ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಟ್ಟಣ್ಣ ಕಣಗಾಲ್

ವಿಕಿಸೋರ್ಸ್ದಿಂದ

ಪುಟ್ಟಣ್ಣ ಕಣಗಾಲ್ 1933—1985. ಕನ್ನಡ ಚಲನಚಿತ್ರ ನಿರ್ದೇಶಕ. ಕನ್ನಡ ಚಲನಚಿತ್ರಂಗದಲ್ಲಿ ನಿರ್ದೇಶಕರೊಬ್ಬರು. ನಾಯಕನ ಮಟ್ಟದಲ್ಲಿ ಗುರುತಿಸಿಕೊಂಡವರಲ್ಲಿ ಇವರೇ ಮೊದಲಿಗರು. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲದಲ್ಲಿ 1933 ರಲ್ಲಿ ಜನಿಸಿದರು. ತಂದೆ ರಾಮಸ್ವಾಮಯ್ಯ ಊರಿನ ಗಣ್ಯ ವ್ಯಕ್ತಿ. ಪುಟ್ಟಣ್ಣನವರು ಆರಂಭದ ವಿದ್ಯಾಭ್ಯಾಸವನ್ನು ಹುಟ್ಟಿದೂರಿನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರು ಬನುಮಯ್ಯ ಶಾಲೆಗೆ ಬಂದರು. ಮೆಟ್ರಿಕ್ಯಲೇಷನ್‍ಗೆ ಶಾಲಾಶಿಕ್ಷಣ ನಿಂತಿತು. ಇವರ ಅಣ್ಣ ಪ್ರಭಾಕರಶಾಸ್ತ್ರಿ ನಾಟಕಕಾರ. ಅವರಿಂದ ನಾಟಕದ ಗೀಳು ಹತ್ತಿ ಸೋರಟ್ ಅಶ್ವತ್ಥರ ಕಲಾಸಂಘ ಕಂಪನಿಗೆ ಪ್ರವೇಶಿಸಿದರು. ಮೂರು ವರ್ಷ ನಾನಾ ವಿಧದ ವೇಷ ಹಾಕಿ ನಾಟಕ ಜೀವನದಲ್ಲಿ ಸೋಲನ್ನು ಅನುಭವಿಸಿ ಮೈಸೂರಿಗೆ ಮರಳಿ ಫೋಟೋ ಸ್ಟುಡಿಯೋ ಒಂದರಲ್ಲಿ ಸ್ಥಿರ ಛಾಯಾಚಿತ್ರಗ್ರಾಹಕರಾಗಿ ದುಡಿದರು. 1954ರಲ್ಲಿ ಅಣ್ಣನ ಪ್ರಭಾವದಿಂದ ಚಿತ್ರರಂಗಕ್ಕೆ ಪ್ರವೇಶಿಸಿ ಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಬಳಗಕ್ಕೆ ಸೇರ್ಪಡೆಗೊಂಡರು. ಅಲ್ಲಿ ಸಹಾಯಕ ನಿರ್ದೇಶಕನ ಜವಾಬ್ದಾರಿ ಇವರದಾಯಿತು. ರತ್ನಗಿರಿ ರಹಸ್ಯ (1957) ಇವರ ಮೊದಲ ಅನುಭವದ ಚಿತ್ರ. ಅನಂತರ ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಮಕ್ಕಳ ರಾಜ್ಯ, ಸಾಕು ಮಗಳು, ಇತ್ಯಾದಿ ಚಿತ್ರಗಳಿಗೆ ಕೆಲಸ ಮಾಡಿದರು. 1967ರಲ್ಲಿ ತೆರೆಗೆ ಬಂದ ಬೆಳ್ಳಿ ಮೋಡ ಇವರ ನಿರ್ದೇಶನ ಪ್ರತಿಭೆಯನ್ನು ಬೆಳಕಿಗೆ ತಂದಿತು. ವರ್ಷದ ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದುದಲ್ಲದೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಪ್ರತಿಭೆಯ ಪಾತ್ರಕ್ಕೆ ಬೆಲೆ ದೊರಕಿಸಿಕೊಟ್ಟಿತು. ಅನಂತರ ಇವರನ್ನು ಅಪಾರ ಪ್ರಶಸ್ತಿಗಳು ಹಿಂಬಾಲಿಸಿದವು. ಗೆಜ್ಜೆಪೂಜೆ (1970) ಚಿತ್ರ ಮೈಸೂರು ಸರ್ಕಾರದ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು. ಭಾರತ ಸರ್ಕಾರದ ಅಖಿಲ ಭಾರತ ಮಟ್ಟದಲ್ಲಿ ವರ್ಷದ ಶ್ರೇಷ್ಠ ಚಿತ್ರ ನಾಟಕಕಾರ ಪ್ರಶಸ್ತಿಯೂ ಉತ್ತಮ ನಿರ್ದೇಶನಕ್ಕೆ ಬಂಗಾರದ ಪದಕವೂ ಲಭಿಸಿತು. ತ್ರಿವೇಣಿ ಕಾದಂಬರಿಯಾಧಾರಿತ ಶರಪಂಜರ (1971) ರಜತ ಮಹೋತ್ಸವವನ್ನು ಆಚರಿಸಿದುದಲ್ಲದೆ, ಉತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ಗಳಿಸಿತು. ರಜತೋತ್ಸವವನ್ನು ಕಂಡ ಇನ್ನೊಂದು ಚಿತ್ರವೆಂದರೆ ತರಾಸು ಕಾದಂಬರಿಯಾಧಾರಿತ ನಾಗರಹಾವು (1972). ರಾಜ್ಯ ಪ್ರಶಸ್ತಿ ಗಳಿಸಿದ ಚಿತ್ರ. 1972 ರಲ್ಲಿ ದಕ್ಷಿಣ ಭಾರತ ಚಲನಚಿತ್ರ ನಿರ್ದೇಶಕ ಸಂಘ ಇವರನ್ನು ವರ್ಷದ ಅತ್ಯುತ್ತಮ ನಿರ್ದೇಶಕರೆಂದು ಆಯ್ಕೆ ಮಾಡಿ ರಷ್ಯದಲ್ಲಿ ನಡೆದ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರತಿನಿಧಿಯಾಗಿ ಕಳುಹಿಸಿತು. 1973ರಲ್ಲಿ ಬಿಡುಗಡೆ ಕಂಡ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಉತ್ತಮ ನಿರ್ದೇಶನಕ್ಕೆ ನಿರ್ದೇಶಕರ ಸಂಘದ ಪ್ರಶಸ್ತಿ ಬಂದುದಲ್ಲದೆ ಪ್ರಾದೇಶಿಕ ಫಿಲ್ಮ್‍ಫೇರ್ ಪ್ರಶಸ್ತಿ ಕೂಡ ಲಭಿಸಿತು. ಕರ್ನಾಟಕ ಚಲನಚಿತ್ರ ಪತ್ರಕರ್ತ ಪರಿಷತ್ತು ತನ್ನ ಎರಡನೆಯ ವಾರ್ಷಿಕೋತ್ಸವ ವರ್ಷದಲ್ಲಿ ಇವರ ಕಥಾಸಂಗಮ (1976) ಚಿತ್ರ ನಿರ್ದೇಶನಕ್ಕೆ ಆರ್.ಎನ್.ಆರ್. ಪ್ರಶಸ್ತಿ ನೀಡಿ ಗೌರವಿಸಿತು. ಈ ಪ್ರತಿಭಾನ್ವಿತ ನಿರ್ದೇಶಕ ತಮ್ಮ 52ನೆ ವಯಸ್ಸಿನಲ್ಲಿ 1985 ಜೂನ್ 5ರಂದು ನಿಧನ ಹೊಂದಿದರು.

