಗಳನ್ನು ಧ್ವನಿ ಸಿದ್ಧಿಗಾಗಿ ಬಳಸಿಕೊಳ್ಳುವ ಕಾವ್ಯಕೌಶಲ, ನಾಟಕೀಯ ಪ್ರಜ್ಞೆ, ಶಬ್ದಚಿತ್ರ ನಿರ್ಮಾಣ ಶಕ್ತಿ-ಇವೇ ಮುಂತಾದ ಕಾವ್ಯಗುಣಗಳನ್ನು ಹೊಮ್ಮಿಸಬಲ್ಲ ಪಂಪನ ಕಾವ್ಯ ಪ್ರತಿಭೆ-ಈ ಹಿಂದೆ ಸೂಚಿಸಿದಂಥ ಲೋಪದೋಷಗಳನ್ನು ಮರೆಸಿಬಿಡುವ ಮಟ್ಟಿನ ಉತ್ಕರ್ಷದ ಮಟ್ಟವನ್ನು ಮುಟ್ಟಿ ಪಂಪನನ್ನು ಕವಿಗಳ ಕವಿಯಾಗಿ ಮಾಡಿ, ಸುಕವಿಜನಮನೋಮಾನಸೋತ್ತಂಸಹಂಸಂ ಎಂಬ ಅವನ ಬಿರುದನ್ನು ಸಾರ್ಥಕಪಡಿಸಿದೆ. ಕಾವ್ಯದ ರಸಸ್ಥಾನಗಳನ್ನೂ ಚೆಲುವುದಾಣಗಳನ್ನೂ ಬಿಡಿಬಿಡಿಯಗಿ ಪರೀಕ್ಷಿಸಿದಾಗ ದೇಸಿ ಮತ್ತು ಮಾರ್ಗಶೈಲಿಗಳ ಹದವಾದ ಮಿಶ್ರಣವುಳ್ಳ ವಿಕ್ರಮಾರ್ಜುನವಿಜಯ ಆದಿಪುರಾಣಕ್ಕಿಂತ ಮೇಲಾದ ಕಾವ್ಯ ಎಂಬುದು ಸ್ಫಟಿಕ ಸ್ಪಷ್ಟ. ಆದೆ ಕಾವ್ಯಶಿಲ್ಪದ ದೃಷ್ಟಿಯಿಂದ ಇಡಿಯಾಗಿ ಪರಿಸೀಲಿಸಿದಾಗ ಪಂಪನ ಧರ್ಮಶ್ರದ್ಧೆಯಿಂದಲೂ ಭಕ್ತಿಜ್ಞಾನ ವೈರಾಗ್ಯಭಾವನೆಗಳಿಂದಲೂ ಕವಿತಾವೇಶದ ಪ್ರಥಮ ಸ್ಫೂರ್ತಿಯಿಂದಲೂ ಪ್ರಜ್ವಲಿಸುವ ಈ ಕಾವ್ಯ ಕಡೆಗೆ ಆತನ ಭಾರತಕ್ಕೆ ಒಂದು ಕೈಮೇಲೆಂದು ಹೇಳಿದರೂ ಹೇಳಬಹುದಾಗಿದೆ ಎಂಬ ಬಿ.ಎಂ.ಶ್ರೀ. ಯವರ ಮಾತನ್ನು ಒಪ್ಪುವ ಮನಸ್ಸಾಗುತ್ತದೆ. ಭಾರತ ಆದಿಪುರಾಣಗಳಲ್ಲಿ ಆದಿಪುರಾಣಕ್ಕೆ ಹೆಚ್ಚಿನ ಗೌರವದ ಸ್ಥಾನ ಸಲ್ಲುವುದು ನ್ಯಾಯವಾಗಿದೆ. ಲೌಕಿಕವನ್ನು ಭಾರತದಲ್ಲಿಯೂ ಆಗಮವನ್ನು ಆದಿಪುರಾಣದಲ್ಲಿಯೂ ಪಂಪ ಬೆಳಗಿರುವುದೇ ಇದಕ್ಕೆ ಕಾರಣವೆನ್ನಬೇಕು. ಅಲ್ಲದೆ ಪಂಪನ ಆದಿಪುರಾಣದ ದರ್ಶನ ಪೂರ್ವಕವಾದ ಕಲೆ ಆತನ ಕಲಾ ಪೂರ್ಣವಾದ ವಿಕ್ರಮಾರ್ಜುನ ವಿಜಯದ ದರ್ಶನಕ್ಕಿಂತಲೂ ಶಾಶ್ವತ ತರವಾದ ಪರಮ ಪುರುಷಾರ್ಥಪರವಾಗಿರುವುದರಿಂದ ಅದು ಸುಪಕ್ವಚೇತನರಿಗೆ ಮೆಚ್ಚಾಗುವ ಸಂಭವವುಂಟು ಎಂಬ ಕುವೆಂಪುನವರ ವಿಮರ್ಶಾಪೂರ್ವಕವಾದ ಅಭಿಪ್ರಾಯವೂ ಇದನ್ನೇ ಸಮರ್ಥಿಸುತ್ತದೆ.

