ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಿಳ್ಳೈ, ನಾಮಕ್ಕಲ್, ವಿ ರಾಮಲಿಂಗಂ
ಪಿಳ್ಳೈ, ನಾಮಕ್ಕಲ್, ವಿ ರಾಮಲಿಂಗಂ 19-10-1888. ಕವಿ, ನಾಟಕಕಾರ, ದೇಶಸೇವಕ. ಹುಟ್ಟಿದ್ದು ಸೇಲಂ ಜಿಲ್ಲೆಯ ಮೋಹನೂರಿನಲ್ಲಿ. ತಂದೆ ವೆಂಕಟರಾಮ ಪಿಳ್ಳೈ, ತಾಯಿ ಅಮ್ಮಣ್ಣಿ ಅಮ್ಮಾಳ್, ನಾಮಕ್ಕಲ್‍ನಲ್ಲಿಯೂ ಕೊಯಂಬತ್ತೂರಿನಲ್ಲಿಯೂ ಶಾಲಾ ವಿದ್ಯಾಭ್ಯಾಸ ಮಾಡಿದರು. ಶಾಲೆಯಲ್ಲಿರುವಾಗಲೇ ಲೇಖನ ಬರೆದು ಚಿತ್ರ ರಚಿಸಿ ಅನೇಕರ ಹೊಗಳಿಕೆಗೆ ಪಾತ್ರರಾದರು. ಅನೇಕ ಬಹುಮಾನಗಳನ್ನು ಪಡೆದರು. 1907 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತಿರುಚ್ಚಿಯಲ್ಲಿ ಎಫ್.ಎ. ಕಲಿಯುತ್ತಿದ್ದಾಗ (1908-1909) ಕಿವಿ ನೋವು ಬಲವಾದ ಕಾರಣ ಓದು ಬಿಟ್ಟರು. ತಮ್ಮ ಸಮೀಪ ಬಂಧುಗಳಲ್ಲಿಯ ಮುತ್ತಮ್ಮಾಳ್ ಎಂಬಾಕೆಯನ್ನು ಮದುವೆಯಾಗಿ (1909) 15 ವರ್ಷ ದಾಂಪತ್ಯಜೀವನ ನಡೆಸಿದರು. ಆಕೆ ತೀರಿ ಹೋಗಲು ಅವಳ ತಂಗಿ ಸೌಂದರಂ ಅಮ್ಮೈಯಾರನ್ನು ಮದುವೆಯಾದರು. ಇವರಿಗೆ 3 ಗಂಡು 2 ಹೆಣ್ಣುಮಕ್ಕಳು.
ಮೊದಲು ಇವರು ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಮತ್ತೆ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿ ಕೆಲಸ ಮಾಡಿದರು. ರಾಜಕೀಯದಲ್ಲಿ ಉಗ್ರವಾದಿಯಾಗಿದ್ದುದರಿಂದ ಹೆಚ್ಚು ಕಾಲ ಉದ್ಯೋಗದಲ್ಲಿರಲಾಗಲಿಲ್ಲ. ಚಿತ್ರ ಬರೆಯುವುದನ್ನು ವೃತ್ತಿಯನ್ನಾಗಿ ಮಾಡಿಕೊಂಡರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಾಲ ಗಂಗಾಧರ ತಿಲಕ್ ಮುಂತಾದ ಮಹಾ ವ್ಯಕ್ತಿಗಳ ಚಿತ್ರಗಳನ್ನು ಬರೆದು ಹಲವರಿಂದ ಪ್ರಶಂಸೆ ಪಡೆದರು. ದೆಹಲಿಯಲ್ಲಿ ನಡೆದ 5 ನೆಯ ಜಾರ್ಜರ ದರ್ಬಾರಿನಲ್ಲಿ (1911) ಇವರು ಬರೆದ ಚಿತ್ರವೊಂದಕ್ಕೆ ಜಾರ್ಜ್ ಪ್ರಭುಗಳ ಪ್ರಶಂಸೆಯೂ ಚಿನ್ನದ ಪದಕವೂ ದೊರೆತವು. ಪ್ರಭುಗಳ ಪಕ್ಕದಲ್ಲಿಯೇ ಕುಳಿತುಕೊಂಡು ಔತಣದಲ್ಲಿ ಭಾಗವಹಿಸುವ ಗೌರವ ಇವರಿಗೆ ದೊರೆಯಿತು. ಪಿ. ವಿ. ಮಾಣಿಕ್ಯ ನಾಯಕರೊಂದಿಗೆ ಇವರು ಉತ್ತರ ಹಿಂದೂಸ್ಥಾನವನ್ನೆಲ್ಲ ಸುತ್ತಿ ಬಂದರು.
