ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೂರ್ಣಚಂದ್ರ ತೇಜಸ್ವಿ, ಕೆ ಪಿ

ವಿಕಿಸೋರ್ಸ್ದಿಂದ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ

"ಪೂರ್ಣಚಂದ್ರ ತೇಜಸ್ವಿ "(1938-2007)

ರಾಷ್ಟ್ರಕವಿಗಳೆಂದು ಖ್ಯಾತರಾದ ಕುವೆಂಪು ಅವರ ಪುತ್ರ. 1938ರ ಸೆಪ್ಟೆಂಬರ್ 08ರಂದು ಶಿವಮೊಗ್ಗದಲ್ಲಿ ಜನನ. ಬಾಲ್ಯ, ವಿದ್ಯಾಭ್ಯಾಸಗಳು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ಅನಂತರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆ. ಕಾಫಿ ಬೆಳೆ, ತೋಟಗಾರಿಕೆಯಲ್ಲಿ ಅಭಿರುಚಿ. ಜೊತೆಗೆ ಛಾಯಾಗ್ರಹಣ, ಬರವಣಿಗೆ. ತೇಜಸ್ವಿಯವರಿಗೆ ಆಧುನಿಕ ಚಿತ್ರಕಲೆ ಒಂದು ಹವ್ಯಾಸ. ಪುಸ್ತಕ ಮುದ್ರಣದಲ್ಲಿ ಆಸಕ್ತಿ. ಅವರ ಪುಸ್ತಕ ಪ್ರಕಾಶನದಿಂದ ಹೊರಬಂದ ಪುಸ್ತಕಗಳು ಅನೇಕ. ಎಲ್ಲಾ ಪುಸ್ತಕಗಳೂ ಓದುಗರ ಆಸಕ್ತಿಯನ್ನು ಕೆರಳಿಸಿ ಹೊಸ ಪುಸ್ತಕದ ಪ್ರಕಟಣೆಯನ್ನು ನಿರೀಕ್ಷಿಸುವ ಹಾಗೆ ಆದದ್ದು ಪುಸ್ತಕ ಪ್ರಕಾಶನದ ವಿಶೇಷ.

ಕನ್ನಡ ಸಾಹಿತ್ಯಕ್ಕೆ ವಿಭಿನ್ನ ಆಯಾಮಗಳನ್ನು ಕೂಡಿಸುತ್ತಿರುವ ಸೃಜನಶೀಲ ಲೇಖಕರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬಹಳ ಮುಖ್ಯರಾದವರು. ಹಲ ಬಗೆಯ ಆಸಕ್ತಿಗಳು, ವಿಭಿನ್ನ ಪ್ರಯೋಗಗಳು, ತಲಸ್ಪರ್ಶಿಯಾದ ಬದುಕಿನ ಶೋಧ, ದಿಟ್ಟ ವೈಚಾರಿಕ ನಿಲುವು ಮತ್ತು ಕಲಾತ್ಮಕ ಆಭಿವ್ಯಕ್ತಿ ಇವೆಲ್ಲ ತೇಜಸ್ವಿಯವರನ್ನು ಅನನ್ಯ ಲೇಖಕರನ್ನಾಗಿ ಮಾಡಿದೆ. ತೇಜಸ್ವಿ ಅವರ ಅಭಿವ್ಯಕ್ತಿಯ ಹರಹೂ ವಿಸ್ತಾರವಾಗಿದೆ. ಕಥೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನಗಳು, ಪರಿಸರ, ಶಿಕಾರಿ ಸಂಬಂಧಿತ ಬರಹಗಳು, ಇತಿಹಾಸ, ತತ್ವಜ್ಞಾನ, ಮಾನವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಹೀಗೆ ಹಲವು ಜ್ಞಾನ ಶಾಖೆಗಳನ್ನು ಒಳಗೊಳ್ಳುವಂತೆ, ಅವುಗಳ ಸಂಬಂಧದ ಎಳೆಗಳನ್ನು ಹಿಡಿದು ಕೂಡಿಸುವಂತೆ ರಚಿಸಿದ, ಕನ್ನಡಕ್ಕೆ ಅಪರೂಪವೆನ್ನಿಸುವ ಬರಹಗಳು ತೇಜಸ್ವಿಯವರನ್ನು ವಿಭಿನ್ನ ಲೇಖಕರನ್ನಾಗಿ ಮಾಡಿವೆ. ವೈವಿಧ್ಯಮಯ ಆಸಕ್ತಿ ಮತ್ತು ಬಗೆ ಬಗೆಯ ಪ್ರಯೋಗಗಳ ದೃಷ್ಟಿಯಿಂದ ನೋಡುವುದಾದರೆ ಶಿವರಾಮ ಕಾರಂತರನ್ನು ಬಿಟ್ಟರೆ, ಕನ್ನಡದಲ್ಲಿ ತೇಜಸ್ವಿ ಅವರಂಥ ಲೇಖಕರು ಇನ್ನೊಬ್ಬರಿಲ್ಲ. ಇನ್ನೂ ನಿಖರವಾಗಿ ಹೇಳುವುದಾದರೆ ತೇಜಸ್ವಿ ಅವರು ಶಿವರಾಮ ಕಾರಂತರಿಗಿಂತ ಒಂದು ಹೆಜ್ಜೆ ಮುಂದೆ ಇರುವುದೂ ನಿಜ. ಇದಕ್ಕೆ ಇವರಿಬ್ಬರ ಬದುಕಿನ ಕಾಲಮಾನವೂ ಕಾರಣವಿರಬಹುದು. ತಮ್ಮ ಕಾಲಕ್ಕೆ ಆಧುನಿಕ ಆವಿಷ್ಕಾರವಾಗದ ಕ್ಯಾಮರಾವನ್ನು ಕಾರಂತರು ಹಿಡಿದಿದ್ದರೆ, ಅದರ ಮುಂದಿನ ಕಾಲಘಟ್ಟದ ಆವಿಷ್ಕಾರವಾದ ಕಂಪ್ಯೂಟರನ್ನು ತೇಜಸ್ವಿ ಹಿಡಿದಿದ್ದಾರೆ. ಕಲಾತ್ಮಕ ಛಾಯಾಚಿತ್ರಕಾರರಾಗಿರುವ ತೇಜಸ್ವಿ ಅವರು, ಕಂಪ್ಯೂಟರನ್ನೂ ಬಳಸಿ ಪೇಂಟಿಂಗ್‍ಗಳನ್ನು ಮಾಡಿದ್ದು ತೇಜಸ್ವಿ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ತೋರಿಸುತ್ತದೆ.