ಆದಿಪುರಾಣದ ಕಥಾವಸ್ತು ಜೈನರಲ್ಲದವರಿಗೆ ಅಪರಿಚಿತವಾಗಿರಬಹುದು. ಆದ್ದರಿಂದ ಅದರ ಬಗೆಗೆ ಎರಡು ಮಾತು ಅಗತ್ಯ ಜೈನಪುರಾಣಗಳಲ್ಲಿ ಜಿನಧರ್ಮವನ್ನು ನಂಬಿ ನಡೆದು ಸದ್ಗತಿಯನ್ನು ಪಡೆದ ಮಹಾಪುರುಷರ ಚರಿತ್ರೆ ವರ್ಣಿತವಾಗಿದೆ. ಇದರಲ್ಲಿ ತ್ರಿಷಷ್ಟಿಶಲಾಕಾ ಪುರುಷರೆಂದು 63 ಮಂದಿ ಪ್ರಸಿದ್ದರು. ಇವರ ಪೈಕಿ ಜಿನಧರ್ಮಬೋದಕರೂ ಪ್ರವರ್ತಕರೂ ಆದ 24 ಮಂದಿ ತೀರ್ಥಂಕರರು (ಎಂದರೆ, ಸಂಸಾರಸಾಗರವನ್ನು ತಾವು ದಾಡಿ ಇತರರನ್ನೂ ದಾಟಿಸುವವರು) ಅತ್ಯಂತ ಪ್ರಮುಖರು. ಈ ತೀರ್ಥಂಕರರಲ್ಲಿ ಮೊದಲನೆಯವ ವೃಷಭದೇವ. ಈ ಆದಿತೀರ್ಥಂಕರನ ಜನ್ಮಜನ್ಮಾಂತರಗಳ ಚರಿತ್ರೆಯನ್ನು ಬಿತ್ತರಿಸುವ ಕಥೆಯೆ ಆದಿಪುರಾಣ. ಎಲ್ಲ ತೀರ್ಥಂಕರರ ಪುರಾಣಕಥೆಗಳ ಚೌಕಟ್ಟೂ ಒಂದೇ ಬಗೆಯದು. ಇದನ್ನು ಸ್ವಲ್ಪ ಮಾತ್ರ ವ್ಯತ್ಯಾಸಮಾಡುವ ಸ್ವತಂತ್ರ್ಯವೂ ಕವಿಗೆ ಇಲ್ಲ. ಪುರಾಣ ಲಕ್ಷಣಕ್ಕೆ ಆತ ಬದ್ಧ. ಈ ಲಕ್ಷಣವನ್ನು ಪಂಪನೇ ಹೀಗೆ ಅನುವದಿಸಿದ್ದಾನೆ ; ಆ ಪುರಾಣಕ್ಕಂ ಲೋಕಾಕಾರ ಕಥನಮುಂ ದೇಶನಿವೇಶೋಪದೇಶಮುಂ ನಗರಸಂಪತ್ಪರಿವರ್ಣನಮುಂ ರಾಜ್ಯ ರಾಮಣೀಯಕಾಖ್ಯಾನಮುಂ ತೀರ್ಥಮಹಿಮಾಸಮರ್ಥ ನಮುಂ ಚತುರ್ಗತಿ (ಎಂದರೆ ದೇವ, ಮಾನುಷ, ತಿರ್ಯಕ್ ಮತ್ತು ನಾರಕ ಎಂಬ ನಾಲ್ಕು ಗತಿ) ಸ್ವರೂಪನಿರೂಫಣಮುಂ ತಪೋದನವ್ಯಾವಣ್ನಮುಂದ ತತ್ಫಲ ಪ್ರಾಪ್ತಪ್ರಕಟನಮುಂ ಎಂದಿಂತವಯವಂಗಳೆಂಟಕ್ಕುಂ ಈ ಲಕ್ಷಣ ಪಾಲನೆಯ ಜೊತೆಗೆ, ತೀರ್ಥಂಕರನ ಬೇರೆಬೇರೆ ಜನ್ಮಗಳ ಕಥೆಯ ನಿರೂಪಣೆ, ಇದ್ದೇ ತಿರಬೇಕು. ಪುರಾಣಗಳ ಸ್ವಾರಸ್ಯವೆಲ್ಲ ಈ ಭವಾವಳಿಯಲ್ಲಿ ಬೀಜರೂಪದಲ್ಲಿ ಅಡಗಿರುತ್ತದೆ. ಕಾರನ, ಗುರಿ ಒಂದೆ ಆದರೂ ಒಬ್ಬ ತೀರ್ಥಂಕರನ ಭವಾವಳಿ ಇದ್ದಂತೆ ಇನ್ನೊಬ್ಬನದು ಇರುವುದಿಲ್ಲ. ಈ ಭವಾವಳಿಯ ಸ್ವರೂಪವನ್ನು ಕಲಾತ್ಮಕವಾಗಿ ಆವಿಷ್ಕಾರ ಮಾಡುವುದರಲ್ಲಿ ಕವಿಪ್ರತಿಭೆಗೆ ಅವಕಾಶವುಂಟು. ಈ ಕಲಾಕರ್ಮವನ್ನು ಪಂಪ ಅಮೋಘವಾಗಿ ನಿರ್ವಹಿಸಿದ್ದಾನೆ. ಆದಿ ತೀರ್ಥಂಕರನ ಭವಾವಳಿಯ ಅನುಕ್ರಮವನ್ನು ಪಂಪನ ಒಂದು ಅಕ್ಕರವೃತ್ತ ಹೀಗೆ ನಿರೂಪಿಸಿದೆ :

ಪದ್ಯ : - ಭೋಗಾಕಾಂಕ್ಷೆಯೊಳ್ ಜಯವರ್ಮಂ ಬಯಕೀ ಮಹಬಲಂ ಲಲಿತಾಂಗಂ ವಜ್ರಜಂಘಂ | ಭೋಗಭೂಮಿಜಂ ಶ್ರೀಧರದೇವಂ ಸುವಿಧಿನರಾಧಿಪನಚ್ಯುತೇಂದ್ರಂ | ಸಾಗರಾಂತಂ ನೆಲನನಿತುಮಂ ಚಕ್ರದಿಂ ಬೆಸಕೈಸಿದ ವಜ್ರನಾಭಿ - | ಯಾಗಿ ಸರ್ವಾರ್ಥಸಿದ್ಧಿಯೊಳ್ ಪುಟ್ಟಿಬಂದಿಲ್ಲಿ ತಾನಾದಿದೇವನಾದಂ || (ಆದಿಪು 16-58)

ಪದ್ಯ :-

ಭವದಿಂದ ಭವದೊಳ್ ತಗುಳ್ದು ಪರಮಸ್ನೇಹಂಗಳ್ ಜೀವಗಳನ್ನು ಮೋಹ ಸಂಕೋಲೆಯಿಂದ ಹೇಗೆ ಬಂಧಿಸುತ್ತವೆ, ಅದರಿಂದ ಬಿಡಿಸಿಕೊಂಡು ಸದ್ಗತಿಪಡೆಯಲು ಜೀವ ಹೇಗೆ ಹೆಣಗುತ್ತದೆ ಎಂಬ ಜಿನಧರ್ಮತತ್ತ್ವವನ್ನು ವೃಷಭದೇವನ ಪೂರ್ವ ಜನ್ಮಾಳಿಕಥನದಲ್ಲಿ ಪಂಪ ಮನೋಹರವಾಗಿ ಪ್ರತಿಪಾದಿಸಿದ್ದಾನೆ. ವಿಶೇಷವಾಗಿ, ಲಲಿತಾಂಗ-ಸ್ವಯಂಪ್ರಭೆ, ವಜ್ರಜಂಘ-ಶ್ರೀಮತಿ ಇವರು ಪ್ರಣಯಿಗಳಾಗಿ ಹುಟ್ಟ ಭೋಗಜೀವನದ ಪರಾಕಾಷ್ಠೆಯನ್ನು ಮುಟ್ಟಿಯೂ ಕೊನೆಗೊಮ್ಮೆ ಮರಣವನ್ನು ಅಪ್ಪಲೇಬೇಕಾಗಿ ಬಂದ ಸನ್ನಿವೇಶಗಳನ್ನು ಹೃದಯಸ್ಪರ್ಶಿಯಗಿ ಚಿತ್ರಿಸಿದ್ದಾನೆ, ಪಂಪ. ಒಟ್ಟಿನಲ್ಲಿ, ಇದು ಮನೆಯಿಂದ ಮನೆಗೆ ಹೋಗುವಂತೆ ಕಥಾನಾಯಕ ಬೇರೆ ಬೇರೆ ಜನ್ಮಗಳೆತ್ತಿ ಹೆಚ್ಚು ಹೆಚ್ಚಿನ ಪರಿಪಾಕವನ್ನು ಹೊಂದಿದ ಕಥೆ ಪ್ರಸ್ತುತ್ಯ ಜನ್ಮಾಳಿಬಂಧುರಂ. ಕೊನೆಯ ಜನ್ಮದಲ್ಲಿ, ಆದಿನಾಥ ಭೂಲೋಕದಲ್ಲಿ 14ನೆಯ ಮನುವಾದ ನಾಭಿರಾಜನಿಗೆ ವೃಷಭಸ್ವಾಮಿ (ಅಥವಾ ಪುರುದೇವ) ಎಂಬ ಹೆಸರಿನ ಪುತ್ರನಾಗಿ ಜನ್ಮವೆತ್ತಿ ಸಂಸಾರದಲ್ಲಿ ಭೋಗಾಸಕ್ತನಾದರೂ ನಿರ್ಲಿಪ್ತನಾಗಿ ಬಾಳಿ ಪರಿನಿಷ್ಕøಮಣ ಕಾಲಬಂದಾಗ ನೀಲಾಂಜನೆಯಂಬವಳ ಅಮೋಘನೃತ್ಯವನ್ನು ನೋಡುತ್ತಿದ್ದಾಗ ಗತಾಯುವಾಗಿದ್ದ ಆಕೆ ಹಠಾತ್ತನೆ ಕಣ್ಮರೆಯಾದ ಘಟನೆಯಿಂದ ತೀವ್ರ ವೈರಾಗ್ಯಪರನಾಗುತ್ತಾನೆ ; ಮುಕ್ತಿ ಸಾಧಿಸಲು ತೆರಳುತ್ತಾನೆ. ಪುರುದೇವಭವದಲ್ಲಿ ವರ್ಣಿತವಾದ ಪಂಚಕಲ್ಯಾಣಗಳಲ್ಲಿ ತೀರ್ಥಂಕರ ಜನ್ಮಾಭಿಷೇಕ ಕಲ್ಯಾಣವೂ ಕಡೆಯದಾದ ಪರಿನಿಷ್ಕøಮಣಕಲ್ಯಾಣವೂ ದಿವ್ಯಭವ್ಯವಾಗಿ ಮೂಡಿ ಬಂದಿವೆ ಪಂಪನ ಪ್ರತಿಭಾವಿಲಾಸದಲ್ಲಿ, ಪುರುದೇವನ ಜನ್ಮ ಕಥೆಗೆ ಪೂರಕವಾಗಿ ಭರತಚಕ್ರವರ್ತಿ-ಬಾಹುಬಲಿಯ ಕಥೆಯೂ ಉಜ್ವಲವಾಗಿ ಚಿತ್ರಿತವಾಗಿದೆ. ಆದಿದೇವನ ಕಥೆಯಲ್ಲಿ ಭೋಗನಿರಾಸವೂ ಭರತನ ಕಥೆಯಲ್ಲಿ ವೈಭವಮದದ ನಿರರ್ಥಕತೆಯೂ ಕಾವ್ಯ ಧರ್ಮಕ್ಕೆ ಅಧೀನವಾಗಿ ನಿರೂಪಿತವಾಗಿವೆ.

