ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ ನಾಡಿನ ಹರಿದಾಸರ ಪರಂಪರೆಯಲ್ಲಿ ಪ್ರಮುಖರು. ಕಾಲ 15 ನೆಯ ಶತಮಾನ. ಇವರು ಬದುಕಿದ್ದಾಗಲೇ ದಾಸರೆಂದರೆ ಪುರಂದರದಾಸರಯ್ಯ ಎಂದು ಇವರ ಗುರುಗಳಾದ ವ್ಯಾಸರಾಯರೇ ಹಾಡಿ ಹೊಗಳಿದರು. ಇವರ ಅನಂತರ ಹರಿದಾಸ ಪದ್ಧತಿಯನ್ನು ಊರ್ಜಿತಗೊಳಿಸಿದ ವಿಜಯದಾಸರು (1687-1755) ಇವರನ್ನೇ ತಮ್ಮ ಗುರುಗಳೆಂದು ಗ್ರಹಿಸಿ ಇವರ ಯಶಸ್ಸನ್ನು ನಿಲ್ಲಿಸಿದರು. ಇವರ ಜೀವಿತದ ವಿಚಾರವಾಗಿ ಪ್ರಚುರವಾಗಿರುವ ಬಹುಮಟ್ಟಿನ ವಿವರಗಳು ವಿಜಯದಾಸರ ಪದ-ಸುಳಾದಿಗಳಿಂದಲೇ ಪ್ರವೃತ್ತವಾದವು.

ಪುರಂದರದಾಸರ ಕಾಲ ಖಚಿತವಾಗಿ ತಿಳಿದುಬಂದಿಲ್ಲ. ಜನನ 1484 ರಲ್ಲಿ ಆಯಿತೆಂದೂ ತಿರೋದಾನ 1564 ರಲ್ಲಿ ಆಯಿತೆಂದೂ ಸಾಮಾನ್ಯವಾಗಿ ನಂಬಿಕೆಯಿದೆ. ಇವರು ಜನ್ಮ ತಳೆದ ಊರು ಪುರಂದರಗಡವೆಂದೂ ಪ್ರತೀತಿ. ಪುಣೆಗೆ ಹದಿನೆಂಟು ಮೈಲಿ ದೂರದಲ್ಲಿರುವ ಈ ಊರು ಆ ಕಾಲಕ್ಕೆ ಕರ್ನಾಟಕ ಮಹಾರಾಷ್ಟ್ರ ಪ್ರದೇಶಗಳ ಸಂಧಿ ಸ್ಥಾನದಲ್ಲಿತ್ತು. ಪುರಂದರದಾಸರೆಂಬುದು ಇವರಿಗೆ ವ್ಯಾಸತೀರ್ಥರಿಂದ ದೀಕ್ಷೆಯಾದ ಮೇಲೆ ರೂಢಿಗೆ ಬಂದ ಹೆಸರು. ಮೊದಲಿಗೆ ಇವರ ಹೆಸರು ಶ್ರೀನಿವಾಸ ನಾಯಕ (ಅಥವಾ ಸೀನಪ್ಪ ನಾಯಕ) ಎಂದಿದ್ದಿತಂತೆ. ತಂದೆಯ ಹೆಸರು ವರದಪ್ಪನಾಯಕ. ವೃತ್ತಿಯಲ್ಲಿ ಚಿನಿವಾರರು, ಅಂದರೆ ರತ್ನಪಡಿ ವ್ಯಾಪಾರಿಗಳು. ಜಾತಿಯಲ್ಲಿ ಸ್ಮಾರ್ಥದೇಶಸ್ಥರು.

ಸಂಪದ್ಭರಿತವಾದ ಮನೆತನವಾದರೂ ಎಳೆತನದಲ್ಲಿ ಇವರು ಕಡು ಲೋಭಿಯಂತೆ ; ಆದರೆ ಇವರ ಹೆಂಡತಿ ಸರಸ್ವತೀಬಾಯಿ ಎಂಬಾಕೆ ಉದಾರಿ, ದಯಾಳು, ಶೀಲವಂತೆ, ದೈವ ಭಕ್ತೆ. ಈಕೆಯಿಂದಲೇ ಇವರ ಚಾರಿತ್ರ್ಯದಲ್ಲಿ ಪರಿವರ್ತನೆಯಾಯಿತೆಂದು ಕಥೆಯಿದೆ. ಈ ಕಥೆಯನ್ನು ಅವಲಂಬಿಸಿ ವಿಜಯದಾಸರ ಉಗಾಭೋಗವೊಂದು ಪ್ರಚಲಿತವಾಗಿದೆ. ಪುರಂದರದಾಸರೇ ತಮ್ಮ ಕೃತಿಯೊಂದರಲ್ಲಿ ಪತ್ನಿಯ ಪ್ರಭಾವವನ್ನು ಸ್ಮರಿಸಿಕೊಂಡಿದ್ದಾರೆ-'ದಂಡಿಗೆ ಬೆತ್ತ ಹಿಡಿಯಲು ಮಂಡೆ ಮಾಚಿ ನಾಚುತಲಿದ್ದೆ, ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯ.' ಅಂತೂ ಹೀಗೆ ಪರಿವರ್ತನೆಯಾದಾಗ ಇವರಿಗೆ ನಲವತ್ತರ ಪ್ರಾಯ ; ಆಗ ಇವರು ನಾಲ್ಕು ಮಕ್ಕಳ ತಂದೆ.

