ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜನನ

ವಿಕಿಸೋರ್ಸ್ದಿಂದ

ಪ್ರಜನನ - ಜೀವಿಗಳ ಪ್ರಾಥಮಿಕ ಗುಣಧರ್ಮ (ರಿಪ್ರೊಡಕ್ಷನ್). ಪ್ರಜನನದಿಂದಲೇ ಪ್ರಾಣಿವರ್ಗ, ಸಸ್ಯವರ್ಗ ಹಾಗೂ ಇತರ ಜೀವಾಣುಗಳು ಹಾಗೂ ಅವುಗಳ ಸಂಕೇತಗಳು ಭೂಮಿಯ ಮೇಲೆ ಇನ್ನೂ ಅಸ್ತಿತ್ವದಲ್ಲಿರುವುವಾಗಿದೆ. ಜೀವಿಗಳು ನಿರ್ಜೀವಿಗಳಿಗಿಂತ ಭಿನ್ನವಾಗಿರುವುದಕ್ಕೆ ಪ್ರಜನನ ಕೂಡ ಒಂದು ಕಾರಣ. ನಿರ್ಜೀವಿಗಳಲ್ಲಿ ಪ್ರಜನನ ಕ್ರಿಯೆ ಇಲ್ಲ. ಒಂದು ನಿರ್ಜೀವ ವಸ್ತು ಸಿಡಿದು ಅಥವಾ ಇಬ್ಭಾಗವಾಗಿ ಸಂಖ್ಯೆಯಲ್ಲಿ ವೃದ್ಧಿಯಾಗುವ ಸಾಧ್ಯತೆ ಇರುವುದಾದರೂ ಇದನ್ನು ಪ್ರಜನನ ಎನ್ನಲಾಗದು. ಪ್ರಜನನ ಕ್ರಿಯೆಯಿಂದ ಉದ್ಭವವಾಗುವ ಸಂತಾನಗಳು ಜನಿಸುವಾಗ ಚಿಕ್ಕವಾಗಿದ್ದರೂ ಮುಂದೆ ಒಂದೊಂದೇ ಪ್ರಬುದ್ಧ ಜೀವಿಯಾಗಿ ಪಿತೃಗಳ ಆಕಾರವನ್ನೇ ತಳೆಯುತ್ತದೆ. ನಿರ್ಜೀವ ವಸ್ತು ಇಬ್ಭಾಗವಾದರೆ ಯಾವ ಕಾರಣಕ್ಕೂ ಗಾತ್ರದಲ್ಲಿ ಆಕಾರದಲ್ಲಿ ಪಿತೃಗಳನ್ನು ಹೋಲುವುದಿಲ್ಲ.

ಪ್ರಸಕ್ತ ಲೇಖನವನ್ನು ಮೂರು ವಿಭಾಗಗಳಲ್ಲಿ ಚಿತ್ರಿಸಿದೆ : ಪ್ರಾಣಿಗಳಲ್ಲಿ, ಮನುಷ್ಯರಲ್ಲಿ, ಸಸ್ಯಗಳಲ್ಲಿ,

ಪ್ರಾಣಿಗಳಲ್ಲಿ

ವೈರಸ್ಸು, ಬ್ಯಾಕ್ಟೀರಿಯ ಮತ್ತು ಏಕಕಣಜೀವಿಗಳಲ್ಲಿ ಬೆಳವಣಿಗೆ ಎಂದರೆ ಕೇವಲ ಕೋಶಗಳ ಬೆಳವಣಿಗೆ. ಕೋಶಗಳು ಬೆಳೆದ ಅನಂತರ ವಿಭಾಗವಾಗುವುವು. ಇಂಥ ಜೀವಿಗಳಲ್ಲಿ ಕೋಶವಿಭಜನೆಯೇ ಪ್ರಜನನ. ಈ ಪ್ರಾಣಿಗಳ ವಿಭಜನೆಯಲ್ಲಿ ವಿವಿಧ ಬಗೆಗಳಿವೆಯಾಗಿ ಪ್ರಜನನ ಇನ್ನೂ ಗರಿಷ್ಠತೆಯನ್ನು ತಲುಪಿರುವುದುಂಟು. ಕೆಲವು ಏಕಕಣ ಜೀವಿಗಳಂತೂ ಬಹುಕಣ ಜೀವಿಗಳಷ್ಟೇ ಜಟಿಲವಾದ ಜೀವನಚಕ್ರವನ್ನು ಪಡೆದಿವೆ. ಇಂಥ ಜೀವಿಗಳಲ್ಲಿ ಜೀವನಚಕ್ರದ ಮಧ್ಯೆ ಲಾರ್ವೆ ಅಥವಾ ಡಿಂಬ ಎಂಬ ಹಂತ ಇರುತ್ತದೆ. ಲಾರ್ವ ಪ್ರಬುದ್ಧ ಜೀವಿಗಿಂತ ಸಂಪೂರ್ಣ ಭಿನ್ನವಾಗಿದ್ದು ರೂಪಾಂತರಗೊಂಡ ಅನಂತರ ಪ್ರಬುದ್ಧ ಅವಸ್ಥೆಯನ್ನು ತಲುಪುತ್ತದೆ. ಸಾಮಾನ್ಯ ಜೀವನಚಕ್ರವನ್ನು ಹೊಂದಿರುವ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳಿವೆ. ಇವು ನಿರ್ದಿಷ್ಟ ವಯೋಮಾನವನ್ನು ತಲುಪಿದಾಗ ಪ್ರಬುದ್ಧವಾಗುತ್ತವೆ. ಹೀಗೆ ಪ್ರಬುದ್ಧತೆಯನ್ನು ಪಡೆದಾಗ ಮಾತ್ರ ಇವು ಪ್ರಜನನವನ್ನು ಆರಂಭಿಸಬಲ್ಲವು. ಈ ಹೊತ್ತಿಗೆ ಇವುಗಳ ಪ್ರಜನನಾಂಗಗಳು ಸಂಪೂರ್ಣ ವೃದ್ಧಿಯಾಗಿರುವುವು. ಕೆಲವು ತೆರನ ಪ್ರಾಣಿಗಳಲ್ಲಿ ಲಿಂಗಭೇದವುಂಟು ಅಂದರೆ ಯಾವುದೇ ಪ್ರಾಣಿ ಗಂಡಾಗಿರಬಹುದು ಇಲ್ಲವೇ ಹೆಣ್ಣಾಗಿರಬಹುದು. ಇವಕ್ಕೆ ಏಕಲಿಂಗಗಳೆಂದು ಹೆಸರು (ಯೂನಿಸೆಕ್ಸುಯಲ್). ಇನ್ನು ಕೆಲವು ಪ್ರಾಣಿಗಳಲ್ಲಿ ಎರಡು ಲಿಂಗಗಳು ಒಂದೇ ಪ್ರಾಣಿಯಲ್ಲೇ ಇರುತ್ತವೆ. ಇವು ದ್ವಿಲಿಂಗಿಗಳು (ಬೈಸೆಕ್ಸುಯಲ್). ಈ ಎರಡೂ ಗುಂಪುಗಳಲ್ಲಿ ಪ್ರಜನನಾಂಗಗಳ ಮುಖ್ಯ ಭಾಗ ವೃಷಣ ಮತ್ತು ಅಂಡಾಶಯ. ಇವೇ ಪ್ರಜನನ ಗ್ರಂಥಿಗಳು. ಪ್ರಜನನ ಗ್ರಂಥಿಗಳಿಂದ ಲಿಂಗಾಣುಗಳು ಅಂದರೆ ವೃಷಣದಿಂದ ವೀರ್ಯಾಣು ಅಥವಾ ಶುಕ್ರಾಣು, ಮತ್ತು ಅಂಡಾಶಯದಿಂದ ಅಂಡಾಣುಗಳು ಉತ್ಪತ್ತಿಯಾಗುತ್ತವೆ. ವೀರ್ಯಾಣು ಮತ್ತು ಅಂಡಾಣುಗಳ ಮೂಲಕ ಪಿತೃಗಳಿಂದ ಅವುಗಳ ಸಂತಾನಕ್ಕೆ ಅನುವಂಶೀಯ ಗುಣಗಳು ಸಾಗಿಸಲ್ಪಡುತ್ತವೆ. ವೀರ್ಯಾಣು ಮತ್ತು ಅಂಡಾಣುಗಳು ಸಂಯೋಗಹೊಂದಿ (ನಿಷೇಚಿತಗೊಂಡು) ಯುಗ್ಮಜ (ಜೈಗೋಟ್) ಉದ್ಭವಿಸುತ್ತದೆ. ಇದು ಮುಂದೆ ವೇಗವಾಗಿ ಹಲವು ಮಾರ್ಪಾಡುಗಳನ್ನು ಹೊಂದುತ್ತ ಹೋಗುತ್ತದೆ. ಅಂತೆಯೇ ಹಲವಾರು ಸಲ ವಿಭಾಗವಾಗಿ ಕೊನೆಗೆ ಕೋಶಗಳು ಟೊಳ್ಳು ಚೆಂಡಿನಂತಾಗುತ್ತವೆ. ಈ ಹಂತಕ್ಕೆ ಬ್ಲಾಸ್ಟುಲ ಎಂದು ಹೆಸರು. ಈ ಬೆಳವಣಿಗೆ ತಾಯಿಯ ಗರ್ಭಾಶಯದಲ್ಲೊ ತಾಯಿಯ ಶರೀರದ ಹೊರಗೊ ನಡೆಯಬಹುದು. ಮೊದಲನೆಯ ವಿಧಾನದಲ್ಲಿ ಬ್ಲಾಸ್ಟುಲ ಗರ್ಭಾಶಯಕ್ಕೆ (ಯೂಟೆರಸ್) ಬರುತ್ತದೆ. ಮುಂದಿನ ಬೆಳವಣಿಗೆ ಗರ್ಭಾಶಯದಲ್ಲಿ ನಡೆಯುತ್ತದೆ. ಈ ಹಂತಕ್ಕೆ ಸ್ತನಿಗಳಲ್ಲಿ ಗರ್ಭಧಾರಣೆ (ಇಂಪ್ಲಾಂಟೇಷನ್) ಎಂದು ಹೆಸರು. ಮುಂದಿನ ಹಂತ ಗ್ಯಾಸ್ಟ್ರುಲೀಕರಣ, ಈ ಹಂತದಲ್ಲೇ ಒಂದು ಪದರದ ಬ್ಲಾಸ್ಟುಲ ಎರಡು ಪದರಗಳುಳ್ಳ ಕೋಶಗಳ ಒಂದು ಚೆಂಡಿನಂತಾಗುತ್ತದೆ. ಮುಂದೆ ಮೂರು ಪದರಗಳು ರೂಪುಗೊಳ್ಳುವುವು. ಈ ಹಂತದೊಡನೆ ಗ್ಯಾಸ್ಟ್ರುಲೀಕರಣ ಮುಕ್ತಾಯವಾಗುತ್ತದೆ. ಇದಾದ ಅನಂತರ ವಿವಿಧ ಅಂಗಾಂಶಗಳು ಪ್ರಜೀವಿ (ಪ್ರಿಮಿಟಿವ್) ಅಂಗಗಳೂ ಅಂಗವ್ಯೂಹಗಳೂ ರೂಪುಗೊಳ್ಳುವುವು. ಸಂಪೂರ್ಣ ಬೆಳವಣಿಗೆ ಹೊಂದಿದ ತರುವಾಯ ಮರಿಮೊಟ್ಟೆಯಿಂದ ಅಥವಾ ತಾಯಿಯ ಗರ್ಭದಿಂದ ಹೊರಬೀಳುತ್ತದೆ. ರೂಪಾಂತರವನ್ನು ತೋರುವ ಪ್ರಾಣಿಗಳಲ್ಲಿ ಪಿತೃಗಳಿಗಿಂತ ಸಂಪೂರ್ಣ ಬೇರೆಯಾಗಿರುವ ಲಾರ್ವ ಹೊರಬರುತ್ತದೆ. ಮೊಟ್ಟೆಯಿಡುವ ಪ್ರಾಣಿಗಳಲ್ಲಿ ಈ ಎಲ್ಲ ಬೆಳೆವಣಿಗೆ ಮೊಟ್ಟೆಯ ಕವಚಗಳ ಒಳಭಾಗದಲ್ಲಿಯೇ ನಡೆದು ಮರಿ ಹೊರಬರುತ್ತದೆ. ನೇರವಾಗಿ ಮರಿ ಹಾಕುವ ಪ್ರಾಣಿಗಳಲ್ಲಿ ಪ್ರಸವವಾಗುತ್ತದೆ. ಮುಂದೆ ಈ ಮರಿ ಬಾಲ್ಯ, ತಾರುಣ್ಯ, ಪ್ರಬುದ್ಧಾವಸ್ಥೆ ಹಾಗೂ ಮುಪ್ಪು ಇವೆಲ್ಲ ಹಂತಗಳನ್ನು ಪೂರೈಸಿ ಸಾವಿಗೀಡಾಗುತ್ತದೆ. ಆದರೆ, ಈ ಮಧ್ಯೆ ಪ್ರಜನನ ಕ್ರಿಯೆಯಿಂದ ಈ ಪ್ರಾಣಿ ತನ್ನ ಅನೇಕ ನಕಲುಗಳನ್ನು ಭೂಮಿಯ ಮೇಲೆ ಬಿಟ್ಟು ಹೋಗಿರುತ್ತದೆ. ಪ್ರೋಟೊಥೀರಿಯ ಗುಂಪನ್ನುಳಿದ ಎಲ್ಲ ಸ್ತನಿಗಳು, ಮಾನವ ಹಾಗೂ ಇನ್ನೂ ಕೆಲವು ಪ್ರಾಣಿಗಳಲ್ಲಿ ನಿಷೇಚಿತ ಮೊಟ್ಟೆ ಹಾಗೂ ಮರಿಗಳು ಸಂಪೂರ್ಣವಾಗಿ ಬೆಳೆಯುವವರೆಗೂ ತಾಯ ಗರ್ಭದಲ್ಲಿಯೇ ಇರುತ್ತವೆ. ಭ್ರೂಣಾವಸ್ಥೆಯ ಮರಿಗಳಿಗೆ ತಾಯಿಯ ದೇಹದಿಂದಲೇ ಆಹಾರ ಮತ್ತು ಆಕ್ಸಿಜನ್ ಇತ್ಯಾದಿಗಳ ಪೂರೈಕೆಯಾಗುತ್ತದೆ. ಬಾಹ್ಯ ಭ್ರೂಣಪೊರೆ (ಎಕ್ಸ್‍ಟ್ರಾ ಎಂಬ್ರಿಯಾನಿಕ್ ಮೆಂಬ್ರೇನ್) ಅಥವಾ ಮತ್ತು ಜರಾಯುಗಳು (ಪ್ಲಸೆಂಟ) ಇದ್ದು ಇವು ಆಹಾರ ಪೂರೈಕೆ ಮಾಡುವುದರೊಂದಿಗೆ ಭ್ರೂಣಕ್ಕೆ ಹೊರ ಒತ್ತಡಗಳಿಂದ ಸಂರಕ್ಷಣೆಯನ್ನು ನೀಡುತ್ತವೆ. ಜರಾಯುಗಳು ಕೆಲವು ಬಗೆಯ ಹಾರ್ಮೋನನ್ನೂ ಸಂಶ್ಲೇಷಿಸುತ್ತವೆ.

ತಾಯಿಯ ಗರ್ಭದಿಂದ ಮರಿ ಹೊರಬಂದ ನಂತರವೂ ಕೆಲವು ಪ್ರಭೇದಗಳಲ್ಲಿ ಪಿತೃಗಳಿಂದ ಪೋಷಣೆ ನಡೆಯುತ್ತದೆ. ಇದಕ್ಕಾಗಿ ಕೆಲವು ಪ್ರಾಣಿಗಳಲ್ಲಿ ಸಂತಾನ ಸಂಚಿಗಳು (ಬ್ರೂಡ್ ಪೌಚಸ್) ರಚಿತವಾಗಿರುವುದುಂಟು. ಕೆಲವು ಮೀನುಗಳಲ್ಲಿ (ಉದಾ : ಕಡಲ ಕುದುರೆ), ಕಠಿಣ ಚರ್ಮಿಗಳಲ್ಲಿ, ಕಂಟಕ ಚರ್ಮಿಗಳಲ್ಲಿ ಹಾಗೂ ಮಾಸ್ರ್ಯೂಪಿಯೇಲಿಯಗಳಲ್ಲಿ ಇಂಥ ಸಂತಾನ ಸಂಚಿಗಳು ಸರ್ವೇಸಾಮಾನ್ಯ. ಕೆಲವು ಪ್ರಾಣಿಗಳಲ್ಲಿ ಪಿತೃ ರಕ್ಷಣಾಕ್ರಿಯೆ ಬಹಳ ವಿಸ್ತಾರವಾಗಿದ್ದು ಇಲ್ಲಿ ಮೊಲೆ ಕುಡಿಸುವುದು, ಗುಂಪು ಜೀವನ ಮುಂತಾದ ಚಟುವಟಿಕೆಗಳನ್ನೂ ಕಾಣಬಹುದು. ಮರಿ ಸಂಪೂರ್ಣ ಸ್ವತಂತ್ರ ಜೀವನ ನಡೆಸಲು ಸಿದ್ಧವಾಗುವ ತನಕ ಈ ರಕ್ಷಣೆ ಮುಂದುವರಿಯುತ್ತದೆ. ಮೊಟ್ಟೆ ಇಡುವ ಪ್ರಾಣಿಗಳಲ್ಲಿ ಮೊಟ್ಟೆಗಳ ರಕ್ಷಣೆ ಗೂಡುಗಳನ್ನು ಕಟ್ಟುವುದರ ಮೂಲಕ ನಡೆಯುವುದು.

ಅಕಶೇರುಕಗಳ ಹಲವು ಪ್ರಭೇಧಗಳಲ್ಲಿ ಅದರಲ್ಲಿಯೂ ಕೆಳಹಂತದ ಅಕಶೇರುಕಗಳಲ್ಲಿ ಸಾಮಾನ್ಯ ಜೀವನಚಕ್ರದ ಮಧ್ಯೆ ನಿರ್ಲಿಂಗ ಪ್ರಜನನ ಸೇರಿಕೊಂಡಿರುತ್ತದೆ. ಕೆಲವು ಏಕ ಕೋಶ ಜೀವಿಗಳಲ್ಲಿ, ಸ್ಪಂಜು ಪ್ರಾಣಿಗಳಲ್ಲಿ, ಕುಟುಕು ಕಣವಂತಗಳಲ್ಲಿ ಸಂಖ್ಯಾಭಿವೃದ್ಧಿಗೆ ನಿರ್ಲಿಂಗ ಪ್ರಜನನದ್ದೇ ಮುಖ್ಯ ಪಾತ್ರ. ಲೈಂಗಿಕ ಪ್ರಜನನದಿಂದ ಈ ಪ್ರಾಣಿಗಳ ಸಂಖ್ಯೆ ವೃದ್ಧಿಸುವುದಿಲ್ಲ. ಇದು ವೈವಿಧ್ಯವನ್ನು ಉಂಟುಮಾಡಲು ಮಾತ್ರ ಸಹಾಯಕವಾಗಿದೆ. ಕೆಲವು ಪ್ರಭೇದಗಳಲ್ಲಿ ನಿರ್ಲಿಂಗ ಪ್ರಜನನ ಮತ್ತು ಲೈಂಗಿಕ ಪ್ರಜನನ ಎರಡೂ ಇದ್ದು ಒಂದು ಪೀಳಿಗೆ ಲಿಂಗರೀತಿಯಲ್ಲೂ ಇನ್ನೊಂದು ಪೀಳಿಗೆ ನಿರ್ಲಿಂಗ ರೀತಿಯಲ್ಲೂ ಪ್ರಜನನವನ್ನು ನಡೆಸುವುವು. ಹೀಗೆ ಪೀಳಿಗೆಗಳ ಪರ್ಯಾಯ (ಆಲ್ಟರ್ನೇಷನ್ ಆಫ್ ಜನರೇಷನ್ಸ್) ಪ್ರಾಣಿಗಳಲ್ಲಿ ಸರ್ವೇಸಾಮಾನ್ಯ. ಸಸ್ಯಗಳಲ್ಲಂತೂ ಪೀಳಿಗೆಗಳ ಪರ್ಯಾಯ ಬಹುಮುಖ್ಯವಾದ್ದು.

ಅಕಶೇರುಕಗಳ ಎಲ್ಲ ಗುಂಪುಗಳಲ್ಲಿ, ಕಶೇರುಕಗಳ ಕೆಲಹಂತದ ಗುಂಪುಗಳಲ್ಲಿ ಹಾಗೂ ದ್ವಿಚರಿಗಳಲ್ಲಿ ಲಾರ್ವ ಹಂತ ಒಂದು ಮಹತ್ತ್ವದ ಹಂತ. ಮೊಟ್ಟೆ ಮತ್ತು ಪ್ರಬುದ್ಧ ಜೀವಿಯ ಮಧ್ಯೆ ಇರುವ ಮತ್ತು ಸ್ವತಂತ್ರ ಜೀವನ ನಡೆಸುವ ಹಂತಕ್ಕೆ ಲಾರ್ವ ಹಂತ ಎಂದು ಹೆಸರು. ಲಾರ್ವ ಹಂತವನ್ನು ಪ್ರದರ್ಶಿಸುವ ಪ್ರಾಣಿಗಳಲ್ಲಿ ಮರಿಗಳಿಗೆ ಪಿತೃಗಳಿಂದ ದೊರೆಯುವ ರಕ್ಷಣೆ ಅತಿ ಕಡಿಮೆ, ರಕ್ಷಣೆ ದೊರೆಯುವದೇ ಇಲ್ಲ ಎಂದರೂ ತಪ್ಪಾಗದು. ಈ ಪ್ರಾಣಗಳು ಅಸಂಖ್ಯಾತ ಯುಗ್ಮಜಗಳನ್ನು ಉತ್ಪತ್ತಿ ಮಾಡಿ ಅವನ್ನು ಪರಿಸರಕ್ಕೆ ಬಿಡುತ್ತವೆ. ಇವು ಲಾರ್ವಗಳಾಗಿ ರೂಪುಗೊಂಡು ಸಾಕಷ್ಟು ತಿಂದು ಬೆಳೆದು ಅನಂತರ ಪ್ರಬುದ್ಧಾವಸ್ಥೆಗೆ ರೂಪಾಂತರಗೊಳ್ಳುವುವು. ಸಾಮಾನ್ಯವಾಗಿ ಲಾರ್ವಗಳು ಜಲಚರ ಜೀವಿಗಳಲ್ಲಿ ಕಂಡುಬರುವುದಾದರೂ ಭೂಚರಿಕೀಟಗಳಲ್ಲೂ ಇವು ಉಂಟು. ಕೆಲವು ಭೂಚರ ಪ್ರಭೇದಗಳ ಲಾರ್ವಗಳು ಜಲಚರಿಗಳಾಗಿರುತ್ತವೆ. ಸಂಧಿಪದಿಗಳ ದೇಹದ ಸುತ್ತ ಗಟ್ಟಿಯಾದ ಹೊರಕವಚ ಅಥವಾ ಬಾಹ್ಯ ಕಂಕಾಲ ಇದೆ. ಇದು ಕಳಚಿಬಿದ್ದು ಮುಂದಿನ ಬೆಳವಣಿಗೆಗೆ ಅವಕಾಶವನ್ನು ಉಂಟುಮಾಡಿಕೊಡುತ್ತದೆ. ಲಾರ್ವದ ಪ್ರತಿ ಹಂತದ ಮಧ್ಯೆ ಒಂದು ಪೊರೆಯುರ್ಚು (ಮೋಲ್ಟಿಂಗ್) ಉಂಟು. ಕೀಟಗಳು ಈ ದಿಸೆಯಲ್ಲಿ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿವೆ. ಚಟುವಟಿಕೆಯಿಂದ ಕೂಡಿದ ಲಾರ್ವಗಳು ಮೊಟ್ಟೆಯಿಂದ ಹೊರಬಂದು ಅನಂತರ ಜಡ ಪ್ಯೂಪ ಹಾಗೂ ರೆಕ್ಕೆಗಳನ್ನೂ ಹಾರಾಡುವ ಸಾಮಥ್ರ್ಯವನ್ನೂ ಪಡೆದಿರುವ ಪ್ರಬುದ್ಧ ಕೀಟಗಳು ರೂಪುಗೊಳ್ಳುವುವು.

ಪರತಂತ್ರ ಜೀವನ ನಡೆಸುವ ಕೆಲವು ಚಪ್ಪಟೆಹುಳುಗಳಲ್ಲಿ ಹಲವಾರು ಲಾರ್ವ ಹಂತಗಳಿವೆ. ಪ್ರತಿ ಹಂತದಲ್ಲೂ ಲಾರ್ವಕ್ಕೆ ವಿಶಿಷ್ಟ ಆತಿಥೇಯ ಇದೆ. ಕೆಲವು ಲಾರ್ವಗಳಂತೂ ನಿರ್ಲಿಂಗ ರೀತಿಯಲ್ಲಿ ಮತ್ತೆ ಪುನರುತ್ಪತ್ತಿಯನ್ನು ಮಾಡಬಲ್ಲವು. ಈ ವಿದ್ಯಮಾನಕ್ಕೆ ಬಾಲ್ಯಪ್ರಜನನ (ಪೀಡೊಜೆನೆಸಿಸ್) ಎಂದು ಹೆಸರು. ಚಪ್ಪಟೆ ಹುಳುಗಳ ಕೆಲವು ಪ್ರಭೇದಗಳಲ್ಲಂತೂ ಬಾಲ್ಯ ಪ್ರಜನನಕ್ಕೆ ಪ್ರಬುದ್ಧ ಪ್ರಜನನದಷ್ಟೆ ಮಹತ್ತ್ವ ಉಂಟು. ಲಾರ್ವದ ಎಷ್ಟೆ ಹಂತಗಳಿರಲಿ ಜೀವನ ಚಕ್ರ ಮಾತ್ರ ಪ್ರಬುದ್ಧ ಜೀವಿಯಿಂದ ಮೊಟ್ಟೆ, ಮೊಟ್ಟೆಯಿಂದ ಲಾರ್ವ, ಲಾರ್ವದಿಂದ ಪ್ರಬುದ್ಧ ಜೀವಿ ಈ ಜಾಡಿನಲ್ಲಿಯೇ ನಡೆಯುತ್ತದೆ.

ಹಲವು ಪ್ರಾಣಿಗಳಲ್ಲಿ ಎರಡೂ ಲಿಂಗಗಳು ಒಂದೇ ಜೀವಿಯಲ್ಲಿರುತ್ತವೆ. ಇಂಥವು ದ್ವಿಲಿಂಗಿಗಳು. ಚಪ್ಪಟೆ ಹುಳುಗಳಲ್ಲಿ, ಮೃದ್ವಂಗಿಗಳಲ್ಲಿ ಹಾಗೂ ವಲಯವಂತಗಳಲ್ಲಿ (ಅನೆಲಿಡ) ದ್ವಿಲಿಂಗಗಳು ಸಾಮಾನ್ಯ. ಬೇರೆ ಗುಂಪುಗಳಲ್ಲೂ ದ್ವಿಲಿಂಗಗಳುಂಟು. ಕಶೇರುಕಗಳಲ್ಲಿ ದ್ವಿಲಿಂಗಗಳು ಕಡಿಮೆ ಸಂಖ್ಯೆಯಲ್ಲಿವೆಯಾದರೂ ಪ್ರತಿ ಪ್ರಾಣಿಯಲ್ಲಿ ನಿಷ್ಕ್ರಿಯ ಲಿಂಗಾಂಗಗಳು ಇದ್ದು, ಯಾವುದೇ ಲಿಂಗಾಂಗ ಯಾವುದೇ ಕಾರಣದಿಂದ ಅಪಭ್ರಷ್ಟಗೊಂಡರೆ ಇನ್ನೊಂದು ಲಿಂಗಾಂಗ ಪ್ರಬಲವಾಗಿ ಬೆಳೆದು ಆ ಜೀವಿಯ ಲಿಂಗಬದಲಾವಣೆಯಾಗುವ ಸಾಧ್ಯತೆ ಇದೆ. ಈಚಿನ ದಿನಗಳಲ್ಲಿ ಮಾನವನಲ್ಲಿ ಕೂಡ ಲಿಂಗ ಬದಲಾವಣೆಯಾದ ಅಥವಾ ಕೃತಕವಾಗಿ ಬದಲಾವಣೆ ಮಾಡಿಸಿಕೊಂಡ ಘಟನೆಗಳು ಸಾಕಷ್ಟಿವೆ. ದ್ವಿಲಿಂಗಿಗಳು ವೀರ್ಯಾಣು ಹಾಗೂ ಅಂಡಾಣುಗಳೆರಡನ್ನೂ ಉತ್ಪತ್ತಿ ಮಾಡುತ್ತವೆ. ಆದರೆ, ಇವುಗಳಲ್ಲಿ ಸ್ವಯಂ ನಿಷೇಚನೆ ನಡೆಯದು. ವೀರ್ಯಾಣು ಅಥವಾ ಅಂಡಾಣುಗಳು ಪ್ರಬುದ್ಧವಾಗುವ ಕಾಲ ಬೇರೆ ಬೇರೆಯಾಗಿರುವುದರಿಂದ ಅಥವಾ ದೇಹದಲ್ಲಿ ಲಿಂಗಾಂಗಗಳ ಸ್ಥಳಾಂತರದಿಂದ ಸಾಮಾನ್ಯವಾಗಿ ಅನ್ಯ ನಿಷೇಚನೆಯಾಗುವುದೇ ಹೆಚ್ಚು. ಬಹಳಷ್ಟು ಪ್ರಭೇದಗಳಲ್ಲಿ ಮೊದಲು ವೀರ್ಯಾಣಗಳೂ ಅನಂತರ ಅಂಡಾಣುಗಳೂ ಉತ್ಪತ್ತಿಯಾಗುತ್ತವೆ. ನಿರ್ಲಿಂಗ ಪ್ರಜನನ : ನಿರ್ಲಿಂಗ ಪ್ರಜನನದಲ್ಲಿ ಜನನಗ್ರಂಥಿಗಳು ರೂಪುಗೊಂಡಿರುವುದಿಲ್ಲ ಅಥವಾ ಜನನ ಗ್ರಂಥಿಗಳು ಪಾಲ್ಗೊಳ್ಳುವುದಿಲ್ಲ. ಅಂತೆಯೇ ಇಲ್ಲಿ ವೀರ್ಯಾಣು ಮತ್ತು ಅಂಡಾಣುಗಳ ಸಂಯೋಗ ಇಲ್ಲ. ಅಂದರೆ ನಿಷೇಚನವಿಲ್ಲದೆ ಹಾಗೂ ಸಂಖ್ಯಾಕ್ಷೀಣ ವಿಭಜನೆ ಇಲ್ಲದೆ (ಮಿಯಾಸಿಸ್) ನೇರವಾಗಿ ಕೋಶವಿಭಜನೆ ನಡೆದು ಪುನರುತ್ಪತ್ತಿಯಾಗುತ್ತದೆ. ಕೆಲವು ಏಕಕಣ ಜೀವಿಗಳಲ್ಲಿ ಲೈಂಗಿಕ ಪ್ರಜನನದ ಅಸ್ತಿತ್ವ ಇದುವರೆಗೆ ಕಂಡುಬಂದಿಲ್ಲ. ಇಂಥ ಪ್ರಾಣಿಗಳಲ್ಲಿ ನಿರ್ಲಿಂಗ ಪ್ರಜನನದ್ದೇ ಮುಖ್ಯಸ್ಥಾನ. ಕೆಲವು ಜೀವಿಗಳಲ್ಲಿ ನಿರ್ಲಿಂಗ ಹಾಗೂ ಲಿಂಗ ಪ್ರಜನನ ಎರಡೂ ಇವೆಯಲ್ಲದೆ, ಕೆಲವು ಪ್ರಭೇದಗಳಲ್ಲಿ ನಿರ್ಲಿಂಗ ಹಾಗೂ ಲೈಂಗಿಕ ಪೀಳಿಗೆಗಳ ಪರ್ಯಾಯ ಇದೆ. ಉದಾಹರಣೆಗೆ ಎಲೀಡಿಯಮ್ ಹಾಗೂ ಮಲೇರಿಯವನ್ನು ತರುವ ಪ್ಲಾಸ್ಮೋಡಿಯಮ್.

ಏಕಕೋಶ ಜೀವಿಗಳಲ್ಲಿ ನಿರ್ಲಿಂಗ ಪ್ರಜನನ ಕೇವಲ ಕೋಶ ವಿಭಜನೆಗೆ ಮಾತ್ರ ಸೀಮಿತ. ವಿಭಜನೆಯಿಂದ ರೂಪುಗೊಳ್ಳುವ ಮರಿಕೋಶಗಳು ಮರಿ ಪ್ರಾಣಿಗಳಾಗುತ್ತವೆ. ಆಯಾ ಜೀವಿಗಳ ರಚನೆ, ಆಕಾರ ಹಾಗೂ ಅವಶ್ಯಕತೆಗಳಿಗನುಸಾರವಾಗಿ ಕೋಶ ವಿಭಜನೆಯಲ್ಲಿ ಮಾರ್ಪಾಡುಗಳುಂಟು. ಕೆಲವು ಪ್ರಭೇದಗಳು ವಿಭಜನೆಗೆ ಮೊದಲು ದೇಹದ ಸುತ್ತ ಗಟ್ಟಿ ಹೊರ ಕವಚವನ್ನು ರಚಿಸಿಕೊಳ್ಳುವುವು. ಕವಚ ರಚನೆಯ ಹಂತಕ್ಕೆ ಸಿಸ್ಟ್ ಎಂದು ಹೆಸರು. ಕೆಲವು ಪ್ರಾಣಿಗಳಲ್ಲಿ ಹೊರಕವಚ ರೂಪುಗೊಳ್ಳುವುದು ವಿಭಜನೆಯಾದ ಅನಂತರ. ಕವಚದೊಳಗಿನ ಕೋಶಿಕೆ ಹಲವಾರು ಸಲ ವಿಭಜನೆಗೊಳಗಾಗಿ ನೂರಾರು ಮರಿಕೋಶಗಳು ಹುಟ್ಟಿ ಕವಚವನ್ನು ಭೇದಿಸಿ ಹೊರಬರುತ್ತವೆ. ಪ್ರತಿ ಮರಿ ಕೋಶ ಪ್ರಬುದ್ಧಕೋಶವಾಗಿ ಬೆಳೆಯುತ್ತದೆ. ಸಿಸ್ಟುಗಳ ಮೂಲಕ ಜೀವಿಯ ಸಂಖ್ಯಾವೃದ್ಧಿಯಾಗುವುದಲ್ಲದೆ ವಾತಾವರಣದ ಕಷ್ಟಪರಿಸ್ಥಿತಿಗಳನ್ನು ಎದುರಿಸುವುದರಲ್ಲಿಯೂ ಅನುಕೂಲವಾಗುತ್ತದೆ.

ಬಹುಕೋಶ ಜೀವಿಗಳಲ್ಲಿ ಹಲವಾರು ರೀತಿಯ ನಿರ್ಲಿಂಗ ಪ್ರಜನನವನ್ನು ಕಾಣಬಹುದು. ಚಲನರಹಿತ ಗುಂಪುಗಳಾದ ಸ್ಪಂಜುಪ್ರಾಣಿಗಳಲ್ಲಿ, ಕುಟುಕುಕಣವಂತಗಳಲ್ಲಿ, ಬ್ರಯೊಜೊóೀವಗಳಲ್ಲಿ, ಕಡಲು ಕಾರಂಜಿಗಳಲ್ಲಿ ಟೊಂಗೆಗಳು ಅಥವಾ ಅಂಕುರಗಳು ಉದಯಿಸುತ್ತವೆ. ಈ ಟೊಂಗೆ ಅಥವಾ ಅಂಕುರಗಳನ್ನು ಉತ್ಪಾದಿಸುವ ಕೋಶಗಳು ದೇಹದ ಎಲ್ಲ ಭಾಗಗಳಲ್ಲಿಯೂ ಹರಡಿಕೊಂಡಿರುವುವು. ಪ್ರಾಣಿ ದೇಹದ ಯಾವುದೇ ಭಾಗದ ಕೆಲವು ಕೋಶಗಳು ಮಾರ್ಪಾಟಾಗಿ ಟೊಂಗೆ ಅಥವಾ ಅಂಕುರಗಳಾಗುವುದೂ ಉಂಟು. ಈ ಟೊಂಗೆಗಳು ಅಥವಾ ಅಂಕುರಗಳು ಪಿತೃ ಪ್ರಾಣಿಯಿಂದ ಬೇರ್ಪಟ್ಟು ಅನಂತರ ಸಂಪೂರ್ಣ ಪ್ರಬುದ್ಧ ಸ್ಥಿತಿಗೆ ಬೆಳೆಯುತ್ತವೆ.

ಚಪ್ಪಟೆಹುಳುಗಳಲ್ಲಿ ಮತ್ತು ವಲಯವಂತಗಳಲ್ಲಿ ದೇಹದ ಅಡ್ಡ ವಿಭಜನೆಯ ಮೂಲಕ ನಿರ್ಲಿಂಗ ಪ್ರಜನನ ನಡೆಯುತ್ತದೆ. ಕೆಲವು ಜೀವಶಾಸ್ತ್ರಜ್ಞರ ಪ್ರಕಾರ ಇದು ಪ್ರಜನನವಲ್ಲ, ಕತ್ತರಿಸಿಹೋದ ಭಾಗಗಳ ಪುನರ್‍ನಿರ್ಮಾಣ ಮಾತ್ರ. ಆದರೆ, ಈ ಕ್ರಿಯೆಯಿಂದ ಕೂಡ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಇದನ್ನೂ ಪ್ರಜನನ ಎಂದೇ ಹೇಳಬಹುದು. ಸರೀಸೃಪಗಳಲ್ಲಿ ಕತ್ತರಿಸಲ್ಪಟ್ಟ ಭಾಗಗಳಷ್ಟೇ ಪುನರುತ್ಪಾದನೆಗೊಳ್ಳುವುವು. ಒಂದು ಪ್ರಾಣಿಯಿಂದ ಕತ್ತರಿಸಲ್ಪಟ್ಟ ಭಾಗಗಳು ಪ್ರಬುದ್ಧ ಜೀವಿಗಳಾಗಿ ಬೆಳೆಯುವುದಿಲ್ಲವಾದ್ದರಿಂದ ಈ ಕತ್ತರಿಸುವ ಪ್ರಕ್ರಿಯೆಯನ್ನು ಪ್ರಜನನ ಕ್ರಿಯೆ ಎಂದು ಹೇಳಲು ಸಾಧ್ಯವಿಲ್ಲ. ತುಂಡಾದ ಭಾಗಗಳ ಹಿಂಭಾಗದಲ್ಲಿ ಹೊಸ ಕೋಶಗಳು ರೂಪುಗೊಂಡು ವಿಭೇದನಾಪೂರ್ವ ಸ್ಥಿತಿಯಲ್ಲಿರುವುವು. ಇದಕ್ಕೆ ಬ್ಲಾಸ್ಟೀಮ ಎಂದು ಹೆಸರು. ಬ್ಲಾಸ್ಟೀಮ ಕೋಶಗಳು ವಿಭೇದನೆಗೊಂಡು ಕಳೆದುಹೋದ ಭಾಗಗಳು ಪುನಾರ್ರಚಿತವಾಗುತ್ತವೆ.

ಕೆಲವು ತೆರನ ಬಹುಕೋಶ ಜೀವಿಗಳಲ್ಲಿ ಕೂಡ ನಿರ್ಲಿಂಗ ಪ್ರಜನನ ವಾತಾವರಣದ ಕಷ್ಟ ಪರಿಸ್ಥಿತಿಯಿಂದ ರಕ್ಷಿಸಿಕೊಳ್ಳುವ ಸಾಧನವಾಗಿದೆ. ಉದಾಹರಣೆಗೆ ಸ್ಪಂಜು ಪ್ರಾಣಿಗಳ ಜೆಮ್ಯೂಲುಗಳು ಮತ್ತು ಸ್ಟ್ಯಾಟೋಬ್ಲಾಸ್ಟುಗಳಲ್ಲಿ ಗಡುಸಾದ ಹೊರ ಕವಚವಿದ್ದು ಇದು ಒಳಗಿರುವ ಕೆಲವು ಪ್ರಜನನ ಕೋಶಗಳನ್ನು ವಾತಾವರಣದ ಕಷ್ಟ ಪರಿಸ್ಥಿತಿಗಳಿಂದ ರಕ್ಷಿಸುತ್ತದೆ. ಈ ಕೋಶಗಳು ಶರೀರದ ವಿವಿಧ ಭಾಗಗಳಿಂದ ಬರುವ ರಕ್ಷಣಾಕೋಶಗಳು. ಇವು ಕೆಲವು ಆಹಾರ ಸಂಗ್ರಾಹಕ ಕೋಶಗಳೊಂದಿಗೆ ಕೂಡಿಕೊಂಡು ತಮ್ಮ ಸುತ್ತ ಕವಚವನ್ನು ರಚಿಸಿಕೊಳ್ಳುವುವು. ಎರಡು ಪದರಗಳುಳ್ಳ ಈ ಕವಚಗಳ ಮಧ್ಯೆ ಕೆಲವು ಸ್ಪಿಕ್ಯೂಲುಗಳೆಂಬ ವಿಶೇಷ ರಚನೆಗಳಿರುತ್ತವೆ. ವಾತಾವರಣದಲ್ಲಿ ಸುಸ್ಥಿತಿಯುಂಟಾದಾಗ ಕವಚ ಧ್ವಂಸಗೊಂಡು ಪ್ರಜನನ ಕೋಶಗಳು ಹೊರಬಂದು ಒಂದೊಂದೂ ಒಂದೊಂದು ಸ್ಪಂಜುಪ್ರಾಣಿಯಾಗಿ ಬೆಳೆಯುತ್ತದೆ.

ಪ್ರಭೇದ, ಕುಟುಂಬ, ಗಣ, ವರ್ಗ ಮುಂತಾದ ಮೇಲಿನ ಹಂತಗಳಲ್ಲಿ ಬರಿಗಣ್ಣಿಗೆ ಇಷ್ಟೆಲ್ಲ ವೈವಿಧ್ಯ ಹಾಗೂ ಮಾರ್ಪಾಡುಗಳು ಕಂಡುಬಂದರೂ ಪ್ರಜನನ ಕೋಶಗಳ ಮಟ್ಟದಲ್ಲಿ ವಿಶೇಷ ಬದಲಾವಣೆಗಳೇನೂ ಇಲ್ಲ. ಸೂಕ್ಷ್ಮದರ್ಶಕದಲ್ಲಿ ಪ್ರಜನನ ಎರಡೇ ರೀತಿಯದ್ದಾಗಿದೆ : 1. ನಿರ್ಲಿಂಗ ರೀತಿಯ ಪ್ರಜನನ (ಕೋಶಗಳ ನೇರ ವಿಭಜನೆ ಅಥವಾ ಮೈಟೋಸಿಸ್) : 2. ಲೈಂಗಿಕ ಪ್ರಜನನ (ಸಂಖ್ಯಾಕ್ಷೀಣ ವಿಭಜನೆ ಅಥವಾ ಮಿಯಾಸಿಸ್ ಹಾಗೂ ಸಂಖ್ಯಾಕ್ಷೀಣ ವಿಭಜನೆಯಿಂದ ಉದ್ಭವಿಸಿದ ಮರಿಕೋಶ ಅಥವಾ ಲಿಂಗಾಣುಗಳ ಸಮ್ಮಿಲನ) ಜೊತೆಗೆ ಬೆಳವಣಿಗೆ ಹಾಗೂ ವಿಭೇದನೆಗಳು ಸೇರಿ ಪ್ರಜನನ ಕ್ರಿಯೆ ಪೂರ್ತಿಯಾಗುತ್ತದೆ.

ನೇರ ವಿಭಜನೆಯಲ್ಲಿ ಕ್ರೋಮೊಸೋಮುಗಳು ಮರಿಕೋಶಗಳಿಗೆ ಸಮವಾಗಿ ಹಂಚಲ್ಪಡುತ್ತವೆ. ವಿಭಜನೆಯ ಮೊದಲು ಡಿಎನ್‍ಎಯ ಸಂಶ್ಲೇಷಣೆ ನಡೆಯುವುದರಿಂದ ಅನುವಂಶೀಯ ವಸ್ತುವಿನ ಪರಿಮಾಣ ಮತ್ತು ಕ್ರೋಮೊಸೋಮುಗಳ ಸಂಖ್ಯೆಗಳಲ್ಲಿ ಪಿತೃಕೋಶ ಮತ್ತು ಮರಿಕೋಶಗಳಲ್ಲಿ ವ್ಯತ್ಯಾಸವಿರದು. ಇದು ನಿರ್ಲಿಂಗ ಪ್ರಜನನದ ಎಲ್ಲ ಬಗೆಗಳಲ್ಲಿ ಕಂಡುಬರುವ ಮೂಲಭೂತ ಸ್ಥಿತಿ.

ಸಂಖ್ಯಾಕ್ಷೀಣ ವಿಭಜನೆ ಜರಾಯುಕೋಶಗಳಲ್ಲಿ ನಡೆಯುತ್ತದೆ. ಲಿಂಗಾಣುಜನಕ ಕೋಶಗಳಿಂದ ಈ ಕ್ರಿಯೆಯ ಮೂಲಕ ಲಿಂಗಾಣುಗಳು ಉದ್ಭವವಾಗುವುವು. ಇದಕ್ಕೆ ಲಿಂಗಾಣುಜನನ ಎಂದು ಹೆಸರು. ಗಂಡು ಪ್ರಾಣಿಗಳಲ್ಲಿ ವೀರ್ಯಾಣುಗಳೂ ಹೆಣ್ಣು ಜೀವಿಗಳಲ್ಲಿ ಅಂಡಾಣುಗಳೂ ರೂಪುಗೊಳ್ಳುವುವು. ಸಂಖ್ಯಾಕ್ಷೀಣ ವಿಭಜನೆಯ ಆರಂಭದಲ್ಲೆ ಸಮರೂಪ ಕ್ರೋಮೊಸೋಮುಗಳು ಪರಸ್ಪರ ಆಕರ್ಷಿತವಾಗಿ ಜೊತೆಗೂಡುತ್ತವೆ. ಆಗ ಕ್ರೋಮೊಸೋಮುಗಳ ಕೆಲವು ಭಾಗಗಳಲ್ಲಿ ಪರಸ್ಪರ ವಿನಿಮಯ ನಡೆಯುವುದರಿಂದ ಅನುವಂಶೀಯ ವಸ್ತುಗಳ ಪುನಸ್ಸಂಯೋಜನೆ ನಡೆಯುತ್ತದೆ. ಅನಂತರ ಕ್ರೋಮೊಸೋಮುಗಳು ಬೇರೆಯಾಗಿ ಕೋಶ ವಿಭಜನೆಯಾಗುತ್ತದೆ. ಹೀಗೆ ಉದ್ಭವಿಸಿದ ಕೋಶಗಳು ಪಿತೃಗಳ ಕ್ರೋಮೊಸೋಮ್ ಸಂಖ್ಯೆಯ ಅರ್ಧದಷ್ಟನ್ನು ಮಾತ್ರ ಪಡೆದಿರುವುವು. ಸಂಖ್ಯಾಕ್ಷೀಣ ವಿಭಜನೆಯ ಎರಡನೆಯ ಹಂತ ನೇರ ವಿಭಜನೆಯಾಗಿದ್ದು ಇದರಲ್ಲಿ ಕ್ರೋಮೊಸೋಮುಗಳ ಸಂಖ್ಯೆ ಬದಲಾಗದು. ಸಂಖ್ಯಾಕ್ಷೀಣ ವಿಭಜನೆಯಿಂದ ನಾಲ್ಕು ಮರಿಕೋಶಗಳು ರೂಪುಗೊಳ್ಳುವುವು. ಈ ಕೋಶಗಳ ಕ್ರೋಮೊಸೋಮ್ ಸಂಖ್ಯೆ ಪಿತೃಗಳ ಕ್ರೋಮೊಸೋಮ್ ಸಂಖ್ಯೆಯ ಅರ್ಧದಷ್ಟಿರುತ್ತದೆ. ವೀರ್ಯಾಣುಜನಕ ಕೋಶಗಳಿಂದ ನಾಲ್ಕು ಮರಿಕೋಶಗಳು ರೂಪುಗೊಳ್ಳುತ್ತವಾದರೆ ಒಂದು ಅಂಡಾಣುಜನಕ ಕೋಶದಿಂದ ಒಂದೇ ಒಂದು ಅಂಡಾಣುಕೋಶ ಮಾತ್ರ ರೂಪುಗೊಳ್ಳುತ್ತದೆ. ಉಳಿದ ಮೂರು ಕೋಶಗಳು ಧ್ರುವಕಾಯಗಳಾಗಿ (ಪೋಲಾರ್ ಬಾಡೀಸ್) ಕಾಲಕ್ರಮೇಣ ನಶಿಸಿಹೋಗುತ್ತವೆ. ಸಂಖ್ಯಾಕ್ಷೀಣ ವಿಭಜನೆ ಜನನಗ್ರಂಥಿಯಲ್ಲಿಯೇ ನಡೆಯುತ್ತದೆ. ಅಂಡಾಣುಕೋಶಗಳು ಅಂಡಾಣುಗಳಾಗಿ ಪರಿವರ್ತನೆಗೊಳ್ಳುವಾಗ ಮಹತ್ವದ ಬದಲಾವಣೆಗಳೇನೂ ಆಗುವುದಿಲ್ಲ. ಆದರೆ, ವೀರ್ಯಾಣು ಕೋಶಗಳು ವೀರ್ಯಾಣುಗಳಾಗಿ ಪರಿವರ್ತನೆಗೊಳ್ಳುವಾಗ ಅವುಗಳ ಆಕಾರದಲ್ಲಿ ಮಹತ್ವದ ಬದಲಾವಣೆಗಳು ನಡೆಯುವುವು.

ಸಂಪೂರ್ಣ ಬೆಳೆದ ಹಾಗೂ ನಿಷೇಚನಕ್ಕೆ ಸಿದ್ಧವಾಗಿರುವ ಮೊಟ್ಟೆಗಳು ಹೆಚ್ಚು ಕಡಿಮೆ ಗೋಳಾಕಾರದವಾಗಿದ್ದು, ಏಕಗುಣಿತ (ಹ್ಯಾಪ್ಲಾಯಿಡ್) ಕ್ರೋಮೊಸೋಮುಗಳನ್ನು ಪಡೆದಿರುವುವು. ವೀರ್ಯಾಣುಗಳಲ್ಲಿ ಸಾಮಾನ್ಯವಾಗಿ ತಲೆಯ ಭಾಗದಲ್ಲಿ ನ್ಯೂಕ್ಲಿಯಸ್ ಇರುತ್ತದೆ. ಅಂಡಾಣುವಿನಲ್ಲಿ ನ್ಯೂಕ್ಲಿಯಸ್ ಜೊತೆಗೆ ಸಾಕಷ್ಟು ಕೋಶದ್ರವ್ಯವೂ ಇರುತ್ತದೆ. ವೀರ್ಯಾಣುವಿನಲ್ಲಿಯ ಕೋಶದ್ರವ್ಯದ ಮೊತ್ತ ಬಲುಕಡಿಮೆ. ವೀರ್ಯಾಣುವಿನ ಕಂಠಭಾಗದಲ್ಲಿ ಮಾರ್ಪಾಟುಹೊಂದಿದ ಮೈಟೊಕಾಂಡ್ರಿಯಾಗಳು ಇರುತ್ತವೆ.

ಸಾಮಾನ್ಯವಾಗಿ ಅಂಡಾಣುಗಳು ಕಡಿಮೆ ಸಂಖ್ಯೆಯಲ್ಲೂ ವೀರ್ಯಾಣುಗಳು ಹೆಚ್ಚಿನ ಸಂಖ್ಯೆಯಲ್ಲೂ ರೂಪುಗೊಳ್ಳುವುವು. ಆದರೆ ನಿಷೇಚನ ಕ್ರಿಯೆಯಲ್ಲಿ ಒಂದು ವೀರ್ಯಾಣು ಒಂದೇ ಅಂಡಾಣುವನ್ನು ಮಾತ್ರ ಪ್ರವೇಶಿಸಬಲ್ಲದು. ಉಳಿದೆಲ್ಲ ವೀರ್ಯಾಣುಗಳು ನಶಿಸಿಹೋಗುತ್ತವೆ. ಬಹುಸಂಖ್ಯೆಯ ಅಂಡಾಣುಗಳನ್ನು ಉತ್ಪಾದಿಸುವ ಪ್ರಭೇದಗಳಲ್ಲಿ ಕೂಡ ವೀರ್ಯಾಣುಗಳ ಸಂಖ್ಯೆ ಅಂಡಾಣುಗಳ ಸಂಖ್ಯೆಗಿಂತ ಎಷ್ಟೊ ಸಹಸ್ರ ಪಟ್ಟು ಹೆಚ್ಚು ಇರುತ್ತದೆ. ಅಂಡಾಣು ಮತ್ತು ವೀರ್ಯಾಣುಗಳ ಸಂಯೋಗ ಕ್ರಿಯೆಗೆ ನಿಷೇಕ ಅಥವಾ ನಿಷೇಚನ (ಫರ್ಟಿಲೈಸೇಷನ್) ಎಂದು ಹೆಸರು. ನಿಷೇಚನ ಕ್ರಿಯೆಯಲ್ಲಿ ಭಾಗವಹಿಸುವ ವೀರ್ಯಾಣು ಅಂಡಾಣುವನ್ನು ಪ್ರವೇಶಿಸಿದಾಗ ಅಂಡಾಣುವಿನ ಕೋಶದ್ರವ್ಯದಲ್ಲಿ ಅದರ ಬಾಲ ಕಳಚಿಹೋಗಿ ನ್ಯೂಕ್ಲಿಯಸ್ ಇರುವ ತಲೆ ಮಾತ್ರ ಅಂಡಾಣುವಿನಲ್ಲಿ ನ್ಯೂಕ್ಲಿಯಸ್ಸನ್ನು ಪ್ರವೇಶಿಸಿ ಅದರೊಂದಿಗೆ ಲೀನವಾಗುತ್ತದೆ. ಹೀಗೆ ನಿಷೇಚನಗೊಂಡ ಅಂಡಾಣುವಿಗೆ ಯುಗ್ಮಜ (ಜೈಗೋಟ್) ಅಥವಾ ನಿಷೇಚಿತ ಮೊಟ್ಟೆ (ಫರ್ಟಿಲೈಸ್ಡ್ ಎಗ್) ಎಂದು ಹೆಸರು. ಅಂಡಾಣುಗಳು ಅರ್ಧಸಂಖ್ಯೆಯಲ್ಲಿ ಹಾಗೂ ವೀರ್ಯಾಣುಗಳು ಅರ್ಧಸಂಖ್ಯೆಯಲ್ಲಿ ಕ್ರೋಮೊಸೋಮುಗಳನ್ನು ಸೇರಿಸಿ ಯುಗ್ಮಜದಲ್ಲಿ ಪಿತೃಗಳಲ್ಲಿರುವಷ್ಟೆ ಕ್ರೋಮೊಸೋಮುಗಳಾಗುವುವು. ಈ ಯುಗ್ಮಜದಿಂದ ಬೆಳೆಯುವ ಮರಿಗಳಲ್ಲೂ ಪಿತೃಗಳಷ್ಟೆ ಕ್ರೋಮೊಸೋಮುಗಳಿರುತ್ತವೆ. ಯುಗ್ಮಜ ಬೆಳೆದು ಪ್ರಬುದ್ಧ ಜೀವಿಯಾಗುವತನಕ ನಡೆಯುವ ಕೋಶ ವಿಭಜನೆಗಳು ಕೇವಲ ನೇರ ವಿಭಜನೆಗಳು. ಕೋಶಗಳ ವಿಭಜನೆಯೊಂದಿಗೆ ಕೋಶಗಳ ವಿಭೇದನೆಯೂ ನಡೆಯುತ್ತದೆ.

ಕ್ರೋಮೊಸೋಮ್, ಅನುವಂಶೀಯ ವಸ್ತು, ಲೈಂಗಿಕ ಕೋಶಗಳ ಆವಿಷ್ಕಾರ ಇವು ಜೀವ ವಿಜ್ಞಾನದ ಮಹತ್ವದ ಸಂಶೋಧನೆಗಳು. ಇವೆಲ್ಲ ಸಂಶೋಧನೆಗಳ ತರುವಾಯ 19 ನೆಯ ಶತಮಾನದ ಅಂತ್ಯಭಾಗದಲ್ಲಿ ಆಗಸ್ಟ್ ವೈಸ್‍ಮಾನ್ ಎಂಬಾತ ಜರಾಯುದ್ರವ್ಯ ಅಥವಾ ಜರ್ಮ್‍ಪ್ಲಾಸಮ್ ಸಿದ್ಧಾಂತವನ್ನು ಪ್ರತಿಪಾದಿಸಿದ. ಈ ಸಿದ್ದಾಂತದ ಪ್ರಕಾರ ಜೀವಿಯಲ್ಲಿ ಕಾಯ (ಸೋಮ) ಮತ್ತು ಲಿಂಗ (ಸೆಕ್ಸ್) ಎಂಬ ಎರಡು ಪ್ರಮುಖ ಭಾಗಗಳಿದ್ದು, ಕಾಯಭಾಗ ಜೀವಿಯ ಎಲ್ಲ ಕಾರ್ಯವನ್ನೂ ಜರುಗಿಸುತ್ತದೆ. ಕಾಯಭಾಗಕ್ಕೆ ಹೋಲಿಸಿದರೆ ಲಿಂಗಭಾಗ ಅತಿ ಚಿಕ್ಕದಾಗಿದ್ದು ಇದು ಕಾಯಭಾಗದ ಮೇಲೆ ಪರಾವಲಂಬಿಯಾಗಿರುತ್ತದೆ. ಆದರೆ, ಜೀವಿಯ ಪುನರುತ್ಪತ್ತಿಯಲ್ಲಿ ಲಿಂಗ ಭಾಗದ್ದೇ ಮಹತ್ವದ ಸ್ಥಾನ. ಲಿಂಗ ಭಾಗದ ಕೋಶಗಳು ವಿಭಾಗಗೊಂಡು ಲಿಂಗಾಣುಗಳಾಗಿ ಮಾರ್ಪಟ್ಟು ಇನ್ನೊಂದು ವಿಧದ ಲಿಂಗಾಣುವಿನೊಂದಿಗೆ ಸಂಯೋಗ ಹೊಂದಿ ಸಂಪೂರ್ಣ ಬೆಳೆದು ಪ್ರಬುದ್ಧ ಜೀವಿಯ ನಿರ್ಮಾಣವಾಗುತ್ತದೆ. ಅಂದರೆ ಒಂದು ತಳಿಯಿಂದ ಇನ್ನೊಂದು ತಳಿಗೆ ಗುಣಲಕ್ಷಣಗಳನ್ನು ಕೊಂಡೊಯ್ಯುವ ಸಾಧನಗಳೇ ಈ ಲಿಂಗಾಣುಗಳು. ಕಾಯಭಾಗ ಬಾಲ್ಯ, ತಾರುಣ್ಯ, ಮುಪ್ಪು ಎಂಬ ಹಂತಗಳನ್ನು ಪೂರೈಸಿ ಕೊನೆಯಲ್ಲಿ ಸತ್ತು ಹೋಗುತ್ತದೆ. ಆದರೆ, ಲಿಂಗ ಭಾಗ ಒಮ್ಮೆ ವಿಭೇದನೆಗೊಳಗಾಗಿ ಪ್ರಬುದ್ಧ ಸ್ಥಿತಿಗೆ ಬಂದ ತರುವಾಯ ಜೀವಿತದ ಬಹುಕಾಲ ಕೆಲಸ ಮಾಡಿ (ಪ್ರಜನನ ಕ್ರಿಯೆ ನಡೆಸಿ) ಅನೇಕ ನಕಲುಗಳನ್ನು ತಯಾರಿಸಬಲ್ಲದು. ಅಂದರೆ ಲಿಂಗಕೋಶಗಳು ಚಿರಂಜೀವಿಗಳು ಎಂದಂತಾಯಿತು. ಲಿಂಗ ಮತ್ತು ಕಾಯ ಎಂಬ ವಿಭೇದೀಕರಣ ಏಕಕಣಜೀವಿಗಳಲ್ಲಿಯೇ ಕಂಡುಬರುವುದಾಗಿ ಕೆಲವು ಸಮೂಹಜೀವಿಗಳಲ್ಲಿ ಈ ವಿಭೇದೀಕರಣ ಎದ್ದು ಕಾಣುತ್ತದೆ. ಇನ್ನುಳಿದ ಜೀವಿಗಳಲ್ಲಿ ಬ್ಯಾಕ್ಟೀರಿಯಗಳಲ್ಲಿ, ವೈರಸ್ಸುಗಳಲ್ಲಿ ಇಡೀ ಜೀವಿಯೇ ಪ್ರಜನನವನ್ನು ಮಾಡಬಲ್ಲದು. ಈ ಕಾರಣಗಳಿಂದ ಲಿಂಗ ಭಾಗ ಹಾಗೂ ಕಾಯ ಭಾಗಗಳಲ್ಲಿ ಯಾವುದು ಮೊದಲು ಅಸ್ತಿತ್ವಕ್ಕೆ ಬಂತು ಎಂಬುದು ವಿವಾದಾತ್ಮಕ ವಿಷಯ. ಎಂದೊ ಉದಯವಾದ ಲಿಂಗ ಮತ್ತು ಕಾಯಗಳು ಇಂದು ಗರಿಷ್ಠ ಮಟ್ಟದ ಪ್ರಾಣಿಗಳಲ್ಲಿ ಸಂಪೂರ್ಣ ವಿಭೇದನೆ ಹೊಂದಿ ಸಂಪೂರ್ಣ ಪ್ರಶೋಭಿತವಾಗಿವೆ.