ವಿಕ್ರಮಾರ್ಜುನ ವಿಜಯದ ಕಥೆ ಪ್ರಸಿದ್ಧವಾದ ಮಹಾಭಾರತದ ಕಥೆಯಾದ್ದರಿಂದ ಅದರ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ಈ ಕೃತಿಯನ್ನು ಪಂಪ ಬಹುಶಃ ಸಮಗ್ರ ಭಾರತ ಎಂಬ ಅರ್ಥದಲ್ಲಿ ಸಮಸ್ತಭಾರತ ಎಂದು ಅನೇಕ ಕಡೆ ನಿರ್ದೇಶಿಸಿದ್ದಾನೆ. ಅರಿಕೇಸರಿಯ ವೃತ್ತಾಂತವನ್ನು ಅರ್ಜುನನ ಕಥೆಯೊಂದಿಗೆ ಸಮಾಸ ಮಾಡಿರುವುದರಿಂದ ಸಮಸ್ತ ಭಾರತ ಎಂಬ ಹೆಸರು ಅದಕ್ಕೆ ಅನ್ವರ್ಥಕ ಎಂದು ಮುಳಿಯ ತಿಮ್ಮಪ್ಪಯ್ಯನವರು ವ್ಯಾಖ್ಯಾನಿಸಿದ್ದಾರೆ. ಈ ಆಶಯ ಕವಿಗೆ ಇದ್ದಿರಬಹುದು. ಆದರೆ ಇನ್ನೂ ಮುಂದೆ ಹೋಗಿ ಅರಿಕೇಸರಿಯ ಸಂಬಂಧವುಳ್ಳ ಕೆಲವು ಸಮಕಾಲೀನ ಚಾರಿತ್ರಿಕ ವ್ಯಕ್ತಿಗಳ ವೃತ್ತಾಂತವನ್ನು ಭಾರತ ಕಥೆಯ ಪ್ರಮುಖ ವ್ಯಕ್ತಿಗಳ ವೃತ್ತಾಂತಗಳೊಂದಿಗೆ ಸಮಸ್ತ ಮಾಡಿದ್ದಾನೆ ಎನ್ನುವ ಅವರ ವಿಚಾರಧಾರೆ ಇನ್ನೂ ಹೆಚ್ಚಿನ ಸಂಶೋಧನೆಯಿಂದ ಸ್ಥಿರಪಡಬೇಕಾಗಿದೆ. ಇದು ಹೇಗಿದ್ದರು ಪಂಪನ ದೃಷ್ಟಿಯಲ್ಲಿ ಭಾರತ ಕೇವಲ ವಿಕ್ರಮಾರ್ಜುನ ವಿಜಯವಲ್ಲ ; ಅನೇಕ ಮಹಪುರುಷರ ಕಥೆ, ಅವರ ನಡವಳಿಕೆಗಳ ಮೂಲಕ ಲೌಕಿಕವನ್ನು ಎಂದರೆ ಲೋಕಧರ್ಮವನ್ನು ಅವನು ಬೆಳಗಿದ್ದಾನೆ. ಈ ಆಶಯ ಚಲದೊಳ್ ದುಯೋಧನಂ, ನನ್ನಿಯೊಲ್ ಇನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶಂ, ಅತ್ಯುನ್ನತಿಯೊಳ್ ಅಮರಸಿಂಧೂದ್ಭವಂ, ಚಾಪ ವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ ಮಿಗಿಲ್ ಇವರ್ಗಳಿನೀ ಭಾರತಂ ಲೋಕಪೂಜ್ಯಂ ಎಂಬ ಪಂಪನ ಉಪಸಂಹಾರ ವಾಕ್ಯದಲ್ಲಿ ಸುವ್ಯಕ್ತವಾಗಿದೆ.

ವ್ಯಾಸಮುನಿ ಪ್ರಣೂತ ಭಾರತವನ್ನೂ ಸತ್ಕವಿ ಜಿನಸೇನಾಚಾರ್ಯರ ಆದಿಪುರಾಣವನ್ನೂ ಹೇಳಿ ಪಂಪ ವಾಕ್‍ಶ್ರೀಸುಭಗನೂ ಪುರಾಣಕವಿಯೂ ಆದ್ದರಿಂದಲೇ ನಾಡೊವಜನೆನಿಸಿದ. ಸಹಸ್ರವರ್ಷಗಳ ಮೇಲಾದರೂ ಈ ನಾಡೊಜನ ಕೀರ್ತಿ ಬೆಳೆಯುತ್ತಿದೆಯೆ ಹೊರತು ಕುಗ್ಗುತ್ತಿಲ್ಲ. ಕುಗ್ಗುವುದೂ ಇಲ್ಲ. ಅವನ ಕೃತಿಗಳಲ್ಲಿ ಕುಂದುಕೊರತೆಗಳನ್ನೂ ಲೋಪದೋಷಗಳನ್ನೂ ಹೊಸಹೊಸದಾಗಿ ಗುರುತಿಸುತ್ತಿರುವ ಆಧುನಿಕ ವಿಮರ್ಶೆ ಕೂಡ ಅವನ ಕವಿತಾವೈಭವಕ್ಕೆ, ಮಹೋನ್ನತಿಗೆ, ಕೈಮುಗಿದಿದೆ. (ಎಂ.ವಿ.ಎಸ್.)