ಕುವೆಂಪು ಅವರ ಕಲಾತ್ಮಕ ಅಭಿವ್ಯಕ್ತಿಯ ಮುಂದುವರಿಕೆಯಾಗಿ ಕಾಣುವ ತೇಜಸ್ವಿ ಅವರು ರೂಪಿಸಿದ `ಕರ್ವಾಲೊ` ಇವತ್ತಿಗೂ ಆಧುನಿಕ ಕನ್ನಡ ಸಾಹಿತ್ಯದ ಅಭಿಜಾತ ಕೃತಿಯಾಗಿಯೇ ಉಳಿದಿದೆ. ಹರಳುಗಟ್ಟಿದ ಭಾಷೆ, ಪ್ರಮಾಣಬದ್ಧ ಶಿಲ್ಪ ಸೌಂದರ್ಯ, ವಿಜ್ಞಾನದ ನೆಲೆಗಟ್ಟಿನ ಮೇಲೆ ಕಾಲೂರಿಯೂ, ವಿಶ್ವದ ನಿಗೂಢದತ್ತ, ವಿಸ್ಮಯದತ್ತ ಕೈ ಚಾಚಿದ ಹಲವು ಮಿತಿಗಳ ಮನುಷ್ಯನ ಮನಸ್ಸು, ಅತ್ಯಂತ ಸರಳ ರೀತಿಯಲ್ಲಿ ತೆರೆದುಕೊಳ್ಳುತ್ತಾ ಹೋಗಿ ಸಂಕೀರ್ಣ ಸ್ವರೂಪವನ್ನು ತೋರುವ ಬದುಕು ಹೀಗೆ ಕರ್ವಾಲೊ ಹಲವು ಸಂಗತಿಗಳನ್ನು ಧ್ವನಿಸುವ ಕಾದಂಬರಿಯಾಗಿದೆ.

ಕುವೆಂಪು ಅವರಂತೆ ತೇಜಸ್ವಿ ಪುರೋಹಿತಶಾಹಿಯ ಉಗ್ರ ವಿರೋಧಿಯೇ. `ಧರ್ಮವನ್ನು ಯಾರಿಂದಲೂ ರಿಪೇರಿ ಮಾಡುವುದು ಸಾಧ್ಯವೇ ಇಲ್ಲ` ಎಂದು ದೃಢವಾಗಿ ನಂಬಿದವರು; ಜಾತಿ ವರ್ಗಗಳ ಸಿಕ್ಕುಗಳಲ್ಲಿ ಸಿಕ್ಕಿಬಿದ್ದು ನರಳುತ್ತಿರುವ ಈ ಸಮಾಜದಲ್ಲಿ ಧರ್ಮ, ದೇವರು, ಪುರೋಹಿತಶಾಹಿ ಮನುಷ್ಯನನ್ನು ಪಾತಾಳಕ್ಕೆ ತುಳಿಯುವ ಸಾಧನಗಳಾಗಿವೆ ಎಂದು ಖಚಿತವಾಗಿ ಹೇಳುವವರು; `ಭಾರತದಲ್ಲಿ `ರಿಲಿಜಿಯಸ್` ಆಗುವ ಕವಿ ಜನತಾದ್ರೋಹಿಯಾಗುತ್ತಾನೇಕೆಂದರೆ, ಭಾರತದ ಬಹುಪಾಲು ಧರ್ಮಗಳೆಲ್ಲ ಮಾನವೀಯತೆಗೆ ವಿರೋಧಿಗಳಾಗಿವೆ (`ಅಬಚೂರಿನ ಪೋಸ್ಟಾಫೀಸು ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ) ಎಂದು ಹೇಳಿದವರು; ಬಿಡುಗಡೆಯ ಹಾದಿಗಾಗಿ ಹಲ ಬಗೆಯ ಚಿಂತನೆಗಳನ್ನು ನಡೆಸಿದವರು. ಲೋಹಿಯಾ ಚಿಂತನೆಯಿಂದ ಪ್ರಭಾವಿತರಾದ ತೇಜಸ್ವಿ, ಲೋಹಿಯಾ ನಂತರದ ಬೆಳೆವಣಿಗೆಗಳನ್ನು ವಿಶ್ಲೇಷಿಸಿದವರು. ಹೊಸ ಹೊಸ ಸವಾಲುಗಳು, ಸಮಸ್ಯೆಗಳು, ಜಾಗತಿಕ ವಿದ್ಯಮಾನಗಳು ಇತ್ಯಾದಿ ಹಿನ್ನೆಲೆಯಲ್ಲಿ ಭಾರತೀಯ ಸಮಾಜ ಪಡೆದುಕೊಳ್ಳುತ್ತಿರುವ ಆಯಾಮಗಳನ್ನು ಗ್ರಹಿಸಲು ಲೋಹಿಯಾ ಸಿದ್ಧಾಂತದ ಆಚೆಗೂ ನಿಂತು ಚಿಂತಿಸಿದವರು. ಭಾಷೆ, ಸಂಸ್ಕಂ ತಿ, ಸಮಾಜ, ರಾಜಕೀಯ, ಪರಿಸರ, ಜಾಗತೀಕರಣ ಹೀಗೆ ಹಲವು ಸಂಗತಿಗಳನ್ನು ವಿಶ್ಲೇಷಿಸುವಲ್ಲಿ ತೇಜಸ್ವಿ ಅತ್ಯಂತ ಭಿನ್ನ ಚಿಂತಕರಾಗಿ ತೋರುತ್ತಾರೆ.