ವೈರಸ್ಸುಗಳಲ್ಲಿ ಪ್ರಜನನ ಸ್ವತಂತ್ರವಾಗಿ ನಡೆಯಲಾರದು. ಪ್ರಜನನ ಕ್ರಿಯೆಗೆ ವೈರಸ್ಸು ಬ್ಯಾಕ್ಟೀರಿಯವನ್ನೊ ಬೇರೆ ಜೀವಿಯ ಕೋಶವನ್ನೊ ಅವಲಂಬಿಸಿರುತ್ತದೆ. ಪ್ರಜನನದಲ್ಲಿ ತೊಡಗುವ ಮುನ್ನ ವೈರಸ್ ತನ್ನ ಆತಿಥೇಯ ಕೋಶಕ್ಕೆ ಮೊದಲು ಬಾಲದ ತಂತುಗಳಿಂದ ಅಂಟಿಕೊಳ್ಳುತ್ತದೆ. ಕಿಣ್ವವೊಂದರ ಸಹಾಯದಿಂದ ಆತಿಥೇಯ ಕೋಶದ ಭಿತ್ತಿಯನ್ನು ಅಂಟಿಕೊಂಡಿದ್ದ ಸ್ಥಳದಲ್ಲಿ ಕರಗಿ ತನ್ನ ಅನುವಂಶೀಯ ವಸ್ತು ಅಥವಾ ಕ್ರೋಮೊಸೋಮನ್ನು ಆತಿಥೇಯ ಕೋಶದೊಳಕ್ಕೆ ತಳ್ಳುತ್ತದೆ. ಅಲ್ಲಿ ಇದು ವೃದ್ಧಿ ಹೊಂದುತ್ತದೆ. ಆಗ ಆತಿಥೇಯ ಕೋಶದ ಕ್ರೋಮೊಸೋಮುಗಳು ತಮ್ಮ ಕ್ರಿಯೆಯನ್ನು ಬಿಟ್ಟು ವೈರಸ್ ಕಾಯದ ಪ್ರೋಟೀನುಗಳನ್ನು ಸಂಶ್ಲೇಷಿಸತೊಡಗುತ್ತವೆ. ಹೀಗೆ ವೈರಸ್ಸಿನ ಕ್ರೋಮೊಸೋಮ್ ಆತಿಥೇಯ ಕೋಷದ ಮೇಲೆ ತನ್ನ ಪ್ರಭುತ್ವ ಬೀರುತ್ತದೆ. ವೃದ್ಧಿಗೊಂಡ ವೈರಸ್ಸಿನ ಕ್ರೋಮೊಸೋಮುಗಳು ಆತಿಥೇಯ ಕೋಶ ತಯಾರಿಸಿದ ಪ್ರೋಟೀನುಗಳಿಂದಾವೃತ್ತಗೊಂಡ ಹೊಸ ವೈರಸ್ಸುಗಳು ರೂಪ ತಳೆಯುವುವು. ಆತಿಥೇಯ ಕೋಶದ ಕೋಶಭಿತ್ತಿಯ್ನು ಛಿದ್ರಗೊಳಿಸಿ ಮರಿವೈರಸ್ಸುಗಳು ಹೊರಬರುವುವು.

ಬ್ಯಾಕ್ಟೀರಿಯಗಳಲ್ಲಿ ನಿರ್ಲಿಂಗ ರೀತಿಯ ಹಾಗೂ ಲೈಂಗಿಕ ರೀತಿಯ ಪ್ರಜನನವನ್ನು ಕಾಣಬಹುದು. ನಿರ್ಲಿಂಗ ಪ್ರಜನನ ಕೇವಲ ಡಿಎನ್‍ಎ ಸಂಶ್ಲೇಷಣೆ ಹಾಗೂ ಕೋಶ ವಿಭಜನೆಗೆ ಮಾತ್ರ ಸೀಮಿತ. ಬ್ಯಾಕ್ಟೀರಿಯ ನೇರವಾಗಿ ವಿಭಜನೆಗೆ ಒಳಗಾಗಬಲ್ಲುದು. ಅಥವಾ ಕೆಲವು ಸಂದರ್ಭಗಳಲ್ಲಿ ಎರಡು ಬ್ಯಾಕ್ಟೀರಿಯ ಕೋಶಗಳು ಒಂದಕ್ಕೊಂದು ಕೂಡಿ ಕ್ರೋಮೊಸೋಮುಗಳನ್ನು ಬದಲಾಯಿಸಿಕೊಳ್ಳುತ್ತವೆ. ಅನಂತರ ಎರಡೂ ಬ್ಯಾಕ್ಟೀರಿಯ ಕೋಶಗಳು ಬೇರ್ಪಟ್ಟು ಬೇರೆ ಬೇರೆಯಾಗಿ ಜೀವಿಸುವುವು. ನಿರ್ಲಿಂಗ ರೀತಿಯ ಪ್ರಜನನದಲ್ಲಿ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚುತ್ತದೆ ; ಲೈಂಗಿಕ ಪ್ರಜನನ ಕ್ರಿಯೆಯಲ್ಲಿ ಕೇವಲ ಕ್ರೋಮೊಸೋಮುಗಳ ಅದಲು ಬದಲು ನಡೆಯುತ್ತದೆ. ಆದ್ದರಿಂದ ಬ್ಯಾಕ್ಟೀರಿಯಗಳ ಲೈಂಗಿಕ ಪ್ರಜನನ ಕೇವಲ ಕ್ರೋಮೊಸೋಮುಗಳ ಸಂಯೋಜನೆಯ ಮಾಧ್ಯಮ ಮಾತ್ರ. ಸಿಲಿಯೇಟ ಗುಂಪಿನ ಕೆಲವು ಏಕಕೋಶ ಜೀವಿಗಳಲ್ಲೂ ಈ ರೀತಿಯ ಪ್ರಜನನವನ್ನು ಕಾಣಬಹುದು.

ಲೈಂಗಿಕಪ್ರಜನನವನ್ನು ತೋರುವ ಏಕಕೋಶ ಜೀವಿಗಳಲ್ಲಿ ನಿರ್ದಿಷ್ಟ ಪ್ರಜನನಾಂಗಗಳಿಲ್ಲ. ಎಲ್ಲ ಏಕಕೋಶ ಜೀವಿಗಳಲ್ಲಿ ಇಡೀ ಕೋಶವೇ ಪ್ರಜನನ ಕ್ರಿಯೆಯಲ್ಲಿ ಭಾಗವಹಿಸುತ್ತದೆ. ಕೋಶದ ವಿಭಜನೆಯಿಂದ ಹಲವಾರು ಲಿಂಗಾಣುಗಳು ಜನಿಸಬಹುದು. ಪ್ಯಾರಮೀಸಿಯಮ್ ಮುಂತಾದ ಸಿಲಿಯೇಟಗಳಲ್ಲಿ ಇಡೀ ಕೋಶವೇ ಲಿಂಗಾಣುವಾಗಿ ಪರಿವರ್ತನೆಗೊಳ್ಳುತ್ತದೆ. ಹೊರನೋಟಕ್ಕೆ ಏಕಕೋಶ ಜೀವಿಗಳಲ್ಲಿ ಲಿಂಗ ವಿಭೇದನೆಯಾಗಿರದಿದ್ದರೂ, ಆಂತರಿಕವಾಗಿ, ಭೌತಿಕವಾಗಿ ಲಿಂಗವಿಭೇದನೆಯನ್ನು ಗುರುತಿಸಬಹುದು. ಉದಾಹರಣೆಗೆ ಪ್ಯಾರಮೀಸಿಯಮಿನಲ್ಲಿ + ಮತ್ತು - ಎಂಬ ಎರಡು ಬಗೆಗಳುಂಟು. + ಬಗೆ ಯಾವಾಗಲೂ - ಬಗೆಯೊಂದಿಗೆ ಮಾತ್ರ ಲೈಂಗಿಕವಾಗಿ ಸಂಯೋಗವಾಗಬಹುದು. ಎರಡು + ಬಗೆಗಳ ಮಧ್ಯೆ ಅಥವಾ ಎರಡು - ಬಗೆಗಳ ಮಧ್ಯೆ ಎಂದಿಗೂ ಸಂಯೋಗ ನಡೆಯದು. ಬ್ಯಾಕ್ಟೀರಿಯಗಳಲ್ಲಿಯೂ ಈ ರೀತಿಯ ಲಿಂಗವಿಭೇದನೆಯನ್ನು ಕಾಣಬಹುದು. ಸಂಖ್ಯಾಕ್ಷೀಣ ವಿಭಜನೆ ಯುಗ್ಮಜದ ಪ್ರಥಮ ವಿಭಜನೆಯಲ್ಲೊ ಲಿಂಗಾಣುಗಳ ಉತ್ಪಾದನೆಯಲ್ಲೊ ನಡೆಯುತ್ತದೆ. ಏಕಕೋಶ ಜೀವಿಗಳ ಲಿಂಗಾಣುಗಳಲ್ಲಿಯೂ ಮೂರು ಬಗೆಗಳುಂಟು. ಕೆಲವು ಪ್ರಭೇದಗಳಲ್ಲಿ ಗಂಡು (+) ಮತ್ತು ಹೆಣ್ಣು (-) ಲಿಂಗಾಣುಗಳೆರಡೂ ಆಕಾರ ಮತ್ತು ರಚನೆಯಲ್ಲಿ ಒಂದೇ ತೆರನಾಗಿರುತ್ತವೆ, ಇವಕ್ಕೆ ಸಮಲಿಂಗಾಣು (ಐಸೊಗ್ಯಾಮೀಟ್ಸ್) ಎಂದು ಹೆಸರು. ಕೆಲವು ಪ್ರಭೇದಗಳಲ್ಲಿ ಚಲನಾಂಗಗಳನ್ನು ಪಡೆದ ಹಾಗೂ ಚಲನಸಾಮಥ್ರ್ಯವಿರುವ ಚಿಕ್ಕಗಾತ್ರದ ಗಂಡುಲಿಂಗಾಣುಗಳು (ವೀರ್ಯಾಣು ?) ಕಾಣಬರುತ್ತವೆ. ಇವು ಅಸಮಲಿಂಗಾಣುಗಳು ಅಥವಾ ಭಿನ್ನ ಲಿಂಗಾಣುಗಳು (ಅನೈಸೊಗ್ಯಾಮೀಟ್ಸ್). ಇನ್ನು ಕೆಲವು ಪ್ರಭೇದಗಳಲ್ಲಿ ಲಿಂಗಾಣುಗಳು ಎರಡು ಬಗೆಯವಾಗಿದ್ದು ಆಕಾರ, ರೂಪ ಹಾಗೂ ಗಾತ್ರಗಳಲ್ಲಿ ವ್ಯತ್ಯಾಸವನ್ನು ತೋರುವುವು. ಚಲನಾಂಗಗಳಿರುವ ಹಾಗೂ ಚಲನಶೀಲವಾಗಿರುವ ಚಿಕ್ಕ ಗಾತ್ರದವನ್ನು ಗಂಡು ಲಿಂಗಾಣುಗಳೆಂದೂ ದೊಡ್ಡ ಗಾತ್ರದ ಚಲನಾಂಗರಹಿತ ಚಲನಶೀಲವಲ್ಲದವನ್ನು ಹೆಣ್ಣು ಲಿಂಗಾಣುಗಳೆಂದೂ ನಿರ್ದೇಶಿಸಲಾಗುತ್ತದೆ. ಇವನ್ನು ಊಗ್ಯಾಮೀಟುಗಳೆಂದೂ ಕರೆಯಲಾಗುತ್ತದೆ. ಫ್ಲಾಜೆಲೇಟ ಗುಂಪಿನ ಪ್ರಭೇದಗಳಲ್ಲಿ ಈ ರೀತಿಯ ಲಿಂಗಾಣುಭೇದವನ್ನು ಹೆಚ್ಚು ನಿಖರವಾಗಿ ಕಾಣಬಹುದು. ಲಿಂಗಾಣುಗಳ ಪರಸ್ಪರ ಆಕರ್ಷಣೆಗೆ ಏಕಕೋಶ ಜೀವಿಗಳು ಹಾರ್ಮೋನುಗಳಂಥ ವಸ್ತುಗಳನ್ನು ಸಂಶ್ಲೇಷಿಸುತ್ತವೆ. ಇವಕ್ಕೆ ಟರ್ಮೋನುಗಳು ಎಂದು ಹೆಸರು. ಪುರುಷಲಿಂಗಾಣುಗಳು (?) ಆಂಡ್ರೋಟರ್ಮೋನುಗಳನ್ನೂ ಸ್ತ್ರೀಲಿಂಗಾಣುಗಳು (?) ಗೈನೊಟರ್ಮೋನುಗಳನ್ನು ಪಡೆದಿರುವುವು.

ಏಕಕೋಶಜೀವಿಗಳನ್ನು ಪ್ರಜೀವಿಗಳು ಅಥವಾ ಆದಿಮಜೀವಿಗಳೆಂದು ಪರಿಗಣಿಸಿದ್ದರೂ ಉಳಿದೆಲ್ಲ ಪ್ರಾಣಿಗಳಂತೆ ಇವುಗಳಲ್ಲೂ ಪ್ರಜನನ ವಿಭಿನ್ನ, ವಿಶಿಷ್ಟ. ಅಕಶೇರುಕಗಳಲ್ಲಿ ಪ್ರಜನನ : ಲೈಂಗಿಕ ಪ್ರಜನನ ಕ್ರಿಯೆಗೆ ಬೇಕಾದ ಲಿಂಗಾಣುಗಳು ವಿಶೇಷ ಲಿಂಗಾಂಶಗಳಿಂದ ಅಥವಾ ಅಂಗಗಳಿಂದ ಉತ್ಪತ್ತಿಯಾಗುತ್ತವೆ. ಈ ಅಂಗಗಳೇ ಜನನಗ್ರಂಥಿಗಳು (ಗೊನ್ಯಾಡ್ಸ್). ಆದರೆ ಲೈಂಗಿಕ ಪ್ರಜನನ ಕ್ರಿಯೆಗೆ ಪ್ರಜನನ ಗ್ರಂಥಿಗಳು ಅತ್ಯಾವಶ್ಯಕ ಎಂದರ್ಥವಲ್ಲ. ಅಂಗ ಅಥವಾ ಅಂಗಾಂಶ ಯಾವುದೂ ಇಲ್ಲದೇ ಕೆಲವು ಕೋಶಗಳು ವಿಭಜನೆಯ ಮೂಲಕವೋ ನೇರವಾಗಿಯೋ ಲಿಂಗಾಣುಗಳಾಗಿ ಮಾರ್ಪಡಬಹುದು. ಸಂಭೋಗ ಕ್ರಿಯೆಯಿಲ್ಲದೆಯೇ ನೇರವಾಗಿ ವೀರ್ಯಾಣು ಅಂಡಾಣುಗಳ ಸಂಯೋಗದಿಂದ ರೂಪುಗೊಳ್ಳುವ ಯುಗ್ಮಜಗಳು ಪ್ರಬುದ್ಧ ಜೀವಿಗಳಾಗಿ ಬೆಳೆಯಬಲ್ಲವು. ಕೆಲವು ತೆರನ ಅಕಶೇರುಕಗಳಲ್ಲಿ ಈ ರೀತಿಯ ಪ್ರಜನನ ಕಂಡು ಬರುತ್ತದೆ. ಉಳಿದ ಎಲ್ಲ ಅಕಶೇರುಕಗಳಲ್ಲಿ ಮತ್ತು ಕಶೇರುಕಗಳಲ್ಲಿ ನಿರ್ದಿಷ್ಟ ಜನನ ಗ್ರಂಥಿ ಹಾಗೂ ಪ್ರಜನನಾಂಗಗಳು ಕಂಡುಬರುತ್ತವೆ. ಹಾಗೆಯೇ ಆಯಾ ಜೀವಿಯ ಅವಶ್ಯಕತೆಗನುಸಾರವಾಗಿ ಈ ಅಂಗಗಳು ಮಾರ್ಪಾಡುಗೊಂಡು ಸಾಕಷ್ಟು ವೈವಿಧ್ಯಮಯವಾಗಿಯೂ ಇವೆ. ಕೆಳ ಹಂತದ ಕೆಲವು ಅಕಶೇರುಕಗಳಲ್ಲಿ ಪ್ರಜನನ ಗ್ರಂಥಿಗಳು ತಾತ್ಕಾಲಿಕ ಅಂಗಗಳಾಗಿದ್ದು ಅವಶ್ಯಕತೆಯಿದ್ದಾಗ ಮಾತ್ರ ದೇಹದ ಕೆಲವು ಕೋಶಗಳು ಅಥವಾ ಅಂಗಾಂಶಗಳು ಪ್ರಜನನಗ್ರಂಥಿಗಳಾಗಿ ಪರಿವರ್ತನೆಗೊಳ್ಳುತ್ತವೆ. ದ್ವಿಲಿಂಗಿಗಳಲ್ಲಿ ಹೆಣ್ಣು ಹಾಗೂ ಗಂಡು ಜನನಗ್ರಂಥಿಗಳೆರಡೂ ಒಂದೇ ಜೀವಿಯಲ್ಲಿರುತ್ತವೆ. ಕೆಲವು ಕುಟುಕುಕಣವಂತಗಳಲ್ಲಿ, ಚಪ್ಪಟೆಹುಳುಗಳಲ್ಲಿ, ದುಂಡು ಹುಳುಗಳಲ್ಲಿ ಹಾಗೂ ವಲಯವಂತಗಳಲ್ಲಿ ಈ ರೀತಿಯ ದ್ವಿಲಿಂಗ ಸ್ಥಿತಿಯನ್ನು ಕಾಣಬಹುದು.

ಸ್ಪಂಜುಪ್ರಾಣಿಗಳು ಕೋಶಿಕೆಗಳ ಹಂತದಲ್ಲಿಯೇ ಇದ್ದು ಇವುಗಳಲ್ಲಿ ಅಂಗಾಂಶಗಳಾಗಲಿ ಅಂಗಗಳಾಗಲಿ ಇರುವುದಿಲ್ಲ. ಇವು ನಿರ್ಲಿಂಗ ರೀತಿಯಲ್ಲಿ ಪ್ರಜನನವನ್ನು ನಡೆಸುವುವು. ಅಲ್ಲದೆ ವೀರ್ಯಾಣು ಅಂಡಾಣುಗಳ ಉತ್ಪತ್ತಿಯೂ ಇವುಗಳಲ್ಲಿ ಇದೆ. ಕೆಲವು ಸ್ಪಂಜು ಪ್ರಾಣಿಗಳು ದ್ವಿಲಿಂಗಿಗಳು. ಇನ್ನು ಕೆಲವು ಏಕಲಿಂಗಿಗಳು. ಈ ಎರಡು ವಿಧಗಳಲ್ಲಿ ಇವುಗಳ ಚರ್ಮದಲ್ಲಿರುವ ಅಮೀಬ ರೀತಿಯ ಕೋಶಗಳಿಂದ ಅಂಡಾಣುಗಳು ವೀರ್ಯಾಣುಗಳು ಉತ್ಪತ್ತಿಯಾಗುವುವು. ಈ ಕೋಶಗಳನ್ನು ಪ್ರಜನನಗ್ರಂಥಿಗಳು ಎನ್ನಲಾಗುವುದಿಲ್ಲ. ಏಕೆಂದರೆ ಇವು ಪ್ರಜನನಕ್ಕೆ ಮಾತ್ರ ಮೀಸಲಾಗಿರದೆ ಬೇರೆ ಕಾರ್ಯವನ್ನೂ ಮಾಡುತ್ತವೆ. ಪ್ರಜನನ ಗ್ರಂಥಿಗಳಿಲ್ಲದಿರುವುದರಿಂದ ನಾಳಗಳು ಇರುವುದಿಲ್ಲ. ವೀರ್ಯಾಣುಗಳಿಗೆ ಕಶ ಇದ್ದು ಇವು ನಾಳಗಳ ಮೂಲಕ ಹೊರಬರುತ್ತವೆ. ನೀರಿನಲ್ಲಿ ಈಜುತ್ತ ಸಾಗುವ ಇವು ಇನ್ನೊಂದು ಸ್ಪಂಜು ಪ್ರಾಣಿಯ ಕಾಲುವೆಗಳ ವ್ಯೂಹವನ್ನು ಹೊಕ್ಕಾಗ, ಕಾಲುವೆಗಳ ಒಳಭಾಗದಲಿರುವ ಕುತ್ತಿಗೆ ಹಾಗೂ ಕಶಯುಕ್ತ ಕೋಶಗಳು ವೀರ್ಯಾಣುವನ್ನು ನುಂಗುತ್ತವೆ. ಅನಂತರ ಈ ಕೋಶಗಳು ತಮ್ಮ ಕುತ್ತಿಗೆಯನ್ನೂ ಕಶಾಂಗವನ್ನೂ ಕಳೆದುಕೊಂಡು ವೀರ್ಯಾಣುಗಳನ್ನು ಹೊತ್ತುಕೊಂಡು ಶರೀರದ ಒಳಭಾಗಕ್ಕೆ ಚಲಿಸುತ್ತವೆ. ಅಲ್ಲಿ ಅಂಡಾಣುಗಳು ತಮ್ಮ ಬೆಳವಣಿಗೆಯನ್ನು ಪೂರ್ಣಗೊಳಿಸಿಕೊಂಡಿರುವುವು. ವೀರ್ಯಾಣುವನ್ನು ಸಾಗಿಸುವ ಕೋಶಗಳು ಅಂಡಾಣುಗಳೊಡನೆ ಸಂಯೋಗಗೊಳ್ಳುವುವು. ಅನಂತರ ಅಂಡಾಣು ಮತ್ತು ವೀರ್ಯಾಣುಗಳು ನ್ಯೂಕ್ಲಿಯಸ್ಸುಗಳು ಕೂಡಿಕೊಂಡು ಯುಗ್ಮಜ ಉದ್ಭವಿಸುತ್ತದೆ. ಇದು ಬೆಳೆದು ಶಿಲಕೆಗಳನ್ನು ಪಡೆದಿರುವ ಪ್ಯಾರಂಕೈಮುಲ ಎಂಬ ಲಾರ್ವ ಉದ್ಭವಿಸುತ್ತದೆ. ಇದು ಸ್ವಲ್ಪ ಕಾಲದ ತನಕ ಸ್ವತಂತ್ರವಾಗಿ ಈಜಿಕೊಂಡಿದ್ದು ಅನಂತರ ಸ್ಪಂಜು ಪ್ರಾಣಿಯಾಗಿ ಬೆಳೆಯುತ್ತದೆ.

ಕುಟುಕು ಕಣವಂತಗಳು ಕೂಡ ಸ್ಪಂಜು ಪ್ರಾಣಿಗಳಂತೆ ಕೋಶಗಳ ಹಂತದಲ್ಲಿಯೇ ಇವೆ. ಆದರೆ. ಇವುಗಳಲ್ಲಿ ತಾತ್ಕಾಲಿಕ ಪ್ರಜನನ ಗ್ರಂಥಿಗಳು ಕೆಲವು ಶ್ರಾಯಗಳಲ್ಲಿ ಮೂಡುವುವು. ಹೈಡ್ರೊಜೋವ ಗುಂಪಿನ ಪ್ರಾಣಿಗಳಲ್ಲಿ ಲಿಂಗಾಣುಗಳೂ ಹೊರಚರ್ಮದ ಕೆಲವು ಕೋಶಗಳ ಗುಂಪುಗಳಿಂದ ಉದ್ಭವಿಸುತ್ತವೆ. ಈ ಗುಂಪಿನಲ್ಲಿ ಏಕಲಿಂಗಿಗಳೂ ದ್ವಿಲಿಂಗಿಗಳೂ ಉಂಟು. ಸ್ಕೈಪೋಜೋವ ಮತ್ತು ಆಂತೊಜೋವ ಅಥವಾ ಹವಳ ಪ್ರಾಣಿಗಳಲ್ಲಿ ಲಿಂಗಾಣುಗಳು ಅಂತರ ಚರ್ಮದಲ್ಲಿ ರೂಪುಗೊಳ್ಳುವುವು. ಹೈಡ್ರೊಜೋವ ಗುಂಪಿನ ಕೆಲವು ಪ್ರಭೇದಗಳು ಬೇಸಿಗೆಯಲ್ಲಿ ನಿರ್ಲಿಂಗ ರೀತಿಯಲ್ಲೂ ಚಳಿಗಾಲದಲ್ಲಿ ಲೈಂಗಿಕ ರೀತಿಯಲ್ಲೂ ಪ್ರಜನನ ನಡೆಸುವುವು. ಚಳಿಗಾಲ ಪ್ರಾರಂಭವಾದ ಕೂಡಲೆ ಇವುಗಳಲ್ಲಿ ವೃಷಣ ಮತ್ತು ಅಂಡಾಶಯಗಳ ಬೆಳವಣಿಗೆಯಾಗುತ್ತದೆ. ಸಮೂಹಜೀವಿ ಹೈಡ್ರೊಜೋವಗಳಲ್ಲಿ ಪಾಲಿಪುಗಳು ನಿರ್ಲಿಂಗ ರೀತಿಯಲ್ಲಿ ಪ್ರಜನನವನ್ನು ಮಾಡಿ ಮೆಡುಸಗಳನ್ನು ನಿರ್ಮಿಸುತ್ತವೆ. ಮೆಡುಸಗಳಲ್ಲಿ ಜನನಗ್ರಂಥಿಗಳಿದ್ದು ಅವು ಲೈಂಗಿಕ ರೀತಿಯಲ್ಲಿ ಪ್ರಜನನವನ್ನು ಮಾಡುತ್ತವೆ. ಸಾಮಾನ್ಯವಾಗಿ ಕುಟುಕು ಕಣವಂತಗಳಲ್ಲಿ ಲಿಂಗಾಣುಗಳು ನೇರವಾಗಿ ಹೊರತೆರೆದಿರುವುದರಿಂದ ನಾಳಗಳು ಇರುವುದಿಲ್ಲ. ಬಹಳಷ್ಟು ಕುಟುಕುಕಣವಂತಗಳು ಜಲವಾಸಿಗಳು. ಇವುಗಳ ವೀರ್ಯಾಣುಗಳು ಚಲನಾಂಗಗಳನ್ನೂ ಚಲನ ಸಾಮಥ್ರ್ಯವನ್ನೂ ಪಡೆದಿವೆ. ಅಂಡಾಣುಗಳು ಅಚಲವಾಗಿದ್ದು ಪಿತೃಶರೀರಕ್ಕೆ ಅಂಟಿಕೊಂಡಿರುತ್ತವೆ. ಯುಗ್ಮಜಗಳು ಬೆಳೆದು ಪ್ಲಾನುಲ ಎಂಬ ಲಾರ್ವ ಉತ್ಪತ್ತಿಯಾಗುತ್ತದೆ. ಕೆಲವು ಪ್ರಭೇದಗಳಲ್ಲಿ ವೀರ್ಯಾಣು ಮತ್ತು ಅಂಡಾಣು ಎರಡೂ ನೀರಿನಲ್ಲಿ ಸ್ವತಂತ್ರವಾಗಿ ಬಿಡಲ್ಪಡುತ್ತವೆ. ಪ್ಲಾನುಲ ಬೆಳೆದು ಪಾಲಿಪ್ ಉದ್ಭವಿಸುತ್ತದೆ. ಕೆಲವು ಪ್ರಭೇದಗಳಲ್ಲಿ ನಿರ್ಲಿಂಗ ಮತ್ತು ಲೈಂಗಿಕ ಸಂತತಿಗಳ ಪರ್ಯಾಯವನ್ನು ಕಾಣಬಹದು. ಕುಟುಕುಕಣವಂತಗಳಿಗಿಂತ ಹಾಗೂ ಸ್ಪಂಜುಪ್ರಾಣಿಗಳಿಗಿಂತ ಭಿನ್ನ ಪರಿಸ್ಥಿತಿ ಚಪ್ಪಟೆ ಹುಳುಗಳಲ್ಲಿ ಕಾಣಬರುತ್ತದೆ. ಇವುಗಳಲ್ಲಿ ಪ್ರಜನನಾಂಗವ್ಯೂಹಗಳನ್ನು ಕಾಣಬಹುದು. ಪ್ರಜನನ ಗ್ರಂಥಿಗಳು ದೇಹದಲ್ಲಿ ಬಹಳ ಆಳದಲ್ಲಿ ಸ್ಥಿತವಾಗಿರುವುದರಿಂದ ಲಿಂಗಾಣುಗಳನ್ನು ಹೊರಹಾಕಲು ಅವಶ್ಯಕವಾದ ನಾಳಗಳೂ ಕಾಣದೊರೆಯುವುವು. ಏಸೀಲಗಳಲ್ಲಿ ಮಾತ್ರ ಈ ರೀತಿಯ ಪ್ರಜನನಾಂಗಗಳು ಇಲ್ಲ. ಈ ಉಪವರ್ಗದ ಪ್ರಾಣಿಗಳಲ್ಲಿ ಪ್ರಜನನ ಗ್ರಂಥಿಗಳು ಸ್ಪಂಜು ಪ್ರಾಣಿ ಮತ್ತು ಕುಟುಕುಕಣವಂತಗಳಲ್ಲಿರುವಂತೆ ತಾತ್ಕಾಲಿಕ ಅಂಗಗಳಾಗಿದ್ದು, ನಿರ್ದಿಷ್ಟ ನಾಳಗಳು ಮಾತ್ರ ಇಲ್ಲವಾಗಿವೆ. ಈ ಪ್ರಾಣಿಗಳಲ್ಲಿ ಕೂಡ ಲಿಂಗಾಣುಗಳು ಅಮೀಬದಂಥ ಕೋಶಗಳಿಂದ ಮಾರ್ಪಾಟಾದ ಜರಾಯು ಕೋಶಗಳಿಂದ ಉದ್ಭವಿಸುತ್ತವೆ. ಬಹಳಷ್ಟು ಚಪ್ಪಟೆ ಹುಳುಗಳು ಏಕಲಿಂಗಿಗಳು. ಇವುಗಳಲ್ಲಿ ಪ್ರತಿ ಪ್ರಾಣಿಯಲ್ಲಿ ಒಂದು ಅಥವಾ ಎರಡು ಅಂಡಾಶಯ ಅಥವಾ ವೃಷಣಗಳು ಇರುತ್ತವೆ. ಅಂಡಾಶಯದಿಂದ ಅಂಡಾಣುಗಳು ಹೊರಕ್ಕೆ ಬರಲು ನಾಳಗಳಿದ್ದು ಇವಕ್ಕೆ ಅಂಡಾಣು ವಾಹಕ ನಾಳಗಳೆಂದು ಹೆಸರು. ಕೆಲವು ಪ್ರಭೇದಗಳ ಅಂಡಾಣು ವಾಹಕ ನಾಳಗಳಲ್ಲಿ ಹೊರಸಂಚಿಯೊಂದು ಇದೆ. ಇದೇ ವೀರ್ಯಾಣುಧಾರಕ ಅಥವಾ ವೀರ್ಯಪಾತ್ರ. ಸಂಭೋಗಕಾಲದಲ್ಲಿ ಹೆಣ್ಣಿನ ಅಂಡಾಣುವಾಹಕ ನಾಳವನ್ನು ಪ್ರವೇಶಿಸುವ ವೀರ್ಯಾಣುಗಳು ವೀರ್ಯಪಾತ್ರ ಅಥವಾ ವೀರ್ಯಾಣುಧಾರಕಗಳಲ್ಲಿ ಸಂಗ್ರಹಗೊಳ್ಳುತ್ತವೆ. ಹಲವು ಪ್ರಭೇದಗಳಲ್ಲಿ ಅಂಡಾಣು ವಾಹಕ ನಾಳದ ಜೊತೆ ಯೋಕ್ ಗ್ರಂಥಿ ನಾಳಗಳೂ ಸೇರಿಕೊಂಡಿರುತ್ತವೆ. ಯೋಕ್ ಗ್ರಂಥಿಗಳಿಂದ ಸ್ರವಿಸಲ್ಪಟ್ಟ ಯೋಕ್‍ನಿಂದ ನಿಷೇಚಿತ ಮೊಟ್ಟೆಗಳಿಗೆ ಆಹಾರ ಪೂರೈಕೆಯಾಗುತ್ತದೆ. ಕೆಲವು ಪ್ರಭೇದಗಳಲ್ಲಿ ಮಾರ್ಪಾಟಾದ ಯೋಕ್ ಗ್ರಂಥಿಗಳು ತಮ್ಮ ಸ್ರಾವದಿಂದ ನಿಷೇಚಿತ ಮೊಟ್ಟೆಗಳ ಹೊರಕವಚವನ್ನು ನಿರ್ಮಿಸುತ್ತವೆ. ನಿಷೇಚಿತ ಮೊಟ್ಟೆಗಳು ಹೊರಬರುವಾಗ ಅವುಗಳ ಮುಂದಿನ ಬೆಳವಣಿಗೆ ಪೂರ್ಣಗೊಳ್ಳುವ ತನಕ ಅಥವಾ ಲಾರ್ವ ಅಥವಾ ಮರಿಗಳು ಹೊರಬಂದು ಅವು ಸ್ವತಃ ಆಹಾರ ಸಂಗ್ರಹ ಮಾಡಲು ಶಕ್ತವಾಗುವತನಕ ಅವಶ್ಯವಿರುವ ಆಹಾರ ಶೇಖರಣೆಯಾಗಿರುವುದಲ್ಲದೆ ಮೊಟ್ಟೆಗೆ ಆಯಾ ಪ್ರಭೇದ ಅವುಗಳ ಬೆಳವಣಿಗೆ ಹಾಗೂ ಜೀವನ ಕ್ರಮವನ್ನು ಅನುಸರಿಸಿ ಬೇರೆ ಬೇರೆ ಮಂದದ ಹೊರಕವಚವೂ ರೂಪಿತವಾಗಿರುವುದು. ಗಂಡು ಚಪ್ಪಟೆ ಹುಳುಗಳು ಪ್ರಜನನ ಗ್ರಂಥಿ ವೃಷಣ. ಒಂದೇ ಪ್ರಾಣಿಯಲ್ಲಿ ಹಲವಾರು ವೃಷಣಗಳಿರುತ್ತವೆ. ಪ್ರತಿ ವೃಷಣದಿಂದ ಹಲವಾರು ವೀರ್ಯಾಣುಗಳು ಉತ್ಪತ್ತಿಯಾಗಿ ವೀರ್ಯಾಣುವಾಹಕ ನಾಳಗಳ ಮೂಲಕ ಸಾಗಿ ಹಲವಾರು ವೀರ್ಯಾಣು ವಾಹಕಗಳು ಕೂಡಿ ರಚಿಸಿರುವ ವೀರ್ಯಾಣು ನಾಳದ ಮೂಲಕ ಹೊರಬರುವುವು. ವೀರ್ಯಾಣು ನಾಳದ ಒಂದು ತುದಿ ಸ್ಖಲನನಾಳವಾಗಿ ಮಾರ್ಪಾಟಾಗಿದೆ. ಅಲ್ಲದೆ, ವೀರ್ಯಾಣು ವಾಹಕಗಳು ಅಲ್ಲಲ್ಲಿ ಊದಿಕೊಂಡಿದ್ದು ವೀರ್ಯಪಾತ್ರಗಳಾಗಿವೆ. ಈ ಭಾಗಗಳಲ್ಲಿ ವೀರ್ಯಾಣುಗಳು ಸಂಗ್ರಹಗೊಳ್ಳುವುವು. ಕೆಲವು ಪ್ರಭೇದಗಳಲ್ಲಿ ವೀರ್ಯಾಣು ನಾಳ ವೀರ್ಯಾಣು ಕೋಶಿಕೆ (ಸೆಮಿನಲ್ ವೆಸಿಕಲ್) ಆಗಿ ಮಾರ್ಪಟ್ಟಿವೆ. ವೀರ್ಯಾಣು ಕೋಶಿಕೆ ಅಥವಾ ವೀರ್ಯಾಣು ಪಾತ್ರದಲ್ಲಿ ಪ್ರಾಸ್ಟೇಟ್ ಗ್ರಂಥಿ ಅಥವಾ ಕೋಶಗಳು ಇದ್ದು ಇವುಗಳ ಸ್ರಾವಕಗಳು ವೀರ್ಯದ್ರವವನ್ನು ಸ್ರವಿಸುತ್ತವೆ. ಕೆಲವು ಪ್ರಭೇದಗಳಲ್ಲಿ ಶಿಶ್ನವೂ ಇದ್ದು ಸಂಭೋಗ ನಡೆಯುವಾಗ ವೀರ್ಯಾಣುಗಳನ್ನು ಸ್ತ್ರೀ ಜನನಾಂಗಗಳಿಗೆ ಸೇರಿಸುತ್ತದೆ. ಚಪ್ಪಟೆ ಹುಳುಗಳಲ್ಲಿ ಅಂತರ್ ನಿಷೇಚನ ಉಂಟು. ನಾಳಗಳುಳ್ಳ ಗಂಡು ಹುಳುಗಳೂ ವೀರ್ಯಾಣುವನ್ನು ಹೆಣ್ಣಿನ ಜನನಾಂಗಗಳಿಗೆ ಸ್ಖಲನನಾಳ ಅಥವಾ ಶಿಶ್ನದ ಮೂಲಕ ಸೇರಿಸುತ್ತವೆ. ಕೆಲವು ಪ್ರಭೇದಗಳಲ್ಲಿ ಸ್ವಯಂ ನಿಷೇಚನವೂ ಬಹಳಷ್ಟು ಪ್ರಭೇದಗಳಲ್ಲಿ ಅನ್ಯ ನಿಷೇಚನವೂ ನಡೆಯುತ್ತವೆ. ಪರಾವಲಂಬಿ ಹುಳುಗಳಲ್ಲಿ ಸ್ವಯಂ ನಿಷೇಚನ ಸಾಮಾನ್ಯ. ಯುಗ್ಮಜ ಬೆಳೆದು ಲಾರ್ವವಾಗಿ ಮಾರ್ಪಡುತ್ತದೆ. ಚಪ್ಪಟೆ ಹುಳುಗಳ ಲಾರ್ವಗಳಲ್ಲಿ ಹಲವಾರು ವಿಧ. ಕೆಲವು ಪರಾವಲಂಬಿ ಹುಳುಗಳ ಲಾರ್ವಗಳಲ್ಲಿ ಬೆಳವಣಿಗೆಯ ಹಂತಗಳುಂಟು. ಕೆಲವು ಪ್ರಭೇದಗಳಲ್ಲಿ ಲಾರ್ವಗಳೂ ಪ್ರಜನನದಲ್ಲಿ ತೊಡಗಬಲ್ಲವು. ಒಂದೇ ಬಾರಿಗೆ ಲಕ್ಷಾಂತರ ಮೊಟ್ಟೆಗಳು ನಿಷೇಚನೆಗೊಳ್ಳುವುದರ ಜೊತೆಗೆ ಲಾರ್ವಗಳಿಗೆ ಪ್ರಜನನ ಸಾಮಥ್ರ್ಯ ಇರುವುದರಿಂದ ಇವುಗಳ ಪರಾವಲಂಬಿ ಜೀವನ ಯಶಸ್ವಿಯಾಗಲು ಅನುಕೂಲವಾಗಿದೆ.

ದುಂಡು ಹುಳುಗಳು ಸಾಮಾನ್ಯವಾಗಿ ಏಕಲಿಂಗಿಗಳು. ಗಂಡು ಮತ್ತು ಹೆಣ್ಣುಗಳು ಹೊರನೋಟಕ್ಕೆ ಕೂಡ ಬೇರೆ ಬೇರೆ ತೆರನಾಗಿದ್ದು ಇವುಗಳಲ್ಲಿ ಲೈಂಗಿಕ ರೂಪತೆ ಸುಸ್ಪಷ್ಟವಾಗಿದೆ. ಗಂಡುಹುಳುಗಳು ಹೆಣ್ಣಿಗಿಂತ ಚಿಕ್ಕ ಗಾತ್ರದವು. ಇವುಗಳ ಪ್ರಜನನಾಂಗಗಳು ಸರಳ ಮಾದರಿಯವು. ವೃಷಣ ಅಥವಾ ಅಂಡಾಶಯ ಕೊಳವೆಯ ಆಕಾರದಲ್ಲಿದ್ದು ಉದ್ದವಾಗಿ ಸುತ್ತಿಕೊಂಡಿರುವ ನಾಳಗಳ ತುದಿಯಲ್ಲಿರುತ್ತವೆ. ಗಂಡು ಪ್ರಾಣಿಯಲ್ಲಿ ಈ ನಾಳಗಳನ್ನು ವೀರ್ಯಾಣುವಾಹಕ ಎಂದೂ ಹೆಣ್ಣಿನಲ್ಲಿ ಅಂಡಾಣುವಾಹಕ ಎಂದೂ ಕರೆಯಲಾಗುತ್ತದೆ. ಹೆಣ್ಣಿನಲ್ಲಿ ಅಂಡಾಣು ವಾಹಕದ ಆದಿ ಭಾಗ ಗರ್ಭಾಶಯವಾಗಿ ಮಾರ್ಪಾಟಾಗಿದೆ. ಗರ್ಭಾಶಯದಲ್ಲಿ ನಿಷೇಚಿತ ಮೊಟ್ಟೆಗಳ ಸಂಗ್ರಹವಿರುತ್ತದೆ. ಕೆಲವು ಪ್ರಭೇದಗಳು ಮೊಟ್ಟೆಗಳನ್ನಿಡುತ್ತವೆ. ಇನ್ನು ಕೆಲವು ಪ್ರಭೇದಗಳಲ್ಲಿ ಬೆಳವಣಿಗೆ ಗರ್ಭಾಶಯದಲ್ಲಿಯೇ ನಡೆದು ಲಾರ್ವ ಹೊರಬರುತ್ತದೆ. ಸಂಭೋಗವಾಗುವಾಗ ವೀರ್ಯಾಣುಗಳು ಗಂಡಿನ ಜನನಾಂಗಗಳ ಮೂಲಕ ಹೆಣ್ಣಿನ ಜನನಾಂಗವನ್ನು ಸೇರುತ್ತವೆ. ಪ್ರತಿ ದುಂಡುಹುಳು ಒಂದು ಬಾರಿಗೆ ಲಕ್ಷಾಂತರ ಮೊಟ್ಟೆಗಳನ್ನು ಉತ್ಪಾದಿಸುವುದು. ಕೆಲವು ದುಂಡುಹುಳುಗಳ ಪ್ರಭೇದಗಳಲ್ಲಿ ವೀರ್ಯಾಣು ಅಮೀಬ ಆಕಾರದಲ್ಲಿದೆ. ಸಂಭೋಗ ಕಾಲದಲ್ಲಿ ಗಂಡು ಹೆಣ್ಣು ಹುಳುವನ್ನು ಸೂಚ್ಯಂಗಗಳಿಂದ ಭದ್ರವಾಗಿ ಹಿಡಿದು ತನ್ನ ಸ್ಖಲನ ನಾಳವನ್ನೂ ಹೆಣ್ಣಿನ ಜನನಾಂಗದೊಳಗೆ ತೂರುತ್ತದೆ. ಕೆಲವು ದುಂಡುಹುಳುಗಳಲ್ಲಿ ಅಲ್ಪಾವಧಿಯ ಲಾರ್ವ ಹಂತವಿದೆ.

ಕೆಲವು ತೆರನ ದುಂಡುಹುಳುಗಳಲ್ಲಿ ಲಿಂಗಬದಲಾವಣೆಯನ್ನೂ ಕಾಣಬಹುದು. ಸ್ವತಂತ್ರ ಜೀವನ ನಡೆಸುವ ಹುಳುಗಳಲ್ಲಿ ಲಿಂಗ ಬದಲಾವಣೆ ಸರ್ವೇಸಾಮಾನ್ಯ. ಯಾವುದೇ ಪ್ರದೇಶದಲ್ಲಿ ಯಾವುದೇ ನಿರ್ದಿಷ್ಟಲಿಂಗದ ಪ್ರಾಣಿಗಳು ಹೆಚ್ಚು ಸಂಖ್ಯೆಯಲ್ಲಿರುವಾಗ ಅವುಗಳಲ್ಲಿ ಕೆಲವು ತಮ್ಮ ಲಿಂಗಗಳನ್ನು ಬದಲಾಯಿಸಿಕೊಳ್ಳುತ್ತವೆ. ಲಿಂಗ ಬದಲಾವಣೆಯಿಂದ ಕೆಲವು ಸಂದರ್ಭಗಳಲ್ಲಿ ಅಂತರಲಿಂಗಗಳೂ ಹುಟ್ಟಿಕೊಳ್ಳುವುದುಂಟು.

ವಲಯ ವಂತಗಳಲ್ಲಿ ಚೆನ್ನಾಗಿ ಬೆಳೆದ ದೇಹಾವಕಾಶವುಂಟು. ಈ ಅವಕಾಶ ಭಿತ್ತಿಗಳಲ್ಲಿ ಜನನಗ್ರಂಥಿಗಳಿರುವುವು. ಕೆಲವು ವಲಯ ವಂತಗಳಲ್ಲಿ ಜನನ ಗ್ರಂಥಿಗಳು ಹಲವಾರು ಉಂಗುರಗಳಲ್ಲಿರುತ್ತವೆ. ಪಾಲಿಕೀಟಗಳಲ್ಲಿ ಇದು ಸಾಮಾನ್ಯ. ಉಳಿದ ತೆರನ ವಲಯ ವಂತಗಳಲ್ಲಿ ಜನನ ಗ್ರಂಥಿಗಳು ಒಂದೆರಡು ನಿರ್ದಿಷ್ಟ ಉಂಗುರಗಳಲ್ಲಿ ಮಾತ್ರ ಇರುತ್ತವೆ. ಪಾಲಿ ಕೀಟಗಳು ಸಾಮಾನ್ಯವಾಗಿ ಏಕಲಿಂಗಿಗಳು. ವೃಷಣ ಮತ್ತು ಅಂಡಾಶಯಗಳು ಎಲ್ಲ ಉಂಗುರಗಳಲ್ಲಿರದಿದ್ದರೂ ವೀರ್ಯಾಣು ಮತ್ತು ಅಂಡಾಣುಗಳು ದೇಹಾವಕಾಶದ ಎಲ್ಲ ಭಾಗಗಳಲ್ಲೂ ತುಂಬಿಕೊಂಡಿರುತ್ತವೆ. ಪಾಲಿ ಕೀಟಗಳಲ್ಲಿ ನಿಷೇಚನ ದೇಹದ ಹೊರಗೆ ನಡೆಯುತ್ತದೆ. ಕೆಲವು ಪ್ರಭೇದಗಳಲ್ಲಿ ಪ್ರಜನನ ಚಾಂದ್ರಮಾನ ಋತು ಚಕ್ರಗಳನ್ನು ಅವಲಂಬಿಸಿರುತ್ತದೆ. ಸಂತಾನ ವೃದ್ಧಿಯ ಶ್ರಾಯದಲ್ಲಿ ಇವುಗಳ ದೇಹ ಮುಂಭಾಗದ ಏಟೋಕ್ ಮತ್ತು ಹಿಂಭಾಗದ ಎಪಿಟೋಕ್ ಎರಡು ಭಾಗಗಳಾಗಿ ರೂಪುಗೊಳ್ಳುತ್ತದೆ. ಜನನ ಗ್ರಂಥಿಗಳು ಹಿಂಭಾಗದ ಎಪಿಟೋಪುಗಳಲ್ಲಿ ಬೆಳೆಯುತ್ತವೆ. ಚಂದ್ರನ ಒಂದು ನಿರ್ದಿಷ್ಟ ಕಲೆಯಲ್ಲಿ (ಪೀಸ್) ಎಪಿಟೋಕ್ ಭಾಗ ಏಟೋಕ್ ಭಾಗದಿಂದ ಬೇರ್ಪಟ್ಟು ಎರಡೂ ನೀರಿನಲ್ಲಿ ಈಜುತ್ತಿರುತ್ತವೆ. ಹೆಣ್ಣು ಎಪಿಟೋಕ್ ಗಂಡು ಎಪಿಟೋಕನ್ನು ವೀರ್ಯಾಣುಗಳ ಬಿಡುಗಡೆಗೆ ಪ್ರಚೋದಿಸುತ್ತದೆ. ವೀರ್ಯಾಣುಗಳು ಹೊರಬಂದ ಅನಂತರ ಅಂಡಾಣುಗಳೂ ನೀರಿನಲ್ಲಿ ಬಿಡುಗಡೆಯಾಗುವುವು. ದೇಹದ ಹೊರಗೆ ನಿಷೇಚನೆ ನಡೆದು ಯುಗ್ಮಜಗಳು ಶಿಲಕಾಂಗಗಳ ವಲಯಗಳನ್ನು ಹೊಂದಿರುವ ಟ್ರೋಖೊಫೋರ್ ಲಾರ್ವ ಬೆಳೆಯುತ್ತದೆ. ಈ ಲಾರ್ವ ರೂಪಪರಿವರ್ತನೆಗೆ ಒಳಗಾಗಿ ಪ್ರಬುದ್ಧ ಜೀವಿಯಾಗುತ್ತದೆ.

ಎರೆ ಹುಳುಗಳು ದ್ವಿಲಿಂಗಿಗಳು. ಇವುಗಳಲ್ಲಿ ಜನನ ಗ್ರಂಥಿಗಳು ನಿರ್ದಿಷ್ಟ ಉಂಗುರಗಳಲ್ಲಿ ಮಾತ್ರ ಇರುತ್ತವೆ. ವೀರ್ಯಾಣುಗಳು ವೀರ್ಯಾಣು ಕೋಶಗಳಲ್ಲಿಯೂ ಅಂಡಾಣುಗಳು ಅಂಡಾಣು ಕೋಶಗಳಲ್ಲಿಯೂ ಸಂಗ್ರಹವಾಗುತ್ತವೆ. ಎರಡು ಅಥವಾ ಮೂರು ಜೊತೆ ವೃಷಣ ಮತ್ತು ಅಂಡಾಶಯಗಳಿದ್ದು ಅವುಗಳಿಂದ ನಾಳಗಳು ಹೊರಡುತ್ತವೆ. ಈ ನಾಳಗಳ ಮೂಲಕ ವೀರ್ಯಾಣುಗಳು ವೀರ್ಯಾಣುಧಾರಕಗಳನ್ನು ಸೇರುತ್ತವೆ. ಜಿಗಣೆಗಳು ಏಕಲಿಂಗಿಗಳಾಗಿದ್ದು ಒಂದು ಜೊತೆ ಅಂಡಕೋಶ ಅಥವಾ ಕೆಲವು ಜೊತೆ ವೃಷಣಗಳನ್ನು ಪಡೆದಿವೆ. ನಾಳಗಳು ಹೆಚ್ಚು ಕಡಿಮೆ ಎರೆಹುಳುಗಳ ನಾಳಗಳಂತೆಯೇ ಇವೆ. ಎರೆಹುಳುಗಳಲ್ಲಿ ಕೆಲವು ಉಂಗುರಗಳು ಪರಸ್ಪರ ಸೇರಿಕೊಂಡು ಗ್ರಂಥಿಗಳಿಂದ ಕೂಡಿದ ಕ್ಲೈಟೆಲ್ಲಮ್ ಆಗಿ ಮಾರ್ಪಟ್ಟಿವೆ. ಸಂಭೋಗ ಕಾಲದಲ್ಲಿ ಲೋಳೆಯಂಥ ವಸ್ತು ಇದರಿಂದ ಸ್ರವಿಸುತ್ತದೆ. ಎರಡು ಎರೆಹುಳುಗಳು ಒಂದಕ್ಕೊಂದು ಅಂಟಿಕೊಳ್ಳಲು ಇದು ಸಹಾಯಕ. ವೀರ್ಯಾಣುಗಳು ಒಂದರಿಂದ ಇನ್ನೊಂದು ಹುಳುವನ್ನು ಸೇರಿ ವೀರ್ಯಾಣುಧಾರಕದಲ್ಲಿ ಸಂಗ್ರಹವಾಗುತ್ತವೆ. ಅನಂತರ ಕ್ಲೈಟೆಲ್ಲಮಿನಿಂದ ಗಟ್ಟಿಯಾದ ವಸ್ತುವೊಂದು ಸ್ರವಿಸಲ್ಪಟ್ಟು ಮೊಟ್ಟೆಗಳ ಗೂಡಾಗಿ ಪರಿವರ್ತನೆಗೊಳ್ಳುತ್ತದೆ. ಹುಳುವಿನ ವಿಶಿಷ್ಟ ಚಲನೆಯಿಂದ ಈ ಗೂಡು ದೇಹದ ಮುಂಭಾಗಕ್ಕೆ ಚಲಿಸುತ್ತದೆ. ಆಗ ಇದು ವೀರ್ಯಾಣುಧಾರಕವನ್ನು ದಾಟುವಾಗ ವೀರ್ಯಾಣುಗಳಿಂದ ಮೊಟ್ಟೆಗಳು ನಿಷೇಚನೆಗೊಳ್ಳುತ್ತವೆ. ಅನಂತರ ಗೂಡು ಎರೆಹುಳುವಿನಿಂದ ಬೇರ್ಪಡುವುದು. ಗೂಡುಗಳ ಎರಡೂ ತುದಿಗಳು ಮುಚ್ಚಿಕೊಂಡು ಮೊಟ್ಟೆಗಳ ಮುಂದಿನ ಬೆಳವಣಿಗೆ ಈ ಗೂಡಿನ ಒಳಗೆ ನಡೆಯುತ್ತದೆ. ಹಲವು ತೆರನ ಜಿಗಣೆಗಳಲ್ಲೂ ಈ ತೆರನ ಗೂಡನ್ನು ಕಾಣಬಹುದು. ಜಿಗಣೆಯ ಇನ್ನು ಕೆಲವು ಪ್ರಭೇದಗಳು ಶಿಶ್ನಗಳಿಂದ ವೀರ್ಯಾಣುಗಳನ್ನು ನೇರವಾಗಿ ಹೆಣ್ಣಿನ ಜನನಾಂಗದೊಳಕ್ಕೆ ಸೇರಿಸುತ್ತವೆ.

ಮೃದ್ವಂಗಿಗಳು ವಿಕಾಸದ ದೃಷ್ಟಿಯಿಂದ ವಲಯವಂತಳಿಗೆ ಸಮೀಪ ಸಂಬಂಧಿಗಳು. ಈ ಪ್ರಾಣಿಗಳಲ್ಲಿ ದೇಹಾವಕಾಶ ಪೆರಿಕಾರ್ಡಿಯಮ್, ಜನನಗ್ರಂಥಿ ಮತ್ತು ಶೋಧಕ ಅವಕಾಶಗಳಿಗೆ ಮಾತ್ರ ಸೀಮಿತವಾಗಿದೆ. ಪ್ರಾಚೀನ ಮೃದ್ವಂಗಿಗಳಲ್ಲಿ ಬಹುಶಃ ಇವು ಮೂರು ಅವಕಾಶಗಳೂ ಜೊತೆಗೂಡಿದ್ದು ಲಿಂಗಾಣುಗಳು ಇವು ಮೂರನ್ನೂ ದಾಟಿ ಹೋಗುತ್ತಿದ್ದಿರಬೇಕು. ಈಗಿನ ಮೃದ್ವಂಗಿಗಳಲ್ಲಿ ಲಿಂಗಾಣು ಸಾಗಣೆಗೆ ನಾಳಗಳುಂಟು. ಉದರ ಪಾದಿಗಳಲ್ಲಿ ಒಂದೇ ಒಂದು ಜನನಗ್ರಂಥಿ ಇದೆ. ದ್ವಿಲಿಂಗಿಗಳಲ್ಲಿ ಅಂಡಾಣು ಮತ್ತು ವೀರ್ಯಾಣುಗಳೂ ಒಂದೇ ನಾಳದ ಮೂಲಕ ಹೊರಸಾಗುತ್ತವೆ. ಈ ನಾಳದ ತುದಿಯಲ್ಲಿ ಸಂಭೋಗಾಂಗ ಇದೆ. ಇಚ್ಚಿಪ್ಪು ಪ್ರಾಣಿಗಳಲ್ಲಿ ಅಥವಾ ಪೆಲಿಸಿಪಾಡುಗಳಲ್ಲಿ ಏಕಲಿಂಗಿ, ದ್ವಿಲಿಂಗಿಗಳೆರಡೂ ಇವೆ. ಇವುಗಳಲ್ಲಿ ಎರಡು ಜನನ ಗ್ರಂಥಿಗಳುಂಟು. ಇವುಗಳ ನಾಳಗಳು ವಿಸರ್ಜನಾಂಗಗಳ ನಾಳಗಳೊಂದಿಗೆ ಜೊತೆಗೂಡಿರುವುವು. ಶಿರಪಾದಿಗಳು ಸಾಮಾನ್ಯವಾಗಿ ಏಕಲಿಂಗಿಗಳು. ಇವುಗಳಲ್ಲಿ ಒಂದೇ ಒಂದು ವೃಷಣ ಅಥವಾ ಅಂಡಾಶಯವಿದ್ದು ವೀರ್ಯಾಣು ಅಥವಾ ಅಂಡಾಣುಗಳು ಪೆರಿಕಾರ್ಡಿಯಮ್ ಅವಕಾಶದ ಮೂಲಕ ಹಾದು ಲಿಂಗನಾಳಗಳ ಮೂಲಕ ಹೊರಬೀಳುತ್ತವೆ. ಇವುಗಳ ಅಂಡಾಣುವಾಹಕ ನಾಳಗಳಲ್ಲಿ ಕವಚಗಳನ್ನು ಸ್ರವಿಸುವ ಗ್ರಂಥಿಗಳಿವೆ. ಗಂಡುಶಿರಪಾದಿಗಳಲ್ಲಿ ವೀರ್ಯಾಣು ಕೋಶಿಕೆಗಳಿದ್ದು ಅದರಲ್ಲಿ ವೀರ್ಯಾಣು ಸಂಪುಟ ರೂಪುಗೊಂಡು ವೀರ್ಯಾಣುಗಳನ್ನು ಸಂಗ್ರಹಿಸುತ್ತದೆ. ಸಂಭೋಗಕಾಲದಲ್ಲಿ ಈ ಸಂಪುಟಗಳು ಹೆಣ್ಣಿನ ಜನನಾಂಗಗಳಿಗೆ ವರ್ಗಾವಣೆಯಾಗಿ ನಿಷೇಚನೆಯ ಸಮಯದಲ್ಲಿ ವೀರ್ಯಾಣುಗಳನ್ನು ಹೊರಹಾಕುತ್ತವೆ.

ಕೆಲವು ಉದರಪಾದಿಗಳಲ್ಲಿ ವಿಭಿನ್ನ ಗಾತ್ರದ ವೀರ್ಯಾಣುಗಳು ಉತ್ಪತಿಯಾಗುವುವು. ದೊಡ್ಡ ಗಾತ್ರದ ವೀರ್ಯಾಣುಗಳು ಚಿಕ್ಕ ಗಾತ್ರದವನ್ನು ಅಂಡಾಣುವಾಹಕ ನಾಳಗಳ ಮೂಲಕ ಅಂಡಾಣುಗಳಿಗೆ ತಲಪಿಸುತ್ತವೆ. ದೊಡ್ಡ ವೀರ್ಯಾಣುಗಳ ನ್ಯೂಕ್ಲಿಯಸುಗಳು ಅಪಭ್ರಂಶವಾಗಿವೆ. ಶಿರಪಾದಿಗಳಲ್ಲಿ ವೀರ್ಯಾಣು ಸಾಗಣೆ ಕಾರ್ಯಕ್ಕೆ ತಕ್ಕಂಥ ಕೆಲವು ಬಾಹುಗಳುಂಟು. ಬಸವನ ಹುಳುಗಳ ಕೆಲವು ಪ್ರಭೇದಗಳಲ್ಲಿ ಸಂಭೋಗಕ್ಕೆ ಮುಂಚೆ ಹೆಣ್ಣಿನ ದೇಹದ ಒಳಕುಹರದಲ್ಲಿ ಸುಣ್ಣದ ಒಂದು ಕಣೆ (ಡಾರ್ಟ್) ರಚಿತವಾಗುತ್ತದೆ. ಒಂದು ವೇಳೆ ಬಸವನಹುಳು ಸಂಭೋಗಕ್ಕೆ ಸಿದ್ಧವಾಗಿದ್ದರೂ ಈ ಕಣೆ ರೂಪುಗೊಳ್ಳದಿದ್ದರೆ ಸಂಭೋಗ ನಡೆಯುವುದಿಲ್ಲ.

ದುಂಡುಹುಳುಗಳಲ್ಲಿಯಂತೆ ಮೃದ್ವಂಗಿಗಳಲ್ಲೂ ಲಿಂಗ ಬದಲಾವಣೆಯನ್ನು ಕಾಣಬಹುದು. ಕೆಲವು ಪ್ರಭೇದಗಳಲ್ಲಿ ಅಂಡಾಶಯ - ವೃಷಣ (ಓವೊ - ಟೆಸ್ಟಿಸ್) ಉಂಟು. ಇವುಗಳಲ್ಲಿ ಆವಶ್ಯಕತೆಗೆ ಅನುಸಾರವಾಗಿ ವೀರ್ಯಾಣು ಅಥವಾ ಅಂಡಾಣುಗಳ ಉತ್ಪತ್ತಿಯಾಗುತ್ತದೆ. ಕೆಲವು ಏಕಲಿಂಗಿ ಮೃದ್ವಂಗಿಗಳಲ್ಲಿ ಒಂದೇ ರೀತಿಯ ಜನನ ಗ್ರಂಥಿಗಳಿದ್ದು, ಇನ್ನೊಂದು ತೆರನ ಜನನಗ್ರಂಥಿಗಳು ಅಪೂರ್ಣಾವಸ್ಥೆಯಲ್ಲಿರುತ್ತವೆ. ಒಂದು ಲಿಂಗದ ಜನನಗ್ರಂಥಿ ನಶಿಸಿಹೋದರೆ ಅಥವಾ ಯಾವುದೇ ಕಾರಣದಿಂದ ಅಪಭ್ರಂಶಗೊಂಡರೆ ಇನ್ನೊಂದು ಲಿಂಗದ ಜನನಗ್ರಂಥಿಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ. ಮುತ್ತಿನ ಚಿಪ್ಪಿನ ಪ್ರಾಣಿಗಳಲ್ಲಿ ವಾತಾವರಣದ ಉಷ್ಣತೆ ಅಥವಾ ಪರಿಸರದಲ್ಲಿರುವ ಆಹಾರಗಳಿಂದ ಲಿಂಗ ನಿರ್ಧಾರವಾಗುತ್ತದೆ. ಉದರ ಪಾದಿಗಳ ಒಂದು ಪ್ರಭೇದದಲ್ಲಿ ಸಮೂಹ ಜೀವನ ಕ್ರಮವಿದ್ದು ಜೀವಿಗಳು ಒಂದರ ಮೇಲೊಂದು ಪೇರಿಸಿಟ್ಟ ನಾಣ್ಯಗಳಂತೆ ಜೀವಿಸುವುವು. ಈ ಸಮೂಹದ ಕೆಳಭಾಗದಲ್ಲಿರುವ ಮೃದ್ವಂಗಿಗಳು ಹೆಣ್ಣುಗಳಾಗಿಯೂ ಮಧ್ಯೆ ಇರುವ ಪ್ರಾಣಿಗಳು ಅಂತರಲಿಂಗಿಗಳಾಗಿಯೂ ಮೇಲ್ಭಾಗದಲ್ಲಿರುವಂಥವು ಗಂಡುಗಳಾಗಿಯೂ ಇರುತ್ತವೆ. ಹೆಚ್ಚು ಹೆಚ್ಚು ಜೀವಿಗಳು ಸಮೂಹಕ್ಕೆ ಸೇರಿಸಲ್ಪಟ್ಟಾಗ ಮೇಲ್ಭಾಗದ ಕೆಲವು ಗಂಡುಗಳು ಅಂತರಲಿಂಗಿಗಳಾಗಿ ಕೆಳಭಾಗದಲ್ಲಿರುವ ಅಂತರಲಿಂಗಿಗಳು ಹೆಣ್ಣಾಗಿ ಪರಿವರ್ತನೆ ಹೊಂದುತ್ತವೆ. ಹೀಗೆ ಇಂಥ ಪ್ರಾಣಿಗಳಲ್ಲಿ ಸ್ತ್ರೀತ್ವ ಅಥವಾ ಪುರುಷತ್ವ ಪರಿಸರವನ್ನು ಅವಲಂಬಿಸಿದೆ.

