ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುನರುಜ್ಜೀವನ

ವಿಕಿಸೋರ್ಸ್ದಿಂದ

ಪುನರುಜ್ಜೀವನ - ಹಿಂದಿನ ರೋಮನ್ ಮತ್ತು ಗ್ರೀಕ್ ಪ್ರೌಢ ಆದರ್ಶಗಳ ಪ್ರಭಾವದಿಂದ ಯೂರೋಪಿನಲ್ಲಿ ಮಧ್ಯಯುಗದಿಂದ ಆಧುನಿಕ ಯುಗಕ್ಕೆ ಆದ ಪರಿವರ್ತನೆಯ ಅವಧಿ (ರಿನೇಸನ್ಸ್). 14-16ನೆಯ ಶತಮಾನಗಳ ಅವಧಿಯನ್ನು ಹೀಗೆಂದು ಕರೆಯುವುದಿದೆಯಾದರೂ ಇಟಲಿಯಲ್ಲಿ 14 ನೆಯ ಶತಮಾನದಲ್ಲಿ ಆರಂಭವಾಗಿ 15, 16 ನೆಯ ಶತಮಾನಗಳಲ್ಲಿ ಗರಿಷ್ಠ ವಿಕಾಸ ಸ್ಥಿತಿಯನ್ನು ತಳೆದ ಸಾಂಸ್ಕøತಿಕ ಮತ್ತು ಬೌದ್ಧಿಕ ಪ್ರವೃತ್ತಿಗಳನ್ನು ಹೆಚ್ಚು ಸಾಮಾನ್ಯವಾಗಿ ಪುನರುಜ್ಜೀವನವೆಂದು ಕರೆಯಲಾಗುತ್ತದೆ. ಇಟಲಿಯಿಂದ ಈ ಪ್ರಭಾವ ಫ್ರಾನ್ಸ್, ಸ್ಪೇನ್, ಜರ್ಮನಿ, ಹಾಲೆಂಡ್, ಬೆಲ್ಜಿಯಂ, ಇಂಗ್ಲೆಂಡ್ ಮತ್ತು ಇತರ ಯೂರೋಪಿಯನ್ ದೇಶಗಳಿಗೆ ಹಬ್ಬಿತು.

ಇತಿಹಾಸ : ಪುನರುಜ್ಜೀವನದ ನಿಶ್ಚಿತ ಕಾಲಾವಧಿಯನ್ನೂ ಬೆಳವಣಿಗೆಯ ಪ್ರತಿಯೊಂದು ಹಂತವನ್ನೂ ಸ್ಥೂಲವಾಗಿ ಹೇಳಲಿಕ್ಕಾಗದು. ಜನತೆ ಒಂದು ಯುಗವನ್ನು ದಾಟಿ ಇನ್ನೊಂದು ಯುಗದಲ್ಲಿ ಕಾಲಿಟ್ಟಾಗ ಹೊಂದಿದ ಸ್ಥಿತ್ಯಂತರ ಇಲ್ಲವೇ ಮಾರ್ಪಾಡು ಪುನರುಜ್ಜೀವನದ ವಿಷಯವಾಗಿದೆ. ಈ ಬದಲಾವಣೆಯ ಹಿನ್ನೆಲೆಯಾಗಿ ಒಂದು ಐತಿಹಾಸಿಕ ಘಟನೆ ಇದೆ. ರೋಮ್ ಸಾಮ್ರಾಜ್ಯದ ಅವನತಿಯೊಂದಿಗೆ ಯೂರೋಪ್ ಖಂಡ ಅಂಧಕಾರದಲ್ಲಿ ಮುಳುಗಿತ್ತು. ಪುನರುಜ್ಜೀವನ ಕಾಲದಲ್ಲಿ ಈ ಕಗ್ಗತ್ತಲೆ ಹರಿದು ಅರುಣೋದಯವಾಯಿತು. ಆದರೆ ಈ ಸ್ಥಿತ್ಯಂತರದ ಗುರುತಾಗಿ ಯಾವ ರಾಜಕೀಯ ಬಂಡಾಯಗಳಾಗಲೀ ಧಾರ್ಮಿಕ ಬದಲಾವಣೆಗಳಾಗಲೀ ಎದ್ದು ತೋರಲಿಲ್ಲ. ಇದೊಂದು ವಿಚಾರಗಳ ತಾಕಲಾಟ, ಸಮನ್ವಯ, ವೈಚಾರಿಕ ಕ್ರಾಂತಿ. ಎಲ್ಲ ಪ್ರಮುಖ ರಾಷ್ಟ್ರಗಳೂ ಈ ಹೊಸ ವಿಚಾರಧಾರೆಯನ್ನು ಆರ್ಥಿಕವಾಗಿ ಸ್ವೀಕರಿಸಿದುವು. ಆಧ್ಯಾತ್ಮಿಕ ವಿಚಾರಗಳೂ ಬದಲಾದುವು. ಇಟಲಿಯಲ್ಲಿ ಪ್ರಾರಂಭವಾದ ಪುನರುಜ್ಜೀವನದ ವಿಚಾರಗಳು ಉಳಿದ ದೇಶಗಳನ್ನು ಆವರಿಸಿದವು.

14-15 ನೆಯ ಶತಮಾನಗಳಲ್ಲಿ ಇಡೀ ಯೂರೋಪ್ ಖಂಡವೇ ಬದಲಾವಣೆಯ ಹಂತದಲ್ಲಿತ್ತು. ಹಳೆಯ ಪರಂಪರೆ ಮತ್ತು ನಡೆನುಡಿಗಳು ಮಾಯವಾದುವು. ಪುರಾತನ ಗ್ರೀಕ್ ಮತ್ತು ರೋಮನ್ ಸಾಹಿತ್ಯಾಭ್ಯಾಸಿಗಳು ಹೊಸ ವಿಚಾರಗಳನ್ನು ಎತ್ತತೊಡಗಿದರು. ಇದು ಯೂರೋಪಿನ ಜಿಜ್ಞಾಸುಗಳಿಗೆ ಹೊಸ ಹುರುಪು ಕೊಟ್ಟು ಹೊಸ ಮಾರ್ಗವನ್ನು ತೋರಿಸಿತು. ಶಬ್ದವೈಖರಿ ಅವರನ್ನು ಮುಗ್ಧರನ್ನಾಗಿ ಮಾಡಿದ್ದರಿಂದ ಧರ್ಮಗುರುಗಳು, ಸಂಪ್ರದಾಯವಾದಿಗಳು, ಹೊಸ ಅಧ್ಯಯನಕ್ಕೆ ತಲೆದೂಗಬೇಕಾಯಿತು. 1450 ರಿಂದ 1500ರವರೆಗೆ ಸಾಮಾನ್ಯವಾಗಿ ಎಲ್ಲ ರಂಗಗಳಲ್ಲಿ ಮುನ್ನಡೆಯಿತು. ಈ ಅರ್ಧ ಶತಮಾನಾವಕಾಶದಲ್ಲಿ ಮಧ್ಯ ಯುಗದಿಂದ ನೂತನ ಯುಗಕ್ಕೆ ಸ್ಥಿತ್ಯಂತರ ಉಂಟಾಯಿತು. ಸಂಪ್ರದಾಯ ಜಡತ್ವ ಎಲ್ಲೆಲ್ಲೂ ಹರಡಿದ್ದಾಗಿ ಉಂಟಾದ ಹೊಸ ಹುರುಪು ಇದು. ಹೊಸ ದೃಷ್ಟಿ, ಹೊಸ ವಿಚಾರ, ಹೊಸ ಹೊನಲು ಇವು ಪುನರುಜ್ಜೀವನದ ಫಲಗಳು. ಇಡೀ ಸಮಾಜದಲ್ಲಿಯೇ ಹೊಸ ಚೇತನ ಪ್ರವೇಶಿಸಿತ್ತು.

14 ನೆಯ ಶತಮಾನದಲ್ಲಿ ಇಟಲಿಯಲ್ಲಿ ಹೊಸ ವಿಚಾರದ ಉದಯವಾಯಿತು. ಹಳೆಯ ರೋಮನ್ ಸಾಮ್ರಾಜ್ಯದ ನೆನಪು ಮರುಕಳಿಸಿತ್ತು. 1304-1374 ರಲ್ಲಿ ಇಟಲಿಯಲ್ಲಿ ಬದುಕಿದ್ದ ಕವಿ ಪಿಟ್ರಾರ್ಕ್ ತನ್ನ ಜನರಿಗೆ ಲ್ಯಾಟಿನ್ ಭಾಷೆಯನ್ನು ಕಲಿಯಲು ಹುರಿದುಂಬಿಸಿದನಲ್ಲದೆ, ಗ್ರೀಕ್ ಸಾಹಿತ್ಯದ ಹಿರಿಮೆಯನ್ನು ಕೊಂಡಾಡಿದ. ಬೋಕಾಶಿಯೊ ಈ ಸ್ಥಿತ್ಯಂತರಕ್ಕೆ ಮನ್ನಣೆ ಇತ್ತು, ಪ್ರಸಾರ ಕಾರ್ಯಕ್ಕೆ ಕಂಕಣಬದ್ಧನಾದ. ಅನೇಕ ಉತ್ಸಾಹಿ ಇಟಾಲಿಯನ್ನರು ಅವನ ಮಾರ್ಗವನ್ನು ಹಿಡಿದರು. ಹಸ್ತಪ್ರತಿಯನ್ನು ನಕಲು ಮಾಡುವ ಹಾಗೂ ಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿಯಿತು. ಪ್ರಮುಖ ವ್ಯಾಪಾರಸ್ಥರು ಇದಕ್ಕೆ ತಮ್ಮ ಬೆಂಬಲ ಸಹಾನುಭೂತಿಗಳನ್ನು ವ್ಯಕ್ತ ಮಾಡಿ ಅವ್ಯಕ್ತವಾದ ರೀತಿಯಲ್ಲಿ ಕೆಲಸ ನಡೆಸಿದರು. ವಿದ್ಯಾಭ್ಯಾಸ ಕೆಲವು ಜನಾಂಗಗಳ, ಸನ್ಯಾಸಿಗಳ ಸ್ವತ್ತಾಗಿ ಉಳಿಯಲಿಲ್ಲ. ದೇಶದ ಎಲ್ಲ ಜನಾಂಗಗಳಿಗೆ ವಿದ್ಯಾಭ್ಯಾಸದ ಗಾಳಿ ಬೀಸಿತು. ಸಂಪ್ರದಾಯವಾದಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ಜರ್ಜರಿತರಾದವರಿಗೆ ಈ ಹೊಸ ವಿಚಾರಧಾರೆ ಮತ್ತು ಹೊಸ ಮಾನಸಿಕ ಸ್ವಾತಂತ್ರ್ಯಗಳಿಂದ ಉತ್ಸಾಹ ಪ್ರಾಪ್ತವಾಯಿತು. ಪ್ರಾಚೀನ ಕಾಲದ ದಾಸ್ಯ ಶ್ರಂಖಲೆ ಕಳಚಿತು. ಹೊಸ ಮನ್ವಂತರವನ್ನು ಆರಂಭಿಸಬೇಕೆಂಬ ಶ್ರದ್ಧೆ ಒಡೆದು ಮೂಡಿತು. ವಿದ್ಯಾಭ್ಯಾಸಕ್ಕೆ ಭದ್ರವಾದ ತಳಹದಿ ಹಾಕಲಾಯಿತು. ಮಾನವೀಯತೆಯ ಬಗ್ಗೆ ಇದ್ದ ಚಿತ್ರವಿಚಿತ್ರ ಕಲ್ಪನೆಗಳು ಮಾಯವಾದುವು. ಹತ್ತು ಶತಮಾನಗಳ ಕಾಲ ಕವಿದಿದ್ದ ಕತ್ತಲೆ ಹರಿದಂತಾಯಿತು. ವಿಚಾರ ಸ್ವಾತಂತ್ರ್ಯ ಮತ್ತು ಹೊಸ ವಿಚಾರದಲ್ಲಿ ಭರವಸೆ ಇಟ್ಟ ತರುಣರು ಗುಡಿಗುಂಡಾರಗಳನ್ನು ಬಿಟ್ಟು ವಾಗ್ಮಿಗಳ ಉಪನ್ಯಾಸಕ್ಕೆ ಮತ್ತು ಭಾಷಾ ಶಾಸ್ತ್ರಜ್ಞರ ಭಾಷಣಗಳಿಗೆ ಕಿಕ್ಕಿರಿದು ತುಂಬತೊಡಗಿದರು. ಗ್ರೀಕ್ ಸಾಹಿತ್ಯದ ಅಧ್ಯಯನ ಆರಂಭವಾಯಿತು. ಪ್ರದರ್ಶನಾಲಯಗಳೂ, ಗ್ರಂಥಾಲಯಗಳೂ ಸ್ಥಾಪಿತವಾದುವು. ಮುದ್ರಣ ಯುಗ ಪ್ರಾರಂಭವಾಗಿ, ಜಿಜ್ಞಾಸುಗಳ ಬರಹ ಮುದ್ರಣಕ್ಕೆ ಇಳಿಯಲು ಅನುಕೂಲವಾಯಿತು. ಈ ಹೊಸ ವಿಚಾರಗಳ ಪ್ರವಾಹ ಜರ್ಮನಿ, ಫ್ರಾನ್ಸ್, ಸ್ಪೇನ್ ಮೊದಲಾದ ದೇಶಗಳಲ್ಲಿ ಹರಿಯತೊಡಗಿತು.

ಜೀವನದಲ್ಲಿ ವಿದ್ಯಾಭ್ಯಾಸ ಅನಿವಾರ್ಯವೆನಿಸಿತು. ಜನತೆ ವಿದ್ಯೆಯ ರುಚಿಯನ್ನು ಸವಿಯಲು ಮುಂದಾಯಿತು. ಡಿವೈನ್ ಕಾಮೆಡಿ, ಡ ಕ್ಯಾಮರಾನ್ ಮೊದಲಾದ ಸಾಹಿತ್ಯ ಕೃತಿಗಳು ಜನಪ್ರಿಯವಾದುವು. ಪ್ರಾಚೀನ ಗ್ರೀಸ್-ರೋಮ್ ವೈಭವಗಳನ್ನು ಪುನಃ ಸ್ಥಾಪಿಸುವ ಆಕಾಂಕ್ಷೆ ಹಬ್ಬಿತು. ಜೀವನ ಮತ್ತು ಕಲೆಗಳ ಸಮನ್ವಯ ಮೊದಲು ಆದದ್ದು ಇಟಲಿಯಲ್ಲಿಯೇ. ಲೌಕಿಕ ಸಮೃದ್ಧಿ, ದಾಸ್ಯದಿಂದ ಬಿಡುಗಡೆ, ಧರ್ಮದಲ್ಲಿ ಇಹಪರಗಳ ಸಮನ್ವಯ ಮುಂತಾದುವುಗಳನ್ನು ಇಟಲಿ ದೇಶವೇ ಮೊದಲು ಮಂಡಿಸಿತು.

