ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಟ್ಟಾಭಿ ಸೀತಾರಾಮಯ್ಯ, ಭೋಗರಾಜು

ವಿಕಿಸೋರ್ಸ್ದಿಂದ

ಪಟ್ಟಾಭಿ ಸೀತಾರಾಮಯ್ಯ, ಭೋಗರಾಜು 1880-1959 ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಪ್ರಸಿದ್ಧಿ ಬಯಸದ ರಚನಾತ್ಮಕಕಾರ್ಯಕರ್ತ, ಗಾಂಧೀವಾದಿ. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಇತಿಹಾಸಕಾರ. ಡಾ. ಪಟ್ಟಾಭಿ ಎಂದೇ ಜನವಿದಿತರಾದ ಪಟ್ಟಾಭಿ ಸೀತಾರಾಮಯ್ಯನವರು 1880ರ ಡಿಸೆಂಬರ್ 24ರಂದು ಈಗಿನ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ತಾಲ್ಲೂಕಿನ ಗುಂಡುಗೊಲ್ಲನು ಗ್ರಾಮದಲ್ಲಿ ಬಡನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಸುಬ್ರಹ್ಮಣ್ಯಂ, ಗಂಗಮ್ಮ ಇವರ ನಾಲ್ವರು ಮಕ್ಕಳ ಪೈಕಿ ಪಟ್ಟಾಭಿ ಮೂರನೆಯವರು, ಅವರು ನಾಲ್ಕೈದು ವರ್ಷದವರಿದ್ದಾಗ ತಂದೆ ಕಾಲವಾದ್ದರಿಂದ ಬಡ ಸಂಸಾರದದ ಭಾರ ತಾಯಿಯ ಮೇಲೆ ಬಿತ್ತು.

ಪಟ್ಟಾಭಿಯವರು 1894ರಲ್ಲಿ ಎಲೂರಿನ ಕ್ರೈಸ್ತ ಮಿಷನ್ ಶಾಲೆಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾದರು. 1896ರಲ್ಲಿ ಮಚಲಿಪಟ್ಟಣದ ಸಿ.ಎಂ.ಎಸ್. ನೋಬಲ್ ಕಾಲೇಜಿನಿಂದ ಎಫ್.ಎ. ಪರೀಕ್ಷೆಯಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮದ್ರಾಸಿನ ಕ್ರಿಶ್ಚನ್ ಕಾಲೇಜಿನ ವಿದ್ಯಾರ್ಥಿಯಾದರು. ಅದೇ ವರ್ಷ ಕಾಕಿನಾಡದ ಶ್ರೀಮಂತ ವಕೀಲರೊಬ್ಬರ ಮಗಳನ್ನು ಮದುವೆಯಾಗಿ ಅವರ ನೆರವಿನಿಂದ ಮದ್ರಾಸ್ ವೈದ್ಯಕೀಯ ಕಾಲೇಜನ್ನು ಸೇರಿ 1901ರಲ್ಲಿ ಎಂ.ಬಿ. ಮತ್ತು ಸಿ.ಎಂ. ಪದವಿ ಗಳಿಸಿದರು. 1906ರಲ್ಲಿ ಮಚಲಿ ಪಟ್ಟಣದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದರು. ಆದರೆ ರಾಷ್ಟ್ರೀಯ ಆಂದೋಲನ ಅವರನ್ನು ಆಕರ್ಷಿಸಿತು. 1916ರಲ್ಲಿ ಅವರು ವೈದ್ಯ ವೃತ್ತಿಯನ್ನು ಬಿಟ್ಟರು. ಸಮಾಜಕಲ್ಯಾಣ ಸ್ವಾತಂತ್ರ್ಯ ಚಳವಳಿ, ಪುಸ್ತಕ ಬರೆಯುವುದು ಅವರ ಕೆಲಸವಾಯಿತು.

ನಗರದ ಇತರ ಗಣ್ಯ ವ್ಯಕಿಗಳ ನೆರವಿನೊಂದಿಗೆ ಅವರು 1910ರಲ್ಲಿ ಮಚಲಿ ಪಟ್ಟಣದಲ್ಲಿ ಆಂಧ್ರ ಜಾತೀಯ ಕಲಾಶಾಲೆಯನ್ನು ಸ್ಥಾಪಿಸಿದರು. ಈ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಅವರು ಅನೇಕ ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದರು. ಪಟ್ಟಾಭಿಯವರು ಕಾಲೇಜಿನಲ್ಲಿದ್ದಾಗಲೇ ಕಾಂಗ್ರೆಸಿನೊಡನೆ ಅವರ ನಂಟು ಆರಂಭವಾಗಿತ್ತು. ಮೊದಲು ಅವರ ಒಲವು ಉಗ್ರಗಾಮಿಗಳತ್ತ ಇತ್ತು. ಅವರು ಲಾಲಾಲಜಪತರಾಯ್, ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರಪಾಲರನ್ನು ಮೆಚ್ಚಿದ್ದರು. ಅನಂತರ ಆನಿಬೆಸೆಂಟರ ಹೋಮ್ ರೂಲ್ ಸಂಘದ ಸದಸ್ಯರಾದರು. ಕೊನೆಗೆ ಅವರು ಗಾಂಧಿ ತತ್ವಕ್ಕೆ ಮಾರು ಹೋದರು. ಅವರೊಬ್ಬ ಸತ್ಯಾಗ್ರಹಿಯಾದರು.