ಸಂಧಿಪದಿಗಳಲ್ಲಿ ಅಸಂಖ್ಯಾತ ಪ್ರಭೇದಗಳಿವೆ. ಇವುಗಳ ಜನನಾಂಗಗಳಲ್ಲಿಯೂ ಅಪಾರ ವೈವಿಧ್ಯ ಉಂಟು. ಸಂಧಿಪದಿಗಳಲ್ಲಿ ಹೆಚ್ಚಿನವು ಏಕಲಿಂಗಿಗಳು. ಕೆಲವು ಸಂಧಿಪದಿಗಳಲ್ಲಿ ಅನಿಷೇಕ ಜನನವನ್ನು ಕಾಣಬಹುದು. ಮೂಲರಚನೆಯಲ್ಲಿ ಸಂಧಿಪದಿಗಳ ಪ್ರಜನನಾಂಗಗಳು ಉಳಿದ ಕಶೇರುಕಗಳನ್ನು ಹೋಲುತ್ತವಾದರೂ ಪರಿಸರ, ಜೀವನ ಕ್ರಮ ಹಾಗೂ ಸಂಭೋಗ ರೀತಿಗಳನ್ನು ಅವಲಂಬಿಸಿ ಪ್ರಜನನಾಂಗಗಳ ರಚನೆಯಲ್ಲಿ ಸಾಕಷ್ಟು ಮಾರ್ಪಾಟುಗಳನ್ನು ನೋಡಬಹುದು. ಕಠಿಣ ಚರ್ಮಿಗಳು ಸಾಮಾನ್ಯವಾಗಿ ಏಕಲಿಂಗಿಗಳು ಇವುಗಳಲ್ಲಿ ಜನನ ಗ್ರಂಥಿಗಳು ಜೊತೆಜೊತೆಯಾಗಿವೆ. ಗ್ರಂಥಿಗಳ ಕೆಳಭಾಗದಲ್ಲಿ ಲಿಂಗಾಣುಧಾರಕಗಳಿದ್ದು ಇವುಗಳ ಮೂಲಕ ಲಿಂಗಾಣುಗಳು ಹರಿದುಹೋಗುತ್ತವೆ. ಹೆಣ್ಣುಗಳಲ್ಲಿ ಅಂಡಾಣು ವಾಹಕ ನಾಳಗಳ ತುದಿಯಲ್ಲಿ ಹೊರಸಂಚಿಯಂತಿರುವ ಚಿಕ್ಕ ವೀರ್ಯ ಪಾತ್ರವಿದೆ. ಸಂಭೋಗ ಕಾಲದಲ್ಲಿ ಗಂಡುಪ್ರಾಣಿ ಹೆಣ್ಣನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಅವಶ್ಯವಾದ ಅನುಬಂಧಗಳೂ ಉಂಟು. ಕೆಲವು ಪ್ರಭೇದಗಳಲ್ಲಿ ಅನಿಷೇಕ ಜನನವೂ ಇದೆ. ನೀರು ಚಿಗಟಗಳಲ್ಲಿ ಜನನ ಗ್ರಂಥಿಗಳು ಜೋಡಿಗಳಲ್ಲಿವೆ. ಕೆಲವು ಕಠಿಣ ಚರ್ಮಿಗಳಲ್ಲಿ ಅಂಡಾಣುವಾಹಕ ನಾಳದ ತುದಿ ಭಾಗ ಅಂಡಾಣು ಕೋಶ ಆಗಿದ್ದು ಅಂಡಾಣುಗಳು ಇಲ್ಲಿ ಸಂಗ್ರಹವಾಗುವುವು. ವೀರ್ಯಾಣುಗಳು ವೀರ್ಯಾಣುಧಾರಕದಲ್ಲಿ ಸಂಗ್ರಹವಾಗುತ್ತವೆ. ಸಂಭೋಗ ಕಾಲದಲ್ಲಿ ಇಡೀ ವೀರ್ಯಾಣುಧಾರಕ ಹೆಣ್ಣಿನ ಜನನಾಂಗವನ್ನು ಸೇರುತ್ತದೆ. ಪರಾವಲಂಬಿ ಕೋಪಿಪಾಡ್‍ಗಳಲ್ಲಿ ಲೈಂಗಿಕ ದ್ವಿರೂಪತೆ ಹೆಚ್ಚು ಸ್ಪಷ್ಟ. ಕೆಲವು ಪ್ರಭೇದಗಳಲ್ಲಂತೂ ಹೆಣ್ಣನ್ನು ಕೋಪಿಪಾಡ್ ಪ್ರಾಣಿ ಎಂದು ಗುರುತಿಸುವುದೇ ಕಷ್ಟವಾಗುತ್ತದೆ. ಕೇವಲ ಅವುಗಳ ಅಂಡಾಣುಧಾರಕವನ್ನು ಅವಲಂಬಿಸಿ ಗುರುತಿಸಬಹುದು. ಕೆಲವು ಪ್ರಭೇದಗಳಲ್ಲಿ ಗಂಡು ಸ್ವತಂತ್ರ ಜೀವಿಯಾದರೆ ಹೆಣ್ಣು ಪರತಂತ್ರ ಜೀವನ ನಡೆಸುತ್ತದೆ. ಬಾರ್ನಕಲುಗಳು ಉಳಿದ ಕಠಿಣ ಚರ್ಮಿಗಳಿಗಿಂತ ಭಿನ್ನ : ದ್ವಿಲಿಂಗತ್ವ ಇವುಗಳಲ್ಲಿ ಸಾಮಾನ್ಯ. ಇದು ಅವುಗಳ ಸ್ಥಾವರ. ಜೀವನಕ್ಕೆ ಅನುಕೂಲವಾದ ಹೊಂದಾಣಿಕೆ ಎಂದು ಹೇಳಬಹುದು. ದ್ವಿಲಿಂಗತ್ವವಿದ್ದರೂ ಇವುಗಳಲ್ಲಿ ಅನ್ಯನಿಷೇಚನೆಯುಂಟು. ಅಂಡಾಶಯ ಶರೀರದ ತಳದಲ್ಲಿದ್ದು ಅಂಡಾಣುಧಾರಕ ಮಧ್ಯದ ಅನುಬಂಧಗಳ ಮೊದಲನೆಯ ಜೊತೆಯಲ್ಲಿ ಸ್ಥಿತವಾಗಿದೆ. ಗಂಡು ಬಾರ್ನಕಲುಗಳಲ್ಲಿ ವೃಷಣದಿಂದ ಹೊರಟ ನಾಳಗಳು ವೀರ್ಯಾಣು ಕೋಶಗಳನ್ನು ಸೇರುತ್ತವೆ. ವೀರ್ಯಾಣು ಕೋಶದಿಂದ ಉದ್ದವಾದ ವೀರ್ಯಾಣುನಾಳ ಶಿಶ್ನದ ಮೂಲಕ ವೀರ್ಯಾಣುಗಳನ್ನು ಪಕ್ಕದ ಇನ್ನೊಂದು ಬಾರ್ನಕಲನ ಮ್ಯಾಂಟಲ್ ಕುಹರಕ್ಕೆ ಸಾಗಿಸುತ್ತದೆ. ಅಂಡಾಣುವಾಹಕ ನಾಳದ ತುದಿಯಲ್ಲಿ ಅಂಡಾಣು ಕೋಶಕವಿದ್ದು ಅದರಲ್ಲಿ ಅಂಡಾಣುಗಳು ನಿಷೇಚನಾಪೂರ್ವ ಬೆಳವಣಿಗೆಗೆ ಒಳಗಾಗುವುವು. ಕೆಲವು ಏಕಲಿಂಗಿ ಬಾರ್ನಕಲುಗಳಲ್ಲಿ ಗಂಡುಗಳು ಕುಬ್ಜವಾಗಿದ್ದು, ಹೆಣ್ಣಿನ ದೇಹದಲ್ಲಿ ಸೇರಿಕೊಂಡು ಪರತಂತ್ರ ಜೀವನವನ್ನು ನಡೆಸುತ್ತವೆ. ಇವುಗಳಲ್ಲಿ ವೃಷಣದ ಹೊರತು ಉಳಿದೆಲ್ಲ ಅಂಗಗಳು ಕ್ಷೀಣವಾಗಿವೆ. ಕೆಲವು ದ್ವಿಲಿಂಗ ಪ್ರಭೇದಗಳಲ್ಲಿ ಗಂಡುಗಳು ಸಹಾಯಕ ವೀರ್ಯಾಣುಗಳನ್ನು ಉತ್ಪಾದಿಸುತ್ತವೆ. ಉಭಯಪಾದಿ ಹಾಗೂ ಸಮಪಾದಿಗಳಲ್ಲಿ ಸಂತಾನಕೋಣೆಗಳುಂಟು. ಪರಾವಲಂಬಿ ಸಮಪಾದಿಗಳಲ್ಲಿ ವಿಸ್ಮಯಕಾರಕ ಲೈಂಗಿಕತೆ ಕಂಡುಬರುತ್ತದೆ. ಇವುಗಳ ಲಾರ್ವಗಳು ಹಲವು ಸಲ ಪೊರೆ ಕಳಚಿ ಅನಂತರ ಆತಿಥೇಯ ಕಠಿಣ ಚರ್ಮಿಯ ಕವಚಕ್ಕೆ ಅಂಟಿಕೊಳ್ಳುತ್ತವೆ. ಮೊದಲು ಅಂಟಿಕೊಳ್ಳುವ ಲಾರ್ವ ಗಾತ್ರದಲ್ಲಿ ಬೆಳೆದು ಹೆಣ್ಣು ಪ್ರಜನನಾಂಗಗಳನ್ನು ರೂಪಿಸಿಕೊಳ್ಳುತ್ತದಾದರೆ ಅನಂತರ ಅಂಟಿಕೊಳ್ಳದ ಎಲ್ಲ ಲಾರ್ವಗಳು ಗಂಡುಗಳಾಗಿ ಬೆಳೆಯುವುವು. ಹೆಣ್ಣು ಸಮಪಾದಿಯನ್ನು ಆತಿಥೇಯದಿಂದ ಬೇರ್ಪಡಿಸಿದರೆ ಇನ್ನೊಂದು ಗಂಡು ಹೆಣ್ಣಾಗಿ ಪರಿವರ್ತನೆ ಹೊಂದುತ್ತದೆ. ಏಡಿಗಳಲ್ಲಿ ಹಾಗೂ ಲಾಬ್‍ಸ್ಟರುಗಳ ಕೆಲವು ಪ್ರಬೇಧಗಳ ಹೆಣ್ಣುಗಳಲ್ಲಿ ವೀರ್ಯಾಣುಪಾತ್ರ ದೇಹದ ಹೊರಗೂ ಇನ್ನು ಕೆಲವು ಪ್ರಬೇಧಗಳಲ್ಲಿ ದೇಹದ ಒಳಭಾಗದಲ್ಲಿಯೂ ಇರುವುವು. ಗಂಡು ಏಡಿಗಳಲ್ಲಿ ವೀರ್ಯಾಣುಗಳನ್ನು ಸಾಗಿಸಲು ಯುಕ್ತ ಅನುಬಂಧಗಳು ಅಥವಾ ವೀರ್ಯಾಣುಧಾರಕ ಉಂಟು. ಎರಡನೆಯ ವಿಧದ ಪ್ರಭೇಧಗಳಲ್ಲಿ ವೀರ್ಯಾಣುಧಾರಕಗಳು ನೇರವಾಗಿ ಹೆಣ್ಣಿಗೆ ಅಂಟಿಕೊಳ್ಳುತ್ತವೆ. ಏಡಿಗಳಲ್ಲಿ ಲಿಂಗಬದಲಾವಣೆ ಕೂಡ ಸಾಮಾನ್ಯ. ಕೆಲವು ಬಾರ್ನಕಲುಗಳು ಏಡಿಗಳ ಮೇಲೆ ಪರಾವಲಂಬಿ ಜೀವನ ನಡೆಸುತ್ತವೆ. ಇವು ಏಡಿಯ ದೇಹವನ್ನು ಪ್ರವೇಶಿಸುವಾಗ ಏಡಿಯ ಲಿಂಗ ಬದಲಾವಣೆಯಾಗುತ್ತದೆ. ಹೆಣ್ಣುಗಂಡಾಗಿ ಪರಿವರ್ತನೆಗೊಳ್ಳುವುದೇ ಹೆಚ್ಚು ಸಾಮಾನ್ಯ. ಈ ತೆರೆನ ಲಿಂಗ ಬದಲಾವಣೆಗೆ ಪರಾವಲಂಬಿಯ ಅಂಗಾಂಗಗಳೇ ಆಲ್ಲದೆ ಕೆಲವು ಹಾರ್ಮೋನುಗಳು ಕೂಡ ಕಾರಣ. ಕೀಟಗಳಲ್ಲಿ ದ್ವಿಲಿಂಗಿಗಳು ಬಲು ಕಡಿಮೆ. ಕೀಟಗಳ ಅಂಡಾಶಯಗಳಲ್ಲಿ ಹಲವಾರು ಅಂಡಾಶಯ ಸಂಚಿಗಳುಂಟು. ಸಂಚಿಗಳ ಮುಂಭಾಗದಲ್ಲಿ ಅಂಡಾಣು ಜನನ ಕೋಶಗಳು ಉತ್ಪತ್ತಿಯಾಗುತ್ತವೆ. ಅವು ಅಂಡಾಶಯ ಸಂಚಿಗಳ ಇನ್ನೊಂದು ತುದಿಯನ್ನು ತಲುಪುವ ಹೊತ್ತಿಗೆ ಅಂಡಾಣು ನಿಷೇಚನೆಗೆ ಸಿದ್ಧವಾಗಿರುತ್ತದೆ. ಅಂಡಾಶಯದ ಹಿಂಭಾಗದಲ್ಲಿ ಅಂಡಾಣುವಾಹಕ ನಾಳವಿದ್ದು ಅದು ಪ್ರಜನನ ಕೋಣೆ ಅಥವಾ ಯೋನಿಯಲ್ಲಿ ಹೊರಬರುತ್ತದೆ. ಯೋನಿಯಲ್ಲಿ ಹಲವಾರು ಗ್ರಂಥಿಗಳಿದ್ದು ಅದರ ಜೊತೆ ಒಂದು ವೀರ್ಯಾಣು ಪಾತ್ರ ಸಹ ಇರುತ್ತದೆ. ಕೆಲವು ಗ್ರಂಥಿಗಳ ಸ್ರಾವಕಗಳಿಂದ ಮೊಟ್ಟೆಗಳ ಸುತ್ತ ಭದ್ರವಾದ ಕವಚವೊಂದು ನಿರ್ಮಿತವಾಗುತ್ತದೆ. ಉದರ ಭಾಗದ 8 ಮತ್ತು 9 ನೆಯ ಉಂಗುರಗಳು ಸಂಭೋಗಕ್ಕೆ ಮತ್ತು ಮೊಟ್ಟೆಗಳನ್ನು ಇಡುವುದಕ್ಕೆ ತಕ್ಕಂತೆ ಮಾರ್ಪಾಟಾಗಿರುತ್ತವೆ. ವೃಷಣಗಳು ಜೋಡಿಗಳಲ್ಲಿದ್ದು ಹಲವಾರು ವೀರ್ಯಾಣು ನಳಿಕೆಗಳನ್ನು ಪಡೆದಿರುವುವು. ವೀರ್ಯಾಣು ಬೆಳೆಯುತ್ತ ಹೋದಂತೆ ಅದರ ಸುತ್ತ ಭದ್ರ ಕವಚವೊಂದು ರಚಿತವಾಗುತ್ತದೆ. ಅನಂತರ ವೀರ್ಯಾಣುಗಳು ವೀರ್ಯಾಣುಕೋಶಕವನ್ನು ಸೇರುತ್ತವೆ. ವೀರ್ಯಾಣು ವಾಹಕ ನಾಳಗಳ ಹಿಂಭಾಗ ಸ್ಖಲನನಾಳಗಳಾಗಿ ಪರಿವರ್ತನೆಗೊಂಡಿದ್ದು ಅವುಗಳ ತುದಿಯಲ್ಲಿ ಸಂಭೋಗಕ್ಕೆ ಅವಶ್ಯಕವಾದ ಅಂಗವಿದೆ. ಸ್ಖಲನನಾಳಗಳ ಜೊತೆಗೆ ಎರಡು ಸಹಾಯಕ ಗ್ರಂಥಿಗಳಿವೆ. ಇವು ವೀರ್ಯ ಅಥವಾ ವೀರ್ಯಾಣುಧಾರಕದ ರಚನೆಗೆ ಸಹಾಯಕ. ಉದರ ಭಾಗದ 9 ಮತ್ತು 10 ನೆಯ ಉಂಗುರಗಳು ವೀರ್ಯಾಣು ಸಾಗಣೆಗೆ ಹಾಗೂ ಸಂಭೋಗ ಕ್ರಿಯೆಗೆ ಸಹಾಯಕವಾಗುವಂತೆ ಮಾರ್ಪಾಟಾಗಿವೆ.

ಜೇಡಗಳಲ್ಲಿ ಮತ್ತು ಚೇಳುಗಳಲ್ಲಿ ಜನನಗ್ರಂಥಿಗಳು ನಾಳದಂಡ ಚೀಲಗಳಾಗಿವೆ. ಹೆಣ್ಣು ಚೇಳು ಮತ್ತು ಜೇಡಗಳಲ್ಲಿ ವೀರ್ಯಾಣುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅವಶ್ಯಕವಾದ ಅಂಗಗಳೂ ಉಂಟು. ಗಂಡುಗಳ ಪ್ರಜನನಾಂಗಗಳ ತುದಿಯಲ್ಲಿ ಅನೇಕ ಗ್ರಂಥಿಗಳಿದ್ದು ಅವು ವೀರ್ಯಾಣುಧಾರಕಗಳ ರೂಪಣೆಗೆ ಸಹಾಯ ಮಾಡುತ್ತವೆ.

ಸಂಧಿಪದಿಗಳಲ್ಲಿ ವೀರ್ಯಾಣು ಸಾಗಣೆ ಹಲವಾರು ರೀತಿಯಲ್ಲಿ ನಡೆಯುತ್ತದೆ. ಸಂಭೋಗಕ್ಕೆ ಮೊದಲು ಅತ್ಯಂತ ವಿಸ್ತøತ ಹಾಗೂ ವಿಸ್ಮಯಕಾರಕ ಪ್ರಣಯಾಚರಣೆಯನ್ನು ಕಾಣಬಹುದು. ಚೇಳುಗಳಲ್ಲಿ ಕೆಲವು ಪ್ರಭೇದಗಳು ವೀರ್ಯಾಣುಧಾರಕವನ್ನು ದೇಹದಿಂದ ಹೊರಹಾಕಿದಾಗ ಅವು ನೆಲಕ್ಕೆ ಭದ್ರವಾಗಿ ಅಂಟಿಕೊಳ್ಳುತ್ತವೆ. ಹೆಣ್ಣು ಚೇಳು ಆಗ ವಿಶಿಷ್ಟ ರೀತಿಯ ಪ್ರಣಯ ನೃತ್ಯವಾಡುತ್ತ ವೀರ್ಯಾಣುಧಾರಕಗಳ ಮೇಲೆ ತನ್ನ ಹಿಂಭಾಗವನ್ನು ಬಲವಾಗಿ ಒತ್ತುತ್ತದೆ. ಆಗ ವೀರ್ಯಾಣುಧಾರಕ ಹೆಣ್ಣಿನ ಜನನಾಂಗವನ್ನು ಸೇರುತ್ತದೆ. ಜೇಡಗಳು ಪೆಡಿಪ್ಯಾಲ್ಪಿಯಲ್ಲಿ ಸುರುಳಿಯಾಕಾರದ ಗುಳ್ಳೆಯೊಂದಿದೆ. ಈ ಪೆಡಿಪಾಲ್ಪನ್ನು ಗಂಡು ತನ್ನ ಲಿಂಗಾಣುಧಾರಕದಲ್ಲಿ ಅದ್ದಿ ಅನಂತರ ಅದನ್ನು ಹೆಣ್ಣಿನ ಲಿಂಗಾಣುಧಾರಕದಲ್ಲಿ ಸೇರಿಸುವುದರಿಂದ ವೀರ್ಯಾಣುಗಳು ವೀರ್ಯಪಾತ್ರವನ್ನು ಸೇರುತ್ತವೆ. ಹೆಣ್ಣು ರೇಷ್ಮೆಯಂಥ ನವುರಾದ ಎಳೆಗಳಿಂದ ಗೂಡನ್ನು ನಿರ್ಮಿಸಿ ಅದರಲ್ಲಿ ಅಂಡಾಣು ಮತ್ತು ವೀರ್ಯಾಣುಗಳನ್ನು ಸೇರಿಸಿ ಗೂಡನ್ನು ಕಲ್ಲು ಅಥವಾ ಎಲೆಗಳ ಮೇಲೆ ಅಂಟಿಸುತ್ತದೆ. ನಿಷೇಚಿತ ಮೊಟ್ಟೆಗಳ ಮುಂದಿನ ಬೆಳವಣಿಗೆ ಗೂಡಿನೊಳಗೆ ನಡೆಯುತ್ತದೆ. ಬಹಳಷ್ಟು ಸಂಧಿಪದಿಗಳಲ್ಲಿ ಲಾರ್ವ ಹಂತವಿದೆಯಲ್ಲದೆ ನಿಜವಾದ ರೂಪಪರಿವರ್ತನೆಯೂ ಇದೆ. ಕಂಟಕಚರ್ಮಿಗಳಲ್ಲಿ ಜನನಗ್ರಂಥಿಗಳು ಬಾಹುಗಳಿಂದ ನೇರವಾಗಿ ಸಮುದ್ರದ ನೀರಿನಲ್ಲಿ ತೂಗಾಡುತ್ತಿರುವಂತೆ ಕಾಣುತ್ತವೆ. ಕೆಲವು ಪ್ರಭೇದಗಳ ಹೊರತು ಎಲ್ಲ ಕಂಟಕ ಚರ್ಮಿಗಳು ಏಕಲಿಂಗಿಗಳು. ಒಂದೇ ಒಂದು ಹೆಣ್ಣು ನಕ್ಷತ್ರಮೀನು ಒಂದು ಗಂಟೆಗೆ ಒಂದೂ ಕಾಲು ದಶಲಕ್ಷ ಮೊಟ್ಟೆಗಳನ್ನಿಡುತ್ತದೆ. ಗಂಡು ನಕ್ಷತ್ರ ಮೀನು ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರ್ಯಾಣುಗಳನ್ನು ನಿರ್ಮಿಸುತ್ತದೆ. ಅಕಾರ್ನ್ ಹುಳುಗಳು ಲೈಂಗಿಕ ರೀತಿಯಲ್ಲಿ ಮಾತ್ರ ಪ್ರಜನನವನ್ನು ನಡೆಸುತ್ತವೆ. ವೀರ್ಯಾಣು ಅಥವಾ ಅಂಡಾಣುಗಳು ನೇರವಾಗಿಯೊ ಚಿಕ್ಕ ನಾಳಗಳ ಮೂಲಕವೊ ಹೊರಬರುತ್ತವೆ. 2000 ದಿಂದ 3000 ಮೊಟ್ಟೆಗಳು ಅಂಟುದ್ರವವೊಂದರಿಂದ ಗುಂಪಾಗಿ ಕೂಡಿಕೊಂಡಿದ್ದು ಗುಂಪಾಗಿಯೇ ಹೊರಬೀಳುತ್ತವೆ.

ಕೆಳಹಂತದ ಕಶೇರುಕಗಳಲ್ಲಿ ಜನನಗ್ರಂಥಿಗಳು ದೇಹಾವಕಾಶದ ಭಿತ್ತಿಯಲ್ಲಿ ಬೆಳೆಯುತ್ತವೆ. ಲಿಂಗಾಣುಗಳು ದೇಹಾವಕಾಶದಲ್ಲಿ ಬಿಡುಗಡೆಯಾಗಿ ಅಲ್ಲಿಂದ ಸದಾ ಪರಿಚಲಿಸುತ್ತಿರುವ ನೀರಿನ ಮೂಲಕ ಸಮುದ್ರವನ್ನು ಸೇರುತ್ತವೆ. ಸಮುದ್ರದ ನೀರನಲ್ಲಿಯೇ ನಿಷೇಚನೆ ನಡೆಯುತ್ತದೆ. ಯೂರೊಕಾರ್ಡೇಟುಗಳು ದ್ವಿಲಿಂಗಿಗಳು : ಇವುಗಳಲ್ಲಿ ಒಂದು ಅಂಡಾಶಯ ಮತ್ತು ಒಂದು ವೃಷಣ ಒಂದರ ಪಕ್ಕದಲ್ಲಿ ಇನ್ನೊಂದರಂತೆ ಇವೆ. ಕೆಲವು ಪ್ರಭೇದಗಳಲ್ಲಿ ಒಂದಕ್ಕಿಂತ ಹೆಚ್ಚು ವೃಷಣ ಅಥವಾ ಅಂಡಾಶಯ ಇರುವುದುಂಟು. ಮೊಟ್ಟೆಗಳು ಅಂಡಾಶಯ ಕೂಪ ಎಂಬ ಕೋಶಗಳಿಂದ ಕೂಡಿದ ಎರಡು ಪದರಗಳನ್ನು ನಿರ್ಮಿಸುತ್ತವೆ. ಒಳಪದರ ಮೊಟ್ಟೆ ಹೊರಬಂದ ಅನಂತರವೂ ಇದ್ದು ಅದರ ಕೋಶಗಳಲ್ಲಿ ವಾಯುತುಂಬುವುದರಿಂದ ಮೊಟ್ಟೆಗಳು ತೇಲುವುದಕ್ಕೆ ಸಹಾಯ ಮಾಡುತ್ತದೆ.

ಕಂಟಕಚರ್ಮಿಗಳಲ್ಲಿ ಶಿಲಕಾಂಗಗಳ ವಲಯವನ್ನು ಹೊಂದಿರುವ ಲಾರ್ವ ಹಂತವಿದೆ. ಕೆಲವು ವರ್ಗಗಳಲ್ಲಿ ಲಾರ್ವದ ಒಂದೇ ಹಂತವೂ ಕೆಲವು ಪ್ರಭೇದಗಳಲ್ಲಿ ನಾಲ್ಕು ಅಥವಾ ಐದು ಲಾರ್ವ ಹಂತಗಳೂ ಉಂಟು. ಪ್ರಜೀವಿ ಕಶೇರುಕಗಳಲ್ಲಿಯೂ ಲಾರ್ವದ ಹಂತಗಳಿವೆ. ಯೂರೊಕಾರ್ಡೇಟುಗಳಲ್ಲಿ ಚಲನಶೀಲ ಲಾರ್ವವಿದ್ದು ಅಪಭ್ರಂಶ ರೂಪಾಂತರವನ್ನು ತೋರುತ್ತದೆ. ಹೆಮಿಕಾರ್ಡೇಟುಗಳಲ್ಲಿ ಲಾರ್ವಗಳು ಶಿಲಕಾಂಗಗಳ ವಲಯವನ್ನು ಹೊಂದಿದ್ದು ಕಂಟಕ ಚರ್ಮಿಗಳ ಅಥವಾ ವಲಯವಂತಗಳ ಲಾರ್ವಗಳಂತೆ ಕಾಣುತ್ತವೆ. ಈ ಲಾರ್ವಗಳಿಗೆ ಟಾರ್ನೇರಿಯ ಎಂದು ಹೆಸರು. ಪ್ರಜೀವಿ ಕಶೇರುಕಗಳ ಜೀವನವೂ ಅಕಶೇರುಕಗಳ ಜೀವನಕ್ರಮದಂತೆಯೇ ತೋರುತ್ತದೆ. ಕಶೇರುಕಗಳಲ್ಲಿ ಪ್ರಜನನ : ಪ್ರಜನನಾಂಗ ಜನನ ಗ್ರಂಥಿ ಹಾಗೂ ಅದಕ್ಕೆ ಸಂಬಂಧಿಸಿದ ನಾಳಗಳಿಂದ ಹಾಗೂ ಗ್ರಂಥಿಗಳಿಂದ ಕೂಡಿದೆ. ಕೆಲವು ಕಶೇರುಕಗಳಲ್ಲಿ ವೀರ್ಯಾಣು ಸಾಗಣೆಗೆ ಅವಶ್ಯಕವಾದ ಅಂಗಗಳೂ ಉಂಟು. ಜನನಗ್ರಂಥಿ ವೀರ್ಯಾಣುಗಳನ್ನು ಉತ್ಪಾದಿಸುವುದೇ ಅಲ್ಲದೆ ಪ್ರಜನನಕ್ಕೆ ಅವಶ್ಯಕವಾದ ಹಾರ್ಮೋನುಗಳನ್ನೂ ಸಂಶ್ಲೇಷಿಸುತ್ತದೆ. ಲಿಂಗಾಣುನಾಳಗಳು ವೀರ್ಯಾಣುಗಳನ್ನು ಸಾಗಿಸುವುದರ ಜೊತೆಗೆ ಅವಶ್ಯಕವಿರುವ ಸ್ರಾವಗಳನ್ನೂ ಸ್ರವಿಸುತ್ತವೆ : ಈ ನಾಳಗಳ ತುದಿಯಲ್ಲಿ ಕ್ಲೋಯಕಗಳಿದ್ದು ಪ್ರಜನ ನಾಳಗಳೂ ವಿಸರ್ಜನಾಂಗ ನಾಳಗಳೂ ಒಟ್ಟಿಗೆ ಕ್ಲೋಯಕದಲ್ಲಿ ಹೊರತೆಗೆಯುತ್ತವೆ. ಲ್ಯಾಂಪ್ರೆಗಳಲ್ಲಿ ಕ್ಲೋಯಕ ಚಿಕ್ಕದಾಗಿರುತ್ತದೆ. ಅಥವಾ ಕೆಲವು ಪ್ರಭೇದಗಳಲ್ಲಿ ಇರುವುದೇ ಇಲ್ಲ. ಕೆಲವು ಟೆಲಿಯಾಸ್ಟ್ ಮೀನುಗಳಲ್ಲಿ ಪಚನಾಂಗ ವಿಸರ್ಜನಾಂಗ ಮತ್ತು ಪ್ರಜನನಾಂಗಗಳ ನಾಳಗಳು ಬೇರೆಬೇರೆಯಾಗಿ ಹೊರಹೊರಡುತ್ತವೆ. ಕೆಲವು ಅಕಶೇರುಕಗಳಲ್ಲಿ ಪಚನಾಂಗಗಳ ನಾಳಗಳು ಗುದದ್ವಾರದ ಮೂಲಕ ಒಂದು ಕಡೆ ಹೊರಬರುತ್ತವೆ. ವಿಸರ್ಜನಾಂಗ ಮತ್ತು ಪ್ರಜನನಾಂಗಗಳ ನಾಳಗಳು ಕೂಡ ಅದೇ ಗುದದ್ವಾರದ ಮೂಲಕ ಇನ್ನೊಂದು ಕಡೆ ಹೊರಬರುತ್ತವೆ. ಹಕ್ಕಿಗಳ ಕ್ಲೋಯಕದ ಮುಂಭಾಗದಲ್ಲಿ ವಿಸರ್ಜನಾಂಗ ಪ್ರಜನನಾಂಗ ಕೋಣೆ, ಪಚನಾಂಗ ಕೋಣೆ ಮತ್ತು ತುದಿ ಕೋಣೆ ಎಂಬ ಮೂರು ವಿಭಾಗಗಳುಂಟು. ಮಾನೊಟ್ರೀಮುಗಳಲ್ಲಿ ಮೂತ್ರ ಪ್ರಜನನ ಕುಹರ ಇದ್ದು ಮೂತ್ರ ಮತ್ತು ಲಿಂಗಾಣುಗಳನ್ನೂ ಪಚನಾಂಗ ನಾಳಗಳು ಪಚನವಾಗದ ಆಹಾರವನ್ನೂ ತರುತ್ತವೆ. ಹೊರಬರುವಾಗ ಇವು ಬೇರೆಬೇರೆಯಾಗಿಯೇ ಹೊರಬೀಳುತ್ತವೆ.

ಜನನ ಗ್ರಂಥಿಗಳು ಸೀಲೋಮಿನ ಅನುಲೇಪಕಗಳಿಂದ ರೂಪುಗೊಳ್ಳುವುವು. ಮೊದಲು ಜನನಗ್ರಂಥಿಯ ದಿಂಡು ಸೀಲೋಮಿನಿಂದ ಹೊರಹೊಮ್ಮುತ್ತದೆ. ಅದು ಭ್ರೂಣಾವಸ್ಥೆಯ ಮೂತ್ರಪಿಂಡದೊಂದಿಗೆ ಹೊಂದಿಕೊಂಡಂತಿದೆ. ಜನನಗ್ರಂಥಿಯ ದಿಂಡನ್ನು ಆವರಿಸಿರುವ ಜರಾಯು ಅನುಲೇಪಕಗಳು ಪ್ರಾಥಮಿಕ ಲಿಂಗರಜ್ಜುಗಳನ್ನು ರೂಪಿಸಿ ರಜ್ಜುಗಳು ಜನನಗ್ರಂಥಿಯ ಬ್ಲಾಸ್ಟಿಮದಲ್ಲಿ ವೃಷಣದ ಒಳಭಾಗವಾದ ತಿರುಳನ್ನು ರಚಿಸುವುವು. ದ್ವಿತೀಯಕ ರಜ್ಜುಗಳು ತೊಗಟೆಯನ್ನು ರೂಪಿಸುತ್ತವೆ. ವೃಷಣಗಳು ಬೆಳೆಯುವುದಾದರೆ ತಿರುಳೂ ಅಂಡಾಶಯ ಬೆಳೆಯುವುದಾದರೆ ತೊಗಟೆಯೂ ವಿಭೇದನೆಗೆ ಒಳಗಾಗುವುವು. ಪ್ರಭೇದಗಳನ್ನೂ ಜನನಗ್ರಂಥಿಯ ದಿಂಡಿನ ವಿಭೇದನೆಯನ್ನೂ ಅವಲಂಬಿಸಿ ಜನನ ಗ್ರಂಥಿಯ ಗಾತ್ರ ನಿರ್ಧಾರವಾಗುತ್ತದೆ.

ಕೆಲವು ಕಶೇರುಕಗಳಲ್ಲಿ ಒಂದೇ ಒಂದು ಜನನ ಗ್ರಂಥಿಯುಂಟು. ಇದು ಹೆಣ್ಣುಗಳಲ್ಲಿ ಸರ್ವೇಸಾಮಾನ್ಯ. ಚಕ್ರಾಸ್ಯಗಳಲ್ಲಿ (ಸೈಕ್ಲೊಸ್ಟೋಮ್) ಮಾತ್ರ. ಎರಡೂ ಲಿಂಗಗಳಲ್ಲಿ ಒಂದೇ ಜನನ ಗ್ರಂಥಿ ಇರುತ್ತದೆ. ಹೆಣ್ಣು ಪಕ್ಷಿಗಳಲ್ಲಿ ಒಂದೇ ಜನನಗ್ರಂಥಿ ಇದೆಯಾದರೆ ಗಂಡು ಪಕ್ಷಿಗಳಲ್ಲಿ ಮಾತ್ರ ಒಂದು ಜೊತೆ ವೃಷಣಗಳುಂಟು. ಸರೀಸೃಪಗಳಲ್ಲಿ ಸ್ತನಿಗಳಲ್ಲಿ ಮಾತ್ರ ಜನನಗ್ರಂಥಿಗಳು ಜೊತೆಯಾಗಿದ್ದು ಬಲಭಾಗದಲ್ಲಿ ಒಂದು ಹಾಗೂ ಎಡಭಾಗದಲ್ಲಿ ಒಂದು ರೀತಿ ಇರುತ್ತದೆ.

ಆನ್ಯುರ, ಸರೀಸೃಪಗಳು, ಪಕ್ಷಿಗಳು ಮತ್ತು ಸ್ತನಿಗಳಲ್ಲಿ ಹಾಗೂ ಕೆಲವು ಮೂಳೆ ಮೀನುಗಳಲ್ಲಿ 90% ಭಾಗ ವೃಷಣ ವೀರ್ಯಾಣುಜನಕ ನಳಿಕೆಗಳನ್ನು ಪಡೆದಿದೆ. ವೀರ್ಯಾಣು ನಳಿಕೆ ಸುರುಳಿಯಾಕಾರದಲ್ಲಿದ್ದು ವೀರ್ಯಾಣುಜನಕ ಕೋಶಗಳನ್ನು ಪಡೆದಿದೆ. ನಳಿಕೆಗಳ ಸುತ್ತು ಟ್ಯೂನಿಕಾ ಆಲ್‍ಬರ್ಜಿಯ ಎಂಬ ಬೀಜಕೋಶವುಂಟು. ನಳಿಕೆಗಳ ಗೋಡೆಗಳಲ್ಲಿ ಬಹುಪದರವುಳ್ಳ ಜರಾಯು ಅನುಲೇಪಕವಿದೆ. ವೀರ್ಯಾಣುಜನಕ ಕೋಶಗಳೂ ಬೆಳೆಯುತ್ತಿರುವ ವೀರ್ಯಾಣುಗಳಿಗೆ ಆಹಾರವನ್ನು ಒದಗಿಸುವ ಸ್ಟೀರೋಲಿ ಕೋಶಗಳೂ ಇವುಗಳಲ್ಲಿ ಉಂಟು. ವೀರ್ಯಾಣುಜನಕನಳಿಕೆಗಳ ಆಕಾರ, ಉದ್ದ, ಗಾತ್ರ ಹಾಗೂ ರಚನೆ ಇತ್ಯಾದಿಗಳು ಬೇರೆ ಬೇರೆ ಪ್ರಭೇದಗಳನ್ನು ಅವಲಂಬಿಸಿ ಬೇರೆ ಬೇರೆ ಆಗಿರುತ್ತವೆ. ಕಪ್ಪೆಗಳಲ್ಲಿ ವೀರ್ಯಾಣು ನಳಿಕೆಯ ಜನಕ ನಳಿಕೆಯ ತುದಿ ಮುಚ್ಚಿಕೊಂಡಿದೆಯಾದರೆ ಸರೀಸೃಪ, ಪಕ್ಷಿ ಹಾಗೂ ಸ್ತನಿಗಳಲ್ಲಿ ಇವುಗಳ ತುದಿ ತೆರೆದಿದೆ. ನಳಿಕೆಗಳ ಸಾಮಾನ್ಯ ಉದ್ದ 30 ಸೆಂ.ಮೀ. ಕೆಲವು ಸ್ತನಿಗಳಲ್ಲಿ ಈ ನಳಿಕೆಗಳು ಗುಂಪಾಗಿದ್ದು ತೆಳುವಾದ ಪೊರೆಗಳಿಂದ ಬೇರ್ಪಟ್ಟಿರುವುವು. ಹೀಗಾಗಿ ಅಸಂಖ್ಯಾತ ನಳಿಕೆಗಳನ್ನು ಜೋಡಿಸಿ ಕಟ್ಟಿದ ಹಾಗೆ ಕಾಣುತ್ತದೆ. ಇದರಿಂದ ಹೆಚ್ಚು ಹೆಚ್ಚು ವೀರ್ಯಾಣುಗಳನ್ನು ಉತ್ಪತ್ತಿ ಮಾಡಲು ಅನುಕೂಲ. ಸಂಪೂರ್ಣವಾಗಿ ಬೆಳೆದ ನಳಿಕೆಗಳಲ್ಲಿ ವೀರ್ಯಾಣು ಬೆಳವಣಿಗೆಯ ಎಲ್ಲ ಹಂತಗಳನ್ನೂ ಕಾಣಬಹುದು. ನಳಿಕೆಯ ಮಧ್ಯ ಭಾಗದಲ್ಲಿ ಸಹಸ್ರಾರು ವೀರ್ಯಾಣುಗಳ ಅವುಗಳ ಬಾಲಗಳನ್ನೂ ನೋಡಬಹುದು. ಸ್ತನಿಗಳಲ್ಲಿ ಮಾತ್ರ ಒಂದು ನಳಿಕೆಯಲ್ಲಿ ವೀರ್ಯಾಣು ಬೆಳವಣಿಗೆಯ ಒಂದೇ ಹಂತವನ್ನು ಕಾಣಬಹುದು.

ಚಕ್ರಾಸ್ಯಗಳಲ್ಲಿ ಹಾಗೂ ಬಾಲವಿರುವ ಉಭಯಜೀವಿಗಳಲ್ಲಿ ಜರಾಯು ಅನುಲೇಪಕ ಭಿನ್ನ ರೀತಿಯಲ್ಲಿ ವ್ಯವಸ್ಥಿತವಾಗಿರುತ್ತದೆ. ವೀರ್ಯಾಣು ಜನಕ ನಳಿಕೆಯ ಬದಲು ಅವುಗಳಲ್ಲಿ ವೀರ್ಯಾಣು ಜನಕ ಕವಚಗಳಿವೆ. ವೀರ್ಯಾಣು ಜನಕ ಕೋಶಗಳು ಜರಾಯು ಅನುಲೇಪಕದಿಂದ ವೃಷಣದ ಹೊರ ಆವರಣದಲ್ಲಿರುವ ಈ ಕವಚಗಳಿಗೆ ಚಲಿಸಿ ಅಸಂಖ್ಯಾತ ಸಂಖ್ಯೆಯಲ್ಲಿ ವೃದ್ಧಿಯಾಗಿ ವೀರ್ಯಾಣುಗಳಾಗಿ ಪರಿವರ್ತನೆಗೊಳ್ಳುತ್ತವೆ. ವೀರ್ಯಾಣುಗಳ ಸಂಖ್ಯೆ ವೃದ್ಧಿಯಾದಂತೆ ಈ ಕವಚಗಳು ಬಿಳಿಯ ಬಣ್ಣಕ್ಕೆ ತಿರುಗುವುದರೊಂದಿಗೆ ಊದಿಕೊಳ್ಳುತ್ತವೆ ಕೂಡ. ವೃಷಣವೂ ಊದಿಕೊಳ್ಳುತ್ತದೆ. ಎಲ್ಲ ವೀರ್ಯಾಣುಗಳು ಬೆಳೆದ ಅನಂತರ ಅವು ಕವಚವನ್ನು ನಾಶ ಮಾಡಿ ಹೊರಬರುತ್ತವೆ. ಚಕ್ರಾಸ್ಯಗಳಲ್ಲಿ ಹಾಗೂ ಕೆಲವು ಮೂಳೆ ಮೀನುಗಳಲ್ಲಿ ವೀರ್ಯಾಣುಗಳು ಸಿಲೋಮಿನಲ್ಲಿ ಬಿಡುಗಡೆಯಾಗುವುವು.

ವೃಷಣದಲ್ಲಿ ವೀರ್ಯಾಣು ನಳಿಕೆಗಳು ಅಥವಾ ವೀರ್ಯಾಣು ಜನಕ ಕವಚಗಳ ಮಧ್ಯೆ ಅಂಗಾಂಶಬಿಂದು, ರಕ್ತನಾಳಗಳು ಹಾಗೂ ನರಗಳಿವೆ. ಇವುಗಳಿಗೆ ವೃಷಣಗಳು ಸ್ಟ್ರೋಮ ಎಂದು ಹೆಸರು. ಲೀಡಿಗ್ ಕೋಶಗಳು ಬಹಳಷ್ಟು ಕಶೇರುಕಗಳಲ್ಲಿ ಕಂಡುಬರುತ್ತವೆ. ವಿಭೇದನಗೊಳ್ಳದ ಅಂಗಾಂಶ ಬಂಧಗಳಿವು. ಆಂಡ್ರೋಜನ್ ಎಂಬ ಹಾರ್ಮೋನನ್ನು ಸಂಶ್ಲೇಷಿಸುವುದು ಇವುಗಳ ಕಾರ್ಯ ಎಂದು ಬಗೆಯಲಾಗಿದೆ. ಬಹುಶಃ ಲೀಡಿಗ್ ಕೋಶಗಳನ್ನು ಆವರಿಸಿರುವ ರಕ್ತನಾಳಗಳ ಮೂಲಕ ಆಂಡ್ರೋಜನ್ ಹಾರ್ಮೋನ್ ಜರಾಯು ಅನುಲೇಪಕ ಮತ್ತು ಇತರ ಅಂಗಗಳಿಗೆ ಸಾಗುತ್ತದೆ ಎಂದು ತೋರುತ್ತದೆ.

ಕೆಲವು ಸ್ತನಿಗಳ ಹೊರತಾಗಿ ಉಳಿದೆಲ್ಲ ಕಶೇರುಕಗಳಲ್ಲಿಯೂ ವೃಷಣಗಳು ಶರೀರದ ಒಳಗೇ ಹುದುಗಿವೆ. ಮಾಸ್ರ್ಯುಪಿಯಲುಗಳು, ಗೊರಸುಳ್ಳ ಪ್ರಾಣಿಗಳು, ಮಾಂಸಾಹಾರಿ ಸ್ತನಿಗಳು ಹಾಗೂ ಪ್ರೈಮೇಟುಗಳಲ್ಲಿ ವೃಷಣ ಒಂದು ವಿಶೇಷ ಚೀಲದಲ್ಲಿದ್ದು ದೇಹದ ಹೊರಭಾಗದಲ್ಲಿರುತ್ತದೆ. ಕೆಲವು ಸ್ತನಿಗಳಲ್ಲಿಯಂತೂ ವೃಷಣವನ್ನು ಹೊತ್ತ ಈ ಚೀಲ ದೇಹದ ಹೊರಭಾಗದಲ್ಲಿ ತೂಗಾಡುತ್ತಿರುತ್ತದೆ. ವೃಷಣ ಕೋಶದಲ್ಲಿ ಎರಡು ಚೀಲಗಳಿವೆ. ಇವು ಎರಡೂ ಒಂದಕ್ಕೊಂದು ಹೊಂದಿಕೊಂಡಿದ್ದು ಜಠರಭಾಗದ ಅವಕಾಶಕ್ಕೆ ತೊಡೆಯ ಸಂಧಿಯಲ್ಲಿರುವ ಕಾಲುವೆಗಳ ಮೂಲಕ ಪೆರಿಟೋನಿಯಮಿಗೆ ಸೇರಿಕೊಂಡಿವೆ. ವೃಷಣಗಳಿಗೆ ವೀರ್ಯಾಣು ನಾಳ ಮಾತ್ರವಲ್ಲದೆ ರಕ್ತನಾಳ ಮತ್ತು ನರಗಳ ಪೂರೈಕೆಯೂ ಉಂಟು. ಇವಕ್ಕೆ ಒಟ್ಟಾಗಿ ವೀರ್ಯಾಣು ರಜ್ಜು ಎಂದು ಹೆಸರು. ಉಷ್ಣ ನಿಯಂತ್ರಣ ಮಾಡಲು ಈ ಪ್ರಾಣಿಗಳು ಅನುಸರಿಸಿರುವ ಒಂದು ಮಾರ್ಗ ವೃಷಣ ಚೀಲದ ಬೆಳವಣಿಗೆ. ಹೃದಯದಿಂದ ಬರುವ ಬಿಸಿ ರಕ್ತ, ಪಕ್ಕದ ನಾಳಗಳ ಮೂಲಕ ವೃಷಣದಿಂದ ಹೃದಯದ ಕಡೆಗೆ ಹಾಯುವ ತಂಪು ರಕ್ತದಿಂದ ತಂಪಾಗಿ ಅನಂತರ ವೃಷಣವನ್ನು ಸೇರುತ್ತದೆ. ಚಳಿಗಾಲದಲ್ಲಿ ಒಂದು ಜೊತೆ ಮಾಂಸಖಂಡಗಳು ವೃಷಣವನ್ನು ದೇಹದ ಕಡೆ ಎಳೆಯುವುದರಿಂದ ದೇಹದ ಉಷ್ಣತೆ ವಾತಾವರಣದ ಉಷ್ಣತೆಗಿಂತ ಹೆಚ್ಚಾಗಿರುವುದರಿಂದ ವಾತಾವರಣದ ಕಡಿಮೆ ಉಷ್ಣತೆಯಾಗಲಿ ದೇಹದ ಹೆಚ್ಚಿನ ಉಷ್ಣತೆಯಾಗಲಿ ವೃಷಣದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಪಕ್ಷಿಗಳಲ್ಲಿ ವೃಷಣಗಳು ವಾಯುಚೀಲಗಳ ಹತ್ತಿರ ಇರುವುದರಿಂದ ವಾಯುಚೀಲಗಳು ಉಷ್ಣತೆಯನ್ನು ನಿಯಂತ್ರಿಸುತ್ತವೆ.

ವೃಷಣದಿಂದ ನಾಳಗಳು ರೀಟಿ-ವೃಷಣ ಎಂಬ ಹಲವಾರು ನಳಿಕೆಗಳ ಗುಂಪುಗಳಿಂದ ಪ್ರಾರಂಭವಾಗುತ್ತವೆ. ಈ ನಳಿಕೆಗಳು ಪ್ರತಿ ವೀರ್ಯಾಣು ಜನಕ ನಳಿಕೆಯಿಂದ ವೀರ್ಯಾಣುಗಳನ್ನು ಸಂಗ್ರಹಿಸಿ ವೀರ್ಯಾಣು ವಾಹಕ ಎಂಬ ಸ್ವಲ್ಪ ದೊಡ್ಡ ನಾಳಗಳಿಗೆ ಕೊಂಡೊಯ್ಯುತ್ತವೆ. ವೀರ್ಯಾಣು ವಾಹಕ ನಾಳಗಳು ಗಾತ್ರದಲ್ಲಿ ರೀಟಿಗಳಿಗಿಂತ ದೊಡ್ಡದಾಗಿದ್ದು ಸಂಖ್ಯೆಯಲ್ಲಿ ಕಡಿಮೆ ಇರುತ್ತವೆ. ಮಾರ್ಪಾಟುಗೊಂಡ ಮೂತ್ರಪಿಂಡಗಳ ನಾಳಗಳಾದ ವೀರ್ಯಾಣುವಾಹಕ ನಾಳಗಳು ವೃಷಣವನ್ನು ಮೂತ್ರಪಿಂಡಕ್ಕೆ ಸೇರಿಸುತ್ತವೆ.

ಕೆಲವು ಪ್ರಭೇದಗಳಲ್ಲಿ ಮೂತ್ರ ಮತ್ತು ವೀರ್ಯ ಒಂದೇ ನಾಳದ ಮುಖಾಂತರ ಹರಿದು ಕ್ಲೋಯಕವನ್ನು ಸೇರುತ್ತವೆ. ಪ್ರಾಥಮಿಕವಾಗಿ ಈ ವ್ಯವಸ್ಥೆ ಇದ್ದರೂ ಕೆಲವು ಕಶೇರುಕಗಳಲ್ಲಿ ವೀರ್ಯನಾಳ ಹಾಗೂ ಮೂತ್ರ ನಾಳಗಳು ಬೇರೆಯಾಗಿರುವ ಅಥವಾ ಬೇರೆಯಾಗುತ್ತಿರುವ ಹಂತಗಳನ್ನು ಕಾಣಬಹುದು. ಕೆಲವು ತೆರನ ಶಾರ್ಕ್ ಮೀನುಗಳಲ್ಲಿ ಹಾಗೂ ಉಭಯ ಜೀವಿಗಳಲ್ಲಿ ಭ್ರೂಣದ ಮೂತ್ರನಾಳ ಪ್ರಬುದ್ಧ ಜೀವಿಯಲ್ಲಿ ವೀರ್ಯಾಣುಗಳನ್ನು ಸಾಗಿಸುವ ನಾಳವಾಗಿ ಮಾರ್ಪಡುತ್ತದೆ. ಆದರೆ ಕೆಲವು ಪ್ರಜೀವಿ ಮೀನುಗಳಲ್ಲಿ ಭ್ರೂಣದ ಮೂತ್ರನಾಳಗಳು ಪ್ರಬುದ್ಧ ಜೀವಿಯಲ್ಲಿಯೂ ಮೂತ್ರವನ್ನು ಸಾಗಿಸುತ್ತಿದ್ದು ಪ್ರಬುದ್ಧ ಜೀವಿಯಲ್ಲಿ ವೀರ್ಯಾಣು ಸಾಗಣೆಗೆ ಹೊಸನಾಳಗಳು ರೂಪುಗೊಳ್ಳುವುವು. ಈ ಎರಡೂ ರೀತಿಯ ನಾಳಗಳನ್ನು ಮೀನು ಹಾಗೂ ಪಕ್ಷಿಗಳಲ್ಲಿ ಕಾಣಬಹುದು. ಸರೀಸೃಪ ಮತ್ತು ಪಕ್ಷಿಗಳಲ್ಲಿ ವೀರ್ಯಾಣು ಮತ್ತು ಮೂತ್ರನಾಳಗಳು ಬೇರೆ ಬೇರೆಯಾಗಿ ಕ್ಲೋಯಕದಲ್ಲಿ ತೆರೆದಿರುತ್ತವೆ. ಸ್ತನಿಗಳಲ್ಲಿ ಮೂತ್ರ ವಿಸರ್ಜನ ನಾಳ ಉಂಟು. ಸರೀಸೃಪಗಳಲ್ಲಿ, ಪಕ್ಷಿಗಳಲ್ಲಿ ಹಾಗೂ ಸ್ತನಿಗಳಲ್ಲಿ ತಾತ್ಕಾಲಿಕವಾಗಿ ವೀರ್ಯಾಣುಗಳನ್ನು ಸಂಗ್ರಹಿಸಲು ಎಪಿಡಿಡಿಮಸ್ ಎಂಬ ಅಂಗ ಸಹಾಯ ಮಾಡುತ್ತದೆ. ಸ್ತನಿಗಳಲ್ಲಿ ಎಪಿಡಿಡಿಮಸ್ಸಿನ ಮುಂಭಾಗ, ತಲೆ, ಶರೀರ ಮತ್ತು ಬಾಲ ಎಂಬ ಮೂರು ಭಾಗಗಳಾಗಿದ್ದು ವೃಷಣವನ್ನು ಸುತ್ತಿಕೊಂಡಿರುತ್ತವೆ. ಹಿಂಭಾಗ ಸ್ವಲ್ಪ ನೇರವಾಗಿದ್ದು ವೀರ್ಯಾಣುನಾಳವಾಗಿ ಪರಿವರ್ತನೆ ಹೊಂದಿದೆ. ಎಪಿಡಿಡಿಮಸಿನ ಕೆಲವು ಸ್ರಾವಗಳು ವೀರ್ಯಾಣುಗಳು ಹೆಚ್ಚು ಕಾಲ ಬದುಕಿರುವಂತೆ ಮಾಡುವುವು.

ಎಲ್ಲ ಕಶೇರುಕಗಳಲ್ಲಿ ವೀರ್ಯಾಣು ನಾಳಗಳ ಕೆಲವು ಭಾಗಗಳು ಒಳಭಾಗದಲ್ಲಿ ಶಿಲಕಾಂಗ ಹಾಗೂ ಸ್ರಾವಕೋಶಗಳನ್ನು ಪಡೆದಿರುವ ಅನುಲೇಪಕದಿಂದ ಕೂಡಿವೆ. ಒಂದು ಭಾಗ ಸ್ವಲ್ಪ ಹಿಗ್ಗಿದ್ದು ವೀರ್ಯಾಣು ಸಂಗ್ರಹಕ್ಕೆ ಅಥವಾ ವೀರ್ಯ ದ್ರವವನ್ನು ಸ್ರವಿಸಲು ಮಾರ್ಪಟ್ಟಿದೆ. ಉದಾಹರಣೆಗೆ ಪಕ್ಷಿಗಳಲ್ಲಿರುವ ವೀರ್ಯಾಣು ಗಾಮ್ಯುಲಸ್ ಎಂಬ ಅಂಗ ವೀರ್ಯಸಂಗ್ರಹಕ್ಕೆ ತಕ್ಕಂತೆ ಮಾರ್ಪಾಡಾದ ಒಂದು ಅಂಗ. ಕೆಲವು ಸ್ತನಿಗಳಲ್ಲಿ ಮಾರ್ಪಾಡಾದ ವೀರ್ಯಾಣು ನಾಳವನ್ನು ಆಂಪುಲ ಎಂದು ಕರೆಯಲಾಗುತ್ತದೆ. ಅಲ್ಲಿ ವೀರ್ಯದ್ರವ ಸ್ರವಿಸುವುದಲ್ಲದೆ ವೀರ್ಯಾಣುವಿನ ಸಂಗ್ರಹವೂ ಆಗುತ್ತದೆ. ಕ್ಲೋಯಕದ ಸುತ್ತ ಇರುವ ಗ್ರಂಥಿಗಳಿಂದ ಅಥವಾ ಸ್ರಾವಕಕೋಶಗಳಿಂದ ಫೀರೊಮೋನ್ ಇತ್ಯಾದಿ ಲೈಂಗಿಕ ವಾಸನೆಯನ್ನು ಬೀರುವ ವಸ್ತುಗಳು ಉತ್ಪತ್ತಿಯಾಗುವವು.

ಸಹಾಯಕ ಗ್ರಂಥಿಗಳು : ಸ್ತನಿಗಳಲ್ಲಿ ಮುಖ್ಯವಾದ ಲೈಂಗಿಕ ಗ್ರಂಥಿಗಳೆಂದರೆ ಪ್ರಾಸ್ಟೇಟ್, ಬಲ್ಬೊಯುರೆತ್ರಲ್ ಮತ್ತು ಆಂಪುಲ್ಲರಿ ಗ್ರಂಥಿಗಳು ಹಾಗು ವೀರ್ಯಾಣು ಕೋಶಿಕೆಗಳು ಎಲ್ಲ ಗ್ರಂಥಿಗಳು ವೀರ್ಯನಾಳದ ಅಥವಾ ಮೂತ್ರ ವಿಸರ್ಜನನಾಳದ ಹೊರಬೆಳವಣಿಗೆಗಳು. ದಂಶಕಗಳಲ್ಲಿ, ಮೊಲಗಳಲ್ಲಿ ಬಾವಲಿಗಳಲ್ಲಿ ಹಾಗೂ ಪ್ರೈಮೇಟುಗಳಲ್ಲಿ ಈ ನಾಲ್ಕೂ ಗ್ರಂಥಿಗಳನ್ನು ಕಾಣಬಹುದು. ಕೆಲವು ಸ್ತನಿಗಳಲ್ಲಿ ಆಂಪುಲ್ಲರಿ ಗ್ರಂಥಿ ಮತ್ತು ವೀರ್ಯಾಣು ಕೋಶಿಕೆಗಳಿಲ್ಲದಿರಬಹುದು. ತಿಮಿಂಗಿಲಗಳಲ್ಲಿಯೂ, ಕೆಲವು ಮಾಂಸಾಹಾರಿ ಸ್ತನಿಗಳಲ್ಲಿಯೂ ಪ್ರಾಸ್ಪೇಟ್ ಮಾತ್ರ ಇದೆ. ಪ್ರಾಸ್ಪೇಟ್ ಗ್ರಂಥಿ ಸಾಮಾನ್ಯವಾಗಿ ಸ್ತನಿಗಳಲ್ಲಿ ಮಾತ್ರ ಇದ್ದು ಇದರ ಸ್ರಾವ ಹಲವು ನಾಳಗಳ ಮೂಲಕ ಹರಿದು ಮೂತ್ರವಿಸರ್ಜನಾ ನಾಳವನ್ನು ಸೇರುತ್ತದೆ. ವಿವಿಧ ಸ್ತನಿಗಳಲ್ಲಿ ಪ್ರಾಸ್ಪೇಟ್ ವಿವಿಧ ರೀತಿಯಲ್ಲಿ ಮಾರ್ಪಾಡಾಗಿದೆ. ಕೆಲವು ಸ್ತನಿಗಳಲ್ಲಿ ಪ್ರಾಸ್ಪೇಟಿಗೆ ಹೊಂದಿಕೊಂಡಂತೆ ಇನ್ನೊಂದು ಗ್ರಂಥಿ ಇದೆ. ಇದರ ಸ್ರಾವಕ್ಕೆ ಹೆಪ್ಪುಗುಟ್ಟುವ ಗುಣ ಇದೆಯಾಗಿ ಹೆಣ್ಣಿನ ಜನನಾಂಗವನ್ನು ಸೇರಿದ ವೀರ್ಯದ ಸ್ವಲ್ಪ ಭಾಗ ಅಲ್ಲಿ ಹೆಪ್ಪುಗಟ್ಟುತ್ತದೆ. ಇದಕ್ಕೆ ಯೋನಿಬಿರಡೆ ಎಂದು ಹೆಸರು. ಪ್ರಾಣಿ ಪುನಃ ಸಂಭೋಗಕ್ಕೆ ಒಳಗಾಗುವುದನ್ನು ಇದು ತಡೆಯುತ್ತದೆ. ಬಲ್ಬೊಯರೆತ್ರಲ್ ಅಥವಾ ಕೌಪರ್ ಗ್ರಂಥಿ ಶಿಶ್ನದ ಹತ್ತಿರ ಮೂತ್ರ ವಿಸರ್ಜನ ನಾಳದಿಂದ ಮೂಡುತ್ತದೆ. ಸಾಮಾನ್ಯವಾಗಿ ಒಂದು ಜೊತೆ ಕೌಪರ್ ಗ್ರಂಥಿಗಳಿದ್ದು ಅವುಗಳ ಗಾತ್ರ ಹಾಗೂ ಸಂಖ್ಯೆ ವಿವಿಧ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಆಂಪುಲ್ಲರಿ ಗ್ರಂಥಿ ವೀರ್ಯ ನಾಳದಿಂದ ಮೂತ್ರ ವಿಸರ್ಜನನಾಳದ ಹತ್ತಿರ ಹೊರಡುತ್ತದೆ. ವೀರ್ಯಾಣು ಕೋಶಿಕೆಗಳು ಜೊತೆಯಾಗಿದ್ದು ಉದ್ದವಾದ ಸುರುಳಿಯಂತಿವೆ. ಕೆಲವು ಸ್ತನಿಗಳಲ್ಲಿ ಇವು ಪ್ರಬಲವಾಗಿವೆಯಾದರೆ ಇನ್ನು ಕೆಲವು ಪ್ರಭೇದಗಳಲ್ಲಿ ಇರುವುದೇ ಇಲ್ಲ. ಕೆಲವು ಪ್ರಭೇದಗಳಲ್ಲಿ ಮೂಲಾಂಕುರ ಸ್ಥಿತಿಯಲ್ಲಿರುತ್ತವೆ. ಈ ಗ್ರಂಥಿಗಳು ವೀರ್ಯದ್ರವ ಹಾಗೂ ವೀರ್ಯಾಣುಗಳಿಗೆ ನಿಷೇಚನೆಯತನಕ ಬದುಕಿರಲು ಅವಶ್ಯಕವಾದ ವಸ್ತುಗಳನ್ನು ಸ್ರವಿಸುತ್ತವೆ. ಸ್ತ್ರೀ ಜನನಾಂಗಗಳು : ಅಂಡಾಶಯಗಳು ದೇಹಾವಕಾಶದಲ್ಲಿ ಸ್ಥಿತವಾಗಿದ್ದು ಮೀಸೆಂಟರಿಯಿಂದ ಅವಕಾಶದ ಒಳಭಾಗಕ್ಕೆ ಅಂಟಿಕೊಂಡಿರುತ್ತವೆ. ಮೀಸೆಂಟರಿಗಳ ಮೂಲಕ ಅಂಡಾಶಯಕ್ಕೆ ರಕ್ತನಾಳಗಳು ಹಾಗೂ ನರಗಳು ಹಾಯುತ್ತವೆ. ಹ್ಯಾಗ್ ಮೀನುಗಳಲ್ಲಿ ಮೀಸೆಂಟರಿಯಂಥ ಅಂಡಾಶಯದ ಅಂಗಾಂಶದಿಂದ ಅವು ದೇಹದ ಒಳಭಾಗಕ್ಕೆ ಸೇರಿಕೊಂಡಿವೆ. ಅಂಡಾಶಯದ ಮುಂಭಾಗದ ಅರ್ಧ ಮಾತ್ರ ಈ ಮೀನುಗಳಲ್ಲಿ ಕೆಲಸ ಮಾಡುತ್ತದೆ. ಹಿಂಭಾಗದ ಅರ್ಧ ಅಂಕುರಾವಸ್ಥೆಯಲ್ಲಿರುವ ವೃಷಣ ಪ್ರಜೀವಿ ಕಶೇರುಕಗಳಲ್ಲಿ ಅಂಡಾಶಯಗಳು ಉದ್ದವಾಗಿವೆ.