ಪೀಟ್ರಾರ್ಕ್ ಮತ್ತು ಬೊಕಾಶಿಯೊ ಮಧ್ಯ ಯುಗದ ಸಾಹಿತ್ಯ ಸಿದ್ಧಾಂತದಲ್ಲಿ ನಂಬಿಕೆಯುಳ್ಳವರಾಗಿದ್ದರೂ ಸಾಹಿತ್ಯ ನಕ್ಕುನಗಿಸುತ್ತ ಸತ್ಯದ ಘನತೆಯನ್ನು ಎತ್ತಿ ತೋರಿಸಬೇಕೆಂಬುದು ಇವರ ಅಭಿಮತ. ನಿಕೊಲಪಿಸಾನೋ ಗ್ರೀಕ್, ರೋಮನ್ ಶಿಲ್ಪಕಲೆಯನ್ನು ಅಭ್ಯಸಿಸಲು ತೊಡಗಿದ. ಸಾಹಿತ್ಯ ನೀಡಿದ ಸ್ಫೂರ್ತಿಯಿಂದ ಕಲಾವಿದರು ತಮ್ಮತಮ್ಮ ಕ್ಷೇತ್ರದಲ್ಲಿ ಪರಿಣತಿ ಪಡೆದರು. ಅವರ ಕೃತಿಗಳು ಕೇವಲ ಅನುಕರಣೆಗಳಾಗಿರಲಿಲ್ಲ. ಇಟಲಿಯ ಚಿತ್ರಕಾರರಾದ ರಾಫೇಲ್, ಲೀಯೊನಾರ್ಡೊ ಡ ವಿಂಚಿ, ಮೈಕೆಲೆಂಜಲೊ ಮೊದಲಾದವರ ಕಲಾಕೃತಿಗಳು ಈ ಕಾಲದಲ್ಲಿ ಅರಳಿದವು. ಇಟಲಿಯ ಭೂಮಿಯ ಮೇಲೆ ಕುಂಟುತ್ತಾ ನಡೆದ ಗಾತಿಕ್, ವಾಸ್ತುಶಿಲ್ಪ ರೋಮನ್ ಶೈಲಿಯಿಂದ ಪುನರುಜ್ಜೀವನಗೊಂಡಿತು. ಹಳೆಯ ವಿಷಯಗಳನ್ನೇ ಆಯ್ಕೆ ಮಾಡಿದರೂ ಅವುಗಳ ನಿರೂಪಣೆಯ ಶೈಲಿ ನವೀನವಾಯಿತು. ಕಲೆಯಲ್ಲಿ ಮಾನವೀಯತೆಯ ದೃಷ್ಟಿ ಬಂತು.

ವಿಜ್ಞಾನ, ತತ್ತ್ವಶಾಸ್ತ್ರ ಈ ಎರಡೂ ಕ್ಷೇತ್ರಗಳಲ್ಲಿ ಮಾನವೀಯತೆ ಪ್ರಕಟವಾಯಿತು. ಅಂಗರಚನಾಶಾಸ್ತ್ರದ ಅಧ್ಯಯನ ಒಂದು ಹೊಸ ವಿಷಯವಾಯಿತು. ಕೋಪರ್ನಿಕಸ್, ಕೊಲಂಬಸ್, ಗೆಲಿಲಿಯೋ ಮೊದಲಾದವರ ಪರಿಶೋಧನೆಗಳು ಬೇರೆಬೇರೆಯಾಗಿದ್ದರೂ ಅವು ತಾಳ್ಮೆ ಹಾಗೂ ಪರಿಶ್ರಮದ ಫಲಗಳಾಗಿದ್ದವು. ಕೆಲವೆಡೆ ಪರಿಶ್ರಮ ತಪ್ಪು ದಾರಿ ಹಿಡಿದಿದ್ದೂ ಉಂಟು. ದಕ್ಷಿಣ ಇಟಲಿಯ ತತ್ತ್ವಜ್ಞಾನಿಗಳಾದ ಟೇಲೇಸ್ಯೋ, ಬೂನೋ ಮೊದಲಾದವರು ತರ್ಕಶಾಸ್ತ್ರದಲ್ಲಿ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದರು.

ಮಾನವೀಯ ದೃಷ್ಟಿಯಿಂದಾಗಿ ಮೊದಮೊದಲು ವಿಮರ್ಶೆಗೆ ಎಡೆಯಿರಲಿಲ್ಲ. ಹಳೆಯದು ಹೊಸದು ಎಲ್ಲವೂ ಸ್ವೀಕೃತವಾಯಿತು. ಸ್ವಲ್ಪ ಕಾಲದ ಅನಂತರ ವಿಮರ್ಶೆಯ ಕಡೆಗೂ ಲಕ್ಷ್ಯ ಪೂರೈಸಲಾಯಿತು. ಪೊಲಿಷಿಯನನ ಉಪನ್ಯಾಸ ಮಂದಿರದಲ್ಲಿ, ಅಲ್ಡಸನ ಮುದ್ರಣಾಲಯದಲ್ಲಿ, ವಿಟ್ಟೋರಿನೋನ ಶಾಲೆಯಲ್ಲಿ ಸಾಹಿತ್ಯ ವಿಮರ್ಶೆ ಪ್ರಾರಂಭವಾಯಿತು. ಚರ್ಚುಗಳು ಮಂಡಿಸಿದ ಸಿದ್ಧಾಂತಗಳೂ ವಿಮರ್ಶೆಗಳಿಗೆ ಒಳಗಾದವು. ನೇಪ್‍ಲ್ಸ್‍ನಲ್ಲಿ ವಿಮರ್ಶಕರ ಗುಂಪೇ ಹುಟ್ಟಿತು. ಜೀವನದ ಆಗುಹೋಗುಗಳನ್ನು ತಾತ್ತ್ವಿಕ ಹಿನ್ನೆಲೆಯಲ್ಲಿ ಹೊಸ ರೀತಿಯಲ್ಲಿ ಹೆಣೆದು, ಇತಿಹಾಸವನ್ನು ಹೇಗೆ ಬರೆಯಬೇಕೆಂದು ಮ್ಯಾಕಿಯವೆಲಿ ತೋರಿಸಿದ. ರಾಜ್ಯಶಾಸ್ತ್ರದಲ್ಲೂ ಅವನು ಪರಿಣಿತನಾಗಿದ್ದ. ಫ್ಲಾರೆನ್ಸ್ ಮತ್ತು ವೆನಿಸ್ ನಗರಗಳಲ್ಲಿ ಅವನಿಗೆ ಅನೇಕ ಅನುಯಾಯಿಗಳಿದ್ದರು.

ಶಿಕ್ಷಣದಲ್ಲೂ ಪುನರುಜ್ಜೀವನವಾಯಿತು. 15-16 ನೆಯ ಶತಮಾನಗಳಲ್ಲಿ ಬೋಲೋನ, ಪಾಡವ, ಸಲೆರ್ನೋ ವಿಶ್ವವಿದ್ಯಾಲಯಗಳೂ ಕಾನೂನು, ಭೌತವಿಜ್ಞಾನ ಮತ್ತು ವೈದ್ಯ ವಿಜ್ಞಾನಗಳಲ್ಲಿ ಖ್ಯಾತಿ ಹೊಂದಿದ್ದುವು. ವಿಜ್ಞಾನಕ್ಕಿಂತ ಕಲೆಗೆ ಹೆಚ್ಚು ಮಹತ್ತ್ವವಿತ್ತು. ಫಿಲೆಲ್ಫೊ, ಪೊಲಿಷಿಯನ್ ಮೊದಲಾದ ಪ್ರಾಧ್ಯಾಪಕರು ವಾಗ್ಮಿಗಳಾಗಿದ್ದರು. ಇಟಲಿಯ ಬೇರೆ ಬೇರೆ ಭಾಗಗಳಿಂದಲ್ಲದೆ ಯೂರೋಪಿನ ಉಳಿದ ಭಾಗಗಳಿಂದಲೂ ವಿದ್ಯಾರ್ಥಿಗಳು ಬರತೊಡಗಿದರು. ಗ್ರೀಕ್, ರೋಮನ್ ಭಾಷೆಗಳ ಅಭ್ಯಾಸದ ಮೂಲಕ ಇತಿಹಾಸ, ನ್ಯಾಯ, ವಿಜ್ಞಾನ, ಯುದ್ಧಕಲೆ ಮೊದಲಾದುವುಗಳ ಅರಿವಾಯಿತು. ಈ ಕ್ಷೇತ್ರದಲ್ಲಿದ್ದ ಟಿಪ್ಪಣಿಗಳು ಅಭ್ಯಾಸಕ್ಕೆ ಅನುವಾಗಿದ್ದುವು. ಗ್ರೀಕ್ ಭಾಷಾ ಪಂಡಿತರು ಮುದ್ರಿತ ಪುಸ್ತಕಗಳ ಅಭಾವದ ಕಾಲದಲ್ಲಿ ಕೀರ್ತಿಗಾಗಿ ಮತ್ತು ಧನಾರ್ಜನೆಗಾಗಿ ಊರೂರು ಅಲೆಯತೊಡಗಿದರು. ಮಾನವೀಯತೆಯನ್ನು ಸಾರಿ ಹೇಳುವ ಪ್ರಾಧ್ಯಾಪಕರಿಗೆ ಚರ್ಚುಗಳೂ, ಅರಮನೆಗಳೂ ಆಶ್ರಯ ನೀಡುತ್ತಿದ್ದುವು. ಪ್ರಭು, ಸರದಾರ, ಶ್ರೀಮಂತ ಮೊದಲಾದವರು ಮಕ್ಕಳ ಶಿಕ್ಷಣಕ್ಕಾಗಿ ಇಂಥ ಶಿಕ್ಷಕರನ್ನು ನೇಮಿಸಿಕೊಂಡರು. ವಿದ್ಯಾರ್ಥಿಗಳು ಭಾಷಾಂತರವನ್ನೂ ಗದ್ಯಪದ್ಯ ಬರಹವನ್ನೂ ಪ್ರಾರಂಭಿಸಿದರು. ದೈಹಿಕ ಹಿತಮಿತ ಬೆಳವಣಿಗೆಯನ್ನೂ ಕಡೆಗಣಿಸಲಿಲ್ಲ. ಅಂಗಸಾಧನೆಗೆ ಅನುಕೂಲತೆಗಳಿದ್ದುವು.

ಮೊದಲಿನ ರೀತಿನೀತಿಗಳಿಗಿಂತ ಹೊಸ ಮನ್ವಂತರದ ರೀತಿನೀತಿಗಳು ಭಿನ್ನವಾದವು. ಪ್ರಾಧ್ಯಾಪಕರ ಸಹವಾಸ ಇಲ್ಲವೇ ಪ್ರಭಾವದಿಂದ ಹೊಸ ಸಂಸ್ಕಾರವೇ ರೂಪ ತಾಳಿತು. ಈ ಹೊಸ ಸಂಸ್ಕøತಿಯನ್ನು ತಳೆದವನೇ ಸಭ್ಯಗೃಹಸ್ಥನೆಂಬ ಪ್ರತೀತಿ ಉಂಟಾಯಿತು. ಸುಧಾರಣೆಯ ಸುಪರಿಣಾಮ ಹಾಗು ದುಷ್ಪರಿಣಾಮ ಎರಡೂ ಇಟಲಿಯ ಸುಧಾರಣೆಯಲ್ಲಿ ಕಂಡುಬಂದವು. ಹೊಸ ಸಂಸ್ಕøತಿಯ ಮೆರಗಿನಲ್ಲಿ ಇಟಾಲಿಯನ್ನರು ಕಷ್ಟಸಹಿಷ್ಣುತೆಯನ್ನು ಮರೆಯಹತ್ತಿದರು. ಇಟಲಿ ತೋರಿದ ಹೊಸ ವಿದ್ಯಾಭ್ಯಾಸ ಕ್ರಮವನ್ನು ಪ್ರಮುಖ ರಾಷ್ಟ್ರಗಳಾದ ಜರ್ಮನಿ, ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್ ಸ್ವೀಕರಿಸಿ ಹೊಸ ಮನ್ವಂತರದಲ್ಲಿ ಕಾಲಿಟ್ಟವು.

ಜರ್ಮನಿ : 1348-1409 ರಲ್ಲಿ ಈ ದೇಶದಲ್ಲಿ ವಿಶ್ವವಿದ್ಯಾಲಯಗಳೂ ಸ್ಥಾಪಿತವಾಗಿದ್ದುವು. 1440 ರಿಂದ ಈ ವಿಶ್ವವಿದ್ಯಾಲಯಗಳು ಹೊಸ ಪಂಥಕ್ಕೆ ಮನ್ನಣೆ ನೀಡಿ ಅದಕ್ಕನುಗುಣವಾಗಿ ವಿದ್ಯಾಭ್ಯಾಸ ಕ್ರಮವನ್ನು ಕೈಗೊಂಡವು. ಹೀಗಾಗಿ ಗ್ರೀಕ್, ಹೀಬ್ರು, ಲ್ಯಾಟಿನ್ ಭಾಷೆಗಳ ಪ್ರಭಾವ ಒಡೆದು ತೋರಹತ್ತಿತು. ಇಟಲಿಯನ್ ವಿದ್ವಾಂಸರನ್ನು ಜರ್ಮನ್ ಪಂಡಿತರು ಅನುಸರಿಸತೊಡಗಿದರು. ಇಟಲಿಯಂತೆ ಇಲ್ಲೂ ಹಲವು ವಿದ್ಯಾಕೇಂದ್ರಗಳು ಸ್ಥಾಪಿತವಾದವು. ಆದರೆ, ಪುನರುಜ್ಜೀವನದಿಂದ ಇಟಲಿಯಲ್ಲಿ ಸಾಹಿತ್ಯ ಮತ್ತು ಕಲೆಗಳ ಪ್ರವಾಹವೇ ಬದಲಾದಂತೆ ಜರ್ಮನ್ ಸಾಹಿತ್ಯ ಕಲೆಗಳೂ ಬದಲಾದಂತೆ ಕಾಣುವುದಿಲ್ಲ. ಸ್ಪೇನ್ : ಸ್ಪೇನ್ ದೇಶ ಕೂಡ ಪುನರುಜ್ಜೀವನದ ಪ್ರಭಾವಕ್ಕೆ ಒಳಗಾಯಿತು. ಗಾತಿಕ್ ಶೈಲಿಯ ವಾಸ್ತುಶಿಲ್ಪ ಅರಬ್ ಮತ್ತು ಮೂರ್ ಬೆಳವಣಿಗೆಗಳಿಂದ ಕೂಡಿ ಹೊಸ ಶೈಲಿಯಾಗಿ ಪರಿಣಮಿಸಿತು. ನಾಡಿನ ಸೌಂದರ್ಯ ಹಾಗೂ ಜನಜೀವನ ಇವು ಸ್ಪೇನ್ ಚಿತ್ರಕಾರರ ವಿಷಯಗಳಾದವು.