ತಮ್ಮ ತಂದೆ ಕುವೆಂಪು ಅವರ ಪ್ರಭಾವಲಯದಿಂದ ದೂರ ಸರಿಯಲು ನಿರ್ಧರಿಸಿದವರಂತೆ ತೇಜಸ್ವಿ ಅವರು ವಿದ್ಯಾಭ್ಯಾಸದ ನಂತರ ಮೈಸೂರಿನಿಂದ ಚಿಕ್ಕಮಗಳೂರು ಜಿಲ್ಲೆಗೆ ತೆರಳಿದರು. ಮೂಡಿಗೆರೆ ಸಮೀಪದಲ್ಲಿ ನೆಲೆನಿಂತು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಶ್ವವಿದ್ಯಾಲಯದಲ್ಲಿ, ಇಲ್ಲವೇ ಯಾವುದಾದರೂ ಕಾಲೇಜಿನಲ್ಲಿ ಅಧ್ಯಾಪಕರಾಗಿ ನಗರದಲ್ಲಿ ನೆಲೆ ನಿಲ್ಲಬಹುದಾಗಿದ್ದ ಅವಕಾಶವನ್ನು ಪ್ರಜ್ಞಾಪೂರ್ವಕವಾಗಿಯೇ ಬಿಟ್ಟುಕೊಟ್ಟು, ಕೃಷಿಯನ್ನು ಅರಸಿ ಹೋದ್ದದು ತೇಜಸ್ವಿ ಅವರ ಬದುಕಿನಲ್ಲಿ ಹೊಸ ತಿರುವಿಗೆ ಕಾರಣವಾಯಿತು. ಗ್ರಾಮೀಣ ಭಾರತವನ್ನು ಹತ್ತಿರದಿಂದ ನೋಡುವ, ಅದರ ಸೂಕ್ಷ್ಮ ಸ್ಪಂದನವನ್ನು ಸಮರ್ಥವಾಗಿ ಗ್ರಹಿಸುವ ಅವಕಾಶವನ್ನು ತೇಜಸ್ವಿ ಪಡೆದುಕೊಂಡರು. ಮಲೆನಾಡಿನ ಗಿರಿಕಾನನವನ್ನು, ಜೀವ ಸಂಕುಲವನ್ನು ನೋಡುತ್ತ, ಅಲ್ಲ ಗುತ್ತಿದ್ದ ಬದಲಾವಣೆಗಳನ್ನು, ಪಲ್ಲಟಗಳನ್ನು ಗ್ರಹಿಸುತ್ತ, ಜೊತೆ ಜೊತೆಗೆ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತ ತೇಜಸ್ವಿ ಹೊಸ ದಿಕ್ಕಿನಲ್ಲಿ ನಡೆದರು. ಕೃಷಿ, ಶಿಕಾರಿ, ಛಾಯಾಗ್ರಹಣ, ಮೀನಿಗೆ ಗಾಳ ಹಾಕುವುದು, ಬರವಣಿಗೆ ಹೀಗೆ ಹಲವಾರು ಚಟುವಳಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ತೇಜಸ್ವಿ ಹೊಸ ದಿಗಂತಗಳನ್ನು ಅನ್ವೇಷಿಸತೊಡಗಿದರು. ಲೋಹಿಯಾ ಸಿದ್ಧಾಂತ, ಸಮಾಜವಾದಿ ಯುವಜನ ಸಭಾ ಚಟುವಟಿಕೆಗಳು, ಪ್ರತಿಭಟನೆ ಇತ್ಯಾದಿ ಸಂಗತಿಗಳೂ ತೇಜಸ್ವಿಯವರ ವ್ಯಕ್ತಿತ್ವಕ್ಕೆ ವಿಭಿನ್ನ ರೀತಿಯ ಧಾತುಗಳನ್ನು ಸೇರಿಸಿದವು.

ತೇಜಸ್ವಿಯವರು ಬರವಣಿಗೆಯನ್ನು ಆರಂಭಿಸಿದ್ದು ನವ್ಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಹೊಸ ಸಂವೇದನೆ, ಹೊಸ ಅಭಿವ್ಯಕ್ತಿ, ಬದುಕಿನ ಗಂಭೀರ ಶೋಧಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ ನವ್ಯ ಸಾಹಿತ್ಯ ಚಳವಳಿ, ಭಾವುಕ ಆದರ್ಶ, ಅಭಿವ್ಯಕ್ತಿಗಳ ಬೆಲೂನಿಗೆ ಸೂಜಿ ಮೊನೆಯನ್ನು ತಾಕಿಸುವ ಉತ್ಸಾಹದಲ್ಲಿತ್ತು. ಪಶ್ಚಿಮದ ಪ್ರಭಾವಕ್ಕೊಳಗಾಗಿದ್ದ ಈ ಚಳವಳಿಯ ಲೇಖಕರು ಧ್ವನಿ, ಸಂಕೇತ, ಪ್ರತಿಮಾ ವಿಧಾನ, ಶಿಲ್ಪ, ಭಾಷೆಯ ಸಮರ್ಥ ಬಳಕೆಗಳಿಗೆ ಹೆಚ್ಚು ಒತ್ತು ಕೊಟ್ಟರಲ್ಲದೆ ಅನುಭವ ಅಭಿವ್ಯಕ್ತಿಗಳಲ್ಲಿನ ಪ್ರಾಮಾಣಿಕತೆಗೂ ಪ್ರಾಮುಖ್ಯತೆ ನೀಡಿದರು. ಇದೇ ಹಾದಿಯಲ್ಲಿ ನಡೆದ ತೇಜಸ್ವಿಯವರು ಕತೆ, ಕವಿತೆ, ನಾಟಕಗಳನ್ನು ರಚಿಸಿದರು. ಕಥಾ ಸಂಕಲನ `ಹುಲಿಯೂರಿನ ಸರಹದ್ದು, ಕವಿತೆಗಳ ಸಂಕಲನ `ಬೃಹನ್ನಳೆ ಸೋಮುವಿನ ಸ್ವಗತ ಲಹರಿ`, ಕಿರು ಕಾದಂಬರಿ `ಸ್ವರೂಪ` ಕೃತಿಗಳು ಹುಟ್ಟಿಕೊಂಡಿದ್ದು ಈ ಅವಧಿಯಲ್ಲಿಯೇ.ಈ ಮಾರ್ಗದ ಮಿತಿಗಳನ್ನು ತೇಜಸ್ವಿ ಬಹಳ ಬೇಗ ಕಂಡುಕೊಂಡರು. ಈ ಮಧ್ಯೆ ಅನೇಕ ಬೆಳೆವಣಿಗೆಗಳೂ ಆದವು. ಬರಹಗಾರರ ಒಕ್ಕೂಟ ಅಸ್ತಿತ್ವಕ್ಕೆ ಬಂತು. ಜಾತಿ ಮತ್ತು ವರ್ಗಗಳು ಹಾಗೂ ಭಾಷೆ ಶೋಷಣೆಯ ಪ್ರಧಾನ ಅಸ್ತ್ರಗಳಾಗಿರುವ, ಪುರೋಹಿತಶಾಹಿಯ ಕಪಿಮುಷ್ಠಿಯ ಈ ಸಮಾಜದಲ್ಲಿ ಬರಹಗಾರನ ಹೊಣೆಗಾರಿಕೆಯನ್ನು ಪುನರ್ರೂಪಿಸಬೇಕಾಗಿರುವ ಅಗತ್ಯದ ಬಗ್ಗೆ ತೇಜಸ್ವಿ ಚಿಂತಿಸಿದರು. 1973ರಲ್ಲಿ ಪ್ರಕಟವಾದ ಅವರ ಕಥಾ ಸಂಕಲನ `ಅಬಚೂರಿನ ಪೋಸ್ಟಾಫೀಸುಗೆ ಬರೆದ ಮುನ್ನುಡಿ `ಹೊಸ ದಿಗಂತದೆಡೆಗೆ` ತೇಜಸ್ವಿಯವರ ಈ ಚಿಂತನೆಯನ್ನು ಸ್ಪಷ್ಟವಾಗಿ ಮುಂದಿಡುತ್ತದೆ. ನವ್ಯ ಮಾರ್ಗದ ಮಿತಿಯನ್ನು ಈ ಮುನ್ನುಡಿಯ ಮಾತುಗಳು ಗುರುತಿಸುತ್ತವೆ.