ವೈರಾಗ್ಯ ಉದಿಸಿ ಪರಿವರ್ತಿತರಾದುದು ಒಂದು ಪ್ರಸಂಗವಾದರೆ ವ್ಯಾಸತೀರ್ಥರ ಬಳಿ ಬಂದು ಹರಿದಾಸ ದೀಕ್ಷೆ ಪಡೆದದ್ದು ಇನ್ನೊಂದು ಪ್ರಸಂಗ. ಪುರಂದರಗಡವನ್ನು ಬಿಟ್ಟು ಪಂಢರಪುರಕ್ಕೆ ಹೋಗಿ ಅಲ್ಲಿ ತಂಗಿದ್ದ ವ್ಯಾಸತೀರ್ಥರನ್ನು ಸಂದರ್ಶಿಸಿದ್ದು 1524 ರಲ್ಲಿ ಎಂದು ಹೇಳುತ್ತಾರೆ. ಆಗ ವ್ಯಾಸತೀರ್ಥರಿಗೆ (1447-1539) ವಯಸ್ಸು ಸುಮಾರು ಎಪ್ಪತ್ತೇಳು. ಇವರಿಗೆ ಸುಮಾರು ನಲವತ್ತು ವ್ಯಾಸತೀರ್ಥರ ಸಮ್ಮುಖದಲ್ಲಿ ಇವರು ಸುದರ್ಶನ ಹೋಮ ಮಾಡಿ, ಅವರಿಂದ ಚಕ್ರಾಂಕನ ಪಡೆದು, ಮಂತ್ರೋಪದೇಶ ಹೊಂದಿ ಪುರಂದರ ವಿಟ್ಠಲನೆಂಬ ದೀಕ್ಷಾನಾಮವನ್ನು ಪಡೆದರು. 'ವ್ಯಾಸರಾಯನ ಚರಣ ಕಮಲದರಂಶನವೆನೆಗೆ ಏಸುಜನ್ಮದ ಸುಕೃತ ಫಲದಿ ದೊರಕಿತೋ ಎನ್ನ ಎಂದು ವ್ಯಾಸತೀರ್ಥರ ಪ್ರಭಾವವನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲಿಂದ ಮುಂದೆ ತಂಬೂರಿ ಮೀಟುತ್ತ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹರಿನಾಮ ಸಂಕೀರ್ತನೆ ಮಾಡುತ್ತ ಬೀದಿಯಲ್ಲಿ ಸಾಗುತ್ತಿದ್ದಾಗ ಇವರ ನಾಲ್ಕೂ ಜನ ಗಂಡು ಮಕ್ಕಳು ತಾಳ ಹಾಕುತ್ತ ಹಿಂಬಾಲಿಸುತ್ತಿದ್ದರಂತೆ. ತಂದೆಯೂ ಮಕ್ಕಳೂ ಹರಿದಾಸರಾದರು, ವಾಗ್ಮೇಯಕಾರರೆನಿಸಿದರು. ದಾಸರು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳನ್ನೆಲ್ಲ ಸುತ್ತಾಡಿ ಬಂದರು. ಹೋದೆಡೆಯಲ್ಲೆಲ್ಲ ಕ್ಷೇತ್ರವರ್ಣನೆಯ ಪದಗಳನ್ನು ಕಟ್ಟಿದರು. ವಿಜಯನಗರದ ಅರಸ ಕೃಷ್ಣದೇವರಾಯ ಇವರನ್ನು ಬಹುವಾಗಿ ಸನ್ಮಾನಿಸಿದ. ಕಡೆಗಾಲದಲ್ಲಿ ಹಂಪೆಯಲ್ಲೇ ಇದ್ದು ಇವರು ಅಲ್ಲಿಯೇ ತೀರಿಕೊಂಡರೆಂದು ಪ್ರತೀತಿಯಿದೆ.

ವ್ಯಾಸತೀರ್ಥರಿಂದ ಅಂಕಿತವನ್ನು ಪಡೆದು ಹರಿದಾಸರಾದ ಮೇಲೆ ಇವರು ದೇವರನಾಮಗಳನ್ನು ತಾವೇ ರಚಿಸಿ, ಹಾಡಿ, ಕುಣಿದು ದೇವರನ್ನು ಆರಾಧಿಸಿದರು. ಇವರ ಕೃತಿಗಳ ಒಟ್ಟು ಸಂಖ್ಯೆ 4,25,000 ಎಂದು ನಂಬಿಕೆಯಿದೆ. ಇವರೇ ಒಂದು ಕಡೆ ನಾಲ್ಕು ಲಕ್ಷ ಇಪ್ಪತ್ತೈದು ಸಾವಿರ ಕೃತಿಯು, ಕಂತು ಜನಕನ ನಾಮ ಘನಮಹಿಮೆ, ಸಂತಸದಿ ಶ್ರ್ರುತಿಸಮ್ಮತದಿಂದ ಪುರಂದರವಿಟ್ಠಲ ವ್ಯಾಸಮುನಿಗಳು ಪೇಳಿಸಿದರು ಎಂದು ಹೇಳಿದ್ದಾರೆ. ಇನ್ನೊಂದು ಕಡೆ ತಮ್ಮ ಕೃತಿಗಳ ವಸ್ತು ವಿವರವನ್ನು ಹೀಗೆ ವಿಭಜಿಸಿದ್ದಾರೆ ;