ಪುನರುಜ್ಜೀವನವನ್ನು ಸ್ವೀಕರಿಸಿದ ಮುಖ್ಯ ವಕ್ತಾರರಲ್ಲಿ ಒಬ್ಬನಾದ ಸಾಹಿತಿ ಸರ್ವಾಂಟೀಸ್ ಡಾನ್ ಕ್ವಿಹೋಟೆ ಎಂಬ ಅಮರ ಕಾದಂಬರಿಯನ್ನು ರಚಿಸಿದ. ಷೇಕ್ಸ್‍ಪಿಯರ್‍ನಂತೆ ಸ್ಪೇನಿನ ನಾಟಕಾಕಾರರಾದ ಲೋಪೇ ಡೇ ವೇಗಾ ಮತ್ತು ಚಾಲ್ಡೆರಾನರ ಕೈಯ್ಯಲ್ಲಿ ನಾಟಕ ಹದಗೊಂಡಿತು. ಖಂಡಕಾವ್ಯಗಳು ಹೊಮ್ಮತೊಡಗಿದವು. ಸ್ಪೇನಿಗರು ತಮ್ಮ ದೇಶದ ಹಿನ್ನೆಲೆಯಲ್ಲೇ ಸಾಹಿತ್ಯ ಮತ್ತು ಕಲೆಗಳನ್ನು ಬೆಳೆಸಲಾರಂಭಿಸಿದರು. ಪುನರುಜ್ಜೀವನದ ಪ್ರಭಾವಕ್ಕೆ ಸ್ಪೇನ್ ಒಳಗಾಗಿದ್ದರೂ ಅದು ತನ್ನ ರಾಷ್ಟ್ರೀಯ ಘನತೆಯನ್ನು ಬಿಟ್ಟುಕೊಡಲಿಲ್ಲ. ಸ್ಪೇನಿನ ತನ್ನತನ ಮಾಸಲಿಲ್ಲ. ಧೈರ್ಯ ಸಾಹಸ ತುಂಬಿದ ಜನರಿಗೆ ಪುನರುಜ್ಜೀವನದ ಉತ್ಸಾಹ ನೆರವಾಯಿತು. ಹೊಸ ಹೊಸ ಪ್ರದೇಶಖಂಡಗಳನ್ನು ಪರಿಶೋಧಿಸಲಾಯಿತು. ಸಾಗರಾಂತರ ಸೀಮೆಯನ್ನು ಗುರುತಿಸಲು ಸಾಹಸಿಗಳ ತಂಡ ಹೊರಟಿತು. ಸ್ಪೇನ್ ಮತ್ತು ಪೋರ್ಚಗಲ್ ದೇಶಗಳು ಈ ನಿಟ್ಟಿನಲ್ಲಿ ಪರಸ್ಪರ ಸ್ಪರ್ಧಿಸಿದವು. ಈ ಪರಿಶೋಧನೆಗಳು ಉಳಿದ ಘಟನೆಗಳಿಗಿಂತಲೂ ಹೆಚ್ಚಾಗಿ ಹೊಸ ಯುಗದ ಹೊಂಬೆಳಕು ಚೆಲ್ಲಿದುವೆನ್ನಬಹುದು.

ಕೊಲಂಬಸ್ ಮತ್ತು ವ್ಯಾಸ್ಕೊಡಗಾಮ ಇವರ ಶೋಧನೆಗಳು ರಾಷ್ಟ್ರಗಳ ಪರಸ್ಪರ ಸೆಣಸಾಟಕ್ಕೆ ಕಾರಣವಾದವು. ಸಾಗರದಾಚೆಯ ಪ್ರದೇಶಗಳ ಶೋಧನೆ, ವಸಾಹತುಗಳು ಅಧಿಕಾರದ ಬಗ್ಗೆ ನೇರ ಸ್ಪರ್ಧೆ ಇವು ಯೂರೋಪಿನ ಇತಿಹಾಸದಲ್ಲಿ ಹೊಸ ಅಧ್ಯಾಯಗಳಾದವು. ರಾಜಕಾರಣ ಮತ್ತು ವ್ಯಾಪಾರದಲ್ಲಿ ತೊಡಗಿದವರು ಸಾಗರದತ್ತ ಲಕ್ಷ್ಯವೀಯತೊಡಗಿದರು. ಇದರ ಪರಿಣಾಮವಾಗಿ ಇಟಲಿ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು. ಪೌರಸ್ತ್ಯ ಪಾಶ್ಚಾತ್ಯ ಭೇದಭಾವಗಳು ಇಲ್ಲಿಂದಲೇ ಪ್ರಾರಂಭವಾದುವೆನ್ನಬಹುದು. ಪುನರುಜ್ಜೀವನದ ಕೆಲವು ಘಟನೆಗಳು ವಿಶ್ವದ ಜನತೆಯನ್ನು ಒಂದುಗೂಡಿಸಲು ಅನುಕೂಲವಾದುವು. ಫ್ರಾನ್ಸ್ : ಫ್ರಾನ್ಸ್ ಎಲ್ಲ ದೇಶಗಳಿಗಿಂತ ಮೊದಲು ಪುನರುಜ್ಜೀವನವನ್ನು ಅಳವಡಿಸಿಕೊಂಡಿತು. ಇದರ ಕಾಲ 8 ನೆಯ ಚಾಲ್ರ್ಸ್‍ನ ನೇಪಾಲ್ಸ್ ದಾಳಿಯಿಂದ ಆರಂಭವಾಯಿತು. 1494 ರಿಂದ 1585 ರ ವರೆಗೆ ಫ್ರಾನ್ಸ್-ಇಟಲಿಗಳ ನಡುವೆ ಸಂಪರ್ಕ ಇತ್ತು.

ಇಟಾಲಿಯನ್ ಶೈಲಿಯಲ್ಲೇ ಈ ದೇಶದ ಶಿಲ್ಪಕಲೆಯೂ ಬೆಳೆಯಿತು. 15ನೆಯ ಶತಮಾನದಲ್ಲಿ ಕೆಲವರು ಈ ಅಂಧಾನುಕರಣಕ್ಕಾಗಿ ಸಿಡಿದೆದ್ದರು. ಆದರೆ, ಯೂರೋಪ್ ಖಂಡವನ್ನೇ ಆವರಿಸಿದ್ದ ಪುನರುಜ್ಜೀವನವನ್ನು ಫ್ರಾನ್ಸ್ ಏಕಾಏಕಿಯಾಗಿ ಅಲ್ಲಗಳೆಯಲು ಅಸಾಧ್ಯವೆಂಬುವುದನ್ನು ಈ ಜನ ತಿಳಿದಂತೆ ಕಾಣಲಿಲ್ಲ.

1 ನೆಯ ಫ್ರಾನ್ಸಿಸನ ಆಳ್ವಿಕೆಯಲ್ಲಿ ಇಟಲಿಯ ಖ್ಯಾತ ಚಿತ್ರಕಾರರು ಫ್ರಾನ್ಸ್‍ನ್ನು ಸಂದರ್ಶಿಸಿದ್ದುಂಟು. ಅವರಲ್ಲಿ ಮಹಾನ್ ಕಲಾವಿದ ಲಿಯೊ ನಾರ್ಡೊ ಡ ವಿಂಚಿ ಒಬ್ಬ. ಪೂಸ್ಯಾನ್ ಮತ್ತು ಕಾಡ್ ಲೊರೇನ್ ಮುಂದಿನ ಪೀಳಿಗೆಯ ಶ್ರೇಷ್ಠ ಕಲಾವಿದರು.

ಫ್ರಾನ್ಸ್ ದೇಶಕ್ಕೆ ತನ್ನದೇ ಆದ ವಾಸ್ತುಶಿಲ್ಪ ಶೈಲಿ ಇತ್ತೆಂದೂ 2 ನೆಯ ಹೆನ್ರಿ ಮತ್ತು ಫ್ರಾನ್ಸಿಸರ ಕಾಲದಲ್ಲಿ ಈ ಶೈಲಿಯೇ ಮುಂದುವರೆಯತೆಂದೂ ತೋರುತ್ತದೆ. ಇಟಲಿಯಿಂದ ಬಂದ ವಾಸ್ತುಶಿಲ್ಪಿಗಳು ಇಲ್ಲಿ ಇಟಲಿಯದಕ್ಕಿಂತ ಬೇರೆ ಪ್ರಭಾವವನ್ನೇ ಕಂಡರು. ಬೇರೆ ಬೇರೆ ಶೈಲಿಗಳು ಫ್ರೆಂಚ್ ಕಲಾಕಾರರಲ್ಲಿ ಸಮಾವೇಶಗೊಂಡಿದ್ದುವು. ಫ್ರಾನ್ಸಿನ ಸಂಮಿಶ್ರ ಶೈಲಿ ಉಳಿದ ದೇಶಗಳಿಗೂ ಹಬ್ಬಿತ್ತು. ಸ್ಪೇನ್, ನೆದರ್ಲೆಂಡ್ಸ್, ಜರ್ಮನಿ ಇವು ಇಟಲಿಯಿಂದ ಸ್ಫೂರ್ತಿ ಪಡೆದರೂ ತಮ್ಮವೇ ಆದ ಕ್ರಮ ಮತ್ತು ಶೈಲಿಗಳಿಂದ ಮುಂದೆ ಸಾಗಿದ್ದನ್ನು ಕಾಣಬಹುದು.

ಫ್ರೆಂಚ್ ಸಾಹಿತ್ಯದ ಮೇಲೆ ಪುನರುಜ್ಜೀವನದ ಪ್ರಭಾವ ತೀವ್ರವಾಗಿತ್ತು. ಇತಿಹಾಸಕಾರ ಡ ಕಾಮೀನ್ 8 ನೆಯ ಚಾಲ್ರ್ಸ್‍ನ ನೇಪಲ್ಸ್ ದಂಡಯಾತ್ರೆಯನ್ನು ಬಣ್ಣಿಸಿದ. ಆದರೆ, ಇವನು ಜಾಗತಿಕ ಘಟನೆಗಳ ಹಾಗೂ ಜನಾಂಗಗಳ ಬಗ್ಗೆ ತನ್ನದೇ ಅಭಿಪ್ರಾಯ ಕೊಡುವುದರಿಂದ ಶ್ರೇಷ್ಠ ಇತಿಹಾಸಕಾರ ಪಂಕ್ತಿಯಲ್ಲಿ ಬರಲಾರ. ವಾಸ್ತವತೆಗೆ ಮಹತ್ತ್ವ ಕೊಟ್ಟವನು ಫ್ರಾಂಕಾಯ್ ವೀಯಾನ್. ಇವನ ಕೃತಿಗಳಲ್ಲಿ ಹೊಸತನ ಕಂಡುಬರುತ್ತದೆ. ಫ್ರೆಂಚ್ ಭಾಷೆಯ ಬೆಳವಣಿಗೆಗೆ ಲ್ಯಾಟಿನ್ ಭಾಷೆಯ ನೆರವು ದೊರೆಯಿತು. ಕಾವ್ಯಕ್ಕೆ ಸ್ಥಿರವಾದ ರೂಪ ರೇಷಗಳು ದೊರೆತವು.

17 ನೆಯ ಶತಮಾನದಲ್ಲಿ ಗ್ರೀಕ್, ಲ್ಯಾಟಿನ್ ಭಾಷೆಗಳಿಂದ ನಾಟಕಗಳ ಭಾಷಾಂತರ ಪ್ರಾರಂಭವಾಯಿತು. ಫ್ರಾನ್ಸ್ ದೇಶದ ಪುನರುಜ್ಜೀವನದ ಇತಿಹಾಸದಲ್ಲಿ ಸಾಹಿತ್ಯ ರಂಗದಲ್ಲಿಯ ಮಾರ್ಪಾಡು ಒಂದು ಪ್ರಮುಖ ಘಟ್ಟ. ಗದ್ಯ ಮಧುರವಾಗತೊಡಗಿತು. ಗ್ರೀಕ್, ಲ್ಯಾಟಿನ್ ಸಾಹಿತ್ಯದಲ್ಲಿಯ ಅಪೂರ್ವ ವಿಷಯಗಳನ್ನೇ ಫ್ರಾನ್ಸ್ ಬಳಸಲಾರಂಭಿಸಿತು. ಇಟಾಲಿಯನ್ ಭಾಷೆಯ ವಿಶೇಷ ಅಭ್ಯಾಸದಿಂದ ಫ್ರೆಂಚ್ ಸಾಹಿತಿಗಳು ತಮ್ಮ ಭಾಷೆಯಲ್ಲೂ ಅಮರ ಕೃತಿಗಳನ್ನು ರಚಿಸಿದರು. ಇಂಗ್ಲೆಂಡ್ : ಹೊಸ ಗಾಳಿ ಬೀಸುವವರೆಗೆ ಇಂಗ್ಲಿಷರು ಸಂಪ್ರದಾಯದಂತೆ ಕೇವಲ ನಿರೀಕ್ಷಕರಾಗಿದ್ದರು. ಹೊಸ ವಿಚಾರಕ್ಕೆ ಸ್ಥಾನ ಕೊಡುವುದಕ್ಕಿಂತ ಮೊದಲು ವಿಚಾರಿಸುವುದು ಅವರ ಗುಣ. ಇಂಗ್ಲಿಷರು ಕ್ರಾಂತಿಯಲ್ಲೂ ಭಾವನಾವಶರಾಗಿ ಮುನ್ನುಗ್ಗಿದವರಲ್ಲ. ಈ ಹಿನ್ನೆಲೆಯಲ್ಲಿ ಅವರು ಪುನರುಜ್ಜೀವನದ ಕಡೆಗೆ ಲಕ್ಷ್ಯವೀಯತೊಡಗಿದರು. ಪುನರುತ್ಥಾನ ಮತ್ತು ಸುಧಾರಣೆಗಳನ್ನು ಅನೇಕ ಕಾರಣಗಳಿಂದ ಇಂಗ್ಲೆಂಡ್ ಒಂದು ಶತಮಾನ ಮೊದಲೇ ಬಯಸಿತು ಎಂದು ಕಾಣುತ್ತದೆ. ಚಾಸರನ ಕಾವ್ಯ ಇಟಾಲಿಯನ್ ಭಾಷೆಯ ಉದಾಹರಣೆಗಳಿಂದ ಕೂಡಿದ್ದರೂ ತನ್ನದೇ ಆದ ಸವಿ ಬೀರಿತ್ತು. 1536 ರಲ್ಲಿ ಈ ನಾಡಿನಲ್ಲಿ ಪುನರುಜ್ಜೀವನ ಆರಂಭವಾಯಿತು. ಧಾರ್ಮಿಕ ಸುಧಾರಣೆಗೆ ಅರಸು ಮತ್ತು ಪಾರ್ಲಿಮೆಂಟುಗಳ ಮರ್ಯಾದೆ ದೊರಕಿದ್ದರಿಂದ ಧಾರ್ಮಿಕ ಕ್ರಾಂತಿ ಇಲ್ಲವೆ ರಕ್ತಪಾತಕ್ಕೆ ಅವಕಾಶವಾಗಲಿಲ್ಲ. ಗ್ರೀಕ್ ಲ್ಯಾಟಿನ್ ಗ್ರಂಥಗಳ ಶೇಖರಣೆ, ಮುದ್ರಣ, ಸಂಪಾದನೆ ಮತ್ತು ತರ್ಜುಮೆ ಭರದಿಂದ ನಡೆದವು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಹೊಸ ವಿಚಾರ ಪ್ರಣಾಲಿಗೆ ಬೆಲೆ ನೀಡಿದ್ದವು. ಇಟಾಲಿಯನ್, ಗ್ರೀಕ್, ಲ್ಯಾಟಿನ್ ಸಾಹಿತ್ಯದಲ್ಲಿಯ ಶ್ರೇಷ್ಠ ಕೃತಿಗಳ ಇಂಗ್ಲಿಷ್ ಭಾಷಾಂತರದಿಂದ ಉದ್ದಾಮ ಸಾಹಿತಿಗಳ ಪರಿಚಯ ಇಂಗ್ಲಿಷರಿಗಾಯಿತು. ಸ್ಪಾನಿಷ್ ನಾಟಕದ ಛಾಯೆ ಇಂಗ್ಲಿಷ್ ನಾಟಕಗಳಲ್ಲಿ ಕಂಡುಬರಹತ್ತಿತು. ಫ್ರೆಂಚ್ ಕತೆ ಕಾದಂಬರಿಗಳ ಪ್ರಭಾವ ಇಂಗ್ಲಿಷ್ ಸಾಹಿತ್ಯದ ಮೇಲೆ ಆಗದೆ ಇರಲಿಲ್ಲ. ಇಂಗ್ಲಿಷರು ತಮ್ಮ ದೇಶೀಯ ಭಾಷೆಯಲ್ಲಿ ಗತಕಾಲದ ಹಾಗೂ ನೂತನ ಗ್ರಂಥ ರಾಶಿಯನ್ನೇ ಶೇಖರಿಸಿದ್ದರೆಂದು ಧಾರಾಳವಾಗಿ ಹೇಳಬಹುದು.

ಇಂಗ್ಲೆಂಡ್ ದೇಶದ ವಿವಿಧ ಕಲೆಗಳ ಮೇಲೆ ಯಾವ ದೇಶದ ಪ್ರಭಾವವೂ ಬೀಳಲಿಲ್ಲ. ಆ ಕಾಲದ ಯಾವ ಇಂಗ್ಲಿಷ್ ಕಲಾವಿದನೂ ಚಿತ್ರಕಲೆಯಲ್ಲಾಗಲಿ ಮೂರ್ತಿ ವಾಸ್ತುಶಿಲ್ಪಗಳಲ್ಲಾಗಲಿ ಯೂರೋಪಿಯನ್ ಕಲಾವಿದರಿಗೆ ಸರಿ ಎನಿಸಲಾರ. (ಆರ್.ಆರ್.ಎ.)

ಚಿಂತನ ಧಾರೆ : ಹೀಗೆ ಬದಲಾದ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಸ ಸಿದ್ಧಾಂತಗಳನ್ನು ಸ್ಥಾಪಿಸುವ ತಾತ್ತ್ವಿಕ ಚಿಂತನೆಗಳಿಗೆ ಪುಷ್ಟಿಯೊದಗಿತು. ಲ್ಯಾಟಿನ್ ಭಾಷೆಗಿದ್ದ ಪರಮ ಮಹತ್ತ್ವ ತಪ್ಪಿ ಯೂರೋಪಿನ ಪ್ರಾದೇಶಿಕ ಭಾಷೆಗಳಾದ ಇಂಗ್ಲಿಷ್, ಜರ್ಮನ್, ಫ್ರೆಂಚ್ ಇತ್ಯಾದಿಗಳಿಗೆ ಪ್ರಾಬಲ್ಯ ಬಂದೊದಗಿದ್ದರಿಂದಲೂ ಧರ್ಮಗ್ರಂಥ ಬೈಬಲನ್ನು ಪ್ರಾದೇಶಿಕ ಭಾಷೆಯಲ್ಲಿ ಉಚ್ಚರಿಸಿದರೂ ಪ್ರತ್ಯಯವಿಲ್ಲವೆಂಬ ಪ್ರಾಟೆಸ್ಟೆಂಟ್ ಸುಧಾರಕರ ವಿಚಾರ ಕ್ರಾಂತಿಯಿಂದಲೂ ಲ್ಯಾಟಿನ್ ಬಾರದ, ಧರ್ಮಾಧಿಕಾರಿಗಳಲ್ಲದ ಜನರೂ ಕೂಡ ತತ್ತ್ವಚಿಂತನೆಗೆ ಹೊರಡುವಂತಾಯಿತು. ಇಟಲಿಯ ಮ್ಯಾಕಿಯಾವೆಲ್ಲಿ, ಇಂಗ್ಲೆಂಡಿನ ಸರ್ ಫ್ರಾನ್ಸಿಸ್ ಬೇಕನ್ ಮತ್ತು ತಾಮಸ್ ಹಾಬ್ಸ್, ಫ್ರಾನ್ಸಿನ ಡೇಕಾರ್ಟ್-ಇವರು ಕನಿಷ್ಠ ಎರಡು ಶತಮಾನಗಳ ಅವಧಿಯ ತತ್ತ್ವ ಚಿಂತನೆಗೆ ನೂತನ ಕರ್ಣಧಾರರೆನಿಸಿದರು.

ಇಂದು ನಾವು ಜ್ಞಾನವನ್ನು ಭೌತವಿಜ್ಞಾನ, ಸಮಾಜ ವಿಜ್ಞಾನ, ಮಾನವಿಕಗಳೆಂದು ಸಾಮಾನ್ಯವಾಗಿ ವಿಭಾಗಿಸುವ ಪರಿಪಾಠವಿದೆ. ಆದರೆ, ಪುನರುಜ್ಜೀವನ ಯುಗದ ಆರಂಭಕಾಲದಲ್ಲಿ ಜ್ಞಾನದ ವಿಭಾಗಕ್ರಮ ಇಷ್ಟು ಖಚಿತವಾಗಿರಲಿಲ್ಲ. ಆ ಯುಗದಲ್ಲಿ ಈ ವಿಭಾಗ ಕ್ರಮಕ್ರಮವಾಗಿ ವಿಕಸಿತವಾದುದ್ದನ್ನು ನೋಡುತ್ತೇವೆ. ಮತಧರ್ಮದ ಪ್ರಭುತ್ವವನ್ನು ಪ್ರತಿಭಟಿಸಿ ಸಾಮಾನ್ಯವಾಗಿ ಪರಾತಂತ್ರ್ಯದ ಮೇಲೆಯೇ ಬಂಡೆದ್ದ ಮತಾಂಧತೆ, ಪರಂಪರಾಗತ ಸಂಕುಚಿತ ಮನೋಭಾವ, ಅರಿಸ್ಟಾಟಲನ ಪ್ರಾಮಾಣ್ಯ ಎಲ್ಲವನ್ನು ತಿರಸ್ಕರಿಸುತ್ತ ಮಾನವ ಪ್ರಕೃತಿ, ವ್ಯಾವಹಾರಿಕ ಸಮಾಜಗಳನ್ನು ಕುರಿತು ಹೊಸ ಅಧ್ಯಾಯವನ್ನು ತತ್ತ್ವಜ್ಞರು ಈ ಯುಗದಲ್ಲಿ ಆರಂಭಿಸಿದ್ದನ್ನು ಕಾಣುತ್ತೇವೆ. ಈ ವಿಚಾರ ಪ್ರವೃತ್ತಿಯ ಪ್ರಪುಲ್ಲ ಕುಸುಮಗಳು ರಾಜ್ಯಶಾಸ್ತ್ರ ಸಿದ್ಧಾಂತ ಮಾನವತಾವಾದ ಹಾಗೂ ಪ್ರಕೃತಿಯ ತತ್ತ್ವ - ಈ ಮೂರೂ ವಲಯಗಳಲ್ಲೂ ಅರಳಿವೆ.

1. ರಾಜ್ಯಶಾಸ್ತ್ರ : ರಾಷ್ಟ್ರೀಯ ಐಕ್ಯ, ಆಂತರಿಕ ಭದ್ರತೆ, ರಾಜ್ಯಾಧಿಕಾರ, ಅಂತರರಾಷ್ಟ್ರೀಯ ನ್ಯಾಯನಿರ್ಣಯ ಮುಂತಾದ ವಿಷಯಗಳ ವಿವೇಚನೆ ಮುನ್ನಡೆದುದುರ ಫಲವಾಗಿ ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಮತ್ತು ಹಾಲೆಂಡ್‍ಗಳಲ್ಲಿ ರಾಜ್ಯಶಾಸ್ತ್ರ ವಿಕಾಸಗೊಂಡಿತು.

16 ನೆಯ ಶತಮಾನದ ಮ್ಯಾಕಿಯವೆಲಿ ಇಟಲಿಯಲ್ಲಿ ಫ್ಲಾರೆನ್ಸ್ ನಗರದ ಅಧಿಕಾರಿಯಾಗಿದ್ದನಲ್ಲದೆ ತನ್ನ ಪ್ರಿನ್ಸ್ ಮುಂತಾದ ಗ್ರಂಥಗಳಿಂದ ತುಂಬ ಪ್ರಸಿದ್ಧಿಗೆ ಬಂದ. ಧರ್ಮ ನೀತಿಗಳ ನಿಯಮಗಳಿಗೆ ಅಥವಾ ಬಂಧನಗಳಿಗೆ ಒಳಗಾಗದೆ ರಾಜಕಾರಣದ ಪ್ರಯೋಜನಗಳ ನಿರ್ಣಯವಾಗಬೇಕೆಂಬುದೇ ಈತನ ನೂತನ ವಿಚಾರ ಸರಣಿ. ತನ್ನ ಇಟಲಿ ಹಿಂದಿನ ರೋಮಿನಂತೆ ಮತ್ತೆ ಪ್ರಬಲ ಹಾಗೂ ಸಂಘಟಿತ ರಾಷ್ಟ್ರವಾಗಬೇಕೆಂಬ ಆತನ ಗುರಿ ಶ್ಲಾಘ್ಯವಾಗಿದ್ದರೂ ನೀತಿ ಮತ್ತೆಯ ಜವಾಬ್ದಾರಿಯನ್ನು ಅವನು ಕಡೆಗಣಿಸಿದುದು ಅನೇಕರಿಗೆ, ಸೇರುವಂತಿರಲಿಲ್ಲ. ಆದರೂ ಅವನ ವಿಚಾರಧಾರೆ ಒಂದು ಶತಮಾನದವರೆಗೆ ಫ್ರಾನ್ಸ್, ಇಂಗ್ಲೆಂಡ್, ಹಾಲೆಂಡ್‍ಗಳಲ್ಲಿ ರಾಜಕಾರಣಿಗಳ ಪುರಸ್ಕಾರ ಗಳಿಸಿತು. ರಾಜ್ಯದ ಅಧಿಕಾರ ಅಬಾಧಿತವೂ ಸರ್ವಾತೀತ ಹಾಗೂ ಸರ್ವೋಚ್ಚವೂ ಆಗಿರಬೇಕೆಂದು ಫ್ರಾನ್ಸಿನ ಜೀನ್ ಬೋರ್ಡಿನ್, ಇಂಗ್ಲೆಂಡಿನ ತಾಮಸ್ ಹಾಬ್ಸ್, ಹಾಲೆಂಡಿನ ಗ್ರೋಷಿಯಸ್ ಪ್ರತಿಪಾದಿಸಿದರು. ಇವರೆಲ್ಲ 17 ನೆಯ ಶತಮಾನದವರು. ಪ್ರಬಲ ರಾಜ್ಯ ವ್ಯವಸ್ಥೆ ಅಸ್ತಿತ್ತ್ವಕ್ಕೆ ಬರುವ ಮುನ್ನಿನ ಯುಗ ಒಬ್ಬರನ್ನೊಬ್ಬರು ಹಿಂಸಿಸುವ ನಿಸರ್ಗ ವ್ಯಾಪಾರದಿಂದ ಕೂಡಿತ್ತೆಂಬವಾದ ಹಾಬ್ಸನದು. ಆದರೂ, ನೈತಿಕ ಹೊಣೆ ಹಾಗೂ ರಾಜಕೀಯ ಅಗತ್ಯಗಳ ಘರ್ಷಣೆ ಇವು ಈ ವಿಚಾರ ಸರಣಿಯನ್ನು ಎಡೆಬಿಡದೆ ಹಿಂಬಾಲಿಸಿಕೊಂಡೇ ಇತ್ತು. ಅಂತೂ ಇವರು ಒದಗಿಸುತ್ತಿದ್ದ ಸಮರ್ಥನೆ ಆಥವಾ ಪರಿಹಾರ ಸರ್ವಸಮರ್ಪಕವೆನಿಸುವಂತಿರಲಿಲ್ಲ.

