ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೋಲಿಷ್ ಭಾಷೆ
ಪೋಲಿಷ್ ಭಾಷೆ - ಪೋಲೆಂಡಿನ ಪ್ರಧಾನ ಭಾಷೆ. ಪೋಲೆಂಡ್, ಅಮೆರಿಕ ಸಂಯುಕ್ತ ಸಂಸ್ಥಾನಗಳು; ರಷ್ಯ, ಚೆಕೊಸ್ಲೊವಾಕಿಯ, ಜರ್ಮನಿ ಮುಂತಾದ ದೇಶಗಳಲ್ಲಿ ಮೂರು ಕೋಟಿಗಿಂತಲೂ ಹೆಚ್ಚು ಜನ ಪೋಲಿಷ್ ಮಾತನಾಡುವವರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ರಷ್ಯನ್ ಜರ್ಮನೆ ಫ್ರೆಂಚ್ ಮುಂತಾದ ಭಾಷೆಗಳಂತೆ ಪೋಲಿಷ್ ಇಂಡೋ ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಒಂದು ಭಾಷೆ.
ಪೋಲಿಷ್ ಭಾಷೆ ಜರ್ಮನ್ ಫ್ರೆಂಚ್ ಗ್ರೀಕ್ ಲ್ಯಾಟಿನ್ ಇಟಾಲಿಯನ್ ಮುಂತಾದ ಭಾಷೆಗಳಿಂದ ತುಂಬ ಪ್ರಭಾವಿತವಾಗಿದೆಯಾಗಿ ಆಯಾ ಭಾಷಿಕ ಅಂಶಗಳು ಇದರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ. ಇದನ್ನು ಗಮನಿಸಿದ ಕೆಲವು ವಿದ್ವಾಂಸರು ಈ ಭಾಷೆಯನ್ನು ಇಂಡೋಜಮ್ರ್ಯಾನಿಕ್ ಭಾಷಾ ವರ್ಗಕ್ಕೆ ಸೇರಿಸುವ ಸಾಹಸ ಮಾಡಿದ್ದಾರೆ. ಹಾಗೆಯೇ ಇದರಲ್ಲಿ ರಷ್ಯನ್ ಜೆಕ್ ಬಲ್ಗೇರಿಯನ್ ಉಕ್ರೇನಿಯನ್ ಮುಂತಾದ ಭಾಷೆಗಳ ಬೇರೆ ಬೇರೆ ಅಂಶಗಳು ಅಧಿಕ ಸಂಖ್ಯೆಯಲ್ಲಿ ಇರುವುದನ್ನು ಗಮನಿಸಿದ ವಿದ್ವಾಂಸರು ಇದನ್ನು ಬಾಲ್ಟೋಸ್ಲಾವಿಕ್ ಅಥವಾ ಸ್ಲಾವೊನಿಕ್ ಭಾಷಾವರ್ಗಕ್ಕೆ ಸೇರಿಸುವುದೂ ಉಂಟು. ಹೀಗಾಗಿ ಕೆಲವರು ಇದನ್ನು ಇಂಡೋಜಮ್ರ್ಯಾನಿಕ್ ಭಾಷಾ ವರ್ಗಕ್ಕೆ ಸೇರಿಸಿದರೆ ಮತ್ತೆ ಕೆಲವರು ಪಶ್ಚಿಮೀ ಸ್ಲಾವೊನಿಕ್ ಭಾಷಾವರ್ಗಕ್ಕೆ ಸೇರಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಅಭಿಪ್ರಾಯ ಏನೇ ಇರಲಿ ಇದು ಇಂಡೋಯೂರೋಪಿಯನ್ ಭಾಷಾ ಪರಿವಾರಕ್ಕೆ ಸಂಬಂಧಿಸಿದುದು ಎಂಬುದರಲ್ಲಿ ಅನುಮಾನವಿಲ್ಲ. ಲ್ಯಾಟಿನ್ ಗ್ರೀಕ್ ಫ್ರೆಂಚ್ ಮುಂತಾದ ಭಾಷೆಗಳ ಪ್ರಭಾವ ಇದರ ಮೇಲೆ ಆಗಿದ್ದರೂ ಅವುಗಳಲ್ಲಿನ ಭಾಷಿಕ ಅಂಶಗಳು ಈ ಭಾಷೆಯಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ, ರಷ್ಯನ್ ಜರ್ಮನ್ ಉಕ್ರೇನಿಯನ್ ಬಲ್ಗೇರಿಯನ್ ಇಂಗ್ಲಿಷ್ ಇಟಾಲಿಯನ್ ಭಾಷೆಗಳ ಬೇರೆ ಬೇರೆ ಭಾಷಿಕ ಅಂಶಗಳು ಕಂಡುಬರುತ್ತವೆ.