ಅಂಡಾಶಯದ ರಚನೆ ಅಂಡಾಶಯದ ನೆಲೆಯನ್ನೂ ಅಂಡಾಣುಗಳು ಬೆಳೆವಣಿಗೆಯ ಯಾವ ಹಂತದಲ್ಲಿದೆ ಎಂಬುದನ್ನೂ ಮೊಟ್ಟೆಯ ಗಾತ್ರ ಅಥವಾ ಮೊಟ್ಟೆಯಲ್ಲಿ ವರ್ಣಕ ಇದೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ. ಋತುಮಾನಕ್ಕೆ ಅನುಗುಣವಾಗಿ ಪ್ರಜನನದಲ್ಲಿ ತೊಡಗುವ ಪ್ರಾಣಿಗಳಲ್ಲಿ ಅಂಡಾಶಯದ ರಚನೆ ವರ್ಷದ ವಿವಿಧ ಋತುಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಎಲ್ಲ ಕಶೇರುಕಗಳಲ್ಲಿ ಅಪ್ರಬುದ್ಧ ಮತ್ತು ಮುಪ್ಪಿನಲ್ಲಿ ಅಂಡಾಶಯದ ರಚನೆಯಲ್ಲಿ ವ್ಯತ್ಯಾಸಗಳುಂಟು.

ಸಾಮಾನ್ಯ ಕಶೇರುಕದ ಅಂಡಾಶಯ ಜರಾಯು ಅನುಲೇಪಕದಿಂದ ಆವೃತವಾಗಿದ್ದು ಈ ಅನುಲೇಪಕ ಪೆರಿಟೋನಿಯಮಿಗೆ ಸೇರಿಕೊಂಡಿರುತ್ತದೆ. ಪ್ರಬುದ್ಧ ಜೀವಿಗಳಲ್ಲಿ ಬೆಳೆಯುತ್ತಿರುವ ಮೊಟ್ಟೆಗಳು ಜರಾಯು ಅನುಲೇಪಕವನ್ನು ಬಿಟ್ಟು ಅಂಡಾಶಯದ ಮಧ್ಯೆ ಸೇರಿಕೊಂಡಿರುತ್ತವೆ. ಪ್ರತಿ ಋತುವಿನಲ್ಲಿ ಅಸಂಖ್ಯಾತ ಮೊಟ್ಟೆಗಳನ್ನು ಉತ್ಪಾದಿಸುವ ಪ್ರಾಣಿಗಳಲ್ಲಿ ಮಾತ್ರ ಜರಾಯು ಅನುಲೇಪಕ ಸದಾ ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತಿರುತ್ತದೆ. ಇನ್ನುಳಿದ ಪ್ರಾಣಿಗಳಲ್ಲಿ ಜರಾಯು ಅನುಲೇಪಕದ ಒಳಭಾಗಕ್ಕೆ ಬಂಧ ಅಂಗಾಂಶ ಹಾಗೂ ಟ್ಯೂನಿಕ ಅಲ್‍ಬುಜೀನಿಯ ಇದ್ದು ವೃಷಣಕ್ಕೆ ಹೋಲಿಸಿದರೆ ಇವು ತುಂಬ ತೆಳುವಾಗಿರುತ್ತವೆ.

ಕಶೇರುಕ ಅಂಡಾಶಯದಲ್ಲಿ ತೊಗಟೆ ಮತ್ತು ತಿರುಳುಗಳಿರುವುವು. ತೊಗಟೆ, ಟ್ಯೂನಿಕ, ಅದಬುಜೀನಿಯದ ಒಳಭಾಗದಲ್ಲಿದೆ. ಭವಿಷ್ಯದಲ್ಲಿ ಮೊಟ್ಟೆಯಾಗುವ ಕೋಶಗಳು, ಕೆಲವು ಸಂದರ್ಭಗಳಲ್ಲಿ ಬೆಳವಣಿಗೆ ಹೊಂದುತ್ತಿರುವ ಅಂಡಾಣುಗಳನ್ನು ಹೊಂದಿದ ಅಂಡಾಶಯ ಕೂಪ ಇವು ಇದರಲ್ಲಿವೆ. ತೊಗಟೆಯ ಗಾತ್ರ ಶ್ರಾಯ ಅಥವಾ ಪ್ರಜನನ ಚಕ್ರದ ಸ್ಥಿತಿಗಳನ್ನು ಅವಲಂಬಿಸಿದೆ. ಸ್ತನಿಗಳಲ್ಲಿ ಇವುಗಳೊಂದಿಗೆ ಅಂತರಾಲೀಯ ಕೋಶಗಳಿದ್ದು ಕೆಲವು ಪ್ರದೇಶಗಳಲ್ಲಿ ಕೋಶಗಳು ಗ್ರಂಥಿ ಕೋಶಗಳಂತೆ ಕೆಲಸ ಮಾಡುತ್ತವೆ. ತೊಗಟೆಯ ವಿವಿಧ ಭಾಗಗಳು, ನರ, ರಕ್ತನಾಳ ಹಾಗೂ ಬಂಧ ಅಂಗಾಂಶಗಳ ಗುಂಪಿನಿಂದ ಆವೃತವಾಗಿದೆ. ಇದಕ್ಕೆ ಸ್ಟ್ರೋಮ ಎಂದು ಹೆಸರು. ತೊಗಟೆಯ ಒಳಭಾಗದಲ್ಲಿ ತಿರುಳು ಹಾಗೂ ರಕ್ತನಾಳಗಳು, ನರಗಳು ಹಾಗೂ ಬಂಧ ಅಂಗಾಂಶಗಳು ಇವೆ.

ಸ್ತನಿಗಳಲ್ಲಿ ತಿರುಳು ಭಿನ್ನವಾಗಿದೆ. ತೊಗಟೆಯಿಂದ ಸಂಪೂರ್ಣ ಆವೃತವಾಗಿರುವ ಇದರ ಒಂದು ಭಾಗದಲ್ಲಿ ಚಿಕ್ಕ ಹೈಲಸ್ ಇದ್ದು ಅದರ ಮೂಲಕ ರಕ್ತನಾಳಗಳೂ, ನರಗಳೂ ಅಂಡಾಶಯವನ್ನು ಸೇರುತ್ತವೆ. ಹೈಲಸಿನ ಹತ್ತಿರ ಕುರುಡು ನಳಿಕೆಗಳ ಒಂದು ಚಿಕ್ಕ ಗುಂಪು ಇದೆ. ಇದೇ ರೀಟೀ ಅಂಡಾಶಯ. ಪಕ್ಷಿಗಳ ಬಲ ಅಂಡಾಶಯದಲ್ಲಿ ಕೇವಲ ತಿರುಳಿನ ಅಂಗಾಂಶಗಳು ಮಾತ್ರ ಉಂಟು.

ಅಂಡಾಶಯ ಟೊಳ್ಳಾಗಿರಬಹುದು, ಚೀಲದಂಥ ಕಾಲುವೆಗಳನ್ನು ಪಡೆದಿರಬಹುದು ಅಥವಾ ಮುಚ್ಚಿಕೊಂಡಿರಬಹುದು. ಮರಿಗಳನ್ನೇ ಈಯುವ ಮೀನುಗಳ ಅಂಡಾಶಯದಲ್ಲಿ ಒಂದು ಶಾಶ್ವತ ಅವಕಾಶವಿದ್ದು ಅಂಡಾಶಯ ಬೆಳವಣಿಗೆಯಾಗುವಾಗಲೇ ಈ ಅವಕಾಶ ರೂಪುಗೊಳ್ಳುತ್ತದೆ. ಇದರ ಸುತ್ತ ಜರಾಯು ಅನುಲೇಪಕವುಂಟು. ಮಡಿಕೆಗಳಿವೆ. ಇವು ಅವಕಾಶದ ಮಧ್ಯೆ ಚಾಚಿಕೊಂಡಿರುವುದರಿಂದ ಇದರಿಂದ ಸಾಕಷ್ಟು ಮೊಟ್ಟೆಗಳು ಬೆಳೆಯಲು ಅವಕಾಶವಾಗುತ್ತದೆ.

ಅಂಡಾಣು ಕೂಪದಲ್ಲಿ ಅಂಡಾಣು ಜನಕ ಕೋಶಗಳು. ಅಪ್ರಬುದ್ಧ ಮೊಟ್ಟೆ, ದಾಯಿಕೋಶಗಳು ಇತ್ಯಾದಿ ಇವೆ. ಕೂಪದ ಸುತ್ತ ಒಂದು, ಎರಡು ಅಥವಾ ಕೆಲವು ಪದರಗಳ ಅನುಲೇಪಕಗಳಿದ್ದು ಇವಕ್ಕೆ ಕೂಪಾನುಲೇಪಕ ಎಂದು ಹೆಸರು. ಇದು ಜರಾಯು ಅನುಲೇಪಕದ ಕೋಶಗಳಿಂದ ಬೆಳೆಯುತ್ತದೆ.

ಸ್ತನಿಗಳಲ್ಲಿ ಅಂಡಾಣುಕೂಪಗಳು ದ್ರವವನ್ನು ತುಂಬಿರುವ ಅವಕಾಶವನ್ನು ರೂಪಿಸುತ್ತವೆ. ಇದಕ್ಕೆ ಆ್ಯಂಟ್ರಮ್ ಎಂದು ಹೆಸರು. ಕೆಲವು ಹಾರ್ಮೋನುಗಳ ಪ್ರಭಾವದಿಂದ ಆ್ಯಂಟ್ರಮಿನ ಕೂಪಗಳು ಬೆಳೆದು ಗ್ರಾಫ್ ಕೂಪ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ ಬೆಳೆಯುತ್ತಿರುವ ಮೊಟ್ಟೆ ಆಂಟ್ರಮ್ ಅವಕಾಶದ ದ್ರವದಲ್ಲಿ ಮುಳುಗಿದ್ದು ಹಲವು ಕೋಶಗಳ ಒಂದು ಗುಂಪಿನಿಂದ ಆವೃತವಾಗಿರುತ್ತದೆ. ಎಲ್ಲ ಕಶೇರುಕಗಳಲ್ಲಿ ಅಂಡಾಣುಜನಕ ಕೋಶಗಳು ಪಕ್ವವಾಗಲು ಪ್ರಾರಂಭಿಸಿದ ಅನಂತರ ಅವು ಯಾವ ಹಂತದಲ್ಲಿಯಾದರೂ ಅಪಭ್ರಂಶಗೊಳ್ಳಬಹುದು. ಇದರಿಂದ ಕೊನೆಯಲ್ಲಿ ಸಂಪೂರ್ಣ ಪಕ್ವವಾಗುವ ಅಂಡಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಕೆಲವು ಸ್ತನಿಗಳಲ್ಲಿಯಂತೂ ಸಹಸ್ರಾರು ಅಂಡಾಣು ಕೋಶಗಳು ಪಕ್ವವಾಗಲು ಪ್ರಾರಂಭಿಸಿದರೂ ಕೊನೆಯಲ್ಲಿ ಕೆಲವೇ ಕೆಲವು ಅಂಡಾಣುಗಳು ಮಾತ್ರ ನಿಷೇಚನದಲ್ಲಿ ಭಾಗವಹಿಸುತ್ತವೆ. ಮನುಷ್ಯ, ಮತ್ತು ಗೊರಸುಳ್ಳ ಪ್ರಾಣಿ ಆನೆಗಳಲ್ಲಿ ಒಮ್ಮೆಗೆ ಒಂದೇ ಒಂದು ಅಂಡಾಣು ನಿಷೇಚನೆಗೆ ತಯಾರಾಗುತ್ತದೆ.

ಸ್ತನಿಗಳ ಮೊಟ್ಟೆಗಳಲ್ಲಿ ಭಂಡಾರ ಕಡಿಮೆಯಿರುವುದರಿಂದ ಹಾಗೂ ಮೊಟ್ಟೆಗಳ ಬೆಳವಣಿಗೆ ತಾಯಿಯ ಗರ್ಭದಲ್ಲಿಯೇ ನಡೆಯುವುದರಿಂದ ಮೊಟ್ಟೆ ಪಕ್ವವಾದಾಗ ಗಾತ್ರದಲ್ಲಿ ಹೆಚ್ಚಳವಿರುವುದಿಲ್ಲ. ಕಶೇರುಕಗಳಲ್ಲಿ ಮೊಟ್ಟೆ ಮೊದಲು ಸೀಲೋಮಿನಲ್ಲಿ ಅಥವಾ ಅದರಿಂದ ಮಾರ್ಪಾಡು ಹೊಂದಿದ ಸ್ಥಳಗಳಲ್ಲಿ ಬಿಡುಗಡೆಯಾಗಿ ಅಲ್ಲಿಂದ ನಾಳಗಳನ್ನು ಪ್ರವೇಶಿಸುತ್ತದೆ. ಶಾರ್ಕ್ ಮೀನು, ಸರೀಸೃಪ ಹಾಗೂ ಪಕ್ಷಿಗಳಲ್ಲಿ ಅಂಡಾಣು ಸಾಗಣೆಯಾಗುವಾಗ ವಾಹಕ ನಾಳದ ಲಾಳಿಕೆಯಾಕಾರದ ಬಾಯಿಯ ಭಾಗ ನಿಧಾನವಾಗಿ ಅಲ್ಲಾಡುತ್ತದೆ. ಕೆಲವು ಪ್ರಭೇದಗಳಲ್ಲಿ ಅಂಡಾಣು ವಾಹಕ ನಾಳದ ಬಾಯಿಯಲ್ಲಿರುವ ಕೋಶಗಳು ಶಿಲಕಾಂಗಗಳ ಚಲನೆಯಿಂದ ವಾಹಕ ನಳವನ್ನು ಪ್ರವೇಶಿಸುತ್ತವೆ. ಅಂಡಾಣು ಪಕ್ವವಾದ ಅನಂತರ ಅಂಡಾಶಯ ಕುಗ್ಗುತ್ತದೆ.

ಅಂಡಾಣು ಪಕ್ವವಾದ ಅನಂತರ ಅದರ ರೂಪದಲ್ಲಿ ಗಣನೀಯ ಬದಲಾವಣೆಗಳಾಗುತ್ತವೆ. ಒಳತೀಕದ ರಕ್ತನಾಳಗಳು ಕೂಪವನ್ನು ಪ್ರವೇಶಿಸುತ್ತವೆ. ಕಣಕ ಕೋಶಗಳು ವಿಭಜನೆಗೆ ಒಳಗಾಗಿ ಗಾತ್ರದಲ್ಲಿ ಹಿಗ್ಗಿ ಕುಸಿದಿರುವ ಆಂಟ್ರಮಿನ ಅವಕಾಶವನ್ನು ಸಂಪೂರ್ಣ ನಾಶ ಮಾಡುತ್ತವೆ. ಅನಂತರ ಇವನ್ನು ಲ್ಯೂಟೀಯಿನ್ ಕೋಶಗಳು ಎನ್ನುತ್ತಾರೆ. ಒಳತೀಕದ ಕೋಶಗಳೂ ಕಣಕ ಕೋಶದಂತೆ ಬದಲಾವಣೆ ಹೊಂದುತ್ತವೆ. ಸ್ತನಿಗಳಲ್ಲಿ ಇದರ ಪರಿಣಾಮ ಕಾರ್ಪಸ್ ಲ್ಯೂಟಿಯದ ಉದಯ. ಇದು ಪ್ರಾಜೆಸ್ಟಿರಾನ್ ಎಂಬ ಹಾರ್ಮೋನನ್ನು ಸಂಶ್ಲೇಷಿಸುತ್ತದೆ. ಗರ್ಭವನ್ನು ಕಾಯ್ದುಕೊಳ್ಳಲು ಈ ಹಾರ್ಮೋನು ಅವಶ್ಯಕ. ಪಕ್ಷಿಗಳಲ್ಲಿ ಕೂಪಗಳು ಕುಗ್ಗುತ್ತವೆ. ಆದರೆ, ಕಾರ್ಪಸ್ ಲ್ಯೂಟಿಯದ ಬೆಳವಣಿಗೆ ಆಗುವುದಿಲ್ಲ.

ಹೆಣ್ಣು ಜನನಾಂಗದ ನಾಳಗಳು ಜೊತೆಯಾಗಿದ್ದು ಇವುಗಳ ಮುಂಭಾಗದಲ್ಲಿ ಲಾಳಿಕೆಯ ಆಕಾರದ ಬಾಯಿಯುಂಟು. ಹಿಂಭಾಗದಲ್ಲಿ ಕ್ಲೋಯಕದಲ್ಲಿ ಹೊರತೆರೆದಿರುತ್ತವೆ. ಈ ನಾಳಗಳು ಮೊಟ್ಟೆಯ ಬೆಳವಣಿಗೆಯ ಅವಶ್ಯಕತೆಗಳಿಗೆ ಅನುಸಾರವಾಗಿ ಆಹಾರ, ಉಸಿರಾಟ, ರಕ್ಷಣೆ, ಸಂಗ್ರಹ ಇತ್ಯಾದಿಗಳಿಗೆ ಅಗತ್ಯವಾದ ಸ್ರಾವಗಳನ್ನು ಸ್ರವಿಸುವುದಕ್ಕೆ ಮಾರ್ಪಾಟಾಗಿವೆ. ಅಂತರ್ ನಿಷೇಚನ ತೋರುವ ಪ್ರಭೇದಗಳಲ್ಲಿ ಸಂಭೋಗದ ತರುವಾಯ ವೀರ್ಯಾಣುಗಳು ನಿಷೇಚನವಾಗುವ ತನಕ ಬೇಕಾದ ವಸ್ತುಗಳನ್ನು ಈ ನಾಳಗಳು ಸ್ರವಿಸುತ್ತವೆ. ಕೆಲವು ಚಕ್ರಾಸ್ಯಗಳಲ್ಲಿ ಹಾಗೂ ಪ್ರಜೀವಿ ಕಶೇರುಕಗಳಲ್ಲಿ ನಾಳಗಳಿಲ್ಲ. ಲಿಂಗಾಣುಗಳು ಉದರ ಅವಕಾಶದ ಮೂಲಕ ಹೊರಹೋಗುತ್ತವೆ. ಇನ್ನು ಕೆಲವು ಕಶೇರುಕಗಳಲ್ಲಿ ಒಂದೇ ಒಂದು ನಾಳವಿರುತ್ತದೆ. ಕೆಲವು ಪ್ರಭೇದಗಳಲ್ಲಿ ಎರಡು ನಾಳಗಳಿದ್ದು ಹಿಂಭಾಗದಲ್ಲಿ ಕೂಡಿಕೊಂಡಿರುತ್ತವೆ.

ಫುಪ್ಫುಸವಂತ ಮೀನುಗಳಲ್ಲಿ ಮತ್ತು ಉಭಯ ಜೀವಿಗಳಲ್ಲಿ ನಾಳಗಳು ಉದ್ದವಾಗಿದ್ದು ಸುರುಳಿಸುರುಳಿಯಾಗಿವೆ. ಸಂತಾನವೃದ್ಧಿಯ ಶ್ರಾಯದಲ್ಲಿ ಅವುಗಳ ಗಾತ್ರ ಹಿಗ್ಗುತ್ತದೆ. ಕಪ್ಪೆಗಳಲ್ಲಿ ಅಂಡಾಣು ವಾಹಕ ನಾಳದ ಹಿಂಭಾಗ ದೊಡ್ಡದಾಗಿದ್ದು ಅಂಡಾಣು ಚೀಲವಾಗಿ ಮಾರ್ಪಟ್ಟಿದೆ. ಮೊಟ್ಟೆ ಪಕ್ವವಾಗುವ ತನಕ ಇಲ್ಲಿ ಸಂಗ್ರಹವಾಗುತ್ತದೆ. ಕೆಲವು ಗುಂಪುಗಳಲ್ಲಿ ಈ ನಾಳಗಳಿಗೆ ಹೊಂದಿಕೊಂಡಂತೆ ಕವಚಗ್ರಂಥಿ ಇದ್ದು ಅದು ಎರಡು ರೀತಿಯ ಸ್ರಾವವನ್ನು ಸ್ರವಿಸುತ್ತದೆ. ಒಂದನೆಯದು ಆಲ್‍ಬ್ಯೂಮಿನ್ ಎಂಬ ಪ್ರೋಟೀನ್. ಇದು ಬೆಳೆಯುತ್ತಿರುವ ಮೊಟ್ಟೆಗೆ ಆಹಾರ. ಎರಡನೆಯದು ಮೊಟ್ಟೆ ಇಡುವ ಪ್ರಾಣಿಗಳಲ್ಲಿ ಗಟ್ಟಿಯಾದ ಕವಚವನ್ನು ಮರಿ ಮಾಡುವ ಪ್ರಭೇದಗಳ ಮೊಟ್ಟೆಗಳ ಸುತ್ತ ತೆಳುವಾದ ಪೊರೆಯನ್ನೂ ನಿರ್ಮಿಸುತ್ತದೆ. ಪಕ್ಷಿಗಳಲ್ಲಿ ಅಂಡಾಣು ವಾಹಕ ನಾಳದ ಲಾಳಿಕೆಯಂಥ ಬಾಯಿಯಲ್ಲಿ ಮೊಟ್ಟೆಯ ಚಲಾಜವನ್ನು ಹಾಗೂ ನಾಳದ ಉಳಿದ ಭಾಗಗಳಲ್ಲಿ ಆಲ್‍ಬ್ಯೂಮಿನನ್ನು ಸ್ರವಿಸುತ್ತವೆ. ಎಲ್ಲ ಸ್ತನಿಗಳಲ್ಲಿ ನಿಷೇಚನ ಅಂಡಾಣು ವಾಹಕ ನಾಳದಲ್ಲಿಯೇ ನಡೆಯುತ್ತದೆ. ಇದನ್ನು ಫೆಲೋಪಿಯನ್ ನಾಳ ಎಂದೂ ಕರೆಯುವುದಿದೆ. ಮಾಸ್ರ್ಯೂಪಿಯೇಲಿಯೇ ಮತ್ತು ಪ್ರೋಟೊಥೀರಿಯಗಳ ಹೊರತು ಇನ್ನೆಲ್ಲ ಸ್ತನಿಗಳಲ್ಲಿ ಜನನಾಂಗಗಳು ಜನನ ಗ್ರಂಥಿಯಿಂದ ಹೊರಡುವ ಫೆಲೋಪಿಯನ್ ನಾಳ ಅಥವಾ ಅಂಡಾಣು ವಾಹಕ ನಾಳ, ಒಂದು ಗರ್ಭಾಶಯ ಗರ್ಭಾಶಯದ ಎರಡು ಕೊಂಬುಗಳು ಮತ್ತು ಒಂದು ಯೋನಿಯನ್ನು ಹೊಂದಿರುತ್ತವೆ. ಫೆಲೊಪಿಯನ್ ನಾಳದಲ್ಲಿ ಚಿಕ್ಕ ಚೀಲ ಅಥವಾ ವಿಸ್ತøತ ನಾಳಾಗ್ರ ಉಂಟು. ಗರ್ಭಧಾರಣೆ ಗರ್ಭಾಶಯದ ಕೊಂಬುಗಳಲ್ಲಿ ನಡೆಯುತ್ತದೆ. ಬೆಳೆಯುತ್ತಿರುವ ಭ್ರೂಣಗಳು ಸಮಾಂತರದಲ್ಲಿರುವುದರಿಂದ ಅವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಕೆಲವು ಪ್ರಭೇದಗಳಲ್ಲಿ ಕೊಂಬು ಮೂಲಾಂಕುರ ಸ್ಥಿತಿಯಲ್ಲಿರುತ್ತದೆ. ಕೆಲವು ಪ್ರಭೇದಗಳಲ್ಲಿ ಎರಡೂ ಕೊಂಬುಗಳು ಗರ್ಭಾಶಯದ ಒಂದೇ ಕೋಣೆಯಲ್ಲಿ ತೆರೆದಿರುತ್ತದೆ. ಇನ್ನು ಕೆಲವು ಪ್ರಭೇದಗಳಲ್ಲಿ ಕೊಂಬುಗಳು ಇರುವುದೇ ಇಲ್ಲ. ಗರ್ಭಾಶಯದ ಕೊನೆಯ ಭಾಗ ಸ್ವಲ್ಪ ಸ್ವಲ್ಪವಾಗಿ ಗಾತ್ರದಲ್ಲಿ ಕಡಿಮೆಯಾಗುತ್ತ ತ್ರಿಕೋಣಾಕಾರಕ್ಕೆ ತಿರುಗಿ ಯೋನಿಯಲ್ಲಿ ತೆರೆದಿರುತ್ತದೆ. ಯೋನಿಯ ಮುಂಭಾಗದ ಬಾಯಿಯಲ್ಲಿ ಒದ್ದೆಯಾದ ಮಾಂಸಖಂಡಗಳ ಮಡಿಕೆಗಳಿರುತ್ತವೆ. ಯೋನಿ ಮೂತ್ರ ವಿಸರ್ಜನಾ - ಪ್ರಜನನಾಂಗ ಕುಹರದಲ್ಲಿ ಕೊನೆಗೊಂಡು ಯೋನಿದ್ವಾರದ ಮೂಲಕ ಹೊರತೆಗೆಯುತ್ತದೆ. ಕೆಲವು ಅಪ್ರಬುದ್ದ ಜೀವಿಗಳಲ್ಲಿ ಯೋನಿಯ ದ್ವಾರ ಹೈಮನ್ ಎಂಬ ತೆಳುವಾದ ಪೊರೆಯಿಂದ ಮುಚ್ಚಿಕೊಂಡಿರುತ್ತದೆ. (ಎಸ್.ಎನ್.ಎಚ್.)

ಮನುಷ್ಯರಲ್ಲಿ

ಮನುಷ್ಯರಲ್ಲಿ ಪ್ರಜನನ ಮಿಕ್ಕ ಮೇಲ್ದರ್ಜೆ ಪ್ರಾಣಿಗಳಲ್ಲಂತೆಯೇ ಲೈಂಗಿಕ ವಿಧಾನದಿಂದ ಜರುಗುತ್ತದೆ. ಗಂಡು ಹೆಣ್ಣುಗಳ ನಡುವೆ ಅನೇಕ ದೈಹಿಕ ವ್ಯತ್ಯಾಸಗಳು ಇವೆ. ಲಿಂಗಭೇದ ಸ್ಪಷ್ಟ. ಲೈಂಗಿಕ ವ್ಯತ್ಯಾಸಗಳಲ್ಲಿ ಕೆಲವು ಭ್ರೂಣದ ಬೆಳವಣಿಗೆ ಕಾಲದಲ್ಲಿ ದೇಹದ ಒಳ ಹಾಗೂ ಹೊರ ಲಕ್ಷಣಗಳಾಗಿ ಮೂಡಿ ಹುಟ್ಟು ವ್ಯತ್ಯಾಸಗಳಾಗಿ ವ್ಯಕ್ತವಾಗುತ್ತವೆ. ಇವು ಆಜನ್ಮಲೈಂಗಿಕ ವ್ಯತ್ಯಾಸಗಳು ಅಥವಾ ಪ್ರಾಥಮಿಕ ಲೈಂಗಿಕ ಲಕ್ಷಣಗಳು. ಮಿಕ್ಕವು ವ್ಯಕ್ತಿ ಪ್ರಾಯಕ್ಕೆ ಬಂದು ಸಂತಾನೋತ್ಪಾದಕ ಸಾಮಥ್ರ್ಯಗಳಿಸುವ ವೇಳೆಯಲ್ಲಿ ವ್ಯಕ್ತವಾಗುವಂಥವು. ಬೆಳವಣಿಗೆ ಹಠಾತ್ತನೆ ಹೆಚ್ಚಿ ಕೈಶೋರ್ಯ ಕಳೆದು ಯೌವನ ಪ್ರಾಪ್ತವಾಗುವ ಮತ್ತು ಯುವಕ ಯುವತಿಯರ ನಡುವೆ ಸ್ಪಷ್ಟವಾದ ವ್ಯತ್ಯಾಸಗಳು ಕಂಡುಬರುವ ಈ ವಿದ್ಯಮಾನಕ್ಕೆ ಪ್ರಬುದ್ಧತೆ (ಪ್ಯೂಬರ್ಟಿ) ಎಂದು ಹೆಸರು. ಇದರ ಅವಧಿ ಒಂದೆರಡು ವರ್ಷಗಳು. ಈ ಅವಧಿಯಲ್ಲಿ ಆರ್ಜಿತವಾಗುವ ವಿಶೇಷ ಲಕ್ಷಣಗಳಿಗೆ ದ್ವಿತೀಯಕ ಅಥವಾ ಆನುಷಂಗಿಕ ಲೈಂಗಿಕ ಲಕ್ಷಣಗಳೆಂದು ಹೆಸರು. ಯುವಕ ಪ್ರಬುದ್ಧನಾದ ಬಳಿಕ ಆತನ ಪ್ರಧಾನ ಪ್ರಜನನಾಂಗಗಳಾದ ಎರಡು ವೃಷಣಗಳಿಂದಲೂ ವೀರ್ಯಾಣುಗಳೆಂಬ ವಿಶಿಷ್ಟ ಕೋಶಗಳು ಮುಂದಕ್ಕೆ ಸುಮಾರು 40-45 ವರ್ಷಗಳ ತನಕ ನಿರಂತರವಾಗಿ, ಉತ್ಪತ್ತಿ ಆಗತೊಡಗುತ್ತವೆ. ಹಾಗೆಯೇ ಯುವತಿಯ ಪ್ರಧಾನ ಜನನಾಂಗಗಳಾದ ಎರಡು ಅಂಡಾಶಯಗಳಲ್ಲಿ ಯಾವುದೋ ಒಂದರಿಂದ (ಇಂಥದೇ ಎಂದು ಯಾವಾಗಲೂ ಖಚಿತವಿಲ್ಲ.) ಹೆಚ್ಚು ಕಡಿಮೆ ಕ್ಲುಪ್ತವಾಗಿ ನಾಲ್ಕು ವಾರಗಳಿಗೆ ಒಮ್ಮೆ, ಒಂದು ಅಂಡಾಣು ಆಕೆಗೆ 45-50 ವರ್ಷ ವಯಸ್ಸಾಗುವ ತನಕ ಉತ್ಪತ್ತಿ ಆಗುತ್ತಿರುತ್ತದೆ. ಸಂಭೋಗಕ್ರಿಯೆಯಿಂದ ಪುರುಷನ ವೀರ್ಯಾಣುಗಳು ಸ್ತ್ರೀಯ ಪ್ರಜನನ ಮಾರ್ಗವನ್ನು ಹೊಕ್ಕು ಮುಂದೆ ಅಂಡಾಣುವನ್ನು ಸಂಧಿಸುತ್ತವೆ. ಯಾವುದೋ ಒಂದು ವೀರ್ಯಾಣು ಮಾತ್ರ ಅದರೊಳಗೆ ಹೋಗುತ್ತದೆ. ಇದು ನಿಷೇಚನ ಕ್ರಿಯೆ (ಫರ್ಟಿಲೈಸೇಷನ್) ಅಂಡಾಣು ವೀರ್ಯಾಣು ಸಂಯೋಗದಿಂದ ಫಲಿಸುವುದು ಯುಗ್ಮಜ ಅಥವಾ ಭ್ರೂಣಾಣು (ಸೈಬೋಟ್). ತಾಯಿಯ ಪ್ರಜನನಾಂಗಗಳ ಪೈಕಿ ಒಂದಾದ ಗರ್ಭಾಶಯಲ್ಲಿ ಇದು ಸುಮಾರು 40 ವಾರಗಳ ಕಾಲ ಬೆಳೆದು ಶಿಶುವಾಗಿ ರೂಪಿತವಾಗಿ ಅನಂತರ ಜನಿಸುತ್ತದೆ - ಸಾಮಾನ್ಯವಾಗಿ ಒಂದು ಮಗು ಮಾತ್ರ.

ಗರ್ಭಾಶಯದಲ್ಲಿ ಭ್ರೂಣ ಬೆಳೆಯುತ್ತಿರುವಾಗ ಮತ್ತು ಸಾಮಾನ್ಯವಾಗಿ ನವಜಾತ ಶಿಶುವಿಗೆ ತಾಯಿ ಹಾಲೂಡುತ್ತಿರುವಾಗ ಸ್ತ್ರೀಯಲ್ಲಿ ಅಂಡಾಣುವಿನ ತಯಾರಿ ಸ್ಥಗಿತವಾಗಿರುತ್ತದೆ. ಆದ್ದರಿಂದ ಈ ಕಾಲಾವಧಿಯಲ್ಲಿ ಪುನಃ ಗರ್ಭ ತಾಳುವ ಪ್ರಸಂಗ ಉದ್ಭವಿಸುವುದಿಲ್ಲ. ಅಂದರೆ ಸಾಮಾನ್ಯವಾಗಿ ವ್ಯಕ್ತಿಯ ಒಂದು ಗರ್ಭಾವಸ್ಥೆಗೂ ಇನ್ನೊಂದಕ್ಕೂ ನಡುವೆ 12-18 ತಿಂಗಳುಗಳ ಅವಧಿ ಇದ್ದು ಈ ಅವಧಿಯಲ್ಲಿ ಅನೇಕ ಮಕ್ಕಳು ಜನಿಸಬಹುದು. ಹೀಗೆ ಸ್ತ್ರೀಗೆ ಇಪ್ಪತ್ತಕ್ಕಿಂತ ಹೆಚ್ಚು ಮಕ್ಕಳು ಜನಿಸಿರುವ ಪ್ರಸಂಗಗಳು ಅನೇಕವು ಇದ್ದರೂ ನೈಸರ್ಗಿಕವಾಗಿ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಒಂದರಂತೆ ಆರರಿಂದ ಎಂಟು ಮಕ್ಕಳಾಗುವುದು ಸಾಮಾನ್ಯ. ಸಂತಾನ ನಿರೋಧ ಮುಂತಾದ ಕೃತಕ ಪರಿಸ್ಥಿತಿಗಳಲ್ಲಿ ಕೇವಲ ಒಂದೋ ಎರಡೋ ಮಕ್ಕಳನ್ನು ಪಡೆಯುವುದೂ ಇದೆ. ಒಂದು ಗರ್ಭಾವಸ್ಥೆಗೂ ಇನ್ನೊಂದಕ್ಕೂ ನಡುವೆ ಕನಿಷ್ಠ ಅವಧಿಗಿಂತ ಹೆಚ್ಚು ಕಾಲ ಇರಬಹುದಾದ ಇಂಥ ಸಂದರ್ಭಗಳಲ್ಲಿ ಪ್ರತಿ ನಾಲ್ಕು ವಾರಗಳಿಗೆ ಒಂದು ಅಂಡಾಣು ಉತ್ಪತ್ತಿ ಆಗುವುದು ಕಂಡುಬರುತ್ತದೆ. ಪ್ರಬುದ್ಧತೆಯ ತರುವಾಯ ಯಾವುದೇ ಕಾಲದಲ್ಲಿ ಉತ್ಪತ್ತಿ ಆಗುವ ಅಂಡಾಣುವಿನ ನಿಷೇಚನೆ ಆಗದಿದ್ದಲ್ಲಿ ಅದು ಎರಡರಿಂದ ಮೂರು ದಿವಸಗಳಲ್ಲಿ ನಾಶವಾಗುತ್ತದೆ. ಜೊತೆಗೆ ಸ್ತ್ರೀಯ ಪ್ರಜನನ ಮಾರ್ಗದಿಂದ ಮೂರರಿಂದ ನಾಲ್ಕು ದಿವಸಗಳ ತನಕ ರಕ್ತಸ್ರಾವವಾಗುತ್ತದೆ. ಇದಕ್ಕೆ ರಜಸ್ಸ್ರಾವ ಅಥವಾ ಋತುಸ್ರಾವ ಎಂದು ಹೆಸರು. ಸಾಮಾನ್ಯ ಭಾಷೆಯಲ್ಲಿ ಹೊರಗಾಗುವುದು ಅಥವಾ ಮುಟ್ಟಾಗುವುದು ಎಂದರೆ ಇದೇ. ರಜಸ್ಸ್ರಾವ ಮನುಷ್ಯರನ್ನು ಮತ್ತು ಮನುಷ್ಯರಲ್ಲಿ ಬಲು ಮಟ್ಟಿಗೆ ಹೋಲುವ ಗೊರಿಲ್ಲ, ಚಿಂಪಾಂಜಿ ಮುಂತಾದ ವಾನರಗಳಲ್ಲಿ ಮಾತ್ರ ಕಂಡುಬರುವ ವಿದ್ಯಮಾನ. ಅಂಡಾಶಯದಲ್ಲಿ ಅಂಡಾಣುವಿನ ತಯಾರಿ ಯಾವುದೇ ಕಾರಣದಿಂದ ಸ್ಥಗಿತವಾಗಿದ್ದಾಗ ಇದು ಕಂಡುಬರುವುದಿಲ್ಲ. ಸ್ತ್ರೀಗೆ 45 ರಿಂದ 50 ವರ್ಷ ವಯಸ್ಸಾದಾಗ ಕಾಲಕಾಲಕ್ಕೆ ಋತುಸ್ರಾವವಾಗುವುದು ನಿಂತು ಹೋಗುತ್ತದೆ. ಅಂದರೆ ಅಂಡಾಣುವಿನ ಉತ್ಪಾದನೆ ನಿಂತು ಹೋಗುತ್ತದೆ, ಸಂತಾನೋತ್ಪಾದನೆಯ ಸಾಮಥ್ರ್ಯ ಮುಗಿಯಿತು ಎಂಬುದು ವ್ಯಕ್ತ. ಆದರೆ, ವಯಸ್ಕ ಪುರುಷರಲ್ಲಿ ವೀರ್ಯಾಣುಗಳ ಉತ್ಪಾದನೆ ಯಾವಾಗ ನಿಂತು ಹೋಗುತ್ತದೆ ಎಂಬುದು ಖಚಿತವಾಗಿ ತಿಳಿಯುವಂತಿಲ್ಲ. ಸಾಮಾನ್ಯವಾಗಿ ಪುರುಷನಿಗೆ 55 - 70 ವರ್ಷ ವಯಸ್ಸು ನಡೆಯುತ್ತಿರುವಾಗ ಗುರುತು ಹತ್ತದಂತೆ ಕ್ರಮೇಣ ವೀರ್ಯಾಣು ಉತ್ಪಾದನೆ ಕಡಿಮೆ ಆಗುತ್ತದೆ. ಕೊನೆಗೆ ಸ್ಥಗಿತವಾಗಿ ಆತನಲ್ಲಿಯೂ ಸಂತಾನೋತ್ಪಾದನಾಸಾಮಥ್ರ್ಯ ಅಳಿಯುತ್ತದೆ. ಮುಂದೆಯೂ ಸ್ತ್ರೀಪುರುಷರು ಒಂದೆರಡು ದಶಕಗಳಾದರೂ ಜೀವಿಸುತ್ತಾರೆ. ಇಂಥ ಸಂತಾನಾತೀತ ದೀರ್ಘಜೀವನ ಮನುಷ್ಯರ ವೈಶಿಷ್ಟ್ಯ. ಮಿಕ್ಕ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಸಂತಾನೋತ್ಪಾದನೆಯ ಸಾಮಥ್ರ್ಯ ಅಳಿದ ಅನತಿ ಕಾಲದಲ್ಲಿಯೇ ಅವುಗಳಿಗೆ ಮುಪ್ಪಿನಿಂದ ಮರಣ ಪ್ರಾಪ್ತಿಸುತ್ತದೆ. ಸಂತಾನೋತ್ಪಾದನೆ ಸಾಧ್ಯವಿರುವ ವಯಸ್ಸಿನಲ್ಲಿ ನಾನಾ ಕಾರಣಗಳಿಂದ ವ್ಯಕ್ತಿಯಲ್ಲಿ ಆ ಸಾಮಥ್ರ್ಯ ನಾಶವಾಗಿರಬಹುದು. ಇಂಥ ವ್ಯಕ್ತಿ ಬರಡು. ಕೆಲವು ಬರುಡು ಸ್ಥಿತಿಗಳು, ಔಷಧ ಸೇವನೆ, ಶಸ್ತ್ರಕ್ರಿಯೆ ಮುಂತಾದ ವಿಧಾನಗಳಿಂದ ಪರಿಹಾರವಾಗಬಹುದು. ಇನ್ನು ಕೆಲವು ಸದ್ಯಕ್ಕೆ ಚಿಕಿತ್ಸಾತೀತ.

ಪುರುಷರಲ್ಲಿ ಪ್ರಜನನಾಂಗಗಳ ವಿನ್ಯಾಸ ಮತ್ತು ಕ್ರಿಯಾವಿಧಾನ : ಪುರುಷನಲ್ಲಿ ಪ್ರಜನನಾಂಗಗಳನ್ನು ಪ್ರಧಾನ ಮತ್ತು ಅನುಷಂಗಿಕ ಅಂಗಗಳೆಂದು ಗುರುತಿಸಬಹುದು. ಹುಟ್ಟಿದಂದಿನಿಂದ ಪ್ರಬುದ್ಧತೆಯತನಕ ಈ ಎಲ್ಲ ಅಂಗಗಳೂ ರಚನಾತ್ಮಕವಾಗಿ ಮಾತ್ರ ಕಂಡುಬರುತ್ತವೆ. ಅದರ ಸಂತಾನೋತ್ಪಾದನೆಯ ಕಾಲದಲ್ಲಿ ಇವು ಬೆಳೆದು ಬಲಿತು ಕಾರ್ಯೋನ್ಮುಖವಾಗುತ್ತವೆ. ಇವುಗಳಲ್ಲಿ ಕಿಬ್ಬೊಟ್ಟೆ ಕೆಳಗಿನ ಪ್ರದೇಶದಲ್ಲಿರುವ ಶಿಶ್ನ ಮತ್ತು ಎರಡು ವೃಷಣಗಳು ಹೊರಗೆ ಕಾಣಬರುವಂಥವು. ವೃಷಣಗಳು ಆಯಾ ವೃಷಣಕೋಶಗಳ ಒಳಗೆ ಉಪಸ್ಥಿತವಾಗಿವೆ. ಪ್ರಬುದ್ಧತೆಯ ತರುವಾಯ ಈ ಪ್ರದೇಶದಲ್ಲಿ ಒರಟು ಕೂದಲು ಬೆಳೆದಿರುತ್ತದೆ. ರೋಮಗಳು ವೃಷಣಕೋಶದ ಮೇಲೆಯೂ ಕಿಬ್ಬೊಟ್ಟೆಯ ಮೇಲೂ ಕಂಡುಬರುತ್ತವೆ. ರೋಮಯುಕ್ತ ಪ್ರದೇಶಕ್ಕೆ ನೇರವಾದ ಮೇಲಂಚು ಇಲ್ಲದಿರುವುದು ಪುರುಷರ ವೈಶಿಷ್ಟ್ಯ. ವೃಷಣದಿಂದ ಹೊರಡುವ ವೃಷಣ ನಾಳಗಳು ದೇಹದ ಒಳಹೊಕ್ಕು ಮೂತ್ರಕೋಶ ಹಾಗೂ ಮೂತ್ರ ನಾಳಗಳ ನೆಲೆಯನ್ನು ತಲುಪುತ್ತವೆ. ಅಲ್ಲಿಯೇ ಆಯಾ ಕಡೆಯ ವೀರ್ಯಕೋಶಗಳು (ಸೆಮಿನಲ್ ವಸೈಕಲ್ಸ್) ಇದ್ದು ಅವುಗಳ ನಾಳಗಳು ವೃಷಣ ನಾಳಗಳೊಡನೆ ಜಂಟಿಯಾಗಿ ಆಯಾಕಡೆಯ ಸ್ಖಲನನಾಳ (ಇಜ್ಯಾಕ್ಯುಲೇಟರೀಡಕ್ಟ್) ಆಗುತ್ತದೆ. ಮೂತ್ರಕೋಶದ ನೆಲೆಯಲ್ಲಿ ಶುಕ್ಲಗ್ರಂಥಿ (ಪ್ರಾಸ್ಟೇಟ್) ಇದೆ. ಮೂತ್ರನಾಳದ ಪ್ರಾರಂಭ ಭಾಗ ಶುಕ್ಲಗ್ರಂಥಿಯ ಒಳಗೇ ಹುದುಗಿ ಸಾಗುತ್ತದೆ. ಈ ಭಾಗಕ್ಕೆ ಸ್ಖಲನನಾಳಗಳೂ ಶುಕ್ಲಗ್ರಂಥಿಯ ನಾಳಗಳೂ ತೆರೆದುಕೊಳ್ಳುತ್ತವೆ. ಮೂತ್ರನಾಳ ಶಿಶ್ನದ ಮೂಲಕ ಮುಂದೆ ಸಾಗಿ ಶಿಶ್ನಾಗ್ರದಲ್ಲಿ ಹೊರಗೆ ತೆರೆದುಕೊಳ್ಳುತ್ತದೆ. ವೀರ್ಯಕೋಶಗಳು ಮತ್ತು ಶುಕ್ಲಗ್ರಂಥಿ ಪುರುಷರ ಮುಖ್ಯ ಅನುಷಂಗಿಕ ಹಾಗೂ ಒಳ ಪ್ರಜನನಾಂಗಗಳು. ಪ್ರಬುದ್ಧತೆಯ ತರುವಾಯ ವೃಷಣಗಳು ವೀರ್ಯಾಣುಗಳನ್ನು (ಸ್ಪಮ್ರ್ಸ್) ಉತ್ಪಾದಿಸಲು ಪ್ರಾರಂಭಿಸುತ್ತವೆ. ಶುಕ್ಲಗ್ರಂಥಿಯೂ ವೀರ್ಯಕೋಶಗಳೂ ಅವುಗಳ ವಿಶಿಷ್ಟರಸಗಳನ್ನು ಸ್ರವಿಸುವ ಸಾಮಥ್ರ್ಯ ಪಡೆಯುತ್ತವೆ. ವೃಷಣದಲ್ಲಿ 8-10 ಹಾಲೆಗಳಿದ್ದು ಪ್ರತಿ ಹಾಲೆಯನ್ನೂ 2-3 ಗೊಜಿಬಿಜಿ ಆದ (ಕನ್‍ಟಾರ್ಟೆಡ್) ಸೂಕ್ಷ್ಮನಾಳಗಳು ಆಕ್ರಮಿಸಿಕೊಂಡಿರುತ್ತವೆ. ಇವು ವೀರ್ಯಾಣೋತ್ಪಾದಕ ನಾಳಗಳು (ಸೆಮಿನಿಫೆರೆಸ್ ಟ್ಯೂಬ್ಯೂಲ್ಸ್). ಈ ನಾಳಗಳ ನಡುವೆ ಇರುವ ಬಂಧನಾಂಗಾಂಶದಲ್ಲಿ ಅಲ್ಲಲ್ಲಿ ಹಲವಾರು ಕೋಶಗಳು ಗುಂಪುಗುಂಪಾಗಿ ಇರುತ್ತವೆ. ಇವಕ್ಕೆ ಲೀಡಿಗ್ಗಿನ ಕೋಶಗಳೆಂದು ಹೆಸರು.

ವೀರ್ಯಾಣೋತ್ಪಾದಕ ನಾಳಗಳ ಭಿತ್ತಿ 3-4 ಕೋಶಪದರಗಳಿಂದಾದುದು. ಈ ಎಲ್ಲ ಪದರಗಳ ಗಾತ್ರಕ್ಕೂ ಸಮ ಉದ್ದವಾಗಿರುವ ಕೋಶಗಳು ಅಲ್ಲಲ್ಲಿ ಇದ್ದು ಅವನ್ನು ಆಧರಿಸಿಯೇ ವೀರ್ಯಾಣೋತ್ಪಾದಕ ನಾಳಕೋಶಗಳು ಅಳವಡಿಕೆಗೊಂಡಿವೆ. ಈ ಆಧಾರ ಕೋಶಗಳಿಗೆ ಸರ್ಟೋಲಿ ಕೋಶಗಳೆಂದು ಹೆಸರು. ಸರ್ಟೋಲಿ ಕೋಶದ ಬುಡದ ಹತ್ತಿರ ಇರುವ ವೀರ್ಯಾಣೋತ್ಪಾದಕ ಕೋಶಗಳು ವಿಭಜನೆಗೊಳ್ಳುತ್ತ ಮರಿಕೋಶಗಳು ಒಳಕ್ಕೆ ತಳ್ಳಲ್ಪಡುತ್ತ ಕೊನೆಗೆ ನಾಳಾವಕಾಶದಲ್ಲಿ (ಲೂಮೆನ್) ಬಿಡುಗಡೆ ಆಗುವ ವೇಳೆಗೆ ಅವು ವೀರ್ಯಾಣುಗಳಾಗಿರುತ್ತವೆ. ಈ ವಿಭಜನೆಯ ಹಂತಗಳಲ್ಲಿ ಮನುಷ್ಯ ಸಹಜವಾದ ಕ್ರೋಮೋಸೋಮುಗಳ ಸಂಖ್ಯೆ ಅರ್ಧವಾಗುವುದಲ್ಲದೆ ಎರಡು ಬಗೆಯ ವೀರ್ಯಾಣುಗಳ ಉತ್ಪತ್ತಿಯೂ ಆಗುತ್ತದೆ. ವೀರ್ಯಾಣು ಮಾತೃಕೋಶದಲ್ಲಿ 44 ಆಟೋಜೋಮುಗಳೂ ಘಿ ಮತ್ತು ಙ ಎಂಬ ಎರಡು ಲೈಂಗಿಕ ಕ್ರೋಮೋಸೋಮುಗಳೂ ಸೇರಿ ಒಟ್ಟು 46 ಕ್ರೋಮೋಸೋಮುಗಳಿರುತ್ತವೆ. ವೀರ್ಯಾಣುವಿನಲ್ಲಿ 22 ಆಟೋಸೋಮುಗಳು ಮತ್ತು ಘಿ ಇಲ್ಲವೇ 22+ಙ ಕ್ರೋಮೋಸೋಮ್ ಇರುವಂತೆ ವಿಭಜನೆ ಆಗುತ್ತದೆ. ಉತ್ಪಾದನಾ ಬಾಹುಳ್ಯದ ಒತ್ತಡದಿಂದಾಗಿ ವೀರ್ಯಾಣುಗಳು ಮುಂದೆ ಸಾಗಿ ವೃಷಣ ನಾಳಗಳನ್ನು ತಲುಪುತ್ತವೆ. ಈ ನಾಳದ ಮೊದಲ ಭಾಗಕ್ಕೆ ಎಪಿಡಿಡಿಮಿಸ್ ಎಂದು ಹೆಸರು. ಇದು 4-6 ಮೀಟರುಗಳಷ್ಟು ಉದ್ದವಾಗಿದ್ದು ಗೊಜಿಬಿಜಿಯಾಗಿ ಗಂಟುಕಟ್ಟಿಕೊಂಡಿರುವ ಮತ್ತು ವೃಷಣದ ಮೇಲೆ ಹೇರಿಕೊಂಡಂತಿರುವ ತೆಳುವಾದ ನಾಳ. ಎಪಿಡಿಡಿಮಿಸ್ಸಿನಲ್ಲಿ ವೀರ್ಯಾಣುಗಳು ಶೇಖರವಾಗುತ್ತವೆ. ಸ್ಖಲನ ಕಾಲದ ತನಕ ತಂಗಿರುತ್ತವೆ. ವೀರ್ಯಕೋಶಗಳಲ್ಲಿ ವೀರ್ಯಾಣುಗಳು ಶೇಖರವಾಗುವುದಿಲ್ಲವೆಂಬ ಅಂಶವನ್ನೂ ಅದು ವಿಶಿಷ್ಟ ರಸವನ್ನು ಸ್ರವಿಸುವ ಒಂದು ಗ್ರಂಥಿ ಎಂಬುದನ್ನೂ ಗಮನಿಸಬೇಕು. ವೀರ್ಯಾಣುಗಳು ಕೆಲಕಾಲ ಎಪಿಡಿಡಿಮಿಸ್ಸಿನಲ್ಲಿ ತಂಗದೇ ಇದ್ದರೆ ಅವಕ್ಕೆ ನಿಷೇಚನ ಸಾಮಥ್ರ್ಯ ಇರುವುದಿಲ್ಲವೆಂದು ತಿಳಿದಿದೆ. ಹಾಗೆಯೇ ಅವು ಬಹುಕಾಲ (ಒಂದರಡು ವರ್ಷ) ಶೇಖರಣೆ ಆಗಿದ್ದರೂ ನಿಷೇಚನ ಸಾಮಥ್ರ್ಯ ನಾಶವಾಗಿರುತ್ತದೆ. ವೃಷಣದಲ್ಲಿ ವೀರ್ಯಾಣುಗಳ ಉತ್ಪಾದನೆ ಆಗಲು ಅದರೊಳಗಿನ ಉಷ್ಣತೆ ದೇಹೋಷ್ಣತೆಗಿಂತ ಕಡಿಮೆ ಇರಬೇಕು. ಇದಕ್ಕಾಗಿಯೇ ವೃಷಣಗಳು ದೇಹದ ಒಳಅಂಗಗಳಾಗಿರದೇ ದೇಹದ ಹೊರಗೆ ವೃಷಣಕೋಶಗಳಲ್ಲಿ ಉಪಸ್ಥಿತವಾಗಿರುವುದಾಗಿದೆ. ಅಲ್ಲದೆ, ವೃಷಣ ಕೋಶದ ಒಳಗೆ ಉಷ್ಣತೆ ಯಾವಾಗಲೂ ಕಡಿಮೆ ಇರುವಂತೆ ಏರ್ಪಾಡಿದೆ. ಉಷ್ಣತೆ ಹೆಚ್ಚಾಗಿದ್ದು ವೀರ್ಯಾಣೋತ್ಪಾದನೆಗೆ ಅಡ್ಡಿ ಆಗಬಹುದಾದ ಸಂದರ್ಭಗಳಲ್ಲಿ ವೃಷಣ ಕೋಶ ಸಡಿಲವಾಗಿ ಇಳಿಬಿದ್ದು ಉಷ್ಣವನ್ನು ಕಳೆದುಕೊಳ್ಳುತ್ತದೆ. ವೃಷಣಕೋಶ ಭೀತಿಯಲ್ಲಿ ಅಡಗಿರುವ ಸ್ನಾಯು ವ್ಯಾಕೋಚಿಸುವುದರಿಂದ ಇದು ಸಾಧ್ಯವಾಗುತ್ತದೆ. ಈ ವ್ಯಾಕೋಚನೆ ನಿರಿಚ್ಛಾಕ್ರಿಯೆ. ಭ್ರೂಣಾವಸ್ಥೆಯಲ್ಲಿ ವೃಷಣಗಳು ಉದರದ ಒಳಗೆ ಇದ್ದು ಜನನಕಾಲದಲ್ಲಿ ತೊಡೆ ಸಂಧಿಯಲ್ಲಿಯ ಇಂಗ್ವೈನಲ್ ಮಾರ್ಗವಾಗಿ ಇಳಿದು ವೃಷಣ ಕೋಶವನ್ನು ತಲುಪುತ್ತವೆ. ಇಲ್ಲವೇ ಹುಟ್ಟಿದ ಮೇಲೆ ಶೀಘ್ರವಾಗಿಯೇ ಇಳಿದು ಬಂದು ಹೊರಅಂಗಗಳಾಗಿ ಉಪಸ್ಥಿತವಾಗುತ್ತವೆ. ಕಾರಣಾಂತರಗಳಿಂದ ಹಾಗಾಗದೆ ವೃಷಣಗಳು ಉದರದ ಒಳಗೆ ಇದ್ದು ಬಿಟ್ಟರೆ ಅಂಥ ವ್ಯಕ್ತಿಯಲ್ಲಿ ವೀರ್ಯಾಣುಗಳ ಉತ್ಪಾದನೆ ಆಗುವುದಿಲ್ಲ. ಹಾರ್ಮೋನ್ ಚಿಕಿತ್ಸೆ ಮತ್ತು ಶಸ್ತ್ರಕ್ರಿಯೆ ಇವುಗಳಿಂದ ವೃಷಣಗಳನ್ನು ವೃಷಣಕೋಶದಲ್ಲಿ ನೆಲೆಸುವಂತೆ ಮಾಡಬಹುದು. ಆಗ ಅವುಗಳಲ್ಲಿ ವೀರ್ಯಾಣೋತ್ಪಾದನೆ ಸಾಧ್ಯವಾಗಬಹುದು.

ಸಾಮಾನ್ಯವಾಗಿ ಲೈಂಗಿಕ ಕಾರಣಗಳಿಂದ ಪುರುಷರಲ್ಲಿ ಶಿಶ್ನ ಉದ್ರೇಕಗೊಂಡು ನಿಮಿರಿ ಗಡುಸಾಗುತ್ತದೆ ಮತ್ತು ಸಂಭೋಗಾನುಕೂಲತೆ ಪಡೆಯುತ್ತದೆ. ಉದ್ರೇಕ ಮುಂದುವರಿದು ವೀರ್ಯಸ್ಖಲನ ಆಗಬಹುದು. ಕಾರಣಾಂತರಗಳಿಂದ ಶಿಶ್ನ ನಿಮಿರಲು ಸಾಧ್ಯವಾಗದಿದ್ದರೆ ಸಂಭೋಗವೂ ಸಾಧ್ಯವಿಲ್ಲ. ಸ್ಖಲನವೂ ಆಗುವುದಿಲ್ಲ. ವೀರ್ಯಸ್ಖಲನ ಕಾಲದಲ್ಲಿ ವೀರ್ಯಕೋಶರಸವೂ ಶುಕ್ಲಗ್ರಂಥಿ ರಸವೂ ಸ್ರವಿಸಲ್ಪಟ್ಟು ಸ್ಖಲನನಾಳ ಮೂತ್ರನಾಳಗಳ ಮೂಲಕ ಮುಂದುವರಿಯುತ್ತಿರುವ ವೀರ್ಯಾಣುಗಳೊಡನೆ ಕೂಡಿ ವೀರ್ಯ (ಸಿಮೆನ್) ಎನಿಸಿಕೊಂಡು ನಿಮಿರಿದ ಶಿಶ್ನದ ದ್ವಾರದ ಮೂಲಕ ಚಿಮ್ಮಿ ಹೊರಬರುತ್ತದೆ.

ವೀರ್ಯ ಬೆಳ್ಳಗೆ ಗಟ್ಟಿಯಾದ ಗಂಜಿಯಂತಿರುವ ದ್ರವ. ಸ್ಖಲನವಾದಾಗ 3-4 ಮಿಲಿಲೀಟರುಗಳಷ್ಟು ವೀರ್ಯ ಹೊರಬರುವುದುಂಟು. ಪ್ರತಿ ಮಿಲಿಲೀಟರ್ ವೀರ್ಯದಲ್ಲಿ ಕೋಟ್ಯಂತರ ವೀರ್ಯಾಣುಗಳು ಇದ್ದರೂ ವೀರ್ಯದ ಘನ ಗಾತ್ರಕ್ಕೆ (ವಾಲ್ಯೂಮ್) ಪ್ರಧಾನವಾಗಿ ಶುಕ್ಲಗ್ರಂಥಿಯ ಮತ್ತು ವೀರ್ಯಕೋಶಗಳ ಸ್ರಾವಗಳೇ ಕಾರಣ. ಇವು ಪ್ರತ್ಯಾಮ್ಲೀಯ ಗುಣ ಉಳ್ಳವು. ಇವುಗಳಲ್ಲಿ ಫ್ರಕ್ಟೋಸ್ ಎಂಬ ಸಕ್ಕರೆ ಉಂಟು. ವೀರ್ಯದಲ್ಲಿ ವೀರ್ಯಾಣುಗಳು ಸಾಮಥ್ರ್ಯ ಸಹಿತವಾಗಿ ಬದುಕಿ ಉಳಿದಿರುವುದಕ್ಕೆ ಈ ಎರಡು ಅಂಶಗಳೂ ಅಗತ್ಯ. ಆದರೂ ವೀರ್ಯಾಣುಗಳು ದೇಹದ ಹೊರಗೆ ಹೆಚ್ಚು ಕಾಲ ಬದುಕಿರಲಾರವು. ಕೇವಲ ಕೆಲವೇ ಗಂಟೆಗಳ ಕಾಲದಲ್ಲಿ ಸತ್ತು ಹೋಗುತ್ತವೆ. ನೈಸರ್ಗಿಕ ಸಂಭೋಗ ಅಥವಾ ಕೃತಕ ನಿಷೇಚನ ಕ್ರಿಯೆಯಿಂದ ಇಲ್ಲವೇ ಪ್ರಾಯೋಗಿಕ ಕಾರಣಗಳಿಗಾಗಿ ಪಿಚಕಾರಿಯಿಂದ ವೀರ್ಯವನ್ನು ಸಂತಾನೋತ್ಪಾದನಾವಧಿಯಲ್ಲಿರುವ ಸ್ತ್ರೀಯ ಪ್ರಜನನ ಮಾರ್ಗದಲ್ಲಿ ಇಟ್ಟುದಾದರೆ ಅದರಲ್ಲಿಯ ವೀರ್ಯಾಣುಗಳು ಒಂದೆರಡು ದಿವಸಗಳಷ್ಟು ಕಾಲ (ಬಹುಶಃ ಇನ್ನೂ ಸ್ವಲ್ಪ ಹೆಚ್ಚು ಕಾಲ) ಬದುಕಿರಬಲ್ಲವು. ಆದರೆ ಅವುಗಳ ನಿಷೇಚನ ಸಾಮಥ್ರ್ಯ, ಇಂಥ ಅನುಕೂಲ ಸಂದರ್ಭಗಳಲ್ಲಿಯೂ 12-24 ಗಂಟೆಗಳಿಗಿಂತ ಹೆಚ್ಚು ಇರಲಾರದು. ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಪ್ರತಿ ಮಿಲ್‍ನಲ್ಲೂ ಅನೇಕ ಕೋಟಿಗಳಿರುವ ಬದಲು ಸುಮಾರು ಅರ್ಧ ಕೋಟಿಯಷ್ಟು ಇದ್ದರೂ ಅಂಥ ವೀರ್ಯದಿಂದ ನಿಷೇಚನ ಸಾಧ್ಯವಿಲ್ಲ. ಅಲ್ಪ ವೀರ್ಯಾಣುಗಳಿರುವ ಇಂಥ ವೀರ್ಯವನ್ನು ಉತ್ಪಾದಿಸುವವರು ಬರಡಾಗಿರುತ್ತಾರೆ.