2. ಮಾನವತಾವಾದ : ಗಣಿತಶಾಸ್ತ್ರ ವೈದ್ಯಶಾಸ್ತ್ರ ಪ್ರಾಚೀನ ಸಾಹಿತ್ಯ ಇವುಗಳ ವಿಶೇಷಾಧ್ಯಯನಕ್ಕೆ ಪುನರುಜ್ಜೀವನ ಯುಗ ಪ್ರಚೋದನೆಯನ್ನೊದಗಿಸಿತು. ಮೊದಲ ಎರಡರ ಪರಿಣಾಮವಾಗಿ ವಿಜ್ಞಾನ ಕ್ರಾಂತಿಯೇ 16-17 ನೆಯ ಶತಮಾನಗಳಲ್ಲಿ ಉಂಟಾಯಿತು. ಮೂರನೆಯದರ ಫಲವೇ ಮಾನವತಾವಾದ. ಆರಂಭದಿಂದಲೂ ಮಾನವತಾವಾದಿಗಳು ವಿಜ್ಞಾನದ ಬಗ್ಗೆ ಸಂಶಯದ ಧೋರಣೆಯನ್ನು ತಡೆಯುತ್ತಿದ್ದುದಲ್ಲದೆ, ಧರ್ಮಗಳ ಬಗ್ಗೆ ಉದಾಸೀನರಾಗಿರುತ್ತಿದ್ದರು. ವಿಶ್ವಕ್ಕೆಲ್ಲ ಮಾನವನೇ ಕೇಂದ್ರ. ಅವನೇ ಪರಮ ಸ್ಥಾನೀಯ ಮತ್ತು ಅತ್ಯಂತ ಪ್ರಧಾನ ಎಂಬ ಅಭಿಪ್ರಾಯ ಮಾನವತಾವಾದಿಗಳದ್ದಾಗಿತ್ತು. ಇಟಲಿಯ ಪಿಕೋಡೆಲಾ ಮಿರಾಂ ಡೋಲ ಎಂಬ ತತ್ತ್ವಜ್ಞ 15 ನೆಯ ಶತಮಾನದಲ್ಲಿ ಮಾನವನ ಮಹತ್ತ್ವವನ್ನು ಕುರಿತ ಉಪನ್ಯಾಸ ಎಂಬ ಗ್ರಂಥವನ್ನು ಬರೆದ. ಮಾನವನ ವೈಯಕ್ತಿಕ ಹೊಣೆಯ ಮೇಲೆ ಹೆಚ್ಚಿನ ಒತ್ತು ಬೀಳತೊಡಗಿತು. ಮಾನವನ ಕಲಾ ಸೃಷ್ಟಿ ಒಂದು ಮಹತ್ತಮ ಮೌಲ್ಯವೆಂಬ ಭಾವನೆ ಮುಂದಾಯಿತು. ಅರಿಸ್ಟಾಟಲನ ವೈಜ್ಞಾನಿಕ ವಿಚಾರ ಸರಣಿ ಹಿಂದಾಗಿ ಪ್ಲೇಟೋನ ಭೌದ್ಧಿಕ ತತ್ತ್ವಗಳು ಮುಂದಾದವು. ವಿಶ್ಲೇಷಣಾತ್ಮಕ ವಿಚಾರಧಾರೆ ಹಿಂದೆ ಬಿದ್ದು ಹೃದಯವನ್ನು ಮೀಟಬಲ್ಲ ವಾಗ್ಮಿತೆಗೆ ಪ್ರಾಶಸ್ತ್ಯ ದೊರೆಯಿತು. ಮಧ್ಯಯುಗದ ಚಿಂತನೆಯ ಬಂಧನದಿಂದ ತತ್ತ್ವಜ್ಞಾನ ಹೊರಬಂದು ವಿಶಾಲತರ ಆಕಾಶದಲ್ಲಿ ವಿಹರಿಸುವಂತಾಯಿತು. 15 ನೆಯ ಶತಮಾನದ ಕಡೆಯ ವೇಳೆಗೆ ಪ್ಲೇಟೋನ ಕೃತಿಗಳನ್ನೆಲ್ಲ ಇಟಾಲಿಯನ್ ಭಾಷೆಗೆ ಅನುವಾದ ಮಾಡಿಯಾಗಿತ್ತು. ನೈತಿಕ ಗುಣಗಳ ಅಗತ್ಯವನ್ನು ಕುರಿತು ಪ್ಲೇಟೋ ಹೇಳಿದ್ದನ್ನು ಪುನರುಜ್ಜೀವನ ಯುಗದ ಶಿಕ್ಷಣ ಕ್ಷೇತ್ರಕ್ಕೆ ಅಳವಡಿಸಿ ಆಸ್ಥಾನಿಕ ಸದ್ಗøಹಸ್ಥರ ನೂತನ ಆದರ್ಶವನ್ನು ಈ ಯುಗ ಸಾಧಿಸಿತು. ಪ್ಲೇಟೋ ಹೇಳಿದ ವಿಜ್ಞಾನ ಗಣಿತ ಮುಂತಾದ ಶಾಸ್ತ್ರಗಳ ಅಗತ್ಯ ಅಧ್ಯಯನದ ಗುರಿ ನವವಿಜ್ಞಾನದ ಆರಂಭಕ್ಕೆ ನಾಂದಿಯಾಯಿತೆನ್ನಬಹುದು. ಕೊಪರ್ನಿಕಸ್, ಕೆಪ್ಲರ್, ಗೆಲಿಲಿಯೋ ವಿಜ್ಞಾನಿಗಳು ಈ ಕಾಲದ ತತ್ತ್ವಶಾಸ್ತ್ರಕ್ಕಿಂತ ಹೆಚ್ಚಾಗಿ ಪೈತಾಗರಸ್ಸನ ಸಂಖ್ಯಾಶಾಸ್ತ್ರದಿಂದಲೇ ಪ್ರಚೋದನೆ ಪಡೆದಂತೆ ತೋರುತ್ತದೆ.

ಈ ಯುಗದ ತತ್ತ್ವಶಾಸ್ತ್ರಕಾರರ ಶೈಲಿ ಕೂಡ ಪ್ಲೇಟೋನ ಪ್ರಭಾವಕ್ಕೆ ಒಳಗಾಗಿದೆ. ಪ್ಲೇಟೋ ಸಂವಾದಗಳ ಸಂಭಾಷಣಾ ಶೈಲಿ ಈ ಕಾಲದ ಮಾನವತಾವಾದಿಗಳ ವಿಜ್ಞಾನಿಗಳ ರಾಜ್ಯಶಾಸ್ತ್ರಕಾರರ ಗ್ರಂಥಗಳಲ್ಲೆಲ್ಲ ವ್ಯಾಪಕವಾಗಿ ಕಂಡುಬರುತ್ತದೆ.

ಈ ಮಾನವತಾವಾದ ಮುಖ್ಯತಃ ನೈತಿಕ ಹಾಗೂ ಸಾಹಿತ್ಯಕವಾದವೇ ಹೊರತು ಸಂಕುಚಿತಾರ್ಥದಲ್ಲಿ ತತ್ತ್ವಶಾಸ್ತ್ರಕ್ಕೆ ಸೀಮಿತವಾದ ಒಂದು ಸಿದ್ಧಾಂತವಲ್ಲ. ರಾಟರ್‍ಡಾಮಿನ ಎರಾಸ್‍ಮಸ್, ಇಂಗ್ಲೆಂಡಿನ ಸರ್ ತಾಮಸ್ ಮೋರ್, ಫ್ರಾನ್ಸಿನ ಮಾಂಟೇನ್-ಮುಂತಾದವರ ಸಾಹಿತ್ಯಿಕ ರಚನೆಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಆದರೆ ಈ ವಾದದ ಪ್ರಭಾವದಿಂದ ಲ್ಯಾಟಿನ್ ಗ್ರೀಕ್ ಪುರಾತನ ಗ್ರಂಥಗಳ ಅಧ್ಯಯನ ಪರಂಪರೆ ಬೆಳೆದಂತೆಲ್ಲ ತತ್ತ್ವಶಾಸ್ತ್ರ ಹಾಗೂ ವಿಜ್ಞಾನಗಳ ಕ್ಷೇತ್ರದಲ್ಲೂ ಹೆಚ್ಚಿನ ವಿಕಾಸವನ್ನು ಕಾಣುತ್ತೇವೆ. ಗ್ರೀಕರ ಭೌತಿಕತಾವಾದ, ಆಶ್ರದ್ಧತಾವಾದಗಳಿಗೆ ಹಿಂದೆ ಎಂದೂ ಕಾಣದ ಗೌರವ ಸಲ್ಲಲಾರಂಭವಾಯಿತು. ಮಾಂಟೇನ್ ಹಾಗೂ ಡೇಕಾರ್ಟ್ ಇವರ ಗ್ರಂಥಗಳಲ್ಲಿ ಈ ಉಕ್ತಿಗೆ ಸಫೂರ್ತ ನಿದರ್ಶನಗಳು ದೊರೆಯುತ್ತವೆ. ಈ ನವ ವಿಚಾರ ಸರಣಿಯಲ್ಲಿ ಆಶ್ರದ್ಧತೆಯೂ ಒಂದು ಮುಖ್ಯವಾದ ಅಂಗವಾಗುತ್ತದೆ.

3. ಪ್ರಕೃತಿಯ ತತ್ತ್ವ : ಹಿಂದಿನ ಜಗತ್ತಿನಲ್ಲಿ ತತ್ತ್ವಶಾಸ್ತ್ರ ಒಂದು ಸ್ವತಂತ್ರ ಸ್ಥಾನವನ್ನು ಪಡೆದಿದೆ. ಇತ್ತ ಮತಧರ್ಮದಿಂದಲೂ ಅತ್ತ ಖಚಿತ ವಿಜ್ಞಾನದಿಂದಲೂ ಭಿನ್ನವಾದ ತನ್ನ ಪ್ರತ್ಯೇಕ ಸ್ಥಾನವೊಂದನ್ನು ಅದು ಗಳಿಸಿಕೊಂಡಿದೆ. ಆದರೆ, ಈ ಸ್ವತಂತ್ರ ಸ್ಥಾನದ ಪ್ರಥಮ ಕೇಂದ್ರೀಕರಣ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ಬಹಳ ಈಚಿನದು. 18 ನೆಯ ಶತಮಾನಕ್ಕೆ ಮುಂಚೆ ಈ ಕೇಂದ್ರೀಕರಣವಾಗಿರಲಿಲ್ಲ. ಗ್ರೀಸಿನ ಪ್ರಾಚೀನ ತತ್ತ್ವಜ್ಞರು ಭೌತಿಕ ವಿಜ್ಞಾನಿಗಳೂ ಆಗಿರುತ್ತಿದ್ದರು. ಪಿತ್ಯಾಗರೆಸ್ ಮತ್ತು ಪ್ಲೇಟೋ ತತ್ತ್ವಜ್ಞರಂತೆ ಗಣಿತಜ್ಞರೂ ಆಗಿದ್ದರು. ಅರಿಸ್ಟಾಟಲನಲ್ಲಿ ತತ್ತ್ವಜ್ಞಾನ ಭೌತಿಕ ವಿಜ್ಞಾನಗಳ ನಡುವೆ ಅಂತರವೇನೂ ಕಾಣಸಿಗದು. ಗ್ರೀಕರ ವಿಶಾಲ ದೃಷ್ಟಿಕೋನವನ್ನೇ ಪುನರುಜ್ಜೀವನ ಯುಗವೂ ಮುಂದುವರಿಸಿತು. ಗೆಲಿಲಿಯೋ ಮತ್ತು ಬೇಕಾರ್ಟ್ ಗಣಿತಜ್ಞರಾಗಿದ್ದಂತೆ ವಿಜ್ಞಾನಿಗಳೂ ತತ್ತ್ವಜ್ಞರೂ ಆಗಿದ್ದರು. ಹೀಗೆ ಈ ಯುಗದ ಲಕ್ಷಣವನ್ನು ಪುನರಾಲೋಚಿಸಿ ವಿಂಗಡಿಸಿದರೆ, ಮಾನವ, ಸಮಾಜ ಹಾಗೂ ನೈಸರ್ಗಿಕ ಜಗತ್ತಿನ ವ್ಯವಸ್ಥಿತ ಹಾಗೂ ಕ್ರಮಬದ್ಧ ಆಲೋಚನೆಯೇ ತತ್ತ್ವಶಾಸ್ತ್ರವೆಂಬ ಮೂಲಸೂತ್ರವನ್ನು ನಾವಿಂದು ಊಹಿಸಬರುವಂತಿದೆ. ಆದರೆ, ಈ ಆಲೋಚನಾ ವಿಧಾನಗಳ ಬಗೆಗೆ ಭಿನ್ನಾಭಿಪ್ರಾಯವಿದ್ದುದರಿಂದ ಫ್ರಾನ್ಸಿಸ್ ಬೇಕನ್, ಟೇಕಾರ್ಟ್ ಮತ್ತು ತಾಮಸ್ ಹಾಬ್ಸ್-ಇವರ ಸಿದ್ಧಾಂತಸರಣಿ ಭಿನ್ನವೆನಿಸುವಂತಾಗಿದೆ. ಮಧ್ಯಯುಗದ ಚಿಂತನಶೀಲರಿಗೆ ಪ್ರಕೃತಿ ತಾರತಮ್ಯ ಭೂಯಿಷ್ಠವೂ ಪೂರ್ವಯೋಜಿತವೂ ದೇವನಿರ್ಮಿತವೂ ಆದ ಸೃಷ್ಟಿಯೆಂದು ಭಾಸವಾಗುತ್ತಿತ್ತು. ಆದರೆ, ಪುನರುಜ್ಜೀವನ ಯುಗದಲ್ಲಿ ಈ ಭಾವನೆಗಳೆಲ್ಲ ಕಳಚಿ ಬಿದ್ದುವು. ಪ್ರಕೃತಿಯ ವೈವಿಧ್ಯಮಯವೂ ಯಾಂತ್ರೀಕವೂ ಗಣಿತ ನಿಯಮಾನುಸಾರ ಸಂಬದ್ಧವೂ ಆದ ವಿಶ್ವವೆಂಬ ಹೊಸ ಭಾವನೆ ತಲೆದೋರಿತು. ಮಧ್ಯಯುಗದವರು ಸೃಷ್ಟಿಯ ಗುರಿ, ದೇವರ ಧ್ಯೇಯಗಳ ಬಗೆಗೆ ವಿಚಾರ ಪರವಶರಾಗುತ್ತಿದ್ದರೆ ಪುನರುಜ್ಜೀವನ ಯುಗದವರು ಶಕ್ತಿಗಳ, ಯಾಂತ್ರಿಕ ಪ್ರೇರಕಗಳ ಭೌತಿಕ ಕಾರಣಗಳ ಮಾತನ್ನಾಡತೊಡಗಿದರು. ಇದೆಲ್ಲ 15ನೆಯ ಶತಮಾನದ ಕಡೆಯ ಹೊತ್ತಿಗೆ ಸ್ಫುಟವಾಗಿಬಿಟ್ಟಿತ್ತು. ಫ್ಲಾರೆನ್ಸಿನ ಲಿಯೊನಾರ್ಡೊ ಡ ವಿಂಚಿ ಕಲಾಭಿಜ್ಞ ಹಾಗೂ ವಿಜ್ಞಾನಿ ಮತ್ತು ತತ್ತ್ವಜ್ಞಾನಿ ತನ್ನ ಟಿಪ್ಪಣಿಗಳಲ್ಲಿ ಈ ಮೂರೂ ಸೂತ್ರಗಳನ್ನು ಹೇಳಿದ್ದಾನೆ :

(1) ಯಾರೇ ಒಳ್ಳೆಯದೆನಿಸುವಂಥ ಬರಹವನ್ನು ರಚಿಸಿದವರಿದ್ದರೂ ಅನುಭವವೇ ಅವರ ಪರಮಸಖಿ : ಆದ್ದರಿಂದ ನಾನೂ ಅವಳ ಸಖ್ಯವನ್ನೇ ಬೆಳೆಸಿ. ಎಲ್ಲ ವಿಷಯಗಳನ್ನು ಅವಳ ತೀರ್ಮಾನಕ್ಕೆ ಬಿಡುತ್ತೇನೆ.