ಪೋಲಿಷ್ ಸಾಹಿತ್ಯ ಕೂಡ ಬಹಳ ಪ್ರಾಚೀನವಾದುದು. ಸುಮಾರು ಹತ್ತನೆಯ ಶತಮಾನದ ಹೊತ್ತಿಗಾಗಲೇ ಇದರಲ್ಲಿ ಸಾಹಿತ್ಯ ನಿಮಾಣಗೊಂಡಿತ್ತೆನ್ನಲು ಆಧಾರಗಳಿವೆ. ಈ ಭಾಷೆಯ ಪ್ರಾಚೀನ ರೂಪ ಸುಮಾರು ಹತ್ತನೆಯ ಶತಮಾನಕ್ಕೂ ಹಿಂದೆ ಪ್ರಚಾರದಲ್ಲಿದ್ದ ಅದಲ್ಬರ್ಟನ ಒಂದು ಧಾರ್ಮಿಕ ಗ್ರಂಥದಲ್ಲಿ ದೊರೆಯುತ್ತದೆ. ಇದೇ ಅತ್ಯಂತ ಪ್ರಾಚೀನ ರೂಪವಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಇನ್ನು ಕೆಲವರು ಅದಕ್ಕೂ ಹಿಂದೆ ಇದ್ದಿರಬಹುದಾದ ಭಾಷೆಯನ್ನು ಹಳೆಯ ಪೋಲಿಷ್ ಭಾಷೆ ಎಂದು ಹೆಸರಿಸಿದ್ದಾರೆ. ಹತ್ತನೆಯ ಶತಮಾನದಿಂದ ಹದಿನೈದನೆಯ ಶತಮಾನದ ನಡುವಿನ ಕಾಲದಲ್ಲಿ ರಚನೆಗೊಂಡ ಸಾಹಿತ್ಯಿಕ ಭಾಷೆಯನ್ನು ಹಳೆಯ ಪೋಲಿಷ್ ಭಾಷೆಯೆಂದೂ, ಹದಿನಾರನೆಯ ಶತಮಾನದಿಂದ ಈಚಿನ ಗ್ರಂಥಗಳ ಭಾಷೆಯನ್ನು ಆಧುನಿಕ ಪೋಲಿಷ್ ಎಂದು ಕರೆದಿದ್ದಾರೆ.
ಪೋಲಿಷ್ ಭಾಷೆ ಜರ್ಮನಿ ರಷ್ಯ ಮುಂತಾದ ಬೇರೆ ಬೇರೆ ದೇಶಗಳಲ್ಲಿ ಹರಡಿಕೊಂಡಾಗ ಪ್ರಾಂತಭೇದಗಳುಂಟಾದವು. ಹೀಗೆ ವಿಕಾಸಗೊಂಡು ಹೊರಬಂದ ರೂಪಗಳಲ್ಲಿ ಪೊಲಾಬಿಷ್ ಎಂಬ ಭಾಷಾರೂಪವೆಂದು ಜರ್ಮನಿಯಲ್ಲಿ ಪ್ರಚಾರದಲ್ಲಿದೆ. ಪೊಲಾಬಿಶ್ ಉಪಭಾಷೆಯ ಜೊತೆಗೆ ಕ್ಯೂಬಿಯನ್, ಪೋಲಿಷ್ ಮೆಜೋವಿಯನ್ ಮುಂತಾದ ಉಪಭಾಷೆಗಳೂ ಮುಖ್ಯವಾಗಿವೆ. ಪೋಲೆಂಡ್ನಲ್ಲಿ ದೊರೆಯುವ ಸಾಹಿತ್ಯಕ ಪೋಲಿಷ್ ಭಾಷೆಯನ್ನು ಮಾತ್ರ ಶಿಷ್ಟ ಪೋಲಿಷ್ ಭಾಷೆ ಎಂದು ಕೆಲವರು ಕರೆದರೆ ಮತ್ತೆ ಕೆಲವರು ಜರ್ಮನಿ ರಷ್ಯಗಳಲ್ಲಿ ದೊರೆಯುವ ಭಾಷೆಯನ್ನು ಶಿಷ್ಟ ಪೋಲಿಷ್ ಎಂದು ಕರೆದಿದ್ದಾರೆ. ಸಾಹಿತ್ಯಿಕ ಪೋಲಿಷ್ ಭಾಷೆಯ ಶಿಷ್ಟತೆಯನ್ನು ಆಧರಿಸಿ ಪರಿನಿಷ್ಟಿತ ಪೋಲಿಸ್ ಭಾಷೆ ಎಂದೂ ಅದರ ಆಡುಮಾತಿನ ರೂಪಗಳನ್ನು ಅಪರಿನಿಷ್ಚಿತ ಪೋಲಿಷ್ ಭಾಷೆ ಎಂದೂ ಎರಡು ರೀತಿಯಲ್ಲಿ ವರ್ಗೀಕರಿಸಿಕೊಂಡಿದ್ದಾರೆ. ಶಿಷ್ಟಭಾಷೆಯ ಜೊತೆಗೆ ಬೇರೆ ಬೇರೆ ಗ್ರಾಮ್ಯ ರೂಪಗಳೂ ದೊರೆಯುತ್ತವೆ. ಪೋಲಿಷ್ ಭಾಷೆಯಲ್ಲಿ ಅನೇಕ ರೀತಿಯ ಒಳಪ್ರಭೇದಗಳು ಇವೆ. ಅವುಗಳಲ್ಲಿ ಲ್ಯಾಟಿನ್ ಗ್ರೀಕ್ ಫ್ರೆಂಚ್ ಜರ್ಮನ್ ಮುಂತಾದ ಭಾಷೆಗಳ ಪ್ರಭಾವದಿಂದ ಉಂಟಾದ ಭಾಷಾ ರೂಪಗಳು ಒಂದು ರೀತಿಯದಾದರೆ ರಷ್ಯನ್ ಬಲ್ಗೇರಿಯನ್ ಜೆಕ್ ಮತ್ತು ಉಕ್ರೇನಿಯನ್ ಭಾಷೆಗಳ ಪ್ರಭಾವದಿಂದ ಉಂಟಾದ ಭಾಷಾರೂಪಗಳು ಮತ್ತೊಂದು ರೀತಿಯವು.
ಪೋಲಿಷ್ ಭಾಷೆ ಮುಖ್ಯವಾಗಿ ಯೋಗಾತ್ಮಕ ಭಾಷಾವರ್ಗಕ್ಕೆ ಸೇರಿದ್ದು. ಇಲ್ಲಿ ಪದರಚನೆಗೆ ಬೇರೆ ಬೇರೆ ಪ್ರತ್ಯಯಗಳನ್ನು ಹಚ್ಚಲಾಗುವುದು. ಆದ ಕಾರಣ ಇದು ಪ್ರತ್ಯಯ ಪ್ರಧಾನ ಭಾಷೆ ಹಳೆಯ ಪೋಲಿಷ್ ಭಾಷೆಯಲ್ಲಿ ಇದು ಸ್ಪಷ್ಟವಾಗಿ ಕಂಡುಬಂದರೆ ಆಧುನಿಕ ಪೋಲಿಷ್ ಭಾಷೆಯಲ್ಲಿ ಇದು ಯೋಗಾತ್ಮಕ ಅವಸ್ಥೆಯ ಕಡೆ ಹರಿಯುತ್ತಿರುವುದು ಗೋಚರಿಸುತ್ತದೆ. ಧಾತು ರೂಪ ನಾಮಧಾತುವಾಗಿರಲಿ ಕ್ರಿಯಾಧಾತುವಾಗಿರಲಿ ಯಾವಾಗಲೂ ಏಕವರ್ಣದ್ದಾಗಿರುವುದೇ ಹೆಚ್ಚು. ಇಂಥ ಏಕವರ್ಣ ಧಾತುಗಳಿಗೆ ಬೇರೆ ಬೇರೆ ಪ್ರತ್ಯಯಗಳನ್ನು ಹಚ್ಚಲಾಗುವುದು. ಸಂಸ್ಕøತ ಭಾಷೆಯಂತೆ ಒಂದೇ ಒಂದು ಧಾತುವಿಗೆ ಬೇರೆ ಬೇರೆ ಪ್ರತ್ಯಗಳನ್ನು ಹಚ್ಚಬಹುದಾದ ಸಾಧ್ಯತೆಗಳಿವೆ. ಈ ಪ್ರತ್ಯಯಗಳಲ್ಲಿ ಕೆಲವು ಪ್ರಧಾನ ಪ್ರತ್ಯಯ (ಕೃತ್ ಪ್ರತ್ಯಯ) ಆಗಿದ್ದರೆ ಮತ್ತೆ ಕೆಲವು ಗೌಣ ಪ್ರತ್ಯಯ (ತದ್ಧಿತ ಪ್ರತ್ಯಯ) ಆಗಿರುತ್ತವೆ. ಮತ್ತೊಂದು ವಿಶೇಷತೆ ಎಂದರೆ ಮೂಲಧಾತು ರೂಪ ಮತ್ತು ಪ್ರತ್ಯಯ ಎರಡರಲ್ಲಿಯೂ ಸ್ವರ ಪರಿವರ್ತನೆ ಕಂಡುಬರುವುದು. ಹಾಗೆಯೆ ಉಚ್ಚಾರದಲ್ಲಿ ಪದಗಲ ಎರಡನೆಯ ಅಕ್ಷರ ಯಾವಾಗಲೂ ಬಲಾಘಾತಾತ್ಮಕವಾಗಿಯೇ ಇರುವುದು. ಬಲಾಘಾತ ಉಚ್ಚಾರದಲ್ಲಿ ಪದದ ಎರಡನೆಯ ಸ್ವರದ ಮೇಲೆಯೇ ಬೀಳುವುದು ರೂಢಿ. ಇದನ್ನು ಕೆಲವರು ನಿಶ್ಚಿತ ಬಲಾಘಾತ ಎನ್ನುತ್ತಾರೆ. ದ್ರಾವಿಡ ಭಾಷೆಗಳಂತೆಯೇ ಪೋಲಿಷ್ನಲ್ಲೂ ತಾಲವ್ಯೀಕರಣ ಉಂಟು. ಕೆಲವು ಸ್ವರ ಹಾಗೂ ವ್ಯಂಜನಗಳು ಎರಡರಲ್ಲಿಯೂ ಈ ಬಗೆಯ ತಾಲವ್ಯೀಕರಣ ಕಾಣಿಸಿಕೊಳ್ಳಬಹುದು. ಮತ್ತೊಂದು ವಿಶೇಷವೆಂದರೆ ಲ್ ಕಾರದ ಮುಂದೆ ಬರುವ ದಂತ್ಯ ಸ್ಪರ್ಶ ವ್ಯಂಜನ ಯಾವಾಗಲೂ ಯಾವ ರೀತಿಯಲ್ಲಿಯೂ ಪರಿವರ್ತನೆಗೊಳ್ಳದೆ ಹಾಗೆಯೇ ಉಳಿಯುವುದು. ಭಾಷೆಯಲ್ಲಿ ಅನುನಾಸಿಕ ಸ್ವರಗಳು ಅಧಿಕ. ಅಲ್ಲದೆ, ಲ್ಯಾಟಿನ್ ಗ್ರೀಕ್ ಮುಂತಾದ ಭಾಷೆಗಳಂತೆ ಸ್ವರ ಮತ್ತು ವ್ಯಂಜನ ಪರಿವರ್ತನೆಗಳಲ್ಲಿ ಕ್ರಮಬದ್ಧತೆ ಹಾಗೂ ನಿಶ್ಚಿತತೆ ಹೆಚ್ಚು. ಧ್ವನಿಮಾಪದ ಹಾಗೂ ವಾಕ್ಯ ವ್ಯವಸ್ಥೆ ಹೆಚ್ಚಾಗಿ ಚೆಕ್ ಭಾಷೆಯಂತೆಯ. ಅಲ್ಲದೆ, ಇದರ ವ್ಯಾಕರಣ ವಿಚಾರಗಳು ರಷ್ಯನ್ ಮತ್ತು ಬಲ್ಗೇರಿಯನ್ ಭಾಷೆಗಳ ವ್ಯಾಕರಣವನ್ನೇ ಹೋಲುತ್ತವೆ. (ಕೆ.ಕೆ.ಜಿ.)