ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊರೆ ಬಿಡುವಿಕೆ
ಪೊರೆ ಬಿಡುವಿಕೆ - ದೇಹದ ಹೊರ ಚರ್ಮವನ್ನು ಆಗಾಗ ಕಳಚಿ ಹೊಸ ಚರ್ಮವನ್ನು ಬೆಳೆಸಿಕೊಳ್ಳುವ ಪ್ರಕ್ರಿಯೆ (ಮೋಲ್ಟಿಂಗ್ : ಎಕ್‍ಡೆಸಿಸ್). ಕ್ರಸ್ಟೇಸಿಯ ಗುಂಪಿನ ಪ್ರಾಣಿಗಳು, ಸಂಧಿಪದಿಗಳು, ಕೀಟಗಳು ಹಾಗೂ ಹಾವುಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು.
ಈ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ದೇಹದ ಹೊರಭಾಗ ಪೊರೆಯಿಂದ ಆವೃತವಾಗಿರುವುದು. ಇದನ್ನು ದೇಹದ ಹೊರಪದರ ಸ್ರವಿಸುತ್ತದೆ. ಪೊರೆಯಲ್ಲಿ ಎರಡು ಪದರಗಳುಂಟು. ಹೊರಪೊರೆ ತೆಳುವಾಗಿಯೂ ಒಳಪೊರೆ ದಪ್ಪವಾಗಿಯೂ ಇವೆ. ಪೊರೆ ಕೈಟಿನ್ ಎಂಬ ಸಾರಜನಕ ಪದಾರ್ಥದಿಂದ ರಚಿತವಾಗಿದೆ. ಇದು ನಿರ್ಜೀವ ಪದರ. ಒಳಗಿನ ದೇಹ ಬೆಳೆದಂತೆ ಇದು ಹಿಗ್ಗಲಾರದು. ಆದ್ದರಿಂದ ಈ ಪ್ರಾಣಿಗಳು ಗಾತ್ರದಲ್ಲಿ ಹಿರಿದಾದಾಗ ಈ ಪೊರೆಯನ್ನು ಕಳಚಿ ಹೊಸ ದೊಡ್ಡಪೊರೆಯನ್ನು ಬೆಳೆಸಿಕೊಳ್ಳುತ್ತವೆ. ಹಳೆಯ ಪೊರೆಯನ್ನು ಕಳಚುವುದಕ್ಕೆ ಮೊದಲು ಹೊಸದೊಂದು ಪೊರೆ ರೂಪುಗೊಳ್ಳುತ್ತದೆ. (ಪೊರೆಯೇ ಇವುಗಳ ದೇಹಕ್ಕೆ ಆವಶ್ಯಕವಾದ ರಕ್ಷಣೆ) ಒಂದು ಪೊರೆಯನ್ನು ಕಳಚಿ ಹಾಕಿದಾಗ ಸೂರ್ಯನ ಕಿರಣ ಹಾಗೂ ಪ್ರಕೃತಿಯ ಇತರ ವಿಕೋಪ ವಾತಾವರಣಗಳಿಗೆ ದೇಹವನ್ನು ಒಡ್ಡದಂತೆ ಮೊದಲೇ ಹೊಸದೊಂದು ಪೊರೆಯನ್ನು ಬೆಳೆಸಿಕೊಂಡು ಹಳೆಯ ಪೊರೆಯನ್ನು ಕಳಚಿಬಿಡುತ್ತದೆ. ಕೆಲವು ಸಂಧಿಪದಿಗಳು ಹೀಗೆ ಕಳಚಿದ ಪೊರೆಯನ್ನು ಕರಗಿಸಿ ಹೊಸ ಪೊರೆಯನ್ನು ಸ್ರವಿಸಲು ಉಪಯೋಗಿಸುತ್ತವೆ. ಪೊರೆ ಬಿಡುವಾಗ ಹೊರಪೊರೆ ಕಳಚಿಹೋಗಿ ಒಳಪೊರೆಯೇ ಆಗ ಹೊರಪೊರೆಯಾಗುತ್ತದೆ ಮತ್ತು ಸಾಮಾನ್ಯವಾಗಿ ಹೊರಪೊರೆ ಬೆನ್ನಿನ ನಡುಭಾಗದಲ್ಲೇ ಸೀಳುತ್ತದೆ. ಅನಂತರ ಅದರಿಂದ ಪ್ರಾಣಿ ಹೊರಬರುತ್ತದೆ.
ಕೀಟಗಳ ಡಿಂಬಗಳಲ್ಲಿ ಬೆಳವಣಿಗೆಯ ದರ ಹೆಚ್ಚು. ಆದ್ದರಿಂದಲೇ ಇವುಗಳಲ್ಲಿ ಪೊರೆ ಬಿಡುವಿಕೆ ಹೆಚ್ಚು ಸ್ಪಷ್ಟ. ಚಿಟ್ಟೆಗಳ ಕಂಬಳಿಹುಳುಗಳು, ಕೊಂಡಲಿಗಳು, ಜಿರಲೆಯ ಅಪ್ಸರೆಗಳು, ರೇಷ್ಮೆ ಹುಳುಗಳಲ್ಲಿ ಪೊರೆ ಬಿಡುವ ಕಾಲವನ್ನು ಜ್ವರ ಬಂದ ಕಾಲ ಎಂದು ಕರೆಯುತ್ತಾರೆ. ಇವುಗಳು ನಿರ್ದಿಷ್ಟ ಸಲ ಪೊರೆ ಬಿಟ್ಟು ಪ್ರಬುದ್ಧ ಕೀಟಗಳಾಗಿ ಬೆಳೆಯುತ್ತವೆ. ಉದಾಹರಣೆಗೆ ಜಿರಲೆಗಳ ಮರಿಗಳು [ಅಪ್ಸರೆ] ಲಿಂಗ ಪ್ರೌಢತನವನ್ನು ಗಳಿಸುವ ಕಾಲಕ್ಕೆ ಐದು ಸಾರಿ ಪೊರೆ ಬಿಡುತ್ತವೆ. ಕೊನೆಯ ಸಾರಿ ಪೊರೆ ಬಿಟ್ಟಾಗಲೇ ಪೂರ್ಣವಾಗಿ ಬೆಳೆದ, ರೆಕ್ಕೆಗಳುಳ್ಳ ಲಿಂಗಪ್ರೌಢ ಜಿರಲೆಗಳಾಗಿ ಹೊರಬರುತ್ತವೆ. ಒಂದು ಸಾರಿ ಪೊರೆ ಬಿಡುವುದಕ್ಕೂ ಇನ್ನೊಂದು ಸಾರಿ ಪೊರೆ ಬಿಡುವುದಕ್ಕೂ ಇರುವ ಅಂತರಕ್ಕೆ ಇನ್‍ಸ್ಟಾರ್ ಎಂದು ಹೆಸರು. ಒಂದು ಕೀಟದ ಬೆಳವಣಿಗೆಯಲ್ಲಿ ನಿರ್ದಿಷ್ಟವಾದ ಇನ್‍ಸ್ಟಾರ್‍ಗಳಿರುತ್ತವೆ.
ಕೀಟಗಳ ಮರಿಗಳ ಪೊರೆಬಿಡುವ ಕ್ರಿಯೆ ಕೆಲವು ಹಾರ್ಮೋನುಗಳ ನಿಯಂತ್ರಣಕ್ಕೆ ಒಳಪಟ್ಟಿದೆ. ಮಿದುಳಿನ ಬಳಿ ಇರುವ ವಿಶೇಷ ತೆರನ ಸ್ರವಿಕೆಯ ಕೋಶಗಳು ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತವೆ. ಈ ಹಾರ್ಮೋನುಗಳು ಎದೆಯ ಭಾಗದ ಮೊದಲನೆಯ ಖಂಡದಲ್ಲಿರುವ ಪ್ರೋಥೊರ್ಯಾಸಿಕ್ ಗ್ರಂಥಿಯನ್ನು ನಿಯಂತ್ರಿಸುತ್ತವೆ. ಈ ಗ್ರಂಥಿ ಎಕ್‍ಡೈಸೋನ್ ಎಂಬ ಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ. ಪ್ರೋಥೊರ್ಯಾಸಿಕ್ ಗ್ರಂಥಿಗಳ ಕಷಾಯ ಅಥವಾ ಎಕ್‍ಡೈಸೋನ್‍ಗಳನ್ನು ಕೃತಕವಾಗಿ ಕೀಟಗಳಿಗೆ ಕೊಟ್ಟಾಗ ಪೊರೆ ಬಿಡುವಿಕೆ ತ್ವರೆಯಿಂದ ನಡೆದು ರೂಪಪರಿವರ್ತನೆಯಾಗುತ್ತದೆ. ಬೆಳವಣಿಗೆಯ ಮೂಲಾವಸ್ಥೆಯಲ್ಲಿ ಈ ಹಾರ್ಮೋನನ್ನು ಕೊಟ್ಟರೆ ಬೆಳವಣಿಗೆ ನಿಂತು ಪೊರೆಬಿಡುವಿಕೆಯ ಪ್ರಮಾಣ ಹೆಚ್ಚಾಗಿ ರೂಪಪರಿವರ್ತನೆ ನಡೆದು ಸಣ್ಣ ಗಾತ್ರದ ಕೀಟಗಳಾಗುತ್ತವೆ. ಈ ಹಾರ್ಮೋನಿನಿಂದ ಪೊರೆಬಿಡುವಿಕೆಯ ಕ್ರಿಯೆ ನಡೆಯುತ್ತದೆಯೇ ವಿನಾ ಪ್ರಾಣಿಯ ಬೆಳವಣಿಗೆ ಆಗಲಾರದು. ಆದರೆ ಮೂಲತಃ ಪೊರೆ ಬಿಡುವಿಕೆಯ ಕಾರಣ ದೇಹ ಬೆಳೆದು ಹೊರ ಪೊರೆ ಹಿಗ್ಗದೇ ಹೋದುದರ ದೆಸೆಯಿಂದಾಗಿ ಹೊರಪೊರೆಯನ್ನು ಕಳಚಬೇಕಾಗುತ್ತದೆ. ಅಂದರೆ ಈ ಕ್ರಿಯೆ ಎಕ್‍ಡೈಸೋನ್ ಎಂಬ ಹಾರ್ಮೋನಿನ ಅಂಕೆಗೆ ಒಳಪಟ್ಟಿದೆ. ಪ್ರೋಥೊರ್ಯಾಸಿಕ್ ಗ್ರಂಥಿಯನ್ನು ತೆಗೆದುಹಾಕಿದರೆ ಪೊರೆಬಿಡುವ ಕ್ರಿಯೆಯೇ ನಿಂತು ಹೋಗುತ್ತದೆ.
ಪೊರೆಬಿಡುವಿಕೆಯನ್ನು ಹಾವುಗಳಲ್ಲೂ ಕಾಣಬಹುದಷ್ಟೆ. ಅವು ಕಣ್ಣುನಾಲಿಗೆಗಳನ್ನಾವರಿಸಿರುವ ಪದರವನ್ನೊಳಗೊಂಡಂತೆ ದೇಹದ ಪೂರ್ಣ ಹೊರಚರ್ಮವನ್ನು ಕಳಚುವುವು. ಸಾಮಾನ್ಯವಾಗಿ ಹಾವುಗಳು ವರ್ಷಕ್ಕೆ ಮೂರು ಸಾರಿ ಪೊರೆ ಬಿಡುತ್ತವೆ. ಆದರೆ, ನಾಗರಹಾವುಗಳು ತಿಂಗಳಿಗೊಂದಾವರ್ತಿ ಪೊರೆ ಬಿಡುತ್ತವೆ. ಗಾಯಗಳಿಂದ ಪೊರೆ ಬಿಡುವ ಸಂಭವ ಹೆಚ್ಚಾಗುತ್ತದೆ. ಇವುಗಳಲ್ಲಿ ಪೊರೆ ಬಿಡುವಾಗ ಚರ್ಮ ದೇಹದ ಮುಂಭಾಗದಲ್ಲಿ ಬಿರಿಯುತ್ತ ಹೋಗಿ ಅನಂತರ ಹಿಂಭಾಗಕ್ಕೆ ಹರಡುತ್ತದೆ.
ಸಾಮಾನ್ಯವಾಗಿ ಪೊರೆಬಿಡುವ ಕಾಲ ಬಂದಾಗ ಪ್ರಾಣಿಗಳು, ಜಡವಾಗುತ್ತವೆ. ಅವುಗಳ ಜೀವನ ಚಟುವಟಿಕೆಗಳೆಲ್ಲ ಕಡಿಮೆ ಆಗುತ್ತವೆ. ಆಹಾರ ಸೇವನೆಯನ್ನು ತ್ಯಜಿಸುತ್ತವೆ. ಈ ರೀತಿಯ ಜಡತೆಯನ್ನು ರೇಷ್ಮೆಹುಳುಗಳಲ್ಲಿ ಕಾಣಬಹುದು. ಪೊರೆ ಬಿಡುವ ಕಾಲದಲ್ಲಿ ಹಾವುಗಳ ಮೈಬಣ್ಣದ ಹೊಳಪು ಕಡಿಮೆಯಾಗುತ್ತದೆ. ಚಟುವಟಿಕೆ ಸಹ ಮಂದವಾಗುತ್ತದೆ. ಆಗ ಅವಕ್ಕೆ ಕಣ್ಣು ಕಾಣುವುದಿಲ್ಲ. ಆದ್ದರಿಂದ ಪೊರೆ ಬಿಡುವ ಸಮಯದಲ್ಲಿ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ. (ಎಂ.ಎ.ಆರ್.) (ಪರಿಷ್ಕರಣೆ: ಡಿ.ಆರ್.ಪ್ರಹ್ಲಾದ್)