(2) ಯಾಂತ್ರಿಕ ವಿಜ್ಞಾನ ಎಲ್ಲಕ್ಕಿಂತ ಉದಾತ್ತವಷ್ಟೇ ಅಲ್ಲ. ಪ್ರಯೋಜನಕಾರಿಯೂ ಹೌದು. ಸಂಚರಿಸುವ ಶರೀರಗಳ ಕ್ರಿಯೆಯಲ್ಲ. ಅದರಿಂದಲೇ ಸ್ಪಂದಿಸುತ್ತದೆ.

(3) ಗಣಿತ ವಿಜ್ಞಾನವನ್ನು ಇಲ್ಲವೇ ಗಣಿತಾಶ್ರಿತ ವಿಜ್ಞಾನವನ್ನು ಅನ್ವಯಿಸುವವರೆಗೆ ಯಾವ ಖಚಿತ ಜ್ಞಾನವೂ ಶಕ್ಯವಿಲ್ಲ. ಹೀಗೆ ಪ್ರತ್ಯಕ್ಷಾನುಭವದ ಪ್ರಾಮಾಣ್ಯ. ಯಾಂತ್ರಿಕ ವಿಜ್ಞಾನದ ಪ್ರಾಶಸ್ಥ್ಯ. ಗಣಿತ ವಿಜ್ಞಾನದ ಸಮನ್ವಯದ ಬಗ್ಗೆ ಶ್ರದ್ಧೆ-ಈ ಮೂರು ಆಧಾರ ಶಿಲೆಗಳ ಮೇಲೆ ಪುನರುಜ್ಜೀವನದ ತತ್ತ್ವಶಾಸ್ತ್ರ ನಿರ್ಮಿತವಾಗಿದೆ. ಈ ಒಂದೊಂದು ವಿಚಾರಧಾರೆಯೂ ತತ್ತ್ವವಾದಕ್ಕೆ ಒಂದೊಂದು ಮಹಾಪ್ರಣಾಲಿಯನ್ನೊದಗಿಸಿತು ; ಪ್ರತ್ಯಕ್ಷ ಪ್ರಾಮಾಣ್ಯದ ಪ್ರಣಾಲಿ ಫ್ರಾನ್ಸಿಸ್ ಬೇಕನ್ನನದು ; ಯಾಂತ್ರಿಕ ವಿಜ್ಞಾನದ ಪ್ರಣಾಲಿ ತಾಮಸ್ ಹಾಬ್ಸನದು ; ಗಣಿತ ವಿವರಣೆಯ ಪ್ರಣಾಲಿ ಡೇಕಾರ್ಟನದು.

ವಾಸ್ತವವಾಗಿ ನೋಡಿದರೆ, ಪ್ರತ್ಯಕ್ಷ ಅನುಭವದ ಪ್ರಾಮಾಣ್ಯಕ್ಕೂ ಗಣಿತ ವಿವರಣೆಗೂ ಘರ್ಷಣೆ ಅನಗತ್ಯ. ಆದರೆ, ಕೆಲವೊಂದು ಆಕಸ್ಮಿಕ ಸಂಶೋಧನೆಗಳ ಪರಿಣಾಮವಾಗಿ ಅವುಗಳಿಗೆ ಪರಸ್ಪರ ವಿರೋಧವಿದ್ದಂತೆ ಅಂದಿನವರಿಗೆ ಭಾಸವಾಗುವಂತಾಯಿತು. 16 ನೆಯ ಶತಮಾನದ ಮಧ್ಯಕಾಲದಲ್ಲಿ ವಸೇಲಿಯಸ್ ಎಂಬ ಬೆಲ್ಜಿಯನ್ ವೈದ್ಯನ ಶಸ್ತ್ರ ವೈದ್ಯಕೀಯ ಸಂಶೋಧನೆಗಳು ಹಾಗೂ ಇಟಾಲಿಯನ್ ವಿಜ್ಞಾನಿ ಗೆಲಿಲಿಯೋನ ಗ್ರಹಗತಿಗಳ ಬಗೆಗಿನ ಸಂಶೋಧನೆಗಳು ಈ ಪ್ರವೃತ್ತಿಗೆ ಉದಾಹರಣೆಗಳೆನ್ನಬಹುದು. ಶರೀರದ ಒಳ ಅವಯವಗಳ ಸೂಕ್ಷ್ಮ ಪ್ರಾತ್ಯಕ್ಷಿಕೆ ವಸೇಲಿಯಸ್ಸನದಾದರೆ, ದ್ರವ್ಯಗಳ ಮೂಲಧರ್ಮಗಳು ಅವುಗಳ ಆಗಂತುಕ ಗುಣಗಳಿಂದ ಭಿನ್ನ, ದ್ರವ್ಯಗಳಲ್ಲಾಗುವ ಪರಿವರ್ತನೆಗಳಿಗೆ ಅವುಗಳ ಅವಯವ ಕ್ರಿಯೆಯೇ ಕಾರಣ ಮುಂತಾದ ಗೆಲಿಲಿಯೋನ ವಿಚಾರಗಳು ಕೇವಲ ಗಣಿತ ಶಾಸ್ತ್ರದ ಸಿದ್ಧಾಂತಗಳಿಂದ ಸ್ಫೂರ್ತವಾದಂಥವು. ರೂಪ, ರಸ, ಗಂಧ, ಸಾಮೀಪ್ಯ, ಸನ್ನಿವೇಶ-ಮುಂತಾದವೆಲ್ಲ ವಸ್ತುಧರ್ಮಗಳಲ್ಲ ; ವಸ್ತು ಚಲನೆಯಿಂದ ವ್ಯಕ್ತಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಮಾತ್ರ ಎಂಬ ಸಿದ್ಧಾಂತ ಈ ರೀತಿ ಆರಂಭವಾಯಿತು.

ವಸೇಲಿಯಸ್ - ಗೆಲಿಲಿಯೋ ಚಿಂತನಧಾರೆಗಳಲ್ಲಿ ಬರುವ ವಿರುದ್ಧ ದೃಷ್ಟಿಕೋನಗಳೇ ಮುಂದೆ ಬೇಕನ್ - ಡೇಕಾರ್ಟರ ಚಿಂತನಮಾರ್ಗಗಳಲ್ಲಿಯೂ ಸ್ಫುಟಿತರವಾಗುತ್ತವೆ. ಇನ್ನೂ ಮುಂದೆ ಹೋಗುತ್ತ ವಿಚಾರವಾದ (ರ್ಯಾಷನಲ್ಲಿಸಮ್) ಮತ್ತು ಪ್ರತ್ಯಕ್ಷ ಪ್ರಾಮಾಣ್ಯ ವಾದಗಳ (ಎಂಪಿರಿಸಿಸಮ್) ರೂಪದಲ್ಲಿ ವಿಕಾಸಗೊಂಡು ಈ ವಿರೋಧ 17 ಮತ್ತು 18 ನೆಯ ಶತಮಾನಗಳ ತತ್ತ್ವಶಾಸ್ತ್ರೀಯ ವಿವಾದಗಳಿಗೆಲ್ಲ ಮೂಲ ಕಾರಣವನ್ನೊದಗಿಸಿತೆನ್ನಬಹುದು. ಇಮ್ಯಾನುಯಲ್ ಕಾಂಟ್‍ನವರೆಗೆ ಇವುಗಳ ಸಮನ್ವಯ ಶಕ್ಯವಾಗಲೇ ಇಲ್ಲವೆಂದರೂ ಸಲ್ಲುತ್ತದೆ.

ಫ್ರಾನ್ಸಿಸ್ ಬೇಕನ್ನನ ಪ್ರತ್ಯಕ್ಷ ಸತ್ಯತಾವಾದ : ಪುನರುಜ್ಜೀವನಯುಗದ ಪ್ರತ್ಯಕ್ಷ ಸತ್ಯತಾವಾದಿಗಳಲ್ಲಿ 17ನೆಯ ಶತಮಾನದ ಇಂಗ್ಲಿಷ್ ವಿಜ್ಞಾನಿ ಸರ್ ಫ್ರಾನ್ಸಿಸ್ ಬೇಕನ್ ಅಗ್ರಗಣ್ಯ. ಪ್ರಾಕೃತಿಕ ವಿಜ್ಞಾನವನ್ನು ಗಟ್ಟಿಯಾದ ಅಡಿಗಲ್ಲಿನ ಮೇಲೆ ನಿಲ್ಲಿಸುವುದು ಅವನ ಮುಖ್ಯೋದ್ದೇಶವಾಗಿತ್ತು. ವಿಜ್ಞಾನದ ಅಧ್ಯಯನ ಮಾರ್ಗಗಳ ಸುಧಾರಣೆ ಮತ್ತು ವಿದ್ಯೆಯ ವ್ಯಾಪ್ತಿಯನ್ನು ವಿಶಾಲಗೊಳಿಸಲು ಉಪಾಯಗಳ ಕಲ್ಪನೆ ಅವನ ಗುರಿಯಾಗಿತ್ತು. 1605 ರಲ್ಲಿ ಅವನು ವಿದ್ಯೆಯ ಸಂವರ್ಧನೆ ಎಂಬ ಗ್ರಂಥದಲ್ಲಿ ವಿದ್ಯೆಯ ಒಂದು ನಕ್ಷೆಯನ್ನು ಚಿತ್ರಿಸಿದ. ಮಾನವನ ಸ್ಮøತಿಮೂಲವಾದ ಇತಿಹಾಸ, ಪ್ರತಿಭಾ ಮೂಲವಾದ ಕಾವ್ಯ ಮತ್ತು ವಿವೇಚನಾಶಕ್ತಿಯಿಂದ ಉದಯಿಸುವ ತತ್ತ್ವಶಾಸ್ತ್ರ-ಎಂದು. ಆದರೆ, ಅವನ ಪ್ರಕಾರ ಈ ವಿವೇಕ ಪ್ರತ್ಯಕ್ಷಾನುಭವಕ್ಕೆ ಸೀಮಿತವಾದ್ದು. ಮುಂದೆ 15 ವರ್ಷಗಳ ನಂತರ ಇನ್ನೊಂದು ಗ್ರಂಥದಲ್ಲಿ ವಿಶೇಷಗಳ ವಿವೇಚನೆಗೆ ತೊಡಗುವುದೇ ತತ್ತ್ವಶಾಸ್ತ್ರದ ಮುಖ್ಯ ಧ್ಯೇಯವಾಗಬೇಕೆಂದು ಅವನು ಅಭಿಪ್ರಾಯಪಟ್ಟಿದ್ದಾನೆ. ಹೊಸದಾದ ವೈಜ್ಞಾನಿಕ ವಿಚಾರ ಮಾರ್ಗಗಳ ಅನ್ವೇಷಣೆಯಿಂದಾಗಿ ವಿನೂತನ ವಿಜ್ಞಾನವೊಂದು ಉದಯಿಸುವುದೆಂಬ ವಿಶ್ವಾಸ ಬೇಕನ್ನನದಾಗಿತ್ತು. ಅವನು ಈ ವಿವೇಚನ ಕ್ರಮಗಳನ್ನು ಸಂಶೋಧನೆಯ ಮಗ್ಗಿಗಳೆಂದಿದ್ದಾನೆ. ಇವು ಮೂರು ಪರಿಯವು : (1) ಅನ್ವಯ (ಒಂದಿದ್ದಾಗ ಇನ್ನೊಂದು ಇರುವುದು), (2) ವ್ಯತಿರೇಕ (ಒಂದಿದ್ದಾಗ ಇನ್ನೊಂದು ಇಲ್ಲದಿರುವುದು) ಮತ್ತು (3) ಪ್ರಮಾಣ ಪರಿವರ್ತನ (ಒಂದೊಂದರ ಪ್ರಮಾಣಗಳಲ್ಲೂ ಒದಗುವ ವೃದ್ಧಿಹ್ರಾಸಗಳು). ಹೀಗೆ ಈ ನಿರ್ದಿಷ್ಟ ಹಾಗೂ ನಿಷ್ಕøಷ್ಟ ಸೂತ್ರಗಳ ಮೇಲಿಂದ ಭೌತಶಾಸ್ತ್ರ ತತ್ತ್ವಶಾಸ್ತ್ರಗಳೆರಡನ್ನೂ ಅನುಗಮನತರ್ಕದಿಂದಲೇ ಸಾಧಿಸಬಹುದೆಂದು ಅವನು ಬಗೆದ ಅನುಭವವೊಂದೇ ಪರಮ ಪ್ರಮಾಣವೆಂಬ ಅವನ ದೃಢ ನಿಲವು ತತ್ತ್ವಶಾಸ್ತ್ರದ ಇತಿಹಾಸದಲ್ಲಿ ಬೇಕನ್ನನನ್ನು ಅಮರವಾಗಿಸಿದೆ. ಮುಂದೆ 18ನೆಯ ಶತಮಾನದ ಫ್ರೆಂಚ್ ವಿಶ್ವಕೋಶಕಾರರಿಗೂ 19ನೆಯ ಶತಮಾನದ ಇಂಗ್ಲಿಷ್ ಭೌತ ತತ್ತ್ವವಿಜ್ಞಾನಿಗಳಿಗೂ ಬೇಕನ್ನನ ವಿಚಾರಸರಣಿ ಸ್ಫೂರ್ತಿಯನ್ನೊದಗಿಸಿತು.