ಅವರು ಪ್ರತ್ಯೇಕ ಆಂಧ್ರ ಪ್ರಾಂತ್ಯದ ಪ್ರತಿಪಾದಕರಾಗಿದ್ದರು. ಆಂಧ್ರರಿಗೆ ತಮ್ಮದೇ ಆದ ವಿಶ್ವವಿದ್ಯಾಲಯ ಇರಬೇಕೆಂಬುದೂ ಅವರ ಬಯಕೆಯಾಗಿತ್ತು. ಭಾರತೀಯರ ರಾಷ್ಟ್ರೀಯತೆಯನ್ನು ಬಲಪಡಿಸುವುದಕ್ಕೆ ಭಾಷಾನುಗುಣ ಪ್ರಾಂತ್ಯ ರಚನೆ ಅಗತ್ಯವೆಂದು ಅವು ಅನೇಕ ಲೇಖನಗಳನ್ನೂ ಪುಸ್ತಕವನ್ನೂ ಬರೆದರು.

ಮಚಲಿ ಪಟ್ಟಣವೇ ಅವರು ಚಟುವಟಿಕೆಗಳ ಕೇಂದ್ರವಾಗಿತ್ತು. ಅಲ್ಲಿ 1919ರಲ್ಲಿ ಅವರು ಜನ್ಮಭೂಮಿ ಎಂಬ ಆಂಧ್ರ ರಾಷ್ಟ್ರೀಯ ವಾರಪತ್ರಿಕೆಯನ್ನು ಪ್ರಾರಂಭಿಸಿ 1930ರ ವರೆಗೆ ನಡೆಸಿದರು. ಅಹಿಂಸೆ, ಸತ್ಯಾಗ್ರಹ, ವಿದೇಶಿ ಸರಕುಗಳ ಬಹಿಷ್ಕಾರ, ಸಹಕಾರ ಚಳವಳಿಯ ಲಾಭ ಮೊದಲಾದವನ್ನು ಆ ಪತ್ರಿಕೆಯ ಮೂಲಕ ಪ್ರಚಾರ ಮಾಡಿದರು. ಸಹಕಾರ ಚಳವಳಿಯ ಪ್ರಚಾರಕ್ಕಾಗಿ ತೆಲುಗಿನಲ್ಲಿ ಆಂಧ್ರ ಸಹಕಾರ ಪತ್ರಿಕೆ ಎಂಬ ನಿಯತಕಾಲಿವನ್ನು ಪ್ರಾರಂಭಿಸಿದರು. ಪ್ರತಿವರ್ಷವೂ ನೂರಾರು ಕೋಟಿ ರೂಪಾಯಿಗಳು ಸೋರಿ ಹೋಗುವುದನ್ನು ತಪ್ಪಿಸಲು ಭಾರತೀಯರು ಬ್ಯಾಂಕ್ ಮತ್ತು ವಿಮಾ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಬೇಕಂದು ಅವರು ಹೇಳುತ್ತಿದ್ದರು. ಅವರೇ ಬ್ಯಾಂಕುಗಳನ್ನೂ ವಿಮಾ ಸಂಸ್ಥೆಯನ್ನೂ ಸ್ಥಾಪಿಸಿದರು.