`ಅಬಚೂರಿನ ಪೋಸ್ಟಾಫೀಸು` ತೇಜಸ್ವಿಯವರ ಚಲನೆಯ ಹಾದಿಯನ್ನು ಬದಲಾಯಿಸಿತೇ? ಅವರ ಮೊದಲ ಕೃತಿಗಳ ಚಲನೆಯ ದಿಕ್ಕು ಮತ್ತು ಈ ಕೃತಿಯ ದಿಕ್ಕಿಗೂ ವ್ಯತ್ಯಾಸ ಗೋಚರವಾಗುತ್ತಿದೆಯೇ? ಈ ಪ್ರಶ್ನೆಗೆ ವಿಮರ್ಶಕ ಪ್ರೊ.ಜಿ.ಎಚ್.ನಾಯಕರ ಅಭಿಪ್ರಾಯ ಸೂಕ್ತ ಉತ್ತರವನ್ನು ಒದಗಿಸುವಂತೆ ಕಾಣಿಸುತ್ತದೆ. ತೇಜಸ್ವಿಯವರ `ಕರ್ವಾಲೊ ಕಾದಂಬರಿಗೆ ಹಿನ್ನುಡಿ ರೂಪದ ಬರಹವಾಗಿ ಪ್ರಕಟವಾಗಿದ್ದ ನಾಯಕರ ಲೇಖನ ಅವರ `ಅನಿವಾರ್ಯ(1980) ಎನ್ನುವ ವಿಮರ್ಶಾ ಸಂಕಲನದಲ್ಲಿರುವ ತೇಜಸ್ವಿಯವರ ಸಾಹಿತ್ಯ ಎಂಬ ತಲೆಬರಹದಲ್ಲಿ ಪ್ರಕಟವಾಗಿದೆ. ಅಲ್ಲಿ ಅವರು ಹೀಗೆ ಅಭಿಪ್ರಾಯಪಡುತ್ತಾರೆ:

ಯಮಳ ಪ್ರಶ್ನೆ, ಸ್ವರೂಪಗಳಂಥ ಬರೆವಣಿಗೆಯ ಬಗೆಗೆ ಹುಟ್ಟಿದ ಅತೃಪ್ತಿಗೆ ತೇಜಸ್ವಿಯವರು ತೋರಿಸಿದ ಪ್ರತಿಕ್ರಿಯೆ ಎಂಬಂತೆ ಅವರ `ಅಬಚೂರಿನ ಪೋಸ್ಟಾಫೀಸು` ಸಂಕಲನದ ಕತೆಗಳಿವೆ. ಯಮಳ ಪ್ರಶ್ನೆ, ಸ್ವರೂಪಗಳಲ್ಲಿ ಕಾಣಿಸುವಂಥ ತಾತ್ವಿಕ ಕಾಳಜಿ ಅಲ್ಲಿ ಕಾಣಿಸುವುದಿಲ್ಲ. ಆ ಕಥೆಗಳಲ್ಲಿ ಸಾಮಾಜಿಕ ಕಾಳಜಿ ಎದ್ದು ಕಾಣುವಂತಿವೆ. ಅದರಿಂದಾಗಿ ತೇಜಸ್ವಿಯವರ ಸೃಜನಶೀಲ ಚೇತನ ಹೊಸ ಅನುಭವ ಮತ್ತು ಹೊಸ ಅಭಿವ್ಯಕ್ತಿ ಸಾಧ್ಯತೆಗಳತ್ತ ತಿರುಗಿತೆಂಬಂತೆ ಅನಿಸುವಂತಾಯಿತು.