ಕೃತಿಸಂಖ್ಯೆ

ತೀರ್ಥಕ್ಷೇತ್ರ ಮಹಿಮೆ 1,25,000

ಮಾಧ್ವಶಾಸ್ತ್ರ, ಗುರುಪರಂಪರೆ 5,000

ದೇವತಾಲೋಕ ವರ್ಣನೆಗಳು 90,000

ಪುರಾಣ ಕಥೆಗಳು 90,000

ದೇವತಾಮೂರ್ತಿ ಧ್ಯಾನ ಇತ್ಯಾದಿ 60,000

ಆಹ್ನಿಕಪದ್ಧತಿ, ಏಕಾದಶೀನಿರ್ಣಯ ಇತ್ಯಾದಿ 16,000

ಸುಳಾದಿಗಳು 14,000

ದೇವರನಾಮ 25,000

ಒಟ್ಟು 4,25,000


ಆದರೆ ನಮ್ಮಲ್ಲಿ ಇಂದು ಉಳಿದಿರುವ ಕೃತಿಗಳ ಸಂಖ್ಯೆ ಒಂದು ಸಾವಿರವನ್ನೂ ಮೀರುವುದಿಲ್ಲ. ಇಷ್ಟೊಂದು ಅಪಾರವಾದ ಸಾಹಿತ್ಯನಷ್ಟ ಹೇಗೆ ಆಯಿತೆಂಬುದು ತಿಳಿದುಬರುವುದಿಲ್ಲ. ಈ ಕೀರ್ತನೆಗಳಲ್ಲದೆ, ಪುರಂದರದಾಸರು ದ್ರೌಪದೀ ವಸ್ತ್ರಾಪಹರಣ, ಸುಧಾಮಚರಿತ್ರ, ಪರತತ್ತ್ವಸಾರಗಳೆಂಬ ಗ್ರಂಥಗಳನ್ನು ಬರೆದಿದ್ದರೆಂದು ತಿಳಿದು ಬರುತ್ತದೆ. ಆದರೆ ಅವು ಇಂದು ಉಪಲಬ್ಧವಿಲ್ಲ.

ಹದಿನೆಂಟನೆಯ ಶತಮಾನದಲ್ಲಿದ್ದ ಪ್ರಸನ್ನ ವೆಂಕಟದಾಸರು ಪುರಂದರದಾಸರ ವಾಜ್ಮಯದ ಪ್ರಸ್ತಾಪವನ್ನು ಮಾಡುತ್ತ ಗೀತಕಾಯಿಸುಳಾದ್ಯುಗಾಭೋಗಪದ್ಯ ಪದವ್ರಾತಪ್ರಬಂಧಗಳಿಂದ ವಿಟ್ಠಲನನ್ನು ಪ್ರೀತಿಬಡಿಸಿದರೆಂದು ಹೇಳಿದ್ದಾರೆ. ಇವರ ಸಾರಸ್ವತ ಸಂಪತ್ತನ್ನು ಗುರುಗಳಾದ ವ್ಯಾಸತೀರ್ಥರೇ ಮೆಚ್ಚಿಕೊಂಡು ಅವನ್ನು ಪುರಂದರೋಪನಿಷತ್ತೆಂದು ಕರೆದರು.

ದಾಕ್ಷಿಣಾತ್ಯ ಸಂಗೀತ ರೂಪ ತಳೆಯುತ್ತಲಿದ್ದ ಪರ್ವಕಾಲದಲ್ಲಿ ಅದಕ್ಕೆ ನಿರ್ದಿಷ್ಟವಾದ ಕಟ್ಟಡವನ್ನು ಕಟ್ಟಿದವರು ಪುರಂದರದಾಸರು. ಇವರು ಲಕ್ಷ್ಯ-ಲಕ್ಷಣಗೀತದಿಂದಲೇ ತುಂಬಿದ್ದ ಸಂಗೀತ ಪ್ರಪಂಚದಲ್ಲಿ ಒಬ್ಬರೇ ಮೊಟ್ಟಮೊದಲಬಾರಿಗೆ ಸಾವಿರಾರು ಗೀತಕೃತಿಗಳನ್ನು ಕಟ್ಟಿ ರಸಿಕರ ಮುಂದಿಟ್ಟರು. ಅವನ್ನು ರಾಗ ತಾಳಗಳ ಚೌಕಟ್ಟಿನಲ್ಲಿ ತಾವೇ ಹಾಡಿ ತೊರಿಸಿದರು. ಅತಿ ಸರಳವಾದ ಗೀತಗಳಿಂದ ಅತಿ ಕ್ಲಿಷ್ಟವಾದ ಸುಳಾದಿಗಳವರೆಗೆ ಎಲ್ಲ ಬಗೆಯ ಕೃತಿಗಳನ್ನು ಆಗ ಪ್ರಚುರವಾಗಿದ್ದ ಎಲ್ಲ ರಾಗಗಳಲ್ಲಿಯೂ ಹೆಣೆದು ದಾಕ್ಷಿಣಾತ್ಯ ಸಂಗೀತಕ್ಕೆ ಮಾರ್ಗದರ್ಶಿಗಳಾದರು. ತ್ಯಾಗರಾಜರ ಶತವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಜಮಹೇಂದ್ರಿಯ ಆಂಧ್ರಗಾನಕಲಾಪರಿಷತ್ತಿನವರು ಪ್ರಕಟಿಸಿ ಸಂಚಿಕೆಯಲ್ಲಿ ಸಂಪಾದಕ ವಿಸ್ಸಾ ಅಪ್ಟಾರಾಯರು ಕರ್ನಾಟಕ ಸಂಗೀತಕ್ಕೆ ಮೂಲಪುರುಷರಾದ ಶ್ರೀಪುರಂದರದಾಸ ಸ್ವಾಮಿಗಳು ಸಂಗೀತ ವಿದ್ಯೆಗೆ ಸ್ಥಿರವಾದ ಬುನಾದಿಯನ್ನು ಹಾಕಿದರು. ಈ ಬುನಾದಿಯ ಮೇಲೆ ತ್ಯಾಗರಾಜಸ್ವಾಮಿಗಳು ಪ್ರಸಿದ್ಧ ರಾಗಗಳಲ್ಲೂ ಅಪೂರ್ವ ರಾಗಗಳಲ್ಲೂ ಅನೇಕ ವಿಧವಾದ ಅಂದವಾದ ಸಂಚಾರಗಳುಳ್ಳ ಅನೇಕ ಕೃತಿಗಳನ್ನು ರಚಿಸಿ ವಿಚಿತ್ರವಾದ ದೊಡ್ಡದೊಂದು ಭವನವನ್ನು ನಿರ್ಮಿಸಿದರು-ಎಂದು ಬರೆದಿದ್ದಾರೆ. ತ್ಯಾಗರಾಜರು (1767-1847) ಪುರಂದರದಾಸರ ಪದ್ಧತಿಯನ್ನೇ ಸಂಗೀತ ಸಾಹಿತ್ಯ ಎರಡರಲ್ಲೂ ಅನುಸರಿಸಿದ್ದಾರೆ. ತ್ಯಾಗರಾಜರಲ್ಲದೆ ಕ್ಷೇತ್ರಯ್ಯ, ದೀಕ್ಷಿತರು. ಮುಂತಾದ ವಾಗ್ಗೇಯಕಾರರಿಗೆಲ್ಲ ತ್ಯಾಗರಾಜರ ಸ್ಫೂರ್ತಿ ಒದಗಿದೆ. ಹೀಗೆಂದೇ ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹರೆಂದು ವ್ಯವಹರಿಸುವುದು ಸಾರ್ಥಕವಾಗಿದೆ. ಶಾಸ್ತ್ರೀಯ ಸಂಗೀತವನ್ನು ಪ್ರಯೋಗಶೀಲವನ್ನಾಗಿ ಮಾಡಲು ಲಕ್ಷ್ಯಗೀತಗಳನ್ನು ಚೌಕ-ತಾನವರ್ಣಗಳನ್ನೂ ಸುಳಾದಿಗಳನ್ನೂ ಉಗಾಭೋಗಗಳನ್ನೂ ತಾಳಾಲಂಕಾರಗಳನ್ನೂ ಪದಗಳನ್ನೂ ರಚಿಸಿದ್ದಾರೆ. ಇವರ ಕಾಲಕ್ಕೆ ಮುಂಚೆ ಲಕ್ಷ-ಲಕ್ಷಣ ಗೀತೆಗಳೆಲ್ಲ ಸಂಸ್ಕøತ ಭಾಷೆಯಲ್ಲಿಯೇ ಇರುವುದು ವಾಡಿಕೆಯಾಗಿತ್ತು. ಪುರಂದರದಾಸರು ಈ ಕೆಲಸಕ್ಕೆ ಕನ್ನಡವನ್ನೇ ಬಳಸಿಕೊಂಡರು. ಇವರು ಲಕ್ಷಣ ಗೀತೆಗಳನ್ನು ಬರೆದಿದ್ದರಂತೆ ; ಅವು ಇಂದು ಉಪಲಬ್ಧವಿಲ್ಲ. ಲಕ್ಷ್ಯ-ಗೀತಗಳೇನೊ ಉಳಿದಿವೆ. ತುಳಜಾಜಿಯ ಸಂಗೀತ ಸಾರಾಮೃತದಲ್ಲಿ ಈ ಗೀತಗಳ ಪ್ರಸ್ತಾಪವಿದೆ.