ದೇಹದ ಅತಿ ಸಣ್ಣ ಕೋಶಗಳ ಪೈಕಿ ವೀರ್ಯಾಣು ಒಂದು. ಸಾಮಾನ್ಯವಾಗಿ ಇತರ ಪ್ರಾಣಿಗಳ ವೀರ್ಯಾಣುಗಳಂತೆಯೇ ಮನುಷ್ಯನದೂ ಗೊದಮೊಟ್ಟೆ (ಟ್ಯಾಡ್‍ಪೋಲ್) ಆಕಾರದಲ್ಲಿಯೇ ಇದೆ. ಇದಕ್ಕೆ ತಲೆ (ಸುಮಾರು 4 ಮೈಕ್ರಾನ್) ಅಂದರೆ 0.004 ಮಿ.ಮೀ. ವ್ಯಾಸದ್ದು, ತಲೆಯ ನಾಲ್ಕರಷ್ಟು ಉದ್ದದ ಬಾಲ, ಇವೆರಡನ್ನೂ ಕೂಡಿಸುವ ಕಂಠ ಉಂಟು. ಸ್ಖಲನವಾದ ತರುಣದಲ್ಲಿ ವೀರ್ಯಾಣುಗಳು ವೀರ್ಯದಲ್ಲಿ ತಮ್ಮ ಬಾಲವನ್ನು ಅತಿ ಚಟುವಟಿಕೆಯಿಂದ ಬಡಿಯುತ್ತ ಚಲಿಸುತ್ತವೆ. ತಲೆಯಲ್ಲಿ ವೀರ್ಯಾಣುವಿನ ಅಣು ಕೆಂದ್ರ (ನ್ಯೂಕ್ಲಿಯಸ್) ಇದೆ. ಸಾಮಾನ್ಯವಾಗಿ ಕೆಲವು ಅಸಹಜ ವೀರ್ಯಾಣುಗಳು ವೀರ್ಯದಲ್ಲಿ ಇರಬಹುದು. ದೈತ್ಯಾಕಾರ, ಕುಬ್ಜಾಕಾರ, ಎರಡು ಬಾಲ ಇತ್ಯಾದಿ ಅಸಹಜತೆಗಳಿಂದ ಕೂಡಿರುವ ವೀರ್ಯಾಣುಗಳಿಗೆ ನಿಷೇಚನ ಸಾಮಥ್ರ್ಯ ಇರುವುದಿಲ್ಲ. ಮಂದ ಚಟುವಟಿಕೆಯ ವೀರ್ಯಾಣುಗಳೂ ಅಷ್ಟೆ. ಅಂಥ ಅಸಹಜ ವೀರ್ಯಾಣುಗಳು ಗಣನೀಯ ಪ್ರಮಾಣದಲ್ಲಿದ್ದರೆ (20% ಮೀರಿ) ಆ ವೀರ್ಯವನ್ನು ಉತ್ಪತ್ತಿ ಮಾಡುವ ಪುರುಷ ಬರಡು.

ಸ್ತ್ರೀಯ ಪ್ರಜನಾಂಗಗಳ ವಿನ್ಯಾಸ ಮತ್ತು ಕ್ರಿಯಾ ವಿಧಾನ : ಸ್ತ್ರೀಯಲ್ಲಿ ಪ್ರಜನನಾಂಗಗಳು ಉದರದ ಒಳಗೂ ಹೊರಗೂ ಇವೆ. ಪ್ರಧಾನ ಅಂಗಗಳಲ್ಲದೆ ಆನುಷಂಗಿಕ ಅಂಗಗಳೂ ಉಂಟು. ಅಂಡಾಶಯಗಳು (ಓವರಿ) ಪ್ರಧಾನವಾಗಿದ್ದು ಆಂತರಿಕ ಅಂಗಗಳಾಗಿವೆ. ಇವು ಕಿಬ್ಬೊಟ್ಟೆಯಿಂದ ಮೇಲೆ ಎಡ ಬಲ ಭಾಗಗಳಲ್ಲಿ ಇರುತ್ತವೆ. ಇವುಗಳ ಸನಿಹದಲ್ಲಿ ಟೋಪಿಯಂತೆ ಇವನ್ನು ಭಾಗಶಃ ಸುತ್ತುವರಿದ ಲಾಳಿಕೆ ಅಥವಾ ಬುದ್ಧಿವಂತದಂತಿರುವ ಅಂಡನಾಳಗಳು (ಓವಿಡಕ್ಟ್, ಫ್ಯಾಲ್ಲೊಪಿಯನ್ ಟ್ಯೂಬ್) ಇವೆ. ಎರಡು ಅಂಡನಾಳಗಳೂ ಕಿಬ್ಬೊಟ್ಟೆಯಲ್ಲಿ ಮೂತ್ರಾಶಯದ ಹಿಂದುಗಡೆ ಇರುವ ಇನ್ನೊಂದು ಪ್ರಧಾನ ಆಂತರಿಕ ಪ್ರಜನನಾಂಗವಾದ ಗರ್ಭಾಶಯ ಅಥವಾ ಗರ್ಭಕೋಶಕ್ಕೆ (ಯೂಟೆರಸ್) ಬಂದು ಸೇರುತ್ತವೆ. ಗರ್ಭಾಶಯ ಯೋನಿಯೊಳಕ್ಕೆ ತೆರೆದುಕೊಳ್ಳುತ್ತದೆ. ಯೋನಿ (ವಜೈನ) ಕೆಳಮುಖವಾಗಿ ಮತ್ತು ಮುಮ್ಮುಖವಾಗಿ ಮುಂದುವರಿದು ಭಗದ ಸೀಳಿನಲ್ಲಿ (ಪ್ಯೂಡೆಂಡಲ್ ಕ್ಲೆಫ್ಟ್) ತೆರೆದುಕೊಳ್ಳುತ್ತದೆ. ಯೋನಿಯೊಳಕ್ಕೆ ಬಾರ್ಥೊಲಿನ್ ಗ್ರಂಥಿಗಳ ನಾಳಗಳು ತೆರೆದುಕೊಳ್ಳುವುದರಿಂದ ಸಂಭೋಗ ಕಾಲದಲ್ಲಿ ಅ ಗ್ರಂಥಿಗಳ ಸ್ರಾವ ಯೋನಿಯೊಳಕ್ಕೆ ಸುರಿಯುವಂತಿದೆ. ಕನ್ಯಾವಸ್ಥೆಯಲ್ಲಿ ಯೋನಿದ್ವಾರ ಒಂದು ರಂಧ್ರಯುಕ್ತ ತೆಳುಪೊರೆಯಿಂದ ಮುಚ್ಚಲ್ಪಟ್ಟಿರುತ್ತದೆ. ಇದಕ್ಕೆ ಕನ್ಯಾಪೊರೆ (ಹೈಮೆನ್) ಎಂದು ಹೆಸರು. ಪ್ರಥಮ ಸಂಭೋಗದಲ್ಲಿ ಇದು ಹರಿದು ಹೋಗುವುದು ಸಾಮಾನ್ಯ ಪರಿಸ್ಥಿತಿ. ಯೋನಿದ್ವಾರಕ್ಕೆ ಸ್ವಲ್ಪ ಮೇಲೆ ಮೂತ್ರ ದ್ವಾರ ಬೇರೆಯಾಗಿಯೇ ಇದೆ. ಇದಕ್ಕೂ ಸ್ವಲ್ಪ ಮೇಲೆ ಭಗದ ಸೀಳಿನಲ್ಲಿ ಹುದುಗಿದಂತೆ ಭಗಾಂಕುರ (ಕ್ಲೆಟೊರಿಸ್) ಇದೆ. ಇದು ಸ್ತ್ರೀಯಲ್ಲಿ ಪುರುಷಶಿಶ್ನಕ್ಕೆ ಸದೃಶವಾದ ಅಂಗ. ಸುಮಾರು 3 ಮಿ.ಮೀ.ನಷ್ಟು ಸಣ್ಣದಾಗಿರುವ ಭಗಾಂಕುರ ಸಂಭೋಗಸಂಬಂಧವಾದ ಭಾವನೆ, ಘರ್ಷಣೆಗಳಿಂದ ನಿಮಿರಿ ಸುಮಾರು 6 ಮಿ.ಮೀ.ನಷ್ಟು ಉದ್ದ ಕೂಡ ಆಗಬಹುದು. ಭಗಾಂಕುರದ ಮೇಲೆ ಕಮಾನಿನಂತಿರುವ ಮಡಿಕೆ ಮೂತ್ರ ದ್ವಾರ ಯೋನಿದ್ವಾರಗಳ ಇಕ್ಕೆಲಗಳಲ್ಲಿಯೂ ಪಸರಿಸಿ ಇನ್ನೂ ಕೆಳಗೆ ನೆರೆಪ್ರಾಂತ್ಯದಲ್ಲಿ ಬೆರೆತುಹೋಗುತ್ತದೆ. ಇಕ್ಕೆಲದಲ್ಲೂ ಇರುವ ಈ ಮಡಿಕೆಗಳಿಗೆ ಕಿರಿಭ ಗೋಷ್ಠಗಳು (ಲೇಬಿಯ ಮೈನೋರ) ಎಂದೂ ಭಗದ ಸೀಳಿನ ಎರಡು ತುಟಿಗಳಿಗೆ ಹಿರಿಭಗೋಷ್ಠಗಳು (ಲೇಬಿಯ ಮೇಜೋರ) ಎಂದೂ ಹೆಸರು. ಭಗ (ಮಾನ್ಸ್ ವೆನೆರಿಸ್) ಕಿಬ್ಬೊಟ್ಟೆಯಿಂದ ಕೆಳಗೆ ಮೆತ್ತಗಿರುವ ಉಬ್ಬಿದ ಭಾಗ ಪ್ರಬುದ್ಧತೆಯ ಸಮಯದಲ್ಲಿ ಭಗದ ಮೇಲೆ ಕೂದಲು ಬೆಳೆಯುತ್ತದೆ. ಕೂದಲಿರುವ ಪ್ರದೇಶದ ಮೇಲೆ ಅಂಚು ಗೆರೆ ಹಾಕಿದಂತೆ ನೇರವಾಗಿರುವುದು ಸ್ತ್ರೀಯ ವೈಶಿಷ್ಟ.

ಚಿತ್ರ-9

ಅಂಡಾಶಯ ಬಾದಾಮಿ ಗಾತ್ರದ ಅಂಗ. ಇದರ ತಿರುಳಿನ ಹೊರಗೆ ಇರುವ ವಲಯದಲ್ಲಿ (ಕಾರ್ಟೆಕ್ಸ್) ಸಹಸ್ರಾರು ಕೋಶಗಳೂ ಸಾಸಿವೆ ಕಾಳು ಜೋಳದ ಕಾಳು ಗಾತ್ರದ ಕೋಶ ಸಮೂಹಗಳು (ಪ್ರೈಮರಿ ಫಾಲಿಕಲ್ಸ್) ಉಂಟು. ಕೋಶ ಸಮೂಹದ ನಡು ಮಧ್ಯದಲ್ಲಿ ಇರುವ ದೊಡ್ಡ ಕೋಶವೇ ಮುಂದೆ ಅಂಡಾಣುವಾಗಿ (ಓವಮ್) ಮಾರ್ಪಾಡಾಗುವ ಮಾತೃಕೋಶ. ಪ್ರಬುದ್ಧತೆಯ ಕಾಲದಿಂದ ಮುಂದಕ್ಕೆ ಪ್ರತಿ ನಾಲ್ಕು ವಾರಗಳೂ ಒಂದು ಕೋಶ ಸಮೂಹ ವೃದ್ಧಿಗೊಂಡು ಗೋಲಿ ಗಾತ್ರವಾಗಿ ಹೊರಕ್ಕೆ ಉಬ್ಬಿಕೊಳ್ಳುತ್ತದೆ. ಇದು ಪಕ್ವ ಕೋಶ ಸಮೂಹ (ಮೆಚ್ಯೂರ್ ಫಾಲಿಕಲ್). ಅಂಡಾಣು ಮಾತೃಕೋಶವನ್ನು ಸುತ್ತುವರಿದಿರುವ ಕೋಶಗಳ ಸಂಖ್ಯಾಭಿವೃದ್ಧಿ ಆಗುವುದೂ ಈ ಕೋಶಗಳ ನಡುವೆ ಒಂದು ಅವಕಾಶ ಕಂಡುಬಂದು ಅದು ದ್ರವದಿಂದ ತುಂಬಿಕೊಂಡು ಹಿಗ್ಗುತ್ತ ಹೋಗುವುದು ಪ್ರಾಥಮಿಕ ಕೋಶ ಸಮೂಹದ ಗಾತ್ರ ವೃದ್ಧಿಗೆ ಕಾರಣ. ಇದೇ ಕಾಲದಲ್ಲಿ ಮಾತೃಕೋಶವು ಪಕ್ವವಾಗಿ ಅಂಡಾಣುವಾಗಿ ಮಾರ್ಪಡುತ್ತದೆ. ಹೀಗಾಗುವಾಗ ವಾಸ್ತವವಾಗಿ ಮಾತೃಕೋಶ ಎರಡು ವಿಭಜನೆಗಳನ್ನು ತೋರಿದರೂ ಒಂದು ಕೋಶ ಮಾತ್ರ ಉಳಿದುಕೊಂಡು ಮಿಕ್ಕವು ನಾಶವಾಗುತ್ತವೆ. ಅಲ್ಲದೆ ಕ್ರೋಮೋಸೋಮುಗಳ ಸಂಖ್ಯೆಯೂ ಅರ್ಧವಾಗುತ್ತದೆ. ಮಾತೃಕೋಶದಲ್ಲಿ 46 ಕ್ರೋಮೋಸೋಮುಗಳಿವೆ : 22 ಜೊತೆ ಆಟೋಸೋಮುಗಳು ಮತ್ತು ಒಂದು ಜೊತೆ ಘಿ ಕ್ರೋಮೋಸೋಮುಗಳು. ವಿಭಜನೆ ಆದಾಗ ಕೋಶದಲ್ಲಿ ಕ್ರೋಮೋಸೋಮಿನ ಸಂಖ್ಯೆ 22+ಘಿ. ಅಂದರೆ ಒಟ್ಟು 23 ಕ್ರೋಮೋಸೋಮುಗಳು. ವಿಭಜನೆಯ ಪರಿಣಾಮ ಸಾಮಾನ್ಯವಾಗಿ ಯಾವಾಗಲೂ ಹೀಗೆಯೇ ಇರುವುದರಿಂದ ಅಂಡಾಣುಗಳೆಲ್ಲವೂ ಒಂದೇ ಬಗೆಯವಾಗಿದ್ದು ಎಲ್ಲವಲ್ಲೂ 22+ಘಿ ಕ್ರೋಮೋಸೋಮುಗಳಿರುತ್ತವೆ. ಅಂಡಾಶಯದಲ್ಲಿ ಪ್ರಾಥಮಿಕ ಕೋಶ ಸಮೂಹವಾಗಲು ಎರಡು ವಾರಗಳು ಬೇಕು. ಅಂತ್ಯದಲ್ಲಿ ಕೋಶಸಮೂಹದ ದ್ರವದ ಒತ್ತಡ ಮಿತಿಮೀರಿ ಕೋಶಸಮೂಹ ಛಿದ್ರವಾಗುತ್ತದೆ. ಅಂಡಾಣುವೂ ಅದನ್ನು ಸುತ್ತವರಿದ ಕೆಲವು ಕೋಶಗಳೂ ಉದರದಲ್ಲಿ ಬಿಡುಗಡೆ ಆಗುತ್ತವೆ. ಇದಕ್ಕೆ ಅಂಡಾಣು ಬಿಡುಗಡೆ (ಓವ್ಯೂಲೇಷನ್) ಎಂದು ಹೆಸರು. ನೆರೆಯಲ್ಲೇ ಇರುವ ಅಂಡಾಣು ಅಂಡನಾಳದೊಳಕ್ಕೆ ಹೀರಲ್ಪಟ್ಟಂತಾಗಿ ಅದನ್ನು ಪ್ರವೇಶಿಸುತ್ತದೆ. ಅಂಡನಾಳದ ಒಳಪದರದ ಕೋಶಗಳೂ ಅತಿ ಸೂಕ್ಷ್ಮವಾದ ರೋಮಗಳನ್ನು (ಸಿಲಿಯ) ಪಡೆದಿರುತ್ತದೆ. ಅವುಗಳ ತ್ವರಿತ ಚಲನೆಯಿಂದಲೇ ಸನಿಹದಲ್ಲಿದ್ದ ಅಂಡಾಣು ಹೀರಲ್ಪಟ್ಟು ನಾಳಪ್ರವೇಶ ಮಾಡುವುದು. ಅದೇ ಚಲನೆ ಅಂಡಾಣುವನ್ನು ನಿಧಾನವಾಗಿ ಮುಂದಕ್ಕೆ ತಳ್ಳುತ್ತ ಗರ್ಭಕೋಶದ ಎಡೆಗೆ ಒಯ್ಯುತ್ತದೆ. ದೇಹದ ಅತ್ಯಂತ ತೋರಕೋಶಗಳ ಪೈಕಿ ಅಂಡಾಣು ಒಂದು. ಇದರ ವ್ಯಾಸ 0.1 ಮಿಮೀನಷ್ಟಿದ್ದು ಇದು ಬರೀ ಕಣ್ಣಿಗೆ ಕಂಡೂ ಕಾಣಿಸದಷ್ಟು ಸೂಕ್ಷ್ಮವಾಗಿರುತ್ತದೆ. ಅಂಡಾಣುವಿಗೆ ಸ್ವತಃ ಚಲನಸಾಮಥ್ರ್ಯವಿಲ್ಲ. ಇದರ ಜೀವದ್ರವದಲ್ಲಿ (ಸೈಟೊಪ್ಲಾಸ್ಮ) ಪೋಷಕಗಳು ಅತಿ ಸಮೃದ್ಧವಾಗಿವೆ. ಬಿಡುಗಡೆ ಆದ ಮೇಲೆ ಅಂಡಾಣು 2-3 ದಿವಸ ಮಾತ್ರ ಬದುಕಿದ್ದು ಮುಂದೆ ನಶಿಸಿ ಹೋಗುತ್ತದೆ. ಬಿಡುಗಡೆ ಆಗುವ ವೇಳೆಗೆ ಹಲವಾರು ಗಂಟೆಗಳ ಹಿಂಚುಮುಂಚಿನಲ್ಲಿ ಸಂಭೋಗ ಕ್ರಿಯೆ ಜರುಗಿದರೆ ವೀರ್ಯ ಸ್ತ್ರೀಯ ಪ್ರಜನನ ಮಾರ್ಗದಲ್ಲಿ ಇರುವ ಸಂಭವವುಂಟು. ವೀರ್ಯಾಣುಗಳು ತಮ್ಮ ಚಲನದಿಂದ ಗರ್ಭಾಶಯ ಅಂಡನಾಳಗಳನ್ನು ಪ್ರವೇಶಿಸಿರುತ್ತವೆ. ಆದ್ದರಿಂದ ಈ ಸಂದರ್ಭದಲ್ಲಿ ಅಂಡಾಣು ವೀರ್ಯಾಣುಗಳು ಸಂಧಿಸುವುದಕ್ಕೆ ಅವಕಾಶವಿದೆ. ಆಗ ಸಾವಿರಾರು ವೀರ್ಯಾಣುಗಳು ಅಂಡಾಣುವನ್ನು ಸುತ್ತುವರಿಯುತ್ತವೆ. ಯಾವುದೇ ಒಂದು ವೀರ್ಯಾಣು ಅಂಡಾಣುವನ್ನು ಹೊಕ್ಕು ಮಿಲನವಾಗಿ ನಿಷೇಚನ ಕ್ರಿಯೆ ಜರುಗುತ್ತದೆ. ಮಿಕ್ಕ ವೀರ್ಯಾಣುಗಳು ಈ ಪ್ರಯತ್ನದಲ್ಲಿ ನಾಶವಾಗಿ ಹೋಗುತ್ತವೆ. ಹೀಗೆ ಸಾವಿರಾರು ವೀರ್ಯಾಣುಗಳು ನಾಶವಾಗುವುದು ವಾಸ್ತವವಾಗಿ ನಿಷೇಚನ ಕ್ರಿಯೆಗೆ ಅಗತ್ಯ. ಅಂಡಾಣುವನ್ನು ಸುತ್ತುವರೆದ ವೀರ್ಯಾಣುಗಳು ಅಲ್ಪಸಂಖ್ಯೆಯಲ್ಲಿದ್ದರೆ (ವಾಸ್ತವವಾಗಿ ನಿಷೇಚನೆಗೆ ಒಂದೇ ಒಂದು ವೀರ್ಯಾಣು ಸಾಕು) ನಿಷೇಚನ ಕ್ರಿಯೆ ಜರುಗುವುದಿಲ್ಲವೆಂದು ತಿಳಿದಿದೆ. ಸ್ಖಲನವಾದ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಕೋಟಿಗಟ್ಟಲೆ ಇರದೆ ಲಕ್ಷಗಟ್ಟಲೆ ಇದ್ದರೆ ನಿಷೇಚನ ಆಗುವ ಸಂಭಾವ್ಯತೆ ತೀರಾ ಕಡಿಮೆ ಆಗಿರುವುದಕ್ಕೆ ಇದೇ ಕಾರಣ. ಯೋನಿಯೊಳಗೆ ಚೆಲ್ಲಲ್ಪಟ್ಟು ವೀರ್ಯದಿಂದ ಹೊರಕ್ಕೆ ಬಂದುಬಿಡುವವು ಎಷ್ಟೋ. ಒಳಗೆ ಉಳಿಯುವ ವೀರ್ಯಾಣುಗಳಲ್ಲಿ ಗರ್ಭಕೋಶವನ್ನು ಪ್ರವೇಶಿಸುವವು ಎಷ್ಟೋ. ಕೊನೆಗೆ ಅಂಡಾಣು ಸಾಗುತ್ತಿರುವ ಅಂಡನಾಳವನ್ನು ಅರಸಿ ಅದನ್ನು ಪ್ರವೇಶಿಸುವವು ಎಷ್ಟೋ. ಇಂಥ ಅನಿಶ್ಚಿತ ಪ್ರಸಂಗಗಳಲ್ಲಿ ವೀರ್ಯಾಣುಗಳ ಸಂಖ್ಯೆವೀರ್ಯದಲ್ಲಿ ಮೊದಲೇ ಕಡಿಮೆ ಇದ್ದರೆ ಕೊನೆಗೆ ಅಂಡಾಣುವನ್ನು ಸಂಧಿಸುವುವು. ಅಲ್ಪಸಂಖ್ಯೆಯ ವೀರ್ಯಾಣುಗಳೇ ಎನ್ನುವುದೂ ಆದ್ದರಿಂದಲೇ ಆ ಸಂದರ್ಭದಲ್ಲಿ ನಿಷೇಚನೆ ಆಗದು ಎನ್ನುವುದೂ ವ್ಯಕ್ತ. ನಿಷೇಚನೆ ಆಗಿದಿದ್ದರೆ ಅಂಡಾಣು ಗರ್ಭನಾಳದಲ್ಲೋ ಗರ್ಭಕೋಶದಲ್ಲೋ ನಾಶವಾಗಿ ಹೋಗುತ್ತದೆ.

ಅಂಡಾಣು ಬಿಡುಗಡೆ ಆದ ಮೇಲೆ ಛಿದ್ರವಾಗಿದ್ದ ಪಕ್ವ ಕೋಶ ಸಮೂಹ ಪುನಃ ಒಗ್ಗೂಡಿ ಇಡಿ ಆಗುತ್ತದೆ. ಅಲ್ಲದೇ ಕೆಲವು ಮಾರ್ಪಾಡುಗಳನ್ನು ಒಂದೆರಡು ದಿವಸಗಳಲ್ಲಿ ತೋರಿ ಪೀತಕೋಶಸಮೂಹ (ಕಾರ್ಪಸ್ ಲೂಟಿಯಮ್) ಆಗುತ್ತದೆ. ಪೀತಕೋಶಸಮೂಹದ ಜೀವಾವಧಿ ಈ ಮುಂಚೆ ತಾನೇ ಬಿಡುಗಡೆ ಆಗಿದ್ದ ಅಂಡಾಣುವಿನ ವಿಷೇಚನ ಆಗಿದೆಯೋ ಇಲ್ಲವೋ ಎನ್ನುವುದನ್ನು ಅವಲಂಬಿಸಿದೆ. ಆಗಿರದಿದ್ದರೆ (ಇದೇ ಹೆಚ್ಚು ಸಾಮಾನ್ಯವಾಗಿರುವ ಸಂದರ್ಭ) ಪೀತಕೋಶ ಸಮೂಹ ಸುಮಾರು ಎರಡು ವಾರಗಳು ಮಾತ್ರ ಕಾರ್ಯೋನ್ಮುಖವಾಗಿದ್ದು ಅನಂತರ ನಾರು ಗಟ್ಟಿಗೊಂಡು ನಶಿಸಿಹೋಗುತ್ತದೆ. ನಿಷೇಚನೆ ಆದರೆ ಅದು ಇನ್ನೂ ಸುಮಾರು ಹತ್ತು ವಾರಗಳ ಕಾಲ ಕಾರ್ಯೋನ್ಮುಖವಾಗಿ ಮುಂದುವರಿದು ಅನಂತರ ನಶಿಸಿಹೋಗುತ್ತದೆ. ನಿಷೇಚನೆ ಆದ ಬಳಿಕ ಗರ್ಭಾಂಕುರಾರ್ಪಣ (ಕನ್ಸೆಪ್ಯನ್) ಆಗುತ್ತದೆ. ನಿಷೇಚನೆ ಆಗದೆ ಪೀತಕೋಶಸಮೂಹ ಎರಡು ವಾರಾ ನಂತರ ಅವನತಿ ಹೊಂದಿದ್ದರೆ ಅಂಡಾಶಯದಲ್ಲಿ ಇನ್ನೊಂದು ಪ್ರಾಥಮಿಕ ಕೋಶ ವೃದ್ಧಿ ಆಗತೊಡಗುತ್ತದೆ. ಇದು ಹಿಂದಿನ ಅಂಡಾಶಯದಲ್ಲಿ ಆಗಬಹುದು. ಇಲ್ಲೊ ಅಲ್ಲೊ ಎಂಬುದು ಅನಿಶ್ಚಯ. ಪ್ರಾರಂಭವಾದ ಪ್ರಾಥಮಿಕ ಕೋಶ ಸಮೂಹ ವೃದ್ಧಿ ಪುನಃ ಎರಡು ವಾರಗಳು ಮುಂದುವರಿದು ಅಂತ್ಯದಲ್ಲಿ ಅದರಲ್ಲಿಯ ಅಂಡಾಣು ಬಿಡುಗಡೆ ಆಗುತ್ತದೆ. ಪುನಃ ಛಿದ್ರಿತ ಕೋಶ ಸಮೂಹ ಪೀತಕೋಶ ಸಮೂಹವಾಗಿ ರೂಪುಗೊಳ್ಳುತ್ತದೆ, ಇತ್ಯಾದಿ. ಹೀಗೆ ಅಂಡಾಶಯದಲ್ಲಿ ನಾಲ್ಕು ವಾರಗಳಿಗೆ ಒಮ್ಮೆ ಕ್ಲುಪ್ತವಾದ ಕಾರ್ಯಕ್ರಮ ಚಕ್ರಾಕಾರವಾಗಿ ಮುಂದುವರಿಯುತ್ತಲೇ ಇರುತ್ತದೆ.

ಬಾಲಿಕೆ ಪ್ರಬುದ್ಧಳಾಗುವ ವೇಳೆ ಮೊತ್ತಮೊದಲಾಗಿ ಅಂಡಾಶಯದಲ್ಲಿ ಅಂಡಾಣು ಬಿಡುಗಡೆ ಆದಾಗ ಅದರ ನಿಷೇಚನೆಯಾಗುವ ಸಂಭವ ಹೆಚ್ಚು ಕಡಿಮೆ ಇಲ್ಲವೇ ಇಲ್ಲ ಎನ್ನುವುದು ವ್ಯಕ್ತ. ಏಕೆಂದರೆ ಅದೇ ವೇಳೆ ಅದರಲ್ಲೂ ಬಾಲಿಕೆ ಸಂಭೋಗಕ್ಕೆ ಒಳಪಟ್ಟಿರುವುದೂ ಅವಳ ಪ್ರಜನನ ಮಾರ್ಗದಲ್ಲಿ ವೀರ್ಯವಿರುವುದೂ ನಿರೀಕ್ಷೆಗೆ ಮೀರಿದ ಸಂದರ್ಭ. ಆದ್ದರಿಂದ ಮೊತ್ತಮೊದಲ ಅಂಡಾಣುವಿನ ನಿಷೇಚನೆ ಆಗದೇ ಅದು ನಶಿಸುವುದೂ ಮೊತ್ತಮೊದಲ ಪೀತಕೋಶ ಸಮೂಹ ಎರಡು ವಾರಗಳ ಕಾಲ ಮಾತ್ರ ಕಾರ್ಯೋನ್ಮುಖವಾಗಿದ್ದು ಕೊನೆಗೆ ಅವನತಿ ಹೊಂದುವುದೂ ನಿಶ್ಚಯವೆಂಬುವುದು ಮೇಲಿನ ವಿವರಣೆಯಿಂದ ವ್ಯಕ್ತವಾಗುತ್ತದೆ. ಮೊತ್ತ ಮೊದಲ ಪೀತಕೋಶ ಸಮೂಹದ ಅವನತಿ ಕಂಡುಬಂದ ಕೂಡಲೇ ಬಾಲಿಕೆಯ ಯೋನಿ ಮಾರ್ಗದಿಂದ ಲೋಳೆಯುಕ್ತ ರಕ್ತಸ್ರಾವವಾಗತೊಡಗುತ್ತದೆ. ಮೂರರಿಂದ ನಾಲ್ಕು ದಿವಸಗಳ ತನಕ ರಕ್ತಸ್ರಾವವಾಗಿ ನಿಂತು ಹೋಗುತ್ತದೆ. ಇದೇ ಪ್ರಥಮ ರಜಸ್ಸ್ರಾವ ಅಥವಾ ಋತುಸ್ರಾವ. ಮೊತ್ತಮೊದಲ ರಜಸ್ಸ್ರಾವಕ್ಕೆ ರಜೋದರ್ಶನ (ಮೆನಾರ್ಕಿ) ಎಂದು ಹೆಸರು. ಸಾಮಾನ್ಯ ಭಾಷೆಯಲ್ಲಿ ಇದಕ್ಕೆ ಮೈನೆರೆಯುವುದು ಎನ್ನುತ್ತಾರೆ. ಮುಂದೆ ಯಾವುದೋ ಅಂಡಾಣುವಿನ ನಿಷೇಚನೆ ಆಗುವ ತನಕವೂ ಒಂದೊಂದು ಅಂಡಾಣು ಬಿಡುಗಡೆ ಆದಾಗಲೂ ಹಾಗೆ ಬಿಡುಗಡೆ ಆದ ಎರಡು ವಾರಗಳ ಬಳಿಕ ರಜಸ್ಸ್ರಾವವಾಗುತ್ತದೆ. ಅಂದರೆ ರಜಸ್ಸ್ರಾವ ಕೂಡ ನಾಲ್ಕು ವಾರಗಳಿಗೊಮ್ಮೆ ಕಂಡುಬರುವ ವಿದ್ಯಮಾನ ಮತ್ತು ಆ ಮುಂದೆ ಬಿಡುಗಡೆಗೊಂಡಿದ್ದ ಅಂಡಾಣುವಿನ ನಿಷೇಚನೆ ಆಗದೆ ಅದೇ ಸಮಯದಲ್ಲಿ ರೂಪುಗೊಂಡಿದ್ದ ಪೀತಕೋಶ ಸಮೂಹದ ಅವನತಿ ಆದುದ್ದರ ಸೂಚನೆ.

ಅಂಡಾಣು ಬಿಡುಗಡೆ ಆಗದೆ ಅದರ ನಿಷೇಚನೆಯ ಪ್ರಶ್ನೆಯೇ ಉದ್ಭವಿಸದಿದ್ದಾಗ ಅಂದರೆ ಪೀತಕೋಶ ಸಮೂಹದ ಮೈದೋರುವಿಕೆಯಾಗಲಿ ಕ್ಷೀಣಿಸುವಿಕೆಯಾಗಲಿ ಕಂಡುಬರುವ ಪ್ರಮೇಯವೇ ಇಲ್ಲದಿದ್ದಾಗ ರಜಸ್ಸ್ರಾವವೂ ಆಗುವುದಿಲ್ಲ. ಆದ್ದರಿಂದಲೇ ಅಂಡಾಣು ತಯಾರಿಕೆ ಆಗುವುದಿಲ್ಲವೆಂದು ಹೇಳಿರುವ ಗರ್ಭಸ್ಥ ಅವಧಿ, ನವಜಾತ ಶಿಶುವಿಗೆ ಎದೆ ಹಾಲು ಉಣಿಸುತ್ತಿರುವ ಅವಧಿ ಮತ್ತು ವಯಸ್ಸು ಮೀರಿದ ಅವಧಿ ಸಂತಾನೋತ್ಪಾದನಾ ಸಾಮಥ್ರ್ಯ ಸ್ಥಗಿತವಾಗಿರುವ ಕಾಲಗಳು. ಈ ಕಾಲಗಳಲ್ಲಿ ಮುಟ್ಟು ನಿಂತು ಹೋಗಿರುತ್ತದೆ. ಮಿಕ್ಕ ಕಾಲದಲ್ಲಿ ಮೈನೆರೆದಾಗ ರಜಸ್ಸ್ರಾವ ಪ್ರಸಂಗ ಕ್ಲುಪ್ತವಾಗಿ ನಾಲ್ಕು ವಾರಗಳಿಗೊಮ್ಮೆ ಮರುಕಳಿಸುತ್ತಲೇ ಇರುತ್ತದೆ. ಅಂತಿಮವಾಗಿ ವಯಸ್ಕ ಸ್ತ್ರೀಯಲ್ಲಿ ಅಂಡಾಣು ತಯಾರಿಕೆ ಮತ್ತು ಬಿಡುಗಡೆ ನಿಲ್ಲುವ ತನಕವೂ ರಜಸ್ಸ್ರಾವ ಪ್ರಸಂಗಗಳು ಕಂಡುಬರುವುದರಿಂದ ಮತ್ತು ಅನಂತರ ಅವು ಸಹ ಸ್ಥಗಿತವಾಗುವುದರಿಂದ ಸ್ತ್ರೀಯಲ್ಲಿ ಬಾಲ್ಯದಿಂದ ವೃದ್ದಾಪ್ಯದ ತನಕ ಅಂಡಾಣು ತಯಾರಿಕೆ ಅರ್ಥಾತ್ ಸಂತಾನೋತ್ಪಾದನ ಸಾಮಥ್ರ್ಯ ಇರುವ ಕಾಲದ ಅವಧಿ ಸ್ಪಷ್ಟವಾಗಿ ಗೋಚರಕ್ಕೆ ಬರುವಂತಿದೆ. ಪುರುಷರಲ್ಲಿ ಇದು ನಿಶ್ಚಿತವಾಗಿರುವಂತೆ ಇಲ್ಲ.

ಗರ್ಭಕೋಶ ಮತ್ತು ರಜಸ್ಸ್ರಾವ : ವಾಸ್ತವವಾಗಿ ಗರ್ಭಾಶಯದಿಂದ ರಜಸ್ಸ್ರಾವವಾಗುತ್ತದೆ. ಬಾಲಿಕೆಯಲ್ಲಿ ಗರ್ಭಾಶಯ ಒಂದು ಸಣ್ಣ ಬುಗರಿಯಂತೆ ಇರುತ್ತದೆ. ಇದರ ಗರಿಷ್ಠ ವ್ಯಾಸ 35 ಮಿಮೀಗಳಿಗಿಂತ ಹೆಚ್ಚಿರುವುದಿಲ್ಲ. ಕಿರಿದಾದ ಇದರ ಬುಡಭಾಗಕ್ಕೆ ಗರ್ಭಕೋಶಕಂಠ (ಸರ್ವಿಕ್ಸ್) ಎಂದು ಹೆಸರು. ಇದು ಯೋನಿಯೊಳಕ್ಕೆ ಚಾಚಿಕೊಂಡಿರುತ್ತದೆ. ಕಂಠದ ದ್ವಾರ ಸುಮಾರು 3 ಮಿಮೀ ವ್ಯಾಸವಿರುವ ನಾಳವಾಗಿದ್ದು ಯೋನಿಯೊಳಕ್ಕೆ ತೆರೆದುಕೊಳ್ಳುತ್ತದೆ. ಗರ್ಭಾಶಯದ ಭಿತ್ತಿ ದಪ್ಪವಾಗಿದ್ದು ಎದುರುಬದಿರಾಗಿ ಸಂಪರ್ಕಗೊಂಡಿರುವುದು. ಅದರ ಒಳಗಡೆ ಅವಕಾಶ ಬಲು ಕಡಿಮೆ. ಭಿತ್ತಿ ಮುಖ್ಯವಾಗಿ ಸ್ನಾಯುವಿನಿಂದಲೂ ಒಳಗಡೆ ಲೋಳೆಪೊರೆಯಿಂದಲೂ ಕೂಡಿದೆ. ಭಿತ್ತಿಯ ಈ ಎರಡೂ ಭಾಗಗಳಲ್ಲೂ ದೊಡ್ಡ ಮತ್ತು ಸಣ್ಣ ಧಮನಿಗಳುಂಟು. ಲೋಳೆಪೊರೆಯಲ್ಲಿ ಸಣ್ಣ ನಳಿಕೆಯಾಕಾರದ ಗ್ರಂಥಿಗಳು ಇವೆ. ಆದರೆ, ಇವು ಇನ್ನೂ ಸ್ರವನಸಾಮಥ್ರ್ಯ ಪಡೆದಿರುವುದಿಲ್ಲ. ಪ್ರಬುದ್ಧತೆಯ ವೇಳೆಯಲ್ಲಿ ಗರ್ಭಕೋಶ ಸ್ವಲ್ಪ ದೊಡ್ಡದಾಗುತ್ತದೆ. ಅದರ ಒಳಪೊರೆಯ ಗಾತ್ರವೂ ಹೆಚ್ಚಿ ಅಲ್ಲಿಯ ಗ್ರಂಥಿಗಳು ಸ್ರವನ ಸಾಮಥ್ರ್ಯ ಪಡೆಯುತ್ತವೆ. ರಜಸ್ಸ್ರಾವವಾಗುವುದಕ್ಕೆ ಎರಡರಿಂದ ಮೂರು ದಿವಸಗಳಿಗೆ ಮುಂಚೆ ಈ ಪೊರೆಯಲ್ಲಿ ಧಮನಿಗಳು ಹಿಗ್ಗಿ ಅಲ್ಲಿ ರಕ್ತ ಪ್ರವಾಹ ಹೆಚ್ಚಾಗುತ್ತದೆ. ಗ್ರಂಥಿಗಳು ವಕ್ರವಾಗಿ ತಿರುಚಿಕೊಳ್ಳುವುವಲ್ಲದೆ ಲೋಳೆಯುಕ್ತ ದ್ರವವನ್ನೂ ಸ್ರವಿಸುತ್ತವೆ. ವಾಸ್ತವವಾಗಿ ಇಂಥ ರಜಸ್ಸ್ರಾವ ಪೂರ್ವ ಬದಲಾವಣೆಗಳು ಅಂಡಾಶಯದಲ್ಲಿ ಪೀತಕೋಶ ಸಮೂಹ ಊರ್ಜಿತಗೊಂಡಾಗ ಪ್ರಾರಂಭವಾಗಿ ಅದು ಕಾರ್ಯೋನ್ಮುಖವಾಗಿರುವತನಕವೂ ಮುಂದುವರಿಯುತ್ತದೆ. ತತ್ಫಲವಾಗಿ ಗರ್ಭಾಶಯದ ಒಳಪದರ ಮೃದುವಾಗಿ ರಕ್ತಭರಿತವಾಗಿ ದಪ್ಪವಾಗಿ ಆದ್ರ್ರವಾಗಿರುತ್ತದೆ. ಪೀತಕೋಶ ಸಮೂಹ ಅವನತಿಗೊಂಡಾಗ ಗರ್ಭಕೋಶದ ಒಳಪೊರೆಯೂ ನಶಿಸಿ ಅಲ್ಲಿಯ ಧಮನಿಗಳು ಛಿದ್ರಿಸಿ ರಕ್ತಸ್ರಾವವಾಗುವುದಕ್ಕೆ ಪ್ರಾರಂಭಿಸುತ್ತದೆ. ಅಂದರೆ ರಜಸ್ಸ್ರಾವ ಪೂರ್ವ ಸ್ಥಿತಿಯ ಅವನತಿಯೇ ರಜಸ್ಸ್ರಾವಕ್ಕೆ ಕಾರಣ ಎನ್ನುವುದು ವ್ಯಕ್ತ.

ರಜಸ್ಸ್ರಾವದಲ್ಲಿ ರಕ್ತ ದಡದಡನೆ ಹರಿದು ಹೋಗುವುದಿಲ್ಲ. ಆದರೆ, ನಿಧಾನವಾಗಿ ಜಿನುಗುವುದಕ್ಕಿಂತ ಹೆಚ್ಚು ಇದ್ದು ಮೂರರಿಂದ ನಾಲ್ಕು ದಿವಸಗಳ ಪರ್ಯಂತ ಸ್ರಾವ ಆಗುತ್ತದೆ. ಈ ಕಾಲದಲ್ಲಿ ಆಗುವ ಒಟ್ಟು ಸ್ರಾವ 100-120 ಮಿಲ್‍ಗಳಷ್ಟಿರಬಹುದು. ರಜಸ್ಸ್ರಾವದಲ್ಲಿ ರಕ್ತದೊಡನೆ ಗರ್ಭಾಶಯದ ಒಳಪೊರೆ ನಶಿಸಿದ್ದರಿಂದ ಫಲಿಸಿದ ಲೋಳೆಯುಕ್ತ ದ್ರವವೂ ಸೇರಿರುತ್ತದೆ. ರಜಸ್ಸ್ರಾವದ ಪ್ರಾರಂಭ ದಿವಸದಿಂದಲೇ ಲೆಕ್ಕ ಮಾಡಿದರೆ ಮುಂದಿನ ರಜಸ್ಸ್ರಾವ ಪ್ರಾರಂಭವಾಗುವುದು ನಾಲ್ಕು ವಾರಗಳ ಬಳಿಕ. ಅದಾದ ಮುಂದಿನ ನಾಲ್ಕು ವಾರಗಳ ತರುವಾಯ ಪುನಃ ರಜಸ್ಸ್ರಾವ. ಹೀಗೆ ಇದು ನಾಲ್ಕು ವಾರಗಳಿಗೆ ಒಮ್ಮೆ ತಿರುಗಿ ತಿರುಗಿ ಕಾಣಬರುವ ಚಕ್ರೀಯ ವ್ಯಾಪಾರ. ಹೆಚ್ಚು ಕಡಿಮೆ ಚಾಂದ್ರಮಾಸಕ್ಕೆ ಒಮ್ಮೆ ಕಂಡುಬರುವ ಈ ಋತುಚಕ್ರಕ್ಕೆ ಮಾಸಿಕ ಚಕ್ರವೆಂದೇ ಹೆಸರು. ಆದರೆ, ಋತುಚಕ್ರ ಕೆಲವರಲ್ಲಿ 35 ದಿವಸಗಳಷ್ಟು ದೀರ್ಘಾವಧಿಯದ್ದಾಗಿರುವುದುಂಟು. ಇನ್ನೂ ಕೆಲವರಲ್ಲಿ ಇದು 20 ದಿವಸಗಳಷ್ಟು ಹ್ರಸ್ವಾವಧಿಯದೇ ಆಗಿರಬಹುದು. ಕೆಲವರಲ್ಲಿ ರಜಸ್ಸ್ರಾವ 7 - 8 ದಿವಸಗಳ ಕಾಲ ಆಗುತ್ತಿರಬಹುದು. ಇನ್ನೂ ಕೆಲವರಲ್ಲಿ 2 ದಿವಸಗಳಲ್ಲೇ ನಿಂತು ಹೋಗಬಹುದು. ಹಾಗೆಯೇ ಸ್ರಾವ ಪ್ರಮಾಣ ಕೆಲವರಲ್ಲಿ 60 ಮಿಲೀನಷ್ಟು ಕಡಿಮೆ ಇದ್ದರೆ, ಇನ್ನೂ ಕೆಲವರಲ್ಲಿ 180-200 ಮಿಲೀಗಳಷ್ಟು ಅಗಾಧವಾಗಿರುತ್ತದೆ. ಇವೆಲ್ಲ ಆರೋಗ್ಯ ಪರಿಮಿತಿಯಲ್ಲಿ ಕಂಡುಬರುವ ವೈಯುಕ್ತಿಕ ವ್ಯತ್ಯಾಸಗಳು. ಹೀಗೆಯೇ ಋತುಸ್ರಾವ ಪ್ರಾರಂಭವಾಗುವುದು ಆರೋಗ್ಯ ಮಿತಿಯಲ್ಲಿ ಒಂದೆರಡು ದಿವಸ ಹಿಂಚು ಮುಂಚಾಗಬಹುದು. ಭಯ, ಆತಂಕ, ದೋಷಯುಕ್ತ ಲೈಂಗಿಕ ನಡೆವಳಿಕೆಯಿಂದ ಒದಗಿದ ಅನಿಶ್ಚಿತತೆಗಳು, ಅಪರಿಚಿತ ಸ್ಥಳದಲ್ಲಿ ಇಲ್ಲವೇ ಅಪರಿಚಿತ ಜನರೊಡನೆ ಇರುವಿಕೆ ಇತ್ಯಾದಿಗಳಿಂದ ರಜಸ್ಸ್ರಾವ ನಿರೀಕ್ಷಿತ ಕಾಲಕ್ಕಿಂತ ಅನೇಕ ವಾರಗಳೇ ತಡವಾಗಬಹುದು.

ರಜಸ್ಸ್ರಾವದ ಪ್ರಾರಂಭ ಖಚಿತವಾಗಿ ಗುರುತಿಸಬಹುದಾದ ಸಂಜ್ಞೆಯಾದ್ದರಿಂದ ಗರ್ಭಾವಸ್ಥೆಯನ್ನು ಒಳಗೊಂಡಂತೆ ಸ್ತ್ರೀ ಪ್ರಜನನಾಂಗಗಳ ಕಾರ್ಯಕ್ರಮಗಳನ್ನು ಆ ದಿವಸದಿಂದ ಗಣಿಸುವುದಿದೆ. ಅಲ್ಲಿಂದ 3-4 ದಿವಸಗಳ ತನಕ ರಜಸ್ಸ್ರಾವವಾಗುತ್ತದೆ. 5-6 ನೆಯ ದಿವಸಗಳಲ್ಲಿ ಗರ್ಭಾಶಯದ ಒಳಪೊರೆಯ ದುರಸ್ತಿ ಆಗುತ್ತದೆ. 14 ನೆಯ ದಿವಸದ ತನಕ ಹಾಗೆಯೇ ಇದ್ದು 15 ನೆಯ ದಿವಸದಿಂದ 28 ನೆಯ ದಿವಸದ ತನಕ ಗರ್ಭಕೋಶದ ಒಳಪೊರೆಯಲ್ಲಿ ರಜಸ್ಸ್ರಾವ ಪೂರ್ವಸಿದ್ಧತೆ ಅಂದರೆ ಧಮನಿಗಳ ಮತ್ತು ಗ್ರಂಥಿಗಳ ಬೆಳವಣಿಗೆ ಚಟುವಟಿಕೆಗಳಿಂದ ಮೃದುವಾಗಿ ದಪ್ಪವಾಗುವುದು ಕಂಡುಬರುತ್ತದೆ. ಇಷ್ಟರಲ್ಲಿ ಗರ್ಭಾಂಕುರಾರ್ಪಣವಾಗಿರದೇ ಇದ್ದರೆ ಮುಂದಿನ ರಜಸ್ಸ್ರಾವ ಪ್ರಾರಂಭವಾಗುತ್ತದೆ. ಅದು ಆ ಚಕ್ರದ ಮೊದಲ ದಿವಸ. ರಜೋಚಕ್ರವನ್ನು ಅಂಡಾಶಯದ ಕಾರ್ಯಕ್ರಮಕ್ಕೆ ಅನ್ವಯಿಸಿದರೆ ರಜಸ್ಸ್ರಾವದ ಮೊದಲ ದಿವಸದಿಂದ 14 ನೆಯ ದಿವಸದ ತನಕ ಅಂಡಾಶಯದಲ್ಲಿ ಕೋಶ ಸಮೂಹ ವೃದ್ಧಿಗೊಳ್ಳುತ್ತ ಅದರಲ್ಲಿ ಪಕ್ವವಾಗುವ ಅಂಡಾಣು ತಯಾರಾಗುತ್ತದೆ. 14-15 ದಿವಸಗಳ ನಡುವೆ ಯಾವಾಗಲೋ ಅಂಡಾಣುವಿನ ಬಿಡುಗಡೆ ಆಗುತ್ತದೆ. 15-17 ದಿವಸಗಳ ನಡುವೆ ಪೀತಕೋಶ ಸಮೂಹ ಊರ್ಜಿತಗೊಳ್ಳುತ್ತದೆ. ಮುಂದೆ ಅದು ಕಾರ್ಯೋನ್ಮುಖವಾಗಿ 28 ನೆಯ ದಿವಸದ ತನಕ ಮುಂದುವರಿಯುತ್ತದೆ. ಅನಂತರ ಅದರ ಅವನತಿಯಾಗಿ ಮುಂದಿನ ಕೋಶ ಸಮೂಹ ವೃದ್ಧಿ ಮತ್ತು ಅಂಡಾಣು ತಯಾರಿಕೆ ಅಂದರೆ ಮುಂದಿನ ಅಂಡಾಶಯಚಕ್ರ ಪ್ರಾರಂಭವಾಗುತ್ತದೆ. ಇವೆರಡೂ ಚಕ್ರಗಳನ್ನೂ ಹೋಲಿಸಿ ನೋಡಿದಾಗ ವ್ಯಕ್ತವಾಗುವ ವಿಷಯಗಳಿವು. ಅಂಡಾಣು ಬಿಡುಗಡೆ ಆಗಿ ಪೀತಕೋಶ ಸಮೂಹ ಕಾರ್ಯೋನ್ಮುಖವಾಗಿರುವ ಎರಡು ವಾರಗಳ ಕಾಲ ಗರ್ಭಾಶಯದಲ್ಲಿ ಒಳಪೊರೆಯ ವೃದ್ಧಿ, ರಕ್ತತುಂಬಿಕೆ ಮತ್ತು ಗ್ರಂಥಿಗಳಿಂದ ಸ್ರವನ (ಅಂದರೆ ರಜಸ್ಸ್ರಾವ ಪೂರ್ವ ಸಿದ್ಧತೆ) ಕಂಡುಬರುತ್ತವೆ. ಪೀತಕೋಶದ ಅವನತಿ ಆದ ಕೂಡಲೇ ಗರ್ಭಾಶಯದ ಒಳಪೊರೆಯ ಅವನತಿಯಾಗಿ (ಅಂದರೆ ರಜಸ್ಸ್ರಾವ ಪೂರ್ವಾಸಿದ್ಧತೆ ವಿಫಲಗೊಂಡು) ರಜಸ್ಸ್ರಾವವಾಗುತ್ತದೆ. ಮುಂದಿನ ಅಂಡಾಶಯ ಕೋಶ ಸಮೂಹದ ವೃದ್ಧಿ ಆಗುವಾಗ ಗರ್ಭಾಶಯದಲ್ಲಿ ರಜಸ್ಸ್ರಾವೋತ್ತರ ಒಳಪೊರೆಯ ದುರಸ್ತಿ ಆಗಿ ಅದು ವಿಶ್ರಾಂತ ಸ್ಥಿತಿಯಲ್ಲಿರುತ್ತದೆ. ಹೀಗೆ ಅಂಡಾಶಯ ಚಕ್ರಕ್ಕೂ ಗರ್ಭಾಶಯ ಚಕ್ರಕ್ಕೂ ನಿಕಟ ಹಾಗೂ ವ್ಯವಸ್ಥಿತ ಸಂಬಂಧವಿದೆ. ಕೋಶ ಸಮೂಹ ಅಂಡಾಶಯದಲ್ಲಿ ಎರಡು ವಾರಪರ್ಯಂತ ವೃದ್ಧಿಯಾಗಿ ಅಂಡಾಣು ಪಕ್ವವಾಗಿ ಬಿಡುಗಡೆ ಆಗುತ್ತದೆ. ಮುಂದೆ ಎರಡು ವಾರಗಳಲ್ಲಿ ಪೀತಕೋಶ ಸಮೂಹದ ಸೃಷ್ಟಿ ಆಗಿ ಅದು ಕಾರ್ಯೋನ್ಮುಖವಾಗಿರುತ್ತದೆ. ಗರ್ಭಾಶಯದಲ್ಲೂ ಹೀಗೆಯೇ ಎರಡು ವಾರ ರಜಸ್ಸ್ರಾವ ಪೂರ್ವಸಿದ್ಧತೆ ಮತ್ತು ಅಂತ್ಯದಲ್ಲಿ ರಜಸ್ಸ್ರಾವ ಪ್ರಾರಂಭ, ಮುಂದಿನ ಎರಡು ವಾರಗಳಲ್ಲಿ ರಜಸ್ಸ್ರಾವ, ಅನಂತರ ಒಳಪೊರೆಯ ದುರಸ್ತಿ ಮತ್ತು ವಿಶ್ರಾಂತಿ.

ಅಂಡಾಶಯದ ಕಾರ್ಯಕ್ರಮಕ್ಕೂ ಗರ್ಭಾಶಯದ ವಿದ್ಯಮಾನಕ್ಕೂ ಇರುವ ನಿಕಟ ಸಂಬಂಧ ಇನ್ನೂ ಮೂರು ಪ್ರಸಂಗಗಳಲ್ಲಿ ವ್ಯಕ್ತವಾಗುತ್ತದೆ : ಮೊದಲನೆಯದು ಸ್ತ್ರೀ ಗರ್ಭಸ್ಥೆಯಾಗಿರುವುದು. ಎರಡನೆಯದು ಆಕೆ ಹಡೆದು ಮಗುವಿಗೆ ಹಾಲುಡಿಸುತ್ತಿರುವುದು. ಮೂರನೆಯದು ಆಕೆಯಲ್ಲಿ ಸಂತಾನಭರಣ ಸಾಮಥ್ರ್ಯ ಕೊನೆಗೊಂಡಿತೆಂದು ವ್ಯಕ್ತಪಡಿಸುವ ರಜೋಬಂಧ (ಮುಟ್ಟುನಿಲ್ಲುವಿಕೆ, ಮೆನೊಪಾಸ್). ಈ ಮೂರೂ ಪ್ರಸಂಗಗಳಲ್ಲೂ ಅಂಡಾಶಯದಲ್ಲಿ ಅಂಡಾಣು ತಯಾರಿಕೆ ಸ್ಥಗಿತವಾಗಿರುತ್ತದೆ ಮತ್ತು ಅದೇ ಮೂರು ಪ್ರಸಂಗಗಳಲ್ಲಿ ರಜೋಚಕ್ರವೂ ಸ್ಥಗಿತವಾಗಿರುತ್ತದೆ. ಅಂಡಾಶಯಚಕ್ರ ರಜೋಚಕ್ರ ಎರಡೂ ಉಪಸ್ಥಿತವಿರುವಾಗ ಅಂಡಾಣು ತಯಾರಿಕೆ ಮತ್ತು ಬಿಡುಗಡೆ ಆಗಿ ಎರಡು ವಾರಗಳು ಕಳೆದ ಮೇಲೆಯೇ (ಅದಕ್ಕೆ ಮೊದಲೇ ಅಲ್ಲ), ಅದೂ ಅಂಡಾಣುವಿನ ನಿಷೇಚನವಾಗದಿದ್ದಾಗ ಮಾತ್ರ, ರಜಸ್ಸ್ರಾವವಾಗುತ್ತದೆ ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಂಡರೆ ಅಂಡಾಶಯಚಕ್ರ ಪ್ರಾಥಮಿಕ. ಅದನ್ನು ಅನುಸರಿಸಿ ಋತುಚಕ್ರ ಏರ್ಪಟ್ಟಿದೆ ಎಂಬುದು ವ್ಯಕ್ತವಾಗುತ್ತದೆ.

ಪ್ರಬುದ್ಧತೆ ಮತ್ತು ಅನುಷಂಗಿಕ ಲೈಂಗಿಕ ಲಕ್ಷಣಗಳು : ಬಾಲಿಕೆ ಹನ್ನೆರಡರಿಂದ ಹದಿನಾಲ್ಕನೆಯ ವಯೋಮಿತಿಯಲ್ಲಿ ಮೈನೆರೆಯುವುದು ಸಾಮಾನ್ಯ. ಹತ್ತನೆಯ ವಯಸ್ಸಿಗೆ ಮೊದಲೂ ಹದಿನೇಳನೆಯ ವಯಸ್ಸಿನ ತರುವಾಯವೂ ಮೈನೆರೆಯುವುದು ರೋಗಸೂಚಕ. ಮೈನೆರೆಯುವುದಕ್ಕೆ ಹಲವಾರು ವಾರಗಳಷ್ಟು ಮುಂಚೆ ಬಾಲಿಕೆಯ ಭಗದಮೇಲೆ ರೋಮಗಳು ಕಂಡುಬರಲು ಪ್ರಾರಂಭವಾಗುತ್ತವೆ. ಶೀಘ್ರದಲ್ಲೇ ಕಂಕುಳಲ್ಲಿ ಕೂದಲು ಬೆಳೆಯುತ್ತದೆ. ಮೈನೆರೆದಾಗ ಮತ್ತು ಅಲ್ಲಿಂದ ಕ್ಲುಪ್ತ ಅಂತರದಲ್ಲಿ ರಜಸ್ಸ್ರಾವ ಆಗುತ್ತದೆ. ಹಲವು ತಿಂಗಳ ಪರ್ಯಂತ ದೇಹ ಶೀಘ್ರವಾಗಿ ಬೆಳೆದು ಆಕೆಯ ಮೈಕೈ ತುಂಬಿಕೊಳ್ಳುತ್ತವೆ. ಒಳ ಮತ್ತು ಹೊರ ಪ್ರಜನನಾಂಗಗಳು ದೊಡ್ಡವಾಗುತ್ತವೆ. ಭುಜಗಳ ಅಂತರಕ್ಕಿಂತ ಶ್ರೋಣಿಭಾಗ ಹಿರಿದಾಗಿ ಬೆಳೆಯುತ್ತದೆ. ಮೊಳಕೈ ಬೆಳವಣಿಗೆ ಸ್ವಲ್ಪ ವ್ಯತ್ಯಾಸವಾಗಿ ಕೆಳಕೈಗಳು ದೇಹಪಕ್ವವನ್ನು ಬಿಟ್ಟು ಸ್ವಲ್ಪ ಹೊರಚ್ಚಾಗಿರುವಂತೆ ವಿಸ್ತರಿಸುತ್ತವೆ. ತೊಡೆ ಭಾಗಗಳು ಮೊಳಕಾಲಿನೆಡೆ ಒಂದನ್ನೊಂದು ಸಂಧಿಸುವಷ್ಟು ಓರೆ ಆಗುತ್ತವೆ. ತಲೆಕೂದಲು ಸಮೃದ್ಧಿಯಾಗಿ ಬೆಳೆದು ಹಣೆಯ ಮೇಲೆ ತಲೆ ಕೂದಲಿನ ರೇಖೆ ಬಿಲ್ಲಿನಂತೆ ಕಮಾನಾಗಿರುತ್ತದೆ. ಮುಖ ಮೈಗಳ ಚರ್ಮ ಕೋಮಲವಾಗಿ ರೋಮರಹಿತವಾಗಿರುತ್ತದೆ. ಸ್ತನಗಳು ವೃದ್ಧಿ ಆಗುವುದಲ್ಲದೆ ಅವುಗಳಲ್ಲಿ ಹಾಲು ಸ್ರವಿಸುವ ಗ್ರಂಥಿ ಭಾಗಗಳೂ ಹಾಲನ್ನು ಒಯ್ಯುವ ನಾಳಭಾಗಗಳೂ ಮೂಡುತ್ತವೆ. ಧ್ವನಿ ಆ ಮೊದಲು ಇದ್ದಂತೆಯೇ ತಾರದಲ್ಲಿ ನಿಂತು ಇನ್ನೂ ಮಾರ್ದವಗೊಳ್ಳುತ್ತದೆ. ಮಾನಸಿಕವಾಗಿ ಭೀರುಸ್ವಭಾವ, ದಯೆ, ನಾಚಿಕೆ ಮುಂತಾದ ಪ್ರವೃತ್ತಿಗಳು ಮೂಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಅಂಡಾಶಯಗಳಲ್ಲಿ ಅಂಡಾಣುಕೋಶಸಮೂಹ, ಪೀತಕೋಶಸಮೂಹ ಕಂಡುಬಂದು ಅವುಗಳ ಚಕ್ರೀಯ ಕಾರ್ಯಕ್ರಮಗಳ ವ್ಯವಸ್ಥೆಗೊಳ್ಳುತ್ತವೆ. ಇವುಗಳೆಲ್ಲ ಸ್ತ್ರೀಯಲ್ಲಿ ವಿಶಿಷ್ಟವಾಗಿ ಕಾಣಬರುವ ಆನುಷಂಗಿಕ ಲೈಂಗಿಕ ಲಕ್ಷಣಗಳು. ಇವುಗಳಿಂದ ಮುಖ್ಯವಾಗಿ ಆಕೆ ಸಂತಾನವನ್ನು ಧರಿಸಿ, ಭರಿಸಿ, ಪ್ರಸವಿಸಿ, ಮಗುವಿಗೆ ಹಾಲುಕೊಟ್ಟು ಪೋಷಿಸುವ ಅನುಕೂಲತೆಗಳನ್ನು ಪಡೆಯುವುದಾಗಿದೆ.