ಇನ್ನೂ ಮಹತ್ವದ ಮಾತುಗಳನ್ನು ಪ್ರೊ.ನಾಯಕರು ಇದೇ ಲೇಖನದಲ್ಲಿ ಹೇಳುತ್ತಾರೆ: `ಆ ಸಂಕಲನದ (`ಅಬಚೂರಿನ ಪೋಸ್ಟಾಫೀಸು`) `ಅಬಚೂರಿನ ಪೋಸ್ಟಾಫೀಸು`, `ಅವನತಿ`, `ಕುಬಿ ಮತ್ತು ಇಯಾಲ, `ತುಕ್ಕೋಜಿ`ಯಂಥ ಕತೆಗಳು ಕಲಾತ್ಮಕವಾಗಿಯೂ ಕನ್ನಡದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವಂಥ ಸತ್ವದಿಂದ ಕೂಡಿರುವುದೂ ನಿಜವೇ. ಹೀಗಿದ್ದೂ ತೇಜಸ್ವಿಯವರು ಆ ಬಗೆಯ ಬರವಣಿಗೆಯನ್ನು ಮುಂದುವರಿಸದೆ, ಯಮಳ ಪ್ರಶ್ನೆ, ಸ್ವರೂಪಗಳಂಥ ಕೃತಿಗಳಲ್ಲಿ ಕಾಣಿಸುವಂಥ ತಾತ್ವಿಕ ಕಾಳಜಿಯ ಬರೆವಣಿಗೆಯ ದಿಕ್ಕಿಗೇ ಮತ್ತೆ ತಿರುಗಿದರೆಂಬುದು ತುಂಬ ಕುತೂಹಲ ಹುಟ್ಟಿಸುವ ಸಂಗತಿಯಾಗಿದೆ. ತೇಜಸ್ವಿಯವರ ಸೃಜನಶೀಲ ವ್ಯಕ್ತಿತ್ವದಲ್ಲಿ ಬದುಕನ್ನು ಒಂದು ತಾತ್ವಿಕ ಚಿಂತನೆಯ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವ ಪ್ರವೃತ್ತಿಯೂ ಪ್ರಬಲವಾಗಿರುವುದು. ಇದಕ್ಕೆ ಬಲು ಮುಖ್ಯ ಕಾರಣವೆಂಬುದು ನನ್ನ ಅನಿಸಿಕೆಯಾಗಿದೆ. ಅವರ ಮುಂದಿನ ಕೃತಿಗಳಾದ ನಿಗೂಢ ಮನುಷ್ಯರು ಮತ್ತು ಕರ್ವಾಲೊಗಳು ಈ ಅನಿಸಿಕೆಯನ್ನು ಸಮರ್ಥಿಸುವಂತಿವೆ. ಆ ಕೃತಿಗಳಲ್ಲಿ ತಾತ್ವಿಕ ನೋಟಕ್ಕೆ ಸಂಬಂಧಿಸಿದಂತೆಯೂ ತೇಜಸ್ವಿಯವರು ಗುಣಾತ್ಮಕ ಹೊಸ ಆಯಾಮಗಳನ್ನು ರೂಢಿಸುತ್ತ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ.

`ಅಬಚೂರಿನ ಪೋಸ್ಟಾಫೀಸು` ಸಂಕಲನದ ಮೂಲಕ ತೇಜಸ್ವಿ ಅವರು ತೆರೆದ ಹೊಸ ಮಾರ್ಗ ಎಷ್ಟು ವಿಸ್ತಾರವಾದುದು ಎಂಬುದನ್ನು ಈ ಸಂಕಲನದ ಕತೆಗಳು ಮತ್ತು ಅನಂತರದ ತೇಜಸ್ವಿ ಅವರ ಸೃಜನಶೀಲ ಬರವಣಿಗೆಗಳು ತೋರಿಸುತ್ತವೆ. ಲೋಹಿಯಾ ಅವರ ಸಿದ್ಧಾಂತ ಮತ್ತು ಕಾಣ್ಕೆಗಳನ್ನು ಸರಿಯಾಗಿ ಗ್ರಹಿಸಿದ ತೇಜಸ್ವಿ ಅವರು ಈ ಮೂಲಕವೇ ಭಾರತೀಯ ಸಮಾಜವನ್ನು ನೋಡಿದ ರೀತಿ ಅನನ್ಯವಾದುದು. ಸಾಮಾಜಿಕ, ಆರ್ಥಿಕ, ಸಾಂಸ್ಕಂ ತಿಕ, ರಾಜಕೀಯ ಪರಿಸರದಲ್ಲಿ ಮನುಷ್ಯನನ್ನು ನಿಲ್ಲಿಸಿ ವಿವಿಧ ಕೋನಗಳಿಂದ ತೇಜಸ್ವಿ ಅವರು ತೆಗೆದ ಚಿತ್ರಗಳು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವಾಗುವುದು, ವರ್ತಮಾನವಾಗುವುದು, ಹಲವು ಆಯಾಮಗಳನ್ನು ಪಡೆದುಕೊಳ್ಳುವುದು ಅವರ ಪ್ರತಿಭೆಯನ್ನು ತೋರಿಸುತ್ತವೆ.