1906 ರಲ್ಲಿ ಬಂಗಾಳ ವಿಭಜನೆಯಾದಾಗ ಗೋಖಲೆ, ತಿಲಕರಂಥ ದೇಶ ಮುಖಂಡರ ಭಾಷಣಗಳನ್ನು ಓದಿ, ಪ್ರಚೋದಿತರಾಗಿ ರಾಜಕೀಯರಂಗಕ್ಕಿಳಿದರು. ಪಿ.ವಿ.ಸಿ. ಅಯ್ಯರ್, ಅನಿಬೆಸೆಂಟ್ ರಾಜಾಜಿ, ವಿ. ಒ. ಚಿದಂಬರಂ ಪಿಳ್ಳೈ ಮುಂತಾದ ಮುಖಂಡರೊಡನೆ ಸಂಪರ್ಕ ಬೆಳೆಸಿದರು. ಬಿಳಿ ಜನರ ಏಕಾಧಿಪತ್ಯವನ್ನು ಖಂಡಿಸಿ ಹಲವು ಸಭೆಗಳಲ್ಲಿ ಭಾಷಣ ಮಾಡಿದರು. ತಿರುಚಿಯಲ್ಲಿ ಒಂದು ದೊಡ್ಡ ರಾಜಕೀಯ ಪರಿಷತ್ತನ್ನು ಏರ್ಪಡಿಸಿದರು. ಗಾಂಧೀಜಿಯ ಮಾತು ಮತ್ತು ಕೆಲಸ ಇವರ ಮನಸ್ಸನ್ನು ಆಕರ್ಷಿಸಿದವು. ಅವರ ಸಂದೇಶವನ್ನು ತಮ್ಮ ಭಾಷಣದ ಮೂಲಕ ಲೇಖನಗಳ ಮೂಲಕ ತಮಿಳು ಜನರಿಗೆ ಮನಮುಟ್ಟುವಂತೆ ಮಾಡಿದರು. ಉಪ್ಪು ಸತ್ಯಾಗ್ರಹದಲ್ಲಿ ಇವರು ಹಾಡಿದ ಹಾಡಿನಿಂದ ತಮಿಳು ಜನರಲ್ಲೆಲ್ಲ ಸ್ವಾತಂತ್ರ್ಯದ ಹೆಬ್ಬಯಕೆ ಅರಳಿತು. ಇವರು ರಾಷ್ಟ್ರೀಯ ಕವಿಪಂಕ್ತಿಗೆ ಸೇರುವಂತಾಯಿತು. 1932 ರಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿ ವೆಲ್ಲೂರಿನಲ್ಲಿ ಒಂದು ವರ್ಷ ಸೆರೆಮನೆಯಲ್ಲಿದ್ದರು. 1937 ರಲ್ಲಿ ಸೇಲಂ ನಗರಸಭೆಯ ಸದಸ್ಯರಾಗಿ ವಿರೋಧವಾಗಿ ಆಯ್ಕೆಗೊಂಡರು.