ಸಂತಾನಧಾರಣೆ ಆದಾಗ ಅಂಡಾಶಯ ಮತ್ತು ಗರ್ಭಾಶಯದಲ್ಲಿ ಕಾಲಚಕ್ರಗಳು ಸ್ಥಗಿತವಾಗಿ ಸಂತಾನ ಗರ್ಭಕೋಶದಲ್ಲಿ ಬೆಳೆಯುತ್ತದೆ. ಅನುಗುಣವಾಗಿ ಗರ್ಭಕೋಶ ಬೆಳೆದು ದೊಡ್ಡದಾಗುತ್ತದೆ. ನಲವತ್ತು ವಾರಗಳ ಬಳಿಕ ಗರ್ಭಕೋಶ ಸಂಕೋಚಿಸಿ ಸಂತಾನವನ್ನು ಹೊರದೂಡುವುದೇ ಪ್ರಸವ. ಇದೇ ವೇಳೆ ಸ್ತನಗಳಲ್ಲಿ ಯುಕ್ತ ಮಾರ್ಪಾಡುಗಳು ಕಂಡುಬರುತ್ತವೆ. ಬಾಲಿಕೆಯರಿಗಿಂತ ಬಾಲಕರು ಒಂದೆರಡು ವರ್ಷ ತಡವಾಗಿ ಪ್ರಬುದ್ಧರಾಗುತ್ತಾರೆ. 14-16 ವರ್ಷ ವಯಸ್ಸಿನಲ್ಲಿ ಪ್ರಬುದ್ಧರಾಗುವುದು ಸಾಮಾನ್ಯ. ಈ ಕಾಲದಲ್ಲಿ ಒಂದೊಂದಾಗಿ ಕಂಡು ಬರಲು ಪ್ರಾರಂಭವಾಗುವ ವಯಸ್ಕಲಕ್ಷಣಗಳು ಪೂರ್ಣವಾಗುವತನಕ ಒಂದೆರಡು ವರ್ಷಗಳೇ ಕಳೆಯಬಹುದು. ವೃಷಣಗಳೂ ಶಿಶ್ನವೂ ಸ್ವಲ್ಪ ದೊಡ್ಡದಾಗಿ ಬೆಳೆಯುತ್ತವೆ. ವೃಷಣದಲ್ಲಿ ವೀರ್ಯಾಣೋತ್ಪಾದಕ ನಾಳಗಳ ನಡುವೆ ಉಪಸ್ಥಿತವಾಗಿರುವ ಲೀಡಿಗಿನ ಕೋಶಗಳ ಗುಂಪುಗಳು ಸ್ರವನ ಸಾಮಥ್ರ್ಯ ಪಡೆಯುತ್ತವೆ. ವೃಷಣಕೋಶ ಮತ್ತು ಶಿಶ್ನದ ಬುಡದಲ್ಲಿ ದೇಹದ ಮೇಲೆ ಒರಟು ರೋಮಗಳು ಬೆಳೆಯುತ್ತವೆ. ಎದೆಯಮೇಲೂ ಉದರದಲ್ಲೂ ಕೂದಲು ಶಿಶ್ನ ಇರುವಲ್ಲಿವರೆಗೂ ಬೆಳೆಯುತ್ತದೆ. ಆದ್ದರಿಂದ ಪುರುಷನ ಭಗ ಪ್ರದೇಶದ ರೋಮಗಳಿರುವ ಪ್ರದೇಶ ಹೆಂಗಸಿನಲ್ಲಿಯಂತೆ ನೇರಗೆರೆಯಲ್ಲಿ ಮಿತಿಗೊಂಡಿಲ್ಲ ಬೆನ್ನಿನ ಮೇಲೂ ಸಣ್ಣ ರೋಮಗಳು ಬೆಳೆಯುವುದುಂಟು. ಮುಖದ ಮೇಲೆ ಕೂದಲು ಮೂಡಿ ಗಡ್ಡ ಮೀಸೆಗಳು ಕಾಣಿಸಿಕೊಳ್ಳುತ್ತವೆ. ಕಂಕುಳಲ್ಲಿಯೂ ಕೂದಲು ಬೆಳೆಯುತ್ತದೆ. ಉಬ್ಬು ಮತ್ತು ತಲೆ ಕೂದಲು ಸ್ವಲ್ಪ ಮಟ್ಟಿಗೆ ಒರಟಾಗಿರುವುದಲ್ಲದೆ ಹಣೆಯ ಎಡಬಲಪಾಶ್ರ್ವಗಳಲ್ಲಿ ತಲೆಕೂದಲಿನ ರೇಖೆ ಹಿಂದಕ್ಕೆ ಸರಿಯುವುದರಿಂದ ಬಾಲ್ಯದಲ್ಲಿ ಬಿಲ್ಲಿನಂತಿದ್ದ ರೋಮರೇಖೆ ಅಂಕುಡೊಂಕಾಗುತ್ತದೆ. ಧ್ವನಿ ಒಡೆದು ಗೊಗ್ಗರವಾಗುತ್ತದೆ. ಸ್ತನಗಳು ಬಾಲ್ಯಾವಸ್ಥೆಯಲ್ಲೆ ಮುಂದುವರಿದು ಕ್ರಿಯಾರಹಿತವಾಗಿರುತ್ತವೆ. ದೇಹ ಬೆಳೆದು ದೃಢವಾಗುತ್ತದೆ. ಶ್ರೋಣಿಗಿಂತ ಭುಜಭಾಗ ಅಗಲವಾಗಿ ಬೆಳೆಯುತ್ತದೆ. ಕೈಕಾಲುಗಳ ಮೂಳೆಗಳು ಉದ್ದವಾಗಿ ದಪ್ಪವಾಗಿ ಬೆಳೆದು ಬಾಲ್ಯಾವಸ್ಥೆಯಲ್ಲಿಯಂತೆ ನೆಟ್ಟಗೆ ಇರುತ್ತವೆ. ಮುಖ್ಯವಾಗಿ ವೃಷಣಗಳಲ್ಲಿ ವೀರ್ಯಾಣುಗಳ ಉತ್ಪತ್ತಿಯೂ ಶುಕ್ಲಗ್ರಂಥಿ ವೀರ್ಯಕೋಶಗಳಲ್ಲಿ ಸ್ರವನಸಾಮಥ್ರ್ಯವೂ ಕಂಡುಬರುತ್ತವೆ. ವೀರ್ಯೋತ್ಪತ್ತಿ ಆಗಿ ಸಂಭೋಗದಿಂದ ಸ್ತ್ರೀಯ ಯೋನಿಯೊಳಗೆ ವೀರ್ಯ ಸ್ಖಲನ ಮಾಡುವ ಅನುಕೂಲ ಮತ್ತು ಸಾಮಥ್ರ್ಯ ಒದಗುತ್ತವೆ. ಇವುಗಳಿಂದಾಗಿ ಪುರುಷ ಸಂತಾನ ಪಡೆಯುವ ಮತ್ತು ಸಂತಾನಭಾರ ಹೊರುವ ಯೋಗ್ಯತೆಗಳಿಸುತ್ತಾನೆ. ಸಂಭೋಗ : ಸಂಭೋಗ ಕ್ರಿಯೆಯಿಂದ ವೀರ್ಯ ಯೋನಿಯೊಳಗೆ ಸ್ಖಲನವಾಗುತ್ತದೆ ಮತ್ತು ಹಾಗಾಗುವುದರಿಂದ ಪ್ರಜನನ ಕ್ರಿಯೆ ಸಿದ್ಧಿಸುವಂತಾಗುತ್ತದೆ. ದೈಹಿಕ ಕ್ರಿಯಾ ದೃಷ್ಟಿಯಿಂದ ಸಂಭೋಗದ ಉಪಯೋಗ ಇಷ್ಟೇ. ಆದರೆ, ಮನುಷ್ಯರಲ್ಲಿ ಸಂಭೋಗ ಮಾನಸಿಕವಾಗಿ ಅತಿ ಹರ್ಷದಾಯಕ ಕ್ರಿಯೆಯಾಗಿ ಪರಿಣಮಿಸಿದೆ. ಸಂಭೋಗಿಸುತ್ತಿರುವಾಗ ಸಾಮಾನ್ಯವಾಗಿ ಎಲ್ಲ ಪುರುಷರಲ್ಲೂ ಮಾನಸಿಕವಾಗಿ ಸುಖಾನುಭವ ಹೆಚ್ಚಾಗುತ್ತ ವೀರ್ಯ ಸ್ಖಲನವಾದಾಗ ಆನಂದ ಪರಮಾವಧಿಗೆ ಮುಟ್ಟಿ ಶರೀರದಲ್ಲೆಲ್ಲ ವಿಚಿತ್ರ ರೀತಿಯ ಒಂದು ಕಂಪನಾನುಭವವಾಗುತ್ತದೆ. ಇದಕ್ಕೆ ತೃಪ್ತಿ ಕಂಪನ ಅಥವಾ ಸುರತಸುಖ (ಆಗ್ರ್ಯಾಸ್ಮ್) ಎಂದು ಹೆಸರು. ಸುರತ ಸುಖ ಸ್ತ್ರೀಯರಲ್ಲೂ ಉಂಟು. ಆದರೆ, ಅನೇಕ ಸ್ತ್ರೀಯರಲ್ಲಿ ಇದು ಅಪರೂಪದ ಅನುಭವ. ಪ್ರಧಾನವಾಗಿ ಇಂಥ ಅತಿಶಯ ಆನಂದವನ್ನು ಪಡೆಯಲೆಂದೇ ವ್ಯಕ್ತಿಗಳು ಸಂಭೋಗ ಕ್ರಿಯೆಯನ್ನು ಜರುಗಿಸುವರೇ ಹೊರತು ಕೇವಲ ಸಂತಾನ ಲಾಭಕ್ಕಾಗಿ ಸಂಭೋಗಿಸುವುದು ತೀರ ಅಪರೂಪ. ಇಲ್ಲವೆಂದೇ ಹೇಳಬಹುದು. ಉದ್ದೇಶ ಏನೇ ಇರಲಿ ಸಂಭೋಗದಿಂದ ಸಂತಾನೋತ್ಪಾದನೆ ಆಗುವ ಪ್ರಮೇಯ ಇದ್ದದ್ದೇ. ಅನೇಕ ವೇಳೆ ಇದು ಅನುದ್ದೇಶಿತವಾಗಿರುವುದು ನಿಜ. ಸ್ಯಾಮ್ಸನ್ ರೈಟ್ ಬರೆದಿರುವ ಅಪ್ಲೈಡ್ ಫಿಸಿಯಾಲಜಿ ಗ್ರಂಥದಲ್ಲಿ "ಸಂಭೋಗದ ಕೌಶಲ್ಯ ಮತ್ತು ಆ ಕಾಲದಲ್ಲಿ ವ್ಯಕ್ತವಾಗಬೇಕಾದ ವಿನಯ, ಸೌಜನ್ಯ, ಮರ್ಯಾದೆ ಹಾಗೂ ಸುಸಂಸ್ಕøತಾಭಿರುಚಿಗಳು ಪ್ರಮುಖ ಮಹತ್ವದ ವಿಷಯಗಳಾಗಿದ್ದರೂ ಅವು ದೇಹಕಾರ್ಯ ವಿಜ್ಞಾನಾಧ್ಯಾಪಕರಿಂದ ಎಂದೂ ಬೋಧಿಸಲ್ಪಟ್ಟಿಲ್ಲ. ವೈದ್ಯ ವ್ಯಾಸಂಗ ಕಾಲದಲ್ಲಿ ಯಾವ ಹಂತದಲ್ಲಾದರೂ ಅವನ್ನು ವಿಚಾರ ಮಾಡಿದ್ದಿಲ್ಲ. ಇದು ದುರಾದೃಷ್ಟ. ನಾಗರಿಕ ಸಮಾಜದಲ್ಲಿ ವಿನಿತ ಸ್ತ್ರೀಪುರುಷರ ನಡುವೆ ಇರಬೇಕಾದ ಲೈಂಗಿಕ ಸಂಬಂಧ ಬರೀ ಅಂಗರಚನೆ ದೇಹಕ್ರಿಯೆಗಳ ಜ್ಞಾನಕ್ಕಿಂತಲೂ ಮಹತ್ತರವಾದದು" ಎಂದಿದ್ದಾನೆ. ಆದ್ದರಿಂದ ವೈಜ್ಞಾನಿಕ ಕಾಮವ್ಯಾಸಂಗದ ಅಗತ್ಯವಿದೆ.

ಸಂಭೋಗಕ್ಕೂ ವೀರ್ಯಸ್ಖಲನಕ್ಕೂ ಶಿಶ್ನ ನಿಮಿರಿದ ಸ್ಥಿತಿಯಲ್ಲಿ ಇರಬೇಕು. ಪ್ರಾರಂಭದಲ್ಲಿ ಮಾನಸಿಕ ಉದ್ರೇಕದಿಂದಾಗಿ ಶಿಶ್ನ ನಿಮಿರುವುದಾದರೂ ಯೋನಿ ಪ್ರವೇಶಾನಂತರ ಯೋನಿ ಭಿತ್ತಿಯೊಡನೆ ಆಗುವ ಘರ್ಷಣೆಯಿಂದ ಒದಗುವ ಉದ್ರೇಕದಿಂದ ನಿಮಿರಿಕೆ ಮುಂದುವರಿಯುತ್ತದೆ. ಘರ್ಷಣೆ ಅಹಿತವಾಗಿರದೆ ಸಲೀಸಾಗಿರುವಂತೆ ಸಂಭೋಗ ಕಾಲದಲ್ಲಿ ಯೋನಿಯೊಳಕ್ಕೆ ಬಾರ್ಥೊಲಿನ್ ಗ್ರಂಥಿಗಳ ಸ್ರಾವ ಸೇರಿ ಸ್ನೇಹನಾದಂತೆ (ಲ್ಯೂಬ್ರಿಕೆಂಟ್) ವರ್ತಿಸುತ್ತದೆ. ಯೋನಿಯೊಳಗೆ ಶಿಶ್ನದ ಚಲನದಿಂದ ಉದ್ರೇಕ ಹೆಚ್ಚಾಗುತ್ತ ಕೊನೆಗೆ ವೀರ್ಯ ಸ್ಖಲನವಾಗುತ್ತದೆ. ಇದೇ ವೇಳೆಗೆ ಸ್ತ್ರೀಯಲ್ಲಿ ತೃಪ್ತಿಕಂಪನ ಉಂಟಾದರೆ ಭಗಾಂಕುರ ನಿಮಿರಿರುತ್ತದೆ ಮತ್ತು ಗರ್ಭಾಶಯ ತ್ವರಿತಗತಿಯಿಂದ ಸಂಕುಚಿಸಿ ವ್ಯಾಕೋಚಿಸುವುದರಿಂದ ಯೋನಿಯೊಳಗಿನಿಂದ ವೀರ್ಯ ಗರ್ಭಕೋಶದ ಒಳಕ್ಕೆ ಹೀರಲ್ಪಡುವುದೆಂದು ಊಹಿಸಲಾಗಿದೆ. ಏಕೆಂದರೆ ಸ್ತ್ರೀಯಲ್ಲಿ ತೃಪ್ತಿ ಕಂಪನ ಕಂಡುಬರದ ಸಂಭೋಗದಲ್ಲಿ ವೀರ್ಯಾಣುಗಳು ಗರ್ಭಕೋಶದಲ್ಲಿ ಕಾಣಿಸಿಕೊಳ್ಳಬೇಕಾದರೆ ಸಂಭೋಗಾನಂತರ ಒಂದು ಗಂಟೆಯಾದರೂ ಬೇಕಾಗುತ್ತದೆ. ಆದರೆ, ತೃಪ್ತಿ ಕಂಪನ ಕಂಡುಬಂದ ಸಂಭೋಗದಲ್ಲಿ ಕೇವಲ 2-3 ಮಿನಿಟ್ಟುಗಳಲ್ಲೇ ವೀರ್ಯಾಣುಗಳು ಗರ್ಭಕೋಶದಲ್ಲಿರುವುದು ತಿಳಿದಿದೆ. ನಿಷೇಚನ : ಅಂಡಾಣು ವೀರ್ಯಾಣುಗಳ ಮಿಲನವೇ ನಿಷೇಚನ. ಸಾಮಾನ್ಯವಾಗಿ ಇದಾಗುವುದು ಅಂಡನಾಳದಲ್ಲಿ, ತಪ್ಪಿದರೆ ಗರ್ಭಾಶಯದಲ್ಲಿ. ಅಂಡಾಣು ಬಿಡುಗಡೆ ಆದಾಗ ಅಪರೂಪವಾಗಿ ಉದರದಲ್ಲೇ ನಿಷೇಚನೆ ಆಗಬಹುದು. ಅಂಡಾಣು ಪಕ್ವವಾಗಿದ್ದು ಬಿಡುಗಡೆ ಆಗದೆ ಅಂಡಾಶಯದಲ್ಲೇ ಇದ್ದಾಗ ನಿಷೇಚನೆ ಆಗುವುದು ಇನ್ನೂ ಅಪೂರ್ವ. ನಿಷೇಚನೆಯ ವೇಳೆ ಸಹಸ್ರಾರು ವೀರ್ಯಾಣುಗಳು ಅಂಡಾಣುವನ್ನು ಮುತ್ತುತ್ತವೆ ಮತ್ತು ಅದರ ಕೋಶಭಿತ್ತಿಯನ್ನು ಕೊರೆಯುವ ಪ್ರಯತ್ನದಲ್ಲಿ ಹಲವಾರು ನಾಶವೂ ಆಗುತ್ತವೆ. ಇವುಗಳ ನಾಶದಿಂದ ಹಯಲ್ ಯೂರೋನಿಡೇಸ್ ಎಂಬ ಕಿಣ್ವದ ಬಿಡುಗಡೆ ಆಗುವುದು ತಿಳಿದಿದೆ. ಇದು ಅಂಡಾಣು ಭಿತ್ತಿಯ ಮೇಲೆ ಪ್ರವರ್ತಿಸಿ ಅದನ್ನು ಮಿದುವಾಗಿ ಮಾಡುವಂತೆ ತೋರುತ್ತದೆ. ಅಂತೂ ಅನೇಕ ಸಹಸ್ರ ವೀರ್ಯಾಣುಗಳು ತಮ್ಮ ಪ್ರಯತ್ನದಲ್ಲಿ ಮೃತವಾದ ಮೇಲೆಯೇ ಯಾವುದೋ ವೀರ್ಯಾಣು ಅಂಡಾಣು ಭಿತ್ತಿಯನ್ನು ಕೊರೆದು ತಲೆ ನೇರ ಅದರೊಳಗೆ ಪ್ರವೇಶಿಸುವುದು ದಿಟ. ಹೀಗೆ ಪ್ರವೇಶಿಸಿದ ಕೂಡಲೇ ಭಿತ್ತಿ ಪುನಃ ಗಡುಸಾಗಿ ಬೇರೆ ವೀರ್ಯಾಣುವಿನ ಪ್ರವೇಶ ಸಾಧ್ಯವಿಲ್ಲವಾಗುತ್ತದೆ. ಉಳಿದವು ನಾಶವಾಗಿ ಇನ್ನೂ ಹೆಚ್ಚು ಹಯಲ್ ಯೂರೋನಿಡೇಸಿನ ಬಿಡುಗಡೆ ಆದರೂ ಇದರಿಂದ ಭಿತ್ತಿಯ ಮೇಲೆ ಪರಿಣಾಮವೇನೂ ಆಗದು.

ಅಂಡಾಣುವನ್ನು ಕೊರೆದು ವೀರ್ಯಾಣುವಿನ ತಲೆ ಒಳಹೊಕ್ಕಾಗ ಇದರ ಬಾಲ ಹೊರಗೇ ಉಳಿದು ಅನಂತರ ಬಿದ್ದು ಹೋಗುತ್ತದೆ. ವೀರ್ಯಾಣು ಶಿರದ ಭಿತ್ತಿ ನಾಶವಾಗಿ ಅಣುಕೇಂದ್ರ ಅಂಡಾಣುವಿನ ಅಣುಕೇಂದ್ರದೊಡನೆ ಮಿಲನವಾಗುತ್ತದೆ. ಅಂಡಾಣುವಿನ 22+ಘಿ ಕ್ರೋಮೋಸೋಮುಗಳೊಡನೆ ವೀರ್ಯಾಣುವಿನ 22+ಘಿ ಇಲ್ಲವೇ 22+ಙ ಕ್ರೋಮೋಸೋಮುಗಳು ಜೊತೆಗೊಂಡು 22 ಜೊತೆ +ಘಿಘಿ ಇಲ್ಲವೆ 22 ಜೊತೆ +ಘಿಙ ಕ್ರೋಮೊಸೋಮುಗಳು ರೂಪುಗೊಳ್ಳುತ್ತವೆ. ಹೀಗೆ ಕ್ರೋಮೋಸೋಮುಗಳ ಜೊತೆಯಾಗಿರುವ ಈ ನಿಷೇಚಿತ ಅಂಡಾಣುವೇ ಯುಗ್ಮಜ. ನಿಷೇಚನೆಯಿಂದ ಕ್ರೋಮೋಸೋಮುಗಳ ಜೊತೆ ಅಥವಾ ಯುಗ್ಮಜಗಳಾಗುವುದೂ ಹಾಗಾಗುವುದರಿಂದ ಯುಗ್ಮಜದಲ್ಲಿ ತಂದೆತಾಯಿ ಇಬ್ಬರ ವೈಯಕ್ತಿಕ ಲಕ್ಷಣಗಳು ಉಪಸ್ಥಿತವಾಗುವುದೂ ಅಲ್ಲದೆ ಭ್ರೂಣದ ಅರ್ಥಾತ್ ಮುಂದು ಹುಟ್ಟುವ ಮಗುವಿನ ಲಿಂಗ ನಿರ್ಧಾರವಾಗುವುದೂ ಸಾಧ್ಯವಾಗುತ್ತವೆ. 22 ಜೊತೆ ಕ್ರೋಮೋಸೋಮುಗಳೊಡನೆ ಘಿಙ ಜೊತೆ ಇದ್ದರೆ ಅದು ಗಂಡು ಘಿಘಿ ಇದ್ದರೆ ಅದು ಹೆಣ್ಣು.

ಯುಗ್ಮಜ ಕೆಲವೇ ಗಂಟೆಗಳ ಕಾಲದಲ್ಲಿ ವಿಭಜನೆಗೊಳ್ಳತೊಡಗಿ ಶೀಘ್ರದಲ್ಲೇ ಭ್ರೂಣವಾಗಿ ರೂಪುಗೊಳ್ಳುತ್ತದೆ. ಅಂದರೆ ಅದು ಜೀವಿಸಿದೆ, ಆ ಜೀವ ಮುಂದುವರಿಯುತ್ತಿದೆ ಎಂದಾಯಿತು. ನಿಷೇಚನೆ ಆಗದಿದ್ದರೆ ಅಂಡಾಣುವಾಗಲಿ ವೀರ್ಯಾಣುವಾಗಲಿ ವಿಭಜನೆಗೊಳ್ಳಲಾರದು, ಇಷ್ಟೇ ಅಲ್ಲ. ಅದು ಜೀವಂತವಾಗಿ ಒಂದೆರಡು ದಿವಸ ಉಳಿಯುವುದೂ ಕೂಡ ಅನುಮಾನ. ಒಟ್ಟಿನಲ್ಲಿ ನಿಷೇಚನದಿಂದ ಇನ್ನೊಂದು ವ್ಯಕ್ತಿಯ ಸೃಷ್ಟಿ ಆಗುವುದಲ್ಲದೆ ಅದರ ದೈಹಿಕ ಲಕ್ಷಣಗಳು ಮತ್ತು ಲಿಂಗ ಕೂಡ ನಿರ್ಧರಿಸಲ್ಪಡುತ್ತವೆ. ಈ ಲಕ್ಷಣಗಳು, ಅವು ನೈಸರ್ಗಿಕ ಆರೋಗ್ಯ ಲಕ್ಷಣಗಳೇ ಆಗಿರಲಿ, ರೋಗಲಕ್ಷಣಗಳೇ ಆಗಿರಲಿ, ಅನುವಂಶಿಕ ಭ್ರೂಣ ಬೆಳೆದು ಮಗು ಹುಟ್ಟಿ ಮುಂದೆ ಆ ವ್ಯಕ್ತಿ ಸಂತಾನ ಪಡೆಯುವಾಗ ಇದಕ್ಕೆ ಕೂಡ ಈ ಲಕ್ಷಣಗಳು ವರ್ಗವಾಗುವುದು ಖಚಿತ. ಆದ್ದರಿಂದ ಹಲವಾರು ರೋಗಗಳು ಅನುವಂಶಿಕವಾಗಿರುವುದು ಆಶ್ಚರ್ಯವಲ್ಲ. ಭ್ರೂಣದ ಬೆಳವಣಿಗೆ ಕಾಲದಲ್ಲಿ ಮತ್ತು ಶಿಶುವಿನ ಜನನವಾಗಿ ಇದು ಬೆಳೆಯುವ ಕಾಲದಲ್ಲಿ ಆರ್ಜಿತವಾದ ಲಕ್ಷಣಗಳು ಮುಂದಿನ ಪೀಳಿಗೆಗೆ ಹೀಗೆ ವರ್ಗವಾಗುವುದಿಲ್ಲ.

ಅಂಡಾಣು ವೀರ್ಯಾಣು ಒಂದೊಂದರಲ್ಲೂ 23 (22+ಘಿ ಅಥವಾ 22+ಙ) ಕ್ರೋಮೋಸೋಮುಗಳು ಇರುವುದು ಸರಿಯಷ್ಟೆ. ಅಪೂರ್ವವಾಗಿ ಈ ಅಣುಗಳು ತಮ್ಮ ಮಾತೃಕೋಶ ವಿಭಜನೆಯಿಂದ ಉದ್ಭವಿಸುವಾಗ ವಿಭಜನಾ ಕ್ರಮದಲ್ಲಿ ಏರುಪೇರುಗಳಾಗಿ ಒಂದೊಂದರಲ್ಲೂ ಇರುವ ಕ್ರೋಮೋಸೋಮುಗಳ ಸಂಖ್ಯೆ 23 ಕ್ಕಿಂತ ಬೇರೆ ಆಗಿರುವುದುಂಟು. ಮಾತೃಕೋಶದ ಒಟ್ಟು 23 ಜೊತೆ ಕ್ರೋಮೋಸೋಮುಗಳು ಎರಡು ಭಾಗವಾಗುವಾಗ ಒಂದು ಮರಿಕೋಶಕ್ಕೆ 22 ಇನ್ನೊಂದಕ್ಕೆ 24 ರಂತೆ ಹಂಚಿಕೆ ಆಗುವುದರೀಂದ ಮೇಲೆ ಹೇಳಿರುವ ಸ್ಥಿತಿ ಒದಗುತ್ತದೆ.

ಚಿತ್ರ-13

	ಈ ರೀತಿ ಆದಾಗ 22 + ಘಿಘಿ ಅಥವಾ 22 ಕ್ರೋಮೋಸೋಮುಗಳಿರುವ ಅಂಡಾಣುಗಳೂ 22 + ಘಿಙ ಅಥವಾ 22 ಕ್ರೋಮೋಸೋಮುಗಳಿರುವ ವೀರ್ಯಾಣುಗಳು ತಯಾರಾಗುತ್ತವೆ.  ಇಂಥ ಅಪೂರ್ವ ಅಂಡಾಣುಗಳ ಮತ್ತು ವೀರ್ಯಾಣುಗಳ ಮಿಲನದಿಂದ ಫಲಿಸುವ ಯುಗ್ಮಜಗಳಲ್ಲಿ 22 ಜೊತೆ,  +ಘಿ. 22 ಜೊತೆ +ಘಿಘಿಘಿ, 22 ಜೊತೆ +ಙ, 22 ಜೊತೆ +ಘಿಘಿಙ ಮುಂತಾದ ರೀತಿಗಳಲ್ಲಿ ಕ್ರೋಮೋಸೋಮುಗಳಿರುತ್ತವೆ. 22 ಜೊತೆ +ಙ ಮಾತ್ರ ಇರುವ ಯುಗ್ಮಜ ಕೂಡಲೇ ಮೃತಿಹೊಂದುತ್ತದೆಂದು ತಿಳಿದಿದೆ. ಇಲ್ಲಿ ಹೇಳಿರುವ 22 ಆಟೋಸೋಮುಗಳ ವಿಷಯದಲ್ಲೂ ಘಿ ಮತ್ತು ಙ ಕ್ರೋಮೋಸೋಮುಗಳಲ್ಲಿಯಂತೆಯೇ ಅಂಡಾಣು ವೀರ್ಯಣುಗಳ ಮಾತೃಕೋಶ ವಿಭಜನೆಯಲ್ಲಿ ಏರುಪೇರುಗಳು ಉಂಟಾಗಬಹುದು.  ಅಂಥ ಪ್ರಸಂಗಗಳಲ್ಲಿ ಅಂಡಾಣು ಅಥವಾ ವೀರ್ಯಾಣುಗಳಲ್ಲಿ 21 ಆಟೋಸೋಮುಗಳೋ 23 ಆಟೋಸೋಮುಗಳೋ ಇರುತ್ತವೆ.

ಚಿತ್ರ-14

ಇಂಥ ವಿಚಿತ್ರ ಅಂಡಾಣುಗಳೂ ವೀರ್ಯಾಣುಗಳು ನಿಷೇಚನದಲ್ಲಿ ಪಾತ್ರ ವಹಿಸಿದಾಗ ಯುಗ್ಮಜದ ಆಟೋಸೋಮುಗಳಲ್ಲಿ ವ್ಯತ್ಯಾಸ ಕಂಡುಬರುವುದು ವ್ಯಕ್ತ.

    ಅಗಾಧ ವಿಕಿರಣನಕ್ಕೆ (ಇರ್ರೇಡಿಯೇಶನ್) ಈಡಾಗುವುದು ಮುಂತಾದ ಪ್ರಚಂಡ ಪ್ರಭಾವಗಳಿಂದ ಅಂಡಾಶಯ ಮತ್ತು ವೃಷಣಗಳ ಮಾತೃಕೋಶಗಳ  ಕ್ರೋಮೊಸೋಮುಗಳಲ್ಲಿಯ ಜೀನುಗಳಲ್ಲಿ ವ್ಯತ್ಯಾಸ ಕಂಡುಬರಬಹುದು.  ಅಂಥ ಮಾತೃಕೋಶಗಳಿಂತ ಉತ್ಪತ್ತಿಯಾದ ಅಂಡಾಣು ವೀರ್ಯಾಣುಗಳಲ್ಲೂ ಈ ವ್ಯತ್ಯಾಸ ಕಂಡುಬಂದು ಅವು ರೋಗಿಷ್ಠ ಕೋಶಗಳಾಗಿರುತ್ತವೆ.  ಹಾಗಿದ್ದರೂ ನಿಷೇಚನೆಯಲ್ಲಿ ಅವು ಭಾಗವಹಿಸಬಲ್ಲವು.  ಇಂಥ ಎಲ್ಲ ಬಗೆಯ ವಿಚಿತ್ರ ಲೈಂಗಿಕ ಕೋಶಗಳ ನಿಷೇಚನೆಯಿಂದ ಹುಟ್ಟುವ ಮಕ್ಕಳು ಆರೋಗ್ಯವಂತವಾಗಿರದೆ ಆಜನ್ಮವಾಗಿ ವಿಶಿಷ್ಟ ದೈಹಿಕ, ಮಾನಸಿಕ, ಹಾಗೂ ಲೈಂಗಿಕ ನ್ಯೂನತೆ ವಿಕಲತೆಗಳನ್ನೂ ವಿಚಿತ್ರ ರೋಗಗಳನ್ನೂ ಪಡೆದವವಾಗಿರುತ್ತವೆ.  ಈ ಮಕ್ಕಳಲ್ಲಿ ಅನೇಕರು ದೊಡ್ಡವರಾಗಿ ಸಂತಾನ ಪ್ರಾಪ್ತಿಯ ವಯಸ್ಸಿಗಿಂತಲೂ ಹೆಚ್ಚು ಕಾಲ ಬದುಕಿರಬಲ್ಲರಲ್ಲದೆ ಸಂತಾನವನ್ನೂ ಪಡೆಯಬಲ್ಲವರಾಗಿರುತ್ತಾರೆ.  ಇವರಿಗೆ ಜನಿಸುವ ಮಕ್ಕಳಲ್ಲಿ ಜನ್ಮದಾತರಿಗಿರುವ ನ್ಯೂನತೆ ಅಥವಾ ರೋಗಗಳು ಅನುವಂಶಿಕವಾಗಿಯೇ ಕಂಡುಬರುತ್ತವೆ.  

ವೀರ್ಯದಲ್ಲಿ ಘಿ ಕ್ರೋಮೋಸೋಮ್ ಇರುವ ವೀರ್ಯಾಣುಗಳೂ ಙ ಕ್ರೋಮೋಸೋಮ್ ಇರುವ ವೀರ್ಯಾಣುಗಳು ಸಮಸಮವಾಗಿರುವುದು ವ್ಯಕ್ತ ವಿಷಯ. ಙ ಕ್ರೋಮೋಸೋಮ್ ಘಿ ಕ್ರೋಮೋಸೋಮಿಗಿಂತ ಬಲು ಸಣ್ಣದು. ಆದ್ದರಿಂದ ಙ ಕ್ರೋಮೋಸೋಮಿನ ವೀರ್ಯಾಣು ಘಿ ಕ್ರೋಮೋಸೋಮಿನ ವೀರ್ಯಾಣುವಿಗಿಂತ ಹಗುರ ಮತ್ತು ಬಹುಶಃ ಅದೇ ಕಾರಣದಿಂದ ಹೆಚ್ಚು ಚಟುವಟಿಕೆಯದು. ಸಂಭೋಗಾನಂತರ ವೀರ್ಯಾಣುಗಳು ತಮ್ಮ ಚಲನೆಯಿಂದ ನಿಧಾನವಾಗಿ ಅಂಡನಾಳದ ಒಳಕ್ಕೆ ಪ್ರವೇಶಿಸುತ್ತವೆ ಎಂದು ಹೇಳಿದೆ. ಹಾಗೆ ಪ್ರವೇಶಿಸಿದವುಗಳಲ್ಲಿ ಙ ಕ್ರೋಮೋಸೋಮುಗಳಿರುವ ವೀರ್ಯಾಣುಗಳೇ ಹೆಚ್ಚು ಎಂಬುದು ವ್ಯಕ್ತ. ಪರಿಸ್ಥಿತಿ ಹೀಗಿರುವಾಗ ನಿಷೇಚನೆಯಲ್ಲಿ ಘಿ ಕ್ರೋಮೋಸೋಮ್ ಇರುವ ವೀರ್ಯಾಣುಗಳಿಗಿಂತ ಙ ಕ್ರೋಮೋಸೋಮ್ ಇರುವವೇ ಹೆಚ್ಚು ಸಂದರ್ಭಗಳಲ್ಲಿ ವಿಜಯಿಗಳಾಗುವುದರಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದ ಭ್ರೂಣಗಳು ಹೆಣ್ಣಾಗಿರುವುದಕ್ಕಿಂತ ಗಂಡಾಗಿರುವ ಸಂಭಾವ್ಯತೆಯೇ ಜಾಸ್ತಿ. ಸಾಧಾರಣವಾಗಿ ಪ್ರತಿ 100 ಹೆಣ್ಣು ಭ್ರೂಣಗಳಿಗೆ 130 ಗಂಡು ಭ್ರೂಣಗಳಿರುತ್ತವೆ. ಹೆಣ್ಣು ಶಿಶುಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಗಂಡು ಶಿಶುಗಳು ಹುಟ್ಟಿದರೂ ಸ್ವಭಾವತಃ ಹೆಣ್ಣಿಗಿಂತ ಗಂಡು ದುರ್ಬಲವಾಗಿರುವುದರಿಂದ ಶೈಶವ ಮತ್ತು ಬಾಲ್ಯ ಅವಸ್ಥೆಗಳಲ್ಲಿ ಮೃತಿ ಹೊಂದುವ ಗಂಡುಗಳ ಸಂಖ್ಯೆ ಜಾಸ್ತಿ. ನಿಸರ್ಗದ ಈ ವಿಚಿತ್ರ ವ್ಯಾಪಾರದಿಂದಾಗಿ ಸಮಾಜದಲ್ಲಿ ಯುವಕ ಯುವತಿಯರು ಹೆಚ್ಚು ಕಡಿಮೆ ಸಮಸಂಖ್ಯೆಯಲ್ಲಿರುತ್ತಾರೆ. ಪ್ರಾಯೋಗಿಕವಾಗಿಯೋ ಉದ್ದೇಶಿತವಾಗಿಯೋ ಕೃತಕ ವೀರ್ಯದಾನ ಮಾಡುವ ಸಂದರ್ಭದಲ್ಲಿ ವೀರ್ಯವನ್ನು ಸೆಂಟ್ರಿಫ್ಯೂಜಿನಲ್ಲಿ ಆಡಿಸಿ ಹಗುರ ಕ್ರೋಮೋಸೋಮ್ ಇರುವ ವೀರ್ಯಾಣುಗಳೇ ಪ್ರಧಾನವಾಗಿರುವ ವೀರ್ಯವನ್ನು ಪಡೆದು ಬಳಸಿದರೆ ಜನಿಸುವ ಮಗು ಗಂಡು ಆಗುವ ಸಂಭಾವ್ಯತೆ ಅಧಿಕವಾಗಿರುವುದು ವ್ಯಕ್ತ. ಆದರೆ, ಈ ಕ್ರಮವನ್ನು ಮನುಷ್ಯರಲ್ಲಿ ಅನುಸರಿಸುವುದಾಗಲಿ ಅದು ವಿಶೇಷ ಫಲಯುಕ್ತವಾಗುವುದಾಗಲಿ ಅಪೂರ್ವ. ಗರ್ಭಾವಸ್ಥೆ : ಅಂಡಾಣುವಿನ ನಿಷೇಚನೆ ಆಯಿತೆಂದರೆ ಗರ್ಭಾಂಕುರಾರರ್ಪಣ (ಕನ್ಸೆಷ್ಯನ್) ಆಯಿತೆಂದೇ ಲೆಕ್ಕ. ಏಕೆಂದರೆ ಸಾಧಾರಣವಾಗಿ ಯುಗ್ಮಜದಲ್ಲಿ ತಾನು ಬೆಳೆದು ಜೀವವಾಹಿನಿಯನ್ನೂ ಮುಂದುವರಿಸುವ ಸಾಮಥ್ರ್ಯ ಅಂತರ್ಗತವಾಗಿರುತ್ತದೆ. ಅಂಡನಾಳದಲ್ಲಿ ಗರ್ಭಾಂಕುರಾರ್ಪಣವಾಗುವುದೇ ಸಾಮಾನ್ಯ. ಮುಂದಿನ ಒಂದೆರಡು ದಿವಸಗಳಲ್ಲಿ ಯುಗ್ಮಜ ಗರ್ಭಾಶಯದ ಒಳಕ್ಕೆ ದೂಡಲ್ಪಟ್ಟು ಅಲ್ಲಿ ನಾಟಿಕೊಂಡು ಬೆಳೆಯಲು ಪ್ರಾರಂಭಿಸುತ್ತದೆ. ಇದೊಂದೇ ನೈಸರ್ಗಿಕ ಗರ್ಭಾವಸ್ಥೆ. ಅಪೂರ್ವವಾಗಿ ಯುಗ್ಮಜ ಅಂಡನಾಳದಲ್ಲಿ ನಿಂತು ಅಲ್ಲಿಯೇ ಬೆಳೆಯುವುದುಂಟು. ಇದಕ್ಕೆ ಅಂಡನಾಳ ಗರ್ಭಾವಸ್ಥೆ (ಟ್ಯೂಬಲ್ ಪ್ರೆಗ್ನೆನ್ಸಿ) ಎಂದು ಹೆಸರು. ಹೀಗಲ್ಲದೆ ನಿಷೇಚನೆ ಉದರದಲ್ಲಿ ಆಗಿ ಭ್ರೂಣ ಅಲ್ಲಿಯೇ ನಾಟಿಕೊಂಡು ಬೆಳೆಯುವ ಸ್ಥಿತಿಯೂ ಇದೆ. ಇದು ಉದರಗರ್ಭಾವಸ್ಥೆ (ಅಬ್ಡಾಮಿನಲ್ ಪ್ರೆಗ್ನೆನ್ಸಿ). ಅಂಡಾಶಯದಲ್ಲಿ ಇನ್ನೂ ಇರುವ ಬಲಿತ ಅಂಡಾಣುವಿನ ನಿಷೇಚನೆ ಆಗಿ ಯುಗ್ಮಜ ಅಲ್ಲಿಯೇ ನಿಂತು ಬೆಳೆದರೆ ಅದು ಅಂಡಾಶಯ ಗರ್ಭಾವಸ್ಥೆ (ಓವೇರಿಯನ್ ಪ್ರೆಗ್ನೆನ್ಸಿ). ಇವೆಲ್ಲವೂ ಅನೈಸರ್ಗಿಕ ಗರ್ಭಾವಸ್ಥೆಗಳು. ಸಾಮಾನ್ಯವಾಗಿ ಇವು ಪೂರ್ಣಾವಧಿ ಉಳಿಯದೆ ಗರ್ಭಪಾತದಲ್ಲಿ ಪರ್ಯಾವಸನಗೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ಗರ್ಭಿಣಿಯ ಜೀವಕ್ಕೆ ಅಪಾಯ ಒದಗುವ ಸಂಭವವುಂಟು. ತೀರಾ ಅಪೂರ್ವವಾಗಿ ಇಂಥ ಗರ್ಭಾವಸ್ಥೆಗಳು ಪೂರ್ಣಾವಧಿ ಉಳಿದು ಅದೃಷ್ಟವಶಾತ್ ಸಕಾಲದಲ್ಲಿ ಪತ್ತೆ ಆಗಿ ಯುಕ್ತ ಶಸ್ತ್ರಕ್ರಿಯೆಯಿಂದ ಪ್ರಸವವಾಗಿ ಮಗು ತಾಯಿ ಸುರಕ್ಷಿತವಾಗಿ ಉಳಿಯುವ ಸಂದರ್ಭಗಳೂ ಉಂಟು. ಗರ್ಭಕೋಶದಲ್ಲಿ ಏನಾದರೂ ಪರವಸ್ತು ಇದ್ದರೆ ಯುಗ್ಮಜ ಗರ್ಭಕೋಶ ಭಿತ್ತಿಯಲ್ಲಿ ನಾಟಿ ನೆಲೆ ನಿಲ್ಲಲಾರದು. ಆದ್ದರಿಂದ ಅಂಥ ಸಂದರ್ಭದಲ್ಲಿ ಗರ್ಭದಾರಣೆ ಆಗುವುದಿಲ್ಲ ಈ ಸಂಗತಿಯನ್ನು ತಿಳಿದು ವಂಕಿಯನ್ನು (ಲೂಪ್) ಗರ್ಭಕೋಶದ ಒಳಗೆ ಹುದುಗಿಸಿಟ್ಟು ಸಂತಾನ ನಿರೋಧವನ್ನು ಸಾಧಿಸಬಹುದಾಗಿದೆ.

ಗರ್ಭಾವಸ್ಥೆಯ ವೇಳೆ ಗರ್ಭಿಣಿಯರಲ್ಲಿ ಅನೇಕ ಮಾರ್ಪಾಡುಗಳು ಕಂಡುಬರುತ್ತವೆ. ಗರ್ಭಸ್ಥಿತಿಯ ವಿಚಾರದಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯಗಳು ಐದು : 1. ಗರ್ಭಕಾಲದಲ್ಲಿ ಅಂಡಾಣು ತಯಾರಿಕೆ ಮತ್ತು ಋತುಚಕ್ರ ಸ್ಥಗಿತವಾಗುವುದು ವಾಸ್ತವವಾಗಿ ಗರ್ಭಾಂಕುರಾರ್ಪಣ ಆಗಿದೆ ಎನ್ನುವುದರ ಮೊದಲ ವ್ಯಕ್ತ ಸೂಚನೆ. ಆಗ ನಿರೀಕ್ಷಿತ ರಜಸ್ಸ್ರಾವ ಆಗುವುದಿಲ್ಲ. ಅಲ್ಲದೆ ಮುಂದಕ್ಕೂ ಋತುಚಕ್ರ ಸ್ಥಗಿತವಾಗಿರುವುದು. ಆದ್ದರಿಂದ ಗರ್ಭಕಾಲದ ಘಟನೆಗಳನ್ನು ಗರ್ಭಾಂಕುರಾರರ್ಪಣಕ್ಕೆ ಅದೇ ಹಿಂದೆ ಆದ ರಜಸ್ಸ್ರಾವದ ಮೊದಲ ದಿವಸದಿಂದ ಲೆಕ್ಕ ಹಾಕಿ ಎಣಿಸುವುದು ರೂಢಿ. ಪೂರ್ಣ ಗರ್ಭಕಾಲದಲ್ಲಿ ಅ ದಿವಸದಿಂದ 40 ವಾರಗಳು. ಅಂತ್ಯದಲ್ಲಿ ನಾಲ್ಕಾರು ದಿವಸಗಳು ಮಾತ್ರ ಹಿಂಚು ಮುಂಚಾಗಿ ಪ್ರಸವವಾಗುತ್ತದೆ. ಇದು ಸಾಮಾನ್ಯ. 2. ನಿಷೇಚನವಾದ ವೇಳೆಯಿಂದ ಮುಂದೆ 10 ವಾರಗಳ ಪರ್ಯಂತ ಪೀತಕೋಶ ಸಮೂಹ ಕಾರ್ಯೋನ್ಮುಖವಾಗಿ ಮುಂದುವರಿದು ಅನಂತರ ಅವನತಿಗೊಳ್ಳುತ್ತದೆ. 3. ಬೆಳೆಯುತ್ತಿರುವ ಭ್ರೂಣವನ್ನೂ ತಾಯಿಯ ಗರ್ಭಕೋಶ ಭಿತ್ತಿಯನ್ನೂ ಸೇರಿಸುವ ಹೊಕ್ಕಳು ಬಳ್ಳಿ ಮತ್ತು ಜರಾಯು (ಪ್ಲೆಸೆಂಟ) ಮೈದಳೆದು ಜರಾಯು ಪೀತಕೋಶ ಕಾರ್ಯವನ್ನು ವಹಿಸಿಕೊಳ್ಳುತ್ತದೆ. 4. ಸ್ತನಗಳು ವೃದ್ಧಿಸಿ ಅವುಗಳಲ್ಲಿ ಹಾಲು ಸ್ರವಿಸಲು ಪೂರ್ವಭಾವಿ ಸಿದ್ಧತೆ ಆಗುತ್ತದೆ. 5. ಗರ್ಭಾಶಯದಲ್ಲಿ ಭ್ರೂಣ ಸಹಜವಾಗಿ ಬೆಳೆಯದೇ ನಾನಾ ಕಾರಣಗಳಿಂದ ವ್ಯತ್ಯಾಸಗಳು ಉಂಟಾಗಿ ಹುಟ್ಟುವ ಮಗುವಿನಲ್ಲಿ ದೈಹಿಕ, ಮಾನಸಿಕ ಮತ್ತು ಲೈಂಗಿಕ ನ್ಯೂನತೆ ಮತ್ತು ವಿಕಲತೆಗಳು (ಡಿಫೆಕ್ಟ್ಸ ಆಂಡ್ ಡಿಫಾರ್ಮಿಟೀಸ್) ಕಾಣಬರುತ್ತವೆ. ವಿಚಿತ್ರ ಕ್ರೋಮೋಸೋಮುಗಳಿರುವ ಇಲ್ಲವೇ 22 ಅಥವಾ 24 ಕ್ರೋಮೋಸೋಮುಗಳಿರುವ ಅಂಡಾಣು ವೀರ್ಯಾಣುಗಳ ಸಂಗಮದಿಂದ ನ್ಯೂನತೆ ವಿಕಲತೆಗಳು ಉಂಟಾಗುವುದನ್ನೂ ವಿಚಿತ್ರ ರೋಗಸ್ಥಿತಿಗಳು ಕಂಡುಬರುವುದನ್ನೂ ಇವೆಲ್ಲ ಆನುವಂಶಿಕವಾಗಿರುವ ವಿಚಾರವನ್ನೂ ಹಿಂದೆ ಹೇಳಿದೆ. ಗರ್ಭಿಣಿಗೆ ರೂಬೆಲ್ಲ ರೋಗ ತಗುಲಿದರೆ ಆಕೆ ತಾಲಿಡೊಮೈಡ್ ಮತ್ತು ತತ್ಸಮಾನ ಔಷಧಗಳನ್ನು ಸೇವಿಸಿದ್ದರೆ, ಅಗಾಧ ವಿಕಿರಣಕ್ಕೆ ಈಡಾಗಿದ್ದರೆ, ಇತ್ಯಾದಿ. ಗರ್ಭಾಶಯದಲ್ಲಿ ಬೆಳೆಯುತ್ತಿರುವ ಶಿಶುವಿನಲ್ಲಿ ನ್ಯೂನತೆ ವಿಕಲತೆಗಳು ಉಂಟಾಗಬಹುದು. ಗರ್ಭಸ್ಥ ಶಿಶುವಿನ ಇಲ್ಲವೇ ತಾಯಿಯ ಹಾರ್ಮೋನುಗಳ ಏರುಪೇರುಗಳಿಂದ ಹುಟ್ಟುವ ಮಗುವಿನಲ್ಲಿ ಲೈಂಗಿಕ ವೈಚಿತ್ರ್ಯಗಳು ಕಂಡುಬರುವುದೂ ಉಂಟು. ನಿಷೇಚನೆ ಆದಾಗ ಮುಂದೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬುದು ನಿರ್ಧಾರವಾಗಿ ಹೋಗುತ್ತದೆ ಎಂದು ಹೇಳಿದೆ. ಸಾಧಾರಣವಾಗಿ ಈ ನಿರ್ಧಾರದಂತೆಯೇ ಭ್ರೂಣದೇಹದಲ್ಲಿ ಪ್ರಚನನಾಂಗಗಳು ಮೂಡಿ ವೃದ್ಧಿಯಾಗುತ್ತವೆ. ಆದರೆ ಪ್ರಾರಂಭ ದಿಶೆಯಲ್ಲಿ ಭ್ರೂಣದಿಶೆಯಲ್ಲಿ ಭ್ರೂಣದಲ್ಲಿಯ ಅಂಡಾಶಯ ಮತ್ತು ವೃಷಣ ಎರಡಕ್ಕೂ ಸಮಾನವಾದ ಒಂದೇ ರಚನೆ ಇರುವುದು. ಈ ಅವ್ಯಕ್ತ ಅಂಗ ಅನಂತರ ನಿಷೇಚನ ಸಮಯದಲ್ಲಿಯ ನಿರ್ಧಾರದಂತೆ ವೃಷಣವಾಗಿಯೇ ಅಂಡಾಶಯವಾಗಿಯೇ ವಿಕಸನಗೊಳ್ಳುತ್ತದೆ. ಅಂಡಾಶಯವಾಗಿ ವಿಕಸನಗೊಂಡ ಭ್ರೂಣದಲ್ಲಿ ಅಂಡನಾಳ ಗರ್ಭಕೋಶಗಳು ಸೀಳುಭಾಗವುಳ್ಳ ಬಾಹ್ಯ ಜನನಾಂಗಗಳು ಮೂಡಿ ವೃದ್ಧಿ ಆಗುತ್ತವೆ. ವೃಷಣವಾಗಿ ವಿಕಾಸನವಾದರೆ ಈ ಭ್ರೂಣ ವೃಷಣ ಹಾರ್ಮೋನನ್ನು ಸ್ರವಿಸುತ್ತದೆ. ಹಾರ್ಮೋನಿನ ಪ್ರಭಾವದಿಂದ ಗರ್ಭಕೋಶ, ಭಾಗದ ಸೀಳು ಇತ್ಯಾದಿಗಳ ರಚನೆ ಆಗುವುದು ನಿಂತು ವೃಷಣ ಕೋಶಗಳ ಮತ್ತು ಶಿಶ್ನದ ರಚನೆ ಆಗುತ್ತದೆ. ಕಾರಣಾಂತರದಿಂದ ಭ್ರೂಣದ ವೃಷಣ ತತ್ಸಂಬಂಧವಾದ ಹಾರ್ಮೋನನ್ನು ಸ್ರವಿಸದಿದ್ದರೆ ಆ ಭ್ರೂಣದಲ್ಲಿ ಸ್ತ್ರೀಯ ಬಾಹ್ಯ ಜನನಾಂಗಗಳೂ, ಗರ್ಭಕೋಶಗಳೂ ಮೂಡುತ್ತವೆ. ಹೀಗೆ ಹುಟ್ಟಿದ ಮಗು ಉಭಯಲಿಂಗಿ (ಹರ್ಮಫ್ರೊಡೈಟ್) ಆಗಿರುತ್ತದೆ. ಇದು ಒಂದು ರೀತಿಯ ಅರ್ಧನಾರಿ-ವೃಷಣ ಮತ್ತು ಸೀಳುಭಾಗವಿರುವ ವ್ಯಕ್ತಿ. ಇದೇ ರೀತಿ ನಿಷೇಚನ ಸಮಯದಲ್ಲಿಯ ನಿರ್ಧಾರದಂತೆ ಭ್ರೂಣದಲ್ಲಿ ಅಂಡಾಶಯ ವಿಕಸಿಸುತ್ತಿರುವ ವೇಳೆ ಭ್ರೂಣ ಪುರುಷ ಹಾರ್ಮೋನಿನ (ಟೆಸ್ಟೊಸ್ಟಿರೋನ್) ಪ್ರಭಾವಕ್ಕೆ ಈಡಾದರೆ ಮೂಡುವ ಬಾಹ್ಯ ಜನನಾಂಗಗಳು ಪುರುಷರ ಜನನಾಂಗಗಳು ಆಗಿದ್ದು ಹುಟ್ಟುವ ಇಂಥ ಉಭಯಲಿಂಗಿಯ ಉದರದಲ್ಲಿ ಅಂಡಾಶಯಗಳು ಹೊರಗೆ ಸಣ್ಣ ಶಿಶ್ನದಂತೆ ಕಾಣುವ ಭಗಾಂಕುರವೂ ಅದರ ಮೂಲಕ ಸಾಗುವ ಮೂತ್ರನಾಳ ಹಾಗೂ ಅದರ ದ್ವಾರವೂ ಕಂಡುಬರುತ್ತವೆ. ಇದೊಂದು ತೆರೆನಾದ ಅರ್ಧಪುರುಷ. ಹೀಗೆ ಪ್ರಭಾವಿಸುವ ಟೆಸ್ಟೊಸ್ಟೀರೋನ್ ಭ್ರೂಣದಲ್ಲೇ ಉತ್ಪತ್ತಿ ಆಗಿರಬಹುದು. ಆದರೆ ಹಚ್ಚು ಸಾಮಾನ್ಯವಾಗಿ ತಾಯಿಯ ರಕ್ತದಿಂದ ವರ್ಗವಾಗಿ ಭ್ರೂಣ ದೇಹಕ್ಕೆ ಒದಗುವುದಾಗಿದೆ. ಗರ್ಭಿಣಿಯ ದೇಹಕ್ಕೆ ಟೆಸ್ಟೊಸ್ಟೀರೋನನ್ನು ಚಿಕಿತ್ಸಾಕ್ರಮವಾಗಿಯೋ ಬೇರೇನೋ ಕಾರಣಕ್ಕಾಗಿಯೋ ಚುಚ್ಚುಮದ್ದಾಗಿ ಕೊಟ್ಟಿದ್ದರೆ ಹೀಗೆ ಉಭಯಲಿಂಗಿ ಹುಟ್ಟುವ ಅಪಾಯ ಉಂಟು.

ನಿಷೇಚನೆ ಆದ ಬಳಿಕ ಗರ್ಭಾಶಯದಲ್ಲಿ ನಾಟಿಕೊಂಡ ಯುಗ್ಮಜ ವಿಭಜನೆ ಬೆಳವಣಿಗೆ, ವಿಕಸನ ಕ್ರಮಗಳಿಂದ ಒಂದು ಶಿಶುವಾಗುವುದು ಸಹಜ. ಆದರೆ, ಅಪೂರ್ವವಾಗಿ ಯುಗ್ಮಜದ ಮೊದಲ ವಿಭಜನೆಯಲ್ಲಿ ಫಲಿಸಿದ 2 ಕೋಶಗಳು ಸ್ವತಂತ್ರವಾಗಿ ವಿಭಜಿಸಿ ಬೆಳೆಯುತ್ತ ಬೇರೆ ಬೇರೆ ಶಿಶುಗಳಾಗಿಯೇ ಗರ್ಭಕೋಶದಲ್ಲಿ ಇರಬಹುದು. ಇದು ಅವಳಿ ಗರ್ಭದ ಒಂದು ಕ್ರಮ. ಎರಡು ಶಿಶುಗಳೂ ಇಂಥ ಸಂದರ್ಭದಲ್ಲಿ ಒಂದೇ ಲಿಂಗದವಾಗಿರುವುದೂ ಒಂದೇ ರೀತಿಯ ಆನುವಂಶಿಕ ಗುಣಗಳನ್ನು ಪಡೆದಿರುವುದು ಸತ್ಯ. ಆದ್ದರಿಂದ ಇವನ್ನು ಅಭಿನ್ನ ಅವಳಿಗಳು (ಐಡೆಂಟಿಕಲ್ ಟ್ವಿನ್ಸ್, ಯೂನಿಓವ್ಯುಲರ್ ಟ್ವಿನ್ಸ್) ಎಂದು ಕರೆಯುತ್ತಾರೆ. ತೀರ ಅಪೂರ್ವ ಸಂದರ್ಭಗಳಲ್ಲಿ ಇಂಥ ಅವಳಿ ಮಕ್ಕಳು ಬೇರೆ ಬೇರೆ ಆಗಿರದೆ ಮುಂಡಭಾಗದಲ್ಲಿ ಅಲ್ಪವಾಗಿಯೇ ಅಧಿಕವಾಗಿಯೇ ಜಂಟಿಯಾಗಿರುವುದು ಉಂಟು : ಮತ್ತು ಅದೇ ರೀತಿ ಜನಿಸಿ ಜೀವಿಸುವುದೂ ಉಂಟು. ಇವಕ್ಕೆ ಕೂಡುಮೈ ಅವಳಿಗಳು (ಸೈಯಮೀಸ್ ಟ್ವಿನ್ಸ್) ಎಂದು ಹೆಸರು. ಅವಳಿ ಗರ್ಭಸ್ಥಿತಿಗೆ ಇನ್ನೊಂದು ಕಾರಣವಿದೆ. ಅಂಡಾಶಯದಲ್ಲಿ ಪ್ರತಿ ಸಾರಿಯೂ ಒಂದೇ ಅಂಡಾಣು ಬಿಡುಗಡೆ ಆಗುವುದು ಸಹಜ ನಿಯಮವಾಗಿದ್ದರೂ ಕಾರಣಾಂತರದಿಂದ ಅಪೂರ್ವವಾಗಿ ಎರಡು ಅಂಡಾಣುಗಳು ಬಿಡುಗಡೆ ಆಗಬಹುದು. ಒಂದೇ ಅಂಡಾಶಯದಿಂದ ಎರಡು ಇಲ್ಲವೇ ಅಂಡಾಶಯಗಳಿಂದಲೂ ಒಂದೊಂದು ಬಿಡುಗಡೆಯಾಗಿ (ಸಹಜವಾಗಿಯೇ ಒಂದೇ ಅಂಡನಾಳದ ಇಲ್ಲವೇ ಎರಡು ಅಂಡನಾಳಗಳ ಮಾರ್ಗವಾಗಿ) ಗರ್ಭಕೋಶದೆಡೆಗೆ ಗಮಿಸುತ್ತವೆ. ಎರಡೂ ನಿಷೇಚನೆಗೊಂಡು ಗರ್ಭಾಶಯದ ಬೇರೆ ಬೇರೆ ಸ್ಥಳಗಳಲ್ಲಿ ನಾಟಿಕೊಂಡು ಬೇರೆ ಬೇರೆ ಶಿಶುಗಳಾಗಿ ವರ್ಧಿಸುತ್ತವೆ. ನಿಷೇಚನೆ ಬೇರೆ ಬೇರೆ ಬಗೆಯ ವೀರ್ಯಾಣುಗಳಿಂದ ಆಗಬಹುದಾದ ಸಾಧ್ಯತೆ ಇರುವುದರಿಂದ ಫಲಿಸುವ ಭ್ರೂಣಾಣುಗಳು, ಅರ್ಥಾತ್ ಶಿಶುಗಳೂ ಬೇರೆ ಬೇರೆ ಲಿಂಗಗಳನ್ನೂ ಅನುವಂಶಿಕ ಲಕ್ಷಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನೂ ಪ್ರದರ್ಶಿಸುವ ಸಂಭಾವ್ಯತೆ ಉಂಟು. ಅಂದರೆ ಈ ಅವಳಿಗಳು ಭಿನ್ನ ಅವಳಿಗಳಾಗಿರುತ್ತವೆ. ಎರಡು ಅಂಡಾಣುಗಳ ಬದಲು ಮೂರು ಅಂಡಾಣುಗಳ ಬಿಡುಗಡೆ ಆದರೆ ತ್ರಿವಳಿಗಳು ವಗೈರೆಯಾಗಿ ಮಕ್ಕಳು ಹುಟ್ಟುವ ಸಾಧ್ಯತೆ ಇರುವುದು ವ್ಯಕ್ತ.

ಗರ್ಭಸ್ಥಕಾಲದಲ್ಲಿ ಶಿಶುವಿನ ಲಿಂಗ ನಿರ್ಧಾರವಾಗುವುದನ್ನೂ ಅದರಂತೆಯೇ ಗಂಡಾಗಿಯೇ ಹೆಣ್ಣಾಗಿಯೇ ವಿಕಸನವಾಗುವುದನ್ನೂ ಅದರಲ್ಲಿ ಏರುಪೇರುಗಳಾಗುವುದನ್ನೂ ವಿವರಿಸಿದೆ. ಹುಟ್ಟಲಿರುವ ಮಗು ಗಂಡೊ ಹೆಣ್ಣೊ ಎಂದು ಅದು ಹುಟ್ಟುವ ತನಕ ಕಾದು ನೋಡಬೇಕಾಗಿಲ್ಲ. ಗರ್ಭ ಕಾಲದಲ್ಲಿ ಗರ್ಭಾಶಯದಿಂದ ಭ್ರೂಣಾವರ್ಣ ದ್ರವವನ್ನು (ಆಮ್ನಿಯಾಟಿಕ್ ಫ್ಲೂಯಿಡ್) ಸೂಜಿಮದ್ದಿನ ರೀತಿಯಲ್ಲಿ ತೆಗೆದು ಅದರಲ್ಲಿ ತೇಲಾಡುತ್ತಿರುವ ಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿ ಗರ್ಭಸ್ಥ ಶಿಶುವಿನ ಲಿಂಗ ನಿರ್ಧಾರ ಮಾಡಬಹುದು. ಸ್ತ್ರೀ ಕೋಶಗಳಲ್ಲೆಲ್ಲ 22 ಜೊತೆ +ಘಿಘಿ ಕ್ರೋಮೋಸೋಮುಗಳೂ ಪುರುಷ ಕೋಶಗಳಲ್ಲೆಲ್ಲ 22 ಜೊತೆ +ಘಿಙ ಕ್ರೋಮೋಸೋಮುಗಳೂ ಇರುವುದು ಸರಿಯಷ್ಟೆ. ಸ್ತ್ರೀ ಕೋಶಗಳಲ್ಲಿ ಎರಡು ಘಿ ಕ್ರೊಮೋಸೋಮುಗಳಿರುವುದರಿಂದ ಅವು ಅಣುಕೇಂದ್ರದ (ನ್ಯೂಕ್ಲಿಯಸ್) ಭಿತ್ತಿಯಲ್ಲಿ ಒಂದು ಚುಕ್ಕೆಯನ್ನಿಟ್ಟಂತೆ ವ್ಯಕ್ತವಾಗುತ್ತವೆ ಎಂಬ ವಿಷಯ ಸುಮಾರು 1950 ರ ದಶಕದಲ್ಲಿ ಪತ್ತೆಯಾಯಿತು. ಈ ಚುಕ್ಕೆಗೆ ಲೈಂಗಿಕ ವರ್ಣಕಾಯ (ಸೆಕ್ಸ್ ಕ್ರೋಮಾಟಿನ್) ಎಂದು ಹೆಸರು. ಸ್ತ್ರೀ ದೇಹದ ಎಲ್ಲ ಕೋಶಗಳಲ್ಲಿಯೂ ಲೈಂಗಿಕ ವರ್ಣಕಾಯ ವ್ಯಕ್ತವಾಗಬೇಕಾಗಿದ್ದರೂ ಕೆನ್ನೆಯ ಒಳಪೊರೆ ಕೋಶಗಳಲ್ಲಿ ಅದು ಸುಲಭವಾಗಿ ಪತ್ತೆಯಾಗುತ್ತದೆ. ಪುರುಷ ಕೋಶಗಳಲ್ಲಿ ಹೀಗೆ ಎರಡು ಘಿ ಕ್ರೋಮೋಸೋಮುಗಳಿಲ್ಲದೆ ಒಂದೇ ಇರುವುದರಿಂದ ಅವುಗಳಲ್ಲಿ ಲೈಂಗಿಕ ವರ್ಣಕಾಯ ಕಾಣಿಸುವುದಿಲ್ಲ. ಅಂದರೆ ಸ್ತ್ರೀಯರು ಲೈಂಗಿಕ ವರ್ಣಕಾಯಯುಕ್ತರು (ಸೆಕ್ಸ್ ಕ್ರೋಮಾಟಿನ್ ಪಾಸಿಟಿವ್), ಪುರುಷರು ಲೈಂಗಿಕವರ್ಣಕಾಯಲುಪ್ತರು (ಸೆಕ್ಸ್ ಕ್ರೋಮಾಟಿನ್ ನೆಗೆಟಿವ್). ಪರಿಸ್ಥಿತಿ ಇಷ್ಟು ನಿಚ್ಚಳವಾಗಿದೆಯಾಗಿ ಸೂಕ್ಷ್ಮದರ್ಶಕದಲ್ಲಿ ಕೋಶವನ್ನು ವೀಕ್ಷಿಸಿ ಅದು ಪುರಷನದೇ ಸ್ತ್ರೀಯದೇ ಎಂದು ಪತ್ತೆ ಮಾಡಬಹುದು. ಗರ್ಭಸ್ಥ ಸ್ಥಿತಿಯಲ್ಲಿ ಭ್ರೂಣದ ದೇಹದಿಂದ ಕೋಶಗಳು ಹೊರಬಿದ್ದು ಭ್ರೂಣಾವರ್ಣದ್ರವದಲ್ಲಿ ತೇಲಾಡುತ್ತಿರುವ ಸಂಗತಿ ಕೂಡ ಹಲವು ದಶಕಗಳಿಂದ ತಿಳಿದುಬಂದಿರುವ ವಿಷಯ. ಈ ಕೋಶಗಳನ್ನು ಪರೀಕ್ಷಿಸಿ ಭ್ರೂಣದ ಲಿಂಗವನ್ನು ಪತ್ತೆ ಮಾಡಬಹುದೆಂಬುದು ಕೂಡ ವ್ಯಕ್ತ.