ಸಂಗೀತ ಶಾಸ್ತ್ರದಲ್ಲಿ ಇವರು ಮಾಡಿದ ವ್ಯವಸಾಯ ಅಪೂರ್ವವಾದುದು, ಅದ್ಭ್ಬುತವಾದುದು. ಸಂಗೀತವನ್ನು ಸಂಪ್ರದಾಯ ಶುದ್ಧವಾಗಿ ಮಾಡಿದವರು ಇವರು. ಇವರ ಕಾಲಕ್ಕೆ ಮುಂಚೆ ಖರಹರಪ್ರಿಯ ರಾಗವನ್ನು ಶುದ್ಧರಾಗವನ್ನಾಗಿ ಗ್ರಹಿಸಿದ್ದರು ; ಪಂಚಮ-ಮಧ್ಯಮಗಳ ನಡುವೆ ಚತುಃಶ್ರುತಿಯ ಅಂತರವನ್ನಿಟ್ಟು ಈ ರಾಗವನ್ನು ನಿರೂಪಿಸುತ್ತಿದ್ದರು. ರಾಗ ಸಂಮೂರ್ಛನೆ ಷಡ್ಜದಿಂದಲೇ ಆರಂಭವಾಗಬೇಕೆಂಬ ಪ್ರಾಚೀನ ಪದ್ಧತಿ ಮರೆಯಾಗಿತ್ತು. ಚತುಃಶ್ರುತಿಯ ಅಂತರವನ್ನು ಹಿಡಿಯುವುದೂ ಕಷ್ಟವಾಗಿ ಅಭ್ಯಾಸಗಾನಕ್ಕೆ ತೊಂದರೆಯಾಗಿತ್ತು. ಈ ತೊಡಕನ್ನು ಪರಿಹರಿಸಲು ಪುರಂದರದಾಸರು ಹಳೆಯ ಸಂಪ್ರದಾಯವನ್ನೇ ಹಿಡಿದು ಷಡ್ಜ-ಪಂಚಮ-ಮಧ್ಯಮಗಳ ನಡುವೆ ದ್ವಿಶ್ರುತಿಯ ಅಂತರವನ್ನಿಟ್ಟು ಮಾಯಾಮಾಳವಗೌಳ ರಾಗವನ್ನು ಶುದ್ಧ ರಾಗವೆಂದು ಹೇಳಿ ಅದರಿಂದಲೇ ಅಭ್ಯಾಸಗಾನ ಆರಂಭವಾಗುವ ಪರಿಪಾಠವನ್ನು ಹಾಕಿದರು. ಸರಳ, ಸುಲಭ, ಶುದ್ಧ ಮೂರೂ ಲಕ್ಷಣಗಳುಳ್ಳ ಈ ಸಂಪೂರ್ಣ ರಾಗವನ್ನು ದಾಸರು ಅಭ್ಯಾಸಕ್ಕೆ ಅಡಿಗಲ್ಲಾಗಿ ಅಳವಡಿಸಿಕೊಟ್ಟಾಗಲೇ ಕರ್ನಾಟಕ ಸಂಗೀತದ ಸ್ವರೂಪ ನಿರ್ದಿಷ್ಟವಾಯಿತೆನ್ನಬಹದು.

ಅಭ್ಯಾಸಿಗಳಿಗೆ ಅನುಕೂಲವಾಗುವಂತೆ ಅನುಕ್ರಮವಾದ ಪಾಠವನ್ನು ರೂಪಿಸಿದರು. ಮಾಯಾಮಾಳವಗೌಳದಲ್ಲಿಯೇ ಸರಳ ವರಸೆ, ಜಂಟಿ ವರಸೆ, ತಾಳಾಲಂಕಾರಗಳನ್ನು ಹೆಣೆದರು. ಅನಂತರ ಈ ಮೇಳದಲ್ಲಿ ಜನ್ಯವಾದ ಮಲಹರಿಯೆಂಬ ರಾಗದಲ್ಲಿ ಸರಳ ಸುಂದರವಾದ ಗೀತಗಳನ್ನು ಅಭ್ಯಾಸಿಗಳಿಗಾಗಿ ದಾಸರು ರಚಿಸಿದರು. ಇವರು ಮಾಡಿದ ಶ್ರೀಗಣನಾಥ ಸಿಂಧೂರ ವರ್ಣ ; ಕುಂದಗೌರ ಗೌರೀವರ ; ಕೆರೆಯ ನೀರನು ಕೆರೆಗೆ ಚೆಲ್ಲಿ ; ಪದುಮನಾಭ ಪರಮಪುರುಷ ಈ ಗೀತಗಳನ್ನು ತಮಿಳು ದೇಶದಲ್ಲಿ ಪಿಳ್ಳಾರಿ ಗೀತಗಳೆಂದು ಕರೆಯುವ ವಾಡಿಕೆ ಇದೆ. ಅವರಲ್ಲಿ ಪಿಳ್ಳಾರಿ (ಪಿಳ್ಳೈಯಾರ್) ಎಂದರೆ ಗಣಪತಿ. ಗಣನಾಥನಿಂದ ಆರಂಭವಾಗುವ ಈ ಗೀತಗಳನ್ನು ಒಟ್ಟಾರೆ ಹಾಗೆ ವ್ಯವಹರಿಸಿದ್ದಾರೆ. ಈ ಗೀತಗಳ ಪ್ರಾಚುರ್ಯ ಇಡೀ ದಕ್ಷಿಣ ದೇಶದಲ್ಲೆಲ್ಲ ಉಂಟು. ತಮಿಳರಾಗಲೀ ತೆಲುಗರಾಗಲೀ ಮಲಯಾಳದವರಾಗಲೀ ಸಂಗೀತ ವಿದ್ಯಾಭ್ಯಾಸ ಮಾಡುವ ಮೊದಲಲ್ಲಿ ಈ ಕನ್ನಡ ಗೀತಗಳಿಂದಲೇ ಆರಂಭ ಮಾಡುತ್ತಾರೆ. ಉಳಿದ ಯಾವ ವಾಗ್ಗೇಯಕಾರನಿಗೂ ಈ ಅಗ್ರಮರ್ಯಾದೆ ಸಂದಿಲ್ಲ.

ಇವರ ಕಾಲದಲ್ಲಿ ತಾಳದ ವಿಚಾರವಾಗಿಯೂ ಗೊಂದಲ ಇದ್ದಿತ್ತು. ಹಾಡಲಾರದ ರಾಗಗಳು ನೂರಾರು ಇದ್ದಂತೆಯೆ ಹಿಡಿಯಲಾರದ ತಾಳಗಳು ನೂರೆಂಟು ಇದ್ದುವು. ನೂರೆಂಟು ತಾಳಗಳ ಗಣನೆ ತುಂಬಾ ಹಿಂದಿನದೆಂದು ಪ್ರತೀತಿ. ಅವುಗಳಿಗೆ ಲೆಕ್ಕಾಚಾರದ ಸಂಸ್ಕಾರ ಮಾಡಿ ಪಂಚಜಾತಿ ಭೇದದಿಂದ 540 ತಾಳಗಳನ್ನು ಪರಿಗಣಿಸಿರುವುದೂ ಉಂಟು. ಇವೆಲ್ಲ ವ್ಯವಹಾರಕ್ಕೆ ಒಗ್ಗುವುದು ಸಾಧ್ಯವಿಲ್ಲವಷ್ಟೆ. ಪುರಂದರದಾಸರು ಇವನ್ನೆಲ್ಲ ನಿರ್ಲಕ್ಷಿಸಿ ಗಾನಕ್ರಿಯೆಗೆ ಅನುಕೂಲವಾದ, ಅಗತ್ಯವೆನಿಸಿದ ಏಳು ತಾಳಗಳನ್ನೂ ಐದು ಜಾತಿಗಳನ್ನೂ ಮಾತ್ರವೇ ನಿರ್ದೇಶಿಸಿದರು. ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ-ಇವೇ ಈ ಏಳು ತಾಳಗಳು. ತ್ರೈಶ್ಯ, ಚತುರಶ್ರ, ಮಿಶ್ರ, ಖಂಡ, ಸಂಕೀರ್ಣ-ಇವೇ ಐದು ಜಾತಿಗಳು. ಅಂದರೆ 35 ತಾಳಭೇದ. ಇಷ್ಟು ವ್ಯವಹಾರಕ್ಕೆ ಸಾಕೆಂದು ಇವರ ನಿರ್ಣಯ. ಇವನ್ನು ಸ್ಫುಟಪಡಿಸಲು ಇವರೇ ತಾಳಾಲಂಕಾರಗಳನ್ನು ಹೆಣೆದಿಟ್ಟರು. ಇದು ಇಂದಿಗೂ ಉಳಿದುಬಂದಿರುವ ಅಭ್ಯಾಸ ಪಾಠ.