ಮಲ್ಲಮ್ಮನ ಪವಾಡ (1969), ಕಪ್ಪು ಬಿಳುಪು (1969), ಕರುಳಿನ ಕರೆ (1970), ಸಾಕ್ಷಾತ್ಕಾರ (1971), ಉಪಾಸನೆ (1974), ಶುಭಮಂಗಳ (1975), ಬಿಳೀ ಹೆಂಡತಿ (1975), ಕಾಲೇಜು ರಂಗ (1976), ಫಲಿತಾಂಶ (1977), ಧರ್ಮಸೆರೆ (1980), ರಂಗನಾಯಕಿ (1981)-ಇವು ಪುಟ್ಟಣ್ಣನವರ ನಿರ್ದೇಶನದ ಜನಪ್ರಿಯ ಚಿತ್ರಗಳು.

ಪುಟ್ಟಣ್ಣನವರು ಮಲೆಯಾಳಂ, ತೆಲುಗು, ಹಿಂದಿ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಪದ್ಮಿನಿ ಪಿಕ್ಚರ್ಸ್‍ನ ಸ್ಕೂಲ್ ಮಾಸ್ಟರ್ ಚಿತ್ರದ ಮಲೆಯಾಳ ಆವೃತ್ತಿ ಇವರ ನಿರ್ದೇಶನದ ಪ್ರಥಮ ಮಲೆಯಾಳಿ ಚಿತ್ರ. ಪಕ್ಕಮೊಬಲ್ಲಂ (1962) ತೆಲುಗು ಚಿತ್ರವನ್ನು 1963 - 67ರ ಅವಧಿಯಲ್ಲಿ ಕಳಂಜೆಯು ಕಟ್ಟೆಯ ತಂಗಂ, ಚೇಟತ್ತಿ, ಮೇಯರ ನಾಯರ್ ಹಾಗೂ ತ್ರಿವೇಣಿಯ ಬೆಕ್ಕಿನ ಕಣ್ಣು ಕಾದಂಬರಿಯಾಧಾರಿತ ಪೂಚಿ ಕಣ್ಣು ಮಲೆಯಾಳ ಚಿತ್ರಗಳನ್ನು ನಿರ್ದೇಶಿಸಿದರು. ನಾಗರಹಾವಿನ ಹಿಂದಿ ಅವತರಣಿ ಜಹ್ರೀಲಾ ಇನ್ಸಾನ್ (1974) ಪುಟ್ಟಣ್ಣ ನಿರ್ದೇಶಿಸಿದ ಚಿತ್ರ.

ನಾಯಕಿ ಪ್ರಧಾನ ಕಥೆಗಳೇ ಇವರ ಚಿತ್ರಗಳ ಜೀವಾಳ. ಕಾದಂಬರಿ ಕಥೆಗಳನ್ನು ತೆರೆಗೆ ಕಾವ್ಯಮಯವಾಗಿ, ಯಶಸ್ವಿಯಾಗಿ ನೀಡುವ ಕಲೆ ಸಿದ್ಧಿಸಿಕೊಂಡ ಇವರು ಅನೇಕ ಹೊಸ ನಟನಟಿಯರನ್ನು ತೆರೆಗೆ ಇತ್ತ ಖ್ಯಾತಿಯನ್ನು ಪಡೆದಿದ್ದಾರೆ. ಇಂದು ಪ್ರಸಿದ್ಧಿ ಪಡೆದಿರುವ ಆರತಿ, ವಿಷ್ಣುವರ್ಧನ್, ಅಂಬರೀಷ್, ಚಂದ್ರಶೇಖರ, ಜೈ ಜಗದೀಶ್ ಮೊದಲಾದ ನಟನಟಿಯರ ಪ್ರತಿಭೆ ಇವರಿಂದಲೇ ಬೆಳಕು ಕಂಡದ್ದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರೂ ಕೂಡ.

ಕನ್ನಡ ಚಲನಚಿತ್ರರಂಗದಲ್ಲಿ ನಿರ್ದೇಶಕರೊಬ್ಬರು ನಾಯಕನ ಮಟ್ಟದಲ್ಲಿ ಗುರುತಿಸಿಕೊಂಡವರಲ್ಲಿ ಪುಟ್ಟಣ್ಣ ಮೊದಲಿಗರು. ಈ ಪ್ರತಿಭಾವಂತರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ವಾರ್ಷಿಕ ಪ್ರಶಸ್ತಿಯನ್ನು 1986-87ರಿಂದ ನೀಡುತ್ತಿದೆ. ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಕನ್ನಡ ಚಿತ್ರನಿರ್ದೇಶಕರಿಗೆ ಮೀಸಲಾದ ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ.

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ನಾಯಕ ಸ್ಥಾನದಲ್ಲಿ ಗುರುತಿಸಿಕೊಂಡ ಮೊದಲ ಕನ್ನಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ 1986-87ರಿಂದ ಕರ್ನಾಟಕ ಸರಕಾರ ಕನ್ನಡದ ಪ್ರತಿಭಾವಂತ ನಿರ್ದೇಶಕರೊಬ್ಬರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪುರಸ್ಕøತರ ವಿವರ ಈ ಕೆಳಗಿನಂತಿದೆ.

ಹುಣಸೂರು ಕೃಷ್ಣಮೂರ್ತಿ	       (1986-87)
ಜಿ.ವಿ. ಅಯ್ಯರ್			(1987-88)
ಬಿ.ಎಸ್. ರಂಗಾ			(1988-89)
ಟಿ.ಎನ್. ಬಾಲಕೃಷ್ಣ	       (1989-90)
ವೈ.ಆರ್. ಸ್ವಾಮಿ			(1990-91)
ಎಂ.ಆರ್. ವಿಠ್ಠಲ್		(1991-92)
ಗೀತಪ್ರಿಯ			(1992-93)
ಸಿದ್ದಲಿಂಗಯ್ಯ			(1993-94)
ಕೆ.ಎಸ್.ಎಲ್. ಸ್ವಾಮಿ		(1994-95)
ದೊರೆ - ಭಗವಾನ್		(1995-96)

11. ಎಸ್.ವಿ. ರಾಜೇಂದ್ರಸಿಂಗ್ ಬಾಬು (1996-97) 12. ಗಿರೀಶ್ ಕಾಸರವಳ್ಳಿ (1997-98) 13. ಟಿ.ಎಸ್. ನಾಗಾಭರಣ (1998-99) 14. ವಿ. ಸೋಮಶೇಖರ್ (1999-2000) 15. ಕೆ.ವಿ. ಜಯರಾಮ್ (2000-01) 16. ಎಂ.ಎಸ್. ರಾಜಶೇಖರ್ (2001-02) 17. ವಿಜಯಾರೆಡ್ಡಿ (2002-03) 18. ಟಿ. ಪಟ್ಟಾಭಿರಾಮರೆಡ್ಡಿ (2003-04) 19. ಎ.ಟಿ. ರಘು (2004-05) (ಎಸ್.ಎಸ್.ಎಂ.ಯು.)