ಪ್ರಸವ : ಗರ್ಭಾವಸ್ಥೆ 40 ವಾರಗಳು ( ನಾಲ್ಕಾರು ದಿವಸಗಳು ಸಲ್ಲುವಾಗ ಕೊನೆಗೊಳ್ಳುತ್ತದೆ. ಆಗ ಶಿಶುಜನನ ಪ್ರಸವ ಕ್ರಮದಿಂದ ಆಗುತ್ತದೆ. ಬಹುಶಃ ಜರಾಯು ಗರ್ಭಕೋಶ ಭಿತ್ತಿಯಿಂದ ಛಿದ್ರಿಸಿ ಬೇರ್ಪಡುವುದೇ ಇದರ ಮುಖ್ಯ ಕಾರಣ ಎಂದು ತೋರುತ್ತದೆ. 40 ವಾರಗಳ ಆಚೀಚಿನ ಕೆಲವು ದಿವಸಗಳಲ್ಲಿ ಪ್ರಸವವಾಗುವುದು ನೈಸರ್ಗಿಕ ಮತ್ತು ಸಾಮಾನ್ಯ. ಕಾರಣಾಂತರಗಳಿಂದ ಆತುರ ಪ್ರಸವ ಇಲ್ಲವೇ ವಿಳಂಬ ಪ್ರಸವ ಆಗಬಹುದು. ಗರ್ಭಾವಸ್ಥೆಯ 28 ವಾರಗಳೂ ಕಳೆಯುವ ಮುಂಚೆಯೇ ಗರ್ಭಸ್ಥ ಭ್ರೂಣ (ಎಂಬ್ರಯೊ) ಇಲ್ಲವೇ ಶಿಶು (ಫೀಟಸ್) ಹೊರಬಂದರೆ ಅದನ್ನು ಅನುಕ್ರಮವಾಗಿ ಗರ್ಭಪಾತ (ಅಬಾರ್ಶನ್) ಇಲ್ಲವೇ ಮೈಯಿಳಿಯುವುದು (ಮಿಸ್ ಕ್ಯಾರೇಜ್) ಎನ್ನುತ್ತಾರೆ. 28 ನೆಯ ವಾರ ಕಳೆದ ಬಳಿಕ ಹುಟ್ಟುವ ಶಿಶು ಮಾತ್ರ ಜೀವಂತವಾಗಿ ಮುಂದುವರಿದು ಬೆಳೆಯುವ ಸಾಮಥ್ರ್ಯ ಪಡೆದಿರುತ್ತದೆ. ಸ್ವಾಭಾವಿಕವಾಗಿಯೇ 28-30 ವಾರಗಳ ತರುವಾಯ ಹುಟ್ಟುವ ಮಗುವು ದುರ್ಬಲವೂ ಆಗಿರುತ್ತದೆ. ಅಂಥ ಎಳೆಮಗುವಿನ ಸಂರಕ್ಷಣೆಯಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. 40 ವಾರಗಳ ತರುವಾಯ ಹುಟ್ಟುವ ಮಗು ಸ್ವಾಭಾವಿಕವಾಗಿಯೇ ಹೆಚ್ಚು ಬೆಳೆದು ಬಲಿತಿರುವುದಾಗಿ ಅಂಥ ಮಗುವಿನ ಪ್ರಸವ ಕಷ್ಟವಾಗುವುದಿದೆ. ಕೆಲವು ಸಂದರ್ಭಗಳಲ್ಲಂತೂ ಉದರ ಶಸ್ತ್ರಕ್ರಿಯೆಯಿಂದ ಪ್ರಸವವನ್ನು ಜರುಗಿಸಬೇಕಾಗುತ್ತದೆ. ಅವಳಿ ತ್ರಿವಳಿ ಮತ್ತು ಬಹುವಳಿ ಮಕ್ಕಳ ಜನನದಲ್ಲಿ ಒಂದು ಮಗು ಹುಟ್ಟಿದ ಒಂದೆರಡು ಅಥವಾ ಹೆಚ್ಚು ಗಂಟೆಗಳ ಬಳಿಕ ಮುಂದಿನ ಮಗು ಜನಿಸುವುದಿದೆ. ಇಲ್ಲೂ ಪ್ರಸವ ತೊಡಕಾಗಿದ್ದು ತಾಯಿ ಅಥವಾ ಮಗುವಿನ ಜೀವಕ್ಕೆ ಅಪಾಯ ಒದಗುವಂತಿದ್ದರೆ ಶಸ್ತ್ರಕ್ರಿಯೆಯಿಂದ ಪ್ರಸವ ಮಾಡಿಸಬೇಕಾಗುತ್ತದೆ.

ಗರ್ಭಾವಸ್ಥೆಯಲ್ಲಿ ಗರ್ಭಕೋಶ ಅಗಾಧವಾಗಿ ಬೆಳೆದು (ಸುಮಾರು 30 ಸೆಂ.ಮೀ.) ಗರ್ಭಾಸ್ಥ ಶಿಶುವಿಗೆ ಪೋಷಕ ಹಾಗೂ ಸಂರಕ್ಷಕ ಕವಚವಾಗಿರುತ್ತದೆ. ಪ್ರಸವಾನಂತರ ಗರ್ಭಕೋಶ ಸುಮಾರು 10-12 ಸೆಂ.ಮೀ.ನಷ್ಟು ಗಾತ್ರಕ್ಕೆ ಕುಗ್ಗುತ್ತದೆ. ಪ್ರಸವಾರಂಭದಲ್ಲಿ ಛಿದ್ರಿಸಿ ಬೇರ್ಪಟ್ಟಿರುವ ಜರಾಯು ಶಿಶುಜನನವಾದ 10-20 ಮಿನಿಟ್ಟುಗಳ ಬಳಿಕ ಹೊರದೂಡಲ್ಪಡುತ್ತದೆ. ಅಲ್ಲಿಯ ತನಕವೂ ಗರ್ಭಾಶಯದಿಂದ ರಕ್ತಸ್ರಾವವಾಗುತ್ತಿರುತ್ತದೆ. ಜರಾಯುವಿನ ಪ್ರಸವ ಕೂಡ ಆದ ತರುವಾಯ ಗರ್ಭಾಶಯ ಇನ್ನೂ ಕುಗ್ಗಿ ರಕ್ತಸ್ರಾವ ನಿಲ್ಲುತ್ತದೆ. ಆದರೂ ಅದು ಗರ್ಭಾವಸ್ಥೆಯ ಪೂರ್ವಗಾತ್ರಕ್ಕೆ ಕುಗ್ಗಿರುವುದಿಲ್ಲ. ಹಾಗೆ ಕುಗ್ಗುವುದಕ್ಕೆ ಇನ್ನೂ ಕೆಲವು ವಾರಗಳೇ ಬೇಕಾಗಬಹುದು. ಅಲ್ಲಿಯ ತನಕ ಅಲ್ಪಸ್ವಲ್ಪ ರಕ್ತಮಿಶ್ರದ್ರವ ಯೋನಿಯ ಮೂಲಕ ವಿಸರ್ಜಿತವಾಗುತ್ತಿರುತ್ತದೆ. ಈ ದ್ರವಕ್ಕೆ ಪ್ರಸವೋತ್ತರ ಸ್ರಾವ (ಲೋಕಿಯ) ಎಂದು ಹೆಸರು. ಹಲವಾರು ವಾರಗಳ ಬಳಿಕ, ಗರ್ಭಾಶಯ ಕುಗ್ಗಬಲ್ಲಷ್ಟೂ ಕುಗ್ಗಿದ ಮೇಲೆ, ಈ ಸ್ರಾವ ಕೈದಾಗುತ್ತದೆ. ಒಂದು ಸಲ ಗರ್ಭಸ್ಥವಾದ ಗರ್ಭಾಶಯ ಎಷ್ಟೇ ಕುಗ್ಗಿದರೂ ಕನ್ಯಾವಸ್ಥೆಯಲ್ಲಿಯ ಗಾತ್ರಕ್ಕಿಂತ ಕೊಂಚ ದೊಡ್ಡದಾಗಿಯೇ ಉಳಿದಿರುತ್ತದೆ.

ಹಾಲುಡಿಸುವಿಕೆ : ಮನುಷ್ಯರಲ್ಲಿ ನವಜಾತ ಶಿಶು ಆಹಾರ ಪೂರೈಕೆಯ ವಿಷಯದಲ್ಲಿ ತೀರಾ ನಿಸ್ಸಹಾಯಕ ಎಂದು ಹೇಳಿದೆ. ಆದರೆ, ಮಗು ಹುಟ್ಟಿದ ಕೂಡಲೇ ತಾಯಿ ಅದಕ್ಕೆ ಹಾಲೂಡಲು ಸಮರ್ಥಳಾಗಿರುವುದಿಲ್ಲ. ಗರ್ಭಾವಸ್ಥೆಯ ವೇಳೆ ಆಕೆಯ ಸ್ತನಗಳಲ್ಲಿ ಹಾಲನ್ನು ಸ್ರವಿಸಲು ಪೂರ್ವಸಿದ್ಧತೆಗಳಿರುತ್ತವೆಯೇ ಹೊರತು ಪ್ರತ್ಯಕ್ಷವಾಗಿ ಅವು ಸ್ರವಿಸಲಾರವು. ಆ ಸಾಮಥ್ರ್ಯ ಬರಬೇಕಾದರೆ ಪ್ರಸವಾನಂತರ 12-24 ಗಂಟೆಗಳು ಕಳೆಯಬೇಕು. ಹುಟ್ಟಿದ 2-4 ಗಂಟೆಗಳ ಮೇಲೆ ಗ್ಲೂಕೋಸ್ ನೀರು, ಜೇನು ಕದಡಿದ ನೀರು ಮುಂತಾದವನ್ನು ಆಗಾಗ್ಗೆ ಒಂದೆರಡು ತೊಟ್ಟು ಕೊಡುತ್ತ ತಾಯಿಗೆ ಹಾಲು ಬರುವ ತನಕ ನೋಡಿಕೊಂಡಿರಬೇಕು. ಪ್ರಸವಾನಂತರ 8-10 ಗಂಟೆಗಳಾದ ಮೇಲೆ ತಾಯಿಯ ಸ್ತನದಲ್ಲಿ ಇನ್ನೂ ಹಾಲು ಬರದೇ ಇದ್ದರೂ ಮಗುವಿಗೆ ಮೊಲೆಯುಡಿಸಬೇಕು. ಬಾಯಿಗೆ ಸ್ತನಾಗ್ರದಂತೆ ಏನು ಸಿಕ್ಕಿದರೂ ಅದನ್ನು ಚೀಪುವ ಚಾಪಲ್ಯ ಮಗುವಿಗೆ ಹುಟ್ಟಿದಾಗಿನಿಂದಲೇ ಇರುತ್ತದೆ. ಹಾಲು ಇನ್ನೂ ಬಂದಿಲ್ಲದೇ ಇದ್ದರೂ ಮೊಲೆಯುಡಿಸುವುದರಿಂದ ಸ್ತನದಲ್ಲಿ ಹಾಲು ತುಂಬಲು ತುಂಬಿಕೊಂಡ ಹಾಲು ಸ್ತನಾಗ್ರದಿಂದ ತಾನಾಗಿಯೇ ಹೊರಸೂಸಲೂ ಸಹಾಯಕವಾಗುತ್ತದೆ. ಮಗು ಚೀಪಿ ಹಾಲನ್ನು ಸೆಳೆದುಕೊಳ್ಳುವ ಶ್ರಮ ಇದರಿಂದ ಬಲುಮಟ್ಟಿಗೆ ಕಡಿಮೆ ಆಗುತ್ತದೆ. ಅಲ್ಲದೆ, ತಾಯಿಯಲ್ಲಿ ಪ್ರಸವಾನಂತರ ಸಹಜ ಗಾತ್ರಕ್ಕೆ ಇನ್ನೂ ಕುಗ್ಗದೆ ಇರುವ ಗರ್ಭಾಶಯ ಕುಗ್ಗುವುದಕ್ಕೂ ಮೊಲೆಯುಡಿಸುವುದು ಸಹಕಾರಿ. ಮಗುವಿಗೆ ಮೊಲೆಯುಡಿಸುತ್ತಲೇ ಇದ್ದರೆ ಸ್ತನದಲ್ಲಿ ಹಾಲು ಸ್ರಾವವಾಗುತ್ತಲೆ ಇರುತ್ತದೆ. ಮೊಲೆಯುಡಿಸುವುದನ್ನು ಕೈದು ಮಾಡಿದರೆ ಸ್ತನದಲ್ಲಿ ಹಾಲಿನ ಸ್ರಾವ ನಿಂತೇ ಹೋಗುತ್ತದೆ. ಅಂದರೆ ಎಷ್ಟು ಕಾಲ ಹಾಲುಡಿಸುತ್ತಿದ್ದರೂ ಅಷ್ಟು ಕಾಲವೂ ಸ್ತನದಲ್ಲಿ ಹಾಲು ಸ್ರವಿಸುತ್ತಿರುವುದೆಂದು ಹೇಳುವುದು ತಪ್ಪು. ಸಾಮಾನ್ಯವಾಗಿ 6-8 ತಿಂಗಳು ಅಥವಾ ಒಂದು ವರ್ಷ ಕಾಲ ಹೀಗೆ ಹಾಲು ಸ್ರವಿಸಲ್ಪಡುವುದು ನಿಜ. ಅನಂತರ ಮೊಲೆಯುಡಿಸುತ್ತಿದ್ದರೂ ಅದು ಕ್ರಮೇಣ ಕಡಿಮೆಯಾಗಿ ಕೊನೆಗೆ ನಿಂತು ಹೋಗುತ್ತದೆ. ಸಹಜವಾಗಿಯೇ ಮಗು ಮೊಲೆ ಕುಡಿಯುವುದನ್ನೂ ಬಿಡುತ್ತದೆ. ಇಷ್ಟು ಹೊತ್ತಿಗೆ ಅದಕ್ಕೆ ಹುಯ್ಯು ಹಾಲು ಕೊಡಲು ಪ್ರಾರಂಭಿಸುವುದರಿಂದ ಮೊಲೆಯೂಡಿಸುವ ಅಭ್ಯಾಸ ತಪ್ಪಲು ಕಷ್ಟವಾಗುವುದಿಲ್ಲ.

ಮಗುವಿಗೆ ಮೊಲೆಯೂಡಿಸುತ್ತಿರುವಷ್ಟು ಕಾಲ ಅಂಡಾಶಯದಲ್ಲಿ ಅಂಡಾಣು ತಯಾರಿ ಸ್ಥಗಿತವಾಗಿರುತ್ತದೆ. ರಜಸ್ಸ್ರಾವವೂ ಅಷ್ಟೆ. ಹಾಲೂಡಿಸುವುದನ್ನು ನಿಲ್ಲಿಸಿದ ಮೇಲೆ ಅರ್ಥಾತ್ ಸ್ತನದ ಕಾರ್ಯಕ್ರಮ ಸ್ಥಗಿತವಾದ ಮೇಲೆ - ಸಾಮಾನ್ಯವಾಗಿ ಪ್ರಸವಾನಂತರ ಸುಮಾರು ತಿಂಗಳುಗಳು - ಪುನಃ ಅಂಡಾಣು ತಯಾರಿಯೂ ರಜಸ್ರಾವವೂ ಪ್ರಾರಂಭವಾಗಿ ಇನ್ನೊಂದು ಗರ್ಭಾವಸ್ಥೆಯ ತನಕ ಚಕ್ರೀಯವಾಗಿ ಮುಂದುವರಿಯುತ್ತವೆ. ಚಕ್ರ ಪುನರಾರಂಭ ನಂತರ ತಯಾರಾದ ಮೊದಲ ಅಂಡಾಣುವೇ ನಿಷೇಚನೆಗೊಂಡರೆ ರಜಸ್ಸ್ರಾವವಾಗದೆಯೇ ಮುಂದಿನ ಗರ್ಭಾವಸ್ಥೆ ಪ್ರಾರಂಭವಾಗುತ್ತದೆ. ಈ ಗರ್ಭಾವಸ್ಥೆಯ ಖಚಿತ ಗುರುತು ಸಿಕ್ಕುವುದಿಲ್ಲವಾಗಿ ಇದರ ಕಾಲಗಣನೆಯನ್ನು ಬೇರೆ ರೀತಿಯಿಂದ ಸ್ಥೂಲವಾಗಿ ಮಾತ್ರ ಮಾಡಬಹುದಾಗಿದೆ. ಕೆಲವರಲ್ಲಿ ನೈಸರ್ಗಿಕವಾಗಿಯೇ ಪ್ರಸವಾ ನಂತರ 2-3 ತಿಂಗಳಲ್ಲೇ ಅಂಡಾಣು ತಯಾರಿ ಆಗಬಹುದು. ಇಂಥವರಲ್ಲಿ ರಜಸ್ಸ್ರಾವವೇ ಆಗದೆ ಮುಂದಿನ ಗರ್ಭಾವಸ್ಥೆ ಪ್ರಾರಂಭವಾಗಬಹುದಾದ್ದರಿಂದ ಪ್ರಸವಾ ನಂತರ ವರ್ಷ ಕಳೆಯುವಷ್ಟರಲ್ಲಿ ಇನ್ನೊಂದು ಪ್ರಸವವೇ ಆಗುವ ಸಂಭವ ಉಂಟು. ಪ್ರಸವಾನಂತರ ಮಾಸಿಕ ಚಕ್ರ ಪುನರಾರಂಭನಂತರ ಇಲ್ಲವೇ ಪುನಃ ಗರ್ಭಾವಸ್ಥೆ ಕಂಡುಬಂದಮೇಲೆ ಸ್ತನದಲ್ಲಿ ಹಾಲಿನ ಸ್ರವನ ಕಡಿಮೆ ಆಗುತ್ತ ಶೀಘ್ರದಲ್ಲಿ ನಿಂತು ಹೋಗುವುದು ಸಾಮಾನ್ಯ. ಸ್ತನ ಹಾಗೂ ಅಂಡಾಶಯ ಗರ್ಭಕೋಶಗಳ ಕಾರ್ಯಕ್ರಮಗಳು ಈ ರೀತಿ ಒಂದಕ್ಕೊಂದು ಕೋಣಿಕೆಗೊಂಡಿವೆ. ಪ್ರಜನನ ಕ್ರಿಯೆಯ ನಿಯಂತ್ರಣ : ಪಿಟ್ಯೂಯಿಟರಿ ಗ್ರಂಥಿ ಹಾಗೂ ಅಂಡಾಶಯ ಅಥವಾ ವೃಷಣ ಇವುಗಳಿಂದ ಸ್ರವಿಸಲ್ಪಡುವ ಹಾರ್ಮೋನುಗಳಿಂದ ಪ್ರಜನನ ಕ್ರಿಯೆಯಲ್ಲಿ ವಿವಿಧ ಅಂಗಗಳು ವಿವಿಧ ಘಟ್ಟಗಳಲ್ಲಿ ಪರಸ್ಪರ ಪ್ರಭಾವ ಬೀರುವುದೂ ಅವುಗಳ ಕಾರ್ಯಕ್ರಮಗಳು ವ್ಯವಸ್ಥಿತ ರೀತಿಯಲ್ಲಿ ನಿಯಂತ್ರಣಕ್ಕೆ ಒಳಪಟ್ಟಿರುವುದೂ ಸಾಧ್ಯವಾಗಿದೆ. ವೀರ್ಯಾಣು ಮತ್ತು ಅಂಡಾಣು ಉತ್ಪನ್ನವಾಗುವಾಗಲೇ ಹಾರ್ಮೋನುಗಳ ಸ್ರವನವೂ ಕಂಡುಬರುತ್ತದೆ. ಅಂದರೆ ವೃಷಣ ಮತ್ತು ಅಂಡಾಶಯದ ಎರಡು ಕ್ರಿಯೆಗಳೂ ಸಮಕಾಲಿಕ ಮತ್ತು ಎರಡು ಪಿಟ್ಯೂಯಿಟರಿ ಗ್ರಂಥಿಯ ಆದೇಶದಂತೆ ಜರುಗತಕ್ಕವು ಎಂದಾಯಿತು.

ಪಿಟ್ಯೂಯಿಟರಿ ಗ್ರಂಥಿ ಮಿದುಳಿನ ತಳದಲ್ಲಿರುವ ಅತಿ ಸಣ್ಣದಾದ ಆದರೆ ಅತಿ ಮುಖ್ಯವಾದ ಅಂಗ. ಇದು ಹಾರ್ಮೋನುಗಳ ಮೂಲಕ ವೃಷಣ ಮತ್ತು ಅಂಡಾಶಯಗಳಿಗೆ ಆದೇಶಗಳನ್ನು ಕಳಿಸುತ್ತದೆ. ಈ ಗ್ರಂಥಿ ಸ್ರವಿಸುವ ಹಾರ್ಮೋನುಗಳ ಪೈಕಿ ನಾಲ್ಕು ಹಾರ್ಮೋನುಗಳೂ ನೇರವಾಗಿ ಇಲ್ಲಿವೆ. ಇವು ಪರೋಕ್ಷವಾಗಿ ಪ್ರಜನನ ಕ್ರಿಯೆಯಲ್ಲಿ ಭಾಗವಹಿಸುತ್ತವೆ. ಫಾಲಿಕೂಲರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಎಫ್‍ಎಸ್‍ಎಚ್), ಲ್ಯೂಟೆನೈಸಿಂಗ್ ಹಾರ್ಮೋನ್ (ಎಲ್‍ಎಚ್) ಅಥವಾ ಇಂಟರ್‍ಸ್ಟಿಷಿಯಲ್ ಸೆಲ್ ಸ್ಟಿಮುಲೇಟಿಂಗ್ ಹಾರ್ಮೋನ್ (ಐಸಿಎಸ್‍ಎಚ್) ಮತ್ತು ಲ್ಯೂಟೊಟ್ರೋಪಿಕ್ ಹಾರ್ಮೋನ್ (ಎಲ್‍ಟಿಎಚ್) ಅಥವಾ ಪ್ರೊಲ್ಯಾಕ್ಟಿನ್ ಎಂಬ ಮೂರು ಹಾರ್ಮೋನುಗಳು ಪಿಟ್ಯೂಯಿಟರಿ ಗ್ರಂಥಿಯ ಮುಂದಿನ ಹಾಲೆಯಿಂದ ಸ್ರವಿಸಲ್ಪಡುತ್ತವೆ. ಆಕ್ಸಿಟೋಸಿನ್ ಎಂಬ ನಾಲ್ಕನೆಯ ಹಾರ್ಮೋನ್ ಪಿಟ್ಯೂಯಿಟರಿಯ ಹಿಂದಿನ ಹಾಲೆಯಿಂದ ಸ್ರಾವವಾಗುತ್ತದೆ. ಈ ಹಾರ್ಮೋನುಗಳು ಬಾಲ್ಯದಲ್ಲಿ ಬಲು ಕಡಿಮೆ ಮಟ್ಟದಲ್ಲಿ ಸ್ರವಿಸಲ್ಪಡುತ್ತಿದ್ದು ಪ್ರಬುದ್ಧತೆಯ ವಯಸ್ಸು ಬರುವ ಹೊತ್ತಿಗೆ ಮತ್ತು ಅಲ್ಲಿಂದ ಮುಂದೆ ಕ್ರಿಯಾತ್ಮಕ ಮಟ್ಟಕ್ಕೆ ಏರುತ್ತವೆ. ಎಫ್‍ಎಸ್‍ಎಚ್ ಮತ್ತು ಎಲ್‍ಎಚ್‍ಗಳು ಅಂಡಾಶಯ ಮತ್ತು ವೃಷಣಗಳ ಮೇಲೆ ಎಲ್‍ಎಚ್ ಅಂಡಾಶಯ ಮತ್ತು ಸ್ತನಗಳ ಮೇಲೆ, ಆಕ್ಸಿಟೋಸಿನ್ ಸ್ತನ ಮತ್ತು ಗರ್ಭಕೋಶದ ಮೇಲೆ ಪ್ರತ್ಯಕ್ಷ ಪ್ರಭಾವ ಬೀರುತ್ತವೆ. ಅಂಡಾಶಯ ಮತ್ತು ವೃಷಣಗಳಲ್ಲಿ ಅಂಡಾಣು ; ವೀರ್ಯಾಣು ಉತ್ಪಾದನೆ ಆಗುವುದರ ಜೊತೆಗೆ ಅದೇ ಕಾಲದಲ್ಲಿ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ ಎಂದು ಹೇಳಿದೆ. ಅಂಡಾಶಯದ ಅಂಡಾಣುಕೋಶ ಸಮೂಹ ವೃದ್ಧಿಯಾಗುತ್ತಿರುವಾಗ ಈಸ್ಟ್ರೋಜೆನ್ ಎಂಬುದೂ ಪೀತಕೋಶ ಸಮೂಹದಿಂದ ಪ್ರೊಜೆಸ್ಟಿರೋನ್ ಎಂಬುದೂ ಸ್ರವಿಸಲ್ಪಡುತ್ತವೆ. ವೃಷಣದಲ್ಲಿ ಲೀಡಿಗಿನ ಕೋಶ ಗುಂಪುಗಳಿಂದ ಟೆಸ್ಟೊಸ್ಟಿರೋನ್ ಎಂಬ ಹಾರ್ಮೋನ್ ಸ್ರವಿಸಲ್ಪಡುತ್ತದೆ. ದೇಹದ ಲೈಂಗಿಕ ಬೆಳವಣಿಗೆ, ಆನುಷಂಗಿಕ ಲೈಂಗಿಕ ಲಕ್ಷಣಗಳ ಗೋಚರ, ರಜಸ್ಸ್ರಾವ, ಗರ್ಭಾವಸ್ಥೆ, ಪ್ರಸವ ಮುಂತಾದವು ಈಸ್ಟ್ರೋಜೆನ್ ಪ್ರೊಜೆಸ್ಟಿರೋನ್ ಮತ್ತು ಟೆಸ್ಟೋಸ್ಟಿರೋನುಗಳು ಪ್ರಭಾವದ ಫಲಗಳು. ಅಂಡಾಶಯ ಮತ್ತು ವೃಷಣಗಳ ಹಾರ್ಮೋನುಗಳು ಪಿಟ್ಯುಯಿಟರಿಯ ಪ್ರತ್ಯಕ್ಷ ಪ್ರಭಾವದ ಫಲಗಳಾದ್ದರಿಂದ ಸ್ವತಃ ಅವುಗಳ ಪ್ರಭಾವ ಫಲ ಪಿಟ್ಯೂಯಿಟರಿಯ ಪರೋಕ್ಷ ಫಲವೆಂದು ಭಾವಿಸಬಹುದು. ಈಸ್ಟ್ರೋಜೆನ್ ಪ್ರೊಜೆಸ್ಟಿರೋನುಗಳು ಪಿಟ್ಯೂಯಿಟರಿಯ ಮೇಲೆ ಹಿಮ್ಮುಖವಾದ ಶಾಮಕ ಪ್ರಭಾವ (ನೆಗೆಟಿವ್ ಫೀಡ್‍ಬ್ಯಾಕ್) ಕೂಡ ಹೊಂದಿವೆ. ಪಿಟ್ಯೂಯಿಟರಿಯಲ್ಲೇ ಒಂದು ಹಾರ್ಮೋನಿನ ಸ್ರಾವ ಹೆಚ್ಚಿತೆಂದರೆ ಇನ್ನೊಂದರ ತಡೆ ಆಗುವುದು ಅಥವಾ ಒಂದರ ತಡೆ ಆದರೆ ಇನ್ನೊಂದರ ಸ್ರಾವ ಹೆಚ್ಚುವುದು ಕಂಡುಬರುತ್ತವೆ.

ಮೊತ್ತ ಮೊದಲಾಗಿ ಸ್ತ್ರೀಯಲ್ಲಿ ಪ್ರಬುದ್ಧತೆಯ ಕಾಲದಲ್ಲಿ ಈ ಹಾರ್ಮೋನುಗಳ ಕಾರ್ಯಾಚರಣೆ ನೋಡೋಣ. ಬಾಲಿಕೆಯಲ್ಲಿ ಅಂಡಾಶಯ ಇನ್ನೂ ಎಳೆಯದಾಗಿದ್ದು ಪ್ರಾಥಮಿಕ ಕೋಶಗಳನ್ನು ಮಾತ್ರ ಒಳಗೊಂಡಿರುತ್ತದೆ. ಆಕೆಗೆ 10-14 ವರ್ಷ ವಯಸ್ಸಾಗುವ ಹೊತ್ತಿಗೆ ಅಂಡಾಶಯ ಬಲಿಯುತ್ತದೆ. ಅಲ್ಲದೆ, ಅದೇ ವೇಳೆ ಹೆಚ್ಚಾಗಿ ಸ್ರವಿಸಲ್ಪಡುವ ಪಿಟ್ಯೂಯಿಟರಿ ಹಾರ್ಮೋನುಗಳಿಂದ ಪ್ರಭಾವಿಸಲ್ಪಡುವ ಸೂಕ್ಷ್ಮತೆಯನ್ನೂ ಕೂಡ ಪಡೆಯುತ್ತದೆ. ತತ್ಪರಿಣಾಮವಾಗಿ ಈ ನಡುವೆ ಎಂದೋ ಒಂದು ದಿನ ಎಫ್‍ಎಸ್‍ಎಚ್ ಪ್ರಭಾವ ಕಂಡುಬರುತ್ತದೆ. ಇದರ ಫಲವಾಗಿ ಅಂಡಾಶಯದ ಕೋಶ ಸಮೂಹ ವೃದ್ಧಿಗೊಂಡು ಪಕ್ವ ಕೋಶ ಸಮೂಹವಾಗುವುದು. ಹಾಗಾಗುವಾಗ ಅಂಡಾಣುವಿನ ತಯಾರಿ ಆಗುವುದಲ್ಲದೆ ಈಸ್ಟ್ರೋಜೆನ್ನೂ ಹೆಚ್ಚು ಹೆಚ್ಚಾಗಿ ಸ್ರವಿಸಲ್ಪಡುತ್ತದೆ. ಈಸ್ಟ್ರೋಜೆನ್ ಪಿಟ್ಯೂಯಿಟರಿಯ ಮೇಲೆ ಹಿಮ್ಮುಖವಾಗಿ ವರ್ತಿಸುವುದರಿಂದ ಅಲ್ಲಿ ಎಫ್‍ಎಸ್‍ಎಚ್ ಸ್ರಾವ ಕಡಿಮೆಯಾಗುತ್ತಾ ಬರುತ್ತದೆ, ಮತ್ತು ಎಲ್‍ಎಚ್ ಸ್ರಾವ ಹೆಚ್ಚುತ್ತಾ ಹೋಗುತ್ತದೆ. ಎರಡು ವಾರಗಳ ಕಾಲ ಹೀಗೆ ಮುಂದುವರಿದಾಗ ಎಫ್‍ಎಸ್‍ಎಚ್ ಮತ್ತು ಎಲ್‍ಎಚ್‍ಗಳ ಪರಸ್ಪರ ಪ್ರಮಾಣ ಒಂದು ವಿಶಿಷ್ಟ ಮಟ್ಟ ಮುಟ್ಟುವುದರಿಂದ ಪಕ್ವ ಕೋಶ ಸಮೂಹ ಛಿದ್ರಗೊಂಡು ಅಂಡಾಣುವಿನ ಬಿಡುಗಡೆ ಆಗುತ್ತದೆ. ಇದರಿಂದಾಗಿ ಈಸ್ಟ್ರೋಜೆನ್ನಿನ ಸ್ರಾವ ದಿಢೀರನೆ ಕಡಿಮೆಯಾಗುತ್ತದೆ. ಈ ಸ್ಥಿತಿ ಪಿಟ್ಯೂಯಿಟರಿಯನ್ನು ಪ್ರಭಾವಿಸಿ ಅಲ್ಲಿ ಎಫ್‍ಎಸ್‍ಎಚ್ ಸ್ರಾವ ನಿಂತ ಹೋಗಿ ಎಲ್‍ಎಚ್ ಮಾತ್ರ ಸ್ರವಿಸಲ್ಪಡುವಂತಾಗುತ್ತದೆ. ಎಲ್‍ಎಚ್ ಸ್ರಾವ ಅಂಡಾಶಯದ ಮೇಲೆ ವರ್ತಿಸಿ ಛಿದ್ರಕೋಶ ಸಮೂಹ ಒಗ್ಗೂಡಿ ಪೀತಕೋಶ ಸಮೂಹ ಆಗುವಂತೆ ಮಾಡುತ್ತದೆ. ಹೀಗೆ ಎಲ್‍ಎಚ್ ಪ್ರಭಾವದಿಂದ ಪೀತಕೋಶ ಸಮೂಹ ಉಪಸ್ಥಿತವಾದ ಮೇಲೆ ಪಿಟ್ಯೂಯಿಟರಿಯಿಂದ ಉದ್ದಕ್ಕೂ ಸ್ರಾವವಾಗುತ್ತಲೇ ಇದ್ದು ಏನೂ ಪ್ರಭಾವ ಬೀರದೇ ಇದ್ದ ಎಲ್‍ಟಿಎಚ್ ಈಗ ಪೀತಕೋಶ ಸಮೂಹವನ್ನು ಪ್ರಭಾವಿಸಿ ಅದು ಪ್ರೊಜೆಸ್ಟಿರೋನನ್ನು ಸ್ರವಿಸುವಂತೆ ಮಾಡುತ್ತದೆ. ಇದೂ ಎರಡು ವಾರ ಕಾಲ. ಬಹುಶಃ ಪ್ರೊಜೆಸ್ಟಿರೋನ್ ಪಿಟ್ಯೂಯಿಟರಿಯ ಮೇಲೆ ಹಿಮ್ಮುಖ ಪ್ರಭಾವ ಹೊಂದಿರುವುದರಿಂದ ಅದರ ಸ್ರಾವ ಹೆಚ್ಚು ಆಗುತ್ತ ಎಲ್‍ಎಚ್ ಸ್ರಾವ ಕಡಿಮೆ ಆಗುತ್ತ ಎರಡು ವಾರ ಕೊನೆಗೆ ಎಲ್‍ಎಚ್ ಸ್ರಾವ ನಿಂತುಹೋಗುತ್ತದೆ. ಇದರ ಪರಿಣಾಮವಾಗಿ ಪೀತಕೋಶ ಸಮೂಹದ ಊರ್ಜಿತಕ್ಕೇ ಏಟು ಬಿದ್ದು ಅದು ಅವನತಿ ಹೊಂದುತ್ತದೆ ಮತ್ತು ತತ್ಫಲವಾಗಿ ಪ್ರೊಜೆಸ್ಟಿರೋನಿನ ಸ್ರಾವ ಚಟ್ಟನೆ ನಿಂತು ಹೋಗತ್ತದೆ. ಎಲ್‍ಎಚ್ ಸ್ರಾವ ನಿಂತಿಂತೆದ್ದರೆ ಎಫ್‍ಎಸ್‍ಎಚ್ ಸ್ರಾವ ಪುನಃ ಪ್ರಾರಂಭವಾಗುತ್ತದೆ. ತತ್ಪಲವಾಗಿ ಅಂಡಾಶಯದಲ್ಲಿ ಪುನಃ ಕೋಶ ಸಮೂಹ ವೃದ್ಧಿಯೂ ಈಸ್ಟ್ರೋಜೆನ್ನಿನ ಸ್ರಾವವೂ ಎರಡು ವಾರಗಳ ಕಾಲ ಕಂಡುಬರುತ್ತವೆ, ಇತ್ಯಾದಿ. ಹೀಗೆ ಎರಡು ವಾರಗಳೂ ಪಿಟ್ಯೂಯಿಟರಿಯಲ್ಲ ಎಫ್‍ಎಸ್‍ಎಚ್ ಮತ್ತು ಅಂಡಾಶಯದಲ್ಲಿ ಪ್ರೋಜೆಸ್ಟಿರೋನ್ ಪುನಃ ಪಿಟ್ಯೂಯಿಟರಿಯಲ್ಲ ಎಫ್‍ಎಸ್‍ಎಚ್ ಮತ್ತು ಅಂಡಾಶಯದಲ್ಲಿ ಈಸ್ಟ್ರೋಜೆನ್ ಅನಂತರ ಎರಡು ವಾರಗಳು ಪಿಟ್ಯೂಯಿಟರಿಯಲ್ಲಿ ಎಲ್‍ಎಚ್ ಮತ್ತು ಅಂಡಾಶಯದಲ್ಲಿ ಪ್ರೋಜೆಸ್ಟಿರೋನ್ ಪುರ್ನ ಪಿಟ್ಯೂಯಿಟರಿಯಲ್ಲಿ ಎಫ್‍ಎಸ್‍ಎಚ್ ಮತ್ತು ಅಂಡಾಶಯದಲ್ಲಿ ಈಸ್ಟ್ರೋಜೆನ್ ಇತ್ಯಾದಿ ಕ್ಲುಪ್ತವಾಗಿ ಸ್ರವಿಸಲ್ಪಡುವುದು ಕಂಡುಬರುತ್ತದೆ.

ಪ್ರಬುದ್ಧಳಾಗಲಿರುವ ಬಾಲಿಕೆಯ ಗರ್ಭಾಶಯದ ಬೆಳವಣಿಗೆಯನ್ನು ಈಸ್ಟ್ರೋಜೆನ್ನೂ ಮುಂದೆ ಪ್ರೋಜೆಸ್ಟಿರೋನೂ ಉಂಟು ಮಾಡುತ್ತವೆ. ಅನಂತರ ಪ್ರೊಜೆಸ್ಟಿರೋನ್ ಗರ್ಭಾಶಯದ ಒಳಪದರದ ಮೇಲೆ ವರ್ತಿಸಿ ಅಲ್ಲಿ ರಕ್ತದುಂಬಿಕೆ ಮತ್ತು ಗ್ರಂಥಿಗಳ ಬೆಳವಣಿಗೆ ಹಾಗೂ ಸ್ರಾವ (ರಜಸ್ರಾವ ಪೂರ್ವ ಸಿದ್ಧತೆ) ಕಾಣಬರುವಂತೆ ಮಾಡುತ್ತದೆ. ಆದರೆ, ಎರಡು ವಾರಗಳು ಬಳಿಕ ಪ್ರೊಜೆಸ್ಟಿರೋನಿನ ಸ್ರಾವ ಚಟ್ಟನೆ ನಿಂತು ಹೋಗುವುದರಿಂದ (ಪರೋಕ್ಷ ಕಾರಣ - ಪಿಟ್ಯೂಯಿಟರಿಯಲ್ಲಿ ಎಲ್‍ಎಚ್ ಸ್ರಾವ ನಿಂತು ಹೋಗುವುದು) ಗರ್ಭಾಶಯದಲ್ಲಿ ಒಳಪದರದ ವಿಶೇಷ ಸ್ಥಿತಿಗೆ ಧಕ್ಕೆ ಆಗಿ ಅದು ಅವನತಿ ಹೊಂದುತ್ತದೆ ಮತ್ತು ರಜಸ್ಸ್ರಾವ ಕಂಡುಬರುತ್ತದೆ. ಆದ್ದರಿಂದಲೇ ಒಳಪದರದ ಈ ವಿಶೇಷ ಸ್ಥಿತಿಗೆ ರಜಸ್ರಾವ ಪೂರ್ವ ಸ್ಥಿತಿ ಎಂದು ಹೆಸರು. ಪ್ರೊಜೆಸ್ಟಿರೋನ್ ಸ್ರಾವ ಮತ್ತು ಎಲ್‍ಎಚ್ ಸ್ರಾವ ನಿಂತುಹೋದ ಮೇಲೆ ಪಿಟ್ಯೂಯಿಟರಿಯಲ್ಲಿ ಎಫ್‍ಎಸ್‍ಎಚ್. ಸ್ರಾವ ಪ್ರಾರಂಭವಾಗಿ ಅಂಡಾಶಯದಲ್ಲಿ ಇನ್ನೊಂದು ಅಂಡಾಣು ತಯಾರಿಕೆ ಮತ್ತು ಇನ್ನೆರಡು ವಾರಗಳೂ ಈಸ್ಟ್ರೋಜೆನ್ನಿನ ಸ್ರಾವ ಕಂಡು ಬರುತ್ತದೆ. ಅಂದರೆ ನಾಲ್ಕು ವಾರಗಳ ಚಕ್ರದ ಕೊನೆಯಲ್ಲಿ ಪಿಟ್ಯೂಯಿಟರಿಯಲ್ಲಿ ಎಲ್‍ಎಚ್ ಸ್ರಾವ ನಿಂತು ತತ್ಫಲವಾಗಿ ಅಂಡಾಶಯದಲ್ಲಿ ಪ್ರೊಜೆಸ್ಟಿರೋನ್ ಸ್ರಾವ ನಿಂತುಹೋಗುವುದರಿಂದ ರಜಸ್ಸ್ರಾವವಾಗಿ ಈ ಅವಧಿಯ ಅಂತ್ಯವನ್ನೂ ಇನ್ನೊಂದು ಅವಧಿಯ ಪ್ರಾರಂಭವನ್ನೂ ಸೂಚಿಸುತ್ತದೆ. ಪ್ರಬುದ್ಧತೆಯ ಕಾಲದಲ್ಲಿ ಮೊದಲ ಸಲ ಅಂಡಾಶಯ ಹಾರ್ಮೋನುಗಳ ನಾಲ್ಕು ವಾರಗಳು ಈ ಚಕ್ರೀಯ ಪ್ರಭಾವ ಮೇಲಿಂದ ಮೇಲೆ ಕಾಣಬರುತ್ತದೆ. ಮೇಲಿಂದ ಮೇಲೆ ಹೀಗೆ ಸ್ರವಿಸಲ್ಪಡುವ ಈಸ್ಟ್ರೋಜೆನ್ ಮತ್ತು ಪ್ರೋಜೆಸ್ಟೀರೋನುಗಳು ಸ್ತ್ರೀಯರ ದೇಹದ ಅನೇಕ ಭಾಗಗಳ ಮೇಲೆ ವರ್ತಿಸುವುದರಿಂದ ಆಕೆಯಲ್ಲಿ ಅನುಷಂಗಿಕ ಲೈಂಗಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪ್ರೊಜೆಸ್ಟೀರೋನಿನ ಪ್ರಭಾವ ಕಂಡುಬರಲು ಈಸ್ಟ್ರೊಜೆನ್ನಿನ ಪ್ರಭಾವ ಪೂರ್ವಭಾವಿಯಾಗಿ ಕಂಡುಬಂದಿರುವುದು ಅಗತ್ಯ.

ಅಂಡಾಣುವಿನಲ್ಲಿ ನಿಷೇಚನೆ ಆದಾಗ ಊರ್ಜಿತಗೊಂಡಿದ್ದ ಪೀತಕೋಶ ಸಮೂಹ ಮಾಮೂಲಾಗಿ ಎರಡು ವಾರಗಳ ಬಳಿಕ ಅವನತಿ ಹೊಂದಬೇಕಾದದ್ದು ಹಾಗಾಗುವುದಿಲ್ಲವೆಂದು ಹೇಳಿದೆ. ಪಿಟ್ಯೂಯಿಟರಿಯಲ್ಲಿ ಎಲ್‍ಎಚ್ ಸ್ರಾವ ನಿಂತು ಹೋಗದೇ ಮುಂದುವರಿಯುವುದೇ ಇದರ ಕಾರಣ ಎನ್ನುವುದು ವ್ಯಕ್ತ. ನಿಷೇಚನೆಯಿಂದ ಪಿಟ್ಯೂಯಿಟರಿಯ ಬದಲಾವಣೆಯಾಗಿರುವುದು ನಿಜ. ಆದರೆ, ಹೇಗೆ ಈ ಬದಲಾವಣೆ ಏರ್ಪಟ್ಟಿತು ಎಂಬುದು ತಿಳಿಯದು. ಅಂತೂ ಅಂತ್ಯದಲ್ಲಿ ಇದರ ಪರಿಣಾಮವಾಗಿ ಪ್ರೊಜೆಸ್ಟಿರೋನಿನ ಸ್ರಾವ ಮುಂದುವರಿಯುತ್ತದೆ. ಅರ್ಥಾತ್ ಗರ್ಭಕೋಶದ ಒಳಪೊರೆಯ ರಜಸ್ಸ್ರಾವ ಪೂರ್ವಸ್ಥಿತಿ ಅವನತಿ ಹೊಂದದೆ ಮುಂದುವರಿಯುತ್ತದೆ. ಅಂದರೆ, ಆಗಬೇಕಾಗಿದ್ದೆ ರಜಸ್ಸ್ರಾವ ಆಗದೆ ಹೋಗುತ್ತದೆ. ಅಂಡಾಣುವಿನ ನಿಷೇಚನೆ ಆದ ಬಳಿಕ ಯಗ್ಮಜ ಗರ್ಭಾಶಯವನ್ನು ಹೊಕ್ಕು ಅಲ್ಲಿ ನಾಟಿಕೊಂಡು ಭ್ರೂಣವಾಗಿ ಬೆಳೆಯಲು ಪ್ರಾರಂಭಿಸುವುದು ಸರಿಯಷ್ಟೆ. ಯುಗ್ಮಜ ನಾಟಿಕೊಳ್ಳಲು ಸುಲಭವಾಗಲಿ ಮತ್ತು ಅನಂತರ ಅದಕ್ಕೆ ಸಾಕಷ್ಟು ರಕ್ಷಣೆ ಒದಗಲಿ ಎಂದೇ ಗರ್ಭಾಶಯದ ಒಳಪದರದ ರಜಸ್ಸ್ರಾವ ಪೂರ್ವಸ್ಥಿತಿ ಮುಂದುವರಿದದ್ದು. ಅಂದರೆ ರಜಸ್ಸ್ರಾವ ಪೂರ್ವಸ್ಥಿತಿ ಗರ್ಭಾವಸ್ಥೆಯ ಸಿದ್ದತೆಯೇ ಸರಿ ಎಂಬುದು ವಿಶದವಾಗುತ್ತದೆ.

ಪೀತಕೋಶ ಸಮೂಹ ಮುಂದುವರಿಯುವುದರಿಂದ ಗರ್ಭಾಶಯದಲ್ಲಿ ಯುಗ್ಮಜ ನಾಟಿಕೊಂಡು ಬೆಳೆಯಲು ಪ್ರಾರಂಭಿಸಿದ ಮೇಲೂ ಅದರ ಒಳಪೊರೆಯ ವಿಶೇಷ ಸ್ಥಿತಿ ಮುಂದುವರಿಯುತ್ತದೆ. ಇದು ಪ್ರೊಜೆಸ್ಟಿರೋನ್ ಪ್ರಭಾವದಿಂದ ಎನ್ನುವುದು ವ್ಯಕ್ತ. ಆದರೆ, ಪೀತಕೋಶ ಸಮೂಹ ಮುಂದುವರಿಯುವುದು ಇನ್ನೂ ಸುಮಾರು 10 ವಾರಗಳು ಅಷ್ಟೆ. ಆಮೇಲೆ ಅದು ಅವನತಿ ಹೊಂದಿದಾಗಲೂ ಪ್ರೊಜೆಸ್ಟಿರೋನಿನ ಪ್ರಭಾವ ನಿಂತುಹೋಗಿರುವುದಿಲ್ಲ ಎಂಬುದನ್ನು ಗರ್ಭಾವಸ್ಥೆ ಮುಂದುವರಿಯುವುದರಿಂದ ಗ್ರಹಿಸಬಹುದು. ಹಾಗಿದ್ದರೆ ಈ ಪ್ರೊಜೆಸ್ಟಿರೋನ್ ಎಲ್ಲಿಂದ ಬಂತು ಎಂಬ ಪ್ರಶ್ನೆ ಏಳುತ್ತದೆ. ಗರ್ಭಾವಸ್ಥೆಯ ಈ ಕಾಲದಲ್ಲಿ ಜರಾಯುವಿನ ರಚನೆ ಆಗಿ ಅದು ಪೀತಕೋಶ ಸಮೂಹದ ಕಾರ್ಯವನ್ನು ವಹಿಸುತ್ತದೆ ಎಂದು ಹೇಳಿದೆ. ಇದರ ಅರ್ಥ ಪ್ರೊಜೆಸ್ಟಿರೋನ್ ಜರಾಯುವಿನಿಂದ ಸ್ರವಿಸಲ್ಪಡುತ್ತದೆ ಎಂದು. ಆದ್ದರಿಂದಲೇ ಜರಾಯು ಉಪಸ್ಥಿತವಾದ ಮೇಲೆ ಪ್ರಾಯೋಗಿಕವಾಗಿ ಅಂಡಾಶಯವನ್ನು ತೆಗೆದುಹಾಕಿದರೂ ಅಂದರೆ ಪ್ರೊಜೆಸ್ಟಿರೋನಿನ ಆಕರವಾದ ಪೀತಕೋಶ ಸಮೂಹವನ್ನೇ ತೆಗೆದುಹಾಕಿದರೂ ಗರ್ಭಪಾತವಾಗುವುದಿಲ್ಲ. ಆದರೆ, ಗರ್ಭಾವಸ್ಥೆಯ ಮೊದಲ ತಿಂಗಳಲ್ಲಿ ಇನ್ನೂ ಸರಿಯಾಗಿ ರಚಿತವಾಗಿರದ ಜರಾಯು ಪ್ರೊಜೆಸ್ಟಿರೋನನ್ನು ಸ್ರವಿಸುತ್ತಿರುವುದಿಲ್ಲ. ಆದ್ದರಿಂದಲೇ ಆಗ ಅಂಡಾಶಯವನ್ನು ತೆಗೆದುಹಾಕಿದರೆ ಗರ್ಭಪಾತವಾಗುವುದು ಖಂಡಿತ.

ಜರಾಯುವಿನಿಂದ ಪ್ರೊಜೆಸ್ಟಿರೋನ್ ಒದಗುತ್ತಿರುವುದರಿಂದ ಗರ್ಭಾವಸ್ಥೆ ಮುಂದುವರಿಯುವುದಕ್ಕೆ ಅಡ್ಡಿ ಇಲ್ಲ. ಆದರೆ, ಇದೇ ಪ್ರೊಜೆಸ್ಟಿರೋನಿನ ಆಧಿಕ್ಯ. ಪಿಟ್ಯೂಯಿಟರಿಯ ಮೇಲೆ ಶಾಮಕ ಪ್ರಭಾವವನ್ನು ಬೀರುವುದರಿಂದ ಅದರಿಂದ ಎಫ್‍ಎಸ್‍ಎಚ್ ಆಗಲಿ ಎಲ್‍ಎಚ್ ಆಗಲಿ ಸ್ರವಿಸಲ್ಪಡುವುದಿಲ್ಲ. ಆದ್ದರಿಂದಲೇ ಗರ್ಭಾವಸ್ಥೆಯ ಕಾಲದಲ್ಲಿ ಅಂಡಾಶಯ ಚಕ್ರವಾಗಲಿ ಋತುಚಕ್ರವಾಗಲಿ ಕಂಡುಬರುವುದಿಲ್ಲ. ಪ್ರೊಜೆಸ್ಟಿರೋನ್ ಗರ್ಭಿಣಿಯ ಸ್ತನಗಳ ಮೇಲೆ ಪ್ರಭಾವಿಸಿ ಅವುಗಳಲ್ಲಿ ಗ್ರಂಥಿಭಾಗಗಳು ಮೂಡುವಂತೆ ಮಾಡಿ ಹಾಲನ್ನು ಸ್ರವಿಸಬಲ್ಲ ಪೂರ್ವ ಸಿದ್ಧತೆಯನ್ನು ಉಂಟುಮಾಡುತ್ತದೆ. ಹೀಗೆ ಗರ್ಭಾವಸ್ಥೆಯ 40 ವಾರಗಳು ಕಳೆಯುತ್ತವೆ. ಕೊನೆಯಲ್ಲಿ ಏನೊ ಅವ್ಯಕ್ತ ಕಾರಣಗಳಿಂದ ಜರಾಯು ಗರ್ಭಕೋಶ ಭಿತ್ತಿಯಿಂದ ಬೇರ್ಪಡುವುದಕ್ಕೆ ಅರ್ಥಾತ್ ಅದರ ಕ್ರಿಯೆ ನಷ್ಟವಾಗುವುದಕ್ಕೆ, ಪ್ರಾರಂಭವಾಗುತ್ತದೆ. ಅಂದರೆ ಪ್ರೊಜೆಸ್ಟಿರೋನಿನ ಸ್ರಾವ ನಿಂತುಹೋಗುತ್ತದೆ. ಪರಿಣಾಮವಾಗಿ ಗರ್ಭಾವಸ್ಥೆ ಮುಂದುವರಿಯಲಾಗದೆ ಕೊನೆಗೊಳ್ಳುತ್ತದೆ. ಅಂದರೆ ಪ್ರಸವವಾಗುತ್ತದೆ. ಪ್ರೊಜೆಸ್ಟಿರೋನಿನ ಗೈರುಹಾಜರಿಯಲ್ಲಿ ಆ ತನಕ ಅಡಗಿದ್ದ ಗರ್ಭಕೋಶದ ಸಂಕೋಚನಾಸಾಮಥ್ರ್ಯ ಪುನಃ ಕಂಡುಬರುತ್ತದೆ. ಜೊತೆಗೆ ಗರ್ಭಕೋಶ ಪ್ರೊಜೆಸ್ಟಿರೋನಿನ ರಕ್ಷಣೆಯನ್ನು ಕಳೆದುಕೊಂಡ ಮೇಲೆ ಆಕ್ಸಿಟೋಸಿನ್ ಗರ್ಭಕೋಶದ ಮೇಲೆ ವರ್ತಿಸಬಲ್ಲದಾಗಿ ಅದು ಗರ್ಭಕೋಶ ಬಲವಾಗಿ ಸಂಕೋಚಿಸಿ ಗರ್ಭಸ್ಥಶಿಶುವನ್ನು ಹೊರದೂಡುವಂತೆ ಮಾಡುತ್ತದೆ.

ಪೂರ್ವಸಿದ್ಧತೆಗೊಂಡಿರುವ ಸ್ತನದ ಮೇಲೆ ಪಿಟ್ಯೂಯಿಟರಿಯ ಪ್ರೊಲ್ಯಾಕ್ಟಿನ್ ವರ್ತಿಸಿ ಅದು ಹಾಲನ್ನು ಸ್ರವಿಸುವಂತೆ ಮಾಡಬಲ್ಲದು. ಆದರೆ, ಇದೂ ಪ್ರೊಜೆಸ್ಟಿರೋನಿನ ಪ್ರಭಾವ ಇಲ್ಲದಿದ್ದಾಗ ಮಾತ್ರ. ಆದ್ದರಿಂದಲೇ ಸ್ತನದಲ್ಲಿ ಹಾಲು ಉತ್ಪತ್ತಿ ಆಗುವುದು ಪ್ರಸವಾನಂತರವೇ. ಅರ್ಥಾತ್ ಪ್ರೊಜೆಸ್ಟಿರೋನಿನ ಅಭಾವ ಪರಿಸ್ಥಿತಿಯಲ್ಲಿ ಪ್ರಸವಾನಂತರ ಈ ರೀತಿ ಹಾಲು ಸ್ರವಿಸಬಲ್ಲ ಸ್ತನದ ಮೇಲೆ ಆಕ್ಸಿಟೋಸಿನ್ ಸಹ ವರ್ತಿಸಬಲ್ಲದು. ಹಾಗೆ ವರ್ತಿಸುವುದರಿಂದ ಸ್ತನಗಳಿಂದ ಹಾಲುಹೊರಬರಲು (ಕೆಲವು ಸಮಯ ಚಿಮ್ಮಿ) ಸಾಧ್ಯವಾಗುತ್ತದೆ.