ತಾಮಸ್ ಹಾಬ್ಸನ ಯಾಂತ್ರಿಕತಾವಾದ : ಬೇಕನ್ ಗೆಲಿಲಿಯೋ ಇಬ್ಬರ ವಿಚಾರ ಸರಣಿಯನ್ನೂ ಹಾಬ್ಸ್ ಪರಿಚಯ ಮಾಡಿಕೊಂಡವ, ಇಂಗ್ಲಿಷ್ ರಾಜ್ಯಶಾಸ್ತ್ರಜ್ಞನಾದ ತಾಮಸ್ ಹಾಬ್ಸ್ ಬೇಕನ್ನನಂತೆ ವೈಜ್ಞಾನಿಕ ಅಧ್ಯಯನ ಮಾರ್ಗದಲ್ಲಿ ಅವನಿಗೆ ನಿಷ್ಠೆ ಇತ್ತು ; ಗೆಲಿಲಿಯೋನಂತೆ ಚಲನಶೀಲ ಭೌತಿಕವಸ್ತುಗಳಲ್ಲೂ ಆಸಕ್ತಿ ಇತ್ತು. ಯಾಂತ್ರಿಕ ಭೌತಿಕತಾವಾದದ ಒಂದು ಸಂಪೂರ್ಣ ಸಂಹಿತೆಯನ್ನೇ ರಚಿಸಲು ಅವನು ಸಮರ್ಥನಾದ. ಏಕೆಂದರೆ ಪ್ರಕೃತಿ, ಮಾನವ, ಸಮಾಜ ಮೂರನ್ನೂ ಅವನು ಭೌತಿಕ ದೃಷ್ಟಿಯಿಂದ ವಿವರಿಸಿದ.

ಅವನ ಚಿಂತನೆಯಲ್ಲಿ ಕಾರಣದಿಂದ ಕಾರ್ಯವನ್ನು ತರ್ಕಿಸುವ ಪ್ರವೃತ್ತಿ ಸಮನ್ವಯಾತ್ಮಕವಿರುವಂತೆ ಕಾರ್ಯದಿಂದ ಕಾರಣವನ್ನು ತರ್ಕಿಸುವ ವಿಧಾನ ವಿಶ್ಲೇಷಣಾತ್ಮಕವಾಗಿದೆ. ತನ್ನ ಗಣಿತ ನಿಷ್ಠೆಯಿಂದಾಗಿ ಹಾಬ್ಸ್‍ಗೆ ಮೊದಲನೆಯ ನಿಗಮನ ತರ್ಕವಿಧಾನವೇ ಪ್ರಿಯ. ನಿಜವಾಗಿ ಜಗತ್ತು ಸತತ ಚಲನಶೀಲವಾಗಿರುವ ಭೂತವಸ್ತುವೆಂಬುದು ಅವನು ಗ್ರಹೀತ ಹಿಡಿಯುವ ಪ್ರಮೇಯ. ಅದರ ಕಾರಣ - ಕಾರ್ಯಗಳನ್ನು ವಿವೇಚಿಸುವ ಕಾರ್ಯ ತತ್ತ್ವಶಾಸ್ತ್ರಕ್ಕೆ ಸೇರಿದ್ದು. ಹೀಗೆ ತತ್ತ್ವಶಾಸ್ತ್ರದಲ್ಲಿ ಅವನ ಪ್ರಕಾರ (1) ಭೌತಶಾಸ್ತ್ರ, (2) ಮನಶ್ಯಾಸ್ತ್ರ ಮತ್ತು (3) ವ್ಯವಹಾರಶಾಸ್ತ್ರ ಎಂಬ ಮೂರೇ ವಿಭಾಗಗಳಾಗುತ್ತವೆ ; ಏಕೆಂದರೆ ವಿಶ್ವದಲ್ಲಿ ಎಲ್ಲವೂ ಜಡವಸ್ತುಗಳ ಚಲನೆ ಅಥವಾ ಅವುಗಳಿಂದ ಚಿತ್ತದ ಮೇಲಾಗುವ ಪರಿಣಾಮ ಮತ್ತು ಅದರ ಫಲವಾಗಿ ಬರುವ ಚೇತನ ಕ್ರಿಯೆಗಳು - ಇಷ್ಟರಲ್ಲಿ ಪರ್ಯಾವಸಾನಗೊಳ್ಳುತ್ತವೆ. ಇದು ಗ್ರೀಕರ ಭೌತೀಕತಾವಾದದ ಒಂದು ಪುನರುಕ್ತಿಯಾಗಿರದೇ, ಜ್ಞಾನವೆಲ್ಲ ಇಂದ್ರಿಯಿಕವೇ, 'ಸಾಮಾನ್ಯವೆಂಬುದು ಇಲ್ಲವೇ ಇಲ್ಲ ಎಂದು ಮುಂತಾದ ನೂತನಾಂಶಗಳನ್ನೂ ಅದು ಒಳಗೊಂಡು ಬ್ರಿಟಿಷ್ ಚಿಂತನೆಯನ್ನು ಬೆಳೆಸಿತೆನ್ನಬಹುದು.

ಡೇಕಾರ್ಟನ ವಿಚಾರವಾದ : ಫ್ರಾನ್ಸಿನಲ್ಲಿ ಜನಿಸಿದರೂ ಹಾಲಂಡ್‍ನಲ್ಲಿ ಬಾಳಿದ ಡೇಕಾರ್ಟ ತತ್ತ್ವಶಾಸ್ತ್ರದಲ್ಲಿ ಹಿರಿಯ ಹೆಸರಾಂತವ. ತತ್ತ್ವಶಾಸ್ತ್ರದಲ್ಲಿ ಆಧುನಿಕ ಪ್ರವೃತ್ತಿಗೆಲ್ಲ ಅವನೇ ಜನಕನೆಂದು ಕೂಡ ಸಾಮಾನ್ಯವಾಗಿ ಹೇಳುವುದುಂಟು. 17ನೆಯ ಶತಮಾನದಲ್ಲಿ ಅವನು ಪ್ರಕಟಿಸಿದ ಹಲವು ಉದ್ಗ್ರಂಥಗಳು ಮಧ್ಯಯುಗದವರ ವಿಚಾರಗಳನ್ನೂ ಲಿಯೊನಾರ್ಡೊ, ಗೆಲಿಲಿಯೋ ಇವರ ವಿಚಾರಗಳನ್ನು ಸಮನ್ವಯಗೊಳಿಸಿದವು. ಭೌತವಿಜ್ಞಾನದ ಪುರಸ್ಕಾರ, ವಿಜ್ಞಾನವೇ ಮಾನವನಿಗೆ ಪ್ರಬಲ ಶಕ್ತಿ ಎಂಬ ನಿರ್ಧಾರ, ವಿಚಾರವೇ ಕಲ್ಪವೃಕ್ಷವೆಂಬ ವಿಶ್ವಾಸ-ಇವು ಅವನ ಗ್ರಂಥಗಳಿಗೆ ಮೂಲಭೂತ ಪ್ರೇರಣೆಗಳು. ಅವನ ಪ್ರಕಾರ ತತ್ತ್ವಜ್ಞಾನವೆಂದರೆ ಮಾನವ ಅರಿಯಬಹುದಾದ ಎಲ್ಲದರ ಪರಿಪೂರ್ಣ ಜ್ಞಾನ, ತತ್ತ್ವಜ್ಞಾನದ ವೃಕ್ಷಕ್ಕೆ ಆದಿಭೌತಿಕ ಚಿಂತನೆ ಬೇರು ; ಭೌತಿಕ ವಿಜ್ಞಾನವೇ ಕಾಂಡ ; ನೀತಿ ಶಾಸ್ತ್ರ, ವೈದ್ಯಶಾಸ್ತ್ರ, ಯಂತ್ರ ವಿಜ್ಞಾನಗಳೇ ಶಾಖೆಗಳು. ಹೀಗೆ ಭೌತಿಕ ವಿಜ್ಞಾನಕ್ಕೆ ಆದಿಭೌತಿಕ ತತ್ತ್ವ ಆಧಾರವನ್ನೊದಗಿಸುವುದೆನ್ನುವ ದೃಷ್ಟಿ ಹೊಸದಾದ್ದು. ವಿಚಾರ ಮಾರ್ಗದಲ್ಲಿ ಸಂಶಯಪಡುವ ಪ್ರವೃತ್ತಿಯೇ ಸೋಪಾನ ; ಸಂಶಯಾತೀತವಾದುದಷ್ಟೇ ಪ್ರಮಾಣ. ನಾನು ವಿಚಾರಪರ ; ಆದ್ದರಿಂದ ನಾನು ಇದ್ದೇನೆ ಎಂಬ ಒಂದೇ ಸೂತ್ರ ನಿಜವಾಗಿ ಸಂಶಯಾತೀತ. ಜೀವನಸಂಶಯಾತೀತತೆಯ ದ್ವಾರಾ ಪರಿಪೂರ್ಣನಾದ ದೇವರೊಬ್ಬ ಇರಬೇಕೆಂಬ ತರ್ಕವೂ ಡೇಕಾರ್ಟನದು. ಹೀಗೆ ಅವನ ತತ್ತ್ವಪ್ರತಿಪಾದನೆಯಲ್ಲಿ ಇರಬೇಕೆಂಬ ತರ್ಕವೂ ಡೇಕಾರ್ಟ್‍ನದು. ಹೀಗೆ ಅವನ ತತ್ತ್ವಪ್ರತಿಪಾದನೆಯಲ್ಲಿ ಕಾರ್ಟಿಸಿಯನ್ ವಿಚಾರಗಳೂ ಸಮ್ಮಿಳಿತವಾಗಿವೆ. ಮುಂದೆ ಸ್ಪೀನೋeóÁ, ಲೈಪ್‍ನಿಟ್ಸ್ ಮುಂತಾದವರು ಸ್ವತಂತ್ರವಾಗಿ ತಮ್ಮ ತತ್ತ್ವವಾದಗಳನ್ನು ಪ್ರತಿವಾದಿಸಿ ಖ್ಯಾತಿಗೆ ಬಂದರು. (ಕೆ.ಕೆ.)

ಪುನರುಜ್ಜೀವನ ಅವಧಿಯ ವಿಮರ್ಶೆ : ಈ ವಿಮರ್ಶೆಯ ವಾಹಿನಿ 15ನೆಯ ಶತಮಾನದ ಮಧ್ಯೆ ಇಟಲಿಯಲ್ಲಿ ಹುಟ್ಟಿ, ಮುಂದಿನ ಮೂರು ವರ್ಷಗಳಲ್ಲಿ ಯೂರೋಪಿನಲ್ಲೆಲ್ಲ ಮುಖ್ಯವಾಗಿ ಫ್ರಾನ್ಸ್, ಸ್ಪೇನ್, ಇಂಗ್ಲೆಂಡುಗಳಲ್ಲಿ ಹರಿಯಿತು. 16ನೆಯ ಶತಮಾನದ ಪಂಡಿತರು ಮಧ್ಯಯುಗದ ಎರಡು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು.

1. ವಿಷಯೋಚಿತವಾದ ಶೈಲಿಗೂ ಅಲಂಕಾರಗಳಿಗೂ ಸೇರಿದ್ದು ; 2. ಛಂದಶ್ಯಾಸ್ತ್ರಕ್ಕೆ ಸೇರಿದ್ದು. ಜೊತೆಗೆ, ಸಾಹಿತ್ಯ ದೋಷಯುಕ್ತವಾದದ್ದು, ಅದು ಯೋಗ್ಯವಾಗಬೇಕಾದರೆ ಅದಕ್ಕೆ ನೈತಿಕ ಉದ್ದೇಶ ಇರಬೇಕು ಎಂಬ ಅಭಿಪ್ರಾಯಗಳೂ ಬಂದಿದ್ದವು. ಅದುವರೆಗೂ ಕಾಣದಾಗಿದ್ದ ಉತ್ಕøಷ್ಟ ಪ್ರಾಚೀನ ಗ್ರೀಕ್ ಗ್ರಂಥಗಳು ಪುನಃ ಸಿಕ್ಕಿದವು. ಅವನ್ನು ಓದಿ ಅವುಗಳಲ್ಲಿದ್ದ ಸಾಹಿತ್ಯ ಸೌಂದರ್ಯಕ್ಕೆ ಮನಸೋತ ಕಾವ್ಯಪ್ರೇಮಿಗಳಿಗೆ ಆ ಅಭಿಪ್ರಾಯಗಳೂ ಸಂಪ್ರದಾಯಗಳೂ ತೃಪ್ತಿಕರವಾಗಲಿಲ್ಲ. ಏತಕ್ಕೆಂದರೆ ಅವರ ಅಭಿರುಚಿ ಹೆಚ್ಚು ನಿಶ್ಚಿತವಾಗಿತ್ತು. ಅವರ ರಸಿಕತೆ ಹೆಚ್ಚು ವಿವೇಚನಾಯುಕ್ತವಾಗಿತ್ತು. ಆದ್ದರಿಂದ ಅವರ ಲೇಖನಗಳ ರೀತಿ ಮೂರ್ತವಾಗಿ ಹೆಚ್ಚು ಸ್ಪಷ್ಟವಾಯಿತು. ಆ ವಿಮರ್ಶಕರಿಗೆ ಕೆಲವು ಹೊಸ ಸಮಸ್ಯೆಗಳೂ ಉದ್ಭವಿಸಿದವು : 1. ಕಾವ್ಯ ಸಮರ್ಥನೆ 2. ಕಾವ್ಯ ತತ್ತ್ವದ ಮತ್ತು ಕಾವ್ಯ ಪ್ರಕಾರಗಳ ಪುನರನ್ವೇಷಣೆ 3. ಉದ್ದೇಶ, ವಸ್ತು, ಸಾಧನಗಳಲ್ಲಿ ವಿವಿಧ ಕಾವ್ಯ ಪ್ರಕಾರಗಳಿರುವ ವ್ಯತ್ಯಾಸ 4. ಲ್ಯಾಟಿನ್ ಭಾಷೆಯನ್ನು ಉಪಯೋಗಿಸಬೇಕೆ ಇಲ್ಲವೇ ದೇಶಭಾಷೆಯನ್ನೆ ಎಂಬ ಪ್ರಶ್ನೆ 5. ಈ ಎಲ್ಲ ವಿಷಯಗಳ ಮೇಲೂ ಪುರಾತನರು ಹೇಳುವುದೇನು ಎಂಬುದು ಇತ್ಯಾದಿ.