ಈ ಏಳು ತಾಳಗಳನ್ನು ಸಂಗೀತಶಾಸ್ತ್ರದಲ್ಲಿ ಸೂಳಾದಿ ಸಪ್ತ ತಾಳಗಳೆಂದು ವ್ಯವಹರಿಸುತ್ತಾರೆ. ಸುಳಾದಿ ಎನ್ನುವುದು ಹರಿದಾಸ ಸಾಹಿತ್ಯದಲ್ಲಿ ಒಂದು ಕೃತಿ ವಿಶೇಷ. ಈ ಪದದ ನಿಷ್ಪತ್ತಿ ಹೇಗೆ ಆಯಿತೆಂಬುದು ತಿಳಿಯುವುದಿಲ್ಲ. ಸೂಡಾದಿ ಎಂಬ ಪದದ ಪರ್ಯಾಯವೇ ಸೂಳಾದಿ ಅಥವಾ ಸುಳಾದಿ ಎಂದು ಒಂದು ಅಭಿಪ್ರಾಯ. ಧ್ರುವ, ಮಠ್ಯ, ಮುಂತಾದ ಸಪ್ತ ತಾಳಗಳು ಸೂಡಾದಿ ಸಂಜ್ಞಕಗಳೆಂದು ವೆಂಕಟಮುಖಿ ತನ್ನ ; ಚತುರ್ದಂಡಿ ಪ್ರಕಾಶಿಕೆಯಲ್ಲಿ ಹೇಳಿದ್ದಾನೆ. ಎಂದರೆ ಸುಳಾದಿಗಳು ತಾಳ ಪ್ರಧಾನವಾದ ಕೃತಿಗಳೆಂದು ತಾತ್ಪರ್ಯವಾಗುತ್ತದೆ. ಶ್ರೀಪಾದರಾಜರು ಸುಳಾದಿಗಳನ್ನು ರಚಿಸಿದವರಲ್ಲಿ ಮೊದಲಿಗರೆಂದು ದಾಸಕೂಟದವರ ನಂಬಿಕೆ. ಇವರ ' ನಿನ್ನ ದೀನ ಶರೀರಕರ್ಣ ಚೇಷ್ಟೆಗಳೆಲ್ಲ ಎಂದು ಆರಂಭವಾಗುವ ಸುಳಾದಿಯಲ್ಲಿ ಅರಚರಣಗಳಿದ್ದು ಒಂದೊಂದು ರಾಗ ಒಂದೊಂದು ತಾಳದಲ್ಲಿದೆ. ಇದೇ ಸುಳಾದಿಯ ಮುಖ್ಯ ಲಕ್ಷಣವೆನ್ನಬಹುದು. ಆದರೆ ಹಲವು ಸುಳಾದಿಗಳಲ್ಲಿ ರಾಗ ಒಂದೇ ಇದ್ದು ಚರಣಗಳು ವಿಭಿನ್ನ ರಾಗಗಳಲ್ಲಿ ಇರುವುದನ್ನು ಕಾಣುತ್ತೇವೆ. ರಾಗಮಾಲಿಕೆಯಲ್ಲಿ ತಾಳ ಒಂದೇ ಇದ್ದು ರಾಗಗಳು ಬೇರೆ ಬೇರೆ ಇರುವುದಿಲ್ಲವೆ ? ಹಾಗೆಯೇ ಸುಳಾದಿಯನ್ನು ತಾಳಮಾಲಿಕೆಯೆನ್ನಬಹುದು.

ಸುಳಾದಿಗಳನ್ನು ಬಹುವಾಗಿ ಬಳಕೆಗೆ ತಂದವರು ಪುರಂದರದಾಸರು. ಇವರೇ ಹದಿನಾಲ್ಕು ಸಾವಿರ ಸುಳಾದಿಗಳನ್ನು ರಚಿಸಿದರೆಂದು ಪ್ರತೀತಿ ಇದೆ. ಇವುಗಳಲ್ಲಿ ಆಪಾದ ಆನಂದ ನಖ ಎಂಬ ಬ್ರಹ್ಮಾನಂದ ಸುಳಾದಿ ಪ್ರಸಿದ್ಧವಾಗಿದೆ. ಪ್ರಾಚುರ್ಯದಲ್ಲಿಯೂ ಇದೆ. ಪುರಂದರದಾಸರು ಸುಳಾದಿಗಳಲ್ಲದೆ ಉಗಾಭೋಗಗಳನ್ನು ಬಳಕೆಗೆ ತಂದರು. ಉಗಾಭೋಗ ಪದದ ವ್ಯುತ್ಪತ್ತಿಯೂ ಅಸ್ಪಷ್ಟ. ಶಾಙ್ರ್ಗ ದೇವನೇನೋ ಉದ್ಗ್ರಾಹವೇ ಮೊದಲನೆಯ ಭಾಗವಾದ್ದು, ಅನಂತರ ಮೇಳಾಪಕವಿದ್ದು, ಧ್ರುವ ಮೂರನೆಯ ಭಾಗವಾಗಿ, ಕೊನೆಯಲ್ಲಿ ಅಭೋಗವಿರುವುದು ಎಂದು ಉಗಾಭೋಗವನ್ನು ವರ್ಣಿಸಿದ್ದಾನೆ. ಉದ್ಗ್ರಾಹವೆಂದರೆ ರಾಗವನ್ನು ಎತ್ತಿಕೊಳ್ಳುವುದು; ಮೇಳಾಪಕವೆಂದರೆ ಮೇಳದಲ್ಲಿ ಅದರ ನಿಲುಗಡೆ, ಧ್ರುವವೆಂದರೆ ರಾಗವನ್ನು ಹಮ್ಮೈಸುವುದು ; ಆಭೋಗವೆಂದರೆ ರಾಗಶುದ್ಧವಾದ ಮತ್ತು ಸುಖವಾದ ಸ್ವರಸಂಚಾರ. ಉದ್ಗ್ರಾಹವೇ ಮೊದಲನೆಯದಾಗಿ ಆಭೋಗವೇ ಕೊನೆಯದಾಗಿ ಉಳ್ಳ ಸಂಗೀತ ಸಾಹಿತ್ಯದ ತುಣುಕಿಗೆ ಉದ್ಗ್ರಾಹಭೋಗ ಎಂದು ಪ್ರಾಚೀನರು ಕರೆದಿದ್ದಿರಬಹುದು. ಇದರ ತದ್ಭವ ಉಗಾಭೋಗವಾಗಿ ಪರಿಣಮಿಸಿರಬಹದು.