`ಕರ್ವಾಲೊ`, `ಚಿದಂಬರ ರಹಸ್ಯ`, `ಕಿರುಗೂರಿನ ಗಯ್ಯಾಳಿಗಳು`, `ಜುಗಾರಿ ಕ್ರಾಸ್` ಮತ್ತು ಇತ್ತೀಚಿನ `ಮಾಯಾಲೋಕ` ಕೃತಿಗಳು, ಹೊಸ ದಿಗಂತದತ್ತ ಹೆಜ್ಜೆ ಹಾಕಿದ ತೇಜಸ್ವಿ ಅವರು ಬಹಳ ದೂರ ಸಾಗಿ ಬಂದಿರುವುದಕ್ಕೆ ಸಾಕ್ಷಿ ಹೇಳುತ್ತವೆ. ಬ್ರಹ್ಮಾಂಡ, ಜೀವ ವಿಕಾಸದ ಹಾದಿಯಲ್ಲಿನ ಅಸಂಖ್ಯ ವಿಸ್ಮಯಗಳು, ಭೂಮಿಯ ರಚನೆಯ ಹಿಂದಿನ ಸೋಜಿಗಗಳು, ಇತಿಹಾಸ ಪುಟದ ರೋಚಕ ಅಧ್ಯಾಯಗಳು, ಯುದ್ಧಗಳು, ನದಿ, ಮರುಭೂಮಿ, ಕಾಡುಗಳು, ಹಾರುವ ತಟ್ಟೆಯಂಥ ವಿಜ್ಞಾನದ ವಿಸ್ಮಯಗಳು, ನಮ್ಮ ಪರಿಸರಕ್ಕೆ ಸಂಬಂಧಿಸಿದ ಸಾವಿರಾರು ಸಂಗತಿಗಳು, ಪ್ರಾಣಿಪಕ್ಷಿ ಪ್ರಪಂಚ, ಕೀಟಗಳ ಲೋಕ ಹೀಗೆ ಕುತೂಹಲದ ಮನಸ್ಸಿಗೆ ಕಾಣುವ ಲೆಕ್ಕವಿಲ್ಲದಷ್ಟು ಸಂಗತಿಗಳು ತೇಜಸ್ವಿಯವರ ಕುತೂಹಲವನ್ನು ಕೆಣಕಿವೆ. ಅಪಾರ ಕುತೂಹಲದ, ಅದಮ್ಯ ಜೀವನೋತ್ಸಾಹದ ತೇಜಸ್ವಿ ಅವರು ಈ ಎಲ್ಲ ಸಂಗತಿಗಳನ್ನು ತಿಳಿಯುವ ದಿಕ್ಕಿನಲ್ಲಿ ನಡೆಸಿದ ಪ್ರಚಂಡ ಪ್ರಯತ್ನದ ಫಲವಾಗಿ ಕನ್ನಡಕ್ಕೆ ಹಲವಾರು ಗ್ರಂಥಗಳು ದೊರಕಿವೆ. ಯಾವುದನ್ನು ಕಂಡರೂ ಅದನ್ನು ತಮ್ಮ ವಿಶಿಷ್ಟ ನೋಟಕ್ಕೆ ಅಳವಡಿಸಿ, ಕಥನದಂತೆ ಹೇಳುವ ತೇಜಸ್ವಿಯವರ ಕಲಾವಂತಿಕೆ ಬೆರಗು ಹುಟ್ಟಿಸುತ್ತದೆ. ವಿಜ್ಞಾನದ ಜಟಿಲ ಸಂಗತಿಗಳನ್ನೂ ರೋಚಕವಾಗಿ ಹೇಳಬಲ್ಲ, ಕುತೂಹಲವನ್ನು ಕೆರಳಿಸಬಲ್ಲ ತೇಜಸ್ವಿ ಅವರು ಇಂಗ್ಲಿಷ್‍ನ ಹಲವಾರು ಗ್ರಂಥಗಳಲ್ಲಿರುವ ಅಪಾರ ಜ್ಞಾನವನ್ನು ದಕ್ಕಿಸಿಕೊಂಡು, ಸರಳ ರೀತಿಯಲ್ಲಿ, ಆಕರ್ಷಕ ಶೈಲಿಯಲ್ಲಿ ಕನ್ನಡದಲ್ಲಿ ಹೇಳಿದ್ದಾರೆ. ಅದ್ಭುತ ಜಗತ್ತು, ವಿಸ್ಮಯ, ಮಹಾಯುದ್ಧ, ವಿಸ್ಮಯ ವಿಶ್ವ, ಪರಿಸರದ ವಿಶ್ವರೂಪ, ಮಿಲೆನಿಯಂ ಮಾಲಿಕೆಯ ಪುಸ್ತಕಗಳು ಕನ್ನಡ ಓದುಗರಿಗೆ ಹೊಸಲೋಕದ ಬಾಗಿಲುಗಳನ್ನು ತೆರೆದ್ದದು ಒಂದು ಮಹತ್ವದ ಘಟನೆಯೇ. ಹದಿಹರೆಯದವರನ್ನು, ಎಳೆಯ ತಲೆಮಾರನ್ನು ಕನ್ನಡ ಓದುವಂತೆ ಮಾಡಿದ ಕೀರ್ತಿಯೂ ತೇಜಸ್ವಿಯವರಿಗೇ ಸಲ್ಲಬೇಕು. ಇಕಾಲಜಿಯ ಸರಳ ವಿವರಣೆಯನ್ನು ನೀಡುವ ಪುಸ್ತಕಗಳು ನಮ್ಮ ಪರಿಸರದ ಬಗ್ಗೆ ಹೊಸ ಎಚ್ಚರವನ್ನು ಮೂಡಿಸಿದವು. `ಪರಿಸರದ ಕತೆಗಳಂತೂ ಪರಿಸರದ ನೂರಾರು ರೋಚಕ ಸಂಗತಿಗಳನ್ನು ಕಥನ ರೂಪದಲ್ಲಿ ನಿವೇದಿಸಿದವು. ಇದರಲ್ಲಿ ಪ್ರಾಣಿ, ಪಕ್ಷಿ, ಮನುಷ್ಯ, ಮರ, ಗಿಡ, ಸುತ್ತಲಿನ ಪರಿಸರ ಎಲ್ಲವೂ ಒಂದರೊಳಗೊಂದು ಬೆರೆತದ್ದು, ತೇಜಸ್ವಿಯವರ ಅನುಭವ ಮತ್ತು ಜ್ಞಾನ ಮಿಳಿತಗೊಂಡದ್ದು, ವಸ್ತು ಸ್ಥಿತಿಯನ್ನು ಕಥನ ರೂಪದಲ್ಲಿ ಹೇಳಿದ್ದು ಕನ್ನಡಕ್ಕೆ ಹೊಸದು, ವಿಶಿಷ್ಟವಾದದ್ದು. ಇನ್ನು ಯಾವುದೇ ಭಾಷೆಯಲ್ಲಿಯೂ ಇಂಥ ಪ್ರಯತ್ನಗಳು ಹೆಚ್ಚು ನಡೆದಿರಲಾರವು. ಈ ದೃಷ್ಟಿಯಿಂದ ಪರಿಸರದ ಕಥೆಗಳು ತೇಜಸ್ವಿಯವರ ಅಪರೂಪದ ಕೊಡುಗೆಗಳು.