16ನೆಯ ಶತಮಾನದ ಆದಿಯಲ್ಲಿ ನೀತಿ ಪ್ರಮುಖವಾದ ಕಾವ್ಯ ಸಮರ್ಥನೆ ಬಳಕೆಯಲ್ಲಿದ್ದು ಮಧ್ಯದಲ್ಲಿ ಹೊಸ ಸಮರ್ಥನ ಮಾರ್ಗಗಳು ರೂಢಿಗೆ ಬಂದವು. ನೀತಿ, ವಿಧಿ, ಸೂತ್ರಗಳಿಗೆ ಮಾತ್ರ ಕಾವ್ಯ ಅನುಗುಣವಾಗಿದ್ದರೆ, ಸಾಲದು ಮನುಷ್ಯನ ಅಂತರ್ಜೀವನದ ದೃಷ್ಟಿಯಿಂದಲೂ ಅದರ ನಿರೂಪಣೆ ಮತ್ತು ಸಮರ್ಥನೆ ಆಗಬೇಕೆಂಬ ಅಪೇಕ್ಷೆ ಮೂಡಿತು. ಕಾವ್ಯ ನಾಗರಿಕತೆಯ ಸಾಧನ (ಜಾಕ್ವಿಸ್ ಪೆಲೆಟಿಯೆ) ಕವಿಗೆ ಆಳವಾದ ಪಾಂಡಿತ್ಯ ಅಗತ್ಯ (ಡ್ಯೂಬೆಲೆ) ಕವಿ ದೈವಪ್ರೇರಣೆಯನ್ನು ಪಡೆಯುತ್ತಾನೆ (ಡ್ಯೂಬೆಲೆ). ಕಾವ್ಯ ಸೌಶೀಲ್ಯಪೋಷಕವಾದ ಆನಂದದಿಂದ ತುಂಬಿದೆ (ಸಿಡ್ನಿ). ಓದುಗರು ಪುರಾತನ ಕೃತಿಗಳ ಪರಿಚಯವನ್ನು ಹೊಂದಿ ಸಾಂಪ್ರದಾಯಿಕ ಸೂತ್ರಗಳನ್ನು ಅರಿತು ಕಾವ್ಯಾನಂದದ ಮೂಲಕ ನೈತಿಕ ಉನ್ನತಿಯನ್ನು ಏರಿ ಸುಸಂಸ್ಕøತರಾಗಬಲ್ಲರು ; ಕಾವ್ಯ ಈ ಉನ್ನತಿಗೆ ಸಾಧನ. ಈ ರೀತಿ ಕಾವ್ಯದ ಸಮರ್ಥನೆ ನಡೆಯಿತು.

ಮೀಮಾಂಸಕರು ಪ್ಲೇಟೋ ಮತ್ತು ಅರಿಸ್ಟಾಟಲ್ ಇವರ ಪ್ರಭಾವಕ್ಕೆ ಒಳಗಾದ ಕಾವ್ಯದ ಲಕ್ಷಣವನ್ನು ಪದ್ಯ ರೂಪದಲ್ಲಿ ಪ್ರಕೃತಿಯ ಅನುಕರಣ ಎಂದು ನಿರೂಪಿಸಿದರು. ಪರಿಪೂರ್ಣ ಆದಿಭಾವಗಳು ಮತ್ತು ಕಲ್ಪನೆಗೆ ಸಿಗುವ ಎಲ್ಲ ವಸ್ತುರೂಪಗಳು (ಅವು ದೈವಿಕ, ಭೌತಿಕ, ಜೀವಂತ ಅಥವಾ ಜಡವಸ್ತುಗಳಾಗಿರಬಹುದು) ಇವೇ ಅನುಸರಿಸಬೇಕಾದ ಆ ಪ್ರಕೃತಿ (ರಾನ್‍ಸಾ) ಕವಿ ಉಪಯೋಗಿಸಿಕೊಳ್ಳುವ ವಸ್ತು ವಾಸ್ತುವಿಕವಾದುದಲ್ಲ. ಅದನ್ನು ಹೋಲುವ ವಸ್ತು (ಪೆಲಿಟಿಯೆ ; ರಾನ್‍ಸಾ). ಆದರೆ, ಅನುಕರಣ ಸಾಮಾನ್ಯವಾಗಿ ಮನುಷ್ಯರ ಸ್ವಭಾವ ಮತ್ತು ನಡತೆಗಳ ಅನುಕರಣವಾಗಿತ್ತು. ಪ್ರಕೃತಿ ಎಂದರೆ ನಮ್ಮ ಸುತ್ತಮುತ್ತಣ ನೈಜ ಪ್ರಪಂಚದಲ್ಲಿ ಹರಡಿರುವ ವಸ್ತು ಸಮೂಹವಲ್ಲ ; ಪುರಾತನ ಕಾವ್ಯಗಳಲ್ಲಿ ಸ್ಥಾಪಿತವಾಗಿರುವ ಅಂಶಗಳೂ ಎಂಬ ಇನ್ನೊಂದು ವ್ಯಾಖ್ಯಾನದಿಂದ ಅನುಕರಣ ಎಂದರೆ ಪುರಾತನರ ಮೇಲ್ಪಂಕ್ತಿಯನ್ನು ಅನುಸರಿಸುವುದು ಎಂಬ ವಾದ ಹುಟ್ಟಿತು. ಕಾಲಕ್ರಮದಲ್ಲಿ ಗ್ರೀಕ್, ಲ್ಯಾಟಿನ್ ಸಾಹಿತ್ಯಗಳಿಗೆ ವಿಶೇಷ ಮನ್ನಣೆ ದೊರಕಿತು. ಹೋಮರ್ ಮತ್ತು ವರ್ಜಿಲ್ಲರ ಭವ್ಯ ಕಾವ್ಯಗಳಿಗಂತೂ ಅತ್ಯಂತ ಗೌರವವಿತ್ತು. ಅವುಗಳ ಪ್ರಭಾವ ಮುಂದೆ ನೂರಾರು ವರ್ಷಗಳ ಕಾಲ ಇಟಲಿ, ಫ್ರಾನ್ಸ್ ಮತ್ತು ಇಂಗ್ಲೆಂಡಿನ ಕವಿಗಳ ಮೇಲೆ ದಟ್ಟವಾಗಿತ್ತು.

ಈ ಕಾಲದ ವಿಮರ್ಶೆಯ ಚರಿತ್ರೆಯಲ್ಲಿ ಅತ್ಯಂತ ಮುಖ್ಯ ಘಟನೆಯೆಂದರೆ 1498 ರಲ್ಲಿ ಅರಿಸ್ಟಾಟಲ್‍ನ ಪೊಯೆಟಿಕ್ಸ್ ಗ್ರಂಥದ ಮೂಲ ಪ್ರತಿ ಸಿಕ್ಕಿದ್ದು. ಆ ಗ್ರಂಥದ ಮೇಲೆ ಆದ ವ್ಯಾಖ್ಯಾನಗಳೆಲ್ಲ ಆಧುನಿಕ ಸಾಹಿತ್ಯದಲ್ಲಿ ಪ್ರಚಲಿತವಾಗಿರುವ ಭಾವಗಳಿಗೂ ವಾದಗಳಿಗೂ ಕಾರಣ. 1. ಪ್ರಕೃತಿಯ ಅನುಕರಣವೇ ಸಾಹಿತ್ಯ, ಸಾಹಿತ್ಯ ಕೃತಿ ಅಖಂಡ ಎಂಬ ನಂಬಿಕೆಗಳ ಫಲವಾಗಿ ಕಾವ್ಯ ಯಥಾರ್ಥವಾಗಿರಬೇಕು, ಕಾವ್ಯದ ಎಲ್ಲ ಅಂಶಗಳೂ ಪರಸ್ಪರಾವಲಂಬಿಗಳಾಗಿರಬೇಕು ಎಂಬ ಅಭಿಪ್ರಾಯ ಪುಷ್ಠಿಗೊಂಡಿತು. 2. ಮೊದಲು ಭವ್ಯ ಕಾವ್ಯದ ಕಡೆಗೆ ಒಲೆತ, ತರುವಾಯ ಗಂಭೀರ ನಾಟಕದ ಕಡೆಗೆ ಒಲೆತ. 4. ಗಂಭೀರ ನಾಟಕ ಭಾವಶುದ್ಧಿಯನ್ನು ಉಂಟುಮಾಡುತ್ತದೆ ಎಂಬ ಅಭಿಪ್ರಾಯ. 5. ಕಥಾವಸ್ತುವೇ ನಾಟಕದ ಅಂಗಗಳಲ್ಲಿ ಅತ್ಯಂತ ಮುಖ್ಯವಾದುದು ಎಂಬ ಮತ. ಇವೆಲ್ಲದರ ಪರಿಣಾಮವಾಗಿ ಸಾಹಿತ್ಯ ಉಪದೇಶದ ಸಂಕೋಲೆಯಿಂದ ಕೊಂಚಮಟ್ಟಿಗೆ ವಿಮುಕ್ತವಾಯಿತು. ಕಡೆಗೆ ಪ್ರಧಾನ ತತ್ತ್ವಗಳು ನೆಲೆಗೊಂಡವು ; 1. ಕಲಾಕೃತಿ ಅಖಂಡವಾದದ್ದು. 2. ಸಾಹಿತ್ಯದಲ್ಲಿ ಪುರಾತನರಿಗೆ ತಿಳಿಯದಿದ್ದ ಹೊಸ ಪ್ರಭೇದಗಳೂ ಉಪಪ್ರಭೇದಗಳೂ ಬೆಳೆದುಬಂದುದರಿಂದ, ಹೊಸ ಸೂತ್ರಗಳನ್ನು ರೂಪಿಸುವುದರ, ಅಥವಾ ಹಳೆಯವನ್ನು ಮಾರ್ಪಾಟು ಮಾಡಬೇಕೆಂಬುದರ ಅವಶ್ಯಕತೆ ಏರ್ಪಟ್ಟಿತು. ಇದರಿಂದ ಆಧುನಿಕ ಸಾಹಿತ್ಯವೂ ಉಂಟೆಂಬ ಭಾವನೆ ಉದಯಿಸಿತು.

ಪುರಾತನ ಗ್ರೀಸ್, ರೋಮುಗಳಲ್ಲಿನ ಆಚರಣೆಯ ಆಧಾರದ ಮೇಲೆ ಈ ಕಾಲದ ಪಂಡಿತರು ಸಾಹಿತ್ಯ ಪ್ರಕಾರಗಳನ್ನು ಕುರಿತು ಜಟಿಲ ಚರ್ಚೆ ನಡೆಸಿದರು. ಪ್ರಕಾರಗಳನ್ನು ವಿಂಗಡಿಸುವಾಗ ಪ್ರತಿಯೊಂದರ ವಸ್ತು, ಶೈಲಿ, ಛಂದಸ್ಸು, ಪರಿಣಾಮ, ಅದರ ಪ್ರಾಚೀನ ಆದರ್ಶ, ಅದರ ವಿಧಿ ಮತ್ತು ನಿಯಮಗಳು-ಈ ಎಲ್ಲ ಅಂಶಗಳನ್ನು ಎಣಿಸುತ್ತಿದ್ದರು. ಭವ್ಯ ಕಾವ್ಯ ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತ ಶ್ರೇಷ್ಠವೆಂದೂ ನಾಟಕದಲ್ಲಿ ಗಂಭೀರ ನಾಟಕ ಹರ್ಷ ನಾಟಕಗಳೂ ಭಾವ ಕವಿತೆಯಲ್ಲಿ ಪ್ರಗಾಥ ಮತ್ತು ಅಷ್ಟಷಟ್ಪದಿಗಳೂ ಪ್ರಮುಖವಾದುವೆಂದೂ ಪರಿಗಣಿತವಾದುವು. ವಿಮರ್ಶೆ ಗ್ರಂಥಗಳಲ್ಲಿ ನಿರ್ದಿಷ್ಟ ಕೃತಿಗಳ ಪರಿಶೀಲನೆಯ ಬದಲು ಸಾಮಾನ್ಯವಾಗಿ ತತ್ತ್ವಸ್ವರೂಪವಾದ ಸಮಸ್ಯೆಗಳ ಜಿಜ್ಞಾಸೆಯೇ ಜರುಗುತ್ತಿತ್ತು. ಕ್ರಮೇಣ ದೇಶ ಭಾಷೆಗಳ ಬಳಕೆಯೂ ಅವುಗಳ ವೈಶಿಷ್ಟ್ಯದ ಜ್ಞಾನವೂ ವೃದ್ಧಿಗೊಂಡು ಲ್ಯಾಟಿನ್ ಭಾಷೆ ಬಳಕೆ ಮತ್ತು ಗ್ರೀಕ್ ಲ್ಯಾಟಿನ್ ಸಂಪ್ರದಾಯಗಳ ಪ್ರಭಾವ ಕಡಿಮೆಯಾದುವು. ಸ್ಪೇನ್ ಮತ್ತು ಇಂಗ್ಲೆಂಡುಗಳಲ್ಲಿ ಈ ಕಾಲದ ಮೀಮಾಂಸಕರ ಯಾವ ಸೂತ್ರಕ್ಕೂ ಬದ್ಧವಲ್ಲದ ಮಿಶ್ರರೂಪಕವಾದ ಟ್ರಾಜಿಕಾಮೆಡಿ ಎಂಬ ಮಿಶ್ರ ನಾಟಕವನ್ನು ಕವಿಗಳು ಕಟ್ಟಿದರು. ಆದರೂ ಒಟ್ಟಿನಲ್ಲಿ ಅಭಿಜಾತ ಸಂಪ್ರದಾಯದ ಪ್ರಭಾವ 17, 18 ನೆಯ ಶತಮಾನಗಳಲ್ಲಿ ಕೂಡ ಬಹುವಾಗಿತ್ತು. (ಬಿ.ಸಿ.ಎಚ್.)