ಸುಳಾದಿ ತುಂಬ ಕಠಿಣವಾದ ಕೃತಿಯಾದರೆ ಉಗಾಭೋಗ ತುಂಬ ಸರಳವಾದ ಕೃತಿ. ಸುಳಾದಿಯಂತೆಯೇ ಉಗಾಭೋಗವು ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟವಾದ ಕೃತಿ. ಸಾಹಿತ್ಯದಲ್ಲಿ ಪಲ್ಲವಿ, ಅನುಪಲ್ಲವಿ, ಚರಣ ಮುಂತಾದ ಅಂಗಗಳಿಲ್ಲದೆ, ರಾಗವೂ ನಿರ್ದಿಷ್ಟವಾಗಿರದೆ ತಾಳ ಕೇವಲ ಸರ್ವಲಘುವಿನಲ್ಲಿಯೇ ಇದ್ದು ಭಕ್ತಿ ಪ್ರಧಾನವಾದ ಸಣ್ಣ ಕೃತಿ ಉಗಾಭೋಗ. ಈಗ ಸುಮಾರು ಐನೂರು ಉಗಾಭೋಗಗಳು ಬಳಕೆಯಲ್ಲಿವೆ.

ಇವುಗಳಲ್ಲದೆ ಪುರಂದರದಾಸರು ವೃತ್ತನಾಮಗಳನ್ನು ಅಸಂಖ್ಯ ಕೀರ್ತನೆಗಳನ್ನೂ ರಚಿಸಿದರು. ಇವುಗಳಲ್ಲಿ ಬಹುಮಟ್ಟಿಗೆ ಮಧ್ಯಮಕಾಲದ ಬಳಕೆಯಿದೆ. ಏಳೂ ತಾಳಗಳನ್ನು ತಮ್ಮ ತಾಳಗಳಲ್ಲಿ ಅಳವಡಿಸಿಕೊಂಡರೂ ಝಂಪೆ, ಮತ್ತು ಛಾಪು ತಾಳಗಳ ಪ್ರಯೋಗ ಹೆಚ್ಚು. ರಾಗಗಳಲ್ಲಿ ಮೂವತ್ತೆರಡನ್ನು ಮಾತ್ರ ವಿಶೇಷವಾಗಿ ಉಪಯೋಗಿಸಿರುವುದು ಕಾಣುತ್ತದೆ. ಶಂಕರಾಭರಣದ ನಳಿನಜಾಂಡ, ತಲೆಯ ತೂಗಿ ಮೋಹಿಸುತಿರಲು ಎಂಬ ಇವರ ಕೃತಿಯಲ್ಲಿ ಹಲವಾರು ರಾಗಗಳ ಪ್ರಸ್ತಾಪವಿದೆ. ಮಾರವಿ, ದೇಶಿ ಗುರ್ಜರಿ, ಭೈರವಿ, ಗೌಳಿ, ನಾಟ, ಸಾವೇರಿ, ಅಹಿರಿ, ಪೂರ್ವಿ, ಕಾಂಬೋದಿ, ಪಾಡಿ, ದೇಶಾಕ್ಷಿ, ಶಂಕರಾಭರಣ, ಮಾಳವ, ವರಾಳಿ, ಕಲ್ಯಾಣಿ ತೋಡಿ, ಮುಖಾರಿ, ಯರಳಿ, ವಸಂತ, ಬೌಳಿ, ಧನ್ಯಾಸಿ, ಸೌರಾಷ್ಟ್ರ, ಗುಂಡಕ್ರಿಯ, ರಾಮಕ್ರಿಯ, ಮೇಘ, ಕುರಂಜಿ, ಇವರಿಗೆ ತಾಳದ ಮೇಲಿದ್ದ ಪ್ರಭುತ್ವ ಲಯಜ್ಞಾನ ಈ ರಾಗಗಳ ಹರವಿನಲ್ಲಿ ಸ್ಪಷ್ಟವಾಗುತ್ತದೆ.

ಇವರಿಗೆ ಸಂಗೀತವೊಂದು ಸಾಧನವಷ್ಟೆ. ಆದರೆ ಗುರು ಭಗವತ್ಪ್ರೀತಿ. ಅದಕ್ಕಾಗಿಯೇ ಇವರ ಕೃತಿಗಳೆಲ್ಲ ಭಗವನ್ನಾಮ ಸಂಕೀರ್ತನದ ರೂಪ ತಳೆದುವು. ಈ ಕಾರಣದಿಂದಲೇ ದಾಸರ ಕೃತಿಗಳನ್ನು ಇಂದಿಗೂ ದೇವರನಾಮವೆಂದೇ ವ್ಯವಹರಿಸುತ್ತಾರೆ. ಆದರೆ ಸಭಾಗಾನ ಹೇಗಿರಬೇಕು ಎಂಬುದನ್ನೂ ಇವರು ಅಲಕ್ಷಮಾಡಿಲ್ಲ. ಮುಖಾರಿ ರಾಗದ ಕೃತಿಯೊಂದರಲ್ಲಿ ತಾಳ ಬೇಕು, ತಕ್ಕ ಮೇಳ ಬೇಕು ಗಾನವನ್ನು ಕೇಳಬೇಕೆಂಬುವವರಿಗೆ ಶಾಂತಮೇಳ ಬೇಕು ; ಯತಿಪ್ರಾಸವಿರಬೇಕು ; ಗತಿಗೆ ನಿಲ್ಲಿಸಬೇಕು ; ಗಳಶುದ್ಧಿಯಿರಬೇಕು ; ತಿಳಿದು ಪೇಳಲು ಬೇಕು, ಕಳಕಳ ಬಿಡಬೇಕು, ಕಳೆಮುಖವಿರಬೇಕು, ಅರಿತವರಿರಬೇಕು, ಹರುಷ ಹೆಚ್ಚಿಸಬೇಕು-ಎಂದು ಸಂಗೀತದ ಅಂಗಗಳನ್ನು ನಿರ್ದೇಶಿಸಿದ್ದಾರೆ. ಆದರೆ ಇಷ್ಟೆಲ್ಲವೂ ಇದ್ದು ಭಕ್ತಿಯಿಲ್ಲದಿದ್ದರೆ ಅದು ವ್ಯರ್ಥವಾದ ಸಂಗೀತವೆಂದು ಇವರ ನಿಲುವು. ಕಲ್ಯಾಣಿ ರಾಗದ ಒಂದು ಕೀರ್ತನೆ ತಾಳನೋ ಹರಿ ಕೇಳನೋ ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ಎಂದು ಹೇಳುತ್ತದೆ. ಅಂಥ ಸಂಗೀತ ಢಂಭಕದ ಕೂಗಾಟವೆಂದು ಇವರು ನಿಂದಿಸಿದ್ದಾರೆ. ಭಕ್ತಿಗೆ ಸಂಗೀತ ಅನುವಾಗಿರಬೇಕೆಂಬುದು ಇವರ ವಾದ. ಈ ಕಾರಣದಿಂದಲೇ ಪುರಂದರದಾಸರನ್ನು ನಾರದರ ಅಂಶ ಸಂಭೂತರೆಂದು ನಿರ್ದೇಶಿಸುವ ಪದ್ಧತಿ ನಮ್ಮಲ್ಲಿ ಪ್ರಚಲಿತವಾಗಿದೆ.