ಕನ್ನಡ ನಾಡಿನ ಹಕ್ಕಿಗಳನ್ನು ಕುರಿತ ತೇಜಸ್ವಿಯವರ ಕೃತಿಗಳು ಪಕ್ಷಿ ಸಂಕುಲವನ್ನು ಪರಿಚಯಿಸಿಕೊಳ್ಳುವ ದಿಕ್ಕಿನಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನವೇ ಕಾಡು ಮತ್ತು ಬೇಟೆ ತೇಜಸ್ವಿಯವರ ಇನ್ನೊಂದು ಮುಖ್ಯ ಆಸಕ್ತಿಯ ಕೇಂದ್ರ. ಹೆಗಲ ಮೇಲೆ ಕೋವಿ ಹೊತ್ತುಕೊಂಡು ಗೊತ್ತು ಗುರಿ ಇಲ್ಲದಂತೆ, ಕಾಲದ ಪರಿವೆಯನ್ನು ಮರೆತು, ಕಾಡುಮೇಡು ಅಲೆದ ತೇಜಸ್ವಿ ಅನೇಕ ವರ್ಷಗಳ ಕಾಲ ಇದನ್ನೊಂದು ಧ್ಯಾನದಂತೆ ನಡೆಸಿದರು. ಮೀನು ಶಿಕಾರಿಯೂ ಈ ಧ್ಯಾನದ ಇನ್ನೊಂದು ಘಟ್ಟವೇ. ಪ್ರಾಣಿಗಳನ್ನು ಕೊಲ್ಲುವುದಕ್ಕಿಂತ ಅವುಗಳ ಚಲನ ವಲನ, ಸ್ವಭಾವ ಇತ್ಯಾದಿ ವಿವರಗಳನ್ನು ಅರಿಯುವುದರ ಕಡೆಗೇ ತೇಜಸ್ವಿಯವರು ತಮ್ಮ ಗಮನವನ್ನು ಕೇಂದ್ರೀಕರಿಸಿದರು ಎಂಬುದು ಅವರ ಅನೇಕ ಕೃತಿಗಳಿಂದ ಸ್ಪಷ್ಟವಾಗುತ್ತದೆ. ಜಿಮ್ ಕಾರ್ಬೆಟ್ ಮತ್ತು ಕೆನೆತ್ ಆಂಡರ್‍ಸನ್ ಅವರ ಬೇಟೆಯ ಅನುಭವಗಳನ್ನು ಕನ್ನಡಕ್ಕೆ ತಂದುಕೊಡುವಲ್ಲಿ ತೇಜಸ್ವಿಯವರ ಇದೇ ಆಸಕ್ತಿ ಕೆಲಸ ಮಾಡಿರುವುದನ್ನು ಗುರುತಿಸಬಹುದಾಗಿದೆ. ತೇಜಸ್ವಿಯವರ ಕಾಡಿನ, ಪರಿಸರದ, ಪ್ರಾಣಿ ಸಂಕುಲದ ಅನುಭವ ಹಿನ್ನೆಲೆಯೇ ಕಾರಣವಾಗಿ ಕಾರ್ಬೆಟ್ ಮತ್ತು ಆಂಡರ್‍ಸನ್ ಅವರ ಕನ್ನಡ ರೂಪಗಳು ಕೇವಲ ಅನುವಾದಗಳಂತೆ ಕಾಣುವುದಿಲ್ಲ; ಸ್ವತಂತ್ರ ಅನುಭವ ಕಥನಗಳಂತೆ ಓದುಗರನ್ನು ಒಳಗೊಳ್ಳುತ್ತವೆ. ಸ್ವಂತ ಅನುಭವದ ಎಳೆಗಳನ್ನು ತೇಜಸ್ವಿಯವರು ನಿರೂಪಣೆಯಲ್ಲಿ ಕಲಾತ್ಮಕವಾಗಿ ನೇಯ್ಗೆಮಾಡುವ ಪರಿ ಅನನ್ಯ, ಅನ್ಯಾದೃಶ.

ತೇಜಸ್ವಿ ತಾವು ನಿಂತ ನೆಲದಿಂದ ದೂರ ಸರಿದು ವಿಸ್ತಾರವಾಗಿ ಪ್ರವಾಸ ಮಾಡಿದ ಲೇಖಕರಲ್ಲ. ಅವರೇ ಹೇಳುವಂತೆ ಅವರಿಗೆ ಅಂಥ ಪ್ರವಾಸಗಳಲ್ಲಿ ಆಸಕ್ತಿಯೂ ಇಲ್ಲ. ಮಿತ್ರರ ಜೊತೆಯಲ್ಲಿ ಅವರು ಮಾಡಿದ ಏಕೈಕ ಪ್ರವಾಸವೆಂದರೆ ಅಂಡಮಾನ್ ಪ್ರವಾಸ. ಈ ಪ್ರವಾಸ ಕಥನವೇ `ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್. ಈ ಕೃತಿಯಲ್ಲಿಯೂ ತೇಜಸ್ವಿಯವರ ಪ್ರಧಾನ ಆಸಕ್ತಿಗಳು ಕಾಣಿಸುವುದು, ಅವರ ಇಂಗದ ಕುತೂಹಲ ಗರಿಗೆದರಿ ಕುಣಿಯುವುದು, ಹಲವಾರು ಹೊಸ ಹೊಸ ಸಂಗತಿಗಳನ್ನು ಅವರು ತಮ್ಮ ಅನುಭವ ವಲಯದೊಳಕ್ಕೆ ತೆಗೆದು ಕೊಳ್ಳುವುದು ಇತ್ಯಾದಿ ಅಂಶಗಳನ್ನು ಗಮನಿಸಬಹುದಾಗಿದೆ.