ಮಗುವಿಗೆ ಮೊಲೆಯೂಡುವುದರಿಂದ ಅಲ್ಲಿ ನರಪ್ರಚೋದನೆ ಆಗಿ ಅದು ಪಿಟ್ಯೂಯಿಟರಿಯ ಹಿಂದಿನ ಹಾಲೆಯನ್ನು ಉದ್ರೇಕಿಸುತ್ತದೆ. ತತ್ಫಲವಾಗಿ ಹೆಚ್ಚು ಆಕ್ಸಿಟೋಸಿನ್ ಸ್ರವಿಸಲ್ಪಡುತ್ತದೆ. ಇದು ಸ್ತನಗಳಿಂದ ಹಾಲು ಹೊರಬರುವುದಕ್ಕೆ ಅಂದರೆ ಮಗುವಿಗೆ ಹಾಲೂಡುವುದು ಸುಲಭವಾಗುವುದಕ್ಕೆ ಸಹಾಯಕ. ಅಲ್ಲದೆ ಇದೇ ಆಕ್ಸಿಟೋಸಿನ್ ಪ್ರಸವೋತ್ತರ ಗರ್ಭಾಶಯದ ಮೇಲೆ ವರ್ತಿಸಿ ಅದರ ಸಂಕೋಚನ ಪೂರ್ಣವಾಗುವಂತೆಯೂ ಗರ್ಭೋತ್ತರ ಸ್ರಾವ ಕಡಿಮೆ ಆಗುವಂತೆಯೂ ಮಾಡುತ್ತದೆ. ಮಗುವಿಗೆ ಮೊಲೆಯೂಡುವುದರಿಂದ ಪಿಟ್ಯೂಯಿಟರಿಯಲ್ಲಿ ಪ್ರೊಲ್ಯಾಕ್ಟಿನ್ನಿನ ಸ್ರಾವ ಹೆಚ್ಚಾಗುತ್ತದೆ. ಆದ್ದರಿಂದಲೇ ಹಾಲೂಡುತ್ತಿರುವ ತನಕ ಸ್ತನದಲ್ಲಿ ಹಾಲಿನ ಉತ್ಪತ್ತಿಯೂ ಆಗುತ್ತಿರುತ್ತದೆ. ಪ್ರೊಲ್ಯಾಕ್ಟಿನ್ ಪಿಟ್ಯೂಯಿಟರಿಯಲ್ಲಿ ಅಧಿಕವಾಗಿ ಸ್ರವಿಸಲ್ಪಡುತ್ತಿರುವುದರಿಂದ ಎಫ್‍ಎಸ್‍ಎಚ್ ಆಗಲಿ ಎಲ್‍ಎಚ್ ಆಗಲಿ ಸ್ರವಿಸಲ್ಪಡುವುದಿಲ್ಲ. ಆದ್ದರಿಂದಲೇ ಅಂಡಾಶಯ ಗರ್ಭಾಶಯಗಳ ಚಕ್ರೀಯ ಕಾರ್ಯಕ್ರಮ ಹಾಲೂಡಿಸುತ್ತಿರುವ ತನಕವೂ ಸ್ಥಗಿತವಾಗಿರುತ್ತದೆ. ವಯಸ್ಸಾದಂತೆ ಪಿಟ್ಯೂಯಿಟರಿಯ ಪ್ರಭಾವ ಅಂಡಾಶಯದ ಮೇಲೆ ಕಡಿಮೆ ಆಗಿ ನಿಂತು ಹೋಗುತ್ತದೆ. ಆದ್ದರಿಂದ ಅಂಡಾಶಯದಲ್ಲಿ ಈಸ್ಟ್ರೊಜೆನ್ ಪ್ರೊಜೆಸ್ಟಿರೋನುಗಳು ಸ್ರವಿಸಲ್ಪಡುವುದಿಲ್ಲ. ತತ್ಫಲವಾಗಿ ರಜೋಬಂಧವಾಗುತ್ತದಲ್ಲದೆ ಸಂತಾನೋತ್ಪಾದನೆಯ ಸಾಮಥ್ರ್ಯವೂ ಅಳಿಯುತ್ತದೆ. ಆದರೆ, ಪಿಟ್ಯೂಯಿಟರಿಯಲ್ಲಿ ಎಫ್‍ಎಸ್‍ಎಚ್ ಮತ್ತು ಎಲ್‍ಎಚ್‍ಗಳ ಸ್ರಾವ ಇನ್ನೂ ಕೆಲಕಾಲ ಮುಂದುವರಿಯುತ್ತದೆ. ಈ ಹಾರ್ಮೋನುಗಳು ದೇಹದಲ್ಲಿ ಅನುಪಯುಕ್ತವಾಗಿ ಪರಿಚಲಿಸುತ್ತಿರುವುದರಿಂದ ಮುಟ್ಟು ನಿಂತ ಮೇಲೆ ಅನೇಕರಿಗೆ ಏರಿದ ರಕ್ತದ ಒತ್ತಡ, ಮುಖದ ಹಠಾತ್ ಆರಕ್ತತೆ, ಹಠಾತ್ ಬೆವರುವಿಕೆ ಸುಸ್ತು ಮುಂತಾದ ಅಹಿತ ಸ್ಥಿತಿಗಳು ಕಂಡುಬರುತ್ತವೆ. ಗಂಡಸರ ಪ್ರಜನನ ಕ್ರಿಯೆಯಲ್ಲಿ ಹಾರ್ಮೋನುಗಳ ಪಾತ್ರ ಹೆಂಗಸರಲ್ಲಿಯಷ್ಟು ತೊಡಕಿನ ವ್ಯವಸ್ಥೆಯಲ್ಲ. ಗಂಡಸರಲ್ಲಿ ಪಿಟ್ಯೂಯಿಟರಿಯ ಎಫ್‍ಎಸ್‍ಎಚ್ ಮತ್ತು ಎಲ್‍ಎಚ್‍ಗಳು ಮಾತ್ರ ಕಾರ್ಯಾಚರಣೆಯುಳ್ಳವು. ಪ್ರೋಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್ನುಗಳು ಅನುಪಯುಕ್ತ ಎಫ್‍ಎಸ್‍ಎಚ್ ಪ್ರಬುದ್ಧತೆಯ ಕಾಲದಿಂದ ವೃಷಣಗಳ ಮೇಲೆ ವರ್ತಿಸಿ ವೀರ್ಯಾಣುಗಳ ತಯಾರಿಕೆಗೆ ಕಾರಣವಾಗಿವೆ. ಹೆಂಗಸರಲ್ಲಿಯಂತೆ ಎರಡು ವಾರ ಬಿಟ್ಟು ಎರಡು ವಾರ ಸ್ರವಿಸಲ್ಪಡದೆ ನಿರಂತರವಾಗಿ ಸ್ರವಿಸಲ್ಪಡುತ್ತವೆ. ಎಫ್‍ಎಲ್‍ಎಚ್‍ನ ಪ್ರಭಾವದಿಂದ ವೃಷಣ ಕೋಶ ಯಾವ ಹಾರ್ಮೋನನ್ನೂ ಸ್ರವಿಸುವುದಿಲ್ಲ. ಎಲ್‍ಎಚ್ ವೃಷಣದ ಲೀಡಿಗ್ಗಿನ ಕೋಶಗಳ ಮೇಲೆ ವರ್ತಿಸುತ್ತದೆ, ಮತ್ತು ಅವು ಟೆಸ್ಟೊಸ್ಟಿರೋನ್ ಎಂಬ ಹಾರ್ಮೋನನ್ನು ಸ್ರವಿಸುವಂತೆ ಮಾಡುತ್ತವೆ. ಟೆಸ್ಟೋಸ್ಟಿರೋನ್ ಪುರುಷರಲ್ಲಿ ಎಲ್ಲ ಆನುಷಂಗಿಕ ಲೈಂಗಿಕ ರಕ್ಷಣೆಗಳಿಗೂ ಕಾರಣ. ಪಿಟ್ಯೂಯಿಟರಿ ಗ್ರಂಥಿ ಹೈಪೊತೆಲಮಸ್ ಎಂಬ ಮಿದುಳು ಭಾಗದಿಂದ ನರ ಮತ್ತು ಹಾರ್ಮೋನುಗಳ ಮೂಲಕ ಪ್ರಭಾವಿತವಾಗುತ್ತದೆ ; ಮತ್ತು ಅನುಗುಣವಾಗಿ ತನ್ನ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಹೈಪೊತೆಲಮಸ್ ದೇಹದ ವಿವಿಧ ಜ್ಞಾನೇಂದ್ರಿಯಗಳಿಂದ ಮಾಹಿತಿಗಳನ್ನು ಪಡೆದು ಅವಕ್ಕೆ ತಕ್ಕಂತೆ ಪಿಟ್ಯೂಯಿಟರಿಯನ್ನು ಪ್ರಭಾವಿಸಬಹುದು. ಆದ್ದರಿಂದಲೇ ಪರಿಸರದ ಅನೇಕ ಆಗುಹೋಗುಗಳಿಂದ ಪ್ರಜನನಕ್ರಿಯೆಯಲ್ಲಿ ವ್ಯತ್ಯಾಸಗಳು ಕಂಡುಬರುವುದಾಗಿದೆ. ಹಾರ್ಮೋನುಗಳ ಪಾತ್ರದಿಂದ ವ್ಯವಸ್ಥಿತ ರೀತಿಯಲ್ಲಿ ಪ್ರಜನನಾಂಗಗಳ ಕ್ರಿಯೆಗಳು ನಿಯಂತ್ರಿತವಾಗಿರುವುದರಿಂದ ಎಲ್ಲವೂ ಮೇಲೆ ವಿವರಿಸಿರುವ ರೀತಿಯಲ್ಲೇ ಕರಾರುವಾಕ್ಕಾಗಿ ಜರುಗುತ್ತವೆಂದು ಹೇಳಲಾಗುವುದಿಲ್ಲ. ಉದಾಹರಣೆಗೆ ಪ್ರಬುದ್ಧತೆಯ ಕಾಲದಲ್ಲಿ ಮೊತ್ತ ಮೊದಲ ಅಂಡಾಣು ಬಿಡುಗಡೆ ಆದ ಬಳಿಕ ಸ್ತ್ರೀ ಋತುಮತಿ ಆಗುತ್ತಾಳೆಂದು ವಿವರಿಸಿದೆ. ವಾಸ್ತವವಾಗಿ ಆ ಕಾಲದಲ್ಲಿ ಒಂದೆರಡು ವರ್ಷಗಳು ಅಂಡಾಶಯ ಚಕ್ರವಾಗಲಿ ಋತುಸ್ರಾವ ಚಕ್ರವಾಗಲಿ ಕಟ್ಟುನಿಟ್ಟಾಗಿ ಜರಗುವುದಿಲ್ಲ : ಮತ್ತು ಅಂಡಾಶಯ ಚಕ್ರ ರಜೋಚಕ್ರವನ್ನು ನಿಯಂತ್ರಿಸುವುದು ಖಚಿತವಲ್ಲ. ಆದ್ದರಿಂದ ಮೊದಮೊದಲ ಅಂಡಾಣುಗಳ ಬಿಡುಗಡೆಯನ್ನು ಅನುಸರಿಸಿ ಋತುಸ್ರಾವವಾಗುವುದು ಖಾತರಿ ಇಲ್ಲ. ಇದೇ ರೀತಿ ಮಗುವಿಗೆ ಹಾಲೂಡಿಸುತ್ತಿರುವ ಕಾಲದಲ್ಲಿ ಅಂಡಾಶಯ ಚಕ್ರ ಋತುಚಕ್ರಗಳು ಸ್ಥಗಿತವಾಗಿರುತ್ತವೆ ಎಂದು ಹೇಳಿದೆ. ಅನೇಕ ವೇಳೆ ಪ್ರಸವವಾದ ಒಂದೆರಡು ತಿಂಗಳಲ್ಲಿಯೇ ಅಂದರೆ ಸ್ತನಗಳ ಕಾರ್ಯಾಚರಣೆ ಭರಾಟೆಯಿಂದ ಸಾಗುತ್ತಿರುವಾಗಲೇ ಈ ಚಕ್ರಗಳು ಪುನರಾರಂಭವಾಗುವುವಲ್ಲದೆ ಪುನಃ ಗರ್ಭಧಾರಣೆಯೂ ಆಗಬಹುದು. ಹಾಗೆಯೇ ವಯಸ್ಸಾದ ಮೇಲೆ ರಜೋಬಂಧವಾಗುವುದು ಸಂತಾನ ಪ್ರಾಪ್ತಿ ನಿಂತ ಸೂಚನೆ ಎಂದಿದೆ. ವಾಸ್ತವವಾಗಿ ಮುಟ್ಟು ನಿಲ್ಲುವುದಕ್ಕೆ ಒಂದೆರಡು ವರ್ಷಗಳ ಮುನ್ನವೇ ಅಂಡಾಶಯ ಚಕ್ರ ನಿಂತು ಹೋಗಿರುತ್ತದೆ. ಆ ವರ್ಷಗಳಲ್ಲಿ ರಜಸ್ರಾವವಾಗುವ ಕಾಲ, ಪರಿಮಾಣ ಹಾಗೂ ಅವಧಿಗಳಲ್ಲಿ ಏರುಪೇರುಗಳು ಕಂಡುಬರುತ್ತವೆ. ಇದಕ್ಕೆ ಭಿನ್ನವಾಗಿ ಮುಟ್ಟುನಿಂತ ಒಂದೆರಡು ವರ್ಷಗಳ ಮೇಲೆ ಗರ್ಭತಾಳಿದ ಪ್ರಸಂಗಗಳೂ ಇವೆ. ಪ್ರಜನನ ಕ್ರಿಯೆಯ ಐಚ್ಛಿಕ ನಿಯಂತ್ರಣ : ಈಸ್ಟ್ರೋಜನ್ ಪ್ರೊಜೆಸ್ಟಿರೋನುಗಳು ಪಿಟ್ಯೂಯಿಟರಿಯ ಮೇಲೆ ಹಿಮ್ಮುಖ ಹಾಗೂ ಶಾಮಕ ಪ್ರಭಾವವನ್ನು ಹೊಂದಿವೆ ಎಂದು ಹೇಳಿದೆ. ಪಿಟ್ಯೂಯಿಟರಿ ಕಾರ್ಯಾಚರಣೆಯನ್ನು ಹೀಗೆ ಶಮನ ಮಾಡಿ ಅದರಲ್ಲಿ ಎಫ್‍ಎಸ್‍ಎಚ್ ಮತ್ತು ಎಲ್‍ಎಚ್‍ಗಳ ಸ್ರಾವ ಆಗದಂತೆ ಮಾಡಿದರೆ ಅಂಡಾಶಯ ಚಕ್ರವನ್ನು ನಿಲ್ಲಿಸಬಹುದು. ಹಾಗೆಯೇ ಋತುಚಕ್ರವನ್ನೂ ನಿಲ್ಲಿಸಬಹುದು. ಈಸ್ಟ್ರೊಜೆನ್ ಪ್ರೊಜೆಸ್ಟಿರೋನುಗಳನ್ನು ಸೇವಿಸಿಕೊಂಡು ಇಚ್ಛೆ ಬಂದಷ್ಟು ಕಾಲ ಈ ಚಕ್ರಗಳನ್ನು ಸ್ಥಗಿತಗೊಳಿಸಿಕೊಂಡಿರಬಹುದು. ಅಂದರೆ ಗರ್ಭ ತಾಳುವ ಪ್ರಮೇಯವನ್ನು ಇಚ್ಛೆ ಬಂದಷ್ಟು ಕಾಲ ನಿಲ್ಲಿಸಬಹುದು. ಋತುಸ್ರಾವವನ್ನು ಇಚ್ಛೆ ಬಂದಷ್ಟು ಕಾಲ ಮುಂದೂಡಬಹುದು. ಜನ ಈ ಸೌಕರ್ಯವನ್ನು ಸುಮಾರು 1950 ರಿಂದ ಬಳಸಿಕೊಂಡು ಪ್ರಜನನ ಕ್ರಿಯೆಯನ್ನು ಕೃತಕವಾಗಿ ನಿಯಂತ್ರಿಸಿಕೊಳ್ಳುವುದು ರೂಢಿಗೆ ಬಂದಿದೆ. ಮುಖ್ಯವಾಗಿ ಸಂತಾನ ನಿಯಂತ್ರಣಕ್ಕಾಗಿ ಈ ಕ್ರಮವನ್ನು ಅನುಸರಿಸುತ್ತಾರೆ. ಅಂಡಾಣು ಬಿಡುಗಡೆ ಆದ 12-24 ಗಂಟೆಗಳ ಹಿಂಚುಮುಂಚಿನಲ್ಲಿ ವಿಸರ್ಜಿಸಲ್ಪಟ್ಟ ವೀರ್ಯಾಣುಗಳನ್ನು ಅದು ಸಂಧಿಸಿದರೆ ನಿಷೇಚನೆ ಸಂಭವವಿದೆಯಷ್ಟೆ. ಆ ಅವಧಿಯಲ್ಲಿ ಸಂಭೋಗವಾಗದಿದ್ದರೆ ನಿಷೇಚನೆ ಆಗುವುದಿಲ್ಲ ಎಂಬುದು ವ್ಯಕ್ತ. ಆದರೆ, ಅಂಡಾಣು ಬಿಡುಗಡೆ ಆಗುವುದು ಯಾವಾಗ ಎಂದು ಪತ್ತೆ ಹಚ್ಚುವುದು ಕಷ್ಟ. ಅಂಡಾಣು ಬಿಡುಗಡೆ ಆದ ಎರಡು ವಾರಗಳ ತರುವಾಯ ಋತುಸ್ರಾವವಾಗುವುದನ್ನು ಹೇಳಿದೆ. ಅಂದರೆ, ಮುಂದಿನ ಋತುಸ್ರಾವ ನಿರೀಕ್ಷೆ ಇರುವ ದಿನಕ್ಕೆ 14 ದಿವಸಗಳ ಹಿಂದೆ ಅಂಡಾಣುವಿನ ಬಿಡುಗಡೆ ಆಗುವುದು ಖಚಿತ. ಆದ್ದರಿಂದ ಆ ದಿವಸವನ್ನು ಲೆಕ್ಕ ಹಾಕಿ ತಿಳಿದು ಅದರ ಆಚೀಚೆಗೆ ನಾಲ್ಕು ದಿವಸಗಳಲ್ಲಿ ಅಂಡಾಣು ಬಿಡುಗಡೆ ಆಗುತ್ತದೆಂದು ನಿರೀಕ್ಷಿಸಬಹುದು. ಆ ಎಂಟು ದಿವಸಗಳ ಕಾಲ ಸಂಭೋಗವನ್ನು ವರ್ಜಿಸಿದರೆ ಗರ್ಭ ತಾಳುವ ಸಂಭವ ಕಡಿಮೆ. ಆ ಅವಧಿ ಬಿಟ್ಟು ಪ್ರಜೋಚಕ್ರದ ಮಿಕ್ಕ ದಿವಸಗಳಲ್ಲಿ ಸಂಭೋಗಿಸಿದರೂ ಗರ್ಭಸ್ಥಿತಿ ಉಂಟಾಗಲಾರದು ಎಂಬ ನಂಬಿಕೆಯಿಂದ ಆ ದಿವಸಗಳನ್ನು ರಕ್ಷಾಕಾಲ (ಸೇಫ್ ಪೀರಿಯಡ್) ಎನ್ನಲಾಗಿದೆ. ಆದರೆ, ಮುಂದಿನ ಋತುಸ್ರಾವ ಇಂಥದೇ ದಿವಸ ಪ್ರಾರಂಭವಾಗುತ್ತದೆ ಎಂದು ಕರಾರುವಾಕ್ಕಾಗಿ ಹೇಳಲಾಗುವುದಿಲ್ಲ. ಋತುಚಕ್ರ ಕ್ರಮಬದ್ಧವಾಗಿರುವವರಲ್ಲಿ ಕೂಡ ಮಾಮೂಲು ಅವಧಿ ಮುಗಿದಾಗ ಋತುಸ್ರಾವ ಕಟ್ಟುನಿಟ್ಟಾಗಿ ಇಂಥದೇ ದಿನ ಪ್ರಾರಂಭವಾಗುತ್ತದೆ ಎಂದು ನೆಚ್ಚಿಗೆ ಇಲ್ಲ. ಒಂದೆರಡು ದಿವಸ ಹಿಂಚುಮುಂಚಾಗಬಹುದು. ಆದ್ದರಿಂದ ಲೆಕ್ಕ ತಲೆಕೆಳಗಾಗಿ ರಕ್ಷಾ ಕಾಲ ಸಂಭೋಗದಿಂದಲೂ ಗರ್ಭಾವಸ್ಥೆ ಉಂಟಾಗಿರುವ ಸಂದರ್ಭಗಳು ಅನೇಕ ಉಂಟು. ರಕ್ಷಾ ಕಾಲವನ್ನು ಪತ್ತೆ ಮಾಡಲು ಇನ್ನೊಂದು ಕ್ರಮವಿದೆ. ರಜಸ್ಸ್ರಾವ ನಿಂತ ಬಳಿಕ ಪ್ರತಿದಿನವೂ ಬೆಳಗಾಗ ಹಾಸಿಗೆ ಬಿಟ್ಟೇಳುವುದಕ್ಕೆ ಮುನ್ನ ದೇಹೋಷ್ಣತೆಯನ್ನು ಗುರುತಿಸುತ್ತಾ ಬಂದರೆ ಅದು ಯಾವುದೋ ಒಂದು ವಿಶಿಷ್ಟ ಮಟ್ಟಕ್ಕಿರುತ್ತದೆ. ಇದು ವೈಯುಕ್ತಿಕವಾಗಿದ್ದು ದಿನದಿನ ವಿಚಲನೆ ಕಿಂಚಿನ್ಮಾತ್ರ. ಹೆಚ್ಚು ಕಡಿಮೆ ಆಗಬಹುದು. ಅಂಡಾಣು ಬಿಡುಗಡೆ ಆದ ಮೇಲೆ ದೇಹೋಷ್ಣತೆ ಸುಮಾರು 0.50ಈ ನಷ್ಟು ಏರಿ ಮುಂದೆ ರಜಸ್ಸ್ರಾವವಾಗುವ ತನಕ ಪ್ರತಿದಿನವೂ ಅದೇ ಏರುಮಟ್ಟದಲ್ಲಿರುತ್ತದೆ. ಆದ್ದರಿಂದ ಹೀಗೆ ದೇಹೋಷ್ಣತೆ ಏರಿದ 3-4 ದಿವಸಗಳ ಕಾಲ ಸಂಭೋಗ ಮಾಡದಿದ್ದರೆ ಗರ್ಭ ತಾಳುವುದಿಲ್ಲ ಎಂದು ತರ್ಕಿಸಿ ಆ ರೀತಿ ಅನುಸರಿಸುವುದು ಇದೆ. ಆದರೆ, ಆ ಅವಧಿಯಲ್ಲಿ ಕಾರಣಾಂತರದಿಂದ ಸ್ತ್ರೀ ಜ್ವರಪೀಡಿತಳಾಗಿದ್ದರೆ ಈ ಕ್ರಮವನ್ನು ಅನುಸರಿಸಲು ಅಸಾಧ್ಯ ಎನ್ನುವುದು ವ್ಯಕ್ತ. ಬೇರೆ ಸಂದರ್ಭಗಳಲ್ಲೂ ಈ ಕ್ರಮ ಗರ್ಭನಿರೋಧಕವಾಗಿರುವುದು ಅನುಮಾನ. ಏಕೆಂದರೆ ದೇಹೋಷ್ಣತೆ ಏರಿದ ದಿನದ ಹಿಂದಿನ ರಾತ್ರಿ ಸಂಭೋಗಿಸಿದ್ದರೆ ಗರ್ಭತಾಳುವ ಸಂಭವ ಇದ್ದೇ ಇದೆ ಎನ್ನುವುದು ವ್ಯಕ್ತ. ಆದರೆ, ಈ ಕ್ರಮ ಮೇಲಿನ ಕ್ರಮಕ್ಕಿಂತ ಉತ್ತಮ ಎರಡು ಕ್ರಮಗಳನ್ನು ಜೋಡಿಸಿ ರಕ್ಷಾ ಕಾಲವನ್ನು ನಿರ್ಧರಿಸುವುದು ಯುಕ್ತ. (ಎಸ್.ಆರ್.ಆರ್.) ಸಸ್ಯಗಳಲ್ಲಿ

    ಸಸ್ಯಗಳ ಪ್ರಜನನದಲ್ಲಿ ಮೂರು ಮುಖ್ಯ ಬಗೆ ಉಂಟು: ಕಾಯಜ ರೀತಿಯ ಪ್ರಜನನ, ಅಲಿಂಗ (ನಿರ್ಲಿಂಗ) ರೀತಿಯ ಪ್ರಜನನ, ಲೈಂಗಿಕ ರೀತಿಯ ಪ್ರಜನನ.
    ಕಾಯಜ ರೀತಿಯ ಪ್ರಜನನ : (i.) ನೈಸರ್ಗಿಕ ವಿಧಾನ:  ಈ ವಿಧಾನದಲ್ಲಿ ತಾಯಿ ಸಸ್ಯದ ಯಾವುದೇ ಭಾಗದಿಂದ ಕೆಲಭಾಗಗಳು ಬೇರ್ಪಟ್ಟು ಯೋಗ್ಯ ಸನ್ನಿವೇಶ ಒದಗಿದಲ್ಲಿ  ಬೆಳೆವಣಿಗೆ ಹೊಂದಿ, ಕ್ರಮೇಣ ಹೊಸ ಹಾಗೂ ಸ್ವತಂತ್ರ ಸಸ್ಯಗಳಾಗಿ ಪರಿಣಮಿಸುವುದುಂಟು.  ಇದರಲ್ಲಿ ಈ ಕೆಳಗಿನ ಹಲವಾರು ರೀತಿಗಳುಂಟು.
    (ಅ) ಬಡ್ಡಿಂಗ್ ಅಥವಾ ಕೊನರುವಿಕೆ:  ಯೀಸ್ಟ್ ಎಂಬ ಏಕಾಣುಜೀವಿಯನ್ನು ಸಕ್ಕರೆಯ ದ್ರವ ಮಾಧ್ಯಮದಲ್ಲಿರಿಸಿದಾಗ, ಅದು ತನ್ನ ಕೋಶದ ಒಂದು ಅಥವಾ ಹೆಚ್ಚು ಬದಿಯಿಂದ ಕೆಲವು ಗಂಟುಗಳನ್ನು ಉತ್ಪಾದಿಸುವುದು ಕಂಡುಬರುತ್ತದೆ.  ಅಲ್ಪಸಮಯದಲ್ಲಿಯೇ ಈ ಉಬ್ಬುಗಂಟುಗಳು ಮಾತೃಕೋಶದಿಂದ ಬೇರ್ಪಟ್ಟು ಸ್ವತಂತ್ರ ಕೋಶಗಳಾಗಿ ಬೆಳೆಯುವುವು.  ಉಬ್ಬುಗಂಟುಗಳು ಹೊರಬರುವ ಕ್ರಿಯೆಗೆ ಬಡ್ಡಿಂಗ್ ಎಂದು ಹೆಸರು.  ಇದರಿಂದ ಮುಂದೆ ಹೊಸ ಹೊಸ ಸರಪಳಿಕೋಶಗಳೂ ಇವುಗಳಿಂದ  ಶಾಕೋಪಾಶಾಖೆಗಳಾಗಿ ಉಂಟಾಗುವ ಚಿಕ್ಕ ಸರಪಳಿಕೋಶಗಳೂ ನಿರ್ಮಾಣಗೊಳ್ಳಬಹುದು.  ಕಡೆಗೆ ಈ ಕೋಶಗಳೆಲ್ಲ ಪರಸ್ಪರ ಬೇರೆ ಬೇರೆಯಾಗಿ ಒಂದೊಂದೂ ಒಂದು ಸ್ವತಂತ್ರ ಕೋಶವಾಗಿ ಮಾರ್ಪಡುತ್ತದೆ.
    (ಆ) ಜೆಮ್ಮ:  ಇವು ಮಾಕ್ರ್ಯಾಂಶಿಯ ಎಂಬ ಸಸ್ಯದೇಹದ ಮೇಲೆ ಹಲವಾರು ವಿಶಿಷ್ಟ ರೀತಿಯ ಬಟ್ಟಲಿನಂಥ ರಚನೆಗಳಾಗಿ ಉದ್ಭವಿಸುವುವು.  ಇವು ವಿಶೇಷವಾಗಿ ಸಸ್ಯಕಾರ್ಯವರ್ಧನಿಗಾಗಿಯೇ ಮೀಸಲಾಗಿರುತ್ತವೆ.  ಇಂಥ ವಿಶಿಷ್ಟ ರಚನೆಗಳಿಂದ ಹತ್ತಾರು ಮರಿ ಸಸ್ಯಗಳು ಬೆಳೆಯುತ್ತ  ಹೋಗುತ್ತವೆ.
    (ಇ) ಎಲೆಯ ತುದಿಯಿಂದ ಸಸ್ಯವರ್ಧನೆ:  ಅಡಿಯಾಂಟಮ್ ಎಂಬ ಗುಂಪಿನ ಫರ್ನ್ ಸಸ್ಯಗಳಲ್ಲಿ ಎಲೆಯ ತುದಿಯಿಂದ ಸಸ್ಯಕಾಯ ಪ್ರಸರಣೆ ಉಂಟಾಗುತ್ತದೆ. ಆದ್ದರಿಂದ ಅಂಥ ಸಸ್ಯಗಳಿಗೆ ನಡೆದಾಡುವ ಫರ್ನ್ ಸಸ್ಯಗಳು ಎಂತಲೂ ಹೆಸರು.  ಎಲೆಬಾಗಿ ನೆಲಕ್ಕೆ ತಾಕಿದಾಗ ಅದರ ಎಲೆಯ ತುದಿಯಿಂದ ಬೇರುಗಳು ಉದ್ಭವಿಸಿ ಮೇಲೆ ಮೊಗ್ಗು ಚಿಗುರಿದಂತೆ ಬೆಳೆಯುತ್ತವೆ.  ಈ ಮೊಗ್ಗಿನಿಂದ ಹೊಸ ಹಾಗೂ ಸ್ವತಂತ್ರವಾದ ಫರ್ನ್ ಸಸ್ಯ ಬೆಳೆಯುತ್ತದೆ.  ಸಾಮಾನ್ಯವಾಗಿ ಫರ್ನ್ ಸಸ್ಯಗಳೆಲ್ಲ ತಮ್ಮ ಗುಪ್ತಕಾಂಡದಿಂದಲೂ ಕಾಯಜ ರೀತಿಯ ಪ್ರಜನನವನ್ನು ನಡೆಸುತ್ತವೆ.
    (ಈ) ಗುಪ್ತ ಕಾಂಡಗಳು: ಅನೇಕ ಪುಷ್ಟೀಯ ಸಸ್ಯಗಳು ಹಲವಾರು ಗುಪ್ತಕಾಂಡಗಳಿಂದ ಪ್ರಜನನ ರೀತಿಯ ಸಂಖ್ಯಾವರ್ಧನೆ ಹೊಂದುತ್ತವೆ. ಶುಂಠಿ, ಆಲೂಗಡ್ಡೆ, ಈರುಳ್ಳಿ, ಸುವರ್ಣ (ಚೂರ್ಣ) ಗೆಡ್ಡೆ ಇತ್ಯಾದಿ:  ವಿವಿಧ ಬಗೆಯ ಗುಪ್ತಕಾಂಡಗಳಿಂದ ಬೆಳೆಯುವ ಇಂತಹ ಮೊಗ್ಗುಗಳು ಕ್ರಮೇಣ ಕಳಚಿಬಿದ್ದು ಇಲ್ಲವೆ ಇದ್ದಲ್ಲಿಯೇ ಹೊಸ ಮರಿಸಸ್ಯಗಳಾಗಿ ಪರಿಣಮಿಸುತ್ತವೆ.

(ಉ) ಅಲ್ಪ ಸ್ವಲ್ಪ ಭೂಮಿಯ ಮೇಲೆ ಬರುವ ಕಾಂಡಗಳು; ಪುಳ್ಳಂಪಚ್ಚಿ, ಪುದೀನ ಮುಂತಾದ ಸಸ್ಯಗಳಲ್ಲಿ ರನ್ನರ್, ಸುವರ್ಣ (ಚೂರ್ಣ) ಗಡ್ಡೆಯಲ್ಲಿ ಸ್ಟೋಲಾನ್, ಪಿಶಾಚಿ ತಾವರೆ ಅಥವಾ ಅಂತರತಾವರೆ ಸಸ್ಯದಲ್ಲಿ ಆಫ್ ಸೆಟ್, ಸೇವಂತಿಗೆ ಸಸ್ಯದಲ್ಲಿ ಸಕ್ಕರ್ ಎಂಬ ಹೆಸರಿನ ಗುಪ್ತಕಾಂಡಗಳು ಕಾಯಜ ರೀತಿಯ ಪ್ರಜನನವನ್ನು ಹೊಂದಿ ವೃದ್ಧಿಗೊಳ್ಳುತ್ತವೆ. (ಊ) ಆಗಂತುಕ ಮೊಗ್ಗುಗಳು: ಕಾಡು ಬಸಳೆ, ಕುಮುದಗಡ್ಡೆ ಅಥವಾ ಕಾಳಿಂಗ ಗಿಡ ಮುಂತಾದ ಸಸ್ಯಗಳ ಎಲೆಗಳ ಅಂಚಿನಿಂದ ಹಾಗೂ ಪತ್ರನರಗಳ ತುದಿಯಿಂದ ಸಾಲಾಗಿ ಹಲವಾರು ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಅಂತೆಯೇ ಗೆಣಸಿನ ಬಳ್ಳಿಯಲ್ಲಿ ಬೇರಿನ ಭಾಗದಿಂದ ಹಲವಾರು ಆಗಂತುಕ ಮೊಗ್ಗುಗಳು ಜನಿಸುತ್ತವೆ. ಇವು ಮುಂದೆ ಕಾಯಜ ಪ್ರಜನನಕ್ಕೆ ಹಾಗೂ ಸಸ್ಯವೃದ್ಧಿಗೆ ಕಾರಣವಾಗುತ್ತವೆ. (ಎ) ಬಲ್ಬಿಲ್ಸ್ : ಕತ್ತಾಳೆ, ಗ್ಲಾಬ, ಬೆಳ್ಳುಳ್ಳಿ ಮುಂತಾದ ಸಸ್ಯಗಳ ಪುಷಮಂಜರಿಯ ಕೆಳಭಾಗದ ಹೂಗಳ ಪ್ಯೆಕಿ ಕೆಲವು ಮೊಗ್ಗುಗಳು, ಚಿಕ್ಕ ಬಹುಕೋಶಮಯ ಪ್ರಜನನಕಾರಿ ಘಟಕಗಳಾಗಿ ಮಾರ್ಪಾಟಾಗುವುದುಂಟು. ಇಂಥ ವಿಶಿಷ್ಟ ಮೊಗ್ಗುಗಳಿಗೆ ಬಲ್ಬಲ್ಸ್ ಎಂದು ಹೆಸರು. ಇವು ಮುಂದೆ ನೆಲಕ್ಕೆ ಬಿದ್ದಾಗ ಹೊಸ ಸಸ್ಯಗಳಾಗಿ ಬೆಳೆಯಬಲ್ಲವು. ಹೆಗ್ಗೆಣಸು ಅಥವಾ ದುಪ್ಪೆಗೆಣಸು ಎಂಬ ಸಸ್ಯದ ಎಲೆಗಳ ಕಂಕುಳಲ್ಲಿ ಬಲ್ಬಿಲ್ಸ್ ಎಂಬ ಚಿಕ್ಕ ದೊಡ್ಡ ಮೊಗ್ಗುಗಳು ಕಾಣಿಸಿಕೊಳ್ಳುವುದುಂಟು. ಹುಳಿಚಿಕ್ಕ ಅಥವಾ ಪುಳ್ಳಂಪಚ್ಚಿ ಎಂಬ ಸಸ್ಯದ ಗೆಡ್ಡೆಯಂಥ ಬೇರಿನ ಮೇಲ್ಭಾಗದಲ್ಲಿ ಅನೇಕ ಚಿಕ್ಕ ಚಿಕ್ಕ ಮೊಗ್ಗುಗಳು ಕಾಣಿಸಿ ಕೊಳ್ಳುವುದುಂಟು. ಇವು ಸಸ್ಯದೇಹದಿಂದ ಸುಲಭವಾಗಿ ಬೇರ್ಪಟ್ಟು, ಮುಂದೆ ಸ್ವತಂತ್ರ ಸಸ್ಯಗಳಾಗಿ ಬೆಳೆಯುವುದುಂಟು. ಕೆಲಜಾತಿಯ ಪೈನ್‍ಆಪಲ್ ಅಥವಾ ಅನಾನಸ್ ಸಸ್ಯಗಳ ಪುಷ್ಪಮಂಜರಿಯ ಮೇಲಿನ ಮತ್ತು ಕೆಳಭಾಗದಲ್ಲಿ ಕೆಲವು ಪ್ರಜನನಕಾರಿ ಮೊಗ್ಗುಗಳು ಸುತ್ತುವರಿದಿರುವುದುಂಟು. ಇಂಥ ಮೊಗ್ಗು ಅಥವಾ ಬಲ್ಬಿಲುಗಳು ಕೆಳಗೆ ಬಿದ್ದು ಹೊಸ ಸಸ್ಯಗಳಾಗಿ ಬೆಳೆಯುವುದೂ ಉಂಟು. (ii) ಕೃತಕ ವಿಧಾನ: ಇದರಲ್ಲಿ ಹಲವಾರು ಬಗೆಗಳುಂಟು. ಇಲ್ಲಿ ಸಸ್ಯದ ಕೆಲವು ಭಾಗಗಳನ್ನು ಪ್ರತ್ಯೇಕಿಸಿ ವಿಶಿಷ್ಟ ರೀತಿ ಅವುಗಳನ್ನು ಬೆಳೆಸುವುದು ಸಾಧ್ಯವಿದೆ.

    (ಅ) ಕಟಿಂಗ್ಸ್:  ಕಾಂಡದ ತುಂಡುಗಳು: ಗುಲಾಬಿ, ಮಲ್ಲಿಗೆ, ಕಬ್ಬು, ಮರಗೆಣಸು, ಕ್ರೋಟನ್, ದಾಸವಾಳ, ನುಗ್ಗೆ, ದುರಂತ, ಕೋಲಿಯಸ್ ಮುಂತಾದ ಸಸ್ಯಗಳನ್ನು ಅವುಗಳ ಕಾಂಡದ ತುಂಡುಗಳಿಂದ ಶೀಘ್ರಗತಿಯಲ್ಲಿ ಬೆಳೆಸಬಹುದು. ಈ ತುಂಡುಗಳನ್ನು ತೇವವಿರುವ ನೆಲದಲ್ಲಿ ಊರಿ ಕೆಲಕಾಲ ಬಿಟ್ಟರೆ, ಕಾಂಡದ ಕೆಳಭಾಗದಲ್ಲಿ ಬೇರುಗಳು ಹುಟ್ಟಿ, ಮೇಲ್ಭಾಗದಲ್ಲಿ ಆಗಂತುಕ ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಅವುಗಳಿಂದ ಕಾಂಡ ಚಿಗಿತು ಹೊಸ ಸಸ್ಯಗಳಾಗಿ ಬೆಳೆಯುತ್ತವೆ.

(ಆ) ಬೇರುಗಳ ತುಂಡುಗಳು: ಕೆಲವು ವೇಳೆ ನಿಂಬೆ, ಮೋಸಂಬಿ, ನೇರಳೆ, ಹುಣಸೆ ಮುಂತಾದ ಸಸ್ಯಗಳ ಬೇರುಗಳನ್ನು ತುಂಡರಿಸಿ ಅವುಗಳನ್ನು ತೇವವಿರುವ ನೆಲದಲ್ಲಿ ಊರಿದರೆ ಅವುಗಳಿಂದ ಹೊಸ ಬೇರು ಮತ್ತು ಕಾಂಡಗಳು ಚಿಗುರಿ ಹೊಸ ಸಸ್ಯಗಳಾಗಿ ಬೆಳೆಯುತ್ತವೆ. (ಇ) ಕಸಿ ಮಾಡುವಿಕೆ ಅಥವಾ ಗ್ರಾಫ್ಟಿಂಗ್: ಇದನ್ನು ಕೆಲವು ವಿಶಿಷ್ಟ ಬಗೆಯ ಹಣ್ಣಿನ ಮರಗಳನ್ನು ಉತ್ಪಾದಿಸುವುದಕ್ಕಾಗಿಯೋ (ಉದಾ: ಮಾವು, ಪೇರಲ, ನಿಂಬೆ, ಪ್ಲಮ್, ಲಿಚಿ ಇತ್ಯಾದಿ) ಇಲ್ಲವೆ ಕೆಲವು ವಿಶಿಷ್ಟ ಬಗೆಯ ಹೂವಿನ ಗಿಡಗಳನ್ನು ಉತ್ಪಾದಿಸುವುದಕ್ಕಾಗಿಯೋ (ಉದಾ: ಸಂಪಿಗೆ, ಮ್ಯಾಗ್ನೋಲಿಯ, ಮಾಲೇಹೂ ಗಿಡ, ಕೇವಲ, ಗೊರವಿ ಇತ್ಯಾದಿ) ಬಳಸುವುದುಂಟು. ಈ ವಿಧಾನದಲ್ಲಿ ಹಲವಾರು ರೀತಿಯ ತಾಂತ್ರಿಕ ವಿಧಾನಗಳಿದ್ದು, ಅವುಗಳ ಜತೆಗೆ ಲೇಯರಿಂಗ್, ಗೂಟಿ ಎಂಬವು ಗಮನಾರ್ಹವಾಗಿರುತ್ತವೆ. ಜತೆಗೆ ಗ್ರಾಫ್ಟಿಂಗ್ ಪದ್ಧತಿಯಲ್ಲಿಯೇ ನಾನಾ ಕ್ರಮಗಳುಂಟು. ಉದಾಹರಣೆ: ಅಪ್ರೋಚ್ ಗ್ರಾಫ್ಟಿಂಗ್, ಬಡ್‍ಡ್ರಾಫ್ಟಿಂಗ್, ಹ್ವಿಪ್ ಅಥವಾ ಟಂಗ್‍ಗ್ರಾಫ್ಟಿಂಗ್, ವೆಜ್‍ಗ್ರಾಫ್ಟಿಂಗ್, ಕ್ರೌನ್ ಗ್ರಾಫ್ಟಿಂಗ್ ಇತ್ಯಾದಿ.

    ಅಲಿಂಗ (ನಿರ್ಲಿಂಗ) ರೀತಿಯ ಪ್ರಜನನ : ಇದು ಕೆಲವು ವಿಶಿಷ್ಟ ಬಗೆಯ ಕೋಶಗಳು ಅಥವಾ ನಿರ್ಲಿಂಗ ರೀತಿಯ ಪ್ರಜನನಕಾರಿ ಘಟಕಗಳಿಂದ ಸಾಧ್ಯವಾಗುತ್ತದೆ.  ಇಂಥ ವಿಶಿಷ್ಟ ರಚನೆಗಳಿಗೆ ಬೀಜಾಣುಗಳು ಎಂದು ಹೆಸರು.  ಕೆಲಬಗೆಯ ಸಸ್ಯಗಳ ನಾನಾಭಾಗಗಳಲ್ಲಿ ಉತ್ಪತ್ತಿಯಾಗಿ ಅವು ಹೊರಬಂದ ಮೇಲೆ ತಾವೇ ಸ್ವತಂತ್ರವಾಗಿ ಹೊಸ ಸಸ್ಯಗಳಾಗಿ ರೂಪುಗೊಳ್ಳುತ್ತವೆ.  ಈ ಬೀಜಾಣುಗಳು ಸಾಮಾನ್ಯವಾಗಿ ವಿಶೇಷತಃ ಏಕಕೋಶಮಯವಾಗಿದ್ದು, ಗಾತ್ರದಲ್ಲಿ ಅತ್ಯಂತ ಸೂಕ್ಷ್ಮವಾಗಿರುತ್ತವೆ. ಅವು ಚಲಿಸುವಂತಿರಬಹುದು ಇಲ್ಲವೆ ಚಲಿಸಲಾರದಂತೆಯೂ ಇರಬಹುದು.
    (ಅ) ಚಲಿಸುವ ಬೀಜಾಣುಗಳು: ಇವುಗಳಲ್ಲಿ ಒಂದು ಅಥವಾ ಹೆಚ್ಚು ಬಾಲ ಇಲ್ಲವೆ ಚಾವಟಿಯಂಥ ಚಲನಾಂಗಗಳು ಸಿಲಿಯ ಇರುವುದುಂಟು. ಇಂಥ ಚಲನಾಂಗಗಳಿರುವ ಬೀಜಾಣುಗಳಿಗೆ ಜೂವೊ ಸ್ಪೋರ್ಸ್ ಎಂದು ಹೆಸರು.  ಇವು ಹೆಚ್ಚಾಗಿ ಪಾಚಿ ಮತ್ತು ಶಿಲೀಂಧ್ರಗಳಂಥ ಸಸ್ಯಗಳಲ್ಲಿ ಕಂಡು ಬರುತ್ತವೆ.  ಸಾಮಾನ್ಯವಾಗಿ ಈ ಬೀಜಾಣುಗಳು ಅಪಾರ ಸಂಖ್ಯೆಯಲ್ಲಿ ಉತ್ಪತ್ತಿಯಾಗುವುವು.  ಇವುಗಳ ಗಾತ್ರ ಅತ್ಯಂತ ಕಿರಿದಾಗಿರುತ್ತದೆ.  ಈ ಬೀಜಾಣುಗಳು ಸಸ್ಯದ ಮಾತೃಕೋಶಗಳಿಂದ ಹೊರಬಂದ ಮೇಲೆ ಅಲ್ಪಕಾಲದವರೆಗೆ ಸುತ್ತಲ ನೀರಿನಲ್ಲಿ ಚುರುಕಾಗಿ ಚಲಿಸುತ್ತ ಈಜಾಡುತ್ತ ಇರುತ್ತವೆ.  ಅನಂತರ ತಮ್ಮ ಚಲನಾಂಗಗಳನ್ನು ಕಳೆದುಕೊಂಡು, ತಮ್ಮ ಸುತ್ತ ಒಂದು ಪೊರೆ ಅಥವಾ ದಪ್ಪ ಅವರಣವನ್ನು ಬೆಳೆಸಿಕೊಳ್ಳುತ್ತವೆ. ಕಡೆಗೆ ಇವುಗಳಿಂದ ಹೊಸ ಸಸ್ಯಗಳು ಜನಿಸುತ್ತವೆ.

ವೂಕೀರಿಯ ಎಂಬ ಹಸುರುಪಾಚಿಸಸ್ಯದಲ್ಲಿ ಒಂದು ಕೋಶದಲ್ಲಿರುವ ಇಡೀ ಜೀವಧಾತುವೇ, ಒಂದು ಬೃಹತ್ ಗಾತ್ರದ ಚಲಿಸುವ ಬೀಜಾಣುವಾಗಿ ಪರಿಣಮಿಸಿ, ಹೊರಬರುತ್ತದೆ. ಅದರ ಮೇಲೆ ಅನೇಕ ಜೊತೆ ಚಲನಾಂಗಗಳು ಇರುತ್ತವೆ. ಇಂಥ ಚಲಿಸುವ ಬೀಜಾಣು ಅಥವಾ ಜೂವೂಸ್ಪೋರ್ ಸುತ್ತಲಿನ ನೀರಿನಲ್ಲಿ ಕೆಲಕಾಲ ಈಜಾಡಿ, ಅನಂತರ ಒಂದು ಹೊರ ಆವರಣವನ್ನು ಬೆಳೆಸಿಕೊಂಡು ಹಾಗೂ ಚಲನಾಂಗಗಳನ್ನು ಹಿಂತೆಗೆದುಕೊಂಡು ನಿಶ್ಚಲವಾಗುತ್ತದೆ. ಕಡೆಗೆ ಅದರಿಂದ ವೂಕೀರಿಯ ಸಸ್ಯದಂಥ ಒಂದು ಹೊಸ ಎಳೆಯೇ ಉತ್ಪನ್ನವಾಗುತ್ತದೆ. ಹೀಗೆ ಒಂದು ಕೋಶದಲ್ಲಿರುವ ಹಳೆಯ ಜೀವಧಾತು ಕೆಲಕಾಲದ ನಂತರ ಮತ್ತೆ ಹೊಸ ಹಾಗೂ ಚೈತನ್ಯಯುತವಾದ ಜೀವಧಾತುವಾಗಿ ಪರಿಣಮಿಸುವುದಕ್ಕೆ ಪುನಶ್ಚೈತನ್ಯ ಅಥವಾ ಪುನಸ್ತಾರುಣ್ಯ ಪಡೆಯುವಿಕೆ ಎಂದು ಹೆಸರು.

    (ಆ) ಚಲಿಸಲಾರದ ಬೀಜಾಣುಗಳು : ಇವು ಸಾಮಾನ್ಯವಾಗಿ ಭೂವಾಸಿ ಶಿಲೀಂಧ್ರ ರೂಪದ ಸಸ್ಯಗಳಲ್ಲಿ ಕಂಡುಬರುತ್ತವೆ.  ಈ ಬೀಜಾಣುಗಳು ಬಹು ಹಗುರ ಹಾಗೂ ಶುಷ್ಕವಾಗಿದ್ದು, ಇವುಗಳ ಸುತ್ತ ಒಂದು ಗಡುಸಾದ ಕೋಶವೂ ಇರುತ್ತದೆ. ಇವು ಗಾಳಿಯಲ್ಲಿ ಸರಾಗವಾಗಿ ತೇಲಾಡುವಷ್ಟು ಹಗುರವಾಗಿವೆ. ವಾಯುಗುಣದ ವೈಪರೀತ್ಯ ಪರಿಸ್ಥಿತಿಗಳನ್ನು ಎದುರಿಸುವ ಸಾಮಥ್ರ್ಯವೂ ಇವುಗಳಿಗಿರುತ್ತದೆ. ಈ ಬೀಜಾಣುಗಳು ಉತ್ಪನ್ನವಾಗುವ ರೀತಿಗಳಿಗೆ ಅನುಗುಣವಾಗಿ, ಇವಕ್ಕೆ ವಿಶಿಷ್ಟ ಹೆಸರುಗಳು ಇದ್ದು, ಇವು ವಿಭಿನ್ನ ರೀತಿಯವಾಗಿರುತ್ತವೆ.

(ಇ) ನೈಜ ಬೀಜಾಣುಗಳು : ಇವು ಯಾವಾಗಲೂ ಬೀಜಾಣುಜನಕದಂಥ ಸಸ್ಯಗಳಲ್ಲಿ ಉತ್ಪನ್ನವಾಗುತ್ತವೆ. ಮಾಸ್ ಮತ್ತು ಫರ್ನ್‍ಗಳಂಥ ಸಸ್ಯಗಳಲ್ಲಿ ನಿರ್ದಿಷ್ಟ ಬಗೆಯ ಸಂತತಿ ಪರ್ಯಾಯ ಕಂಡುಬರುತ್ತದೆ. ಹೀಗಾಗಿ ಇವುಗಳ ಪ್ರಜನನ ನಿರ್ಲಿಂಗರೀತಿ ಮತ್ತು ಲೈಂಗಿಕ ರೀತಿ ಹೀಗೆ ಎರಡೂ ಬಗೆಯಲ್ಲಿ ಸಾಗುತ್ತದೆ. ಪ್ರಜನನ ನಿರ್ಲಿಂಗ ರೀತಿಯಲ್ಲಿ ನಡೆಯುವುದು. ಬೀಜಾಣುಗಳ ಮೂಲಕ ಮುಂದೆ ಈ ಬೀಜಾಣುಗಳು ಮೊಳೆತು, ಲಿಂಗಾಣುಜನಕ ಎಂಬ ಹಂತವನ್ನು ತಲುಪಿ, ಹೊಸರೂಪದ ಸಸ್ಯವನ್ನು ಉತ್ಪಾದಿಸುತ್ತದೆ. ಆಗ ಈ ಲಿಂಗಾಣುಜನಕವೆಂಬ ಸಸ್ಯವು ಲೈಂಗಿಕ ರೀತಿ ಗಂಡುಹೆಣ್ಣು ಲಿಂಗಾಣುಗಳನ್ನು ಉತ್ಪಾದಿಸುತ್ತದೆ. ಮುಂದೆ ಗಂಡು ಹಣ್ಣು ಲಿಂಗಾಣುಗಳು ಜೋಡಿಜೋಡಿಯಾಗಿ ಸಂಯೋಗ ಹೊಂದಿ, ಕಡೆಗೆ ಮತ್ತೊಮ್ಮೆ ಬೀಜಾಣುಜನಕವನ್ನು ಉತ್ಪಾದಿಸುತ್ತವೆ.

    ಲೈಕೊಪೋಡಿಯಮ್ ಮತ್ತು ಈಕ್ವಿಸಿಟಮ್ ಎಂಬ ಸಸ್ಯಗಳಲ್ಲಿ  ಬೀಜಾಣುಗಳು ಏಕಬಗೆಯವಾಗಿದ್ದು, ಇವುಗಳಿಗೆ ಸಮರೂಪಿ ಬೀಜಾಣುಗಳು ಎಂತಲೂ, ಇವುಗಳಿಂದ ಉಂಟಾಗುವ ಸಸ್ಯಗಳಿಗೆ ಸಮರೂಪ ಬೀಜಾಣು ಸಸ್ಯಗಳು ಎಂತಲೂ ಹೆಸರು.  ಆದರೆ ಸೆಲಾಜಿನೆಲ್ಲ ಎಂಬ ಫರ್ನ್ ಗುಂಪಿನ ಸಸ್ಯ, ಮತ್ತು ನಗ್ನಬೀಜೀಯ ಆವೃತಬೀಜೀಯ ಸಸ್ಯಗಳನ್ನು ಒಳಗೊಂಡ ಪುಷ್ಪೀಯ ಸಸ್ಯಗಳಲ್ಲಿ 2 ಭಿನ್ನಬಗೆಯ ಬೀಜಾಣುಗಳು ಕಂಡುಬರುತ್ತವೆ. ಇವುಗಳಲ್ಲಿ ಒಂದು ಗಂಡು ಸ್ವರೂಪದ್ದಾಗಿದ್ದು, ಇದಕ್ಕೆ ಸೂಕ್ಷ್ಮ ಬೀಜಾಣು ಅಥವಾ ಮೈಕ್ರೋಸ್ಪೋರ್ ಎಂದು ಹೆಸರು. ಇನ್ನೊಂದು ಹೆಣ್ಣು ಸ್ವರೂಪದ್ದಾಗಿದ್ದು ಇದಕ್ಕೆ ಬೃಹತ್ ಬೀಜಾಣು ಅಥವಾ ಮೆಗಸ್ಪೋರ್ ಎಂದು ಹೆಸರು.
 
  (ಈ) ವಿದಳನ: ಇದು ಅತ್ಯಂತ ಸರಳರೂಪದ ಸಸ್ಯಗಳೆನಿಸಿದ ಏಕಕೋಶಮಯ ಪಾಚಿ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಗಳಂತೆ ಸಸ್ಯಗಳಲ್ಲಿ ಕಂಡುಬರುತ್ತದೆ.  ಇಲ್ಲಿ ಮಾತೃಕೋಶವು ಒಂದು ಹಂತದಲ್ಲಿ 2 ಕೋಶಗಳಾಗಿ ಸೀಳುತ್ತದೆ.   ಈ 2 ಕೋಶಗಳಲ್ಲಿರುವ ಜೀವಧಾತು.  ಮಾತೃಕೋಶದಲ್ಲಿರುವ ಜೀವಧಾತುವಿನ ಎಲ್ಲ ಮೂಲ ಸ್ವರೂಪ ಹಾಗೂ ಗುಣಾವಗುಣಗಳನ್ನು ಹೊಂದಿರುತ್ತದೆ.  ಹೀಗಾಗಿ ಇವು ಮುಂದೆ ಹೊಸ ಕೋಶ ಅಥವಾ ಸಸ್ಯಗಳಾಗಿ ಬೆಳೆಯುತ್ತ ಹೋಗುತ್ತವೆ.

ಲೈಂಗಿಕ ರೀತಿಯ ಪ್ರಜನನ : ಇದರಲ್ಲಿ ಲಿಂಗಾಣುಗಳು ಎಂಬ ಘಟಕಗಳ ಸಂಯೋಗವನ್ನು ಕಾಣಬಹುದು. ಈ ಲಿಂಗಾಣುಗಳು ಯಾವಾಗಲೂ ಏಕಕೋಶಮಯವಾಗಿದ್ದು ಅತ್ಯಂತ ಸೂಕ್ಷ್ಮಗಾತ್ರದವಾಗಿರುತ್ತವೆ. ಇಲ್ಲಿ 2 ಭಿನ್ನ ಲೈಂಗಿಕ ಗುಣಗಳುಳ್ಳ ಲಿಂಗಾಣುಗಲೂ ಸಂಯೋಗ ಹೊಂದುತ್ತವೆ. ಈ ಸಂಯೋಗದಿಂದ ಉಂಟಾಗುವ ಒಂದು ಹೊಸ ಕೋಶಕ್ಕೆ ಯುಗ್ಮಜ ಎಂದು ಹೆಸರು. ಮುಂದೆ ಈ ಯುಗ್ಮಜ ಹೊಸ ಸಸ್ಯವಾಗಿ ಬೆಳೆಯುತ್ತದೆ. ಇದರಲ್ಲಿ ಕೆಳಗಿನ ಹಲವಾರು ಕ್ರಮಗಳುಂಟು.

(i) ಸಂಯುಗ್ಮನ : ಕೆಳವರ್ಗದ ಪಾಚಿ ಮತ್ತು ಶಿಲೀಂದ್ರಗಳಂಥ ಸಸ್ಯಗಳಲ್ಲಿ ಸಂಯೋಗ ಹೊಂದುವ ಲಿಂಗಾಣುಗಳು ಮೂಲತಃ ಏಕರೂಪದವಾಗಿರುತ್ತವೆ. ಅಂದರೆ ಇವು ಗಂಡು ಹೆಣ್ಣು ಸ್ವರೂಪದ್ದಾಗಿರುವುದಿಲ್ಲ. ಆದ್ದರಿಂದ ಇವುಗಳಿಗೆ ಸಮರೂಪದ ಲಿಂಗಾಣುಗಳು ಎಂದು ಹೆಸರು. ಇಂಥ ಏಕ (ಸಮ) ರೂಪಿ ಲಿಂಗಾಣುಗಳ ಸಂಯೋಗಕ್ಕೆ ಸಂಯುಗ್ಮನ ಎಂದು ಹೆಸರು. ಹೀಗೆ ಉಂಟಾಗುವ ಯುಗ್ಮಜಕ್ಕೆ ಜೈಗೊಸ್ಪೋರ್ ಎಂದು ಹೆಸರು. ಉದಾಹರಣೆಗೆ ಯೂಲೋತ್ರಿಕ್ಸ್, ಸ್ಪೈರೋಗೈರ, ಮ್ಯೂಕರ್ ಇತ್ಯಾದಿ, ಯುಲೋತ್ರಿಕ್ಸ್ ಎಂಬ ಪಾಚಿ ಸಸ್ಯದಲ್ಲಿ ಒಂದೊಂದು ಕೋಶದಲ್ಲಿಯೂ ಹಲವಾರು ಚಿಕ್ಕ ಚಿಕ್ಕ ಚಲಿಸುವ ಲಿಂಗಾಣುಗಳು ಉತ್ಪಾದನೆಗೊಂಡು ಹೊರಬರುತ್ತವೆ. ಆದರೆ, ಸ್ಪೈರೊಗೈರ ಎಂಬ ಪಾಚಿಸಸ್ಯ ಮತ್ತು ಮ್ಯೂಕರ್ ಎಂಬ ಶಿಲೀಂದ್ರ ಸಸ್ಯದಲ್ಲಿ ಒಂದೊಂದೇ ದೊಡ್ಡ ಹಾಗೂ ಚಲಿಸಲಾರದ ಲಿಂಗಾಣು ಉತ್ಪಾದನೆಗೊಳ್ಳುವುದುಂಟು. (ii) ಗರ್ಭಾಂಕುರತೆ : ಮೇಲಿನ ವರ್ಗದ ಸಸ್ಯಗಳಲ್ಲೆಲ್ಲ ಸಂಯೋಗ ಹೊಂದುವ ಲಿಂಗಾಣುಗಳು ಭಿನ್ನ ಬಗೆಯವಾಗಿ ಇರುತ್ತವೆ ; ಅಂದರೆ ಇವು ಗಂಡು ಹೆಣ್ಣು ಸ್ವರೂಪ ತಾಳಿರುತ್ತವೆ. ಇವಕ್ಕೆ ಭಿನ್ನ ರೀತಿಯ ಲಿಂಗಾಣುಗಳು ಎಂದು ಹೆಸರು. ಇಂಥ ಭಿನ್ನ ರೀತಿಯ ಲಿಂಗಾಣುಗಳ ಸಂಯೋಗಕ್ಕೆ ಗರ್ಭಾಂಕುರತೆ ಎಂದು ಹೆಸರು. ಮುಂದೆ ಅದರಿಂದ ಉತ್ಪನ್ನವಾಗುವ ಯುಗ್ಮಜಕ್ಕೆ ಊಸ್ಪೋರ್ ಎಂದು ಹೆಸರು. ಮೇಲಿನ ವರ್ಗದ ಪಾಚಿ ಶಿಲೀಂಧ್ರ, ಮಾಸ್, ಫರ್ನ್ ಮತ್ತಿತರ ಗುಂಪಿನ ಸಸ್ಯಗಳಲ್ಲಿ ಗಂಡು ಲಿಂಗಾಣು ಅಥವಾ ಜಂಪತಿಗಳು ಅತಿ ಸೂಕ್ಷ್ಮ ಗಾತ್ರದವೂ, ಚಲನಾಂಗವುಳ್ಳವೂ, ಚಲಿಸುವಂಥವೂ ಆಗಿರುತ್ತವೆ. ಇವುಗಳಿಗೆ ವೀರ್ಯಾಣು ಅಥವಾ ಪುಂಬೀಜಾಣು ಎಂದು ಹೆಸರು.

ಸ್ತ್ರೀಲಿಂಗಾಣು ನಿಶ್ಚಲ, ಚಲನಾಂಗರಹಿತ ಮತ್ತು ದೊಡ್ಡ ಗಾತ್ರದ್ದು. ಇದಕ್ಕೆ ಅಂಡಾಣು ಕೋಶ ಆಥವಾ ಶೋಣಿತ ಆಥವಾ ಊಸ್ಪಿಯರ್ ಎಂದು ಹೆಸರು. ಪುಷ್ಪೀಯ ಸಸ್ಯಗಳಲ್ಲಿ ಗಂಡು ಹೆಣ್ಣು ಸ್ವರೂಪದ ಪ್ರಜನನಕಾರಿ ಘಟಕಗಳು ಎಂದರೆ - (i) ಪರಾಗ ನಳಿಕೆಯಲ್ಲಿ ಇರುವ 2 ಗಂಡು ಲಿಂಗಾಣುಗಳೂ ಮತ್ತು (ii) ಅಂಡಾಶಯದ ಭ್ರೂಣಕೋಶದೊಳಗಿನ ಅಂಡಾಣುಕೋಶ ಅಥವಾ ಶೋಣಿತ.

ಲಿಂಗಾಣುಗಳು ಯಾವಾಗಲೂ ಲಿಂಗಾಣುಜನಕದಂಥ ಸಸ್ಯದಲ್ಲಿಯೇ ಉತ್ಪನ್ನವಾಗುತ್ತವೆ. ಉದಾಹರಣೆಗೆ ಮಾಸ್ ಎಂಬ ಸಸ್ಯ ಒಂದು ಲಿಂಗಾಣುಜನಕ. ಇದು ನೇರವಾಗಿ ಲಿಂಗಾಣುಗಳನ್ನು ಉತ್ಪಾದಿಸುತ್ತದೆ. ಟೆರಿಡೋಫೈಟ್ ಗುಂಪಿನ ಸಸ್ಯಗಳಲ್ಲಿ - ಲಿಂಗಾಣುಗಳೂ ಪ್ರೊಥ್ಯಾಲಸ್ ಎಂಬ ಒಂದು ಚಿಕ್ಕ ಹಸುರು ಸಸ್ಯದ ಮೇಲೆ ಉತ್ಪನ್ನವಾಗುತ್ತವೆ. ಆದ್ದರಿಂದ ಇವುಗಳಲ್ಲಿ ಪ್ರೋಥ್ಯಾಲಸ್ ಎಂಬುದೇ ಲಿಂಗಾಣು ಜನಕ ಎನಿಸಿಕೊಳ್ಳುತ್ತದೆ. ಆದರೆ ಪುಷ್ಪೀಯ ಸಸ್ಯಗಳಲ್ಲಿ ಲಿಂಗಾಣುಜನಕ ಅತ್ಯಂತ ಕ್ಷೀಣಿಸಿದ ರಚನೆಯಾಗಿರುತ್ತದೆ.

ವಿಶಿಷ್ಟ ಬಗೆಯ ಪ್ರಜನನ ವಿಧಾನಗಳು : ಅನಿಷೇಕ ಜನನ : ಅಂಡಾಣು ಕೋಶದಿಂದ ಗರ್ಭಾಂಕುರತೆಯ ಕ್ರಿಯೆಯೇ ಇಲ್ಲದೆ ಬೆಳೆಯುವ ಕ್ರಮ ಅನಿಷೇಕ ಜನನ ಎಂದು ಹೆಸರು. ಇದನ್ನು ಕೆಳವರ್ಗದ ಕೆಲವು ಸಸ್ಯಗಳಲ್ಲಿ (ಉದಾ : ಸ್ಪೆರೊಗೈರ, ಮ್ಯೂಕರ್ ಇತ್ಯಾದಿ) ಮತ್ತು ಫರ್ನ್ ಗುಂಪಿನ ಅನೇಕ ಸಸ್ಯಗಳಲ್ಲಿ ಕಾಣಬಹುದು.

ಪುಷ್ಪೀಯ ಸಸ್ಯಗಳ ಕೆಲವು ತಳಿಗಳಲ್ಲಿಯೂ ಭ್ರೂಣ ಅನಿಷಾಕ ಜನನ ಕ್ರಮದಂತೆಯೇ ಬೆಳೆಯಬಹುದು, ಅಂದರೆ ಇವುಗಳಲ್ಲಿ ಗರ್ಭಾಂಕುರತೆಯ ಕ್ರಿಯೆಯೇ ಉಂಟಾಗುವುದಿಲ್ಲ. ಇಂಥ ಅಂಡಾಶಯದಿಂತ ಉತ್ಪನ್ನವಾಗುವ ಫಲ ನಿರ್ಮಾಣ ವಿಧಾನಕ್ಕೆ ಅನಿಷೇಕ ಫಲನ ಎಂದು ಹೆಸರು. ಅನಿಷೇಕ ಜನನದಿಂದ ಉಂಟಾಗುವ ಫಲಗಳೆಲ್ಲ ಸ್ವಲ್ಪ ಹೆಚ್ಚು ಕಡಿಮೆ ಯಾವಾಗಲೂ ಬೀಜರಹಿತವೇ ಆಗಿರುತ್ತವೆ. ಉದಾ - ಕೆಲವು ಜಾತಿಯ ಬಾಳೆ, ಪೇರಲ (ಸೀಬೆ), ಪೈನಾಪಲ್, ದ್ರಾಕ್ಷಿ, ಸೇಬು, ಪರಂಗಿ (ಪಪಾಯಿ), ಪಿಯರ್, ಇತ್ಯಾದಿ ಫಲಗಳು.

ಕೆಲವೊಮ್ಮೆ ವೃದ್ಧಿ ನಿಯಂತ್ರಕಗಳಂಥ ಕೆಲವು ರಾಸಾಯನಿಕ ವಸ್ತುಗಳನ್ನು ಫಲ ಬಿಡುವ ಸಸ್ಯಗಳಿಗೆ ಸಿಂಪಡಿಸಿದರೆ ಸಾಕು. ಇವುಗಳ ಪುಷ್ಪಗಳಲ್ಲಿ ಗರ್ಭಾಂಕುರತೆಯ ಕ್ರಿಯೆ ನಡೆಯದೇ, ಫಲೋತ್ಪತ್ತಿಯಾಗುವುದುಂಟು. ಅಂಥ ವಿಧಾನಕ್ಕೆ ನಿರ್ದೇಶಿತ ಅನಿಷೇಕ ಫಲನ ಎಂದು ಹೇಳುವುದುಂಟು.

ಜೊತೆಗೆ ಅಪಯುಗ್ಮನ ಅಪಬೀಜಾಣುತೆ, ಬೀಜಾಣುಜನಕದ ಕೊನರುವಿಕೆ, ಬಹು ಭ್ರೂಣತೆ ಮುಂತಾದ ಹಲವಾರು ವಿಶಿಷ್ಟ ವಿಧಾನಗಳೂ ಪ್ರಜನನ ಕಾರ್ಯದ ಒಂದು ವಿಶೇಷ ಅಂಗವೇ ಆಗಿ ಪರಿಣಮಿಸುವುದುಂಟು. (ಎಂ.ಎಸ್.ಎಸ್.ಆರ್.)