ಅವರು 1916ರಿಂದ 1952ರವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ 1929-30, 1931, 1934-36, 1938, 1939, 1940-46 ಮತ್ತು 1948ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. 1924 ಮತ್ತು 1925ರಲ್ಲಿ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದಲ್ಲಿ ಆಸ್ಥೆವಹಿಸಿದರು. 1928ರಲ್ಲಿ ಸೈಮನ್ ಆಯೋಗದ ಮುಂದಾಳು ಜಾನ್‍ಸೈಮನ್ ಮದ್ರಾಸಿಗೆ ಭೇಟಿಯಿತ್ತಾಗ ಅವನ ಭೇಟಿಯ ವಿರುದ್ಧ ಪ್ರದರ್ಶನ ನಡೆದಾಗ ಸರ್ಕಾರ ಪಟ್ಟಾಭಿಯವರನ್ನು ಬಂಧಿಸಿ ಅನಂತರ ಬಿಡುಗಡೆ ಮಾಡಿತು. ಅವರು ಪೂರ್ಣ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು; ಆಂಧ್ರದ ಪೂರ್ಣ ಸ್ವರಾಜ್ಯ ಸಂಘದ ಅಧ್ಯಕ್ಷರಾಗಿದ್ದರು. 1930ರಲ್ಲಿ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲುಗೊಂಡರು. 1932ರ ಜನವರಿ 5ರಂದು ಮಚಲಿಪಟ್ಟಣದಲ್ಲಿ ಪಟ್ಟಾಭಿಯವರು ನಿಷೇಧಾಜ್ಞೆಗೆ ವಿರುದ್ಧವಾಗಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಸರಕಾರ ಅವರನ್ನು ಬಂಧಿಸಿತು. ಅವರಿಗೆ ಒಂದು ವರ್ಷ ಶಿಕ್ಷೆ ಮತ್ತು ರೂ. 1,100 ಜುಲ್ಮಾನೆ ವಿಧಿಸಲಾಯಿತು. 1933ರಲ್ಲಿ ವಿದೇಶಿ ಬಟ್ಟೆ ಮಾರುತ್ತಿದ್ದ ಅಂಗಡಿಯೊಂದರ ಮುಂದೆ ಅವರು ಮುಷ್ಕರ ನಡೆಸಿ ಪುನಃ ಬಂಧಿತರಾದರು. ಸರ್ಕಾರ ಅವರಿಗೆ 6 ತಿಂಗಳುಗಳ ಕಾರಾಗೃಹ ಶಿಕ್ಷೆ ಮತ್ತು ರೂ. 500 ಜುಲ್ಮಾನೆ ವಿಧಿಸಿತು. 1936, 1939 ಮತ್ತು 1946-48 ರಲ್ಲಿ ಅವರು ಅಖಿಲ ಭಾರತ ಸಂಸ್ಥಾನ ಪ್ರಜೆಗಳ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1938ರ ಕೊನೆಗೆ ಗಾಂಧೀಜಿ ಅವರನ್ನು ಕಾಂಗ್ರೆಸ್ಸಿನ ಅಧ್ಯಕ್ಷತೆಗೆ ನಾಮಕರಣ ಮಾಡಿದರು. ಆದರೆ ಪ್ರತಿಸ್ಪರ್ಧಿ ಸುಭಾಸ್ ಚಂದ್ರ ಬೋಸರಿಂದ ಅವರು ಚುನಾವಣೆಯಲ್ಲಿ ಸೋತರು. ಪಟ್ಟಾಭಿಯವರ ಸೋಲು ತಮ್ಮ ಸೋಲೆಂದು ಆಗ ಗಾಂಧಿಯವರು ಹೇಳಿದ್ದರು.

ಗಾಂಧೀಜಿ ವೈಯಕ್ತಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ (1940-41) ಪಟ್ಟಾಭಿಯವರೂ ಪಾಲುಗೊಳ್ಳುವವರಿದ್ದರು. ಆದರೆ ಸರ್ಕಾರ ಅವರನ್ನು 1940ರ ಮಾರ್ಚಿನಿಂದ 1941ರ ನವೆಂಬರ್ ವರೆಗೆ ಬಂಧಿಸಿ ಸೆರೆಯಲ್ಲಿಟ್ಟಿತ್ತು. 1942ರ ಆಗಸ್ಟ್ 9ರಂದು ಅವರು ಮತ್ತೆ ಸೆರೆಯಾಗಿ 1945ರ ಜೂನ್‍ನಲ್ಲಿ ಬಿಡುಗಡೆ ಹೊಂದಿದರು. 1946ರಲ್ಲಿ ಮದ್ರಾಸಿನಿಂದ ಸಂವಿಧಾನ ಸಭೆಗೆ ಚುನಾಯಿತರಾದರು. 1948ರಲ್ಲಿ ಜಯಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿದ್ದರು. ಸ್ವತಂತ್ರ ಭಾರತದಲ್ಲಿ ಪಟ್ಟಾಭಿಯವರು 1952ರ ಜುಲೈನಿಂದ 1957ರ ಜೂನ್ ವರೆಗೆ ಮಧ್ಯ ಪ್ರದೇಶದ ರಾಜ್ಯಪಾಲರಾಗಿದ್ದರು. 1959ರ ಡಿಸೆಂಬರ್ 17ರಂದು ಅವರ ದೇಹಾಂತವಾಯಿತು.

ಕೆ. ಹನುಮಂತರಾಯರೊಂದಿಗೆ ಅವರು ನ್ಯಾಷನಲ್ ಎಜುಕೇಷನ್ ಎಂಬ ಪುಸ್ತಕ (1912) ರಚಿಸಿದ್ದಾರೆ. ಅವರೇ ಬರೆದ ಗ್ರಂಥಗಳು ಇಂಡಿಯನ್ ನ್ಯಾಷನಲಿಸಮ್ (1913), ದಿ ರೀ ಡಿಸ್ಟ್ರಿಬ್ಯೂಷನ್ ಆಫ್ ಇಂಡಿಯನ್ ಪ್ರಾವಿನ್ಸಸ್ ಆನ್ ಲಿಂಗ್ವಿಸ್ಟ್ಟಿಕ್ ಬೇಸಿಸ್ (1916), ನಾನ್-ಕೋಆಪರೇಷನ್ (1921), ಖದ್ದರ್ (1931), ಹಿಸ್ಟರಿ ಆಫ್ ದಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಸಂ. 1 : 1935 ; ಸಂ. 2 : 1947) ಮುಂತಾದವು. (ಜಿ.ಕೆ.ಯು.)