ಮಹಾಕವಿ ಭಾರತಿಯಾರ್ ಇವರನ್ನು ಪಂಡಿತರೆಂದು ಹೊಗಳಿದರು. ಇವರ ಸರಳವಾದ ಮಾತುಗಳು ಆಳವಾದ ಅರ್ಥ ಮೃದು ಛಂದೋವಿಲಾಸವನ್ನು ತಮಿಳನ್ ಇದೆಯಂ (ತಮಿಳನ ಹೃದಯ) ಚಂಗೋಲಿ (ಶಂಖಧ್ವಾನ) ಗಾಂಧಿ ಅಂಜಲಿ ಮೊದಲಾದ ಪುಸ್ತಕಗಳಲ್ಲಿನ ಹಾಡುಗಳಲ್ಲಿ ಕಾಣಬಹುದು. ಇವರ ಹಾಡುಗಳ ಸಂಗ್ರಹವೊಂದು ಇತ್ತೀಚೆಗೆ ಪ್ರಕಟವಾಗಿದೆ. ಮಕ್ಕಳಿಗಾಗಿ ಅನೇಕ ಒಳ್ಳೆಯ ಹಾಡುಗಳನ್ನೂ ಇವರು ಬರೆದಿದ್ದಾರೆ. ಅವಳುಂ ಅವನುಂ ಎಂಬುದು ಇವರ ಒಂದು ಕಥನಾಕಾವ್ಯ. 30 ಕ್ಕೂ ಮೇಲ್ಪಟ್ಟು ಇವರು ಗದ್ಯ ರೂಪದ ಪುಸ್ತಕಗಳನ್ನು ಬರೆದಿದ್ದಾರಲ್ಲದೆ ಮಲೈಕಳನ್ (ಬೆಟ್ಟದ ಕಳ್ಳ) ಅನ್ಬುಶೈದ ಅದ್ಭುತಂ (ಪ್ರೀತಿಗೈದ ಅದ್ಭುತ) ಮಾಮನ್ ಮಗಳ್ (ಮಾವನ ಮಗಳು) ಎಂಬ ನಾಟಕಗಳನ್ನೂ ಬರೆದಿದ್ದಾರೆ. ಮಲೈ ಕಳ್ಳನ್ ಚಲನಚಿತ್ರವಾಗಿ ಜನಮನವನ್ನು ಬಹುವಾಗಿ ಆಕರ್ಷಿಸಿದೆ. ತಿರುಕ್ಕುರಳಿಗೆ ನವೀನ ವಿಮರ್ಶೆಯೊಂದನ್ನು ಇವರು ಬರೆದಿದ್ದಾರೆ. ನಾರಾಯಣ ಅಗರ್‍ವಾಲರ ಸಾಮ್ಯ ರಾಜಕೀಯ ಎಂಬ ಪುಸ್ತಕವನ್ನು ತಮಿಳಿಗೆ ಭಾಷಾಂತರ ಮಾಡಿದ್ದಾರೆ. ಎಳೆ ವಯಸ್ಸಿನಿಂದಲೇ ಇವರು ನಾಟಕಗಳಿಗೆ ಕೀರ್ತನೆಗಳನ್ನೂ ಬೇಕಾದ ತೆರೆಗಳನ್ನೂ ಬರೆದು ಕೊಟ್ಟಿದ್ದಾರೆ. ಎನ್ ಕತೈ ಎಂಬುದು ಇವರ ಆತ್ಮಕಥೆ. ಇದರಲ್ಲಿ ಉದ್ದಕ್ಕೂ ತಿಳಿಯಾದ ಹಾಸ್ಯವಿದೆ. ಇವರು ಗಾಂಧಿಯುಗದ ಕವಿಗಳು ಎಂದು ಎಲ್ಲರಿಂದಲೂ ಪ್ರಶಂಸಿತರಾಗಿದ್ದಾರೆ.
ಮದರಾಸು ಸರ್ಕಾರ ಇವರಿಗೆ ಆಸ್ಥಾನಕವಿ ಎಂಬ ಬಿರುದಿತ್ತು ಸ್ವರ್ಣಾಂಬರ ಹೊದಿಸಿ ಗೌರವಿಸಿತು. (15-8-1949). ಇವರು ದೆಹಲಿಯ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. (ಎಸ್.ಪಿ.ಟಿ.)