ಪುರಂದರದಾಸರ ಪ್ರಭಾವ ಸಂಗೀತ ಪ್ರಪಂಚದಲ್ಲಿ ಬಹುಕಾಲ ಉಳಿದಿದೆ. ತಂಜಾವೂರಿನ ದೊರೆ ತುಳುಜಾಜಿ ಮಹಾರಾಜ ತನ್ನ ಸಂಗೀತ ಸಾರಾಮೃತದಲ್ಲಿ ಇತಿಸಾಲಗಸೂಡಸ್ಥಗೀತೌನಾಂ ಲಕ್ಷ್ಯಕೀರ್ತನಂ ! ಶ್ರೀ ಪುರಂದರದಾಸಾದ್ಯೈರಭಿ ಯುಕ್ತೈ ಪುರಾತನೆಃ ! ಪ್ರಯಕ್ತೇಷು ಪ್ರಸಿದ್ಧೇಷು ಲಕ್ಷೇಷು ವಿವಿಧೇಷೃಪಿ-ಎಂದು ಮುಂತಾಗಿ ಗೌರವದಿಂದ ಇವರನ್ನು ಉಲ್ಲೇಖಿಸಿ ಪ್ರಮಾಣ ಪುರುಷರೆಂದು ವ್ಯವಹರಿಸಿದ್ದಾನೆ. ಎಟ್ಟಿಯಾಪುರದ ಸುಬ್ಬರಾಮ ದೀಕ್ಷಿತರೂ ತಮ್ಮ ಸಂಗೀತ ಸಂಪ್ರದಾಯ ಪ್ರದರ್ಶಿನಿಯಲ್ಲಿ ಇದೇ ಮರ್ಯಾದೆಯನ್ನು ಪುರಂದರದಾಸರಿಗೆ ಸಲ್ಲಿಸಿ ತಮ್ಮ ಮನೆಯಲ್ಲಿ ಹಿರಿಯರು ಹಾಡುತ್ತಿದ್ದ ದಾಸರ ಸುಳಾದಿಗಳಲ್ಲಿ ಎರಡನ್ನು ಸ್ವರಸಹಿತವಾಗಿ ಉದ್ಧರಿಸಿದ್ದಾರೆ. ತ್ಯಾಗರಾಜರ ಶಿಷ್ಯ ವಾಲಾಜಾಪೇಟೆ ವೆಂಕಟರಮಣ ಭಾಗವತರು ಬರೆದಿರುವ ಶ್ರೀ ತ್ಯಾಗಬ್ರಹ್ಮನಿವಾರಿ ಚರಿತ್ರಮು ಎಂಬ ಗ್ರಂಥದಲ್ಲಿ ತ್ಯಾಗಯ್ಯನವರ ತಂದೆ ರಾಮಬ್ರಹ್ಮಂ ಅವರು ದಿನವೂ ದೇವರ ಪೂಜೆ ಮಾಡುವಾಗ ಹೇಳಿಕೊಳ್ಳುತ್ತಿದ್ದ ಜಯದೇವನ ಹಸ್ತಪ್ರತಿ, ಪುರಂದರದಾಸರ ಕೀರ್ತನೆಗಳು, ರಾಮದಾಸರ ಮತ್ತು ತಾಳ್ಳಪಾಕದವರ ಕೃತಿಗಳು ಇವನ್ನು ಹುಡುಗ ತ್ಯಾಗಯ್ಯನವರು ಕೇಳುತ್ತಿದ್ದು ಅದರಿಂದ ಸ್ಫೂರ್ತಿ ಪಡೆದರೆಂದು ಬರೆದಿದ್ದಾರೆ. ಪುರಂದರದಾಸರ ಕೃತಿಗಳನ್ನು ತ್ಯಾಗರಾಜರು ಕಲಿತಿದ್ದರೆಂದು ಇದೇ ಆಕಾರ ಸೂಚಿಸುತ್ತದೆ. ಪುರಂದರದಾಸರಂತೆ ತ್ಯಾಗರಾಜರೂ ಭಾಗವತ ಪಂಥದವರು. ಅವರಿಗೂ ಅದೇ ಮನೋಧರ್ಮವಿತ್ತು. (ಎಸ್.ಕೆ.ಆರ್.)