ತೇಜಸ್ವಿಯವರ ಕೃತಿಗಳಲ್ಲಿಯೇ ಭಿನ್ನವಾದ, ಅಷ್ಟೇಕೆ ಕನ್ನಡಕ್ಕೂ ತೀರ ವಿಶಿಷ್ಟವಾದ ಕೃತಿ `ಅಣ್ಣನ ನೆನಪು. ತಮ್ಮ ತಂದೆ ಕುವೆಂಪು ಅವರ ವ್ಯಕ್ತಿತ್ವದ ವಿವಿಧ ಮುಖಗಳನ್ನು ತಾವು ಕಂಡಂತೆ, ತಮ್ಮ ಅನುಭವದ ಹಿನ್ನೆಲೆಯಲ್ಲಿ ವರ್ಣಿಸುವ ಈ ಕೃತಿ ತೇಜಸ್ವಿಯವರ ನೆನಪುಗಳನ್ನು, ಅವರ ವ್ಯಕ್ತಿತ್ವದ ಮುಖಗಳನ್ನೂ ಅನಾವರಣಗೊಳಿಸುತ್ತದೆ. ಅದೊಂದು ಕುವೆಂಪು ಜೀವನ ಚರಿತ್ರೆ ಮತ್ತು ತೇಜಸ್ವಿಯವರ ಆತ್ಮಚರಿತ್ರೆಯ ಅಪೂರ್ವ ಸಮ್ಮಿಳನ ಬರೆಹ. ಅತ್ಯಂತ ಸೂಕ್ಷ್ಮಮವಾದ ನೂರಾರು ಸಂಗತಿಗಳೂ ಈ ಕೃತಿಯಲ್ಲಿ ಮುಖದೋರುತ್ತವೆ.

ತೇಜಸ್ವಿ ಕನ್ನಡದಲ್ಲಿ ಈಗ ಬರೆಯುತ್ತಿರುವ ಅವರ ತಲೆಮಾರಿನ ಲೇಖಕರಲ್ಲಿಯೇ ಹೆಚ್ಚು ಕ್ರಿಯಾಶೀಲರಾದವರು; ಹೆಚ್ಚಿನ ಪ್ರತಿಭೆ ಮತ್ತು ಸಾಮಥ್ರ್ಯಗಳನ್ನು ಪಡೆದವರು. ಇತ್ತೀಚೆಗೆ ಪ್ರಕಟವಾಗಿರುವ ಅವರ ಮಾಯಾಲೋಕ ಅವರ ಸೃಜನಶೀಲ ಬರವಣಿಗೆಯ ಬಗೆಗೆ ಕುತೂಹಲವನ್ನು ಹುಟ್ಟಿಸಿದೆ. ಈ ಮಾಲೆಯಲ್ಲಿ ಅವರು ಇನ್ನಷ್ಟು ಮಾಯಾಲೋಕಗಳನ್ನು ಸೃಷ್ಟಿಸುವ ಹುರುಪಿನಲ್ಲಿಯೂ ಇದ್ದಾರೆ. ಇದು ಕನ್ನಡಿಗರು ಅವರನ್ನು ಆಶೆಗಣ್ಣುಗಳಿಂದ ನೋಡುವಂತೆ ಮಾಡಿದೆ. ತೇಜಸ್ವಿಯವರಿಗೆ 1980ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ವಾಲೊ ಕೃತಿಗೆ ಸಂದಿತು. ಚಿದಂಬರ ರಹಸ್ಯ ಕೃತಿಗೆ 1985ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1988ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಿದಂಬರ ರಹಸ್ಯಕ್ಕಾಗಿ 1990ರ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (ಕಲ್ಕತ್ತ-ಬಿಲ್‍ವಾರ ಪುರಸ್ಕಾರ)ಗಳು ದೊರೆತವು. 1991ರಲ್ಲಿ ಶಿವರಾಮಕಾರಂತ ಪ್ರಶಸ್ತಿ, 1993ರಲ್ಲಿ ಜೀವವಿಜ್ಞಾನದ ಪರಿಸರ ಪ್ರಶಸ್ತಿ ಮತ್ತು ಈ ಎಲ್ಲವುಗಳಿಗೆ ಕಳಸವಿಟ್ಟಂತೆ 2000ದಲ್ಲಿ ಸಮಗ್ರ ಸಾಹಿತ್ಯಕ್ಕಾಗಿ ಪಂಪ ಪ್ರಶಸ್ತಿಗಳು ಸಂದವು.

ಅಬಚೂರಿನ ಪೋಸ್ಟಾಫೀಸು ಚಿತ್ರಕಥೆಗೆ 1973ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಅವರ ತಬರನ ಕಥೆಗೆ 1987ರಲ್ಲಿ ಅತ್ಯುತ್ತಮ ಕಥೆ ಮತ್ತು ಸಂಭಾಷಣೆಗಾಗಿ ಕರ್ನಾಟಕ ರಾಜ್ಯಪದಕ, ಅತ್ಯುತ್ತಮ ಕಥಾ ಲೇಖಕ ಚಿತ್ರಕಥಾ ಲೇಖಕ ಮತ್ತು ಅತ್ಯುತ್ತಮ ಚಿತ್ರಸಂಭಾಷಣೆಗಾಗಿ ಸ್ವರ್ಣಕಮಲ ಪ್ರಶಸ್ತಿ, ಕುಬಿ ಮತ್ತು ಇಯಾಲ ಚಿತ್ರಕ್ಕಾಗಿ 1990ರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ಕಥಾ ಲೇಖಕ ತೇಜಸ್ವಿ ಅವರಿಗೆ ಸ್ವರ್ಣ ಪದಕಗಳು ಒಂದರ ಹಿಂದೆ ಒಂದು ಲಭಿಸಿವೆ.

ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆಯ ಪ್ರಕೃತಿಯ ಮಡಿಲಲ್ಲಿ ಸಾಹಿತ್ಯ, ಭಾಷೆ, ಕಲೆಗಳ ಕುರಿತ ಕೆಲಸಗಳಲ್ಲಿ ಸೃಜನಶೀಲವಾಗಿ ತನ್ಮಯತೆಯಿಂದ ಮಗ್ನರಾಗಿದ್ದಾರೆ. (ಜಿ.ಪಿ.ಬಸವರಾಜು)